Monday, June 22, 2026

ಅಷ್ಟಾಕ್ಷರೀ 108 ವಿಚಿತ್ರಾಪಿ ನ ಶೋಭತೇ! (Astakshara 108)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

Screenshot 2026-06-22 075320.png

ನಾಳೆ ಅಂತಾರಾಷ್ಟ್ರಿಯ ಯೋಗದಿನ! ಅದಕ್ಕಾಗಿ ಈ ಲೇಖನ.


ನಮ್ಮ ಕಣ್ಣು ಕತ್ತಲನ್ನು ಬಯಸುವುದಿಲ್ಲ, ಬೆಳಕನ್ನು ಬಯಸುತ್ತದೆ. ಕಣ್ಣುರಿ ಬಂದಾಗ ಬೆಳಕೇ ಬೇಡವೆನಿಸೀತು, ಬಿಡಿ. ಅತ್ತ ಕತ್ತಲೇ ಪ್ರೀತಿ, ನಿಶಾಚರ-ಪ್ರಾಣಿಗಳಿಗೆ.

ಯಾವುದು ಯಾರಿಗೆ ಶೋಭೆ? ನಮ್ಮ ಜಿಜ್ಞಾಸೆ ಬೆಡಗಿನ ವಸ್ತುಗಳ ಬಗೆಗೆ, ಬೆಳಗುವ ತತ್ತ್ವದ ಬಗೆಗೆ.  ಯಾವುದು ಶುಭ್ರವೋ ಅದು ತಾನೆ ಶೋಭಿಸುವುದು? ಕಳೆ-ಕಾಂತಿಗಳುಳ್ಳದ್ದೇ ಶೋಭಿಸುವುದು.
ಸಾಧಾರಣವಾದ ವಸ್ತುಗಳ ಮಧ್ಯೆ ಅಸಾಧಾರಣವಸ್ತುವೇ ಎದ್ದುಕಾಣುವಂತಹುದು. ಬುದ್ಧಿಶಕ್ತಿಯು ಕಡಿಮೆಯಿರುವವರ ನಡುವೆ ಒಬ್ಬ ಮಹಾಬುದ್ಧಿಶಾಲಿಯಿದ್ದರೆ, ಆತನು ತಾನೇ ಶೋಭಿಸತಕ್ಕವನು? ಇದಕ್ಕೆ ವ್ಯತಿರಿಕ್ತವಾಗಿ, ಹಂಸಗಳ ಮಧ್ಯದಲ್ಲಿ ಬಕಪಕ್ಷಿಗೆ ಶೋಭೆಯೇ? ಕೋಗಿಲೆಗಳ ನಡುವೆ ಕಾಗೆಗೇ?

ಕೆಲವರು ಒಳ್ಳೊಳ್ಳೆಯ ಬಟ್ಟೆಯುಡುತ್ತಾರೆ: ವಸ್ತ್ರದಿಂದ ಶೋಭೆ. ಯೋಗಾಸನ-ಪಟುಗಳಿಗೆ ತಮ್ಮ ಅಚ್ಚುಕಟ್ಟಾದ ಮೈಕಟ್ಟೇ ಒಂದು ಶೋಭೆ.

ಎಲ್ಲರಿಗೂ ಪ್ರಿಯವಾಗುವಂತೆ ಮಾತನಾಡುವವರಿಗೆ ಮಾತೇ ಶೋಭೆ. ಜೊತೆಗೆ ವಿದ್ಯಾರ್ಜನೆಯೂ ಇದ್ದರೆ ಮತ್ತೂ ಶೋಭೆ. ವಿದ್ಯೆಗೆ ವಿನಯವು ಮಹಾಶೋಭೆ.

ಸೀತೆಯಿಂದಾಗಿ ರಾಮನಿಗೆ ಶೋಭೆ: ಸಂಸ್ಕೃತದಲ್ಲಿ ರಾಮನೆಂದರೇ ನಲಿವು. ರಾಮನೆಂದರೆ ಆಕರ್ಷಕನೂ ಹೌದು. ಅಂತಹ ಅಭಿರಾಮನಾದ ರಾಮನೇ, ಸೀತೆಯೊಡಗೂಡಿದಾಗ ಮತ್ತೂ ಶೋಭಿಸಿದನಂತೆ:  “ಅಭಿರಾಮೆಯೂ ಉತ್ತಮರಾಜಕನ್ಯೆಯೂ ಆದ ಸೀತೆಯೊಂದಿಗಿನ ವಿವಾಹದಿಂದಾಗಿ ಆ ರಾಜರ್ಷಿಸುತನು ಶೋಭಿಸಿದನು - ಅಮರೇಶ್ವರನಾದ ವಿಷ್ಣುವು ಅತ್ಯಾಕರ್ಷಕಳಾದ ಲಕ್ಷ್ಮಿಯಿಂದಾಗಿ ಹೇಗೆ ಶೋಭಿಸಿದನೋ ಹಾಗೆ” - ಎನ್ನುತ್ತದೆ, ರಾಮಾಯಣ.
ಮೂರು ಶೋಭೆಗಳು: ಸತಿಯಿಂದ ಪತಿಗೆ ಹೇಗೆ ಮೆರುಗೋ, ಪತಿಯಿಂದ ಸತಿಗೂ ಹಾಗೆಯೇ. ರಾಜನನ್ನು ಭೂ-ಪತಿಯೆನ್ನುವವರಲ್ಲವೇ? ಅರಾಜಕವಾದ ರಾಜ್ಯವೆಂದರೆ ದುಷ್ಟರಿಗೇ ಇಷ್ಟವಾಗುವಂತಹುದು. ಒಳ್ಳೆಯ ರಾಜನಿದ್ದರೇ ಭುವಿಗೊಂದು ಸೊಬಗು. ರಾಷ್ಟ್ರಕ್ಕೆ ಧರ್ಮಿಷ್ಠ-ರಾಜನೇ ಬೆಳಕು.

