Sunday, March 8, 2026

ಪ್ರಶ್ನೋತ್ತರ ರತ್ನಮಾಲಿಕೆ 56 (Prasnottara Ratnamalike 56)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಕಲಿಕಾಲದಲ್ಲೂ ಕುಲ ಮತ್ತು ಶೀಲದಲ್ಲೂ ಸದಾ ಅಚಲನಾದವನು ಯಾರು ?

ಉ. ಸಜ್ಜನ ಮಹಾಪುರುಷ

ಈ ಪ್ರಶ್ನೆಯು ಬಹಳ ವಿಶಿಷ್ಟವಾದದ್ದು. ಏಕೆಂದರೆ ಕಾಲ ಮತ್ತು ವ್ಯಕ್ತಿಯ ನಡುವೆ ಇರುವ ಸಂಬಂಧವನ್ನು ವಿವರಿಸುವ ಪ್ರಶ್ನೋತ್ತರ ಇದಾಗಿದೆ. ಕಾಲವೆಂಬುದು ಹೇಗೆ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರಬಲ್ಲದು? ಎಂಬುದು ಇಲ್ಲಿದೆ. ಪುರುಷನೊಬ್ಬನು ತನ್ನ ಶೀಲ ಮೊದಲಾದ ಗುಣಗಳನ್ನು ಅನೇಕ ಕಾರಣಗಳಿಂದ ಬದಲಿಸುತ್ತಾನೆ. ಎಲ್ಲವೂ ಇದ್ದಂತೆ ಇರುವುದಿಲ್ಲ. ವ್ಯಕ್ತಿಯ ಕುಲ ಮತ್ತು ಶೀಲಾ ಎಂಬುದನ್ನು ಬದಲಿಸಬಹುದು. ಅಂತಹ ಶಕ್ತಿ ಯಾವುದಕ್ಕೆ ಇದೆ? ಎಂದರೆ ಕಾಲಕ್ಕೆ ಇದೆ ಎಂಬುದು ಇಲ್ಲಿನ ಆಶಯ. ಹಾಗಾಗಿ ಅಂತಹ ಕಾಲ ಮತ್ತು ವ್ಯಕ್ತಿ ನಡುವೆ ಸಂಬಂಧ ಹೇಗಿದೆ? ಎಂಬುದನ್ನು ಇಲ್ಲಿ ತಿಳಿಯಬಹುದಾಗಿದೆ

ಕೃತ ಪ್ರೇತ ದ್ವಾಪರ ಮತ್ತು ಕಲಿ ಎಂಬುದಾಗಿ ಕಾಲ ನಾಲ್ಕು ಬಗೆ. ಈ ನಾಲ್ಕರ ಹಿಂದಿರುವ ವಿಷಯವಾದರೂ ಏನು? ಈ ನಾಲ್ಕರ ಪ್ರಭೇದಕ್ಕೆ ಕಾರಣವೇನು? ಈ ಪ್ರಭೇದವು ಹೇಗೆ ವ್ಯಕ್ತಿಯ ಮೇಲೆ ಪ್ರಭಾವವನ್ನು ಬೀರುತ್ತದೆ? ಅತ್ಯಂತ ಪ್ರಧಾನವಾಗಿ ಯುಗ ಎಂಬ ಭೇದವು ಧರ್ಮದ ಹಿನ್ನೆಲೆಯಲ್ಲಿ ಬಂದಿದೆ. ಕೃತಯುಗದಲ್ಲಿ ಧರ್ಮವು ಪೂರ್ಣವಾಗಿ ಇರುತ್ತದೆ. ಪ್ರೇತಾಯುಗದಲ್ಲಿ ಅದೇ ಧರ್ಮವು ಕಾಲು ಭಾಗ ನಷ್ಟವಾಗುತ್ತದೆ. ಅಂದರೆ ಮುಕ್ಕಾಲು ಭಾಗ ಧರ್ಮ ಕಾಲು ಭಾಗ ಅಧರ್ಮ. ದ್ವಾಪರಯುಗದಲ್ಲಿ ಅರ್ಧ ಧರ್ಮ ಮತ್ತು ಅರ್ಧ ಅಧರ್ಮ. ಕಲಿಯುಗದಲ್ಲಿ ಮುಕ್ಕಾಲು ಭಾಗ ಅಧರ್ಮ ಕಾಲುಭಾಗ ಧರ್ಮ ಎಂಬುದಾಗಿ ಈ ಯುಗದ ಸ್ವಭಾವವನ್ನು ಧರ್ಮದ ಆಧಾರದ ಮೇಲೆ ಹೇಳಲಾಗಿದೆ. ಸೃಷ್ಟಿಯಲ್ಲಿ ಧರ್ಮದ ಕಾರಣದಿಂದ ಈ ವ್ಯತ್ಯಾಸವನ್ನು ಕಾಣಬಹುದು. ಆದರೆ ಈ ಪ್ರಶ್ನೆಯಲ್ಲಿ ಹೇಳಲಾದ ಸಜ್ಜನ ಅಥವಾ ಮಹಾಪುರುಷನ ಕುಲದಲ್ಲಾಗಲಿ ಅಥವಾ ಶೀಲದಲ್ಲಾಗಲಿ ಈ ಯುಗದ ಪರಿಣಾಮವಾಗಿ ಅಥವಾ ಕಾಲದ ಪರಿಣಾಮವಾಗಿ ಅವನಲ್ಲಿ ಯಾವ ವ್ಯತ್ಯಾಸನ್ನೂ ಕಾಣಲಾಗದು. ಕುಲ ಮತ್ತು ಶೀಲ ಇವೆರಡೂ ಪರಿವರ್ತಿತವಾಗುವುದು ಸಾಮಾನ್ಯವಾಗಿ ಬಹಳ ಕಷ್ಟ ಸಾಧ್ಯ. ಅಂದರೆ ಒಬ್ಬ ವ್ಯಕ್ತಿಯ ಪರಿವರ್ತನೆಯನ್ನು ಅವನ ಕುಲಶೀಲದಲ್ಲಿ ನೋಡಬಹುದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಈ ಎರಡು ಮಾನದಂಡಗಳಿಂದಲೇ ಅಳೆಯುವುದುಂಟು. ವ್ಯಕ್ತಿ ಹೇಗಿದ್ದಾನೆ? ಎಂದರೆ ಅವನ ಕುಲವನ್ನು ಮತ್ತು ಶೀಲವನ್ನು ಪ್ರಶ್ನಿಸುವುದುಂಟು. ಮಹಾಪುರುಷನು ತನ್ನ ಕುಲಕ್ಕೆ ಕಳಂಕ ಬಾರದ ರೀತಿಯಲ್ಲಿ ವರ್ತಿಸುತಾನೆ.  ಕಾಲದಲ್ಲಿ ಎಷ್ಟೇ ವೈಷಮ್ಯ ಕಂಡುಬಂದರೂ ಆತ ಕುಲದಲ್ಲೂ ಮತ್ತು ಶೀಲದಲ್ಲೂ ಆವಿಚಲಿತನಾಗಿಯೇ ಇರುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಶ್ರೀರಾಮಚಂದ್ರ. ಆತ ತನ್ನ ಕುಲಕ್ಕೆ ಬರುವ ಕಳಂಕವನ್ನು ತಪ್ಪಿಸುವುದಕೋಸ್ಕರ ಸೀತಾಪರಿತ್ಯಾಗದಂತಹ ಕಾರ್ಯಗಳನ್ನು ತನ್ನ ಜೀವನದಲ್ಲಿ ಮಾಡುತ್ತಾನೆ. ಚಿಕ್ಕ ಸಂಗತಿಯನ್ನು ಅವಗಣಿಸದೆ ಪ್ರತಿಯೊಂದುಕ್ಕೂ ಮಾನ್ಯತೆಯನ್ನು ಕೊಡುವುದನ್ನು ಕಾಣಬಹುದು. ಅಂದರೆ ಯಾವುದೇ ನಿಮಿತ್ತವೂ ಮಹಪುರುಷನನ್ನು ಕದಲಿಸುವುದಿಲ್ಲ ಎಂದರ್ಥ. ಮಹಾಪುರುಷನ ಲಕ್ಷಣವಿದಲ್ಲವೇ?

ಸೂಚನೆ : 8/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 178 ರಾಕ್ಷಸನ ಚರ್ಮದಿಂದಾದ ನಗಾರಿ ( Vyaasa Vikshita 178)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)



ಜರಾಸಂಧವಧೆಗಾಗಿ ಕೃಷ್ಣಾರ್ಜುನ-ಭೀಮಸೇನರು ಮಗಧ-ದೇಶಕ್ಕೆ ಪ್ರಯಾಣಿಸಿದರಷ್ಟೆ. ಮಗಧವನ್ನು  ಸಮೀಪಿಸುತ್ತಲೇ ಕೃಷ್ಣನು ಅದರ ಸೊಬಗನ್ನು ತಾನೇ ವರ್ಣಿಸಿದನು:

"ಈ ಪಂಚ-ಪರ್ವತಗಳು ಹೇಗಿವೆ! ಮಹಾ-ಶಿಖರಗಳನ್ನುಳ್ಳ ಇವು ತಂಪನೆಯ ನೆರಳುಳ್ಳ ಮರಗಳಿಂದ ತುಂಬಿವೆ. ಇವೈದೂ ಒಟ್ಟಿಗೆ ಸೇರಿ, ಪರಸ್ಪರ ಅಂಟಿಕೊಂಡಿದ್ದು, ಈ ಗಿರಿವ್ರಜ-ನಗರವನ್ನು ಕಾಪಾಡುತ್ತಿರುವಂತಿದೆಯಲ್ಲವೇ? ಮರದ ಕೊಂಬೆಗಳ ಕೊನೆಗಳನ್ನು ಹೂಗಳು ದಟ್ಟವಾಗಿ ಸುತ್ತುವರೆದಿವೆ. ಮತ್ತು ಆ ಹೂಗಳಾದರೂ ಮನೋಹರವೂ ಸುಗಂಧಭರಿತವೂ ಆಗಿವೆ; ಕಾಮಿಜನರಿಗೆ ಪ್ರಿಯವೆನಿಸುವ ಲೋಧ್ರಗಿಡಗಳ ಕಾಡುಗಳಿಂದ ತುಂಬಿವೆ.

ಕಠೋರವ್ರತ-ಪಾಲಕರಾದ ಗೌತಮ-ಮಹರ್ಷಿಗಳು ಶೂದ್ರ-ಸ್ತ್ರೀಯಾದ ಔಶೀನರಿಯಲ್ಲಿ ಕಾಕ್ಷೀವಂತ ಮೊದಲಾದ ಮಕ್ಕಳನ್ನು ಪಡೆದದ್ದು ಈ ಎಡೆಯಲ್ಲಿಯೇ. ಅದೇ ಕಾರಣಕ್ಕೇ ಅವರು ಇಲ್ಲೇ ಇದ್ದು ಮಗಧ-ದೇಶದ ರಾಜರನ್ನು ಅನುಗ್ರಹಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ಅಂಗದೇಶ, ವಂಗದೇಶ ಮುಂತಾದ ದೇಶಗಳ ಮಹಾಬಲಶಾಲಿಗಳಾದ ರಾಜರುಗಳು ಇಲ್ಲಿಗೆ ಬಂದು ಸಂತೋಷವಾಗಿ ಇರುತ್ತಿದರು.

ಅರ್ಜುನ, ನೋಡು ಈ ಆಕರ್ಷಕವಾದ ಪಿಪ್ಪಲಗಳ ಕಾಡುಗಳನ್ನು ಹಾಗೂ ಶುಭವಾದ ಲೋಧ್ರಗಳ ಕಾಡುಗಳನ್ನು. ಇವೆಲ್ಲವೂ ಗೌತಮರ ವಾಸಸ್ಥಾನಕ್ಕೆ ಸಮೀಪದಲ್ಲೇ ಹುಟ್ಟಿ ಬೆಳೆದುಕೊಂಡಿವೆ. ಈ ಸ್ಥಾನಕ್ಕೆ ಮನುವಿನ ಅನುಗ್ರಹವಾಗಿದೆ. ಎಂದೇ ಇಲ್ಲಿ ಎಂದೂ ಕ್ಷಾಮವಿಲ್ಲ. ಬೇರೆ ಅನುಗ್ರಹಗಳೂ ಈ ಎಡೆಗೆ ಉಂಟು.

