ಮಾನವಜೀವನದ ಪರಮಲಕ್ಷ್ಯವಾದ ಮೋಕ್ಷಸಾಧನೆಗೆ ಸಾಧನವಾಗಿರುವ 'ಕಾವ್ಯವಿದ್ಯೆ'ಯು ಅಥರ್ವವೇದದ ಅಂಗವೇಆಗಿ ಸುಲಭ, ಸರಳ ಮತ್ತು ಅತ್ಯಂತ ಹೃದಯಗ್ರಾಹಿಯಾಗಿದೆ. ಅದನ್ನಾಸ್ವಾದಿಸಲು ಬೇಕಾಗಿರುವುದು 'ಹೃದಯವಂತಿಕೆ'ಯೆಂಬ ಮೂಲಧನ ಮತ್ತು ಕವಿಯ ಹೃದಯಕ್ಕೆ ಸಂವಾದಿಯಾದ ವಾಚಕನ ಭಾವ. ಬಹುಜನಹಿತವಾಗಿಯೂಬಹುಜನಸುಖವಾಗಿಯೂ ಇರುವ ಈ ಕಾವ್ಯವಿದ್ಯೆಯು ನವರಸಗಳಿಂದ ಕೂಡಿರುತ್ತಾ ಇಹಲೋಕದ ಬಾಳಾಟವನ್ನು ಚೆನ್ನಾಗಿಮಾಡಿಸಿ ಕಡೆಯಲ್ಲಿ ರಸರೂಪಿಯಾದ ಪರಮಾತ್ಮನನ್ನು ಹೊಂದಿಸಿಕೊಡುವುದಾಗಿದೆ. ಭಗವತ್ಸಾಕ್ಷಾತ್ಕಾರವನ್ನೇಪರಮಧ್ಯೇಯವಾಗಿ ಹೊಂದಿ 'ವಿದ್ಯಾ' ಎಂಬುವುದಕ್ಕೆ ಅನ್ವರ್ಥವಾಗಿವೆ ಕಾವ್ಯಗಳು.ವಾಗರ್ಥಗಳ ಅವಿನಾಭಾವದಿಂದ ಕೂಡಿ, ಸದಾ ಹಿತವಾದ 'ಭಗವಂತ'ನೊಡನೆ ಸೇರಿರುವುದೂ ಮತ್ತು ವಾಚಕರನ್ನುಭಗವಂತನೊಡನೆ ಸೇರಿಸುವುದೂ ಆಗಿದೆ 'ಸಾಹಿತ್ಯ'. "ಹಾಗಿದ್ದರೆ ತಾನೆ ಅದು 'ಸಾಹಿತ್ಯ, ಇಲ್ಲದಿದ್ದರೆ 'ರಾಹಿತ್ಯ'" ಎಂಬಶ್ರೀರಂಗಮಹಾಗುರುವಿನ ವಾಣಿಯು ಸ್ಮರಣೀಯ. ಲೋಕದಲ್ಲಿಂದು ಕಾಣಸಿಗುವ ಅನೇಕ ಕಾವ್ಯ-ನಾಟಕಾದಿಗಳಲ್ಲಿ ರಸಗಳವರ್ಣನೆಗಳಿದ್ದರೂ, ಸಾಹಿತ್ಯವಿದ್ದರೂ ಮೇಲೆ ತಿಳಿಸಿದಂತೆ ಪರಮಧ್ಯೇಯವು ಇಲ್ಲದಿರುವುದು ಸಂಸ್ಕಾರಿಯಾದ ವಾಚಕನಿಗೆತಿಳಿದುಬರುವ ವಿಷಯವೇ ಆಗಿದೆ. ಅಂಗೈಹುಣ್ಣಿಗೆ ಕನ್ನಡಿಯೇ ?ವೃಕ್ಷವೊಂದರಲ್ಲಿರುವ ಕಾಂಡ, ಶಾಖೆಗಳು, ಎಲೆಗಳು, ಹೂವುಗಳು, ಫಲಗಳು ಈ ಎಲ್ಲವೂ ಒಂದಕ್ಕಿಂತ ಒಂದು ಆಕಾರ,ಸೌಗಂಧ್ಯ ಮತ್ತು ವರ್ಣಗಳಲ್ಲಿ ಬೇರೆ ಬೇರೆಯಾಗಿ ಕಾಣಿಸುತ್ತದೆ. ಒಬ್ಬೊಬ್ಬರೂ ಅವರವರ ಪರಿಚಯಕ್ಕನುಗುಣವಾಗಿರುಚಿಗನುಸಾರವಾಗಿ, ತೋರುವಿಕೆಗನುಸಾರವಾಗಿ, ಅನುಭವಗಳಿಗನುಸಾರವಾಗಿ ಅವುಗಳನ್ನು ಒಂದೊಂದು