ಹೀಗೆ ರಾಜಯೋಗದಿಂದಲೇ ಪೃಥ್ವಿಗೆ ಶೋಭೆ!

ನಿಶೆಗೆ ಶೋಭೆ: ಹಾಗೆಯೇ ರಾತ್ರಿ-ಸಮಯದಲ್ಲಿ ಆಕಾಶದಲ್ಲಿ ಚಂದ್ರನು ತೋರುತ್ತಲೇ ನಿಶೆಗೆ ಕಳೆಕಟ್ಟುವುದು. ಇಂದು ನಗರಗಳಲ್ಲಂತೂ ವಿದ್ಯುದ್ದೀಪಗಳ ವಿಜೃಂಭಣೆಯಿಂದಾಗಿ ತಾರೆಗಳೇ ತೋರವಾಗಿವೆ! ಜಗಮಗಾಯಿಸುವ ದೀಪಗಳ ನಡುವೆ ಇರುವ ನಾವು, ಇಂದುವಿನ ಚೆಂದವನ್ನಾಸ್ವಾದಿಸುವುದೆಂತು?

ಚಂದ್ರನನ್ನೂ ರಾಜನೆನ್ನುವುದುಂಟು. “ನಕ್ಷತ್ರಗಳಿಗೆಲ್ಲಾ ಚಂದ್ರನೇ ರಾಜ” – ಎನ್ನುವ ಲೆಕ್ಕವಿದೆ. ಆದರೆ ನಿಜವಾದ ರಾಜನೆಂದರೆ ಸೋಮನೇ - ಎಂದು ಹೇಳುವ ವೇದಮಂತ್ರಗಳೇ ಉಂಟು. ಎಂದೇ ರಾಜಶೇಖರ/ಸೋಮಶೇಖರ/ಚಂದ್ರಶೇಖರಗಳು ಸಮಾನಾರ್ಥಕ.

ಈ ರಾಜನ ಬೆಳದಿಂಗಳು ಹರಿದಾಗಲಲ್ಲವೆ, ರಾತ್ರಿಯೆಂಬುದೂ ಆಸ್ವಾದ್ಯವಾಗುವುದು? ಹೀಗೆ ರಾಜಯೋಗದಿಂದಲೇ ನಿಶೆಗೆ ಶೋಭೆ!

ಮುದ್ರೆಗೆ ಶೋಭೆ: ಹಾಗೆಯೇ ಲೋಕದಲ್ಲಿ ಅನೇಕ ಬಗೆಯ ಮುದ್ರೆ(ಸೀಲ್)ಗಳಿವೆ. ರಾಜನದಾದ ಮುದ್ರೆಯೇ ರಾಜಮುದ್ರೆ. ಅದರ ಮುಂದೆ ಮತ್ತಾವ ಮುದ್ರೆ? ರಾಜಮುದ್ರೆಯುಳ್ಳ ಒಕ್ಕಣೆಗೆ ಎದುರ್ನುಡಿಯೆಂಬುದುಂಟೇ? ಹೀಗೂ ರಾಜಯೋಗವಿರುವ ಮುದ್ರೆಗೇ ಶೋಭೆ!

ಪ್ರಕೃತಿಯಲ್ಲೋ ಪ್ರಜೆಗಳಲ್ಲೋ ಏನೇನೋ ವಿಶಿಷ್ಟತೆಗಳಿದ್ದಾವು. ಆದರೂ ಪೃಥ್ವಿಗೆ ಶೋಭೆಯೆಂದರೆ ಒಳ್ಳೆಯ ರಾಜನೇ. ನಿಶಾಸಮಯದಲ್ಲಿ ಎಷ್ಟೆಷ್ಟೋ ನಕ್ಷತ್ರಗಳು ರಾರಾಜಿಸಬಹುದು. ಆದರೂ ಚಂದ್ರನಿಲ್ಲದ ರಾತ್ರಿಯಲ್ಲಿ – ಅರ್ಥಾತ್ ಅಮಾವಾಸ್ಯೆಯ ರಾತ್ರಿಯಲ್ಲಿ - ಯಾವ ಶೋಭೆ?

