Showing posts with label author_kskannan. Show all posts
Showing posts with label author_kskannan. Show all posts

Sunday, March 2, 2025

ಕೃಷ್ಣಕರ್ಣಾಮೃತ 52 ನದೀತಟದಲಿ ನಲಿದ ನೀಲ-ಬಾಲನೇ ಆರಾಧ್ಯ (Krishakarnamrta 52)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಕೃಷ್ಣನನ್ನು ನಾವು ಆರಾಧಿಸುತ್ತೇವೆ - ಎನ್ನುತ್ತಾನೆ ಲೀಲಾಶುಕ, ಈ ಪದ್ಯದಲ್ಲಿ. ಏತಕ್ಕಾಗಿ ಆರಾಧಿಸಬೇಕು?  ಆತನೆಂತಹವನು? - ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಏಳು ವಿಶೇಷಣಗಳಿಂದ ಸೂಚಿಸಿದ್ದಾನೆ. ಅವುಗಳಿಂದಾಗಿ ನಮ್ಮ ಮನಸ್ಸಿಗೆ, "ಆಹಾ, ಆರಾಧ್ಯನೆಂದರೆ ಶ್ರೀಕೃಷ್ಣನೇ ಸರಿ!" - ಎಂದು ತೋರುವಂತಾಗುವುದು.

ಯಾರನ್ನು ಆರಾಧಿಸುತ್ತೇವೆ? - "ನೀಲನಾದ ಬಾಲನನ್ನು" ಎನ್ನುತ್ತಾನೆ. ಅಷ್ಟರಲ್ಲೇ ತಿಳಿದುಬಿಡುತ್ತದೆ, ಕೃಷ್ಣನೇ ಅದೆಂದು. ಈ ಬಾಲನ ನೀಲ-ವರ್ಣವು ಮೇಘ-ವರ್ಣವನ್ನು ಹೋಲುವಂತಹುದೆಂಬುದು ಪ್ರಸಿದ್ಧವಷ್ಟೆ.

ಶೃಂಗಾರರಸಕ್ಕೇ ಶ್ಯಾಮಲ-ವರ್ಣವನ್ನು ಹೇಳುವುದುಂಟು. ಶೃಂಗಾರವೇ ಮೈತಾಳಿಬಂದರೆ ಅದುವೇ ಶ್ರೀಕೃಷ್ಣ! ಬಾಲನೆಂದರೆ ಹದಿನಾರು ವರ್ಷದ ಪರ್ಯಂತದವನು. ಇಂತಹ ಕೃಷ್ಣನೇ ನಮ್ಮ ಆರಾಧನೆಗೆ ಯೋಗ್ಯ. ನೀಲ-ಬಾಲನೆಂಬುದು ಮೊದಲನೆಯ ವಿಶೇಷಣ.

ಉಳಿದ ವಿಶೇಷಣಗಳನ್ನಿನ್ನು ಗಮನಿಸೋಣ.

ಈ ಕೃಷ್ಣನು ಮಂಥರನಾಗಿದ್ದಾನೆ, ಎಂದರೆ ಮಂದ-ಗತಿಯುಳ್ಳವನಾಗಿದ್ದಾನೆ. ಇದು ಎರಡನೆಯ ವಿಶೇಷಣ. ಮಂದ-ಗತಿಯೇಕೆ? ಗೋಪಿಕೆಯೊಬ್ಬಳ ಚಪಲವಾದ ಅಪಾಂಗಗಳು, ಎಂದರೆ ಚಂಚಲವಾದ ಕುಡಿಗಣ್ಣೋಟಗಳು ; ಅವುಗಳ ಸೆಳೆತಕ್ಕೆ ಆತನು ಒಳಗಾಗಿರುವನು. ಯಾರು ಆ ಗೋಪಿಕೆ? ಮತ್ತಿನ್ನಾರು, ರಾಧೆಯೇ ಇರಬೇಕು.

ಅವಳಾದರೂ ಎಂತಹವಳು? ಅವಳು ಸೀಮ-ಭೂತಳು, ಎಂದರೆ ಎಲ್ಲೆಯಾಗಿರುವವಳು, ವಸ್ತುತಃ ಪರಮಾವಧಿಯೇ ಆಗಿರುವವಳು, ಎಂದರೆ ಶ್ರೇಷ್ಠಳಾಗಿರುವವಳು. ಯಾರಲ್ಲಿ ಶ್ರೇಷ್ಠ? ಗೋಪಿಕೆಯರಲ್ಲಿ. ಅವರೂ ಎಂತಹವರು? ಚಾತುರ್ಯೈಕ-ನಿಧಾನರಾದವರು. ಎಂದರೆ ಚತುರತೆಗೇ ನಿಧಾನರಾಗಿರತಕ್ಕವರು. ನಿಧಾನವೆಂದರೆ ನೆಲೆ. ಚತುರ–ಗೋಪನಿಗೆ ಚತುರ-ಗೋಪಿಯರೇ ಜೊತೆಗಾರರು.

ಆ ಚಾತುರ್ಯ-ಗುಣವನ್ನುಳ್ಳವರಲ್ಲೆಲ್ಲಾ ಉತ್ತಮಳೆನಿಸುವವಳು ರಾಧೆ. ರಾಧೆಯ ವಿಷಯದಲ್ಲಿ ಕೃಷ್ಣನ ಸೆಳೆತವೆಂತಹುದೆಂಬುದನ್ನು ಶ್ಲೋಕವೊಂದು ಹೇಳುತ್ತದೆ. ಅದು ಕೃಷ್ಣನೇ ಹೇಳಿದ ಶ್ಲೋಕವೆಂಬ ಮಾತಿದೆ. ಅದರಂತೆ, ಮೂರೂ ಲೋಕಗಳಲ್ಲಿ ಭೂಲೋಕವೇ ಧನ್ಯವಾದದ್ದು; ಅದರಲ್ಲೂ ಬೃಂದಾವನ-ಪುರಿಯು ಧನ್ಯವೆನಿಸುವಂತಹುದು; ಅಲ್ಲೂ ಗೋಪಿಕೆಯರೇ ಧನ್ಯರು; ಅವರಲ್ಲಿ ರಾಧೆಯು ನನಗೆ ಅದೆಷ್ಟು ಅಚ್ಚುಮೆಚ್ಚೆಂದರೆ ಅವಳು ನನ್ನ ಶರೀರವೇ ಸರಿ - ಎನ್ನುತ್ತಾನಂತೆ ಕೃಷ್ಣ!

ಹೀಗಿರಲು ಅವಳು ಆತನನ್ನು ತನ್ನ ಕಣ್ಣೋಟದಿಂದಲೇ ಕಟ್ಟಿಹಾಕಬಲ್ಲಳಷ್ಟೆ! ಅಂತೂ ಚತುರ-ಗೋಪಿಕೆಯರಲ್ಲೂ ಚರಮ-ನೈಪುಣ್ಯವನ್ನು ಹೊಂದಿರುವವಳು ರಾಧೆ; ಬೇಗ ಹೋಗಲಾಗಲಿ, ದೂರ ಹೋಗಲಾಗಲಿ, ಕೃಷ್ಣನನ್ನು ಬಿಡವು, ಅವಳ ಕುಡಿನೋಟಗಳು . ಈ ಕಾರಣಕ್ಕಾಗಿ ಮಂಥರನಾಗಿರುವವನು, ಎಂದರೆ ಮಂದವಾದ ನಡೆಯುಳ್ಳವನು, ಈತ.

ಮೂರನೆಯ ವಿಶೇಷಣವು ಆತನ ಕಣ್ಣನ್ನೇ ಹೇಳುವುದು. ಆತನ ಕಣ್ಣುಗಳನ್ನು ಲಾಲಿಸುತ್ತವೆ, ಲಾವಣ್ಯಾಮೃತದ ವೀಚಿಗಳು. ವೀಚಿಯೆಂದರೆ ಅಲೆ. ಅಮೃತ-ಲಹರಿಗಳು ಆತನ ಲೋಚನಗಳನ್ನು ಲಾಲಿಸಿವೆ, ಎಂದರೆ ಮುದ್ದಿಸಿವೆ. ಯಾವ ಅಮೃತವದು? ಲಾವಣ್ಯವೆಂಬ ಅಮೃತ.

ಏನು ಲಾವಣ್ಯವೆಂದರೆ? ಮುತ್ತುಗಳಲ್ಲಿ ಕಾಂತಿಯಿರುತ್ತದಲ್ಲವೇ? ಆ ಕಾಂತಿಯಲ್ಲೂ ಏನೋ ಒಂದು ಮಿನುಗು ಕಾಣಬರುತ್ತದೆಯಲ್ಲವೆ?  ರೂಪ-ಸಂಪನ್ನರ ಅಂಗಗಳಲ್ಲಿ ಒಟ್ಟಾರೆ ತೋರುವ ಏನೋ ಒಂದು ಹೊಳಪೂ ಹಾಗೆಯೇ ಇರುವುದಲ್ಲವೇ? ಅದನ್ನೇ ಲಾವಣ್ಯವೆನ್ನುವುದು.

ಇಂತಹ ಲಾವಣ್ಯದ ಅಮೃತದ ಅಲೆಗಳು ಈತನ ಕಣ್ಣುಗಳನ್ನು ಲಾಲಿಸಿವೆಯೆಂದರೆ, ಕೃಷ್ಣನ ಕಣ್ಣುಗಳಲ್ಲಿಯ ಸೊಬಗು ಹೊಳಪುಗಳನ್ನು ಏನೆಂದು ಬಣ್ಣಿಸುವುದು? ಇಂತಹ ಆಕರ್ಷಕ-ನೇತ್ರಗಳುಳ್ಳವನು ಈ ನೀಲ-ಬಾಲ.

ನಾಲ್ಕನೆಯದಾಗಿ, ಲಕ್ಷ್ಮಿಯ ಕಟಾಕ್ಷವು ಈತನನ್ನು ಆದರಿಸುತ್ತದೆ. ಆದರಿಸುವುದೆಂದರೆ ಗೌರವಕ್ಕೆ ಪಾತ್ರನನ್ನಾಗಿಸುವುದು. ಅಪಾಂಗವೆಂದರೆ ಕಣ್ಣಂಚು; ಕಟಾಕ್ಷವೆಂದರೆ ಅದರಿಂದ ಬೀರುವ ನೋಟ.  ಅತ್ತಿತ್ತ ನೋಡುತ್ತಿದ್ದರೂ ಮತ್ತೆ ಮತ್ತೆ ಮೊದಲು ನೋಡಿದ ವ್ಯಕ್ತಿಯತ್ತಲೇ ಕಣ್ಣು ಹೊರಳುತ್ತಿದ್ದಲ್ಲಿ ಆ ವ್ಯಕ್ತಿಯನ್ನು ಕಟಾಕ್ಷಕ್ಕೆ ಪಾತ್ರನಾಗಿರುವನೆನ್ನಬಹುದು. ಸಲಿಗೆಯ ಜೊತೆಗೆ ಆದರವೂ ಸೇರಿಕೊಂಡಾಗ ಬೀರುವ ಕಟಾಕ್ಷವೆಂಬುದು ಆಹ್ಲಾದವನ್ನು ಉಂಟುಮಾಡುವಂತಹುದು.

ಐದನೆಯದಾಗಿ ಕೃಷ್ಣನು ಕಾಲಿಂದಿಯ ಪುಲಿನಾಂಗಣವೆಂಬುದನ್ನು ತುಂಬ ಇಷ್ಟಪಡತಕ್ಕವನು. ಪುಲಿನವೆಂದರೆ ಮರಳು, ಮರಳ ರಾಶಿ, ನದೀ-ತೀರದಲ್ಲಿಯ ಮರಳಿನ ದಂಡೆ. ಅದುವೇ ಒಂದು ಅಂಗಣ, ಎಂದರೆ ವಿಹಾರ-ಸ್ಥಾನ. ಕಾಲಿಂದಿಯೆಂಬುದು ಯಮುನೆಯ ಮತ್ತೊಂದು ಹೆಸರು. ಯಮುನಾನದಿಯ ದಡದ ಮರಳ ವಿಹರಣದೆಡೆಯು ಅಚ್ಚುಮೆಚ್ಚು, ಕೃಷ್ಣನಿಗೆ.

ಆರನೆಯದಾಗಿ, ಆತನು ಕಾಮವತಾರಾಂಕುರ. ಏನು ಹಾಗೆಂದರೆ? ಕಾಮನೆಂದರೆ ಮನ್ಮಥ. ಮನ್ಮಥನು ಕೃಷ್ಣನ ಪುತ್ರನೇ ಸರಿ. ಅಮರಕೋಶದಲ್ಲೇ ಆತನಿಗೆ ಪ್ರದ್ಯುಮ್ನ, ಶ್ರೀಪುತ್ರ – ಎಂಬ ಹೆಸರುಗಳಿವೆ. ಪ್ರದ್ಯುಮ್ನನು ಸಾಕ್ಷಾತ್ ಶ್ರೀಕೃಷ್ಣನ ಪುತ್ರನೇ. ಶ್ರೀಪುತ್ರನೆಂದರೆ ಲಕ್ಷ್ಮಿಯ ಮಗನೇ. ಹೀಗಾಗಿ ಮನ್ಮಥನ ಅವತಾರವಾಗಲು ಶ್ರೀಕೃಷ್ಣನೆಂಬ ಕುಡಿಯೇ ಕಾರಣ. ಅಂಕುರವೆಂದರೆ ಮೊಳಕೆಯೂ ಆಗಬಹುದು, ಮೊಗ್ಗೂ ಆಗಬಹುದು. ಈ ಎರಡರಲ್ಲಿ ಯಾವ ಅರ್ಥ ತೆಗೆದುಕೊಂಡರೂ, ಅಂಕುರವೆಂದರೆ "ಮುಂದಿನ ಬೆಳವಣಿಗೆಗೆ ಆರಂಭ-ಸ್ಥಾನ" - ಎಂಬುದೇ ತಾತ್ಪರ್ಯ.

ಕಾಮಾವತಾರವೆಂಬ ಪದಕ್ಕೆ ಮತ್ತೊಂದು ರೀತಿಯಲ್ಲಿಯೂ ಅರ್ಥ ಹೇಳಬಹುದು. ಮನಸ್ಸಿನಲ್ಲಿ ಉದಯಿಸುವ ಅಭಿಲಾಷೆಯೇ "ಕಾಮ". ಅದರ 'ಅವತಾರ'ಗಳು ಬಗೆಬಗೆಯಾದವು. ಹಾವ-ಭಾವಗಳು ಅದರ ಅವತಾರಗಳೇ. ಲೀಲೆ-ಕಟಾಕ್ಷಗಳೂ ಅವತಾರಗಳೇ. ಅವುಗಳಿಗೆ ಅಂಕುರ ಎಂದರೆ ಹುಟ್ಟುವೆಡೆ. ಗೋಪಿಕೆಯರ ಚಿತ್ತದಲ್ಲಿ ಕೃಷ್ಣನನ್ನು ಕುರಿತು ಅದೆಷ್ಟು ಬಗೆಬಗೆಯ ಭಾವ-ಲಹರಿಗಳು ಉಕ್ಕಿಬಂದವು! ಹೀಗೆ ಅವುಗಳಿಗೆಲ್ಲ ಜನ್ಮ-ಸ್ಥಾನವೇ ಈತ.

