Monday, April 27, 2026

ಪ್ರಶ್ನೋತ್ತರ ರತ್ನಮಾಲಿಕೆ 63 (Prasnottara Ratnamalike 63)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೬೩. ಈ ಜಗತ್ತು ಯಾರ ವಶದಲ್ಲಿದೆ?

ಧರ್ಮದಲ್ಲಿ ಪ್ರೀತಿ ಮತ್ತು ಪ್ರಿಯವೂ ಹಿತವೂ ಆದ ಮಾತನ್ನು ಆಡುವವನ.


ಈ ಪ್ರಶ್ನೆಯನ್ನು ಕೇಳಿದ ಆ ಕ್ಷಣದಲ್ಲಿ ಅನೇಕ ಉತ್ತರಗಳು ತಮ್ಮ ಮನಸ್ಸಿನಲ್ಲಿ ಗೋಚರವಾಗುತ್ತವೆ. ಈ ಜಗತ್ತು ಭಗವಂತನ ವಶದಲ್ಲಿ ಇದೆ. ಅಥವಾ ಈ ಜಗತ್ತು ಮಾನವನ ವಶದಲ್ಲಿ ಇದೆ. ಅಥವಾ ಈ ಜಗತ್ತು ಒಬ್ಬ ಪರಾಕ್ರಮಿ ಆದ ರಾಜನ ವಶದಲ್ಲಿದೆ ಎಂಬುದಾಗಿ. ಆದರೆ ಇಲ್ಲಿ ಹೇಳುವ ಉತ್ತರ ಇದಾವುದೂ ಅಲ್ಲ. ಏಕೆಂದರೆ ಈ ಜಗತ್ತು ಇವರಾರಿಂದಲೂ ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯವಾದುದಲ್ಲ. ಅಂದರೆ ಒಬ್ಬ ಪರಾಕ್ರಮಿ, ಬಲಾಢ್ಯನಾಗಿರುವಂತಹ ವ್ಯಕ್ತಿ ಜಗತ್ತನ್ನು ವಶದಲ್ಲಿ ಇಟ್ಟುಕೊಳ್ಳಲು ಅಸಾಧ್ಯ. ಆದರೆ ಭಗವಂತ ಅಂದರೆ ಈ ಪ್ರಪಂಚದ ಮೂಲ ಶಕ್ತಿ. ಇದು ತಾನೇ ತನ್ನ ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯ? ಎಂಬುದಾಗಿ ಅನ್ನಿಸಬಹುದು. ಹೌದು. ಒಂದರ್ಥದಲ್ಲಿ ಇದು ಉತ್ತರವಾಗಿ ಅನ್ನಿಸಲು ಅವಕಾಶ ಇದೆ. ಭಗವಂತನ ಮೂರು ಚೈತನ್ಯಗಳು ಬ್ರಹ್ಮ, ವಿಷ್ಣು, ಮಹೇಶ್ವರ. ಇವರಿಂದ ಸೃಷ್ಟಿ, ಸ್ಥಿತಿ ಮತ್ತು ಲಯವೆಂಬ ಮೂರು ವ್ಯಾಪಾರಗಳು ನಡೆಯುತ್ತವೆ. ಇವರೇ ಈ ಸೃಷ್ಟಿಯ ನಿಯಾಮಕರು ಎಂಬುದಾಗಿ ತಿಳಿಯಬಹುದು. ಆದರೆ ಇಲ್ಲಿ ಬರುವ ಉತ್ತರ ಇವೆಲ್ಲಕ್ಕೂ ಮೂಲವಾದದ್ದು. ಹಾಗಾದರೆ ಈ ಉತ್ತರ ಅದು ಹೇಗೆ ಸಮರ್ಪಕ? ಅಂದರೆ ಧರ್ಮದಲ್ಲಿ ಪ್ರೀತಿ ಇದ್ದು, ಅದನ್ನು ಮಾತಿನಲ್ಲಿ ಆಡುವವನು ಈ ಜಗತ್ತನ್ನು ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂಬ ಉತ್ತರ.


 ಒಂದು ಮಾತು ಪ್ರಿಯವಾದದ್ದಾಗಿ ಇದ್ದು, ಆ ಮಾತು ಧರ್ಮದಿಂದ ಕೂಡಿದ್ದು, ಧರ್ಮದಲ್ಲಿ ಪ್ರೀತಿ ಉಳ್ಳದ್ದಾಗಿ ಆಗಿದ್ದರೆ, ಅಂತಹ ಮಾತು ಈ ಜಗತ್ತನ್ನು ವಶದಲ್ಲಿ ಇಟ್ಟುಕೊಳ್ಳಬಹುದು ಎಂಬ ಮಾರ್ಮಿಕವಾದ ಉತ್ತರವನ್ನು ಇಲ್ಲಿ ನೀಡಲಾಗಿದೆ. ಅಂದರೆ ಮಾತಿಗೆ ಅದೆಷ್ಟು ಸಾಮರ್ಥ್ಯವಿದೆ! ಎಂದು ಅರ್ಥ. ಮಾತಿಗೆ ಸಾಮರ್ಥ್ಯ ಬರುವುದಕ್ಕೆ ಕಾರಣ ಧರ್ಮವೇ ಆಗಿದೆ. ಹಾಗಾದರೆ ಧರ್ಮದಿಂದ ಮಾತಿಗೆ ಸಾಮರ್ಥ್ಯ ಹೇಗೆ ಬಂತು? ಧರ್ಮ ಎಂದರೇನು? ಶ್ರೀರಂಗ ಮಹಾಗುರುಗಳು ಹೇಳಿದಂತೆ ಈ ಜಗತ್ತನ್ನು ಧರಿಸಿರುವುದೇ ಧರ್ಮ. ಅದು ಒಂದು ಚೈತನ್ಯಶಕ್ತಿ ಆಗಿರಬಹುದು ಅಥವಾ ಆ ಚೈತನ್ಯಶಕ್ತಿಯಿಂದ ವಿಸ್ತರಗೊಂಡ ಅನೇಕ ಚೇತನ್ಯಶಕ್ತಿಗಳಿರಬಹುದು. ಅವೆಲ್ಲವೂ ಧರ್ಮವೇ. ಈ ಶಕ್ತಿಯನ್ನು ಅಂತೆಯೇ ಉಳಿಸುವುದಕ್ಕೆ ಬೇಕಾದ ಯಾವೆಲ್ಲ ಕ್ರಿಯಾ ಕಲಾಪಗಳಿವೆಯೋ ಅವೆಲ್ಲವನ್ನೂ ಧರ್ಮವೆಂದು ಕರೆಯಬಹುದು ಎಂದು. ಮಾತು ಕೂಡ ಧರ್ಮದಿಂದಲೇ, ಧರ್ಮದ ಮೂಲದಿಂದಲೇ ವಿಕಾಸಗೊಂಡದ್ದು. ಮಾತು ಧರ್ಮವನ್ನು ಉಳಿಸುತ್ತದೆ. ಒಂದು ವೇಳೆ ಮಾತು ಸರಿಯಾಗಿಲ್ಲದಿದ್ದರೆ ಧರ್ಮವನ್ನು ಹಾಳು ಮಾಡುತ್ತದೆ. ಅದಕ್ಕೆ ಒಂದು ಸುಭಾಷಿತವು ಹೀಗೆ ಹೇಳುತ್ತದೆ - ಯಾವ ರೀತಿಯಾದ ಮಾತನ್ನು ಹೇಳಬೇಕು? ಎಂದು. ಸತ್ಯವಾದದ್ದನ್ನು ಪ್ರಿಯವಾದದ್ದನ್ನು ಹೇಳಬೇಕು. ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವಾಗುತ್ತದೆಂದು ಸುಳ್ಳನ್ನು ಹೇಳಬಾರದು ಎಂದು. ಇಂತಹ ಮಾತು ಧರ್ಮವನ್ನು ಉಳಿಸುತ್ತದೆ. ಹೇಗೆ ಆಡಿದರೆ ಅದು ಧರ್ಮವನ್ನು ಉಳಿಸುತ್ತದೆ ಎಂಬುದನ್ನು ಅರಿತು ಮಾತನಾಡಬೇಕು. ಹೀಗೆ ಮಾತನಾಡುವ ಒಬ್ಬ ವ್ಯಕ್ತಿ ಧರ್ಮವನ್ನು ಕಾಪಾಡಬಲ್ಲ. ತನ್ಮೂಲಕ ಜಗಚ್ಛಕ್ತಿಯಾದ ಈ ಚೈತನ್ಯವನ್ನು ಈ ಮಾತಿನ ಮೂಲಕ ಬಲಗೊಳಿಸಬಲ್ಲ. ಹಾಗಾಗಿ ಇಂತಹ ಮಾತಿಗೆ ಜಗತ್ತನ್ನು ಆಳುವ, ವಶದಲ್ಲಿ ಇಟ್ಟುಕೊಳ್ಳುವ ಅದ್ಭುತ ಸಾಮರ್ಥ್ಯವಿದೆ ಎಂಬ ವಿಶಿಷ್ಟವಾದ ಪರಿಕಲ್ಪನೆಯ ಉತ್ತರ ಇಲ್ಲಿದೆ.


ಸೂಚನೆ : 26/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.



ವ್ಯಾಸ ವೀಕ್ಷಿತ 185 ಭೀಮನಿಂದಾದ ಜರಾಸಂಧ-ವಧೆ (Vyaasa Vikshita 185)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png

ಆಗ ಶ್ರೀಕೃಷ್ಣನು ಜರಾಸಂಧವಧೆಯು ಬೇಗನೆ ಆಗಲೆಂದು ಬಯಸಿ, ತ್ವರೆಪಡಿಸುತ್ತಾ ಭೀಮನಿಗೆ ಹೇಳಿದನು:

“ಭೀಮನೇ, ಯಾವ ಪರದೈವದ ಸತ್ತ್ವವು ನಿನ್ನಲ್ಲುಂಟೋ, ಹಾಗೆಯೇ ವಾಯುದೇವನ ಸತ್ತ್ವವೆಂಬುದು ಯಾವುದು ನಿನ್ನಲ್ಲುಂಟೋ, ಅದನ್ನೀಗ ನಮಗೆ ನೀನು ಬೇಗನೆ ತೋರಿಸು. ನಿನ್ನಿಂದಲ್ಲದೆ ಮತ್ತಾರಿಂದಲೂ ಈತನಿಗೆ ಸಾವಿಲ್ಲ. ವಾಯುವನ್ನು ಸ್ಮರಿಸಿ, ಈ ಮಗಧರಾಜನನ್ನು ಕೊಲ್ಲು."

ಕೃಷ್ಣನು ಹೀಗೆ ಹೇಳಲು, ಅರಿಂದಮನಾದ, ಎಂದರೆ ಶತ್ರುಗಳನ್ನು ದಮನಮಾಡುವ, ಭೀಮಸೇನನು ಜರಾಸಂಧನನ್ನು ಮೇಲಕ್ಕೆತ್ತಿ ತಿರುಗಿಸಿದನು. ಆಗ ಕೃಷ್ಣನು, ಜರಾಸಂಧ-ವಧೆಯು ಬೇಗನೆ ನೆರವೇರಲೆಂದು, ಭೀಮಸೇನನತ್ತ ನೋಡುತ್ತಾ ಹುಲ್ಲುಕಡ್ಡಿಯೊಂದನ್ನು ಮುರಿದನು. ಅದಕ್ಕೆ ಸರಿಯಾಗಿ ಭೀಮನು ನೂರುಬಾರಿ ಜರಾಸಂಧನನ್ನು ತಿರುಗಿಸಿ, ಆತನ ಬೆನ್ನನ್ನು ಹಿಸುಕಿ ಮುದ್ದೆ ಮಾಡಿ, ತನ್ನ ಮಂಡಿಗಳ ಮೇಲೆ ಅಪ್ಪಳಿಸಿ, ಆತನ ಬೆನ್ನನ್ನು ಮುರಿದನು, ಹಾಗೂ ಗರ್ಜಿಸಿದನು. ಆತನೊಂದು ಕಾಲನ್ನು ಹಿಡಿದುಕೊಂಡು ಮತ್ತೊಂದನ್ನು ಮೆಟ್ಟಿ ಶರೀರವನ್ನು ಇಬ್ಭಾಗವಾಗಿಸಿದನು.

ಆಗ ಜರಾಸಂಧನ ಆ ಶರೀರಭಾಗಗಳೆರಡು ಮತ್ತೆ ಸೇರಿಕೊಂಡವು, ಹಾಗೂ ಜರಾಸಂಧನು ಮತ್ತೆ ಬಾಹುಯುದ್ಧಕ್ಕೆ ಆರಂಭಮಾಡಿಕೊಂಡನು. ಈಗ ಯುದ್ಧವು ತುಮುಲವೂ ರೋಮಹರ್ಷಣವೂ ಆಗಿದ್ದಿತು. ಅದು ಸರ್ವಲೋಕ-ಕ್ಷಯಕರವೂ ಸರ್ವಜೀವಗಳಿಗೂ ಭಯಾವಹವೂ ಆಗಿತ್ತು.

ಮತ್ತೆ ಕೃಷ್ಣನು ಆ ಕಡ್ಡಿಯನ್ನು ಮುರಿದು ವ್ಯತ್ಯಸ್ತಮಾಡಿ ಬಿಸುಟನು. ಅದರ ಅರ್ಥವನ್ನು ಅರಿತುಕೊಂಡ ಭೀಮಸೇನನು ಜರಾಸಂಧನನ್ನು ಸೀಳಿ, ಶರೀರದ ಆ ಎರಡು ಭಾಗಗಳನ್ನು ಕಾಲಿನಿಂದ ವ್ಯತ್ಯಾಸಮಾಡಿ ಒದ್ದೆಸೆದನು.

ಹಾಗೂ ಗಟ್ಟಿಯಾಗಿ ಗರ್ಜಿಸಿದನು. ಜರಾಸಂಧನು ಆಗ ಶವರೂಪವಾದನು. ಆತನ ಮಾಂಸವೊಣಗಿತು, ಮೂಳೆ ಮುರಿಯಿತು, ಚರ್ಮ ಹರಿಯಿತು, ಮಸ್ತಿಷ್ಕವು ಮುದ್ದೆಯಾಯಿತು. ಆಗ ಜರಾಸಂಧನು ಪಿಂಡೀಭೂತನಾಗಿ ಕಂಡನು.

ಭೀಕರವಾಗಿ ಗರ್ಜಿಸುತ್ತಾ ಭೀಮನು ಜರಾಸಂಧನನ್ನು ಜಜ್ಜಿ ಬಜ್ಜಿ ಮಾಡುತ್ತಿರಲು ಉಂಟಾದ ನಾದವು ತುಮುಲವಾಗಿತ್ತು. ಎಲ್ಲ ಪ್ರಾಣಿಗಳಿಗೂ ಭಯಂಕರವಾಗಿತ್ತು. ಮಗಧದೇಶದ ಪ್ರಜೆಗಳು ಬಹುವಾಗಿಯೇ ತ್ರಾಸಗೊಂಡರು. ಗರ್ಭಿಣಿಯರಿಗೆ ಗರ್ಭಸ್ರಾವವಾಯಿತು. ಏಕೆಂದರೆ ಭೀಮಸೇನ-ಜರಾಸಂಧರ ಗರ್ಜನ-ನಾದಗಳು ಹಾಗಿದ್ದವು.

“ಇದೇನು ಹಿಮಾಲಯವೇ ಒಡೆದುಹೋಯಿತೇ? ಅಥವಾ ಭೂಮಿಯೇ ಸೀಳುತ್ತಿದೆಯೇ?” - ಹೀಗೆಲ್ಲ ಮಾಗಧರು ಯೋಚನೆ ಮಾಡಹತ್ತಿದರು.

