Saturday, February 27, 2021

ಕವಿ ಮತ್ತು ಬ್ರಹ್ಮಾ (Kavi Mattu Brahma)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)



ಚತುರ್ಮುಖ ಬ್ರಹ್ಮನು ಜಗತ್ತಿನ ಸೃಷ್ಟಿಕರ್ತ. 'ಯತೋವಾ ಇಮಾನಿ ಭೂತಾನಿ ಜಾಯಂತೇ| ಯೇನ ಜಾತಾನಿ ಜೀವಂತಿ| ಯತ್ಪ್ರಯಂತಿ ಅಭಿಸಂವಿಶಂತಿ| ಎಂಬ ಉಪನಿಷದ್ವಾಣಿಯಂತೆ, ಬ್ರಹ್ಮದಿಂದಲೇ ಹುಟ್ಟಿ, ಅದರಿಂದಲೇ ವಿಕಾಸಪಡೆದು ಅದರಲ್ಲಿಯೇ ಲಯವನ್ನು ಕಾಣುತ್ತದೆ ಪ್ರಪಂಚ. ಅತ್ಯಂತ ವೈವಿಧ್ಯಮಯವಾದ, ತ್ರಿಗುಣಾತ್ಮಕವಾದ ಮತ್ತು ವಿಚಿತ್ರವಾದ ಜಗತ್ತಿನ ನಿರ್ಮಾಣ ಇವನಿಂದಲೇ. ಕಟು-ಆಮ್ಲ-ಮಧುರ-ಲವಣ-ತಿಕ್ತ-ಕಷಾಯಗಳೆಂಬ ಷಡ್ರಸೋಪೇತವಾದ ಆಹಾರವೇ ಮೊದಲಾದವುಗಳಿಂದ ಅದರ ವಿಕಾಸವೂ ಅವನಿಂದಲೇ. ಆ ಎಲ್ಲ ರಸಗಳ ನೆಲೆ ಮಧುರ ರಸವೇ. ಇನ್ನು ಕಡೆಯದಾಗಿ ಅದರ ಅಂತ್ಯವೂ ಅವನಿಂದಲೇ. ಅಂತೆಯೇ, ಕವಿಯೂ ಕೂಡ ಕಾವ್ಯವೆಂಬ ಜಗತ್ತಿನ ಬ್ರಹ್ಮನೇ. 'ಅಪಾರೇ ಕಾವ್ಯಸಂಸಾರೇ ಕವಿರೇಕಃ ಪ್ರಜಾಪತಿಃ' – ಅಪಾರವಾದ ಕಾವ್ಯ ಜಗತ್ತಿನಲ್ಲಿ ಕವಿಯೇ ಒಬ್ಬ ಪ್ರಜಾಪತಿ. ತನಗೆ ಹೇಗೆ ಬೇಕೋ ಹಾಗೆ ಕಾವ್ಯ ಪ್ರಪಂಚವನ್ನು ಸೃಷ್ಟಿಸುತ್ತಾನೆ. ಆದರೆ ಬ್ರಹ್ಮನು ಉಪಯೋಗಿಸುವ ಸಾಧನಗಳಿಗಿಂತ ಇವನ ಸಾಧನಗಳು ವಿಭಿನ್ನ. ವಾಕ್ ಎಂಬುದು ಇವನ ಕಾವ್ಯಪ್ರಪಂಚದ ಸೃಷ್ಟಿಗೆ ಆಧಾರ. ಇನ್ನು ಉಪಮಾದಿ ಅಲಂಕಾರಗಳೇ ಸಾಧನ. ಇವನು ಶೃಂಗಾರ-ವೀರ-ಕರುಣ-ಅದ್ಭುತ- ಹಾಸ್ಯ-ಭಯಾನಕ-ಬೀಭತ್ಸ-ರೌದ್ರ-ಶಾಂತಗಳೆಂಬ ನವರಸಗಳನ್ನು ಉಪಯೋಗಿಸಿಕೊಂಡು ತನ್ನ ಸಾಮ್ರಾಜ್ಯವನ್ನು ಕಟ್ಟುತ್ತಾನೆ. ಎಲ್ಲ ರಸಗಳೂ ಶಾಂತರಸದಲ್ಲಿಯೇ ಲಯ ಹೊಂದುತ್ತವೆ. ಶ್ರೀರಂಗಮಹಾಗುರುಗಳು ಇದನ್ನು ವರ್ಣಿಸುವಾಗ 'ರಸಗಳೆಲ್ಲವೂ ಮೋಡಗಳ ಚಕ್ಕೆಗಳಂತೆ ವಿವಿಧ ವರ್ಣಗಳಿಂದ ಕೂಡಿರುತ್ತವೆ. ಶಾಂತರಸವು ಆಕಾಶದಂತೆ ನಿರ್ಲಿಪ್ತ. ಚಿತ್ರಮಂದಿರದಲ್ಲಿ ಹೇಗೆ ಬೆಂಕಿ, ಮಳೆ, ಗಾಳಿ, ಮಿಂಚು, ಸಿಡಿಲು, ಯುದ್ಧ ಮುಂತಾದ ಭಯಾನಕ ದೃಶ್ಯಗಳು ಮತ್ತು ವಿವಿಧ ರಸಗಳು ತೆರೆಯ ಮೇಲೆ ಬಂದು ಹೋದರೂ ತೆರೆಯು ಮಾತ್ರ ನಿರ್ಲಿಪ್ತವಾಗಿರುತ್ತದೆಯೋ ಹಾಗೆಯೇ ಜೀವನು ಅನೇಕ ರೀತಿಯ ರಸಗಳನ್ನು ಪ್ರಾರಬ್ಧ ಕರ್ಮವಶಾತ್ ಅನುಭವಿಸುತ್ತಿದ್ದರೂ ಪದ್ಮಪತ್ರದ ಮೇಲಿರುವ ಜಲ ಬಿಂದುವಿನಂತೆ ನಿರ್ಲಿಪ್ತ. ಆತಿಥೇಯನು(ಮನೆಗೆ ಬಂದ ಅತಿಥಿಯನ್ನು ಸತ್ಕರಿಸುವವನು) ರಥವನ್ನು ಓಡಿಸಿಕೊಂಡು ಬಂದಂತಹ ಅಶ್ವಗಳಿಗೆ ಅವಕ್ಕೆ ಬೇಕಾದ ಆಹಾರವನ್ನು ಒದಗಿಸುವಂತೆಯೇ, ಕವಿಯು ಓದುಗನಿಗೆ ಶೃಂಗಾರಾದಿ ರಸಗಳನ್ನು ಉಣಬಡಿಸುತ್ತಾ ಇಂದ್ರಿಯಾಶ್ವಗಳಿಗೆ ಬೇಕಾದ ಆಹಾರವನ್ನು ಒದಗಿಸುತ್ತಾನೆ. ಅಂತೆಯೇ ಆತಿಥೇಯನು ರಥಿಗೆ ಬೇಕಾದ ಆಹಾರವನ್ನು ಒದಗಿಸುವಂತೆ, ಕವಿಯು ಜೀವಾತ್ಮನಿಗೂ ಅವನಿಗೆ ಬೇಕಾದ ನೆಮ್ಮದಿ, ಸಂತೋಷ, ಆನಂದಗಳೆಂಬ ಆಹಾರಗಳನ್ನು ಒದಗಿಸುತ್ತಾ ಉಪನಿಷತ್ಪ್ರತಿಪಾದ್ಯವಾದ 'ರಸೋ ವೈ ಸಃ| ರಸಂ ಹ್ಯೇವಾಯಂ ಲಬ್ಧ್ವಾs ನಂದೀಭವತಿ' 'ಭಗವಂತನು ರಸ ಸ್ವರೂಪಿಯು. ಅವನನ್ನು ಪಡೆದವನು ರಸಸ್ವರೂಪಿಯೇ ಆಗಿ ಆನಂದಮಯನಾಗುತ್ತಾನೆ', ಎಂಬ ಮಾತಿಗನುಗುಣವಾಗಿ ಪರಮಾತ್ಮನಲ್ಲಿಯೇ ಸಹೃದಯರ ಮನಸ್ಸನ್ನು ನೆಲೆ ನಿಲ್ಲಿಸುತ್ತಾನೆ. 'ನದೀನಾಂ ಸಾಗರೋ ಗತಿಃ' ಎಂಬಂತೆ ನದಿಗಳು ತಾವು ಹುಟ್ಟಿದ ಸ್ಥಳದಿಂದ ಮುಂದುವರೆದು ಬೆಟ್ಟ-ಗುಡ್ಡ- ವನ-ಮುಂತಾದ ಪ್ರದೇಶಗಳಲ್ಲಿ ಹರಿದು ಸಾಗರವನ್ನು ಸೇರುವಂತೆ, ಕವಿಯು ಅನೇಕ ರಸಗಳಲ್ಲಿ ಓದುಗರನ್ನು ಮುಳುಗಿಸುತ್ತಾ ಅಂತ್ಯದಲ್ಲಿ ಶಾಂತಿ ಸಮೃದ್ಧವಾದ ಆನಂದ ಸಾಗರದಲ್ಲಿ ಓದುಗರನ್ನು ನಿಲ್ಲಿಸುತ್ತಾನೆ. ಆದ್ದರಿಂದಲೇ 'ಕಾವ್ಯಾನಂದ ರಸಾಸ್ವಾದಃ ಬ್ರಹ್ಮಾನಂದ ಸಹೋದರಃ' ಎಂಬ ಮಾತು ಕಾವ್ಯದ ಪ್ರಾಮುಖ್ಯವನ್ನು ತಿಳಿಸುತ್ತದೆ.

ಕವಿ ಮತ್ತು ಪರಮಾತ್ಮಾ 
ಪರಮಾತ್ಮನೇ ಆದಿ ಕವಿ. ಪರಮಾತ್ಮನನ್ನು 'ಕವಿಂ ಕವೀನಾಮ್', 'ಕವಿಗಳಿಗೂ ಕವಿ' ಎಂದು ವೇದವು ವರ್ಣಿಸಿದೆ. "ಬ್ರಹ್ಮಣಃ ಕ್ಷತ್ರಂ ನಿರ್ಮಿತಮ್ | ಬ್ರಹ್ಮಬ್ರಾಹ್ಮಣ ಆತ್ಮನಾ | ಅಂತರಸ್ಮಿನ್ ಇಮೇ ಲೋಕಾಃ | ಅಂತರ್ವಿಶ್ವಮಿದಂಜಗತ್ | ಬ್ರಹ್ಮೈವಭೂತಾನಾಂ ಜ್ಯೇಷ್ಠಮ್ | ತೇನ ಕೋಽರ್ಹತಿ ಸ್ಪರ್ಧಿತುಮ್ |""ಬ್ರಹ್ಮನಿಂದಲೇ ಎಲ್ಲವೂ ಸೃಷ್ಟಿಸಲ್ಪಟ್ಟಿದೆ. ಅವನಲ್ಲಿಯೇ ಈ ಎಲ್ಲಾ ಲೋಕಗಳೂ ಇವೆ. ಬ್ರಹ್ಮನೇ ಎಲ್ಲಾ ಜೀವಿಗಳಿಗೂ ಜ್ಯೇಷ್ಠನು. ಅವನೊಡನೆ ಸ್ಪರ್ಧಿಸಲು ಯಾರಿಗೆ ತಾನೇ ಸಾಧ್ಯ ?' ಎಂದು ವೇದ ವಾಣಿಯು ಬ್ರಹ್ಮನ ಮಹಿಮೆಯನ್ನು ಕೊಂಡಾಡುತ್ತದೆ. ಕವಿಯೂ ಕೂಡ ಆ ಪರವಸ್ತುವನ್ನು ಅನುಭವಿಸಿದವನಾಗಿರಬೇಕು. ಒಳ ಬೆಳಕನ್ನು ಕಂಡವನಾಗಿರಬೇಕು. ಅಂತಹ ಕವಿಯು ತಾನು ಅನುಭವಿಸಿದ ಆನಂದವನ್ನು ತನ್ನ ವಾಗರ್ಥ ಸಂಪತ್ತಿನಿಂದ ಓದುಗರ, ಸಹೃದಯರ ಅನುಭವಕ್ಕೆ ತಂದು ಕೊಡುವ ಸಾಮರ್ಥ್ಯವನ್ನು ಹೊಂದಿರುವವನಾಗಿರುತ್ತಾನೆ. ಇಂತಹ ಕವಿಯನ್ನು ವರ್ಣಿಸುತ್ತಾ ಶ್ರೀ ಶಂಕರಭಗವತ್ಪಾದರು ತಮ್ಮ ಜೀವನ್ಮುಕ್ತಾನಂದಲಹರಿಯಲ್ಲಿ - ಇಮಾಂ ಮುಕ್ತಾವಸ್ಥಾಂ ಪರಮಶಿವಸಂಸ್ಥಾಂ ಗುರುಕೃಪಾ-ಸುಧಾಪಾಂಗಾವಾಪ್ಯಾಂ ಸಹಜ-ಸುಖ-ವಾಪ್ಯಾಮನುದಿನಮ್ | ಮುಹುರ್ಮಜ್ಜನ್ಮಜ್ಜನ್ಭಜತಿ ಸುಕೃತೀ ಚೇನ್ನರವರಃ ತದಾ ಯೋಗೀ ತ್ಯಾಗೀ ಕವಿರಿತಿ ವದಂತೀಹ ಕವಯಃ || " ಯಾವನು ಗುರುಕೃಪಾಮೃತವೆಂಬ ನೋಟದಿಂದ ತನಗೆ ದೊರೆತ ಸಹಜಸುಖವೆಂಬ ಬಾವಿಯಲ್ಲಿ ದಿನದಿನವೂ ತನ್ನನ್ನು ಮುಳುಗಿಸಿಕೊಂಡು ಮುಕ್ತನಾಗಿ ಪರಮಾತ್ಮನಲ್ಲಿ ಬೆರೆತು ಆನಂದವನ್ನು ಅನುಭವಿಸುತ್ತಿರುವನೋ ಅವನನ್ನೇ ಕವಿಗಳು 'ತ್ಯಾಗೀ' 'ಯೋಗೀ' 'ಕವಿ' ಗಳೆಂದು ಬಣ್ಣಿಸಿದ್ದಾರೆ." ಎಂಬುದಾಗಿ ತಿಳಿಸಿದ್ದಾರೆ. ಇಂತಹವನಲ್ಲವೇ 'ಕವಿ' ಪದಕ್ಕೆ ಯೋಗ್ಯನಾದವನು ? ಏಲಕ್ಕಿ ತಿಂದವನ ಬಾಯಿಯಿಂದ ಬರುವ ಮಾತುಗಳು ಆ ಏಲಕ್ಕಿಯ ಸೌಗಂಧ್ಯವನ್ನು ಹೊತ್ತುತರುವಂತೆ ತಾನು ಒಳಗೆ ಅನುಭವಿಸಿದ ಆನಂದವನ್ನು, ಒಳಬೆಳಕನ್ನು ನೋಡುತ್ತಾ ವಾಗರ್ಥಗಳ ರೂಪವಾಗಿ ಹೊರಹೊಮ್ಮಿದ ಸಾಹಿತ್ಯವಲ್ಲವೇ 'ಕಾವ್ಯ' ಪದಕ್ಕೆ ಭಾಜನವಾಗುವುದು ? ವಾಲ್ಮೀಕಿಯೇ ಆದಿಕವಿ, ಶ್ರೀಮದ್ರಾಮಾಯಣವೇ ಆದಿಕಾವ್ಯ ಮೇಲೆ ವರ್ಣಿಸಿದ 'ಕವಿ' ಪದದ ವಿವರಣೆಗೆ ಭಾಜನರಾದವರಲ್ಲಿ ಮೊದಲಸ್ಥಾನ ವಾಲ್ಮೀಕಿಗಳಿಗೆ ಸಲ್ಲುತ್ತದೆ. ಹೃದಯಾಕಾಶದಲ್ಲಿ ಪರಂಜ್ಯೋತೀರೂಪದಲ್ಲಿ ಬೆಳಗುತ್ತಿರುವ ಯಾವ ಶ್ರೀರಾಮನನ್ನು ನಾರದಾದಿ ಮುನಿಗಳ ಉಪದೇಶದಿಂದಲೂ ಸ್ವತಃ ತಪಸ್ಸಿನಿಂದಲೂ ಕಂಡುಕೊಂಡರೋ, ಅದೇ ಶ್ರೀರಾಮನ ಜೀವನತತ್ತ್ವವನ್ನು ತಮ್ಮ ಕಾವ್ಯವಾದ ಶ್ರೀಮದ್ರಾಮಾಯಣದಲ್ಲಿ ವರ್ಣಿಸಿದ್ದಾರೆ. 'ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ| ವೇದಃ ಪ್ರಾಚೇತಸಾದಾಸೀತ್ ಸಾಕ್ಷಾತ್ ರಾಮಾಯಣಾತ್ಮನಾ|| ಎಂದರೆ, 'ವೇದವೇದ್ಯನಾದ ಪರಮಪುರುಷನಾದ ಶ್ರೀರಾಮನು ದಶರಥಪುತ್ರನಾಗಿ ಅವತರಿಸಿರಲು, ವಾಲ್ಮೀಕಿಮುನಿಗಳಿಂದ ವೇದವು ರಾಮಾಯಣರೂಪದಲ್ಲಿ ಹೊರಹೊಮ್ಮಿತು' ಎಂಬ ವರ್ಣನೆಯು ಆದಿಕವಿ ವಾಲ್ಮೀಕಿಯ ಮತ್ತು ಆದಿಕಾವ್ಯ ರಾಮಾಯಣದ ಮಹತ್ತ್ವವನ್ನು ಸಾರುತ್ತದೆ. ಜನ್ಮ-ವ್ಯಾಧಿ-ಜರಾ-ವಿಪತ್ತಿ-ಮರಣಾದಿ ಅನೇಕ ತೊಂದರೆಗಳಿಂದ ಕೂಡಿರುವ ಸಂಸಾರವನ್ನು ದಾಟಿಸಿ ಸಹೃದಯಿಯಾದ ಓದುಗನನ್ನು ಶಾಶ್ವತವಾದ ಬ್ರಹ್ಮಪದದಲ್ಲಿ ನಿಲ್ಲಿಸುತ್ತದೆ ಆದಿಕಾವ್ಯವಾದ ಶ್ರೀಮದ್ರಾಮಾಯಣ. ಅಂತೆಯೇ, ವ್ಯಾಸಮಹರ್ಷಿಗಳ ಮಹಾಭಾರತ 'ಪಂಚಮವೇದ'ವೆಂದೇ ಪ್ರಖ್ಯಾತವಾಗಿದೆ, ಸಂಸ್ಕೃತವಾಙ್ಮಯದ ಪಂಚಮಹಾಕಾವ್ಯಗಳಾದ ಕವಿಕುಲಗುರು ಮಹರ್ಷಿ ಕಾಳಿದಾಸನ ರಘುವಂಶ ಮತ್ತು ಕುಮಾರಸಂಭವ, ಭಾರವಿಯ ಕಿರಾತಾರ್ಜುನೀಯ, ಮಾಘಮಹಾಕವಿಯ ಶಿಶುಪಾಲವಧೆ ಮತ್ತು ಶ್ರೀಹರ್ಷಕವಿಯ ನೈಷಧ ಮಹಾಕಾವ್ಯಗಳು ಪ್ರಸಿದ್ಧಕೃತಿಗಳು.

ಸೂಚನೆ : 27/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಸಂಪ್ರಜ್ಞಾತ ಸಮಾಧಿ (Samprajnata Samadhi)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)




ಧ್ಯೇಯವಸ್ತುವೊಂದರ ಸ್ಮರಣೆಯೇ ನಿರಂತರವಾಗಿರುವ ಸ್ಥಿತಿಯ ಒಂದು ಹಂತದಲ್ಲಿ ಧ್ಯೇಯವಸ್ತುವು ಮರೆಯಾಗಿ, ಬಾಹ್ಯ ಪ್ರಜ್ಞೆಯೆಲ್ಲವೂ ಕಳಚಿ ಮೈಮರೆತು ಅಂತರಂಗ ಪ್ರಪಂಚದಲ್ಲಿ ಏನನ್ನಾದರೂ ನೋಡುತ್ತಿರುವ ಅಥವಾ ಕೇಳುತ್ತಿರುವ ಒಂದು ಸ್ಥಿತಿ ಉಂಟಾಗುತ್ತದೆ. ಈ ಸ್ಥಿತಿಯೇ ಸಮಾಧಿ. ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ, ಹೊರಗಣ್ಣಿಗೆ ಗೋಚರವಾಗದ ಸೂಕ್ಷ್ಮವಾದ ಅನೇಕ ದೇವತಾರೂಪಗಳು ಅಂತರ್ದೃಷ್ಟಿಗೆ ಗೋಚರವಾಗುವುದು ಈ ಸ್ಥಿತಿಯಲ್ಲಿಯೇ. ಹೊರಗಿವಿಗೆ ಕೇಳದ ಅನಾಹತ ನಾದವೆಂದು ಪರಿಗಣಿಸಲ್ಪಡುವ ಓಂಕಾರವೂ ಮತ್ತು ದಶವಿಧ ನಾದಗಳೂ ಕೇಳಿಬರುವುದು ಈ ಸ್ಥಿತಿಯಲ್ಲಿಯೇ.

ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ತಮ್ಮ ಯೋಗಾನುಭವವನ್ನು ಶಿಷ್ಯರೊಬ್ಬರ ಬಳಿ ಹೇಳುವಾಗ ಶ್ರೀನಿವಾಸದೇವರ ಪಟವೊಂದನ್ನು ತೋರಿಸುತ್ತಾ, "ಇದನ್ನು ನಾನು ಧ್ಯಾನದಿಂದ ಧರಿಸಿದೆ. ಧ್ಯಾನವು ಮುಂದುವರಿದಂತೆ ಕ್ರಮಕ್ರಮವಾಗಿ ಮೂರ್ತಿ ಅದೃಶ್ಯವಾಗಹತ್ತಿತು. ಕೊನೆಗೆ ನನ್ನ ಅಂತಶ್ಚಕ್ಷುಸ್ಸಿಗೆ(ಒಳಗಣ್ಣಿಗೆ)  ಕಂಡಿದ್ದು ಜ್ಯೋತೀ ರಾಶಿ ಮಾತ್ರ" ಎಂದು ಹೇಳಿದ್ದರು.

ಸಮಾಧಿ ಸ್ಥಿತಿಯಲ್ಲಿ ಹಂತಗಳುಂಟು ಮತ್ತು ಚಿತ್ತದ ಅತ್ಯಂತ ಸೂಕ್ಷ್ಮವೃತ್ತಿಗಳ ಅಥವಾ ನಿವೃತ್ತಿಯ ಪ್ರಭೇದಗಳಿಂದ ನಾನಾ ಸ್ಥಿತಿವಿಶೇಷಗಳು ಉಂಟಾಗುತ್ತವೆ. ಅವುಗಳ ಪೂರ್ಣವಿವರಗಳಿಗೆ ಹೋಗದೆ ಸಂಕ್ಷೇಪವಾಗಿ ಸಮಾಧಿಸ್ಥಿತಿಯನ್ನು ವಿಭಾಗಿಸುವುದಾದರೆ ಸಂಪ್ರಜ್ಞಾತ ಮತ್ತು ಅಸಂಪ್ರಜ್ಞಾತವೆಂದು ಎರಡಾಗಿ ವಿಭಾಗಿಸಬಹುದು. ಸಂಪ್ರಜ್ಞಾತ ಸಮಾಧಿಯಲ್ಲಿ ಚಿತ್ತವು ಕೆಲಸ ಮಾಡುತ್ತಿದ್ದು ಸ್ಥೂಲ, ಸೂಕ್ಷ್ಮ ಮತ್ತು ಪರಾ ಕ್ಷೇತ್ರಗಳ ಯಾವುದಾದರೊಂದು ವಿಷಯದಲ್ಲಿ ಲೀನವಾಗಿರುತ್ತದೆ. ಅಸಂಪ್ರಜ್ಞಾತ ಸಮಾಧಿಯಲ್ಲಿ ಚಿತ್ತವು ಸಂಪೂರ್ಣವಾಗಿ ನಿವೃತ್ತವಾಗಿದ್ದು ಅಖಂಡವಾದ ಪರಂಜ್ಯೋತಿಯಲ್ಲಿ ಜೀವಿಯು ಲೀನವಾಗಿರುತ್ತಾನೆ.

ಶ್ರೀರಂಗ ಮಹಾಗುರುಗಳ ವಾಣಿಯಲ್ಲಿಯೇ ಹೇಳುವುದಾದರೆ - "ಸಂಪ್ರಜ್ಞಾತಸಮಾಧಿ ಸ್ಥಿತಿಯಲ್ಲಿಯೇ ನಿವಾತ ದೀಪದಂತೆ ಬೆಳಗುವ ಜ್ಞಾನದೀಪವು ತೋರಿಬರುವುದು. ಚತುಷ್ಷಷ್ಟಿ(೬೪) ಕಲೆಗಳೆಂಬ ಹಣತೆಗಳನ್ನು ಹತ್ತಿಸಿ ಭಾರತಮಂದಿರದಲ್ಲಿ ಬೆಳಗಿಸಿದ ವಿಜ್ಞಾನಮೂಲಜ್ಯೋತಿಯೂ ಕಲೆಗಳ ತಾಯಿಬೇರೂ ಆಗಿರುವುದು ಈ ದೀಪವೇ".

ಸಂಪ್ರಜ್ಞಾತ ಸಮಾಧಿಯಲ್ಲಿಯೇ ಸೃಷ್ಟಿಯ ನಾನಾ ವಿಷಯಗಳಲ್ಲಿ ಮಾಡುವ ಮನಸ್ಸಿನ ಸಂಯಮವು ನಾನಾ ಸೃಷ್ಟಿರಹಸ್ಯಗಳನ್ನೂ ಅವುಗಳ ವಿಜ್ಞಾನವನ್ನೂ ಬಿಚ್ಚಿಕೊಡುವುದು. ಉದಾಹರಣೆಗೆ ಗಿಡಮೂಲಿಕೆಗಳ ಮೇಲೆ ಸಂಯಮ ಮಾಡಿದರೆ, ಅವುಗಳ ಔಷಧ ಗುಣ ತಿಳಿಯುತ್ತದೆ. ಇಂತಹ ಸಿದ್ಧಿಯಿಂದ ಮಹರ್ಷಿಗಳು ಪ್ರಾಣಿಪಕ್ಷಿಗಳಿಗೆ ಬಹಳ ಹಿಂಸೆ ಕೊಡದೆ ಆಯುರ್ವೇದ ವಿದ್ಯೆಯನ್ನು ಹೊರತಂದಿದ್ದಾರೆ. ಪಾತಂಜಲ ಯೋಗಸೂತ್ರದಲ್ಲಿ, "ನಾಭಿಚಕ್ರದ ಮೇಲೆ ಸಂಯಮ ಮಾಡಿದರೆ ಶರೀರದ ರಚನೆಯ ಜ್ಞಾನವುಂಟಾಗುತ್ತದೆ, ಚಂದ್ರನ ಮೇಲೆ ಸಂಯಮ ಮಾಡಿದರೆ ನಕ್ಷತ್ರವ್ಯೂಹದ ಜ್ಞಾನವುಂಟಾಗುತ್ತದೆ"- ಮುಂತಾಗಿ ಅನೇಕ ಸಿದ್ಧಿಗಳನ್ನು ವಿವರಿಸಿದ್ದಾರೆ.

ಹೀಗೆ ಸಂಪ್ರಜ್ಞಾತ ಸಮಾಧಿಸ್ಥಿತಿಯು ಭಾರತೀಯ ಸಂಸ್ಕೃತಿಗೆ ತಾಯಿಬೇರಾಗಿದೆ.


ಸೂಚನೆ : 27/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Thursday, February 25, 2021

ಧರ್ಮರಕ್ಷಣೆಗಾಗಿ ಕಾರ್ಯೋನ್ಮುಖರಾಗೋಣ (Dharmaraksanegagi Karyonmukharagona)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್
ಪ್ರತಿಕ್ರಿಯಿಸಿರಿ lekhana@ayvm.in



ಹಾಭಾರತದ ಯುದ್ಧ ಆರಂಭವಾಗುವುದರಲ್ಲಿತ್ತು. ಇದ್ದಕ್ಕಿದ್ದಂತೆ ಅಳುಕಿತು, ಅರ್ಜುನನ ಮನಸ್ಸು- "ಛೆ! ನಾವೇನು ಮಾಡಹೊರಟಿದ್ದೇವೆ? ದಾಯಾದಿಗಳನ್ನು ಕೊಲ್ಲುವುದೇ? ಗುರುಗಳನ್ನು ಹತ್ಯೆ ಮಾಡುವುದೇ? ಸಲಹಿದ ತಾತ, ಭೀಷ್ಮರನ್ನು ವಧಿಸುವುದೇ? ಯುದ್ಧದಲ್ಲಿ ವೀರರು ಸತ್ತರೆ, ಅವರ ಪತ್ನಿಯರ ಗತಿಯೇನು? ….." ಮುಂತಾಗಿ ಯೋಚಿಸಿದ ಅವನ ಕೈಯಿಂದ ಗಾಂಡೀವ ಧನುಸ್ಸು ಜಾರಿತು.

"ಯುದ್ಧ ಮಾಡುತ್ತಿರುವುದು ದ್ವೇಷ ಸಾಧನೆಗಲ್ಲ; ಧರ್ಮವನ್ನುಳಿಸಲು; ಧರ್ಮರಕ್ಷಣೆಗೆ ಉಳಿದ ಉಪಾಯಗಳು ಮುಗಿದ ಮೇಲಷ್ಟೆ ಅಲ್ಲವೇ ರಣೋನ್ಮುಖರಾಗಿದ್ದು?.......ಇತ್ಯಾದಿ ತಿಳಿಹೇಳಿ ಇಡೀ ಸೃಷ್ಟಿಯನ್ನೇ ಅವನ ಮುಂದೆ ತೆರೆದಿಟ್ಟು ವಿಶ್ವರೂಪದರ್ಶನ ಮಾಡಿಸಿ ಅರ್ಜುನನನ್ನು ಕ್ಷತ್ರಿಯಧರ್ಮದ ಹಾದಿಯಲ್ಲಿ ಪ್ರವೃತ್ತನನ್ನಾಗಿ ಮಾಡುವುದರೊಳಗಾಗಿ ಶ್ರೀಕೃಷ್ಣನಿಗೆ ಸಾಕುಸಾಕಾಯಿತು.  ಜ್ಞಾನ, ಭಕ್ತಿ ಹಾಗೂ ಕರ್ಮಗಳ ಮರ್ಮವನ್ನು ಬಿಚ್ಚಿಟ್ಟಿದ್ದ ಕೃಷ್ಣನ ಅನುಗ್ರಹದಿಂದಾಗಿ ಪಾರ್ಥನ ಮನದ ಮೇಲೆ ಕವಿದಿದ್ದ ಮೋಹದ ಕಾರ್ಮೋಡ ಕಳೆಯಿತು.

