Saturday, May 29, 2021

ಜೀವಕ್ಕೊಂದು ವಿಮೆ ಇರಲಿ (Jivakkondu Vime Irali)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್
(ಪ್ರತಿಕ್ರಿಯಿಸಿರಿ lekhana@ayvm.in)


ಕೃಷಿಕನೊಬ್ಬನಿದ್ದ. ಅವನ ವ್ಯವಸಾಯದ ಕಾರ್ಯದಲ್ಲಿ ಅವನ ಮಕ್ಕಳಿಗೇನೂ ಆಸಕ್ತಿ ಇರಲಿಲ್ಲ. ಆತ ಅಕಾಲಮೃತ್ಯುವಿಗೀಡಾದ. ಅವನ ಮಕ್ಕಳು ಮನೆಯಲ್ಲಿ ವಿವಿಧ ಬಗೆಯ ಬೀಜಗಳ ಪೊಟ್ಟಣಗಳನ್ನು ಗಮನಿಸಿದರು. ಆ ಬೀಜದ ಪೊಟ್ಟಣಗಳನ್ನು ಮನೆಯ ನಿವೇಶನದಲ್ಲಿ ಅಲ್ಲಲ್ಲಿ ಸುರಿದರು. ತಮಗೆ ತಿಳಿದಷ್ಟು ಅವುಗಳ ಆರೈಕೆ ಮಾಡಿದರು. ಕೆಲವು ಬೀಜಗಳು ಬೆಳೆದವು. ಒಮ್ಮೆ ನಸುಕಿನಲ್ಲಿ ಉತ್ಸಾಹದಿಂದ ಹಣ್ಣುಗಳೇನಾದರೂ ಸಿಗಬಹುದೆಂದು ಗಿಡಗಳ ಮೇಲೆ ಕೈಯಾಡಿಸಿದರು. ಅದೊಂದು ಮುಳ್ಳುಗಿಡ ! ಕೈಗೆ ಮುಳ್ಳುಗಳು ತಗುಲಿ, ನೋವಾಯಿತು. ಈ ಗಿಡಗಳನ್ನು ನಾವು ಆರೈಕೆ ಮಾಡಿದ್ದಕ್ಕೆ ಇಂತಹ ಪ್ರತಿಫಲ ಸಿಗುವುದೇ! ಎಂದು ಕೋಪದಿಂದ ಕೂಗಾಡಿದರು. ಪಕ್ಕದ ಮನೆಯಾತ ನೋಡುತ್ತಿದ್ದ. ಏನಾಯಿತೆಂದು ವಿಚಾರಿಸಿದ. "ನಾವು ಹಣ್ಣಿನ ಗಿಡ ಹಾಕಿದ್ದಕ್ಕೆ ನಮಗೆ ಸಿಕ್ಕಿದ್ದು ಮುಳ್ಳುಗಳು! ಕೈಗೂ ಮನಸ್ಸಿಗೂ ನೋವಾಯಿತು" ಎಂದರು, ಮಕ್ಕಳು. ಅದಕ್ಕೆ ಆತ ಹೀಗೆಂದ-"ನಿಮ್ಮ ತಂದೆ ಬೇಲಿಗಾಗಿ ಇಟ್ಟಿದ್ದ ಮುಳ್ಳಿನ ಬೀಜಗಳವು. ನೀವು ಹಣ್ಣಿನ ಬೀಜಗಳನ್ನು ಹಾಕಿದ್ದರಿಂದ ಮುಳ್ಳಿನ ಗಿಡಗಳು ಬಂದಿಲ್ಲ. ಸ್ವಲ್ಪ ಹಾಗೇ ಕಣ್ಣು ಹಾಯಿಸಿ; ಅಲ್ಲಲ್ಲಿ ಹಣ್ಣಿನ ಗಿಡಗಳೂ ತಲೆಯೆತ್ತಿವೆ; ಕೆಲವು ಈಗಲೇ ಹಣ್ಣನ್ನು ಬಿಡಲಾರಂಭಿಸಿವೆ. ಇನ್ನು ಕೆಲವು ಹಣ್ಣಾಗಲು ವರ್ಷಗಳೇ ಕಾಯಬೇಕು."

