Tuesday, June 2, 2026

ವ್ಯಾಸ ವೀಕ್ಷಿತ 190 ಉತ್ತರದತ್ತ ಅರ್ಜುನ: ಭಗದತ್ತನಿತ್ತ ಸಂಗರ (Vyaasa Vikshita190)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png



ಧನಪತಿಯಾದ ಕುಬೇರನ ದಿಕ್ಕೆಂದು ಪ್ರಸಿದ್ಧವಾದದ್ದು ಉತ್ತರದಿಕ್ಕು. ಅರ್ಜುನನು ಆ ದಿಕ್ಕನ್ನು, ಹಾಗೆಯೇ ಭೀಮಸೇನನು ಪೂರ್ವದಿಕ್ಕನ್ನು, ಜಯಿಸಿದನು. ಸಹದೇವನು ದಕ್ಷಿಣವನ್ನು, ಮತ್ತು ಅಸ್ತ್ರಜ್ಞನಾದ ನಕುಲನು ಪಶ್ಚಿಮದಿಕ್ಕನ್ನು ಜಯಿಸಿದನು.

ಇತ್ತ ಧರ್ಮರಾಜನಾದ ಯುಧಿಷ್ಠಿರ-ಪ್ರಭುವು ಮಾತ್ರ ಖಾಂಡವಪ್ರಸ್ಥದ ಮಧ್ಯದಲ್ಲಿಯೇ ಇದ್ದುಕೊಂಡು, ಮಿತ್ರರಿಂದ ಸುತ್ತುವರಿಯಲ್ಪಟ್ಟವನಾಗಿ, ಉತ್ತಮವಾದ ರಾಜಲಕ್ಷ್ಮಿಯಿಂದ ಕಂಗೊಳಿಸಿದನು. ಹಾಗೆಂದು ಸಂಕ್ಷೇಪವಾಗಿ ಹೇಳಿದರೇನು ಬಂತು? ವಿಸ್ತೃತವಾಗಿಯೂ ಹೇಳಬೇಕಲ್ಲವೇ?

ಮೊದಲು ಅರ್ಜುನನ ವಿಷಯ. ಕುಲಿಂದದೇಶದ ಅರಸರನ್ನು ಅರ್ಜುನನು ಮೊಟ್ಟಮೊದಲು ಜಯಿಸಿದನು. ಅದಕ್ಕಾಗಿ ತೀವ್ರವಾದ ಶ್ರಮವೇನೂ ಆತನಿಗೆ ಬೇಕಾಗಲಿಲ್ಲ. ಅವರೊಂದಿಗೆ ಆನರ್ತ, ಕಾಲಕೂಟ ಎಂಬ ರಾಜ್ಯಗಳನ್ನು ಗೆದ್ದನು. ಬಳಿಕ ಸುಮಂಡಲನೆಂಬ ರಾಜನನ್ನು ಗೆದ್ದನು. ಆಮೇಲೆ ಶಾಕಲದ್ವೀಪ ಹಾಗೂ ಸಪ್ತದ್ವೀಪಗಳ ಅರಸರೊಂದಿಗೆ ತುಮುಲವಾದ ಯುದ್ಧವೇ ಆಯಿತು. ಅಲ್ಲೆಲ್ಲಾ ಉತ್ತಮ-ಧನುರ್ಧಾರಿಗಳೇ ಇದ್ದರು. 

ಅವರನ್ನು ಸೋಲಿಸಿದ ಬಳಿಗೆ ಪ್ರಾಗ್ಜ್ಯೋತಿಷ-ಪುರದತ್ತ ಧಾವಿಸಿದನು. ಅಲ್ಲಿನ ರಾಜ ಭಗದತ್ತ. ಆತನಿಗೆ ಕಿರಾತರ ಹಾಗೂ ಚೀನದೇಶದವರ ಸಹಕಾರವಿತ್ತು. ಸಾಗರ ಹಾಗೂ ಅದರ ಬಳಿಯ ಅನೂಪ(ಎಂದರೆ ಜೌಗು ಪ್ರದೇಶ)ಗಳ ಮಂದಿಯ ಸಹಕಾರವೂ ಇತ್ತು. ಎಂಟು ದಿನಗಳ ಯುದ್ಧವದು. 