ಹೀಗೆ ಈ ನಗರವು ರಮಣೀಯವಾಗಿರುವುದಲ್ಲದೆ ದುರಾಧರ್ಷವೂ ಆಗಿದೆ – ಅರ್ಥಾತ್, ಯಾರೂ ಇದನ್ನು ಧ್ವಂಸಮಾಡಲಾಗದು. ಇಂತಹ ಜಾಗದಲ್ಲಿ ಅರ್ಥ-ಸಿದ್ಧಿಗಾಗಿ, ಎಂದರೆ ಅಪಾರವಾದ ಸಂಪತ್ತಿನ ಗಳಿಕೆಗಾಗಿ, ಜರಾಸಂಧನು ನೆಲೆಯೂರಿದ್ದಾನೆ.

ಇಂತಹವನ ಮನೆಗೇ ಹೋಗಿ ನಾವಿಂದು ಆತನ ದರ್ಪವನ್ನು ಅಡಗಿಸಲಿದ್ದೇವೆ" – ಎಂದನು.

ಹೀಗೆ ಮಾತುಕತೆಯಾದ ಮೇಲೆ ಕೃಷ್ಣಾರ್ಜುನ-ಭೀಮಸೇನರು ಮಗಧ-ರಾಜಧಾನಿಯತ್ತ ಸಾಗಿದರು. ಅಲ್ಲಿ ನಾಲ್ಕುವರ್ಣದ ಜನಗಳೂ ಇದ್ದರು. ಜನರೆಲ್ಲರೂ ಹೃಷ್ಟ-ಪುಷ್ಟರಾಗಿದ್ದರು - ಎಂದರೆ ಸಂತೋಷಭರಿತರೂ ಒಳ್ಳೆಯ ಪೋಷಣೆಯನ್ನು ಹೊಂದಿದ್ದವರೂ ಆಗಿದ್ದರು.

ಅನೇಕವಾದ ಉತ್ಸವಗಳಿಂದ ಕೂಡಿದ್ದ ಗಿರಿ-ವ್ರಜವನ್ನು ಅವರು ತಲುಪಿದರು. ಆದರೆ ಅವರು ನಗರದ್ವಾರದ ಮೂಲಕ ಅದನ್ನು ಪ್ರವೇಶಿಸಲಿಲ್ಲ. ಬದಲಾಗಿ ಚೈತ್ಯಕ-ಪರ್ವತವನ್ನು ಹತ್ತಿದರು. ಅದಾದರೂ ನಗರವಾಸಿಗಳಿಂದ ಪೂಜಿತವಾದದ್ದು, ಜನರಿಗೆ ಪ್ರಿಯವಾದದ್ದು.

ಹಿಂದೆ ಅಲ್ಲೊಬ್ಬ ರಾಕ್ಷಸನಿದ್ದ. ಆತನ ಹೆಸರು ಋಷಭ. ಆತ ಮಾಂಸಭಕ್ಷಕ. ಜರಾಸಂಧನ ತಂದೆಯಾದ ಬೃಹದ್ರಥ ಅಲ್ಲಿಗೆ ಹೋಗಿ ಆತನನ್ನು ಸಂಹರಿಸಿದ. ಆತನ ಚರ್ಮವನ್ನು ಸುಲಿಸಿದ. ಮೂರು ಭೇರಿಗಳನ್ನು ಮಾಡಿಸಿ, ಆ ಭೇರಿಗಳಿಗೆ ಆ ರಾಕ್ಷಸನ ಚರ್ಮವನ್ನು ಬಳಸಿದ. ಆ ಭೇರಿಗಳು ಹೇಗಿದ್ದುವೆಂದರೆ, ಒಮ್ಮೆ ಸದ್ದು ಮಾಡಿದರೆ ಸಾಕು, ಅವುಗಳ ಮೇಲೆ ದಿವ್ಯ-ಪುಷ್ಪಗಳ ವರ್ಷವಾಗುತ್ತಿತ್ತು. ಹಾಗಿದ್ದ ಆ ಮೂರೂ ನಗಾರಿಗಳನ್ನು ಭೀಮಾರ್ಜುನರು ಧ್ವಂಸ ಮಾಡಿದರು. ಅದಂತೂ ಜರಾಸಂಧನ ಶಿರಸ್ಸನ್ನು ಮೆಟ್ಟಿದ ಹಾಗೆಯೇ ಭಾಸವಾಯಿತು.

ಆ ಬಳಿಕ ಆ ಪರ್ವತದ ಶೃಂಗವನ್ನು ಹತ್ತಿದರು. ಆ ಶೃಂಗವು ಸ್ಥಿರವಾಗಿತ್ತು, ಸುವಿಪುಲವಾಗಿತ್ತು. ಗಂಧಗಳಿಂದಲೂ ಮಾಲೆಗಳಿಂದಲೂ ಅದನ್ನು ಅರ್ಚಿಸುವುದು ಅಲ್ಲಿಯ ಜನರ ಸಂಪ್ರದಾಯವಾಗಿತ್ತು. ಹಾಗೆ ಸುಪ್ರತಿಷ್ಠಿತವಾದ ಆ ಪರ್ವತ-ಶಿಖರವನ್ನು ತಮ್ಮ ವಿಪುಲವಾದ ಬಾಹುಗಳಿಂದಲೇ ಹೊಡೆದುರುಳಿಸಿದರು, ಆ ಮೂವರು ವೀರರು. ಬಳಿಕ ಹರ್ಷದಿಂದ ಕೂಡಿದವರಾಗಿ ಪುರ-ಪ್ರವೇಶವನ್ನು ಮಾಡಿದರು.


ಸೂಚನೆ : 8/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 97 ಮುದ್ದಿನ ಮೊಗದವನ ಮುರಲಿಯ ಮಧುರಿಮೆ (Krishakarnamrta 97)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

(ಪ್ರತಿಕ್ರಿಯಿಸಿರಿ lekhana@ayvm.in)




ಅದೆಂದು ಕಾಣುವೆ ಕೃಷ್ಣನನ್ನು? - ಎಂದು ಕೇಳುತ್ತಿದ್ದಾನೆ ಲೀಲಾಶುಕ. ಹೇಗಿದ್ದಾನೆ, ಈ ಕೃಷ್ಣ? ವೇಣುನಾದವನ್ನು ಮಾಡುತ್ತಿರುವ ಬಾಲಕೃಷ್ಣನಿವನು.

ಎಂತಹ ಬಾಲಕ? ಮಧುರಾಕೃತಿಗಳಲ್ಲಿ, ಎಂದರೆ  ಮಧುರವಾದ ಆಕಾರವನ್ನು ಹೊಂದಿರುವವರಲ್ಲಿ,  ಮೂರ್ಧಾಭಿಷಿಕ್ತನಾದವನು. ಬಾಲಕೃಷ್ಣನಿಗಿಂತಲೂ ಮಧುರವೇ? ಎಂದೇ ಆತನನ್ನು ಮಧುರಾಕೃತಿಯುಳ್ಳವರ ರಾಜನೆನ್ನುವುದು.

ಯಾರೂ ತನ್ನನ್ನೇ ತಾನು ಸುಮ್ಮನೆ "ರಾಜ" ಎಂದು ಕರೆದುಕೊಂಡುಬಿಡುವುದಲ್ಲ. ಕಿರೀಟಧರಿಸಿದವನೇ ರಾಜ ಅಲ್ಲವೇ? ಅದೂ ಅಲ್ಲ. ಯಾರಿಗೆ ಪಟ್ಟಾಭಿಷೇಕವಾಗಿದೆಯೋ ಆತನನ್ನೇ ರಾಜನೆನ್ನುವುದು. ಅಭಿಷೇಕವೆಂದರೆ ನೀರು ಸುರಿಯುವುದು. ಮಹಾರಾಜನಿಗೆ ಮೂರ್ಧಾಭಿಷೇಕವೇ ಸಲ್ಲುವುದು. ಎಂದರೆ, ಅಭಿಷೇಕದ ದಿನದಂದು ಎಲ್ಲ ಪುಣ್ಯನದಿಗಳಿಂದಲೂ ತೀರ್ಥವನ್ನು ತಂದು ಆತನ ತಲೆಯ ಮೇಲೆ ಮಂತ್ರಪೂರ್ವಕವಾಗಿ ಸುರಿಯುವುದಾಗಿರುತ್ತದೆ. ಮೂರ್ಧಾ ಎಂದರೆ ಶಿರಸ್ಸು. ಸಾರಾಂಶವಾಗಿ, ಮುದ್ದಾದ ಮಕ್ಕಳ ಅರಸನೆಂದರೆ, ಎಂದರೆ ಅಲ್ಲೂ ಮೂರ್ಧಾಭಿಷಿಕ್ತನೆಂದರೆ, ಈ ಬಾಲಮುಕುಂದನೇ ಸರಿ!

ಮಧುರವಾದ ಮುಖವುಳ್ಳವರೆಷ್ಟೋ ಮಂದಿಯಿರಬಹುದು. ಆದರೆ ಬಾಲಕೃಷ್ಣನ ಸೊಗಸೇ ಬೇರೆ ತೆರನಾದುದು. ಹೇಗೆ? ಕೃಷ್ಣನ ವಿಶಿಷ್ಟ-ಲಕ್ಷಣವೇ ಆತನ ಕೊಳಲಲ್ಲವೇ? ಕೊಳಲೆಂದರೆ ಸುಮ್ಮನೆ ಆ ವಾದ್ಯವನ್ನು ಕೈಯಲ್ಲಿ ಹಿಡಿದುಕೊಂಡಿರುವುದಲ್ಲ; ಕೊಳಲನ್ನು ನುಡಿಸುವುದು: ಅದರಿಂದ ಆಗ ಹೊರಡುವ ನಿನಾದಗಳೇ ವಿಶಿಷ್ಟವಾದವು.

ಅವು ಹೇಗಿವೆಯೆಂದು ಹೇಳಲು ಮೂರು ವಿಶೇಷಣಗಳನ್ನು ಬಳಸುತ್ತಾನೆ, ಕವಿ. ಆ ನಾದಗಳು ಸಮೃದ್ಧವಾಗಿವೆ. ಹೇಗೆ? ಅವಲ್ಲಿ ಆಕರ್ಷಕತ್ವವೆಂಬುದಿದೆ. ಅಷ್ಟೇ ಅಲ್ಲ. ಭಾವ-ರಾಗ-ತಾಳಗಳಿಂದ ಅವು ಕೂಡಿವೆ. ಭಾವ-ರಾಗ-ತಾಳ-ಸಮೇತವಾಗಿ ಅನೇಕರು ಕೊಳಲನ್ನು ನುಡಿಸಬಹುದು. ಆದರೆ ಈ ಬಾಲನ ಮುರಲೀ-ನಿನಾದದಲ್ಲಿ ಭಾವದ ಸಮೃದ್ಧಿಯೇ ಇದೆ, ಹಾಗೆಯೇ ರಾಗ-ಸಮೃದ್ಧಿಯೂ ಇದೆ, ಬಹುವಿಧ ತಾಳಗಳ ಯೋಜನೆಯಿದೆ. ಅಲ್ಲದೆ, ಭಾವಕ್ಕೆ ಹೊಂದುವ ರಾಗ, ಗಾನಕ್ಕೆ ಹೊಂದುವ ತಾಳ - ಇವುಗಳಲ್ಲಿ ವೈವಿಧ್ಯ-ಬಾಹುಲ್ಯಗಳೇ ನಾದಗಳು ಸಮೃದ್ಧವಾದವೆಂದು ತೋರಿಸುವುವು. ಜೊತೆಗೆ, ಸ್ವರವಿನ್ಯಾಸ-ವಿಶೇಷಗಳು, ಗಮಕಗಳು, ಉರುಟುಗಳು - ಇವುಗಳ ಸಮೃದ್ಧಿಯೂ ಸೇರಿವೆ. ಈ ವೈಶಿಷ್ಟ್ಯಗಳಲ್ಲದೆ, ಕೃಷ್ಣ-ಗಾನದ ಮತ್ತೂ ವಿಶೇಷವೆಂದರೆ, ಯೋಗ-ವೇದ್ಯವಾದ ಅಂತರ್ನಾದಗಳ ಪರಿಗಳೂ ಅದರಲ್ಲಿ ಮಿಳಿತವಾಗಿರುವುವು. ಹೀಗೆ ಸರ್ವಾರ್ಥದಲ್ಲೂ ಸಮೃದ್ಧವಾಗಿದೆ, ವೇಣು-ನಾದ.

