Thursday, 24 September 2020

ಯಾವುದು ಈ ಗಂಡಭೇರುಂಡ ? (Yavudu E Gaṇdabheruṇḍa ?)

ಲೇಖಕರು: ವಾದಿರಾಜ. ಪ್ರಸನ್ನ
(ಪ್ರತಿಕ್ರಿಯಿಸಿರಿ lekhana@ayvm.in)ವಿಸ್ಮಯ, ವಿಭಿನ್ನತೆಗಳಿಂದ ಕೊಡಿದ ಈ ಪ್ರಪಂಚದಲ್ಲಿ ಗಂಡಭೇರುಂಡ ಪಕ್ಷಿಯು ಒಂದು ವಿಸ್ಮಯವೇ. ಇದಕ್ಕೆ ಎರಡು ತಲೆ ಒಂದು ದೇಹ. ಇದರ ಸಂತತಿ ಈಗ ತೀರಾ ವಿರಳವಾಗಿದೆ.
ಒಮ್ಮೆ ಕಾಡಿನಲ್ಲಿ ಒಂದು ಗಂಡಭೇರುಂಡ ಪಕ್ಷಿಯು ಆಹಾರಕ್ಕಾಗಿ ಅರಣ್ಯದಲ್ಲೆಲ್ಲಾ ಹುಡುಕಾಡುತ್ತಿತ್ತು. ಮಾವಿನ ಹಣ್ಣಿನ ಮರವೊಂದು ಅದರ ಕಣ್ಣಿಗೆ ಕಾಣಿಸಿತು. ಮರದಕೆಳಗೆ ಬಿದ್ದ  ಮಾವಿನಹಣ್ಣುಗಳನ್ನು ಎಡತಲೆಯ ಕೊಕ್ಕಿನಿಂದ ತಿನ್ನುತ್ತಿರಲು, ಬಲ ತಲೆಯು ಮರದ ಮೇಲಿನ ರಸಭರಿತ ಹಣ್ಣುಗಳನ್ನು ಕಂಡಿತು. ಅದರ ಮೇಲೇರಿ ಬಲತಲೆಯಿಂದ ರಸಭರಿತ ಹಣ್ಣುಗಳನ್ನು ತಿನ್ನತೊಡಗಿತು. ಹೀಗೆಯೇ ಕೆಲದಿನಗಳು ಎಡತಲೆಯು ಕೆಳಗೆಬಿದ್ದ ಹಣ್ಣುಗಳನ್ನು ತಿನ್ನುವುದನ್ನು ಮುಂದುವರೆಸಿತ್ತು, ಕಾರಣ ಕೆಳಗೆ ಬಿದ್ದು ಕೊಳೆತ ಹಣ್ಣಿನ ಹುಳಿರುಚಿಗೆ ಅದು ಒಗ್ಗಿಕೊಂಡಿತ್ತು. ಕಾಲಕ್ರಮೇಣ ಕೆಳಗೆಬಿದ್ದ ಹಣ್ಣುಗಳು ಖಾಲಿಯಾದವು. ಬಲತಲೆಯು ಯಾವಾಗಲೂ ರಸಭರಿತವಾದ ಮರದ ಮೇಲಿನ ಹಣ್ಣುಗಳನ್ನು ಮಾತ್ರ ತಿನ್ನುತಿತ್ತು. ಅವು ಖಾಲಿಯಾಗದೇ, ಅದಕ್ಕೆ ನಿರಂತರವಾಗಿ ರಸಭರಿತವಾದ ಹಣ್ಣುಗಳು ಸಿಕ್ಕುತ್ತಿದ್ದವು. ಹೋಗುತ್ತಿದ್ದುದು ಒಂದೇಹೊಟ್ಟೆಗಾದರೂ ಈ ವೈಶಿಷ್ಟ್ಯದಿಂದ ಕೂಡಿದ ಗಂಡಭೇರುಂಡ ಇದಾಗಿತ್ತು. 

ಇದು ನಮ್ಮ ಕಥೆಯೇ. ಅರಣ್ಯವೆಂದರೆ ಈ ಸೃಷ್ಟಿ. ಗಂಡಭೇರುಂಡ ನಾವೇ. ಇನ್ನು ಎರಡುತಲೆಗಳೆಂದರೆ, ಇಂದ್ರಿಯ ಸುಖ ಮತ್ತು ಅತೀಂದ್ರಿಯ ಸುಖಪಡೆಯಲು ಇರುವ ನಮ್ಮ ಶರೀರದಲ್ಲಿನ ವ್ಯವಸ್ಥೆ. ಕೆಳಗೆಬಿದ್ದ ಮಾವಿನ ಹಣ್ಣು ತಕ್ಷಣವೇ ಕಾಣುವ ಇಂದ್ರಿಯ ಸುಖ, ಕಾಲಕ್ರಮೇಣ ಕೆಳಗೆಬಿದಿದ್ದ ಹಣ್ಣುಗಳು ಖಾಲಿಯಾಗುವುದೆಂದರೆ,  ಇಂದ್ರಿಯ ಸುಖವು ಶಾಶ್ವತವಲ್ಲ ಮತ್ತು ದುಃಖಮಿಶ್ರಿತ. ಬಲತಲೆ, ಮರದಮೇಲೆ ರಸಭರಿತ ಹಣ್ಣು ಕಂಡಿತು ಎಂದರೆ, ತಪಸ್ಯೆಯಿಂದ ಯೋಗದೃಷ್ಟಿಯಲ್ಲಿ ಊರ್ಧ್ವದಲ್ಲಿ ಕಾಣಬೇಕಾದ ಪರಂಜ್ಯೋತಿ ದರ್ಶನ. ಮೇಲೇರಿ ರಸಭರಿತವಾದ ಹಣ್ಣನ್ನೇ ತಿನ್ನುತ್ತಿತ್ತು ಎಂದರೆ ಬೇಕಾದಾಗ ಸ್ವ-ಇಚ್ಛೆಯಿಂದ ಯೋಗಮಾರ್ಗದಲ್ಲಿ ಹೋಗಿ ಪರಂಜ್ಯೋತಿಯಲ್ಲಿ ಲೀನವಾಗುತ್ತಿತ್ತು. ಆದರೂ ಖಾಲಿಯಾಗುತ್ತಿರಲಿಲ್ಲವೆಂದರೆ –ಪರಂಜ್ಯೋತಿಯ ಅನುಭವದ ಶಾಶ್ವತವಾದ ಪರಮಸುಖ. ಹೋಗುತ್ತಿದ್ದದ್ದು ಒಂದೇ ಹೊಟ್ಟೆ ಎಂದರೆ ಒಳಗಿರುವಜೀವಕ್ಕೆ. ಈ ವೈಶಿಷ್ಟ್ಯದಿಂದ ಕೂಡಿದ ಗಂಡಬೇರುಂಢವೆಂದರೆ, ಯೋಗ-ಭೋಗಾಯತನವಾದ ಈ ಶರೀರ. ಇಂತಹ ಜೀವನ ದೃಷ್ಟಿ ವಿರಳ. ಹಾಗೆಯೇ ಗಂಡಭೇರುಂಡವೂ ವಿರಳವೇ.

"ಜೀವನ ಒಂದು ಗಂಡ - ಭೇರುಂಡ ಪಕ್ಷಿಯಂತೆ ದ್ವಿಮುಖವಾದದ್ದು. ಒಂದು ಗಂಡ, ಇನ್ನೊಂದು ಭೇರುಂಡ. ಹೀಗೆ ದ್ವಿಮುಖ ಜೀವನದ ಈ ಪಕ್ಷಿ ಅಪ್ರತಿಹತವಾದ ನಡೆಯಿಂದ ದಿವಿಯನ್ನೂ ಭುವಿಯನ್ನೂ ಮುಟ್ಟಬಲ್ಲ ಭೂಸುರ ಪಕ್ಷಿಯಾಗಿದೆ. ಹೀಗೆಯೇ ಇಲ್ಲಿಯೂ ಏಕಶರೀರ, ಪ್ರವೃತ್ತಿ - ನಿವೃತ್ತಿ ಮಾರ್ಗಗಳೆಂಬ ದ್ವಿಮುಖ. ಎರಡಕ್ಕೂ ಹೊಂದಿಕೊಳ್ಳುವಂತೆ ಚತುರ್ಭದ್ರವನ್ನು ಸಾಧಿಸುವುದೇ ಧ್ಯೇಯ. ಅದಕ್ಕೊಸ್ಕರವಾಗಿ ಹೋರಾಟ, ಹಾರಾಟ ಎಲ್ಲವೂ ಇದೆ." ಎಂಬ ಯೋಗಿವರೇಣ್ಯ ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಸ್ಮರಣೀಯವಾಗಿದೆ.

ನಾವೆಲ್ಲರೂ, ನಮ್ಮ ದೇಶದ ಮಹರ್ಷಿಗಳಂತೆ ಯೋಗ-ಭೋಗಗಳಿಗೆ ಆಶ್ರಯವಾದ ನಮ್ಮಗಂಡಭೇರುಂಡ ರೂಪೀ ಶರೀರವನ್ನು ಇಹ-ಪರಜೀವನಗಳನ್ನು ಅನುಭವಿಸಲು ಯೋಗ್ಯವಾಗುವಂತೆ ಇಟ್ಟುಕೊಳ್ಳುವಂತಾಗಲಿ ಮತ್ತು ಮಹತ್ತರವಾದುದನ್ನು ಸಾಧಿಸುವಂತಾಗಲಿ. 

ಸೂಚನೆ: 24/09/2020 ರಂದು ಈ ಲೇಖನ ವಿಶ್ವ ವಾಣಿ ಯಲ್ಲಿ ಪ್ರಕಟವಾಗಿದೆ.    


