Saturday, May 8, 2021

ಗುರುವಿನಿಂದ ಸಿಗುವ ಫಲ (Guruvininda Siguva Phala)

ಲೇಖಕರು: ವಾದಿರಾಜ. ಪ್ರಸನ್ನ 

(ಪ್ರತಿಕ್ರಿಯಿಸಿರಿ lekhana@ayvm.in)ನಮ್ಮೆಲ್ಲರ ಜೀವನದಲ್ಲಿ ನಿತ್ಯವೂ ಒಂದಲ್ಲ ಒಂದು ಸಮಸ್ಯೆಯು ಬರುತ್ತಲೇ ಇರುತ್ತದೆ. ಅದನ್ನು ಎದುರಿಸಿ, ಹೊರಬರಲು ಹಲವು ಮಾರ್ಗೋಪಾಯಗಳನ್ನು ಅನುಸರಿಸುತ್ತಿರುತ್ತೇವೆ. ಸ್ವತಃ ನಮ್ಮಿಂದ ಉತ್ತರ ಕಂಡುಹಿಡಿಯಲು ಆಗದಿದ್ದರೆ, ತಿಳಿದವರ ಆಶ್ರಯವನ್ನು ಪಡೆಯುತ್ತೇವೆ.


'ತಾಯಿ ತಾನೆ ಮೊದಲ ಗುರುವು, ಮನೆಯೇ ಮೊದಲ ಪಾಠಶಾಲೆ' ಎಂಬ ನಾಣ್ಣುಡಿಯಂತೆ ನಮ್ಮೆಲ್ಲರ ಕಲಿಕೆಯು ನಮ್ಮ ನಮ್ಮ ಮನೆಯಿಂದಲೇ ಪ್ರಾರಂಭವಾಗುವುದು. ಕಾಲಕ್ರಮೇಣ ವಿದ್ಯಾಭ್ಯಾಸವನ್ನು ಶಾಲೆಯಲ್ಲಿ ಮುಂದುವರೆಸಿ, ನಂತರ ಕಾಲೇಜಿನಲ್ಲಿ ಹಲವಾರು ಗುರುಗಳಿಂದ ವಿದ್ಯೆ ಕಲಿತು ಪದವೀಧರರಾಗುವುದು. ಹೀಗೆ ಚಿಕ್ಕವರು, ದೊಡ್ಡವರಿಂದ ಕಲಿಯುವ ವಿಧಾನವಿದಾಗಿದೆ. ಇನ್ನು ಮೊಬೈಲ್, ಕಂಪ್ಯೂಟರ್ ಹಾಗು ಇಂಟರ್ನೆಟ್ ಆಧಾರಿತ ವಿಷಯಗಳಲ್ಲಿ ಹಿರಿಯರು ಚಿಕ್ಕವರನ್ನೇ ಆಶ್ರಯಿಸುತ್ತಿರುವುದು ಇಂದು ಪ್ರತಿ ಮನೆಯಲ್ಲೂ ನಾವು ಕಾಣಬಹುದಾಗಿದೆ. ಅಂದರೆ ಯಾರಿಗೆ ಯಾವ ವಿಷಯದಲ್ಲಿ ನೈಪುಣ್ಯ ಇದೆಯೋ ಅವರೇ ಆ ವಿಷಯದಲ್ಲಿ ಗುರು ಎಂಬುದು ಇವತ್ತಿನ ಸಾಮಾನ್ಯಾಭಿಪ್ರಾಯ. 


ಆದರೆ ಭಾರತೀಯ ಸಂಸ್ಕೃತಿಯಲ್ಲಿ "ಗುರು" ಎಂಬ ಪದವನ್ನು ಒಂದು ವಿಶೇಷವಾದ ಅರ್ಥದಲ್ಲಿ ಬಳಸಿರುತ್ತಾರೆ.  "ಗು-ಕಾರಸ್ತು ಅಂಧಕಾರಃ ಸ್ಯಾತ್,  ರು-ಕಾರಃ ತತ್ ನಿವರ್ತಕಃ'.  ಕತ್ತಲನ್ನು ಹೋಗಲಾಡಿಸುವವನೇ ಗುರು ಎಂಬುದು ತಾತ್ಪರ್ಯ. ಯಾವುದು ಈ ಕತ್ತಲೆ? ಆ ಕತ್ತಲನ್ನು ಹೋಗಲಾಡಿಸುವುದು ಎಂದರೇನು ?