ಎರಡನೆಯದಾಗಿ, ಆ ನಿನಾದಗಳು ಅಮೃತಾಯಮಾನವಾಗಿವೆ. ನಾದಗಳ ಸಮೃದ್ಧಿಯೇ ಇದಕ್ಕೆ ಕಾರಣವೆನ್ನಬಹುದು. ಏಕೆ? ಬೇರೆಬೇರೆಯವರಿಗೆ ಬೇರೆಬೇರೆ ರಾಗಗಳು ಇಷ್ಟವಾಗುವುವು. ತಾಳ-ವೈಚಿತ್ರ್ಯವೂ ನಾನಾಜನ-ರಂಜಕ. ಕೆಲವು ಭಾವಗಳನ್ನು ಯುಕ್ತವಾಗಿ ಬಿಂಬಿಸಿದಾಗ ಹಾರ್ದವಾಗಿ ಮೆಚ್ಚುವಂತಾಗುವುದು.

ಯೋಗಿಗಳಂತೂ ತಮ್ಮ ಉನ್ನತವಾದ ಯೋಗಾವಸ್ಥೆಗಳಲ್ಲಿ ಯಥಾರ್ಥವಾಗಿಯೇ ಅಮೃತಪಾನವನ್ನು ಮಾಡುವರು; ಅಂತಹವರ ಆ ಸ್ಥಿತಿಗಳಿಗೆ ಪೋಷಕವಾದ ನಾದ-ವಿಶೇಷಗಳೂ ಗಾನ-ವಿಶೇಷಗಳೂ ಇಲ್ಲಿ ಹೊಮ್ಮುವುವಾಗಿದ್ದು, ಎಲ್ಲರಿಗೂ ತಮ್ಮ ತಮ್ಮ ಸ್ತರಗಳಿಗನುಸಾರವಾಗಿ ಈ ವೇಣುನಾದಗಳು ಅಮೃತಮಯವಾಗಿ ತೊರುತ್ತವೆ.

ಮೂರನೆಯದಾಗಿ, ಈ ನಾದಗಳು ಆತಾಯಮಾನವಾಗಿವೆ, ಎಂದರೆ ವಿಸ್ತಾರಹೊಂದುತ್ತಿರುವಂತಹವಾಗಿವೆ. ಸ್ವರ-ಪ್ರಸ್ತಾರಗಳು, ಆಲಾಪನಗಳು, ತಾನಗಳು, ಪಲ್ಲವಿಗಳು - ಎಂದು ನಾನಾ-ಪ್ರಕಾರವಾಗಿ ಅವುಗಳ ವಿಸ್ತಾರ. ಮನುಷ್ಯರು ಮಾತ್ರವಲ್ಲದೆ ಪ್ರಾಣಿ-ಪಕ್ಷಿಗಳಿಗೂ ಆಕರ್ಷಣವಾಗುವ ಪರಿಗಳಲ್ಲಿ ವಿಸ್ತಾರಹೊಂದತಕ್ಕವು, ಅವು. ಕೃಷ್ಣನನ್ನು ಮನಸಾ ಯಾರು ಯಾರು ಮೆಚ್ಚುವರೋ ಅವರಿಗೆಲ್ಲಾ ಇಷ್ಟವಾಗುವಂತಿದೆ, ಈ ನಾದ-ವಿಸ್ತಾರ. ಕೃಷ್ಣನೇ ಯಾರನ್ನು ಉದ್ಧರಿಸಬೇಕೆಂದು ಬಯಸುವನೋ, ಅವರಿಗೆಲ್ಲ ರುಚಿಸುವಂತಾಗುವ ಸಂಚಾರಗಳನ್ನುಳ್ಳವು, ಅವು. ವಾಸ್ತವವಾಗಿ, ತ್ರಿಲೋಕಗಳ ಮೇಲೂ ಪರಿಣಾಮ ಬೀರುವಂತೆ ವಿಸ್ತಾರವಾಗತಕ್ಕವು. ಹೀಗೆ ನಾನಾಪ್ರಕಾರವಾಗಿದೆ ಆ ನಾದಗಳ ವಿಸ್ತಾರ.

ಅಂತಹ ಮುರಲೀ-ನಿನಾದಗಳಿಂದ ಲಕ್ಷಿತನಾದ ಬಾಲಕನಿವನು. ಹೀಗೆ ತನ್ನ ರೂಪಾಮೃತ-ನಾದಾಮೃತಗಳಿಂದ ಎಲ್ಲರನ್ನೂ ಬೆರಗುಗೊಳಿಸುವ ಈ ಬಾಲನನ್ನು ನಾನದೆಂದು ಕಾಣುವೆ? - ಎಂದು ಲೀಲಾಶುಕನು ಹಂಬಲಿಸುವುದರಲ್ಲಿ ಆಶ್ಚರ್ಯವಾದರೂ ಏನಿದೆ?

ಶ್ಲೋಕ ಹೀಗಿದೆ:
ಸಾರ್ಧಂ ಸಮೃದ್ಧೈಃ ಅಮೃತಾಯಮಾನೈಃ /
ಆತಾಯಮಾನೈಃ ಮುರಲೀ-ನಿನಾದೈಃ |
ಮೂರ್ಧಾಭಿಷಿಕ್ತಂ ಮಧುರಾಕೃತೀನಾಂ /
ಬಾಲಂ ಕದಾ ನಾಮ ವಿಲೋಕಯಿಷ್ಯೇ ||

***

ನನ್ನ ಹೃದಯದಲ್ಲಿ ಕೃಷ್ಣನು ಕ್ರೀಡಿಸಲಿ - ಎಂದು ಈ ಶ್ಲೋಕದಲ್ಲಿ ಲೀಲಾಶುಕನು ಪ್ರಾರ್ಥಿಸುತ್ತಾನೆ.

ಎಂತಹುದು ನನ್ನ ಹೃದಯ? ಅದು ಕಠಿನವಾಗಿದ್ದರೆ ಅತನ ಮೃದು-ಪಾದಗಳು ನೋಯವೇ? - ಎಂಬ ಪ್ರಶ್ನೆಯು ಬರಬಹುದಲ್ಲವೇ? ಎಂದೇ, ಹಾಗಲ್ಲವೆಂದು ಮೊದಲೇ ಸ್ಪಷ್ಟಪಡಿಸುತ್ತಾನೆ: ನನ್ನ ಹೃದಯವು ಆರ್ದ್ರವಾದುದು - ಎಂದು. ಆರ್ದ್ರವೆಂದರೆ ಒದ್ದೆ, ಅಥವಾ ಮೃದು. ತನ್ನ ಹೃದಯವು ಒಣಕಲಾದರೂ ಆತನ(ಲ್ಲಿಯ) ಪ್ರೇಮರಸದಿಂದ ಮಾರ್ದವವನ್ನು ಹೊಂದಿದೆ. ಆತನ ಮೇಲಣ ಪ್ರೇಮದಿಂದಾಗಿ ಸ್ನಿಗ್ಧವಾಗಿದೆ, ಎಂದರೆ ಸ್ನೇಹ-ಭಾವದಿಂದ ಕೂಡಿದೆ. ವಿಯೋಗದಿಂದ ತಾಪಗೊಂಡಿರುವ ಹೃದಯವು ಆತನ ಚರಣ-ಸ್ಪರ್ಶವಾಗುತ್ತಲೇ ಸ್ನಿಗ್ಧತೆಯನ್ನು, ಅರ್ಥಾತ್ ಸ್ನೇಹಭಾವವನ್ನು, ಹೊಂದುವುದಲ್ಲವೇ?

ತನ್ನ ಹೃದಯದಲ್ಲಿ ಚೆನ್ನಾಗಿ ಆಡಲಿ ಎನ್ನುವುದನ್ನು ಆಕ್ರೀಡತಾಂ - ಎಂದಿದ್ದಾನೆ. ಇಲ್ಲಿ "ಆ" ಎಂಬ ಉಪಸರ್ಗಕ್ಕೆ "ಚೆನ್ನಾಗಿ" ಎಂದರ್ಥ.

ಕೃಷ್ಣನು ಆಡಲಿ - ಎಂದು ಹೇಳುವುದರ ಬದಲು, ಕವಿಯು "ಆ ಓಜಸ್ಸು ಆಡಲಿ" - ಎನ್ನುತ್ತಾನೆ. ಓಜಸ್ಸೆಂದರೆ ತೇಜಸ್ಸೇ. ಕೃಷ್ಣನು ತೇಜೋರಾಶಿಯಲ್ಲವೇ? ಎಂತಹ ಓಜಸ್ಸದು? ಭುವನಾರ್ದ್ರವಾದದ್ದು - ಎಂದರೆ ಭುವನವನ್ನೇ ಆರ್ದ್ರಮಾಡುವಂತಹುದು. ಅರ್ಥಾತ್ ಜಗತ್ತನ್ನೇ ತನ್ನ ಪ್ರೇಮರಸದಿಂದ ತೋಯಿಸುವಂತಹುದು. ಒಳ್ಳೆಯ ಸಂಗೀತವನ್ನು ಕೇಳಿದರೆ ಎಲ್ಲರ ಮನಸ್ಸೂ ಕರಗುವುದು. ಬೆಟ್ಟಗಳೂ ಕರಗುವುವು - ಎಂದು ಕೂಡ ಲೀಲಾಶುಕನೇ ಬೇರೆಡೆ ಹೇಳಿರುವನಲ್ಲವೆ? ಹೀಗಾಗಿ ಜಗತ್ತೆಲ್ಲವೂ ಕರಗುವಂತಾಗಿರುವುದು ಯಾವುದರಿಂದಲೋ ಅಂತಹ ಓಜಸ್ಸದು.

ಕೃಷ್ಣನ ಆಟವೆಂಬುದಾದರೂ ಹೇಗಿರುವುದು? ಆತನ ಪಾದಕಮಲಗಳು ಅರುಣ-ವರ್ಣವನ್ನು ಹೊಂದಿರುವುದು. ಅಂತಹ ಕೆಂದಾವರೆಯ ಪರಿಯ ಕಾಲುಗಳು ಕ್ರೀಡಿಸಲಿ - ಎಂಬ ಭಾವ.

ಶ್ರೀಕೃಷ್ಣನು ತನ್ನದೇ ವೇಣುನಾದವನ್ನು ಆಸ್ವಾದಿಸುತ್ತಿದ್ದಾನೆ - ಎಂದೂ ಹೇಳುತ್ತಾನೆ, ಕವಿ. ಏಕೆ? ಆ ವೇಣುನಾದದಲ್ಲೇ ಒಂದು ವಿನೋದವಿದೆ. ವಿನೋದವೆಂಬುದಕ್ಕೆ ಪ್ರೇರಣೆಯೆಂಬ ಅರ್ಥ ಇಲ್ಲಿ. ಮಧ್ಯದಲ್ಲಿ ಆಗಾಗ ಮೃದುವಾದ ಹಾಸವೋ ಬೇರೆಬೇರೆ ಭಾವಗಳ ತೋರುವಿಕೆಯೋ - ಇವೆಲ್ಲವೂ ವಿನೋದವೆಂದು ಪರಿಗಣಿಸಲ್ಪಡುವುವು. ತಾನ-ಆಲಾಪಗಳೂ ವಿನೋದವೇ. ವಿನೋದವೆಂಬುದು ಸಂಸ್ಕೃತಪದ; ಕನ್ನಡದಲ್ಲಿಲ್ಲದ ಕೆಲವು ಅರ್ಥಗಳು ಈ ಪದಕ್ಕಿವೆ.