ಏಳನೆಯದಾಗಿ, ಶ್ರೀಕೃಷ್ಣನು ಮಧುರಿಮ-ಸ್ವಾರಾಜ್ಯ. ಮಧುರಿಮೆಯೆಂದರೂ ಮಾಧುರ್ಯವೆಂದರೂ ಒಂದೇ. ಅದಕ್ಕೆ ಸ್ವಾರಾಜ್ಯ, ಎಂದರೆ ಸಂಪೂರ್ಣ-ಸ್ವತಂತ್ರತೆಯಿರುವೆಡೆ. ಪರ-ತಂತ್ರತೆಯೆಂಬುದು ಸ್ವ-ತಂತ್ರತೆಯೆನ್ನುವುದಕ್ಕೆ ವಿರುದ್ಧವಾದದ್ದು. ಪರ-ತಂತ್ರತೆಯೆಂದರೆ ಬೇರೆಯವರ ಅಧೀನದಲ್ಲಿರುವಿಕೆ. ಸ್ವತಂತ್ರನಾದವನು ಅನ್ಯರ ಇಚ್ಛೆಯನ್ನು ಅನುಸರಿಸಿಕೊಂಡೇ ಹೋಗಬೇಕಾದದ್ದಿರುವುದಿಲ್ಲ. ಹೀಗೆ ಮಾಧುರ್ಯದ ಸ್ವೇಚ್ಛಾ-ವಿಹಾರವೇ ಶ್ರೀಕೃಷ್ಣ.

ಭಗವಂತನನ್ನು ಪತಿಯೆಂಬ ಭಾವದಿಂದ ಸೇವಿಸುವುದು ಮಾಧುರ್ಯವೆನಿಸುತ್ತದೆ. ಕೃಷ್ಣನನ್ನು ಪ್ರೇಮದಿಂದ ಆರಾಧಿಸಿದ ಗೋಪಿಯರಿಗೆ ಆತನಲ್ಲಿದ್ದದ್ದೇ ಮಧುರ-ಭಾವ. ಶುದ್ಧಾತ್ಮರು ಶುದ್ಧಾತ್ಮರ ವಿಷಯದಲ್ಲಿ ಪ್ರೀತ್ಯಾದರಗಳನ್ನು ತಾಳುವುದೇ, ಸಂತೋಷ-ಗೌರವಗಳೊಂದಿಗೆ ನಡೆದುಕೊಳ್ಳುವುದೇ, ಮಾಧುರ್ಯವೆನಿಸುವುದು. ಗೋಪಿಯರಿಗೆ ಶ್ರೀಕೃಷ್ಣನನ್ನು ಕುರಿತಾದ ಭಾವದಲ್ಲಿ ಪ್ರೇಮ-ಕಾಮಗಳ ನಡುವೆ ಗೆರೆಯನ್ನು ಎಳೆಯಲೇ ಆಗದು. ಹೀಗಾಗಿ ಶ್ರೀಕೃಷ್ಣನು ಮಧುರ-ಭಾವದಿಂದಲೂ ಸಂಸೇವ್ಯನು.

ಅಂತೂ, ಮುಗ್ಧೆಯರಾದರೂ ಕೃಷ್ಣ-ಪ್ರೀತಿಯನ್ನು ಸಂಪಾದಿಸುವುದರಲ್ಲಿ ಚತುರೆಯರೇ ಆದವರು, ಈ ಗೋಪಾಲ-ನಾರಿಯರು; ಅವರಲ್ಲೆಲ್ಲ ಶ್ರೇಷ್ಠಳೆನಿಸುವ ರಾಧೆಯ ದೃಷ್ಟಿಯ ಪಾಶಕ್ಕೆ ಒಳಪಟ್ಟ ಕೃಷ್ಣನ ನಡೆಯು ಬಿರುಸಿನ ನಡೆಯಾದೀತೇ? ಅದು ದ್ರುತ-ಗತಿಯಲ್ಲ, ಹೆಜ್ಜೆಯಿಟ್ಟರೂ ಮೆಲ್ಲಮೆಲ್ಲನಿಡುವ ಪರಿ, ನಡೆದರೂ ಮತ್ತೆ ಮತ್ತೆ ಸ್ಥಗಿತಗೊಳ್ಳುವ ಪರಿಯದು.

ಅಲ್ಲದೆ, ಆತನ ಕಣ್ಗಳು ಲಾವಣ್ಯವನ್ನು ಸೂಸುವುವು. ಲಕ್ಷ್ಮೀ-ಕಟಾಕ್ಷಕ್ಕೆ ಆತನು ಸಹಜವಾಗಿಯೇ ಪಾತ್ರ. ಯಮುನೆಯ ಸೈಕತದ ಮೇಲಿನ ವಿಹಾರವು ಆತನಿಗೆ ಅತ್ಯಂತ ಪ್ರೀತಿ-ಪಾತ್ರವಾದದ್ದು. ಕಾಮನಿಗೆ ಜನ್ಮವಿತ್ತವನೇ ಆತನು. ಇವೆಲ್ಲದರ ಜೊತೆಗೆ ಮಧುರ-ಭಾವವು ತಾನೇ ತಾನಾಗಿ ಆತನಲ್ಲಿ ವಿಹರಿಸುವುದು.

ಇಷ್ಟು ವಿಶಿಷ್ಟನಾಗಿರುವ ಈ ನೀಲ-ಬಾಲನನ್ನಲ್ಲವೇ ನಾವು ಆದರದಿಂದ ಆರಾಧಿಸಬೇಕಾದದ್ದು?

ಚಾತುರ್ಯೈಕ-ನಿಧಾನ-ಸೀಮ-ಚಪಲಾಪಾಂಗಚ್ಛಟಾ-ಮಂಥರಂ/

ಲಾವಣ್ಯಾಮೃತ-ವೀಚಿ-ಲಾಲಿತ-ದೃಶಂ ಲಕ್ಷ್ಮೀ-ಕಟಾಕ್ಷಾದೃತಮ್ |

ಕಾಲಿಂದೀ-ಪುಲಿನಾಂಗಣ-ಪ್ರಣಯಿನಂ ಕಾಮಾವತಾರಾಂಕುರಂ/

ಬಾಲಂ ನೀಲಮಮೀ ವಯಂ ಮಧುರಿಮ-ಸ್ವಾರಾಜ್ಯಮಾರಾಧ್ನುಮಃ ||

ಶ್ಲೋಕ-ಪೂರ್ವಾರ್ಧದಲ್ಲಿ ಹಲವು ಚಕಾರಗಳೂ, ಮುಂದೆ ಹಲವು ಕಕಾರ-ಲಕಾರ-ರೇಫಗಳೂ ಬಂದಿರುವುದನ್ನು ಗಮನಿಸಬಹುದು.

ಸೂಚನೆ : 2/03/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, February 24, 2025

ವ್ಯಾಸ ವೀಕ್ಷಿತ 123 ಅರ್ಜುನನ ಪ್ರತ್ಯಸ್ತ್ರ-ಪ್ರಯೋಗ (Vyaasa Vikshita 123)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಕ್ಷಕ-ಪುತ್ರನಾದ ಅಶ್ವಸೇನನನ್ನು ಖಾಂಡವದ ಆ ಮಹಾಗ್ನಿಯಿಂದ ಬಿಡಿಸಬೇಕೆಂಬ ಉದ್ದೇಶದಿಂದ, ಗಾಳಿ-ಮಳೆಗಳನ್ನು ಇಂದ್ರನು ಉತ್ಕಟವಾಗಿ ಪ್ರಯೋಗಿಸಿದನು. ಹಾಗೆ ಮಾಡಿ, ಅರ್ಜುನನಿಗೆ ಮೋಹವುಂಟುಮಾಡಿದನು. ಕೊನೆಗಂತೂ  ಬಿಡಿಸಿದನು.

ಮಾಯೆಯಿಂದಾದ ಈ ನಾಗರಕ್ಷಣೆಯನ್ನು ಕಂಡ ಅರ್ಜುನನು, ಮೋಸದಿಂದ ಹೀಗೆ ಆಗಿದ್ದಕ್ಕಾಗಿ ಕೆರಳಿಹೋದನು. ಆಕಾಶದಲ್ಲಿ ಸುಳಿದ ಎಲ್ಲ ಪ್ರಾಣಿಗಳನ್ನೂ ಈಗ ಎರಡೆರಡು ಮೂರುಮೂರು ತುಂಡುಗಳನ್ನಾಗಿ ಖಂಡಿಸಿದನು. ತಪ್ಪಿಸಿಕೊಂಡು ಹೋದ ಸರ್ಪದಿಂದಾಗಿ ಕಡುಕೋಪಗೊಂಡ ಅರ್ಜುನನು, ಆಕಾಶವನ್ನೆಲ್ಲಾ ತನ್ನ ಬಾಣಗಳಿಂದ ವ್ಯಾಪಿಸಿ ಇಂದ್ರನೊಡನೆಯೇ ಯುದ್ಧಮಾಡಿದನು.

ಯುದ್ಧದಲ್ಲಿ ಕೆರಳಿರುವ ಅರ್ಜುನನನ್ನು ಇಂದ್ರನೂ ಕಂಡನು. ಆಕಾಶವನ್ನೆಲ್ಲಾ ಆಚ್ಛಾದನೆ ಮಾಡುತ್ತಾ ತನ್ನ ತೀವ್ರವಾದ ಅಸ್ತ್ರವನ್ನು, ಎಂದರೆ ಐಂದ್ರಾಸ್ತ್ರವನ್ನು, ತಾನೂ ಪ್ರಯೋಗಿಸಿದನು.

ಆಗ ಮಹಾ-ಶಬ್ದವನ್ನುಂಟುಮಾಡುತ್ತಾ ಹೊರಟ ವಾಯುವು ಸರ್ವ-ಸಾಗರಗಳನ್ನೂ ಕ್ಷೋಭೆಗೊಳಿಸಿತು. ಆಕಾಶದಲ್ಲಿ ಜಲ-ಧಾರೆಯನ್ನುಂಟುಮಾಡುವ ಮೋಡಗಳನ್ನು ಉಂಟುಮಾಡಿತು.

ಅಸ್ತ್ರಕ್ಕೆ ಪ್ರತ್ಯಸ್ತ್ರಪ್ರಯೋಗ ಮಾಡುವುದರಲ್ಲಿ ನಿಪುಣನಾಗಿದ್ದ ಅರ್ಜುನನು ವಾಯವ್ಯಾಸ್ತ್ರವನ್ನು ಅಭಿಮಂತ್ರಿಸಿ ಪ್ರಯೋಗಮಾಡಿದನು. ಅದರಿಂದಾಗಿ ಇಂದ್ರನಿಂದ ಪ್ರೇರಿತವಾದ ವಜ್ರದ ಹಾಗೂ ಮೇಘಗಳ ಬಲ-ಓಜಸ್ಸುಗಳು ನಷ್ಟವಾದವು. ಜಲಧಾರೆಗಳೆಲ್ಲ ಶುಷ್ಕವಾದುವು. ಮಿಂಚುಗಳು ನಷ್ಟವಾದವು. ಒಂದೇ ಕ್ಷಣದಲ್ಲಿ ಆಕಾಶದಲ್ಲಿಯ ರಜಸ್ಸು-ತಮಸ್ಸುಗಳು, ಎಂದರೆ ಧೂಳು-ಕತ್ತಲೆಗಳು, ನಷ್ಟವಾಗಿಹೋದವು. ವಾಯುವು ಸುಖಶೀತವಾಯಿತು - ಎಂದರೆ ತಂಪಾಗಿಯೂ ಹಿತವಾಗಿಯೂ ಬೀಸತೊಡಗಿತು. ರವಿಮಂಡಲವು ಎಂದಿನಂತಾಯಿತು - ಎಂದರೆ ಸ್ವಸ್ವಭಾವಕ್ಕೆ ಮರಳಿತು.

ಪ್ರತೀಕಾರವಿನ್ನೇನೂ ಬೇಕಿಲ್ಲವಾಗಿ, ಅಗ್ನಿಯು ಸುಪ್ರಸನ್ನವಾಗಿ, ನಾನಾ ಆಕಾರಗಳನ್ನು ಅದು ತಳೆಯಿತು. ನಾನಾ ಪ್ರಾಣಿಗಳ ಶರೀರದಿಂದ ಹೊಮ್ಮಿದ ಮೇದಸ್ಸಿನ ಸ್ತೋಮದ ಸೇಕದಿಂದಾಗಿ, ಎಂದರೆ ಹುಯ್ಯುವಿಕೆಯಿಂದಾಗಿ, ಆ ಅಗ್ನಿಯು ಪ್ರಜ್ವಲಿಸಿದನು. ಆತನ ಆ ನಾದಗಳಿಂದ ಜಗತ್ತೇ ತುಂಬಿಹೋಯಿತು.

ಅಹಂಕಾರದಿಂದ ಭರಿತವಾಗಿದ್ದ ಸುಪರ್ಣ ಮೊದಲಾದ ಪಕ್ಷಿಗಳು ಈ ಕೃಷ್ಣರಿಬ್ಬರಿಂದ ಆ ಕಾಡು ರಕ್ಷಿಸಲ್ಪಡುತ್ತಿರುವುದನ್ನು ಕಂಡವು, ಆಕಾಶಕ್ಕೆ ಜಿಗಿದವು. ವಜ್ರಕ್ಕೆ ಸದೃಶವಾಗಿರುವ ರೆಕ್ಕೆ, ಕೊಕ್ಕು, ಹಾಗೂ ಉಗುರುಗಳಿಂದ ಪ್ರಹಾರ ಮಾಡಲೆಂದು ಗರುಡಪಕ್ಷಿಯೊಂದು ಕೃಷ್ಣಪಾಂಡವರ ಮೇಲೆ ಆಕಾಶದಿಂದ ಅಪ್ಪಳಿಸಿತು. ಹಾಗೆಯೇ ಸರ್ಪ-ಸ್ತೋಮಗಳೂ. ಘೋರವಾದ ವಿಷವನ್ನು ಕಾರುತ್ತಾ ಜ್ವಲಿಸುವ ಮೂತಿಯುಳ್ಳವುಗಳಾಗಿ ಅರ್ಜುನನ ಬಳಿ ಎರಗಿದವು.

ರೋಷಾಗ್ನಿಯಿಂದ ಸಿಂಪಡಿಸಲ್ಪಟ್ಟಿದ್ದ ತನ್ನ ಶರಗಳಿಂದ ಪಾರ್ಥನು ಅವನ್ನು ಕತ್ತರಿಸಿಹಾಕಿದನು. ಅವೂ ದೇಹ ತೊರೆಯಲು ಆ ಜ್ವಲಿಸುವ ಅಗ್ನಿಗೆ ಪ್ರವೇಶಮಾಡಿದವು. ಆಮೇಲೆ ರಣಾರ್ಥಿಗಳಾಗಿ, ಎಂದರೆ ಯುದ್ಧಾಕಾಂಕ್ಷಿಗಳಾಗಿ, ಅಸುರರೂ ಗಂಧರ್ವರೂ ಯಕ್ಷರೂ ರಾಕ್ಷಸರೂ ಪನ್ನಗರೂ ಅಸಾಮಾನ್ಯವಾದ ಧ್ವನಿಯನ್ನು ಮಾಡುತ್ತಾ ಅಲ್ಲಿಗೆ ಧಾವಿಸಿ ಬಂದರು.

ತನ್ನ ರೋಷಾಗ್ನಿಯಿಂದ ಪ್ರೇರಿತವಾದ ಬಾಣಗಳಿಂದ ಅವುಗಳೆಲ್ಲವನ್ನೂ ಅವನು ಕತ್ತರಿಸಿಹಾಕಿದನು. ಜ್ವಲಿಸುವ ಆ ಅಗ್ನಿಯೊಳಗೆ ತಮ್ಮದೇಹವನ್ನೂ ಕಳೆದುಕೊಂಡವು, ಅವೂ.

