ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೩. ಈ ಜಗತ್ತು ಯಾರ ವಶದಲ್ಲಿದೆ?
ಧರ್ಮದಲ್ಲಿ ಪ್ರೀತಿ ಮತ್ತು ಪ್ರಿಯವೂ ಹಿತವೂ ಆದ ಮಾತನ್ನು ಆಡುವವನ.
ಈ ಪ್ರಶ್ನೆಯನ್ನು ಕೇಳಿದ ಆ ಕ್ಷಣದಲ್ಲಿ ಅನೇಕ ಉತ್ತರಗಳು ತಮ್ಮ ಮನಸ್ಸಿನಲ್ಲಿ ಗೋಚರವಾಗುತ್ತವೆ. ಈ ಜಗತ್ತು ಭಗವಂತನ ವಶದಲ್ಲಿ ಇದೆ. ಅಥವಾ ಈ ಜಗತ್ತು ಮಾನವನ ವಶದಲ್ಲಿ ಇದೆ. ಅಥವಾ ಈ ಜಗತ್ತು ಒಬ್ಬ ಪರಾಕ್ರಮಿ ಆದ ರಾಜನ ವಶದಲ್ಲಿದೆ ಎಂಬುದಾಗಿ. ಆದರೆ ಇಲ್ಲಿ ಹೇಳುವ ಉತ್ತರ ಇದಾವುದೂ ಅಲ್ಲ. ಏಕೆಂದರೆ ಈ ಜಗತ್ತು ಇವರಾರಿಂದಲೂ ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯವಾದುದಲ್ಲ. ಅಂದರೆ ಒಬ್ಬ ಪರಾಕ್ರಮಿ, ಬಲಾಢ್ಯನಾಗಿರುವಂತಹ ವ್ಯಕ್ತಿ ಜಗತ್ತನ್ನು ವಶದಲ್ಲಿ ಇಟ್ಟುಕೊಳ್ಳಲು ಅಸಾಧ್ಯ. ಆದರೆ ಭಗವಂತ ಅಂದರೆ ಈ ಪ್ರಪಂಚದ ಮೂಲ ಶಕ್ತಿ. ಇದು ತಾನೇ ತನ್ನ ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯ? ಎಂಬುದಾಗಿ ಅನ್ನಿಸಬಹುದು. ಹೌದು. ಒಂದರ್ಥದಲ್ಲಿ ಇದು ಉತ್ತರವಾಗಿ ಅನ್ನಿಸಲು ಅವಕಾಶ ಇದೆ. ಭಗವಂತನ ಮೂರು ಚೈತನ್ಯಗಳು ಬ್ರಹ್ಮ, ವಿಷ್ಣು, ಮಹೇಶ್ವರ. ಇವರಿಂದ ಸೃಷ್ಟಿ, ಸ್ಥಿತಿ ಮತ್ತು ಲಯವೆಂಬ ಮೂರು ವ್ಯಾಪಾರಗಳು ನಡೆಯುತ್ತವೆ. ಇವರೇ ಈ ಸೃಷ್ಟಿಯ ನಿಯಾಮಕರು ಎಂಬುದಾಗಿ ತಿಳಿಯಬಹುದು. ಆದರೆ ಇಲ್ಲಿ ಬರುವ ಉತ್ತರ ಇವೆಲ್ಲಕ್ಕೂ ಮೂಲವಾದದ್ದು. ಹಾಗಾದರೆ ಈ ಉತ್ತರ ಅದು ಹೇಗೆ ಸಮರ್ಪಕ? ಅಂದರೆ ಧರ್ಮದಲ್ಲಿ ಪ್ರೀತಿ ಇದ್ದು, ಅದನ್ನು ಮಾತಿನಲ್ಲಿ ಆಡುವವನು ಈ ಜಗತ್ತನ್ನು ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯ ಎಂಬ ಉತ್ತರ.
