Monday, December 11, 2023

ವ್ಯಾಸ ವೀಕ್ಷಿತ - 66 ಪರಮಸುಂದರ ಪೂರ್ವೇಂದ್ರರು, ಪಂಚಪಾಂಡವರು ( Vyaasa Vikshita - 66 Paramasundara Purvendraru, PancaPandavaru)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಒಬ್ಬಳಿಗೇ ಹಲವರು ಪತಿಯೆಂದರೆಂತು? – ಎಂದು ಶಂಕಿತನಾಗಿದ್ದ ದ್ರುಪದನಿಗೆ ಏಕಾಂತದಲ್ಲಿ ವ್ಯಾಸರು ತಮ್ಮ ಮಾತನ್ನು ಮುಂದುವರೆಸುತ್ತಾ ಹೇಳಿದರು:

"ರಾಜನೇ, ಯಾರು ಹಿಂದೆ ಇಂದ್ರರುಗಳಾಗಿದ್ದರೋ, ಅವರೇ ಈಗ ಪಾಂಡವರಾಗಿ ಇಲ್ಲಿ ಪ್ರಕಟವಾಗಿರುವುದು. ಹಾಗೆಯೇ ಯಾರನ್ನು ಸ್ವರ್ಗಶ್ರೀಯೆಂದು ಹೇಳಲಾಗಿತ್ತೋ ಆಕೆಯೇ ಈ ದಿವ್ಯರೂಪಧಾರಿಣಿಯಾದ ದ್ರೌಪದಿಯು. ದೇವಾಂಶಯೋಗ ಎಂಬುದಿಲ್ಲದೇ ಹೋಗಿದ್ದಲ್ಲಿ, (ಯಜ್ಞವೇದಿಕಾ)ಭೂಮಿಯಿಂದ ಅದೆಂತು ಜನಿಸುತ್ತಿದ್ದಳು ಈ ದ್ರೌಪದಿ? ಸೋಮ-ಸೂರ್ಯರ ಪ್ರಕಾಶವನ್ನು ಹೊಂದಿರುವವಳೂ, ಒಂದು ಕ್ರೋಶದಷ್ಟು ದೂರ ಸುಗಂಧವನ್ನು ಬೀರಬಲ್ಲವಳೂ ಆದ ಈ ದ್ರೌಪದಿಯು ಸಾಮಾನ್ಯಳೆಂದುಕೊಂಡೆಯಾ? ರಾಜನೇ, ನಿನಗೊಂದು ಅದ್ಭುತವಾದ ವರವನ್ನು ಪ್ರೀತಿಪೂರ್ವಕವಾಗಿ ಕೊಡುತ್ತೇನೆ:  ಈ  ದಿವ್ಯದೃಷ್ಟಿಯ ದ್ವಾರಾ ಕುಂತೀಪುತ್ರರನ್ನೊಮ್ಮೆ ನೋಡು - ದಿವ್ಯವಾದ ಪುಣ್ಯಗಳಿಂದಾದ ಅವರ  ಪೂರ್ವದೇಹಗಳನ್ನು  ಕಾಣು!" - ಎಂದು ಹೇಳಿ ವ್ಯಾಸರು ತಮ್ಮ ಮಾತನ್ನು ಮುಗಿಸಿದರು.

ವ್ಯಾಸರು ಶುಚಿಯಾದ ವಿಪ್ರರು, ಅತ್ಯಂತ ಉದಾರವಾದ ಕರ್ಮಗಳಿಂದ ಸಂಪನ್ನರಾದವರು. ಅಂತಹವರು ದಿವ್ಯದೃಷ್ಟಿಯನ್ನು ದಯಪಾಲಿಸಿದ್ದಾರೆ (ಚಕ್ಷುರ್ ದಿವ್ಯಂ ಪ್ರದದೌ). ಅದರಿಂದಾಗಿ, ಆ ಪಾಂಡವರೆಲ್ಲರನ್ನೂ ತಮ್ಮ ತಮ್ಮ ಪೂರ್ವದೇಹಗಳೊಂದಿಗೆ ಕೂಡಿದವರನ್ನಾಗಿ ಆ ರಾಜನೀಗ ಕಂಡಿದ್ದಾನೆ! ಹೇಗೆ ಕಂಡರವರು? : ಎಲ್ಲರೂ ದಿವ್ಯರು; ಹೇಮಕಿರೀಟ-ಹೇಮಮಾಲೆಗಳನ್ನು ಹೊಂದಿರತಕ್ಕವರು (ಹೇಮವೆಂದರೆ ಚಿನ್ನ); ಇಂದ್ರರ ಹಾಗೆ ತೋರುವವರು; ಅಗ್ನಿಯಂತೆಯೂ ಸೂರ್ಯನಂತೆಯೂ ಇತ್ತು ಅವರ ವರ್ಣ; ಸರ್ವಾಭರಣಸಂಪನ್ನರು; ಯುವಕರು; ವಿಶಾಲವಾದ ಎದೆಯುಳ್ಳವರು; ತಾಳೇಮರದ ಎತ್ತರ;. ರಜಸ್ಸಿಲ್ಲದ (ಎಂದರೆ ಅತ್ಯಂತ ಶುಭ್ರವಾದ) ದಿವ್ಯವಸ್ತ್ರಗಳು, ಸುಗಂಧಭರಿತ ಸುಂದರಮಾಲೆಗಳು - ಇವುಗಳಿಂದ ಶೋಭಿಸುತ್ತಿದ್ದವರು; ಸಾಕ್ಷಾತ್ ತ್ರಿಣೇತ್ರನಾದ ಶಂಕರನೋ ಸರ್ವಗುಣಸಂಪನ್ನರಾದ ವಸು-ರುದ್ರ-ಆದಿತ್ಯರೋ ಎಂಬಂತಿದ್ದವರು!

