Sunday, March 8, 2026

ಅಷ್ಟಾಕ್ಷರೀ101 ಊರ್ಧ್ವಮೂಲಮಧಶ್ಶಾಖಮ್ (Astakshara 101)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



ನಮ್ಮ ಪ್ರಾಚೀನಸಾಹಿತ್ಯದಲ್ಲಿ ವೃಕ್ಷರೂಪಕವು ಸಮೃದ್ಧವಾಗಿದೆ.  ನೇರವಾಗಿ ಅಲ್ಲದಿದ್ದರೂ ಧ್ವನಿತವಾಗಿ ಅದನ್ನು ಹಲವೆಡೆ ಹೇಳಿದೆ. ಉದಾಹರಣೆಗೆ ವೇದ-ವಿಭಾಗವೆನ್ನುವಾಗ ಋಕ್-ಶಾಖೆ ಯಜುಶ್-ಶಾಖೆ ಮುಂತಾಗಿ ಹೇಳುವಲ್ಲಿ, ವೇದವೆಂಬುದು ಒಂದು ವೃಕ್ಷವೆಂಬುದು ಧ್ವನಿತವಾಗುವುದಲ್ಲವೇ? ಶಾಖೆಯೆಂದರೆ ಕೊಂಬೆ; ಶಾಖೆಗಳಿರುವುದು ವೃಕ್ಷದಲ್ಲಿ ತಾನೆ? 

ಅಂತೆಯೇ ಆದಿಕಾವ್ಯವೆನಿಸುವ ರಾಮಾಯಣದಲ್ಲಿ ಮರದ ಕಾಂಡಗಳೆಂಬಂತೆ ಬಾಲಕಾಂಡ ಮೊದಲಾದ ಸಪ್ತ-ಕಾಂಡಗಳಿವೆ. ಮಹಾಭಾರತದಲ್ಲಿ ೧೮ ಪರ್ವಗಳಿವೆ. ಕಬ್ಬಿನ ಜಲ್ಲೆಯಲ್ಲಿನ ಗಿಣ್ಣುಗಳಿಗೆ ಪರ್ವಗಳೆಂದೇ ಹೆಸರು. ಗಿಣ್ಣುಗಳು ಜಲ್ಲೆಯ ಘಟ್ಟಗಳು. 

ಮುಖ್ಯ-ಕಾಲಘಟ್ಟಗಳನ್ನು ಸಹ ಪರ್ವಗಳೆನ್ನಲಾಗುತ್ತದೆ: ಸಂಕ್ರಮಣ/ ಹುಣ್ಣಿಮೆ/ಅಮಾವಾಸ್ಯೆ/ಗ್ರಹಣ-ಸಮಯಗಳೆಲ್ಲಾ ಪರ್ವಕಾಲಗಳೇ. ಸಂಸ್ಕೃತದ "ಪರ್ವ"ವೇ ಕನ್ನಡದಲ್ಲಿ "ಹಬ್ಬ"ವಾಗಿರುವುದು.

ಮನುಷ್ಯನನ್ನೇ ಸಸ್ಯವೆಂಬಂತೆ ರೂಪಿಸಿರುವುದು ಬೃಹದಾರಣ್ಯಕೋಪನಿಷತ್ತಿನಲ್ಲಿ ಲಭ್ಯ: ಸಸ್ಯಮಿವ ಮರ್ತ್ಯಃ. ಮಹಾಭಾರತದಲ್ಲಿ ಯುಧಿಷ್ಠಿರ-ದುರ್ಯೋಧನರನ್ನು ಸಹ ಮರಗಳೆಂದು ರೂಪಕ ಮಾಡಿದೆ: ಯುಧಿಷ್ಠಿರನು  ಧರ್ಮಮಯವಾದ ವೃಕ್ಷ; ದುರ್ಯೋಧನನು ಅಧರ್ಮಮಯವಾದ ವೃಕ್ಷ.

ಇನ್ನು ಭಗವದ್ಗೀತೆಯಲ್ಲಿ ಒಂದು ವಿಶಿಷ್ಟವಾದ ವೃಕ್ಷವನ್ನೇ ಹೇಳಿದೆ. ಸಾಧಾರಣವಾಗಿ ನಾವು ಕಂಡಿರದ ವೃಕ್ಷವದು. ಏನದರ ವಿಶೇಷ? ಲೋಕದಲ್ಲಿ ನಾವು ನೋಡುವ ವೃಕ್ಷಗಳು ಹೇಗಿರುತ್ತವೆ? ಸಂಚಾರವಿಲ್ಲದೆ ನಿಲ್ಲತಕ್ಕ ಜೀವಿಗಳು ಅವು. ಒಂದೇ ಎಡೆಯಲ್ಲಿ ಸ್ಥಿರವಾಗಿ ನಿಲ್ಲತಕ್ಕವಾದ್ದರಿಂದ ಅವುಗಳ ಬೇರು ಗಟ್ಟಿಯಾಗಿರುತ್ತದೆ; ಆಳವಾಗಿಯೂ ಅಗಲವಾಗಿಯೂ ಹರಡಿಕೊಂಡಿರುತ್ತದೆ.