To know more about Astanga Yoga Vijnana Mandiram (AYVM) please visit our Official Website, Facebook and Twitter pages

ವೆಂಕಟೇಶ ಬ್ರಹ್ಮರಥೋತ್ಸವದ ಅಂತರಾರ್ಥ (Venkatesha Brahmarathotsavada Antarartha)

 


  ಲೇಖಕರು:ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)ಬ್ರಹ್ಮರಥೋತ್ಸವ-ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ:

ರಥೋತ್ಸವಗಳು ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗ. ದೇವಸ್ಥಾನದ ಪೂಜೆಯಲ್ಲಿ ಅತ್ಯಂತ ಪ್ರಮುಖವಾಗಿರುವ ಬ್ರಹ್ಮರಥೋತ್ಸವ ಇದಾಗಿದೆ. "ತೇರನೇರಿ ಬೀದಿಯಲಿ ಮೆರೆವ ರಂಗನ ನೋಡದ ಕಂಗಳಿದೇತಕೋ" ಎಂಬಂತೆ ವಿಶೇಷವಾಗಿ ರಥೋತ್ಸವದ ಬಗ್ಗೆ ದಾಸರು ಕೊಂಡಾಡಿದ್ದಾರೆ. ಆಗಮ ಶಾಸ್ತ್ರಗಳಲ್ಲಿ ರಥೋತ್ಸವದ ಬಗ್ಗೆ ಅದ್ಭುತವಾದ ಕೊಂಡಾಟವಿದೆ. ಎಷ್ಟರಮಟ್ಟಿನ ಕೊಂಡಾಟ ಎಂದರೆ "ರಥಸ್ಥಂ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ" - ಆ ರಥದಲ್ಲಿ ಇರುವ ದೇವನನ್ನು ನೋಡಿದರೆ ಅವನಿಗೆ ಪುನರ್ಜನ್ಮವಿಲ್ಲ ಎಂದು ಘೋಷಣೆ ಮಾಡುತ್ತಾರೆ. ನಮಗೆಲ್ಲ ಆಶ್ಚರ್ಯವಾಗಬಹುದು. ಮೋಕ್ಷವನ್ನು ಹೊಂದಲು ಗುರುಗಳ ಅನುಗ್ರಹ, ಸಾಧನೆ, ಅನುಷ್ಠಾನ ವ್ರತ ನಿಯಮಗಳು, ಏಕಾಗ್ರತೆ, ಧ್ಯಾನ, ಯೋಗಾಭ್ಯಾಸ, ವೇದಾಧ್ಯಯನ ಇತ್ಯಾದಿ ಇಷ್ಟಾರು ವಿಸ್ತಾರವಾದ ಸಾಧನಾ ಮಾರ್ಗಗಳನ್ನು ಹೇಳಿದ್ದಾರೆ. ಅಷ್ಟೆಲ್ಲ ಕಷ್ಟವೇ ಇಲ್ಲದೇ ಮನೆ ಮುಂದೆ ಬಂದ ರಥದಲ್ಲಿರುವ ದೇವರನ್ನು ನೋಡಿದರೆ ಸಾಕು ಎಂದರೆ ಈ ಸಾಧನಾ ಮಾರ್ಗಗಳೆಲ್ಲ ಏಕೆ ಎನ್ನಿಸಬಹುದು.

ಯಾವುದು ಆ ರಥ?:

ಆ ರಥ ಯಾವುದು? ಉಪನಿಷತ್ತು ಅಪ್ಪಣೆ ಕೊಡಿಸಿದಂತೆ- ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವತು..ಜೀವನ ಯಾತ್ರೆಗೆ ಸಾಧನವಾದ ನಮ್ಮ ದೇಹವೇ ರಥವಾಗಿದೆ. ರಥಿಯೇ ಭಗವಂತನ ಅಂಶವಾದ ಜೀವನಾಗಿದ್ದಾನೆ. ನಿಶ್ಚಯಾತ್ಮಕವಾದ ಬುದ್ಧಿಯೇ ಸಾರಥಿ. ಮನಸ್ಸೇ ಕಡಿವಾಣ. ನಮ್ಮನ್ನು ಎಲ್ಲೆಡೆಗೆ ಒಯ್ಯುವ ಇಂದ್ರಿಯಗಳೇ ಕುದುರೆಗಳು. ಅರ್ಜುನನಂತೆ ನಮ್ಮ ಗಮ್ಯಸ್ಥಾನವಾದ ಪರಮಾತ್ಮನನ್ನೇ ಸಾರಥಿಯನ್ನಾಗಿ ಇಟ್ಟುಕೊಂಡರೆ ಅಂತಹ ರಥವು ದಾರಿ ತಪ್ಪದು. "ಜೀವನದ ಅಪಾರ್ಥಗಳನ್ನೆಲ್ಲ ಕಳೆದು ಜೀವನವನ್ನು ಸಾರ್ಥಕಪಡಿಸಿಕೊಳ್ಳುವ ಉದ್ದೇಶದಿಂದ ಅವನು ಪಾರ್ಥಸಾರಥಿಯನ್ನು ಇಟ್ಟುಕೊಂಡನಪ್ಪಾ" ಎಂಬುದು ಶ್ರೀರಂಗ ಮಹಾಗುರುಗಳ ಅಮೃತವಾಣಿ. ಅವನು ನರರಥದಲ್ಲಿರುವ ನಾರಾಯಣ. ನಮ್ಮ ಶರೀರರಥದ ಪ್ರತಿನಿಧಿಯೇ ಹೊರಗಿನ ರಥವಾಗಿದೆ. ರಥದ ಶಿಲ್ಪದಲ್ಲಿ ಕೆಳಸ್ತರದಲ್ಲಿ ಭೌತಿಕ ಜೀವನದ ಶಿಲ್ಪಗಳನ್ನೆಲ್ಲಾ ನೋಡಬಹುದು. ಅಲ್ಲಿ ಜುಗುಪ್ಸಿತವಾದ ಶಿಲ್ಪಗಳೂ ಇವೆ. ದೇವರ ರಥದಲ್ಲಿ ಇದೆಲ್ಲವೂ ಏಕೆ ಎಂದರೆ, ನಮ್ಮ ಶರೀರದಲ್ಲಿರುವ ವಿಷಯಗಳನ್ನು ಅಲ್ಲೂ ಚಿತ್ರಿಸಿದ್ದಾರೆ. ನಮ್ಮನ್ನೇ ಅಲ್ಲಿ ಪ್ರತಿನಿಧಿಸಿರುವುದು. ಆ ರಥ ಇಡೀ ಬ್ರಹ್ಮಾಂಡದ ಪ್ರತಿನಿಧಿಯಾಗಿರುವಂತೆಯೇ ಈ ಪಿಂಡಾಂಡದ ಪ್ರತಿನಿಧಿಯೂ ಆಗಿದೆ. ನಾವು ಸಂಸ್ಕಾರಗಳಿಗೆ ಒಳಪಡದೇ ಪಶುಭಾವದಲ್ಲೇ, ಇಂದ್ರಿಯಲಾಲಸೆಗಳಲ್ಲೇ ಜೀವನ ನಡೆಸುತ್ತಿದ್ದರೆ ಕೆಳಸ್ತರದ ಜೀವನ. ಮೇಲಿನ ಸ್ತರಗಳಲ್ಲಿ ಗುರು-ಶಿಷ್ಯರ, ದೇವತೆಗಳ, ತ್ರಿಮೂರ್ತಿಗಳ ಚಿತ್ರಗಳೆಲ್ಲವನ್ನೂ ನೋಡಬಹುದು. ಜೀವನದಲ್ಲಿ ಊರ್ಧ್ವ ದೃಷ್ಟಿ ಬೆಳೆಸಿಕೊಂಡು ಜೀವನ ಮೂಲದ ಕಡೆಗೆ ಹೆಜ್ಜೆಹಾಕುವ ಸಂಸ್ಕಾರಗಳನ್ನು ಬೆಳೆಸಿಕೊಂಡಾಗ ಅಂತರ್ದರ್ಶನಕ್ಕೆ ವಿಷಯ. ಅಲ್ಲಿ ನಮ್ಮನ್ನು ಆಳುವ ದೇವತೆಗಳ ದರ್ಶನವನ್ನೂ ಪಡೆಯಬಹುದು. ಅದಕ್ಕೂ ಮೇಲೆ ವಿಶ್ವಮೂಲನಾದ ನಾರಾಯಣನನ್ನೂ ನೋಡಬಹುದಾಗಿದೆ. ಹಾಗೆ ನೋಡುವಂತಾದರೆ ಪುನರ್ಜನ್ಮದ ಮಾತೇ ಇಲ್ಲ.

ಭಗವಂತನ ಮನೋರಥೋತ್ಸವ:

ನಾವು ನಮ್ಮೊಳಗೇ, ಈ ನರರಥದಲ್ಲೇ ಅವನನ್ನು ನೋಡಬೇಕಾಗಿರುವುದು. ನಮ್ಮ ಜೀವನ ಯಾತ್ರೆಯೆಲ್ಲ ಅವನ ಉತ್ಸವವಾಗಬೇಕು. ನಮ್ಮ ನಡೆನುಡಿ, ಆಚಾರ-ವಿಚಾರ ಎಲ್ಲದರಲ್ಲೂ ಅಂತರಂಗದ ಸ್ವಾಮಿಯಾದ ಅವನ ಆಶಯವೇ ತುಂಬಿದ್ದರೆ ನಮ್ಮ ಜೀವನವೂ ನಿತ್ಯ ರಥೋತ್ಸವ. ನಮ್ಮ ನಮ್ಮ ಮನೋರಥಗಳ ಉತ್ಸವ ನಾವೀಗ ಮಾಡುತ್ತಿದ್ದೇವೆ. ಅದು ಭಗವಂತನ ಮನೋರಥದ ಉತ್ಸವವಾದಾಗ ಜೀವನ ಆನಂದಮಯ. ಹೀಗೆ ರಥೋತ್ಸವವನ್ನು ಋಷಿಗಳು ನಮ್ಮನ್ನು ನಮಗೆ ನೆನಪಿಸಲು, ನಮ್ಮ ಜೀವನದ ಗುರಿಯನ್ನು ನೆನಪಿಸಲು ತಂದಿದ್ದಾರೆ. ರಥೋತ್ಸವದಲ್ಲಿ ಭಾಗವಹಿಸಿದವರೆಲ್ಲರೂ "ಮಡಿ"ಯೇ. ರಥೋತ್ಸವದಿಂದ ಹಿಂತಿರುಗಿ ಬಂದು, ಮಡಿಗಾಗಿ ಸ್ನಾನ ಮಾಡಿದರೆ ಪಾಪಭಾಗಿಯಾಗುತ್ತೇವೆ ಎಂದು ಆಗಮಗಳು ಎಚ್ಚರಿಸುತ್ತವೆ. ರಥೋತ್ಸವದಲ್ಲಿ ರಥವನ್ನು ಎಳೆಯುವಾಗ ಎಲ್ಲರೂ ಬ್ರಹ್ಮಭಾವದಲ್ಲಿಯೇ ಇರುವುದರಿಂದ ಆ ಜಾಗದಲ್ಲಿ ಯಾವ ಮೈಲಿಗೆಯೂ ಇಲ್ಲ. ಅಲ್ಲಿ ಎಲ್ಲವೂ ಮಡಿಯಾಗಿರುತ್ತದೆ. ಭಗವಂತನ ಮನೋರಥವನ್ನು ಎಳೆಯುವ ಹಕ್ಕು ಎಲ್ಲರದೂ. ಎಲ್ಲರೂ ಅದರಲ್ಲಿ ಭಾಗವಹಿಸಿ ಕೃತಾರ್ಥರಾಗಬೇಕು. ರಥೋತ್ಸವದಲ್ಲಿ ಭಾಗವಹಿಸುವ ಎಲ್ಲರ ಕೆಲಸಗಳೂ ಪವಿತ್ರವೇ. ವೇದಮಂತ್ರಗಳನ್ನು ಹೇಳುವ ಬ್ರಾಹ್ಮಣರಿಂದ ನಾದಸ್ವರ ನುಡಿಸುವವರವರೆಗೆ ಎಲ್ಲ ಸೇವೆಗಳೂ ಶ್ರೇಷ್ಠವೇ. ಎಲ್ಲರ ಲಕ್ಷ್ಯವೂ ರಥಸ್ಥನಾದ ಗೋವಿಂದನೇ.