ಇದು ಎಲ್ಲರಿಗೂ ಪರಿಚಿತ ಕಥೆಯೇ. ಸರಿಯಾದ ಮಾರ್ಗದರ್ಶನವಿಲ್ಲದೇ ಇದನ್ನೋದಿದಾಗ, ದಯಾನಿಧಿಯಾದ ಭಗವಂತ, ಪಾಪಿಗಳಾದ ಕೌರವರ ವಿಷಯದಲ್ಲಿಯೂ ದಯೆಯನ್ನೇ ತೋರಿಸಿಬಿಟ್ಟಿದ್ದರೆ ಎಷ್ಟೋ ಮಂದಿ ಅವನನ್ನು ಕೊಂಡಾಡುತ್ತಿರಲಿಲ್ಲವೇ? ಸರ್ವಶಕ್ತನಾದ ಸ್ವಾಮಿಯು ತನ್ನ ಸಂಕಲ್ಪದಿಂದಲೇ ಕೌರವರ ಮನಃಪರಿವರ್ತನೆ ಮಾಡಬಹುದಾಗಿತ್ತಲ್ಲವೇ? ಇತ್ಯಾದಿ ಪ್ರಶ್ನೆಗಳು ಬಾಧಿಸದಿರವು.  ಅರ್ಜುನನು ಕೌರವರ ವಿಷಯದಲ್ಲಿ ತೋರಿದ ಅನುಕಂಪವನ್ನು ಶ್ರೀರಂಗಮಹಾಗುರುಗಳು 'ಅಸ್ಥಾನ ಸ್ನೇಹ ಕಾರುಣ್ಯ' ಎನ್ನುತ್ತಿದ್ದರು. ದಯೆ ತೋರುವುದು ಒಳ್ಳೆಯದೇ. ಆದರೆ ಅದನ್ನು ಸಕಾಲದಲ್ಲಿ, ಸತ್ಪಾತ್ರರಲ್ಲಿ ತೋರಿಸಬೇಕಷ್ಟೇ. ಚೇಳಿನ ವಿಷಯದಲ್ಲಿ ಎಷ್ಟೇ ದಯೆ ತೋರಿದರೂ ಅವಕಾಶ ಸಿಕ್ಕ ಕೂಡಲೇ ಅದು ನಮ್ಮನ್ನು ಕುಟುಕದೇ ಬಿಡದು. "ರಾಮನು ಕ್ರೋಧವನ್ನು ಬರಮಾಡಿಕೊಂಡು(ಸಾಮಾನ್ಯರಂತೆ ಕೋಪಕ್ಕೆ ತುತ್ತಾಗದೆ) ರಾಕ್ಷಸರನ್ನು ಕೊಂದ" ಎಂದು ವಾಲ್ಮೀಕಿಗಳು ಬಣ್ಣಿಸುತ್ತಾರೆ. ಸೃಷ್ಟಿಯ ಸಹಜ ನಡೆಯನ್ನು ಮೀರಿ ದೇವರೂ ಪ್ರವರ್ತಿಸುವುದಿಲ್ಲ. ಆದ್ದರಿಂದಲೇ ರಾಮನು ಅಧರ್ಮಿಗಳನ್ನು ಕೊಂದುದು. ಧರ್ಮರಕ್ಷಣೆಗೆ ಬೇಕಾದಾಗಷ್ಟೆ ರಾಮನ ಕ್ರೋಧ; ಉಳಿದ ಸಮಯದಲ್ಲಿ ಆತ ಪರಮದಯಾಳು.

ನಮ್ಮ ದೇಶದ ಮೇಲೆ ಪರಕೀಯರ ಆಕ್ರಮಣದಿಂದಾಗಿ, ಎಷ್ಟೋ ಅನ್ಯಾಯಗಳಾದವು. ಧರ್ಮದ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲದಿರುವುದರಿಂದಲೇ, ಭಗವಂತ ಹೇಗೋ ಕಾಪಾಡುತ್ತಾನೆಂದು ನಂಬಿಕೊಂಡು, ವಿದೇಶೀಯರ ಆಕ್ರಮಣವನ್ನು ಭಾರತೀಯರೆಲ್ಲ ಒಗ್ಗೂಡಿ ಎದುರಿಸಲಿಲ್ಲ. ಅಲ್ಲಿ ಇಲ್ಲಿ ಎದುರಿಸಿದರಷ್ಟೆ. ಇಷ್ಟಾಗಿ ಹಿಂದುಗಳ ವಿರುದ್ಧ ಹೋರಾಡುತ್ತಿದ್ದ ಸೈನ್ಯದಲ್ಲಿ ಬಹುಪಾಲು ಇದ್ದದ್ದು ಹಿಂದೂಗಳೇ. ಸಂಬಳ ಕೊಡುವ ಧಣಿಗೆ ನಿಷ್ಠರಾಗಿರಬೇಕೆಂಬುದು ಧರ್ಮವೆಂದು ಭಾವಿಸಿದ್ದರಿಂದಲೇ. ಆ ಧರ್ಮಕ್ಕಿಂತಲೂ ದೊಡ್ಡದಾದ, ಸಂಸ್ಕೃತಿ, ರಾಷ್ಟ್ರಗಳ ರಕ್ಷಣದಂತಹ ದೊಡ್ಡಧರ್ಮವನ್ನು ಉಳಿಸಲು ಸಣ್ಣ ಧರ್ಮಗಳನ್ನು ಕೈಬಿಡಬೇಕೆಂಬ ಪರಿಜ್ಞಾನ ಅವರಿಗಿಲ್ಲದೇ ಹೋಯಿತು.

ಮಹಾಭಾರತದ ಶ್ಲೋಕವೊಂದು ಹೀಗೆ ಹೇಳುತ್ತದೆ- " ಯಾರನ್ನು ರಕ್ಷಿಸಬೇಕೋ, ಅವರ ಹಿಂದೆ ದೊಣ್ಣೆ ಹಿಡಿದು ರಕ್ಷಿಸುವ ಗೋಪಾಲಕರಂತೆ ದೇವತೆಗಳು ಬರುವುದಿಲ್ಲ. ಯಾರನ್ನು ರಕ್ಷಿಸಬೇಕೋ ಅವರಿಗೆ ತಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ಬುದ್ಧಿಯನ್ನು ಕೊಡುವರು". ದೇವರು ಕೊಟ್ಟ ಬುದ್ಧಿಯನ್ನು ಬಳಸಿ ನಮ್ಮ ಒಳ ಹೊರ ಶತ್ರುಗಳನ್ನು ಪರಿಹರಿಸೋಣ. ಧರ್ಮವನ್ನು ಎಲ್ಲಿ, ಹೇಗೆ ರಕ್ಷಿಸಬೇಕೆಂಬುದನ್ನು ಚಿಂತಿಸಿ ಕಾರ್ಯಪ್ರವೃತ್ತರಾಗೋಣ. ಹಾಗೆ ಮಾಡಿದರಷ್ಟೇ, ಧರ್ಮಕ್ಕಾಗಿ ಯುದ್ಧ ಮಾಡಿದ ಪಾಂಡವರನ್ನು ಕೃಷ್ಣನು ಕಾಪಾಡಿದಂತೆ, ನಮ್ಮನ್ನು ದೇವರು ರಕ್ಷಿಸಿಯಾನು. 

ಸೂಚನೆ: 25/02/2021 ರಂದು 
ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.

ಗುರುವೆಂಬ ಮಹಾಸಿಂಹ (Guruvemba Mahasinha)

ಲೇಖಕರು:  ವಿದ್ವಾನ್  ಶ್ರೀ ಬಿ.ಜಿ.ಅನಂತ
(ಪ್ರತಿಕ್ರಿಯಿಸಿರಿ lekhana@ayvm.in)



ಒಂದು ದಿನ ಕುರಿಗಾಹಿಯೊಬ್ಬ ಎಂದಿನಂತೆ ಕುರಿಗಳನ್ನು ಮೇಯಿಸಲು ಕಾಡಿನ ಅಂಚಿಗೆ ಹೋದ. ಅಚ್ಚರಿಯೆಂಬಂತೆ ಅಂದು ಕಾಡಿನಲ್ಲಿ ಅವನಿಗೆ ಸಿಂಹದ ಮರಿಯೊಂದು ಕಾಣಿಸಿತು.  ಕುರಿಗಾಹಿಯು ಇನ್ನೂ ಕಣ್ಣು ಬಿಟ್ಟಿರದ ಆ ಪುಟ್ಟ ಮರಿಯನ್ನು ಕರುಣೆಯಿಂದ ಮನೆಗೆ ಕರೆತಂದ. ಅದನ್ನು ತನ್ನ ಮಂದೆಯಲ್ಲಿನ ಕುರಿಮರಿಗಳಂತೆ ಅಕ್ಕರೆಯಿಂದ ಸಾಕಿದ. ಅದು ಕುರಿಗಳ ಹಾಲನ್ನೇ ಕುಡಿಯುತ್ತ ಕುರಿಗಳ ಜೊತೆಯಲ್ಲಿಯೇ ಬೆಳೆದು ದೊಡ್ಡದಾಯಿತು. ತನ್ನ ತಾಯಿಯನ್ನೂ, ಬಂಧುಗಳನ್ನೂ ಕಂಡಿರದ ಸಿಂಹದ ಮರಿಯು ಇತರ ಕುರಿಮರಿಗಳಂತೆಯೇ ಕುರಿಗಳನ್ನೇ ತನ್ನ ಸಂಗಾತಿಗಳೆಂದು ಭಾವಿಸಿಕೊಂಡಿತು. ಕುರಿಮಂದೆಯ ಜೊತೆಗೆ ನಿತ್ಯವೂ ಕಾಡಿನ ಅಂಚಿನಲ್ಲಿ ಮೇಯುತ್ತಾ, ಕುರಿಗಾಹಿಯ ಕೈಯಲ್ಲಿದ್ದ ಬೆತ್ತಕ್ಕೆ ಬೆದರುತ್ತಾ, ತೋಳಗಳನ್ನು ಕಂಡರೆ ಹೆದರಿ ಓಡುತ್ತಾ, ನೋಡನೋಡುತ್ತಲೇ ಬೃಹದಾಕಾರದ ಸಿಂಹವಾಗಿ ಬೆಳೆಯಿತು.

ಹೀಗಿರುವಾಗಲೇ ಒಂದು ದಿವಸ, ಮೇಯುತ್ತಿದ್ದ ಕುರಿಮಂದೆಯನ್ನು ಕಾಡಿನಲ್ಲಿದ್ದ ಮತ್ತೊಂದು ಸಿಂಹವು ಅಕಸ್ಮಾತ್ತಾಗಿ ನೋಡಿತು. ಅದಕ್ಕೆ ಪರಮ ಅಚ್ಚರಿಯೆಂಬಂತೆ ಕುರಿಗಳ ಮಧ್ಯದಲ್ಲಿ ಸುಲಕ್ಷಣವಾದ ಸಿಂಹವೊಂದು ಕಾಣಿಸಿತು. ಮತ್ತಷ್ಟು ಗಮನಿಸಿದಾಗ ಅದರ ಚಲನವಲನಗಳೆಲ್ಲವೂ ಕುರಿಗಳಿಗಿಂತ ಭಿನ್ನವಾಗೇನೂ ಇರಲಿಲ್ಲ. ಕೂಡಲೇ ಕಾಡಿನ ಸಿಂಹವು ಮಂದೆಯ ಕಡೆಗೆ ಧಾವಿಸಿತು. ಅದನ್ನು ಕಂಡು ಕುರಿಗಾಹಿಯೂ, ಕುರಿಮಂದೆಯೂ ದಿಕ್ಕಾಪಾಲಾಗಿ ಚದುರಿಹೋದವು.  ಈ ಸಿಂಹವು ಓಡಿಹೋಗಿ ಮಂದೆಯಲ್ಲಿದ್ದ ಸಿಂಹವನ್ನು ಹಿಡಿದು ನಿಲ್ಲಿಸಿತು. ನಡುಗುತ್ತಾ ನಿಂತಿದ್ದ ಅದನ್ನು ಕುರಿತು, 'ನೀನಾರು ಗೊತ್ತೇ?' ಎಂದು ಪ್ರಶ್ನಿಸಿತು.  'ನಾನೊಂದು ಕುರಿ. ನಾನು ನನ್ನವರೊಂದಿಗೆ ಹೋಗಬೇಕು' ಎಂದುತ್ತರಿಸಿತು ಮಂದೆಯ ಸಿಂಹ.  ಅದಕ್ಕೆ ಕಾಡಿನ ಸಿಂಹವು ನಗುತ್ತಾ, 'ಇಲ್ಲ, ನೀನು ಹೋಗಬೇಕಾದ ದಾರಿ ನಾಡಿನದಲ್ಲ-ಕಾಡಿನದು. ನಿನ್ನ ಬಂಧುಗಳು ಕುರಿಗಳಲ್ಲ-ಸಿಂಹಗಳು.  ನೀನು ಮೃಗರಾಜನಂತೆ ನಿರ್ಭೀತಿಯಿಂದ ಬಾಳ ಬೇಕಾದವನು; ಕುರಿಗಳಂತಲ್ಲ ಎಂದಿತು. ಅನುಮಾನದಿಂದ ನೋಡುತ್ತಾ ನಿಂತಿದ್ದ ಅದನ್ನು ಹತ್ತಿರದಲ್ಲಿದ್ದ ಸರೋವರದ ಬಳಿಗೆ ಕರೆದೊಯ್ದಿತು. ನೀರಿನಲ್ಲಿ ತನ್ನ ದೇಹದ ಪ್ರತಿಬಿಂಬವನ್ನು ನೋಡಿಕೊಳ್ಳಲು ಹೇಳಿ, 'ನೋಡು ನಿನಗೆ ನನ್ನಂತೆಯೇ ಸಿಂಹಗಳಿಗಿರುವ ದೇಹವಿದೆ, ದೊಡ್ಡ ಕೋರೆದಾಡೆಗಳಿವೆ, ಉದ್ದದ ಕೇಸರಗಳಿವೆ. ನೀನು ಕುರಿಗಳ ಮಧ್ಯದಲ್ಲಿ ಬೆಳೆದರೂ ಕುರಿಯಲ್ಲ; ಮೃಗರಾಜ. ಬಾ ನನ್ನ ಜೊತೆಗೆ' ಎಂದಿತು. ತನ್ನ ಬಗ್ಗೆ ಕೇಳಿ ತಿಳಿಯುತ್ತಾ, ತನ್ನ ಪ್ರತಿಬಿಂಬವನ್ನು ನೋಡಿ ಪುನಃ ಪುನಃ ತನ್ನ ಸುಪುಷ್ಟವಾದ ಶರೀರವನ್ನು ನೋಡಿಕೊಳ್ಳುತ್ತಿದ್ದಂತೆ, ಕುರಿಯಂತಿದ್ದ ಸಿಂಹವು, ನಿಜವಾದ ಸಿಂಹವಾಯಿತು. ಅದಕ್ಕೀಗ ಕುರಿಗಾಹಿಯ ಕೋಲಿನ ಭಯವಿಲ್ಲ, ತೋಳಗಳ ಅಂಜಿಕೆಯಿಲ್ಲ, ಅದಕ್ಕೀಗ ಯಾರ ಭಯವೂ ಇಲ್ಲ. ಅದು ಮೊದಲ ಬಾರಿಗೆ ಒಂದು ಸಿಂಹದಂತೆ ಹೆಜ್ಜೆಗಳನ್ನು ಇಡುತ್ತಾ ಕಾಡಿನೊಳಕ್ಕೆ ಪ್ರವೇಶಿಸಿತು.

ಕೇಳುವುದಕ್ಕೆ ಚಂದಮಾಮದ ಕಥೆಯಂತೆ ಕಾಣುವ ಇದು ಜ್ಞಾನಿಗಳ ಕಡೆಯಿಂದ ಬಂದ ಕಥೆಯಾಗಿದೆ. ಸಂಸಾರವೆಂಬ ಕುರಿಮಂದೆಯಲ್ಲಿ ಸಿಲುಕಿ ಎಲ್ಲವಕ್ಕೂ ಹೆದರಿ ಹೆದರಿ ಕುರಿಗಳಂತೆ ಜೀವಿಸುತ್ತಿರುವ ಸಿಂಹದ ಮರಿಗಳು ನಾವೇ ಆಗಿದ್ದೇವೆ. ನಮಗೆ ಆಗಿರುವ ಈ ಆತ್ಮ ವಿಸ್ಮೃತಿಯನ್ನು ಕಳೆದು ನಮ್ಮನ್ನು ನಮ್ಮ ಮೂಲನೆಲೆಯಾದ ಆತ್ಮ ಸಾಮ್ರಾಜ್ಯದ ಕಡೆಗೆ ಕರೆದೊಯ್ಯಲು ಬರುವ ಮತ್ತೊಂದು ಮಹಾ ಸಿಂಹವೇ - ಸರ್ವಜ್ಞನಾದ ಗುರು. ನಮ್ಮ ಮತ್ತು ಗುರುವಿನ ಆತ್ಮಸ್ವರೂಪವು ಒಂದೇ ಆಗಿದೆ. ಅರಿತುಕೊಂಡರೆ, ನಾವೆಲ್ಲರೂ ಆತ್ಮರಾಜ್ಯದ ರಾಜರೇ ಆಗಿದ್ದೇವೆ. ನಮ್ಮನ್ನು ನಾವು ಅರಿತುಕೊಳ್ಳುವುದೇ ಇದರ ಮೊದಲ ಹೆಜ್ಜೆಯಾಗಿದೆ.
ಶ್ರೀರಂಗಮಹಾಗುರುವು, 'ಅಪ್ಪಾ!  ನೀವೆಲ್ಲ ಅಮೃತಪುತ್ರರಾಗಿದ್ದೀರಿ. ಪರಮಾತ್ಮನಲ್ಲಿ ನಿಬದ್ಧನಾಗಿ ಚೆನ್ನಾಗಿ ಪಳಗಿರುವ ಗುರುವಿಗೆ ನಿಮ್ಮ ಮನಸ್ಸನ್ನು ಒಪ್ಪಿಸಿಕೊಂಡರೆ ಅದೂ ಕಾಲಕ್ರಮದಲ್ಲಿ ಪಳಗಿಬಿಡುತ್ತದೆ' ಎಂದಿರುವುದನ್ನು ಈ ಸಿಂಹಗಳ ಕಥೆಗೆ ಅನ್ವಯಿಸಿಕೊಳ್ಳಬಹುದಾಗಿದೆ.

ಸೂಚನೆ: 25/02/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ. 

நவரஸநாயகன் ஸ்ரீராமன்(Navarasa nayakan Sriraman)

 மூலம்: டா. நஞ்சன்கூடு 
 சுரேஶ்தமிழாக்கம்: வனஜா 
மின்னஞ்சல் : (lekhana@ayvm.in)



ஆதிகவி வால்மீகி ஸ்ரீ ராமன் நவரஸங்களின் நாயகன் என சித்திரிப்பதில் வெற்றி பெற்றார் என்பது  ராமாயணத்தை படித்த அனைவரும் அறிந்தது. இக்காவியத்தில் ஒன்பது வித உணர்சிகளும்  இயற்கையாகவே  பொருத்தமான இடங்களில் வெளிப்பட்டுள்ளன. தேவைக்கேற்றவாறு வெளிப்பட்டுள்ள  உணர்ச்சிகள் காவியத்திற்கு எல்லா வகையிலும் மேலும் மெருகூட்டியுள்ளன.  இறைஉணர்வெனும் அமுதத்திலேயே  எக்காலமும் ஆழ்ந்திருந்த வால்மீகி முனிவர் ஸ்ரீ ராமபிரானின் இனிமையை தன்னுள் சுவைத்து அதில் எவ்வித மாற்றமும் இன்றி சித்திரித்தமையால் படிப்பவர்கள் மனதையும் ராமாம்ருதத்தில் திளைக்க செய்துள்ளார். "சுவை மிகுந்த உணவு பலவீனமானவனை பலப்படுத்துவது போல் ராமனின் நவரஸங்களும் மனம்சோர்ந்தவனை ஊக்கப்படுத்துகின்றன"  எனும்  ஸ்ரீரங்கமஹாகுருவின் புனித வாக்கை  நினைவுகூறலாம்.

ஸ்ரீராமன்-சீதை இடையிலான அன்பு அவர்களின் மணவாழ்வில் முழுமையாக வெளிப்படுகிறது.  வலிமையும், வீரமும் சிவன் வில்லை முறித்ததிலும், அரக்கர்களுடனான போரிலும் வெளிப்படுகிறது. துயரம் ஜடாயுவின் மரணத்திலும், தசரதனின் பிரிவிலும் வெளிப்படுகிறது. ஆச்சரியம்  கடலில் அணை கட்டியதிலும், பூமாதேவியுடன் சீதை ஐக்கியமானதிலும் அறியப்படுகிறது. ஹாஸ்யம்(நகைச்சுவை) சூர்ப்பனகையிடமும், பேரச்சமும்,  வெறுப்புணர்ச்சியும் அரக்கர்களின் போரிலும் வெளிப்படுகிறது. கோபம் ராவணனையும்,  கும்பகர்ணனையும் கொல்லும்போதும்,  சாந்தம் முனிவர்களுடன் பர்ணசாலையில் இருக்கையிலும் வெளிப்படுகிறது. ஆதிகவி வால்மீகி தன்னை ஒத்த மனமுடையவர்களுக்கு அத்தகு உணர்ச்சிகள் மனதில் எழும் வண்ணம் ராமனின் வாழ்வில் இடம்பெற்ற நவரஸங்களையும் விவரிக்கின்றார்.

புலனின்பம் மற்றும்  தெய்வீக இன்பம் இரண்டையும் அளிக்க கூடிய இவ்வுடலுக்கு மிகவும்  அவசியமான - அன்பிலிருந்து தொடங்கி அமைதியில் நிறைவுறும் - நவரஸங்களையும் அருளி வால்மீகி முனிவர் ஜீவாத்மா-பரமாத்மாக்களின் ஐக்கியத்திற்கு  வழிவகுத்துள்ளார். இவ்வாறாக முனிவர் 'சாந்திஸம்ருத்தமம்ருதம்' எனும் மறை வாக்கிற்கேற்ப அமைதி நிறைந்த  தெய்வீக இன்பத்திற்கு  வழிகாட்டியுள்ளார்.

"ரஸோ வை ஸ:, ரஸம் ஹ்யேவாயம் லப்த்வானந்தீ பவதி"

"இறைவனே பேரின்பத்தின் சாறு. அவனை அடைவதால் மட்டுமே மனிதன் பேரின்பத்தை சுவைக்க இயலும்"  என்னும் நிலைக்கு ஏற்றுகிறார்.

ஒரு கவிதையால் பெறும் அநேக நன்மைகளில் இன்றியமையாதது பண்பட்ட மனதை துன்பங்களிலிருந்து  விடுவித்து தெய்வீக இன்பத்தை அளிப்பதுவே.  இத்தகைய  ஆதிகாவியமாம் ராமாயணமும், ஆதிகவி வால்மீகியும் போற்றத்தக்கவர்களே ஆவார்.

ஆத்மாராமனாக ஆத்மாவின் உள்உறையும் இறைவன் நிலையான பேரின்பச்சாறாக உள்ளான்.  ஆன்மாவையும், அதன் விச்வரூபமான வளர்ச்சியையும் அறிந்தால் மட்டுமே  அமைதியான இனியவாழ்வை அடைய இயலும்  எனும் ஸ்ரீ ரங்க மஹாகுருவின்  அருள்வாக்கை நினைவு கூர்ந்து ராமாயணத்தின் உட்பொருளை எனக்கு உணர்த்திய பூஜ்ய ரங்கப்ரிய ஸ்வாமிகளை நமஸ்கரித்து "உனது உடைமையை  உனக்கே அர்ப்பணிக்கிறேன்,  கோவிந்தா" என இக்கட்டுரையை இறைவனுக்கு அர்ப்பணிக்கிறேன்.

குறிப்பு: இக்கட்டுரை யின் கன்னட மூலம் AYVM blogs ல் காணலாம்.

Monday, February 22, 2021

ಆರ್ಯಸಂಸ್ಕೃತಿ ದರ್ಶನ - 31 (Arya Samskruti Darshana - 31)

ಓಂ ಶ್ರೀಃ
  ಪದ ಮತ್ತು ಅರ್ಥ  
ಲೇಖಕರು: || ಶ್ರೀ ವಿಜಯಾನಂದಕಂದ.


ಪದ ಮತ್ತು ಅರ್ಥ ಇವುಗಳಿರುವ ಸಂಬಂಧ ಎಷ್ಟು ನಿಕಟವಾದುದು ಎಂಬ ಅಂಶ ಎಲ್ಲರಿಗೂ ತಿಳಿದಿದ್ದೇ ಆಗಿದೆ. ಈ ಎರಡೂ ಪದಗಳ ಪರಿಚಯ ಯಾರಿಗೆ ತಾನೆ ಇಲ್ಲ? ಹೀಗಿದ್ದರೂ ಇಂದು ಎಷ್ಟೋ ಪದಗಳು ಅರ್ಥದ ಪರಿಚಯವೇ ಇಲ್ಲದೆ ಬಳಸಲ್ಪಡುತ್ತಿವೆ. ಅವುಗಳಲ್ಲಿ "ಅರ್ಥ" ಎಂಬ ಪದವೂ ಒಂದು. ಪದವೊಂದರ ಅರ್ಥವೇನು? ಎಂದು ಕೇಳಿದಾಗ, ಅದೇ ಭಾಷೆಯ ಅಥವಾ ಇತರ ಭಾಷೆಯ  ಮತ್ತೊಂದು ಪರ್ಯಾಯ ಪದವನ್ನು ಹೇಳಿ ಅದರ ಅರ್ಥವೆಂದು ಹೇಳುವುದನ್ನು ಎಲ್ಲರೂ ಬಲ್ಲರು. ಉದಾಹರಣೆಗೆ "ವಾರಿ" ಎಂಬ ಪದದ ಅರ್ಥವೇನು? ಎಂಬುದಾಗಿ ಅಧ್ಯಾಪಕರೊಬ್ಬರು ಕೇಳಿದಾಗ, ವಿದ್ಯಾರ್ಥಿಯು ಕೂಡಲೇ "ಜಲಂ", "ನೀರು", "ಉದಕಂ" ಎಂಬುದಾಗಿ ಉತ್ತರವನ್ನು ಕೊಡುತ್ತಾನೆ ಎನ್ನೋಣ. ಅಧ್ಯಾಪಕರು ಆ ಉತ್ತರವನ್ನು "ಸರಿ" ಎಂದು ಒಪ್ಪಿಕೊಂಡು, ಆ ವಿದ್ಯಾರ್ಥಿಯನ್ನು "ಭೇಷ್" ಎಂದು ಬೆನ್ನು ಚಪ್ಪರಿಸಲೂ ಬಹುದು ಅಥವಾ ಆ ಪದದ ಅರ್ಥ ಗೊತ್ತಿಲ್ಲವೆಂದು  ಹೇಳಿ, ಅವರು ಅದಕ್ಕೆ water, ನೀಳ್ಳು, ಪಾನಿ, ತಣ್ಣಿ, ಇತ್ಯಾದಿ ಆಯಾ  ವಿದ್ಯಾರ್ಥಿಗಳಿಗೆ ತಿಳಿಯುವ ಇತರ ಭಾಷೆಗಳ ಪದಗಳನ್ನು ಹೇಳಿ, ಅದೇ ಆ ಪದ ಅರ್ಥವೆಂದು ತಿಳಿಸುವುದನ್ನೂ ನೋಡಿದ್ದೇವೆ. ಆದರೆ ಇಲ್ಲಿ ಒಂದು ಪದಕ್ಕೆ ಮತ್ತೊಂದು ಪದವನ್ನೋ ಅಥವಾ ಇತರ ಭಾಷೆಯ ಸಮಾನಾರ್ಥಕ ಪದಗಳನ್ನೋ ಪರಿಚಯ ಮಾಡಿಕೊಟ್ಟಂತಾಯಿತೇ ವಿನಾ, ಅದರ ಅರ್ಥವನ್ನು ತೋರಿಸಿದಂತಾಗಲಿಲ್ಲ.

ಆ ವಿದ್ಯಾರ್ಥಿಗೆ ಸಂಸ್ಕೃತ, ಇಂಗ್ಲೀಷು, ಕನ್ನಡ, ಹಿಂದೀ, ತೆಲುಗು, ತಮಿಳು ಇಷ್ಟು ಭಾಷೆಗಳು ಬಾರದಿದ್ದಲ್ಲಿ, ಅವನಿಗೆ ಆ ಪದದ ಅರ್ಥ ಮನಸ್ಸಿಗೆ ಬರುವುದಿಲ್ಲವೆಂಬುದು ಸ್ಪಷ್ಟ. ಹೀಗೆ ಅನೇಕ ಪದಗಳನ್ನು ಮುಂದಿಟ್ಟು ಹೇಳುವುದರ ಬದಲು ಹೊಳೆಗೋ, ಬಾವಿಗೋ, ಕೆರೆಗೋ ಕರೆದುಕೊಂಡುಹೋಗಿ ಆ ನೀರನ್ನೇ ತೋರಿಸಿದಲ್ಲಿ, ಆಗ ಮಾತ್ರ "ವಾರಿ" ಎಂಬುದರ ಅರ್ಥ ತಿಳಿಸಿದಂತಾಗುತ್ತದೆ. ಅದೇ ಆ ಪದದ ನಿಜವಾದ ಅರ್ಥ. ಅಂತೆಯೇ ವಸ್ತುವಿಗೆ ಪದಾರ್ಥ (ಪದದ ಅರ್ಥ) ಎಂಬ ಅನ್ವರ್ಥವಾದ ಹೆಸರು ಬಂದಿದೆ. ಆ ಪದಾರ್ಥವನ್ನು ನೋಡಿದಾಗಲೇ ಆ ಪದಗಳೆಲ್ಲದರ ಅರ್ಥ ಮನಸ್ಸಿಗೆ ಬರಲು ಸಾಧ್ಯ. ಇಲ್ಲವಾದರೆ ಆ ಪದಗಳೆಲ್ಲವೂ ಪದಭ್ರಷ್ಟ(ಸ್ಥಾನಭ್ರಷ್ಟ)ವಾಗಿರುತ್ತದೆ. ಅರ್ಥವಿಹೀನವಾಗಿರುತ್ತದೆ.

 ಲೋಕದಲ್ಲಿ ಹೀಗೆ ಇಂದ್ರಿಯಗಳಿಗೆ  ಗೋಚರವಾಗುವ  ವಸ್ತುಗಳನ್ನಾದರೆ, ಅವನ್ನು ಸಾಕ್ಷಾತ್ತಾಗಿ, ಸುಲಭವಾಗಿ ತೋರಿಸಿ, ಆ ಪದಗಳ ಅರ್ಥವನ್ನು ಮನಸ್ಸಿಗೆ ಬರುವಂತೆ ಮಾಡಬಹುದು. ಆದರೆ ಇಂದ್ರಿಯಗಳಿಗೆ ನಿಲುಕದ ಜೀವ, ಆತ್ಮ, ಧರ್ಮ, ಕರ್ಮ, ಬ್ರಹ್ಮ, ಇತ್ಯಾದಿ ಪದಗಳ ಅರ್ಥವನ್ನು ಹೇಗೆ ತಾನೇ ಸಾಮಾನ್ಯರು ತಿಳಿಸಿಯಾರು? ಅವನ್ನು ತಾನು ಕಂಡು, ಅನುಭವಿಸಿ, ಮತ್ತೊಬ್ಬರಿಗೆ ತೋರಿಸಿಕೊಡಬಲ್ಲ ಧೀರನು ತಾನೇ ಅದರ ಅರ್ಥವನ್ನು ಮನಸ್ಸಿಗೆ ಬರುವಂತೆ ಮಾಡಲು ಸಾಧ್ಯ. ಇದನ್ನು ಇಂದಿನ ಅಧ್ಯಾಪಕರು, ಬೋಧಕರು, ಉಪನ್ಯಾಸಕರು ಎಲ್ಲರೂ ಮನಗಾಣಬೇಕು.