ಬೇರೆಂಬುದು ಕೆಳಗೂ ಒಳಗೂ ವ್ಯಾಪಿಸಿದ್ದೂ ಅಗೋಚರವಾಗಿಯೇ ಇರುತ್ತದೆ. ಬೇರು ಗೂಢವಾದರೂ ಮರದ ಶಾಖೆ-ಉಪಶಾಖೆಗಳು ಮೇಲಿದ್ದು ಪ್ರಕಟವಾಗಿರುವುವು. ಅವುಗಳ ವಿಸ್ತಾರವೇ ನಮಗೆ ಕಂಡುಬರುವುದು. ಇಡೀ ವೃಕ್ಷವನ್ನೇ ಆಳುವುದು ಮಾತ್ರ ಮರದ ಬೇರೇ.

ಕೊಂಬೆಯೊಂದಕ್ಕೆ ಏಟಾದರೆ ಗಿಡಕ್ಕದು ನೋವೇ. ಆದರೆ ಕೊಂಬೆಯನ್ನು ಕತ್ತರಿಸಿದರೂ ಮರವೇನೂ ಅಳಿಯದು. ಬೇರಿಗೇನಾದರೂ ಪ್ರಬಲವಾದ ಏಟು ಬಿದ್ದರೆ ಮರವೇ ಒಣಗಿ ಸತ್ತೀತು. ಬುಡಕ್ಕೆ ಕೊಡಲಿಯೇಟಾದರೆ ಮರವೇ ಕುಸಿಯುವಂತಾಗುವುದು. ಅಡಿಪಾಯವೇ ಜಗ್ಗಿದರೆ ಸೌಧವೇ ಉರುಳಿಕೊಳ್ಳುವುದಲ್ಲವೇ?

ಆದರೆ, "ಮೇಲ್ಬೇರು ಕೆಳಗೊಂಬೆಯ ವೃಕ್ಷವೊಂದುಂಟು; ಅದನ್ನು ನೀವು ಕಂಡಿದ್ದೀರಾ?" - ಎಂದು ಶ್ರೀರಂಗಮಹಾಗುರುಗಳು ಶಿಷ್ಯರನ್ನು ಪ್ರಶ್ನಿಸಿದ್ದರು. ಕೃಷಿಕ್ಷೇತ್ರದಲ್ಲಿದ್ದವರೂ ಅಂತಹೊಂದನ್ನು ಕಂಡಿಲ್ಲವೆಂದರು. ಆಗ, "ನಾವೆಲ್ಲರೂ ಅಂತಹ ವೃಕ್ಷವೇ!" ಎಂದವರು ಪ್ರತಿಪಾದಿಸಿದರು. ಹೀಗೆ ಎಲ್ಲೆಡೆ ಗೋಚರಿಸುವ ಮರವಿದುವೇ!

ಭಗವದ್ಗೀತೆಯ ಹದಿನೈದನೆಯ ಅಧ್ಯಾಯದ ಪ್ರಥಮಶ್ಲೋಕವೇ ಅಂತಹ ವೃಕ್ಷವೊಂದನ್ನು ಹೇಳುತ್ತದೆ "ಊರ್ಧ್ವಮೂಲಂ ಅಧಃಶಾಖಂ". ಅಲ್ಲಿ ಹೇಳಿರುವುದು ಬ್ರಹ್ಮಾಂಡವೃಕ್ಷವೆಂದೇ ಬಹುತೇಕ ವ್ಯಾಖ್ಯಾನಗಳ ವಿವರಣೆ. ಆದರೆ ಅದು ಮನುಷ್ಯದೇಹಕ್ಕೂ ಅನ್ವಯಿಸಬಹುದು - ಎಂಬುದನ್ನು ಕೆಲವರಷ್ಟೇ ಕಂಡಿರುವರು. ಅಂತಹ ವಿವರಣೆಯೊಂದು ಉಂಟೆಂದು ವೇದಾಂತದೇಶಿಕರು ಉಲ್ಲೇಖಿಸಿರುವರು.