ಗರುಡ-ನಂದಿಯರ ಆವಾಹನೆ:

ರಥಗಳಲ್ಲಿ ಗರುಡನನ್ನು ಆವಾಹನೆ ಮಾಡುತ್ತಾರೆ. ಅವನೇ ವಿಷ್ಣುರಥ. ಆನೆ, ಕುದುರೆ ಇತ್ಯಾದಿ ಎಲ್ಲ ವಾಹನಗಳಲ್ಲೂ ವೈಷ್ಣವಾಗಮಗಳ ಪ್ರಕಾರ ಗರುತ್ಮಂತನನ್ನೇ ಆವಾಹನೆ ಮಾಡುತ್ತಾರೆ. ವೇದಮಯವಾದ ಪಕ್ಷಿಯೇ ಗರುಡ-ಗರುತ್ಮಂತ. ನಮ್ಮೊಳಗೆಯೂ ಪ್ರಾಣ ಅಪಾನಗಳೆಂಬ ಎರಡು ರೆಕ್ಕೆಗಳ ಪ್ರಾಣಶಕ್ತಿಯೇ ಗರುತ್ಮಂತ. ಅವನು ನಮ್ಮನ್ನು ಭೌತಿಕ-ಪಾರಮಾರ್ಥಿಕ ಕ್ಷೇತ್ರಗಳಿಗೆ ಒಯ್ಯಬಲ್ಲನು. ಆ ಶಕ್ತಿಯನ್ನು ಹೊರಗಿನ ರಥದಲ್ಲೂ ಆವಾಹನೆ ಮಾಡಬೇಕು. ಶೈವಾಗಮಗಳಲ್ಲಿ ನಂದಿಯನ್ನು ರಥದಲ್ಲಿ ಆವಾಹನೆ ಮಾಡುತ್ತಾರೆ. "ಮಹಾ ಜ್ಞಾನಾಕಾಶದಲ್ಲಿ ನಂದಿಯು ತನ್ನ ಸಕಲ ವಿಲಾಸಗಳಿಂದ ಮಹಾದೇವನನ್ನು ಒಯ್ಯುತ್ತಿದ್ದಾನೆ" ಎಂದು ಆ ದೇವ ದೇವನನ್ನು ಒಳಗೆ ಕಂಡು ಅನುಭವಿಸಿದ ಮಹಾತ್ಮರ ಮಾತು.

ನಮ್ಮ ಶರೀರ-ಮಹಾತ್ಮರ ದೃಷ್ಟಿ:

ಜ್ಞಾನಿಗಳು ನಮ್ಮ ದೇಹವನ್ನು ರಥವಾಗಿ, ಏಣಿಯಾಗಿ, ದೋಣಿಯಾಗಿ, ವಿಮಾನವಾಗಿ ಕಂಡಿದ್ದಾರೆ. ಪೂಜ್ಯರಾದ ತುಳಸೀದಾಸರು ಮಾನವ ದೇಹವನ್ನು ನರಕ-ಸ್ವರ್ಗ-ಮೋಕ್ಷ ಎಲ್ಲಕ್ಕೂ ನಮ್ಮನ್ನು ಮುಟ್ಟಿಸುವ ಏಣಿ ಎಂದು ಕೊಂಡಾಡಿದ್ದಾರೆ. ಮಹತ್ತಾದ ಪುಣ್ಯವೆಂಬ ಹಣವನ್ನು ಕೊಟ್ಟು ಈ ಮಾನವ ಶರೀರವೆಂಬ ದೋಣಿಯನ್ನು ಪಡೆದಿದ್ದೇವೆ, ಈ ದೋಣಿ ಮುರಿದು ಹೋಗುವ ಮೊದಲೇ ಈ ಭವಸಾಗರವನ್ನು ದಾಟಬೇಕು ಎಂದು ಋಷಿಗಳು ಎಚ್ಚರಿಸುತ್ತಾರೆ. ಹಾಗೆಯೇ ಈ ನರರಥದಲ್ಲಿ ನಾರಾಯಣನ ಸಾರಥ್ಯವನ್ನು ಪ್ರಾರ್ಥಿಸಬೇಕಾಗಿದೆ. ಮಾರ್ಗದರ್ಶಕನೂ ಅವನೇ, ಗಮ್ಯಸ್ಥಾನವೂ ಅವನೇ.

ವೆಂಕಟೇಶ ರಥೋತ್ಸವ:

ಪ್ರಸ್ತುತ ತಿರುಪತಿಯಲ್ಲಿ ವೆಂಕಟೇಶ್ವರನ ರಥೋತ್ಸವವು ಸಂಪನ್ನವಾಗಲಿದೆ. ಏಳು ಬೆಟ್ಟದ ಒಡೆಯ. ನಮ್ಮೊಳಗಿನ ಸಪ್ತಚಕ್ರಗಳಿಗೂ ಆ ಲಕ್ಷ್ಮೀನಾರಾಯಣರೇ ಒಡೆಯರು. ಅವರ ಪರಮೋನ್ನತ ಸ್ಥಾನ ಸಹಸ್ರಾರಚಕ್ರ. ಅದು ವಿಷ್ಣುಲಕ್ಷ್ಮಿಯರ ನಿಕೇತನ. ಹೊರಗೂ ಏಳು ಬೆಟ್ಟದ ಮೇಲೆ ನೆಲೆಸಿದ್ದಾನೆ. ವಿಶ್ವವ್ಯಾಪಿ ಅವನು. ಅದಕ್ಕಾಗಿಯೇ ವಿಷ್ಣು ಎಂಬ ಹೆಸರು. ನಮ್ಮ ಮನೋರಥಗಳಲ್ಲಿ ಆ ವೆಂಕಟೇಶನನ್ನು ಕುಳ್ಳಿರಿಸಿ ಉತ್ಸವ ಆಚರಿಸೋಣ. ರಥೋತ್ಸವದ ಹಿಂದಿನ ಮಹರ್ಷಿಮನೋರಮವಾದ ದೃಷ್ಟಿಯನ್ನು ನೆನೆಯುತ್ತಾ ಸಕಲ ವೈಭವಗಳಿಂದ ಸಂಪನ್ನವಾಗುವ ವೆಂಕಟೇಶನ ರಥೋತ್ಸವದಲ್ಲಿ ಆನಂದದಿಂದ ಭಾಗವಹಿಸೋಣ. ಪ್ರತ್ಯಕ್ಷವಾಗಿ ಹೋಗಲಾಗದಿದ್ದರೂ ನಮ್ಮ ಮನೋಬುದ್ಧಿಗಳಿಂದ ಅವನ ತೇರನ್ನು ಎಳೆಯೋಣ.

ಸೂಚನೆ: 19/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.     To know more about Astanga Yoga Vijnana Mandiram (AYVM) please visit our Official Website, Facebook and Twitter pages

ஆதி கவியின் சுவையான விருந்து(delicious feast of the ancient poet)

மூலம்: டா. என் எஸ் ஸுரேஷ் 
தமிழாக்கம்: வனஜா
மின்னஞ்சல் : (lekhana@ayvm.in)விருந்து என்றவுடன் நம் மனதிற்கு வருவது நம் நாவிற்கு சுவை கூட்டும் திருமணம், உபநயனம் போன்ற விழாக்களில் படைக்கப்படும் அறுசுவை(இனிப்பு, கசப்பு, புளிப்பு, துவர்ப்பு, காரம், உப்பு) உணவு வகைகள். மேற்சொன்ன சுவை மிகுந்த உணவு புலன்களுக்கு த்ருப்தி,  உடல், மனம், அறிவு போன்றவற்றிற்கு ஊட்டமளிப்பதோடல்லாமல் புலன்களுக்கப்பாற்பட்ட நிறைவையும் அளிக்கின்றன. தூய்மையான கபடமற்ற மனதுடன் தயாரித்து பரிமாறப்படும் இத்தகு தூய உணவு  உயிரணுக்களை சுத்தம் செய்வதல்லாமல், அறிவை நிலைபடுத்துகிறது. இது தொடரும் போது உலக தளைகளிலிருந்து   நீக்கி மூலத்துடன் இணையும் அனுபவத்தை அளிக்கும் என சாந்தோக்ய உபநிடதம் பறைசாற்றுகிறது.

ஒரு மிக சிறந்த இல்லத்தரசியால்  அளிக்கப்படும் விருந்தே மூலத்திற்கு அழைத்து செல்லும் தகுதி பெறுவதால் ஸ்ரீராமனின் கதையை சுவைத்துணர்ந்த தவமுனி இல்லறத்தானான   வால்மீகி அளிக்கும் விருந்தை குறித்து  ஊகிக்க வாய்ப்புண்டு. விருந்தளிப்பவன்  தன் விருந்தினருக்கு உயர்ரக உணவளிப்பதுடன் அவருடன் வரும் மற்றவர்க்கும்  சேர்த்து விருந்து அளிக்கிறான். அவ்வாறே ஆதிகவியான வால்மீகி  ஆத்மனுக்கு ஆனந்தம் அளிப்பதுடன் புலன்களுக்கும் த்ருப்தி அளிக்கிறார். தன் ராமாயணமென்னும் சுவையான விருந்தை ச்ருங்காரம்(அன்பு), நகைப்பு,  வியப்பு, கருணை, கோபம், வீரம், அச்சம், வெறுப்பு, சாந்தம்(அமைதி) எனப்படும் ஒன்பது வகை உணர்வுகளுடன் கலந்து அளிக்கிறார்.