ಕೃಷ್ಣನ ಮುಖದಲ್ಲೇ ನಾನಾಭಾವಗಳು ತೋರುವುದನ್ನೂ ಹೇಳಿದೆ. ಆತನ ಮುಖಾಂಬುಜ ಅಥವಾ ವದನ-ಕಮಲವು ಅವ್ಯಾಜ-ಮಂಜುಲವಾದುದು.

ವ್ಯಾಜವೆಂದರೆ ನೆಪ, ಕಾರಣ; ಅವ್ಯಾಜವೆಂದರೆ ಯಾವುದೇ ನಿಮಿತ್ತವಿಲ್ಲದಿರುವುದು. ಮಂಜುಲವೆಂದರೆ ಮನೋಹರ. ಅಲ್ಲಿಗೆ, ಯಾವುದೇ ಅಲಂಕಾರ-ಆಭರಣಗಳೆಂದಿಲ್ಲದಿದ್ದರೂ, ಅಂದರೆ ನಿರ್ವ್ಯಾಜವಾಗಿಯೂ, ಮನೋಹರವಾದ ಮುಖ-ಕಮಲ ಅವನದು. ಅದರಲ್ಲಿ ಹಲವು ಮುಗ್ಧ-ಭಾವಗಳು ತೋರುತ್ತಿರುತ್ತವೆ. ಅಂತಹ ಭಾವಗಳಿಂದ ಶೋಭಿಸುವ ತೇಜಸ್ಸು, ಕೃಷ್ಣನೆಂದರೆ.

ಜಗವನ್ನೇ ಮುದಗೊಳಿಸುವ ಮೃದುಗೊಳಿಸುವ ಓಜಸ್ಸೇ ಕೃಷ್ಣ. ಆತನು ನನ್ನ ಹೃದಯದಲ್ಲಿ ತನ್ನ ಕೆಂಪಾದ ಪಾದಗಳಿಂದ ಆಡಲಿ - ಎಂಬ ಕೋರಿಕೆ ಲೀಲಾಶುಕನದು.

ಶ್ಲೋಕ ಹೀಗಿದೆ:

ಅವ್ಯಾಜ-ಮಂಜುಲ-ಮುಖಾಂಬುಜ-ಮುಗ್ಧ-ಭಾವೈಃ /
ಆಸ್ವಾದ್ಯಮಾನ-ನಿಜ-ವೇಣು-ವಿನೋದ-ನಾದಂ |
ಆಕ್ರೀಡತಾಂ ಅರುಣ-ಪಾದ-ಸರೋರುಹಾಭ್ಯಾಂ /
ಆರ್ದ್ರೇ ಮದೀಯ-ಹೃದಯೇ ಭುವನಾದ್ರಂ ಓಜಃ ||

ಶ್ಲೋಕದ ನಾಲ್ಕೂ ಪಾದಗಳೂ 'ಆ'ಕಾರದಿಂದಲೇ ಆರಂಭಗೊಂಡಿವೆ. ಪ್ರಥಮಪಾದದಲ್ಲಿ ಜಕಾರ-ಮಕಾರಗಳು, ದ್ವಿತೀಯದಲ್ಲಿ ನಕಾರ-ದಕಾರಗಳು ವಿಲಸಿಸಿವೆ. ತೃತೀಯದಲ್ಲಿ ರೇಫಗಳು, ತುರೀಯದಲ್ಲಿ ಯಕಾರ-ದಕಾರಗಳು.

ಸೂಚನೆ : 7/3/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ101 ಊರ್ಧ್ವಮೂಲಮಧಶ್ಶಾಖಮ್ (Astakshara 101)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ಪ್ರಾಚೀನಸಾಹಿತ್ಯದಲ್ಲಿ ವೃಕ್ಷರೂಪಕವು ಸಮೃದ್ಧವಾಗಿದೆ.  ನೇರವಾಗಿ ಅಲ್ಲದಿದ್ದರೂ ಧ್ವನಿತವಾಗಿ ಅದನ್ನು ಹಲವೆಡೆ ಹೇಳಿದೆ. ಉದಾಹರಣೆಗೆ ವೇದ-ವಿಭಾಗವೆನ್ನುವಾಗ ಋಕ್-ಶಾಖೆ ಯಜುಶ್-ಶಾಖೆ ಮುಂತಾಗಿ ಹೇಳುವಲ್ಲಿ, ವೇದವೆಂಬುದು ಒಂದು ವೃಕ್ಷವೆಂಬುದು ಧ್ವನಿತವಾಗುವುದಲ್ಲವೇ? ಶಾಖೆಯೆಂದರೆ ಕೊಂಬೆ; ಶಾಖೆಗಳಿರುವುದು ವೃಕ್ಷದಲ್ಲಿ ತಾನೆ? 

ಅಂತೆಯೇ ಆದಿಕಾವ್ಯವೆನಿಸುವ ರಾಮಾಯಣದಲ್ಲಿ ಮರದ ಕಾಂಡಗಳೆಂಬಂತೆ ಬಾಲಕಾಂಡ ಮೊದಲಾದ ಸಪ್ತ-ಕಾಂಡಗಳಿವೆ. ಮಹಾಭಾರತದಲ್ಲಿ ೧೮ ಪರ್ವಗಳಿವೆ. ಕಬ್ಬಿನ ಜಲ್ಲೆಯಲ್ಲಿನ ಗಿಣ್ಣುಗಳಿಗೆ ಪರ್ವಗಳೆಂದೇ ಹೆಸರು. ಗಿಣ್ಣುಗಳು ಜಲ್ಲೆಯ ಘಟ್ಟಗಳು. 

ಮುಖ್ಯ-ಕಾಲಘಟ್ಟಗಳನ್ನು ಸಹ ಪರ್ವಗಳೆನ್ನಲಾಗುತ್ತದೆ: ಸಂಕ್ರಮಣ/ ಹುಣ್ಣಿಮೆ/ಅಮಾವಾಸ್ಯೆ/ಗ್ರಹಣ-ಸಮಯಗಳೆಲ್ಲಾ ಪರ್ವಕಾಲಗಳೇ. ಸಂಸ್ಕೃತದ "ಪರ್ವ"ವೇ ಕನ್ನಡದಲ್ಲಿ "ಹಬ್ಬ"ವಾಗಿರುವುದು.

ಮನುಷ್ಯನನ್ನೇ ಸಸ್ಯವೆಂಬಂತೆ ರೂಪಿಸಿರುವುದು ಬೃಹದಾರಣ್ಯಕೋಪನಿಷತ್ತಿನಲ್ಲಿ ಲಭ್ಯ: ಸಸ್ಯಮಿವ ಮರ್ತ್ಯಃ. ಮಹಾಭಾರತದಲ್ಲಿ ಯುಧಿಷ್ಠಿರ-ದುರ್ಯೋಧನರನ್ನು ಸಹ ಮರಗಳೆಂದು ರೂಪಕ ಮಾಡಿದೆ: ಯುಧಿಷ್ಠಿರನು  ಧರ್ಮಮಯವಾದ ವೃಕ್ಷ; ದುರ್ಯೋಧನನು ಅಧರ್ಮಮಯವಾದ ವೃಕ್ಷ.

ಇನ್ನು ಭಗವದ್ಗೀತೆಯಲ್ಲಿ ಒಂದು ವಿಶಿಷ್ಟವಾದ ವೃಕ್ಷವನ್ನೇ ಹೇಳಿದೆ. ಸಾಧಾರಣವಾಗಿ ನಾವು ಕಂಡಿರದ ವೃಕ್ಷವದು. ಏನದರ ವಿಶೇಷ? ಲೋಕದಲ್ಲಿ ನಾವು ನೋಡುವ ವೃಕ್ಷಗಳು ಹೇಗಿರುತ್ತವೆ? ಸಂಚಾರವಿಲ್ಲದೆ ನಿಲ್ಲತಕ್ಕ ಜೀವಿಗಳು ಅವು. ಒಂದೇ ಎಡೆಯಲ್ಲಿ ಸ್ಥಿರವಾಗಿ ನಿಲ್ಲತಕ್ಕವಾದ್ದರಿಂದ ಅವುಗಳ ಬೇರು ಗಟ್ಟಿಯಾಗಿರುತ್ತದೆ; ಆಳವಾಗಿಯೂ ಅಗಲವಾಗಿಯೂ ಹರಡಿಕೊಂಡಿರುತ್ತದೆ.

ಬೇರೆಂಬುದು ಕೆಳಗೂ ಒಳಗೂ ವ್ಯಾಪಿಸಿದ್ದೂ ಅಗೋಚರವಾಗಿಯೇ ಇರುತ್ತದೆ. ಬೇರು ಗೂಢವಾದರೂ ಮರದ ಶಾಖೆ-ಉಪಶಾಖೆಗಳು ಮೇಲಿದ್ದು ಪ್ರಕಟವಾಗಿರುವುವು. ಅವುಗಳ ವಿಸ್ತಾರವೇ ನಮಗೆ ಕಂಡುಬರುವುದು. ಇಡೀ ವೃಕ್ಷವನ್ನೇ ಆಳುವುದು ಮಾತ್ರ ಮರದ ಬೇರೇ.

ಕೊಂಬೆಯೊಂದಕ್ಕೆ ಏಟಾದರೆ ಗಿಡಕ್ಕದು ನೋವೇ. ಆದರೆ ಕೊಂಬೆಯನ್ನು ಕತ್ತರಿಸಿದರೂ ಮರವೇನೂ ಅಳಿಯದು. ಬೇರಿಗೇನಾದರೂ ಪ್ರಬಲವಾದ ಏಟು ಬಿದ್ದರೆ ಮರವೇ ಒಣಗಿ ಸತ್ತೀತು. ಬುಡಕ್ಕೆ ಕೊಡಲಿಯೇಟಾದರೆ ಮರವೇ ಕುಸಿಯುವಂತಾಗುವುದು. ಅಡಿಪಾಯವೇ ಜಗ್ಗಿದರೆ ಸೌಧವೇ ಉರುಳಿಕೊಳ್ಳುವುದಲ್ಲವೇ?

ಆದರೆ, "ಮೇಲ್ಬೇರು ಕೆಳಗೊಂಬೆಯ ವೃಕ್ಷವೊಂದುಂಟು; ಅದನ್ನು ನೀವು ಕಂಡಿದ್ದೀರಾ?" - ಎಂದು ಶ್ರೀರಂಗಮಹಾಗುರುಗಳು ಶಿಷ್ಯರನ್ನು ಪ್ರಶ್ನಿಸಿದ್ದರು. ಕೃಷಿಕ್ಷೇತ್ರದಲ್ಲಿದ್ದವರೂ ಅಂತಹೊಂದನ್ನು ಕಂಡಿಲ್ಲವೆಂದರು. ಆಗ, "ನಾವೆಲ್ಲರೂ ಅಂತಹ ವೃಕ್ಷವೇ!" ಎಂದವರು ಪ್ರತಿಪಾದಿಸಿದರು. ಹೀಗೆ ಎಲ್ಲೆಡೆ ಗೋಚರಿಸುವ ಮರವಿದುವೇ!

ಭಗವದ್ಗೀತೆಯ ಹದಿನೈದನೆಯ ಅಧ್ಯಾಯದ ಪ್ರಥಮಶ್ಲೋಕವೇ ಅಂತಹ ವೃಕ್ಷವೊಂದನ್ನು ಹೇಳುತ್ತದೆ "ಊರ್ಧ್ವಮೂಲಂ ಅಧಃಶಾಖಂ". ಅಲ್ಲಿ ಹೇಳಿರುವುದು ಬ್ರಹ್ಮಾಂಡವೃಕ್ಷವೆಂದೇ ಬಹುತೇಕ ವ್ಯಾಖ್ಯಾನಗಳ ವಿವರಣೆ. ಆದರೆ ಅದು ಮನುಷ್ಯದೇಹಕ್ಕೂ ಅನ್ವಯಿಸಬಹುದು - ಎಂಬುದನ್ನು ಕೆಲವರಷ್ಟೇ ಕಂಡಿರುವರು. ಅಂತಹ ವಿವರಣೆಯೊಂದು ಉಂಟೆಂದು ವೇದಾಂತದೇಶಿಕರು ಉಲ್ಲೇಖಿಸಿರುವರು.