ಹೀಗೆಯೇ ನಮ್ಮ ಜನ್ಮ ಜನ್ಮಾಂತರದ ಒಳ್ಳೆಯ ಹಾಗೂ ದುಷ್ಟ ಕರ್ಮಗಳೂ ಅವುಗಳ ಕಾಲ ಬಂದಾಗ ಫಲವನ್ನು ಕೊಟ್ಟೇ ಕೊಡುತ್ತವೆ. ಕೆಲವು ಬೇಗನೆ; ಕೆಲವು ನಿಧಾನವಾಗಿ. ತಿಳಿದೋ ತಿಳಿಯದೆಯೋ ನಾವೇ ಹಾಕಿದ್ದ ಮುಳ್ಳುಗಿಡಗಳೂ ಒಂದಲ್ಲ ಒಂದು ದಿನ ಬೆಳೆದು ನಮ್ಮನ್ನು ನೋಯಿಸುವಂತೆ ನಾವೇ ಹಿಂದೆ ಮಾಡಿದ್ದ ದುಷ್ಕರ್ಮಗಳೂ ಆಗಾಗ ಫಲ ಕೊಡುತ್ತವೆ. ಗಾಳಿಯೇ ಎಲ್ಲಿಂದಲೋ ನಮ್ಮ ನಿವೇಶನಕ್ಕೆ ಹೊತ್ತು ತಂದ ಮುಳ್ಳು ಬೀಜಗಳೂ ಫಲ ಕೊಡಬಹುದು. ಯಾರದೋ ತಪ್ಪಿಗೆ ನಾವು ಶಿಕ್ಷೆಯನ್ನು ಅನುಭವಿಸಿದಂತೆ ತೋರುವ ಪ್ರಸಂಗಗಳಿವು. ನಮ್ಮ ಕೆಲಸವಿಷ್ಟೆ- ನಮಗೆ ತಿಳಿದಷ್ಟು ಎಚ್ಚರಿಕೆಯಿಂದ ಇರಬಹುದು. ಪಾದರಕ್ಷೆ ಧರಿಸಿ ಓಡಾಡಬಹುದು; ಕೈಗವಸು ಹಾಕಿಕೊಂಡು ಕಳೆ, ಮುಳ್ಳುಗಳನ್ನು ಕಿತ್ತುಹಾಕಬಹುದು. ಆದರೆ ಈ ಪ್ರಕ್ರಿಯೆಯಲ್ಲಿ ಬರುವ ನೋವುಗಳು ಅನಿವಾರ್ಯ. 


ಅನಂತಕಾಲದವರೆಗೆ ಗಿಡಗಳು ಫಲ ಕೊಡಲಾರವು. ಹಾಗೆಯೇ ನಮ್ಮ ಕಷ್ಟವಾಗಲಿ, ಸುಖವಾಗಲಿ ಶಾಶ್ವತವಾಗಿ ಇರುವುದಿಲ್ಲ. ಹಲಸಿನ ಹಣ್ಣಿನಲ್ಲಿ, ಅದರೊಳಗಿನ ಅಂಟು, ಅದರ ಮೇಲಿನ ಮುಳ್ಳು - ಎಲ್ಲವೂ ಅದರ ಅವಿಭಾಜ್ಯ ಅಂಗಗಳೇ. ಅವುಗಳನ್ನು ಸೈರಿಸಿಕೊಂಡರಷ್ಟೇ ಸ್ವಾದಿಷ್ಠವಾದ ಹಲಸಿನ ಹಣ್ಣನ್ನು ಆಸ್ವಾದಿಸಬಹುದು. ಹಾಗೆಯೇ ಮನುಷ್ಯನಾಗಿ ಹುಟ್ಟಿದ ಮೇಲೆ ಕಷ್ಟಗಳ ಮಧ್ಯೆಯೇ ಸುಖವನ್ನರಸಬೇಕು. ಅನಾರೋಗ್ಯ/ಅಕಾಲಮೃತ್ಯು ಮುಂತಾದ ಕಷ್ಟಕಾಲವು ಎಂದಾದರೂ ಬರಬಹುದೆಂಬ ನಿರೀಕ್ಷೆಯಿಂದಲೇ ನಾವು ಜೀವವಿಮೆ ಮಾಡಿಸುತ್ತೇವೆ. ಅಂತೆಯೇ, ನಿಮ್ಮ ಜೀವಕ್ಕೆ ಭಗವಂತನ ಆಶ್ರಯವೇ ಜೀವದೊಡನೆ ಎಂದೆಂದೂ ಬರುವ ವಿಮೆ; ಅದನ್ನು ಪಡೆದುಕೊಳ್ಳಿ ಎಂಬರ್ಥದಲ್ಲಿ ಶ್ರೀರಂಗಮಹಾಗುರುಗಳು ನುಡಿದ ಮಾತುಗಳು ಸರ್ವದಾ ಸ್ಮರಣೀಯ.


ಕಷ್ಟಗಳು ಬಂದಾಗಲೂ ಮನಸ್ಸು ಕುಗ್ಗದಿದ್ದರೆ ಅವನು ಸುಖಿಯೇ. ಸುಖಗಳಿದ್ದಾಗಲೂ, ತನಗೆ ಮತ್ತಷ್ಟು ಸುಖಗಳಿಲ್ಲವಲ್ಲ ಎಂದು ಕೊರಗುವವನು ದುಃಖಿಯೇ. ಜೀವವಿಮೆಯನ್ನು ಮಾಡಿಸಿಕೊಂಡವನು ಧೈರ್ಯವಾಗಿ ಕಷ್ಟಕಾಲವನ್ನು ಎದುರಿಸುವಂತೆ, ಭಗವಂತನನ್ನು ನಂಬಿಕೊಂಡೇ ಜೀವನದ ಕಷ್ಟಕಾಲಗಳನ್ನು ಎದುರಿಸೋಣ. ಕಷ್ಟಪರಿಹಾರಕ್ಕೆ ಕೈಲಾದಷ್ಟು ಯತ್ನಿಸೋಣ.


ಸೂಚನೆ: 29/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.