எல்லா நதிகளும் இறுதியில் கடலை சென்றடைவதை போல் எல்லா உணர்வுகளும் இறுதியில் அமைதியில் ஒன்றுகின்றன.  நம் வணக்கத்திற்குரிய ஸ்ரீரங்கமஹாகுருவின்  கண்ணோட்டத்தில் ஒன்பது குணங்களில் சாந்தமே உயர்வானது, அழிவற்றது, சாந்தமானது, தூய்மையானது, மாறாதது, வானத்தைப்போல் களங்கமற்றது. மற்ற குணங்கள் வானத்தில் உலவும் பல வண்ண  மேகங்கள் போன்று  மாறும் தன்மை கொண்டவை. ஆயின் சாந்த குணம் மேகங்களற்ற தூய வானத்தை போன்றது. அதே போன்று தன் மீது ப்ரதிபலிக்கும் பல வகையான வண்ண சித்திரங்களால்  பாதிப்படையாத  வெள்ளி திரையைப்போன்று  ஆத்மாவும் தன் மீது படியும் ஏனைய குணங்களால் மாறாது தன் உண்மையான நிலையிலேயே நீடிக்கிறது.

நவரஸங்களால் கிட்டும் மனநிறைவு உடலையும் புலன்களையும் மட்டும் தழுவாமல்  குணங்களின் கடலில்(ரஸ புருஷனில்) ஆழமாக மூழ்கும்படியும் வழி நடத்த வேண்டும். உபநிடதங்களின்  கூற்றான "ரஸோவை ஸ:" என்பது போல் அந்நிலையில் நம்மை நிலைநிறுத்துதல் வேண்டும். அப்போது தான் "எலுமிச்சையை முழுதும் பிழிந்ததுபோல்" எனும் பழமொழியின் படி எல்லா வகையிலும் குணங்களை முழுமையாக அனுபவித்த மனநிறைவு ஏற்படும். மேற்கூறிய உண்மைகளுக்கு இச்சிறந்த கவியின் ராமாயணம் ஒரு உண்மையான சான்றாகும் என்பது ராமாயண இதிஹாஸத்தின் பெருமையை முழுதும் உணர்ந்தவர்களின் கூற்று.

ஸ்ரீ ராமனை நவரச நாயகனாக கொண்டாடும் 'ராம கர்ணாம்ருதம்' ('ச்ருங்காரம் க்ஷிதிநந்தனா விஹரணே') பெயர்பெற்ற ச்லோகமாகும். நவரஸங்களும் எவ்வாறு ஸ்ரீராமனின் வாழ்க்கையில் இடம்பெற்றன என்பதை இந்த ஸ்லோகம் விளக்குகிறது.

குறிப்பு: இக்கட்டுரை யின் கன்னட மூலம் AYVM blogs ல் காணலாம். 
To know more about Astanga Yoga Vijnana Mandiram (AYVM) please visit our Official Website, Facebook and Twitter pages

Wednesday, 23 September 2020

ಖಟ್ವಾ೦ಗನ ಆದರ್ಶ (Khatvaogana Adharsa)

ಲೇಖಕರು: ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ : lekhana@ayvm.in)ಖಟ್ವಾ೦ಗ  ಮಹಾಪರಾಕ್ರಮಿಯಾದ ರಘುವಂಶದ ಚಕ್ರವರ್ತಿ. ಯುದ್ಧದಲ್ಲಿ ಅವನನ್ನು ಜಯಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ.  ಅವನು ದೇವತೆಗಳ ಪ್ರಾರ್ಥನೆಯಂತೆ, ದೇವೆತೆಗಳ ಪರವಾಗಿ ಅನೇಕ ವರ್ಷಗಳ ಕಾಲ ಯುದ್ಧ ಮಾಡಿದನು. ತನ್ನ ಸಾಮರ್ಥ್ಯ ಮತ್ತು ಕೌಶಲ್ಯದಿಂದ ದೈತ್ಯರನ್ನು ಸಂಹರಿಸಿದನು. ತನ್ನ ಕರ್ತವ್ಯವನ್ನು ಮುಗಿಸಿ, ದೇವತೆಗಳು ಬೀಳ್ಕೊಡುವ ಸಮಯ. ಕೃತಜ್ಞರಾದ ದೇವತೆಗಳು ಆತನಿಗೆ ಏನಾದರೂ ಪ್ರತ್ಯುಪಕಾರ ಮಾಡಲು ಬಯಸಿದರು. ಆದರೆ ಖಟ್ವಾ೦ಗನಿಗೆ ಯಾವ ಬಯಕೆಯೂ ಇರಲಿಲ್ಲ. ಆತ ನಿರ್ಲಿಪ್ತ, ತೃಪ್ತ ಮನಸ್ಕನಾದ ರಾಜರ್ಷಿ.  ಕೊನೆಯಲ್ಲಿ "ತನ್ನ ಆಯುಷ್ಯ ಎಷ್ಟು ಉಳಿದಿದೆ?" ಎಂಬುದಾಗಿ ಮಾತ್ರ ಪ್ರಶ್ನಿಸಿದ. ದೇವತೆಗಳು ದಿವ್ಯ ದೃಷ್ಟಿಯಿಂದ ನೋಡಿ ಸ್ವಲ್ಪ ಗಾಬರಿಗೊಂಡರು. "ರಾಜನ್, ನಿನ್ನ ಆಯುಷ್ಯದಲ್ಲಿ ಒಂದು ಮುಹೂರ್ತ ಕಾಲ ಮಾತ್ರ ಉಳಿದಿದೆ !!" ಎಂಬ ಕಟು ಸತ್ಯವನ್ನು ತಿಳಿಸಿದರು. ಆದರೂ, ಖಟ್ವಾ೦ಗನ ಮುಖಮಂಡಲದಲ್ಲಿ ಸ್ವಲ್ಪವೂ ಬೇಸರ ಇರಲಿಲ್ಲ. ತುರ್ತಾಗಿ ತನ್ನ ವಾಸಸ್ಥಾನಕ್ಕೆ ತೆರಳಿದ. ಅರ್ಧ ಮುಹೂರ್ತ ಕಾಲದಲ್ಲಿ ಮನಸ್ಸನ್ನು ಸಂಯಮಿಸಿ, ಒಳಗೆ ಯೋಗಸ್ಥಿತಿಯಲ್ಲಿ ಮುಳುಗಿದ. ನಿಗದಿತ ಆಯುಷ್ಯಕಾಲ ಮುಗಿದು ಮೃತ್ಯು ಎಳೆದೊಯ್ಯುವ ಮುನ್ನವೇ, ತನ್ನ ಯೋಗಬಲದಿಂದ ಶರೀರವನ್ನು, ಧರಿಸಿದ ಬಟ್ಟೆಯಂತೆ ತ್ಯಾಗ ಮಾಡಿ ಪರಮಾತ್ಮನ ಪಾದವನ್ನು ಸೇರಿದ. ಶ್ರೀರಾಮನ ಪೂರ್ವಜನಾದ ಈ ರಘುವಂಶಿಯು ಕಾಳಿದಾಸನು ಹೇಳುವ "ಯೋಗೇನಾ೦ತೇ ತನುತ್ಯಜಾಮ್ " ಎನ್ನುವಂತೆ, ಯೋಗಬಲದಿಂದಲೇ ತನ್ನ ಶರೀರವನ್ನು ಕಳಚಿ ಹಾಕಿದ. 

ಪ್ರತಿಯೊಂದು ಜೀವಿಯಲ್ಲಿಯೂ ಮೃತ್ಯುಭಯ ಸಹಜ. ಎಂದೋ ಘಟಿಸುವುದಕ್ಕೆ ಹೆದರುವ ನಾವು, ಇನ್ನು ಒಂದು ಗಂಟೆ ಕಾಲದಲ್ಲಿ ಮೃತ್ಯು ಕಾದಿದೆ ಎಂದು ತಿಳಿದರೆ?!  "ಹೆಂಡತಿ ಮಕ್ಕಳನ್ನು ಒಮ್ಮೆಯಾದರೂ ನೋಡಬೇಕು", "ಬಂಧು-ಬಾಂಧವರನ್ನು ಸಂಧಿಸಬೇಕು",  "ಇಷ್ಟು ದಿನ ಏನು ಸಾಧಿಸಿದೆ?" ಮುಂತಾದ  ಆಲೋಚನೆಗಳು ಮನಸ್ಸಿನಲ್ಲಿ ಮೂಡುವುದಲ್ಲವೇ?. ಏತನ್ಮಧ್ಯೆ ಯೋಗಸಾಧನೆ, ಸಮಾಧಿಗಳೆಂತು?

ತತ್ವಾತ್ಮಕವಾಗಿ ಗಮನಿಸುವುದಾದರೆ, ನಮ್ಮಲ್ಲಿ ಶರೀರ, ಇಂದ್ರಿಯ, ಮನೋಬುದ್ಧಿಗಳ ಸಹಜ ವಿಕಾಸಾಭಿವೃದ್ಧಿ ಮತ್ತು ಒಳತತ್ವ ದರ್ಶನಕ್ಕೆ ಸಹಾಯಕವಾದ ಶಕ್ತಿಗಳೇ ದೈವೀಶಕ್ತಿಗಳು. ಅಲ್ಲದೆ, ಅರಿಷಡ್ವರ್ಗದೆಡೆಗೆ ಸೆಳೆಯುವ ಶಕ್ತಿಗಳು ಆಸುರೀ ಶಕ್ತಿಗಳು. ಇಂದ್ರಿಯ ಭೋಗ ಮತ್ತು ಒಳತತ್ವ ದರ್ಶನಕ್ಕೆ ಅಡಚಣೆಯಿಲ್ಲದೆ, ವ್ಯವಹಾರ ನಿರ್ವಹಣೆಯೇ ಅಂತರಂಗದ ದೇವಾಸುರ ಯುದ್ಧ. ಇದರಲ್ಲಿ ದೇವತೆಗಳ ಜಯ ಸಾಧಿಸಿದವರಿಗೆ ಕೊನೆಗಾಲದಲ್ಲಿ ಸಮಸ್ಥಿತಿಯುಂಟು. ಸಂಯಮವುಂಟು.