ನಿದ್ದೆ ಮಾಡುತ್ತಿರುವಂತೆ ಬಿದ್ದಿದ್ದ ಆ ಸತ್ತ ರಾಜನನ್ನು ಆ ರಾಜದ್ವಾರದಲ್ಲಿಯೇ ಬಿಟ್ಟವರಾಗಿ, ಆ ಮೂರೂ ವೀರರು ಆ ರಾತ್ರಿಯಲ್ಲೇ ಹೊರಹೊರಟರು. ಪತಾಕೆಯಿಂದ ಮಂಡಿತವಾದ ಜರಾಸಂಧ-ರಥವನ್ನೇ ಶ್ರೀಕೃಷ್ಣನು ಸಿದ್ಧಪಡಿಸಿಕೊಂಡನು; ಭ್ರಾತೃಗಳಿಬ್ಬರನ್ನೂ, ಎಂದರೆ ಭೀಮಾರ್ಜುನರನ್ನು, ರಥಕ್ಕೆ ಹತ್ತಿಸಿಕೊಂಡನು. ತಾನೇ ಸಾರಥಿಯಾದನು.

ಅಲ್ಲಿಂದ ಹೊರಹೊರಟು, ಸೆರೆಯಾಗಿದ್ದ ತನ್ನೆಲ್ಲ ಬಂಧುಗಳನ್ನು ಮೊದಲು ಸೆರೆಯಿಂದ ಬಿಡಿಸಿದನು. ರತ್ನಗಳಿಗೆ ಅರ್ಹರೆನಿಸಿದ್ದ ಆ ರಾಜರುಗಳು, ಜರಾಸಂಧನೆಂಬ ಮಹತ್ತಾದ ಭಯದಿಂದ ಬಿಡುಗಡೆ ಪಡೆದವರಾಗಿ, ಶ್ರೀಕೃಷ್ಣನಿಗೆ ತಮ್ಮ ರತ್ನಗಳನ್ನೇ ಸಮರ್ಪಿಸಿದರು.

ಕೃಷ್ಣನಿಗಂತೂ ಯಾವ ಗಾಯವೂ ಆಗಿರಲಿಲ್ಲ. ಅವನ ಬಳಿ ಶಸ್ತ್ರಗಳೆಲ್ಲವೂ ಇದ್ದವು. ಶತ್ರುವನ್ನಂತೂ ಗೆದ್ದಾಯಿತು. ಈಗ ಆ ರಾಜರುಗಳೊಂದಿಗೆ ಆತನು ಆ ದಿವ್ಯರಥವನ್ನೇರಿ ಗಿರಿವ್ರಜದಿಂದ ಹೊರಹೊರಟನು.

ಆ ರಥದ ಹೆಸರೇ ಸೋದರ್ಯವಾನ್ ಎಂಬುದಾಗಿ. ಅದರಲ್ಲೀಗ ಇಬ್ಬರು ಯೋಧರು, ಎಂದರೆ ಭೀಮಾರ್ಜುನರು, ಕುಳಿತಿದ್ದರು. ಕೃಷ್ಣನೇ ಸಾರಥಿ. ಅನೇಕ ಬಾರಿ ಶತ್ರುಗಳಿಂದ ಆಘಾತಗಳನ್ನು ಎದುರಿಸಿದರೂ ಅದು ಮತ್ತೆ ಮತ್ತೆ ನೋಡಬೇಕೆನ್ನುವಂತೆಯೇ ಇತ್ತು. 

ಸೂಚನೆ : 26/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಶ್ವೇತಕೇತುವಿಗೆ ಉದ್ಧಾಲಕನ ಪರಮೋಪದೇಶ (Svetaketuvige Uddhalakana Paramopadesha)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)

image.png


ಆರುಣಿ-ಉದ್ಧಾಲಕನಾದುದುಆರುಣಿ ಧೌಮ್ಯ ಮಹರ್ಷಿಗಳ ಶಿಷ್ಯರು. ಗುರುನಿಷ್ಠೆ ಅವರ ಉಸಿರು. ಗುರುಗಳು ಹೇಳಿದ್ದನ್ನು ಅನೂಚಾನವಾಗಿ ಪಾಲಿಸುವುದು ಜೀವನವ್ರತವಾಗಿ ಇಟ್ಟುಕೊಂಡವರು. ಒಮ್ಮೆ ಗುರುಗಳಿಂದ ಆಜ್ಞಾಪಿತರಾಗಿ, ಒಡೆದು ಹೋಗಿದ್ದ ಗದ್ದೆಯ ಬದುವನ್ನು ಕಟ್ಟಲು ಹೋದರು. ಕಲ್ಲಿಟ್ಟರು. ಮಣ್ಣಿನ ಗೋಡೆ ಮಾಡಲು ಪ್ರಯತ್ನಿಸಿದರು. ಏನು ಮಾಡಿದರೂ ಪ್ರವಾಹ ನಿಲ್ಲದಾಯಿತು. ಗುರುಗಳ ಆಜ್ಞೆ ಸರ್ವ ಪ್ರಕಾರದಿಂದಲೂ ನಡೆಸಬೇಕಾಗಿದೆ. ಕಡೆಯಲ್ಲಿ ತಾವೇ ಆ ಪ್ರವಾಹಕ್ಕೆ ಅಡ್ಡಲಾಗಿ ಇಡೀ ರಾತ್ರಿ ಮಲಗಿ ಪ್ರವಾಹಕ್ಕೆ ತಡೆ ಒಡ್ಡಿದರು. ಧೌಮ್ಯರು ಶಿಷ್ಯನನ್ನು ಹುಡುಕಿಕೊಂಡು ಬಂದರು. ನೋಡಿದರೆ ಮೈಎಲ್ಲಾ ಕೆಸರು. ಸರಿ ಆರುಣಿ ನಡೆದುದೆಲ್ಲವನ್ನು ಗುರುಗಳಿಗೆ ಹೇಳಿದರು. ಎಂತಹ ಗುರುನಿಷ್ಠೆ ! ಧೌಮ್ಯರ ಹೃದಯ ತುಂಬಿಬಂತು. ಜ್ಞಾನಿಗಳು ಅವರು. ದಯಾಮಯರು ಕೂಡ. ಶಿಷ್ಯನಿಗೆ ಉದ್ಧಾಲಕ ಎಂದು ಹೆಸರಿಟ್ಟರು. ಬದುವಿನಿಂದ ಎದ್ದುಬಂದವನು ಎಂಬುದಾಗಿ ಅವನ ಗುರುನಿಷ್ಠೆಯನ್ನು ಸದಾ ನೆನಪಿಸುವ ಹೆಸರು. ಅಷ್ಟೇ ಅಲ್ಲದೇ ತಮ್ಮ ಸಂಕಲ್ಪಮಾತ್ರದಿಂದ ಸಕಲ ವೇದ ಶಾಸ್ತ್ರಗಳ ಸಾರವೂ ಅವನ ಬುದ್ಧಿಯಲ್ಲಿ ಸ್ಫುರಿಸುವಂತೆ ಅನುಗ್ರಹಿಸಿದರು. ಉದ್ಧಾಲಕರೂ ತಮ್ಮ ಗುರುನಿಷ್ಠೆ ತಪಸ್ಸುಗಳಿಂದ,ಗುರುವಿನ ಪರಮಾನುಗ್ರಹದಿಂದ ಜ್ಞಾನಿಗಳಾದರು.

ವಿದ್ಯೆಯ ಉದ್ದೇಶ ಏನಿರಬೇಕು? ಅವರಿಗೊಬ್ಬ ಮಗ. ಶ್ವೇತಕೇತು. ಅವನು ಹನ್ನೆರಡು ವರ್ಷ ವಯಸ್ಸಾದರೂ ಮನೆಯ ಸಲಿಗೆಯಿಂದ ಉಂಡು, ತಿಂದು ಓಡಾಡಿಕೊಂಡಿದ್ದ. ಉದ್ಧಾಲಕರು ಅವನಿಗೆ ಗುರುಕುಲಕ್ಕೆ ಹೋಗಿ ವೇದ ವೇದಾಂಗಗಳನ್ನೂ, ಜೀವನ ಪದ್ಧತಿಗಳನ್ನೂ ಅಧ್ಯಯನ ಮಾಡಿಬರುವಂತೆ ಹೇಳಿದರು. ಶ್ವೇತಕೇತು ಬಹಳ ದೀರ್ಘಕಾಲ ಗುರುಕುಲದಲ್ಲಿದ್ದು ವೇದ ಶಾಸ್ತ್ರಗಳನ್ನೆಲ್ಲ ಅಧ್ಯಯನ ಮಾಡಿದ. ತಾನು ಕಲಿಯಬೇಕಾದುದು ಇನ್ನು ಏನೂ ಉಳಿದಿಲ್ಲ. ತನಗೆ ಎಲ್ಲವೂ ಗೊತ್ತಿದೆ. ತಾನು ಇನ್ನು ಯಾರಿಗೂ ತಲೆಬಾಗಬೇಕಿಲ್ಲ ಎಂಬ ಅಭಿಮಾನದಿಂದ ಮನೆಗೆ ಬಂದ. ಉದ್ಧಾಲಕರು ಜ್ಞಾನಿಗಳಲ್ಲವೇ.. ಮಗನನ್ನು ಗಮನಿಸಿದರು. ವಿದ್ಯಾ ದದಾತಿ ವಿನಯಂ .. ಇರಬೇಕಿತ್ತು. ಆದರೆ ಇವನಲ್ಲಿ ಅದು ಕಾಣಲಿಲ್ಲ. ಕೇಳಿದರು- ಏನನ್ನು ಕಲಿತೆ ಎಂದು. ಪೂರ್ಣ ಸಿಲಬಸ್ ಹೇಳಿದ. ಉದ್ಧಾಲಕರು –ಯಾವುದನ್ನು ತಿಳಿದರೆ ಇನ್ನೇನನ್ನೂ ತಿಳಿಯಬೇಕಿಲ್ಲವೋ, ಯಾವುದು ಎಲ್ಲದಕ್ಕೂ ಆಧಾರವಾಗಿದೆಯೋ ಅದನ್ನು ಕಲಿತಿದ್ದೀಯಾ? ಎಂದರು. ಶ್ವೇತಕೇತುವಿಗೆ ಅರ್ಥವಾಗಲಿಲ್ಲ. ಅಂತಹ ವಸ್ತು ಯಾವುದು ? ತಾವೇ ತಿಳಿಸಬೇಕು ಎಂದ.

 ಉದ್ಧಾಲಕರು ಮಗನಿಗೆ ಪ್ರೀತಿಯಿಂದ ವಿಧ ವಿಧವಾದ ಸರಳ ಉದಾಹರಣೆಗಳಿಂದ ಆತ್ಮ ತತ್ತ್ವವನ್ನು ಉಪದೇಶಿಸುತ್ತಾರೆ.

ಗಂಗೆ-ಯಮುನೆಯರು ಸಾಗರ ಸೇರಿದಂತೆ: ಗಂಗಾದಿ ನದಿಗಳು ಹರಿಯುವಾಗ ಅದಕ್ಕೆ ನಾಮ ರೂಪಗಳು ಇರುತ್ತವೆ. ಆದರೆ ಸಾಗರ ಸೇರಿದಾಗ ಅದು ಸಾಗರವೇ ಆಗುತ್ತದೆ. ಅಲ್ಲಿ ಗಂಗೆ ಎಂಬ ಹೆಸರಿಲ್ಲ. ಹೇಗೆ ಸಮುದ್ರ ಸೇರಿದಮೇಲೆ, ನಾನು ಗಂಗೆ, ಯಮುನೆ ಎಂಬ ವ್ಯವಹಾರವಿಲ್ಲವೋ ಹಾಗೆಯೇ ಸದ್ವಸ್ತುವಿನಿಂದ ವಿಕಾಸವಾದ ಚೇತನರು ಅಂದರೆ ನಾವು ಮತ್ತೆ ಅಲ್ಲಿಗೆ ಸೇರಿದಾಗ ನಮ್ಮ ನಾಮ ರೂಪಗಳನ್ನು ಹೇಳಲಾರೆವು. ಅಲ್ಲಿಂದ ಬಂದೆವೆಂಬುದೂ ನಮ್ಮ ಅರಿವಿಗೆ ಬಾರದು, ಅಲ್ಲಿ ಲಯವಾದುದೂ ಅರಿವಿಗೆ ಬಾರದು. ಆದರೆ ಎಲ್ಲಕ್ಕೂ ಆ ಸದ್ವಸ್ತುವೇ ಆತ್ಮಾ. ಅದೇ ನೀನೂ ಆಗಿದ್ದೀ ಎನ್ನುತ್ತಾರೆ.

ವೃಕ್ಷದ ಆರಂಭ,ಮಧ್ಯ, ಅಂತ್ಯದಲ್ಲಿ ಯಾವ ರಸ ಹರಿಯುತ್ತಿದೆ? ಒಂದು ಮರವನ್ನು ಆರಂಭದಲ್ಲಿ, ಮಧ್ಯದಲ್ಲಿ ಅಂತ್ಯದಲ್ಲಿ ಕೆತ್ತಿದರೂ ರಸವನ್ನು ಸ್ರವಿಸುತ್ತದೆ. ಅದರೊಳಗೆ ಆ ಚೇತನ ಇರುವುದರಿಂದಲೇ ಹೀಗಾಗುತ್ತದೆ. ಆ ಚೇತನ ತನ್ನನ್ನು ಹಿಂತೆಗೆದುಕೊಂಡರೆ ಆ ಕೊಂಬೆ ಒಣಗುತ್ತದೆ. ಮರಣವೆಂಬುದೂ ಹೀಗೇ. ಜೀವನು ಶರೀರವನ್ನು ಬಿಡುವಾಗ ಆಗುವಂತಹದು. ಜೀವನಂತೂ ನಾಶವಾಗುವುದಿಲ್ಲ. ಎಂದೇ ಆತ್ಮ ವಸ್ತುವೇ ಎಲ್ಲದರ ಇರುವಿಕೆಗೆ ಕಾರಣ, ನಿನ್ನೊಳಗೂ ಅದೇ ಇರುವುದು. ನೀನು ಅದೇ ಆಗಿದ್ದೀ ಎನ್ನುತ್ತಾರೆ.

ಆಲದ ಬೀಜದಲ್ಲಿ ಆಲದ ಮರವೇ?  ಉದ್ಧಾಲಕರು ಶ್ವೇತಕೇತುವಿಗೆ ಒಂದು ಆಲದ ಹಣ್ಣನ್ನು ತರಲು ಹೇಳುತ್ತಾರೆ. ತರುತ್ತಾನೆ. ಅದನ್ನು ತುಂಡುಮಾಡಲು ಹೇಳುತ್ತಾರೆ. ಅದರಲ್ಲಿ ಏನಿದೆ ಎನ್ನುತ್ತಾರೆ. ಬೀಜವಿದೆ ಎನ್ನುತ್ತಾನೆ.ಬೀಜವನ್ನು ಒಡೆಯಲು ಹೇಳುತ್ತಾರೆ. ಅದರಲ್ಲಿ ಏನು ಕಾಣಿಸಿತು ಎಂದು ಕೇಳುತ್ತಾರೆ. ಏನೂ ಇಲ್ಲವೆನ್ನುತ್ತಾನೆ. ಆಗ ಅವರು ಹೇಳುತ್ತಾರೆ. ಏನೂ ಕಾಣದ ಈ ಸೂಕ್ಷ್ಮವಾದ ಬೀಜದಲ್ಲಿ ದೊಡ್ಡ ಆಲದ ಮರವೇ ಇದೆ. ಕಾರ್ಯರೂಪದಲ್ಲಿ ಎದ್ದುನಿಂತಿದೆ. ಹಾಗೆಯೇ ಚರಾಚರ ರೂಪವಾದ ಸೃಷ್ಟಿ .ಎಲ್ಲದಕ್ಕೂ ಕಾರಣವಾಗಿ ಆ ಸದ್ವಸ್ತು ಇದೆ. ಅದು ನಿನ್ನಲ್ಲೂ ಇದೆ. ನೀನು ಅದೇ ಆಗಿದ್ದೀ ಎಂದು ಘೋಷಿಸುತ್ತಾರೆ.