ಆಗ ಅಸುರರು, ಗಂಧರ್ವರು, ಯಕ್ಷರು, ರಾಕ್ಷಸರು ಹಾಗೂ ನಾಗರು, ಯುದ್ಧಾಪೇಕ್ಷಿಗಳಾಗಿ ಸಾಟಿಯಿಲ್ಲದ ನಾದವನ್ನು ಉಂಟುಮಾಡುತ್ತಾ ಅಲ್ಲಿಗೆ ಧಾವಿಸಿ ಬಂದರು. ಕ್ರೋಧಾಗ್ನಿಯಿಂದ ವಿವೃದ್ಧವಾದ ಪರಾಕ್ರಮವುಳ್ಳ ಅವರುಗಳು, ಕೃಷ್ಣನನ್ನೂ ಪಾರ್ಥನನ್ನೂ ಸಾಯಿಸುವ ಸಲುವಾಗಿ ತಮ್ಮ ಮೇಲೆತ್ತಿದ ಕೈಗಳಲ್ಲಿ ನಾನಾ ಆಯುಧಗಳನ್ನು ಹಿಡಿದು ಬಂದರು: ಕಬ್ಬಿಣದ ಗೋಲಿಗಳನ್ನು ಎಸೆಯುವ ಸಾಧನಗಳು, ಚಕ್ರಾಯುಧ, ಕಲ್ಲು, ಭುಶುಂಡಿಗಳನ್ನೂ ತಳೆದಿದ್ದರು.

ಸೂಚನೆ : 23/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Monday, February 17, 2025

ಪ್ರಶ್ನೋತ್ತರ ರತ್ನಮಾಲಿಕೆ 3 (Prasnottara Ratnamalike 3)

 ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೩ - ಮೋಕ್ಷವೃಕ್ಷಕ್ಕೆ ಬೀಜ ಯಾವುದು ?

ಉತ್ತರ -  ಅನುಭವದಿಂದ ಸಾಧಿಸಿದ ಸಮ್ಯಕ್ ಜ್ಞಾನ.


ಮೋಕ್ಷ ಎಂಬ ವೃಕ್ಷಕ್ಕೆ ಬೀಜ ಯಾವುದು? ಎಂಬುದು ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಕ್ರಿಯಾಸಿದ್ಧವಾದವಾದ ಸಮ್ಯಕ್ ಜ್ಞಾನ ಎಂಬ ಉತ್ತರ ಬಹಳ ಮನೋಜ್ಞವಾಗಿದೆ. ಇಲ್ಲಿ ನಾವು ವಿಚಾರಿಸಬೇಕಾದ ವಿಷಯಗಳು ಇಷ್ಟು - ಮೋಕ್ಷ ಎಂಬುದು ಒಂದು ಬೆಳೆಯಬೇಕಾದ ವೃಕ್ಷ. ಅದಕ್ಕೆ ಬೀಜ ರೂಪವಾಗಿ ಅಂದರೆ ಅತ್ಯಂತ ಅವಶ್ಯವಾಗಿ ನಾವು ಪಡೆಯಬೇಕಾಗುತ್ತದೆ. ನಿಶ್ಚಯಾತ್ಮಕವಾದ ಜ್ಞಾನ, ಸಂದೇಹವಿಲ್ಲದ ಜ್ಞಾನ, ಈ ಜ್ಞಾನವು ಕ್ರಿಯೆಯಿಂದ ಅಥವಾ ಕರ್ಮದಿಂದ ಅಥವಾ ಅನುಭವದಿಂದ ಬಂದ ಜ್ಞಾನವಾಗಿರಬೇಕು. ಇಂತಹ ಜ್ಞಾನವು ಮಾತ್ರ ಮೋಕ್ಷಕ್ಕೆ ಸಾಧನವಾಗಹುದು. ಅದಕ್ಕೆ ಉಪನಿಷತ್ತಿನ ಮಾತು ಇದಕ್ನೇ ಸಾರುಗುತ್ತದೆ 'ಜ್ಞಾನದೇವತು ಕೈವಲ್ಯಂ' ಎಂಬುದಾಗಿ. ಅಂದರೆ ಜ್ಞಾನವೇ ಮೋಕ್ಷಕ್ಕೆ ಸಾಧನ ಎಂಬುದು ನಿಶ್ಚಿತ. 

ಈ ವಿಷಯವನ್ನು ತಿಳಿಯಬೇಕಾದರೆ ಮೋಕ್ಷ ಎಂದರೇನು ಎಂಬುದನ್ನು ತಿಳಿಯಬೇಕು. ಏಕೆ ಸಾಧಿಸಬೇಕು ಎಂದೂ ತಿಳಿಯಬೇಕಾಗುತ್ತದೆ. ಇದಕ್ಕೆ ಪೂರಕವಾದ ಶ್ರೀರಂಗ ಮಹಾಗುರುಗಳ ಒಂದು ಮಾತನ್ನು ಇಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ. "ಮೋಕ್ಷ ಎಂಬುದು ಪ್ರತಿಯೊಬ್ಬ ಮಾನವನ ಜನ್ಮಸಿದ್ಧ ಹಕ್ಕಪ್ಪ!. ಹೇಗೆ ಭಾರತೀಯ ಪ್ರಜೆಗೆ ಹದಿನೆಂಟು ವರ್ಷವಾದರೆ ಮತ ಚಲಾಯಿಸುವ ಹಕ್ಕು ಎಂಬುದು ಸಹಜವಾಗಿ ಬರುತ್ತದೆಯೋ ಹಾಗೆ ಒಬ್ಬ ಮನುಷ್ಯ ಹುಟ್ಟಿದಾಗಲಿಂದಲೇ ಅವನಿಗೆ ಮೋಕ್ಷ ಪಡೆಯಬೇಕಾದದ್ದು ಅವನ ಹಕ್ಕಾಗಿರುತ್ತದೆಯಪ್ಪಾ" ಎಂಬುದಾಗಿ. ಹಾಗಾದರೆ ಮೋಕ್ಷ ಎಂದರೆ ಬಿಡುಗಡೆ; ಬಂಧನದಿಂದ ಮುಕ್ತಿ ಎಂದರ್ಥ. ಇದಕ್ಕೆ ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ ಒಂದು ಬೀಜ ವೃಕ್ಷವಾಗುತ್ತದೆ. ಅಂದರೆ ಆ ಬೀಜವು ತನ್ನನ್ನು, ತನ್ನ ಚೈತನ್ಯಶಕ್ತಿಯನ್ನು ವೃಕ್ಷದೊಳಗೆ ಹರಿಸುತ್ತದೆ. ಆಗ ನಾವು ಆ ವೃಕ್ಷದಲ್ಲಿ ಬೀಜವನ್ನು ಕಾಣಲಾರೆವು. ಬೀಜವು ವೃಕ್ಷದಲ್ಲಿ ಬಂಧಿತವಾಗಿದೆ, ಮರೆಯಾಗಿದೆ.  ಮತ್ತೆ ಬೀಜವನ್ನು ಕೊನೆಯಲ್ಲಿ ನೋಡಬೇಕಾಗುತ್ತದೆ. ಅಂದರೆ ವೃಕ್ಷದ ತನವನ್ನೆಲ್ಲ ಕಳೆದುಕೊಂಡಾಗ ಕೊನೆಯಲ್ಲಿ ಅದು ಮತ್ತೆ ಬೀಜವಾಗಿ ನಿಲ್ಲುತ್ತದೆ. ಹೀಗೆ ಬೀಜದಿಂದ ಮತ್ತೆ ಬೀಜವಾಗುವಿಕೆ ಏನುಂಟೋ ಅದನ್ನೇ ಬೀಜದ ಮೋಕ್ಷ ಎಂಬುದಾಗಿ ಕರೆಯಬಹುದು ಹಾಗೆಯೇ ಒಂದಾನೊಂದು ಕಾಲದಲ್ಲಿ ನಾವೆಲ್ಲರೂ ಭಗವಂತನ ಮಡಿಲಲ್ಲಿ ಇದ್ದೆವು. ಅಲ್ಲಿಂದ ಬೇರಾಗಿ ಬಂದು ನಮ್ಮಿಂದ ದೂರವಾಯಿತು. ಅಂತೆಯೇ ಈ ಸಂಸಾರವೆಂಬ ವೃಕ್ಷದಲ್ಲಿ ನಾವು ಕಳೆದು ಹೋದೆವು. ಇದು ನಿಜವಾದ ಬಂಧನ. ಈ ಸಂಸಾರವನ್ನು ಸರಿಯಾಗಿ ತಿಳಿದುಕೊಂಡು ಮತ್ತೆ ನಾವು ಎಲ್ಲಿಂದ ಬಂದೆವು, ಅಲ್ಲಿಗೆ ಹೋಗಬೇಕಾದದ್ದು ಅನಿವಾರ್ಯವೂ ಅವಶ್ಯವೂ ಆಗಿದೆ. ಅದಕ್ಕೆ ಬೇಕು ಸರಿಯಾದ ಜ್ಞಾನ, ಅದು ಕರ್ಮದಿಂದ ಬಂದ ಜ್ಞಾನ ಆಗಿರಬೇಕು. ಕರ್ಮವನ್ನು ತಿಳಿದು ಮಾಡಿದಾಗ ಅನುಭವವು ಅಷ್ಟೇ ಸಮರ್ಪಕವಾಗಿದೆ ಅಂತಹ ಅನುಭವವು ಮಾತ್ರ ಸಮ್ಯಕ್ ಜ್ಞಾನವನ್ನು ಉಂಟುಮಾಡಲು ಸಾಧ್ಯ. ಇದುವೇ ಮೋಕ್ಷಕ್ಕೆ ಸಾಧನ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ. 

 ಸೂಚನೆ : 16/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, February 16, 2025

ವ್ಯಾಸ ವೀಕ್ಷಿತ 122 ಅಡಿಯಿಂದ ಅಗ್ನಿ, ಮೇಲಿಂದ ಮಳೆ! (Vyaasa Vikshita 122)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಖಾಂಡವವು ಸುಡಲಾರಂಭಿಸಿತು. ಪ್ರದೀಪ್ತವಾದ ಆ ಅಗ್ನಿಯ ದೊಡ್ಡ ದೊಡ್ಡ ಕಿಡಿಗಳು ಗಗನಕ್ಕೆ ಜಿಗಿದವು, ಮತ್ತು ಆ ಕಾರಣಕ್ಕಾಗಿ ದೇವತೆಗಳಿಗೇ ಮಹತ್ತಾದ ಉದ್ವೇಗವನ್ನು ಉಂಟುಮಾಡಿದವು! ಆ ಜ್ವಾಲೆಗಳಿಂದ ಬಹುತಾಪಗೊಂಡ ದೇವತೆಗಳು ಋಷಿಗಳನ್ನು ಮುಂದಿಟ್ಟುಕೊಂಡವರಾಗಿ ದೇವ-ಲೋಕದ ಎಲ್ಲ ಮಹಾತ್ಮರೊಂದಿಗೆ ಹೊರಟರು. ಎಲ್ಲಿಗೆ? ಅಸುರ-ಮರ್ದನನೂ ದೇವೇಶನೂ ಸಹಸ್ರಾಕ್ಷನೂ ಶತ-ಕ್ರತುವೂ (ಎಂದರೆ ನೂರು ಅಶ್ವಮೇಧಗಳನ್ನು ಮಾಡಿದವನೂ) ಆದ ಇಂದ್ರನಲ್ಲಿಗೆ.


ದೇವತೆಗಳು ಇಂದ್ರನನ್ನು ಕುರಿತು, "ಇದೇನು, ಮಾನವರೆಲ್ಲರನ್ನೂ ಅಗ್ನಿದೇವನು ಸುಡುತ್ತಿದ್ದಾನೆಯೋ? ಲೋಕಗಳ ಪ್ರಳಯವೇನಾದರೂ ಉಂಟಾಗುತ್ತಿದೆಯೋ, ಓ ದೇವರಾಜನೇ?" – ಎಂದು ಕೇಳಿದರು.


ಅವರ ಮಾತುಗಳನ್ನು ಇಂದ್ರನು ಆಲಿಸಿದನು. ತಾನೇ ಅದನ್ನು ಅನುವೀಕ್ಷಿಸಿದನು: ಖಾಂಡವವನ್ನು ಬಿಡಿಸಬೇಕೆಂದು ತಾನೇ ಅಲ್ಲಿಗೆ ಹೋದನು. ದೊಡ್ಡ ರಥ-ಸಮೂಹದೊಂದಿಗೆ, ಹಾಗೂ ನಾನಾರೂಪಗಳಲ್ಲಿ, ಇಂದ್ರನು ಆಕಾಶವನ್ನೇ ಸುತ್ತುವರೆದು ಮಳೆಗರೆದನು. ಆ ದೇವರಾಜನಾದ ಇಂದ್ರನಿಂದ ಪ್ರೇರಿತವಾದ ಮೋಡಗಳು ಖಾಂಡವದತ್ತ ಧಾರೆಧಾರೆಯಾಗಿ ಭಾರೀ ಪ್ರಮಾಣದ ಮಳೆಗಳನ್ನು ಸುರಿಸಿದವು.


ಆದರೇನು? ಅಗ್ನಿಯ ತೇಜಸ್ಸಿನಿಂದ ಆ ಧಾರೆಗಳು ಅಗ್ನಿಯನ್ನು ಸೇರುವ ಮುಂಚೆಯೇ ಆಕಾಶದಲ್ಲಿಯೇ ಶೋಷಗೊಂಡವು, ಎಂದರೆ ಆರಿಹೋದವು: ಅಗ್ನಿಯನ್ನು ಸಮೀಪಿಸಲೇ ಆರದಾದವು!


ಇಂದ್ರನಿಗಂತೂ ತೀವ್ರವಾದ ಸಿಟ್ಟೇ ಬಂದಿತು. ಅಗ್ನಿಯ ಮೇಲೆ ಎಂದೇ ಮತ್ತೆ ಮಹಾ-ಮೇಘಗಳಿಂದ ಬಹುವಾದ ಮಳೆಯನ್ನೇ ಸುರಿದನು.


ಇತ್ತ ಅಗ್ನಿ-ಜ್ವಾಲೆ ಅತ್ತ ವರ್ಷಾ-ಧಾರೆ, ಇತ್ತ ಹೊಗೆ ಅತ್ತ ಮಿಂಚು, ಅಲ್ಲದೆ ಮಧ್ಯೆ ಮಧ್ಯೆ ಘೋರವಾದ ಗುಡುಗುಗಳು - ಇವುಗಳೆಲ್ಲದವುಗಳಿಂದಾಗಿ ಆ ಅರಣ್ಯವು ಘೋರವೇ ಆಗಿಹೋಯಿತು.


ಹಾಗೆ ಮಳೆಸುರಿಯುತ್ತಿರಲು ಅರ್ಜುನನೂ ಸುಮ್ಮನಿರಲಿಲ್ಲ. ಪ್ರತಿಯಾಗಿ ತಾನೂ ಶರ-ವರ್ಷವನ್ನೇ, ಎಂದರೆ ಬಾಣಗಳ ಮಳೆಯನ್ನೇ, ಕರೆದನು. ತನ್ನ ಉತ್ತಮಾಸ್ತ್ರಗಳಿಂದಾಗಿ ಆ ಜಲಧಾರೆಯನ್ನೆಲ್ಲಾ ತಡೆದುಬಿಟ್ಟನು. ತನ್ನ ಬಹುಲವಾದ ಬಾಣಗಳಿಂದ ಆ ಪಾಂಡವನು ಖಾಂಡವ-ವನವನ್ನೆಲ್ಲಾ ಆಚ್ಛಾದನೆ ಮಾಡಿಬಿಟ್ಟನು, ಎಂದರೆ ಮುಚ್ಚಿಹಾಕಿಬಿಟ್ಟನು - ಹಿಮದಿಂದ ಹೇಗೆ ಚಂದ್ರನು ಎಲ್ಲವನ್ನೂ ಮುಚ್ಚಿ ಹಾಕುವನೋ ಹಾಗೆ.