ಬೀಜವೊಂದನ್ನು ನೆಟ್ಟಾಗ ಮೊದಲ ಹೆಜ್ಜೆಯಾಗಿ ಬೇರೆಂಬುದು ಸಿದ್ಧವಾಗುತ್ತದೆ; ಆ ಬಳಿಕ ಸಸಿಯು ಕಾಣಿಸಿಕೊಂಡು, ಕಾಂಡವು ಬೆಳೆಯಲಾರಂಭಿಸುವುದು. ಗರ್ಭದಲ್ಲಿ ಶಿಶುವು ಬೆಳೆಯುವ ಬಗೆಯೂ ಹಾಗೆಯೇ. ಮೊಟ್ಟಮೊದಲು ಸಿದ್ಧವಾಗುವುದು ತಲೆ; ಅದನ್ನು ಅನುಸರಿಸಿಕೊಂಡೇ ಬೆನ್ನೆಲುಬಿನ ರಚನೆಯಾಗುವುದು. ಇವೆರಡೂ ಗಟ್ಟಿಯಾಗಿ ನಿಲ್ಲತಕ್ಕವಂತಹವು. ಉಳಿದ ಅಂಗೋಪಾಂಗಗಳು ಆಮೇಲೆ ಕ್ರಮೇಣ ಮೂಡಿಕೊಳ್ಳುತ್ತವೆ.

ಈ ಶರೀರವೆಂಬ ವೃಕ್ಷಕ್ಕೆ ಶಿರಸ್ಸೇ ಮೂಲ; ಕೈ-ಕಾಲುಗಳು ಶಾಖೆಗಳು; ಕೈ/ಕಾಲುಗಳಲ್ಲಿ ಇರುವ ಬೆರಳುಗಳು ಉಪಶಾಖೆಗಳು. ಎಂದೇ, ಇದೊಂದು "ಬುಡಮೇಲಾದ ಮರ"ವೆನ್ನಬೇಕು. ಅಥವಾ, ಗಿಡವನ್ನೇ "ತಲೆಕೆಳಗಾದ ಶರೀರ"! – ಎಂದರೂ ನಡೆದೀತು!

ವೃಕ್ಷವೂ ಚಿರಸ್ಥಾಯಿಯಲ್ಲ; ಶರೀರವೂ ನಶ್ವರವೇ. ವೃಕ್ಷ/ಶರೀರಗಳ ನಿರುಕ್ತಿಗಳೂ ಅದನ್ನೇ ಹೇಳುತ್ತವೆ. ದೇಹವು ಸ್ಥಿರವಲ್ಲವೆಂಬುದನ್ನೇ ಅಶ್ವತ್ಥವೆಂಬ ಪದವೂ ಹೇಳುವುದು. ಯಾವುದು ನಾಳೆಗೂ ನಿಲ್ಲದೋ ಅದೇ ಅಶ್ವತ್ಥ; ಶ್ವಃ ಎಂದರೆ ನಾಳೆ. 

ಅಶ್ವತ್ಥವೃಕ್ಷದ ಬಹುಕಾಲ ಬಾಡಿಕೊಂಡಿರುವ ಎಲೆಯೊಂದನ್ನು ಗಮನಿಸಬಹುದು: ಅದರಲ್ಲಿಯ "ಮಾಂಸಭಾಗ"ವೆಲ್ಲ ಬಿದ್ದುಹೋಗಿದ್ದು, ಅಲ್ಲಿಯ ಅಂಗೋಪಾಂಗ-ರಚನೆಯು ಸ್ಫುಟವಾಗಿ ಕಾಣುವುದು. ಅದಂತೂ ಮನುಷ್ಯ-ನರಮಂಡಲದ ರಚನೆಯನ್ನೇ  ಹೋಲುವುದು. ನಮ್ಮ ನರಮಂಡಲದ ರಚನೆಯೂ ಶಿರಸ್ಸೆಂಬ ಮೂಲದಿಂದ ಆರಂಭವಾಗಿರುವುದು; ಕಾಂಡದ ಹಾಗಿರುವ ಬೆನ್ನುಮೂಳೆಯನ್ನು ಆಧರಿಸಿಕೊಂಡಿರುವುದು.

ಮರದ ಬೇರನ್ನು ಕಾಪಾಡಿಕೊಳ್ಳುವಂತೆಯೇ ನಮ್ಮ ಶಿರಸ್ಸನ್ನೂ ಕಾಯ್ದುಕೊಳ್ಳಬೇಕಲ್ಲವೇ? ಶರೀರವು ನಶ್ವರವಾದರೂ ನಶ್ವರವಲ್ಲದ ಭಗವತ್ತತ್ತ್ವವನ್ನು ಸಂಪಾದಿಸಿಕೊಳ್ಳಲಿಕ್ಕೆ, ಸಾಧನೆ-ಸದ್ವಿಚಾರಗಳ ಸೇಚನವು ಸಮಯಕ್ಕೆ ಸರಿಯಾಗಿ ಸಲ್ಲುತ್ತಿರಬೇಕಲ್ಲವೇ - ಈ ಮೂಲಕ್ಕೆ?  

ಮೌಲಿಕವಾದ ಈ ವಿಚಾರವನ್ನು ಮರೆಯದಿರೋಣ!

ಸೂಚನೆ: 7/3//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ. 

Sunday, March 1, 2026

ವ್ಯಾಸ ವೀಕ್ಷಿತ 177 ಕೃಷ್ಣಾರ್ಜುನ-ಭೀಮರು ಮಾಗಧಕ್ಕೆ ಪ್ರಯಾಣಿಸಿದುದು ( Vyaasa Vikshita 177)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ಜರಾಸಂಧ-ವಧೆಯನ್ನು ಮಾಡುವಲ್ಲಿ ಕೃಷ್ಣನಿತ್ತ ಸಲಹೆ ಅಮೂಲ್ಯವಾದುದೆಂದೂ, ನೀತಿ-ಬಲ-ಕ್ರಿಯೆಗಳ ಸಂಗಮವೇ ಕಾರ್ಯ-ಸಾಧಕವೆಂದೂ ಯುಧಿಷ್ಠಿರನು ಮನಗಂಡನು. ಅರ್ಜುನನ ದಶ-ನಾಮಗಳಲ್ಲಿ ಕೃಷ್ಣನೆಂಬುದೂ ಒಂದಾದ್ದರಿಂದ, ಯುಧಿಷ್ಠಿರನ ಮಾತು ಹೀಗೆ ಸಾಗಿತು:

"ಈ ಇಬ್ಬರು ಕೃಷ್ಣರಿಗೆ, ಎಂದರೆ ಕೃಷ್ಣಾರ್ಜುನರಿಗೆ, ಅಜೇಯನಾದವನೇ ಇಲ್ಲ – ಅರ್ಥಾತ್, ಇವರಿಬ್ಬರಿಗೆ ಸೋಲಿಸಲಾಗದವನೇ ಇಲ್ಲ - ಎಂದೇ ನಾನು ಭಾವಿಸುತ್ತೇನೆ.

ಮತ್ತು ಈ ವೃಕೋದರ-ಭೀಮನಾದರೂ ಬಲಶಾಲಿಗಳಲ್ಲೇ ಶ್ರೇಷ್ಠನಾದವನು. ನಿಮ್ಮಿಬ್ಬರೊಂದಿಗೆ ಸೇರಿದ ಈ ಮಹಾಕೀರ್ತಿ-ಸಂಪನ್ನನಾದ ವೀರನು ಏನನ್ನು ತಾನೆ ಸಾಧಿಸಲಾರ?

ಸೈನ್ಯ-ಸ್ತೋಮವು ಉತ್ತಮ-ಕಾರ್ಯವನ್ನು ಸಾಧಿಸುವುದು ಯಾವಾಗ? ನೇತಾರನಿಂದ  ಸರಿಯಾಗಿ ಸಂಚಾಲಿತವಾದಾಗ. ಬಲವೆಂಬುದು ತನ್ನಷ್ಟಕ್ಕೆ ಕುರುಡೆಂದೂ, ಜಡವೆಂದೂ ಹೇಳುವರು; ಎಂದೇ, ವಿಚಕ್ಷಣರೇ ಅದನ್ನು ಮುನ್ನಡೆಸಬೇಕು.

ಹೀಗೆ, ಕಾರ್ಯವು ಸಿದ್ಧಿಸಬೇಕೆಂದರೆ, ಪ್ರಜ್ಞೆ-ರಾಜ-ನೀತಿಗಳೆಂಬ ಬಲಗಳಿಂದ ಕೂಡಿರುವವನೂ, ಕ್ರಿಯೆಯ ಉಪಾಯವನ್ನು ಹೊಂದಿರುವವನೂ ಆದ ಶ್ರೀಕೃಷ್ಣನನ್ನೇ ಮುಂದಿಟ್ಟುಕೊಂಡು ಹೊರಡಬೇಕು.

ಯದುಶ್ರೇಷ್ಠನಾದ ಕೃಷ್ಣನೇ, ಕಾರ್ಯಸಿದ್ಧಿ-ಪರ್ಯಂತವೂ ಅರ್ಜುನನು ಕೃಷ್ಣನನ್ನು ಅನುಸರಿಸಲಿ, ಹಾಗೂ ಭೀಮನು ಅರ್ಜುನನನ್ನು ಅನುಸರಿಸಲಿ. ನಯ-ಜಯ-ಬಲ - ಇವುಗಳು ಸೇರಿ, ವಿಕ್ರಮದಲ್ಲಿ ತಮ್ಮ ಸಿದ್ಧಿಯನ್ನು ಹೊಂದುವುವು" ಎಂದು ಆತನು ತನ್ನ ಮಾತನ್ನು ಮುಗಿಸಿದನು.

ಯುಧಿಷ್ಠಿರನು ಹೀಗೆಂದು ಹೇಳಲಾಗಿ, ಮಹಾ-ತೇಜಸ್ವಿಗಳೆನಿಸಿದ ಕೃಷ್ಣ-ಅರ್ಜುನ-ಭೀಮಸೇನರು ಜರಾಸಂಧನ ರಾಜಧಾನಿಯತ್ತ ಸಾಗಿದರು. ವರ್ಚಸ್ವಿಗಳಾದ, ಎಂದರೆ ತೇಜಸ್ಸಂಪನ್ನರಾದ, ಸ್ನಾತಕ-ಬ್ರಾಹ್ಮಣರ ಪರಿಚ್ಛದವನ್ನು ,ಎಂದರೆ ವೇಷ-ಭೂಷಣಗಳನ್ನು, ಅವರು ಧರಿಸಿಕೊಂಡರು: ಈ ಮೂಲಕ ತಮ್ಮನ್ನೇ ಮರೆಮಾಚಿಕೊಂಡರು. ಆ ಸಂದರ್ಭದಲ್ಲಿ ಅವರ ಸ್ನೇಹಿತರು ತಮ್ಮ ಮನೋಹರವಾದ ಮಾತುಗಳಿಂದ  ಅವರನ್ನು ಅಭಿನಂದಿಸಿದರು.