ಈ ರೀತಿ ಪದ ಮತ್ತು ಅರ್ಥಗಳ ನಿಜವಾದ  ಪರಿಚಯವನ್ನೂ, ವಾಗರ್ಥಗಳಂತೆ ಸೇರಿಕೊಂಡಿರುವ  ಆ ಜಗಜ್ಜನನೀಕರರ ಪರಿಚಯವನ್ನು ಮಾಡಿಸಿಕೊಟ್ಟ ಆ ತಾಯಿತಂದೆಗಳಿಗೆ  ನಮೋ ನಮಃ.

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ : 01 ಸಂಪುಟ: 06  ನವೆಂಬರ್ ೧೯೮೩ ತಿಂಗಳಲ್ಲಿ ಪ್ರಕಟವಾಗಿದೆ.

Saturday, February 20, 2021

ಕವಿ-ಕಾವ್ಯ ಪೀಠಿಕೆ (Kavi-Kavya Pīthike)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)




ಮಾನವ ಸಮಾಜಜೀವಿ. ಸಮಾನ ಮನೋಧರ್ಮದಿಂದ ಕೂಡಿದ ಜನರ ಸಮೂಹವೇ ಸಮಾಜ. ಮಾನವನ ಮನೋಭಾವನೆಗಳನ್ನು ವಾಹಕ ಮಾಡುವ ವಾಹನವೇ ಮಾತು. ಮಾತೇ ಸಮಾಜದಲ್ಲಿರುವ ಜನರನ್ನು ಸಂಪರ್ಕದಲ್ಲಿರಿಸಿರುವ ಕೊಂಡಿ. ಮಾತು ಸಮಾಜಕ್ಕೆ ಜೀವಾತು. ಅದರಿಂದಲೇ ಎಲ್ಲಾ ವ್ಯವಹಾರಗಳೂ ನಡೆಯುತ್ತಿರುವುದು. ಪ್ರಾಯಃ ಮಾತೆಂಬ ಜ್ಯೋತಿಯು ಬೆಳಗಿಲ್ಲದಿದ್ದಿದ್ದರೆ ಜಗತ್ತು ಅಂಧಕಾರದಲ್ಲಿ ಮುಳುಗಿರುತ್ತಿತ್ತೇನೋ? "ಇದಮಂಧತಮಃ ಕೃತ್ಸ್ನಂ ಜಾಯೇತ ಭುವನತ್ರಯಂ ತ್ವತ್ಪ್ರಸಾದಾತ್ ಧೃತೇ ನಿತ್ಯಂ ತಾಂ ವಂದೇ ವಾಗಧೀಶ್ವರೀಮ್||" ಎಂಬ ಮಾತು ಇದನ್ನೇ ಸಾರುತ್ತದೆ. ಮಾತಿಗೆ ಸಿಂಗಾರವನ್ನು ಮಾಡಿ ಬಳಸಿದರೆ ಅದೇ ಸಾಹಿತ್ಯವಾಗುತ್ತದೆ. ಸಹಿತಸ್ಯ ಭಾವಃ ಸಾಹಿತ್ಯಮ್. ಸಹಿತವೆಂದರೆ ಹಿತದಿಂದ ಕೂಡಿರುವುದು. ಹಿತವಾವುದು? ಎಂದರೆ ಮಾನವನಿಗೆ ಯಾವುದು ನಿತ್ಯನಿರಂತರವಾಗಿ ಇಂದ್ರಿಯಗಳಿಗೆ, ಮನಸ್ಸಿಗೆ ಮತ್ತು ಆತ್ಮನಿಗೆ ಪ್ರೀತಿಯನ್ನುಂಟುಮಾಡುತ್ತಾ ಹೊರಜೀವನಕ್ಕೂ ಮತ್ತು ಒಳಬದುಕಿಗೂ ಒಳಿತನ್ನು ಮಾಡುವುದೋ ಅದೇ ಹಿತ. ಆ ರೀತಿಯ ಹಿತವಾದ ಆತ್ಮಧರ್ಮದಿಂದ ಕೂಡಿರುವುದೇ ಸಾಹಿತ್ಯ. ಸಾಹಿತ್ಯವು ಎರಡು ಬಗೆಯಾದದ್ದು. ವೈದಿಕಸಾಹಿತ್ಯ ಮತ್ತು ಲೌಕಿಕಸಾಹಿತ್ಯ. ವೈದಿಕಸಾಹಿತ್ಯವೆಂದರೆ ವೇದೋಪನಿಷತ್ತುಗಳು. ಅಂತಹ ವೇದೋಪನಿಷತ್ತುಗಳ ಧರ್ಮಗಳನ್ನು ಸಾಕ್ಷಾತ್ಕರಿಸಿಕೊಂಡವರೇ ಋಷಿಗಳು – 'ಸಾಕ್ಷಾತ್ಕೃತಧರ್ಮಾಣೋ ಋಷಯೋ ಬಭೂವುಃ' ಋಷಿಗಳು ತಪಸ್ಯೆಯಲ್ಲಿದ್ದಾಗ, ಸಮಾಧಿಸ್ಥಿತಿಯಲ್ಲಿದ್ದಾಗ ಅವರ ಒಳಗಿವಿಗೆ ಕೇಳಿದ ನಾದದ ವಿಸ್ತಾರವೇ ಆಗಿವೆ ವೇದೋಪನಿಷತ್ತುಗಳು. ಆದ್ದರಿಂದಲೇ ಇವುಗಳಿಗೆ 'ಶ್ರುತಿ'ಗಳೆಂಬ ಅನ್ವರ್ಥನಾಮ. ಇವುಗಳನ್ನು ಯಾರೂ ರಚಿಸಿರುವುದಿಲ್ಲವಾದ ಕಾರಣ ಇವುಗಳು ಅಪೌರುಷೇಯಗಳು. ಇವುಗಳಲ್ಲಿ ಪ್ರತಿಪಾದಿಸಿರುವ ವಿಷಯಗಳ ಅನುಷ್ಠಾನದಿಂದ ಮಾನವನಿಗೆ ಶ್ರೇಯಃಪ್ರಾಪ್ತಿ. ವೇದಧರ್ಮಗಳನ್ನು ಸಾಕ್ಷಾತ್ಕರಿಸಿಕೊಂಡ ಅಂತಹ ಋಷಿಗಳೇ ಲೌಕಿಕಕ್ಷೇತ್ರಕ್ಕೆ ಇಳಿದುಬಂದು, ಅವುಗಳನ್ನು ವಿಸ್ತರಿಸಿ ಲೋಕಭಾಷೆಯಲ್ಲಿ, ಸತ್ಯದ ಮುಡಿಕುಸುಮ ಬಾಡದಂತೆ, ಲೋಕಕ್ಕೆಲ್ಲಾ ಹಿತವನ್ನುಂಟುಮಾಡುವ ದೃಷ್ಟಿಯಿಂದ, ಲೋಕವ್ಯವಹಾರಕ್ಕೆ ವಿರುದ್ಧವಲ್ಲದಂತೆ, ರಚಿಸಿರುವ ಸಾಹಿತ್ಯವೇ ಲೌಕಿಕಸಾಹಿತ್ಯ. ಇದನ್ನೇ 'ಕಾವ್ಯ'ವೆಂದು ಕರೆಯುತ್ತಾರೆ. 'ನಾನೃಷಿಃ ಕುರುತೇ ಕಾವ್ಯಮ್' – 'ಋಷಿಯಲ್ಲದವನು ಕಾವ್ಯವನ್ನು ರಚಿಸಲಾರ' ಎಂಬ ಮಾತು ಇದನ್ನು ದೃಢಪಡಿಸುತ್ತದೆ.ಇದನ್ನು ತಿಳಿಯಪಡಿಸಲು ಬೇಕಾಗುವ ಸಾಧನವೇ ಶಬ್ದ ಮತ್ತು ಅರ್ಥ. ಆದ್ದರಿಂದಲೇ 'ಶಬ್ದಾರ್ಥೌ ಸಹಿತಂ ಕಾವ್ಯಮ್' 'ಶಬ್ದ ಮತ್ತು ಅರ್ಥಗಳಿಂದ ಕೂಡಿರುವುದೇ ಕಾವ್ಯ'ವೆನಿಸುತ್ತದೆ. ಇದನ್ನು ರಚಿಸಿದವನನ್ನೇ 'ಕವಿ' ಎಂದು ಕರೆಯುತ್ತಾರೆ. ಇಂದು 'ಕವಿ' ಪದದ ಬಳಕೆ- 'ಹಾಡು ಬರೆಯುವವನು' ಕಥೆ-ಕಾದಂಬರಿಗಳನ್ನು ಬರೆಯುವವನು, ಶ್ವಾಸ ಹೋದರೂ ತ್ರಾಸವಿಲ್ಲದೆ ಪ್ರಾಸಬದ್ಧವಾಗಿ ಪದ್ಯರಚನೆ ಮಾಡುವವನು ಎಂಬರ್ಥದಲ್ಲಿ ಬಳಕೆಯಲ್ಲಿದೆ. ಕೆಲವು ಉದಾಹರಣೆಗಳನ್ನು ಗಮನಿಸೋಣ ಎಲವೆಲವೊ ವಿದ್ಯಾರ್ಥಿ

ಮುಷ್ಕರ ಹೂಡುವುದು ಎಷ್ಟು ಸರ್ತಿ|

ಹೊಡೆ ಹೋಟೆಲ್ಗೆ ಕಲ್ಲು

ಏರಿಸುವರು ತಿಂಡಿ ಬಿಲ್ಲು||

ಹೂವು ಮಲ್ಲೇ ಕಾಕಡ

ನೀನು ತುಂಬಾ ಪಾಕಡ|

ಆಡಬೇಡ ನಾಟಕ

ನಮ್ಮದೀ ಕರ್ನಾಟಕ||


ಇವೇ ಮೊದಲಾದ ಪದ್ಯಗಳನ್ನು ರಚಿಸುವುದು ಇಂದಿನ ವಾಡಿಕೆಯಾಗಿದೆ. ಇಂದು ಕವಿತ್ವವು ಕೀರ್ತಿಗಾಗಿ, ಪ್ರಶಸ್ತಿಗಾಗಿ, ಜೀವಿಕೆಗಾಗಿ ಅರ್ಥಸಂಪಾದನೆಯನ್ನು ಮಾಡುವ ಒಂದು ಸಾಧನವಾಗಷ್ಟೇ ಇದೆ. ಇದು ಭೌತಿಕ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿರುವುದು ಸರ್ವವಿದಿತ. ಕವಿ ಪದವು 'ವರ್ಣಿಸು' ಎಂಬ ಅರ್ಥವುಳ್ಳ ಕವೃ-ವರ್ಣನೆ ಎಂಬ ಧಾತುವಿನಿಂದ ನಿಷ್ಪನ್ನವಾಗಿದೆ. ವಸ್ತುವೊಂದರ ಮೇಲೆ ಒಂದು ಆವರಣ 'ಕವಚ' ಇದೆ. ಅದನ್ನು ತೆಗೆದು ಅಥವಾ ವಿವರಣೆ ಮಾಡಿ ಜನರ ದೃಷ್ಟಿಗೆ ಬರುವಂತೆ ಮಾಡುತ್ತಾನಾಗಿ ಅವನನ್ನು 'ಕವಿ' ಎಂದು ಕರೆಯುತ್ತಾರೆ. ಕವಿ ಪದಕ್ಕೆ ನೀರುಹಕ್ಕಿ, ಜ್ಞಾನಿ, ಋಷಿ, ಬ್ರಹ್ಮಾ, ಪರಮಾತ್ಮಾ ಎಂಬ ಅರ್ಥಗಳಿವೆ. ಕವಿ ಮತ್ತು ಈ ಅರ್ಥಗಳಿಗಿರುವ ಸಾಮ್ಯವನ್ನು ಗಮನಿಸೋಣ.


ಕವಿ ಮತ್ತು ನೀರುಹಕ್ಕಿ

ಮೊದಲನೆಯದಾಗಿ ನೀರುಹಕ್ಕಿಯ ವ್ಯವಹಾರವನ್ನು ಗಮನಿಸೋಣ. ತಾನು ನೆಲೆ ನಿಂತಿರುವ ಅಥವಾ ಆಶ್ರಯಿಸಿರುವ ವೃಕ್ಷದಿಂದ, ಪ್ರತಿದಿನವೂ ಆಹಾರಕ್ಕಾಗಿ ಹಾರುತ್ತಾ ಅನೇಕ ವೃಕ್ಷಗಳಲ್ಲಿ ಆಶ್ರಯ ಪಡೆದು ಸುಧಾರಿಸಿಕೊಳ್ಳುತ್ತಾ ಮುಂದು ಮುಂದಕ್ಕೆ ಹೋಗುತ್ತಿದ್ದರೂ ಸಾಯಂಕಾಲದ ವೇಳೆಗೆ ತನ್ನ ಮೂಲನೆಲೆಗೆ ಬಂದು ನೆಲೆಸುತ್ತದೆ. ಹಾಗೆಯೇ ಕವಿಯೂ ಕೂಡ ಪರಮಾತ್ಮನಲ್ಲಿ ಬೆರೆತು ಸುಖವನ್ನನುಭವಿಸುತ್ತಾ ತನ್ನ ಹೃದಯಗುಹೆಯೆಂಬ ನೆಮ್ಮದಿಯ ತಾಣದಲ್ಲಿ ಪ್ರತಿಷ್ಠಿತನಾಗಿರುತ್ತಾ, ಬಹಿರ್ಮುಖವಾದ ಕ್ರಿಯೆಗಳೆಂಬ ಶೃಂಗಾರಾದಿ ರಸಗಳಲ್ಲಿ ವಾಚಕರನ್ನು ನಡೆಸುತ್ತಾ ಕಡೆಯಲ್ಲಿ ಶಾಂತರಸದಲ್ಲಿ ಮನಸ್ಸು ನೆಲೆಗೊಳ್ಳುವಂತೆ, ತಾನು ಯಾವುದನ್ನು ಅನುಭವಿಸುತ್ತಿರುವನೋ ಅದೇ ಸುಖವನ್ನೇ ತನ್ನ ವಾಚಕರೂ ಅನುಭವಿಸುವಂತೆ ಮಾಡುತ್ತಾನೆ.


ಕವಿ ಮತ್ತು ಜ್ಞಾನಿ

ಪಾರ್ಥಸಾರಥಿಯು ಅರ್ಜುನನಿಗೆ ಭಗವದ್ಗೀತೆಯಲ್ಲಿ ಉಪದೇಶಿಸುತ್ತಾ 'ಯಾವುದನ್ನು ತಿಳಿದರೆ ಮಿಕ್ಕೆಲ್ಲದರ ತಿಳಿವಳಿಕೆಯುಂಟಾಗುತ್ತದೆಯೋ ಅದೇ ಜ್ಞಾನ'- 'ಯತ್ ಜ್ಞಾತ್ವಾ ನೈವ ಭೂಯೋಽನ್ಯತ್ ಜ್ಞಾತವ್ಯಮವಶಿಷ್ಯತೇ|' ಎಂದು ಹೇಳುತ್ತಾನೆ. ಆ ರೀತಿಯಾದ ಪರತತ್ತ್ವದ ಅನುಭವಪೂರ್ವಕವಾದ ತಿಳಿವಳಿಕೆಯೇ ಜ್ಞಾನ. ಅದನ್ನು ಹೊಂದಿರುವವನೇ ಜ್ಞಾನಿ. ತಾನು ಯಾವುದನ್ನು ಅನುಭವಿಸುತ್ತಿದ್ದಾನೋ ಅದನ್ನೇ ಜ್ಞಾನಕ್ಕಾಗಿ ತನ್ನನ್ನರಸಿ ಬಂದವರಿಗೆ ಅನುಭವಪೂರ್ವಕವಾಗಿ ತಿಳಿಸಿಕೊಡುವವನಾಗಿದ್ದಾನೆ ಜ್ಞಾನಿ. ಹಾಗೆಯೇ ಕವಿಯೂ ಕೂಡ ತಾನು ಅನುಭವಿಸಿದ ಒಳಸುಖವನ್ನೇ ತನ್ನ ಕಾವ್ಯದಲ್ಲಿ ತನ್ನದೇ ಆದ ಶೈಲಿಯಲ್ಲಿ ಹರಿಸಿ ಓದುಗರನ್ನು ಒಳಸುಖದ ಅನುಭವದತ್ತ ಒಯ್ಯುವವನಾಗಿದ್ದಾನೆ.


ಕವಿ ಮತ್ತು ಋಷಿ

ಋಷ-ಜ್ಞಾನೇ ಎಂಬ ಧಾತುವಿನಿಂದ ನಿಷ್ಪನ್ನವಾದ ಋಷಿಪದವು ಫಲವನ್ನೂ ಮೂಲವನ್ನೂ ಏಕಕಾಲದಲ್ಲಿ ನೋಡುತ್ತಿರುವ ಋಷಿಗಳನ್ನು ಸೂಚಿಸುತ್ತದೆ. ಮೂಲದಲ್ಲಿ ಬೆಳಗುತ್ತಿರುವ ಯಾವ ಜ್ಯೋತಿಯುಂಟೋ, ಆ ಜ್ಯೋತಿಯ ಕಡೆಯೂ ಒಂದು ಕಣ್ಣಿಟ್ಟುಕೊಂಡು ಅಥವಾ ಒಂದು ಕೈಯ್ಯಲ್ಲಿ ಅದನ್ನು ಗಟ್ಟಿಯಾಗಿ ಅವಲಂಬಿಸಿಕೊಂಡು ಆ ಜ್ಯೋತಿಯ ವಿಕಾಸವೇ ಆದ ಈ ಹೊರಪ್ರಪಂಚವನ್ನೂ ಆಸ್ವಾದಿಸುತ್ತಾ, ಅದಕ್ಕೆ ಅಂಟಿಕೊಳ್ಳದೇ 'ಪದ್ಮಪತ್ರಮಿವಾಂಭಸಾ'(ತಾವರೆ ಎಲೆಯ ಮೇಲೆ ನೀರು ಅದಕ್ಕೆ ಅಂಟದೇ ಇರುವಂತೆ) ಎಂಬಂತೆ ಇರುತ್ತಾ, ಏಕಕಾಲದಲ್ಲಿಯೇ ಎರಡನ್ನೂ ಆಸ್ವಾದಿಸುತ್ತಾ, ಮತ್ತೆ ಮೂಲದಲ್ಲಿಯೇ ನೆಲೆನಿಲ್ಲುತ್ತಾನೆ ಋಷಿ. ಹಾಗೆಯೇ ಕವಿಯೂ ಕೂಡ ಒಳಗೆ ಬೆಳಗುತ್ತಿರುವ ಆತ್ಮವಸ್ತುವನ್ನು ಅನುಭವಿಸುತ್ತಾ, ತನ್ನ ಕಾವ್ಯದಲ್ಲಿ ಆ ಆತ್ಮವಸ್ತುವಿನಿಂದಲೇ ವಿಕಾಸವಾದ ಪ್ರಪಂಚದ ವರ್ಣನೆಯನ್ನು ಮಾಡುತ್ತಾ ಮತ್ತೆ ಆ ಆತ್ಮವಸ್ತುವಿನಲ್ಲಿಯೇ ವಾಚಕರನ್ನು ನೆಲೆನಿಲ್ಲಿಸುತ್ತಾನೆ.


ಸೂಚನೆ : 20/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  


ಧ್ಯಾನ (Dhyana)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)

ಧಾರಣೆ ಮಾಡಿದ ಧ್ಯೇಯವಸ್ತುವಿನ ಸ್ಮೃತಿಯು ನಿರಂತರವಾಗಿ ಹೊಮ್ಮುತ್ತಿರುವ ಸ್ಥಿತಿಯನ್ನು ಧ್ಯಾನವೆನ್ನುತ್ತಾರೆ. ಈ ಸ್ಥಿತಿಯನ್ನು ಹೊಂದಲು ಮಾಡುವ ಪ್ರಯತ್ನವೂ ಸಹ ಧ್ಯಾನವೆಂದೇ ಕರೆಯಲ್ಪಡುತ್ತದೆ. ಧ್ಯೇಯವಸ್ತುವನ್ನು ಧರಿಸಿದ ನಂತರ ಮನಸ್ಸು ಸತತವಾಗಿ ಅದೇ ವಸ್ತುವಿನಲ್ಲಿ ನಿಲ್ಲುವುದಿಲ್ಲ. ಬೇರೆ ಬೇರೆ ಚಿಂತನೆಗಳು ಬರುತ್ತಿರುತ್ತವೆ. ಆದರೂ ಸಹ ಮನಸ್ಸನ್ನು ಪುನಃ ಪುನಃ ಧ್ಯೇಯವಸ್ತುವಿನಲ್ಲೇ ತಂದು ನಿಲ್ಲಿಸುವ ಪ್ರಯತ್ನವೇ ಸಾಧನ ರೂಪವಾದ ಧ್ಯಾನ.

ಶ್ರೀರಂಗಮಹಾಗುರುಗಳ ಶಿಷ್ಯರು ಇದಕ್ಕೊಂದು ನಿದರ್ಶನವನ್ನು ಕೊಟ್ಟಿದ್ದಾರೆ. ನಾವು ವಾಹನಚಾಲನೆ ಮಾಡುತ್ತಿರಬೇಕಾದರೆ, ಹಿಂದಿನಿಂದ, ಪಕ್ಕದಿಂದ, ಎದುರಿನಿಂದ, ಬೇರೆ ವಾಹನಗಳು ಬರುತ್ತಿರುತ್ತವೆ. ಹೀಗಿದ್ದರೂ ಸಹ ನಾವು ತಲುಪಬೇಕಾದ ಸ್ಥಾನವನ್ನು ಲಕ್ಷ್ಯವಾಗಿಟ್ಟುಕೊಂಡು ಟ್ರಾಫ಼ಿಕ್(ಜನ/ವಾಹನಸಂಚಾರ)ಅನ್ನು ನಿಭಾಯಿಸಿಕೊಂಡು, ದಾರಿ ಮಾಡಿಕೊಂಡು ಗಮ್ಯಸ್ಥಾನವನ್ನು ತಲಪುತ್ತೇವೆ. ಹೀಗೆಯೇ ಧ್ಯಾನಕ್ಕೆಂದು ಕುಳಿತಾಗ ಅನೇಕ ಆಲೋಚನೆಗಳು ಮುತ್ತುತ್ತಿರುತ್ತವೆ. ಆದರೂ ಪ್ರಯತ್ನಪಟ್ಟು ಸತತವಾಗಿ ಧ್ಯೇಯವಸ್ತುವನ್ನೇ ಲಕ್ಷ್ಯವಾಗಿಟ್ಟುಕೊಂಡು ಟ್ರಾಫ಼ಿಕ್ ರೂಪವಾದ ಇತರ ಆಲೋಚನೆಗಳ ಸುಳಿಗೆ ಒಳಗಾಗದೇ, ಪುನಃ ಪುನಃ ಧ್ಯೇಯವಸ್ತುವಿನ ಮೇಲೆಯೇ ಮನಸ್ಸನ್ನು ನಿಲ್ಲಿಸುತ್ತಿದ್ದರೆ, ಒಂದಲ್ಲ ಒಂದು ದಿನ, ಧ್ಯಾನದ ಸಂಪೂರ್ಣ ಸ್ಥಿತಿಯು ಸಿದ್ಧಿಸುತ್ತದೆ.

ಯೋಗಸೂತ್ರವು ಶ್ರದ್ಧೆಯಿಂದೊಡಗೂಡಿದ, ದೀರ್ಘಕಾಲದ, ನಿರಂತರ ಪ್ರಯತ್ನದಿಂದ ದೃಢಭೂಮಿಕೆ ಉಂಟಾಗುತ್ತದೆಯೆಂದು ಹೇಳುತ್ತದೆ.

ಆರ್ಷಗ್ರಂಥಗಳು ಸೃಷ್ಟಿಮೂಲವಾದ ಪರಬ್ರಹ್ಮವಸ್ತುವು ಸತ್ಯ, ಜ್ಞಾನ, ಅನಂತ, ನಿರ್ಗುಣ, ನಿರಾಕಾರವಾಗಿರುತ್ತದೆ; ಆದರೆ ಸೃಷ್ಟಿವಿಸ್ತಾರಕ್ಕಾಗಿ ಅನೇಕ ನಾಮರೂಪಗಳನ್ನು ತಾಳುತ್ತದೆ ಎಂದು ವಿವರಿಸುತ್ತವೆ. ಈ ನೇರದಲ್ಲಿ ಸೃಷ್ಟಿಮೂಲತತ್ತ್ವದ ಧ್ಯಾನವನ್ನು ನಿರ್ಗುಣ ಧ್ಯಾನವೆಂದೂ ಮತ್ತು ಸೃಷ್ಟಿವಿಸ್ತಾರದಲ್ಲಿ ತಾಳುವ ರೂಪಗಳ ಧ್ಯಾನವನ್ನು ಸಗುಣ ಧ್ಯಾನವೆಂದೂ ಎರಡಾಗಿ ವಿಭಾಗಿಸುತ್ತಾರೆ.

ಅನೇಕ ಯೋಗ ಮಾರ್ಗಗಳಿಗಷ್ಟೇ ಅಲ್ಲದೇ ಜೈನ, ಬೌದ್ಧ ಮಾರ್ಗಗಳಲ್ಲೂ ಧ್ಯಾನವು ಅಂಗವಾಗಿರುತ್ತದೆ ಮತ್ತು ಅನೇಕ ಉಪಾಸನೆಗಳು ಧ್ಯಾನಮೂಲವಾಗಿರುತ್ತವೆ. ಪೂಜೆ ಮಾಡಬೇಕಾದರೆ "ಧ್ಯಾಯಾಮಿ" ಎಂದು ಧ್ಯಾನದಿಂದಲೇ ಪೂಜೆ ಆರಂಭವಾಗುವುದು. ಜಪಯೋಗದಲ್ಲಿ ಧ್ಯಾನಶ್ಲೋಕದಿಂದ ದೇವತೆಯನ್ನು ಧ್ಯಾನಿಸಿದ ನಂತರವೇ ಜಪದಲ್ಲಿ ತೊಡಗುವುದು.

ಭಾರತೀಯ ಸಂಸ್ಕೃತಿಯ ಅಧ್ಯಯನದಲ್ಲಿ ಕ್ಲಿಷ್ಟತೆಗಳು ಎದುರಾಗುತ್ತವೆ. ಉದಾಹರಣೆಗೆ, ನರಸಿಂಹ, ಗಣಪತಿ ಮುಂತಾದ ಮೂರ್ತಿಗಳಲ್ಲಿ ಕಂಡುಬರುವ ಮನುಷ್ಯನ ಶರೀರ, ಪ್ರಾಣಿಯ ತಲೆ ಮುಂತಾದ ವಿಲಕ್ಷಣತೆಯ ಬಗ್ಗೆ ಅನೇಕ ಅಸಂಬದ್ಧ ವ್ಯಾಖ್ಯಾನಗಳಿವೆ. ಆದರೆ ಶ್ರೀರಂಗಮಹಾಗುರುಗಳು ದೇವತಾಮೂರ್ತಿಗಳಲ್ಲಿ ಕಂಡುಬರುವ ವಿಲಕ್ಷಣ ರೂಪಗಳು ಯೋಗಿಗಳಿಗೆ ಅಂತರಂಗದಲ್ಲಿ ಗೋಚರವಾಗುವ ಬೆಳಕಿನ ರೂಪಗಳು ಎಂದು ವಿವರಿಸಿ ಕ್ಲಿಷ್ಟತೆಯನ್ನು ನಿವಾರಿಸಿದ್ದಾರೆ. ಹೀಗಾಗಿ ಭಾರತೀಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲಿಕ್ಕೂ, ಸಂಶೋಧನೆ ಮಾಡುವುದಕ್ಕೂ ಧ್ಯಾನವು ಕೀಲಿಕೈಯಾಗಿದೆ.

ಸೂಚನೆ : 20/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.    


ಭಾರತದಲ್ಲಿ ಹುಟ್ಟಿದ ನಾವೇಕೆ ಧನ್ಯರು ? (Bhratadalli Huttida Naveke Dhanyaru?)

ವಾದಿರಾಜ ಪ್ರಸನ್ನ.

(ಪ್ರತಿಕ್ರಿಯಿಸಿರಿ lekhana@ayvm.in) 


ಪ್ರಪಂಚದಾದ್ಯಂತ ಇರುವುದು ಒಂದೇ ನೆಲ, ಗಾಳಿ, ಆಕಾಶ, ನೀರು ಮತ್ತು ಬೆಂಕಿ. ಇದರಲ್ಲೇನಿದೆ ಭಾರತದೇಶದ ವಿಶೇಷತೆ ?ವಿಶ್ವದಲ್ಲೆಲ್ಲಾ ವಾಸಿಸುವ ಜನರು ಸುಖ- ದುಃಖಗಳಿಂದ ಕೂಡಿದ ಜೀವನವನ್ನು ನಡೆಸುತ್ತಿದ್ದಾರೆ.ಅತ್ಯಾಧುನಿಕ ಭೋಗವಸ್ತುಗಳು, ಅದನ್ನು ನಿರ್ಮಿಸುವ ಯಂತ್ರಗಳು ಅದನ್ನು ಉಪಯೋಗಿಸಿಕೊಂಡಸುಖೀ ಮನುಷ್ಯರಿರುವುದು ಪ್ರಗತಿಪರ ರಾಷ್ಟ್ರಗಳಲ್ಲೇ. ಹಾಗಾದರೆ ಸನಾತನ ಮಹರ್ಷಿಗಳು ಭಾರತದಲ್ಲಿಹುಟ್ಟಿದವರು ಧನ್ಯರು ಎಂದದ್ದು ಆ ಕಾಲಕ್ಕೆ ಮಾತ್ರ ಸೀಮಿತವೇ ಅಥವಾ ಇಂದಿಗೂ ಅದಕ್ಕೆ ವಿಷಯವುಂಟೇ ?ಅಥವಾ ಒಣ ಅಭಿಮಾನದ ಮಾತೆ? ಎಂಬ ವಿವೇಚನೆ ಅಗತ್ಯವಾಗಿದೆ.