ಶ್ರೀರಂಗವಾಣಿ : “ ಒಂದು ಉಗುರುಕಣ್ಣಿನಲ್ಲಿ ಅಡಗಬಹುದಾದ ಆಲದ ಬೀಜವು ತನ್ನನ್ನು ತಾನು ಬೆಳೆಸಿಕೊಂಡು ಮತ್ತೆ ಬೀಜರೂಪದಲ್ಲಿಯೇಇರುವುದಕ್ಕೆ ಇಷ್ಟಪಟ್ಟು ಉಪಸಂಹರಿಸಿಕೊಳ್ಳುತ್ತದೆ.ಅಂತೆಯೇ ಈ ಜೀವನ ವೃಕ್ಷವೂ ಆಗಿದೆ” ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ.

ಉಪ್ಪು ಹೋದುದು ಎಲ್ಲಿಗೆ? ಮುಂದೆ ಒಂದು ಉಪ್ಪಿನ ಕಲ್ಲನ್ನು ರಾತ್ರಿ ನೀರಿನ ಪಾತ್ರೆಯಲ್ಲಿ ಹಾಕಿ ಬೆಳಿಗ್ಗೆ ತರಲು ಹೇಳಿದರು. ಉಪ್ಪಿನ ಕಲ್ಲು ಶ್ವೇತಕೇತುವಿಗೆ ಸಿಗಲಿಲ್ಲ. ಆಗ ಉಪ್ಪು ಎಲ್ಲಿ ಹೋಯಿತು? ನೀರನ್ನು ಮೇಲಿಂದ ಮಧ್ಯದಿಂದ, ತಳದಿಂದ ಸೇವಿಸಲು ಹೇಳಿದರು. ಎಲ್ಲೆಡೆಯಲ್ಲೂ ಉಪ್ಪು. ಕಣ್ಣಿಂದ ಕಾಣಲಾಗದಿದ್ದರೂ ಉಪ್ಪು ಇರುವುದು ನಿಜ. “ಹಾಗೆಯೇ ಎಲ್ಲೆಲ್ಲೂ ವ್ಯಾಪಿಸಿರುವ ಪರಬ್ರಹ್ಮನು ಬರಿ ಕಣ್ಣಿಂದ ನೋಡಲಾಗದಿದ್ದಾರೂ ಅವನೇ ಎಲ್ಲೆಲ್ಲೂ ಇರುವನು. ನಿನ್ನಲ್ಲೂ . ಅದೇ ನೀನಾಗಿದ್ದೀ”. ಹೀಗೆ ಪರಮ ಸತ್ಯದ ಅರಿವನ್ನು ಶ್ವೇತಕೇತುವಿನಲ್ಲಿ ಮೂಡಿಸಿ ಅವನು ಅದರ ಅರಿವಿಗಾಗಿ ತಪಸ್ಸು ಮಾಡುವಂತೆ ಮಾಡಿದರು. ಶ್ವೇತಕೇತುವೂ ಸಹ ತಂದೆಯಂತೆಯೇ ಪರಬ್ರಹ್ಮದ ಅನುಭವವನ್ನು ಪಡೆದು ಜ್ಞಾನಿಯಾದನು. ಇದು ಛಾಂದೋಗ್ಯ ಉಪನಿಷತ್ತಿನಲ್ಲಿ ಬರುವ ಕಥೆ.

ಉಪನಿಷತ್ತುಗಳ ಮಹಾ ಧ್ಯೇಯ ಉಪನಿಷತ್ತುಗಳೆಂದರೆ ಬ್ರಹ್ಮ ವಿದ್ಯೆಯನ್ನು ಅರುಹಲು ಬಂದ ವಿದ್ಯೆ. ಅದಕ್ಕೆ ಬೇಕಾದ ಸಾಧನಾ ಮಾರ್ಗವನ್ನು ಹೇಳುವ ವಿದ್ಯೆ. ಜ್ಞಾನಿಯಾದ ಗುರುವಿನ ಸಮೀಪದಲ್ಲಿ ಕುಳಿತು ಉಪದೇಶವನ್ನು ಪಡೆದು ಜೀವನದ ಸಾರ್ಥಕ್ಯವನ್ನು ಪಡೆಯುವುದೇ ಉಪನಿಷತ್ತುಗಳ ಸಾರ. ಜೀವನದಲ್ಲಿ ಸಾಧನೆ-ಶೋಧನೆ-ಬೋಧನೆ ಮುಖ್ಯವಾಗಿ ಇರಬೇಕೆಂಬ ಸೂತ್ರವ್ರಾಯವಾದ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಅಂತಹ ಗುರು-ಶಿಷ್ಯ ಪರಂಪರೆಯಿಂದ ಬೆಳೆದ ಸಂಸ್ಕೃತಿ ನಮ್ಮದು. ನಾವೆಲ್ಲರೂ ಅಂತಹ ಉಪದೇಶದ ಮರ್ಮವನ್ನು ಅರಿತು ಜೀವನ ಮಾಡುವಂತಾಗಲಿ ಎಂದು ಸರ್ವೆಶ್ವರನನ್ನು ಪ್ರಾರ್ಥಿಸೋಣ.

ಸೂಚನೆ :25/4/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Monday, April 20, 2026

ಪ್ರಶ್ನೋತ್ತರ ರತ್ನಮಾಲಿಕೆ 62 (Prasnottara Ratnamalike 62)

  

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೬೨ - ಕುಲರೂಪವಾದ ಕಮಲಕ್ಕೆ ಸೂರ್ಯನಂತೆ ಅರಳಿಸುವ ಸಾಧನ ಯಾವುದು?

ಉತ್ತರ - ವಿದ್ಯಾ, ದಯಾ ಮೊದಲಾದ ದೈವೀಗುಣಗಳಿದ್ದರೂ ನಮ್ರನಾಗಿರುವುದು.

ಈ ಪ್ರಶ್ನೋತ್ತರದಲ್ಲಿ ‘ವಿನಯ’ ಎಂಬ ಗುಣ ಎಷ್ಟು ಶ್ರೇಷ್ಠವಾದದ್ದು? ಎಂಬ ಬಗ್ಗೆ ಕಾವ್ಯಮಯವಾಗಿ ವಿವರಿಸಲಾಗಿದೆ. ಒಬ್ಬ ವ್ಯಕ್ತಿ ಒಂದು ಉತ್ತಮಕುಲದಲ್ಲಿ ಹುಟ್ಟಿದ್ದಾನೆ; ಆತನ ಕುಲವು ಅತ್ಯಂತ ಶ್ರೇಷ್ಠವಾದದ್ದು; ಅಷ್ಟೇ ಅಲ್ಲ, ಅವನಿಗೆ ವಿದ್ಯೆ, ದಯೆ ಮೊದಲಾದ ಅನೇಕ ಉತ್ತಮ ಗುಣಗಳಿವೆ. ಅಷ್ಟೇ ಅಲ್ಲ ಇನ್ನೂ ಅನೇಕ ದೈವದತ್ತ ಶ್ರೇಷ್ಠ ಗುಣಗಳೂ ಕೂಡ ಇವೆ. ಹೀಗಿದ್ದು ಅವನಲ್ಲಿ ಈ ವಿನಯ ಎಂಬ ಗುಣ ಇಲ್ಲದಿದ್ದರೆ ಅವನಿಗೆ ಯಾವುದೇ ರೀತಿಯ ಗೌರವ - ಮನ್ನಣೆ ಸಿಗುವುದಿಲ್ಲ ಎಂಬುದಾಗಿ ಇಲ್ಲಿ ಕಾವ್ಯಮಯವಾಗಿ ವಿವರಣೆ ಇಲ್ಲಿ ಸಿಗುತ್ತದೆ.

ಕುಲ ಎಂಬುದು ಒಂದು ಕಮಲವಿದ್ದಂತೆ. ಕಮಲವು ಅರಳಬೇಕಾದರೆ ಸೂರ್ಯನ ಕಿರಣ ಅತ್ಯಂತ ಅವಶ್ಯಕ. ಇಲ್ಲಿ ನಾವು ತಿಳಿಯಬೇಕಾದ ವಿಷಯ ಬಹಳ ಇದೆ. ಏಕೆಂದರೆ ಕುಲ, ಕಮಲ ಮತ್ತು ಸೂರ್ಯನ ಕಿರಣ ಇವೆಲ್ಲವೂ ಇವೆ. ಆದರೆ ಇವಕ್ಕೊಂದು ಕಿರೀಟ ಪ್ರಾಯವಾದ ಒಂದು ಬೆಳಗಿಸುವ ಸಾಧನ ಇದ್ದಾಗ ಮಾತ್ರ ಇವೆಲ್ಲಕ್ಕೂ ಸಾರ್ಥಕತೆ ಬರುತ್ತದೆ ಎಂದು. ದಯೆ, ವಿದ್ಯೆ, ಸಂಸ್ಕಾರ ಇವೆಲ್ಲವೂ ಅತ್ಯಂತ ಶ್ರೇಷ್ಠವಾದ ಗುಣಗಳೇ. ಇವು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರಬೇಕಾದವುಗಳೇ. ಆದರೆ ಈ ನಮ್ರತೆ ಅಥವಾ ವಿನಯ ಎಂಬ ಗುಣ ಇಲ್ಲದಿದ್ದರೆ ಈ ಹಿಂದೆ ಹೇಳಿದ ಯಾವ ಗುಣಗಳು ಇದ್ದರೂ ಪ್ರಯೋಜನವಿಲ್ಲ. ಹಾಗಾಗಿ ಇದಕ್ಕೆ ಅಷ್ಟೊಂದು ಬೆಲೆಯನ್ನು ಕೊಡಲಾಗಿದೆ. ಹಾಗಾದರೆ ಇದಕ್ಕೆ ಅಷ್ಟು ಬೆಲೆ ಬರಲು ಕಾರಣ ಏನು? ವಿನಯ ಎಂದರೇನು?

ವಿದ್ಯೆ, ಸಂಸ್ಕಾರ, ದಯಾ ಮೊದಲಾದ ಗುಣಗಳಿಂದ ವ್ಯಕ್ತಿ ಮೇಲಕ್ಕೆ ಏರುತ್ತಾನೆ. ಎಷ್ಟೇ ಮೇಲಕ್ಕೆ ಏರಿದರೂ, ವ್ಯಕ್ತಿತ್ವ ಎಷ್ಟೇ ಬೆಳೆದಿದ್ದರೂ, ವ್ಯಕ್ತಿಶಃ ಚಿಕ್ಕವನು ಎಂಬ ಒಂದು ಅರಿವಿದ್ದಾಗ ಮಾತ್ರ ಈ ಎಲ್ಲಕ್ಕೂ ಬೆಲೆ ಬರುತ್ತದೆ. ಹೀಗೆ ಒಬ್ಬ ಕವಿ ಹೇಳುತ್ತಾನೆ - “ಏರಿದವನು ಚಿಕ್ಕವನಿರಬೇಕಲೇ ಎಂಬ ಮಾತನು ಸಾರುವನು” ಎಂದು. ಎಷ್ಟೇ ಮೇಲೆ ಏರಿದರೂ ಅದು ಶಾಶ್ವತವಲ್ಲ, ಒಂದಲ್ಲ ಒಂದು ಕಾಲದಲ್ಲಿ ಮತ್ತೆ ಕೆಳಗಿಳಿಯಬೇಕಾಗುತ್ತದೆ ಎಂಬ ಯಾವ ಅರಿವಿದೆಯೋ ಅದನ್ನೇ ವಿನಯ ಎಂಬುದಾಗಿ ಕರೆಯಬೇಕು. ವಿನಯ ಎಂದರೆ ಬಾಗುವುದು. ದೊಡ್ಡದಕ್ಕೆ ಗೌರವವನ್ನು ಕೊಡುವುದು. ಅದು ನಮಗೆ ಅರಿವಿಗೆ ಬಾರದಿರುವಾಗ ದಂಭಭಾವ, ಅಹಂಕಾರ ಮೊದಲಾದ ದುಷ್ಟಗುಣಗಳು ಆವಿರ್ಭಾವಗೊಳ್ಳುತ್ತವೆ. ಇವುಗಳು ನಮ್ಮ ಅಧಃಪತನಕ್ಕೆ ಕಾರಣವಾಗುತ್ತವೆ. ಕೆಲವರು ವಿದ್ಯಾವಂತರಾಗಿರುತ್ತಾರೆ, ಆದರೆ ಅವರಲ್ಲಿ ವಿನಯವೆಂಬುದು ಇರುವುದಿಲ್ಲ. ಇನ್ನು ಕೆಲವರು ಅನೇಕ ದೈವದತ್ತ ಗುಣಗಳಿಂದ ಕೂಡಿರುತ್ತಾರೆ. ಆದರೆ ಅದು ಅವರಿಗೆ ತಲೆಗೆ ಹತ್ತಿ ಕೊನೆಗೆ ಈ ಪ್ರಪಂಚವೇ ಕಾಣದಿರುವಷ್ಟು ಅಂಧತೆ ಆವರಿಸುತ್ತದೆ. ಹಾಗಾಗಿ ಈ ವಿನಯ ಎಂಬ ಗುಣವು ಈ ಮೌಢ್ಯವನ್ನು ಅಹಂಕಾರದ ಅಂಧತ್ವವನ್ನು ತೊಲಗಿಸುವ ಒಂದು ದೀಪದಂತೆ ಎಂಬುದಾಗಿ ಇಲ್ಲಿ ವಿವರಿಸಲಾಗಿದೆ. ಕಮಲವು ಶ್ರೇಷ್ಠವಾದದ್ದು, ಹಾಗೇ ಇದ್ದರೆ ಅದು ಅರಳದು. ಅದಕ್ಕೆ ಸೂರ್ಯಕಿರಣ ಬೇಕಷ್ಟೇ. ಒಳ್ಳೆಯ ಹಸು, ಆದರೆ ಹಾಲೇ ಕೊಡದಿದ್ದರೆ ಹೇಗೇ! ಎಂಬಂತೆ ವಿದ್ಯೆ ಮೊದಲಾದ ಗುಣಗಳು ಅತ್ಯಂತ ಶ್ರೇಷ್ಠವಾದವುಗಳೇ ಆದರೂ ಅವುಗಳು ಪ್ರಕಾಶಕ್ಕೆ ಬರಬೇಕಾದರೆ ದೀಪದಂತಿರುವ ವಿನಯ ಎಂಬುದು ಅತ್ಯಂತ ಮುಖ್ಯ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 19/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 184 ಜಟ್ಟಿಗಳಿಬ್ಬರ ದೀರ್ಘಕಾಲಿಕ ಕಾಳಗ (Vyaasa Vikshita 184)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png



ಭೀಮಸೇನನಿಗೂ ಜರಾಸಂಧನಿಗೂ ತೀವ್ರವಾದ ಯುದ್ಧವು ಆರಂಭವಾಯಿತಷ್ಟೆ? ಅವರಿಬ್ಬರ ಜಟ್ಟಿಕಾಳಗ ಅಲ್ಪಕಾಲದಲ್ಲಿ ಮುಗಿಯುವಂತಹುದಲ್ಲ. ಅವರ ಮಲ್ಲಯುದ್ಧವನ್ನು ಸಾಕಷ್ಟು ದೀರ್ಘವಾಗಿಯೇ ವ್ಯಾಸರು ಚಿತ್ರಿಸಿರುವರು.


