Saturday, December 30, 2023

ವೃತ್ರಾಸುರನ ವೃತ್ತಾಂತ (Vrtrasurana Vrttanta)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)

ಅಧ್ಯಾತ್ಮಸಾಧನೆಗೆ ಸಂಬಂಧಿಸಿದ ಕ್ಲಿಷ್ಟತತ್ತ್ವಗಳನ್ನು  ಸಾಮಾನ್ಯ ಜನಗಳಿಗೆ ಕಥಾರೂಪದಲ್ಲಿ ತಿಳಿಸುವ ಕೌಶಲ್ಯ ಪುರಾಣಗಳದ್ದು. ಉದಾಹರಣೆಗೆ, ವೃತ್ರಾಸುರನ ಆಖ್ಯಾನವು ಶ್ರೀಮತ್ಭಾಗವತದಲ್ಲಿಯೂ ವೇದಗಳಲ್ಲಿಯೂ ಅನೇಕಕಡೆ ವಿವರಿಸಲ್ಪಟ್ಟಿದೆ.  ವೃತ್ರಾಸುರನು ಲೋಕಕಂಟಕ ಮತ್ತು ದೇವಕಂಟಕ.  ನಾನಾರೀತಿಯಲ್ಲಿ ಇಂದ್ರಾದಿದೇವತೆಗಳಿಗೆ  ಕಿರುಕುಳ ಕೊಡುತ್ತಿದ್ದನು. ಕೆಲವೊಮ್ಮೆ ಸರ್ಪರೂಪವನ್ನೂ ತಾಳುವುದರಿಂದ ಅಹಿ ಎಂಬ ಹೆಸರುಂಟು. ದೇವತೆಗಳ ನಿಯಮಿತ ಸಂಚಾರಮಾರ್ಗಗಳನ್ನು ತಡೆಯುತ್ತಿದ್ದನು. ಮೂರುಲೋಕದ ಪ್ರಯೋಜನಕ್ಕಾಗಿ ಹರಿದುಬರುತ್ತಿರುವ ತೀರ್ಥಪ್ರವಾಹದ ಮಾರ್ಗಗಳನ್ನು ಸ್ತಂಭನ ಮಾಡುತ್ತಿದ್ದನು. 

ಒಮ್ಮೆ ದೇವಗುರುವಾದ ಬೃಹಸ್ಪತಿಯು ಇಂದ್ರನಿಂದ ಗೌರವಿಸಲ್ಪಡದಿದ್ದುದರಿಂದ ಅದೃಶ್ಯರಾದರು. ತಾತ್ಕಾಲಿಕಗುರುವಾಗಿ ನೇಮಿಸಲ್ಪಟ್ಟ ತ್ವಷ್ಟೃವಿನ ಮಗನಾದ ವಿಶ್ವರೂಪನಿಗೆ ಅಸುರರ ಸಂಪರ್ಕವಿದ್ದದ್ದರಿಂದ  ಇಂದ್ರನು ಗುರುವನ್ನೇ ಸಂಹರಿಸಿದನು. ಅದರಿಂದ ತೀವ್ರಕುಪಿತನಾದ ತ್ವಷ್ಟೃುವು ಇಂದ್ರನನ್ನು ಕೊಲ್ಲಲು ಅಮೋಘವಾದ ಯಾಗವೊಂದನ್ನು  ಕೈಗೊಂಡನು. ಆದರೆ ವೇದಮಂತ್ರದ ಸ್ವರವ್ಯತ್ಯಾಸದಿಂದ (ಇಂದ್ರನನ್ನು ಸಂಹಾರಮಾಡುವ ಪುತ್ರನ ಬದಲು) ಇಂದ್ರನೇ ಸಂಹಾರಮಾಡುವ ಪುತ್ರನು ಹುಟ್ಟುವಂತಾಯಿತು. ಆತನೇ ವೃತ್ರ. ಯುವಕನಾಗಿಯೇ ಹುಟ್ಟಿದ ಆತನ ಜನನವಾದೊಡನೆ ಸಮಸ್ತ ಲೋಕಗಳೂ ನಡುಗಿದವು. ವೃತ್ರನು ಮಹಾಪರಾಕ್ರಮಿಗಳಾದ ಅಸುರರೆಲ್ಲರ  ನಾಯಕತ್ವವನ್ನು ವಹಿಸಿ ದೇವತೆಗಳಮೇಲೆ ಆಕ್ರಮಣಮಾಡಿ ವಿಜಯಗಳಿಸುತ್ತಿದ್ದ. ವರಬಲದಿಂದ ಬಲಿಷ್ಠನಾದ ಅವನನ್ನು ಯಾವ ಅಸ್ತ್ರಗಳೂ ಸಂಹರಿಸಲಾಗುತ್ತಿರಲಿಲ್ಲ. ಅವನ ಉಪದ್ರವವನ್ನು ತಾಳಲಾರದೇ ಇಂದ್ರನು, ಮಹಾವಿಷ್ಣುವಿನ ಸಲಹೆಯಂತೆ, ಮಹಾದಯಾಮಯರೂ ಸರ್ವದೇವತಾಶಕ್ತಿಮಯರೂ ಆದ ದಧೀಚಿಮಹರ್ಷಿಗಳನ್ನು ಪ್ರಾರ್ಥಿಸಿದನು.  ಸದಾ ಲೋಕಹಿತಚಿಂತಕರಾದ ಅವರು ದೇವಕಾರ್ಯಕ್ಕಾಗಿ ತಮ್ಮ ಬೆನ್ನುಮೂಳೆಯನ್ನು ದಾನಮಾಡಲು ಅನುಮತಿಸಿದರು. ಅದಕ್ಕಾಗಿ ಧ್ಯಾನಸಮಾಧಿಯಲ್ಲಿ ಅವರು ಶರೀರತ್ಯಾಗಮಾಡಿದಾಗ ಅವರ ಮೂಳೆಗಳಿಂದ ವಿಶ್ವಕರ್ಮನ ಮೂಲಕ ಅಮೋಘವಾದ ಪ್ರತ್ಯಸ್ತ್ರವಿಲ್ಲದ ವಜ್ರಾಯುಧವನ್ನು ನಿರ್ಮಿಸಿದನು. ಇದರ ಬಲದಿಂದ ಅತ್ಯಂತ ಉತ್ಸಾಹದಿಂದ ಇಂದ್ರನು ವೃತ್ರನನ್ನು ಎದುರಿಸಿದನು. ಮಹಾಸ್ತ್ರಸಂಪನ್ನನಾದ ಇಂದ್ರನನ್ನು ನೋಡಿ ಭಯದಿಂದ ಓಡಿದ ಅಸುರರನ್ನು ಹುರಿದುಂಬಿಸಿ ವೃತ್ರನು ಇಂದ್ರನಕಡೆಯ ದೇವತೆಗಳನ್ನೆಲ್ಲ ವಶಪಡಿಸಿಕೊಂಡು ಘೋರಯುದ್ಧ ನಡೆಸಿದನು.  ಇಂದ್ರನ ಐರಾವತದ ಕುಂಭಸ್ಥಳಕ್ಕೆ ಹೊಡೆದೋಡಿಸಿದನು. ಇಂದ್ರನು ಬೇಗನೇ ಅದನ್ನು ಸ್ವರೂಪಕ್ಕೆತಂದು ಯುದ್ಧ ಮುಂದುವರಿಸಿದಾಗ ಅವನು ಪ್ರಯೋಗಿಸಿದ ಅಸ್ತ್ರಗಲೆಲ್ಲವನ್ನೂ ವೃತ್ರನು ನುಂಗಿಹಾಕಿ ಇಂದ್ರನಿಗೆ ಭೀತಿಯನ್ನು ಹುಟ್ಟಿಸಿದನು! ವಜ್ರಾಯುಧವಲ್ಲದೆ ಇನ್ನಾವ ಅಸ್ತ್ರದಿಂದಲೂ ತನಗೆ ಮರಣವಿಲ್ಲವೆಂಬ ಗುಟ್ಟನ್ನು ತಾನೇ ತಿಳಿಸಿಕೊಟ್ಟನು. ಮತ್ತು ಅಸುರನಾದರೂ ವೃತ್ರನು ಇಂದ್ರನಿಗೇ ಅಧ್ಯಾತ್ಮತತ್ತ್ವವನ್ನು  ಉಪದೇಶಮಾಡಿದನು!

ಅಷ್ಟಲ್ಲದೆ, ಇಂದ್ರಸಹಿತವಾಗಿ ಐರಾವತವನ್ನೇ ನುಂಗಿಬಿಟ್ಟನು. ನಾರಾಯಣ-ಕವಚದ ಮಹಿಮೆಯಿಂದ  ಬದುಕಿದ್ದ ಇಂದ್ರನು ವೃತ್ರಾಸುರನ ಹೊಟ್ಟೆಯನ್ನು ಸೀಳಿಕೊಂಡು ಹೊರಬಂದು ಅವನ ತಲೆಯನ್ನು ವಜ್ರಾಯುಧದಿಂದ ಕಡಿದುಹಾಕಿದನು. ಆಗ ಲೋಕವೆಲ್ಲವೂ ಪ್ರಸನ್ನವಾಗಿ, ದೇವತೆಗಳು ಪರಮಾನಂದಭರಿತರಾದರು. ಅಮೃತದ ಮಳೆಸುರಿಯಿತು.

ವೃತ್ರಾಸುರನು ಅಧ್ಯಾತ್ಮಉಪದೇಶ ಮಾಡಿದ್ದು ಹೇಗೆಂದರೆ ಹಿಂದಿನ ಜನ್ಮದಲ್ಲಿ ಅವನು ಚಿತ್ರಕೇತುವೆಂಬ ರಾಜನಾಗಿದ್ದು ನಾರದಮಹರ್ಷಿಯಿಂದ ಉಪದೇಶಾನುಗ್ರಹ ಪಡೆದು ವಿದ್ಯಾಧರ ಪದವಿಯನ್ನು ಹೊಂದಿದ್ದನು. ನಂತರ ಮದಾಂಧನಾಗಿ ಪಾರ್ವತೀ-ಪರಮೇಶ್ವರರನ್ನು ಅವಹೇಳನ ಮಾಡಿದ್ದರಿಂದ ಕುಪಿತಳಾದ ಪಾರ್ವತಿಯು ಅಸುರನಾಗಿ ಹುಟ್ಟೆಂಬ ಶಾಪವನ್ನು ನೀಡುತ್ತಾಳೆ. ನಂತರ ಕ್ಷಮಾಪಣೆಬೇಡಿ ಅಸುರನಾದರೂ ಅಧ್ಯಾತ್ಮಜ್ಞಾನವನ್ನು ಮರೆಯಬಾರದೆಂಬ ವರವನ್ನೂ ಪಡೆದುಕೊಂಡನು.

ತತ್ತ್ವಾರ್ಥ: ಅಧ್ಯಾತ್ಮಧ್ವನಿಯಿಂದ ಕೂಡಿದ್ದಾಗಿ, ಅಧ್ಯಾತ್ಮಭಾವಕ್ಕೆ ಅಡ್ಡಿಯನ್ನೊಡ್ಡುವ ಆಸುರೀಗುಣಗಳನ್ನು ತಿಳಿಹೇಳುವ ತತ್ತ್ವಮಯವಾದ ಕಥೆಯಿುದು. ವೃತ್ರನೆಂದರೆ ಎಲ್ಲವನ್ನೂ ಆವರಿಸುವ ಕತ್ತಲೆ ಎಂದರ್ಥ. ಆದ್ದರಿಂದಲೇ ಅಸುರನು.  ಸುಷುಮ್ನೆಯಲ್ಲಿ ಸಾಧಕನ ಪ್ರಾಣಗಳು ಆರೋಹಣಕ್ರಮದಲ್ಲಿ ಹರಿದಂತೆ ಅವನು ವಿವಿಧ ಆಧ್ಯಾತ್ಮಿಕ ಅನುಭವಗಳನ್ನು ಪಡೆಯುತ್ತಾನೆ. ಪ್ರಾಣಗಳು ಬ್ರಹ್ಮರಂದ್ರವನ್ನು ತಲುಪಿದಾಗ ಅಮೃತಮಯವಾದ ಆನಂದಾನುಭವವು ಉಂಟಾಗುತ್ತದೆ. ಅವರೋಹಣದಲ್ಲಿ ಈ ಸುಧೆಯು ಸ್ರವಿಸಿ ಧಾರೆಯಾಗಿ, ಕೆಳಸ್ತರದ ಇಂದ್ರಿಯಗಳಿಗೆ(ಇಂದ್ರನು ಇಂದ್ರಿಯಾಧಿಪತಿ) ಹರಿಯುತ್ತದೆ. ಈ ಧಾರೆಯನ್ನು ಮಳೆ ಅಥವಾ ಕಟ್ಟೆಯೊಡೆದ ನೀರಿನ ಬಿಡುಗಡೆ ಎಂದು ವರ್ಣಿಸುತ್ತಾರೆ. ಈ ಓಘವನ್ನೇ ವೃತ್ರನು ತಡೆಹಿಡಿದು ನಿಲ್ಲಿಸಿ ಸುಧೆಯಿಂದ ಇಂದ್ರಿಯಗಳನ್ನು ವಂಚಿತರನ್ನಾಗಿ ಮಾಡುವುದು.

ಇಂದ್ರಿಯಗಳ ರಾಜ ಇಂದ್ರ, ದೇವೇಂದ್ರನೂ ಹೌದು. ಅವನಿಗೆ ಮನಸ್ಸಿನೊಂದಿಗೆ ಸಂಬಂಧವಿರುವುದು. ಮನಸ್ಸು ವಿವಿಧ ಊಹಾ-ಪೋಹಗಳನ್ನು ರೂಪಿಸಿ-ಪ್ರಯೋಗಿಸಲು ಪ್ರಯತ್ನಿಸುವುದು. ಆದರೆ ನಿರ್ಧಾರ ತೆಗೆದುಕೊಳ್ಳುವುದು ಬುದ್ಧಿಯೇ(ಇಂದ್ರನ ಗುರು ಬೃಹಸ್ಪತಿ-ಬುದ್ಧಿಸ್ಥಾನದಲ್ಲಿ). ಇದರ ಅನುಪಸ್ಥಿತಿಯಲ್ಲಿ ಮನಸ್ಸಿನ ವ್ಯರ್ಥಅಲೆದಾಟ. ಪರಿಣಾಮ-ಆಡಂಬರ, ದುರಹಂಕಾರ. ಆಗ ಅಸುರರಿಂದ ಸೋಲು ನಿಶ್ಚಿತ. ಆಗ ಸರ್ವರಕ್ಷಕನಾದ ವಿಷ್ಣುವನ್ನೇ ಮೊರೆಹೋಗಬೇಕು. ಅವನ ಸಲಹೆಯಂತೆ ಇಂದ್ರನು ತನ್ನ ಮನಸ್ಸಿನ ಸಂಯಮದ ತಪಸ್ಶಕ್ತಿಯಾದ ದಧೀಚಿ ಮಹರ್ಷಿಯಿಂದ ಸಕಲದೇವತಾಶಕ್ತಿಗಳನ್ನೂ ಸಂಗ್ರಹಿಸಿ ನಿರ್ಮಿಸಿದ ವಜ್ರಾಯುಧವನ್ನುಪಯೋಗಿಸಿ ವೃತ್ರನನ್ನು ವಧಿಸುತ್ತಾನೆ. ವೃತ್ರನ ವಧೆಯಿಂದ(ನೀಗಿದ ಕತ್ತಲೆಯಿಂದ) ಅವನು ಅಡ್ಡಗಟ್ಟಿದ ಎಲ್ಲ ತೊರೆಗಳಿಂದಲೂ ಈ ಹರಿವು ಸಾಧ್ಯವಾಗುತ್ತದೆ. ದೇವತೆಗಳಿಗೆಲ್ಲಾ ಅಮೃತವನ್ನು ಇಂದ್ರನು ದೊರಕಿಸಿಕೊಟ್ಟಂತಾಗುತ್ತದೆ.

ಈ ರೀತಿ ಸಾಧಕನಲ್ಲಿ ಕಾಣಿಸುವ ಹಿರಿದಾದ ತತ್ತ್ವಗಳನ್ನು ಸುಲಭ ಶೈಲಿಯಲ್ಲಿ ಕಥೆಗಳಮೂಲಕ ವಿವರಿಸುವ ಜಾಣ್ಮೆ ಪುರಾಣಗಳದ್ದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ವೃತ್ರಾಸುರನ ವೃತ್ತಾಂತ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  30/12/2023 ರಂದು ಪ್ರಕಟವಾಗಿದೆ. 

Sunday, December 24, 2023

ಯಕ್ಷ ಪ್ರಶ್ನೆ 66 (Yaksha prashne 66)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 68 ಯಾವ ಕಾರಣದಿಂದ ಈ ಲೋಕವು ಪ್ರಕಾಶಿತವಾಗಿಲ್ಲ ?

ಉತ್ತರ - ತಮಸ್ಸಿನ ಕಾರಣದಿಂದ  

ಈ ಹಿಂದಿನ ಲೇಖನದಲ್ಲಿ 'ಲೋಕವು ಯಾವ ಕಾರಣಕ್ಕಾಗಿ ನಮಗೆ ತಿಳಿಯುವುದಿಲ್ಲ?' ಎಂಬ ಪ್ರಶ್ನೆಯನ್ನು ವಿವರಿಸಿದ್ದಾಗಿದೆ. ಪ್ರಸ್ತುತಪ್ರಶ್ನೆಯಲ್ಲಿ ಯಾವ ಕಾರಣಕ್ಕಾಗಿ ಲೋಕವು ನಮಗೆ ಕಾಣದೇ ಇರುವುದು? ಎಂಬುದುದನ್ನು ತಿಳಿಯಬೇಕಾಗಿದೆ. ಸ್ಥೂಲವಾಗಿ ಗಮನಿಸಿದಾಗ ಎರಡೂ ಪ್ರಶ್ನೆಗಳ ಆಶಯ ಒಂದೇ ಎಂಬುದಾಗಿ ಅನ್ನಿಸುತ್ತದೆ. ಆದರೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅವುಗಳಲ್ಲಿ ವ್ಯತ್ಯಾಸ ತಿಳಿಯುತ್ತದೆ. ಈಗಿನ ಪ್ರಶ್ನೆಯಲ್ಲಿ ಇರುವ ಲೋಕವು ನಮಗೆ ಏಕೆ ಕಾಣುವುದಿಲ್ಲ? ಎಂಬುದು. ಆದರೆ ಹಿಂದಿನ ಪ್ರಶ್ನೆಯಾದರೋ ಕಾಣಲು ಸಾಧ್ಯವಾಗದ ಲೋಕವು ನಮ್ಮ ಅರಿವಿಗೆ ಬಾರದಿರಲು ಕಾರಣವೇನೆಂಬುದಾಗಿದೆ.  ಉದಾಹಣೆಗೆ ಒಂದು ಮಾವಿನ ಮರದಲ್ಲಿ ಹಣ್ಣು ಇದೆ. ಆ ಹಣ್ಣು ಎಲೆಯ ಮರೆಯಲ್ಲಿ ಇದೆ. ಇಲ್ಲಿ ಹಣ್ಣನ್ನು ಮರೆಸಿದ್ದು ಯಾವುದು?ಎಂಬ ಪ್ರಶ್ನೆಗೆ ಉತ್ತರ 'ಎಲೆ' ಎಂದು. ಎಲೆಯಿಂದ ಮರೆಯಾದ ಹಣ್ಣನ್ನು ನಾವು ಕಾಣದಿರಲು ಕಾರಣವೇನು? ಎಂದರೆ ಆಗ ಕತ್ತಲೆ ಇತ್ತು, ಅಥವಾ ನಾವು ನೋಡಲಿಲ್ಲ ಇತ್ಯಾದಿ ಕಾರಣಸಮೂಹದಿಂದದ ಹಣ್ಣು ಕಾಣಲಿಲ್ಲ ಎಂಬ ಉತ್ತರವೋ, ಅಂತೆಯೇ ಇಲ್ಲೂ ಮರೆಯಾದ ವಿಷಯವು ಕಾಣದಿರಲು ಕತ್ತಲೆಯೂ ಕಾರಣ ಎಂಬುದು. 

ವಸ್ತು ಕಾಣಲು ಬೆಳಕು ಕಾರಣ. ಹಾಗಾಗಿ ಆ ವಸ್ತು ಕಾಣದಿರಲು ಬೆಳಕು ಇಲ್ಲದಿರುವುದೇ ಕಾರಣ ಎಂಬುದು ಸಾಮಾನ್ಯರಿಗೂ ತಿಳಿಯುವ ಸಂಗತಿ. ಬೆಳಕು ಇಲ್ಲದಿರುವಿಕೆಯನ್ನೇ ಕತ್ತಲೆ ಅಥವ ತಮಸ್ಸು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಕೆಲವು ಬೆಳಕು ಹೇಗೆ ವಸ್ತು ಕಾಣಲು ಕಾರಣವೋ,ಹಾಗೆಯೇ ತಮಸ್ಸು, ವಸ್ತು ಕಾಣದಿರಲು ಕಾರಣ ಎಂಬುದಾಗಿ ಬೆಳಕಿನ ವಿರುದ್ಧ ಧರ್ಮ ಹೊಂದಿದ ಮತ್ತೊಂದು ಪದಾರ್ಥ ಎಂದೂ ಹೇಳಿರುವುದುಂಟು. ಏನೇ ಇರಲಿ. ವಸ್ತು ಕಾಣದಿರಲು ಪ್ರಕಾಶ ಇಲ್ಲದಿರುವಿಕೆಯೇ ಕಾರಣ ಎಂಬುದು ಧರ್ಮರಾಜನ ಉತ್ತರ. 