ಹಾಗಾದರೆ ಈ ದೇಶದ ವಿಶೇಷವೇನು? ಮಹರ್ಷಿಗಳು ಇಲ್ಲಿ ಹುಟ್ಟಿದವರು ಧನ್ಯರು ಎಂದೆನ್ನಲುಕಾರಣವೇನು ಎಂಬುದನ್ನು ಆಲೋಚಿಸಬೇಕಾಗಿದೆ. ಬುದ್ಧಿಯ ಮುಂದೆ ತೋರುವ ಭೌತಿಕ ವಿಷಯಗಳಲ್ಲಿವಿಶ್ವದ ಇತರ ದೇಶಗಳು ಭಾರತಕ್ಕಿಂತ ಹೆಚ್ಚು ಪ್ರಗತಿ ಸಾಧಿಸಿರುವುದು ನಿಜವೇ. ಆದರೆ ಇಲ್ಲಿನ ನಮ್ಮಮಹರ್ಷಿಗಳು ಬುದ್ಧಿಯ ಹಿಂಬದಿಯಲ್ಲಿ ಬುದ್ಧಿಗೂ ಚೈತನ್ಯವನ್ನು ಎರೆದು ಬೆಳಗುತ್ತಿರುವ ಆನಂದದಸ್ರೋತಸ್ಸನ್ನು ಕಂಡುಕೊಂಡು ಜೀವಲೋಕವೆಲ್ಲವೂ ಅದರೆಡೆಗೆ ಸಾಗಿ ಇನ್ನಿಲ್ಲದ ಆನಂದವನ್ನು ಅನುಭವಿಸಿ ಜನ್ಮ ಸಾರ್ಥಕ ಪಡಿಸಿಕೊಳ್ಳುವ ಜೀವನ ವಿಧಾನವನ್ನು ರೂಪಿಸಿಕೊಟ್ಟರು. ಅದಕ್ಕಾಗಿಸಹಸ್ರಾರು ವರ್ಷಗಳ ತಪಸ್ಸನ್ನು ಆಚರಿಸಿದ ದೇಶವಿದು. ವಿಶ್ವದ ಎಲ್ಲಾ ಮಾನವರಿಗೂ ಜೀವನದ ನೈಜಧ್ಯೇಯವಾದ ಪರಮ ಸುಖದೆಡೆಗೆ ಬೆರಳು ಮಾಡಿ ದಿಗ್ದರ್ಶನ ಮಾಡಿದ ದೇಶ ನಮ್ಮ ಭಾರತ. ಭೌತಿಕಸುಖ ಸವಲತ್ತುಗಳನ್ನು ಕಂಡುಹಿಡಿದು ಅದರ ಉಪಯೋಗದಿಂದ ಜೀವನವನ್ನು ಸುಖಮಯವಾಗಿಸುವುದೂಒಳ್ಳೆಯ ಕೆಲಸವೇ. ಆದರೆ ಅಂತಹ ಸುಖಗಳಿಗೆ ಒಂದು ಮಿತಿ ಉಂಟು. ಜೊತೆಗೇ ಅವುದುಃಖ ಮಿಶ್ರಿತವಾಗಿಯೇ ಬರುತ್ತವೆ. ಆದರೆ ಭಾರತರು ಕಂಡ ಸುಖ ನಿತ್ಯವಾದದ್ದು. ಜಗತ್ತಿನ ಯಾವ ರಾಷ್ಟ್ರವೂ ಇಂತಹ ನೆಮ್ಮದಿಯ ತಾಣವನ್ನು ಅನ್ವೇಷಿಸಿರುವುದು ಕಂಡುಬರುವುದಿಲ್ಲ. ಮಾತ್ರವಲ್ಲ,ಲೋಕವೆಲ್ಲವೂ ಆ ಎಡೆಗೆ ಸಾಗಬಲ್ಲಂತಹ ಜೀವನ ವಿಧಾನವಂತೂ ಭಾರತದ್ದೇ ವಿಶೇಷ. ಬ್ರಹ್ಮಾನಂದವಲ್ಲಿಯಲ್ಲಿ ಸುಖದ ಮಾನದಂಡ ಹೀಗಿದೆ- ಆಶಾಪೂರ್ಣನೂ, ಧೃಢತಮನೂ, ಬಲಿಷ್ಠನೂ ಆದಒಬ್ಬ ಯುವಕ. ಐಶ್ವರ್ಯದಿಂದ ಪೂರ್ಣವಾದ ಸಮಸ್ತ ಭೂಮಂಡಲವೂ ಅವನ ವಶದಲ್ಲಿದೆ ಎಂದುಭಾವಿಸೋಣ. ಆ ಆನಂದವನ್ನು ಮನುಷ್ಯರ ಒಂದು ಆನಂದ; ಈ ನೂರು ಮಾನುಷ ಆನಂದಗಳುಮನುಷ್ಯಗಂಧರ್ವರ ಆನಂದ; ಮನುಷ್ಯ ಗಂಧರ್ವರ ನೂರು ಆನಂದಗಳು ದೇವಗಂಧರ್ವರ ಆನಂದ; ಇದರನೂರು ಪಟ್ಟು -ಚಿರಲೋಕ ಪಿತೃಗಳ ಆನಂದ; ಅವರ ನೂರುಪಟ್ಟು ಆನಂದವು ಆಜಾನಜದೇವತೆಗಳಆನಂದ; ಇವರ ನೂರುಪಾಲು ಕರ್ಮದೇವತೆಗಳದ್ದು; ಅದರ ನೂರ್ಮಡಿ ದೇವತೆಗಳ ಆನಂದ; ಇವರನೂರರಷ್ಟು ಇಂದ್ರನ ಆನಂದ; ಇದರ ನೂರರಷ್ಟು ಬೃಹಸ್ಪತಿಯ ಆನಂದ; ಅದರ ನೂರರಷ್ಟುಪ್ರಜಾಪತಿಯ ಆನಂದ; ಇಂತಹ ನೂರು ಆನಂದಗಳು ಬ್ರಹ್ಮನ ಒಂದು ಆನಂದ ಎಂಬುದಾಗಿದೆ. ಇಂತಹ ಆನಂದವನ್ನು ಅನುಭವಿಸುವ ಯೋಗ್ಯತೆಯುಳ್ಳ ಮಾನವ ದೇಹವನ್ನು ಹೊತ್ತು ಅದರ ಅರಿವಿಲ್ಲದೇಬದುಕುತ್ತಿದ್ದೇವೆ. ಒಂದು ಉತ್ತಮ ಶಾಲೆಯಲ್ಲಿನ ಕಟ್ಟಡ, ಪ್ರಯೋಗಶಾಲೆ, ಪಠ್ಯಕ್ರಮ ಹಾಗೂ ನುರಿತಶಿಕ್ಷಕರಿಂದ ಶಿಕ್ಷಣ ಪಡೆದು, ವಿಧ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗೂ ಮತ್ತು ಯಾವುದೇ ಸವಲತ್ತುಗಳಿಲ್ಲದಸ್ವತಃ ಹಳ್ಳಿಯಲ್ಲಿ ಅಭ್ಯಾಸ ಮಾಡಿದವನಿಗೂ ತಿಳಿವಳಿಕೆಯ ಮಟ್ಟದಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಇಲ್ಲೂಸಹ ನಿಸರ್ಗವೇ ನಿರ್ಮಿಸಿಕೊಟ್ಟಿರುವ ಹಿಮಾಲಯಗಳಂತಹ ಭೂ ಕ್ಷೇತ್ರ, ಗಂಗಾದಿ ಪವಿತ್ರವಾದನದಿಗಳು, ಹೆಜ್ಜೆ ಹೆಜ್ಜೆಗೂ ದೇವಸ್ಥಾನಗಳು, ಪುಣ್ಯಕ್ಷೇತ್ರಗಳು ಇತ್ಯಾದಿ ನಮ್ಮನ್ನು ಉದ್ಧರಿಸಿ ಆ ಆನಂದದೆಡೆಗೆ ಕರೆದೊಯ್ಯಲು ಸಹಾಯಮಾಡುವ ತಾಣಗಳನ್ನು ಗುರುತಿಸಿ, ತನ್ಮೂಲಕ ಜೀವನಧ್ಯೇಯವನ್ನು ನೆನಪಿಸಿ, ಪೀಳಿಗೆ ಪೀಳಿಗೆಗಳವರೆಗೆ ಅಂತಹ ಹಿರಿದಾದ ಜೀವನವನ್ನು ನಡೆಸಿದಜನಸ್ತೋಮವೇ ಆಗಿಹೋಗಿದೆ. ಆದರೆ ಇಂದು ನಮಗೆ ಆ ಸಂಸ್ಕೃತಿಯ ವಿಸ್ಮರಣೆಯಾಗಿದೆ. ಕೇವಲಭೌತಿಕ ಸುಖಗಳ ಹಿಂದೆ ಬಿದ್ದು ಅವೇ ಪರಮಸುಖವೆಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ನಮ್ಮಯುವಕರನೇಕರು ಇಂದ್ರಿಯ ಸಂತೋಷಕ್ಕಾಗಿ ಹಲವಾರು ದುಶ್ಚಟಗಳಿಗೆ ಬಲಿಯಾಗಿದ್ದಾರೆ. ಮತ್ತೊಮ್ಮೆನಾವು ಮಹರ್ಷಿಗಳ ಸುಖದ ಬದುಕಿನ ನೋಟವನ್ನು ನಮ್ಮದಾಗಿಸಿಕೊಳ್ಳಬೇಕಾಗಿದೆ. ಧರ್ಮ,ಅರ್ಥ,ಕಾಮಎಂಬ ತ್ರಿವರ್ಗಗಳನ್ನು ಅವಲಂಬಿಸಿ ಇಂದ್ರಿಯ ಜೀವನವನ್ನು ನಡೆಸಿದಾಗ ನಮ್ಮ ಇಂದ್ರಿಯ ಜೀವನವೂಆನಂದಮಯವಾಗಿ, ಮೋಕ್ಷಸುಖ ಸಹಜವಾಗಿ ಹೊಂದುವಂತಾಗುವ ಅವರ ಆನುಭವಿಕಸತ್ಯವನ್ನು ಅರಿತು ಹೆಜ್ಜೆ ಹಾಕಬೇಕಾಗಿದೆ. ಯೋಗೈಶ್ವರ್ಯ ಸಂಪನ್ನರಾದ ಶ್ರೀರಂಗಮಹಾಗುರುಗಳ ಮಾತಿನಂತೆ-. 'ಭಾ' ಎಂದರೆ ಆನಂದದ ಪರಮಪ್ರಕಾಶ. ಅದರಲ್ಲಿ 'ರತ' ಎಂದರೆ ಪ್ರೀತಿಯುಳ್ಳವರು ಭಾರತರು ಎಂಬ ಸತ್ಯಾರ್ಥ ಇಲ್ಲಿ ಸ್ಮರಣೀಯ. 


ನಾವು ನಿಜವಾದ ಅರ್ಥದಲ್ಲಿ ಭಾರತರಾಗಬೇಕು. ಈಗ ನಾವು "ಧನರತ", "ಪ್ರಸಿದ್ಧಿರತ", "ಇಂದ್ರಿಯರತ"ಹೀಗೆಲ್ಲ ಆಗಿದ್ದೇವೆ. ಅದಲ್ಲದೇ ಭಾರತರಾಗೋಣ.ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಜನ್ಮತಾಳಿ ಧನ್ಯಜೀವಿಗಳಾಗಿದ್ದೇವೆ. ಋಷಿಗಳ ವಂಶಜಾತರಾಗಿ ನಾವುಅವರಂತೆ ಭಾರತರಾಗಿ ಬಾಳುವುದೇ ಅವರಿಗೆ ನಾವು ಸಲ್ಲಿಸುವ ಕೃತಜ್ಞತೆಯಾಗಿದೆ. ಯೋಗ-ಭೋಗಮಯವಾದ ಋಷಿ ದೃಷ್ಟಿ ಈ ಭೂಮಿಯ ಬೆಳಕು.


ಇಲ್ಲಿ ಹುಟ್ಟಿದ ನಾವೇ ಧನ್ಯರು ಎಂಬ ಸತ್ಯಾರ್ಥದೊಂದಿಗೆ ಅವರ ಹೆಜ್ಜೆಯ ಗೆಜ್ಜೆಯಂತೆ ನಡೆದು ಮತ್ತೊಮ್ಮೆಭಾರತದ ಗತವೈಭವವನ್ನು ಸ್ಥಿತ ವೈಭವವಾಗಿಸೋಣ.

ಸೂಚನೆ: 20/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ. 

Thursday, February 18, 2021

ಮಹರ್ಷಿಗಳ ಶಾಪವೂ ಲೋಕಕಲ್ಯಾಣಕರವೇ (Maharsigala Shapavu Lokakalyanakarave)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in).



ಚ್ಯವನಮಹರ್ಷಿಗಳು ತಮ್ಮ ತಪೋಬಲದಿಂದ ದೇವತೆಗಳಿಗೂ ಇಷ್ಟಾರ್ಥವನ್ನು ಈಡೇರಿಸುವಷ್ಟು ಸಮರ್ಥಸಾಧಕ ವೃದ್ಧರು. ಇವರು ಅನೇಕವರ್ಷಗಳು ಒಂದೇ ಕಡೆ ತಪಸ್ಸು ಮಾಡುತ್ತಿರುವುದರಿಂದ ಅವರ ಸುತ್ತಲೂಹುತ್ತವು ಬೆಳೆದಿತ್ತು. ಆಗ ಶರ್ಯಾತಿ ಎಂಬ ರಾಜ  ಒಮ್ಮೆ  ತನ್ನ ಸೇನೆ ಮತ್ತು ಕುಟುಂಬ ಪರಿವಾರ ಸಮೇತ ಬೇಟೆಗೆಂದು ಅದೇ ಸ್ಥಳಕ್ಕೆ ಬಂದಿದ್ದ. ರಾಜನ ಒಬ್ಬಳೇ  ಮಗಳು ಸುಕನ್ಯೆ. ರೂಪಲಾವಣ್ಯವತೀ. ವಯಸ್ಸಿನಲ್ಲಿ ಚಿಕ್ಕವಳು. ಆಟವಾಡುತ್ತಾ ಸುಕನ್ಯೆಯು ಆ ಹುತ್ತದ ಬಳಿ ಬಂದಳು. ಎರಡು ಸಣ್ಣ ದೀಪದಂತೆ ಅತ್ತ ಹುತ್ತದ ಕಿಂಡಿಯಿಂದ ಬೆಳಕು ಹೊರಚೆಲ್ಲುತ್ತಿತ್ತು. ಸುಕೆನ್ಯೆಯು ಅದು ಯಾವುದೋ ದೀಪದ ಹುಳವಿರಬಹುದೆಂದು ಬಾಲ್ಯಸಹಜ ಚೇಷ್ಟೆಯಿಂದ ಒಂದು ಹುಲ್ಲಿನ ಕಡ್ಡಿಯಿಂದ ಹುತ್ತವನ್ನು ಚುಚ್ಚಿದಳು. ಅದು ಒಳಗೆ ತಪಸ್ಸನ್ನು ಮಾಡುತ್ತಿರುವ ಚ್ಯವನರ ಕಣ್ಣನ್ನು ಕುಕ್ಕಿತ್ತು. ಧಾರಾಕಾರವಾಗಿ ರಕ್ತ ಸುರಿಯಿತು. ಪರಿಣಾಮವಾಗಿ ಚ್ಯವನರು ತಮ್ಮ ಎರಡೂ ಕಣ್ಣುಗಳನ್ನು ಕಳೆದುಕೊಂಡರು. ಮಹಾತಪಸ್ವಿಯನ್ನು ಹಿಂಸೆಗೊಳಿಸಿದ ಕಾರಣ ಧರ್ಮಹಾನಿಯಾಯಿತು.  ಧರ್ಮಕ್ಕೆ ಎಲ್ಲೇ ಹಾನಿ ಉಂಟಾದರೂ ಅದರ ಪ್ರತಿಭಟನೆಯಾಗಿ ಒಡನೆಯೇ ಅದು ಶಾಪರೂಪವನ್ನು ತಾಳುತ್ತದೆ. ಎಂದೇ  ಶರ್ಯಾತಿಯ ಸೈನಿಕರ ಮಲಮೂತ್ರ ವಿಸರ್ಜನೆಯು ಆ ಕ್ಷಣದಿಂದಲೇ ನಿಂತುಹೋಯಿತು. ರಾಜರ್ಷಿಯಾದ ಶರ್ಯಾತಿಗೆ ತಪ್ಪಿನ ಅರಿವಾಯಿತು. ಮಗಳು ಅಜ್ಞಾನದಿಂದ ಮಾಡಿದ  ತಪ್ಪಿಗಾಗಿ ಕ್ಷಮೆಯಾಚಿಸಿದ. ಪ್ರಾಯಶ್ಚಿತ್ತವಾಗಿ ಚ್ಯವನರು "ನಿನ್ನ ಮಗಳನ್ನು ನನಗೆ ವಿವಾಹ ಮಾಡಿಕೊಟ್ಟರೆ ನೀನು ಈ ಶಾಪದಿಂದ ಮುಕ್ತನಾಗುವೆ" ಎಂದು ಶಾಪವಿಮೋಚನೆಯ ಉಪಾಯವನ್ನು ತಿಳಿಸಿದರು. ರಾಜನಿಗೆ ಬೇರೆ ಮಾರ್ಗವಿರಲಿಲ್ಲ. ಮಹರ್ಷಿಗಳು ಕೇಳಿದ್ದನ್ನು ಕೊಡದಿದ್ದರೆ ಇನ್ನೂ ಹೆಚ್ಚಿನ ಆಪತ್ತಿಗೆ ಸಿಲುಕಬೇಕಾಗಬಹುದು ಎಂದು ಯೋಚಿಸಿ ಅವರ ಮಾತಿಗೆ ಒಪ್ಪಿ ಮಗಳನ್ನು ವೃದ್ಧ ಚ್ಯವನರಿಗೆ ಧಾರೆಯೆರೆದು ಕೊಟ್ಟ. ಸುಕನ್ಯೆಯೂ ತನ್ನ ತಪ್ಪಿಗೆ ಮಹರ್ಷಿಗಳ ಪತ್ನಿಯಾಗಿ  ಸೇವೆಮಾಡುವುದೇ ನಿಜವಾದ ಪ್ರಾಯಶ್ಚಿತ್ತವೆಂದು ತಿಳಿದು ಅಹರ್ನಿಶಿ ಅವರ ಸೇವೆಮಾಡಿ ಕೃತಾರ್ಥಳಾದಳು.

ಶಿಕ್ಷೆಯು ಪ್ರಾಪ್ತವಯಸ್ಕರಿಗೆ ಮಾತ್ರ. ಚಿಕ್ಕವಳಾದ್ದರಿಂದ ಮಹರ್ಷಿಗಳ ಆಶ್ರಮದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಶಿಕ್ಷಣ ಕೊಡುವುದು ರಾಜನ ಜವಾಬ್ದಾರಿಯಾಗಿತ್ತು. ಹಾಗೆ ಮಾಡದ ಪರಿಣಾಮ ಅಪ್ರಾಪ್ತಳಾದ ಮಗಳ ತಪ್ಪಿಗೆ ರಾಜನಿಗೆ ಶಿಕ್ಷೆಯಾಯಿತು. "ಅವಶ್ಯಮನುಭೋಕ್ತವ್ಯಂ ಕೃತಂ ಕರ್ಮಶುಭಾಶುಭಮ್" ಎಂಬಂತೆ ಮಾಡಿದ ಕರ್ಮವು ಫಲವನ್ನು ಕೊಟ್ಟೇಕೊಡುತ್ತದೆ. ಅದು ಸತ್ಕರ್ಮವಾಗಿದ್ದರೆ ಸತ್ಫಲ ದುಷ್ಕರ್ಮವಾಗಿದ್ದರೆ ದುಷ್ಫಲ.  ಇಲ್ಲಿ ಚ್ಯವನರು ಹೇಳಿದ ಶಾಪವಿಮೋಚನೆಯ ಉಪಾಯವು ವಿಚಿತ್ರವಾದರೂ ಅಲ್ಲೊಂದು ಲೋಕಕಾರುಣ್ಯವಿದೆ. ಚ್ಯವನರು ಸುಕನ್ಯೆಯನ್ನು ವಿವಾಹವಾಗಿ ಮುಂದೆ ದೇವತಾನುಗ್ರಹದಿಂದ ರೂಪ ಯೌವನವನ್ನೂ ಪಡೆದು ಆದರ್ಶದಾಂಪತ್ಯವನ್ನು ಲೋಕಕ್ಕೆ ತೋರಿಸಿ ಪ್ರಾತಃಸ್ಮರಣೀಯರಾದರು. ರಾಮಾಯಣದಲ್ಲಿ ಶ್ರಿರಾಮಸೀತೆಯರ ದಾಂಪತ್ಯದ ಅವಿನಾಭಾವವನ್ನು ಹೇಳುವಾಗ "ಅರುಂಧತೀ ವಸಿಷ್ಠಂ ಚ ಸುಕನ್ಯಾ ಚ್ಯವನಂ ಯಥಾ"  ಅರುಂಧತೀ-ವಶಿಷ್ಠ ಸುಕನ್ಯೆ-ಚ್ಯವನ ಎಂಬಿತ್ಯಾದಿ ಆದರ್ಶದಂಪತಿಗಳ ಸಾಲಿನಲ್ಲಿ ಇವರ ಸಂಕೀರ್ತನೆ ಇಲ್ಲಿ ಗಮನಾರ್ಹ.  ರಾಜ-ಪರಿವಾರ  ಶಾಪದಿಂದ ಮುಕ್ತವಾದುವು.

"ನಿಗ್ರಹಾನುಹಶಕ್ತಿಯುಳ್ಳ ಮಹರ್ಷಿಗಳ ಒಂದೊಂದು ಮಾತೂ ಲೋಕಕಲ್ಯಾಣಕರವೇ" ಎಂಬ ಶ್ರೀರಂಗ ಮಹಾಗುರುಗಳ ಮಾತಿನ ಆಶಯ ಈ ಆದರ್ಶದಾಂಪತ್ಯದಲ್ಲಿ ಚರಿತಾರ್ಥವಾಯಿತು

ಸೂಚನೆ: 18/2/2021 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.

ವಾದದಿಂದ ತಿಳುವಳಿಕೆ ಮೂಡಲಿ (Vadadinda Tiluvalike Mudali)

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್  
(ಪ್ರತಿಕ್ರಿಯಿಸಿರಿ lekhana@ayvm.in)


ಕಂಚಿಯ ಪರಮಾಚಾರ್ಯರು ನಡೆದಾಡುವ ದೈವವೆಂದೇ ಪ್ರಸಿದ್ಧರಾಗಿದ್ದವರು. ಒಮ್ಮೆ ದೊಡ್ಡ ವಿದ್ವಾಂಸರೊಬ್ಬರು, ತಾವು ಬಹುಕಾಲ ಕಷ್ಟಪಟ್ಟು ಬರೆದಿದ್ದ ದ್ವೈತಮತ ಖಂಡನಗ್ರಂಥವನ್ನು ಪರಮಾಚಾರ್ಯರಿಗೆ ತೋರಿಸುತ್ತಾರೆ. ಆಗ ಆಚಾರ್ಯರು, "ಇದರಿಂದ ಮೋಕ್ಷ ಸಿಗುವುದೇನು? ನಿಮ್ಮ ಈ ಗ್ರಂಥವನ್ನು ಖಂಡಿಸಿ ಬೇರೊಬ್ಬರೂ ಬರೆಯಬಹುದು. ಇದರಿಂದಾಗಿ ದ್ವೇಷಾಸೂಯೆಗಳು ಬೆಳೆಯುತ್ತವೆ. ಪರಮಾತ್ಮ ನಿಮಗೆ ಕೊಟ್ಟ ಪಾಂಡಿತ್ಯವನ್ನು ಹೀಗೆ ವ್ಯರ್ಥಗೊಳಿಸುವುದೇ? ಇದೇ ಕಾಲವನ್ನು ನೀವು ಪೂಜಾಧ್ಯಾನಗಳಲ್ಲಿ ಕಳೆದಿದ್ದರೆ ನಿಮ್ಮ ಜೀವನ ಸಾರ್ಥಕವಾಗುತ್ತಿತ್ತು" ಎನ್ನುತ್ತಾರೆ. 

ಪರಮಾಚಾರ್ಯರ ಮೇಲಿನ ಮಾತು ಸರ್ವಕಾಲಕ್ಕೂ ಪ್ರಸ್ತುತವೇ. ಪರಮಾತ್ಮನ ಸ್ವರೂಪವೇನು? ಅವನನ್ನು ಹೊಂದಲು ಸಾಧನವೇನು? -ಇತ್ಯಾದಿ ವಿಷಯಗಳ ಬಗ್ಗೆ ಬಹುಕಾಲದಿಂದ ಚರ್ಚೆಗಳು ಆಗುತ್ತಲೇ ಇವೆ. ಭಗವತ್ಸ್ವರೂಪವನ್ನು ಕುರಿತಂತೆ ಕೆಲವರಿಗೆ ಕೆಲವು ಮಟ್ಟದ ಅನುಭವಗಳಾಗಿರಬಹುದು. ಮತ್ತೆ ಕೆಲವರು ಅವರವರ ಬುದ್ಧಿಯ ಮಟ್ಟಕ್ಕೆ ತಕ್ಕಂತೆ ತಾರ್ಕಿಕವಾಗಿ ಚಿಂತಿಸಿದಾಗ ಕೆಲವು ವಿಚಾರಗಳು ಸರಿಯೆನಿಸಬಹುದು. ಇವುಗಳನ್ನಿಟ್ಟುಕೊಂಡು ತಮ್ಮದೇ ಆದ ಪಂಥಗಳನ್ನು ಎಷ್ಟೋ ಮಂದಿ ಬೆಳೆಸಿದ್ದಾರೆ. ತಮ್ಮದೇ ಸರಿ ಎಂದು ಪ್ರತಿಪಾದಿಸಬೇಕಾದರೆ ಉಳಿದವರ ಅಭಿಪ್ರಾಯಗಳು ತಪ್ಪು ಎಂದು ಸಾಧಿಸುವುದು ಅನಿವಾರ್ಯವೆಂದು ಭಾವಿಸಿ ಪರಮತ ಖಂಡನಗ್ರಂಥಗಳನ್ನೆಷ್ಟೋ ಬರೆದಿದ್ದಾರೆ. ಆದರೆ ಈ ಪ್ರಕ್ರಿಯೆ ಕೇವಲ ಇತರರ ಅಭಿಪ್ರಾಯಗಳ ಖಂಡನೆಯಲ್ಲಿ ನಿಲ್ಲದೆ, ವ್ಯಕ್ತಿಗತವಾಗಿ ತಿರುಗಿ, ಪರಸ್ಪರ ವೈಮನಸ್ಯಕ್ಕೂ ದಾರಿಮಾಡಿಕೊಟ್ಟು, ಕೆಲವೊಮ್ಮೆ ಹೊಡೆದಾಟಗಳವರೆಗೂ ಮುಂದುವರೆದಿದೆ. 

ವಾದಗಳು ಒಳ್ಳೆಯವೇ. ಆದರೆ ವಾದಿಸುವವರು ತೆರೆದ ಮನಸ್ಸುಳ್ಳವರಾಗಿರಬೇಕು. ಹಾಗಿದ್ದರಷ್ಟೇ ಹೆಚ್ಚು ತಿಳಿವಳಿಕೆಯುಳ್ಳವರು, ಕಡಿಮೆ ಅರಿವಿರುವವರನ್ನು ಮೇಲೆತ್ತಬಹುದು. ವಾದಗಳು ಸರಿಯಾದ ಹಾದಿಯಲ್ಲಿ ಸಾಗಿದಾಗ " ವಾದೇ ವಾದೇ ಜಾಯತೇ ತತ್ತ್ವಬೋಧಃ" (ವಾದ ಮಾಡುತ್ತಾ ಮಾಡುತ್ತಾ ತತ್ತ್ವದ ಅರಿವುಂಟಾಗುತ್ತದೆ) ಎಂಬ ಶ್ರೀ ಶಂಕರಾಚಾರ್ಯರ ಮಾತು ಅಕ್ಷರಶಃ ನಿಜವಾಗುತ್ತದೆ. ಆದರೆ ಪ್ರಕೃತಿ ದೌರ್ಬಲ್ಯವುಳ್ಳವರ ಮಧ್ಯೆ ನಡೆಯುವ ಅವೈಜ್ಞಾನಿಕ ವಾದಗಳಿಂದಾಗುವ ದುಷ್ಪರಿಣಾಮವನ್ನು ಕುರಿತು ಶ್ರೀರಂಗಮಹಾಗುರುಗಳು ಹೀಗೆ ಎಚ್ಚರಿಸಿದ್ದಾರೆ- "  ವಾದೇ ವಾದೇ ಜಾಯತೇ ವೈರವಹ್ನಿಃ"(ವಾದ ಮಾಡುತ್ತಾ ಸಾಗಿದಾಗ ದ್ವೇಷಾಗ್ನಿಯೇ ಉಂಟಾಗುತ್ತದೆ). ಆದ್ದರಿಂದ ವಾದ ಮಾಡುವಾಗ, ವಾದವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಬುದ್ಧಿಶಕ್ತಿಯಷ್ಟೇ ಅಲ್ಲದೆ, ಸಮಾಧಾನವಾದ ಮನಸ್ಸು, ನಿಜವನ್ನೇ ಅರಿಯಬೇಕೆಂಬ ಹಂಬಲ, ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಸರಿಯಾದುದನ್ನು ಅಪ್ಪಿಕೊಳ್ಳುವ ಮನೋಭಾವ- ಎಲ್ಲವೂ ಇರಬೇಕು.

ಬೇರೆಯ ಊರಿಗೆ ಹೋಗಬೇಕೆಂದಾದರೆ, ಅತ್ತ ಹೆಜ್ಜೆ ಹಾಕಲಾರಂಭಿಸಿದರೆ, ಎಡವಿ, ಮುಗ್ಗರಿಸಿ, ಒಮ್ಮೊಮ್ಮೆ ದಾರಿ ತಪ್ಪಿದರೂ, ಸರಿಪಡಿಸಿಕೊಂಡು ಒಂದಲ್ಲ ಒಂದು ದಿನ ಊರನ್ನು ತಲುಪಬಹುದಲ್ಲವೇ? ಆ ಊರು ಹೇಗಿದೆ ಎಂದು ಇಲ್ಲಿ ಕುಳಿತೇ ವಾದ ಮಾಡುವುದೇಕೆ? ದೇವರನ್ನು ಕುರಿತು ಮಾಡುವ ಒಣಚರ್ಚೆಯೂ ಕಾಲಯಾಪನೆಯಷ್ಟೆ. ದೇವರನ್ನು ಕಾಣಲು ಎಲ್ಲ ಆಸ್ತಿಕಗುರುಗಳೂ ಪೂಜೆ, ಜಪ, ಧ್ಯಾನ ಮುಂತಾದ ಮಾರ್ಗಗಳನ್ನು ಹೇಳಿರುವರಷ್ಟೆ. ಆ ಮಾರ್ಗಗಳನ್ನು ಯಥಾಶಕ್ತಿ ಅನುಸರಿಸುತ್ತಾ, ಶುಷ್ಕವಾದ ವಾದಗಳಿಂದ ದೂರ ಉಳಿದಲ್ಲಿ, ಮನಸ್ಸು ಕ್ರಮೇಣ ತಿಳಿಯಾಗಿ, ಸತ್ಯಸಾಕ್ಷಾತ್ಕಾರಕ್ಕೆ ನಮ್ಮನ್ನು ಅನುವು ಮಾಡಿಕೊಡುತ್ತದೆ.