ಸವ್ಯ-ಸಾಚಿಯಾದ ಅರ್ಜುನನು ಬಾಣ-ಪ್ರಯೋಗ ಮಾಡುತ್ತಿರಲು ಆಕಾಶವೆಲ್ಲಾ ಮುಚ್ಚಿಹೋಗುತ್ತಿದ್ದು, ಯಾವುದೇ ಪ್ರಾಣಿಯೂ ಖಾಂಡವದಿಂದ ಆಚೆಗೆ ಹೋಗಲು ಸ್ವಲ್ಪವೂ ಸಮರ್ಥವಾಗಲಿಲ್ಲ.


ಖಾಂಡವವು ಹೀಗೆ ಸುಟ್ಟುಹೋಗುತ್ತಿರುವ ಸಂದರ್ಭದಲ್ಲಿ ಮಹಾಬಲಶಾಲಿಯಾದ ನಾಗರಾಜ-ತಕ್ಷಕನು ಅಲ್ಲಿ ಇರಲಿಲ್ಲ. ಆತನು ಕುರುಕ್ಷೇತ್ರಕ್ಕೆ ಹೊರಟುಹೋಗಿದ್ದನು. ತಕ್ಷಕನ ಪುತ್ರನಾದ ಅಶ್ವಸೇನನೂ ಬಲಶಾಲಿ. ಅವನಲ್ಲಿದ್ದನು. ಬೆಂಕಿಯ ದೆಸೆಯಿಂದ ಬಿಡುಗಡೆಗಾಗಿ ಆತನು ತೀವ್ರವಾದ ಯತ್ನವನ್ನು ಮಾಡಿದನು. ಅರ್ಜುನನ ಬಾಣಗಳಿಂದ ತಡೆಯುಂಟಾಗಿದ್ದರಿಂದ ಆತನು ಹೊರಹೋಗಲು ಸಮರ್ಥನಾಗಲಿಲ್ಲ.


ಅದಕ್ಕಾಗಿ ಆತನ ತಾಯಿ ಸರ್ಪಿಣಿಯು ಉಪಾಯವೊಂದನ್ನು ಮಾಡಿದಳು. ಅದಾದರೂ ಹೀಗೆ: ಆಕೆಯು ಮೊದಲು ಆತನ ತಲೆಯನ್ನು ನುಂಗಿದಳು; ಹಾಗೆ ನುಂಗುತ್ತಾ ಹೋಗಿ ಕೊನೆಗೆ ಆತನ ಬಾಲವನ್ನೂ ನುಂಗಿದಳು. ಹಾಗೆ ಮಾಡಿ ಆತನಿಗೆ ಬಿಡುಗಡೆಯನ್ನುಂಟುಮಾಡಲೆಂದು ಅವಳು ಹೊರಹೊರಟಳು.


ಇತ್ತ ಅರ್ಜುನನ ತೀಕ್ಷ್ಣವಾದ ಬಾಣದ ಧಾರೆಯೂ ದೊಡ್ಡದಾಗಿತ್ತು. ಹೀಗಾಗಿ ಹೊರಹೋಗುತ್ತಿರುವ ಅವಳ ತಲೆಯನ್ನು ಅರ್ಜುನನು ಕತ್ತರಿಸಿಬಿಟ್ಟನು.


ಅವಳ ಆ ಸ್ಥಿತಿಯನ್ನು ಕಂಡ ಇಂದ್ರನು ಅಶ್ವಸೇನನನ್ನಾದರೂ ಬಿಡಿಸಬೇಕೆಂದು ಸಂಕಲ್ಪಿಸಿದನು.


ಸೂಚನೆ : 16/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಅಷ್ಟಾಕ್ಷರೀ 75 ಶಂಖೀ ಚಕ್ರೀ ಚ ನಂದಕೀ (Astaksari 75)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಶಂಖ-ಚಕ್ರ-ಗದಾಧಾರಿಯು ಕಾಪಾಡಲಿ

ವಿಷ್ಣುಸಹಸ್ರನಾಮವನ್ನು ಪಾರಾಯಣ ಮಾಡುವ ಸಂಪ್ರದಾಯದಲ್ಲಿ ಶ್ಲೋಕವೊಂದನ್ನು ಫಲಶ್ರುತಿಯ ಭಾಗದಲ್ಲಿ ಹೇಳುವ ರೂಢಿಯಿದೆ. ಅದೆಂದರೆ "ವನಮಾಲೀ ಗದೀ ಶಾರ್ಙ್ಗೀ ಶಂಖೀ ಚಕ್ರೀ ಚ ನಂದಕೀ | ಶ್ರೀಮಾನ್ ನಾರಾಯಣೋ ವಿಷ್ಣುಃ ವಾಸುದೇವೋಽಭಿರಕ್ಷತು ||" ಎಂಬುದಾಗಿ. ಏನಿದರರ್ಥ?

ಶಂಖ-ಚಕ್ರ-ವಿಷ್ಣು-ನಾರಾಯಣ - ಇವೆಲ್ಲ ಪ್ರಸಿದ್ಧವೇ. ವಾಸುದೇವನು ಕಾಪಾಡಲಿ ನಮ್ಮನ್ನು – ಎಂದಿಲ್ಲಿ ಪ್ರಾರ್ಥಿಸಿದೆ.

ಆದರೆ ಶಂಖೀ, ಚಕ್ರೀ - ಇತ್ಯಾದಿಗಳಲ್ಲಿ ಬಂದಿರುವ ಈ 'ಈ'ಕಾರವೇನು? ಅದೇನೋ ಯಾರನ್ನಾದರೂ ಸಲಿಗೆಯಿಂದ ಮಾತನಾಡಿಸಲು ಸೇರಿಸಿಕೊಂಡು ಕರೆಯುವ ಈಕಾರವಲ್ಲ: ಹೆಸರು ಸೋಮನಾಥ ಎಂದಿದ್ದರೆ "ಲೋ ಸೋಮೀ" - ಎಂದು ಪ್ರೀತಿಗೆ ಕರೆಯುವ ಬಗೆಯಲ್ಲ.

ಸಂಸ್ಕೃತದಲ್ಲಿ ಇದನ್ನು ಮತ್ವರ್ಥಕ - ಎನ್ನುತ್ತಾರೆ. ಏನು ಹಾಗೆಂದರೆ? 'ಹೊಂದಿರುವಿಕೆ' ಎಂದದರರ್ಥ. ಕನ್ನಡದಲ್ಲಿ 'ಧಣೀ' ಎನ್ನುವರಲ್ಲವೇ? ಸಾಹುಕಾರನಾದ ಒಡೆಯನನ್ನು ಕುರಿತು ಹಿಂದೆ ಈ ಪದವನ್ನು ಬಳಸುತ್ತಿದ್ದರು. ಈಗಲೂ ಅದೇ ಅರ್ಥ; ಇಂಗ್ಲೀಷಿನ ಪದವನ್ನು ಹಾಕುತ್ತಾರೆ, ಅಷ್ಟೆ: 'ಏನ್ ಬಾಸ್?' ಎನ್ನುವುದಿಲ್ಲವೇ? 

ಧಣೀ ಎಂಬುದರ ಮೂಲ 'ಧನೀ' ಎಂಬುದು. ಧನವನ್ನುಳ್ಳವನು 'ಧನೀ'; ನಕಾರವನ್ನು ಣಕಾರಮಾಡಿಕೊಂಡಿದೆ. ಹಾಗೆಯೇ ಬುದ್ದೀ - ಎಂಬುದೂ. ಬುದ್ಧಿಯುಳ್ಳವರು - ಎಂಬ ಲೆಕ್ಕದ ಮೇಲೆ ಬುದ್ದೀ ಎಂದು ಕರೆಯುವುದು. ಅದು ಹೊಗಳಿಕೆಯ ಪದವಲ್ಲ; ಎಚ್ಚರಿಸುವ ಪದ!

ಹೇಗೆ ಧನವನ್ನು ಹೊಂದಿರುವವನು ಧನಿಯೋ, ಹಾಗೆಯೇ ಶಂಖವನ್ನು ಹೊಂದಿರುವವನು ಶಂಖೀ, ಚಕ್ರವುಳ್ಳವನು ಚಕ್ರೀ. ಶಂಖ-ಚಕ್ರಗಳನ್ನು ಹಿಡಿದಿರುವ ಯಾವನನ್ನು ಬೇಕಾದರೂ ಶಂಖೀ-ಚಕ್ರೀ ಎಂದು ಕರೆಯಬಹುದು; ಆದರೆ ವಿಷ್ಣುವೇ ಅವನ್ನು ಧರಿಸಿರುವ ಪ್ರಸಿದ್ಧಿಯುಂಟಲ್ಲವೇ?

ಹಾಗೆಯೇ ವನಮಾಲೆಯನ್ನುಳ್ಳವನು ವನಮಾಲೀ; ಗದೆಯುಳ್ಳವವನು ಗದೀ; ಶಾರ್ಙ್ಗವನ್ನುಳ್ಳವನು ಶಾರ್ಙ್ಗೀ; ನಂದಕವನ್ನುಳ್ಳವನು ನಂದಕೀ: ನಂದಕವೆಂಬುದು ವಿಷ್ಣುವಿನ ಖಡ್ಗದ ಹೆಸರು; ಶಾರ್ಙ್ಗವೆಂಬುದು ಅವನ ಬಿಲ್ಲಿನ ಹೆಸರು.

ವನಮಾಲೆಯೆಂದರೆ ಯಾವುದೋ ಕಾಡಿನ ಮಾಲೆಯೆಂದಲ್ಲ. ಅದಕ್ಕೆ ವಿಶಿಷ್ಟವಾದ ಅರ್ಥವಿದೆ. ಕಾಡಿನಲ್ಲಿ ಹುಟ್ಟಿದ ಹೂಗಳಿಂದ ಮಾಡಲಾಗಿರುವ ಮಾಲೆಯೇ ಅದಾಗಿದ್ದರೂ, ಶ್ರೀಕೃಷ್ಣನು ಧರಿಸುವ ಮಾಲಾವಿಶೇಷವದು. ಅದು ಆಜಾನು-ಲಂಬಿ, ಎಂದರೆ ಮಂಡಿಯವರೆಗೂ ಬರುವಷ್ಟು ಉದ್ದವಾದುದು. ಜಾನುವೆಂದರೆ ಮಂಡಿ. ಅಷ್ಟೇ ಅಲ್ಲ. ಎಲ್ಲ ಋತುಗಳ ಹೂಗಳನ್ನೂ ಅದರಲ್ಲಿ ಪೋಣಿಸಿದೆ. ಮತ್ತು ಆ ಕಾರಣಕ್ಕೇ ಅದು ಉಜ್ಜ್ವಲವಾಗಿದೆ. ಮತ್ತು ಹೂಮಾಲೆಯನ್ನು ಕಟ್ಟಿದರೆ ಅದರ ಮಧ್ಯಸ್ಥಾನದಲ್ಲಿ ಒಂದು ದಪ್ಪನೆಯ ಹೂವನ್ನೋ ಕಂದವನ್ನೋ ಕಟ್ಟುವುದುಂಟಲ್ಲವೇ? ಹಾಗೆ ಪದಕದಂತೆ ಮಧ್ಯಭಾಗದಲ್ಲಿ ದಪ್ಪನೆಯ ಕದಂಬ-ಪುಷ್ಪವನ್ನು ಸೇರಿಸಿರುವಂತಹುದು ವನಮಾಲೆ.

ಕೃಷ್ಣನು ಅಲಂಕಾರಪ್ರಿಯನೇನೋ ಹೌದು. ಎಂದೇ ವನಮಾಲೆಯನ್ನು ಧರಿಸಿರುವುದು ಒಪ್ಪತಕ್ಕದ್ದೇ. ಆದರೆ ಈ ಗದೆ-ಬಿಲ್ಲು-ಶಂಖ-ಚಕ್ರಗಳೇನು? ಶಂಖವನ್ನುಳಿದು ಮಿಕ್ಕ ಮೂರೂ ಆತನ ಪ್ರಸಿದ್ಧ ಆಯುಧಗಳೇ.

ಈಚೆಗೊಬ್ಬರು ಆಕ್ಷೇಪಿಸಿದರು: "ನಮ್ಮ ದೇವರುಗಳ ಕೈಯಲ್ಲಿ ಬಿಲ್ಲು-ಬಾಣಗಳುಂಟು. ರಾವಣ-ಸಂಹಾರವನ್ನು ರಾಮನು ಬಿಲ್ಲು-ಬಾಣಗಳಿಂದಲೇ ಮಾಡಿದನಲ್ಲವೇ? ಅಂದಿಗೆ ಅದು ಸರಿ. ಆದರೆ ಇಂದಿಗೂ ಅವೇ ಬೇಕೆ? ಇಂದಿಗೆ ದೇವತೆಗಳೂ ಮಾಡರ್ನ್ ಆಗಬೇಡವೇ? ಅದಕ್ಕೇ ಅವರ ಕೈಗಳಲ್ಲಿ ಗನ್ನು-ಗ್ರೆನೇಡುಗಳನ್ನು ಜೋಡಿಸಿದರೆ ಇನ್ನೂ ಚೆನ್ನಲ್ಲವೇ? - ಎಂದು.

ಆದರೆ ಶ್ರೀರಂಗಮಹಾಗುರುಗಳು ಇಲ್ಲಿಯ ಮರ್ಮವನ್ನು ತಿಳಿಸಿದ್ದರು. "ಭಗವಂತನ ಕೈಯಲ್ಲಿರುವ ಆಯುಧಗಳು ಭೌತಿಕ-ಪದಾರ್ಥಗಳಲ್ಲ. ವಿಷ್ಣುವಿನ ಕೈಯಲ್ಲಿರುವ ಶಂಖ-ಚಕ್ರ ಮೊದಲಾದವುಗಳು ತತ್ತ್ವಾತ್ಮಕವಾದಂತಹವು" - ಎಂದು. ಇದು ಏನೋ ಕಲ್ಪಿತವಾದ ಉತ್ತರವಲ್ಲ, ಇದಕ್ಕೆ ಶಾಸ್ತ್ರಾಧಾರವೂ ಉಂಟು. ವಿಷ್ಣುವಿನ ಕೈಯಲ್ಲಿರುವ ಗದೆಯು ಬುದ್ಧಿತತ್ತ್ವವನ್ನು ಪ್ರತೀಕಿಸುತ್ತದೆ. ಹಾಗೆಯೇ ಶಂಖವೂ ಶಾರ್ಙ್ಗವೂ ಎರಡು ಬಗೆಯ ಅಹಂಕಾರಗಳನ್ನು ಸೂಚಿಸುತ್ತವೆ. ಚಕ್ರವು ಮನಸ್-ತತ್ತ್ವದ ಪ್ರತೀಕ. ಆತನ ನಂದಕವು ಜ್ಞಾನಕ್ಕೆ ಸೂಚಕವಾದುದು.

ಭಗವಂತನಿಗೂ ಅಹಂಕಾರವುಂಟೇ? ಅಹಂಕಾರವು ಕೆಟ್ಟದ್ದಲ್ಲವೆ? - ಎಂದು ಕೇಳಬಹುದು. ಗರ್ವದ ಅಹಂಕಾರವು ದುಷ್ಟವಾದದ್ದು; ಆದರೆ ಯಾವುದೇ ಕಾರ್ಯದಲ್ಲಿ ತೊಡಗಲು ಅವಶ್ಯವೇ ಆಗುವ ಅಹಂಕಾರವೆಂಬುದೊಂದುಂಟು. ಅಲ್ಲದೆ, ಇಲ್ಲಿ ಹೇಳಿರುವ ಎರಡು ಬಗೆಯ ಅಹಂಕಾರವನ್ನು ತಿಳಿಯಲು ಸಾಂಖ್ಯಶಾಸ್ತ್ರದ ಹೆಚ್ಚಾದ ಪರಿಚಯವೇ ಬೇಕು.