ಈ ಪ್ರಶ್ನೆಯಲ್ಲಿ ನಾವು ಅರಿಯಬೇಕಾದ ವಿಚಾರವೇನು? ಅಂದರೆ ಹೊರಗಡೆ ಕಾಣುವು ಬೆಳಕು ಅಥವಾ ಕತ್ತಲೆಯಲ್ಲ ಇಲ್ಲಿನ ಪ್ರಶ್ನೆಯ ವಿಷಯ. ಇದಕ್ಕೆಲ್ಲ ಕಾರಣವಾದ ಜ್ಞಾನವೆಂಬ ಬೆಳಕು. ಅಜ್ಞಾನವೆಂಬ ಕತ್ತಲೆ. ಹೊರಗಡೆ ಎಷ್ಟೇ ಕಣ್ಣು ಕುಕ್ಕುವಷ್ಟು ಬೆಳಕು ಇದ್ದರೂ ಕಣ್ಣು ಇಲ್ಲದಿದ್ದರೆ ಕಾಣದು, ಕಣ್ಣು ಇದ್ದರೂ ನಾವು ನೋಡದಿದ್ದರೆ ಕಾಣದು. ಕಣ್ಣಿನ ಬೆಳಕಿಗೆ 'ನಾನು' ಎಂಬ ಬ್ಯಾಟರಿಯನ್ನು ಬಿಟ್ಟಾಗ ಮಾತ್ರವೇ ಆ ವಸ್ತು ಗೋಚರಿಸುವುದು ತಾನೇ. ಕಣ್ಣು ಇದೆ, ವಸ್ತುವೂ ಇದೆ, ಹೊರಗೆ ಪೂರ್ತಿ ಕಗ್ಗತ್ತಲೇ ಆವರಿಸಿದಾಗ ಕಾಣಿಸದು. ಹಾಗಾಗಿ 'ನಾನು' ಎಂಬ ಬೆಳಕಿನ ಕಿಡಿಯೇ ಬೆಳಕಿನಲ್ಲಿರುವ ಪದಾರ್ಥ ಕಾಣಲು ಸಹಾಯಕ. ಅಂತೆಯೇ ಕತ್ತಲೆ ಇದ್ದಾಗಲೂ ಬ್ಯಾಟರಿ ಬಿಟ್ಟು ನೋಡುವಾಗಲೂ ಕಾಣಿಸಬೇಕಾದರೆ ಅದೇ ನಾನು ಎಂಬ ಬೆಳಕಿನ ಕಿಡಿಯೇ ಕಾರಣ. ಹಾಗಾಗಿ ಈ ಲೋಕವು ಕಾಣದಂತೆ ಇರಲು ಕಾರಣ ತಮಸ್ಸು. ಅಂದರೆ ಲೋಕವನ್ನು ಸಂದರ್ಶಿಸುವವನು ನಾನು ಅಥವಾ ನಾವುಗಳು. ಅವನಿಗೆ ಲೋಕವು ಕಾಣದಿರಲು ಅಥವಾ ಅನ್ಯಥಾ ಕಾಣಲು ಈ ನಾನುವಿಗೆ ಬಂದ ಅಜ್ಞಾನವೆಂಬ ತಮಸ್ಸು. ಅಜ್ಞಾನದ ನಿವೃತ್ತಿಯೇ ಇರುವ ಲೋಕ ಕಾಣುವಂತಾಗುತ್ತದೆ. ಹಾಗಾಗಿ ಜ್ಞಾನವನ್ನು-  ಪ್ರಕಾಶವನ್ನು ನಮ್ಮೊಳಗೆ ತುಂಬಿಸಿಕೊಳ್ಳುತ್ತಾ ಹೋದರೆ ಕತ್ತಲೆ ತಾನಾಗಿಯೇ ದೂರಸಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಪ್ರಯತ್ನ ಬೇಡ. ಕತ್ತಲೆಯಿಂದ ಬೆಳಕಿನ ಕಡೆ ಸಾಗೋಣ.  

ಸೂಚನೆ : 24/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 67 ದ್ರುಪದನ ದ್ವಂದ್ವ (Vyaasa Vikshita - 67 Drupadana Dvandva)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)
ಭೋಜನಕ್ಕೆ ಪಾಂಡವರನ್ನು ಆಹ್ವಾನಿಸಿ, ಭೋಜನವಾದ ಬಳಿಕ ಅವರು ವಿಶ್ರಮಿಸಿಕೊಳ್ಳಲು ಬರುವಷ್ಟರಲ್ಲಿ ಅವರಿಗೆ ಕಾಣುವಂತೆ ನಾನಾಪದಾರ್ಥಗಳನ್ನು ಅಲ್ಲಿಟ್ಟಿದ್ದನಷ್ಟೆ, ದ್ರುಪದ? ಏಕೆ? ಅವರ ಮನಸ್ಸನ್ನು ಸೆಳೆಯುವುದು ಯಾವುದು? – ಎಂಬುದನ್ನು ಅಳೆದುಕೊಳ್ಳಲು. ನಾಲ್ಕು ವರ್ಣದವರಿಗೆ ಇಷ್ಟವಾಗುವ ವಸ್ತುಗಳೂ ಅಲ್ಲಿದ್ದವು. ಯಾವುದರತ್ತ ಅವರಿಗೆ ಸಹಜವಾದ ಆಕರ್ಷಣೆಯು ಉಂಟಾಗುವುದೆಂಬುದರ ಪರೀಕ್ಷೆ; ಅವರು ಯಾವ ವರ್ಣದವರೆಂಬುದರ ಸುಳಿವು ಅಲ್ಲಿ ದೊರೆತುಬಿಡುವುದರ ಸಂಭವ ಹೆಚ್ಚು – ಎಂಬ ಲೆಕ್ಕ.


ಮತ್ತು ಆದದ್ದಾದರೂ ಅಂತೆಯೇ. ಬ್ರಾಹ್ಮಣವೇಷ ಧರಿಸಿದ್ದ ಮಾತ್ರಕ್ಕೆ ಕ್ಷಾತ್ರವು ಅಳಿಸಿಹೋದೀತೇ? ಪಾಂಡವರೆಲ್ಲರೂ ಕ್ಷತ್ರಿಯೋಚಿತವಾದ ವಸ್ತುಗಳನ್ನೇ ಕೈಗೆತ್ತಿಕೊಂಡರು. ಕುಲದ ಕಸುಬಿನ ಸೆಳೆತವನ್ನು ಹತ್ತಿಕ್ಕುವುದು ಸುಲಭವೇ? ದ್ರುಪದನಿಗೆ ಮೊದಲು ಚಿಂತೆಯಾಗಿತ್ತು: ಯಾವ ವರ್ಣದವನ ಕೈಹಿಡಿಯುವಳೊ ತನ್ನ ಮಗಳು? -ಎಂಬುದಾಗಿ. ಪುತ್ರನೂ ಪುರೋಹಿತನೂ ತಮಗೆ ಸಿಕ್ಕ ಸುಳಿವಿನ ಸೂಚನೆಯನ್ನೂ ಕೊಟ್ಟಿದ್ದರೇ: ಇಬ್ಬರ ವರದಿಯಲ್ಲೂ ಪಾಂಡವರ ಕ್ಷಾತ್ರದ ಸುಳಿವು ಸಿಕ್ಕೇಇತ್ತು. ಆದರೂ ತನಗೂ ಪ್ರತ್ಯಕ್ಷವಾಗಿ ಕಾಣುವ ಅಪೇಕ್ಷೆ: ಕ್ಷತ್ರಸಂಬಂಧಿಯಾದ ವರ್ಮ-ಚರ್ಮ-ಧನುಸ್-ಶರಗಳನ್ನೇ ಆಯ್ದುಕೊಳ್ಳುವರು ತಾನೆ? - ಎಂಬುದಾಗಿ.


ಅಂತೂ ಕಂಡದ್ದೂ ಆಯಿತು; ಖಚಿತವೂ ಆಗಿಯಾಯಿತು. ಅಷ್ಟಾದರೂ, ಒಮ್ಮೆ ಬಾಯಿಬಿಟ್ಟೂ ಕೇಳಿ ತಿಳಿಯುವ ತನಕವೂ ತವಕವೇ: "ತಮ್ಮನ್ನು ಕ್ಷತ್ರಿಯರೆಂದು ತಿಳಿಯಲೋ, ಬ್ರಾಹ್ಮಣರೆಂದೋ? ಅಥವಾ ವೈಶ್ಯರೆಂದೋ ಶೂದ್ರರೆಂದೋ? - ಎಂದೂ ವಾಚ್ಯವಾಗಿಯೂ ಕೇಳಿಯೇ ಕೇಳುತ್ತಾನೆ. ಜಾತಿಧರ್ಮ-ಕುಲಧರ್ಮಗಳ ಬಗ್ಗೆ ದ್ರುಪದನಿಗಿದ್ದ ಕಾಳಜಿ ಆ ತೆರನದು; (ಗೀತೆಯ ಆರಂಭದಲ್ಲೂ ಈ ಬಗ್ಗೆಯೇ ಮಾತಿದೆಯಷ್ಟೆ? ಶಾಕುಂತಲದ ದುಷ್ಯಂತನೂ ಈ ಕಾಳಜಿಯ ನೇರಕ್ಕೇ ಹೆಜ್ಜೆಯಿಟ್ಟವನಲ್ಲವೇ?)


ತಾವೆಲ್ಲರೂ ಕ್ಷತ್ರಿಯರೇ– ಎಂದು ಯುಧಿಷ್ಠಿರನು ಬಾಯಿಬಿಟ್ಟು ಹೇಳಿಕೊಂಡಾಗಲೇ ದ್ರುಪದನಿಗೆ ಸಮಾಧಾನ. ಆಗಲೂ ಸತ್ಯವನ್ನೇ ಹೇಳುತ್ತಿದ್ದೀರಲ್ಲವೇ? – ಎಂದು ಖಾತ್ರಿಪಡಿಸಿಕೊಂಡದ್ದೂ ಆಯಿತು.  ಆಗಲೇ "ಹರ್ಷವ್ಯಾಕುಲಲೋಚನ"ನಾದದ್ದು, ದ್ರುಪದ. ಅರ್ಥಾತ್, ಅವನ ಕಣ್ಣುಗಳಲ್ಲಿ ಆನಂದಬಾಷ್ಪಗಳು ಉಕ್ಕಿಬಂದದ್ದು! ಅಲ್ಲಿಯ ತನಕ ಶಂಕಾತಂಕವೇ!  ಕ್ಷತ್ರಿಯಕುಮಾರಿಯಾದ ದ್ರೌಪದಿಯು ಮತ್ತಾರ ಕೈ ಹಿಡಿಯುವಂತಾದೀತೋ ಎಂಬ ಕಳವಳ.


ಇವರು ಪಾಂಡವರೇ, ಮತ್ತು ದ್ರೌಪದಿಯನ್ನು ಗೆದ್ದವನ್ನು ಅರ್ಜುನನೇ – ಎಂದು ತಿಳಿದಾಗಲಂತೂ ಮನಸ್ಸಿಗೆ ಪರಮಸಮಾಧಾನ.


ಆದರೆ ಅಷ್ಟರಲ್ಲೇ - ಒಂದು ಕಳವಳವನ್ನು ದಾಟಿದೆನೆನ್ನುವಷ್ಟರಲ್ಲೇ - ಮತ್ತೊಂದು ಆತಂಕ. ಎಲ್ಲೂ ಕೇಳಿಲ್ಲದ ಬಗೆಯಲ್ಲಿ, ಒಬ್ಬನನ್ನಲ್ಲ ಐದು ಮಂದಿಯನ್ನು ಆಕೆಯು ವಿವಾಹವಾಗಬೇಕು - ಎನ್ನುವ ಸೂಚನೆ ಬಂದಾಗ ಮಾಡುವುದೇನೆಂಬುದು ಆತನಿಗೆ ಹೊಳೆಯದಾಯಿತು. ಇದು ವೇದೋಕ್ತವಲ್ಲವೆಂಬುದಷ್ಟೇ ಅಲ್ಲ, ಇತ್ತ ಲೋಕಾಚಾರವೂ  ಅಲ್ಲ. (ಒಬ್ಬ ಪುರುಷನಿಗೆ ಹಲವು ಪತ್ನಿಯರೆಂಬುದು ಸುವಿದಿತವೇ; ಋಷಿಗಳಲ್ಲಿ ಸಹ ಇದು ಇಲ್ಲದಿಲ್ಲ; ಕ್ಷತ್ರಿಯರಲ್ಲಂತೂ ಸಾಮಾನ್ಯವೇ ಸರಿ. ಆದರೆ) ಒಬ್ಬಳಿಗೇ ಹಲವು ಪತಿಗಳೆಂಬುದು ಅಶ್ರುತಪೂರ್ವ, ಹಿಂದೆ ಕೇಳಿಲ್ಲದ್ದು. ಇದು ಗಾಬರಿಪಡಬೇಕಾದದ್ದು ಎನ್ನಿಸಿದೆ, ದ್ರುಪದನಿಗೆ. ಇದನ್ನು ವೈಯಕ್ತಿಕವೆನ್ನುವಂತೆಯೂ ಇಲ್ಲ; ಸಮಾಜಕ್ಕೆ ಉತ್ತರಕೊಡಬೇಕಾಗುತ್ತದೆಯಲ್ಲವೇ? ರಾಜನೇ ತಪ್ಪುಹೆಜ್ಜೆ ಹಾಕುವುದೇ? ಆದರೆ ಇದಕ್ಕೆ ಯುಧಿಷ್ಠಿರನ ಉತ್ತರವೂ ಸಿದ್ಧವಿತ್ತು: "ಇದು ನನ್ನ ತಾಯಿಯ ಮಾತು, ನಡೆಸಿಕೊಡಬೇಕಾದದ್ದು"! ಇಕ್ಕಟ್ಟಾಯಿತು, ದ್ರುಪದನಿಗೆ.


ಸೂಚನೆ : 24/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ದೇವತೆಗಳಿನ ಸಂಬಂಧಗಳು (Devategalina Sambandhagalu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ 
(ಪ್ರತಿಕ್ರಿಯಿಸಿರಿ lekhana@ayvm.in)

 ಪುರಾಣಗಳನ್ನು ಪರೀಕ್ಷಿಸಿದರೆ, ದೇವರುಗಳಲ್ಲಿಯೂ ಮನುಷ್ಯರಂತೆ ಗಂಡ-ಹೆಂಡಿರು, ತಂದೆ-ತಾಯಂದಿರು, ಮಗ-ಮಗಳು ಮೊದಲಾದ ಸಂಬಂಧಗಳು ಕಾಣಿಸುವುದು ನಗೆಪಾಟಲಾಗುವುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪುರಾಣಗಳು ಜನಸಾಮಾನ್ಯರ ಉಪದೇಶಕ್ಕಾಗಿ ರಚಿಸಿದ ವಿಶಿಷ್ಟವಾದ ಗ್ರಂಥಗಳು. ವೇದಗಳಲ್ಲಿ ಮತ್ತಿತರ ಗ್ರಂಥಗಳಲ್ಲಿ ಅರುಹಿರುವ ತತ್ತ್ವಗಳ ತಿರುಳನ್ನೇ ಕಥೆ-ರೂಪಕ-ಉದಾಹರಣೆಗಳ ಮೂಲಕ ಬಿತ್ತರಿಸುತ್ತವೆ. ಬಾಲರಿಗೆ ತಿಳಿಯಪಡಿಸಲು 'ಪಂಚತಂತ್ರ' ಮೊದಲಾದ ಕಥೆಗಳನ್ನು ಚೊಕ್ಕವಾಗಿ ಹೆಣೆದಿರುವಹಾಗೆ, ಪುರಾಣಗಳು ವಿಶೇಷವಾದ ತಂತ್ರಗಳನ್ನುಪಯೋಗಿಸಿ, ಅವರ ಉದ್ಧಾರಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತವೆ.

ಇಲ್ಲಿ ಶ್ರೀರಂಗಮಹಾಗುರುಗಳು ನೀಡಿದ ನೋಟವು ಪ್ರಸ್ತುತ. ಸೃಷ್ಟಿಯಲ್ಲಿ ಯಾವುದು ವಿಕಾಸವಾಗುತ್ತದೆಯೋ ಆ ಬೀಜವನ್ನು 'ಪುರುಷ-ಪಿತಾ' ಎಂದೂ, ಯಾವುದು ವಿಕಾಸಕಾರ್ಯವನ್ನು ನಿರ್ವಹಿಸುತ್ತದೆಯೋ ಅದನ್ನು 'ಸ್ತ್ರೀ-ಮಾತಾ' ಎಂದೂ ಕರೆಯುತ್ತಾರೆ (ದ್ಯೌಃ ಪಿತಾ- ಪೃಥಿವೀ ಮಾತಾ). ಬೀಜ ಪತಿಯಾದರೆ, ಅದನ್ನು ವಿಕಸಿತಗೊಳಿಸುವ ಪೃಥ್ವಿ(ಭೂಮಿ) ಪತ್ನಿ. ಇವುಗಳ ಸಂಸರ್ಗದಿಂದ ಹೊರಡುವ ಎಲೆ, ಕಾಯಿ, ಹಣ್ಣು ಮೊದಲಾದವು ಇವುಗಳ ಮಕ್ಕಳಲ್ಲವೇ? ಇವುಗಳಲ್ಲಿ ಯಾವುದನ್ನವಲಂಬಿಸಿದರೂ 'ಬೀಜ'ವನ್ನು ತಲುಪಬಹುದು. 

ಹಾಗೆಯೇ, ಹಾಲು-ಮೊಸರುಗಳ ಸಂಸರ್ಗದಿಂದ, 'ವಿವಾಹ'ದಿಂದ, ಮಗುವಾದ ಬೆಣ್ಣೆ, ಮೊಮ್ಮಗುವಾದ ತುಪ್ಪ ಉತ್ಪತ್ತಿಯಾಗುವುದಿಲ್ಲವೇ? ಈ ಮದುವೆ, ಪೂರ್ಣಗೊಳ್ಳಬೇಕಾದರೆ, ಬೇರೆಯವರು ಸಹಕರಿಸಬೇಕು! ಉದಾಹರಣೆಗೆ ಬ್ಯಾಕ್ಟೀರಿಯಾಗಳ ಸಹಕಾರವಿಲ್ಲದೆ, ಈ ಕ್ರಿಯೆ ನೆರವೇರುವುದಿಲ್ಲ. ಅಂತೆಯೇ ಈ ಪ್ರಕ್ರಿಯೆಗೆ ಯಾವ ಅಡ್ಡಿ-ಆತಂಕಗಳೂ ಇರಬಾರದು. 'ಕೆನೆ' ಎಂಬ ತಡೆಯನ್ನು ತಡೆಗಟ್ಟಬೇಕು. ಶಿವ-ಪಾರ್ವತೀಯರ ಸಂಗಮದಿಂದ ಉದ್ಭವಿಸುವ 'ಗಣೇಶ' ಮತ್ತು 'ಷಣ್ಮುಖ' ರೆಂಬ ಸುತರಿಂದ ಮೂಲಸ್ಥಾನವಾದ ಶಿವ-ಶಕ್ತಿಯರನ್ನು ತಲುಪಬಹುದು. ಆದುದರಿಂದಲೇ, ತಂದೆ-ತಾಯಿ-ಮಕ್ಕಳೆಂಬ ಪರಿಕಲ್ಪನೆ. 

ದೇವತೆಗಳ ವಾಹನ:  ವಾಹನ ರವಾನಿಸುವ ಸಾಧನ. ಯಾವ ಸಾಧನವನ್ನು ಬಳಸಬೇಕೆಂಬುದು, ಯಾವ ಸಾಮಗ್ರಿಯನ್ನು ರವಾನಿಸುತ್ತೇವೆಯೋ ಅದರ ಆಧಾರವನ್ನವಲಂಬಿಸಿಲ್ಲವೇ? ಮನುಷ್ಯರೇ? ಸಾಮಗ್ರಿಗಳೇ? ಯಾವ ಉದ್ದೇಶಕ್ಕೆ? ವಿಹಾರಕ್ಕೋ? ಸೇನಾಸಾಮಗ್ರಿಗಳಿಗೋ? ಅವುಗಳು ಒಳಪಡಬೇಕಾದ ನಿಯಮಾವಳಿ - ವೇಗ, ಸೌಲಭ್ಯಗಳು, ತಗಲುವ ವೆಚ್ಚ ಮೊದಲಾದವುಗಳ ಮೇಲೆ ಆಧಾರಿತವಾಗಿದೆ. ಒಂದು ಅಥವಾ ಈ ಎಲ್ಲ ನಿಯಮಗಳೂ, ಸಾಧನ ಯಾವುದು ಎಂಬುದನ್ನು ನಿಶ್ಚಯಿಸುತ್ತವೆ. ಆದುದರಿಂದ 'ಪ್ರಯಾಣದ ವಿಧಾನ' ಪ್ರಯಾಣದ ಗುರಿಯಮೇಲೆ ತೀರ್ಮಾನವಾಗುತ್ತದೆ. ಅಂತರಿಕ್ಷದಲ್ಲಿ ಹಾರುವ ವಿಮಾನದಬದಲಾಗಿ ಭೂಮಿಯಲ್ಲಿ ಚಲಿಸುವ ರೈಲುಗಾಡಿಯನ್ನೂ  ರೈಲಿನಬದಲಿಗೆ, ವಿಮಾನವನ್ನೂ- ವಿಶೇಷ ಸೌಲಭ್ಯಗಳಿದ್ದರೂ ಸಹ- ಬಳಸಲಾಗುವುದಿಲ್ಲ. 