ಅಷ್ಟು ದಿನ ಸೆಣಸಿದ ಭಗದತ್ತನು ನಗುತ್ತಾ ದಣಿವರಿಯದ ಅರ್ಜುನನಿಗೆ ಹೇಳಿದನು: "ಮಹಾಬಾಹೋ ಅರ್ಜುನ, ಸಂಗ್ರಾಮಕ್ಕೆ ಶೋಭೆ ನಿನ್ನ ಪರಾಕ್ರಮ. ಇಂದ್ರಪುತ್ರನೆನಿಸಿದ ನಿನಗೆ ಇದು ಒಪ್ಪುತ್ತದೆ ಬಿಡು! ನಾನು ಸಹ ಇಂದ್ರನ ಮಿತ್ರನೇ. ರಣದಲ್ಲಿ ಶಕ್ರನಿಗೆ ಏನೂ ಕಡಿಮೆಯಿಲ್ಲದವನು. ಆದರೂ ನಿನ್ನ ಮುಂದೆ ನಾ ನಿಲ್ಲಲಾರೆ. ಪಾಂಡುಪುತ್ರನೇ, ನಿನಗೇನು ಬೇಕು ಹೇಳು, ನಿನಗಾಗಿ ನಾನೇನನ್ನು ಮಾಡಲಿ? ವತ್ಸನೇ (ಎಂದರೆ ಪುತ್ರನೇ), ನೀನೇನನ್ನು ಹೇಳುವೆಯೋ ಅದನ್ನು ಮಾಡುವೆ" ಎಂದನು.

ಆಗ ಅರ್ಜುನನು ಹೇಳಿದನು: "ಕುರುವಂಶದ ಅರಸರಲ್ಲಿ ಶ್ರೇಷ್ಠನಾದವನು ಧರ್ಮರಾಜನಾದ ಯುಧಿಷ್ಠಿರ. ಆತನು ಧರ್ಮಜ್ಞ, ಸತ್ಯಸಂಧ. ಆತನು ದೊಡ್ಡಯಜ್ಞವನ್ನು ಮಾಡಿ ವಿಪುಲವಾದ ದಕ್ಷಿಣೆಯನ್ನು ಕೊಡಲಿರುವನು. ಆತನು ಚಕ್ರವರ್ತಿಯಾಗಬೇಕೆಂಬುದು ನನ್ನ ಬಯಕೆ. ಆತನಿಗೆ ನೀನು ಕರವನ್ನೀಯಬೇಕೆಂಬುದೇ ನನ್ನ ಅಪೇಕ್ಷೆ. ನೀನು ನನ್ನ ತಂದೆಯ ಸಖ. ನನ್ನ ವಿಷಯದಲ್ಲೂ ಪ್ರೀತಿಯುಳ್ಳವನು. ಆದ್ದರಿಂದ ನಾನು ನಿನಗೆ ಅಪ್ಪಣೆ ಮಾಡಲಾರೆ. ಆದುದರಿಂದ ಪ್ರೀತಿಪೂರ್ವಕವಾಗಿಯೇ ಕರವನ್ನು ಕೊಡೋಣವಾಗಲಿ" ಎಂದನು.

ಅದಕ್ಕೆ ಭಗದತ್ತನು, "ಕುಂತಿಪುತ್ರನೇ, ನನಗೆ ನೀನೆಂತೊ ಅಂತೆಯೇ ಯುಧಿಷ್ಠಿರನೂ. ಅದೆಲ್ಲವನ್ನೂ ಮಾಡುತ್ತೇನೆ. ಮತ್ತೂ ಏನನ್ನು ಮಾಡಬೇಕು, ಹೇಳು" ಎಂದನು. ಆತನು ಹಾಗೆ ಹೇಳಲು ಅರ್ಜುನನು ಹೀಗೆಂದನು: "ಇಷ್ಟರಿಂದಲೇ ನನಗೆಲ್ಲವನ್ನೂ ನೀ ಮಾಡಿದಂತೆ. ನನಗೆ ಅನುಮತಿಯನ್ನು ಕೊಡು, ನಾನಿನ್ನು ಹೊರಡಬೇಕು" ಎಂದನು. 