ಇನ್ನು ಇಲ್ಲಿ ಹೇಳಿರುವ ಮನಸ್ಸು-ಬುದ್ಧಿ-ಅಹಂಕಾರ ಹಾಗೂ ಜ್ಞಾನ - ಇವುಗಳೆಲ್ಲವೂ ಸಾಂಖ್ಯಶಾಸ್ತ್ರದಲ್ಲಿ ವಿವರಿಸಲಾಗಿರುವ ತತ್ತ್ವಗಳೇ. "ಮೇಲ್ಮುಖವಾದ ಶಂಖ-ಚಕ್ರಗಳು ಸಾತ್ತ್ವಿಕ-ಪ್ರವೃತ್ತಿಯನ್ನು ಸೂಚಿಸುವುವು" - ಎಂದೂ ಶ್ರೀರಂಗಮಹಾಗುರುಗಳು ಹೇಳಿದ್ದರು. 

ಹೀಗೆ ಭಗವನ್ಮೂರ್ತಿಯನ್ನು ಭೂಷಿಸುವ ಆಯುಧಗಳು ತಾತ್ತ್ವಿಕವಾದಂತಹವು - ಎಂಬುದನ್ನು ತಿಳಿಯಬೇಕು.

ಸೂಚನೆ: 15/2//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 51 ವೇಣು-ವಾದಕನ ರುಚಿರ-ರೂಪ (Krishakarnamrta 51)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



 ಅಂಗುಲ್ಯಗ್ರೈರ್ ಅರುಣಕಿರಣೈರ್


ವೇಣುಗಾನ-ಲೋಲನಾದ ಶ್ರೀಕೃಷ್ಣನನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಶ್ಲೋಕವೊಂದಿಲ್ಲಿದೆ.

ನಂದಗೋಪಾಲ-ಸೂನುವನ್ನು, ಎಂದರೆ ನಂದಗೋಪಾಲನ ಮಗನನ್ನು, ಅರ್ಥಾತ್ ಶ್ರೀಕೃಷ್ಣನನ್ನು, ನಮಸ್ಕರಿಸುತ್ತೇನೆ - ಎನ್ನುತ್ತಾನೆ, ಲೀಲಾಶುಕ. ವೃಂದಾವನದಲ್ಲೆಲ್ಲಾ ಆತನ ಸು-ಚರಿತವು, ಎಂದರೆ ಸುಭಗವಾದ ಓಡಾಟವು, ಚೆನ್ನಾಗಿಯೇ ನಡೆದಿತ್ತಲ್ಲವೇ? ಎಂದೇ ವೃಂದಾವನ-ಸಂಚಾರಿಯಾದ ನಂದ-ನಂದನನನ್ನು ಈ ಶ್ಲೋಕದಲ್ಲಿ ಸ್ತುತಿಸಿದ್ದಾನೆ, ಲೀಲಾಶುಕ.

ಅಲ್ಲಿ ಎಲ್ಲೆಡೆ ಓಡಾಡಿದ ಕೃಷ್ಣನು, ಕೆಲವೊಮ್ಮೆ ಒಂದೆಡೆ ನಿಂತು ಮೈಮರೆತು ವೇಣು-ವಾದನವನ್ನು ಮಾಡಿದ್ದುಂಟು. ಅದಕ್ಕಾಗಿ ಆತನು ನಿಂತ ನಿಲುವು, ಬೆರಳಾಡಿಸಿದ ಬಗೆ, ಉಸಿರಿಸಿದ ಪರಿ - ಇವುಗಳೆಲ್ಲವನ್ನೂ ಕವಿಯು ಇಲ್ಲಿ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾನೆ.

ತನ್ನ ಅಂಗುಲಿಯ ಅಗ್ರಗಳಿಂದ, ಎಂದರೆ ಬೆರಳುಗಳ ತುದಿಯಿಂದ, ಆಗಾಗ್ಗೆ ಕೊಳಲಿನ ರಂಧ್ರಗಳನ್ನು ಸಂರುದ್ಧವಾಗಿಸುತ್ತಾನೆ, ಮತ್ತು ಮುಕ್ತವಾಗಿಸುತ್ತಾನೆ - ಎಂದರೆ ಮುಚ್ಚುತ್ತಾನೆ, ಮತ್ತು ಬಿಡುತ್ತಾನೆ. ರುದ್ಧವೆಂದರೆ ತಡೆಹಿಡಿದಿರುವುದು. ತಡೆಹಿಡಿದಿರುವುದನ್ನು ತೆಗೆದರೆ ಮುಕ್ತವಾಗುವುದು.

ಕೊಳಲಿನ ಬೇರೆ ಬೇರೆ ರಂಧ್ರಗಳನ್ನು ಸ್ವಲ್ಪವಾಗಿಯೋ ಹೆಚ್ಚಾಗಿಯೋ ಮುಚ್ಚುವುದರಿಂದಲೂ ಬಿಡುವುದರಿಂದಲೂ ಸ್ವರಗಳೂ ಗಮಕಗಳೂ ಉಂಟಾಗುವುವಷ್ಟೆ?

ಭಾರತೀಯ ಸಂಗೀತವು ಗಮಕ-ಪ್ರಧಾನವೆನ್ನುವರು. ಹಾಗಿರಲು, ಇವೆಲ್ಲವನ್ನೂ ಉಂಟಾಗಿಸುವುದು ಯಾವ ರಂಧ್ರವನ್ನು ಎಷ್ಟು ಮುಚ್ಚಿ ಎಷ್ಟು ತೆರೆದಿದ್ದರೆ ಸಾಧ್ಯವಾಗುವುದೆಂಬುದು. ಅದಾದರೂ, ಚೆನ್ನಾಗಿ ಕೈಪಳಗಿದವರಿಗೇ ಗೋಚರವಾಗುವಂತಹುದು. ಗಾನವೆಂಬುದು ಎಷ್ಟಾದರೂ ಪ್ರಯೋಗ-ವಿದ್ಯೆ. ಆದ್ದರಿಂದ ಇದರ ಸೂಕ್ಷ್ಮಗಳ ನೂರಾರು ವಿಷಯಗಳನ್ನು ಲಿಖಿತಮಾಡುವುದು ಯಾರಿಗಾದರೂ ದುಃಶಕವೇ ಸರಿ. ದುಃಶಕ ಅಥವಾ ದುಃಸಾಧ್ಯವೆಂದರೆ ಬಲು ಕಷ್ಟವಾದದ್ದು; ಹೆಚ್ಚು ಕಡಿಮೆ ಆಗದೆಂದೇ ಹೇಳಬಹುದಾದದ್ದು: ಬಹಳ ಶ್ರಮಪಟ್ಟು ಯತ್-ಕಿಂಚಿತ್ತನ್ನು ಸೂಚಿಸಬಹುದು ಅಷ್ಟೆ. ಎಂದೇ ಕವಿಯೂ ಸಾಧಾರಣರ ಕಣ್ಣಿಗೆ ಕಾಣಿಸುವ ಬೆರಳಾಟವನ್ನಷ್ಟೇ ಸೂಚಿಸಿರುವುದು: ಬೆರಳೆತ್ತು, ಬೆರಳೊತ್ತು – ಇವೇ ಮುಕ್ತ-ಸಂರುದ್ಧಗಳೆನಿಸುವ ಕಾರ್ಯಗಳು.

ಕೊಳಲನೂದುತ್ತಿರುವ ಕೃಷ್ಣನು ಕವಿಯ ಕಣ್ಮುಂದೆ ಕಾಣಿಸಿಕೊಂಡೇ ಇರುವನು! - ಎಂಬುದನ್ನು ಮನದಟ್ಟುಮಾಡುವ ಮತ್ತೊಂದು ಅಂಶವಿಲ್ಲಿದೆ. ಶ್ಲೋಕಾರಂಭದಲ್ಲಿ ಅಂಗುಲ್ಯಗ್ರ ಎಂದು ಹೇಳುತ್ತಲೇ, ಆ ಬೆರಳುಗಳು ಅದೆಷ್ಟು ಕೆಂಪಗಿವೆ - ಎಂಬುದು ಕವಿಯ ಕಂಗಳಿಗೆ ಕಂಡಿದೆ. ಅರುಣ-ವರ್ಣ ಅವುಗಳದ್ದು. ಸೂರ್ಯೋದಯಕ್ಕೆ ಮುಂಚೆ ಅರುಣೋದಯವಾಗುತ್ತದಷ್ಟೆ. ಅರುಣೋದಯ-ಸಮಯದಲ್ಲಿ ಆಕಾಶದಲ್ಲಿ ಒಂದು ವಿಶಿಷ್ಟವಾದ ಕೆಂಪನೆಯ ವರ್ಣವಿರುವುದು. ಆ ಬಣ್ಣವೇ ಇದೆ, ಕೃಷ್ಣನ ಬೆರಳುಗಳಿಗೆ. ಹೀಗೆ ಚಿಗುರಿನಂತಿರುವ ಕೆಂಬಣ್ಣದ ಬೆರಳುಗಳು, ಕೃಷ್ಣನವು. ಅವು ಕೆಂಪು ಬಣ್ಣದವು – ಎಂದಷ್ಟೇ ಅಲ್ಲ. ಅವುಗಳಿಂದ ಕೆಂಪು ಕಿರಣಗಳೇ ಹೊಮ್ಮುತ್ತಿವೆ – ಎನ್ನುತ್ತಾನೆ, ಲೀಲಾಶುಕ. ಸುಮ್ಮನೆ ಕೆಂಪಾಗಿರುವುದಕ್ಕೂ ಕೆಂಪು ಛವಿಯು ಅವಿಂದ  ಹೊಮ್ಮುವುದಕ್ಕೂ ಭೇದವಿದೆ. ಆರೋಗ್ಯದಿಂದಿರುವವರ ಶರೀರದಲ್ಲಿ ಕೆಲವು ಲಕ್ಷಣಗಳಿರುತ್ತವೆ. ಆರೋಗ್ಯವಂತರ ಮೈಯಲ್ಲಿ ರಕ್ತ-ಪುಷ್ಟಿಯು ಎದ್ದುಕಾಣುತ್ತಿದ್ದು, ಕೆಲವು ಅಂಗಗಳಲ್ಲಿ ರಕ್ತದ ಕೆಂಪು ಚಿಮ್ಮುವಂತೆ ತೋರುತ್ತದೆ. ಒಳ್ಳೆಯ ಆರೋಗ್ಯವಿದ್ದು ದುಂಡುದುಂಡಾಗಿರುವ ಎಳೇಮಕ್ಕಳ ಮೈಕೈಗಳ ಕೆಂಪು-ಹೊಳಪುಗಳನ್ನು ಕಂಡು ಸಂತೋಷಪಟ್ಟವರಿಗೆ ಇದನ್ನು ವಿವರಿಸಿ ಹೇಳಬೇಕಿಲ್ಲ.  ಅಂತೂ ಅದೆಲ್ಲಾ ಲೀಲಾಶುಕನ ಕಣ್ಮುಂದೆ ಬಂದು ನಿಂತಿದೆ.

ಬರೀ ಬೆರಳಾಡಿಸುವುದರಿಂದಲೇ ಸ್ವರಗಳು ಉತ್ಪನ್ನವಾಗಿಬಿಡುವುವೇ? ವಾಯುವು ವೇಣು-ರಂಧ್ರಗಳಿಂದ ಸರಿಯಾಗಿ ಹೊಮ್ಮಿದಾಗಲಷ್ಟೆ ನಾದವು ಉಂಟಾಗುವುದು? ಬೆರಳುಗಳನ್ನು ಮುಚ್ಚುವುದೂ ಬಿಡುವುದೂ ಮರುತ್ತಿನ ಸಂಚಾರವನ್ನು ನಿಯಮನಮಾಡಲೆಂದೇ. ಉಸಿರನ್ನು ಎಷ್ಟು ಹಿಡಿಯಬೇಕು, ಎಷ್ಟು ಬಿಡಬೇಕೆಂಬ ಲೆಕ್ಕಾಚಾರವಿರಬೇಕಷ್ಟೆ?

ಆದುದರಿಂದ ತನ್ನ ವದನ-ವಾಯುವಿನಿಂದ, ಎಂದರೆ ಬಾಯುಸಿರಿನಿಂದ, ಕೊಳಲನ್ನು ತುಂಬುತ್ತಿರಬೇಕು. ಯಾವ ಒತ್ತಡದ ಗಾಳಿಯನ್ನು ಎಷ್ಟು ದೀರ್ಘವಾಗಿ ಪೂರೈಸಬೇಕೆಂಬ ಲೆಕ್ಕಾಚಾರಗಳೂ ಇಲ್ಲಿ ಕೆಲಸಮಾಡುತ್ತವೆ. ಹೀಗೆ ವೇಣುವಿನ ಆಪೂರಣವು, ಎಂದರೆ ಗಾಳಿಯಿಂದ ತುಂಬುವಿಕೆಯು, ಮತ್ತೆ ಮತ್ತೆ ಆಗುತ್ತಿರಬೇಕು. ವಾರಂ ವಾರಂ ಎಂದರೆ ಪುನಃ ಪುನಃ.

ಕೊಳಲುಗಳೂ ಬಗೆಬಗೆ, ಅವುಗಳ ವಾದನದ ಪ್ರಕಾರಗಳೂ ಬಗೆಬಗೆ, ಅವುಗಳ ಫಲಗಳೂ ಬಗೆಬಗೆ. ಸೈನ್ಯದ ಬ್ಯಾಂಡ್-ಸೆಟ್ಟಿನಲ್ಲಿ ಸಹ ಕೊಳಲನ್ನೂದುವುದಿರಬಹುದು. ಅಲ್ಲಿ ಉದ್ದಿಷ್ಟವಾದ ಫಲವೇ ಬೇರೆ: ಅಲ್ಲಿ ವೀರ-ರಸವುಕ್ಕಬೇಕಲ್ಲವೇ? ಹಾಗೆಯೇ ಇಂದಿನ ಆರ್ಕೆಸ್ಟ್ರಾಗಳಲ್ಲಿಯೂ ಮಧ್ಯ-ಮಧ್ಯದಲ್ಲಿ ಪಕ್ಕವಾದ್ಯವಾಗಿ ಕೊಳಲನ್ನೂದುವುದಿರಬಹುದು: ಅಲ್ಲಿಯ ಉದ್ದೇಶವಂತೂ ಮನೋರಂಜನೆಯೇ ಸರಿ. ಇನ್ನು ಸಂಗೀತ-ಕಚೇರಿಗಳ ಬಗೆಯೂ ಭಿನ್ನವೇ. ಅಲ್ಲಿಯದು ಶಾಸ್ತ್ರಾನುಸಾರಿಯಾದ ಗಾನ: ಕೇಳುಗರಿಗೆ ಸಂಸ್ಕಾರವಿರಬೇಕು; ಹಾಡುವವರಿಗೆ ಸಾಧನೆಯಿರಬೇಕು.

ಆದರೆ ಕೃಷ್ಣನು ನುಡಿಸುವ ಪರಿ ಇವೆಲ್ಲಕ್ಕಿಂತಲೂ ವಿಭಿನ್ನವೇ ಸರಿ. ಏಕೆಂದರೆ, ಆತನ ಗಾನದ ಫಲವೂ ಬೇರೆಯೇ. ಮೊದಲು ಹೇಳಿದ ಸಂನಿವೇಶಗಳಲ್ಲಿ ನಡೆಯುತ್ತಲೋ ನಿಂತೋ ಕುಳಿತೋ ನುಡಿಸಬಹುದು. ಆದರೆ ಕೃಷ್ಣನು ನುಡಿಸುವಾಗಿನ ಭಂಗಿಯೇ ಬೇರೆ.