ನೀರಿನಲ್ಲಿ ಈಜಲು ಬಾರದವನು ಈಜನ್ನು ಕಲಿಯಬೇಕಾದರೆ ನುರಿತ ತರಬೇತುದಾರರ ಮಾರ್ಗದರ್ಶನ ಬಹಳ ಮುಖ್ಯ. ತುಂಟತನದಿಂದಲೋ, ಅತ್ಯುತ್ಸಾಹದಿಂದಲೋ ಅಜಾಗರೂಕತೆಯಿಂದ ನೀರಿಗಿಳಿದರೆ ಪ್ರಾಣಕ್ಕೆ ಹಾನಿಯಾಗಬಹುದು. ಈ ಸಂಸಾರವೂ ಒಂದು ಪ್ರವಾಹ. ನಮ್ಮ ಆಸೆಗಳೆಂಬ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದೇವೆ. ನೀರು ನಿಲ್ಲುವಂತಿಲ್ಲ, ನಮಗೆ ನೆಮ್ಮದಿ ಶಾಂತಿ ಸಿಗುವಂತಿಲ್ಲ. ಶಾಂತಿ ಬೇಕಾದರೆ ಸಂಸಾರವೆಂಬ ಮಹಾಪ್ರವಾಹದಲ್ಲಿ ಈಜಿ ದಡ ಸೇರಬೇಕು. ಸಂಸಾರಪ್ರವಾಹದಲ್ಲಿ ನಿಶ್ಚಲ ತತ್ತ್ವವನ್ನು ಒಳಗೆ ಕಂಡು ನಮಗೂ ತೋರಿಸಬಲ್ಲ ಗುರುವಿನ ಆಶ್ರಯವು ಅವಶ್ಯಕ. ಗುರುವಾದವನು ತಾನು ದಾಟಬಲ್ಲಹಾಗೂ ಅವನ ಮಾರ್ಗದರ್ಶನದಂತೆ ನಡೆಯುವ ಶಿಷ್ಯರನ್ನೂ ದಾಟಿಸಬಲ್ಲವನಾಗಿರುತ್ತಾನೆ. ಗುರುವು ಸಾಮಾನ್ಯ ಮನುಷ್ಯರಂತೆ ಕಂಡರೂ ಸಂಸಾರದ ತಾಪತ್ರಯಗಳಿಗೆ ಭಯಪಡದೆ ಅಂತರ್ಮಾರ್ಗದಲ್ಲೇ ಚಲಿಸುತ್ತಾ ಸದಾ ಭಗವಂತನಲ್ಲೇ ಲೀನವಾಗಿರುತ್ತಾನೆ. ಹಾಗಿರುವುದರಿಂದಲೇ  "ಗುರುರ್ಬ್ರಹ್ಮಾಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರಃ ಗುರುಸ್ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇನಮಃ" ಎಂಬ ಮಾತು. "ಬೆಂಕಿಕಡ್ಡಿಯು ಮದ್ದನ್ನಿಟ್ಟುಕೊಂಡಿರುವುದರಿಂದ ಅದಕ್ಕೆ ಮಹಿಮೆ. ಬರೀ ಕಡ್ಡಿಗಳಿಗಲ್ಲ. ಗುರು ಎನ್ನುವುದು ವ್ಯಕ್ತಿಗಲ್ಲ. ಶಕ್ತಿಗೆ. ಆ ಮಹಿಮೆ ವ್ಯಕ್ತವಾಗಲು ಸೇರುವೆ ಬೇಕು. ಗುರು-ಶಿಷ್ಯ-ಭಗವಂತ ಇವುಗಳ ಯೋಗ ನಡೆದರೆ ಆ ಮಹಿಮೆಯ ಅರಿವಾಗುತ್ತದೆ". ಎಂಬ ಶ್ರೀರಂಗ ಮಹಾಗುರುಗಳ ವಾಣಿಯು ಸ್ಮರಣೀಯ. 


ಪರಮಾತ್ಮದರ್ಶನವನ್ನು ತಾನು ಮಾಡಿ ತನ್ನನ್ನು ನಂಬಿಬಂದವರಿಗೂ ಮಾಡಿಸುವವನೇ ಮಹಾಗುರು. ಅಂತಹವನನ್ನು ಆಶ್ರಯಿಸಿ ಅವನ ಆಶಯಕ್ಕೆ ತಕ್ಕಂತೆ ನಮ್ಮ ಜೀವನವನ್ನು ನಡೆಸಿ, ಆತನ ಮಾರ್ಗದರ್ಶನದಂತೆ ಯೋಗಮಾರ್ಗದಲ್ಲಿ ಸಾಧನೆಮಾಡಿದರೆ, ಅಂತರಂಗದ ಕತ್ತಲು ಹೋಗಿ ನಮ್ಮ ಶರೀರದ  ಒಳಗೆ ಬೆಳಗುತ್ತಿರುವ ಈವರೆಗೂ ತಾನು ಕಂಡಿರದ ಪರಮಾದ್ಭುತವಾದ, ಶಾಶ್ವತವಾದ ಆ ಆನಂದದ ಬೆಳಕನ್ನು ಇಹದಲ್ಲಿಯೇ ಕಾಣಬಹುದಾಗಿದೆ. ಸದ್ಗುರುವಿನ ಕೃಪೆಯಿಂದ ಮೋಕ್ಷವೆಂಬ ಮಹಾಫಲವನ್ನು ಪಡೆಯಬಹುದಾಗಿದೆ.


ಸೂಚನೆ: 8/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.