ಬಗೆಯಿಂದವರ್ಣಿಸಬಹುದು. ಆದರೆ ಕೃಷಕನೊಬ್ಬನಿಗೆ ಮಾತ್ರ ಕಣ್ಣಿಗೆ ಕಾಣಿಸದ ಭೂಗರ್ಭದಲ್ಲಿರುವ ಆ ವೃಕ್ಷದ ಜೀವವಾಗಿರುವಬೇರಿನ ಬಗ್ಗೆ ನಿಗಾ ಇರುತ್ತದೆ. ಅವನು ಬೀಜದ ವಿಕಾಸವಾದ ಬೇರನ್ನೂ ಅದರ ವಿಕಾಸವನ್ನೂ ಫಲದಲ್ಲಿರುವಬೀಜದವರೆವಿಗೂ ಹಂತ ಹಂತವಾಗಿ ತಿಳಿದಿರುತ್ತಾನೆ. ಅವನು ಆ ವೃಕ್ಷದ ಪರಿಚಯವನ್ನು ಆಮೂಲಾಗ್ರವಾಗಿಹೊಂದಿರುತ್ತಾನೆ. ಆದ್ದರಿಂದ ಅವನೇ ಏನಾದರೂ ವೃಕ್ಷವನ್ನು ವರ್ಣಿಸಿದರೆ ಭೂಭಾಗದ ಮೇಲೆ ಕಾಣುವ ವೃಕ್ಷದಭಾಗವಷ್ಟನ್ನೇ ಅಲ್ಲದೆ ಭೂಗರ್ಭದಲ್ಲಿ ಅಡಗಿರುವ ಬೀಜದಿಂದ ಹಿಡಿದು ಮತ್ತೆ ಬೀಜವನ್ನೊಳಗೊಂಡಿರುವ ಫಲದವರೆವಿಗೂವರ್ಣಿಸುತ್ತಾನೆ.
ಅಂತೆಯೇ ಸಾಮಾನ್ಯ ಕವಿಯೊಬ್ಬನು ಎಷ್ಟೆಷ್ಟು ಆಳಕ್ಕೆ ಇಳಿದು ಅನುಭವಿಸಿದ್ದಾನೆಯೋ ಅಷ್ಟಷ್ಟು ಸ್ತರದಲ್ಲಿ ಅವನವರ್ಣನೆಗಳಿರುತ್ತವೆ. ಆದರೆ ಪ್ರಕೃತಿಯನ್ನೂ ಮೀರಿರುವ ಮಹತ್ತತ್ತ್ವವನ್ನು ಅನುಭವಪೂರ್ವಕವಾಗಿ ದರ್ಶಿಸಿರುವಮಹಾಕವಿಯು ಅದಕ್ಕನುಗುಣವಾಗಿ ವರ್ಣಿಸಿದಾಗ ಅದೇ ಮಹಾಕಾವ್ಯವಾಗುತ್ತದೆ. ತನ್ನ ತಪಸ್ಸಿನಿಂದ ಒಳಗೆ ಬೆಳಗುತ್ತಿರುವಜ್ಯೋತಿಯ ದರ್ಶನದಿಂದ ಪುನೀತನಾದ ಮತ್ತು ಆಮೂಲಾಗ್ರವಾದ ದೃಷ್ಟಿಯಿಂದ ಕೂಡಿದ ಋಷಿಯೇ ಕವಿಯಾಗಿ ಆಬೆಳಕನ್ನು ಮತ್ತು ಆನಂದವನ್ನು ತಾನೂ ಅನುಭವಿಸುತ್ತಾ ತನ್ನ ಕಾವ್ಯವೆಂಬ ಪಾತ್ರೆಯಲ್ಲಿ ಆ ಆನಂದರಸವನ್ನುತುಂಬಿಕೊಂಡು ಸಹೃದಯರಿಗೂ ಉಣಬಡಿಸುತ್ತಾನೆ. ಏಲಕ್ಕಿ ತಿಂದವನ ಬಾಯಿಯಿಂದ ಬರುವ ಮಾತುಗಳು ಆ ಏಲಕ್ಕಿಯಸೌಗಂಧ್ಯವನ್ನು ಹೊತ್ತು ತರುವಂತೆ ತಾನು ಒಳಗೆ ಅನುಭವಿಸಿದ ಆನಂದವನ್ನು, ಒಳಬೆಳಕನ್ನು ನೋಡುತ್ತಾ ವಾಗರ್ಥಗಳರೂಪವಾಗಿ ಪ್ರಕಟಪಡಿಸುತ್ತಾನೆ. ಅಂತಹ ಕವಿಯನ್ನು 'ಅಸ್ಖಲಿತಜ್ಞಾನಸಂಪನ್ನಃ' ಎಂದು