ಪರಂಪರೆಯಲ್ಲಿ ಬಂದಿರುವ ಸರ್ವಸಾಮಾನ್ಯವಾದ(general) ಹಾಗೂ ಸರ್ವಮಾನ್ಯವಾದ ಅಂಶಗಳತ್ತ ಗಮನ ಹರಿಸಿ, ಸಾಂಸ್ಕೃತಿಕವಾಗಿ ಚದುರಿರುವ ಭಾರತವನ್ನು ಒಗ್ಗೂಡಿಸುವ ದಿಕ್ಕಿನಲ್ಲಿ ಹೆಜ್ಜೆ ಇಡೋಣ.

ಸೂಚನೆ: 18/02/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ. 

ಆದರ್ಶ ದಿನಚರಿ (Adarsha Dinacari)

ಶ್ರೀಮತಿ ಶ್ರೀವಿದ್ಯಾ .ಸಿ. ಭಟ್

(ಪ್ರತಿಕ್ರಿಯಿಸಿರಿ lekhana@ayvm.in)

ದಿನಚರಿ ನಮ್ಮ ಜೀವನದ ಧ್ಯೇಯಕ್ಕೆ ತಕ್ಕಂತೆ ಇರುತ್ತದೆ. ಉದಾಹರಣೆಗೆ ಒಬ್ಬ ಕ್ರೀಡಾಪಟುವಿನ ದಿನಚರಿಯಲ್ಲಿ ಅವನ ಕ್ರೀಡೆಗೆಸಹಕಾರಿಯಾದ  ವ್ಯಾಯಾಮ, ಆಹಾರ ನಿಯಮಗಳು ಎಲ್ಲವೂ ಸೇರಿರುತ್ತದೆ. ಹಾಗೇ ಒಬ್ಬ ಉದ್ಯಮಿಯ ದಿನಚರಿವಿಭಿನ್ನವಾಗಿದ್ದು, ಇತರ ಉದ್ಯಮಿಗಳ ಜೊತೆ ಸಭೆ- ಮಾತುಕತೆ- ಪ್ರಯಾಣ ಎಲ್ಲವೂ ಇರುತ್ತದೆ. ಹಾಗೇ ಅನೇಕರುಆರೋಗ್ಯ, ನೆಮ್ಮದಿ, ಸಂತೋಷಕರವಾದ ಜೀವನಕ್ಕೆ ತಕ್ಕಂತಹ ದಿನಚರಿಯನ್ನು ಅಳವಡಿಸಿಕೊಂಡಿರುತ್ತಾರೆ.ಇವೆಲ್ಲವೂ ನಾವು ನಮ್ಮ ಜೀವನಕ್ಕೆ ಅಂಟಿಸಿಕೊಂಡ ಧ್ಯೇಯಗಳು ಮತ್ತು ಅವಕ್ಕೆ ತಕ್ಕಂತಹ ದಿನಚರಿಗಳಾದವು. ಆದರೆಭಾರತೀಯ ಮಹರ್ಷಿಗಳು, ಜೀವನಕ್ಕೇ ಸಹಜವಾದ ಧ್ಯೇಯ ಒಂದಿದೆ, ಅದನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾದದಿನಚರಿಯನ್ನು ಅಳವಡಿಸಿಕೊಂಡರೆ ಜೀವನ ಸರ್ವಾಂಗ ಸುಂದರವಾಗಿ ಇರುತ್ತದೆ ಎಂಬುದನ್ನು ಅರಿತು ಅದರಂತೆ ದಿನಚರಿಯನ್ನುರೂಪಿಸಿದ್ದಾರೆ.


ಶ್ರೀರಂಗಮಹಾಗುರುಗಳು ಬೀಜ-ವೃಕ್ಷದ ಉದಾಹರಣೆಯ ಮೂಲಕ ಜೀವನವೃಕ್ಷದ ಧ್ಯೇಯವನ್ನು ತಿಳಿಸಿಕೊಟ್ಟಿದ್ದಾರೆ. ಒಂದುಮಾವಿನ ವೃಕ್ಷದ ಧ್ಯೇಯ ಬೀಜದಿಂದ ಹೊರಟು ಕಾಂಡ, ಕೊಂಬೆ, ಎಲೆ, ಕಾಯಿ, ಹಣ್ಣು ಎಲ್ಲವೂ ಆಗಿ ಕಡೆಯಲ್ಲಿ ಬೀಜದಲ್ಲಿನಿಲ್ಲುವಂತಾಗುವುದು. ಹಾಗೆಯೇ ಮನುಷ್ಯ ಜೀವನದಲ್ಲೂ ಜೀವನ ಪ್ರಕಾಶನಾದ ಭಗವಂತನಿಂದ ಆರಂಭವಾದ ಬದುಕುಹಾದಿಯಲ್ಲಿ ಧರ್ಮ, ಅರ್ಥ ಕಾಮ ಗಳೆಲ್ಲವನ್ನೂ ಅನುಭವಿಸಿ ಕಡೆಯಲ್ಲಿ ಆ ಪ್ರಕಾಶದಲ್ಲೇ ಒಂದಾಗುವ ಮೋಕ್ಷದಲ್ಲಿ ಪರ್ಯವಸಾನಹೊಂದುವುದೇ ಆಗಿದೆ ಎಂಬುದನ್ನು ತಮ್ಮ ತಪಸ್ಯೆಯಿಂದ ತಿಳಿದವರು ನಮ್ಮ ಮಹರ್ಷಿಗಳು. ಅಂತಹ ಜೀವನ ವೃಕ್ಷದ ಕೃಷಿಯನ್ನುಚೆನ್ನಾಗಿ ಮಾಡುವ ದಿನಚರಿ ಅವರದು. ಪ್ರಾತಃಕಾಲ ಬ್ರಾಹ್ಮೀಮುಹೂರ್ತದಲ್ಲಿ ಭಗವಂತನ ಸ್ಮರಣೆಯಿಂದ ಬಲಗಡೆ ಮಗ್ಗುಲಿನಿಂದಎದ್ದು, ನಂತರ ನಿತ್ಯಕರ್ಮಗಳು. ಹಾಗೆಯೇ ಆಹಾರದ ವಿಷಯದಲ್ಲಿ ಭಗವಂತನ ಸ್ಮರಣೆಯೊಡನೆ ಸಾತ್ವಿಕ ಆಹಾರದ ತಯಾರಿಕೆ,ಅದರ ಸೇವನೆ – ಹೀಗೆ ಎಲ್ಲದರಲ್ಲೂ ಪರಮಾರ್ಥವನ್ನು ಸೇರಿಕೊಂಡ ಲೌಕಿಕ ಸುಖವಿರುವಂತೆ ನಮ್ಮ ದಿನಚರಿಯನ್ನಿಟ್ಟಿದ್ದಾರೆ.ಅಂತಹ ದಿನಚರಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ, ನಮ್ಮ ಜೀವನದ ಮುಖ್ಯ ಉದ್ದೇಶಕ್ಕೆ ಸೇರಿದದಿನಚರಿಯಾಗುತ್ತದೆ.


ಹೀಗೆ ನಾವು ಅಳವಡಿಸಿಕೊಳ್ಳುವ ದಿನಚರಿಯಿಂದಲೇ ಇಂದ್ರಿಯ ಸುಖದ ಜೊತೆಗೇ ಜೀವನದ ಧ್ಯೇಯವಾದ ನಮ್ಮೊಳಗಿನ ಬೆಳಕನ್ನುಕಂಡು ಆನಂದಿಸುವ ಉಪಾಯವನ್ನು ಲೋಕಕ್ಕೆ ದಯಪಾಲಿಸಿದ ಮಹರ್ಷಿಗಳಿಗೆ ಕೃತಜ್ಞರಾಗಿರೋಣ. ಅಂತಹ ಆದರ್ಶದಿನಚರಿಯನ್ನು ನಾವೂ ಅನುಸರಿಸುವಂತಾಗಲಿ.


ಸೂಚನೆ: 18/02/2020 ರಂದು ಈ ಲೇಖನ
ಉದಯವಾಣಿ ಯಲ್ಲಿ ಪ್ರಕಟವಾಗಿದೆ.  

Tuesday, February 16, 2021

The Three Models of Training

   Kannada Article by: Dr Mohan Raghavan

English Rendering by: M R Bhashyam

Respond to (lekhana@ayvm.in)



 

Ramadas Shreshti had three sons. Though all were intelligent and educated, they used to while away their time roaming with friends without any responsibility. Age was descending on the parents. It was becoming more and more difficult for the parents to manage the affairs of farm, fields and business. Worried, they were trying to think of ways and means to bring their children to the right path.

 

Once, Shreshti called his three sons and asked them to go to the king to deliver the share to the treasury and taxes. The king received the tributes and enquired about the welfare of Shreshti and the occupation of the children. He directed them to get involved in the affairs of the family saying "It is only right for you to take care of your parents during their old age.  That is also the law of the land. Immediately get involved in the family affairs".  The oldest son, as directed by the king, immediately started shouldering the responsibility of the family. But his siblings continued in their old ways. The older brother once called his younger brothers aside and told them "I have to reveal something. I was thinking that it would be boring to be involved in business. But now, I find it very interesting. I receive a lot of respect now. You have lost a great opportunity. I am telling you this not as your elder brother but as a friend who was going around with you".  One of the brothers became active in the shop the very next day.  But the youngest, without correcting himself, began to dive more deeply into liquor and gambling.  In the meantime, the parents searched for a suitable girl to get the youngest son married.  Having found one, they showed her to him. Stunned by her beauty, he agreed to get married to her. She was a soft and serene girl and was also very smart. She took him into her fold very easily. Unable to ignore her advice, he gradually returned to the right path. The parents spent the evenings of their lives happily and peacefully through prayer and meditation.

The above is a story about approach to education and schooling in Bharata. The sages of India were well aware of the wealth of penance. They had found a vast gold mine of joy within themselves.  Besides, they had laid down norms for enjoying the happiness bestowed by Mother Nature and to fulfill desires. Their Mantra was to balance the joy awarded by the internal Dharma with the happiness accorded by the external wealth and desires. They lived and nurtured that way of life in their environs, empire and society. This is the essence of life of Bharata of the bygone eons. If this system had to be implemented across the length and breadth of the country, suitable methods, mechanisms of education and training were necessary. People with many tastes and volitions had to be transformed. They had to be guided to the highway of Aatma-dharma, the road to the soul.

The populace could be compared to the three children of the Shreshtis. Training people in dharma-maarga, by instructing in Vedas and Upanishads was one of the methods. The Vedas and Upanishads prescribe internal penance and meditation akin to the king's decree. "Speak the Truth, follow dharma – the righteous path, do not turn away from self-study" – "Satyam Vada, Dharmam Chara, Swaadhyaayaan maa-pramadah". There are undertones of teaching by directing in sayings like "esha aadeshah, esha upadeshah".  They reverberate solemnly like a king's command.  They bring silence to peoples' minds and in stunned moments the minds dwell deep down. That is why Vedas, Upanishads and Shastras are called "Prabhu Sammita" – "as per the dictum of the king for welfare".  Some follow these like the eldest son of Shreshtis.

But many do not like this approach like those younger siblings. They rebel. Instead of teaching directly they have to be enlightened in the righteous path through stories and parables. They have to be made aware of the perils of the wrong path. Since itihasas and puraanas perform this like a friend, they are Mitra Sammitas, the route followed by a friend. We find many examples like the adharma of Hiranyakashipu - Prahlaada's devotion, the vanity of kauravaas- the devotion of paandavaas to the righteous path, Nahusha's downfall – Ajaamila's upliftment and many more. Profound spiritual principles have been woven into these stories., When just five years old, Dhruva meditates on Lord Naaraayana and earns His grace.  His mother was Suneeti. His father loved his step mother Suruchi much more. Hence, Dhruva, son of Suneeti was not getting his due. Unable to bear the injustice, he leaves home and meditates on Lord Naaraayana as per the direction and instructions of sage Naarada and acquires His grace. Shri ShriRanga Mahaaguru used this as an example to highlight the spiritual principles woven indirectly into the story by the sages.  We like sensual pleasures better than the ethical principles and righteous path. If a diabetic favors Suruchi (good taste), more than the constraints of what is right (Suneeti), then the result is perilous. The abandonment of the right path (Suneeti), creates havoc in our body. Peace is attained if the intellect is anchored (Dhruva). The dhruti – firmness of mind- is attained if we have the right ethics – Suneeti. Sage Naarada, representing the principle of the mind is the guide. If the mind is firmly stationed in the Soul of souls, then Lord Naaraayana and eternal proximity to Him are realized.  In order that this may be properly understood and achieved, Mitra Sammitas are needed to be studied under the guidance of a guru.

The third son does not bend for any of these. He is under the influence of greed, attachment and ego. "If a rogue elephant needs to be tamed, a trained elephant is necessary" ShriRanga Mahaguru used to say. One needs to bring that kind of a person under control with resolve, like the way a woman takes control of her husband. The kaavyas – Literatures- which employ this technique are called Kaanthaa – Sammitaas.   They attract the minds of people with sentiments – rasas - like love, grief etc and finally position them in serenity. The characteristics and thoughts of heroes and heroines seep into us. Shrimad Raamaayana, the kaavya of antiquity – Aadikaavya- is positioned as the ideal and consummate Kaavya because it evokes many rasaas in the reader.  The love between Raama and Seetha - Shrungaara, Raama's valor -  Veera, the grief it evokes due to separation , the horror- Bhayanaka and the disgust – Bheebhatsa of the war, the fury – Roudra of Raama, and His serene and solemn  countenance, Shaantha, throughout influences and enchants us like the thematic line of music, the pallavi. Raama's modesty and compassion towards all beings sow the seed of dharma- righteousness – in us without our being aware. The story which begins with the penance, self study and the study of the self of Sages Naarada and Vaalmiki ends in the rasa of serenity – Shaantha.

In the country of Bharata of the sages, dharma- artha- kaama- moksha were the four fold purushaarthas – goals of life.  The roads that lead us on to these are the three types of Sammitaas namely Prabhu- Mitra and Kaantha. Let us enlighten our lives using these and enrich them in our land.

Note: The Kannada version of this article can be viewed at AYVM blogs.

Sunday, February 14, 2021

ಆರ್ಯಸಂಸ್ಕೃತಿ ದರ್ಶನ - 30 (Arya Samskruti Darshana - 30)

ಶ್ರೀಃ
ಭಕ್ತಿ ಬಲವೋ-ದೌರ್ಬಲ್ಯವೋ  ?
ಲೇಖಕರು: ವಿದ್ವಾನ್|| ಶ್ರೀ ಛಾಯಾಪತಿ
 
 
"ಇಡಬೇಕೀಶ್ವರನಲ್ಲಿ ಭಕ್ತಿರಸಮಂ", " ಭಕ್ತಿಃ ಶೂಲಿನಿ" ಎಂಬಿವೇ ಮೊದಲಾದ ನೀತಿಯ ಮಾತುಗಳು ಮಾನವನಲ್ಲಿ ಇರಬೇಕಾದ ಅವಶ್ಯಕ ಗುಣಗಳಲ್ಲಿ ಭಕ್ತಿಯೂ ಒಂದು ಎಂದು ಗಣಿಸುತ್ತದೆ. ಭಕ್ತರನ್ನು ದೇಶದಾದ್ಯಂತ ಗೌರವಿಸುವ ಮನೋಧರ್ಮ ಬೆಳೆದಿದೆ.

ಇಂತಹ ಭಕ್ತಿಯ ಬಗೆಗೆ ಇತ್ತೀಚೆಗೆ ಹಲವು ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಭಕ್ತಿ ಕೇವಲ ಭಾವನೆ. ಇದರಲ್ಲಿ ನಂಬಿಕೆಯ ಪಾಲೇ ಜಾಸ್ತಿ. ವಿಚಾರದ ಪಾಲು ಕಡಿಮೆ. ಭಕ್ತಿ ಮನುಷ್ಯನಿಗೆ ಸ್ವಾವಲಂಬನೆಯನ್ನು ತಪ್ಪಿಸಿ ಪರಾವಲಂಬನೆಯನ್ನು ಬೆಳೆಸಿಬಿಡುತ್ತದೆ. ತನ್ನಲ್ಲಿ ಯಾವ ಶಕ್ತಿಯೂ ಇಲ್ಲ ಎಂದು ತೋಡಿಕೊಳ್ಳುವ ದೈನ್ಯವೃತ್ತಿ ಆತ್ಮವಿಶ್ವಾಸವನ್ನು ಕಳೆದು ಬಿಡುತ್ತದೆ. ಜೀತದಾಳಿನ ಮನೋಧರ್ಮವನ್ನು, ಗುಲಾಮಗಿರಿಯ ಮನೋಭಾವವನ್ನು ಹರಡುತ್ತದೆ ಈ ಭಕ್ತಿ. ಹೀಗೆ ಬುದ್ಧಿ ಬಲವನ್ನು ಕುಂಠಿತಗೊಳಿಸಿ,  ವಿಚಾರಶಕ್ತಿಯನ್ನು ಕಳೆದು, ಮೌಢ್ಯದತ್ತ ತಳ್ಳಿ, ಮಾನವನ ಏಳಿಗೆಗೆ ಹಾನಿಯುಂಟು ಮಾಡುತ್ತದೆ. ಈ ಮುಗ್ಧಭಕ್ತಿಯ ದುರ್ಲಾಭವವನ್ನು ಪಡೆದ ಶೋಷಕರ ಶೋಷಣೆಗೀಡಾಗುತ್ತಿದ್ದಾನೆ ಮಾನವ. ಆದ್ದರಿಂದ ಭಕ್ತಿ ಮಾನವನನ್ನು ಏಳಿಗೆಯಿಂದ ಕಟ್ಟಿ ಹಾಕುವ ಶೃಂಖಲೆ. ಆದ್ದರಿಂದ ಭಕ್ತಿಯಿಲ್ಲದಿದ್ದರೂ ತೊಂದರೆಯಿಲ್ಲ. ಅಪಾಯವೇನೂ ಇಲ್ಲ. ಆದರೆ ಕೋಟಲೆಗೊಳಗಾಗುವುದು  ಮಾತ್ರ ಬೇಡ.

ಇಂತಹ ವಿಚಾರಗಳು ಭಕ್ತಿಪರರ ಮನಸ್ಸನ್ನೂ ಕಲಕ ಹತ್ತಿವೆ. ತಮ್ಮ ಭಕ್ತಿಯನ್ನು ವಿಮರ್ಶೆಗೊಳಪಡಿಸಿಕೊಳ್ಳುವಂತೆ ಮಾಡಿದೆ. ಅನೇಕರ ಭಕ್ತಿಯನ್ನು ಕಡಿಮೆಗೊಳಿಸಿರುವುದೂ ಉಂಟು.. ಅಂತೆಯೇ ವಿಚಾರದತ್ತ ಒಲಿಯುವ ಸ್ವಭಾವವುಳ್ಳ ಯುವ ಪೀಳಿಗೆಯ ಮನಸ್ಸು ಭಕ್ತಿಭಾವದಿಂದ ಜಾರುತ್ತಿದೆ.

ಈ ಯಾವ ವಿಚಾರವನ್ನೂ ಗಣಿಸದ ವೀರಭಕ್ತರ ಸಂಖ್ಯೆಗೇನೂ ಕೊರತೆಯಿಲ್ಲವಾದರೂ ಇದರ ನಿಜವೇನು ಎಂಬುದನ್ನು ಅರ್ಥಮಾಡಿಕೊಳ್ಳಬಯಸುವ ನ್ಯಾಯವಾದ ಮನಸ್ಸಿಗೆ ಸಮರ್ಪಕವಾದ ಉತ್ತರ ಅಗತ್ಯವಾಗಿದೆ. ಈ ದಿಶೆಯಲ್ಲಿ ಒಂದು ಸಣ್ಣ ಪ್ರಯತ್ನ ಈ ಬರಹ.

ಜೇನಿನ ಸವಿ ಯಾರಿಗೆ ತಿಳಿಯದು?  ಆ ಸವಿ ನಮ್ಮ ಮನಸ್ಸನ್ನು ತನ್ನತ್ತ ಸೆಳೆಯುತ್ತದೆ. ಒಮ್ಮೆ ಸವಿದರೆ ಮತ್ತೆ ತನ್ನತ್ತ ಸೆಳೆಯುವ ಗುಣ ಅದರಲ್ಲಿದೆ. ಮನಸ್ಸು ಅತ್ತ ಒಲಿಯುತ್ತದೆ. ಅದೇ ಮನಸ್ಸಿನ ಒಲವು. ಆ ಒಲವು ಮತ್ತೆ ಜೇನನ್ನು ಸವಿಯುವುದಕ್ಕೆ ಪೋಷಕವಾದುದರಿಂದ ಜೇನಿನ ಸವಿಯಲ್ಲಿ ಒಲವು ಅಗತ್ಯ. ಆ ಒಲವು ನಮಗೆ ಜೇನಿನ ಸವಿಯ ಸುಖವನ್ನು ನೀಡುತ್ತದೆ. ಅದು ಭಾವನೆ ನಿಜ. ಆದರೂ ಅದು ನಮ್ಮ ಬಾಳನ್ನು ಉಳಿಸಲು, ಬೆಳೆಸಲು ಸಹಾಯ ಮಾಡುತ್ತದೆ. ಈ ಜೇನಿನಂತಯೇ ಮಲ್ಲಿಗೆಯ ಕಂಪು, ಬೆಳದಿಂಗಳ ತಂಪು, ಕೋಗಿಲೆಯ ಗಾನದ ಇಂಪು ಇವುಗಳೂ ನಮ್ಮ ಮನದಲ್ಲಿ ಒಲವನ್ನು ಮೂಡಿಸುತ್ತವೆ. ಆ ಒಲವು-ಪ್ರೀತಿ ನಮಗೆ ಸುಖ ನೀಡುತ್ತದೆ.

ಜೀವನದ ಸುಖದ ಸಾರವೇನು ? ಅದರ ನೆಲೆ ಎಲ್ಲಿದೆ? ಎಂದು ಹುಡುಕ ಹೊರಟ ಜೀವಿಗಳಿಗೆ, ಅವರ ಹೃದಯ ಬಿಲವು ತೆರೆದು ಒಳಗೆ ತುಂಬಿ ಬೆಳಗುವ ಸುಖದ ನಿಧಿಯೊಂದು ಗೋಚರವಾಯಿತು. ಸವಿಜೇನು ನಮ್ಮ ಮನವನ್ನು ತನ್ನತ್ತ ಒಲಿಸಿದಂತೆ, ಮನವು ಆ ಸುಖದ ನಿಧಿಯತ್ತ ಒಲಿಯಿತು. ಅಲ್ಲೇ ಪುಳಕಗೊಂಡಿತು. ಸುಖದ ನಿಧಿ ಇಲ್ಲಿಯೇ ಇದೆ ಎಂದರಿತ ಬಳಿಕ ಮನಸ್ಸಿನ ಒಲವಿನ ಪ್ರವಾಹವೇ ಅತ್ತ ಹರಿಯಿತು. ಆ ಹರಿವೇ ಭಕ್ತಿ. "ಸಾಪರಾನುರಕ್ತಿರೀಶ್ವರೇ"–"ಸಾತ್ವಸ್ಮಿನ್ ಪರಮಪ್ರೇಮರೂಪಾ"—ಭಕ್ತಿಯು ಈಶ್ವರನಲ್ಲಿ ಪರಮಪ್ರೇಮರೂಪವಾದುದು ಎಂಬ ಮಾತು ಇದನ್ನು ಹೇಳುತ್ತದೆ.  

ಆದ್ದರಿಂದ ಪ್ರೀತಿಯ ಉತ್ಕೃಷ್ಟತಮವಾದ ರೂಪವೇ ಭಕ್ತಿ. ಅಂತೆಯೇ ಪರಮಪ್ರೇಮದಿಂದ ಸುಖದ ನೆಲೆಯೇ ದೊರೆತುದರಿಂದ ಅದಕ್ಕೆ ಸಾಧನವಾದ ಭಕ್ತಿ ಸುಖರೂಪವಾದುದು. ಭಕ್ತಿ --ಎಂದರೆ ಸೇರುವಿಕೆ-ಎಂಬರ್ಥವೂ  ಬರುತ್ತದೆ. ತನ್ನ ಹೃದ್ಗೋಚರವಾದ ಸುಖನಿಧಿಯಲ್ಲಿ, ಅದರ ತಂಪು-ಇಂಪುಗಳಲ್ಲಿ ಒಂದಾಗುವುದೇ ಭಕ್ತಿ. ಅದರಲ್ಲಿ ಸುಖಿಸುವುದೇ ಭಕ್ತಿ.

ಪ್ರತಿಜೀವಿಯ ಹೃದಯದಲ್ಲಿಯೂ ಆ ಸುಖದ ನಿಧಿಯುಂಟು. ಅದನ್ನು ಅನುಭವಿಸುವ ಯೋಗ್ಯತೆಯುಂಟು. ಆ ಅನುಭವಕ್ಕೆ ಕೀಲಿಕೈ ಭಕ್ತಿ. ಅನುಭವಿಗಳ ಹೃದಯದಿಂದ ಮೂಡಿಬಂದ ಭಕ್ತಿ ಸಂದೇಶಗಳು ಆ ಅನುಭವದತ್ತ ಕರೆದೊಯ್ಯುವ ಮಾರ್ಗದರ್ಶಿಗಳು. ಆದ್ದರಿಂದಲೇ "ಮೋಕ್ಷ ಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ"
"ತನ್ನ ಜೀವನದಲ್ಲಿ ನೆಲೆಮುಟ್ಟಿಸುವ ಸಾಮಗ್ರಿಗಳಲ್ಲಿ ಭಕ್ತಿಯೇ ಹಿರಿದಾದ ಸಾಮಗ್ರಿ"  ಎಂಬ ಮಾತನ್ನು ನಾವು ನೋಡುತ್ತೇವೆ.

ಜೀವಿಯ ಸಹಜ ಸುಖದ ನೆಲೆಯನ್ನು ಕಂಡು ಅನುಭವಿಸಿದಾಗ ಒಲಿದ ಮನಸ್ಸಿನ ಧಾರೆಯೇ ಭಕ್ತಿ. ಅದು ಸಹಜ. ಅದು ಮನಸ್ಸಿನ ಬಲವೇ ಹೊರತು ದೌರ್ಬಲ್ಯವಲ್ಲ. ಜೀವಿಗಳೆಲ್ಲರೂ ಯಾವ ಪರಮಾವಧಿಯ ಸೌಖ್ಯಕ್ಕಾಗಿ ಹಂಬಲಿಸುವರೋ ಅಂತಹ ಪರಮಾವಧಿಯ ಸೌಖ್ಯದ ಹಾದಿ ತೋರುವ ಭಕ್ತಿ ಬಲವಲ್ಲದೇ ಮತ್ತೇನು ?
ತನ್ನ ಜೀವನದ ಒಳಮೈಯಲ್ಲಿ ಮಿಂಚಿದ ಸತ್ಯದ ಪ್ರಕಾಶದಿಂದ ರೂಪಗೊಂಡ ಭಾವನೆ ಭಕ್ತಿ. ಆದ್ದರಿಂದ ಅರಿವಿನ ಆಧಾರದಿಂದ ರೂಪಗೊಂಡ ಭಾವನೆಯೇ ಹೊರತು, ವಿಚಾರ ಬಲಹೀನವಾದ ಶಕ್ತಿಯಲ್ಲ ಭಕ್ತಿ.

ಹಣಕ್ಕಾಗಿ, ಉದರ ನಿಮಿತ್ತವಾಗಿ ಗುಲಾಮಗಿರಿಯನ್ನು ಸಂತೋಷವಾಗಿ ಒಪ್ಪಿಕೊಳ್ಳುವ ಮಾನವ, ತನ್ನ ಜೀವಿತ ಪರಮ ಸೌಖ್ಯದ ಲಾಭಕ್ಕಾಗಿ ಭಕ್ತಿಯತ್ತ ಒಲೆಯುವುದು ಹೇಗೆ ತಪ್ಪಾದೀತು?
ಭಕ್ತಿ ತನ್ನ ಜೀವನವು ಯಾವ ಅವಲಂಬನೆಯ ಮೇಲಿದೆಯೋ, ಆ ನಿಜವಾದ ಅವಲಂಬನೆಯನ್ನು ನೀಡಿ ಬಾಳನ್ನು ಹಸನುಗೊಳಿಸುವುದರಿಂದ ಇಲ್ಲಿ ಪರಾವಲಂಬನೆಯ ಪ್ರಶ್ನೆಯೇ ಇಲ್ಲ. ಜೀವನದ ಮೂಲಶಕ್ತಿಯ ಪರಿಚಯಕ್ಕೆ ಬಂದಾಗ ಅದರಿಂದ ತನ್ನ ಜೀವನ ತುಂಬಿ ಬೆಳೆಯುವುದನ್ನು ಗುರುತಿಸಿದಾಗ, ತನ್ನಲ್ಲಿ ಯಾವಶಕ್ತಿಯೂ ಇಲ್ಲ ಎಂದು ತೋಡಿಕೊಳ್ಳುವ ಭಾವ ವಸ್ತುಸ್ಥಿತಿಯ ಗುರುತಿಸುವಿಕೆಯೇ ಹೊರತು, ಅದರಲ್ಲಿ ದೈನ್ಯವಾಗಲೀ, ಆತ್ಮವಿಶ್ವಾಸದ ಕಳೆಯುವಿಕೆಯಾಗಲೀ ಇಲ್ಲ. ಆತ್ಮವನ್ನು ಕಂಡಾಗ ಮೂಡುವ ವಿಶ್ವಾಸದ ಹೇಳಿಕೆಯು ಆತ್ಮವಿಶ್ವಾಸವನ್ನು ಹೇಗೆ ಕಳೆದೀತು ?

ಮಾನವ ಜೀವನದಲ್ಲಿ ಹುದುಗಿರುವ ಅಂತಶ್ಚೈತನ್ಯದ ನೆಲೆಯನ್ನು ಗುರುತಿಸಲು ಸಾಧನವಾಗಿರುವುದರಿಂದಲೇ, ಭಕ್ತಿ, ಮಾನವನ ಏಳಿಗೆಗೆ ಪೂರಕವೇ ಹೊರತು ಮಾರಕವಲ್ಲ. ಭಕ್ತಿ ಪ್ರತಿಜೀವಿಗೂ ಅತ್ಯಗತ್ಯ. ಸುಖದ ನೆಲೆಯಲ್ಲಿ ನಿಲ್ಲಿಸುವ  ಸಾಧನ. ಪರಮಾವಧಿಯ ಸುಖದತ್ತ ಸೆಳೆವ ಸೂಜಿಗಲ್ಲು. ಜೀವನದ ಪ್ರೇಮನಿಧಿಯತ್ತ ಹರಿಸುವ ಪ್ರೇಮರೂಪವಾದ ಮನೋಧಾರೆ. ಜೀವಿಯು ಊಹಿಸಲಾಗದ ಕಲ್ಪನೆಗೂ ನಿಲುಕದ ಸುಖದ ಭಂಡಾರದ ಕೀಲಿಕೈ.