ಈ ಮೂವರೂ ಜರಾಸಂಧನ ವಿಷಯಕ್ಕೆ ರೋಷದಿಂದ ಕುದಿಯುತ್ತಿದ್ದರು. ಎಂದೇ ಸೂರ್ಯ-ಚಂದ್ರ-ಅಗ್ನಿಗಳಂತೆ ಅವರ ಶರೀರವು ಜ್ವಲಿಸುತ್ತಿತ್ತು. ಯುದ್ಧದಲ್ಲಿ ಎಂದೂ ಸೋಲನ್ನೇ ಕಂಡಿರದ, ಹಾಗೂ ಒಂದೇ ಕಾರ್ಯಕ್ಕಾಗಿಯೇ ಸಮುದ್ಯತರಾಗಿದ್ದ, ಹಾಗೂ ಭೀಮನನ್ನು ಮುಂದಿಟ್ಟುಕೊಂಡು ಹೊರಟಿದ್ದ, ಆ ಕೃಷ್ಣರಿಬ್ಬರನ್ನು ಹಾಗೆ ಕಂಡ ಯುಧಿಷ್ಠಿರನು, ಜರಾಸಂಧನು ಹತನಾದನೆಂದೇ ಭಾವಿಸಿದನು.

ಎಷ್ಟಾದರೂ ಅವರಿಬ್ಬರೂ ಎಂತಹವರು! ಧರ್ಮ-ಕಾಮ-ಅರ್ಥ ಇವುಗಳನ್ನು ಸಾಧಿಸುವ ಲೋಗರನ್ನು ತೊಡಗಿಸುವವರು! ಅವರು ನರ-ನಾರಾಯಣರೇ ಸರಿ!

ಕುರು ಪ್ರದೇಶದಿಂದ ಹೊರಟ ಅವರು, ದಾರಿಯಲ್ಲಿ ನಾನಾ-ಪ್ರದೇಶಗಳನ್ನು ಕಂಡರು. ಕುರು-ಜಾಂಗಲ ಪ್ರದೇಶ, ಅಲ್ಲಿ ರಮಣೀಯವಾದ ಪದ್ಮ-ಸರಸ್ಸು, ಮುಂದಕ್ಕೆ ಕಾಲಕೂಟ-ಪರ್ವತ, ಅದನ್ನೂ ದಾಟಿದ ಮೇಲೆ ಗಂಡಕಿ, ಮಹಾ-ಶೋಣ, ಸದಾ-ನೀರಾ ನದಿಗಳು, ಬಳಿಕ ಏಕಪರ್ವತಕ-ಪ್ರದೇಶದ ನದಿಗಳು - ಇವೆಲ್ಲವನ್ನೂ ಮೀರಿ ನಡೆದರು.

ಆಮೇಲೆ ರಮ್ಯವಾದ ಸರಯೂ-ನದಿ, ಪೂರ್ವಕೋಸಲ-ದೇಶ, ಬಳಿಕ ಮಿಥಿಲೆ. ಅಲ್ಲಿ ವಿಪುಲವಾದ ನದಿಗಳನ್ನು ಕಾಣುತ್ತಾ ಗಂಗೆ-ಶೋಣಭದ್ರಾ-ನದಿಗಳನ್ನು ದಾಟಿದರು. ಮುಂದಕ್ಕೆ ಪೂರ್ವಾಭಿಮುಖವಾಗಿ ಹೊರಟರು. ಕುಶ-ಚೀರವಸ್ತ್ರಗಳನ್ನು ಧರಿಸಿದ್ದ ಅವರು, ಮುಂದೆ ಮಾಗಧ-ಸೀಮೆಯನ್ನು ಸೇರಿದರು. ಅಲ್ಲಿ ಗೋ-ಧನದಿಂದ ತುಂಬಿತುಳುಕಿದ್ದುದೂ, ಜಲಸಮೃದ್ಧಿ-ಸಸ್ಯಸಮೃದ್ಧಿಗಳನ್ನುಳ್ಳದ್ದೂ ಆದ ಗೋರಥ-ಗಿರಿಯನ್ನು ತಲುಪಿ, ಅಲ್ಲಿ ಮಾಗಧ-ಪುರವನ್ನು ಕಂಡರು.

ಆಗ ವಾಸುದೇವನೇ ಮಾಗಧ-ದೇಶವನ್ನು ಪ್ರಶಂಸಿಸಿದನು: ಗೋಸಂಪತ್ತು, ನಿತ್ಯ-ಜಲಸಮೃದ್ಧಿಗಳನ್ನುಳ್ಳ ದೇಶವಿದಲ್ಲವೇ! ಈ ಶುಭ-ಮಾಗಧ-ನಿವೇಶಗಳು ಸೊಗಸಾದವು. ಇಲ್ಲಿನ ಜನಗಳಾದರೂ ವ್ಯಾಧಿಗಳಿಲ್ಲದಿರುವರು. ಮನೆಗಳು ಸೊಗಸಾಗಿವೆ. ಹೀಗಾಗಿ, ಈ ಮಾಗಧ-ದೇಶವೇ ಮನೋಹರವಾಗಿದೆ.

ವಿಪುಲ, ವರಾಹ, ವೃಷಭ, ಋಷಿಗಿರಿ ಹಾಗೂ ಚೈತ್ಯಕ – ಎಂಬ ಹೆಸರಿನ ಐದು ವಿಹಾರ-ಯೋಗ್ಯವಾದ ಪರ್ವತಗಳಿಲ್ಲಿವೆ.

ಸೂಚನೆ : 1/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 55 (Prasnottara Ratnamalike 55)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ - ೫೫ - ಮಿಂಚಿನಂತೆ ಚಪಲವಾದುದು ಯಾವುದು? 

ಉ. ದುರ್ಜನಸಂಗ ಮತ್ತು ಯುವತಿ.


ಪ್ರಕೃತ ಉತ್ತರದಲ್ಲಿ ಎರಡು ಸಂಗತಿಗಳನ್ನು ಅತ್ಯಂತ ಚಪಲವಾದವುಗಳು ಎಂಬುದಾಗಿ ಗಣಿಸಲಾಗಿದೆ. ಅದಕ್ಕೆ ಒಂದು ಉದಾಹರಣೆಯನ್ನೂ ಇಲ್ಲಿ ಕೊಡಲಾಗಿದೆ. ಉದಾಹರಣೆಯು ಆ ಚಪಲತೆ ಅಥವಾ ಚಂಚಲತೆಗೆ ತುಂಬಾ ಲಗತ್ತಾಗಿ ಹೊಂದಿಕೊಳ್ಳುವ ವಿಷಯವಾಗಿದೆ. ಇದರಿಂದ ಈ ಉತ್ತರದಲ್ಲಿ ಹೇಳಿರುವ ದುರ್ಜನಸಂಗ ಮತ್ತು ಯುವತಿ ಎರಡು ವಿಷಯಗಳು ಎಷ್ಟು ಚಪಲ? ಎಂಬುದನ್ನು ತಿಳಿಯಬಹುದಾಗಿದೆ. ಮಿಂಚು ಎಲ್ಲರಿಗೂ ತಿಳಿದಂತೆ ಒಂದು ಕ್ಷಣ ಆಕಾಶದಲ್ಲಿ ನಮ್ಮ ಕಣ್ಣಿಗೆ ಗೋಚರಿಸಿ ಮರೆಯಾಗುವ ವಿಷಯವಾಗಿದೆ. ಅಂತೆಯೇ ಈ ದುರ್ಜನಸಂಗ ಮತ್ತು ಯುವತಿಯ ಸಂಗವು ಕೂಡ ನಮ್ಮ ಜೀವನದಲ್ಲಿ ಅಷ್ಟು ಕ್ಷಣಿಕವಾದವುಗಳು. ಮಿಂಚು ಹೇಗೆ ಕಣ್ಣಿಗೆ ಕ್ಷಣಿಕ ಆನಂದವನ್ನು ಕೊಟ್ಟು ಮರೆಯಾಗುತ್ತದೆಯೋ ಅಂತೆಯೇ ಈ ಎರಡು ಸಂಗತಿಗಳೂ ಕೂಡ ಎಂಬ ಮಾರ್ಮಿಕ ವಿಷಯವನ್ನು ಈ ಪ್ರಶ್ನೋತ್ತರ ಸಾರುತ್ತದೆ. ಹಾಗಾದರೆ ಇವೆರಡು ಏಕೆ ಅಷ್ಟು ಚಂಚಲ? ಎಂಬುದನ್ನು ನಾವು ವಿಚಾರಿಸಬೇಕಾಗಿದೆ. ದುರ್ಜನರ ಸಂಗ ಮತ್ತು ಯುವತಿಯರ ಸಂಗ ಇವೆರಡೂ ನಮ್ಮನ್ನು ಸನ್ಮಾರ್ಗದಿಂದ ಚ್ಯುತಿಗೊಳಿಸುವ ವಿಧಾನವಾಗಿವೆ. ಹಾಗಾಗಿ ಇವೆರಡೂ ದೂರವಿಡಲು ಯೊಗ್ಯವಾದ ವಿಷಯಗಳು ಎಂಬುದನ್ನು ಅರಿಯಬೇಕಾಗಿದೆ.

ನಮ್ಮ ಜೀವನವು ಹೇಗೆ ಸಾಗಬೇಕಾಗಿದೆ? ಎಂಬುದನ್ನು ತಿಳಿದಾಗ, ಆ ಜೀವನಕ್ಕೆ ಎರಡು ಸಂಗತಿಗಳು ಎಷ್ಟು ವಿರೋಧವಾದವುಗಳು ಎಂಬುದನ್ನು ತಿಳಿಯಬಹುದು. ಅಂದರೆ ದುರ್ಜನರ ಸಂಪರ್ಕ ಮತ್ತು ಯುವತಿಯ ಸಾಂಗತ್ಯವು ಅತ್ಯಂತ ಚಂಚಲವಾಗಿದ್ದು, ಅವು ನಮ್ಮ ಜೀವನದಲ್ಲಿ ಮಿಂಚಿನಂತೆ ಬಂದುಹೋಗುತ್ತವೆ. ಶಾಶ್ವತವಾದವುಗಳಲ್ಲ. ಅವುಗಳನ್ನೇ ನೆಚ್ಚಿ ಕೂತರೆ ಬದುಕು ಅಸಾಧ್ಯ. ಹಾಗಾಗಿ ಇವೆರಡು ಕೂಡ ತ್ಯಾಜ್ಯ ಎಂಬುದು ಇದರ ಅರ್ಥ.