ಈ ಲೌಕಿಕ ಪ್ರಪಂಚದಲ್ಲೇ ಭೂಮಿ, ಆಕಾಶ, ನೀರು ಇವುಗಳಲ್ಲಿ ಪ್ರಯಾಣಿಸಲು ಇಷ್ಟೆಲ್ಲಾ ವಿವಿಧ ಮಾಧ್ಯಮಗಳಿದ್ದರೆ, ಅಂತಃಪ್ರಪಂಚದ ಅನ್ವೇಷಣೆಗೆ ಒಬ್ಬ ಸಾಧಕನಿಗೆ 'ವಾಹನ'ಗಳಾಗಬಹುದಾದವು ಯಾವುವು? ಇದಕ್ಕೆ ಉತ್ತರ - ಆತನ ಗುರಿಯನ್ನು ತಲುಪಿಸಬಲ್ಲ ಯಾವ ಮಾಧ್ಯಮವಾದರೂ ಸಾಧನವಾಗಬಹುದು. ಆತನ ಪ್ರಯಾಣ ಈ ಭೌತಿಕಕ್ಷೇತ್ರದಿಂದ ಆಧ್ಯಾತ್ಮಿಕ ಕ್ಷೇತ್ರದವರೆವಿಗೆ. ತನ್ನ ದೇಹ, ತನ್ನದೇ ನಿಯಂತ್ರಣದಲ್ಲಿರುವ ಕೈ-ಕಾಲು-ಕಣ್ಣು ಮೊದಲಾದ ಕರ್ಮ-ಜ್ಞಾನೇಂದ್ರಿಯಗಳು, ಮನಸ್ಸು-ಬುದ್ಧಿ ಇವುಗಳನ್ನೇ ಉಪಯೋಗಿಸಿಕೊಂಡು ಚಲಿಸಬೇಕಾಗುತ್ತದೆ. ದೈವಿಕಕ್ಷೇತ್ರವನ್ನು ನಿಯಂತ್ರಿಸುವವರು ದೇವತೆಗಳು. ಆದ್ದರಿಂದ, ಆತನ ವ್ಯವಹಾರ ದೈವಿಕ, ಆಧ್ಯಾತ್ಮಿಕ ಕ್ಷೇತ್ರಗಳೆಲ್ಲದರಲ್ಲೂ ವ್ಯಾಪಿಸಿರುತ್ತದೆ. ಅವನು, ತನ್ನ ಪರಂಬ್ರಹ್ಮನ ಅನ್ವೇಷಣೆಯಲ್ಲಿ ಯಾವುದಾದರು ವಿಧಾನವನ್ನು ಆಯ್ದುಕೊಳ್ಳಬೇಕಾಗುತ್ತದೆ; ಉದಾಹರಣೆಗೆ ವೇದಗಳ ಅಧ್ಯಯನ. ವೇದಗಳನ್ನು, ಅವನನ್ನು ಸ್ಥಳಾಂತರಗೊಳಿಸುವ ವಾಹನವಾಗಿ, ಪಕ್ಷಿಯಾಗಿ, ಪ್ರಾಣದೇವರಾದ ಗರುತ್ಮಂತನಾಗಿ ಗುರುತಿಸುತ್ತಾರೆ. ಗರುಡ, ವಿಷ್ಣುವಿನ ಸಮೇತನಾಗಿ ಧಾವಿಸಿ, ಸಾಧಕನನ್ನು ಅವನೆಡೆಗೆ ಕರೆದೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದಾನೆ. ಆದ್ದರಿಂದ, ಗರುಡ, ವಿಷ್ಣುವಿಗೆ ವಾಹನ. ಇದರಂತೆಯೇ, ಯಾವಮಾಧ್ಯಮವು, ಸಾಧಕನನ್ನು ಆ ದೇವತಾ ಸ್ಥಾನಕ್ಕೆ ಕೊಂಡೊಯ್ಯಬಲ್ಲುದೋ, ಅಂತೆಯೇ ಸಾಧಕನನ್ನೂ ಆ ದೇವತೆಯನ್ನೂ ಒಟ್ಟುಗೂಡಿಸುವುದೋ ಅದೇ ಆ ದೇವತೆಯ ವಾಹನ. 

ಯಾವುದನ್ನು ನಿಯಂತ್ರಿಸಬಲ್ಲೆವೋ ಅದನ್ನೂ ವಾಹನವೆಂದು ಕರೆಯುತ್ತಾರೆ. ಅಧ್ಯಾತ್ಮದಹಾದಿಯಲ್ಲಿ, ಸಾಧಕನು ಬಹುತೇಕ ವಿಘ್ನಗಳನ್ನೆದುರಿಸಬೇಕಾಗುವುದು. ಗಣೇಶ, ಆ ವಿಘ್ನಗಳನ್ನು ನಿಯಂತ್ರಿಸುತ್ತಾನೆ, ಅವುಗಳಮೇಲೆ 'ಸವಾರಿ' ಮಾಡುತ್ತಾನೆ. ಆದುದರಿಂದಲೇ ಆತ, 'ವಿಘ್ನೇಶ್ವರ. 'ಇಲಿ' ಈ ಎಲ್ಲ ವಿಘ್ನಗಳನ್ನು ಒಟ್ಟಾರೆ ಪ್ರತಿನಿಧಿಸುತ್ತದೆ. ಇಲಿಯನ್ನು ನಿಯಂತ್ರಿಸದಿದ್ದರೆ, ಅದು ತನ್ನ ವೇಗವಾದ ಚಲನೆಯಿಂದ, ಹಾವಳಿಯನ್ನುಂಟುಮಾಡುತ್ತದೆ. ಆದ್ದರಿಂದ, ಈ ದೇವತೆಯನ್ನು ಸರಿಯಾದಕ್ರಮದಲ್ಲಿ ಒಲಿಸಿಕೊಂಡರೆ, ಆತ ತನ್ನ ವಾಹನದಮೇಲೆ ಸಹಾಯಕ್ಕೆ ಬರುತ್ತಾನೆ. ಇದು, ಒಬ್ಬ ಯೋಧ, ತಾನು ಸೋಲಿಸಿದ ವೈರಿಯ ರಥದಮೇಲೆ ಸವಾರಿಮಾಡಿಕೊಂಡು ಬರುವುದನ್ನು ನೆನೆಪಿಸುತ್ತದೆ. 

ದರ್ಶನ:  ದೇವತೆಗಳು ಮತ್ತು  ಅವರ ವಾಹನಗಳು ಕೇವಲ ಸಂಕೇತಗಳೇ? ಅವುಗಳನ್ನು ಆಧುನಿಕ ಪ್ರತೀಕಗಳೊಂದಿಗೆ ಬದಲಿಸಬಹುದೇ? ಎಂದರೆ, ದೇವತೆಗಳು, ಅಂತರ್ದೃಷ್ಟಿಗೆ ಗೋಚರವಾಗುವವರು. ಮತ್ತು, ನಿರ್ದೇಶಿಸಿರುವ ಅಧ್ಯಾತ್ಮ ಮಾರ್ಗದಲ್ಲಿ ಸಾಗುವವರೆಲ್ಲರಿಗೂ ಈ ದರ್ಶನ ಒದಗುತ್ತದೆ ಎಂಬ ಶ್ರೀರಂಗಮಹಾಗುರುಗಳ ಉಕ್ತಿಯನ್ನು  ಸ್ಮರಿಸಬಹುದು. ಈ ದರ್ಶನ ಸಾರ್ವತ್ರಿಕ. ಆದ್ದರಿಂದ ಇದನ್ನು ಸಾಮಾನ್ಯರು ಬದಲಿಸುವುದು ಸೂಕ್ತವಲ್ಲ. ಯೋಗದ ಎಣಿಸಲಾಗದ ದಾರಿ-ಕವಲುಗಳನ್ನೆಲ್ಲ ಅನ್ವೇಷಿಸಿ, ದೇವತೆಗಳನ್ನೂ ಅವರ ವಿವಿಧ ರೂಪ-ಭಂಗಿಗಳನ್ನೂ, ಅವರ ವಾಹನ-ಆಯುಧಗಳನ್ನೂ ಕಂಡು ಗ್ರಂಥಗಳಲ್ಲಿಯೂ, ಶಿಲ್ಪಗಳಲ್ಲಿಯೂ ದಾಖಲುಮಾಡಿದ ಭಾರತೀಯಋಷಿಗಳ ಯತ್ನ ಅತ್ಯಂತ ಶ್ಲಾಘನೀಯವೇಸರಿ. 

(ಮುಂದುವರಿಯುವುದು)

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ  23/12/2023 ರಂದು ಪ್ರಕಟವಾಗಿದೆ.   

ಸಂಧ್ಯಾವಂದನೆಯಲ್ಲಿ ಏಕೆ ಸೂರ್ಯನನ್ನೇ ಉಪಾಸಿಸಬೇಕು? (Sandhyavandaneyalli Eke Suryananne Upasisabeku?)

ಲೇಖಕರು : ವಿದ್ವಾನ್ ನರಸಿಂಹ ಭಟ್ 

ಪ್ರತಿಕ್ರಿಯಿಸಿರಿ (lekhana@ayvm.in)

ಸಂಧ್ಯಾಕಾಲದಲ್ಲಿ ಮಾಡುವ ವಂದನೆಗೆ ‘ಸಂಧ್ಯಾವಂದನೆ’ ಎಂದು ಕರೆಯುತ್ತಾರೆ. ಸಂಧಿಸುವುದು, ಸೇರುವುದು, ಎರಡರ ನಡುವಿನದ್ದು ಎಂಬೆಲ್ಲಾ ಅರ್ಥಗಳು ಬರುತ್ತವೆ. ಇಲ್ಲಿ ನಾವು ವಿಚಾರಕ್ಕೆ ತೆಗೆದುಕೊಂಡ ವಿಷಯ ಕಾಲದ ಸಂಧ್ಯೆಯನ್ನು. ಒಂದು ಕಾಲ ಮುಗಿದು ಇನ್ನೊಂದು ಕಾಲವು ಆರಂಭವಾಗುತ್ತದೆ. ಒಂದರ ಮುಕ್ತಾಯ ಇನ್ನೊಂದರ ಆರಂಭದ ಕಾಲವೇ ‘ಸಂಧ್ಯಾ’ ಎಂಬುದಾಗಿ ಕರೆಯುತ್ತಾರೆ. ಹಾಗಾಗಿ ಒಂದು ದಿನಕ್ಕೆ ಯಾವ ಸಂಧಿಗಳು ಸಂಭವಿಸುತ್ತವೆ ಎಂಬುದನ್ನು ಲೆಕ್ಕ ಹಾಕಿ ಪ್ರಾತಃಸಂಧ್ಯಾ, ಮಧ್ಯಾಹ್ನಸಂಧ್ಯಾ, ಸಾಯಂಸಂಧ್ಯಾ ಮತ್ತು ರಾತ್ರಿಸಂಧ್ಯಾ ಎಂದು ನಾಲ್ಕು ಬಗೆಯ ಸಂಧ್ಯಾಕಾಲವನ್ನು ನಮ್ಮ ಪೂರ್ವಜರು ಗುರುತಿಸಿದ್ದಾರೆ. ಇವುಗಳಲ್ಲಿ ನಾವು ಅತಿಮುಖ್ಯವಾಗಿ ಮೊದಲ ಮೂರು ಸಂಧ್ಯೆಯನ್ನು ಪರಿಗಣಿಸುತ್ತೇವೆ. ರಾತ್ರಿಸಂಧ್ಯೆಯನ್ನು ಯೋಗಿಗಳು ಮಾತ್ರ ಅನುಭವಿಸಬಲ್ಲರು. ಸಾಮಾನ್ಯರಿಗೆ ಅದು ಅನುಭವಿಸಲು ಕಷ್ಟಸಾಧ್ಯ. ಸಾಮಾನ್ಯರು ಕೇವಲ ಮೂರು ಸಂಧ್ಯೆಯನ್ನು ಮಾತ್ರ ಪರಿಗಣಿಸುತ್ತಾರೆ. ಇಂತಹ ಕಾಲದಲ್ಲಿ ಆಚರಿಸುವ ಪೂಜೆಯನ್ನೋ, ಆರಾಧನೆಯನ್ನೋ, ನಮಸ್ಕಾರವನ್ನೋ ‘ಸಂಧ್ಯಾವಂದನೆ’ ಎಂದು ಕರೆಯುತ್ತಾರೆ. 


ಇಂದು ನಾವು ಸಂಧ್ಯಾವಂದನೆ ಎಂದರೆ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಾಯಂಕಾಲ ಸೂರ್ಯನಿಗೆ ಗಾಯತ್ರಿಯನ್ನು ಹೇಳಿ ನೀರಿನಿಂದ ಮೂರು ಅರ್ಘ್ಯವನ್ನು ಕೊಡುವುದು ಎಂದು ಮಾತ್ರ ತಿಳಿದಿದ್ದೇವೆ. ಅದೂ ಸಂಧ್ಯಾವಂದನೆಯೇ. ಈ ಸಂಧ್ಯಾವಂದನೆಯಲ್ಲಿ ನಾವು ಏಕೆ ಸೂರ್ಯನನ್ನೇ ಉದ್ದೇಶವಾಗಿಟ್ಟುಕೊಂಡು ಅರ್ಘ್ಯವನ್ನಾಗಲಿ, ಜಪವನ್ನಾಗಲಿ, ಉಪಸ್ಥಾನವನ್ನಾಗಲಿ ಮಾಡುತತ್ತೇವೆ? ಎಂಬ ವಿಷಯ ನಮ್ಮಿಂದ ದೂರವಾಗಿದೆ. ಇದರ ಬಗ್ಗೆ ಕೆಲವು ಮಾಹಿತಿಯನ್ನು ತಿಳಿಯಬೇಕಾದುದು ಅನಿವಾರ್ಯವಾಗಿದೆ. 


ಸಂಧಿಕಾಲವು ಭಗವಂತನನ್ನು ಆರಾಧಿಸಲು ಅತ್ಯಂತಪ್ರಶಸ್ತಕಾಲ ಎನ್ನಲಾಗಿದೆ. ನಿಸರ್ಗದಲ್ಲಿ ಉಳಿದ ಕಾಲಕ್ಕಿಂತ ಸಂಧ್ಯಾಕಾಲವು ಬಾಹ್ಯವ್ಯಾಪರವನ್ನು ಬಿಟ್ಟು ಅಂತರ್ಮುಖರಾಗಲು ಇರುವ ಅತಿಮುಖ್ಯವಾದ ಕಾಲವಾಗಿದೆ. ಸಂಧಿಯಲ್ಲಿ ಸಮಾರಾಧನೆಯನ್ನು ಮಾಡಬೇಕು’ ಎಂಬ ಗಾದೆಮಾತು ಕನ್ನಡದಲ್ಲಿ ಪ್ರಚಲಿತವಾಗಿದೆ. ಈ ಗಾದೆಮಾತು ಇಂದು ‘ಯಾವುದೋ ಒಂದು ಕಾರ್ಯವನ್ನು ಬಿಡುವಿಲ್ಲದ ಕಾರ್ಯಗಳ ಒತ್ತಡದ ಮಧ್ಯದಲ್ಲಿ ಮಾಡಿಮುಗಿಸುವುದು’ ಎಂಬ ಸಂಕುಚಿತವಾದ ಅರ್ಥದಲ್ಲಿ ಬಳಕೆಯಾಗುತ್ತಿದೆ. ಆದರೆ ಈ ಮಾತು ‘ಅಂತರಂಗ ಸಾಧನೆಯನ್ನು ಮಾಡಲು ಬಹಳ ಉತ್ತಮವಾದ ಕಾಲ’ ಎಂಬುದನ್ನು ಗುರುತಿಸುತ್ತದೆ. 


ಇಂತಹ ಕಾಲದಲ್ಲಿ ಸಂಧ್ಯಾವಂದನೆ ಎಂಬ ಪ್ರಕ್ರಿಯೆಯನ್ನು ನಮ್ಮ ಹಿಂದಿನವರು ಮಾಡಿಕೊಳ್ಳುತ್ತಾ ಬಂದಿದ್ದಾರೆ. ಸ್ನಾನ ಮಾಡಿ, ಭಸ್ಮ ಮೊದಲಾದ ಅವರವರ ಸಂಪ್ರದಾಯಕ್ಕೆ ಅನುಗುಣವಾದ ಪುಂಡ್ರವನ್ನು ಧಾರಣೆ ಮಾಡಿ ಸೂರ್ಯದೇವನಿಗೆ ಅರ್ಘ್ಯವನ್ನು ಕೊಡುತ್ತೇವೆ. ತದನಂತರದಲ್ಲಿ ಗಾಯತ್ರೀಜಪ, ಸೂರ್ಯೋಪಸ್ಥಾನ ಮಾದಲಾದ ವಿಧಾನವನ್ನು ಆಚರಿಸುತ್ತೇವೆ. ಇದನ್ನೆಲ್ಲಾ ಸೇರಿಸಿ ಸಂಧ್ಯಾವಂದನೆ ಎನ್ನುತ್ತಾರೆ. ಇಲ್ಲಿ ಬಂದಿರುವ ಪ್ರಶ್ನೆ “ಸಂಧ್ಯಾವಂದನೆಯ ಕಾಲದಲ್ಲಿ ಏಕೆ ಸೂರ್ಯನನ್ನೇ ಧ್ಯಾನಿಸಬೇಕು?” ಎಂಬುದಾಗಿ. 

ಸೂರ್ಯನಿಂದಲೇ ಈ ಜಗತ್ತಿಗೆ ಬೆಳಕು, ಅವನಿದ್ದರೆ ಮಾತ್ರವೇ ಸಮಸ್ತ ಚರಾಚರ ಜಗತ್ತಿನ ಅಳಿವು ಮತ್ತು ಉಳಿವು. ಅವನಿಲ್ಲದೆ ಒಂದು ಹುಲ್ಲು ಕಡ್ಡಿಯೂ ಈ ಜಗತ್ತಿನಲ್ಲಿ ಇರದು. ಸೂರ್ಯ ಉದಯವಾಯಿತೆಂದರೆ ಹಕ್ಕಿಗಳು ಹಾರುತ್ತವೆ. ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಹೊರ ಹೊರಡುತ್ತವೆ. ಸಸ್ಯಗಳು ತಮ್ಮ ಹೂವುಗಳನ್ನು ಅರಳಿಸುತ್ತವೆ. ಹೀಗೆ ಸಂಪೂರ್ಣ ನಿಸರ್ಗ ತಮಸ್ಸಿನಿಂದ ಬೆಳಕಿನ ಕಡೆ ತಿರುಗುತ್ತದೆ. ಇದಕ್ಕೆ ಕಾರಣ ಸೂರ್ಯ. ಹಾಗೆಯೇ ಸಂಜೆಯಾಯಿತೆಂದರೆ ನಿಸರ್ಗದಲ್ಲಿ ಬೆಳಕು ಕಡಿಮೆಯಾಗುತ್ತಾ ಕಡಿಮೆಯಾಗುತ್ತಾ ತಮಸ್ಸಿನ ಕಡೆ ಜಾರುತ್ತದೆ. ಇಲ್ಲೂ ಸೂರ್ಯನೇ ಕಾರಣ. ರಾತ್ರಿಯಲ್ಲಿ ಅನೇಕ ದಿನ ಚಂದಿರನ ಬೆಳಕು ಕಾಣುತ್ತಾದರೂ ಅದಕ್ಕೂ ಸೂರ್ಯನೇ ಕಾರಣ. ಹೀಗೆ ಸೂರ್ಯನೇ ಎಲ್ಲಕ್ಕೂ ಆತ್ಮ. “ಸೂರ್ಯ ಆತ್ಮಾ ಜಗತಃ ತಸ್ಥುಷಶ್ಚ” ಎಂಬ ವೇದವಾಣಿಯು ಸೂರ್ಯನೇ ಈ ಸಮಸ್ತ ಪ್ರಪಂಚದ ಆತ್ಮಾ ಎಂದಿದೆ. ನಮ್ಮ ಶರೀರದಲ್ಲಿ ಉಳಿದ ಅಂಗಾಂಗಗಳ ಅಸ್ತಿತ್ವಕ್ಕೆ ಹೇಗೆ ಆತ್ಮನೇ ಆಧಾರನೋ ಅಂತೆಯೇ ಈ ಸೃಷ್ಟಿಗೆ ಸೂರ್ಯನೇ ಆಧಾರ. ಸೂರ್ಯ ಎಷ್ಟು ಆವಶ್ಯಕ ಎಂಬುದನ್ನು ಒಂದು ದಿನ ಸೂರ್ಯ ಬರದಿದ್ದರೆ ಆಗುವ ಆನುಹುತವನ್ನು ಊಹಿಸಿದರೆ ಗೊತ್ತಾಗುತ್ತದೆ. ಅಥವಾ ವರ್ಷಾಕಾಲದಲ್ಲಿ ಸೂರ್ಯನ ಕಿರಣ ಅಷ್ಟಾಗಿ ಬಾರದ ಕಾರಣ ಗಿಡಮರ ಬಳಿಗಳಲ್ಲಿ ಹೂವೂ ಕೂಡ ಅರಳುವುದಿಲ್ಲ. ಇದರಿಂದಲೇ ನಮಗೆ ತಿಳಿಯುವುದು ಸೂರ್ಯ ನಿಸರ್ಗಕ್ಕೆ ಎಷ್ಟು ಮುಖ್ಯ ಎಂಬುದು. 

ಸೂರ್ಯನ ಆವಶ್ಯಕತೆ ಕೇವಲ ಉಳಿದ ಪ್ರಾಣಿಗಳಿಗೆ ಮಾತ್ರವಲ್ಲ ಮನುಷ್ಯನ ಜೀವನಕ್ಕೂ ಅಷ್ಟೇ ಅನಿವಾರ್ಯ. ಹಾಗಾಗಿ ಆತ್ಮರೂಪದಲ್ಲಿರುವ ಸೂರ್ಯನನ್ನು ಉಪಾಸೀಸುವ ಪದ್ಧತಿ ಭಾರತೀಯ ಸಂಸ್ಕೃತಿಯಲ್ಲಿ ಬಂದಿದೆ. 