ಕೃಷ್ಣಕರ್ಣಾಮೃತದಲ್ಲಿಯೇ ಮತ್ತೊಂದೆಡೆ ಹೇಳುವಂತೆ, ಕೃಷ್ಣನು ನುಡಿಸುತ್ತಿರುವುದು ನಿಂತುಕೊಂಡು; ನಿಂತಿರುವುದೂ ಮರದ ಬುಡದಲ್ಲಿ:  ಕಲ್ಪವೃಕ್ಷದ ಮೂಲದಲ್ಲಿ. ಅದೂ ತ್ರಿಭಂಗಿಯಲ್ಲಿ.

ಈ ಶ್ಲೋಕದಲ್ಲಿ ಅದನ್ನು ಹೇಳಿರುವುದು ಆತನು ವ್ಯತ್ಯಸ್ತಾಂಘ್ರಿಯಾಗಿ ನಿಂತಿದ್ದಾನೆಂದು. ಏನು ಹಾಗೆಂದರೆ? ಅಂಘ್ರಿಯೆಂದರೆ ಚರಣ. ವ್ಯತ್ಯಸ್ತವೆಂದರೆ ವ್ಯತ್ಯಾಸವಾಗಿರುವುದು. ಅಸ್ತ- ಎಂಬುದರ ಹಿಂದೆ ವಿ ಮತ್ತು ಅತಿಗಳು ಸೇರಿದಾಗ "ವ್ಯತ್ಯಸ್ತ"ವಾಗುವುದು. ಅವನ ಕಾಲುಗಳು ವ್ಯತ್ಯಾಸವಾಗಿವೆ. ಎಂದರೇನು? ಆತನ ಬಲಗಾಲನ್ನು ಎಡಕ್ಕಿಟ್ಟಿದೆ, ಎಡಗಾಲನ್ನು ಬಲಕ್ಕಿಟ್ಟಿದೆ. ಕೃಷ್ಣನ ಈ ಭಂಗೀ-ವಿಶೇಷವನ್ನು ಚಿತ್ರಗಳಲ್ಲೂ ಶಿಲ್ಪಗಳಲ್ಲೂ ಎಲ್ಲರೂ ಕಂಡಿರುವವರೇ.

ಕೃಷ್ಣನ ವೇಣು-ಗಾನಕ್ಕೆ ನಾನಾ-ಫಲಗಳೇ ಉಂಟು. ಆದರೂ ಒಂದು ವಿಶಿಷ್ಟವಾದ ಅಂತರ್ಮುಖತೆಯನ್ನು ಉಂಟುಮಾಡುವುದು ಅದರ ಮುಖ್ಯ-ಫಲ. ಭಗವಂತನ ಉಸಿರೇ ವೇದಗಳೆಂಬುದನ್ನು ಉಪನಿಷತ್ತುಗಳು ಹೇಳುತ್ತವಲ್ಲವೆ? ಅಂತಹ ದಿವ್ಯವಾದ ಉಸಿರು ಆತನದು.

ಕೃಷ್ಣನು ನಿಂತಿರುವ ಈ ಭಂಗಿಗೂ ಆತನು ತನ್ನ ಕೊಳಲ ಮೂಲಕ ಹೊಮ್ಮಿಸುವ ನಾದಕ್ಕೂ ಸಂಬಂಧವಿರುವುದನ್ನು ಶ್ರೀರಂಗಮಹಾಗುರುಗಳು ಪ್ರತಿಪಾದಿಸಿದ್ದರು.

ಅಂತೂ ಕೃಷ್ಣನ ಬೆರಳು-ಉಸಿರು-ನಿಲುವುಗಳನ್ನು ಹೇಳಿದ್ದಾಯಿತು. ಇವನ್ನೆಲ್ಲಾ ಗಮನಿಸಿ, ಆತನ ಕಣ್ಣನ್ನೇ, ಅದರ ಸೊಬಗನ್ನೇ, ಗಮನಿಸದಿದ್ದರೆ ಚಿತ್ರಿಸದಿದ್ದರೆ ಏನು ಬಂತು? ಆತನ ನೇತ್ರವಂತೂ ಪದ್ಮದಂತಿರುವುದು. ಸುಮ್ಮನೆ ಪಂಕಜದಂತಿದೆಯೆಂದರೆ ಸಾಕೇ? ಅದು ವಿಕಚವಾದ ಕಮಲದಂತಿರುವುದು. ವಿಕಚವೆಂದರೆ ವಿಕಸಿತವಾದದ್ದು, ಅರಳಿರುವುದು. ಅರ್ಥಾತ್, ಅರಳಿದ ಕಮಲದ ಛಾಯೆಯನ್ನೇ ಹೊಂದಿರುವುವು, ಆತನ ಲೋಚನಗಳು.

ಛಾಯೆಯೆಂಬುದಕ್ಕೆ ನೆರಳೆಂಬ ಅರ್ಥವು ಪ್ರಸಿದ್ಧ; ಆದರೆ ಸಂಸ್ಕೃತದಲ್ಲಿ ಈ ಅರ್ಥದ ಜೊತೆಗೆ, ಕಾಂತಿಯೆಂಬ ಅರ್ಥವೂ ಇದೆ. ಹೀಗೆ ಕಾಂತಿಯುತವಾದ ಅಕ್ಷಿಗಳು ಕೃಷ್ಣನವು. ಹೀಗೆ ಕಾಂತಿಯನ್ನೂ ಹೊಂದಿದ್ದು ವಿಸ್ತಾರವಾಗಿಯೂ ಇರುವುವು ಈ ನಂದ-ನಂದನನ ನಯನಗಳು. ಹೀಗಿರುವ, ವೃಂದಾವನ-ಚಾರಿಯಾದ ಈತನನ್ನು ವಂದಿಸುವೆ - ಎಂದಿದ್ದಾನೆ, ಲೀಲಾಶುಕ.

ಶ್ಲೋಕ ಹೀಗಿದೆ:

ಅಂಗುಲ್ಯಗ್ರೈರರುಣ-ಕಿರಣೈರ್ಮುಕ್ತ-ಸಂರುದ್ಧ-ರಂಧ್ರಂ/

ವಾರಂ ವಾರಂ ವದನ-ಮರುತಾ ವೇಣುಮ್ ಆಪೂರಯಂತಂ |

ವ್ಯತ್ಯಸ್ತಾಂಘ್ರಿಂ ವಿಕಚ-ಕಮಲಚ್ಛಾಯ-ವಿಸ್ತಾರಿ-ನೇತ್ರಂ/

ವಂದೇ ವೃಂದಾವನ-ಸುಚರಿತಂ ನಂದಗೋಪಾಲ-ಸೂನುಂ ||

ಸೂಚನೆ : 15/02/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Wednesday, February 12, 2025

ವ್ಯಾಸ ವೀಕ್ಷಿತ 123 ಬಾಣಗಳು ನೆಟ್ಟವು, ಅಗ್ನಿಯು ಸುಟ್ಟನು (Vyaasa Vikshita 123)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಹೀಗೆ ಕೃಷ್ಣಾರ್ಜುನರಿಬ್ಬರೂ ಹೇಳಿದ ಬಳಿಕ, ಅಗ್ನಿದೇವನು ತನ್ನ ತೇಜೋಮಯ-ರೂಪವನ್ನು ಧರಿಸಿದನು. ಧರಿಸಿ, ಆ ದಾವವನ್ನು, ಎಂದರೆ ಕಾಡನ್ನು, ದಹಿಸಲು ಮುಂದಾದನು. ತನ್ನ ಏಳೂ ನಾಲಿಗೆಗಳಿಂದ ಆ ಕಾಡನ್ನು ಸುತ್ತಲೂ ಮುತ್ತಿ, ಆ ಖಾಂಡವ-ವನವನ್ನು ದಹಿಸಲಾರಂಭಿಸಿದನು.

ಯುಗಾಂತ-ಸಮಯವನ್ನು ತೋರಿಸುತ್ತಿರುವನೋ ಆತ, ಎಂಬಂತಿತ್ತು ಅದು. ಆ ಕಾಡನ್ನು ಹೀಗೆ ತನ್ನ ವಶಕ್ಕೆ ತೆಗೆದುಕೊಂಡು ಆ ಅಗ್ನಿಯು ಮೋಡದ ಗರ್ಜನೆಯೊಂದಿಗೆ ದಹಿಸುತ್ತಾ ಅಲ್ಲಿಯ ಎಲ್ಲ ಪ್ರಾಣಿಗಳಲ್ಲೂ ನಡುಕವನ್ನು ಉಂಟುಮಾಡಿದನು. ಅಗ್ನಿಯು ಹಾಗೆ ಆ ದಾವವನ್ನು ಸುಡುತ್ತಿರಲು, ಅದು ಹೇಗೆ ಕಂಡಿತು! ಸೂರ್ಯನ ಕಿರಣಗಳಿಂದ ವ್ಯಾಪ್ತವಾದ ಇಡೀ ಮೇರು-ಪರ್ವತವೇ ಜ್ವಲಿಸುತ್ತಿದೆಯೋ – ಎಂಬಂತಿತ್ತು, ಆ ದೃಶ್ಯ!

ಎರಡು ರಥಗಳಲ್ಲಿ ಕುಳಿತು ಆ ವನದ ಎರಡು ಎಡೆಗಳಲ್ಲಿ ನಿಂತವರಾಗಿ, ಎಲ್ಲ ದಿಕ್ಕುಗಳಲ್ಲಿರುವ ಪ್ರಾಣಿಗಳ ಸಂಹಾರವನ್ನು ಕೃಷ್ಣಾರ್ಜುನರಿಬ್ಬರೂ ಮಾಡತೊಡಗಿದರು.

ಖಾಂಡವದಲ್ಲಿ ನೆಲೆಸಿದ್ದ ಪ್ರಾಣಿಗಳು ಎಲ್ಲೆಲ್ಲಿ ಪಲಾಯನ ಮಾಡುವುದು ತೋರುತ್ತಿತ್ತೋ ಅಲ್ಲಲ್ಲೆಲ್ಲಾ ಇವರಿಬ್ಬರೂ ಧಾವಿಸಿಹೋಗುತ್ತಿದ್ದರು. ರಥಗಳಲ್ಲಿ ಶೀಘ್ರವಾಗಿ ಇವರಿಬ್ಬರು ಸಂಚರಿಸುತ್ತಿರಲು, ಎಲ್ಲಿಯೂ ತಪ್ಪಿಸಿಕೊಂಡು ಹೋಗಲು ಒಂದು ಸಣ್ಣ ರಂಧ್ರವೂ ಇರದಾಯಿತು, ಪ್ರಾಣಿಗಳಿಗೆ.

ಪರಿಣಾಮವೇನಾಯಿತು? ಖಾಂಡವವು ಈ ರೀತಿ ದಹಿಸುತ್ತಿರಲು, ಎಲ್ಲೆಡೆ ಮಹತ್ತಾದ ಆರ್ತ-ನಾದವನ್ನು ಮಾಡುತ್ತಾ ಶತ-ಸಹಸ್ರಸಂಖ್ಯೆಗಳಲ್ಲಿ ಎಂದರೆ ಲಕ್ಷಗಟ್ಟಲೆ, ಪ್ರಾಣಿಗಳು ನೆಗೆದು ನೆಗೆದು ಬಿದ್ದವು. ಕೆಲವು ಪ್ರಾಣಿಗಳು ಭಾಗಶಃ ಸುಟ್ಟು ಹೋದವು. ಕೆಲವು ಬೆಂದೇ ಹೋದವು. ಕೆಲವುಗಳ ಕಣ್ಣುಗಳು ಒಡೆದು/ಸಿಡಿದುಹೋದವು. ಹಲವು ಅಸು ನೀಗಿದವು.

ಆ ಪ್ರಾಣಿಗಳಲ್ಲಿ ತಮ್ಮ ಮರಿಗಳನ್ನು ಆಲಿಂಗಿಸಿಕೊಂಡು ಕೆಲವೂ, ಅಪ್ಪಂದಿರನ್ನೂ ಅಣ್ಣಂದಿರನ್ನೂ ಕೆಲವೂ, ಕಟ್ಟಿಕೊಂಡಿದ್ದು, ಸ್ನೇಹದ ಕಾರಣ ಬಿಟ್ಟುಹೋಗಲಾಗದೆ, ಅಲ್ಲಿಯೇ ನಿಧನ ಹೊಂದಿದವು. ಹಲ್ಲು ಕಚ್ಚಿಕೊಂಡು ಮತ್ತೆ ಕೆಲವು ಹಲವು ಬಾರಿ ನೆಗೆದವು. ಆಮೇಲೆ ತೀವ್ರವಾಗಿ ಸುತ್ತಿ ಸುತ್ತಿ ಅಗ್ನಿಯೊಳಗೇ ಬಿದ್ದುಹೋದವು.

ದಾವದ ಎರಡೂ ಕಡೆ ನಿಂತ ಕೃಷ್ಣಾರ್ಜುನರು ಎರಡು ರಥಗಳಲ್ಲಿ ಕುಳಿತವರಾಗಿ ದಿಕ್ಕು ದಿಕ್ಕುಗಳಲ್ಲಿಯೂ ಪ್ರಾಣಿ-ಸಂಹಾರವನ್ನು ಮಾಡತೊಡಗಿದರು. ರೆಕ್ಕೆಗಳು ಸುಟ್ಟುಹೋದಂತಹವೂ, ಕಣ್ಣೋ ಕಾಲೋ ದಗ್ಧವಾಗಿರುವಂತಹವೂ, ನೆಲದ ಮೇಲೆ ಹೊರಳಾಡುತ್ತಾ ಸಾಯುತ್ತಿದ್ದಂತಹವೂ ಆದ ಪಶು-ಪಕ್ಷಿಗಳು ಅಲ್ಲಲ್ಲಿ ತೋರುತ್ತಿದ್ದವು.

ಜಲಾಶಯಗಳೇ ಬಿಸಿಗೊಂಡು ಬೆಂಕಿಯಿಂದಾಗಿ ಕುದಿಯುತ್ತಲಿರಲು, ಅವುಗಳ ಸುತ್ತ ಕೂರ್ಮಗಳೂ ಮತ್ಸ್ಯಗಳೂ ಪ್ರಾಣಕಳೆದುಕೊಂಡು ಬಿದ್ದಿರುವುದು ಕಾಣುತ್ತಿತ್ತು. ಮೈಗೆಲ್ಲ ಬೆಂಕಿ ಹೊತ್ತಿಕೊಂಡ ಮತ್ತೆ ಕೆಲವು ಪ್ರಾಣಿಗಳಂತೂ ಅಗ್ನಿಯೇ ಮೈತಾಳಿಬಂದಂತೆ ತೋರುತ್ತಿದ್ದುವು!

ಅಗ್ನಿಯು ಹಾಗೆ ಪ್ರದೀಪ್ತವಾಗಿದ್ದರೂ, ಹಾರಿಹೋಗುತ್ತಿದ್ದ ಕೆಲವು ಪಕ್ಷಿಗಳನ್ನು ಪಾರ್ಥನು ತನ್ನ ಬಾಣಗಳಿಂದ ಚೂರುಚೂರಾಗಿಸಿ ಕೆಳಕ್ಕೆ ಬೀಳಿಸಿದನು. ಮೈಗೆಲ್ಲಾ ಬಾಣಗಳು ನೆಟ್ಟ ಅವು ಜೋರಾಗಿ ಕಿರುಚುತ್ತಾ ಮೇಲಕ್ಕೆ ವೇಗದಿಂದ ಹಾರಿ ಮತ್ತೆ ಆ ಖಾಂಡವದೊಳಗೇ ಬಿದ್ದುಹೋದವು. ಬಾಣಗಳ ಹೊಡೆತಗಳನ್ನು ತಿನ್ನುತ್ತಿದ್ದ ಆ ವನ್ಯಗಳ ಸಾಮೂಹಿಕ-ವಿರಾವದಿಂದ, ಎಂದರೆ ಒಟ್ಟಾಗಿ ಗಟ್ಟಿಯಾಗಿ ಅರಚಿಕೊಳ್ಳುವುದರಿಂದ, ಉಂಟಾದ ಶಬ್ದವು ಘೋರವಾಗಿತ್ತು - ಸಮುದ್ರವನ್ನು ಮಥಿಸಿದಾಗ ಉಂಟಾದ ಶಬ್ದದಂತಿತ್ತು!