ಈ ಭಕ್ತಿಯ ಸವಿ ಕೊಂಚ ಊರಿದರೆ ಆಗ ತಿಳಿದೀತು ಅದರಿಂದಾಗುವ ಲಾಭ. ಜೀವನದ ಸುಖದ ನಿಧಿಯನ್ನು, ಪರಾತ್ಪರ ವಸ್ತುವನ್ನು ತಲುಪುವ ಸುಖರೂಪವಾದ ಶ್ರೇಷ್ಠಮಾರ್ಗ ಭಕ್ತಿ ಮಾರ್ಗ. ಇಂತಹ ಭಕ್ತಿಯ ರಹಸ್ಯವನ್ನು ನನ್ನ ಅರಿವಿಗೆ ತಂದುಕೊಟ್ಟ ಶ್ರೀರಂಗಮಹಾಗುರುವಿಗೆ  ಭಕ್ತಿಯಿಂದ ನಮಿಸಿ ಈ ಬರಹವನ್ನು ಭಕ್ತಿಗಮ್ಯವಾದ ಪರಂಜ್ಯೋತಿಯ ಅಡಿದಾವರೆಗಳಲ್ಲಿ ಸಮರ್ಪಿಸುತ್ತೇನೆ.    

ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ : ೦೭ ಸಂಪುಟ: ೦೫ ಸಂಚಿಕೆ:  ಮೇ ೧೯೮೩ ತಿಂಗಳಲ್ಲಿ ಪ್ರಕಟವಾಗಿದೆ. 

Saturday, February 13, 2021

ಧಾರಣೆ (Dharaṇe)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ಅಷ್ಟಾಂಗಯೋಗದ ಕೊನೆಯ ಮೂರು ಮೆಟ್ಟಿಲುಗಳನ್ನು ಪತಂಜಲಿಗಳು ಅಂತಿಮ ಲಕ್ಷ್ಯಕ್ಕೆ ಅತ್ಯಂತ ಹತ್ತಿರವಿರುವ ಒಂದು ಒಳವರ್ಗವಾಗಿ ಪರಿಗಣಿಸುತ್ತಾರೆ. ಧಾರಣೆಯು ಎಂಟರಲ್ಲಿ ಆರನೆಯ ಮೆಟ್ಟಿಲು ಮತ್ತು ಈ ಒಳವರ್ಗದಲ್ಲಿ ಮೊದಲನೇ ಹಂತ. ಮನಸ್ಸು ಸ್ವಭಾವತಃ ಒಂದೆಡೆ ನಿಲ್ಲದೇ ಚಂಚಲವಾಗಿ ಹರಿದಾಡುತ್ತಿರುತ್ತದೆ. ಪ್ರತ್ಯಾಹಾರದಿಂದ ಒಳಮುಖವಾದ ಮನಸ್ಸನ್ನು ಒಂದು ನಿರ್ದಿಷ್ಟ ಸ್ಥಾನದಲ್ಲಿ ಧರಿಸುವುದು ಅಥವಾ ನಿಲ್ಲಿಸುವುದೇ ಧಾರಣೆ. ಒಳಮುಖವಾಗಿರುವ ಮನಸ್ಸು ಏಕಾಗ್ರವಾಗಿ ಒಂದೇ ವಸ್ತುವನ್ನು ಚಿಂತಿಸುವುದೇ ಧ್ಯಾನ. ಆ ಒಂದೇ ವಸ್ತುವನ್ನು ನಿರಂತರವಾಗಿ ಚಿಂತಿಸಬೇಕಾದರೆ ಮೊದಲು ಅದನ್ನು ಧರಿಸಬೇಕು. ಈ ಧರಿಸುವಿಕೆಯೇ ಧಾರಣೆ ಮತ್ತು ಧಾರಣೆಯು ಮುಂದಿನ ಸೋಪಾನವಾದ ಧ್ಯಾನಕ್ಕೆ ದಾರಿ ಮಾಡಿಕೊಡುತ್ತದೆ.

ಧಾರಣೆಯಲ್ಲಿ ಮನಸ್ಸು ಏನನ್ನು ಧರಿಸಬೇಕು? ಈ ಬಗ್ಗೆ ಶಾಸ್ತ್ರಗಳಲ್ಲಿ ಬಹುವಿಧಗಳು ಉಕ್ತವಾಗಿದ್ದು ಅವುಗಳನ್ನು ಕ್ರೋಡೀಕರಿಸಿ ಶ್ರೀರಂಗಮಹಾಗುರುಗಳು ಐದು ಬಗೆಯಾಗಿ ವಿಂಗಡಿಸಿದ್ದಾರೆ. ಇವುಗಳಲ್ಲಿ ನಾಲ್ಕು ಅಂತರಂಗ ಪ್ರಪಂಚಕ್ಕೆ ಸಂಬಂಧಿಸಿದುದಾಗಿದ್ದು ಒಂದು ಬಾಹ್ಯಪ್ರಪಂಚಕ್ಕೆ ಸಂಬಂಧಿಸಿದುದಾಗಿದೆ. ಅವುಗಳ ಸೂಕ್ಷ್ಮ ವಿವರಗಳಿಗೆ ಹೋಗದೇ ಸಂಕ್ಷೇಪಿಸಿ ಹೇಳುವುದಾದರೆ, ಶರೀರದ ಒಳಗಿರುವ ನಾಡೀ, ಚಕ್ರ ಮುಂತಾದವುಗಳು, ಯೋಗದೃಷ್ಟಿಗೆ ಗೋಚರವಾಗುವ ಚೌಕ, ವಲಯ ಮುಂತಾದ ಆಕಾರಗಳು, ಯೋಗಿಗೋಚರವಾದ ದೇವತಾ ಮೂರ್ತಿಗಳ ಆಕಾರಗಳು, ಮಂತ್ರರೂಪವಾದ ಆಕಾರಗಳು ಒಳ ಪ್ರಪಂಚಕ್ಕೆ ಸಂಬಂಧಿಸಿದ್ದಾಗಿವೆ. ಇದಲ್ಲದೆ ಬಾಹ್ಯಪ್ರಪಂಚದ  (ಉದಾಹರಣೆಗೆ ಮೂಲಿಕೆ, ನಕ್ಷತ್ರ ಇತ್ಯಾದಿ) ವಿಷಯಗಳವಿಜ್ಞಾನವನ್ನು ತಿಳಿಯಲೋಸುಗ ಇವುಗಳನ್ನು ಮನಸ್ಸಿನಲ್ಲಿ ಧರಿಸಬಹುದು.

ಧಾರಣೆ, ಧ್ಯಾನ, ಸಮಾಧಿಗಳು ಒಂದೇ ವಿಷಯದಲ್ಲಿ ಕೂಡಿ ಬರುವುದನ್ನು ಪತಂಜಲಿಗಳು ಸಂಯಮವೆಂದು ಪರಿಗಣಿಸಿದ್ದಾರೆ. ಈ ಸಂಯಮವು ಆತ್ಮಕೇಂದ್ರಿತವಾಗಿದ್ದಾಗ ಪರಂಜ್ಯೋತಿಯ ಸಾಕ್ಷಾತ್ಕಾರವಾಗುತ್ತದೆ. ಹಾಗಲ್ಲದೆ ಇನ್ನಾವುದಾದರೂ ವಿಷಯದಲ್ಲಿ ಕೇಂದ್ರಿತವಾದಾಗ ಆ ವಿಷಯದ ವಿಜ್ಞಾನವು ತಿಳಿಯುತ್ತದೆ ಮತ್ತು ಅದಕ್ಕನುಗುಣವಾದ ಸಿದ್ಧಿಯುಂಟಾಗುತ್ತದೆ. ಸೃಷ್ಟಿಯ ಅನೇಕ ವಿಷಯಗಳಲ್ಲಿ ಮಹರ್ಷಿಗಳು ಸಾಧಿಸಿರುವ ಈ ಸಂಯಮ, ಆರ್ಷ ವಿಜ್ಞಾನದ ಬೆಳವಣಿಗೆಗೆ ಹಾಗೂ ಇದನ್ನು ಆಧರಿಸಿದ ಭಾರತೀಯ ಸಂಸ್ಕೃತಿಗೆ ಬುನಾದಿಯಾಗಿದೆ.

ಅನೇಕ ಹೋಮಗಳಲ್ಲಿ, ತಾಂತ್ರಿಕ ಆರಾಧನೆಗಳಲ್ಲಿ, ದೈವಿಕ ಯಂತ್ರ ಸ್ಥಾಪನೆಯಲ್ಲಿ ಮತ್ತು ನಿತ್ಯವೂ ಮನೆ ಮುಂದೆ ಇಡುವ ರಂಗವಲ್ಲಿಯಲ್ಲಿಯೂ ಸಹ ಧಾರಣೆಗೆ ಯೋಗ್ಯವೆಂದು ಹೇಳಿರುವ ಆಕಾರಗಳನ್ನು ಗಮನಿಸಬಹುದು.

ಹೀಗೆ ಅಷ್ಟಾಂಗಯೋಗದ ಅಂಗವಾದ ಧಾರಣೆಯ ತತ್ತ್ವವು  ಭಾರತೀಯ ಸಂಸ್ಕೃತಿಯ ಅನೇಕ ಆಚರಣೆಗಳಲ್ಲೂ ಕಂಡು ಬರುತ್ತದೆ.

ಸೂಚನೆ : 13/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  

ಸಹನೆ ಏಕಿರಬೇಕು ? (Sahane Ekirabeku?)

ಶ್ರೀಮತಿ ಡಾ. ಶ್ರುತಿ ಪ್ರಸಾದ್

(ಪ್ರತಿಕ್ರಿಯಿಸಿರಿ lekhana@ayvm.in)

 

ಒಮ್ಮೆ  ದೇಶದ ವಿಜ್ಞಾನಿಗಳು ಹೀಗೊಂದುಪ್ರಯೋಗವನ್ನು ಮಾಡಿದರು.  ಎಲ್ಲ ಮಕ್ಕಳ ಮುಂದೆಯೂ  ಒಂದೊಂದು  ಮಿಠಾಯಿಯನ್ನು ಇಟ್ಟು, ಅದನ್ನು ೧೫ ನಿಮಿಷಗಳು ಕಳೆದ ಬಳಿಕ ತಿಂದರೆ ಎರಡು ಮಿಠಾಯಿಗಳನ್ನು ಕೊಡುವುದಾಗಿ  ಅವರಿಗೆ ತಿಳಿಸಿದರು. ಕೆಲವು ಮಕ್ಕಳುಎರಡು ಮಿಠಾಯಿಯ ಆಸೆಯಿಂದ, ಕಾದು, ಹೆಚ್ಚು ಲಾಭ ಪಡೆದರು. ಉಳಿದ ಮಕ್ಕಳುಕಾಯಲಾರದೆ, ತಕ್ಷಣ ಅದನ್ನು ತ್ವರಿತ ತೃಪ್ತಿಗಾಗಿಸಹನೆ ಇಲ್ಲದೆ ತಿಂದರು. ವರ್ಷಗಳು ಕಳೆದವು. ಮತ್ತೆ ಈ ಮಕ್ಕಳನ್ನು ಪರಿಶೀಲಿಸಲಾಯಿತು. ತಮ್ಮ ಕೈಗೆ ಬಂದಿದ್ದನ್ನು ಬಾಯಿಗೆ ಹಾಕದೆ,ತಾಳ್ಮೆಯಿಂದ ಇದ್ದ ಮಕ್ಕಳು ಇತರರಿಗಿಂತ ಭಾವನಾ ಪ್ರಚೋದನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವುಳ್ಳವರಾಗಿ ಬೆಳೆದಿದ್ದರು.ಶೈಕ್ಷಣಿಕ ಸಾಧನೆಗಳನ್ನು ಮಾಡಿ, ಕೆಟ್ಟ ಚಟಗಳಿಗೆ ತುತ್ತಾಗದ ಹಾಗೆ ಬೆಳೆದಿದ್ದರು. ಇಂದಿನ ಕಾಲದಲ್ಲಿ ಜಗತ್ತು ವೇಗದ ಗತಿಯಲ್ಲಿ ಸಾಗುತ್ತಿದೆ. ಅಂದುಕೊಂಡಿದ್ದು ತಕ್ಷಣಣ ನಡೆಯಬೇಕೆಂಬ ತವಕ. ತಾವಂದು ಕೊಂಡಿದ್ದಕ್ಕಿಂತ ಪರಿಣಾಮ ವಿರುದ್ಧವಾದರೆ ಸಹಿಸುವ ಧೃತಿಯಿಲ್ಲ. ಅನುಕೂಲವಾದ ಕಾಲಾವಕಾಶಕ್ಕೆ ಕಾಯುವ ತಾಳ್ಮೆಯಿಲ್ಲ. ದೊಡ್ದವರಾದ ನಮಗೇ ಈಗತಿಯಾದರೆ, ಇನ್ನು ಚಿಕ್ಕಮಕ್ಕಳ ಪಾಡು ಹೇಳತೀರದು. ಹೆಚ್ಚಾಗಿ ಈಗಿನ ಕಾಲದ ಮಕ್ಕಳಲ್ಲಿ ಅಸಹನೆ ಮತ್ತು ತ್ವರಿತ ತೃಪ್ತಿಯುಎದ್ದುಕಾಣುತ್ತಾ ಇದೆ. ಪೋಷಕರ ಸಮಯದ ಅಭಾವದಿಂದ ಮಕ್ಕಳ ನಡವಳಿಕೆ ಮತ್ತು ಮಾನಸಿಕ ಸ್ಥಿತಿಯ ಮೇಲೆ ಪರಿಣಾಮಆಗುತ್ತಿದೆ. ಗಗನಕ್ಕೆ ಹಾರುವ ಸಾಮರ್ಥ್ಯವನ್ನೂ ಬೆಳೆಸುತ್ತಿರುವ ಇಂದಿನ ಶಿಕ್ಷಣ ಪದ್ಧತಿಯು ಕೆಲವೊಮ್ಮೆ ವ್ಯಕ್ತಿತ್ವದ ಕೆಲವುಮುಖಗಳನ್ನು ಬೆಳೆಸುವ ಕೆಲಸದಲ್ಲಿ ಹಿಂದೆಬಿದ್ದಿದೆ. ಪ್ರಾಚೀನ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಆತ್ಮಗುಣಗಳಲ್ಲೊಂದಾದ ಸಹನಶೀಲತೆಯನ್ನು ಬೆಳೆಸುವ ವ್ಯವಸ್ಥೆ ಇತ್ತು. 

ಜೀವನದ ಪ್ರತಿ ಹೆಜ್ಜೆಯಲ್ಲೂ ನಮಗೆ ದ್ವಂದ್ವಗಳು ಎದುರಾಗುತ್ತವೆ. ಅದರಲ್ಲಿ ನಮಗೆ ಈ ಸದ್ಯದಲ್ಲಿ ಇಷ್ಟವಾಗದೆ ಹೋದರೂ,ದೀರ್ಘಕಾಲದಲ್ಲಿ ಯಾವುದು ಒಳಿತನ್ನು ಮಾಡುತ್ತದೋ ಅದನ್ನು ನಾವು ಸಹನೆಯಿಂದ ಆರಿಸಿಕೊಳ್ಳಬೇಕು. ಸುಖ-ದುಖ, ಉಷ್ಣ-ಶೀತ, ಇಷ್ಟ ಮತ್ತು ಅನಿಷ್ಟ ಘಟನೆಗಳನ್ನು ಸಮ ಭಾವದಿಂದ ಸ್ವೀಕರಿಸುವ ಮನಸ್ಸನ್ನು ಬೆಳೆಸಿಕೊಳ್ಳಬೇಕು. ಇದನ್ನು ತಪವೆಂದೂಅಷ್ಟಾಂಗಯೋಗದ ಒಂದು ಹೆಜ್ಜೆಯಾದ ನಿಯಮದಲ್ಲಿ ಅಂತರ್ಗತವಾಗಿರುವುದೆಂದೂ ಹೇಳುತ್ತಾರೆ. ಶ್ರೀರಾಮನು ಪಟ್ಟಾಭಿಷೇಕವನ್ನೂ ಮತ್ತು ನಾರುಮಡಿಯ ವನವಾಸವನ್ನೂ ಒಂದೇ ರೀತಿಯಾಗಿ ಭಾವಿಸಿ ಪ್ರಸನ್ನ ಆತ್ಮ-ಇಂದ್ರಿಯ-ಮನಸ್ಸುಗಳಿಂದ ಸ್ವೀಕರಿಸಿದ್ದು, ನಮಗೆ ಆದರ್ಶವಾಗಿರಬೇಕು. ಹೀಗೆ ರೂಢಿಸಿಕೊಳ್ಳುವುದರಿಂದ ಚಿತ್ತಚಾಂಚಲ್ಯ ಕಡಿಮೆಯಾಗಿ,ಯೋಗಮಾರ್ಗದ ಸುಷುಮ್ನಾ ನಾಡಿಯಲ್ಲಿ ಪ್ರಾಣವು ಸಾಗಿ ಪ್ರತಿ ಜೀವಿಯ ಹಕ್ಕಾದ ಆತ್ಮಸಾಕ್ಷಾತ್ಕಾರಕ್ಕೆ ಅನುವು ಮಾಡಿಕೊಡುತ್ತದೆ. ಹದಿನೆಂಟು ವರ್ಷವಾದ ಕೂಡಲೇ ಮತ ಚಲಾಯಿಸುವ ಹಕ್ಕು ಹೇಗೆ ಸಹಜವಾಗಿಯೇಬರುವುದೋ, ಹಾಗೆಯೇ ಮನುಷ್ಯನಾಗಿ ಹುಟ್ಟಿದ ಪ್ರತಿಜೀವಿಗೂ ಆತ್ಮದರ್ಶನ ಪಡೆಯುವ ಹಕ್ಕಿರುತ್ತದೆ ಎಂಬುದು ಶ್ರೀರಂಗಮಹಾಗುರುಗಳ ಉದ್ಘೋಷ. ಸಹನಶೀಲತೆ ಮೊದಲಾದ ಆತ್ಮಗುಣಗಳು ನಮ್ಮನ್ನು ಅತ್ತ ಕರೆದೊಯ್ಯಲು ಸಹಕಾರಿ.

ಸೂಚನೆ: 13/2/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

ಜೀವನದ ಮೌಲ್ಯಗಳು – ಇಂದಿನ ಚಿಂತನೆ

ಲೇಖಕರು; ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
 


ಮಾನವನ ನಿಸರ್ಗಾನ್ವೇಷಕ ಬುದ್ಧಿ ಇತರ ಜೀವಿಗಳು ನಿಸರ್ಗವಿಟ್ಟಂತೆಯೇ ಇದ್ದು ತಮ್ಮ ಜೀವನವನ್ನು ಮುಗಿಸುತ್ತವೆ. ಆದರೆ ಮಾನವನು ನಿಸರ್ಗವಿಟ್ಟಂತೆ ಬಾಳುವುದಷ್ಟೇ ಅಲ್ಲದೇ ನಿಸರ್ಗ ಕೊಟ್ಟ ಬಲವನ್ನವಲಂಬಿಸಿ ನಿಸರ್ಗದತ್ತ ಹುಡುಕುನೋಟವನ್ನು ಬೀರಿದ್ದಾನೆ. ನಿಸರ್ಗದಲ್ಲಿ ತನ್ನ ಬಾಳಿಗೆ ಒಳಿತು ಕೆಡಕುಗಳನ್ನು ತರುವ ಅಂಶಗಳಾವುವು ಎಂದೆಲ್ಲ ಅನ್ವೇಷಿಸಿ ಆ ಅರಿವನ್ನು ಪಡೆದು ತನ್ನ ಮುಂದಿನ ಪೀಳಿಗೆ ಹಸನಾದ ಬಾಳಾಟವನ್ನು ನಡೆಸಲಿ ಎಂಬ ಆಶಯದಿಂದ ಅದನ್ನು ಮುಂದೆ ನೀಡಿದ್ದಾನೆ. ನಿಸರ್ಗ ರಹಸ್ಯಗಳ ಆವಿಷ್ಕಾರದ ಜೊತೆಗೆ ತನ್ನ ಬಾಳಿನ ಕಡೆಗೂ ಹುಡುಕುನೋಟವನ್ನು ಹರಿಸದೇ ಬಿಟ್ಟಿಲ್ಲ. ತನ್ನ ಮೈ ಹೊರ ಒಳ ರಚನೆಗಳು, ಶರೀರಯಂತ್ರದ ಸಮಸ್ತ ಅವಯವಗಳ ಒಳಹೊರ ವಿನ್ಯಾಸಗಳ ರಹಸ್ಯವನ್ನು ಬಯಲಿಗೆ ಎಳೆದು ಅದರ ಕಾರ್ಯನಿರ್ವಹಣೆಯಬಗ್ಗೆ, ಕೆಟ್ಟಾಗ ಸರಿಪಡಿಸಿಕೊಳ್ಳುವ ಬಗ್ಗೆ ಅವನ ಅನ್ವೇಷಣೆಗಳ ಆಳ ಅಗಲಗಳು ಇಂದು ಬೆಳೆದಿರುವ ಆಧುನಿಕ ವೈದ್ಯವಿಜ್ಞಾನದಿಂದ ಸಾಬೀತಾಗುತ್ತಿದೆ. ಮನೋವಿಜ್ಞಾನದ ಬಗೆಗೂ ಅವನು ಅನ್ವೇಷಣೆ ನಡೆಸಿದ್ದಾನೆ. ಇಷ್ಟೆಲ್ಲ ಆದರೂ ಜೀವನವೆಂದರೇನು? ಅದು ಎಲ್ಲಿಂದ ಆರಂಭಗೊಂಡಿತು? ಅದರ ಬೆಲೆ ಏನು? ನೆಲೆ ಏನು? ಎಂಬ ನಿರ್ಣಯಕ್ಕೆ ಬಂದು ಅದರಂತೆ ತನ್ನ ಜೀವನವನ್ನು ಅಳವಡಿಸಿಕೊಳ್ಳುವ ಯೋಜನೆಯನ್ನು ನಿರೂಪಿಸಿದ್ದಾನೆಯೇ ಎಂದರೆ ಇದು ಪ್ರಶ್ನಾರ್ಹವಾಗಿಯೇ ಇದೆ.  

ಇಂದು ಜೀವನದಮೌಲ್ಯಗಳ ಬಗ್ಗೆ ಯುವಕರಲ್ಲಿ ಅಭಿಪ್ರಾಯ-
ಜೀವನದ ಮೌಲ್ಯಗಳ ಬಗ್ಗೆ ಇನ್ನೂ ಬೆಳೆಯುವ ವಯಸ್ಸಿನವರು ಏನಾದರೂ ಪ್ರಶ್ನೆಯನ್ನೆತ್ತಿದರೆ ಇವೊತ್ತು ಹಿರಿಯರಾದವರು ಹೇಳುವುದುಂಟು- ಈಗಲೇ ಈ ಪ್ರಶ್ನೆ ಏಕಪ್ಪಾ? ಇನ್ನೂ ಬಹಳಷ್ಟು ಸಾಧಿಸಬೇಕಾಗಿದೆ, ಸಂತೋಷ ಪಡಬೇಕಾಗಿದೆ, ಈ ಪ್ರಶ್ನೆ ಕಣ್ಣು ಕಾಣಿಸದಿದ್ದಾಗ, ಕಿವಿ ಕೇಳಿಸದಿದ್ದಾಗ ಕೈಕಾಲುಗಳಲ್ಲಿ ಶಕ್ತಿ ಕುಂಠಿತವಾದ ಇಳಿವಯಸ್ಸಿನಲ್ಲಿ ಯೋಚನೆ ಮಾಡಬಹುದು ಎಂದು ಹೇಳುವ ಕಾಲವಿದು. ನಮ್ಮ ಯುವಕರೇನಾದರೂ ಜೀವನ ಮೌಲ್ಯಗಳ ಬಗ್ಗೆ ಗಂಭೀರವಾದ ಚಿಂತನೆ ನಡೆಸಿದ್ದೇ ಆದರೆ ಅವರನ್ನು ಮನೋವಿಜ್ಞಾನಿಗಳ ಹತ್ತಿರ ಕರೆದುಕೊಂಡು ಹೋಗಿ ಹುಡುಗ ನಾರ್ಮಲ್ ಆಗಿಲ್ಲ ಡಾಕ್ಟರೇ ಎಂದು ಹೇಳುವ ಪರಿಸ್ಥಿತಿಯೂ ಇದೆ.

ಪಾಶ್ಚಾತ್ಯರ ದೃಷ್ಟಿ-
ಜೀವನ ನಡೆಸುವುದೇ ಇವತ್ತಿನ ಸ್ಪರ್ಧಾತ್ಮಕ ಸನ್ನಿವೇಶದಲ್ಲಿ ಕಷ್ಟವಾಗಿರುವಾಗ ಜೀವನ ಮೌಲ್ಯಗಳ ಬಗ್ಗೆ ಚಿಂತಿಸಲು ಸಮಯವೆಲ್ಲಿದೆ? ಹಾಗೇನಾದರೂ ಸಮಯ ಸಿಕ್ಕಿದರೆ, ಪಾಶ್ಚಾತ್ಯ ಚಿಂತಕರ ದೃಷ್ಟಿ ನಮಗೆ ತಯಾರಾಗಿ ಸಿಕ್ಕಿಬಿಡುತ್ತದೆ. ಕೇಳುವುದಕ್ಕೂ ಮೋಹಕ, ಆಚರಿಸುವುದಕ್ಕೂ ಬಹಳ ಸುಲಭ. ಅವರೆಲ್ಲ ಜೀವನದ ಬಗ್ಗೆ ಏನು ಆಲೋಚನೆ ಮಾಡಿದ್ದಾರೆ ನೋಡೋಣ. Let us eat drink and make merry- ಜೀವನವಿದ್ದಷ್ಟೂ ಅದನ್ನು ಮಜದಿಂದ ಕಳೆಯಬೇಕು. ತಿನ್ನು, ಕುಡಿ, ಆನಂದವಾಗಿರು. ಇನ್ನೊಂದು- " " Let us drink the life to lease" -ಜೀವನವನ್ನು ಪೂರ್ಣ ಚರಟವಾಗುವವರೆಗೂ ಅನುಭವಿಸಬೇಕು ಎಂದರೆ ಭೌತಿಕ ಸುಖಗಳೆಲ್ಲವನ್ನೂ ಜೀವಿತಕಾಲದಲ್ಲಿ ಅನುಭವಿಸಿಬಿಡಬೇಕು ಎನ್ನುತ್ತದೆ ಈ ಚಿಂತನೆ. ಹಾಗೆಯೇ Let us squeeze the lemon to the full ಎಂಬುದೊಂದು ಅಮೆರಿಕದ ಗಾಧೆ. ಇನ್ನು ಜೀವನದಲ್ಲಿ ಪರೋಪಕಾರ ಬುದ್ಧಿಯಿರುವುದೇ ಮೌಲ್ಯ ಎಂದು ಹೆಸರಾಂತ ವಿಜ್ಞಾನಿ ಐನ್ಸ್ಟೀನರ ಮಾತು. ಇದಲ್ಲದೇ aesthetic, moral, religious, scientific, economic, political, judiciary, traditional ಎಂದು ಅನ್ಯಾನ್ಯ ವಿಷಯಗಳ ಬಗ್ಗೆ ಮೌಲ್ಯಚಿಂತನೆಯೇ ಒಂದು ದೊಡ್ಡ ವಿಚಾರಧಾರೆಯಾಗಿ ಬೆಳೆದಿದೆ. ಹೀಗೆ ಪರೋಪಕಾರ, ಸೌಂದರ್ಯ ಪ್ರಜ್ಞೆ, ನೀತಿವಂತಿಕೆ ಇವೆಲ್ಲವೂ ಜೀವನದ ಮೌಲ್ಯಗಳು ಎಂದು ಅನೇಕ ಮಹನೀಯರು ಅಭಿಪ್ರಾಯ ಪಟ್ಟಿದ್ದಾರೆ.

ನಮ್ಮ ದೇಶದ ಚಾರುವಾಕ ಸಿದ್ಧಾಂತ-
" ಋಣಂ ಕೃತ್ವಾ ಘೃತಂ ಪಿಬೇತ್" ಸಾಲ ಮಾಡಿಯಾದರೂ ತುಪ್ಪ ತಿನ್ನು, ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ ದೇಹದ ಜೊತೆಗೆ ಜೀವನವೂ ಮುಗಿಯುತ್ತದೆ. ಸುಟ್ಟು ಹೋದ ಮೇಲೆ ಮತ್ತೆ ಬರುವುದೆಂತು? ಅದರಿಂದಲೇ ಆದಷ್ಟೂ ಜೀವನದಲ್ಲಿ ಸುಖವನ್ನನುಭವಿಸಿ. ಬೇರೆ ಏನೂ ಮಾಡಬೇಕಾಗಿಲ್ಲ ಎಂಬುದು ಚಾರುವಾಕ ಸಿದ್ಧಾಂತ. ಚಾರು ವಾಕ ಎಂದರೆ ಚೆನ್ನಾಗಿ ಮಾತನಾಡುವವರು. ಕೇಳಲು ಬಹಳ ಚೆನ್ನಾಗಿರುತ್ತದೆ. ಏನಾದರೂ ಮಾಡಬೇಕು ಎಂದಾಗ ಸಮಸ್ಯೆ ಬರುತ್ತದೆ. ಏನೂ ಮಾಡಬೇಕಾಗಿಲ್ಲ ಮಜಾ ಮಾಡಿ ಕಳೆದುಬಿಡಿ ಎಂದರೆ ಯಾರಿಗೆ ಇಷ್ಟವಾಗುವುದಿಲ್ಲ!

ಸುಖವಾಗಿರಬೇಕು ಎಂಬುದು ಎಲ್ಲರ ಆಶಯ:
ಇವರೆಲ್ಲರೂ ಒಂದು ವಿಷಯವನ್ನು common ಆಗಿ ಹೇಳುತ್ತಿದ್ದಾರೆ. ಜೀವನದಲ್ಲಿ ಆನಂದವಾಗಿ ಇರಬೇಕು ಎಂಬುದಾಗಿ. ಆನಂದ ಎಂದರೇನು ಎಂಬಬಗ್ಗೆ  ಗೊಂದಲವಿದೆ. ಜೀವನದಲ್ಲಿ ಆರ್ಥಿಕವಾಗಿ ಅತ್ಯಂತ ಮುಂದುವರಿದ ಎಲ್ಲಾ ಬಗೆಯ ಜೀವನ ಸೌಕರ್ಯಗಳನ್ನೂ ಹೊಂದಿರುವ ಅಮೆರಿಕ, ಯೂರೋಪು ದೇಶದ ಜನರನ್ನು ನೀವು ನೆಮ್ಮದಿಯಿಂದಿದ್ದೀರಾ ಎಂದು ಕೇಳಿದರೆ ಅವರು ಏನೆನ್ನುತ್ತಾರೆ? ನಮಗೆ ಎಲ್ಲವೂ ಇದೆ ಆದರೆ ಜೀವನದಲ್ಲಿ ನಾವು ಸಂತೋಷವಾಗಿಲ್ಲ ಎನ್ನುತ್ತಾರೆ. ಮಾತ್ರವಲ್ಲ, ಜೀವನಕ್ಕೆ ಅವರವರು ಅಂಟಿಸಿದ ಮೌಲ್ಯಗಳಾಯಿತು ಇವೆಲ್ಲವೂ. ಜೀವನದ್ದೇ ಆದ ಮೌಲ್ಯಗಳೇನು? ಅದನ್ನು ನಮ್ಮ ಪ್ರಾಚೀನ ಮಹರ್ಷಿಗಳು ಹೇಗೆ ಕಂಡಿದ್ದಾರೆ? ಅದು ಜೀವನವನ್ನು ಅನುಭವಿಸಲು ಬರದ ನಿರಾಶಾವಾದಿಗಳ ವಿಷಯವೇ? ಇಂದಿಗೂ ಪ್ರಸ್ತುತವಾಗಬಲ್ಲ ವಿಷಯವೇನಾದರೂ ಅದರಲ್ಲಿದೆಯೇ ಎಂಬುದನ್ನು ಆಲೋಚಿಸಬೇಕಾಗಿದೆ.  