ಸೂಚನೆ: 23/12/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.


Wednesday, December 20, 2023

ಸತ್ಕಾರ್ಯ ಫಲಿಸಲು ಇದು ಬೇಕು (Satkarya Phalisalu Idu beku)

ಲೇಖಕರು : ಡಾ. ಹಚ್.ಆರ್. ಮೀರಾ
(ಪ್ರತಿಕ್ರಿಯಿಸಿರಿ lekhana@ayvm.in)


ಸಗರನ ಹೆಸರು ಯಾರಿಗೆ ತಿಳಿದಿಲ್ಲ? ಆತ ಶ್ರೀರಾಮನ ವಂಶದ ಪೂರ್ವಜ. ಅವನಿಗೆ ಅರವತ್ತು ಸಾವಿರದ ಒಂದು ಮಕ್ಕಳು. ಅವನ ಹಿರಿಯ ಮಗನಾದ ಅಸಮಂಜ ದುಷ್ಟ. ಪ್ರಜೆಗಳನ್ನು ತಂದೆಯಂತೆ ನೋಡಿಕೊಳ್ಳುತ್ತಿದ್ದ ಸಗರ ಆ ಅಧರ್ಮಿಯನ್ನು ದೇಶದಿಂದ ಹೊರಹಾಕಿದ. ಅಸಮಂಜನ ಮಗನಾದರೋ ವೀರನೂ ಧರ್ಮಿಷ್ಠನೂ ಆದ ಅಂಶುಮಂತ. ಸಗರ ತನ್ನ ಈ ಮೊಮ್ಮಗ ಹಾಗೂ ಅರವತ್ತು ಸಾವಿರ ವೀರ ಮಕ್ಕಳ ಸಹಾಯದಿಂದ ಅಶ್ವಮೇಧಯಜ್ಞ ಮಾಡಲು ಮುಂದಾದ. ಯಜ್ಞಾಶ್ವವನ್ನು ಇಂದ್ರನು ಅಪಹರಿಸಿದ. ಅದನ್ನು ಹುಡುಕಹೊರಟ ಆ ಅರವತ್ತು ಸಾವಿರ ಸಗರಪುತ್ರರು ಭೂಮಿಯ ಎಲ್ಲ ಭಾಗಗಳನ್ನೂ ಹುಡುಕಿದರು. ಕುದುರೆ ಸಿಗದಿದ್ದಾಗ ಭೂಮಿಯನ್ನು ಭೇದಿಸತೊಡಗಿದರು. ಕೊನೆಗೆ, ರಸಾತಲದವರೆಗೆ ಹೋದರು.

ಅಲ್ಲಿ ಒಂದೊಂದು ದಿಕ್ಕಿನಲ್ಲಿ ಸಿಕ್ಕ ದಿಗ್ಗಜಗಳಿಗೆ ಪ್ರದಕ್ಷಿಣ-ನಮಸ್ಕಾರಗಳನ್ನರ್ಪಿಸಿ, ಕೊನೆಗೆ ಈಶಾನ್ಯ-ದಿಕ್ಕಿನಲ್ಲಿ ತಪೋಮಗ್ನನಾದ ಕಪಿಲಮುನಿಯನ್ನು ಕಂಡರು. ಅಲ್ಲಿಯೇ ಯಜ್ಞಾಶ್ವವೂ ಕಂಡಿತು. ಅವರಿಗೆ ಅದು ಸಿಕ್ಕ ಸಂಭ್ರಮವಾದರೂ, ಅಲ್ಲಿದ್ದ ಮುನಿಯೇ ಕಳ್ಳನೆಂಬ ಭ್ರಮೆಯೂ ಆಯಿತು. "ಕಳ್ಳ" ಎಂದು ಕೂಗುತ್ತಾ ಅವರು ಆ ಮುನಿಯ ಮೇಲೆ ಹಲ್ಲೆ ಮಾಡಹೊರಟರು. ಆ ಮಹಾತ್ಮನಿಗೆ ರೋಷವುಕ್ಕಿ, ಒಂದು ಹುಂಕಾರದಿಂದ ಇವರನ್ನು ಭಸ್ಮ ಮಾಡಿದ.

ಇಲ್ಲಿಗೆ ಈ ಕಥೆ ಮುಗಿಯಲಿಲ್ಲ. ವೀರನೂ ವಿನಯಸಂಪನ್ನನೂ ಆದ ಅಂಶುಮಂತನು ಕೊನೆಗೆ ಇವರ ಗತಿ ಏನಾಯಿತೆಂದು ತಿಳಿದುಕೊಂಡ. ಆದರೂ ಅವನಿಗೆ ತನ್ನ ಚಿಕ್ಕಪ್ಪಂದಿರಿಗೆ ಸದ್ಗತಿ ಉಂಟುಮಾಡಲಾಗಲಿಲ್ಲ. ಕೊನೆಗೆ ಅವನ ಪುತ್ರನಾದ ಭಗೀರಥನ ಮಹಾಕಾರ್ಯದಿಂದಲೇ ಅವರೆಲ್ಲರಿಗೂ ಸದ್ಗತಿಯಾಗುವಂತಾಯಿತು. ಇರಲಿ. ಈ ಸಗರಪುತ್ರರ ಕಥೆಯಲ್ಲಿ ಒಂದು ಮುಖ್ಯವಾದ ಪ್ರಶ್ನೆ ಮೇಲೇಳುತ್ತದೆ. ಅಸಮಂಜ ದುಷ್ಟ, ದುರ್ಮತಿ. ಅವನಿಗೆ ಶಿಕ್ಷೆಯಾದದ್ದು ಸರಿಯೇ. ಆದರೆ ಈ ಅರವತ್ತು ಸಾವಿರ ಸಗರಪುತ್ರರು ಒಳ್ಳೆಯವರೇ; ತಂದೆಯ ಮಾತನ್ನನುಸರಿಸಿ ಯಜ್ಞಾಶ್ವ ಹುಡುಕಲು ಹೊರಟವರು. ಭೂಮಿಯನ್ನು ಭೇದಿಸಿದಾಗಲೂ ಅಲ್ಲಿ ಸಿಕ್ಕ ದಿಗ್ಗಜಗಳಿಗೆಲ್ಲ ಗೌರವ ತೋರಿಸಿಯೇ ಮುಂದುವರೆದವರು. ಹಾಗಿದ್ದಾಗ, ಅವರಿಗೆ ಶಾಪವೇಕೆ?

ಏನೇ ಒಳ್ಳೆಯ ಕೆಲಸ ಮಾಡಲು ಹೊರಟಿದ್ದಾಗಲೂ ನಮ್ಮಿಂದ ಅಪರಾಧಗಳಾಗಬಹುದು. ತಪ್ಪು ಎಂದು ಗೊತ್ತಿದ್ದೂ, "ಒಂದಷ್ಟು ತಪ್ಪಾದರೇನಂತೆ? ಒಳ್ಳೆಯ ಉದ್ದೇಶದಿಂದ ತಾನೆ ಮಾಡುತ್ತಿರುವುದು?" ಎನ್ನುವ ಧೋರಣೆಯಿಂದ ಆಗಿಬಿಡಬಹುದು. ತಿಳಿಯದೇ ತಪ್ಪುಗಳಾಗಬಹುದು. ಆದರೆ ತಪ್ಪು ತಪ್ಪೇ.

ಸಂಸ್ಕೃತದ ಒಂದು ಸೂಕ್ತಿ ಹೇಳುತ್ತದೆ: "ಸತ್ಪುರುಷರಿಗೆ ತಾಪವನ್ನುಂಟುಮಾಡಿದರೆ 'ಶಾಪ ಕೊಡಿ' ಎಂದೇನೂ ಕೇಳಬೇಕಿಲ್ಲ" ಎಂದು. ಕಪಿಲರು ತಪಸ್ಸಿನಲ್ಲಿ ಮುಳುಗಿದ್ದವರು. ಅವರ ತಪೋಭಂಗ ಮಾಡಿದ್ದಲ್ಲದೆ, ಕಳ್ಳತನದ ಆಪಾದನೆಯನ್ನೂ ಮಾಡಿ ಅವರ ಮೇಲೆ ಆಕ್ರಮಣ ಮಾಡಹೊರಟಿದ್ದರು, ಸಗರಪುತ್ರರು. ಹೀಗಾಗಿ ಸಗರಪುತ್ರರು ಮಾಡಿದ ಅಪರಾಧದ ತೂಕ ಅವರ ಒಳ್ಳೆಯತನವನ್ನೂ, ಒಳ್ಳೆಯ ಉದ್ದೇಶವನ್ನೂ ಎಲ್ಲವನ್ನೂ ಮುಳುಗಿಸಿಬಿಟ್ಟಿತು.

ವಿನಯ-ವಿವೇಕಗಳಿಂದ ವರ್ತಿಸಿದರೆ ಜಾರದೇ ನಮ್ಮ ಕೆಲಸವನ್ನು ಸಾಧಿಸಬಹುದು. ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ "ವಿನಯವು ಒಂದು ರಕ್ಷೆ". ಇಲ್ಲವಾದಲ್ಲಿ ಆದ ಅಚಾತುರ್ಯವನ್ನು ಸರಿಪಡಿಸಲು ಭಗೀರಥಪ್ರಯತ್ನವನ್ನೇ ಮಾಡಬೇಕಾದೀತು!

ಸೂಚನೆ: 20/12/2023 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.  

Chandrayaana - 3,4 and beyond…

Padmini Shrinivasan
Respond to (lekhana@ayvm.in)


Humanity's quest to explore outer space started with a modest beginning in our country Bhaarata six decades ago. Space technology was considered most essential for an all round economic development of the nation. This vision made giant leaps recently, as the headline news read  "India goes where no nation's gone before.." (Aug 23, 2023). This day would be remembered in future by all Bharateeyas as a red-letter day – the day on which our country became the first to land a spacecraft Chandrayaana-3 on the South pole of Moon, joining as the fourth member of the elite lunar club. Extremely meticulous planning, perseverance learnt through failures and dedicated efforts to top it, by the project team, culminated in the successful landing on Moon. The entire nation catapulted into jubilation, as they watched the flawless landing. The spacecraft, a sort of mini lab, was designed to study the space surrounding the moon, its surface as well as its interior through a battery of instruments (payloads). Understanding the Moon is believed to serve as a springboard for future interplanetary missions, to explore our cosmos beyond the confines of our cozy planet earth. A more challenging and ambitious Chandrayaan-4 mission, which is in the offing, is expected to bring back lunar samples.

Moon in scriptures

In ancient astronomy, 'Chandra' meaning bright and shining, identifies our immediate celestial neighbor, the moon. Several millennia old sacred scriptures - Puraanas - associate moon with night – who as Soma nurtures plants. Somadeva (Shiva) is believed to energize and control Soma. Several stories speak about the waxing and waning of the moon; the crescent moon adorning the matted hair of lord Shiva etc. Hence, an object of worship. Somarasa, the internally dripping nectar of Chandra, is considered an elixir by yogis. Moon has lent itself as a natural simile to describe the indescribable in Sanskrit literature too. It is also associated with the mind - manas – of humans.

If an object is so sacred, is man allowed to step over and excavate it? Is the present space age thinking which thrives on knowledge and technology different from what the scriptures say? Should we debunk the old in favour of the new? Or is it possible to gel all of these diverse viewpoints harmoniously? Above all, where do we find a qualified person to answer these queries with a holistic perspective?

The perspective of Bhaarateeya maharshis

A yogi par excellence and a great patriot that he was, Sriranga Mahaguru lived at a time when our own space program was just taking shape, while the other members of the elite space club were racing to the moon. Excerpts from his teachings are summarized below. 

"This land Bhaarata derives its name from bhaa – meaning effulgence and rata – meaning to sport i.e. A land conducive to sport in the Supreme light – paramaatma jyoti. The sages - maharshis of yore were accomplished personae in mundane as well as spiritual domains. Having experienced the paramaatma jyoti, being engrossed, they studied and researched about the origin, evolution and dissolution of the human life, while experiencing Supreme joy - paramaananda  in that exalted state. 

Through a flight in a rocket, we get to know the mysteries of the Moon. The common man would be simply amazed at the  rocket reaching the moon, without having any knowledge about the rocket or its payload, as there is nothing for his intellect. But, the scientists who designed it have a totally different view, looking at everything like its structure, mechanism, its functions etc. in great detail. Devoid of this depth, the view is merely superficial. 

In much the same way, the human body is indeed a machine made up of smaller compact machineries. The maharshis, who were conversant with the science of this ready-made 'body-machine' steered it in diverse ways. This everlasting laboratory of maharshis spans the entire region from bhuvi to divi (earth to heaven). On entering it, the Nature's womb has to be penetrated with a spade called manas, to start the exploration. When such a research is undertaken, encompassing the physical, divine and spiritual spheres - bhuh, bhuvah, suvah, age-old principles regarding the Bhaarateeya culture, hidden in the core of aatma  - soul - can be brought out."

The bidirectional manas

Manas is one among the four internal tools – antahkaranas – which powers all activities of the body, be it mundane, intellectual or spiritual. While manas acts with its foraging nature, buddhi - intellect, also an antahkarana helps in decisive thinking. The nature of the mind is to flow. Manas has the power to stretch itself and fly to any distance. 

When manas is made to flow outwards, along with buddhi, it directs the sense organs to execute jobs in the physical world - pravritti maarga. This mode promotes all activities including intellectual thinking and research in the physical plane. 

Just as streaming water surges backwards, when obstructed by a dam, the outflowing mind drifts inwards - nivritti maarga, when blocked. Maharshis relishing the divinity, made their mind to flow backwards through bhuh, bhuvah, suvah to eternity and realized that the pindaanda (human body) is nothing but a miniature brahmaanda (universe). They visualized the internal Soorya -Sun and Chandra - Moon as true benedictory forms of jnaana - the Supreme Lord, with the external cosmic bodies serving as true representatives of their internally visualized counterparts.

Puraanas narrate these aspects as stories about the invisible power of the personified deities – devatas, which energize the dynamics of the human body as well as the Lord's creation.

Aananda vs Paramaananda

The maharshis regressing their mind through deep penance, also brought out a comprehensive design of evolution from paramatman towards the physical universe known as Bhaarateeya samskruti, which encompasses scriptures, ordained duties, lifestyle, attire, food habits, worship procedures, visit to temples etc, all impregnated with droplets of paramaananda, for the  common man to enjoy happiness – aananda.

The excitement - euphoria experienced  on the success of any human endeavor is termed 'manusheeya aananda'. Aananda mimaamsa, a sacred text quantifies the state of brahmaananda as the maximum possible joy a human can experience, which is several trillion trillion times the manusheeya aananda!! The former happiness experienced through our sensory organs, is but a spark, backed by the latter. 

Looking ahead

The value system embedded in our culture by the maharshis, has lit the torch of jnaana as vijnaana (extension of jnaana) in innumerable ways to nurture our body, mind as well as the soul. Blessed are we to be born through the lineage of these rshis, as Bhaarateeyas. As our country gallops ahead with the already launched  Aditya-L1 and future launch of Gaganyaan, Shukrayaan and Chandrayaan-4, let us augment our thoughts with a true spirit of exploration, without belittling the contribution of these great sages. Saint Tyaagaraja salutes these realized souls, who engineered their minds, in his famous song "endaro mahaanubhaavulu andariki vandanamulu". Salutations to Bhaarata Maata! who nurtured the intellectual rocket scientists as well as jnaanis, who rocketed themselves into the metaphysical space.


Tuesday, December 19, 2023

ಪೂಜ್ಯಶ್ರೀಸೀತಾರಾಮುಗಳು [ಶ್ರೀವಿಜಯಾನಂದಕಂದರು] Pujya Srisitaramugalu [Sri Vijayanandakandaru]

ಸಂಗ್ರಾಹಕರು – ಶ್ರೀಮತೀ ವಸಂತಲಕ್ಷ್ಮೀ ಏ.ಎಸ್., 

ಶ್ರೀಮತೀ ಪದ್ಮಾ ಏ.ಎಸ್., 

 ಶ್ರೀ ಈ.ಕೆ. ರಾಮಮೋಹನಪೂಜ್ಯಶ್ರೀಸೀತಾರಾಮುಗಳು [ಶ್ರೀವಿಜಯಾನಂದಕಂದರು] (೧೯೨೭-೧೯೯೮)

ಶ್ರೀ ಮಂದಿರದ ಪ್ರಥಮಕಾರ್ಯದರ್ಶಿಗಳು 


ಪರಿವರ್ತಿನಿ ಸಂಸಾರೇ ಮೃತಃ ಕೋ ವಾ ನ ಜಾಯತೇ |

ಸ ಜಾತೋ ಯೇನ ಜಾತೇನ ಯಾತಿ ವಂಶಃ ಸಮುನ್ನತಿಮ್ ||


"ನಿರಂತರಪರಿವರ್ತನಶೀಲವಾದ ಈ ಸಂಸಾರದಲ್ಲಿ ಸತ್ತವನಾವನು ತಾನೇ ಹುಟ್ಟುವುದಿಲ್ಲ ?  ಆದರೆಯಾವನ ಹುಟ್ಟಿನಿಂದ ಅವನ ವಂಶವು ಸಮುನ್ನತಿಯನ್ನು ಪಡೆಯುವುದೋ ಅವನೇ ಹುಟ್ಟಿದವನು."

ಈ ಮೇಲಿನ ಸುಭಾಷಿತಕ್ಕೆ ಪೂಜ್ಯರಾದ ಶ್ರೀಸೀತಾರಾಮುಗಳ ಜೀವನವು ಒಂದು ಉದಾಹರಣೆಯೆಂದರೆ ಅದು ಅತಿಶಯೋಕ್ತಿಯಲ್ಲ.  ನಮ್ಮೂರಾದ ನಂಜನಗೂಡಿನಲ್ಲಿ '.ವಿ.ಎಸ್ಎಂದೇ ಪ್ರಖ್ಯಾತರಾದಸರಳಸಜ್ಜನಿಕೆಗಳ ಪ್ರಭವಸ್ಥಾನದಂತೆಯೇ ಇದ್ದಅತ್ಯಂತವಾತ್ಸಲ್ಯದಿಂದ ಪೂರ್ವಭಾಷಿಗಳಾಗಿದ್ದನಮ್ಮನ್ನೆಲ್ಲಾ ಪ್ರೋತ್ಸಾಹಿಸಿತಿದ್ದಿತೀಡಿಸನ್ಮಾರ್ಗಪ್ರವರ್ತರನ್ನಾಗಿಸಿದ ಪೂಜ್ಯರ ಬಗ್ಗೆಕೆಲವು ವಿಷಯಗಳನ್ನು ತಮ್ಮ ಮುಂದಿಡಲು ಪ್ರಯತ್ನಿಸುತ್ತೇವೆ.


ಶ್ರೀಯುತರ ಜನನ ಮತ್ತು ಬಾಲ್ಯವಿದ್ಯಾಭ್ಯಾಸ

ಶ್ರೀಸೀತಾರಾಮುಗಳು ಪ್ರಭವನಾಮ-ಸಂವತ್ಸರದ ಮಾರ್ಗಶಿರ-ಶುದ್ಧ-ಪೂರ್ಣಿಮೆಯಂದು ರೋಹಿಣಿನಕ್ಷತ್ರದಲ್ಲಿ ದಿನಾಂಕ ೮-೧೨-೧೯೨೭ರ ಗುರುವಾರದಂದು ಚಾಮರಾಜನಗರದ ನಿವಾಸಿಗಳಾದ ಶ್ರೀಪಿ.ವೆಂಕಟರಾಮಯ್ಯ ಮತ್ತು ಶ್ರೀಮತೀ ಲಕ್ಷ್ಮೀದೇವಮ್ಮನವರ ಜ್ಯೇಷ್ಠಪುತ್ರರಾಗಿ ಜನಿಸಿದರು.

   ಇವರ ತಂದೆ ವೆಂಕಟರಾಮಯ್ಯನವರು ಚಾಮರಾಜನಗರ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿದ್ದರು.  ಶ್ರೀಸೀತಾರಾಮಯ್ಯನವರ ಬಾಲ್ಯದ ವಿದ್ಯಾಭ್ಯಾಸವು ಚಾಮರಾಜನಗರದಲ್ಲಿಯೇ ನಡೆಯಿತುಇವರ ತಂದೆಗೆ ನಂಜನಗೂಡಿಗೆ ವರ್ಗಾವಣೆ ಆದ ಬಳಿಕ ನಂಜನಗೂಡಿಗೆ ಬಂದು ನೆಲೆಸಿದರುನಂತರ ಶ್ರೀಯುತರ ವಿದ್ಯಾಭ್ಯಾಸವು ನಂಜನಗೂಡಿನಲ್ಲಿ ಮುಂದುವರೆಯಿತು.


ಬೆಳೆಯುವ ಚಿಗುರು ಮೊಳಕೆಯಲ್ಲಿಯೇ !