ಬಾಹುಪಾಶ-ಚರಣಪಾಶಗಳೆಂಬ ಪಟ್ಟುಗಳನ್ನು ಹಾಕಿ ಒಬ್ಬರ ಪಾದದಿಂದ ಮತ್ತೊಬ್ಬರ ಶಿರಸ್ಸಿಗೆ ಹೊಡೆತವಿತ್ತರು. ಉರೋಹಸ್ತ-ಪೂರ್ಣಕುಂಭಗಳೆಂಬ ವರಸೆಗಳಿಂದಾಗಿ ಎದೆಗಳಿಗೆ ಗುದ್ದಿದರು. ಒಬ್ಬರ ಕೈಯನ್ನು ಮತ್ತೊಬ್ಬರು ಹಿಸುಕಿದರು. ಘೀಳಿಡುವ ಗಜಗಳಂತೆ ಅವರು ತೋರಿದರು.


ಬಹುಪ್ರಹಾರಗಳನ್ನು ಪರಸ್ಪರ ಮಾಡುತ್ತಾ ಗುಡುಗುವ ಮೋಡಗಳಂತೆ ಕಂಡರವರು. ಅಂಗೈಯಿಂದ ಒಬ್ಬರಿಗೊಬ್ಬರು ಚಚ್ಚಿದರು. ಸಿಂಹಗಳ ಹಾಗೆ ಒಬ್ಬರನ್ನೊಬ್ಬರು ದಿಟ್ಟಿಸಿ ನೋಡುತ್ತಾ ಒಬ್ಬರನ್ನೊಬ್ಬರು ಎಳೆದಾಡಿ ಎಳೆದಾಡಿ ಕಾದಿದರು. ಒಬ್ಬರ ಅಂಗವನ್ನು ಮತ್ತೊಬ್ಬರು ಮರ್ದಿಸಿದರು. ತೋಳುಗಳಿಂದ ಒಬ್ಬರಿಗೊಬ್ಬರು ಬಾಹುಬಂಧವನ್ನು ಮಾಡಿದರು. ಒಬ್ಬರ ಹೊಟ್ಟೆಯನ್ನು ಮತ್ತೊಬ್ಬರು ತೋಳಿನಿಂದ ಬಳಸಿ ಅತ್ತಿಂದಿತ್ತ ತಳ್ಳಿಹಾಕಿದರು. ಒಬ್ಬರ ಸೊಂಟಕ್ಕೆ ಮತ್ತೊಬ್ಬರು ಕೈಹಾಕಿ ದೂರಕ್ಕೆ ಬಿಸಾಡುತ್ತಿದ್ದರು.


ಒಬ್ಬರ ಕೈಗೆ ಮತ್ತೊಬ್ಬರಿಕ್ಕುತ್ತಾ, ಗರ್ಜಿಸುವ ಗಜಗಳ ಹಾಗೆ ಅವರು ಕಂಡರು. ಬಾಹುಗಳೆಂಬ ಆಯುಧಗಳಿಂದ ಒಬ್ಬರಿಗೊಬ್ಬರು ಘಾತಮಾಡುತ್ತಾ ಘನಗಳ ಹಾಗೆ, ಎಂದರೆ ಮೋಡಗಳ ಹಾಗೆ, ಗುಡುಗಿದರು. ಒಬ್ಬರನ್ನೊಬ್ಬರು ಸೆಳೆದೆಳೆದಾಡುತ್ತಾ ಸಿಂಹಗಳ ಹಾಗೆ ಸೆಣಸಿದರು. ಎಲ್ಲ ಎಲ್ಲೆಗಳನ್ನೂ ಮೀರಿ ಪರಸ್ಪರ ಬಡಿದಾಡಿದರು. ಬಗೆ ಬಗೆಯ ಜಟ್ಟಿಪಟ್ಟುಗಳನ್ನು ಕಟ್ಟಿದರು.


ಅವರಿಬ್ಬರು ಹೀಗೆ ಯುದ್ಧ ಮಾಡುತ್ತಿರಲಾಗಿ, ಪುರವಾಸಿಗಳೆಲ್ಲ ಅಲ್ಲಿ  ನೆರೆದರು. ಬ್ರಾಹ್ಮಣರು, ವೈಶ್ಯರು, ಕ್ಷತ್ರಿಯರು, ಶೂದ್ರರು, ಸ್ತ್ರೀಯರು, ವೃದ್ಧರು - ಇವರುಗಳೆಲ್ಲ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಸುತ್ತುಗಟ್ಟಿದರು. ಅವರಿಬ್ಬರ ಪಾರಸ್ಪರಿಕವಾದ ಆಘಾತಗಳು ಪರ್ವತ-ವಜ್ರಾಯುಧಗಳ ಢಿಕ್ಕಿಗಳಂತೆ ಕಂಡವು. ಹೋರಾಟದಲ್ಲಿ ಇಬ್ಬರಿಗೂ ಖುಷಿಯಿತ್ತು. ಇಬ್ಬರೂ ಬಲಶಾಲಿಗಳಾಗಿದ್ದು, ಒಬ್ಬರಲ್ಲಿಯ ದೋಷವನ್ನು ಬಳಸಿಕೊಳ್ಳಲು ಮತೊಬ್ಬರು ಎಳಸುತ್ತಿದ್ದರು. ಪರಸ್ಪರ ಜಯಾಪೇಕ್ಷೆ ಇಬ್ಬರಿಗೂ ಇದ್ದಿತು.


ಒಬ್ಬರನ್ನೊಬ್ಬರು ಹೊಡೆದಾಡುತ್ತಿರಲಾಗಿ ಅದು ವೃತ್ರ-ವಾಸವರ ಯುದ್ಧದಂತೆ ಕಂಡುಬಂದಿತು. ಅವರ ಪರಸ್ಪರ ಘರ್ಜನ-ತರ್ಜನಗಳು ಅಸಾಧಾರಣವಾಗಿದ್ದವು. ಬಂಡೆಗಳ ಘಟ್ಟನ-ಕಬ್ಬಿಣದ ಪರಿಘಗಳಿಂದ ಪರಸ್ಪರ ಘರ್ಷಣ ಮುಂತಾದುವು ಅಲ್ಲಿ ಘಟಿಸಿದುವು.


ಎಷ್ಟು ಕಾಲ ನಡೆಯಿತು, ಅವರ ಈ ಯುದ್ಧ? ಕಾರ್ತಿಕಮಾಸದ ಮೊದಲ ದಿನದಂದು ಆರಂಭವಾದ ಈ ಯುದ್ಧಕ್ಕೆ ಬಿಡುವೆಂಬುದೇ ಇರಲಿಲ್ಲ. ಹಗಲಿರುಳೂ ಯುದ್ಧ. ಆಹಾರವಿಲ್ಲದೇ ಯುದ್ಧ. ವಿಶ್ರಾಂತಿಯಿಲ್ಲದೇ ಯುದ್ಧ. ಹೀಗೆ ಮುಂದುವರೆಯಿತು, ಅವರಿಬ್ಬರ ಸಂಗರ.


ಪ್ರಥಮೆಯಂದು ಆರಂಭವಾದದ್ದು ತ್ರಯೋದಶಿಯವರೆಗೂ ಎಡೆಬಿಡದೆ ನಡೆಯಿತು. ಚತುರ್ದಶಿಯ ರಾತ್ರಿಯ ಹೊತ್ತಿಗೆ ಜರಾಸಂಧನು ದಣಿದುಹೋದನು. ಜರಾಸಂಧನು ಹಾಗೆ ದಣಿದಿರಲಾಗಿ, ಅದನ್ನು ಗಮನಿಸಿದ ಕೃಷ್ಣನು ಭೀಮನಿಗೆ ಅರ್ಥವಾಗುವ ಪರಿಯಲ್ಲಿ ಹೀಗೆ ನುಡಿದನು:


"ಶತ್ರುವು ಬಳಲಿಹೋಗಿದ್ದಲ್ಲಿ ಆತನಿಗೆ ಅಧಿಕವಾದ ಪೀಡೆಯುಂಟುಮಾಡುವುದು ತರವಲ್ಲ. ಪೂರ್ಣವಾಗಿ ಪೀಡಿಸಿದಲ್ಲಿ ಆತನ ಪ್ರಾಣವೇ ಹಾರಿಹೋದೀತು. ಆದ್ದರಿಂದ ರಾಜನಿಗೆ ಅತಿಯಾದ ಪೀಡೆಯುಂಟುಮಾಡದೆ ಆತನೊಂದಿಗೆ ಬಾಹುಯುದ್ಧವನ್ನು ಮುಂದುವರೆಸು" - ಎಂದನು.


ಶತ್ರುವೀರನನ್ನು ನಾಶಪಡಿಸಿಯೇ ತೀರುವ ಆ ಭೀಮನು, ಜರಾಸಂಧನು ಇದ್ದ ಆ ಅವಸ್ಥೆಯನ್ನು ಕಂಡು ಆತನನ್ನು ಕೊಲ್ಲುವ ನಿಶ್ಚಯವನ್ನು ಮಾಡಿದನು. ಅಪರಾಜಿತನೆನಿಸಿದ್ದ ಆ ಜರಾಸಂಧನನ್ನು ಜಯಿಸಲೋಸುಗ ಆಗ ಭೀಮನು ಉತ್ಕಟವಾದ ಕ್ರೋಧವನ್ನು ತಾಳಿದನು.


ಜರಾಸಂಧನನ್ನು ವಧಿಸಬೇಕೆಂಬ ಸಂಕಲ್ಪವು ಉಂಟಾದ ಭೀಮಸೇನನು, ಕೃಷ್ಣನನ್ನು ಕುರಿತು ಹೇಳಿದನು: "ಈ ಪಾಪಿ ಜರಾಸಂಧನು ಇಷ್ಟೇಟು ತಿಂದೂ ಇನ್ನೂ ಯುದ್ಧವಸ್ತ್ರವನ್ನು ಧರಿಸಿಯೇ ಯುದ್ಧಮಾಡುತ್ತಿರುವನು! ಇನ್ನು ಅವನನ್ನು ಪ್ರಾಣದೊಂದಿಗೆ ಉಳಿಸುವುದು ತರವಲ್ಲ." 


ಸೂಚನೆ : 19/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, April 13, 2026

ವ್ಯಾಸ ವೀಕ್ಷಿತ 183 ಭೀಮ-ಜರಾಸಂಧ – ದ್ವಂದ್ವ-ಯುದ್ಧಾರಂಭ​ (Vyaasa Vikshita 183)

 ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png

ಸೈನ್ಯಸಮೇತನಾಗಿಯಾಗಲಿ, ಒಬ್ಬನೊಂದಿಗಾಗಲಿ, ಇಬ್ಬಿಬ್ಬರೊಂದಿಗಾಗಲಿ, ಮೂವರೊಂದಿಗೂ

ಆಗಲಿ - ಯುದ್ಧ ಮಾಡಲು ತಾನು ಸಿದ್ಧನೆಂದು ಜರಾಸಂಧನು  ಕೃಷ್ಣಭೀಮಾರ್ಜುನರ ಮುಂದೆ

ಘೋಷಿಸಿಕೊಂಡನಷ್ಟೆ?


ಹಾಗೆ ಹೇಳಿದ್ದೇ ಅಲ್ಲದೆ, ಭಯಂಕರವಾದ ಕಾರ್ಯವನ್ನು ಮಾಡಹೊರಟಿದ್ದ

ಈ ಮೂವರೊಂದಿಗೆ ಸೆಣಸಲು ಸಿದ್ಧನೂ ಆದನು. "ನನ್ನ ಪುತ್ರನಾದ ಸಹದೇವನಿಗೆ

ಪಟ್ಟಾಭಿಷೇಕವನ್ನು ನೆರವೇರಿಸಿ" ಎಂಬುದಾಗಿ ತನ್ನ ಕಡೆಯವರಿಗೆ ಆಜ್ಞೆಯಿತ್ತನು.

ಹಾಗೆ ಹೇಳಿದವನೇ ತನ್ನ ಹಿಂದಿನ ಸೇನಾಪತಿಗಳಾದ ಕೌಶಿಕ ಹಾಗೂ ಚಿತ್ರಸೇನ - ಇವರಿಬ್ಬರನ್ನೂ

ಸ್ಮರಿಸಿಕೊಂಡನು. ಅವರಿಬ್ಬರೇ ಹಿಂದೆ ಹಂಸ-ಡಿಂಭಕ ಎಂದು ಹೆಸರಾಗಿದ್ದವರು. ಅವರಿಬ್ಬರೂ

ಬದುಕಿದ್ದಾಗ ಪುರುಷರೆಲ್ಲರೂ ಅವರನ್ನು ಆದರಿಸುತ್ತಿದ್ದರು, ಕೊಂಡಾಡುತ್ತಿದ್ದರು.

ಜರಾಸಂಧನು ಬಲಶಾಲಿಗಳಲ್ಲಿ ಶ್ರೇಷ್ಠನಾದ ರಾಜನು. ಆತನ ಪರಾಕ್ರಮ ಭೀಕರವಾದದ್ದು.

“ಯದುವಂಶದವರಾರಿಂದಲೂ ಆತನು ನಾಶಹೊಂದಬಾರದು” - ಎಂಬುದು ಬ್ರಹ್ಮನ ಆಜ್ಞೆಯಾಗಿತ್ತು.

ಶ್ರೀಕೃಷ್ಣನಾದರೂ ಪುರುಷಶಾರ್ದೂಲ, ಎಂದರೆ ನರಶ್ರೇಷ್ಠ ಹಾಗೂ ಸತ್ಯಸಂಧ. ಎಂದೇ ತಾನೇ

ಕೊಲ್ಲಲು ಸಮರ್ಥನಾಗಿದ್ದರೂ ಹಾಗೆ ಮಾಡಲಿಲ್ಲ. ಜರಾಸಂಧನಂತೂ ಯುದ್ಧ ಮಾಡುವುದೆಂದು

ನಿಶ್ಚಯಿಸಿಕೊಂಡಿದ್ದನಷ್ಟೆ. ಆತನನ್ನು ಕುರಿತು ಯದುನಂದನನಾದ ಶ್ರೀಕೃಷ್ಣನು ಹೀಗೆ ಹೇಳಿದನು:

"ರಾಜನೇ, ನಮ್ಮೀ ಮೂವರಲ್ಲಿ ಯಾರೊಂದಿಗೆ ಯುದ್ಧಮಾಡಲು ನಿನಗೆ ಮನಸ್ಸಿದೆ? ನಮ್ಮಲ್ಲಿ

ಯಾರು ನಿನ್ನೊಡನೆ ಯುದ್ಧ ಮಾಡಲು ಸಿದ್ಧರಾಗಬೇಕು?" ಕೃಷ್ಣನು ಹೀಗೆ ಹೇಳಲಾಗಿ, ಆ

ಮಹಾತೇಜಸ್ವಿಯಾದ ಜರಾಸಂಧನು ಭೀಮಸೇನನೊಡನೆ ಸೆಣಸಲು ಬಯಸಿದನು.