ಪೂರ್ಣ ಜೀವನ –ಜೀವನದ ಧ್ಯೇಯ                                   
ಜೀವನದ ಪರಿಚಯವಿಲ್ಲದೇ ಮೌಲ್ಯ ನಿರ್ಧಾರವಾಗದು:
ಮೌಲ್ಯವೆಂದರೆ ಬೆಲೆ. ಯಾವುದನ್ನಾದರೂ ಅದಕ್ಕೆ ನಿಶ್ಚಿತವಾದ ಮೌಲ್ಯವನ್ನು ಕೊಟ್ಟೇ ಕೊಂಡುಕೊಳ್ಳಬೇಕಾಗುತ್ತದೆ. ಯಾವ ವಿಷಯದ ಮೌಲ್ಯ ನಿರ್ಣಯ ಮಾಡಬೇಕಾದರೂ ನಮಗೆ ಆ ವಿಷಯದ ಪರಿಚಯವಿರಬೇಕಾಗುತ್ತದೆ. ನಮ್ಮ ಜೀವನದ ಮೌಲ್ಯವೇನು ಎಂದು ನಿರ್ಣಯಿಸಬೇಕಾದರೂ ನಮ್ಮ ಬಗ್ಗೆ ನಮಗೆ ಪರಿಚಯವಿರಬೇಕಾಗುತ್ತದೆ. ನಾವು, ನೀವು ಎಂದೆಲ್ಲ ಈಗ ನಾವೆಂದುಕೊಂಡಂತೆ ವೈದ್ಯನೊಬ್ಬ ಅಂದುಕೊಂಡು ಅಷ್ಟೇ ಪರಿಚಯವಿಟ್ಟುಕೊಂಡರೆ ಸಾಕಾಗುವುದಿಲ್ಲ. ಆಗ ಆ ವೈದ್ಯನಿಂದ ನಮ್ಮ ಖಾಯಿಲೆ ವಾಸಿ ಮಾಡಲಾಗದು. ಅಲ್ಲಿ ಅವನಿಗೆ ಈ ಶರೀರದ ಆಮೂಲಾಗ್ರ ಪರಿಚಯವಿದ್ದರೆ, ಇದರ ಸಹಜ ಸ್ಥಿತಿ ಏನು? ಕೆಟ್ಟಿರುವುದೆಲ್ಲಿ? ಸರಿಮಾಡಬೇಕಾದುದೇನು? ಹೇಗೆ? ಎಂಬೆಲ್ಲ ಪರಿಚಯ ಬೇಕಾಗುತ್ತದೆ. ಆಗ ವೈದ್ಯನು ಮಾಡುವ ಚಿಕಿತ್ಸೆಗೆ ಬೆಲೆಯಿರುತ್ತದೆ. ಒಂದು ಬಸ್ ಕೆಟ್ಟರೆ ಪಾತ್ರೆ ಕಲಾಯಿ ಹಾಕುವವನನ್ನು ಕರೆತಂದರೆ ಅವನೇನೂ ಮಾಡಲಾರ. ಅದರದರ ಮರ್ಮವರಿತವರೇ ಬೇಕಾಗುತ್ತದೆ. ಒಂದು ಮಗುವಿಗೆ ಬೀಜವನ್ನು ಕೊಟ್ಟರೆ ಅದನ್ನೂ ಕಲ್ಲುಚೂರಿನಂತೆಯೇ ಭಾವಿಸುತ್ತದೆ. ಆದರೆ ವ್ಯವಸಾಯಿಯು ಅದರಲ್ಲಿ ಅಡಗಿರುವ ಮಹಾ ವೃಕ್ಷವನ್ನೇ ನೋಡುತ್ತಾನೆ. ತೋಟ ಮಾಡುವವನಿಗೆ ತೋಟವೆಂದರೇನು ಎಂಬುದರ ಪರಿಚಯ ಬೇಕಾಗುತ್ತದೆ. ಬರಿಯ ಕಲ್ಲು ಮಣ್ಣುಗಳನ್ನೇ ತೋಟ ಎಂದುಕೊಂಡರೆ ಆಗದು. ತೋಟದಲ್ಲಿ ಕಲ್ಲು ಮಣ್ಣುಗಳಿದ್ದರೂ ತೋಟವೆಂದರೆ ಬರಿಯ ಕಲ್ಲುಮಣ್ಣಲ್ಲ. ಅದು ಫಲವತ್ತರವಾಗಿದೆ. ಫಲದಿಂದ ಹೊರಟಿದೆ. ಫಲದಲ್ಲಿಯೇ ನಿಲ್ಲುತ್ತದೆ. ಮೊದಲೂ ಫಲ,ಕಡೆಯಲ್ಲೂ ಫಲ. ಇದರ ಪರಿಚಯ ತೋಟ ಮಾಡುವವನಿಗೆ ಅವಶ್ಯ. ಇಲ್ಲವಾದರೆ ಅವನು ಏನು ಮಾಡಬೇಕೆಂಬುದೇ ನಿಶ್ಚಯವಾಗದು. ಹಾಗೆಯೇ ಜೀವನದ ಬಗೆಗೂ ಸಹ. ಅದರ ಸಮಗ್ರ ಪರಿಚಯವಿಲ್ಲದವರು ಜೀವನಕ್ಕೇನೂ ಅರ್ಥವಿಲ್ಲವೆಂದೇ ಹೇಳಬಹುದು. ಅಥವಾ ತಮಗೆ ತೋರಿದ ಅರ್ಥಗಳನ್ನು ಕಲ್ಪಿಸಬಹುದು. ಆದರೆ ಸಮಗ್ರಜೀವನ ನೋಟದಿಂದ ಶ್ರೀರಂಗಮಹಾಗುರುಗಳು ಜೀವನಕ್ಕೆ ಅರ್ಥವಷ್ಟೇ ಅಲ್ಲಪ್ಪಾ, ಪರಮಾರ್ಥವಿದೆ ಎಂದು ನೆನಪಿಸುತ್ತಿದ್ದರು.

ಜೀವನದ ಮೌಲ್ಯವನ್ನು ಯಾರು ನಿರ್ಧರಿಸಬೇಕು ?

ಒಂದು ಮಾವಿನವೃಕ್ಷ ಬೀಜದಿಂದ ಹೊರಟಿದೆ. ಮತ್ತೆ ಬೀಜದಲ್ಲೇ ನಿಲ್ಲುತ್ತದೆ. ವೃಕ್ಷಜೀವನದ ಮೌಲ್ಯವೇನು? ಎಂದರೆ ಬೀಜದಿಂದ ಹೊರಟು ಮೊಳಕೆಯಾಗಿ, ಕಾಂಡವಾಗಿ, ಕೊಂಬೆಗಳಾಗಿ, ಎಲೆಯಾಗಿ, ಕಾಯಿಯಾಗಿ, ಹಣ್ಣಾಗಿ, ಮತ್ತೆ ಬೀಜವಾಗುವುದೇ ವೃಕ್ಷದ ಸಹಜವಾದ ನಡೆ. ಹಾಗಿದ್ದಾಗ ಆ ವೃಕ್ಷದಿಂದ ನಾವು ಪ್ರಯೋಜನವನ್ನು ಪಡೆಯಬಹುದು. ಅದು ಹಾಗಿರಬೇಕಾದರೆ ಅದಕ್ಕೆ ಬೇಕಾದ ಮೌಲ್ಯವೆಂದರೆ ಕೃಷಿ ಮಾಡುವುದು. ಈ ಮೌಲ್ಯವನ್ನೂ ಮಾವಿನ ಬೀಜವೇ ನಿರ್ಧರಿಸುತ್ತದೆ. ವೃಕ್ಷ ಹುಟ್ಟಿದ ನಂತರ ಯಾರೂ ಅದು ಹೀಗೆ ಇರಬೇಕು ಎಂದು ಅಂಟಿಸಿದ ಮೌಲ್ಯವಲ್ಲ ಅದು. ವೃಕ್ಷ ವ್ಯವಸಾಯ ಬಲ್ಲವರಿಗೆಲ್ಲ ಗೊತ್ತಾಗಿರುವ ವಿಷಯ.ಹಾಗೆಯೇ ಜೀವನದ ವಿಷಯವೂ ಸಹ. ಜೀವನದ ಸಮಗ್ರ ಪರಿಚಯವನ್ನು ಮಾಡಿಕೊಂಡು ಸರ್ವಾಂಗ ಸುಂದರವಾಗಿ ಜೀವನವನ್ನು ನಡೆಸಿದವರೇ ಜೀವನಮೌಲ್ಯಗಳ ಬಗ್ಗೆ ಹೇಳಲು ಸಮರ್ಥರು. ಋಷಿಗಳ ಬಗ್ಗೆ ಬಗ್ಗೆ ಶಾಸ್ತ್ರದಲ್ಲಿ ಒಂದು ಮಾತಿದೆ. " ಫಲ ಮೂಲಾಶನಾಃ ದಾಂತಾಃ" ಎಂಬುದಾಗಿ. ಎಲ್ಲರೂ ಅವರು ಗಡ್ಡೆ ಗೆಣಸುಗಳನ್ನು ತಿಂದು ಬದುಕುತ್ತಿದ್ದವರು ಎಂದು ಬುದ್ಧಿಗೆ ಹೆಚ್ಚು ಶ್ರಮ ಕೊಡದೇ ವ್ಯಾಖ್ಯಾನ ಮಾಡಿಬಿಡುತ್ತಾರೆ. ಆದರೆ ಮಹರ್ಷಿ ಹೃದಯ ವೇದ್ಯರಾದ ಶ್ರೀರಂಗ ಮಹಾಗುರುಗಳ ವಿವರಣೆ ಹೀಗಿತ್ತು- "ಅವರು ಸೃಷ್ಟಿಯ ಮೂಲ ಮತ್ತು ಸೃಷ್ಟಿಯ ಫಲ ಈ ಎರಡನ್ನೂ ಗುರುತಿಟ್ಟುಕೊಂಡು ಅದರಂತೆ ತಮ್ಮ ಜೀವನವನ್ನು ನಡೆಸಿದವರು". ಸೃಷ್ಟಿಯ ಮೂಲವೂ ಭಗವಂತನೇ, ಅದರ ಫಲವೂ ಭಗವಂತನೇ. ವೃಕ್ಷಮೂಲವೂ ಬೀಜವೇ. ಫಲವೂ ಬೀಜವೇ. ಜೀವನ ವೃತ್ತದ ವೃತ್ತಿ ಮತ್ತೆ ಆರಂಭದ ಬಿಂದುವನ್ನು ಮುಟ್ಟಿದಾಗಲೇ ವೃತ್ತಾಂತವಾಗುತ್ತದೆ. ಮಾತ್ರವಲ್ಲ ಸದ್ವೃತ್ತವಾಗುತ್ತದೆ. ಅದೇ ಜೀವನದ ಮಹಾ ಮೌಲ್ಯ ಎಂಬುದು ನಮ್ಮ ಮಹರ್ಷಿಗಳ ಸ್ಪಷ್ಟ ಅಭಿಪ್ರಾಯವಾಗಿತ್ತು. ಹಾಗೆ ಜೀವನ ವೃತ್ತವನ್ನು ಪೂರ್ಣ ಮಾಡಲು ಜೀವನವನ್ನು ತೆತ್ತವರೇ ನಮ್ಮ ಮಹರ್ಷಿಗಳು. ಅವರು ನಾವು ಕಾಣುವ ಜಾಗ್ರತ್, ಸ್ವಪ್ನ, ಸುಷುಪ್ತಿ -ಈ ಮೂರು ಸ್ಥಿತಿಗಳಿಗೂ ಕಾರಣವಾದ ಪರಮ ಆನಂದದ ಧಾಮವಾದ ತುರೀಯ- ನಾಲ್ಕನೆಯ ಸ್ಥಿತಿ ಒಂದಿದೆ. ಅದು ಜೀವಿಯ ಸಹಜ ಸ್ಥಿತಿ. ಅದನ್ನು ಪಡೆಯುವುದೇ ಜೀವನಕ್ಕೆ ಸಹಜವಾದ ಮಹಾ ಮೌಲ್ಯ ಎಂದು ಸಾರಿದರು. ಅವರಿವರು ಹೇಳಿದ್ದನ್ನು ಹೇಳದೇ, ತಮ್ಮದೇ ಟಿಪ್ಪಣಿಯನ್ನಂಟಿಸದೇ ಜೀವನದಲ್ಲಿ ಆನಂದವನ್ನು ಹುಡುಕುತ್ತಾ ಹಿಂದೆ ಹಿಂದಕ್ಕೆ ಸಾಗಿದಾಗ, ಅಲ್ಲಿ ಜೀವಮೂಲದಲ್ಲಿ ಬೆಳಗುತ್ತಿರುವ, ತಾನೇತಾನಾಗಿರುವ, ನಿತ್ಯಾನಂದದಾಯಿಯಾದ, ಆನಂದಕ್ಕೆ ವಿಷಯವೇ ಆದ ಪರಮಾತ್ಮ ಜ್ಯೊತಿಯನ್ನು ತಾವೇ ದರ್ಶನ ಮಾಡಿ ಅದರ ತಂಪಾದ, ಸೌಖ್ಯವನ್ನುಂಡು ಜೀವಲೋಕವೆಲ್ಲವೂ ಅದನ್ನು ಅನುಭವಿಸುವಂತಾಗಬೇಕು ಎಂದು ಪರಮ ಕರುಣೆಯಿಂದ ಅದೇ ಎಲ್ಲ ಜೀವಿಗಳ ಜೀವಿತದ ಮಹಾ ಮೌಲ್ಯ ಎಂದು ಸಾರಿದರು.

ಪುರುಷಾರ್ಥಗಳ ಹಿನ್ನೆಲೆ- ಪೂರ್ಣಜೀವನ.:
ಇನ್ನು ಜೀವಿಯು ಅಂತಹ ನಾಲ್ಕನೆಯ ಸ್ಥಿತಿಯನ್ನೂ ಪಡೆದು ಜೀವನದಲ್ಲಿ ಅತ್ಯಂತಸುಖವಾಗಿರಲು ಏನು ಮಾಡಬೇಕು? ಇಲ್ಲಿ ಪುರುಷಾರ್ಥಮಯವಾದ ಜೀವನದ ಉಪಾಯವನ್ನು ಅವರು ತಂದುಕೊಟ್ಟಿದ್ದಾರೆ. ಪುರುಷಾರ್ಥಗಳು ಎಂದರೇನು? ಅದಕ್ಕಿಂತ ಮುಂಚೆ ಪುರುಷ ಎಂದರೆ ಯಾರು? ಗಂಡಸರಿಗೆ ಪುರುಷ ಎಂದಿರುವುದಲ್ಲ. " ಪುರಿ ಶೇತೇ ಇತಿ ಪುರುಷಃ " ನಮ್ಮ ದೇಹವೆಂಬ ಪುರದಲ್ಲಿ ವಾಸಮಾಡುವ ಜೀವನಿಗೇ ಪುರುಷ ಎನ್ನುವುದು. ಅಂತಹ ಪುರುಷನ ಸಹಜವಾದ ಪ್ರಯೋಜನಗಳಿಗೆ, ಸಾಧಿಸಬೇಕಾದ ಲಕ್ಷ್ಯಗಳಿಗೆ ಪುರುಷಾರ್ಥ ಎಂದು ಹೆಸರು. ಗಂಡಸರು, ಹೆಂಗಸರು ಎಲ್ಲರಿಗೂ ಜೀವನದ ಸಹಜವಾದ ಲಕ್ಷ್ಯಗಳೇ ಪುರುಷಾರ್ಥಗಳು. ಪೂರ್ಣಜೀವನವೇ ಪುರುಷನ ಲಕ್ಷ್ಯ. ಪೂರ್ಣ ಜೀವನ ಎಂದರೆ ಜೀವಿತಕಾಲದಲ್ಲಿ ಪೂರ್ಣತೆಯನ್ನು ಪಡೆಯುವುದೇ ಆಗಿದೆ. ಹಿಂದೆ ಗಮನಿಸಿದಂತೆ ಒಂದು ಮಾವಿನ ವೃಕ್ಷ ಬೀಜದಿಂದ ಆರಂಭಗೊಂಡು ತನ್ನ ಜೀವನವೃತ್ತವನ್ನು ಮತ್ತೆ ಮಾವಿನ ಬೀಜದಲ್ಲಿಯೇ ನಿಲ್ಲಿಸುತ್ತದೆ. ಹಾಗಾದಾಗ ಮಾವಿನ ವೃಕ್ಷದ ಜೀವನ ಪೂರ್ಣ. ಒಂದು ರೈಲನ್ನು ತಯಾರಿಸಿದಾಗ ಅದು ಏತಕ್ಕಾಗಿ ತಯಾರಿಸಲ್ಪಟ್ಟಿದೆ ಎಂದರೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಮ್ಮನ್ನು ಒಯ್ಯಲು ಅಥವಾ ನಿಶ್ಚಿತವಾದ ಗಮ್ಯಸ್ಥಾನಕ್ಕೆ ತಲುಪಲು ಎನ್ನಬೇಕಾಗುತ್ತದೆ. ಹಾಗಿಲ್ಲದೇ ಅದರ ಸೀಟುಗಳೆಲ್ಲವೂ ಚೆನ್ನಾಗಿದೆ. AC ವ್ಯವಸ್ಥೆ ಇದೆ. ಎಲ್ಲವೂ ಇದೆ. ಆದರೆ ನಿಂತ ಜಾಗದಿಂದ ಚಲಿಸುವುದಿಲ್ಲ. ಬಹಳ ಕಾಲದಿಂದ ಈ ರೈಲು ಇದೆ ಎಂದರೆ ಅದರಿಂದ ಏನೂ ಪ್ರಯೋಜನವಿಲ್ಲ. ಅದನ್ನು ತಯಾರಿಸಿದುದರ ಉದ್ದೇಶ ಪೂರ್ಣವಾಗಲಿಲ್ಲ ಎನ್ನಬೇಕಾಗುತ್ತದೆ. ಎಂದೇ ಬದುಕುವ ಸಮಯ ಪೂರ್ಣತೆಯ ಅಳತೆಗೋಲಾಗುವುದಿಲ್ಲ. ಬದುಕಿನ ಸಹಜವಾದ ಲಕ್ಷ್ಯಗಳನ್ನು ಸಾಧಿಸಿದಾಗ ಮಾತ್ರ ಜೀವನ ಪೂರ್ಣವಾಗುತ್ತದೆ. ಈ ಸಹಜವಾದ ಲಕ್ಷ್ಯಗಳೇ ಪುರುಷಾರ್ಥಗಳು. ಹಾಗೆಯೇ ನಮ್ಮ ಜೀವ ಮೂಲದಲ್ಲಿ ಬೆಳಗುತ್ತಿರುವ ಪುರುಷನೊಬ್ಬನಿದ್ದಾನೆ. ಅವನೇ ಈ ದೇಹವಿಶ್ವದ ಮತ್ತು ಹೊರವಿಶ್ವದ ಯಜಮಾನ. ಅವನು ತನ್ನ ಪ್ರಯೋಜನಕ್ಕಾಗಿಯೇ ಈ ದೇಹವನ್ನು ಅದರ ಅಂಗೊಪಾಂಗಗಳೊಂದಿಗೆ ಸೃಷ್ಟಿಸಿಕೊಂಡಿದ್ದಾನೆ. ಅವನ ಪ್ರಯೋಜನಕ್ಕಾಗಿ, ಆ ಪರಮ ಪುರುಷನ ಆಶಯದಂತೆ ಜೀವನವನ್ನಿಟ್ಟುಕೊಂಡರೆ ಅದು ಪೂರ್ಣಜೀವನವಾಗುತ್ತದೆ, ಪುರುಷಾರ್ಥವಾಗುತ್ತದೆ. ಹೀಗೆ ಪುರುಷಾರ್ಥಮಯವಾದ ಜೀವನ ನಡೆಸುವುದೇ ಜೀವನದ ಮಹಾ ಮೌಲ್ಯ ಎಂದು ಅಂತಹ ಜೀವನವನ್ನು ನಡೆಸಿದ ನಮ್ಮ ಮಹರ್ಷಿಗಳು ಸಾರಿದರು.  

ಚತುರ್ವಿಧ ಪುರುಷಾರ್ಥಗಳು-ಜೀವನದ ಮಹಾ ಮೌಲ್ಯಗಳು 
ನಮ್ಮ ದೇಹವೃಕ್ಷ- ಮೇಲ್ಬೇರು, ಕೆಳಕೊಂಬೆ:
ಈ ನಮ್ಮ ದೇಹರಚನೆಯಲ್ಲಿ ಮೇಲ್ಬೇರು ಕೆಳ ಕೊಂಬೆಗಳಾಗಿ ವಿಸ್ತಾರವಿದೆ. ಮೇಲಿನ ಜ್ಞಾನದ ಆಶಯವೇ ಕೆಳಗೆಲ್ಲವೂ ಹರಿದು ಮತ್ತೆ ಎಲ್ಲವೂ ಮೇಲೆ ಲಯವಾಗುವ ರೀತಿಯಲ್ಲೇ ನಮ್ಮ ಶರೀರ ರಚನೆಯಿದೆ. ಈ ರಚನೆಯಲ್ಲಿಯೇ ನಾವು ಪರಿಪೂರ್ಣವಾದ ಬ್ರಹ್ಮಾನಂದವನ್ನು ಅನುಭವಿಸುವ ಯೋಗ್ಯತೆಯನ್ನು ಕೊಟ್ಟೇ ಭಗವಂತ ನಮ್ಮನ್ನು ಕಳುಹಿಸಿದ್ದಾನೆ. ಇದನ್ನು ಅರ್ಥಮಾಡಿಕೊಂಡವರೇ ವೇದವಿದರಾಗುತ್ತಾರೆ ಎನ್ನುತ್ತಾನೆ ಶ್ರೀಕೃಷ್ಣ. ಅಂದರೆ ಈ ಜೀವದೊಡಗಿನ ದೇಹ ವೃಕ್ಷವನ್ನು ಅರ್ಥಮಾಡಿಕೊಂಡವರೇ ಜೀವನದ ಮೌಲ್ಯಗಳ ಬಗ್ಗೆ ಹೇಳಲು ಸಮರ್ಥರು. ಹಾಗೆ ಇದನ್ನು ಅರ್ಥಮಾಡಿಕೊಂಡು ಇದರ ಸಂಪೂರ್ಣ ಉಪಯೋಗವನ್ನು ಈ ಜೀವಿತದಲ್ಲಿ ಮಾಡಿಕೊಳ್ಳಲು ಅನುವಾಗಲೆಂದೇ ಮಹರ್ಷಿಗಳು ಪುರುಷಾರ್ಥಮಯ ಜೀವನ ವ್ಯವಸ್ಥೆಯನ್ನು ತಂದರು. ಈಗ ನಾವು ಈ ಶರೀರವನ್ನು ಕೇವಲ ಭೌತಿಕ ಸುಖಗಳಿಗಾಗಿ ಬಳಸಿಕೊಂಡು ಜ್ಞಾನದ ಭಾಗವನ್ನು ಸಂಪೂರ್ಣ ಮರೆತಿರುವುದರಿಂದಲೇ ನಾವೀಗಿರುವ ಸ್ಥಿತಿಗೆ ಬಂದಿದ್ದೇವೆ.  
ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಹರ್ಷಿಗಳ ಚಿಂತನೆ ನಮ್ಮ ಬದುಕಿಗೆ ದಾರಿದೀಪವಾಗುತ್ತದೆ. ಅವರ ಅಭಿಪ್ರಾಯದಂತೆ, ಪಶುಗಳಂತಾಗದೇ ಪಶುಪತಿಯನ್ನವಲಂಭಿಸಿ ಅವನ ಸಂಕಲ್ಪದಂತೆ ನಡೆಯುವವರೇ ಪುರುಷರಾಗುತ್ತಾರೆ. ಅವನ ಸಂಕಲ್ಪವನ್ನು ಮರೆತಾಗ ಜೀವನಕ್ಕೆ ವಿಧವಿಧವಾದ ಅರ್ಥಗಳನ್ನು ಕಲ್ಪಿಸುತ್ತೇವೆ. ನಮ್ಮದೇ ಆದ ಗುರಿಗಳನ್ನಿಟ್ಟುಕೊಳ್ಳುತ್ತೇವೆ. ಹಣಸಂಪಾದನೆಯ ಗುರಿ, ದೊಡ್ದ ಆಟಗಾರನಾಗುವ ಗುರಿ, ಡಾಕ್ಟರು, ಇಂಜಿನಿಯರ್ ಹೀಗೆ ಬೆಳೆಯುತ್ತದೆ ಭೌತಿಕ ಗುರಿಗಳ ಪಟ್ಟಿ. ನಾವೀಗ ಇಂತಹ ಸಣ್ಣ ಸಣ್ಣ ಗುರಿಗಳಿಗೆ ಪುರುಷಾರ್ಥವೆನ್ನದೇ, ಮಹರ್ಷಿಪ್ರಣೀತವಾದ ಪುರುಷಾರ್ಥಗಳ ಬಗ್ಗೆ ಗಮನ ಹರಿಸೋಣ. ಅಂತಹ ಪುರುಷಾರ್ಥಗಳು ಯಾವುವು? ಅದನ್ನು ಧರ್ಮಃ, ಅರ್ಥಃ, ಕಾಮಃ, ಮೋಕ್ಷಃ ಎಂದು ಅವರು ಗುರುತಿಸಿದರು.

ಧರ್ಮ
ನಮಗೆ ಧರ್ಮವೆಂದೊಡನೆ- ಹಿಂದೂ, ಕ್ರೈಸ್ತ  ಇಸ್ಲಾಂ ಧರ್ಮವೆಂದುಕೊಂಡು ಅಭ್ಯಾಸವಾಗಿಬಿಟ್ಟಿದೆ. ಮಾತ್ರವಲ್ಲ ಹೊರ ಆಚರಣೆಗಳನ್ನು ಮಾತ್ರ ಧರ್ಮವೆಂದುಕೊಂಡುಬಿಟ್ಟಿದ್ದೇವೆ. ಆದರೆ ಮಹರ್ಷಿಗಳು ಗುರುತಿಸಿದ ಧರ್ಮ ಯಾವುದು?
ಧಾರಣಾತ್ ಧರ್ಮ ಇತ್ಯಾಹುಃ ಯಾವುದು ಎಲ್ಲವನ್ನೂ ಧರಿಸಿದೆಯೋ ಅದನ್ನೇ ಧರ್ಮ ಎಂದರು.  ಮೂಲದಲ್ಲಿ ಆ ಪರಮ ಚೈತನ್ಯವೇ ಈ ಜೀವವನ್ನು ಧರಿಸಿದೆ. ಎಂದೇ ಆ ಪರಮಾತ್ಮನೇ ಮೊದಲ ಧರ್ಮ. ಅವನು ಸರ್ವವ್ಯಾಪಿಯಾಗಿ ನಮ್ಮಲ್ಲಿ ಹರಿಯಲು ನಮ್ಮ ಇಂದ್ರಿಯ ಮನೋಬುದ್ಧಿಗಳೆಲ್ಲದರಲ್ಲೂ ಅದರದರದ್ದೇ ಆದ ಸ್ಥಿತಿ ವಿಶೇಷಗಳಿವೆ. ಅಂತಹ ಸ್ಥಿತಿ ವಿಶೇಷಗಳೆಲ್ಲವೂ ಧರ್ಮವೇ ಆಗುತ್ತದೆ. ಉದಾಹರಣೆಗೆ ಕಣ್ಣು ನೋಡುವ ಧರ್ಮವನ್ನಿಟ್ಟುಕೊಂದಿರುವುದರಿಂದಲೇ ಕಣ್ಣು ಎನ್ನಿಸಿಕೊಂಡಿದೆ. ನೋಡುವಿಕೆ ಕಣ್ಣಿನ ಧರ್ಮ ಅದರಿಂದ ಕಣ್ಣು ಧರಿಸಲ್ಪಟ್ಟಿದೆ. ಹಾಗೆಯೇ ಎಲ್ಲ ಇಂದ್ರಿಯಗಳೂ ಸಹ. ಹಾಗಾದರೆ ತನ್ನ ಮುಂದಿನ ವಸ್ತುವಿನ ರೂಪಗ್ರಹಣ ಮಾಡುವಂತಿದ್ದರೆ ಕಣ್ಣಿನ ಧರ್ಮ ಸರಿಯಾಗಿದೆ ಎಂದು ನಮ್ಮ ಮಟ್ಟಿಗೆ ನಾವು ಹೇಳಬಹುದು. ಆದರೆ ಕಣ್ಣಿನ ಧರ್ಮವನ್ನು ಪೂರ್ಣ ಸರಿಯಾಗಿಟ್ಟುಕೊಂಡು ಅದರಿಂದ ಒಳಗೆ ಬೆಳಗುವ ಪರಮಾತ್ಮ ಜ್ಯೋತಿಯನ್ನೂ ಕಂಡು ಅನುಭವಿಸುವಂತಿದ್ದರೆ ಕಣ್ಣು ತನ್ನ ಸಹಜವಾದ ಧರ್ಮದೊಂದಿಗಿದೆ ಎನ್ನಬಹುದು. ಎಂದು ಅದನ್ನು ಹಾಗೆ ಅನುಭವಿಸಿದವರ ಮಾತು. ದೇವಕಿ ದೇವಿಯು ಕೃಷ್ಣನ ಜನನದ ಮೊದಲು ಅವನ ದರ್ಶನವಾದಾಗ ಅವಳ ಕಣ್ಣುಗಳು ಸಾಕ್ಷಾತ್ ಒಳಬೆಳಗುವ ಆಧ್ಯಾತ್ಮ ಜ್ಯೋತಿಯ ದರ್ಶನವನ್ನೇ ಮಾಡಿದವು ಎಂದು ಶ್ರೀಮದ್ಭಾಗವತ ಅಪ್ಪಣೆ ಕೊಡಿಸುತ್ತದೆ. ಹೀಗೆ ದೇವಕಿಯಂತೆ ಕಣ್ಣನ್ನಿಟ್ಟುಕೊಳ್ಳುವಂತಾದರೆ ಅದು ತನ್ನ ಧರ್ಮದೊಂದಿಗಿದೆ ಎನ್ನಬಹುದು. ಸೃಷ್ಟಿಯಲ್ಲಿ ಸಹಜವಾಗಿರುವ ಇಂತಹ ಧರ್ಮವನ್ನು ಅರ್ಥಮಾಡಿಕೊಂಡು ಅದನ್ನು ಅನುಸರಿಸಿದರೆ ಅಂತಹ ಅನುಷ್ಠಾನಗಳಿಗೂ ಧರ್ಮವೆಂದೇ ಹೆಸರು. ಆದರೆ ಆ ಅನುಷ್ಠಾನಗಳು ಧರ್ಮವನ್ನು ನಮ್ಮಲ್ಲಿ ಪಡೆಯಲು ಉದ್ದಿಷ್ಟವಾಗಿರಬೇಕೆಂಬುದನ್ನು ಮರೆಯಬಾರದು.