ಬೀಜವೊಂದನ್ನು ನೆಟ್ಟಾಗ ಮೊದಲ ಹೆಜ್ಜೆಯಾಗಿ ಬೇರೆಂಬುದು ಸಿದ್ಧವಾಗುತ್ತದೆ; ಆ ಬಳಿಕ ಸಸಿಯು ಕಾಣಿಸಿಕೊಂಡು, ಕಾಂಡವು ಬೆಳೆಯಲಾರಂಭಿಸುವುದು. ಗರ್ಭದಲ್ಲಿ ಶಿಶುವು ಬೆಳೆಯುವ ಬಗೆಯೂ ಹಾಗೆಯೇ. ಮೊಟ್ಟಮೊದಲು ಸಿದ್ಧವಾಗುವುದು ತಲೆ; ಅದನ್ನು ಅನುಸರಿಸಿಕೊಂಡೇ ಬೆನ್ನೆಲುಬಿನ ರಚನೆಯಾಗುವುದು. ಇವೆರಡೂ ಗಟ್ಟಿಯಾಗಿ ನಿಲ್ಲತಕ್ಕವಂತಹವು. ಉಳಿದ ಅಂಗೋಪಾಂಗಗಳು ಆಮೇಲೆ ಕ್ರಮೇಣ ಮೂಡಿಕೊಳ್ಳುತ್ತವೆ.

ಈ ಶರೀರವೆಂಬ ವೃಕ್ಷಕ್ಕೆ ಶಿರಸ್ಸೇ ಮೂಲ; ಕೈ-ಕಾಲುಗಳು ಶಾಖೆಗಳು; ಕೈ/ಕಾಲುಗಳಲ್ಲಿ ಇರುವ ಬೆರಳುಗಳು ಉಪಶಾಖೆಗಳು. ಎಂದೇ, ಇದೊಂದು "ಬುಡಮೇಲಾದ ಮರ"ವೆನ್ನಬೇಕು. ಅಥವಾ, ಗಿಡವನ್ನೇ "ತಲೆಕೆಳಗಾದ ಶರೀರ"! – ಎಂದರೂ ನಡೆದೀತು!

ವೃಕ್ಷವೂ ಚಿರಸ್ಥಾಯಿಯಲ್ಲ; ಶರೀರವೂ ನಶ್ವರವೇ. ವೃಕ್ಷ/ಶರೀರಗಳ ನಿರುಕ್ತಿಗಳೂ ಅದನ್ನೇ ಹೇಳುತ್ತವೆ. ದೇಹವು ಸ್ಥಿರವಲ್ಲವೆಂಬುದನ್ನೇ ಅಶ್ವತ್ಥವೆಂಬ ಪದವೂ ಹೇಳುವುದು. ಯಾವುದು ನಾಳೆಗೂ ನಿಲ್ಲದೋ ಅದೇ ಅಶ್ವತ್ಥ; ಶ್ವಃ ಎಂದರೆ ನಾಳೆ. 

ಅಶ್ವತ್ಥವೃಕ್ಷದ ಬಹುಕಾಲ ಬಾಡಿಕೊಂಡಿರುವ ಎಲೆಯೊಂದನ್ನು ಗಮನಿಸಬಹುದು: ಅದರಲ್ಲಿಯ "ಮಾಂಸಭಾಗ"ವೆಲ್ಲ ಬಿದ್ದುಹೋಗಿದ್ದು, ಅಲ್ಲಿಯ ಅಂಗೋಪಾಂಗ-ರಚನೆಯು ಸ್ಫುಟವಾಗಿ ಕಾಣುವುದು. ಅದಂತೂ ಮನುಷ್ಯ-ನರಮಂಡಲದ ರಚನೆಯನ್ನೇ  ಹೋಲುವುದು. ನಮ್ಮ ನರಮಂಡಲದ ರಚನೆಯೂ ಶಿರಸ್ಸೆಂಬ ಮೂಲದಿಂದ ಆರಂಭವಾಗಿರುವುದು; ಕಾಂಡದ ಹಾಗಿರುವ ಬೆನ್ನುಮೂಳೆಯನ್ನು ಆಧರಿಸಿಕೊಂಡಿರುವುದು.

ಮರದ ಬೇರನ್ನು ಕಾಪಾಡಿಕೊಳ್ಳುವಂತೆಯೇ ನಮ್ಮ ಶಿರಸ್ಸನ್ನೂ ಕಾಯ್ದುಕೊಳ್ಳಬೇಕಲ್ಲವೇ? ಶರೀರವು ನಶ್ವರವಾದರೂ ನಶ್ವರವಲ್ಲದ ಭಗವತ್ತತ್ತ್ವವನ್ನು ಸಂಪಾದಿಸಿಕೊಳ್ಳಲಿಕ್ಕೆ, ಸಾಧನೆ-ಸದ್ವಿಚಾರಗಳ ಸೇಚನವು ಸಮಯಕ್ಕೆ ಸರಿಯಾಗಿ ಸಲ್ಲುತ್ತಿರಬೇಕಲ್ಲವೇ - ಈ ಮೂಲಕ್ಕೆ?  

ಮೌಲಿಕವಾದ ಈ ವಿಚಾರವನ್ನು ಮರೆಯದಿರೋಣ!

ಸೂಚನೆ: 7/3//2026 ರಂದು ಈ ಲೇಖನ ವಿಜಯವಾಣಿ ಸುದಿನ ದಲ್ಲಿ ಪ್ರಕಟವಾಗಿದೆ.