ವಯಸ್ಸಿಗೆ ಬಂದ ಯುವಕನಿಗೆ ಯುವತಿಯ ಸೆಳೆತ, ಹಾಗೆ ಯುವತಿಗೆ ಯುವಕನ ಸೆಳೆತ. ಈ ಎರಡು ಸೆಳೆತಗಳು ಆ ವಯಸ್ಸಿನಲ್ಲಿ ಅತ್ಯಂತ ಸಹಜವಾದವುಗಳು. ಅಕಾಲದಲ್ಲಿ ಬರುವ ಈ ಯುವಕ ಯುವತಿಯರ ಸೆಳೆತವು ಜೀವನದ ಉದ್ದೇಶವನ್ನು ಮರೆಸಬಹುದು. ಮತ್ತು ಯಾವಾಗ? ಯಾವುದು? ಹೇಗೆ? ಇತ್ಯಾದಿ  ವಿವೇಕಪ್ರಜ್ಞೆಯನ್ನೂ ಸಹ ನಷ್ಟವಾಗಿಸಬಹುದು. ಇದನ್ನೇ ಸಾಮಾನ್ಯವಾಗಿ 'ರತಿ, ಪ್ರೀತಿ, ಕಾಮ' ಇತ್ಯಾದಿಯಾಗಿ ಹೇಳುವುದಂಟು. ರತಿ ಅಥವಾ ಪ್ರೀತಿಯಲ್ಲಿ ಮುಳುಗಿದ ವ್ಯಕ್ತಿಗೆ ಯಾವ ಪ್ರಪಂಚವು ಕೂಡ ಕಾಣಿಸದು. ಈ ಕಾರಣವಾಗಿ ತನ್ನ ಜೀವಿತದ ಉತ್ಕೃಷ್ಟ ಉದ್ದಿಶ್ಯವನ್ನು ಅವನು ಮರೆಯುವ ಸಂದರ್ಭ ಬರುತ್ತದೆ. ಹಾಗಾಗಿ ಯುವಕ ಯುವತಿಯರ ಆಕರ್ಷಣೆ ಎಂಬುದು ಮಿತಿಯಲ್ಲಿ ಇರಬೇಕು. ಅಂದರೆ ಯಾವ ಕಾಲದಲ್ಲಿ ಬರಬೇಕು? ಎಂಬುದಕ್ಕೆ ಒಂದು ನಿಯಮ ಇದೆ. ಅವರ ಪರಸ್ಪರ ಆಕರ್ಷಣೆಯು ಕೇವಲ ಸಂತಾನೋತ್ಪತ್ತಿಗೆ ಮಾತ್ರ ಸೀಮಿತವಾಗಿರಬೇಕು. ಹಾಗಿಲ್ಲದ ಆಕರ್ಷಣೆಯು ಅವರ ಮನಸ್ಸಿನ ಏಕಾಗ್ರತೆಯನ್ನು ಭಂಗಗೊಳಿಸಬಹುದು. ಆದ್ದರಿಂದ ಅಕಾಲದ ಆಕರ್ಷಣೆಯು ಅತ್ಯಂತ ಅಪಾಯವಾದುದು. ಅದರಂತೆಯೇ ದುರ್ಜನರ ಸಂಗವೂ ಕೂಡ ಅತ್ಯಂತ ಅಪಾಯಕಾರಿ. ದುರ್ಜನರು ಎಂದರೆ ಧರ್ಮಪ್ರೀತಿ ಇಲ್ಲದ, ಧರ್ಮಕ್ಕೆ ವಿರೋಧವಾದ ನಡೆಯನ್ನು ಉಳ್ಳವರು. ಅವರ ಸಂಗವು ನಮ್ಮನ್ನು ಧರ್ಮದಿಂದ ಚ್ಯುತವಾಗಿಸುತ್ತದೆ. ಮತ್ತು ತತ್ಕಾಲದಲ್ಲಿ ಅದು ಬಹಳ ಅಪ್ಯಾಯಮಾನವಾಗಿ ಕಂಡುಬರುತ್ತದೆ. ಈ ಎರಡು ಸಂಗತಿಗಳು ಕೂಡ ತತ್ಕಾಲದಲ್ಲಿ ಆಕರ್ಷಕವಾಗಿಯೇ ಕಂಡು ಬರುತ್ತವೆ. ಆದರೆ ಪರಿಣಾಮದಲ್ಲಿ ಅವು ವಿಷಮತೆಯನ್ನು ಉಂಟುಮಾಡುತ್ತವೆ. ಆದ್ದರಿಂದ ಇವೆರಡನ್ನು 'ಮಿಂಚಿನಂತೆ ಅತ್ಯಂತ ಚಂಚಲವಾದವುಗಳು' ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.

ಸೂಚನೆ : 1/3/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಕೃಷ್ಣಕರ್ಣಾಮೃತ 95 ಗೋಕುಲಾಲಂಕಾರನಾದ ಯೋಗಿಧ್ಯೇಯ-ತೇಜೋಮೂರ್ತಿಗೆ ನಮಃ (Krishakarnamrta 95)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ರಾಜಯೋಗದಿಂದ ಭಗವಂತನನ್ನು ಹೊಂದಬಹುದು – ಎಂಬುದು ಪ್ರಸಿದ್ಧವಷ್ಟೆ. ಆದರೆ ಭಕ್ತಿಯೋಗಕ್ಕೆ ಆ ತೆರನಾದ ಸಾಮರ್ಥ್ಯವುಂಟೇ? – ಎಂದು ಶಂಕಿಸುವವರಿಗೆ ಇಲ್ಲಿ, ಲೀಲಾಶುಕನ ಈ ಶ್ಲೋಕದಲ್ಲಿ, ಉತ್ತರವಿದೆ.

ಗೋಪಾಲ-ಭೂಪಾಲನೆಂದರೆ ಗೋಪಾಲಕರ ರಾಜನಾದ ನಂದ-ಭೂಪ. ಅತನ ಕುಮಾರನೆಂದರೆ  ಇನ್ನಾರು, ಶ್ರೀಕೃಷ್ಣನೇ. ಆತನ ಮೂರ್ತಿಯೆಂದರೆ ಕೃಷ್ಣನ ಶರೀರವೇ. ಮೈಯನ್ನು ಮೂರ್ತಿಯೆನ್ನುವುದೂ ಉಂಟು.

ಧ್ಯಾನವೆಂದರೇನು? ಭಗವನ್ಮೂರ್ತಿಯನ್ನು ಆ-ಪಾದ-ಮಸ್ತಕ ಧ್ಯಾನಿಸುವುದೇ. ಆ-ಪಾದಂ ಎಂದರೆ "ಚರಣದಿಂದ ಆರಂಭಿಸಿ". ಆ-ಚೂಡಂ ಎಂದರೆ "ಶೀರ್ಷ-ಪರ್ಯಂತ", "ತಲೆಯವರೆಗೆ".

ಹೀಗೆ, "ಆ" ಎನ್ನುವುದಕ್ಕೆ "-ಇಲ್ಲಿಂದ" ಎಂಬ ಅರ್ಥವೂ ಇದೆ; ಹಾಗೆಯೇ, "-ಇಲ್ಲಿಯವರೆಗೆ" ಎಂಬ ಅರ್ಥವೂ ಇದೆ. ಧ್ಯಾನಿಸುವುದೆಂದರೆ ಧ್ಯೇಯ-ವಸ್ತುವನ್ನು ಚಿತ್ತದಲ್ಲಿ ತುಂಬಿಕೊಂಡಿರುವುದೇ.

ಅತಿಪ್ರಸಕ್ತವೆಂದರೆ ಆದರ-ಭರಿತವಾದದ್ದು. ಅತಿಪ್ರಸಕ್ತವಾದ ಮನಸ್ಸಿನಿಂದ ಯಮಿಗಳು, ಎಂದರೆ ಮುನಿಗಳು, "ಕುಡಿದೇಬಿಡು"ತ್ತಾರಂತೆ, ಶ್ರೀಕೃಷ್ಣನ ಮೂರ್ತಿಯನ್ನು! ಎವೆಯಿಕ್ಕದೆ ನೋಡುವುದನ್ನೇ "ಕಣ್ಣಿನಿಂದ ಕುಡಿಯುವುದು" - ಎಂಬುದಾಗಿ ವರ್ಣಿಸುತ್ತಾರೆ. ಹಾಗೆಯೇ, ಎಡೆಬಿಡದೆ ಧ್ಯಾನಿಸುವುದನ್ನು "ಮನಸ್ಸಿನಿಂದ ಕುಡಿಯುವುದು" - ಎನ್ನುತ್ತಾರೆ. ಧ್ಯಾನಕಾರ್ಯವೆಂಬುದು ಯೋಗಿಗಳಿಗೂ ಪರಮ-ಸುಲಭವೆಂದೇನಲ್ಲ. ಅದೂ ಶ್ರಮ-ಸಾಧ್ಯವೇ. ಮನಸ್ಸನ್ನು ಹಿಡಿದಿಡುವುದನ್ನು ಸುಲಭವೆಂದು ಯಾರು ಹೇಳಿಯಾರು?

ಯೋಗಿಗಳು ಅಷ್ಟು ಕಷ್ಟಪಟ್ಟು ಯಾವುದನ್ನು ಸಾಧಿಸುವರೋ ಅದನ್ನು ಗೋಪಿಯರು ಬಹು-ಸುಲಭವಾಗಿಯೇ ಸಾಧಿಸಿಬಿಡುತ್ತಾರೆ! – ಎನ್ನುವಂತಾಗಿದೆ. ಯೋಗಿಗಳು ಶ್ರೀಕೃಷ್ಣಮೂರ್ತಿಯನ್ನು ಹಾಗೆ "ಕುಡಿದರೂ", ನಿಜವಾಗಿ ರಸಾಸ್ವಾದವನ್ನು ಮಾಡಿದವರೆಂದರೆ ಗೋಪಿಯರೇ – ಎನ್ನುತ್ತಾನೆ, ಕವಿ. ಕೃಷ್ಣನ ಮೂರ್ತಿಯ ರಸವನ್ನು ಬಲ್ಲವರು ಭಕ್ತಿ ಉಕ್ಕಿರುವ ಚಿತ್ತದ ಗೋಪಿಕೆಯರೇ ಸರಿ.

ಯೋಗದ ಉನ್ನತಾವಸ್ಥೆಯಲ್ಲಿ ಏನು ಲಭ್ಯವಾಗುವುದೋ ಅದನ್ನೇ ಉತ್ಕಟವಾದ ಭಕ್ತಿಯೂ ದೊರಕಿಸಿಕೊಡುವುದು - ಎಂಬುದಾಗಿ ಶ್ರೀರಂಗಮಹಾಗುರುಗಳು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.

ಅಂತಹ ನಂದ-ಪುತ್ರನ ಮೂರ್ತಿಯು ನಿಮ್ಮನ್ನು ಪೊರೆಯಲಿ – ಎನ್ನುತ್ತಾನೆ, ಲೀಲಾಶುಕ.

ಆಪಾದಂ ಆಚೂಡಂ ಅತಿಪ್ರಸಕ್ತೈಃ /
ಆಪೀಯಮಾನಾ ಯಮಿನಾಂ ಮನೋಭಿಃ |
ಗೋಪೀಜನ-ಜ್ಞಾತ-ರಸೋವತಾದ್ ವೋ /
ಗೋಪಾಲ-ಭೂಪಾಲ-ಕುಮಾರ-ಮೂರ್ತಿಃ ||


ಮತ್ತೊಂದು ಶ್ಲೋಕ:

ಕೃಷ್ಣನಿಗೆ ನಮಸ್ಕಾರ ಹೇಳುತ್ತಿದ್ದಾನೆ, ಲೀಲಾಶುಕ - ತುಭ್ಯಂ ನಮಃ, ಎಂದು; ಆದರೆ ಕೃಷ್ಣನ ಹೆಸರನ್ನೇ ಹೇಳಹೋಗಿಲ್ಲ! ಏಕೆ? ಕೃಷ್ಣನೊಂದು ಮಹಸ್ಸು. ಮಹಸ್ಸೆಂದರೆ ತೇಜಸ್ಸಲ್ಲವೇ?  ಮಹಸ್ಸಿಗೆ ನಮಸ್ಸನ್ನು ಹೇಳಿದೆ. ಎಂತಹ ಮಹಸ್ಸು ಅದು? ಹೀಗೆಂದು ಹೇಳಲಾಗದುದು! ಎದುರಿಗೆ ತೋರಿದರೂ ವರ್ಣಿಸಲಾಗದುದು.

"ಈ" ತೇಜಸ್ಸಿಗೆ ನಮಃ - ಎಂದರೆ ಎದುರು ತೋರುತ್ತಿರುವ ತೇಜಸ್ಸಿಗೆ ನಮಸ್ಕಾರವೆಂದೇ. "ಅದು"/"ಆ" – ಎಂದರೆ ದೂರದಲ್ಲಿರುವುದು; "ಇದು"/"ಈ" – ಎಂದರೆ ಹತ್ತಿರದಲ್ಲೇ/ಎದುರಿಗೇ ಇರುವುದು.

ನಾಲ್ಕು ವಿಶೇಷಣಗಳು ಆ ತೇಜಸ್ಸಿಗೆ. ಶ್ಲೋಕದ ಇಡೀ ಪೂರ್ವಾರ್ಧವೇ ಒಂದು ವಿಶೇಷಣ. ಮಿಕ್ಕ ಮೂರು ಉತ್ತರಾರ್ಧದಲ್ಲಿ. ಅವಲ್ಲಿ ಒಂದನ್ನು ಹೇಳಿಯಾಯಿತು. ಇನ್ನು ಮೂರಿವೆ.