ಒಡನೆಯೇ ಜರಾಸಂಧನ ಪುರೋಹಿತನು ಹೆಲವು ಮಂಗಲಕಾರ್ಯಗಳನ್ನು ನೆರವೇರಿಸಿದನು:

ಗೋರೋಚನ-ಮಾಲೆಗಳು, ಇನ್ನಿತರ  ಮಂಗಲದ್ರವ್ಯಗಳು, ಹಾಗೂ ಕೆಲವು

ಔಷಧಿಗಳು - ತುಂಬ ನೋವಾದಾಗ ಅದನ್ನು ನಿವಾರಿಸತಕ್ಕವು, ಹಾಗೂ ಮೂರ್ಛಿತನಾದಾಗ

ಎಚ್ಚರವಾಗಿಸುವಂತಹವು - ಇವುಗಳನ್ನೂ ತಂದನು. ಯುಯುತ್ಸುರಾಜನ ಮುಂದೆ, ಎಂದರೆ ಯುದ್ಧ

ಮಾಡಲು ಬಯಸಿರುವ ಜರಾಸಂಧನ ಮುಂದೆ, ಇವುಗಳೊಡನೆ ಉಪಸ್ಥಿತನಾದನು.

ಹೀಗೆ ಬ್ರಾಹ್ಮಣನಿಂದ ಸ್ವಸ್ತಿವಾಚನವಾದ ಬಳಿಕ, ಕ್ಷತ್ರಧರ್ಮವನ್ನು ಸ್ಮರಿಸಿದ ಜರಾಸಂಧನು

ಯುದ್ಧಕ್ಕೆ ಸನ್ನಧನಾದನು. ಕಿರೀಟವನ್ನು ತೆಗೆದನು. ಕೇಶಗಳನ್ನು ಕಟ್ಟಿದನು. ಹಾಗೆ ಸಿದ್ಧನಾದ

ಜರಾಸಂಧನು, ತನ್ನ ದಡವನ್ನೇ ಮೀರಿ ಬರುವ ಸಮುದ್ರದ ಹಾಗೆ ತೋರಿದನು!

ಭಯಂಕರವಾದ ಪರಾಕ್ರಮವುಳ್ಳ ಆ ಧೀಮಂತ ಜರಾಸಂಧನು ಭೀಮನನ್ನು ಕುರಿತು, "ಭೀಮನೇ,

ನಿನ್ನೊಡನೆ ನಾನು ಯುದ್ಧಮಾಡುವೆ. ಏಕೆಂದರೆ ಶ್ರೇಷ್ಠರೊಡನೆ ಹೋರಾಡಿ ಸೋಲುವುದು ಸಹ

ಶ್ರೇಷ್ಠವಾದದ್ದೇ!" ಎಂದನು.

ಹೀಗೆ ಹೇಳಿ ಅವನು ಭೀಮಸೇನನನ್ನು ಎದುರ್ಗೊಂಡನು. ಬಲ ಎಂಬ ಅಸುರನು ಇಂದ್ರನನ್ನು ಹೇಗೆ

ಎದುರ್ಗೊಂಡನೋ ಹಾಗೆಯೇ ಇದಿತ್ತು.

ಅಷ್ಟರಲ್ಲಿ ಶ್ರೀಕೃಷ್ಣನಿಂದ ಸ್ವಸ್ತ್ಯಯನವನ್ನು ಪಡೆದು, ಭೀಮಸೇನನೂ ಸಹ ಇತ್ತ ಸಿದ್ಧನಾದನು,

ಜರಾಸಂಧನನ್ನು ಸಮೀಪಿಸಿದನು. ಆಗ ಇಬ್ಬರೂ ವೀರರು ಮಹಾ-ಹರ್ಷದಿಂದ ಕೂಡಿದವರಾಗಿ

ಪರಸ್ಪರ-ಜಯಾಕಾಂಕ್ಷಿಗಳಾಗಿ, ತಮ್ಮ ಬಾಹುಗಳನ್ನೇ ಶಸ್ತ್ರಗಳನ್ನಾಗಿಸಿಕೊಂಡು ಸೆಣಸಿದರು.

ಮೊದಲು ಕೈಕೈ ಹಿಡಿದರು. ಪರಸ್ಪರ ಪಾದಾಭಿವಂದನ ಮಾಡಿದರು. ಕಂಕುಳಿನಿಂದ ಕಂಕುಳನ್ನು

ತಳ್ಳಿದರು. ಮಹಾಶಬ್ದಸಹಿತವಾಗಿ ತಮ್ಮ ತೋಳುಗಳನ್ನು ತಟ್ಟಿಕೊಂಡರು. ಒಬ್ಬರು ಮತ್ತೊಬ್ಬರ

ಕತ್ತಿಗೆ ಇಕ್ಕಿದರು, ಮತ್ತೆ ಮತ್ತೆ ಹೊಡೆತವಿತ್ತರು. ಒಬ್ಬರ ಅಂಗವನ್ನು ಮತ್ತೊಬ್ಬರು ಅದುಮಿ ಹಿಡಿದರು.

ಪರಸ್ಪರ ಆಸ್ಫಾಲನ ಮಾಡಿದರು, ಎಂದರೆ ಅಪ್ಪಳಿಸಿದರು. ಚಿತ್ರಹಸ್ತ, ಕಕ್ಷಾಬಂಧ ಮುಂತಾದ

ಪಟ್ಟುಗಳನ್ನು ಹಾಕಿದರು. ಒಬ್ಬರ ಕತ್ತು-ತಲೆಗಳಿಗೊಬ್ಬರು ಇಡಿದರು: ಆ ಏಟುಗಳು ಎಷ್ಟು

ತೀವ್ರವಾಗಿದ್ದವೆಂದರೆ ಕಿಡಿಗಳು ಬಂದಂತಾಯಿತು; ಸಿಡಿಲು ಬಡಿದಂತಾಯಿತು!

ಸೂಚನೆ : 12/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 60 (Prasnottara Ratnamalike 60)

 ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ - ೬೦ - ಪ್ರಶಂಸೆ ಮಾಡಲು ಯೋಗ್ಯವಾದುದು ಯಾವುದು ?

ಉ. ಉದಾರತಾ.


ಔದಾರ್ಯ ಅಥವಾ ಉದಾರತಾ ಎಂಬ ಗುಣವು ಅತ್ಯಂತ ಶ್ರೇಷ್ಠವಾದದ್ದು. ಇದು ಯಾರಲ್ಲಿ ಇರುತ್ತದೆಯೋ

ಆ ವ್ಯಕ್ತಿಯನ್ನು ಪ್ರಶಂಸೆ ಮಾಡುವುದರಲ್ಲಿ ಯಾವುದೇ ಅಂಜಿಕೆ ಇರಬಾರದು. ಏಕೆಂದರೆ ಆ ವ್ಯಕ್ತಿ

ಈ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ. ಹಾಗಾದರೆ ಈ 'ಉದಾರತಾ' ಎಂಬ ಗುಣವು ಏಕೆ ಅಷ್ಟು ಶ್ರೇಷ್ಠವಾಗಿದೆ?

ಎಂಬುದನ್ನು ತಿಳಿಯಬೇಕಾಗಿದೆ.

'ಔದಾರ್ಯ' ಎಂಬುದು ಒಂದು ಕೊಡುವ ಮನೋಧರ್ಮ. ಈ ಹಿಂದಿನ ಪ್ರಶ್ನೋತ್ತದಲ್ಲಿ ಒಂದು ವಿಷಯವನ್ನು

ಗಮನಿಸಿದ್ದೆವು. ಆ ವಿಷಯವನ್ನು ಇಲ್ಲಿ ನೆನಪಿಸಿಕೊಂಡು ಈ ಉತ್ತರವನ್ನು ಅರ್ಥ ಮಾಡಿಕೊಳ್ಳಬೇಕು.

ಈ ಹಿಂದಿನ ಪ್ರಶ್ನೆಯಲ್ಲಿ ವೈಭವಿದ್ದರೂ ಮತ್ತೊಬ್ಬರಿಗೆ ಕೊಡದಿರುವ ಅತಿಹೇಯವಾದ ಕೃಪಣತಾ ಎಂಬ

ದೋಷವನ್ನು ವಿವರಿಸಿದ್ದಾಗಿತ್ತು. ಇದಕ್ಕೆ ವಿರುದ್ಧವಾದ ಗುಣವೇ ಉದಾರತಾ ಎಂಬುದು. ಅಂದರೆ ತನ್ನಲ್ಲಿ ಏನಿದೆಯೋ

ಅದರಲ್ಲಿ ಕೊಟ್ಟು ಸಂತೋಷಪಡುವ, ತೃಪ್ತಿಪಡುವ ಮನಸ್ಸು. ಈ ಔದಾರ್ಯವೆಂಬ ಗುಣವಿಲ್ಲದಿದ್ದರೆ ದಾನ

ಮಾಡುವ ಸ್ವಾಭಾವ ಹೇಗೆ ಬರಲು ಸಾಧ್ಯ. ಇದ್ದು ಕೊಟ್ಟರೆ ಅದು ಔದಾರ್ಯವೆನಿಸತದು. ತನ್ನಲ್ಲಿ ಇರುವಷ್ಟನ್ನು

ದೀನದರಿದ್ರರಿಗೆ ಅವರ ಅವಶ್ಯಕತೆಗೆ ಅನುಗುಣವಾಗಿ ಸ್ಪಂದಿಸುವ ವಿಶೇಷ ಗುಣವೇ ಉದಾತಾ.

ಹಾಗಾಗಿ ಇಂತಹ ವಿಶೇಷ ಗುಣವನ್ನು ಪ್ರಶಂಸಿಸಬೇಕಾದುದು ಅತ್ಯಂತ ಅವಶ್ಯಕ. ಈ ಗುಣವು ಬರಲು ಹೇಗ

ಸಾಧ್ಯ? ಎಂಬುದಕ್ಕೆ ಭಗವದ್ಗೀತೆಯಲ್ಲಿ ಯಾರು ಉದಾರರು ಎಂಬುದನ್ನು ಹೀಗೆ ಹೇಳಲಾಗಿದೆ. ಆರ್ತ, ಜಿಜ್ಞಾಸು

ಅರ್ಥಾರ್ಥೀ ಮತ್ತು ಜ್ಞಾನಿ ಈ ನಾಲ್ವರನ್ನು ಉದಾರರು ಎಂಬುದಾಗಿ ಕರೆಯಬೇಕು. ಈ ನಾಲ್ವರಲ್ಲಿ

ಜ್ಞಾನಿಯಾದವನು ಅತ್ಯಂತ ಶ್ರೇಷ್ಠ ಉದಾರಿ ಎಂಬುದಾಗಿ ತಿಳಿಯಬೇಕು. ಅಂದರೆ ಅಂತಹ ಜ್ಞಾನಿಗೆ ಮಾತ್ರ ಈ

ವಿಶೇಷಗುಣ ಬರಲು ಸಾಧ್ಯ ಎಂಬುದು ಇದರ ತಾತ್ಪರ್ಯ. ಸಾಮಾನ್ಯ ಮಾನವನಿಗೆ ಅಲ್ಪಸಲ್ಪ ಔದಾರ್ಯದ ಗುಣ

ಬರಬಹುದು. ಆದರೆ ಜ್ಞಾನಿಗೆ ಪರಿಪೂರ್ಣ ಔದಾರ್ಯ ಗುಣವು ಬರುತ್ತದೆ. ಏಕೆಂದರೆ ಜ್ಞಾನಿಯಾದವನಿಗೆ ತ್ಯಾಗ

ಎಂಬ ಗುಣವುವಿಶೇಷವಾಗಿರುತ್ತದೆ.


ತ್ಯಾಗದಿಂದಲೇ ಅವನು ಅಮೃತತ್ವವನ್ನು ಪಡೆಯಬಹುದು ಎಂಬುದನ್ನು ಬಲವಾಗಿ ನಂಬಿದವನಾಗಿರುತ್ತಾನೆ.

ಕೇವಲ ಸಂಪತ್ತನ್ನು ಮಾತ್ರವಲ್ಲದೆ ಈ ಜನ್ಮಕ್ಕೆ ಕಾರಣವಾದ ಶರೀರವು ಕೂಡ ತ್ಯಾಜ್ಯವಾದದ್ದು ಎಂಬ ಎಂಬ

ತ್ಯಾಗ ಮನೋಧರ್ಮ ಅವನಿಗೆ ಇರುತ್ತದೆ. ಔದಾರ್ಯ ಇರುವವನು ಎಲ್ಲಾ ಕಾಲದಲ್ಲೂ ಶುದ್ಧನಾಗಿ ಇರುತ್ತಾನೆ.

ಕಾರಣ ಇಷ್ಟೇ - ಔದಾರ್ಯ ಎಂಬ ಗುಣ ಇರುವುದರಿಂದಲೇ ಅವನು ಜ್ಞಾನಿಯಾದ, ಯೋಗಿಯಾದ, ಶೋಭಾ

ವಿಲಾಸೋ ಮಾಧುರ್ಯಂ ಗಾಂಭೀರ್ಯಂ ಧೈರ್ಯತೇಜಸೀ। ಲಲಿತಾ ಔದಾರ್ಯಂ ಇತಿ ಅಷ್ಟ ಸತ್ತ್ವಜಾಃ ಪುರುಷಾಃ

ಗುಣಾಃ॥ " ಎಂದು ಸಾಹಿತ್ಯದರ್ಪಣ ಎಂಬ ಗ್ರಂಥದಲ್ಲಿ ಸಜ್ಜನಪುರುಷರ ಎಂಟು ಲಕ್ಷಣಗಳನ್ನು ಹೇಳಲಾಗಿದೆ.

ಅದರಲ್ಲಿ ಔದಾರ್ಯ ಎಂಬ ಗುಣವನ್ನು ಎತ್ತಿ ಹೇಳಲಾಗಿದೆ. ಅಂದರೆ ಈ ಗುಣವು ಸತ್ತ್ವಗುಣದ ಪ್ರತೀಕವಾದದ್ದು.

ಯಾರಲ್ಲಿ ಸತ್ತ್ವಗಣ ಇರುತ್ತದೆಯೋ, ಅವರಲ್ಲಿ ಉದಾರತೆ ಇರುತ್ತದೆ. ಅಥವಾ ಉದಾರತೆ ಎಂಬುದು

ಸತ್ತ್ವಗುಣದಿಂದಲೇ ಜಾಗೃತವಾಗುತ್ತದೆ ಎಂಬ ಅರ್ಥವೂ ಸತ್ಯವಾದದ್ದು. ಒಟ್ಟರೆ ಇಂತಹ ಸತ್ಪುರುಷನು

ಉದಾರತಾ ಎಂಬ ಗುಣದಿಂದ ಪ್ರಶಂಸೆಗೆ ಅರ್ಹನಾಗುತ್ತಾನೆ.


ಸೂಚನೆ : 29/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 61 (Prasnottara Ratnamalike 61)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



image.png


ಪ್ರಶ್ನೆ - ೬೧ - ವಿದ್ವಾಂಸರನ್ನು ಪೂಜಿಸಲು ಯೋಗ್ಯರಾದವರು ಯಾರು?

ಉ. ಸ್ವಭಾವದಿಂದ ಯಾವಾಗಲೂ ವಿನಯವುಳ್ಳವನು.