ಒಂದು ಮಾತು ಪ್ರಿಯವಾದದ್ದಾಗಿ ಇದ್ದು, ಆ ಮಾತು ಧರ್ಮದಿಂದ ಕೂಡಿದ್ದು, ಧರ್ಮದಲ್ಲಿ ಪ್ರೀತಿ ಉಳ್ಳದ್ದಾಗಿ ಆಗಿದ್ದರೆ, ಅಂತಹ ಮಾತು ಈ ಜಗತ್ತನ್ನು ವಶದಲ್ಲಿ ಇಟ್ಟುಕೊಳ್ಳಬಹುದು ಎಂಬ ಮಾರ್ಮಿಕವಾದ ಉತ್ತರವನ್ನು ಇಲ್ಲಿ ನೀಡಲಾಗಿದೆ. ಅಂದರೆ ಮಾತಿಗೆ ಅದೆಷ್ಟು ಸಾಮರ್ಥ್ಯವಿದೆ! ಎಂದು ಅರ್ಥ. ಮಾತಿಗೆ ಸಾಮರ್ಥ್ಯ ಬರುವುದಕ್ಕೆ ಕಾರಣ ಧರ್ಮವೇ ಆಗಿದೆ. ಹಾಗಾದರೆ ಧರ್ಮದಿಂದ ಮಾತಿಗೆ ಸಾಮರ್ಥ್ಯ ಹೇಗೆ ಬಂತು? ಧರ್ಮ ಎಂದರೇನು? ಶ್ರೀರಂಗ ಮಹಾಗುರುಗಳು ಹೇಳಿದಂತೆ ಈ ಜಗತ್ತನ್ನು ಧರಿಸಿರುವುದೇ ಧರ್ಮ. ಅದು ಒಂದು ಚೈತನ್ಯಶಕ್ತಿ ಆಗಿರಬಹುದು ಅಥವಾ ಆ ಚೈತನ್ಯಶಕ್ತಿಯಿಂದ ವಿಸ್ತರಗೊಂಡ ಅನೇಕ ಚೇತನ್ಯಶಕ್ತಿಗಳಿರಬಹುದು. ಅವೆಲ್ಲವೂ ಧರ್ಮವೇ. ಈ ಶಕ್ತಿಯನ್ನು ಅಂತೆಯೇ ಉಳಿಸುವುದಕ್ಕೆ ಬೇಕಾದ ಯಾವೆಲ್ಲ ಕ್ರಿಯಾ ಕಲಾಪಗಳಿವೆಯೋ ಅವೆಲ್ಲವನ್ನೂ ಧರ್ಮವೆಂದು ಕರೆಯಬಹುದು ಎಂದು. ಮಾತು ಕೂಡ ಧರ್ಮದಿಂದಲೇ, ಧರ್ಮದ ಮೂಲದಿಂದಲೇ ವಿಕಾಸಗೊಂಡದ್ದು. ಮಾತು ಧರ್ಮವನ್ನು ಉಳಿಸುತ್ತದೆ. ಒಂದು ವೇಳೆ ಮಾತು ಸರಿಯಾಗಿಲ್ಲದಿದ್ದರೆ ಧರ್ಮವನ್ನು ಹಾಳು ಮಾಡುತ್ತದೆ. ಅದಕ್ಕೆ ಒಂದು ಸುಭಾಷಿತವು ಹೀಗೆ ಹೇಳುತ್ತದೆ - ಯಾವ ರೀತಿಯಾದ ಮಾತನ್ನು ಹೇಳಬೇಕು? ಎಂದು. ಸತ್ಯವಾದದ್ದನ್ನು ಪ್ರಿಯವಾದದ್ದನ್ನು ಹೇಳಬೇಕು. ಅಪ್ರಿಯವಾದ ಸತ್ಯವನ್ನು ಹೇಳಬಾರದು. ಪ್ರಿಯವಾಗುತ್ತದೆಂದು ಸುಳ್ಳನ್ನು ಹೇಳಬಾರದು ಎಂದು. ಇಂತಹ ಮಾತು ಧರ್ಮವನ್ನು ಉಳಿಸುತ್ತದೆ. ಹೇಗೆ ಆಡಿದರೆ ಅದು ಧರ್ಮವನ್ನು ಉಳಿಸುತ್ತದೆ ಎಂಬುದನ್ನು ಅರಿತು ಮಾತನಾಡಬೇಕು. ಹೀಗೆ ಮಾತನಾಡುವ ಒಬ್ಬ ವ್ಯಕ್ತಿ ಧರ್ಮವನ್ನು ಕಾಪಾಡಬಲ್ಲ. ತನ್ಮೂಲಕ ಜಗಚ್ಛಕ್ತಿಯಾದ ಈ ಚೈತನ್ಯವನ್ನು ಈ ಮಾತಿನ ಮೂಲಕ ಬಲಗೊಳಿಸಬಲ್ಲ. ಹಾಗಾಗಿ ಇಂತಹ ಮಾತಿಗೆ ಜಗತ್ತನ್ನು ಆಳುವ, ವಶದಲ್ಲಿ ಇಟ್ಟುಕೊಳ್ಳುವ ಅದ್ಭುತ ಸಾಮರ್ಥ್ಯವಿದೆ ಎಂಬ ವಿಶಿಷ್ಟವಾದ ಪರಿಕಲ್ಪನೆಯ ಉತ್ತರ ಇಲ್ಲಿದೆ.
ಸೂಚನೆ : 26/4/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.