ಶ್ರೀಕೃಷ್ಣನು ಗೋಕುಲಕ್ಕೇ ಮಂಡನ – ಎಂಬುದು ಎರಡನೆಯದು. ಮಂಡನವೆಂದರೆ ಅಲಂಕಾರ. ಕೃಷ್ಣನು ಗೋಕುಲಾಲಂಕಾರ. ಎಂತಹ ಗೋಕುಲವದು? ಶ್ರೀ-ಮತ್ ಆದ ಗೋಕುಲವದು. ಹಾಗೆಂದರೆ ಸಿರಿ-ಸಂಪತ್ತುಗಳಿಂದ ಕೂಡಿದುದು – ಎಂದರ್ಥ: ಎಷ್ಟಾದರೂ ಗೋ-ಸಮೃದ್ಧಿ, ಗವ್ಯ-ಸಮೃದ್ಧಿಗಳಿಂದ ಕೂಡಿದ ಎಡೆ ತಾನೆ? ಆದ್ದರಿಂದ ಶ್ರೀ-ಮತ್. ಅಲ್ಲದೆ, ಗೋವುಗಳಿರುವೆಡೆಯಲ್ಲಿ ಲಕ್ಷ್ಮಿಯೂ ಇರುವಳು - ಎನ್ನುವರಲ್ಲವೆ? ಹಾಗೂ ಶ್ರೀ-ಮತ್. ಎಂದೇ ಅದು ಬಡಗೋಕುಲವೇನಲ್ಲ.

ಅಂತಹ ಶ್ರೀಮದ್ಗೋಕುಲಕ್ಕೆ ಭೂಷಣ, ನಮ್ಮ ಕೃಷ್ಣ, ಬಡವರ ನಡುವೆ ಬೆಳೆದವನೇನಲ್ಲ. ಅಲ್ಲದೆ, ಮುದ್ದಿನಲ್ಲೂ ಚೂಟಿತನದಲ್ಲೂ ಅತಿಶಯವೆಂದರೆ, ಮನೆಗೇನು, ಕೇರಿಗೇನು, ಇಡೀ ಊರಿಗೇ ಭೂಷಣ, ಕುಲಕ್ಕೇ ಮಂಡನ ವಾಗುವುದೇ.

ಮೂರನೆಯದಾಗಿ, ಆತನು ಮಾಧುರ್ಯವೊಂದೇ ತುಂಬಿರುವ ಅರ್ಣವ. ಅರ್ಣವವೆಂದರೆ ಸಾಗರ. ನಾವು ನೋಡಿರುವ ಸಮುದ್ರವೆಲ್ಲಾ ಬರೀ ಉಪ್ಪುನೀರಿನದು. ಆದರಿವನು ಮಾಧುರ್ಯದ ವಾರಿಧಿ. ಮಗು ಕಡುಮುದ್ದಾಗಿದ್ದರೆ ಅದುವೇ ಮಾಧುರ್ಯ. ಮಾಧುರ್ಯವೊಂದೇ ಇರುವ ದೊಡ್ಡಸಮುದ್ರವೇ ಆದರೆ ಮಾಧುರ್ಯೈಕ-ಮಹಾರ್ಣವ – ಎಂದು ತಾನೆ ಹೇಳಬೇಕು?

ಎಂತಹ ಮಾಧುರ್ಯವದು? - ಎಂದು ಸ್ವಲ್ಪ ಹೇಳುವಿರಾ? – ಎಂದರೆ, ಹೇಳಲಾಗದು. ಏಕೆ? ಆ ಮಾಧುರ್ಯವು ಮಾತಿಗೆಟುಕದು. ಸಕ್ಕರೆಯನ್ನು ಸವಿದಿಲ್ಲದವನಿಗೆ, ಏನೆಂದು ಹೇಳಿ ಅದರ ಸವಿಯನ್ನು ಅರ್ಥಮಾಡಿಸಬಹುದು? ನಾಲಿಗೆಯೇ, ಸಕ್ಕರೆಯನ್ನು ಸವಿದಿರುವೆಯೆಲ್ಲಾ, ಅದರ ರುಚಿಯನ್ನೊಮ್ಮೆ ಬಣ್ಣಿಸು – ಎಂದರೆ ಏನು ಹೇಳೀತು? ಎಷ್ಟು ಹೇಳಿದರೆ ಅರ್ಥಮಾಡಿಸಲಾದೀತು? ಮಾತಿನಿಂದ ಪ್ರಯೋಜನವಿಲ್ಲ; ಸುಮ್ಮನೆ ಒಮ್ಮೆ ಸವಿಯಬೇಕು, ಅಷ್ಟೆ. ಅರಿಯುವ ವಿಷಯವದು, ಅರುಹುವ ವಿಷಯವಲ್ಲ. ಹೀಗೆ ಲೌಕಿಕವಾದ ಮಾಧುರ್ಯವನ್ನೇ ವಿವರಿಸಿ ತಿಳಿಸಲಾಗದೆನ್ನುವಾಗ, ಇನ್ನು ಕೃಷ್ಣ-ಮಾಧುರ್ಯವನ್ನು ವಾಕ್ಕಿನ ದ್ವಾರಾ ವಿಶದಪಡಿಸಲಾದೀತೇ?

ಹೋಗಲಿ, ಮನಸ್ಸಿಗಾದರೂ ಗೋಚರವಾಗುವುದೇ ಅದು? - ಎಂದರೆ ಮನಸ್ಸಿಗೂ ನಿಲುಕದು, ಅದು! ಮನಸ್ಸಿಗೂ ವಾಕ್ಕಿಗೂ ದೂರದಲ್ಲೇ ಸ್ಫುರಿಸುವ ವಿಶಿಷ್ಟವಾದ ಮಾಧುರ್ಯವದು! ಸರ್ವ-ವಿಲಕ್ಷಣವಾದದ್ದರಿಂದಲೇ, ಎಂದರೆ ಮಿಕ್ಕೆಲ್ಲಕ್ಕಿಂತಲೂ ವಿಭಿನ್ನವಾಗಿರುವುದರಿಂದಲೇ, ಅದನ್ನು "ಇದರಂತೆ/ಅದರಂತೆ" ಎಂದೇನನ್ನೂ ಹೇಳಲಾಗದುದು. ಅನುಭವೈಕಗೋಚರವದು! ಪರಬ್ರಹ್ಮವು ವಚೋದೂರ-ಮನೋದೂರವೆಂದು, ವಸ್ತುತಃ ವಾಗತೀತ-ಮನೋತೀತವೆಂದೇ, ಉಪನಿಷತ್ತೇ ಉದ್ಗರಿಸುವುದಲ್ಲವೇ?

ಕೊನೆಯದಾಗಿ, ಅದು ಸುಕೃತಿಗಳ ಭಾವಗಳಲ್ಲಿ ಚೆನ್ನಾಗಿ ಬೆಳಗುವುದು. ಪ್ರಕಾಶಮಾನವಾಗಿ ಹೊಳೆಯುವುದನ್ನೇ ಇಲ್ಲಿ ನಿರ್ಭಾಸಿಯೆಂದಿರುವುದು. ನಿರಂತರವಾಗಿ ಯಾವುದು ಭಾಸಿಸುವುದೋ, ಎಂದರೆ ಪ್ರಕಾಶಿಸುವುದೋ, ಅಂತಹುದೇ ನಿರ್ಭಾಸಿ.

ಸುಕೃತಿಗಳ ಭಾವಗಳೆಂದರೆ ಎಂತಹ ಭಾವಗಳು ಅವು? ಅವು ಚಾಪಲ-ಭೂಷಿತವೆನಿಸತಕ್ಕವು. ಕೃಷ್ಣನನ್ನು ನೋಡಬೇಕೆಂಬ ಆಸೆಯೇನುಂಟೋ, ಆ ಆಸೆಯೇ ಚಾಪಲ. ಅವರ ಭಾವಗಳಿಗೆ ಈ ಚಾಪಲವೇ ಭೂಷಿತ. ಭೂಷಣ ಅಥವಾ ಭೂಷಿತವೆಂದರೆ ಅಲಂಕಾರ.

ಇನ್ನು ಅವರ ಚಾಪಲವಾದರೂ ಅಲ್ಪವಾದುದಲ್ಲ, ಭೂಯಸ್ಸಾದುದು. ಎಂದರೆ ಅತ್ಯಧಿಕವಾದುದು.

ಚಾಪಲವು ಉಂಟಾದರೂ ಎಷ್ಟೋ ವೇಳೆ ಅದನ್ನು ಮುಚ್ಚಿಟ್ಟುಕೊಳ್ಳುವುದಾಗುತ್ತದೆ. ಆದರೆ ಅದು ಉಕ್ಕಿ ಬರುವ ವೇಳೆ ಸ್ಫುಟವಾಗಿ ಆವಿರ್ಭಾವಗೊಂಡುಬಿಡುತ್ತದೆ.

ಕೃಷ್ಣನನ್ನು ಕಂಡರೆ ಆಗುವುದು ಹರ್ಷ-ವರ್ಷವೇ. ವರ್ಷವೆಂದರೆ ಮಳೆ, ಅಥವಾ ಮಳೆಸುರಿಯುವಂತೆ ಸುರಿಯುವುದು. ಕೃಷ್ಣನನ್ನು ಕಂಡವರಲ್ಲಿ ಸಂತೋಷದ ಧಾರೆಯೇ ಸುರಿಯುವುದಷ್ಟೆ? ಆ ಅತಿಶಯವನ್ನೇ ನಿರ್ಭರವೆಂದಿರುವುದು. ಅವರ ಮನಸ್ಸು ಅದಕ್ಕೆ ಸೋತಿದೆ. ಆ ವಿವಶತೆಯ ಓಘವೆಂತಹುದು! ವಿವಶಾವೇಶವೆಂದರೆ ಅದೇ. ಆ ಕಾರಣಕ್ಕೇ ಅದು ಸ್ಫುಟವಾಗಿ ಪ್ರಕಟಗೊಂಡಿರುವುದು ಕೂಡ.

ಒಟ್ಟಿನಲ್ಲಿ ಹೇಳುವುದಾದರೆ, ಹರ್ಷಾತಿರೇಕದಿಂದ ಕೂಡಿರುವ ಸಜ್ಜನರು ಶ್ರೀಕೃಷ್ಣನ ವಿಷಯದಲ್ಲಿ ಭಾವ-ಭರಿತರಾಗಿದ್ದಾರೆ. ಕೃಷ್ಣನನ್ನು ವಿಶೇಷವಾಗಿ ನೋಡಬೇಕೆಂಬ ಅವರ ಚಾಪಲವು ಎದ್ದು ಕಾಣುತ್ತಿದೆ. ಕೃಷ್ಣನಾದರೂ ಶ್ರೀಗೋಕುಲಕ್ಕೆ ಭೂಷಣನಾಗಿದ್ದಾನೆ. ಮನೋವಾಗತೀತನಾಗಿದ್ದಾನೆ, ಕೃಷ್ಣ. ಮಧುರತೆಯದೇ ಮಹಾಸಾಗರ ಅವನು.

ಹೀಗೆಲ್ಲ ಇರುವ ಅವರ್ಣನೀಯ-ತೇಜಸ್ಸಾದ ಕೃಷ್ಣನೇ, ನಿನಗೆ ನಮಸ್ಕಾರ - ಎನ್ನುತ್ತಾನೆ, ಲೀಲಾಶುಕ.

ತುಭ್ಯಂ ನಿರ್ಭರ-ಹರ್ಷ-ವರ್ಷ-ವಿವಶಾವೇಶ-ಸ್ಫುಟಾವಿರ್ಭವದ್-/

ಭೂಯಶ್ಚಾಪಲ-ಭೂಷಿತೇಷು ಸುಕೃತಾಂ ಭಾವೇಷು ನಿರ್ಭಾಸಿನೇ |

ಶ್ರೀಮದ್-ಗೋಕುಲ-ಮಂಡನಾಯ ಮನಸಾಂ ವಾಚಾಂ ಚ ದೂರ-ಸ್ಫುರನ್-/

ಮಾಧುರ್ಯೈಕ-ಮಹಾರ್ಣವಾಯ ಮಹಸೇ ಕಸ್ಮೈಚಿದಸ್ಮೈ ನಮಃ ||

ಶ್ಲೋಕದಲ್ಲಿ ಅನುಪ್ರಾಸಾಲಂಕಾರವಿದೆ – ವಿಶೇಷವಾಗಿ ಕೊನೆಯ ಪಾದದಲ್ಲಿ.

ಸೂಚನೆ : 14/2/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.