ಹೀಗೆ ಅವನನ್ನು ಜಯಿಸಿ ಅರ್ಜುನನು ಉತ್ತರದಿಕ್ಕಿನಲ್ಲಿ ಮತ್ತೂ ಮುಂದುವರೆದನು. ಅಂತರ್ಗಿರಿ, ಬಹಿರ್ಗಿರಿ, ಉಪಗಿರಿ - ಎಂಬ ಭೂಪ್ರದೇಶಗಳನ್ನು ಜಯಿಸಿದನು. ಅಲ್ಲಿದ್ದ ಪರ್ವತಗಳನ್ನೂ, ಪರ್ವತವಾಸಿಗಳನ್ನೂ ತನಗೆ ಅಧೀನರನ್ನಾಗಿ ಮಾಡಿಕೊಂಡು ಅವರಿಂದ ಮಾಡಬೇಕಾದ ವಸೂಲಿಯನ್ನು ಮಾಡಿದನು. 

ಹಾಗೆ ಮಾಡಿಯೂ ಅವರನ್ನು ಪ್ರಸನ್ನಗೊಳಿಸಿ, ಅವರೆಲ್ಲರೊಂದಿಗೆ ಮುಂದಿನ ರಾಜ್ಯವಾದ ಉಲೂಕದ ರಾಜನಾದ ಬೃಹಂತನ ಮೇಲೇರಿಹೋದನು. ಆತನು ಹೋಗುವಾಗ ಮೃದಂಗದ ನಾದವೇನು, ರಥನೇಮಿಯ ನಾದವೇನು, ಗಜಗಳ ಗದ್ದಲಗಳೇನು! ಇವೆಲ್ಲವುಗಳಿಂದ ಭೂಮಿಯೇ ನಡುಗಿತು.

ಸೂಚನೆ : 31/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 68 (Prasnottara Ratnamalike 68)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಪ್ರಶ್ನೆ - ೬೮. ಯಾವ ದೇಶವನ್ನು ತ್ಯಾಗ ಮಾಡಬೇಕು?

ಚಾಡಿಕೋರ ಮತ್ತು ಜಿಪುಣನಾದ ರಾಜನಿದ್ದ ದೇಶವನ್ನು. 


