Saturday, February 27, 2021

ಸಂಪ್ರಜ್ಞಾತ ಸಮಾಧಿ (Samprajnata Samadhi)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)




ಧ್ಯೇಯವಸ್ತುವೊಂದರ ಸ್ಮರಣೆಯೇ ನಿರಂತರವಾಗಿರುವ ಸ್ಥಿತಿಯ ಒಂದು ಹಂತದಲ್ಲಿ ಧ್ಯೇಯವಸ್ತುವು ಮರೆಯಾಗಿ, ಬಾಹ್ಯ ಪ್ರಜ್ಞೆಯೆಲ್ಲವೂ ಕಳಚಿ ಮೈಮರೆತು ಅಂತರಂಗ ಪ್ರಪಂಚದಲ್ಲಿ ಏನನ್ನಾದರೂ ನೋಡುತ್ತಿರುವ ಅಥವಾ ಕೇಳುತ್ತಿರುವ ಒಂದು ಸ್ಥಿತಿ ಉಂಟಾಗುತ್ತದೆ. ಈ ಸ್ಥಿತಿಯೇ ಸಮಾಧಿ. ಭಾರತೀಯ ಸಂಸ್ಕೃತಿಯಲ್ಲಿ ಕಂಡುಬರುವ, ಹೊರಗಣ್ಣಿಗೆ ಗೋಚರವಾಗದ ಸೂಕ್ಷ್ಮವಾದ ಅನೇಕ ದೇವತಾರೂಪಗಳು ಅಂತರ್ದೃಷ್ಟಿಗೆ ಗೋಚರವಾಗುವುದು ಈ ಸ್ಥಿತಿಯಲ್ಲಿಯೇ. ಹೊರಗಿವಿಗೆ ಕೇಳದ ಅನಾಹತ ನಾದವೆಂದು ಪರಿಗಣಿಸಲ್ಪಡುವ ಓಂಕಾರವೂ ಮತ್ತು ದಶವಿಧ ನಾದಗಳೂ ಕೇಳಿಬರುವುದು ಈ ಸ್ಥಿತಿಯಲ್ಲಿಯೇ.

ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ತಮ್ಮ ಯೋಗಾನುಭವವನ್ನು ಶಿಷ್ಯರೊಬ್ಬರ ಬಳಿ ಹೇಳುವಾಗ ಶ್ರೀನಿವಾಸದೇವರ ಪಟವೊಂದನ್ನು ತೋರಿಸುತ್ತಾ, "ಇದನ್ನು ನಾನು ಧ್ಯಾನದಿಂದ ಧರಿಸಿದೆ. ಧ್ಯಾನವು ಮುಂದುವರಿದಂತೆ ಕ್ರಮಕ್ರಮವಾಗಿ ಮೂರ್ತಿ ಅದೃಶ್ಯವಾಗಹತ್ತಿತು. ಕೊನೆಗೆ ನನ್ನ ಅಂತಶ್ಚಕ್ಷುಸ್ಸಿಗೆ(ಒಳಗಣ್ಣಿಗೆ)  ಕಂಡಿದ್ದು ಜ್ಯೋತೀ ರಾಶಿ ಮಾತ್ರ" ಎಂದು ಹೇಳಿದ್ದರು.

ಸಮಾಧಿ ಸ್ಥಿತಿಯಲ್ಲಿ ಹಂತಗಳುಂಟು ಮತ್ತು ಚಿತ್ತದ ಅತ್ಯಂತ ಸೂಕ್ಷ್ಮವೃತ್ತಿಗಳ ಅಥವಾ ನಿವೃತ್ತಿಯ ಪ್ರಭೇದಗಳಿಂದ ನಾನಾ ಸ್ಥಿತಿವಿಶೇಷಗಳು ಉಂಟಾಗುತ್ತವೆ. ಅವುಗಳ ಪೂರ್ಣವಿವರಗಳಿಗೆ ಹೋಗದೆ ಸಂಕ್ಷೇಪವಾಗಿ ಸಮಾಧಿಸ್ಥಿತಿಯನ್ನು ವಿಭಾಗಿಸುವುದಾದರೆ ಸಂಪ್ರಜ್ಞಾತ ಮತ್ತು ಅಸಂಪ್ರಜ್ಞಾತವೆಂದು ಎರಡಾಗಿ ವಿಭಾಗಿಸಬಹುದು. ಸಂಪ್ರಜ್ಞಾತ ಸಮಾಧಿಯಲ್ಲಿ ಚಿತ್ತವು ಕೆಲಸ ಮಾಡುತ್ತಿದ್ದು ಸ್ಥೂಲ, ಸೂಕ್ಷ್ಮ ಮತ್ತು ಪರಾ ಕ್ಷೇತ್ರಗಳ ಯಾವುದಾದರೊಂದು ವಿಷಯದಲ್ಲಿ ಲೀನವಾಗಿರುತ್ತದೆ. ಅಸಂಪ್ರಜ್ಞಾತ ಸಮಾಧಿಯಲ್ಲಿ ಚಿತ್ತವು ಸಂಪೂರ್ಣವಾಗಿ ನಿವೃತ್ತವಾಗಿದ್ದು ಅಖಂಡವಾದ ಪರಂಜ್ಯೋತಿಯಲ್ಲಿ ಜೀವಿಯು ಲೀನವಾಗಿರುತ್ತಾನೆ.