  ಶ್ರೀಯುತರು ಬಾಲ್ಯದಿಂದಲೂ ಅವರ ತಂದೆ-ತಾಯಿಗಳಿಂದ ಉತ್ತಮಸಂಸ್ಕಾರವನ್ನು ಪಡೆದು ಅನೇಕಸ್ತೋತ್ರಗಳನ್ನೂಗಮಕಗಳನ್ನೂ ಸುಶ್ರಾವ್ಯವಾಗಿ ಹಾಡುತ್ತಿದ್ದರುಇಂದಿಗೂ ಶ್ರೀಮಂದಿರದ ಅನೇಕ ಹಿರಿಯರೂಅವರ ಸಹೋದರಿಯರೂಪೂಜ್ಯರ ಕಂಠಮಾಧುರ್ಯವನ್ನು ಸ್ಮರಿಸುತ್ತಾರೆಮುಂದೆ ಉಪನಯನಸಂಸ್ಕಾರವಾದ ಮೇಲೂ ಇವರು ಮಾಡುತ್ತಿದ್ದ ಸಂಧ್ಯಾವಂದನೆ ಬೇರೆವಟುಗಳಿಗಿಂತ ಭಿನ್ನವಾಗಿತ್ತು``ಸಂಧ್ಯಾವಂದನೆ ಮಾಡಲು ಕುಳಿತರೆ ಬಹಳ ಹೊತ್ತು ಮೌನವಾಗಿ ನಿಶ್ಚಲವಾಗಿ ಕುಳಿತಿರುತ್ತಿದ್ದರುಎಂದು ಅವರ ಸಹೋದರಿಯರೂಸಹಪಾಠಿಗಳೂಒಡನಾಡಿಗಳೂ ಹೇಳುತ್ತಾರೆಇದರಿಂದ ಬಾಲ್ಯದಲ್ಲಿ ಇದ್ದ ಅಧ್ಯಾತ್ಮಪ್ರಖರತೆಯನ್ನು ಗುರುತಿಸಬಹುದು.

  ಇವರಿಗೆ ಓದುವ ಹವ್ಯಾಸ ಬಾಲ್ಯದಿಂದಲೂ ಇದ್ದು ಅನೇಕದೇಶಭಕ್ತರಅಧ್ಯಾತ್ಮಸಾಧಕರ ಜೀವನ ಚರಿತ್ರೆಗಳನ್ನುರಾಮಾಯಣ-ಮಹಾಭಾರತಗಳನ್ನು ಓದಿ ಗ್ರಹಿಸುತ್ತಿದ್ದರುಬಹುಸೂಕ್ಷ್ಮಗ್ರಾಹಿಗಳಾಗಿದ್ದರುಏಕಸಂಧಗ್ರಾಹಿಗಳಾಗಿದ್ದರುಪಠ್ಯೇತರಚಟುವಟಿಕೆಗಳಲ್ಲೂ ಬಹಳ ಚುರುಕಾಗಿದ್ದರುಗುರುಹಿರಿಯರಲ್ಲಿ ಗೌರವವಿನಯಶ್ರದ್ಧಾ-ಭಕ್ತಿಧರ್ಮಸಂಸ್ಕೃತಿಗಳ ಬಗ್ಗೆ  ಗೌರವ ಎಲ್ಲವನ್ನೂ ಬಾಲ್ಯದಿಂದಲೇ ಮೈಗೂಡಿಸಿಕೊಂಡಿದ್ದರುಶ್ರೀಯುತರಿಗೆ ಬಾಲ್ಯದಿಂದಲೂ ಸ್ವಾಭಿಮಾನದೇಶಾಭಿಮಾನಭಾಷಾಭಿಮಾನಪೂರ್ವಗ್ರಹಪೀಡಿತವಲ್ಲದ ಚಿಂತನೆಗಳುನಮ್ಮ ನಾಡು-ನುಡಿ -ಸಂಸ್ಕೃತಿಗಳ ಬಗ್ಗೆ ಒಲವು ಬಹಳವಾಗಿಯೇ ಇತ್ತುಈ ಸ್ವಭಾವಕ್ಕೆ ಇಂಬು ಕೊಟ್ಟಂತೆ ಇವರು ಇಂಟರ್ಮೀಡಿಯಟ್ ಮುಗಿಸುವ ಹೊತ್ತಿಗೆ ಸ್ವಾತಂತ್ರ್ಯಚಳುವಳಿ ತೀವ್ರಗೊಂಡಿತ್ತು.


ದೇಶಭಕ್ತಿಯ ಮೂರ್ತರೂಪ -

ಆಗ ನಮ್ಮ ದೇಶದಲ್ಲಿ ಬ್ರಿಟೀಷರ ದಾಸ್ಯದ ಶೃಂಖಲೆಯಲ್ಲಿ ಸಿಕ್ಕಿದ್ದ ತಾಯಿಭಾರತಿಯನ್ನು ಮುಕ್ತಗೊಳಿಸಲು ಆಂದೋಲನಗಳು ತೀವ್ರವಾಗಿ ನಡೆಯುತ್ತಿದ್ದ ಕಾಲಹೀಗಿದ್ದಾಗ  ಯುವಮುಖಂಡರನ್ನು ಕರ್ನಾಟಕದಲ್ಲಿ ಕ್ರೋಢೀಕರಿಸಿ ದೇಶಾಭಿಮಾನಮೂಡಿಸಲು ಅಂದಿನ ರಾಷ್ಟ್ರೀಯನಾಯಕರಲ್ಲಿ ಮುಂಚೂಣಿಯಲ್ಲಿದ್ದ ಶ್ರೀಜಯಪ್ರಕಾಶ್ ನಾರಾಯಣ್ (ಜೆ.ಪಿ.) ಅವರ ನೇತೃತ್ವದಲ್ಲಿ 'ಪ್ರಜಾ ಸೋಷಿಯಲಿಸ್ಟ್ ಪಾರ್ಟಿ'ಯ ನಾಯಕರುಗಳಾದ ಶ್ರೀಅಚ್ಯುತಪಟವರ್ಧನ್ ಹಾಗೂ ಶ್ರೀಅಶೋಕ್ ಮೆಹ್ತಾ ಮುಂತಾದವರು ಮೈಸೂರಿಗೆ ಜನಜಾಗೃತಿಮೂಡಿಸಲು ಬಂದರು``ಸ್ವಾತಂತ್ರ್ಯಸಂಗ್ರಾಮಕ್ಕೆ ಯುವಪೀಳಿಗೆಯ ಅವಶ್ಯಕತೆ ಇದೆಎಲ್ಲರೂ ಕೈಗೂಡಿಸಿ ಸಂಗ್ರಾಮದಲ್ಲಿ ಹೋರಾಡಿ ಜಯಗಳಿಸೋಣಎಂಬ ಉತ್ತೇಜನಕಾರಿಭಾಷಣಗಳನ್ನು ಕೇಳಿ ಇವರು ರೋಮಾಂಚಿತರಾಗುತ್ತಿದ್ದರು. "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀಎಂಬ ಸ್ಫೂರ್ತಿದಾಯಕಮಾತುಗಳು ಇವರಲ್ಲಿದ್ದ ಕ್ಷಾತ್ರತೇಜಸ್ಸನ್ನು ಬಡಿದೆಬ್ಬಿಸಿತು``ಭಾರತಮಾತೆಯ ಸಂಕೋಲೆಯನ್ನು ಬಿಡಿಸಲು ಇಚ್ಛೆಯುಳ್ಳವರು ಬರಬಹುದುಎಂಬ ರಾಷ್ಟ್ರೀಯ ನಾಯಕರ ಕರೆಗೆ ಓಗೊಟ್ಟು ದೇಶಕ್ಕಾಗಿ ತ್ಯಾಗಬಲಿದಾನ ಮಾಡಲೇಬೇಕೆಂಬ ಛಲತುಡಿತಹೃದಯತುಂಬಿದ ಭಾವುಕತೆಗಳಿಂದ ಭರಿತರಾಗಿಮಾತೃಭೂಮಿಯ ಉಳಿವಿಗಾಗಿ ತನ್ನ ಕಾಣಿಕೆಯನ್ನು ಕೊಡಲೇಬೇಕೆಂದು ನಿರ್ಧರಿಸಿಇವರೂ ಸಹ ವಿದ್ಯಾಭ್ಯಾಸಕ್ಕೆ ವಿದಾಯ ಹೇಳಿಮನೆಯಲ್ಲಿ ಅನುಮತಿ ಕೇಳಿದರೆ ಎಲ್ಲಿ ತಡೆಯುವರೋ ಎಂದು ಯಾರಿಗೂ ಹೇಳದೇತಾನು ಹೊರಟನಂತರ ಮನೆಯಲ್ಲಿ ಹಿರಿಯರಿಗೆ ತಿಳಿಸಲು ತಮ್ಮ ಆಪ್ತರೊಬ್ಬರಿಗೆ ಸೂಚಿಸಿಯುವಮುಖಂಡರೊಡನೆ ಹೊರಟೇಬಿಟ್ಟರುವಯಸ್ಸು ೧೭ ರಿಂದ ೧೮ನವಯೌವ್ವನಬಿಸಿರಕ್ತ ಧಮನಿಧಮನಿಯಲ್ಲಿ ಹರಿಯುತ್ತಿತ್ತುದಿಟ್ಟಹೆಜ್ಜೆ ಮತ್ತು ಧೃಢಸಂಕಲ್ಪದೊಡನೆ ಇಟ್ಟ ಹೆಜ್ಜೆಯನ್ನು ಹಿಂದೆಗೆಯದೆಭಾರತಮಾತೆಯನ್ನು ದಾಸ್ಯಶೃಂಖಲೆಯಿಂದ ಬಿಡಿಸಲು ಕಟಿಬದ್ಧರಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರುಯುವನಾಯಕರುಗಳ ಮಾರ್ಗದರ್ಶನದಲ್ಲಿಇವರು ಅನೇಕವೇದಿಕೆಗಳಲ್ಲಿಕ್ರಾಂತಿಕಾರಿಭಾಷಣಗಳನ್ನು ಮಾಡಿಬ್ರಿಟಿಷರ ವಿರುದ್ಧ ಕರಪತ್ರಗಳನ್ನು ಹಂಚಿಜನಜಾಗೃತಿಯನ್ನು ಉಂಟುಮಾಡುತ್ತಿದ್ದರುಮೊದಲೇ ವಾಗ್ಮಿಗಳಾಗಿದ್ದ ಇವರುಯುವಮುಖಂಡರ ಪ್ರಭಾವದಿಂದತಮ್ಮದೇ ಆದ ಶೈಲಿಯಲ್ಲಿಇಂಗ್ಲೀಷ್ಹಿಂದಿಕನ್ನಡಭಾಷೆಗಳಲ್ಲಿ ಆಯಾಯಾಪ್ರಾಂತ್ಯಕ್ಕನುಗುಣವಾಗಿ ಮಾತನಾಡುವುದನ್ನು ರೂಢಿಸಿಕೊಂಡರು.


ಶ್ರೀಯವರ ನಿಸ್ಸ್ವಾರ್ಥಸೇವೆ

ಶ್ರೀಸೀತಾರಾಮಯ್ಯನವರ ಸೂಕ್ಷ್ಮಬುದ್ಧಿದೂರದೃಷ್ಟಿ,ಹಾಗೂ ಚಾಣಾಕ್ಷತೆಯನ್ನು ಮನಗಂಡಿದ್ದ ರಾಷ್ಟ್ರೀಯನಾಯಕರು ದೆಹಲಿಯಲ್ಲಿ ಚರ್ಚಿಸಿ ಇವರಿಗೆ ``ಸೆಕ್ರೆಟ್ರಿಯೇಟ್ ವಿಭಾಗದಲ್ಲಿ ಉನ್ನತಪದವಿಯನ್ನು ಕೊಡುತ್ತೇವೆ ಬನ್ನಿಎಂದು ಪತ್ರಬರೆದರುಅಧಿಕಾರದ ಲಾಲಸೆಪದವಿಗಳ ಆಕಾಂಕ್ಷೆಯಿಲ್ಲದಬಾಹ್ಯವಾಗಿ ಹೆಸರನ್ನು ಪ್ರಚಾರಮಾಡಿಕೊಳ್ಳಲು ಆಸೆಯಿಲ್ಲದ ಇವರು ``ನನ್ನ ದೇಶಕ್ಕಾಗಿ ದುಡಿದೆದೇಶಸೇವೆ ನನ್ನ ಕರ್ತವ್ಯನನ್ನ ಜೀವನನಿರ್ವಹಣೆಗೆ ಒಂದು ಸರ್ಕಾರಿ ಉದ್ಯೋಗ ಸಿಕ್ಕಿದೆಅದು ಬೇರೆಯವರಿಗೆ ಸಿಗಲಿಎಂಬ ವಿಶಾಲ ಮನೋಭಾವದಿಂದ ಬಂದಂತಹ ಉತ್ತಮಪದವಿಅಧಿಕಾರದ ಅವಕಾಶವನ್ನು ನಯವಾಗಿ ತಳ್ಳಿಹಾಕಿದರುಸ್ವಾತಂತ್ರ್ಯಾನಂತರದಲ್ಲಿ  ಸ್ವಾತಂತ್ರಹೋರಾಟಗಾರರಿಗೆ  ಸರ್ಕಾರ ಮಾಸಾಶನನೀಡುತ್ತಿತ್ತುತುಂಬಿದ ಕುಟುಂಬಆರ್ಥಿಕಮುಗ್ಗಟ್ಟಿನಿಂದ ಬಳಲುತ್ತಿದ್ದರೂಪಿಂಚಣಿಗಾಗಿ ಅರ್ಜಿ ಹಾಕಲಿಲ್ಲ. "ನಾನು ನನ್ನ ತಾಯಿಗೆ  ಸೇವೆಮಾಡಿದರೆನಾಲ್ಕಾಣೆ ಕೊಡು ಎನ್ನಲೇಈ ರೀತಿಯ ಪ್ರತಿಫಲಾಪೇಕ್ಷೆ ಸರಿಯೇ?" ಎಂದು ಹೇಳುತ್ತಿದ್ದರುಕೀರ್ತಿ,ಧನ,ಪದವಿಗಳಿಗೆ  ಆಸೆಪಡದೆ ನಿಸ್ಪೃಹರಾಗಿ ದೇಶಸೇವೆಮಾಡಿದವರು. "ಪ್ರಯೋಜನಮನುದ್ದಿಶ್ಯ ನ ಮಂದೋಪಿ ಪ್ರವರ್ತತೇಎಂಬುದನ್ನು ಸುಳ್ಳಾಗಿಸಿದ ನಿಸ್ಪೃಹರು.


ಮುಂದುವರೆದ ವಿದ್ಯಾಭ್ಯಾಸ

ಶ್ರೀಯುತರ ತಂದೆಯವರಿಗೂ ಶ್ರೀಯುತರು ಮಾಡಿದ ದೇಶಸೇವೆಯ ಬಗ್ಗೆ ಮೆಚ್ಚುಗೆಯಾಗಿತ್ತುಸ್ವಾತಂತ್ರ್ಯ ಹೋರಾಟಕ್ಕೆಂದು ಅರ್ಧಕ್ಕೇ ನಿಲ್ಲಿಸಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಲು ಹೇಳಿದರುಆರ್ಥಿಕಸಂಕಷ್ಟ ಬಹಳವಾಗಿದ್ದರಿಂದ ಮೊದಲಿಗೆ ಟಿ.ಸಿ.ಹೆಚ್.ಮಾಡಿ ಸರ್ಕಾರಿ ಪ್ರಾಥಮಿಕಶಾಲೆಯಲ್ಲಿ ಉಪಾಧ್ಯಾಯವೃತ್ತಿಯನ್ನು ಹಿಡಿದು ತಂದೆಗೆ ನೆರವಾದರು.  ಇವರು ಶಿಕ್ಷಕವೃತ್ತಿಯಲ್ಲಿದ್ದಾಗಲೇ ಕನ್ನಡಪಂಡಿತ್ ಪರೀಕ್ಷೆಬಿ.ಎಡ್ಪರೀಕ್ಷೆಗಳಲ್ಲಿ ಪ್ರಥಮ ಶ್ರೇಣಿಪಡೆದುಚಿನ್ನದಪದಕವನ್ನು ಪಡೆದುಪ್ರೌಢಶಾಲೆಯ ಶಿಕ್ಷಕರಾಗಿ ಬಡ್ತಿ ಹೊಂದಿ ಯಶಸ್ವಿಯಾದರು.


ಉತ್ತಮಶಿಕ್ಷಕ

ಒಳ್ಳೆಯವಾಗ್ಮಿಗಳುಗಮಕಿಗಳೂ ಆಗಿದ್ದ ಇವರು ಕ್ರಮವಾಗಿ ಸಂಗೀತಪಾಠ ಆಗದಿದ್ದರೂ ಭಗವತ್ಕೃಪೆಯಿಂದ ಬಂದ ಸಿರಿಕಂಠದಲ್ಲಿ ಕುಮಾರವ್ಯಾಸನ ಭಾರತಲಕ್ಷ್ಮೀಶನ ಕಾವ್ಯದೇವರನಾಮಗಳುವಚನಗಳನ್ನು ಸೊಗಸಾಗಿ ಹಾಡುತ್ತಿದ್ದರು.  ಮಹಾಕಾವ್ಯದ ಪದ್ಯಗಳು ಜೀವಂತ ರಸಘಟ್ಟಿಗಳಾಗಿ ರಸೋತ್ಕರ್ಷ ಉಂಟುಮಾಡುತ್ತಿದ್ದುದನ್ನು ಆಯಾಯಾ ವಿವರಣೆಯನ್ನು ಕೇಳಿ ಆಸ್ವಾದಿಸಿದ ಅನೇಕ ಶಿಷ್ಯರುಭಾಷಾಪ್ರೇಮಿಗಳು  ಹಾಗೂ ಸಂಸ್ಕೃತಿಚಿಂತಕರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆಇವರು ಶಿಕ್ಷಕರಾಗಿ ಸೂಜಿಗಲ್ಲಿನಂತೆ ವಿದ್ಯಾರ್ಥಿಗಳನ್ನು ಆಕರ್ಷಿಸಿದವರುಕೆತ್ತಿದ ಸುಂದರಮೂರ್ತಿಗೆ ಅಲಂಕಾರಮಾಡುವುದು ಸುಲಭಆದರೆ ಕಗ್ಗಲ್ಲನ್ನು ಮೂರ್ತಿಯಾಗಿಸುವ ಶಿಲ್ಪಿಯ ಕೆಲಸ ಗುರುತರವಾದುದಷ್ಟೆಅಂತೆಯೇ ಸರ್ಕಾರಿಶಾಲೆಗಳಲ್ಲಿ ಕನ್ನಡಪಂಡಿತರಾಗಿದ್ದ ಇವರು ಅನೇಕಹಳ್ಳಿಯ ಮಕ್ಕಳ ಮನಸ್ಸನ್ನು ತಿದ್ದಿ ತೀಡಿ ರೂಪಿಸುವಲ್ಲಿ ಸಫಲರಾಗಿದ್ದಾರೆಶುದ್ಧವಾದ ಭಾಷೆಯ ಅರಿವಿಲ್ಲದಗ್ರಾಮೀಣ ಕುಟುಂಬಗಳಿಂದ ಬಂದು ಸುಸಂಸ್ಕೃತರಾದ ವಿದ್ಯಾರ್ಥಿಗಳು ಇವರ ಪಾಠ ಕೇಳಿ ಆರ್ದ್ರವಾಗಿ ಬರೆದಿರುವ ಪತ್ರಗಳೇ ಇದಕ್ಕೆ ಸಾಕ್ಷಿ.


ಶಿಸ್ತಿನ ಸಿಪಾಯಿ

     ಮೃದುಹೃದಯದವರೂ ಶಿಷ್ಯವತ್ಸಲರೂ ಆಗಿದ್ದ ಇವರು ಶಿಸ್ತಿನ ವಿಷಯದಲ್ಲಿಸಮಯಪರಿಪಾಲನೆಯಲ್ಲಿ ಬಹಳ ಕಟ್ಟುನಿಟ್ಟುದುರ್ನಡತೆಅಶಿಸ್ತುಇವುಗಳು ಕಂಡು ಬಂದಾಗ ನಿಷ್ಠುರವಾಗಿ ತಿದ್ದುತ್ತಿದ್ದರುಒಟ್ಟಾರೆ ಹೇಳುವುದಾದರೆ "ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿಎಂಬಂತಿದ್ದವರುಇವರು ಶಿಕ್ಷಕರಾಗಿ ಕೆಲಸ ಮಾಡಿದ ಎಲ್ಲ ಸರ್ಕಾರಿಶಾಲೆಗಳಲ್ಲೂ ಉತ್ತಮ ಫಲಿತಾಂಶ ಕಟ್ಟಿಟ್ಟಬುತ್ತಿಯಾಗಿತ್ತುಪಠ್ಯೇತರ ಚಟುವಟಿಕೆಗಳಾದ ಪ್ರಬಂಧಆಶುಭಾಷಣಕಂಠಪಾಠಗಾಯನಇತ್ಯಾದಿಸ್ಫರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳಿಗೆ ಉತ್ತೇಜನಮಾರ್ಗದರ್ಶನ ನೀಡಿಶಾಲೆಯ ಕೀರ್ತಿಗೆ ಕಾರಣರಾಗುತ್ತಿದ್ದರುಹೀಗೆ ಮಕ್ಕಳ ಸರ್ವತೋಮುಖಬೆಳವಣಿಗೆಗೆ ಹಾಗೂ ಶಾಲೆಯ ಕೀರ್ತಿಪತಾಕೆಹಾರುವುದಕ್ಕೆ ಮೂಲಕಾರಣರಾಗಿ 'ಆದರ್ಶಶಿಕ್ಷಕ'ರೆನಿಸಿದ್ದರು.