ಶರೀರವೇ ನಮ್ಮ ಮನೆ. ಬ್ರಹ್ಮದಂಡವೇ ಮೂಲ ನೆಲೆ. ಅದರೊಳಗೆ ಪ್ರವೇಶ ಮಾಡಿ ಯೋಗದಿಂದ ಶರೀರ ತ್ಯಾಗ ಮಾಡಿದರೆ   "ಯೋಗೇನಾ೦ತೇ ತನುತ್ಯಜಾಮ್".  ಇದು ಆಗಬೇಕಾದರೆ,  ಬಾಲ್ಯದಲ್ಲಿ ಧಾತುಗತವಾಗುವಂತೆ ವಿದ್ಯೆಯ ಅಧ್ಯಯನವಾಗಿ, ಯೌವನದಲ್ಲಿ ಧರ್ಮದಿಂದ ಕೂಡಿದ ಅರ್ಥ-ಕಾಮಗಳನ್ನು ಅನುಭವಿಸಬೇಕು. ಜೀವನದ  ಗಾಡಿ ಓಡಿಸುವಾಗ ಧರ್ಮವೆಂಬ ನಿಯಂತ್ರಣವಿಲ್ಲದಿದ್ದರೆ ಅಪಘಾತವಾಗುವುದು  ಸರ್ವೇ ಸಾಮಾನ್ಯ . ವಾರ್ಧಕ್ಯದಲ್ಲಿ ಒಳತತ್ವ ಒಂದೇ ಸತ್ಯ ನಿತ್ಯ ಎಂದು ತಿಳಿದು, ಕೊನೆಯಲ್ಲಿ ಶರೀರ ಕವಚ ಸ್ವೇಚ್ಛೆಯಿಂದ ತೊರೆದವರೇ ಧೀರರು. ಖಟ್ವಾ೦ಗ,  ದದೀಚಿ ಮಹರ್ಷಿಗಳು ಮತ್ತು ಭೀಷ್ಮಾಚಾರ್ಯರಂತಹ ಧೀರರ ಹೆಜ್ಜೆಯಲ್ಲಿ ನಾವೂ ಬಾಳುವಂತಾಗಲಿ ಎಂದು ಆಶಿಸೋಣ.

ಸೂಚನೆ: 23/09/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages

ದೇವತೆಗಳು ಎಲ್ಲಿರುವರು ? (Devategalu Elliruvaru ?)

ಲೇಖಕರು: ಮೈಥಿಲೀ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)


ದಧೀಚಿ ಮಹರ್ಷಿಯು ದೇವಕಾರ್ಯಕ್ಕಾಗಿ ತಮ್ಮ ಮೂಳೆಗಳನ್ನು ದಾನಮಾಡಿದರು. ಅದರಿಂದ ಕುಪಿತನಾದ ಅವರ ಮಗ ಪಿಪ್ಪಲಾದನು ಮಹಾದೇವನನ್ನು ಕುರಿತು ತಪಸ್ಯೆಯನ್ನಾಚರಿಸಿದ. ಪ್ರಸನ್ನನಾದ ಶಿವನು ವರವನ್ನು ದಯಪಾಲಿಸುತ್ತೇನೆಂದಾಗ ಪಿಪ್ಪಲಾದನು ದೇವತೆಗಳೆಲ್ಲರನ್ನೂ ನಾಶಮಾಡಬೇಕೆಂಬ ವರವನ್ನು ಕೇಳಿದ. ಮಹಾದೇವನು  ಸೃಷ್ಟಿನಿಯಮವನ್ನು ಕೆಡಿಸುವುದು ಉಚಿತವಲ್ಲವೆಂದು ಆತನನ್ನು ಸಮಾಧಾನಗೊಳಿಸಲು ಎಷ್ಟು ಪ್ರಯತ್ನಿಸಿದರೂ ಆತ ಒಪ್ಪಲಿಲ್ಲ. ಮಹಾದೇವನು ತನ್ನ ಮೂರನೆಯ ಕಣ್ಣನ್ನು ದರ್ಶನಮಾಡಿದರೆ ಪಿಪ್ಪಲಾದನು ಕೇಳಿದ ವರವನ್ನು ನೀಡುವುದಾಗಿ ಒಪ್ಪಿದ. ಆ ದರ್ಶನಕ್ಕಾಗಿ ಪಿಪ್ಪಲಾದನು ಕಠಿಣ ತಪಸ್ಯೆಯನ್ನಾಚರಿಸಿ ಸಫಲಗೊಂಡ. ಆಗ ಶಿವನ ಮೂರನೆಯ ಕಣ್ಣಿನಿಂದ ರಾಕ್ಷಸನೊಬ್ಬ ಉದ್ಭವವಾದ. ಪಿಪ್ಪಲಾದನು ದೇವತೆಗಳನ್ನು ನಾಶಮಾಡುವಂತೆ ಆತನಿಗೆ ಆಜ್ಞಾಪಿಸಿದ.  ಕೂಡಲೇ ರಾಕ್ಷಸನು ಪಿಪ್ಪಲಾದನನ್ನೇ ಕೊಲ್ಲಲು ಬಂದ. ಗಾಬರಿಗೊಂಡ ಪಿಪ್ಪಲಾದ "ಹೀಗೇಕೆ ಮಾಡುತ್ತಿರುವೆ?" ಎಂದ. ರಾಕ್ಷಸನು "ನಿನ್ನ ಆಜ್ಞೆಯಂತೆ ಮೊದಲು ನಿನ್ನೊಳಗಿರುವ ದೇವತೆಗಳನ್ನೇ ಕೊಲ್ಲುತ್ತೇನೆ" ಎಂದ. ಕೊನೆಗೆ ಮಹಾದೇವನನ್ನೇ ಮೊರೆಹೋಗಬೇಕಾಯಿತು. ಕೊನೆಗೆ ಈಶ್ವರನು, ಪಿಪ್ಪಲಾದನು ಕೋಪವನ್ನು ತ್ಯಜಿಸಿ ಸಮಾಧಾನಗೊಳ್ಳುವಂತೆ ಮಾಡಿದ.

ಸಾಮಾನ್ಯವಾಗಿ ದೇವತೆಗಳೆಂದರೆ ಎಲ್ಲೋ ದೂರದಲ್ಲಿ ದೇವಲೋಕದಲ್ಲಿರುವವರು, ಹೋಮ ಹವನಾದಿಗಳಿಂದ ಪೂಜಿಸಿದಾಗ ಅಲ್ಲಿಂದಲೇ ನಮ್ಮನ್ನು ಅನುಗ್ರಹಿಸುವವರೆಂಬ ಕಲ್ಪನೆಯಿದೆ. ಆದರೆ ದೇವಲೋಕದ ದೇವತೆಗಳು ಶಕ್ತಿರೂಪದಲ್ಲಿ ನಮ್ಮೊಳಗೇ ಬೆಳಗುತ್ತಿರುವರು. ಸೃಷ್ಟಿಯಲ್ಲಿ ನಾನಾ ತರಹದ ಜವಾಬ್ದಾರಿಗಳನ್ನು ಹೊತ್ತು ನಡೆಸುವ  ಕಾರ್ಯದಲ್ಲಿ ಸೃಷ್ಟೀಶನಿಂದ ನೇಮಕವಾಗಿರುವ ತತ್ತ್ವಗಳಿವು. ನಮ್ಮ ಇಂದ್ರಿಯ-ಬುದ್ಧಿ-ಮನಸ್ಸುಗಳೆಲ್ಲಕ್ಕೂ ಶಕ್ತಿಯನ್ನು ನೀಡಿ ನಮ್ಮನ್ನು ಕಾರ್ಯಗತಗೊಳಿಸುವವರು. ಇವರನ್ನು ಪೂಜಿಸಿ ನಮ್ಮ ಕೃತಜ್ಞತೆಯನ್ನರ್ಪಿಸಿ ತೃಪ್ತಿಗೊಳಿಸಿದರೆ ಅವರ ಅನುಗ್ರಹಕ್ಕೆ ಪಾತ್ರರಾಗಬಹುದು. ಇವರೆಲ್ಲರೂ ಪರಮಾತ್ಮನ ವಿಭೂತಿಗಳೇ ಆಗಿರುವುದರಿಂದ ದೇವತೆಗಳಿಗೆ ಮಾಡುವ ಪೂಜೆ-ನಮಸ್ಕಾರಗಳೆಲ್ಲವೂ ಅವರೊಳಗೆ ಅಂತರ್ಯಾಮಿಯಾಗಿರುವ ದೇವದೇವನನ್ನೇ ತಲುಪುತ್ತದೆ. ಅವರ ಮೂಲಕ ಅನುಗ್ರಹ  ಮಾಡುವವನೂ ಪರಮಾತ್ಮನೇ.

ಇವೆಲ್ಲವೂ ಪುರಾಣಗಳಲ್ಲಿನ ಕಾಲ್ಪನಿಕ ಕಥಾಪಾತ್ರಗಳೆನ್ನುವ ಅಭಿಪ್ರಾಯದವರೂ ಉಂಟು. ಆದರೆ ನಮ್ಮ ಭೌತಿಕಶರೀರದೊಳಗೆ ದೈವಿಕ(ದೇವತಾಕೇಂದ್ರ)-ಆಧ್ಯಾತ್ಮಿಕ(ಪರಂಜ್ಯೋತಿಸ್ಥಾನ) ಕ್ಷೇತ್ರಗಳುಂಟೆಂಬುದು ಮಹರ್ಷಿಗಳು ಕಂಡರಿತ ಸತ್ಯ. ನಮ್ಮ ಶರೀರದಲ್ಲಿ ಮನಸ್ಸು-ಪ್ರಾಣಗಳು ಸಂಚರಿಸಬಹುದಾದ ಸಾವಿರಾರು ನಾಡೀಪಥಗಳುಂಟು. ಇಂದೂ ಸಹ ಧ್ಯಾನಾವಸ್ಥೆಯಲ್ಲಿ ಮನಸ್ಸು ನಿರ್ದಿಷ್ಟನಾಡೀಪಥಗಳಲ್ಲಿ ಸಾಗುವಾಗ ಆಕಾರ-ಆಭೂಷಣ-ಆಯುಧಗಳೆಲ್ಲದರ ಸಹಿತವಾದ ದೇವತೆಗಳ ದರ್ಶನ ಮಾಡಬಹುದು ಎಂಬುದು ಶ್ರೀರಂಗಮಹಾಗುರುಗಳ ಅನುಭವವಾಣಿ.ಇಂತಹ ದೇವತೆಗಳ ಪ್ರಸನ್ನತೆಯನ್ನು ಗಳಿಸಿ ಬಾಳನ್ನು ಬೆಳಗಿಸಿಕೊಳ್ಳೋಣ.