ಇವೆರಡಕ್ಕಿಂತಲೂ ಮುಖ್ಯವಾಗಿ, ಯೋಗಶಾಸ್ತ್ರದಲ್ಲೇ ಬಗೆಬಗೆಯ ಮುದ್ರೆಗಳನ್ನು ಹೇಳುವುದೂ ಉಂಟು. ಅವು ಸಾಧಾರಣವಲ್ಲ, ವಿಶಿಷ್ಟವಾದವೇ. ಅನಲ್ಪ-ಸಾಧನೆಯಿಂದಲೇ ಲಭ್ಯವಾಗತಕ್ಕವು. ಆದರೂ ರಾಜಯೋಗದ ಛಾಪು ಅವುಗಳ ಮೇಲೆ ಬೀಳದಿದ್ದಲ್ಲಿ ಅವಲ್ಲೂ ಶೋಭೆಯಿರದು.

ಈ ಮೂರೆಡೆಗಳಲ್ಲೂ ರಾಜಯೋಗಕ್ಕೇ ಬೆಲೆ – ಎಂಬೀ ಮಾತು ಬಂದಿರುವುದು ಹಠಯೋಗಪ್ರದೀಪಿಕೆಯಲ್ಲಿ. ಯೋಗಗ್ರಂಥವಾದರೂ, ಕಾವ್ಯಭಂಗಿಯಲ್ಲಿ ಶ್ಲೇಷಾಲಂಕಾರದಿಂದ ತತ್ತ್ವವನ್ನು ಕಾಣಿಸಿದೆ:

ರಾಜಯೋಗಂ ವಿನಾ ಪೃಥ್ವೀ, ರಾಜಯೋಗಂ ವಿನಾ ನಿಶಾ| 

ರಾಜಯೋಗಂ ವಿನಾ ಮುದ್ರಾ - ವಿಚಿತ್ರಾಪಿ ನ ಶೋಭತೇ!||

ರಾಜಯೋಗವೆಂದರೇನು? ಇಷ್ಟೊಂದು ಕೊಂಡಾಡಲ್ಪಡುವ ಈ ರಾಜಯೋಗವೆಂದರೇನು? ಯೋಗಿರಾಜರಾದ ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ, "ಪೂರ್ಣ-ನಾದದಲ್ಲಿ ಮನಸ್ಸಿನ ಐಕ್ಯವು ರಾಜಯೋಗವೆಂಬ ಹೆಸರನ್ನು ಪಡೆಯುತ್ತದೆ."

ಇಲ್ಲಿ ಹೇಳಿರುವ ನಾದಕ್ಕೆ ಅಂತರ್ನಾದ, ಅನಾಹತನಾದ – ಎಂಬ ಹೆಸರುಗಳೂ ಉಂಟು. ಆ ನಾದದೊಂದಿಗಿನ ಮನೋವಿಲಯದ ಸ್ಥಿತಿಯೇ ಅಂತರ್ಜ್ಯೋತಿಯೆನಿಸುವ ವಿಷ್ಣುಪದಕ್ಕೇರಿಸುವಂತಹುದು. ಹೀಗಾಗಿ, ಈ ರಾಜಯೋಗವು ಯೋಗದ ಪರಾಕಾಷ್ಠೆ. ರಾಜ ಎಂಬ ಪದವಾದರೂ ಮೂಲತಃ ಬೆಳಕನ್ನೇ ಹೇಳುವುದು: ರಾಜೃ ದೀಪ್ತೌ. ಯೋಗವೆಂದರೆ ಸೇರುವಿಕೆ.

ಇಂದು ಯೋಗವೆಂದರೆ ಕೇವಲ ನಾನಾ ಆಸನ-ಭಂಗಿಗಳಲ್ಲಿ ಪರಿಣತಿ, ಬಗೆಬಗೆಯಾಗಿ ಉಸಿರುಕಟ್ಟುವುದು – ಇಷ್ಟಕ್ಕೇ ನಿಂತಿದೆ. ಇವೆಲ್ಲಾ ಎಷ್ಟೇ ಅದ್ಬುತವೆನಿಸುವಂತಿದ್ದರೂ ರಾಜಯೋಗವಿದ್ದಾಗಲೇ ಇವಕ್ಕೆ ಶೋಭೆ, ಇಲ್ಲದಿದ್ದರೆ ಇಲ್ಲ – ಎನ್ನುವುದನ್ನೇ ವಿಚಿತ್ರಾಪಿ ನ ಶೋಭತೇ ಎಂದಿರುವುದು:

ಬರೀ ಬೆಡಗಾದರೆ ಸಾಲದು, ಬೆಳಕಿನಲ್ಲಿ ಸೇರ್ಪಡೆಯಿರಬೇಕು.

ಸೂಚನೆ: 20/06//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.