ಸದ್ಗುರುವಿನ ಅನ್ವೇಷಣೆಯಲ್ಲಿ

       ಶ್ರೀಯುತರಿಗೆ ಬಾಹ್ಯವಾದ ಕೀರ್ತಿಯಶಸ್ಸುಗಳಿಂದ ಸಂತೋಷಸಿಕ್ಕಿರಲಿಲ್ಲವೆನಿಸುತ್ತದೆಬಾಲ್ಯದಿಂದಲೂ ಇದ್ದ ಆಧ್ಯಾತ್ಮಿಕ ಒಲವು ಜಾಗೃತವಾಯಿತುಸದ್ಗುರುವಿನ ಅನ್ವೇಷಣೆಯಲ್ಲಿದ್ದರುಭಾರತದಾದ್ಯಂತ ಆಗಿಹೋದ ಗುರುಪರಂಪರೆಯಸಾಧಕರಯೋಗಿವರೇಣ್ಯರ ಜೀವನಚರಿತ್ರೆಗಳನ್ನು ಓದಿಅಧ್ಯಯನಮಾಡಿಅವರ ಆಪ್ತಮಿತ್ರರಾದ ಶ್ರೀವರದದೇಶಿಕಾಚಾರ್ಯ(ವರದಣ್ಣರವ)ರ ಬಳಿ (ಇಂದಿನ ಶ್ರೀಶ್ರೀರಂಗಪ್ರಿಯಸ್ವಾಮಿಗಳುಆಧ್ಯಾತ್ಮಿಕ ಚಿಂತನೆಗಳನ್ನು ಮಾಡುತ್ತಾ, "ಇಂದಿಗೂ ನಿಜವಾದ ಯೋಗಿಗಳು ಇದ್ದಾರೆಯೇನಮಗೂ ದೊರಕುವರೇ?" ಎಂದು ಕೇಳಿದಾಗ, ``ಹೌದುಎಲೆಯ ಮರೆಯ ಕಾಯಿಯಂತೆ ಇಂದಿಗೂ ಇದ್ದಾರೆಎಂದು ಹೇಳಿದರುಅಂತಹ ಯೋಗಿಗಳನ್ನು ನೋಡುವ ಹಂಬಲವನ್ನು ಶ್ರೀಯುತರು ವ್ಯಕ್ತಪಡಿಸಿದಾಗಇವರ ತೀವ್ರತುಡಿತವನ್ನು ಮನಗಂಡುತಮ್ಮ ಊರಿನವರೇ ಆದ 'ಶ್ರೀರಂಗಮಹಾಗುರು'ಗಳನ್ನು ಭೇಟಿ ಮಾಡಿಸಿದರು.


ಶ್ರೀಗುರುವಿನ ಕರುಣಾಪ್ರವಾಹಾವಗಮನ

ಶ್ರೀರಂಗಮಹಾಗುರುಗಳ ಮಾತುವ್ಯಕ್ತಿತ್ವನಿಲುವುಇವರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿತ್ತುಗುರುವಿನ ಆಕರ್ಷಣೆಗೆ ಒಳಗಾದ ಇವರು ಪದೇಪದೇ ನಂಜನಗೂಡಿನಿಂದ  ಹೆಡತಲೆಗೆ ಹೋಗಿ ಅವರ ದರ್ಶನವಚನಾಮೃತಗಳಿಂದ ಪುನೀತರಾಗುತ್ತಿದ್ದರುಎಲ್ಲಕ್ಕೂ ಕಾಲವು ಕೂಡಿಬರಬೇಕಷ್ಟೇಬಹುಬೇಗನೆ ಆ ಕಾಲವೂ ಕೂಡಿಬಂದು ಮಹಾಗುರುವಿನ ಅನುಗ್ರಹಕ್ಕೆ ಪಾತ್ರರಾದರು.


ಶ್ರೀಗುರುಚರಣಭೃಂಗ

 ಶ್ರೀರಂಗಮಹಾಗುರುವಿನ ಆಕರ್ಷಣೆಯ ಪರಿಧಿಗೆ ಒಳಗಾದ ಇವರಿಗೆ ಗುರುದಂಪತಿಗಳ ಪ್ರೀತಿ-ವಾತ್ಸಲ್ಯಅವ್ಯಾಜವಾದ ಕರುಣೆಬೆರಗನ್ನುಂಟುಮಾಡಿತುತಾಯ್ತಂದೆಗಳ ಮಡಿಲಿಗಿಂತಲೂ ಹೆಚ್ಚು ವಾತ್ಸಲ್ಯಸುಖವನ್ನು ಗುರುದಂಪತಿಗಳ ಮಡಿಲಿನಲ್ಲಿ ಅನುಭವಿಸಿದ ಭಾಗ್ಯಶಾಲಿಗಳು ಇವರು ಎಂದರೆ ಅತಿಶಯೋಕ್ತಿಯಾಗಲಾರದುಅಲ್ಲಿಂದ ಮುಂದೆ ಎಲ್ಲ ಪ್ರಮುಖಹಬ್ಬ-ಹರಿದಿನಗಳನ್ನು ಗುರುಗೃಹದಲ್ಲೇ ಗುರುದೇವನೊಡನೆ ಆಚರಿಸುತ್ತಿದ್ದರುದೇಶಸೇವೆಯಲ್ಲಿ ಸಾರ್ಥಕತೆಕಂಡುಕೊಂಡಿದ್ದ ಶ್ರೀಯುತರು ಸದ್ಗುರುವಿನ ಕೃಪಾಕಟಾಕ್ಷಕ್ಕೆ  ಪಾತ್ರರಾಗಿ ತಮ್ಮನ್ನು ಈಶಸೇವೆಯಲ್ಲಿಯೂ ತೊಡಗಿಸಿಕೊಂಡರುಶ್ರೀಗುರುವಿನ ಶ್ರೀಚರಣಗಳ ಅಡಿಯಲ್ಲಿ ಕುಳಿತು ಅವರ ಮಾರ್ಗದರ್ಶನದಲ್ಲಿ ನಿಗೂಢವಾದ ಯೌಗಿಕಪ್ರಪಂಚದ ಬಹುಸೂಕ್ಷ್ಮವಾದ ಪರಿಚಯವನ್ನು ಪಡೆದುಕೊಂಡರುಅಲ್ಲದೆನಾಡಿವಿಜ್ಞಾನಗಾಯನಕಲೆಜ್ಯೋತಿಷ್ಯಶಾಸ್ತ್ರಪದಾರ್ಥವಿಜ್ಞಾನಆಯುರ್ವೇದವೇ ಮೊದಲಾದ ಅನೇಕ ವಿಷಯಗಳಿಗೆ ಸಂಬಂಧಿಸಿದ ಸೂಕ್ಷ್ಮಾತಿಸೂಕ್ಷ್ಮಮರ್ಮಗಳನ್ನು ಶ್ರೀರಂಗಮಹಾಗುರುವು ಇವರಿಗೆ ಅನುಗ್ರಹಿಸಿದರುಶ್ರೀಗುರುವು ಹಾಕಿಕೊಟ್ಟ ಮಾರ್ಗದಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡರುಗುರುಚರಣ  ಭೃಂಗವಾದರು.

ದೈವಸಾಕ್ಷಾತ್ಕಾರ ಪಡೆದ ಜ್ಞಾನಿಗಳು ಬೇರೆ ಯಾರಾದರು ಇರುವರೇ ಎಂದು ತಿಳಿಯಬೇಕೆಂಬ ಅಪೇಕ್ಷೆಯಿಂದ ಕುಂಭಕೋಣಚಿದಂಬರತಿರುವಣ್ಣಾಮಲೈ ಮೊದಲಾದ ಸ್ಥಳಗಳಲ್ಲಿ ಕೆಲವು ದಿನಗಳು ಸುತ್ತಾಡಿ ಬಂದರುತಿರುವಣ್ಣಾಮಲೈಶ್ರೀರಮಣಮಹರ್ಷಿಗಳ ತಪೋಭೂಮಿಯಲ್ಲಿ ತಮಗಾದ ಅನುಭವಗಳನ್ನು ಶ್ರೀಗುರುಗಳಲ್ಲಿ ಅರಿಕೆ ಮಾಡಿಕೊಂಡಾಗ ಅವರು ಬಹಳ ಸಂತೋಷಪಟ್ಟರು.


ಅಷ್ಟಾಂಗಯೋಗಮಂದಿರ ನಿರ್ಮಾಣಕ್ಕೆ ಅಂಕುರಾರೋಪಣ

    ಪ್ರಾರಂಭದಲ್ಲಿ ಬೆರಳೆಣಿಕೆಯಷ್ಟು ಇದ್ದ ಶಿಷ್ಯರಲ್ಲಿ ಇವರೂ ಒಬ್ಬರಾಗಿದ್ದರುದಿನಕಳೆದಂತೆ ಶಿಷ್ಯರ ಸಂಖ್ಯೆ ಹೆಚ್ಚುತ್ತಿತ್ತುಇದನ್ನು ಗಮನಿಸಿದ ಶ್ರೀಸೀತಾರಾಮಯ್ಯನವರು "'ಅಷ್ಟಾಂಗಯೋಗವಿಜ್ಞಾನಮಂದಿರ'- ಈ ಸಂಸ್ಥೆ ಕೇವಲ ಕೆಲವರಿಗೆ ಸೀಮಿತವಾಗಬಾರದುಇದು ಹೊರಗೆ ಪ್ರಕಾಶವಾಗಬೇಕುಎಂಬ ತಮ್ಮ ಆಸೆಯನ್ನು ಗುರುವಿನ ಮುಂದಿಟ್ಟರುಹೀಗೆ ಗುರುಗೃಹದಲ್ಲಿ ನಡೆಯುತ್ತಿದ್ದ ಅ.ಯೋ.ವಿ.ಮಂದಿರದ ಕಾರ್ಯಕ್ರಮಗಳಿಗೆ ಗುರುವಿನ ಅನುಮತಿಯೊಡನೆ ಒಂದು ಕಟ್ಟಡವನ್ನು ಖರೀದಿಸಿರಿಜಿಸ್ಟರ್ಡ್-ಸಂಸ್ಥೆಯನ್ನಾಗಿಸಲಾಯಿತು


ಪ್ರಥಮಕಾರ್ಯದರ್ಶಿಗಳಾಗಿ 'ಶ್ರೀವಿಜಯಾನಂದಕಂದ'ರು

ಸಂಸ್ಥೆಯು ಪ್ರಪ್ರಥಮವಾಗಿ ಪ್ರಕಾಶವಾಗಲು ಇವರನ್ನೇ ಶ್ರೀಗುರುವು ನಿಮಿತ್ತವನ್ನಾಗಿಸಿದರುರಿಜಿಸ್ಟರ್ಡ್ ಸಂಸ್ಥೆ ಎಂದಾದಮೇಲೆಅಧ್ಯಕ್ಷರುಕಾರ್ಯದರ್ಶಿಗಳು ಎಲ್ಲವೂ ಬೇಕಷ್ಟೇಮಹಾಗುರುವಿನ ಅಪ್ಪಣೆಗೆ ಅನುಸಾರವಾಗಿ ಅ.ಯೋ.ವಿ.ಮಂದಿರದ ಸಂಸ್ಥಾಪಕ-ಕಾರ್ಯದರ್ಶಿಯಾಗಿಶ್ರೀಗುರುವೇ ಅನುಗ್ರಹಿಸಿದ "ವಿಜಯಾನಂದಕಂದಎಂಬ ಅಭಿಧಾನದಿಂದ ಕಾರ್ಯನಿರ್ವಹಿಸಿದರು.

ಶ್ರೀಮಂದಿರದ ಮಾಸಪತ್ರಿಕೆ 'ಆರ್ಯಸಂಸ್ಕೃತಿ'ಗೆ ಲೇಖನ ಬರೆಯುವುದುಪ್ರವಚನಗಳನ್ನು ಮಾಡುವುದುವಿದ್ಯಾವ್ಯವಸಾಯ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತ್ರಿಕರಣಪೂರ್ವಕವಾಗಿ ತೊಡಗಿಸಿಕೊಂಡು ಶಿಕ್ಷಕವೃತ್ತಿಕಾರ್ಯದರ್ಶಿಯ ಕೆಲಸಗಳುಎರಡನ್ನೂ ಸಮತೋಲನದಿಂದ ನಿಭಾಯಿಸುತ್ತಿದ್ದರುಅಧ್ಯಾತ್ಮಿಕ ಜೀವನಕ್ಕೆ ಹೊಂದಿಕೊಂಡ ಲೌಕಿಕಜೀವನವನ್ನು ನಡೆಸುತ್ತಿದ್ದರು.


ಸಂಸ್ಥೆಗೆ ಲಾಂಛನ

ಸಂಸ್ಥೆಗೆ ಬೇಕಾದ ಚಿಹ್ನೆ/ಲಾಂಛನ (ಎಂಬ್ಲಂ)ಹಾಗೂ ಸಂಸ್ಥೆಯ ಮುಂದೆ ಹಾಕಬೇಕಾಗಿದ್ದ ತ್ರಿಕೋಣಾಕೃತಿಫಲಕ ಇವುಗಳನ್ನು ಶ್ರೀಗುರುವಿನ ಮಾರ್ಗದರ್ಶನದಲ್ಲಿ ಮಾಡಿಸಲಾಯಿತುಎಲೆಮರೆಯ ಕಾಯಿಯಂತೆ ಇರಲು ಬಯಸುತ್ತಿದ್ದ ಶ್ರೀಗುರುಭಗವಂತ-ಭಗವತಿಯವರ ಭಾವಚಿತ್ರಗಳನ್ನು (ಭಾವಚಿತ್ರಗಳನ್ನು ತೆಗೆಯುವುದಕ್ಕೆ ಕಷ್ಟವಿದ್ದ ಆ ಕಾಲದಲ್ಲಿಅವರ ಒಪ್ಪಿಗೆ ಪಡೆದು ತೆಗೆಸಿದ್ದಾರೆವಿಜ್ಞಾನಮಂದಿರದ ಪ್ರಥಮಕಾರ್ಯದರ್ಶಿಗಳಾಗಿ ಹಲವಾರು ಪ್ರಥಮಗಳಿಗೆ ಕಾರಣರಾದರು ಎಂಬುದು ಉತ್ಪ್ರೇಕ್ಷೆಯೇನಲ್ಲಇವರು ಕಾರ್ಯದರ್ಶಿಗಳಾಗಿದ್ದ ಸಮಯದಲ್ಲಿ ಮಂದಿರದ ಪ್ರಜೆಗಳಿಗೆ ಕಾರ್ಯಕ್ರಮದ ಪಟ್ಟಿಬಹಿರಂಗಕಾರ್ಯಕ್ರಮದ ಪತ್ರಎಲ್ಲವೂ ಬರವಣಿಗೆಯಲ್ಲೇ ಹೋಗುತ್ತಿತ್ತುವಿಜಯಾನಂದಕಂದರ ಆಪ್ತರೂಬಂಧುಗಳೂ ಆದ ಶ್ರೀ ವಿ.ಎಸ್.ಸುಬ್ಬಕೃಷ್ಣರವರುತಮ್ಮ ದುಂಡಾದ ಅಕ್ಷರಗಳಲ್ಲಿ ಬರೆದುಕೊಟ್ಟರೆ ಇವರು ಸೀಲ್ ಹಾಗೂ ಸಹಿ ಹಾಕಿ ಕಳುಹಿಸುತ್ತಿದ್ದರು``ಆವತ್ತಿನ ಕಾಲದಲ್ಲಿ ಮಂದಿರದ ಲೆಟರ್ ಹೆಡ್ಸೀಲು ಮತ್ತು ಇಂಕ್ ಪ್ಯಾಡ್ ಇದ್ದ ನನ್ನ ಬ್ಯಾಗೇ ಮಂದಿರದ ಆಫೀಸಾಗಿತ್ತುಎಂದು ಅವರು ನೆನಪಿಸಿಕೊಳ್ಳುತ್ತಿದ್ದುದುಂಟುಹೀಗೆ ಕಾರ್ಯದರ್ಶಿಗಳಾಗಿ ಶ್ರೀಗುರುಭಗವಂತನ ವಿಚಾರಧಾರೆಯನ್ನು   ಸೂಕ್ತವಾದ ಕಡೆಗಳಲ್ಲಿ  ಪರಿಚಯಿಸುವುದುಮಂದಿರಕ್ಕೆ ಸಂಬಂಧಿಸಿದ ಪ್ರಕಟಣೆಗಳನ್ನು ಪ್ರಕಾಶಕ್ಕೆ ತರುವುದುವಿದ್ಯಾವ್ಯವಸಾಯ ಇತ್ಯಾದಿಕೆಲಸಗಳಲ್ಲಿ ವ್ಯಾಪೃತರಾಗಿಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಿದ್ದರು ಎಂದರೆ ತಪ್ಪಾಗಲಾರದುಬಸರೀಕಟ್ಟೆಯಲ್ಲಿರುವ 'ಶ್ರೀಸದ್ಗುರುವಿದ್ಯಾಶಾಲೆ'ಯ ಸ್ಥಾಪನೆಯಲ್ಲಿ ಹಾಗೂ ಬೆಳೆವಣಿಗೆಯಲ್ಲಿಯೂ ಸಕ್ರಿಯವಾದ ಪಾತ್ರವನ್ನು ವಹಿಸಿದರು.


ಸದ್ಗೃಹಸ್ಥರಾಗಿ ಶ್ರೀಯುತರು

    ಪ್ರಾಪ್ತವಯಸ್ಕರಾದರೂ ವಿವಾಹವಾದರೆ ಎಲ್ಲಿ ತಮ್ಮ ಆಧ್ಯಾತ್ಮಿಕಸಾಧನೆಗೆ ತೊಡಕಾದೀತೋ ಎಂಬ ಭಯದಿಂದ ಮನೆಯ ಹಿರಿಯರಿಗೆ ತಾವು ವಿವಾಹವಾಗುವುದಿಲ್ಲವೆಂದು ನಿಷ್ಠುರವಾಗಿ ಹೇಳಿಬಿಟ್ಟರುಇದರಿಂದ ಮನೆಯ ಹಿರಿಯರಿಗೆ ನಿರಾಸೆಯೇ ಆಗಿತ್ತುಆದರೆ ಗುರುದಂಪತಿಗಳು ಇವರನ್ನು ಗೃಹಸ್ಥರಾಗಿ ನೋಡಬೇಕೆಂದು ಇಚ್ಚಿಸಿದರುಶ್ರೀಗುರುವು, ``ವೈವಾಹಿಕಜೀವನವು ಧ್ಯಾತ್ಮಿಕಜೀವನಕ್ಕೆ ಅಡ್ಡಿಯಾಗುವುದಿಲ್ಲಎಂದು ಭರವಸೆಯನ್ನು ಕೊಟ್ಟಾಗ ಅವರ ಅಪ್ಪಣೆಗೆ ಅನುಸಾರವಾಗಿ ವಿವಾಹವಾಗಲು ಒಪ್ಪಿಕೊಂಡರುಇವರು ವಿವಾಹವಾಗುವ ಕನ್ಯೆಯನ್ನು ಮೊದಲ ಬಾರಿಗೆ ನೋಡಲೂ ಸಹ ಶ್ರೀಗುರುಭಗವಂತರು ಇವರ ತಂದೆ-ತಾಯಿಯವರೊಡನೆ ಇವರ  ಬಂಧುಗಳಾದ ವಿಸುಬ್ಬಕೃಷ್ಣರವರು ವಾಸಿಸುತ್ತಿದ್ದ ಮೈಸೂರಿನ 'ಸಿಹಿನೀರಿನಕಟ್ಟೆಬೀದಿ'ಯಲ್ಲಿದ್ದ ಮನೆಗೆ ಆಗಮಿಸಿದ್ದರುಅಲ್ಲಿ ಹಿಂದಿನ ಸಂಪ್ರದಾಯದಂತೆ ಹುಡುಗಿಯು ಹಾಡಿದ್ದನ್ನು ಕೇಳಿ,  ''ರಾಗತಾಳಗಳಿಗೆ ಬೆಲೆ ಕೊಡಬೇಡೀಪ್ಪಾಅದರ ಹಿಂದಿರುವ ಭಗವತ್ಪ್ರೇಮಕ್ಕೆ ಬೆಲೆ ಕೊಡಿಎಂದು ಹೇಳಿ ಆ ಕನ್ಯೆಯನ್ನು ವಿವಾಹವಾಗಲು ತಮ್ಮ ಸಮ್ಮತಿಯನ್ನು ಕೊಟ್ಟರುಶ್ರೀಯುತರ ವಿವಾಹಮಹೋತ್ಸವಕ್ಕೂ ಗುರುಭಗವಂತರು ತಮ್ಮ ಕೆಲವು ಶಿಷ್ಯರೊಂದಿಗೆ ಹೋಗಿದ್ದೂ ಅಲ್ಲದೆಗುಜುಗುಟ್ಟುತ್ತಿದ್ದ ಮದುವೆಮನೆಯಲ್ಲಿ "ಕಲ್ಯಾಣೋಲ್ಲಾಸಸೀಮಾ"ಎಂಬ ಶ್ಲೋಕವನ್ನು ಹಾಡಿದ್ದು ಬಹಳ ವಿಶೇಷವಾಗಿತ್ತು ಎಂದು ಅಂದಿನ ಹಿರಿಯರು ನೆನಪಿಸಿಕೊಳ್ಳುತ್ತಿದ್ದರು.

          ಇವರನ್ನು ವಿವಾಹವಾಗಿ ಬಂದ ಶ್ರೀಮತಿಜಯಲಕ್ಷ್ಮಿಯವರೂ ಕೂಡ ಇವರ ಮನೋಧರ್ಮಕ್ಕೆ ಅನುಗುಣವಾಗಿತಾವೂ ಸಹ ಗುರುಕೃಪೆಗೆ ಪಾತ್ರರಾಗಿ ಇವರ ಧ್ಯಾತ್ಮಿಕಜೀವನಕ್ಕೆ ಪೂರಕವಾಗಿ ಗೃಹಸ್ಥಾಶ್ರಮವನ್ನು ನಡೆಸುತ್ತಿದ್ದರುತುಂಬಿದ ಕುಟುಂಬದಲ್ಲಿಇವರನ್ನು ನೋಡಲು ಬರುತ್ತಿದ್ದ ವಿದ್ಯಾರ್ಥಿಗಳಮಂದಿರದ ಪ್ರಜೆಗಳಭಗವದ್ಭಕ್ತರ ಊಟಉಪಚಾರಗಳ ಹೊಣೆ ಹೊತ್ತು ಮಾತೃವಾತ್ಸಲ್ಯವನ್ನು ತೋರಿಸುತ್ತಿದ್ದರು.