ವರ್ಣಿಸಿದ್ದಾರೆ. ಇವನು ಪ್ರಪಂಚದಸೃಷ್ಟಿ, ಸ್ಥಿತಿ ಮತ್ತು ಲಯಗಳ ನೋಟವನ್ನು ಹೊಂದಿರಬೇಕು. ಅಂತಹ ಕವಿಗಳಿಂದ ರಚಿತವಾದ, ಆಧಿಭೌತಿಕ, ಆಧಿದೈವಿಕಮತ್ತು ಆಧ್ಯಾತ್ಮಿಕ ರೂಪವಾದ ತಾಪತ್ರಯಗಳನ್ನು ನಿವಾರಿಸಿ ಪರಮಪುರುಷಾರ್ಥವಾದ ಮೋಕ್ಷವನ್ನೇ ಕೊಡಬಲ್ಲ ಈ ರೀತಿಯಕಾವ್ಯಗಳು ತ್ರಿವರ್ಗಗಳಾದ ಧರ್ಮಾರ್ಥಕಾಮಗಳನ್ನು ಆನುಷಂಗಿಕವಾಗಿ ಸಹೃದಯನಿಗೆ ಒದಗಿಸುತ್ತವೆಯೆಂದುಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೆ. 'ಜೀವ ಹಿಡಿದುಕೊಂಡು ವರ್ಣನೆಯನ್ನು ಮಾಡಬೇಕು ಮತ್ತು ಒಂದು ಕಾವ್ಯವನ್ನುರಚಿಸಬೇಕು' ಎಂಬ ಶ್ರೀಗುರುವಿನ ಮಾತು ಕಾವ್ಯರಚನೆಯಲ್ಲಿ ಕರದೀವಿಗೆಯಾಗಿದೆ.ಶ್ರೀರಂಗಮಹಾಗುರುಗಳು ಕಾವ್ಯಗಳ ಮರ್ಮವನ್ನು ತಿಳಿಸಿಕೊಡುತ್ತಾ, ' ಕಾವ್ಯಶಾಸ್ತ್ರದ ಆರಂಭ ಮತ್ತು ಅಂತ್ಯ ಪರಬ್ರಹ್ಮವೇಆಗಿದೆ. ವಿಷಯನಿರೂಪಣೆಗಿಂತಲೂ ಕವಿಯ ಮನೋಧರ್ಮ ಕಾವ್ಯದ ಉದ್ದಗಲಕ್ಕೂ ಹೇಗೆ ಹರಿದಿದೆ ಎಂಬುವುದೇ ಕಾವ್ಯದಜೀವಾಳ. ಕವಿಯು ಹೊರಗೆ ನೋಡಿ ಏನನ್ನು ಬರೆದನೋ ಅದು ಒಳಜೀವನಕ್ಕೂ ಅನ್ವಯವಾಗುವಂತಿರಬೇಕು.ಆಧಿಭೌತಿಕ-ಆಧಿದೈವಿಕ-ಆಧ್ಯಾತ್ಮಿಕ-ತಾಪತ್ರಯಗಳನ್ನು ನಿವಾರಿಸುವ ಶಕ್ತಿ ಕಾವ್ಯಕ್ಕಿದೆ. ಪುರುಷಾರ್ಥಗಳಾದ ಧರ್ಮ-ಅರ್ಥ-ಕಾಮ- ಮೋಕ್ಷಗಳನ್ನೂ ಕೊಡುವ ಶಕ್ತಿ ಕಾವ್ಯಕ್ಕಿದೆ' ಎಂಬ ಮಾತನ್ನು ಹೇಳುತ್ತಿದ್ದರು.ಕೀರ್ತಿಕಾಮನೆಗಾಗಿ, ಧನಲಾಭಕ್ಕಾಗಿ, ಅಮಂಗಲದ ನಾಶಕ್ಕಾಗಿ ಮತ್ತು ಲೋಕದ ವ್ಯವಹಾರದ ಅರಿವಿಗಾಗಿಕಾಂತಾಸಮ್ಮಿತೆಯಂತೆ ಮನಮುಟ್ಟುವ ಶೈಲಿಯಿಂದ ರಚಿತವಾದ ಕಲ್ಪವೃಕ್ಷಗಳಂತಿರುವ ಕಾವ್ಯಗಳು ವಾಚಕರನ್ನುಶೃಂಗಾರಾದಿರಸಗಳಲ್ಲಿ ತೇಲಿಸುತ್ತಾ ಇಂದ್ರಿಯ ಸುಖವನ್ನುಂಟುಮಾಡುತ್ತಾ 'ಮನೋರಂಜಕ ಮತ್ತು ಸಭಾರಂಜಕ'ಗಳಾಗಿವೆ.