‘ವಿದ್ವಾನ್ ಸರ್ವತ್ರ ಪೂಜ್ಯತೇ’ - ವಿದ್ವಾಂಸರಿಗೆ ಎಲ್ಲ ಕಡೆ, ಯಾವಾಗಲೂ ಗೌರವ ಇದೆ ಎಂದರ್ಥ. ವಿದ್ವಾಂಸನಿಗೆ ಗೌರವ ಬರಲು ಕಾರಣ, ಅವನು ಸಂಪಾದಿಸಿದ ವಿದ್ಯೆಯೇ ಆಗಿದೆ. ಈ ವಿದ್ಯೆ ಇರುವುದರಿಂದ ಅವನಿಗೆ ‘ವಿದ್ವಾನ್’ ಎಂಬುದಾಗಿ ಕರೆಯಲಾಗುತ್ತದೆ. ವಸ್ತುತಃ ‘ವಿದ್ಯೆ ಯಾವುದು?’ ಎಂಬುದರ ಬಗ್ಗೆ ಇಂದು ಸ್ಪಷ್ಟವಾದ ಅರಿವು ಇಲ್ಲವಾಗಿದೆ. ಈ ವಿಷಯದಲ್ಲಿ ಶ್ರೀರಂಗ ಮಹಾಗುರುಗಳ ವಿದ್ಯೆಗೆ ಸಂಬಂಧಿಸಿದ ಮಾತು ನಿಜವಾದ ವಿದ್ಯೆ ಯಾವುದು? ಎಂಬುದನ್ನು ತಿಳಿಸುತ್ತದೆ. ವಿದ್ಯೆ ಎಂದರೆ ವಿದ್- ಜ್ಞಾನ, ಯಾ - ಪ್ರಾಪಣ. ಯಾವುದು ಜ್ಞಾನದ ಕಡೆ ನಮ್ಮನ್ನು ಕರೆದುಕೊಂಡು ಹೊಗುತ್ತದೆಯೋ ಅದಕ್ಕೆ ವಿದ್ಯೆ ಎಂಬುದಾಗಿ ಕರೆಯಬೇಕು ಎಂದು. ಇಂತಹ ವಿದ್ಯೆ ಉಳ್ಳವನು ವಿದ್ವಾಂಸ ಎಂಬುದಾಗಿ ಕರೆಸಿಕೊಳ್ಳುತ್ತಾನೆ. ಪ್ರಣವದಿಂದ ವಿಕಾಸವಾದ ಗಾಯತ್ರೀ, ವೇದಗಳು, ಶಾಸ್ತ್ರಗಳು, ಇತಿಹಾಸ ಪುರಾಣಗಳು ಮೊದಲಾದವುಗಳನ್ನು ಈ ನೇರದಲ್ಲಿ ‘ವಿದ್ಯೆ’ ಎಂಬುದಾಗಿ ಕರೆಯಲಾಗುತ್ತದೆ. ಇವುಗಳ ತಾತ್ತ್ವಿಕಜ್ಞಾನ ಉಳ್ಳವನನ್ನು ‘ವಿದ್ವಾನ್’ ಎಂಬುದಾಗಿ ಕರೆಯಬಹುದು. ಇಂತಹ ವಿದ್ವಾಂಸನಿಗೆ ಮನ್ನಣೆ ಎಲ್ಲ ಕಾಲದಲ್ಲೂ, ಎಲ್ಲ ದೇಶದಲ್ಲೂ ಸಿಗುವುದು ಅತ್ಯಂತ ಸಹಜ. ಈ ಬಗೆಯ ವಿದ್ವಾಂಸನಿಗೆ ಮನ್ನಣೆ ಬರಬೇಕು ಎಂಬುದಾದರೆ ಏನು ಬೇಕು? ಎಂಬ ಪ್ರಶ್ನೆ ಇಲ್ಲಿದೆ. ಅಂದರೆ ಇಂತಹ ಗುಣವಿಶಿಷ್ಟನಾದ ಒಬ್ಬ ವ್ಯಕ್ತಿಗೆ ಶೋಭಿಸುವಂತೆ ಮಾಡುವ ಇನ್ನೊಂದು ಗುಣ ಬೇಕೆ? ಎಂಬುದಾಗಿ ಸಂಶಯ ಬರಬಹುದು. ಅದಕ್ಕೆ ಪರಿಹಾರವನ್ನು ಈ ಉತ್ತರದಲ್ಲಿ ಕಾಣಬಹುದು. ಇದನ್ನೇ ಸಾರುವ ಸುಭಾಷಿತ ಹೀಗಿದೆ - “ವಿದ್ಯಾ ವಿನಯೇನ ಶೋಭತೇ”, “ವಿದ್ಯಾ ದದಾತಿ ವಿನಯಂ” ಎಂದು. ಅಂದರೆ ವಿದ್ಯೆ ಮತ್ತು ವಿನಯ ಈ ಎರಡು ಅನ್ಯೋನ್ಯವಾಗಿ ಇರುವಂಥವುಗಳು. ಒಂದನ್ನು ಬಿಟ್ಟು ಇನ್ನೊಂದಕ್ಕೆ ಅಸ್ತಿತ್ವವಿಲ್ಲ, ಮೌಲ್ಯವಿಲ್ಲ ಎಂಬುದು ಇದರ ತಾತ್ಪರ್ಯ. ಎಲ್ಲಿ ವಿದ್ಯೆ ಇದೆಯೋ ಅಲ್ಲಿ ವಿನಯ ಇರಬೇಕು ಎಂಬುದೇ ಅರ್ಥ. ಹಾಗಿಲ್ಲದಿದ್ದರೆ ಆ ವಿದ್ಯೆಯು ಅಪರಿಪೂರ್ಣ ಎಂದರ್ಥ. ಆಗ ಕೇವಲ ವಿದ್ಯೆ ಉಳ್ಳವರಿಗೆ ಗೌರವವೂ ಸಿಗದು. ಸಿಕ್ಕಿದ ಗೌರವೂ ಉಳಿಯದು. ಹಾಗಾಗಿ ವಿದ್ಯೆಯಿಂದ ಬರುವ ಗೌರವವು ಉಳಿಯಬೇಕಾದರೆ ವಿನಯ ಅತ್ಯಂತ ಮುಖ್ಯ ಎಂಬುದು ಸಾರಾಂಶ.

ಹಾಗಾದರೆ ವಿದ್ಯೆಯಿದ್ದವರಿಗೆ ವಿನಯ ಅಷ್ಟು ಮುಖ್ಯ ಏಕೆ? ಎಂದರೆ, ಸಾಮಾನ್ಯವಾಗಿ ವಿದ್ಯೆ ಇರುವವನು ಗರ್ವಕ್ಕೆ ಅಥವಾ ಮದಕ್ಕೆ ಈಡಾಗುತ್ತಾನೆ. ವಿದ್ಯೆಯು ಸರಿಯಾದ ಮಾರ್ಗದಲ್ಲಿ ಬರೆದಿದ್ದರೆ ಅದು ಅಹಂಕಾರಕ್ಕೆ ಕಾರಣವಾಗುತ್ತದೆ. ಹಾಗಾಗಿ ವಿದ್ಯೆಯ ಜೊತೆ ಎಲ್ಲಿ ವಿನಯ ಬಂದಿರುತ್ತದೆಯೋ, ಅಲ್ಲಿ ಬಂದ ವಿದ್ಯೆಯು ಸನ್ಮಾರ್ಗದಲ್ಲಿ ಬಂದಿದೆ ಎಂದರ್ಥ. ಆದ್ದರಿಂದ ವಿದ್ಯೆ ಮತ್ತು ವಿನಯಗಳಿಗೆ ಪರಸ್ಪರ ಸಂಬಂಧವಿರುವುದನ್ನು ಕಾಣಬಹುದು. ವಿದ್ಯೆಯಿಂದ ಬರುವ ವಿನಯವು ಪಾತ್ರತ್ವವನ್ನು ಅಂದರೆ ಮನ್ನಣೆಯನ್ನು ಕೊಡುತ್ತದೆ; ಆ ಮನ್ನಣೆಯು ಅವನಿಗೆ ಭದ್ರತೆಯನ್ನು ಉಂಟುಮಾಡುತ್ತದೆ. ಈ ಭದ್ರತೆಯು ಅವನಿಗೆ ಧರ್ಮ ಮತ್ತು ಶಾಶ್ವತವಾದ ಸುಖವನ್ನು ಕೊಡುತ್ತದೆ ಎಂಬುದಾಗಿ ಒಂದು ಸುಭಾಷಿತ ಸಾರುತ್ತದೆ. ಇವೆಲ್ಲವನ್ನು ಗಮನಿಸಿದಾಗ ವಿದ್ಯೆ ಮತ್ತು ವಿನಯಗಳಿಗೆ ಇರುವ ಸಂಬಂಧ ತಿಳಿಯುತ್ತದೆ. ಹಾಗಾಗಿ ವಿದ್ಯಾವಂತನಿಗೆ ಗೌರವ ಸಿಗಬೇಕಾದರೆ ಅವನು ವಿನಯ ಸ್ವಭಾವ ಉಳ್ಳವನಾಗಿರಬೇಕು ಎಂಬುದು ಪರಮ ಸತ್ಯವಾದ ವಿಷಯ.

ಸೂಚನೆ : 12/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, April 12, 2026

ಕೃಷ್ಣಕರ್ಣಾಮೃತ 100 ಎಳೆಯನ ಕೊಳಲಿನ ಇನಿದನಿಯ ಮೆರುಗು (Krishakarnamrta 100)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಲೀಲಾಶುಕನ ಶ್ರೀಕೃಷ್ಣಕರ್ಣಾಮೃತವು ರಸದ ಒಂದು ಬುಗ್ಗೆಯೇ ಸರಿ. ಬಹುಜನ-ಪ್ರಿಯವಾದ ಬೋಧಿವೃಕ್ಷ-ಪತ್ರಿಕೆಯಲ್ಲಿ ೨೦೨೪ರಲ್ಲಿ ಆರಂಭವಾಯಿತು ಇದನ್ನು ಕುರಿತಾದ ಲೇಖನಮಾಲೆ. ಅಲ್ಲಿಯ ಶ್ಲೋಕಗಳ ಆಸ್ವಾದನೆಯು ಅನುಸ್ಯೂತವಾಗಿ ಇಲ್ಲಿಯವರೆಗೆ ೯೯ ಕಂತುಗಳಾಗಿ ಸಾಗಿ ಬಂದಿದೆ. ಈಗಿದು ನೂರನೆಯ ಕಂತು. ಈ ಸರಣಿಯಲ್ಲಿ ಕೊನೆಯದು. ಅಲ್ಲಿಯ ಒಟ್ಟು ೩೧೦ ಶ್ಲೋಕಗಳಲ್ಲಿ ಇದು ೧೭೦ನೆಯದು. ಲೇಖನಮಾಲೆಗೆ ಆಗಾಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ವಾಚಕರಿಗೆ ಕೃತಜ್ಞತೆಗಳು.

ಶ್ರೀಕೃಷ್ಣನು ಮಧುರವಾಗಿ ವೇಣುಗಾನ ಮಾಡುವ ವಿಷಯವು ಹಲವೆಡೆ ಬಂದಿದೆ. ಅದರೆ ಒಂದು ಅತ್ಯಂತ ಸೊಬಗಿನ ಪದ್ಯವೊಂದನ್ನಿಲ್ಲಿ ತೆಗೆದುಕೊಂಡಿದೆ. ಅದು ಕೃಷ್ಣನ ವೇಣು-ವಾದನದ ಬಹುಮುಖ-ಅತಿಶಯತೆಗಳನ್ನು ಒಟ್ಟಿಗೇ ಸಂಗ್ರಹಿಸಿದೆ.  ಕೊಳಲುಲಿಯ ದಶವಿಧಪರಿಣಾಮಗಳನ್ನು ಕವಿಯು ಸುಭಗವಾಗಿ ಚಿತ್ರಿಸಿದ್ದಾನೆ. ಮೊಟ್ಟಮೊದಲನೆಯದಾಗಿ ಅದು ಇಡೀ ಲೋಕದ ಮೇಲೆ ಪರಿಣಾಮ ಬೀರಿದೆ. ಪುಟ್ಟ ಹುಡುಗನೊಬ್ಬನು ನುಡಿಸಿದ ಕೊಳಲಿನ ದನಿಯು ಎಷ್ಟುದೂರ ಹೋದೀತು? - ಎಂಬ ಪ್ರಶ್ನೆ ಬರಬೇಕಿಲ್ಲ. ಏಕೆ? ದಿವ್ಯಪುರುಷನೊಬ್ಬನ ವೇಣುಗಾನವಿದು! ಲೋಕಸಾಮಾನ್ಯರ ಪರಿಯ ಗಾನವಲ್ಲ. ಎಂದೇ ಕವಿಯು ಲೋಕಾನ್ ಎಂದು ಬಹುವಚನವನ್ನೇ ಬಳಸಿದ್ದಾನೆ. ಲೋಕಗಳೆಲ್ಲದರ ಮೇಲೂ ಪರಿಣಾಮ ಬೀರುವ ಪರಿಯಿದು.

ಯಾವ ಪರಿಣಾಮ? ಉನ್ಮಾದದ ಪರಿಣಾಮ. ಹಾಗೆಂದರೆ ಏನೋ ಹುಚ್ಚುಹಿಡಿಸುವ ಪರಿಣಾಮವೆಂದೇ? ಒಂದರ್ಥದಲ್ಲಿ ಹುಚ್ಚೇ; ಮತ್ತೊಂದರ್ಥದಲ್ಲಿ ಅದಕ್ಕೆ ವಿರುದ್ಧವಾದದ್ದೇ. ಹೇಗೆ? ಇದು ಯೋಗಶಾಸ್ತ್ರದ ವಿಷಯ. ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು ಇದನ್ನು ವಿಶದಪಡಿಸಿರುವರು. ಉನ್ಮನೀ ಮನೋನ್ಮನೀ - ಎಂಬ ಎರಡು ಅವಸ್ಥೆಗಳನ್ನು  ಯೋಗವಿದ್ಯೆಯು ಬೋಧಿಸುವುದು. ಯೋಗಿಗಳು ಧ್ಯಾನಸ್ಥರಾಗಿದ್ದಾಗ ಅನಾಹತವೆಂಬ ನಾದವು ಒಳಗೇ ಕೇಳಿಬರುವುದು. ಈ ಅಂತರ್ನಾದಶ್ರವಣದ ಸ್ಥಿತಿಯಲ್ಲೇ ಉನ್ಮನ್ಯವಸ್ಥೆಯು ಉಂಟಾಗುವುದು.

ಇಲ್ಲಿ ಕೃಷ್ಣನು ಕೊಳಲಿನಿಂದ ನುಡಿಸುತ್ತಿರುವುದು ಬಾಹ್ಯನಾದ. ಅದು ಆಹತನಾದ. ಹಾಗಿದ್ದರೂ ಸಹ ಒಳಗಣ ನಾದವು ಕೇಳಿಬರುವಾಗ ಚಿತ್ತಕ್ಕೆ ಯಾವ ಅವಸ್ಥೆಯು ಉಂಟಾಗುವುದೋ ಅದನ್ನೇ ಉಂಟುಮಾಡುತ್ತಿದೆ! ಇಂದ್ರಿಯದ ಹೊರಗಣ ನಡೆಗಳೆಲ್ಲವೂ ಕೆಲಕಾಲ ಸ್ತಬ್ಧವಾಗಿಬಿಟ್ಟು, ದಿವ್ಯಭಾವದೊಂದಿಗೆ ಹೊಮ್ಮಿದ ಈ ಮಧುರಧ್ವನಿಯ ಆಸ್ವಾದನೆಯಲ್ಲಿ ಮುಳುಗುವಂತಾಗುತ್ತದೆ. ಹೀಗೆ ಅನಾಹತನಾದದ ಪರಿಣಾಮವನ್ನು ಅನಾಯಾಸವಾಗಿ ಸಾಧಿಸಿಕೊಡುವ ನಾದವಿದು - ಅತ್ತ ಚಿತ್ತವಿತ್ತವರಿಗೆಲ್ಲಾ!