ಸೂಚನೆ: 23/09/2020 ರಂದು ಈ ಲೇಖನ ಉದಯವಾಣಿ ಯಲ್ಲಿ ಪ್ರಕಟವಾಗಿದೆ.    To know more about Astanga Yoga Vijnana Mandiram (AYVM) please visit our Official Website, Facebook and Twitter pages

Tuesday, 22 September 2020

ವಿಶ್ವ ಶಾಂತಿಗೆ ಭಾರತೀಯರ ಕೊಡುಗೆ (Vishva shantige Bharatiyara Kouuge)

ಲೇಖಕರು: ಶ್ರೀ ಜಿ. ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


ವಿಶ್ವಶಾಂತಿ ದಿವಸವು ಸೆಪ್ಟಂಬರ್ ತಿಂಗಳಿನಲ್ಲಿ ಬರುವ ಒಂದು ಪ್ರಮುಖ ದಿನ. ಸಂಯುಕ್ತರಾಷ್ಟ್ರವು ಘೋಷಿಸಿರುವ ಈ ದಿನದಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಂತನ ಮಂಥನಗಳು ನಡೆಯುತ್ತವೆ. ವಿಶ್ವ ಶಾಂತಿಯ ಬಗ್ಗೆ ಇಂದು ಪ್ರಚಲಿತವಿರುವ ಚಿಂತನೆಯ ಸಾರವೆಂದರೆ - ಘರ್ಷಣೆ ಇಲ್ಲದಿರುವಿಕೆಯೇ ಶಾಂತಿ, ಸಾಮಾಜಿಕ ವರ್ಗಗಳಲ್ಲಿ ಘರ್ಷಣೆ ಇಲ್ಲದಿದ್ದರೆ ಮತ್ತು ರಾಷ್ಟ್ರಗಳ ನಡುವೆ ಯುಧ್ಧವಿಲ್ಲದಿದ್ದರೆ, ಅದೇ ವಿಶ್ವಶಾಂತಿ ಎನ್ನುವುದಾಗಿದೆ. ಈ ಚಿಂತನೆ ಮುಂದುವರೆದು ಯಾವ ರೀತಿಯ ಸಾಮಾಜಿಕ, ರಾಷ್ಟ್ರ ವ್ಯವಸ್ಥೆಯು ಈ ವಿಶ್ವ ಶಾಂತಿಗೆ ಪೂರಕ, ಯಾವುದು ಬಾಧಕ ಎನ್ನುವ ಬಗ್ಗೆ ಚರ್ಚೋಪಚರ್ಚೆಗಳು ನಡೆಯುತ್ತಿರುತ್ತವೆ. "ಪ್ರಜಾಪ್ರಭುತ್ವದ ದೇಶಗಳ ನಡುವೆ ಯುದ್ಧ ನಡೆದಿರುವ ಪ್ರಸಂಗಗಳು ಅಪರೂಪ, ಆದುದರಿಂದ ಪ್ರಜಾಪ್ರಭುತ್ವವೇ ವಿಶ್ವಶಾಂತಿಗೆ ಬುನಾದಿ" ಎಂದು ಕೆಲವರು ವಾದಿಸಿದರೆ, "ಕಮ್ಯೂನಿಸಮ್ ನ ರಾಷ್ಟ್ರಸ್ವಾಮ್ಯವೇ ವಿಶ್ವಶಾಂತಿಗೆ ಕೀಲಿಕೈ- ಏಕೆಂದರೆ, ಎಲ್ಲ ಸ್ವತ್ತೂ ರಾಷ್ಟ್ರಕ್ಕೇ ಸೇರಿಬಿಟ್ಟರೆ, ಸಮಾಜದಲ್ಲಿ ವರ್ಗಗಳೇ ಇರುವುದಿಲ್ಲ, ಮತ್ತು ಸ್ವತ್ತಿಗಾಗಿ ಕಿತ್ತಾಡುವ ವರ್ಗಗಳ ನಡುವಿನ ಘರ್ಷಣೆಯೂ ಇರುವುದಿಲ್ಲ" ಎಂದು ಇನ್ನು ಕೆಲವರು ವಾದಿಸುತ್ತಾರೆ. ಒಟ್ಟಾರೆ ಹೇಳುವುದಾದರೆ ಸಾಮಾಜಿಕ ವರ್ಗಗಳ ನಡುವೆ ಘರ್ಷಣೆ ಇಲ್ಲದಿರುವಿಕೆ, ರಾಷ್ಟ್ರಗಳ ನಡುವೆ ಯುದ್ಧವಿಲ್ಲದಿರುವಿಕೆಯೇ ಶಾಂತಿ ಎನ್ನುವುದು ಇಲ್ಲಿ ಎದ್ದು ತೋರುವ ಅಭಿಪ್ರಾಯವಾಗಿರುತ್ತದೆ. ಆದರೆ ಮಹರ್ಷಿಗಳ ಚಿಂತನೆಯು ಇಂದಿನ ಪ್ರಸ್ತುತ ಚಿಂತನೆಗಿಂತ ಬಹಳ ಆಳವಾಗಿದ್ದು, ವೈಜ್ಞಾನಿಕವೂ ಆಗಿದೆ. ಮಹರ್ಷಿಗಳು ವೈಯಕ್ತಿಕ ಮಟ್ಟದಲ್ಲಿ ಶಾಂತಿಯೆಂದರೇನು? ಅದನ್ನು ಸಾಧಿಸುವ ಬಗೆ ಹೇಗೆ? ಎಂಬುದನ್ನು ತಪಸ್ಯೆ ಹಾಗೂ ತಮ್ಮ ಮೇಧಾಬಲದಿಂದ ನಿಶ್ಚಯಿಸಿ ಈ ಶಾಂತಿಯನ್ನು ಸಂಸ್ಕೃತಿ ನಾಗರಿಕತೆಗಳ ಮೂಲಕ ಸಮಾಜ ಮತ್ತು ರಾಷ್ಟ್ರಮಟ್ಟದಲ್ಲಿ ಹರಡಿದ್ದಾರೆ.  


ಶಾಂತಿ ಎನ್ನುವ ಪದವೇ ಏನು ಹೇಳುತ್ತದೆಯೆಂದು ಗಮನಿಸುವುದಾದರೆ, ಅದು ಶಮ್ ಧಾತುವಿನಿಂದ ನಿಷ್ಪನ್ನವಾಗಿದ್ದು, ಕಡಿಮೆ ಮಾಡುವುದು ಅಥವಾ ಇಲ್ಲದಾಗಿ ಮಾಡುವುದು ಎನ್ನುವ ಅರ್ಥವನ್ನು ಹೊಂದಿದೆ. ಏನನ್ನು ಇಲ್ಲದಾಗಿ ಮಾಡುವುದು ಎಂದರೆ, ಮನೋವೃತ್ತಿಗಳನ್ನು ಇಲ್ಲದಾಗಿ ಮಾಡುವುದು. ಮನೋವೃತ್ತಿಗಳು ಇಲ್ಲವಾದಾಗ, ಸಮಾಧಿಸ್ಥಿತಿಯುಂಟಾಗಿ ಪರಮ ಶಾಂತಿ, ನೆಮ್ಮದಿ, ಅನಂದಗಳು ನೆಲೆಸುತ್ತದೆ. ಪಾತಂಜಲ ಯೋಗಸೂತ್ರವು "ಯೋಗಃ ಚಿತ್ತವೃತ್ತಿ ನಿರೋಧಃ" - ಚಿತ್ತವೃತ್ತಿಗಳು ಇಲ್ಲದಿರುವಿಕೆಯೇ- ಯೋಗ ಎಂದು ಘೋಷಿಸುತ್ತದೆ. ಈ ಶಾಂತಿಯು ವೈಯಕ್ತಿಕ ಮಟ್ಟದ ಅನುಭವ, ಅದನ್ನು ಸಮಾಜದಲ್ಲಿ, ರಾಷ್ಟ್ರಮಟ್ಟದಲ್ಲಿ ಹರಡಬೇಕಾದರೆ, ಈ ಶಾಂತಿಗೂ ಮತ್ತು ನಮ್ಮ ಜೀವನಕ್ರಮದ ಅಂಗಗಳಾದ ವ್ಯವಹಾರ, ಆಹಾರ, ವಿಹಾರ, ವಿಚಾರಗಳನ್ನೊಳಗೊಂಡ  ಸಂಸ್ಕೃತಿ-ನಾಗರಿಕತೆಗಳಿಗೂ ಸಂಬಂಧವೇನು ಎನ್ನುವುದನ್ನು ಅರ್ಥ ಮಾಡಿಕೊಂಡು ಯೋಗಕ್ಕೆ ಅವಿರೋಧವಾಗಿ ಜೀವನಕ್ರಮವನ್ನು ರೂಪಿಸಬೇಕಾಗುತ್ತದೆ.