ಸೂಚನೆ : 10/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 3



ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ ೨ - ಯಾರು ನಿಜವಾಗಿ ತಿಳಿದವನು ?

ಉತ್ತರ -  ಸಂಸಾರದ ಸಂಬಂಧವನ್ನು ಕತ್ತರಿಸಿಕೊಂಡವನು.


ಈಗ ಕೇಳುತ್ತಿರುವ ಪ್ರಶ್ನೆ- ಒಬ್ಬ ಬುದ್ಧಿಮಂತನಾದವನು ಏನು ಮಾಡಬೇಕು? ಎಂಬುದಾಗಿ. ಅದಕ್ಕೆ ಸಂಸಾರಛೇದ ಎಂಬುದು ಉತ್ತರ. ಅಂದರೆ ಸಂಸಾರವನ್ನು ಬಿಡುವಂಥದ್ದು. ಅಂದರೆ ಇಲ್ಲಿ ನಾವು ತಿಳಿಯಬೇಕಾದ ವಿಷಯ ಇಷ್ಟು, ಸಂಸಾರ ಏಕೆ ತ್ಯಾಜ್ಯವಾದದ್ದು? ಅಂದರೆ ಬಿಡಬೇಕಾದುದನ್ನು ತಿಳಿದು ಬಿಡುವಂಥದ್ದು ಎಂದು. ಯಾವುದು ನಿರಂತರವಾಗಿ ಮುಂದುವರೆದುಕೊಂಡು ಹೋಗುತ್ತದೆಯೋ ಅದಕ್ಕೆ 'ಸಂಸಾರ' ಎಂಬುದಾಗಿ ಕರೆಯುತ್ತಾರೆ. 'ಸಮ್ಯಕ್ ಸರತಿ ಇತಿ ಸಂಸಾರಃ' ಅಂದರೆ ಯಾವನು ಜನನ ಮತ್ತು ಮರಣ ಎಂಬ ಚಕ್ರಕ್ಕೆ ಸಿಲುಕಿ ಅದೇ ರೀತಿಯಾಗಿ ಮುಂದುವರೆದುಕೊಂಡು ಹೋಗುತ್ತಿದ್ದರೆ ವಸ್ತುತಃ  ಆ ವ್ಯಕ್ತಿಗೇ ಸಂಸಾರ ಎಂಬುದಾಗಿ ಕರೆಯಬೇಕು. ಶ್ರೀರಂಗ ಮಹಾಗುರುಗಳು ಇದಕ್ಕೆ ಒಂದು ಮಾತನ್ನು ಹೇಳುತ್ತಿದ್ದರು - "ನಾವೆಲ್ಲ ಒಂದು ಕಾಲದಲ್ಲಿ ಭಗವಂತನ ಮಕ್ಕಳಾಗಿದ್ದೆವಪ್ಪ ಯಾವುದೋ ಕಾರಣಕ್ಕೆ ಇಲ್ಲಿಗೆ ಬಂದೆವು" ಎಂಬುದಾಗಿ. ಅಂದರೆ ನಾವೆಲ್ಲ ಭಗವಂತನ ಮಕ್ಕಳಾಗಿದ್ವು, ಭಗವಂತನಲ್ಲೇ ಒಂದಾಗಿದ್ದು, ಕಾರಣಾಂತರಗಳಿಂದ ಇಲ್ಲಿಗೆ ಬಂದು ಈ ಸಂಸಾರವನ್ನೇ - ಈ ಜಗತ್ತನ್ನೇ ಅಥವಾ ಪ್ರಪಂಚವನ್ನೇ ಆಸ್ಪಾದನೆ ಮಾಡುತ್ತಾ ಮಾಡುತ್ತಾ ಇಲ್ಲೇ ನಾವು ಮೈಮರೆತೆವು. ಇಲ್ಲಿಯ ಸೊಬಗನ್ನು ನೋಡಿ ಮತ್ತೆ ನಮಗೆ ಮೂಲಕ್ಕೆ ಹೋಗುವುದು ಮರೆತೇ ಹೋಯಿತು.


ಹೇಗೆ ಒಬ್ಬ ಬಾಲಕನನ್ನು ಪೇಟೆಗೆ ಯಾವುದೋ ಒಂದು ಪದಾರ್ಥವನ್ನು ತರುವಂತೆ ಕಳಿಸಿದಾಗ ಆ ಬಾಲಕನು ಪೇಟೆಯ ಅಂದ ಚಂದ ನೋಡುತ್ತಾ ಮನೆಗೆ ಬರುವುದನ್ನೇ ಮರೆತನೋ, ಅಂತೆಯೇ ಈ ಜೀವ ಭಗವಂತನಿಂದ ಬೇರ್ಪಟ್ಟು ಜನ್ಮವನ್ನು ಪಡೆದು ಈ ಸಂಸಾರಚಕ್ರಕ್ಕೆ ಅದು ಸಿಲುಕಿಕೊಳ್ಳುತ್ತದೆ. ಆದರೆ ಪುನಃ ಸಂಸಾರಚಕ್ರದಿಂದ ಬಿಡುಗಡೆ ಪಡೆದು ನಾವು ಎಲ್ಲಿಂದ ಬಂದಿದ್ದೋ ಅಲ್ಲಿಗೆ ಹೋಗಬೇಕಾದದ್ದು ಅತ್ಯಂತ ಅವಶ್ಯ. ಬಿಡಿಸಿಕೊಂಡು ಮತ್ತೆ ಭಗವಂತನಲ್ಲಿಗೆ ಒಂದಾಗಿ ಸೇರುವಂತದ್ದು ನಿಜವಾದ ಅರ್ಥದಲ್ಲಿ ಮೋಕ್ಷ ಅಥವಾ ಬಿಡುಗಡೆ. ಹಾಗಾಗಿ ಯಾರು ಜ್ಞಾನಿ ಅಂತ ಕರೆಸಿಕೊಳ್ಳುತ್ತಾರೋ ಅವನು ಭಗವಂತನ ಆ ಸ್ವರೂಪವನ್ನು ತಿಳಿದು ಅವನಲ್ಲಿ ಒಂದಾದಾಗ, ಈ ಸಂಸಾರ ಎಂಬಂತಹ ಯಾವ ವಿಷಯ ಇದೆಯೋ ಅದು ನಮ್ಮಿಂದ ದೂರವಾಗುತ್ತದೆ. ಈ ಸಂಸಾರವು ಬಿಡಲೇಬೇಕಾದ್ದರಿಂದ ಇದನ್ನು ಅನೇಕರು ಬಗೆ ಬಗೆಯಲ್ಲಿ ದೂಷಣೆ ಮಾಡಿದ್ದನ್ನು ನಾವು ನೋಡಬಹುದು. ಶಂಕರ ಭಗವತ್ಪಾದರು ಶ್ರೀಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರದಲ್ಲಿ ಸಂಸಾದರ ಕರಾಳತೆಯನ್ನು ತೋರಿಸಿದ್ದಾರೆ. ಈ ಸಂಸಾರವನ್ನು ಕಾಡ್ಗಿಚ್ಚು, ಜಾಲ, ಆಳವಾದ ಬಾವಿ, ಭಯಂಕರ ಗಜ, ವಿಷಸರ್ಪ, ಇತ್ಯಾದಿಯಾಗಿ ಹೇಳಿದ್ದುಂಟು. ಆದ್ದರಿಂದ ಪ್ರತಿಯೊಬ್ಬರೂ ಮಾಡಬೇಕಾದದ್ದು ಇಷ್ಟೇ, ಸಂಸಾರವನ್ನು ದಾಟಿ ಸಂಸಾರದಿಂದ ಆಚೆ ಇರುವ ಪರಬ್ರಹ್ಮ-ಭಗವಂತನನ್ನು ಕಂಡು ಮೋಕ್ಷವನ್ನು ಪಡೆಯುವಂತಹದ್ದು. ಇದೇ ನಿಜವಾದ ಬುದ್ಧಿವಂತಿಕೆ. ಇದೇ ಪ್ರತಿಯೊಬ್ಬ ಮಾನವನ ಕರ್ತವ್ಯ.


ಸೂಚನೆ : 10/2/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.



Sunday, February 9, 2025

ಕೃಷ್ಣಕರ್ಣಾಮೃತ 50 ಸಂಧ್ಯಾವಂದನ ಭದ್ರಮಸ್ತು (Krishakarnamrta 50)


ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಸ್ನಾನ-ಸಂಧ್ಯಾವಂದನೆಗಳೂ ಬೇಡವೇ?


ನಮ್ಮಿಂದ ಸರ್ವದಾ ಏನಾದರೂ ಒಂದು ಕೆಲಸ ನಡೆಯುತ್ತಲೇ ಇರುತ್ತದೆ. ಸುಮ್ಮನಾರು ಕುಳಿತಿರಬಲ್ಲರು? ಚಿಕ್ಕಮಕ್ಕಳ ವಿಷಯದಲ್ಲಂತೂ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. "ಏನೂ ಮಾಡದೆ ಹತ್ತು ನಿಮಿಷ ಸುಮ್ಮನೆ ಕುಳಿತುಕೋ" - ಎಂದುಬಿಡುವುದಕ್ಕಿಂತ ದೊಡ್ಡ ಶಿಕ್ಷೆಯೇ ಮಕ್ಕಳಿಗಿರಲಾರದು! ಕೈಕಾಲುಗಳಾಡದಿದ್ದರೂ ಮನಸ್ಸು ಆಡದೆ ಇದ್ದೀತೇ? ಉಸಿರನ್ನಾದರೂ ಆಡದೆ ಇರಲಾರದೀತೇ?

ಇದು ಒಂದು ಕೊನೆಯಾದರೆ, "ಇಂತಿಂತಹ ಕರ್ಮಗಳನ್ನು ಮಾಡ(ಲೇ)ಬೇಕು, ಇಂತಿಂತಹವನ್ನು ಮಾಡ(ಲೇ)ಬಾರದು - ಎಂದು ಶಾಸ್ತ್ರಗಳೇ ಹೇಳುವುದೂ ಉಂಟು. ಮಾಡಬೇಕೆಂಬುವುದನ್ನು ವಿಧಿಯೆಂದೂ, ಮಾಡಬಾರದೆಂಬುವುದನ್ನು ನಿಷೇಧವೆಂದೂ ಹೇಳಲಾಗುವುದು. ಇವನ್ನೇ ವಿಹಿತ-ಕರ್ಮ, ನಿಷಿದ್ಧ-ಕರ್ಮ ಎನ್ನುವುದೂ ಇದೆ.

ವಿಹಿತ-ಕರ್ಮಗಳಲ್ಲಿ ಕೆಲವನ್ನು ಪ್ರತಿದಿನವೂ ಮಾಡಬೇಕೆಂದು ಶಾಸ್ತ್ರವಿದೆ. ಅವು ನಿತ್ಯ-ಕರ್ಮಗಳಲ್ಲಿ ಸೇರುತ್ತವೆ. ಆದರೆ, ಮಗುವಿಗೆ ನಾಮಕರಣವನ್ನು ಮಾಡುವುದು ಆ ನಿಮಿತ್ತ (ಅಥವಾ ಪ್ರಸಂಗ) ಬಂದಾಗಲಷ್ಟೆ ಮಾಡುವುದು; ಎಂದೇ ಅದನ್ನು ನೈಮಿತ್ತಿಕ-ಕರ್ಮ ಎನ್ನುತ್ತಾರೆ. ಪರ್ವ-ಕಾಲಗಳು ಬಂದಾಗ ಮಾಡಬೇಕಾದವನ್ನು, ಅವು ಬಂದಾಗಲೆಲ್ಲ ಮಾಡಬೇಕಾದ್ದರಿಂದ, ಅವನ್ನು ನಿತ್ಯ-ನೈಮಿತ್ತಿಕ ಎನ್ನುತ್ತಾರೆ. ಇನ್ನು ನನಗೆ ಇಂತಹ ಫಲವು ದೊರೆಯಲಿ - ಎಂಬ ಉದ್ದೇಶದಿಂದ ಮಾಡತಕ್ಕದ್ದು ಕಾಮ್ಯ-ಕರ್ಮವೆನಿಸುತ್ತದೆ.

ಇವುಗಳಲ್ಲಿ ಸ್ನಾನ-ಸಂಧ್ಯಾವಂದನೆಗಳು, ದೇವತರ್ಪಣ-ಋಷಿತರ್ಪಣ - ಇವುಗಳು ನಿತ್ಯ-ಕರ್ಮಗಳೆನಿಸುತ್ತವೆ. ಯಾವ ಕರ್ಮಗಳನ್ನು ಮಾಡಲಿ, ಬಿಡಲಿ, ನಿತ್ಯ-ಕರ್ಮಗಳನ್ನು ತಪ್ಪಿಸುವಂತಿಲ್ಲವೆನ್ನುತ್ತದೆ, ಶಾಸ್ತ್ರ.


ಯಾವುದೇ ವಿಹಿತ-ಕರ್ಮಗಳನ್ನು ಮಾಡುವ ಮೊದಲೂ ಸ್ನಾನವಾಗಿರಬೇಕು. ಸ್ನಾನವು ಶೌಚ-ಕರ. ಶೌಚವೆಂದರೆ ಶುಚಿತೆ. ದೇಹಕ್ಕೆ ನಾನಾಬಗೆಯ ಮಾಲಿನ್ಯವು ಅಂಟಿಕೊಳ್ಳುವುದುಂಟು. ಅದನ್ನು ಹೋಗಲಾಡಿಸಿದರೆ ಶುಚಿತ್ವವು ಬರುವುದು. ಮಣ್ಣಲ್ಲಾಡಿಬಂದರೆ, ಧೂಳಿನ ಸಂಪರ್ಕವಾದರೆ, ಮೈ ಕೊಳೆಯಾಗುವುದು. ಹೊರಗಡೆಯಿಂದಾಗುವಂತೆ ಒಳಗಿನಿಂದಲೂ ಮಲವೇರ್ಪಡಬಹುದು: ಶ್ರಮದ ಕಾರ್ಯಗಳಿಂದ ಬೆವರೂ, ಅದರಿಂದ ದುರ್ಗಂಧವೂ, ಜನಿಸಬಹುದು. ಅವೆಲ್ಲವೂ ಹೋಗಲು ಸ್ನಾನ ಬೇಕು. ಸ್ನಾನದ ಪರಿಣಾಮವು ಮನಸ್ಸಿನ ಮೇಲೂ ಆಗುವುದು. ಆದುದರಿಂದಲೇ ನೈರ್ಮಲ್ಯ ಹಾಗೂ ಭಾವ-ಶುದ್ಧಿಗಳನ್ನು ಸ್ನಾನ-ಫಲಗಳೆನ್ನುವುದು. ಒಗೆದ ಬಟ್ಟೆಯನ್ನೇ ಸ್ನಾನಾನಂತರ ಉಟ್ಟುಕೊಳ್ಳುವುದು. ಇದರಿಂದಲೂ ಮನಸ್ಸಿಗೆ ಹೊಸತನ-ಹರ್ಷಗಳು ಬರುವುವು.