ಸದ್ಗುರುವಿನ ಕರುಣಾಲಹರಿ

ಶ್ರೀಯುತರ ಮೊದಲ ಮಗುವಿನ ಜನನಕ್ಕೆ ಮೊದಲಿನ ಸೀಮಂತೋನ್ನಯನವೂ ಗುರುಗೃಹದಲ್ಲಿ ಪೂಜ್ಯದೊರೆಸ್ವಾಮಿಗಳ ಪೌರೋಹಿತ್ಯದಲ್ಲಿ ನಡೆಯಿತುಶಿಷ್ಯವಾತ್ಸಲ್ಯಕ್ಕೆ ಎಣೆಯುಂಟೇ ?!! ರಾಮಾಯಣ ಹಾಗೂ ಮಹಾಭಾರತದ ಕಾಲದಲ್ಲಿ ಮಹರ್ಷಿವಸಿಷ್ಠರು ಹಾಗೂ ಗರ್ಗರೂ ಶ್ರೀರಾಮ ಹಾಗೂ ಶ್ರೀಕೃಷ್ಣರಿಗೆ ಸಂಸ್ಕಾರಗಳನ್ನು ಮಾಡಿದರೆಭಾಗವತೋತ್ತಮರಾದ ವಿಭೀಷಣಾದಿಗಳು ಭಗವಂತನಿಂದ ಪಟ್ಟಾಭಿಷಿಕ್ತರಾದರುಅಂತೆಯೇ ಭಗವಂತನಿಂದ ಸೀಮಂತೋನ್ನಯನ ಮಾಡಿಸಿಕೊಂಡ ಭಾಗ್ಯಶಾಲಿಗಳಿವರು.  ಮುಂದೆ ಇವರ ಎಲ್ಲಾ ಮಕ್ಕಳಿಗೂ ಗುರುವಿನ ಅನುಗ್ರಹದ ಭಾಗ್ಯಲಭಿಸಿತು.

ಸ್ಥಾನ-ಮಾನಗಳಿಗೆ ಅಂಟಿಕೊಳ್ಳದವರು

ಶ್ರೀಗುರುಗಳ ಆದೇಶ-ಸಂದೇಶ-ನಿರ್ದೇಶದಂತೆ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ಸಾಂಸಾರಿಕಜವಾಬ್ದಾರಿ ಹೆಚ್ಚುತ್ತಿತ್ತುಒಂದೆಡೆ ತಂದೆಯವರ ಅನಾರೋಗ್ಯಊರಿಂದೂರಿಗೆ ವರ್ಗಾವಣೆಈ ರೀತಿಯ ಅನೇಕ ಒತ್ತಡಗಳಿಂದ ಶ್ರೀಮಂದಿರದ ಕೆಲಸಗಳನ್ನು ಕಾರ್ಯದರ್ಶಿಯಾಗಿ ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರತೆ ಕಾಡಲು ಶುರುವಾಯಿತುತಮ್ಮ ವೈಯಕ್ತಿಕತೊಂದರೆಗಳಿಂದ ಸಂಸ್ಥೆಯ ಕಾರ್ಯಕ್ರಮಗಳಿಗೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಕಾರ್ಯದರ್ಶಿಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರುಕಾರ್ಯದರ್ಶಿಪದದಲ್ಲಿಲ್ಲದಿದ್ದರೂಜೀವಿತಾಂತ್ಯದವರೆಗೂ ಮನೆ-ಮಕ್ಕಳುಆರೋಗ್ಯಎಲ್ಲವನ್ನು ಬದಿಗಿರಿಸಿ ಮಂದಿರದ  ಕಾರ್ಯಕ್ರಮಗಳಲ್ಲಿ  ಭಾಗವಹಿಸುತ್ತಿದ್ದರು.


ಶ್ರೀಮಾತೆಯವರ ಆಶಯ – ಶ್ರೀಮಂದಿರದಲ್ಲಿ ಆಶ್ರಯ

   ಶ್ರೀವಿಜಯಾನಂದಕಂದರು ತಮ್ಮ ವೃತ್ತಿಯ ಕೊನೆಯ ಭಾಗವನ್ನು ನಂಜನಗೂಡಿನಲ್ಲಿಯೇ ಮುಗಿಸಿದರುನಿವೃತ್ತಿ ಹೊಂದಿದ ನಂತರದಲ್ಲಿಯೂ ಮೈಸೂರುಶಾಖೆಯಲ್ಲಿರುವ ಶ್ರೀಮಂದಿರದಲ್ಲಿ ಬರುತ್ತಿದ್ದ ಜಿಜ್ಞಾಸುಗಳಿಗೆ ಉತ್ತರಿಸಲು ಶ್ರೀಮಾತೆಯವರು ಮಂದಿರದ ಹಿಂಭಾಗದಲ್ಲಿದ್ದ ಮನೆಗೆ ಬರಲು ತಿಳಿಸಿದರು೧೯೮೮ನೇ ಇಸವಿಯಲ್ಲಿ ಮಂದಿರದ ಹಿಂಭಾಗದಲ್ಲಿದ್ದ ಮನೆಗೆ ಕುಟುಂಬಸಮೇತರಾಗಿ ಬಂದು ನೆಲೆಸಿದರುಮಂದಿರದ ಪುಸ್ತಕಗಳನ್ನು ಕೊಳ್ಳಲುಬರುತ್ತಿದ್ದ ಆಸಕ್ತರಿಗೆ ಶ್ರೀಗುರುವಿನ ವಿಚಾರಧಾರೆಯನ್ನು ಹೇಳುವುದು, 'ಆರ್ಯಸಂಸ್ಕೃತಿಮಾಸಪತ್ರಿಕೆಯ ಲೇಖನಗಳನ್ನು ಪರಿಶೀಲಿಸುವುದುಸಂಸ್ಥೆಯ ಬೇರೆ ಶಾಖೆಗಳಿಂದ ಬಂದ ಜ್ಞಾನಸೋದರರ ಬಗ್ಗೆ ಕಾಳಜಿಅತಿಥಿಸತ್ಕಾರವಿಚಾರವಿನಿಮಯ ಹೀಗೆ ಹಲವು ಹತ್ತು ಜವಾಬ್ದಾರಿಗಳನ್ನು ನಿಭಾಯಿಸಿಮಂದಿರದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದರುಅನೇಕ ಪ್ರವಚನಗಳನ್ನು ಮಾಡಿದರು.


ಭಾರತೀಮಂದಿರ ಭಾರತೀನಿಕೇತನ

ಶ್ರೀರಂಗಮಹಾಗುರುಗಳ ಜನ್ಮಸ್ಥಳವೂಕಾರ್ಯಕ್ಷೇತ್ರವೂ ಆದ ಹೆಡತಲೆಗ್ರಾಮವು ನಂಜನಗೂಡು ತಾಲ್ಲೂಕಿಗೆ ಸೇರಿದೆ.  ಈ ಹಿನ್ನೆಲೆಯಲ್ಲಿ ನಂಜನಗೂಡಿಗೆ ಏನಾದರೂ ಮಾಡಬೇಕು ಎಂಬ ಅಭೀಪ್ಸೆ ಶ್ರೀಯುತರಲ್ಲಿ ಬಹುವಾಗಿ ಇತ್ತುಈ ಹಿನ್ನೆಲೆಯಲ್ಲಿ ಅವರು 'ಭಾರತೀಮಂದಿರಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.   ಆದರೆಅವರು ತೆರೆಯ ಮರೆಯಲ್ಲಿ ನಿಂತು ತಮ್ಮ ಆಪ್ತಸ್ನೇಹಿತರೂಸಹಪಾಠಿಗಳು ಆಗಿದ್ದ ಶ್ರೀ ಎನ್.ಶ್ರೀಕಂಠ ಅವರನ್ನು ಇದರ ಕಾರ್ಯದರ್ಶಿಯನ್ನಾಗಿ ಮುಂದಿರಿಸಿದರುಈ ಸಂಸ್ಥೆಯು 1950ರಲ್ಲಿ ಅರಂಭಗೊಂಡು 1952ರವರೆಗೂ (ಮೂರು ವರ್ಷಗಳುಬಹು ಯಶಸ್ವಿಯಾಗಿ ಕಾರ್ಯನಿರ್ವಹಿಸಿತುಸಾಹಿತ್ಯಸಂಗೀತಕಲೆ ಮೊದಲಾಗಿ ವಿವಿಧಕ್ಷೇತ್ರಗಳ ತಜ್ಞರನ್ನು ಕರೆಯಿಸಿ ತಿಂಗಳಿಗೊಮ್ಮೆ ಉಪನ್ಯಾಸಗಳನ್ನು  ಏರ್ಪಡಿಸಲಾಗುತ್ತಿತ್ತು.  ಶಿಕ್ಷಕರುವೈದ್ಯರೂವಕೀಲರೂ ಮೊದಲುಗೊಂಡು ವಿವಿಧಬಗೆಯ ಶ್ರೋತೃವರ್ಗ ಕಾರ್ಯಕ್ರಮಗಳಲ್ಲಿ ತುಂಬಿರುತ್ತಿತ್ತುಹೀಗೆ ಬರುವ ಉಪನ್ಯಾಸಕರಲ್ಲಿ ಅಷ್ಟಾಂಗಯೋಗವಿಜ್ಞಾನಮಂದಿರದ ಉಪನ್ಯಾಸಕರೂ ಇರುತ್ತಿದ್ದರು.  ಭಾರತೀಯಸಂಸ್ಕೃತಿಯ ಬಗ್ಗೆ ಶ್ರೀಗುರುವು ತನ್ನ ತಪಸ್ಯೆಯಿಂದ ತಂದ ವಿಚಾರಗಳಿಗೂಲೋಕದಲ್ಲಿ ಉಳಿದುಕೊಂಡಿರುವ ವಿಚಾರಗಳಿಗೂ ತುಲನಾತ್ಮಕವಾದ ನೋಟ ಉಂಟಾಗಿ ವಿಜ್ಞಾನಮಂದಿರದ ವಿಚಾರಗಳು ಅನನ್ಯವಾದುದೆಂಬುದು ಜನರಿಗೆ ಅರಿವಾಗುತ್ತಿತ್ತು.  ಅಂದಿನ ಕಾರ್ಯಕ್ರಮದ ಆದಿಮಂಗಳ ಹಾಗೂ ಅಂತ್ಯಮಂಗಳ (ಕಾರ್ಯಕ್ರಮದ ಕೊನೆಯಲ್ಲಿ ಹಾಡುವ ಮಂಗಳಾಶಂಸನೆ)ಗಳು ಅಂದಿನ ಉಪನ್ಯಾಸದ ವಿಷಯಕ್ಕೇ ಸಂಬಂಧಿಸಿರುತ್ತಿತ್ತು ಹಾಗೂ ವಂದನಾರ್ಪಣೆಯ ಸಮಯದಲ್ಲಿ ಕಾರ್ಯದರ್ಶಿಗಳಾಗಿದ್ದ ಶ್ರೀಶ್ರೀಕಂಠ ಅವರು ಅಂದಿನ ಉಪನ್ಯಾಸಕರು ಹೇಳಿದ್ದನ್ನು ಸಂಗ್ರಹಿಸಿ ಹೇಳುವುದರ ಜೊತೆಗೆ ಆ ವಿಷಯದ ಬಗ್ಗೆ ಸನಾತನ-ಆರ್ಯಭಾರತೀಯಮಹರ್ಷಿಗಳ ನೋಟನಿಲುವು ಏನಾಗಿದೆ ಎಂಬುದನ್ನೂ ತಿಳಿಸುತ್ತಿದ್ದರು.  ಇವೆರಡೂ 'ಭಾರತೀಮಂದಿರ'ದ ಕಾರ್ಯಕ್ರಮಗಳ ಪ್ರಧಾನ ಆಕರ್ಷಣೆಗಳಾಗಿ ಇಂದಿಗೂ ಅಂದಿನ ಹಲವು  ಶ್ರೋತೃಗಳ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿವೆ.  ಈ ಆದಿಮಂಗಳಅಂತ್ಯಮಂಗಳಗಳನ್ನು ಹೇಳಿಕೊಟ್ಟು ತರಬೇತಿ ನೀಡುತ್ತಿದ್ದವರೂ ಮತ್ತು ಶ್ರೀಶ್ರೀಕಂಠರಿಗೆ ಏನು ಹೇಳಬೇಕೆಂಬ ತಯಾರಿ ನೀಡುತ್ತಿದ್ದವರು ಶ್ರೀಸೀತಾರಾಮುಗಳೇಶ್ರೀರಂಗಮಹಾಗುರುಗಳೂ ಸಹಾ ಭಾರತೀಮಂದಿರದ ಹಲವು ಕಾರ್ಯಕ್ರಮಗಳಲ್ಲಿ ಪೂಜ್ಯಸೀತಾರಾಮುಗಳೊಡನೆ ಕೊನೆಯ ಬೆಂಚಿನಲ್ಲಿ ಶ್ರೋತೃಗಳಾಗಿ ಭಾಗವಹಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.  ಹೀಗೆ ಶ್ರೀಮಂದಿರದ ವಿಚಾರಧಾರೆಯ ಸಂಪರ್ಕ ಮತ್ತು ಶ್ರೀಯುತರ ಸ್ನೇಹ ಇವೆರಡು ಶ್ರೀಶ್ರೀಕಂಠರನ್ನು ಶ್ರೀಗುರುವಿನ ಅನುಗ್ರಹಕ್ಕೆ ಪಾತ್ರರನ್ನಾಗಿಸಿತುಮುಂದೆ ಶ್ರೀಶ್ರೀಕಂಠರು ಶ್ರೀಮಂದಿರದ ಕಾರ್ಯದರ್ಶಿಗಳಾಗಿ ಬಹುಸುದೀರ್ಘವಾದ ಸೇವೆಯನ್ನು ಸಲ್ಲಿಸಿದರು ಎಂಬುದಿಲ್ಲಿ ಸ್ಮರಣೀಯ.

ಮುಂದೆ ಶ್ರೀಯುತರು ಶಿಕ್ಷಕವೃತ್ತಿಯಿಂದ ನಿವೃತ್ತರಾಗಿ ನಂಜನಗೂಡಿನಲ್ಲಿಯೇ ನೆಲಸಿದರುಅಂದಿನ 'ಭಾರತೀಮಂದಿರ'ವು ಈಗ 'ಭಾರತೀನಿಕೇತನಎಂಬ ಹೆಸರಿನೊಂದಿಗೆ ಆವಿರ್ಭವಿಸಿತುಈ ಬಾರಿ ಶ್ರೀಸೀತಾರಾಮುಗಳು ಆಯ್ಕೆ ಮಾಡಿಕೊಂಡಿದ್ದು ನಂಜನಗೂಡಿನ ಬಾಲಕರಸರ್ಕಾರಿಪದವಿಪೂರ್ವ ಕಾಲೇಜಿನಲ್ಲಿ ತಮ್ಮ ಸಹೋದ್ಯೋಗಿಯಾಗಿ ನಾಟಕಕಲೆಯ ಶಿಕ್ಷಕರಾಗಿದ್ದ ಶ್ರೀವೆಂಕಟರಮಣಕಲಗಾರ್ ಮತ್ತು ನಂಜನಗೂಡಿನವರೂತಮಗೆ ಪರಿಚಯವಿದ್ದವರ ಮನೆಯ ಮಕ್ಕಳೂಮಿಗಿಲಾಗಿ ತಮ್ಮ ವಿದ್ಯಾರ್ಥಿಗಳು ಆಗಿದ್ದ ನಾಲ್ವರು ತರುಣರನ್ನು.  ಈ ಸಂಸ್ಥೆಯೂ 'ಭಾರತೀಮಂದಿರ'ದ ಪಡಿಯಚ್ಚೇ ಆಗಿತ್ತುಇದು 1986 ರಿಂದ 1988ರವರೆಗೂ ಕಾರ್ಯನಿರ್ವಹಿಸಿತುಯಥಾಪ್ರಕಾರ ಈಗಲೂ ಶ್ರೀಸೀತಾರಾಮುಗಳು ತೆರೆಯ ಹಿಂದಿನ ಸೂತ್ರಧಾರರಾಗಿ ಮಾರ್ಗದರ್ಶನನೀಡುತ್ತಿದ್ದರುಇವೆರಡೂ ಸಂಸ್ಥೆಗಳಲ್ಲಿ ಮಾಸ್ತಿಯವರೇ ಮೊದಲಾಗಿ ಆಯಾಯಾ ಕಾಲಘಟ್ಟದ ಬಹು ದೊಡ್ಡವಿದ್ವಾಂಸರೂತಜ್ಞರೂ ಉಪನ್ಯಾಸಗಳನ್ನು ನೀಡಿದ್ದಾರೆ.  ಈ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಮರುದಿನದ ದಿನಪತ್ರಿಕೆಗಳಲ್ಲಿ ವರದಿಯಾಗಿವೆಇವೆರಡೂ ಸಂಸ್ಥೆಗಳು ಅಪಾರವಾದ ಜನಮನ್ನಣೆಯನ್ನೂವಿದ್ವನ್ಮನ್ನಣೆಯನ್ನೂ ಗಳಿಸಿದ್ದವು.  ಭಾರತೀಯಸಂಸ್ಕೃತಿಯ ಬಗ್ಗೆ ಯಥಾರ್ಥವಾದ ನೋಟವನ್ನೂಶ್ರೀಮಂದಿರದ ವಿಚಾರಧಾರೆಯನ್ನೂ ಎಲ್ಲರಿಗೂ ತಲುಪಿಸಬೇಕೆಂಬ ಶ್ರೀಯುತರ ತುಡಿತದ ಹೆಗ್ಗುರುತುಗಳಾಗಿವೆ 'ಭಾರತೀಮಂದಿರಮತ್ತು 'ಭಾರತೀನಿಕೇತನ'ಗಳು.

ನಾದೋಪಾಸನೆ

ಶ್ರೀಯುತರು ಸಂಗೀತವನ್ನು ಶಾಸ್ತ್ರೀಯವಾಗಿ ಕಲಿಯದಿದ್ದರೂ ಅದರಲ್ಲಿ ಒಲವಿತ್ತುಮತ್ತು ಜನ್ಮತಃ ಸಂಗೀತದ ಜ್ಞಾನವೂಉತ್ತಮವಾದ ಶಾರೀರವೂ ಒದಗಿ ಬಂದಿತ್ತುಶ್ರೀರಂಗಮಹಾಗುರುಗಳು ಹಾಡುತ್ತಿದ್ದ ಸ್ತೋತ್ರಗಳನ್ನು ಮಧುರವಾಗಿ  ಹಾಡುತ್ತಿದ್ದರುಸಾಯಂಸಂಧ್ಯಾಕಾಲದಲ್ಲಿ ಇವರು ಹಾಡುವ ಸ್ತೋತ್ರಗಳನ್ನು ಕೇಳಲೆಂದೇ ಹಲವರು ಬರುತ್ತಿದ್ದರು.  ಹಾಗೆ ಬಂದವರಲ್ಲಿ ಹಲವರಿಗೆ ಮುಂದೆ ಶ್ರೀಗುರುವಿನ ಅನುಗ್ರಹವೂ ದೊರಕಿತು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.

   ಅವರು ಶ್ರೀರಂಗಮಹಾಗುರು ಮತ್ತು ವಿಜಯಲಕ್ಷ್ಮೀಶ್ರೀಮಾತೆಯವರನ್ನು ಕುರಿತು ಭಕ್ತಿರಸಭಾವಪೂರ್ಣವಾದ ಹಲವು ಸ್ತೋತ್ರಗಳನ್ನೂ ರಚಿಸಿದ್ದಾರೆಅವರು ಭಕ್ತಿಭಾವಭರಿತರಾಗಿ ಆ ಸ್ತೋತ್ರಗಳನ್ನು ಹಾಡುತ್ತಿದ್ದರು.  ಅವನ್ನು ಕೇಳಿದಾಗ ಒಂದು ವಿಶೇಷವಾದ ಪರಿಪಾಕವನ್ನು ಕೇಳುಗರ ಮನಸ್ಸುಬುದ್ಧಿಗಳ ಮೇಲೆ ಆ ಸಾಹಿತ್ಯಗಾನಗಳು ಉಂಟುಮಾಡುತ್ತಿತ್ತು.  ಅಷ್ಟಲ್ಲದೇಈ ಪರಿಣಾಮವು ಬಹುದೀರ್ಘಕಾಲ ಉಳಿಯುತ್ತಿತ್ತುಅವರು ರಚಿಸಿ ಹಾಡುತ್ತಿದ್ದ ಸ್ತೋತ್ರಗಳಲ್ಲಿ ಕೆಲವನ್ನು ಕೆಳಗೆ ಕೊಟ್ಟಿದೆ:–

1.  ಜಯ ಜಯತು ಹೃದಯೇಶ ಗುರುವರ

    ಜಯ ಜಯ ಮಹೋದಾರ ಸಾಗರ

    ಜಯ ಜಿತೇಂದ್ರಿಯ ಸೌಮ್ಯ ನಿಷ್ಕಲ ಭಕ್ತವತ್ಸಲನೆ |

    ಜಯ ಜಯತು ಯೋಗೇಶ ಶಂಕರ

    ಜಯ ಪರಂಜ್ಯೋತಿಸ್ವರೂಪನೆ

    ದಯಮಹಾಂಬುಧಿ ಮನ್ನಿಸೆನ್ನನು ಚರಣಕೆರಗುವೆನು ||

 

2. ಜಯ ಜಯ ಶ್ರೀರಂಗ ದಿವ್ಯಮಂಗಳರೂಪ

   ಜಯತು ಮಂಗಳ ಮಹಾರಂಗೇಶ ಹಯವದನ

   ಜಯ ಜಯ ಸಕಲಕಲಾಸುರಕ್ಷಕ ಸರ್ವವಿದ್ಯಾಮೂಲ ದೀಪರೂಪ (ವಿಜಯಾಧವ)||

   ಜಯತು ವಿಜಯಾನಂದಕಂದವತ್ಸಲ ಕಾಂತ

   ಜಯ ಜಯತು ಭಾರತೀಪತಿ ಭಕ್ತಜನಪಾಲ

  ಜಯತು ಮನ್ಮನೋರಥವೇರಿ ರಾಜಿಪ ರಾಜಪಥಗಾಮಿ  ರಕ್ಷಿಪುದು ನೀ ||


 (ಅವರು ಮೂರನೆಯ ಸಾಲನ್ನು ಹಾಡುವಾಗ "ಸರ್ವವಿದ್ಯಾಮೂಲ ದೀಪರೂಪಎಂದು ಹಾಡಿನಂತರ "ಸರ್ವವಿದ್ಯಾಮೂಲ ವಿಜಯಾಧವಎಂದು ಹಾಡುತ್ತಿದ್ದರು.)