ಅಂತೆಯೇ, 'ಮಧುರೇಣ ಸಮಾಪಯೇತ್' ಎಂಬ ನಾಣ್ಣುಡಿಯಂತೆ ಎಲ್ಲಾ ರಸಗಳಿಗೂ ಗಮ್ಯಸ್ಥಾನವಾದಬ್ರಹ್ಮಾನಂದರಸದಲ್ಲಿ ಮನಸ್ಸನ್ನು ಮುಳುಗಿಸುತ್ತಾ, ಇಂದ್ರಿಯಗಳ ಹಿಂದಿರುವ ಜೀವಾತ್ಮನಿಗೆ ಅಲೌಕಿಕಾನಂದವನ್ನುಉಂಟುಮಾಡುತ್ತಾ 'ಭವಭಂಜಕವೂ' ಆಗಿವೆ ಎಂಬುದರಲ್ಲಿ ಸಂಶಯವಿಲ್ಲ.ಈ ನಿಟ್ಟಿನಲ್ಲಿ ಆದಿಕವಿಗಳಾದ ವಾಲ್ಮೀಕಿಮಹರ್ಷಿಗಳ ಆದಿಕಾವ್ಯವಾದ ಶ್ರೀಮದ್ರಾಮಾಯಣ ಮೊದಲುಗೊಂಡುಮಹಾಕವಿಕಾಳಿದಾಸ-ಭಾರವಿ-ಭವಭೂತಿಗಳೇ ಮೊದಲಾದವರ ಕಾವ್ಯಗಳಲ್ಲಿ ಇವೆಲ್ಲವೂ ಹಾಸುಹೊಕ್ಕಾಗಿರುವುದನ್ನುಕಾಣುತ್ತೇವೆ. ಮಹಾಕವಿ ಕಾಳಿದಾಸನ ಮೇರುಕೃತಿಗಳಿಂದ ಆಯ್ದ ಕೆಲವು ಸಂದರ್ಭಗಳನ್ನು ಉದಾಹರಣೆಗಳನ್ನು ಈ ಹಿಂದಿನಲೇಖನಗಳಲ್ಲಿ ಸಹೃದಯವಾಚಕರ ಮುಂದೆ ಇಡಲಾಗಿವೆ.ಆದ್ದರಿಂದಲೇ, "ಧರ್ಮಾರ್ಥಕಾಮಮೋಕ್ಷಾಣಾಂ ವೈಚಕ್ಷಣ್ಯಂ ಕಲಾಸು ಚ | ಕರೋತಿ ಕೀರ್ತಿಂ ಪ್ರೀತಿಂ ಚ ಸಾಧುಕಾವ್ಯನಿಷೇವಣಮ್ ||" ಎಂಬ ಮಾತಿನಂತೆ, 'ಕಾವ್ಯಗಳು ಧರ್ಮಾರ್ಥಕಾಮಮೋಕ್ಷಗಳನ್ನೂ, ಕಲೆಗಳಲ್ಲಿ ನೈಪುಣ್ಯವನ್ನೂ,ಕೀರ್ತಿಯನ್ನೂ, ಪ್ರೀತಿಯನ್ನೂ ಉಂಟುಮಾಡುವುದರಿಂದ ಕಾವ್ಯಗಳೆಂಬ ಪುಣ್ಯನದಿಗಳಲ್ಲಿ ಅವಗಾಹನೆ ಸಾಧು'ವೆಂಬ ಮಾತು ಪ್ರಸಿದ್ಧವಾಗಿದೆ.
ಅಮೋಘವಾದ ಈ ಕಾವ್ಯವಿದ್ಯೆಯ ಮರ್ಮವನ್ನು ವಿಜ್ಞಾನಪೂರ್ವಕವಾಗಿ ನನ್ನ ಬುದ್ಧಿಭೂಮಿಕೆಗೆ ಇಳಿಸಿಕೊಟ್ಟ ಶ್ರೀರಂಗಮಹಾಗುರುಗಳ ಆದ್ಯ ಶಿಷ್ಯರನ್ನು ಕೃತಜ್ಞತೆಯಿಂದ ಹೃತ್ಪೂರ್ವಕವಾಗಿ ಸ್ಮರಿಸುತ್ತಾ ಈ ಲೇಖನಮಾಲೆಯನ್ನು 'ನಾನೇನೂ ಇಲ್ಲ.ನೀನೇ ಎಲ್ಲ' ಎಂಬ ಭಾವನೆಯೊಂದಿಗೆ ಮಹಾಗುರುಗಳ ಪಾದಾರವಿಂದಗಳಿಗೆ ಸಮರ್ಪಿಸುತ್ತಿದ್ದೇನೆ.
ಸೂಚನೆ : 8/5/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.