ಶ್ರೀರಂಗ ಮಹಾಗುರುಗಳ ವಾಣಿಯಲ್ಲಿಯೇ ಹೇಳುವುದಾದರೆ - "ಸಂಪ್ರಜ್ಞಾತಸಮಾಧಿ ಸ್ಥಿತಿಯಲ್ಲಿಯೇ ನಿವಾತ ದೀಪದಂತೆ ಬೆಳಗುವ ಜ್ಞಾನದೀಪವು ತೋರಿಬರುವುದು. ಚತುಷ್ಷಷ್ಟಿ(೬೪) ಕಲೆಗಳೆಂಬ ಹಣತೆಗಳನ್ನು ಹತ್ತಿಸಿ ಭಾರತಮಂದಿರದಲ್ಲಿ ಬೆಳಗಿಸಿದ ವಿಜ್ಞಾನಮೂಲಜ್ಯೋತಿಯೂ ಕಲೆಗಳ ತಾಯಿಬೇರೂ ಆಗಿರುವುದು ಈ ದೀಪವೇ".

ಸಂಪ್ರಜ್ಞಾತ ಸಮಾಧಿಯಲ್ಲಿಯೇ ಸೃಷ್ಟಿಯ ನಾನಾ ವಿಷಯಗಳಲ್ಲಿ ಮಾಡುವ ಮನಸ್ಸಿನ ಸಂಯಮವು ನಾನಾ ಸೃಷ್ಟಿರಹಸ್ಯಗಳನ್ನೂ ಅವುಗಳ ವಿಜ್ಞಾನವನ್ನೂ ಬಿಚ್ಚಿಕೊಡುವುದು. ಉದಾಹರಣೆಗೆ ಗಿಡಮೂಲಿಕೆಗಳ ಮೇಲೆ ಸಂಯಮ ಮಾಡಿದರೆ, ಅವುಗಳ ಔಷಧ ಗುಣ ತಿಳಿಯುತ್ತದೆ. ಇಂತಹ ಸಿದ್ಧಿಯಿಂದ ಮಹರ್ಷಿಗಳು ಪ್ರಾಣಿಪಕ್ಷಿಗಳಿಗೆ ಬಹಳ ಹಿಂಸೆ ಕೊಡದೆ ಆಯುರ್ವೇದ ವಿದ್ಯೆಯನ್ನು ಹೊರತಂದಿದ್ದಾರೆ. ಪಾತಂಜಲ ಯೋಗಸೂತ್ರದಲ್ಲಿ, "ನಾಭಿಚಕ್ರದ ಮೇಲೆ ಸಂಯಮ ಮಾಡಿದರೆ ಶರೀರದ ರಚನೆಯ ಜ್ಞಾನವುಂಟಾಗುತ್ತದೆ, ಚಂದ್ರನ ಮೇಲೆ ಸಂಯಮ ಮಾಡಿದರೆ ನಕ್ಷತ್ರವ್ಯೂಹದ ಜ್ಞಾನವುಂಟಾಗುತ್ತದೆ"- ಮುಂತಾಗಿ ಅನೇಕ ಸಿದ್ಧಿಗಳನ್ನು ವಿವರಿಸಿದ್ದಾರೆ.

ಹೀಗೆ ಸಂಪ್ರಜ್ಞಾತ ಸಮಾಧಿಸ್ಥಿತಿಯು ಭಾರತೀಯ ಸಂಸ್ಕೃತಿಗೆ ತಾಯಿಬೇರಾಗಿದೆ.


ಸೂಚನೆ : 27/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.