 ನಮ್ಮ ದೇಹದಲ್ಲಿ ವಾತ, ಪಿತ್ತ, ಶ್ಲೇಷ್ಮಗಳೆಂಬ ತ್ರಿದೋಷಗಳು ಸದಾ ಕೆಲಸ ಮಾಡುತ್ತಿದ್ದು, ಇವು ಸಮ ಪ್ರಮಾಣದಲ್ಲಿದ್ದಾಗ ದೇಹವು ಪ್ರಸನ್ನವಾಗಿದ್ದು ಚಿತ್ತ ವೃತ್ತಿ ಕಡಿಮೆಯಾಗಿ ಸಮಾಧಿ ಸ್ಥಿತಿಗೆ ಪೋಷಕವಾಗಿರುತ್ತದೆ ಮತ್ತು ವಿಷಮ ಪ್ರಮಾಣದಲ್ಲಿದ್ದಾಗ ದೇಹವನ್ನು ಕೆರಳಿಸಿ, ಚಿತ್ತದವೃತ್ತಿಗಳನ್ನು ಹೆಚ್ಚು  ಮಾಡುತ್ತವೆ. ಹಾಗೆಯೇ, ಸತ್ತ್ವ, ರಜಸ್ ಮತ್ತು ತಮಸ್ ಎಂಬ ಮೂರೂ ಗುಣಗಳು ನಮ್ಮ ಮನಸ್ಸಿನ ಅವಸ್ಥೆಗೆ ಕಾರಣವಾಗಿರುತ್ತವೆ. ಸತ್ತ್ವವು ಪ್ರಧಾನವಾಗಿದ್ದಾಗ ಮನಸ್ಸು ಏಕಾಗ್ರವಾಗಿದ್ದರೆ, ರಜಸ್ಸು ಪ್ರಧಾನವಾಗಿದ್ದಾಗ ಮನಸ್ಸು  ಚಂಚಲವಾಗಿರುತ್ತದೆ ಮತ್ತು ತಮಸ್ಸು ಪ್ರಧಾನವಾಗಿದ್ದಾಗ ಮನಸ್ಸು ಜಡವಾಗಿರುತ್ತದೆ. ಮನಸ್ಸು ಸತ್ತ್ವಪ್ರಧಾನವಾಗಿದ್ದಾಗ ಸಮಾಧಿ ಸ್ಥಿತಿಗೆ ಪೋಷಕವಾಗಿರುತ್ತದೆ  ಹಾಗೂ ರಜಸ್ತಮೋಗುಣಗಳು ಪ್ರಧಾನವಾಗಿದ್ದಾಗ ಸಮಾಧಿಸ್ಥಿತಿಗೆ ಬಾಧಕವಾಗಿರುತ್ತದೆ.


ನಮ್ಮ ಜೀವನಕ್ರಮವು ಈ ತ್ರಿದೋಷ, ತ್ರಿಗುಣಗಳ ಮೇಲೆ ಪರಿಣಾಮವನ್ನುಂಟು ಮಾಡುವುದಾಗಿದ್ದು ಈ ಪರಿಣಾಮಗಳನ್ನು ಆರ್ಷ ವಿಜ್ಞಾನವು ವಿವರಿಸುತ್ತದೆ. ಉದಾಹರಣೆಗೆ, ಸಾತ್ತ್ವಿಕ ಆಹಾರವಾದ ಹಸುವಿನ ಹಾಲು, ಜೇನುತುಪ್ಪಗಳು ಶರೀರದಲ್ಲಿ ಲಘುತ್ವವನ್ನುಂಟು ಮಾಡುವುದಲ್ಲದೇ, ಮನಸ್ಸು ತಿಳಿಯಾಗುವಂತೆ ಮಾಡಿದರೆ, ತಾಮಸ ಆಹಾರವಾದ ಎಮ್ಮೆಮೊಸರು, ತಂಗಳನ್ನ ಮೊದಲಾದವು ಶರೀರ, ಮನಸ್ಸುಗಳಲ್ಲಿ ಜಡತ್ವವನ್ನುಂಟು ಮಾಡುತ್ತದೆ. ಸಂಗೀತವನ್ನು ಶಾಸ್ತ್ರೀಯ ಕ್ರಮದಲ್ಲಿ ಅನುಸಂಧಾನ ಮಾಡಿದರೆ ಕಿವಿಗೂ ಇಂಪಾಗಿದ್ದು ಮನಸ್ಸನ್ನೂ ಅಂತರ್ಮುಖವಾಗಿಸುತ್ತದೆ. ಅಶಾಸ್ತ್ರೀಯ ಅನುಸಂಧಾನ  ಇಂದ್ರಿಯಗಳನ್ನು ಕೆರಳಿಸಿ ಚಿತ್ತವೃತ್ತಿಗಳನ್ನು ಜಾಸ್ತಿ ಮಾಡುತ್ತದೆ. ಸಾಹಿತ್ಯವು ಮನಸ್ಸಿಗೆ ಆಹಾರವಾದ ನವರಸಗಳನ್ನು ಒದಗಿಸುತ್ತದೆ. ಈ ನವರಸಗಳನ್ನು ಸಂಯೋಜಿಸಬೇಕಾದರೆ, ಅದ್ಭುತ, ರೌದ್ರ, ವೀರ ಮೊದಲಾದ ರಸಗಳಿಂದ ಯಥೋಚಿತವಾಗಿ ರಂಜಿಸಿ ಕೊನೆಗೆ ಶಾಂತರಸದಲ್ಲಿ ನಿಲ್ಲಿಸಿದರೆ ಚಿತ್ತವೃತ್ತಿಗಳು ಕಡಿಮೆ ಅಥವಾ ಇಲ್ಲವಾಗುತ್ತವೆ ಮತ್ತು ಸಂಯೋಜನೆ ಸರಿಯಿಲ್ಲದಿದ್ದರೆ ಮನಸ್ಸು ವಿಷಾದದಲ್ಲಿ ನಿಂತು ಚಿತ್ತವೃತ್ತಿಗಳು ಹೆಚ್ಚಲೂಬಹುದು. ರಾಮಾಯಣ, ಮಹಾಭಾರತ, ಶಾಕುಂತಲ, ರಘುವಂಶ ಮೊದಲಾದ ಆದರ್ಶ ಇತಿಹಾಸ, ಕಾವ್ಯ, ನಾಟಕಗಳೆಲ್ಲವೂ ಸಾಹಸ, ವಿರಹ, ಪ್ರಣಯ ಮುಂತಾದ ಪ್ರಸಂಗಗಳಿಂದ ಕೂಡಿದ್ದರೂ ಅಂತ್ಯದಲ್ಲಿ ಶಾಂತರಸವನ್ನೇ ಉಂಟು ಮಾಡುತ್ತವೆ. ಆದುದರಿಂದ ಮಹರ್ಷಿಗಳು ವೈಜ್ಞಾನಿಕ ಚಿಂತನೆಯನ್ನನುಸರಿಸಿ ನಮ್ಮ ದೇಹೇಂದ್ರಿಯ ಮನಸ್ಸುಗಳಿಗೆ ಪುಷ್ಟಿ, ರುಚಿ, ರಂಜನೆಗಳು ದೊರಕಿ ತನ್ಮೂಲಕ ಚಿತ್ತವೃತ್ತಿಗಳು ಕಡಿಮೆ ಅಥವಾ ಇಲ್ಲವಾಗಿಸುವಂತೆ ಜೀವನಕ್ರಮವನ್ನು ರೂಪಿಸಿದ್ದಾರೆ. ಶ್ರೀರಂಗಮಹಾಗುರುಗಳ ಸರಳ ಮಾತುಗಳಲ್ಲಿ ಹೇಳುವುದಾದರೆ, ಮಹರ್ಷಿಗಳು ಜೀವನಕ್ರಮವನ್ನು ಯೋಗ-ಭೋಗಮಯವನ್ನಾಗಿಸಿ, ಭೋಗವನ್ನು ಯೋಗಕ್ಕೆ ಅವಿರೋಧವಾಗಿ ಅನುಭವಿಸುವಂತೆ ರೂಪಿಸಿದ್ದಾರೆ. ಶ್ರೀರಂಗ ಮಹಾಗುರುಗಳು ಯೋಗವು ಹೇಗೆ ಭಾರತೀಯರ ಚಿಂತನೆ, ಧಾರ್ಮಿಕ ಆಚರಣೆಗಳು, ಆಹಾರ ವ್ಯವಸ್ಥೆ, ವೇಷಭೂಷಣಗಳು, ಮನೋರಂಜನೆ, ಸಾಮಾಜಿಕ ವ್ಯವಸ್ಥೆ, ರಾಷ್ಟ್ರವ್ಯವಸ್ಥೆಯಲ್ಲೆಲ್ಲಾ ಹಾಸು ಹೊಕ್ಕಾಗಿದೆಯೆಂಬುದನ್ನು ವಿಸ್ತಾರವಾಗಿ, ವೈಜ್ಞಾನಿಕವಾಗಿ, ಪ್ರಯೋಗ ಸಹಿತವಾಗಿ ನಿರೂಪಿಸಿದ್ದಾರೆ.


ಧಾರ್ಮಿಕ ಕರ್ಮಗಳ ಕೊನೆಯಲ್ಲಿ ಒಂದು ಆಶೀರ್ವಚನವನ್ನು ಹೇಳುವುದುಂಟು - ಶಾಂತಿರಸ್ತು, ತುಷ್ಟಿರಸ್ತು, ಪುಷ್ಟಿರಸ್ತು, ಆಯುಷ್ಯಮಸ್ತು, ಅರೋಗ್ಯಮಸ್ತು, ಧನಧಾನ್ಯಾಭಿವೃದ್ಧಿರಸ್ತು, ಪುತ್ರಪೌತ್ರಾಭಿವೃದ್ಧಿರಸ್ತು, ಶಿವಂ ಕರ್ಮಾಸ್ತು, ಭಗವತ್ಪ್ರಸಾದ ಸಿದ್ಧಿರಸ್ತು ಎಂಬುದಾಗಿ. ಅಂದರೆ ಮೊದಲು ಶಾಂತಿಯನ್ನು ಅನುಭವಿಸಿದರೆ ಅದು ಮನಸ್ಸಿನಲ್ಲಿ ಹುರುಪು ಆನಂದಗಳನ್ನು ತುಂಬುತ್ತದೆ. ಈ ತುಷ್ಟಿಯಿಂದ ಶರೀರಕ್ಕೆ ಪುಷ್ಟಿ, ತನ್ಮೂಲಕ ಆಯುರಾರೋಗ್ಯ, ತನ್ಮೂಲಕ ಸತ್ಕರ್ಮಾಚರಣೆಯಿಂದ ಅನೇಕ ಲೌಕಿಕ ಲಾಭಗಳು ಮತ್ತು ಕೊನೆಯಲ್ಲಿ ಚಿತ್ತನಿವೃತ್ತಿ ರೂಪವಾದ ಭಗವತ್ಪ್ರಸಾದವೂ ದೊರಕುವಂತಾಗಲಿ ಎನ್ನುವುದು ಇಲ್ಲಿನ ಆಶಯ. ಅಂದರೆ, ಶಾಂತಿಯೇ ಸರ್ವ ಪುರುಷಾರ್ಥಫಲಗಳಿಗೂ ಮೂಲವಾಗಿದೆ.