ಧರ್ಮೋರಕ್ಷತಿ ರಕ್ಷಿತಃ-
ಹಾಗೆ ನಾವು ಎಲ್ಲದರ ಧರ್ಮವನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಧರ್ಮೋ ರಕ್ಷತಿ ರಕ್ಷಿತಃ ಎಂದಿರುವುದು ಇದನ್ನೇ. ಕಣ್ಣನ್ನು ಚೆನ್ನಾಗಿರುವಂತೆ ಕಾಪಾಡಿಕೊಳ್ಳುವುದು ಕಣ್ಣಿನ ಧರ್ಮವನ್ನು ರಕ್ಷಿಸಿದಂತೆ. ಹಾಗೆ ಮಾಡಿದರೆ ನಿಮ್ಮನ್ನು ಅದು ಬೀಳದಂತೆ ರಕ್ಷಿಸುತ್ತದೆ. ಹೀಗೆಯೇ ಎಲ್ಲ ಇಂದ್ರಿಯಗಳೂ ಸಹ. ಮತ್ತೆ ಇವೆಲ್ಲವೂ ಆ ಪರಮ ಪುರುಷನ ಪ್ರಯೋಜನಕ್ಕಾಗಿ ಬಂದವುಗಳು ಎಂಬುದನ್ನು ಮರೆಯಬಾರದು. ಅವುಗಳಿಗೆ ಆ ಮೂಲದವರೆಗೂ ನಮ್ಮನ್ನು ತಲುಪಿಸುವ ಧರ್ಮವಿದೆ. ಅಂತಹ ಧರ್ಮವನ್ನು ರಕ್ಷಿಸಿಕೊಂಡರೆ ಅವು ನಮ್ಮನ್ನು ಅಂತಹ ಆನಂದದ ಸ್ಥಿತಿಯಿಂದ ಪತನವಾಗದಂತೆ ರಕ್ಷಿಸುತ್ತದೆ. ಹೀಗೆ ಧರ್ಮವನ್ನು ಬಯಸಬೇಕು. ಕಾಪಾಡಿಕೊಳ್ಳಬೇಕು. ಅದು ಮೊದಲನೇ ಪುರುಷಾರ್ಥ.

ಅರ್ಥ-
ಇಂತಹ ಧರ್ಮಮಯವಾದ ಜೀವನವನ್ನು ಇಟ್ಟುಕೊಳ್ಳಲು ಸಹಾಯಕವಾಗುವ ಸಂಪತ್ತುಗಳನ್ನೆಲ್ಲ ಸಂಗ್ರಹ ಮಾಡಿಕೊಳ್ಳುವುದೂ ಅವಶ್ಯವಾಗುತ್ತದೆ. ಜಗತ್ತಿನಲ್ಲಿರುವ ಸಮಸ್ತ ಪದಾರ್ಥಗಳೂ ಅರ್ಥವೇ. ತ್ರಿಲೋಕ ವ್ಯಾಪಿಯಾದ ವಿಷಯ ಅರ್ಥ. "ಇಂದ್ರಿಯಗಳಿಗೆ ಯಾವುದು ಸಂತೋಷವನ್ನುಂಟುಮಾಡುತ್ತವೆಯೋ ಅಂತಹ ಸಂಪತ್ತುಗಳನ್ನು ಅರ್ಥ"                      ಎನ್ನುತ್ತಾರೆ. ಅರ್ಥವಿಲ್ಲದಿದ್ದಾಗ ಇಂದ್ರಿಯಸುಖವನ್ನೂ ಅನುಭವಿಸಲಾಗುವುದಿಲ್ಲ. ಧರ್ಮವನ್ನೂ ಆಚರಿಸಲಾಗುವುದಿಲ್ಲ ಅದರಿಂದ ಅರ್ಥವೇ ಶ್ರೇಷ್ಠ ಪುರುಷಾರ್ಥ ಎಂದು ಅರ್ಥ ಶಾಸ್ತ್ರ ಹೇಳುತ್ತದೆ. ಆದರೆ ಅದರ ಸಂಪಾದನೆ ಮತ್ತು ವಿನಿಯೋಗ ಧರ್ಮಕ್ಕೆ ಅನುಗುಣವಾಗಿರಬೇಕು ಮತ್ತು ಮೋಕ್ಷಕ್ಕೆ ಅವಿರೋಧಿಯಾಗಿರಬೇಕು ಎಂದೂ ಸ್ಪಷ್ಟಪಡಿಸುತ್ತದೆ.  ಈ ಅರ್ಥವೆಲ್ಲವೂ ಪರಮಾರ್ಥದಲ್ಲಿ ಪರಿಸಮಾಪ್ತಿ ಹೊಂದಿದರೆ ಅದು ಅರ್ಥವೆನಿಸುತ್ತದೆ. ಇಲ್ಲವೇ ಅನರ್ಥ. ವಿಶ್ವವ್ಯಾಪಿಯಾದ ಅರ್ಥವನ್ನು ನಮ್ಮ ಧರ್ಮವನ್ನುಳಿಸಿಕೊಳ್ಳುವುದಕ್ಕಾಗಿ ಸಂಚಯ ಮಾಡಬೇಕು. ಹಾಗೆ ಮಾಡುವಾಗ ಅದು ನಮ್ಮ ಪ್ರಕೃತಿಗೆ ಒಗ್ಗುವುದೇ ಎಂದು ಗಮನಿಸಬೇಕು. ಇಲ್ಲವೇ ಹೆಚ್ಚು ಹಣವಂತನಾಗಬೇಕು ಎಂದು ಅಧರ್ಮದಿಂದ, ಅತ್ಯಂತಿಕವಾದ ದೇಹ ಮನಸ್ಸುಗಳ ಶ್ರಮದಿಂದ ಹಣ ಗಳಿಸ ಹೊರಟಾಗ ನಮ್ಮ ಪ್ರಕೃತಿಗೆ ಅದರಿಂದ ತೊಂದರೆಯಾಗುತ್ತದೆ. ಧರ್ಮ ಕೆಡುತ್ತದೆ.ನಮ್ಮ ಶರೀರದ ವಾತ ಪಿತ್ತ ಶ್ಲೇಷ್ಮಗಳ ಸಹಜ ಸ್ಥಿತಿ ಪಲ್ಲಟಗೊಳ್ಳುತ್ತದೆ. ಒಟ್ಟಿನಲ್ಲಿ ನೆಮ್ಮದಿ ಹಾಳಾಗುತ್ತದೆ. ಅಂತಹ ಅರ್ಥ ಪುರುಷಾರ್ಥದ ಪಟ್ಟಿಯಲ್ಲಿ ಸೇರದು. "ಯಲ್ಲಭಸೇ ನಿಜ ಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಮ್ " ಎಂಬ ಆಚಾರ್ಯರ ವಾಣಿಯನ್ನು ಸ್ಮರಿಸಿಕೊಂಡರೆ ಸೂತ್ರಪ್ರಾಯವಾಗಿ ಅರ್ಥದ ಬಗ್ಗೆ ಎಲ್ಲವನ್ನೂ ಹೇಳಿದಂತಾಗುತ್ತದೆ. ನಮ್ಮ ಕರ್ಮ ಫಲಾನುಗುಣವಾಗಿ ನಮಗೊದಗಿಬಂದ ಕಾಯಕದಿಂದ ಸಂಪಾದಿಸುವ ಸಂಪತ್ತುಗಳಿಂದಲೇ ತೃಪ್ತಿಯಿಂದಿರಬೇಕು. ಅದಿಲ್ಲದಿದ್ದರೆ ಮಿತಿಮೀರಿದ ಅರ್ಥದ ಹಿಂದಿನ ಓಟಕ್ಕೆ ಕೊನೆಮೊದಲಿರುವುದಿಲ್ಲ. ಧರ್ಮಕ್ಕೆ ಅವಿರೋಧವಾದ ಅರ್ಥವನ್ನು ಸಂಪಾದಿಸಬೇಕು. ನಮ್ಮ ಮಹಾಗುರುಗಳು ತಿಳಿಸಿದಂತೆ- ಅರ್ಥವು ಪರಮಾರ್ಥಕ್ಕೆ ಕಾರಣವಾಗುವಂತಿದ್ದರೆ ಅನವರತವಾಗಿಯೂ ಅದನ್ನು ಸಂಪಾದಿಸಬಹುದು ಎಂದಿದ್ದರು. ಅಂತಹ ಅರ್ಥವು ಪುರುಷಾರ್ಥವಾಗಿ ಜೀವನದ ಮಹಾಮೌಲ್ಯವೇ ಆಗುತ್ತದೆ.  

ಕಾಮ:
ಮೂರನೆಯ ಪುರುಷಾರ್ಥವೇ ಕಾಮ. ಸೃಷ್ಟಿಎಲ್ಲವೂ ಕಾಮಮಯವಾಗಿದೆ. ಪ್ರಕೃತದಲ್ಲಿ ಇಂದ್ರಿಯತೃಪ್ತಿ ಎಂಬ ಅರ್ಥದಲ್ಲಿ ಕಾಮವನ್ನು ಬಳಸಲಾಗಿದೆ. ನಿಸರ್ಗಸಹಜವಾದ ನಮ್ಮ ಬಯಕೆಗಳೆಲ್ಲವೂ ಕಾಮವೇ. ಅದು ನಮ್ಮ ಒಳ ಹೊರ ಧರ್ಮದ ಚೌಕಟ್ಟಿನಲ್ಲಿದ್ದಾಗ ಸತ್ಕಾಮ. ಅದು ಪೂಜ್ಯವೇ. ಇಲ್ಲೂ ನಮನಮಗೆ ವಿಹಿತವಾದ ಕಾಮನೆಗಳನ್ನಿಟ್ಟುಕೊಳ್ಳಬೇಕು. ಒಂದು ಬೀಜ ತಾನು ಮೊಳಕೆಯೊಡೆದು ಮುಂದೆ ವೃಕ್ಷವಾಗಬೇಕೆಂದು ಬಯಸುವುದು ಅದಕ್ಕೆ ಸಹಜವಾದ ಕಾಮ. ಅದಕ್ಕೆ ಬೇಕಾದ ನೀರು ಗೊಬ್ಬರವೆಲ್ಲವೂ ತತ್ಸಹಜವಾದ ಅರ್ಥಕ್ಕೆ ಸೇರುತ್ತದೆ. ಅದಿಲ್ಲದೇ ಅದು ತನಗೆ ದೊಡ್ಡ ಮನೆಬೇಕು ಎಂದು ಅಪೇಕ್ಷಿಸಿದರೆ ಅದು ಅದಕ್ಕೆ ಅಸಹಜವಾದ ಕಾಮ. ಒಂದು ಚಿಕ್ಕ ಮಗು ಮದುವೆಯಾಗಿ ಸಂಸಾರ ಮಾಡಬೇಕು ಎಂದು ಅಪೇಕ್ಷಿಸಿದರೆ ಅದು ಅಸಹಜವಾದ ಕಾಮವಾಗುತ್ತದೆ. ಹಾಗಲ್ಲದೇ ನಿಸರ್ಗ ಸಹಜವಾದ ಕಾಮವನ್ನು ಧರ್ಮದ ಚೌಕಟ್ಟಿನಲ್ಲಿ ಅನುಭವಿಸಬೇಕೆನ್ನುವುದೇ ಮಹರ್ಷಿಗಳ ಅಭಿಮತ. ನ ನಿಃಸುಖಿಸ್ಸ್ಯಾತ್ -ಎಲ್ಲರೂ ಸುಖಿಗಳಾಗಿರಬೇಕೆನ್ನುವುದೇ ಅವರ ಆಶಯ. ಅದು ಪುರುಷಾರ್ಥವೇ ಆಗುತ್ತದೆ. ನಮಗೆ ಇಂದ್ರಿಯಗಳನ್ನು ಕೊಟ್ಟಮೇಲೆ ಅದರ ಕಾಮನೆಗಳನ್ನು ತೃಪ್ತಿಪಡಿಸುವುದು ಸಹಜವಾಗಿಯೇ ಇದೆ. ಅದಿಲ್ಲವಾದರೆ ಅವು ನಮ್ಮಮೇಲೆ ಗಲಾಟೆ ಮಾಡಿ ನಮ್ಮ ಅಶಾಂತಿಯನ್ನು ಹೆಚ್ಚಿಸುತ್ತದೆ. ಹೊಟ್ಟೆಗೆ ಆಹಾರವನ್ನು ಕೊಡದಿದ್ದಾಗ ಅದು ತಾಳ ಹಾಕುತ್ತದೆ. ಕಣ್ಣಿಗೆ ರೂಪವನ್ನೂ ನಿದ್ರೆಯನ್ನೂ ಕೊಡದಿದ್ದರೆ ಅದು ಸುಮ್ಮನಿರುವುದಿಲ್ಲ. ಹಾಗೆಯೇ ಎಲ್ಲವೂ. ಹಾಗೆಂದು, ಹಸಿವಾಗಿದೆ ಎಂದು ಸಿಕ್ಕಾಪಟ್ಟೆ ಹೊಟ್ಟೆ ಬಿರಿಯುವಂತೆ ತಿಂದುಬಿಟ್ಟರೆ ಅದರ ಪರಿಣಾಮವಾದ ಅಜೀರ್ಣ ವ್ಯಾಧಿಯನ್ನು ಅನುಭವಿಸಬೇಕಾಗುತ್ತದೆ. ಮತ್ತೆ ಆ ಕಾಮವು ಹುಟ್ಟದಂತೆ ಹೊಟ್ಟೆ ಕೆಟ್ಟು ಗೋಳಾಡುವಂತಾಗುತ್ತದೆ. ಇಂದ್ರಿಯತೃಪ್ತಿ ಆತ್ಮನ ತೃಪ್ತಿಯ ಚೌಕಟ್ಟಿನಲ್ಲಿರಬೇಕು. ಶ್ರೀರಂಗಮಹಾಗುರುಗಳ ಮಾತಿನಂತೆ ಬರಿಯ ಉದರತೃಪ್ತಿ ಮಾತ್ರವಲ್ಲದೇ ದಾಮೋದರ ತೃಪ್ತಿಯೂ ಆಗುವಂತಿರಬೇಕು.  ಇಂದ್ರಿಯ ತೃಪ್ತಿ ಒಂದು ಸಮಲೋಲನದಲ್ಲಿರಬೇಕು. ನಾವು ಜೀವನದಲ್ಲಿ ಅಪೇಕ್ಷೆಪಟ್ಟು ಒಳಗೆ ಸ್ವೀಕರಿಸುವುದೆಲ್ಲವೂ ಆಹಾರವೇ. ಅದರ ಸೂಕ್ಷ್ಮವಾದ ಒಂದು ಭಾಗ ನಮ್ಮ ಮನಸ್ಸೂ ಆಗುತ್ತದೆ. ನಮ್ಮ ಕಾಮನೆಗಳು ಆತ್ಮಧರ್ಮದಿಂದ ನಮ್ಮನ್ನು ಜಾರಿಸದ ಮನೋಧರ್ಮವನ್ನಿಟ್ಟುಕೊಳ್ಳುವಂತಿರಬೇಕು.  ಹೀಗೆ ಆತ್ಮ ಕಾಮರಾಗಿ ತತ್ಸಹಜವಾದ ಕಾಮವನ್ನಿಟ್ಟುಕೊಳ್ಳಬೇಕು. ಆಗಲೇ ಅದು ಪುರುಷಾರ್ಥವಾಗುತ್ತದೆ. ಹಾಗಿಲ್ಲದಿರುವ ಕಾಮ ಅರಿಷಡ್ವರ್ಗಗಳ ಪಟ್ಟಿಯಲ್ಲಿ ಬರುವ ಕಾಮ, ತ್ಯಾಜ್ಯವಾಗುತ್ತದೆ. ಮಹಾದೇವನು ಕಾಮನನ್ನು ಸುಟ್ಟ. ಜ್ಞಾನಕ್ಕೆ ವಿಷಯನಾದವನು, ವಿವೇಕಿಗಳಿಗೆಲ್ಲ ರಾಜ, ಧರ್ಮದ ಮೂರ್ತಿ. ಅಂತಹ ದೇವದೇವನಾದ ಶಿವನೇ ಕಾಮನನ್ನು ಸುಟ್ಟ ಮೇಲೆ ಕಾಮವು ಹೇಗೆ ಪೂಜ್ಯ? ಹೌದು ಪರಮಾರ್ಥವನ್ನು ಕೆಡಿಸುವ, ಧ್ಯಾನಾವಸ್ಥೆಯನ್ನು ಭಂಗಮಾಡುವ ಕಾಮವು ಸುಡಲು ಯೋಗ್ಯವಾದುದೇ. ಅಂತಹ ಕಾಮನನ್ನು ಶಿವನು ಭಸ್ಮ ಮಾಡಿದನು. ಅದೇ ಶಿವನೇ ಗಿರಿಜಾ ಕಲ್ಯಾಣದಲ್ಲಿ ಕಾಮನನ್ನು ಸ್ವಾಗತಿಸುತ್ತಾನೆ. ಮೊದಲನೆಯದು ಅರಿಷಡ್ವರ್ಗದ ಕಾಮ. ಎರಡನೆಯದು ಪುರುಷಾರ್ಥವಾದ ಕಾಮ. ಹಾಗೆಯೇ ಶ್ರೀ ಕೃಷ್ಣನೂ  ಕಾಮವನ್ನು ಮಹಾ ಶತ್ರು ಎಂದು ಒಂದೆಡೆ ಕರೆದಿದ್ದರೂ ಮತ್ತೊಂದೆಡೆ-ಧರ್ಮಾವಿರುದ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ " ಎಂದು ಧರ್ಮಕ್ಕೆ ಅವಿರೋಧವಾದ ಕಾಮವೇ ನಾನಾಗಿದ್ದೇನೆ ಎನ್ನುತ್ತಾನೆ. ಮೊದಲನೆಯ ಕಾಮ ತ್ಯಾಜ್ಯ. ಎರಡನೆಯದು ಪೂಜ್ಯ. ಇದನ್ನೇ ನಮ್ಮ ಮಹಾಗುರುಗಳು ತಮ್ಮ ಸರಳವಾದ ಶೈಲಿಯಲ್ಲಿ ಹೇಳಿದ್ದಾರೆ. " ಅರಿಷಡ್ವರ್ಗದಲ್ಲಿ ಬರುವ ಕಾಮ ತ್ಯಾಜ್ಯ. ಪುರುಷಾರ್ಥಗಳ ಪಟ್ಟಿಯಲ್ಲಿ ಬರುವ ಕಾಮ ಪೂಜ್ಯ ಎಂದಿದ್ದಾರೆ. ಇಂತಹ ಕಾಮವೂ ಜೀವನದ ಮಹಾ ಮೌಲ್ಯವೇ ಆಗುತ್ತದೆ.

ಮೋಕ್ಷ-ಬಿಡುಗಡೆ
ನಾಲ್ಕನೆಯ ಪರಮ ಪುರುಷಾರ್ಥವೇ ಮೋಕ್ಷವೆಂಬುದು. ಇದಕ್ಕಾಗಿಯೇ ನಮಗೆ ಭಗವಂತ ಮನುಷ್ಯ ಜನ್ಮವನ್ನು ಕೊಟ್ಟಿರುವುದು. ಮಹರ್ಷಿಗಳು ಅನುಭವಿಸಿ ವರ್ಣಿಸಿದ ಮೋಕ್ಷವೆಂದರೆ-ಬಿಡುಗಡೆ. ಯಾವುದರಿಂದ? ಸ್ವರೂಪಕ್ಕೆ, ಆನಂದಕ್ಕೆ, ನೆಮ್ಮದಿಗೆ, ಪರಿಪೂರ್ಣ ಜ್ಞಾನಕ್ಕೆ ವಿರುದ್ಧವಾದುದೆಲ್ಲದರಿಂದ ಬಿಡುಗಡೆ. ಎಲ್ಲಾ ಅಂಟುಗಳಿಂದಲೂ ಬಿಡುಗಡೆ. ಒಂದು ದೃಷ್ಟಿಯಿಂದ ಮೋಕ್ಷ ನಮ್ಮ ಜೀವನದಲ್ಲಿ ಸಹಜವಾಗಿಯೇ ಇದೆ. ನಮ್ಮ ನಿದ್ರೆಯಲ್ಲಿ ನಾವು ಎಲ್ಲವನ್ನೂ ಬಿಟ್ಟಿರುತ್ತೇವೆ. ಅಲ್ಲಿ ನಮ್ಮ ಪಾಸ್ ಬುಕ್ಕಿನ ಚಿಂತೆಇರದು. ನಮಗೆ ಅತ್ಯಂತ ಪ್ರೀತಿಪಾತ್ರರಾದ ಹೆಂದತಿಮಕ್ಕಳನ್ನೂ ಆ ಸಮಯದಲ್ಲಿ ಬಿಟ್ಟು ನಾವೇನಾವಾಗಿ ನಿದ್ರಾಸ್ಥಿತಿಯಲ್ಲಿ ಸುಖಿಸುತ್ತೇವೆ. ಅದಕ್ಕೂ ಹಿಂದಿನ ತನ್ನ ಮೂಲದಲ್ಲಿ ಸುಖಿಸುವಂತಾಗುವುದೇ ಮೋಕ್ಷ. ತನ್ನ ಮೂಲ ಧಾಮದಲ್ಲಿ ನೆಲೆಸುವ ಸುಖ.
ಧರ್ಮವನ್ನು ಚೆನ್ನಾಗಿಟ್ಟುಕೊಳ್ಳಬೇಕೆಂಬ ದೃಢವಾದ ಸಂಕಲ್ಪ ಮಾಡಿದೆವೆಂದರೆ ಅದಕ್ಕೆ ಸರಿಯಾಗಿಯೇ ಅರ್ಥಕಾಮಗಳು ಸಜ್ಜಾಗುತ್ತವೆ. ಅಂತಹ ಜೀವನವು ಮೋಕ್ಷದಲ್ಲಿಯೇ ತಾತ್ಪರ್ಯವನ್ನು ಹೊಂದುತ್ತದೆ.  ಪೂಜ್ಯ ಶ್ರಿ ರಾಮ ಭದ್ರಾಚಾರ್ಯರು ತಮ್ಮ ತತ್ತ್ವಾರ್ಥ ಸಾಹಸ್ರೀ ಎಂಬ ಗ್ರಂಥದಲ್ಲಿ ಮೋಕ್ಷದ ಸುಖವನ್ನು " ಚೇತನನ ತವರುಮನೆಯ ಸುಖ" ಎಂದು ಕೊಂಡಾಡಿದ್ದಾರೆ. ಉದಾಹರಣೆಗೆ ನಾವು ಮನೆಯಿಂದ ಹೊರಟು ಬೀದಿಯಲ್ಲೆಲ್ಲಾ ಸುತ್ತಿ ಮತ್ತೆ ಮನೆಗೆ ಬಂದಾಗ ನಮಗೆ ಬೇಕಾದಂತೆ ಅಲ್ಲಿರುತ್ತೇವೆ. ನಾವು ಆಫೀಸಿಗೆ ಹೋಗುವುದೂ ಸಹ ನೆಮ್ಮದಿಯಾಗಿ ಮನೆಯಲ್ಲಿರುವುದಕ್ಕಾಗಿಯೇ. ಮೋಕ್ಷವು ಚೇತನನ ನಿಜವಾದ ಮನೆಯಾಗಿದೆ ಎಂಬುದು ಜ್ಞಾನಿಗಳ ಮಾತು. ಅದು ನಮ್ಮ ಸಹಜವಾದ ನೆಲೆಯಾಗಿದೆ. ಅದು ಪರಮ ಆನಂದದ ತಾಣ. ಎಣೆಯಿಲ್ಲದ ಸುಖದ ಸಮುದ್ರ ಎಂದೆಲ್ಲ ಅದನ್ನು ಅನುಭವಿಸಿದವರ ವರ್ಣನೆ. ಇಂದ್ರಿಯದ ಬೀದಿಗಳಲ್ಲಿ ಸಂಚರಿಸಿ ದಣಿದು ತನ್ನ ಸ್ವಧಾಮದಲ್ಲಿ ಜೀವಿಯು ಸುಖಿಸುವ ಒಂದು ಸ್ಥಿತಿವಿಶೇಷವೇ ಮೋಕ್ಷ ಎಂಬುದು. ಅದು ಅತ್ಯಂತ ಅಪೇಕ್ಷಣೀಯ. ಅದಕ್ಕೆ ಭಯಪಡುವ ವಿಷಯವಿಲ್ಲ. ಅದು ಭಯವನ್ನು ಹೋಗಲಾಡಿಸುತ್ತದೆ. ಅದರಲ್ಲಿ ಸಹಜತೆಯಿದೆ. ಜೀವಂತವಾಗಿರುವಾಗಲೇ ಆಸುಖವನ್ನು ಅನುಭವಿಸಬೇಕು ಎಂಬ ಅಭಿಪ್ರಾಯವನ್ನು ಶ್ರೀರಂಗ ಮಹಾಗುರುಗಳು ಸ್ವಾನುಭವದಿಂದಲೂ, ಶಾಸ್ತ್ರವಾಕ್ಯಗಳಿಂದಲೂ ಪ್ರಮಾಣಿಸಿ ತಮ್ಮ ಧೀರವಾಣಿಯಿಂದ ಮೊಳಗುತ್ತಿದ್ದರು. ಇದನ್ನೇ ಪುರುಷಸೂಕ್ತದಲ್ಲಿ " ತಮೇವಂ ವಿದ್ವಾನ್ ಅಮೃತ ಇಹ ಭವತಿ" - ಆ ಪರಮಾತ್ಮನನ್ನು ಹೀಗೆ ತಿಳಿದವನು ಇಲ್ಲಿಯೇ ಅಮೃತನಾಗುತ್ತಾನೆ ಎಂದೂ, ಕೇನೋಪನಿಷತ್ತಿನಲ್ಲಿ- " ಇಹಚೇದವೇದೀತ್ ಅಥ ಸತ್ಯಮಸ್ತಿ | ನ ಚೇದಿಹಾವೇದೀತ್ ಮಹತೀ ವಿನಷ್ಟಿಃ"- ಇಲ್ಲಿ ತಿಳಿದುಕೊಂಡರೆ ಸತ್ಯವು ಇರುತ್ತದೆ. ಇಲ್ಲಿ ತಿಳಿಯದಿದ್ದರೆ ಮಹಾವಿನಾಶ ಉಂಟಾಗುತ್ತದೆ ಎಂದಿದ್ದಾರೆ. ಹೀಗೆ ಮೋಕ್ಷಕ್ಕಾಗಿಯೇ ಎಲ್ಲ ಪುರುಷಾರ್ಥಗಳೂ ಇವೆ ಎನ್ನಬಹುದು. ದಾಸವಾಣಿಯಂತೆ- ಅಲ್ಲಿರುವುದು ನಮ್ಮ ಮನೆ, ಇಲ್ಲಿ ಬಂದಿಹೆವು ಸುಮ್ಮನೆ". ನಮ್ಮ ಸ್ವಧಾಮದಲ್ಲಿ ಸುಖಿಸುವ ಜೀವನದ ಮಹಾ ಮೌಲ್ಯವೇ ಆಗಿದೆ.

ಉಪಸಂಹಾರ:
ಹೀಗೆ ಚತುರ್ಭದ್ರಮಯವಾದ ಒಂದು Frame work ಮಹರ್ಷಿಗಳು ನಮಗೆ ಹಾಕಿಕೊಟ್ಟ ಋಷಿಗಳ ಜೀವನ. ಈ ನಾಲ್ಕು ಪುರುಷಾರ್ಥಗಳೇ ಜೀವನದ ಮಹಾ ಮೌಲ್ಯಗಳು. ನಮ್ಮ ಜೀವನ ವೃತ್ತವನ್ನು ಈ ಚತುರ್ಭದ್ರಮಯವಾದ ಎಲ್ಲೆಕಟ್ಟುಗಳಲ್ಲಿ ನಡೆಸಿದಾಗ ಎಲ್ಲೆ ಮೀರಿದ, ಪರಮಾನಂದಮಯವಾದ, ಪರಮಾತ್ಮ ಸಮುದ್ರವನ್ನು ಸೇರಬಹುದಾಗಿದೆ. ನಮ್ಮ ಮಹಾಗುರುಗಳು ಒಂದು ಮಾತನ್ನು ಹೇಳುತ್ತಿದ್ದರು- " ಅರ್ಥ ಕಾಮಗಳು ತುಂಟ ಹಸುವಿನಂತೆ. ಹಾಗೆಂದೇ ಅವನ್ನು ಧರ್ಮ, ಮೋಕ್ಷಗಳ ಎರಡು ಕಂಭಗಳಿಗೆ ಕಟ್ಟಿ ಹಾಲುಕರೆದರೆ ಅಮೃತಧಾರೆಯನ್ನೇ ಕರೆಯಬಹುದು" ಎಂದು.

ಜೀವನದಿ:
ಒಂದು ಜೀವ ನದಿ ಎರಡು ಎಲ್ಲೆಗಳ ಮಧ್ಯೆ ಹರಿದಾಗಲೇ ತನ್ನ ತಿರಪ್ರದೇಶವನ್ನೆಲ್ಲ ಸಸ್ಯಶ್ಯಾಮಲವನ್ನಾಗಿಡುತ್ತದೆ. ಜನಜೀವನ, ಸಂಸ್ಕೃತಿ ನಾಗರೀಕತೆಗಳಿಗೆ ಕಾರಣವಾಗುತ್ತದೆ. ಕಡೆಯಲ್ಲಿ ಮಹಾ ಸಮುದ್ರವನ್ನೂ ಸೇರಿ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ. ಹಾಗೆಯೇ ನಮ್ಮ ಜೀವನವೂ ಧರ್ಮ, ಮೋಕ್ಷಗಳ ಎಲ್ಲೆಕಟ್ಟುಗಳ ನಡುವೆ ಅರ್ಥ ಕಾಮಗಳನ್ನನುಭವಿಸುತ್ತ ಸಾಗಿದರೆ ಇಹದ ಬದುಕನ್ನೂ ಹಸನಾಗಿಸಿಕೊಂಡು ಪರಮಾತ್ಮ ಸಮುದ್ರವನ್ನೂ ಸೇರುವುದು ನಿಶ್ಚಿತ.ಅದುವೇ ಜೀವನದ ಮಹಾ ಮೌಲ್ಯ. ಜೀವನಕ್ಕೆ ಸಹಜವಾದ ಮೌಲ್ಯ. ಸಾರ್ವಕಾಲಿಕ ಸತ್ಯವಾದ ಮೌಲ್ಯ. ಜೀವಲೋಕದ ಪರಮ ನೆಮ್ಮದಿಯ ಉಪಾಯ. ಈ ಋಷಿ ದೃಷ್ಟಿ ನಮ್ಮದಾಗಲಿ ಎಂದು ಪ್ರಾರ್ಥಿಸೋಣ.

ಸೂಚನೆ : 13/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.