ಒಂದು ದೇಶ ಸುಭಿಕ್ಷವಾಗಿ ಇದ್ದರೆ ಆ ದೇಶದಲ್ಲಿ ವಾಸಮಾಡುವ ಜನರು ಕೂಡ ಅತ್ಯಂತ ಸಂತೋಷದಿಂದ ಇರುತ್ತಾರೆ. ಇದಕ್ಕೆ ಮುಖ್ಯವಾದ ಕಾರಣ ಆ ವ್ಯವಸ್ಥೆ. ಆ ವ್ಯವಸ್ಥೆಯನ್ನು ನೋಡಿಕೊಳ್ಳಲು ಅನೇಕ ಜನರು ಇರುತ್ತಾರೆ. ಆ ವ್ಯವಸ್ಥೆಗೆ ಒಬ್ಬ ಮುಖ್ಯಸ್ಥ ಎಂಬುವವನು ಇರುತ್ತಾನೆ. ಆ ದೇಶದಲ್ಲಿ ಒಬ್ಬ ರಾಜನಿರುತ್ತಾನೆ. ಅನೇಕ ಮಂತ್ರಿಗಳು, ಅನೇಕ ಸಾಮಂತರು ಹೀಗೆ ಒಂದು ಸುವ್ಯವಸ್ಥಿತವಾಗಿ ನಡೆಸಲು ಬೇಕಾದ ಎಲ್ಲ ರೀತಿಯ ಅನುಕೂಲತೆಗಳು ಇರುತ್ತವೆ. ಹೀಗಿದ್ದಾಗ ಆ ದೇಶದಲ್ಲಿ ವಾಸ ಮಾಡಬೇಕು. ಆದರೆ ಇಲ್ಲಿ ಕೇಳುವ ಪ್ರಶ್ನೆ ಇದಕ್ಕೆ ವಿಪರೀತವಾಗಿತ್ತು. ಇಂತಹ ವ್ಯವಸ್ಥೆಯನ್ನು ಹಾಳುಮಾಡುವ ವ್ಯಕ್ತಿ ಇದ್ದರೆ, ಅಂತಹ ದೇಶದಲ್ಲಿ ವಾಸಮಾಡಬಾರದು ಎಂಬುದಾಗಿ ಹೇಳುತ್ತದೆ. ಅಂದರೆ ಒಬ್ಬ ಚಾಡಿಕೋರ ಅಥವಾ ಜಿಪುಣನಾದ ವ್ಯಕ್ತಿ ಈ ವ್ಯವಸ್ಥೆಯ ಮಧ್ಯದಲ್ಲಿ ಇದ್ದರೆ, ಆಗ ಆ ವ್ಯವಸ್ಥೆಯು ಹಾಳಾಗುತ್ತದೆ. ಮತ್ತುಆ ದೇಶ ಎಷ್ಟು ಸುಭಿಕ್ಷವಾಗಿದ್ದರೂ ಕೂಡ ಅದು ಮುಂದೆ ಯಾವುದೋ ಕಾಲದಲ್ಲಿ ದುರ್ಭಿಕ್ಷೆಗೆ ಈಡಗುತ್ತದೆ. ಹಾಗಾಗಿ ಇಂಥವನು ಇರುವ ದೇಶದಲ್ಲಿ ಇರಬಾರದು; ಅದನ್ನು ತೊರೆಯಬೇಕು ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.

ಹಾಗಾದರೆ ಚಾಡಿಕೋರ ಮತ್ತು ಜಿಪುಣ ಎಂದರೇನು? ಇವರಿಂದ ವ್ಯವಸ್ಥೆ ಹೇಗೆ ಹಾಳಾಗುತ್ತದೆ? ಎಂಬುದನ್ನು ತಿಳಿಯಬೇಕು. ಚಾಡಿಕೋರನು ಒಬ್ಬರ ಮಾತನ್ನು ಇನ್ನೊಬ್ಬರಿಗೆ ಹೇಳುತ್ತಾನೆ ಮತ್ತು ಹೀಗೇ ಮಾಡುವುದರ ಮೂಲಕ ಜಗಳ ತಂದು ಇಡುತ್ತಾನೆ. ಆಗ ಅವರಿಬ್ಬರ ಮಧ್ಯದಲ್ಲಿರುವ ಬಾಂಧವ್ಯ ಕೆಡುತ್ತದೆ. ಇದರ ಕಾರಣವಾಗಿ ಅವರ ಮಧ್ಯೆ ತೊಂದರೆ ಉಂಟಾಗುತ್ತದೆ. ಈ ಚಾಡಿ ಕೋರನಿಗೆ ಕದ್ದು ಕೇಳುವ ಹಾಗು ಸುಳ್ಳುನ್ನು ಸೃಷ್ಟಿಸಿ ಹೇಳುವ ಸ್ವಭಾವವಿರುತ್ತದೆ. ಮತ್ತು ಹೇಳುವ ವಿಷಯಕ್ಕೆ ಸ್ವಲ್ಪ ಖಾರ ಮಸಾಲೆ ಹಾಕಿ ಕೇಳುವವರಿಗೆ ತನ್ನ ಬಗ್ಗೆ ವಿಶೇಷವಾದ ಇನ್ನಷ್ಟು ಕಾಳಜಿ, ಪ್ರೀತಿ ಬರಲಿ ಎಂಬ ರೀತಿಯಲ್ಲಿ  ಅವನ ಮಾತುಕತೆಗಳು ಇರುತ್ತವೆ. ಇದರ ಬಗ್ಗೆ ಒಂದು ಸುಭಾಷಿತ ಹೇಗಿದೆ - “ಪರೋಕ್ಷಂ ಗುಣಹಂತಾರಂ ಪ್ರತ್ಯಕ್ಷಂ ಪ್ರಿಯವಾದಿನಮ್। ವರ್ಜಯೇತ್ ತಾದೃಶಂ ಮಿತ್ರಂ ವಿಷಕುಂಭಂ ಪಯೋಮುಖಮ್॥” ಒಳ್ಳೆಯದು ಆಗದಂತೆ ವ್ಯವಸ್ಥೆಯ ಹಿಂದುಗಡೆ ಕೆಲಸ ಮಾಡುತ್ತಾನೆ; ಎದುರುಗಡೆ ಪ್ರಿಯವಾಗಿ ಮಾತನಾಡುತ್ತಾನೆ. ಅಂದರೆ ‘ಹಾಲಿನ ಮುಖವುಳ್ಳ ಗಡಿಗೆಯಂತೆ’ ಈ ವ್ಯಕ್ತಿಯನ್ನು ಹೋಲಿಸಿ ಹೇಳಿದ್ದುಂಟು.