 

3. ಎನ್ನ ರಾಮನೆ ರಮಿಸುವೆನ್ನೊಳು

    ಎನ್ನನಾಕರ್ಷಿಸುವ ಕೃಷ್ಣನೆ

    ಎನ್ನ ಸಂಧ್ಯಾವಂದನೆಯ ಸವಿತೃವೆ ಸುಧಾಮೂರ್ತಿ||

    ಎನ್ನ ಯಜ್ಞದ ಯಜ್ಞಪುರುಷನೆ

    ನಿನ್ನ ನಳಿನಸಮಾನ ಸುಂದರ

    ಚೆನ್ನಡಿಯನೀ ಮುಡಿಯೊಳಿಡು ಬೇಡುವೆನು ಸೇವಕನ ||


(ಗಮನಿಸಿಹೃದ್ಯವಾಗಿರುವ ಸಂಸ್ಕೃತದ ಸಾಹಿತ್ಯವು ಕನ್ನಡಕ್ಕೆ ಅನುವಾದಗೊಳ್ಳುವುದು ಲೋಕದಲ್ಲಿ ಸರ್ವೇ ಸಾಧಾರಣ.  ಆದರೆಶ್ರೀವಿಜಯಾನಂದಕಂದರ ಈ ಮೇಲ್ಕಂಡ ರಚನೆಯನ್ನು ಶ್ರೀರಂಗಪ್ರಿಯಶ್ರೀಗಳವರು ಬಹು ಹಿಂದೆಯೇ "ರಾಮಸ್ತ್ವಂ ಹೃದಯೇ ಸದೈವ ರಮಸೇಎಂಬುದಾಗಿ ಸಂಸ್ಕೃತಕ್ಕೆ ಅನುವಾದಿಸಿದ್ದಾರೆ ಹಾಗು ಇದು ಬಹುಭಕ್ತಪ್ರಿಯವೂ ಆಗಿದೆ.)

 

4. ಗುರುವಿಕೆಗೆ ಗೊತ್ತು ಚೆಲುವಿಕೆಗೆ ಗಣಿ ನನ್ನಿಗಾ

    ಗರ ಉರ್ಕಿಗಿರ್ಕೆವನೆ ಕಲೆಗೆ ನೆಲೆ ಪೆಸರ್ವೆತ್ತ

    ಅರಿತಕ್ಕೆ ತಾಣ ಶಾಂತತೆಗೆ ಮೇರೆ ಬಲ್ಪಿಗೆ ಬೇರು ತಳ್ತಳ್ತಿಗೆ ತವರ್ ||

    ಸಿರಿಸೊಂಪಿಗಾಬೀಡು ಸೈಂಪಿಗೆ ನೆಲೆವೀಡು

    ಕರುಣಕೆ ಕಡಲು ಸುಪಾವಿತ್ರ್ಯಕ್ಕೆ ನೀ ನಿಂಬು

    ವರಧರ್ಮಕಾಶ್ರಯನೆ ಗುರುವರನೆ ನಿನ್ನಯಾ ಸೊಡರಡಿಗೆ ಮುಡಿಯಿಡುವೆನು ||

 

5. ದೀಪರೂಪ ಪವಿತ್ರ ನಿರ್ಮಲ

   ರೂಪ ಸುಜ್ಞಾನ ಪ್ರದಾಯಕ

   ರೂಪ ಮಮ ಹೃದಯಾಬ್ಜದಲಿ ನೆಲೆಸಿರ್ಪ ಓಂಕಾರ

   ರೂಪ ಸುಂದರ ದಿವ್ಯಮಂಗಳ

   ದೀಪ ಮಹದಾನಂದವೀವ ಸು

   ರೂಪ ಸಲಹೈ ರಂಗ  ನಿನ್ನಲರಡಿಗೆ ಮುಡಿಯಿಡುವೆಂ ||

 

6. ಕಾವುದೈ ಕೈಬಿಡದೆ ಕಾವನೆ

   ಕಾವುದೈ ಮತ್ಪ್ರಾಣಕಾಂತನೆ

   ಕಾವುದೈಯಘದೂರ ನಿರ್ಮಲ ಮೋಕ್ಷದಾಯಕನೆ |

   ಕಾವುದೈ ಕಾರುಣ್ಯಸಾಗರ

   ಕಾವುದೈ ಕೈವಲ್ಯನಾಥನೆ

   ಕಾವುದೈ ಕಡುದೀನನನು ಕಾಮಾದಿಗಳ ಕೈಯ್ಯಿಂ ||

 

7. ತಾಯೆ  ಮಲ್ಲೋಚನ ಕುಮುದಚಂದ್ರಿಕೆ ಮಹಾ

   ಪ್ರೇಯೆ ಮನ್ನಾಥಮುಖವನು ಸತತ ಚಿಂತಿಪ

   ಶ್ರೀಯೆ ಮದ್ದುಃಖಹಾರಿಣಿ ಮನೋಹಾರೆ ಸು

   ಕಾಯೆ ಮನ್ಮನದ ಮಂಟಪದಿ ಮಂಡಿಪುದು ನೀ ||

 

8. ದಿವ್ಯಾಂಬರೆ ದಯಮಾನದೀರ್ಘನಯನೆ ದೃಡಾಂಗೆದೇವಿ ದೇದೀಪ್ಯಮಾನ ಸುಭೂಷಭೂಷಿತೇ

   ಭವ್ಯಾನನೆ ಭಯಭಂಜನೆ ನಿರಂಜನೆ ವಿಜಯೆ ಹೇವರದೆ  ಮಂಗಳೆ ಮರಾಲಮಂದಗಮನೆ    

   ದಿವ್ಯಾಂಗನಾಮಣಿಯೆ ಮದ್ಗುರುವರಮನೋಜ್ಞೆ ಕುಂಕುಮಾಂಕಿತಫಾಲೆ ಕಲ್ಯಾಣಗುಣಪರಿಪೂರ್ಣೆ     

   ಅವ್ಯಾಜಕರುಣಾಪೂರಪೂರಿತೆ ಶ್ರೀರಂಗರಾಜಮಹಿಷಿ ಶ್ರೀಮಾತೆ ನಿನ್ನಡಿಗೆ ಮುಡಿಯಿಡುವೆನು ||

 

9. ಜಯ ಜಯತು ಭಾರತಿ ಭರತರತಿ ಮಹಾಸುಮತಿ

    ಜಯತು ವಾಗೀಶಸತಿ ಸುಮೇಧಾ ಸರಸ್ವತಿ

    ಜಯ ವಾಣಿ ವಿಶ್ವವಿಜ್ಞಾನವೀಣಾಪಾಣಿ ವಿಮಲೆ ಪನ್ನಗವೇಣಿ ||

    ಜಯ ಜಯತು ಕಲ್ಯಾಣಿ ವರದೆ ವಿದ್ಯಾರಾಣಿ

   ದಯಮಹಾಂಬುಧಿ ಹರಸು ನೀ ಸಚ್ಚಿದಾನಂದ

   ಪಯವುಣಿಸಿ ಕಂದಗಳ ಕಾಯ್ತಾಯೆ ನಿನ್ನಯಾ ಮಲರಡಿಗೆ ಮುಡಿಯಿಡುವೆನು ||

 

10.  ಪಾಹಿ ಪುಣ್ಯದೆ ಪೂರ್ಣೆ ಪಾವನೆ

     ತ್ರಾಹಿ ಭಗವತಿ ಭದ್ರೆ ಭಾರತಿ

     ಪಾಹಿ ಶಿವೆ ಶಾರದೆ ಸಿರಿಶುಭಪ್ರದೆ ಸುಸೌಮ್ಯೆಯೆ ನೀ |

     ತ್ರಾಹಿ ಭಕ್ತನ ನಿನ್ನ ಕಂದನ

     ಪಾಹಿ ಎನ್ನಂ ಪ್ರೀತಿಪುತ್ರನ

     ತ್ರಾಹಿ ತವಪದಪದುಮಸಾರವ ಪೀರ್ವ ಷಟ್ಪದವ ||

 

11. ಮಂಗಳಂ ಶ್ರೀರಂಗರಾಜಗೆ

    ಮಂಗಳಂ ಶ್ರೀಗುರುವರೇಣ್ಯಗೆ

    ಮಂಗಳಂ ಜ್ಞಾನವಿಜ್ಞಾನವಿಚಾರವಾಹಿನಿಗೆ ||

    ಮಂಗಳಂ ಮನ್ಮಾತೆ  ವಿಜೆಯೆಗೆ

    ಮಂಗಳಂ ಶ್ರೀರಂಗರಾಣಿಗೆ

    ಮಂಗಳಂ ಮಂದಿರದ  ಸಹೃದಯಬಂಧುವರ್ಗಕ್ಕೆ ||


12. ಮಳೆಯಕ್ಕೆ ಕಾಲಕಾಲಕಾಬೆಳೆಗಳು ಬೆಳೆದ

ನೆಲದಿಂದ ತಣಿವಕ್ಕೆ ಬೆಳೆದ ನಾಲ್ಕರವತ್ತು

ಕಲೆಗಳಿಂದೊಡೆವೆರೆತು ಕಲೆಯನಾಥನ ಕೂಡಿ ಕೊಂಡಾಡಿ ಸೌಖ್ಯದೊಳಿರ್ಕೆ||

ಇಳೆಯ ನರವೃಂದ-ಹೃನ್ಮಂದಿರದಿ ಬೆಳಗಿ ಭಾ

ನೆಲಸಿ ಭಾರತೀಭಾರತರಾಗಿ ಸಲೆ ಬಾಳ್ಗೆ

ನಲಿದು ತಾಯ್ಮೊಲೆಗುಡಿದು ಮಲಗಿ ಮಡಿಲೊಳ್ ಕಂದಗಳಾನಂದದಿಂದಿರ್ಕೆ ||


ಗುರುಭಾವಿತಾಂತಃಕರಣರಾಗಿ ಶ್ರೀಯುತರು ಹೀಗೆ ತನ್ನ ಗುರುವಿನ ಹಿರಿಮೆಗರಿಮೆಗಳನ್ನು ಸಂದರ್ಭೋಚಿತವಾಗಿ ಹೇಳುತ್ತ ಸಂತೋಷಪಡುತ್ತಿದ್ದ ಮಹಾಚೇತನರಾಗಿದ್ದರು. "ನಾಪೃಷ್ಟಃ ಕಸ್ಯಚಿತ್ ಬ್ರೂಯಾತ್" ಎಂಬುದು ಅವರ ನಿಯಮವಾಗಿತ್ತು. ಹೀಗೆ ಜೀವನದುದ್ದಕ್ಕೂ ಗುರುಭಾವಭಾವಿತಾಂತಃಕರಣರಾಗಿ ಧ್ಯಾನ-ಮೌನ- ಗುರುಚಿಂತನೆಗಳಲ್ಲಿ ಮುಳುಗಿರುತ್ತಿದ್ದರು. ಶ್ರೀಯುತರು ಗುರುವಿನಲ್ಲಿ ನಮ್ಮ ಮನಸ್ಸು ಹೇಗೆ ಲಗ್ನವಾಗಬೇಕು ಎಂದು ಮನಮುಟ್ಟುವಂತೆ ಹೇಳುತ್ತಿದ್ದರು.  ”ಮನಶ್ಚೇನ್ನಲಗ್ನಂ ಗುರೋರಂಘ್ರಿಪದ್ಮೇ" ಎಂಬುದನ್ನು ವಿವರಿಸುತ್ತಾ, 

"ಅಂಕೋಲಂ ನಿಜಬೀಜಸಂತತಿರಯಸ್ಕಾಂತೋಪಲಂ ಸೂಚಿಕಾ

ಸಾಧ್ವೀ ನೈಜವಿಭುಂ ಲತಾಕ್ಷಿತಿರುಹಂ ಸಿಂಧು: ಸರಿದ್ವಲ್ಲಭಮ್ |

ಪ್ರಾಪ್ನೋತೀಹ ಯಥಾ ತಥಾ ಪಶುಪತೇ: ಪಾದಾರವಿಂದದ್ವಯಂ

ಚೇತೋವೃತ್ತಿರುಪೇತ್ಯ ತಿಷ್ಠತಿ ಸದಾ ಸಾ ಭಕ್ತಿರಿತ್ಯುಚ್ಯತೇ ||”

``ಅಂಕೋಲದ ಬೀಜ ಸಿಡಿದು ಆ ಗಿಡದ ಬುಡದಲ್ಲೇ ಸೇರಿ ಒಂದಾಗಿ ಮತ್ತೆ  ಅದರಿಂದ ಗಿಡಗಳು ಬೆಳೆಯುತ್ತವೆ. ಇಲ್ಲಿನ ಸೇರುವಿಕೆ ಸಹಜ ಹಾಗೂ ಗಾಢವಾಗಿದೆ. ಮುಂದಕ್ಕೆ ಅಯಸ್ಕಾಂತವು ಸೂಜಿಯನ್ನು ಸೇರುವಿಕೆಯಲ್ಲಿ, ಪತಿವ್ರತಾಸ್ತ್ರೀಯು ತನ್ನ ಪತಿಯನ್ನು ಸೇರುವಲ್ಲಿ, ಬಳ್ಳಿಯು ಮರವನ್ನು ಹಬ್ಬುವಲ್ಲಿ ಸೇರುವಿಕೆಯು ಮತ್ತಷ್ಟು ಗಾಢವಾಗಿದ್ದರೂ ಪ್ರಯತ್ನಪೂರ್ವಕವಾಗಿ ಬಿಡಿಸಲೂಬಹುದು.  ಆದರೆ ನದಿಗಳು ಸಮುದ್ರರಾಜನಲ್ಲಿ ವಿಲೀನವಾದ ನಂತರ ನೀವು ರುಚಿಯಲ್ಲಾಗಲೀ, ಬಣ್ಣದಲ್ಲಾಗಲೀ ಗಂಗೆ, ತುಂಗೆ ಎಂದಾಗಲೀ ಬೇರ್ಪಡಿಸಲಾರಿರಿ, ಗುರುತಿಸಲಾರಿರಿ. ಈ ರೀತಿ ನಿಮ್ಮ   ಮನಸ್ಸು ಗುರುವಿನಲ್ಲಿ ಸಂಲಗ್ನವಾಗಬೇಕು” ಎಂದು ವಿವರಿಸುತ್ತಿದ್ದರು.

ನಿಷ್ಠೆ ಮತ್ತು ಪ್ರಾಮಾಣಿಕತೆಗಳ ಸಾಕಾರಮೂರ್ತಿ

‘ಮೃದೂನಿ ಕುಸುಮಾದಪಿ’ ಎಂಬಂತಿದ್ದರೂ  ಸನಾತನಾರ್ಯಭಾರತೀಯ-ಋಷಿನೋಟಕ್ಕೆ, ಶ್ರೀಗುರುವಿನ ವಿಚಾರಧಾರೆಗೆ, ಧರ್ಮಸಂಸ್ಕೃತಿಗಳಿಗೆ, ಧಕ್ಕೆಬರುವಂತೆ, ಚ್ಯುತಿಬರುವಂತೆ ಮಾತನಾಡಿದರೆ ನೇರವಾಗಿ ನಿಷ್ಠುರವಾಗಿ ಪ್ರತಿಭಟನೆಯ ಧ್ವನಿ ಎತ್ತಿ ಖಂಡಿಸುತ್ತಿದ್ದರು. ಸರಳತೆ, ಸಜ್ಜನಿಕೆ, ನಲ್ನುಡಿ, ಶಿಸ್ತು, ಪ್ರಾಮಾಣಿಕತೆ, ಸತ್ಯ, ನಿಷ್ಠೆ, ಸ್ವಜನಾಭಿಮಾನ, ಶಿಷ್ಯವಾತ್ಸಲ್ಯ, ಗುರುಭಕ್ತಿ, ದೇಶಭಕ್ತಿ ಮುಂತಾದ ಸದ್ಗುಣಗಳ ಆಗರವಾಗಿದ್ದರು.

ಪೂಜ್ಯ ಶ್ರೀವಿಜಯಾನಂದಕಂದರು ಶ್ರೀಗುರುವಿನ ವಿಚಾರಧಾರೆಯನ್ನು ಮಂದಿರದ ಪರವಾಗಿ ಹೊರಗಿನ ಅನೇಕಸಂಸ್ಥೆಗಳಲ್ಲಿ ಮನೋಜ್ಞವಾಗಿ ಇಡುತ್ತಿದ್ದರು. ಮೈಸೂರು ಆಕಾಶವಾಣಿಯ ‘ಚೆನ್ನುಡಿ’ ಮತ್ತು ‘ಚಿಂತನ’ ಕಾರ್ಯಕ್ರಮಗಳಿಗೆ ಅನೇಕವಿಚಾರಗಳನ್ನು ರೆಕಾರ್ಡ್ ಮಾಡಿಕೊಟ್ಟಾಗ ಅದು ಆಕಾಶವಾಣಿಯಲ್ಲಿ ಬಿತ್ತರವಾಗಿ ಅನೇಕರ ಮನಸ್ಸನ್ನು ಆಕರ್ಷಿಸಿತ್ತು.    

ಬಹುಮುಖಪ್ರತಿಭರು ಶ್ರೀಯುತರು 

ಪೂಜ್ಯಶ್ರೀವಿಜಯಾನಂದಕಂದರು ಕನ್ನಡಶಿಕ್ಷಕರಾದರೂ ಬಹುಮುಖಪ್ರತಿಭೆಯುಳ್ಳವರಾಗಿದ್ದರು. ಶ್ರೀಗುರುವಿನಿಂದ ಆರ್ಷೇಯವಾದ ನಾಡಿವಿಜ್ಞಾನದ ಪಾಠವೂ ಆಗಿತ್ತು. ಜ್ಯೋತಿಷ್ಯಶಾಸ್ತ್ರದ ಪರಿಚಯವೂ ಸಾಕಷ್ಟಿತ್ತು. ಅನಾಟಮಿಯನ್ನೂ ಓದುತ್ತಿದ್ದರು. ಅಲೋಪತಿ ಹಾಗೂ ಆಯುರ್ವೇದಗಳ ತುಲನಾತ್ಮಕ-ಅಧ್ಯಯನವನ್ನು ಮಾಡುತ್ತಿದ್ದರು. ವಿಧ್ಯುಕ್ತವಾದ ಸಂಗೀತಪಾಠವಾಗದಿದ್ದರೂ, ಅನುಕರಿಸಿ ದೈವದತ್ತವಾದ ಸಿರಿಕಂಠದಿಂದ ಸೊಗಸಾಗಿ ಹಾಡುತ್ತಿದ್ದರು. ಅವರ ಗಾಯನದ ಸೊಗಸು ಇಂದಿಗೂ ಅನೇಕರ ಮನಸ್ಸಿನಲ್ಲಿ ಹಸಿರಾಗಿದೆ. ಇದರ ಬಗ್ಗೆ ಈ ಮೊದಲೇ ವಿವರಿಸಲಾಗಿದೆ.

ಶ್ರೀಗುರುಪದಸಾಯುಜ್ಯ 

ಶ್ರೀಗುರು, ಶ್ರೀಮಾತೆಯವರು ಹಾಗೂ ವಿಜ್ಞಾನಮಂದಿರ ಇವು ಇವರ ಜೀವನದ ಕೊನೆಯವರೆಗೂ ಉಸಿರಿನ ಉಸಿರಾಗಿದ್ದವು. ಕೊನೆಯ ದಿನವೂ ಅತಿಥಿಸತ್ಕಾರ ಮಾಡಿ ಬಹುಧಾನ್ಯಸಂವತ್ಸರದ ಆಶ್ವಯುಜಮಾಸದ, ಕೃಷ್ಣಪಕ್ಷತೃತೀಯಾದಂದು ತಮ್ಮ ಗುರುವಿನ ಜನ್ಮನಕ್ಷತ್ರವಾದ ಮಹಾಭರಣಿಯಂದು (ದಿ. ೭-೧೦-೧೯೯೮) ಗುರುಪದಸಾಯುಜ್ಯವನ್ನು ಹೊಂದಿದರು. ಶ್ರೀಯುತರು ಭೌತಿಕವಾಗಿ ಇಲ್ಲದಿದ್ದರೂ ಅವರ ಧ್ಯೇಯಾದರ್ಶಗಳಿಂದ ಸಹೃದಯರ ಮನಸ್ಸಿನಲ್ಲಿ ನೆಲೆಸಿದ್ದಾರೆ.

ಜಯಂತಿ ತೇ ಸುಕೃತಿನೋ ರಸಸಿದ್ಧಾ: ಕವೀಶ್ವರಾ: |

ನಾಸ್ತಿ ತೇಷಾಂ ಯಶ: ಕಾಯೇ ಜರಾಮರಣಜಂ ಭಯಮ್ ||