ಹೀಗೆ ದೇಹಶುದ್ಧಿ-ಚಿತ್ತಶುದ್ಧಿ-ಹರ್ಷೋಲ್ಲಾಸ - ಇವುಗಳನ್ನು ಸಂಪಾದಿಸಿಕೊಂಡು ಮಾಡುವ ದೇವ-ಪೂಜಾದಿ-ಕಾರ್ಯಗಳು ಸುಸಂಪನ್ನವಾಗುತ್ತವೆ. ಅವುಗಳ ಮೊದಲ ಹೆಜ್ಜೆಯೇ ಸಂಧ್ಯಾ-ವಂದನೆ. ಸಂಧ್ಯಾ-ಕಾಲದಲ್ಲಿ ಮಾಡುವ ಕ್ರಿಯೆಯಿದು. ಸಂಧ್ಯಾ-ಕಾಲವೆಂಬುದು ಸಂಧಿ-ಕಾಲ. ಹಗಲು-ಇರುಳುಗಳು ಸಂಧಿಸುವ ಕಾಲವದು. ಇರುಳು ಕಳೆದು ಬೆಳಕು ಹರಿಯುವಾಗ ಪ್ರಾತಃಸಂಧ್ಯೆ. ಹಗಲು ಕಳೆದು ಕತ್ತಲಾವರಿಸುವಾಗ ಸಾಯಂಸಂಧ್ಯೆ. ಹಗಲಿನ ಮಧ್ಯಸಮಯದಲ್ಲಿ ಪೂರ್ವಾಹ್ಣ-ಅಪರಾಹ್ಣಗಳ ಸಂಧಿಯೊಂದುಂಟು. ನಡುರಾತ್ರಿಯಲ್ಲೂ ಒಂದು ಸಂಧಿಕಾಲವುಂಟು; ಅದು ಸಂನ್ಯಾಸಿಗಳಿಗೆ ಉಪಯುಕ್ತ/ಪ್ರಶಸ್ತ. ಉಳಿದವರಿಗೆ ಪ್ರಾತಃಸಂಧ್ಯೆ, ಮಧ್ಯಾಹ್ನ, ಸಾಯಂಸಂಧ್ಯೆಗಳೆಂಬ ತ್ರಿಕಾಲಗಳ ಕರ್ಮಗಳು ಆಚರಣೀಯವಾಗಿರುತ್ತವೆ.

ಸಂಧ್ಯಾವಂದನಾನಂತರ ದೇವತೆಗಳನ್ನೂ ಪಿತೃಗಳನ್ನೂ ಉದ್ದೇಶಿಸಿ ತರ್ಪಣವೆಂಬುದು ಆಚರಿತವಾಗತಕ್ಕದ್ದು. ತರ್ಪಣವೆಂದರೆ ತೃಪ್ತಿಪಡಿಸುವುದು. ಸ್ನಾನ-ಸಂಧ್ಯಾವಂದನಗಳನ್ನೂ ದೇವತರ್ಪಣ-ಋಷಿತರ್ಪಣಗಳನ್ನೂ ಬಿಡುವಂತಿಲ್ಲ.

ಧರ್ಮಶಾಸ್ತ್ರಕ್ಕೆ ಸಂಬಂಧಿಸುವ ಈ ಎಲ್ಲ ವಿಷಯಗಳಿಗೂ ಕೃಷ್ಣಕರ್ಣಾಮೃತಕ್ಕೂ ಏನು ಸಂಬಂಧ? - ಎಂಬ ಪ್ರಶ್ನೆಯು ಏಳುತ್ತದಲ್ಲವೇ? ಸಂಬಂಧವಿದೆ. ಸಂಧ್ಯಾವಂದನೆಯ ಬಗ್ಗೆಯೂ, ತರ್ಪಣಗಳ ಬಗ್ಗೆಯೂ ಲೀಲಾಶುಕನು ಒಂದು ಶ್ಲೋಕದಲ್ಲಿ ಹೇಳಿದ್ದಾನೆ. ಅಷ್ಟೇ ಅಲ್ಲ, ಬಿಡದೇ ಮಾಡಬೇಕಾದ ಅವುಗಳ ವಿಷಯದಲ್ಲಿ ಮಾಫಿಯನ್ನೂ ಬೇಡುತ್ತಿದ್ದಾನೆ!

ತೀವ್ರ ಅನಾರೋಗ್ಯವಾಗಿದ್ದಾಗ ಗತ್ಯಂತರವಿಲ್ಲದೆ, ಎಂದರೆ ಬೇರೆ ಗತಿಯಿಲ್ಲದೆ, ಕರ್ತವ್ಯವನ್ನೂ ಕೈಬಿಡುವುದಾಗುತ್ತದೆಯಷ್ಟೆ. ಗತಿಯೆಂದರೆ ಇಲ್ಲಿ ದಾರಿ ಎಂದರ್ಥ. ಗತ್ಯಂತರವೆಂದರೆ ಅನ್ಯ-ಮಾರ್ಗ. ಹಾಗೆಯೇ ಸೂತಕ-ಮೃತಕಗಳೊದಗಿದಾಗ ಕೆಲವು ಕರ್ಮಗಳನ್ನು ಮಾಡುವುದು ಬೇಡವೆಂದು ಹೇಳುವುದುಂಟು. ಮನೆಯಲ್ಲಾಗುವ ಜನನ-ಮರಣಗಳು ಸಾಧಾರಣ-ಘಟನೆಗಳಲ್ಲ. ಮಗುವು ಜನಿಸಿದಾಗ ಮನೆಯ ಮಂದಿಯ ಪ್ರಕೃತಿಯಲ್ಲಿ ಒಂದು ಅಶುದ್ಧಿಯು ಏರ್ಪಡುತ್ತದೆ. ಯಾರಲ್ಲಿ ಎಷ್ಟು ಎಂಬೀ ಲೆಕ್ಕಗಳು ಇಲ್ಲಿ ಬೇಡ. ಎಲ್ಲ ವಿಹಿತ-ಕರ್ಮಗಳಿಗೂ ಶೌಚವೆಂಬುದು ಹೊರಗಡೆಯೆಂತೋ ಒಳಗಡೆಯೂ ಅಂತೆಯೇ ಬೇಕು. ಮನೆಯಲ್ಲಾಗುವ ಜನನ-ಮರಣಗಳಿಂದಾಗಿ ಅಂತಶ್ಶೌಚವು ಲುಪ್ತವಾಗುತ್ತದೆ. ಆಗ ಅ-ಶೌಚವೇರ್ಪಡುತ್ತದೆ. ಆಶೌಚವೆಂದರೂ ಅದೇ. ಮನೆಯಲ್ಲಿಯೋ ನಿಕಟ-ಬಂಧುಗಳಲ್ಲಿಯೋ ಶಿಶು-ಜನನವಾದಾಗ ಉಂಟಾಗುವ ಆಶೌಚಕ್ಕೆ ಸೂತಕವೆಂದು ಹೆಸರು; ಹಾಗೆಯೇ ಮರಣಗಳಿಂದೇರ್ಪಡುವ ಆಶೌಚಕ್ಕೆ ಮೃತಕವೆಂದು ಹೆಸರು. ಅಂತಹ ಸಂದರ್ಭಗಳಲ್ಲಿ ಕೆಲವು ಕರ್ಮಗಳಿಗೆ ಮಾಫಿಯುಂಟು. ಧರ್ಮಶಾಸ್ತ್ರದ ಭಾಷೆಯಲ್ಲಿ ಹೇಳುವುದಾದರೆ ಆಗ ಆ ಕರ್ಮಗಳನ್ನು ಮಾಡುವ ಅಧಿಕಾರವಿರುವುದಿಲ್ಲ. ಅಧಿಕಾರವೆಂದರೆ ಅರ್ಹತೆ.

ಈ ಶ್ಲೋಕದಲ್ಲಿ ಲೀಲಾಶುಕನು ಕೇಳಿಕೊಳ್ಳುತ್ತಿರುವ ಮಾಫಿಯು ಹೀಗೆ ಅಧಿಕಾರವಿಲ್ಲದಿರುವ ಕಾರಣದಿಂದಲ್ಲ. ಅಧಿಕಾರವೇ ಇಲ್ಲದಿರುವಾಗ ಮಾಫಿ ಕೇಳುವ ಪ್ರಸಂಗವೇ ಇರುವುದಿಲ್ಲ. ಬೇರೊಂದು ಕಾರಣಕ್ಕೇ ಆತನು ಸ್ನಾನ-ಸಂಧ್ಯೆ-ತರ್ಪಣಗಳಿಂದ ಮಾಫಿಯನ್ನು ಬೇಡುತ್ತಿರುವುದು.

ಏನದು ಕಾರಣ? "ಎಲ್ಲಿಯೋ ಒಂದೆಡೆ ಕುಳಿತು ಕೃಷ್ಣಸ್ಮರಣೆಯನ್ನು ನಾನು ಮಾಡಬೇಕು – ಅದಕ್ಕಾಗಿ" - ಎನ್ನುತ್ತಾನೆ, ಲೀಲಾಶುಕ.

ಸಂಧ್ಯಾಚರಣ-ತರ್ಪಣಕರಣಗಳನ್ನು ತಪ್ಪಿಸುವಂತಿಲ್ಲ. ನಿತ್ಯಕೃತ್ಯ-ಲೋಪವಾದರೆ ಪಾಪ-ಲೇಪ ತಪ್ಪಿದ್ದಲ್ಲ, ಅಲ್ಲವೇ? ಲೋಪವೆಂದರೆ ತಪ್ಪುವುದು; ಲೇಪವೆಂದರೆ ಮೆತ್ತಿಕೊಳ್ಳುವುದು, ಅಂಟುವುದು. ಈ ಅಂಶವು ಲೀಲಾಶುಕನಿಗೆ ಗೊತ್ತಿಲ್ಲದಿಲ್ಲ. 

ಆದರೆ ಮತ್ತೆ ಮತ್ತೆ ಕೃಷ್ಣ-ಸ್ಮರಣೆ ಮಾಡುತ್ತಿರುವಷ್ಟರಿಂದಲೇ ಅನೇಕ ಅಘಗಳು ಅಳಿಯುವುದನ್ನು ಇಲ್ಲಿ ಜ್ಞಾಪಿಸುತ್ತಿದ್ದಾನೆ. ಅಘವೆಂದರೆ ಪಾಪ. ಎರಡು ಬಗೆಯ ಅಘಗಳ ಲೆಕ್ಕವಿಲ್ಲಿದೆ. ಸಂಧ್ಯಾದಿ-ಕರ್ಮಗಳ ಲೋಪದಿಂದ ಏರ್ಪಡುವ ಪಾಪ; ಜೊತೆಗೆ ನಮ್ಮ ಪ್ರಾಚೀನ-ಪಾಪಗಳು. ಎಂದರೆ, ಹುಟ್ಟಿದಾಗಿನಿಂದ ಘಟಿಸಿರುವ ಪಾಪಗಳು, ಹಾಗೂ ಅದಕ್ಕೂ ಮುಂಚೆ, ಎಂದರೆ ಪೂರ್ವಜನ್ಮಗಳಲ್ಲಿ ಘಟಿಸಿರುವ ಪಾಪಗಳು. ಪೂರ್ವ-ಪಾಪಗಳ ಜೊತೆಗೆ ಈಗಿನ ಕರ್ಮ-ಲೋಪದ ಪಾಪವೂ ಸೇರಿ ಮೊತ್ತವು ಇನ್ನೂ ಹೆಚ್ಚೇ ಆಯಿತಲ್ಲವೆ? - ಎಂಬುದು ಬರಬೇಕಾದ ಪ್ರಶ್ನೆ.

ಅದಕ್ಕೆ ಉತ್ತರವು ಹೀಗೆ. ಮನಸ್ಸು ಉತ್ಕಟವಾಗಿ ಭಗವದ್ಭಾವದಲ್ಲಿದ್ದು ಬಾಹ್ಯ-ಕ್ರಿಯೆಗಳತ್ತ ಹರಿವೇ ಉಂಟಾಗದಷ್ಟು ಉಮ್ಮಳಿಸಿದಾಗ, ಎಲ್ಲ ಪಾಪಗಳ ಪರಿಣಾಮವನ್ನೂ ಮೀರುವುದಾಗುತ್ತದೆ. ಆ ತುಂಗಭಾವವಿಲ್ಲದೆ ಕೇವಲ ಆ ನೆಪವನ್ನೊಡ್ಡಿ ಕರ್ತವ್ಯ-ಚ್ಯುತನಾಗುವುದು ತರವಲ್ಲ - ಎಂಬ ಎಚ್ಚರವನ್ನಿಲ್ಲಿ ತೆಗೆದುಕೊಳ್ಳಬೇಕು.

ಕೃಷ್ಣನು ಯಾದವಕುಲೋತ್ತಂಸ, ಎಂದರೆ ಯದು-ಕುಲಕ್ಕೆ ಶಿರೋಮಣಿ. ಕಂಸನಂತೂ ಕಲಿ-ಪುರುಷ. ಆದ್ದರಿಂದ ಕಂಸ-ಸಂಹಾರವು ಧರ್ಮಕಾರ್ಯವೇ. ಈ ಕಂಸ-ದ್ವೇಷಿಯ ಸಂಸ್ಮರಣೆಯಾಗುತ್ತಿರಬೇಕು. ಸ್ಮೃತಿ-ಸಂತಾನವೇ, ಎಂದರೆ ನಿರಂತರವಾದ ಸ್ಮೃತಿಯೇ, ಧ್ಯಾನ. ಭಗವಂತನನ್ನೇ ನೆನೆನೆನೆದು ಆರ್ದ್ರವಾದ ಹೃದಯವಾಗುವಂತಾದಲ್ಲಿ ಅದು ಸರ್ವ-ಪಾಪ-ಹರವೇ.

ದೇವತೆಗಳೇ ಪಿತೃಗಳೇ – ಎಂದು ಅವರನ್ನು ಸಂಬೋಧಿಸುವುದು ಸಹಜ; ಆದರೆ, ಓ ಸ್ನಾನವೇ! ಓ ಸಂಧ್ಯಾ-ವಂದನೆಯೇ! – ಎಂದು ಅಮೂರ್ತವಾದವನ್ನೂ ಯಾರಾದರೂ ಸಂಬೋಧಿಸುವರೇ? ಆದರೆ ಧ್ಯಾನದತ್ತ ಒಳಸೆಳೆತವು ಉತ್ಕಟವಾದಾಗ ಅವಕ್ಕೂ ನಮಸ್ಕಾರ ಹೇಳಿ ಅವನ್ನು ಉಪೇಕ್ಷಿಸುವುದಾಗುವುದು. ಈ ಶ್ಲೋಕದಲ್ಲಿಯ ಯುಕ್ತಿಯನ್ನು ಯಾರೂ ತಮ್ಮ ಮೈಗಳ್ಳತನಕ್ಕೆ ಬಳಸಿಕೊಳ್ಳಬಾರದಷ್ಟೆ!

ಸಂಧ್ಯಾ-ವಂದನ! ಭದ್ರಮಸ್ತು ಭವತೇ, ಭೋಃ ಸ್ನಾನ! ತುಭ್ಯಂ ನಮೋ/
ಭೋ ದೇವಾಃ ಪಿತರಶ್ಚ ತರ್ಪಣ-ವಿಧೌ ನಾಹಂ ಕ್ಷಮಃ ಕ್ಷಮ್ಯತಾಮ್ |
ಯತ್ರ ಕ್ವಾಪಿ ನಿಷೀದ್ಯ ಯಾದವ-ಕುಲೋತ್ತಂಸಸ್ಯ ಕಂಸ-ದ್ವಿಷಃ/
ಸ್ಮಾರಂ ಸ್ಮಾರಂ ಅಘಮ್ ಹರಾಮಿ ತದಲಂ ಮನ್ಯೇ, ಕಿಮ್ ಅನ್ಯೇನ ಮೇ? ||

ಸೂಚನೆ : 8/2/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.