ಹೀಗೆ ಪೂರ್ವೇಂದ್ರರಾದ ಆ ಪರಮಸುಂದರರನ್ನು ದ್ರುಪದನು ಕಂಡನು; ಹಾಗೆಯೇ ಇಂದ್ರಪುತ್ರನಾದ ಅರ್ಜುನನು ಇಂದ್ರನಂತೆಯೇ ಇರುವುದನ್ನೂ ಕಂಡನು: ಅಮೇಯವಾದ, ಎಂದರೆ ಅಳೆಯಲೇ ಆಗದ, ದಿವ್ಯಮಾಯೆಯನ್ನೂ ಕಂಡವನಾಗಿ, ದ್ರುಪದನು ವಿಸ್ಮಿತನಾದನು. ಅಂತೆಯೇ ಆ ನಾರಿಯನ್ನೂ:  ಅವಳೋ ಅತಿಶಯವಾದ ರೂಪದಿಂದ ಕೂಡಿದ್ದವಳು; ಸಾಕ್ಷಾತ್ ಚಂದ್ರ-ಅಗ್ನಿಗಳಂತೆ ಹೊಳೆಯುವ ದಿವ್ಯಸ್ತ್ರೀ ಅವಳು! ರೂಪದಿಂದಲೂ ತೇಜಸ್ಸಿನಿಂದಲೂ ಯಶಸ್ಸಿನಿಂದಲೂ ಅವರಿಗಿವಳೇ ಯೋಗ್ಯಪತ್ನಿಯೆಂಬುದನ್ನೂ ಅರಿತುಕೊಂಡನು. ಅರಿತು ಸಂತೋಷಪಟ್ಟನು.

ಈ ಮಹಾಶ್ಚರ್ಯಗಳನ್ನು ಕಂಡ ದ್ರುಪದನು ವ್ಯಾಸಮಹರ್ಷಿಗಳ ಪಾದಗಳನ್ನು ಹಿಡಿದುಕೊಂಡನು. ಪ್ರಸನ್ನವಾದ ಮನಸ್ಸಿನಿಂದ ಕೂಡಿದವನಾಗಿ,"ಮಹರ್ಷಿಗಳೇ, ತಮ್ಮ ವಿಷಯದಲ್ಲಿ ಇದೇನೂ ಆಶ್ಚರ್ಯವಿಲ್ಲ" - ಎಂಬುದಾಗಿ ಹೇಳಿದನು.

ಆಗ ವ್ಯಾಸರು, "ಮತ್ತೊಂದು ವಿಷಯವುಂಟು: ಮಹಾತ್ಮನಾದ ಋಷಿಯೊಬ್ಬನ ತಪೋವನದಲ್ಲಿ ಕನ್ಯೆಯೊಬ್ಬಳಿದ್ದಳು. ಆಕೆ ರೂಪವತಿ ಹಾಗೂ ಸುಶೀಲೆ. ಆದರೂ ಅವಳಿಗೆ ತಕ್ಕ ಪತಿಯೊಬ್ಬನು ದೊರಕಲಿಲ್ಲ. ಉಗ್ರವಾದ ತಪಸ್ಸನ್ನು ಮಾಡಿ ಅವಳು ಶಂಕರನನ್ನು ಮೆಚ್ಚಿಸಿದಳು. ಪ್ರೀತನಾದ (ಎಂದರೆ, ಸಂತೋಷಗೊಂಡ) ಈಶ್ವರನು, "ನಿನಗೆ ಬೇಕಾದುದನ್ನು ಬೇಡಿಕೋ" ಎಂದು ಹೇಳಿದನು. ಅದಕ್ಕವಳು, "ಸರ್ವಗುಣಸಂಪನ್ನನಾದ ಪತಿಯನ್ನು ಬಯಸುತ್ತೇನೆ" ಎಂಬುದಾಗಿ ವರಪ್ರದನಾದ ದೇವನಿಗೆ ಹೇಳಿದಳು; ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿದಳು. ದೇವೇಶನಾದ ಆತನು ಅವಳ ವಿಷಯದಲ್ಲಿ ಪ್ರೀತಮಾನಸನಾಗಿ "ನಿನಗೆ ಐದು ಮಂದಿ ಪತಿಗಳಾಗುವರು (ಪಂಚ ತೇ ಪತಯೋ ಭದ್ರೇ!)" ಎಂದನು!

ಸೂಚನೆ : 10/12/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.