Thursday, February 18, 2021

ಆದರ್ಶ ದಿನಚರಿ (Adarsha Dinacari)

ಶ್ರೀಮತಿ ಶ್ರೀವಿದ್ಯಾ .ಸಿ. ಭಟ್

(ಪ್ರತಿಕ್ರಿಯಿಸಿರಿ lekhana@ayvm.in)

ದಿನಚರಿ ನಮ್ಮ ಜೀವನದ ಧ್ಯೇಯಕ್ಕೆ ತಕ್ಕಂತೆ ಇರುತ್ತದೆ. ಉದಾಹರಣೆಗೆ ಒಬ್ಬ ಕ್ರೀಡಾಪಟುವಿನ ದಿನಚರಿಯಲ್ಲಿ ಅವನ ಕ್ರೀಡೆಗೆಸಹಕಾರಿಯಾದ  ವ್ಯಾಯಾಮ, ಆಹಾರ ನಿಯಮಗಳು ಎಲ್ಲವೂ ಸೇರಿರುತ್ತದೆ. ಹಾಗೇ ಒಬ್ಬ ಉದ್ಯಮಿಯ ದಿನಚರಿವಿಭಿನ್ನವಾಗಿದ್ದು, ಇತರ ಉದ್ಯಮಿಗಳ ಜೊತೆ ಸಭೆ- ಮಾತುಕತೆ- ಪ್ರಯಾಣ ಎಲ್ಲವೂ ಇರುತ್ತದೆ. ಹಾಗೇ ಅನೇಕರುಆರೋಗ್ಯ, ನೆಮ್ಮದಿ, ಸಂತೋಷಕರವಾದ ಜೀವನಕ್ಕೆ ತಕ್ಕಂತಹ ದಿನಚರಿಯನ್ನು ಅಳವಡಿಸಿಕೊಂಡಿರುತ್ತಾರೆ.ಇವೆಲ್ಲವೂ ನಾವು ನಮ್ಮ ಜೀವನಕ್ಕೆ ಅಂಟಿಸಿಕೊಂಡ ಧ್ಯೇಯಗಳು ಮತ್ತು ಅವಕ್ಕೆ ತಕ್ಕಂತಹ ದಿನಚರಿಗಳಾದವು. ಆದರೆಭಾರತೀಯ ಮಹರ್ಷಿಗಳು, ಜೀವನಕ್ಕೇ ಸಹಜವಾದ ಧ್ಯೇಯ ಒಂದಿದೆ, ಅದನ್ನು ಅರ್ಥ ಮಾಡಿಕೊಂಡು ಅದಕ್ಕನುಗುಣವಾದದಿನಚರಿಯನ್ನು ಅಳವಡಿಸಿಕೊಂಡರೆ ಜೀವನ ಸರ್ವಾಂಗ ಸುಂದರವಾಗಿ ಇರುತ್ತದೆ ಎಂಬುದನ್ನು ಅರಿತು ಅದರಂತೆ ದಿನಚರಿಯನ್ನುರೂಪಿಸಿದ್ದಾರೆ.


ಶ್ರೀರಂಗಮಹಾಗುರುಗಳು ಬೀಜ-ವೃಕ್ಷದ ಉದಾಹರಣೆಯ ಮೂಲಕ ಜೀವನವೃಕ್ಷದ ಧ್ಯೇಯವನ್ನು ತಿಳಿಸಿಕೊಟ್ಟಿದ್ದಾರೆ. ಒಂದುಮಾವಿನ ವೃಕ್ಷದ ಧ್ಯೇಯ ಬೀಜದಿಂದ ಹೊರಟು ಕಾಂಡ, ಕೊಂಬೆ, ಎಲೆ, ಕಾಯಿ, ಹಣ್ಣು ಎಲ್ಲವೂ ಆಗಿ ಕಡೆಯಲ್ಲಿ ಬೀಜದಲ್ಲಿನಿಲ್ಲುವಂತಾಗುವುದು. ಹಾಗೆಯೇ ಮನುಷ್ಯ ಜೀವನದಲ್ಲೂ ಜೀವನ ಪ್ರಕಾಶನಾದ ಭಗವಂತನಿಂದ ಆರಂಭವಾದ ಬದುಕುಹಾದಿಯಲ್ಲಿ ಧರ್ಮ, ಅರ್ಥ ಕಾಮ ಗಳೆಲ್ಲವನ್ನೂ ಅನುಭವಿಸಿ ಕಡೆಯಲ್ಲಿ ಆ ಪ್ರಕಾಶದಲ್ಲೇ ಒಂದಾಗುವ ಮೋಕ್ಷದಲ್ಲಿ ಪರ್ಯವಸಾನಹೊಂದುವುದೇ ಆಗಿದೆ ಎಂಬುದನ್ನು ತಮ್ಮ ತಪಸ್ಯೆಯಿಂದ ತಿಳಿದವರು ನಮ್ಮ ಮಹರ್ಷಿಗಳು. ಅಂತಹ ಜೀವನ ವೃಕ್ಷದ ಕೃಷಿಯನ್ನುಚೆನ್ನಾಗಿ ಮಾಡುವ ದಿನಚರಿ ಅವರದು. ಪ್ರಾತಃಕಾಲ ಬ್ರಾಹ್ಮೀಮುಹೂರ್ತದಲ್ಲಿ ಭಗವಂತನ ಸ್ಮರಣೆಯಿಂದ ಬಲಗಡೆ ಮಗ್ಗುಲಿನಿಂದಎದ್ದು, ನಂತರ ನಿತ್ಯಕರ್ಮಗಳು. ಹಾಗೆಯೇ ಆಹಾರದ ವಿಷಯದಲ್ಲಿ ಭಗವಂತನ ಸ್ಮರಣೆಯೊಡನೆ ಸಾತ್ವಿಕ ಆಹಾರದ ತಯಾರಿಕೆ,ಅದರ ಸೇವನೆ – ಹೀಗೆ ಎಲ್ಲದರಲ್ಲೂ ಪರಮಾರ್ಥವನ್ನು ಸೇರಿಕೊಂಡ ಲೌಕಿಕ ಸುಖವಿರುವಂತೆ ನಮ್ಮ ದಿನಚರಿಯನ್ನಿಟ್ಟಿದ್ದಾರೆ.ಅಂತಹ ದಿನಚರಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ, ನಮ್ಮ ಜೀವನದ ಮುಖ್ಯ ಉದ್ದೇಶಕ್ಕೆ ಸೇರಿದದಿನಚರಿಯಾಗುತ್ತದೆ.


ಹೀಗೆ ನಾವು ಅಳವಡಿಸಿಕೊಳ್ಳುವ ದಿನಚರಿಯಿಂದಲೇ ಇಂದ್ರಿಯ ಸುಖದ ಜೊತೆಗೇ ಜೀವನದ ಧ್ಯೇಯವಾದ ನಮ್ಮೊಳಗಿನ ಬೆಳಕನ್ನುಕಂಡು ಆನಂದಿಸುವ ಉಪಾಯವನ್ನು ಲೋಕಕ್ಕೆ ದಯಪಾಲಿಸಿದ ಮಹರ್ಷಿಗಳಿಗೆ ಕೃತಜ್ಞರಾಗಿರೋಣ. ಅಂತಹ ಆದರ್ಶದಿನಚರಿಯನ್ನು ನಾವೂ ಅನುಸರಿಸುವಂತಾಗಲಿ.


ಸೂಚನೆ: 18/02/2020 ರಂದು ಈ ಲೇಖನ
ಉದಯವಾಣಿ ಯಲ್ಲಿ ಪ್ರಕಟವಾಗಿದೆ.