ಎರಡನೆಯದಾಗಿ, ಈ ನಾದವು ಶ್ರುತಿಗಳನ್ನೇ ಪ್ರತಿಧ್ವನಿಸುವಂತಹುದು. ಶ್ರುತಿಗಳೆಂದರೆ ವೇದಗಳು. ವೇದಧ್ವನಿಗೂ ಈ ಧ್ವನಿಗೂ ಸಾಮ್ಯವೆಂತು? – ಎಂಬುದನ್ನು ಒಂದು ಉದಾಹರಣೆಯ ಮೂಲಕ ನೋಡಬಹುದು. ಒಂದೇ ಶ್ರುತಿಗೆ ಜೋಡಿಸಿಟ್ಟ ನಾಲ್ಕು ತಂಬೂರಿಗಳಿದ್ದಾಗ, ಒಂದನ್ನು ಮೀಟುತ್ತಲೇ ಮಿಕ್ಕವೂ ಅದೇ ಧ್ವನಿಯನ್ನೇ ಹೊಮ್ಮಿಸುವುವು! ಹೀಗಾಗಿ ಈ ವೇಣುನಾದವಾಗುತ್ತಲೇ ವೇದಗಳೆಲ್ಲವೂ ಇದು ತಮ್ಮದೇ ದನಿಯೆಂದು ಗುರುತಿಸಿ, ಒಡನೆಯೇ ಅಪ್ರಯತ್ನವಾಗಿ ಮಾರ್ದನಿಗೊಳ್ಳುವಂತಗುವುದು!

ಅಂತೂ, ಇತ್ತ ಈ ದಿವ್ಯಶಿಶುವು ಲೀಲೆಗಾಗಿ ಹೊರತಂದ ನಾದವು, ಅತ್ತ ಮಹರ್ಷಿಗಳಿಗೆ ತಪೋಲಭ್ಯವಾದ ಸುಸ್ವರದಿಂದ ಹೊಮ್ಮುವ ಸಾಹಿತ್ಯದ ಸಾರವೇ ಆಗಿದೆ! ಅಲ್ಲಿಯ ಉದಾತ್ತಭಾವದ ಸಾರವನ್ನೇ ಬಿಂಬಿಸಿದೆ. ಮೂರನೆಯದಾಗಿ ಮರಗಳಿಗೆ ಸಹ ಹರ್ಷವುಂಟಾಗಿದೆ! ಮರಗಳೂ ಜೀವಿಗಳೇ. ಸಸ್ಯಜಾತಿಗೂ ಇಂದ್ರಿಯಗಳುಂಟು - ಎಂಬುದನ್ನು ಮಹಾಭಾರತವು ಪ್ರತಿಪಾದಿಸಿದೆ. ಈಚಿನ ವೈಜ್ಞಾನಿಕ-ಪ್ರಯೋಗ-ಫಲಿತಾಂಶಗಳೂ ಇದಕ್ಕೆ ಸಂವಾದಿಯಾಗಿವೆ. ಭಗವಂತನ ನಡೆನುಡಿಗಳೂ ಕೊನೆಗೆ ಶ್ವಾಸೋಚ್ಛ್ವಾಸಗಳೂ ಜೀವಹಿತಕ್ಕಾಗಿಯೇ ಇರುವುವಾಗಿ, ಅಂತಸ್ಸಂಜ್ಞವೆನಿಸುವ ಗಿಡಮರಗಳೆಂಬ ಜೀವಗಳಿಗೂ ಇಲ್ಲಿಯ ಆಪ್ಯಾಯಕತೆಯು ಗೋಚರವಾಗಿ, ಹರ್ಷೋಲ್ಲಾಸಗಳೇ ಹರಿದಿವೆ!

ನಾಲ್ಕನೆಯದಾಗಿ ಪರ್ವತಗಳನ್ನೂ ಕರಗಿಸುವ ಧ್ವನಿಯಿದು.”ಕಗ್ಗಲ್ಲಿನಂತೆ ಕಠಿಣವಾದ ಎಂತಹ ಕಲ್ಲೆದೆಯಾದರೂ ಆ ಮಹಾ ವೇಣುಗಾನಲೋಲನಾದ ಕೃಷ್ಣರೂಪಿಯಾದ ಭಗವಂತನ ನಾದದಿಂದ ಜಿನುಗಿ ಕರಗಿ ಆ ನಾದದಲ್ಲಿ ಲೀನವಾಗಿಬಿಡುತ್ತದೆ” - ಎಂಬುದು ಶ್ರೀರಂಗಮಹಾಗುರುಗಳ ವಾಣಿ.   ಬೆಟ್ಟಗಳೂ ಕರಗುವುದನ್ನು ನಾರದ-ಹನುಮತ್-ಸಂವಾದ-ರೂಪದ ಪುರಾಣಕಥೆಗಳು ತೋರಿಸುತ್ತವೆ. ಐದನೆಯದಾಗಿ ಮೃಗಗಳ ಮೇಲಾದ ಪರಿಣಾಮ. ಮೃಗಗಳೆಂದರೆ ವಿಶೇಷವಾಗಿ ಜಿಂಕೆಗಳೇ. ಅವುಗಳಲ್ಲಿ ಒಂದು ವಿವಶತೆಯುಂಟಾಗಿದೆ. ಗಿಡಮರಗಳ ಮೇಲೇ ಅಷ್ಟು ಪರಿಣಾಮವುಂಟೆಂದಮೇಲೆ, ಪ್ರಾಣಿಗಳ ಮೇಲೆ ಮತ್ತೂ ವಿಶೇಷವಾದ ಪರಿಣಾಮವು ನಿರೀಕ್ಷ್ಯವೇ. ಸಸ್ಯಜಾತಿಗಿಂತಲೂ ಅಧಿಕವಾದ ಇಂದ್ರಿಯಪಾಟವ ಮೃಗಗಳದ್ದು. ಎಂದೇ, ಅವುಗಳ ಆಸ್ವಾದನ-ಸಾಮರ್ಥ್ಯವೂ ಅಧಿಕವೇ. ಹೀಗಾಗಿ ಪ್ರಾಣಿಗಳು ಪರವಶವಾಗಿವೆ. ಕೆಲವು ರಾಗಗಳನ್ನು ನುಡಿಸಿ, ಜಿಂಕೆಗಳಿರಲಿ, ಆನೆಗಳ ಮನಸ್ಸನ್ನೂ ಮುಗ್ಧವಾಗಿಸಲು ಶಕ್ಯವೆಂಬುದನ್ನು ನಮ್ಮ ಪ್ರಾಚೀನಸಾಹಿತ್ಯವು ತಿಳಿಸುತ್ತದೆಯಷ್ಟೆ. ಶ್ರೀರಂಗಮಹಾಗುರುಗಳು ಹೇಳುವಂತೆ “ಮೃಗಗಳೆಲ್ಲವೂ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ತಮ್ಮನ್ನು ವೇಣುಗಾನಕ್ಕೆ ಕೊಟ್ಟುಕೊಂಡು ಮೈಮರೆತು ಆನಂದದಿಂದ ಆ ನಾದವನ್ನು ಕೇಳುತ್ತಿವೆ. ನಿಂತಲ್ಲಿ ಚಿತ್ರಪ್ರತಿಮೆಗಳಂತೆ ಹಾಗೆಯೇ ನಿಂತು, ನಾದದಿಂದ ಮೈಮರೆತಿವೆ.”

ಇನ್ನು ಆರನೆಯದಾಗಿ, ಗೋಸಮೂಹದ ಮೇಲಿನ ಪರಿಣಾಮ. ಅದನ್ನಂತೂ ಹೇಳಲೇಬೇಕಿಲ್ಲ. ಅವಕ್ಕೆಲ್ಲ ಆನಂದವಾಗಿದೆಯೆಂದು ಹೇಳಿದರೆ ಸಾಕು! ಏಳನೆಯ ಪರಿಣಾಮ ಗೋಪರ ಮೇಲೆ. ಗೊಲ್ಲರಿಗೆ ಗೊತ್ತಾಗದೇ, ವೇಣುಗಾನದ ಇನಿದನಿ? ಅವರಿಗೆಲ್ಲ ಉಂಟಾದುದು ಏನೋ ಸಂಭ್ರಮ. ಆ ಧ್ವನಿವಿಶೇಷದ ಏನು-ಎತ್ತಗಳು ಗೊತ್ತಾಗದಿದ್ದರೂ ಏನೋ ಉಕ್ಕುವ ಉಲ್ಲಾಸದ ಅನುಭವ! ಎಂಟನೆಯ ಪರಿಣಾಮ ಮುನಿಗಳ ಮೇಲಾದುದು. ಗೋಪರ ಸಂಭ್ರಮ ಹೊರಗೆ ಗೋಚರವಾಗಬಹುದು. ಆದರೆ ಮುನಿಗಳು ಮತ್ತೂ ಮುಕುಳಿತರಾಗುತ್ತಿದ್ದಾರೆ. ಮುಕುಳವೆಂದರೆ ಮೊಗ್ಗು. ಮೊಗ್ಗು ಅರಳಿದಾಗ ಬಹಿರ್ಮುಖ. ಮುನಿಗಳು ಶ್ರಮಪಡುವುದೇ ಮನಸ್ಸನ್ನು ಅಂತರ್ಮುಖವಾಗಿಸಲು. ಆದರಿದೋ, ಈಗದು ಸುಲಭವಾಗುತ್ತಿದೆ, ಅಥವಾ ತಾನಾಗಿಯೇ ಉಂಟಾಗುತ್ತಿದೆ! ಭಗವದನುಭವವಾಗುವುದು ಮನಸ್ಸಿನ ಮುಕುಳೀಭಾವದಿಂದಲೇ. ಹೀಗೆ ಮುನಿಗಳಿಗೆ ಯೋಗಮಾರ್ಗದಲ್ಲಿ ಪ್ರಗತಿಯಾಗುತ್ತಿದೆ. ಒಂಭತ್ತನೆಯದಾಗಿ ಇಲ್ಲಿ ಸಪ್ತಸ್ವರಗಳೂ ಜೃಂಭಿಸುತ್ತಿವೆ. ನಾನಾಸ್ವರಾಲಾಪಗಳಿಂದಾಗಿ ನಾನಾರಸಗಳನ್ನು ಉದ್ಬೋಧಗೊಳಿಸಬಹುದು - ಎಂಬುದಾಗಿ ಸಂಗೀತಶಾಸ್ತ್ರವು ಹೇಳುವುದಲ್ಲವೇ? ಆದರಿಲ್ಲಿ, ಆತ್ಮಭಾವವನ್ನು ಸ್ಥಿರಗೊಳಿಸಲೂ ಸಪ್ತಸ್ವರಗಳ ವಿನ್ಯಾಸ-ವಿಶೇಷವಾಗಿದೆ! ಅಮಾನುಷವಾದ ಗಾನವಲ್ಲವೇ ಇದು?

ಹತ್ತನೆಯ ಪರಿಣಾಮವಾಗಿ ಓಂಕಾರವನ್ನೇ ಹೊಮ್ಮಿಸುತ್ತಿದೆ, ಈ ವೇಣುಗಾನ. ಎಲ್ಲ ವೇದಗಳೂ ಯಾವ ಪದ ಅಥವಾ ಸ್ಥಾನವನ್ನು ನಿರ್ದೇಶಿಸಿ ಹೇಳುತ್ತವೆಯೋ ಅದನ್ನೇ ಸಂಗ್ರಹವಾಗಿ ಹೇಳುವುದಾದರೆ ಅದು ಓಂಕಾರ - ಎಂದು ಕಠೋಪನಿಷತ್ತು ಹೇಳುವುದು. ಓಂಕಾರವೆಂದರೂ ಪ್ರಣವವೆಂದರೂ ಒಂದೇ. ಭಗವಂತನ ವಾಚಕವೇ ಪ್ರಣವವೆಂದು ಯೋಗಶಾಸ್ತ್ರವು ಹೇಳುತ್ತದೆ.

ಛಂದಸ್ಸುಗಳಿಗೆಲ್ಲ ಆದಿಯಾದುದು ಪ್ರಣವ. ಎಲ್ಲ ಧ್ವನಿಗಳಿಗೂ ಮೂಲವೆನಿಸುವ ಏಕಾಕ್ಷರವು ಯಾವುದೋ ಅದುವೇ ನಾನು – ಎನ್ನುತ್ತಾನೆ,  ಗೀತೆಯಲ್ಲಿ ಶ್ರೀಕೃಷ್ಣ. ಓಂ - ಎಂಬುದು ಏಕಾಕ್ಷರಬ್ರಹ್ಮ. ಇದರ ಉಪಾಸನೆಯಿಂದಲೇ ಛಾಂದೋಗ್ಯೋಪನಿಷತ್ತಿನ ಆರಂಭವಾಗುವುದು! ಎಂದೇ ಓಂ ಎಂಬುದು ಬರೀ ಗಾನವಲ್ಲ, ಉದ್ಗಾನ! ಓಂ ಎಂಬುದೇ ಬ್ರಹ್ಮವೆನ್ನುತ್ತದೆ, ತೈತ್ತಿರೀಯ-ಶ್ರುತಿ. ನಾನಾ-ಪ್ರಕಾರಗಳಲ್ಲಿ ಓಂಕಾರದ ಆವಿರ್ಭಾವವನ್ನು ಮಾಂಡೂಕ್ಯೋಪನಿಷತ್ತು ತಿಳಿಸುತ್ತದೆ. ವೇದರಾಶಿಯನ್ನು ಓಂಕಾರ-ಸಂಪುಟಿತವಾಗಿಯೇ ಹೇಳುವುದು. ಸಾರಾಂಶವಾಗಿ ಓಂಕಾರದ ವಿಸ್ತಾರವೇ ತ್ರ್ಯಕ್ಷರವೂ ತ್ರಿಪಾದಾಗಾಯತ್ರಿಯೂ ವೇದತ್ರಯವೂ ಆಗಿರುವುದು. ಹೀಗೆ ಸೃಷ್ಟಿ-ಸರ್ವಸ್ವವನ್ನೂ ಸೃಷ್ಟಿಯ ಸಾರ-ಸರ್ವಸ್ವವನ್ನೂ ಹೇಳುವುದೇ ಓಂಕಾರ. ಅದನ್ನೇ ನುಡಿಸುತ್ತಿರುವುದು ಇದೋ ಈ ಬಾಲಕೃಷ್ಣನ ಕೊಳಲು! ಇಷ್ಟೆಲ್ಲ ಅಸಾಧಾರಣವೂ ಅದ್ಭುತವೂ ಲೋಕೋತ್ತರವೂ ತಾರಕವೂ ಆದ ಪರಿಣಾಮಗಳ ಪರಂಪರೆಯನ್ನೇ ಉಂಟುಮಾಡಿರುವುದು ಮತ್ತಾವುದಿದ್ದೀತು? ಶಿಶುವಿನ ವಂಶೀನಿನಾದ - ಅರ್ಥಾತ್ ಬಾಲಕೃಷ್ಣನ ವೇಣುನಾದವೊಂದೇ! ಎಂದೇ ಅದಕ್ಕೇ ಜಯಕಾರವನ್ನು ವಿಜಯತೇ - ಎಂದು ಹೇಳಿರುವುದು. ಅದು ಸರ್ವೋತ್ಕೃಷ್ಟವಾಗಿದೆ - ಎಂಬ ಅರ್ಥವೇ ಆ ಪದಕ್ಕಿರುವುದು. “ಒಂದೇ ನಾದವಾದರೂ ಅಧಿಕಾರಿಭೇದೇನ ಪರಿಣಾಮವನ್ನುಂಟುಮಾಡುತ್ತಿದೆ” -ಎಂಬ ಶ್ರೀಗುರುವಾಣಿಯು ಗಮನೀಯ.