ಇನ್ನೊಬ್ಬ ವ್ಯಕ್ತಿ ಜಿಪುಣ. ಎಂದರೆ ಕಂಜೂಸ್. ಹಣ ಎಷ್ಟೇ ಇದ್ದರೂ ತನಗಾಗಲಿ ಅಥವಾ ಬೇರೆಯವರಿಗಾಗಲಿ ಒಂದು ಕಾಸನ್ನು ತನ್ನಿಂದ ಬಿಚ್ಚಲು ಇಷ್ಟಪಡುವುದಿಲ್ಲ. ಇವನಿಗೆ ಜಿಪುಣ ಎಂದು ಕರೆಯಬೇಕು. ಅಂದರೆ ಒಂದಷ್ಟನ್ನು ಕೂಡಿಟ್ಟುಕೊಂಡೇ ಖುಷಿಪಡುವಂತಹ ಸ್ವಭಾವ ಈತನದ್ದು. ಇದರಿಂದ ಹಣವನ್ನು ಅಥವಾ ಪದಾರ್ಥವನ್ನು ಹೇಗೆ ಸದ್ವಿನಿಯೋಗ ಮಾಡಬೇಕು? ಎಂಬ ಬಗ್ಗೆ ಇವನಿಗೆ ಸ್ವಲ್ಪವೂ ಆಸಕ್ತಿಯೂ ಇಲ್ಲ. ಹೀಗಾಗಿ ವ್ಯವಸ್ಥೆಯಲ್ಲಿ ಈ ಬಗೆಯ ವ್ಯಕ್ತಿ ಇದ್ದರೆ ವ್ಯವಸ್ಥೆಗೆ ಬೇಕಾದ ಯಾವ ಹಣವೂ ಅಥವಾ ಪದಾರ್ಥವೂ ಅಲ್ಲಿ ಬಳಕೆಯಾಗುವುದಿಲ್ಲ. ‘ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ’ ಎಂಬ ದಾಸ ವಾಣಿಗೆ ಅತ್ಯಂತ ವಿರುದ್ಧವಾದ ವ್ಯಕ್ತಿ ಈತ. ಆದ್ದರಿಂದ ಜಿಪುಣ ಮತ್ತು ಚಾಡಿಕೋರ ಎಂಬ ಎರಡು ವಿಧವಾದ ವ್ಯಕ್ತಿಗಳು ಇದ್ದಲ್ಲಿ ಆ ದೇಶ ಹಾಳಾದಂತೇ ಎಂಬ ಅರ್ಥ. ಹಾಗಾಗಿ ಅಲ್ಲಿ ವಾಸವಾಗಿದ್ದರೂ ಸುಭಿಕ್ಷ ಇರುವುದಿಲ್ಲ. ಅದನ್ನು ತ್ಯಾಗ ಮಾಡಿ ಬೇರೆ ಕಡೆಗೆ  ವಾಸ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಈ ಉತ್ತರ ನೀಡುತ್ತದೆ.


ಸೂಚನೆ : 31/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.