ಹೀಗೆ, ಶಾಂತಿಯನ್ನೇ ಕೇಂದ್ರವನ್ನಾಗಿಯೂ, ಪರಮ ಲಕ್ಷ್ಯವನ್ನಾಗಿಯೂ ಇಟ್ಟುಕೊಂಡಿರುವ ಭಾರತೀಯ ಸಂಸ್ಕೃತಿಯೇ ನಮ್ಮ ದೇಶವು ವಿಶ್ವ ಶಾಂತಿಗೆ ಕೊಡುವ ಕೊಡುಗೆಯಾಗಿದೆ.

ಸೂಚನೆ: 19/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.   To know more about Astanga Yoga Vijnana Mandiram (AYVM) please visit our Official Website, Facebook and Twitter pages

ಆಯಾಸಪಡದಿರುವಿಕೆ (Ayasapaḍadiruvike)

  ಲೇಖಕರು  - ವಿದ್ವಾನ್ ನರಸಿಂಹ ಭಟ್ ಬಡಗು
(ಪ್ರತಿಕ್ರಿಯಿಸಿರಿ lekhana@ayvm.in)
  

ಈಗ ನಾವು ವಿಚಾರಿಸಬೇಕಾದ ಆತ್ಮಗುಣ ಅನಾಯಾಸ. ಆಯಾಸಪಡದಿರುವುದು ಎಂದರ್ಥ. ಪ್ರತಿದಿನ ಪೂಜೆಯನ್ನು ಮಾಡಿ ಕೊನೆಯಲ್ಲಿ ನಾವು ಭಗವಂತನಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ – "ಅನಾಯಾಸೇನ ಮರಣಂ" ಎಂದು. ಅಂದರೆ ಮರಣವನ್ನು ಹೊಂದಬೇಕಾದರೆ ಯಾವುದೇ ಬಗೆಯ ಕ್ಲೇಶವನ್ನು ಅನುಭವಿಸುವಂತಾಗಬಾರದು ಎಂದು. ಯಾವುದಾರೂ ಒಂದು ಕಾರ್ಯವನ್ನು ಮಾಡಲು ಎಷ್ಟು ಪ್ರಯತ್ನ ಬೇಕೋ ಅದಕ್ಕಿಂತಲೂ ಹೆಚ್ಚು  ಪಯತ್ನಪಟ್ಟರೆ ಅದನ್ನು 'ಆಯಾಸ' ಎಂದು ಕರೆಯುತ್ತೇವೆ. ನಮಗೆ ಒಂದು ಪ್ರಶ್ನೆ ಮೂಡುತ್ತದೆ. ಯಾವುದೇ ಕ್ಲೇಶವನ್ನು ಪಡದೆ ಕಾರ್ಯವನ್ನು ಮಾಡಲು ಸಾಧ್ಯವೇ? ಎಂದು. ಅನಾಯಾಸವಾಗಿ ಕೆಲಸವನ್ನು ಮಾಡುವುದು ಹೇಗೆ? "ಯದಾರಂಭೇ ಭವೇತ್ ಪೀಡಾ ನಿತ್ಯಮತ್ಯಂತಮಾತ್ಮನಃ | ತದ್ವರ್ಜಯೇತ್ ಧರ್ಮ್ಯಮಪಿ ಸೋಽನಾಯಾಸಃ ಪ್ರಕೀರ್ತಿತಃ ||" ಅಂದರೆ ಯಾವ ಕಾರ್ಯವನ್ನು ಆರಂಭ ಮಾಡುವಾಗ ನಮಗೆ ಒಂದು ಬಗೆಯ ವೇದನೆ ಬಹಳವಾಗಿ ಉಂಟಾಗುತ್ತದೆಯೋ, ಅದು ಧರ್ಮಕ್ಕೆ ಅನುಕೂಲವಾಗುವಂತಹ ಕಾರ್ಯವೇ ಆದರೂ ಅದನ್ನು ಮಾಡಬಾರದು, ಇದನ್ನೇ 'ಅನಾಯಾಸ' ಎಂದು ಕರೆಯುತ್ತಾರೆ. ಇದೂ ಒಂದು ಆತ್ಮಗುಣವಾಗಿದೆ.  

ಕುಶಲಕರ್ಮವೇ ಅನಾಯಾಸ (ಯೋಗ)
ನಮಗೆ ಅತ್ಯಂತ ಮುಖ್ಯವಾಗಿ ಕೆಲಸ ಮಾಡಲು ಶರೀರ ಬೇಕು. ಶರೀರದಿಂದ ಕಾರ್ಯವನ್ನು ಮಾಡುವಾಗ ಅಂಗಾಂಗಗಳು ಬಳಲುವುದು ಸಹಜ. ಬಳಲಿಕೆ ಮಾತ್ರದಿಂದ ನಾವು ಅದನ್ನು ಆಯಾಸ ಎಂದು ಪರಿಗಣಿಸಲಾಗುವುದಿಲ್ಲ. ಈ ಬಳಲಿಕೆಯು ಮುಂದೆ ಯಾವುದಾದರೂ ಶಾರೀರಿಕವಾದ ಅನಾರೋಗ್ಯವನ್ನು ಉಂಟುಮಾಡುವಂತಾದರೆ ಅದನ್ನು ಆಯಾಸ ಎನ್ನಬೇಕಾಗುತ್ತದೆ. ಆಯುರ್ವೇದಾಚಾರ್ಯರಾದ ಚರಕರು ಯಾವುದು ಆರೋಗ್ಯ? ಯಾವುದು ಅನಾರೋಗ್ಯ? ಎಂಬುದನ್ನು ಸುಂದರವಾಗಿ ವಿವರಿಸಿದ್ದಾರೆ – ದೇಹದ ಏಳು ಬಗೆಯ ಧಾತುಗಳಲ್ಲಿ ಉಂಟಾಗುವ ವಿಷಮತೆಯನ್ನೇ 'ವಿಕಾರ' ಎಂದರು. ಅವುಗಳ ಸಾಮ್ಯವೇ 'ಪ್ರಕೃತಿ' ಎಂದು ಕರೆದರು. ಯಾವುದರಿಂದ ಸುಖವು ಲಭಿಸುವುದೋ ಅದನ್ನು ಪ್ರಕೃತಿ ಎಂದೂ, ಯಾವುದರಿಂದ ದುಃಖ ಉಂಟಾಗುವುದೋ ಅದನ್ನು ವಿಕಾರ ಎಂದೂ ಹೇಳುತ್ತಾರೆ. ಈ ವಿಕಾರವು ತತ್ಕ್ಷಣದಲ್ಲಿ ಉಂಟಾಗಬಹುದು ಅಥವಾ ಕಾಲಾಂತರದಲ್ಲೂ ಉಂಟಾಗಬಹುದು. ಕೆಲವೊಮ್ಮೆ ಕೆಲಸವನ್ನು ಮಾಡುವಾಗ ಆಯಾಸ ಉಂಟಾಗದಿರಬಹುದು. ಆದರೆ ಅದರ ಪ್ರಭಾವ ಮುಂದಿನ ದಿನಗಳಲ್ಲಿ ಕಾಣಬಹುದು. ಉದಾಹರಣೆಗೆ ಒಬ್ಬನು ತನ್ನ ಯಾವುದೋ ವೃತ್ತಿಯ ಕಾರಣಕ್ಕಾಗಿ ಪ್ರತಿನಿತ್ಯ ದೂರದ ಪ್ರಯಾಣ ಅಥವಾ ರಾತ್ರಿಯ ಪ್ರಯಾಣ ಮಾಡಬಹುದು. ಅದರ ದುಷ್ಪರಿಣಾಮವನ್ನು ಅವನು ಅನುಭವಿಸಬೇಕಾಗುತ್ತದೆ. ಇದನ್ನೇ ಮಹಾಭಾರತದಲ್ಲಿ ವಿದುರನೀತಿಯಲ್ಲಿ ಆರು ಬಗೆಯ ಸುಖವನ್ನು ಹೇಳುವಾಗ ಪ್ರತಿದಿನವೂ ದೂರದ ಪ್ರಯಾಣವನ್ನು ಮಾಡಬಾರದು ಎನ್ನಲಾಗಿದೆ. ಈ ಆಯಾಸವು ವಾತ, ಪಿತ್ತ, ಕಫಗಳೆಂಬ ತ್ರಿದೋಷಗಳ ಅಥವಾ ಸತ್ತ್ವ, ರಜಸ್ಸು, ತಮಸ್ಸುಗಳೆಂಬ ತ್ರಿಗುಣಗಳ ವಿಷಮತೆಗೆ ಕಾರಣವಾಗಿರಬಹುದು. ಈ ವಿಷಮತೆಯೇ ಮುಂದೆ ಶಾರೀರ ರೋಗವಾದ ವ್ಯಾಧಿ ಮತ್ತು ಮಾನಸಿಕ ರೋಗವಾದ ಆಧಿಗೂ ಕಾರಣವಾಗುತ್ತದೆ. ಇದರಿಂದ ನಮಗೆ ಆತ್ಮಸ್ವರೂಪಾನುಭವಕ್ಕೆ – ಭಗವಂತನ ಸಾಕ್ಷಾತ್ಕಾರಕ್ಕೆ ಬೇಕಾದ ಸಾಧನೆಗೆ ವಿಘ್ನ ಉಂಟಾಗುತ್ತದೆ. ಯೋಗಸೂತ್ರದಲ್ಲಿ ವ್ಯಾಧಿಯು ಹೇಗೆ ಯೋಗವಿಘ್ನವಾಗುವುದು ಎಂಬುದನ್ನು ವಿವರಿಸಿದ್ದಾರೆ. ಆತ್ಮಸಾಧನೆಗೆ ಭಂಗ ತರುವ ಕೆಲಸವನ್ನು ಮಾಡದೇ, ಮಾಡುವ ಕೆಲಸವನ್ನು ನಾಜೂಕಾಗಿ, ಕುಶಲತೆಯಿಂದ ಮಾಡಬೇಕು. ಅದನ್ನೇ 'ಯೋಗ'( "ಯೋಗಃ ಕರ್ಮಸು ಕೌಶಲಮ್") ಎನ್ನುತ್ತಾರೆ. ಹೀಗೆ ಮಾಡಿದಲ್ಲಿ ಮೊದಲೇ ಹೇಳಿದಂತೆ ಆನಾಯಾಸವಾದ ಮರಣವೂ ಸಂಭವಿಸುತ್ತದೆ. ಅಮರತ್ವವೂ ಲಭಿಸುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

ಸೂಚನೆ: 19/09/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.  


To know more about Astanga Yoga Vijnana Mandiram (AYVM) please visit our Official Website, Facebook and Twitter pages