ಜಗದ್ವೃಕ್ಷಕ್ಕೆ ಸರ್ವೋತ್ಕೃಷ್ಟವಾದ ಊರ್ಧ್ವಮೂಲವೇ ಪರಮಪುರುಷನಾದ  ಭಗವಂತ. ಆ ಭಗವದ್ಭಾವವು ಇತ್ತ ಭಕ್ತರಲ್ಲಿ ತುಂಬುವಂತೆ ಮಾಡುವವರೇ ವರ-ಕವಿಗಳು! ಆರ್ಷಸಾಹಿತ್ಯಕ್ಕೆ ಸರಿಸಮನೆನಿಸುವ ಇಂತಹ ಸತ್-ಕಾವ್ಯಸಾಹಿತ್ಯವನ್ನೊದಗಿಸಿದ ವರಕವಿಯಾದ ಲೀಲಾಶುಕನಿಗೆ ನಮ್ಮ ನಮನಗಳು.  ಶ್ಲೋಕ ಹೀಗಿದೆ:

ಲೋಕಾನ್ ಉನ್ಮದಯನ್, ಶ್ರುತೀರ್ಮುಖರಯನ್, ಕ್ಷೋಣೀರುಹಾನ್ ಹರ್ಷಯನ್, /

ಶೈಲಾನ್ ವಿದ್ರವಯನ್, ಮೃಗಾನ್ ವಿವಶಯನ್, ಗೋವೃಂದಮ್ ಆನಂದಯನ್, |

ಗೋಪಾನ್‌ ಸಂಭ್ರಮಯನ್, ಮುನೀನ್ ಮುಕುಳಯನ್, ಸಪ್ತಸ್ವರಾನ್ ಜೃಂಭಯನ್, /

ಓಂಕಾರಾರ್ಥಮ್ ಉದೀರಯನ್ - ವಿಜಯತೇ ವಂಶೀನಿನಾದಃ ಶಿಶೋಃ! ||

ಸೂಚನೆ : 11/4/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಅಷ್ಟಾಕ್ಷರೀ103 ಏತದ್ರಾಜ್ಯಂ ನಾನ್ಯದಸ್ತಿ (Astakshara 103)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png



ಈಗಂತೂ ನಿತ್ರ್ಯವೂ ಪತ್ರಿಕೆಗಳಲ್ಲಿ ಯುದ್ಧದ ಸಮಾಚಾರವೇ. ಗೀತೋಪದೇಶವಾದುದೂ ಒಂದು ಯುದ್ಧಸಂದರ್ಭದಲ್ಲೇ. ಅಣ್ಣತಮ್ಮಂದಿರ ಮಕ್ಕಳು ರಾಜ್ಯನಿಮಿತ್ತವಾಗಿ ಹೊಡೆದಾಡುವ ಸಂದರ್ಭವದು. ಏಕೆ ಬೇಕು ರಾಜ್ಯ? ಏಕೆ ಬೇಡ ರಾಜ್ಯ? - ಈ ಜಿಜ್ಞಾಸೆಯು ಗೀತೆಯ ಆದಿ-ಅಂತಗಳಲ್ಲೂ, ಅಲ್ಲಲ್ಲಿ ಮಧ್ಯದಲ್ಲಿಯೂ, ಕಂಡುವಂತಹುದೇ.

ನಮಗೇ ಅದೇಕೋ ಅರ್ಜುನನ ಮಾತೇ ಒಮ್ಮೊಮ್ಮೆ ಹತ್ತಿರವಾಗುತ್ತದೆ. ಕೃಷ್ಣನ ತರ್ಕವೂ ಸಿದ್ಧಾಂತವೂ ಗಹನವೆಂದೇ ತೋರುತ್ತದೆ. ಆದರೂ ಕೃಷ್ಣನ ಮಾತನ್ನು ಎತ್ತಿಹಾಕಲು ಮನಸ್ಸೂ ಬರುವುದಿಲ್ಲ: ಎಷ್ಟಾದರೂ ದೇವನಲ್ಲವೆ, ಅವನು? ದೇವರೇ ತಪ್ಪು ಮಾಡುವನೇ? ಮಾಡಿಸುವನೇ? ಈ ಭರವಸೆಯೇ ನಮಗೆ ಕೃಷ್ಣನ ಮಾತನ್ನು ಒಪ್ಪಲು ಆಧಾರವಾಗಿಬಿಡುತ್ತದೆ. 

ಏಕೆ ಹೀಗೆ?

ಮೊದಲು ಕೃಷ್ಣನ ಒಂದೆರಡು ಮಾತುಗಳನ್ನು ಗಮನಿಸೋಣ. ಅದೂ ಯುದ್ಧವನ್ನೇ ಕುರಿತು. ಅರ್ಜುನಾ, ನೀನು ಯುದ್ಧವನ್ನು ಮಾಡುವುದಿಲ್ಲವೆನ್ನುವೆಯಾ? ಅಲ್ಲಿಗೆ ನೀನು ಸ್ವಧರ್ಮವನ್ನೂ ಬಿಟ್ಟು, ಕೀರ್ತಿಯನ್ನು ಕಳೆದುಕೊಂಡಂತೆ! ಪಾಪವನ್ನೂ ಸಂಪಾದಿಸಿಕೊಂಡಂತೆ! 

ಮುಂದೇನು? ಜನರು ನಿನ್ನ ಅಪಕೀರ್ತಿಯನ್ನು ಸಾರುವರು. ಸಂಭಾವಿತರಾದವರಿಗೆ ಅಕೀರ್ತಿಯೆಂಬುದು ಮರಣಕ್ಕಿಂತಲೂ ಹೀನವಲ್ಲವೇ? ಹೆದರಿಕೆಯಿಂದ ರಣಾಂಗಣದಿಂದ ಓಡಿಹೋದ ಹೇಡಿಯೆನ್ನುತ್ತಾರೆ, ಮಹಾರಥರು! ಬದಲಾಗಿ ನೀನು ಯುದ್ಧ ಮಾಡಿದಲ್ಲಿ, ಸತ್ತೆಯೋ ಸ್ವರ್ಗವನ್ನು ಪಡೆಯುವೆ. ಗೆದ್ದೆಯೋ ಭೂಮಂಡಲವನ್ನು ಭೋಗಿಸುವೆ! 

ಅಷ್ಟೇಕೆ? ನಾನೇ ಎಲ್ಲರನ್ನೂ ಕೊಂದಾಗಿದೆ, ನೀನು ನಿಮಿತ್ತಮಾತ್ರ - ಎಂದೂ ಉದ್ಗರಿಸಿದ!

ಕೊನೆಯಲ್ಲಂತೂ, “ನೀನೇನಾದರೂ ಅಹಂಕಾರಕ್ಕೆ ಪಕ್ಕಾಗಿ ನಾನು ಯುದ್ಧ ಮಾಡುವುದಿಲ್ಲವೆಂದುಕೊಂಡೆಯೋ, ಅಂತಹ ನಿನ್ನ ನಿಶ್ಚಯವೇ ನಿರರ್ಥಕ. ಏಕೆನ್ನುವೆಯೋ? ನಿನ್ನ ಪ್ರಕೃತಿಯೇ ನಿನ್ನನ್ನು ಪ್ರೇರಿಸುವುದು. ಮೋಹದಿಂದ ನೀನು ಒಲ್ಲೆಯೆನ್ನುವುದನ್ನು ನೀನು ಪರವಶನಾಗಿಯೇ ಮಾಡುವೆ!”

ಇವೆಲ್ಲಾ ಯುದ್ಧಪ್ರೇರಕವಾದ ಮಾತುಗಳೇ! 

ಯುದ್ಧವನ್ನು ಬೇಡವೆನ್ನುವ ಅರ್ಜುನನ ಮಾತುಗಳನ್ನೊಮ್ಮೆ ನೋಡುವಾ ಎರಡು ಕಡೆ ಇದ್ದ ಮಂದಿಯನ್ನು ಕಂಡು ಕಂಗಾಲಾದ, ಅರ್ಜುನ. ಎಲ್ಲರೂ ತನ್ನವರೇ: ಪಿತೃ-ಪಿತಾಮಹರು, ಭ್ರಾತೃ-ಪುತ್ರ-ಪೌತ್ರರು, ಮಾತುಲ-ಶ್ವಶುರ-ಆಚಾರ್ಯರುಗಳು! 

ಆತನಿಗೆ ತೀವ್ರದಯೆಯುಕ್ಕಿತು. ನಡುಕವೂ ಜೊತೆಗೇ ಉಂಟಾಯಿತು! ಸ್ವಜನಹನನ ಸರಿಯಲ್ಲವೆಂದ. ನನಗೆ ವಿಜಯ-ರಾಜ್ಯ-ಸುಖಗಳು ಬೇಡವೆಂದ. ಬದುಕಿದ್ದು ತಾನೇ ಪ್ರಯೋಜನವೇನೆಂದ. ಕುಲಕ್ಷಯದ ಪರಿಣಾಮಗಳನ್ನು ಪಟ್ಟಿಮಾಡಿದ. ರಾಜ್ಯಸುಖದ ಲೋಭದಿಂದ ಕೊಲ್ಲುವುದು ಮಹಾಪಾಪವಲ್ಲವೇ? - ಎಂದ. ಕೌರವರೇ ನಮ್ಮನ್ನು ಕೊಲ್ಲುವುದೇ ತೆರನೆಂದೂ ವಾದಿಸಿದ. ಸೆಣಸಲು ನೆರೆದಿರುವವರನ್ನು ರಕ್ತಸಿಕ್ತಭೋಗಕ್ಕಾಗಿ ಕೊಲ್ಲುವುದೇ? ಎಂದ.

ಅರ್ಜುನನ ಮಾತಿನಲ್ಲಿ ಹೆಜ್ಜೆಹೆಜ್ಜೆಗೂ ರಾಜ್ಯ-ಸುಖ-ಲೋಭಗಳ ಮಾತುಗಳೇ! ಎಲ್ಲವೂ ಲೋಭದ ಕೈವಾಡವೆಂದಂತಾಯಿತು! ಎಂದೇ ಕೃಷ್ಣನು ಲೋಭದ ಮೂಲಕ್ಕೇ ಹೋದದ್ದು. 

“ಕಾಮ-ಕ್ರೋಧ-ಲೋಭಗಳೇ ನರಕದ್ವಾರ. ಇವುಗಳನ್ನು ಗೆಲ್ಲಲು ಬೇಕಾದದ್ದು ಇಂದ್ರಿಯ-ನಿಯಮನ. ಲೋಭದ ಸಹಚಾರಿಗಳಾದ ಕಾಮ-ಕ್ರೋಧಗಳೇ, ಅಥವಾ ಕಾಮವೇ, ನಿಜವಾದ ಶತ್ರು.”  ಭಗವದ್ಗೀತೆಯು ಮಹಾಭಾರತದ ಭೀಷ್ಮಪರ್ವದಲ್ಲಿ ಬರುವಂತಹುದು. ಆಶ್ವಮೇಧಿಕಪರ್ವದಲ್ಲಿ ಬರುವ ಅನುಗೀತಾಪರ್ವದಲ್ಲಿಯ ಒಂದು ಪ್ರಸಂಗವನ್ನು ಶ್ರೀರಂಗಮಹಾಗುರುಗಳು ಉಲ್ಲೇಖೀಸುತ್ತಿದ್ದರು. ಇದು ಅಂಬರೀಷಗೀತೆಯೆನಿಸುವುದು.

ಅಂಬರೀಷನು ಬಂದಾಗ ರಾಜ್ಯದಲ್ಲಿ ದುಷ್ಟರು ಹೆಚ್ಚಾಗಿದ್ದರು - ಸಜ್ಜನರಿಗೆ ತೀವ್ರಬಾಧೆಯಾಗಿತ್ತು. ರಾಜ್ಯಸೂತ್ರವನ್ನು ಕೈಗೆತ್ತಿಕೊಂಡ ಅಂಬರೀಷನು ಮೊಟ್ಟಮೊದಲು ಮಾಡಿದುದು ತನ್ನಲ್ಲಿಯ ದೋಷಗಳನ್ನೇ ಮೀರಿ ನಿಂತದ್ದು, ಸಜ್ಜನರನ್ನು ಆದರಿಸಿದ್ದು. ಬಳಿಕವೇ ಸರ್ವಶತ್ರುಗಳನ್ನೂ ಸಂಹರಿಸಿದುದು.

ಅದು ಹೇಗೆ ಸಾಧ್ಯವಾಯಿತೆನ್ನುವುದನ್ನು ವಿವರಿಸುತ್ತಾ ತಾನೇ ಹೇಳುತ್ತಾನೆ: ಮನುಷ್ಯನನ್ನು ದುರ್ಮಾರ್ಗದಲ್ಲಿ ಪ್ರೇರಿಸುವುದು ಲೋಭ. ಅದರ ಒಂದು ಸಮ್ಯಗ್- ಅವೇಕ್ಷಣವು ಬೇಕು. ಎಂದರೆ ಚೆನ್ನಾಗಿ ಆತ್ಮಾವಲೋಕನವನ್ನು ಮಾಡಿಕೊಳ್ಳಬೇಕು. ಧೃತಿಯಿಂದ ಲೋಭವನ್ನು ನಿಗ್ರಹಿಸಿಕೊಳ್ಳಬೇಕು. ಹಾಗೆ ಮಾಡಿಕೊಂಡು ಆತ್ಮನಲ್ಲಿಯ, ಎಂದರೆ ತನ್ನೊಳಗಿನದೇ ಆದ, ರಾಜ್ಯವನ್ನು ಆಳಲು ಬಯಸಬೇಕು. ನಿಜವಾದ ರಾಜ್ಯವೆಂದರೆ ಇದೇ, ಬೇರೆ ರಾಜ್ಯವೆಂಬುದಿಲ್ಲ (ಏತದ್ ರಾಜ್ಯಂ, ನಾನ್ಯದಸ್ತಿ). ಸರಿಯಾಗಿ ಅರಿತುಕೊಂಡರೆ ಜ್ಞಾನಸ್ವರೂಪಿಯಾದ ಆತ್ಮನೇ ರಾಜ.

ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ "ಆತ್ಮರಾಜನು ಈ ಶರೀರವನ್ನು ಹೇಗೆ ಆಳುತ್ತಾನೆಯೋ, ಅಂತೆಯೇ ಆತನ ಪ್ರತೀಕವಾಗಿ ಹೊರಗೆ ರಾಜನು ಆಳುತ್ತಾನೆ." ಕೌಟಲ್ಯನೂ ಸಹ ತನ್ನ ಅರ್ಥಶಾಸ್ತ್ರದಲ್ಲಿ ಅಂಬರೀಷನನ್ನು ಒಬ್ಬ ಆದರ್ಶರಾಜನನ್ನಾಗಿ ಹೇಳಿರುವನು. ಅದೂ ಇಂದ್ರಿಯಸಂಯಮಾಧ್ಯಾಯದಲ್ಲಿಯೇ.

ಮಹಾಭಾರತದಲ್ಲೂ ಕೃಷ್ಣನು ಏತಕ್ಕಾಗಿ ಯುದ್ಧಕ್ಕೆ ಪ್ರಚೋದನೆ ನೀಡಿದುದು? ದುರ್ಯೋಧನನು ಅಮಿತವಾದ ಲೋಭಕ್ಕೆ ವಶನಾಗಿದ್ದನೆಂದೇ. ಒಳಗಣ ಶತ್ರುವನ್ನು ಜಯಿಸದ ಅಧರ್ಮಿಷ್ಠನು ರಾಜ್ಯವನ್ನೆಂತು ಸರೊಯಾಗಿ ಆಳಿಯಾನು? ರಾಜ್ಯಸುಖದ ಲೋಭಕ್ಕಾಗಿ ಅಲ್ಲ ಯುದ್ಧಮಾಡುವುದು, ಧರ್ಮಪ್ರತಿಷ್ಠಾಪನೆಗಾಗಿ. 

ಹೀಗಾಗಿ ಲೋಭಕ್ಕಾಗಿ ಆದರೆ ಯುದ್ಧ ಬೇಡ. ಧರ್ಮಸಂಸ್ಥಾಪನೆಗಾಗೆಂದರೆ ಅದು ಅವಶ್ಯವೇ ಸರಿ.

ಸೂಚನೆ: 11/4//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.