Monday, May 30, 2022

ಶ್ರೀ ರಾಮನ ಗುಣಗಳು - 56 ದಶರಥ-ನಂದನ - ಶ್ರೀರಾಮ (Sriramana Gunagalu-55 Dasharatha-Nandana-Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ಶ್ರೀರಾಮನನ್ನು ಸ್ತುತಿಸುವಾಗ 'ದಶರಥನಂದನ ಶ್ರೀರಾಮ ಎಂದು ರಾಮನನ್ನು ಕೊಂಡಾಡುವುದುಂಟು. ದಶರಥನ ಮಗ ಶ್ರೀರಾಮನು ಎಂಬುದು ಶ್ರೀರಾಮನ ಗುಣವಿಶೇಷಗಳಲ್ಲಿ ಒಂದು ಎನಿಸುವುದಾದರೂ ಹೇಗೆ? ದಶರಥನು ಅಯೋಧ್ಯೆಯ ಅಧಿಪ. ಅವನಿಗೆ ಬಹಳ ವರ್ಷಗಳ ಪರ್ಯಂತ ಪುತ್ರಪ್ರಾಪ್ತಿಯ ಯೋಗವಿರಲಿಲ್ಲ. ಪುತ್ರಪ್ರಾಪ್ತಿ ಇಲ್ಲದಿದ್ದರೆ ಗಾರ್ಹಸ್ಥ್ಯಜೀವನ ಅಪರಿಪೂರ್ಣವೇ ಸರಿ ಎಂಬುದು ಭಾರತೀಯರ ಅಭಿಪ್ರಾಯ. ಪುತ್ರಪ್ರಾಪ್ತಿಯೇ ಗೃಹಸ್ಥಜೀವನದ ಉದ್ದೇಶವಲ್ಲವೇ? ಇದಕ್ಕಾಗಿಯೇ ರಾಜಾ ದಶರಥನು ಅನೇಕಯಾಗಗಳನ್ನೂ ಮಾಡಿ, ಕೊನೆಗೆ ಪುತ್ರಕಾಮೇಷ್ಟಿಯಾಗದಿಂದ ಸಂತಾನಭಾಗ್ಯವನ್ನು ಪಡೆದ ಎಂಬುದು ರಾಮಾಯಣ ಸಾರುವ ಕಥೆ. ಅಂದರೆ ಕೇವಲ ಮಗ ಎಂಬುದಷ್ಟೇ ಶ್ರೀರಾಮನ ವಿಶೇಷತೆಯೇ? ಅಥವಾ ಶ್ರೀರಾಮನಂತಹ ಸುತನನ್ನು ಪಡೆದಿದ್ದರಿಂದವೋ?   

ತಂದೆಯ ಪಿತೃತ್ವವೂ ಧನ್ಯತೆಯನ್ನು ಪಡೆಯಿತು ಎಂಬುದು ಇನ್ನೂ ವಿಶೇಷತೆ. ಉತ್ತರರಾಮಚರಿತೆ ಎಂಬ ಸಂಸ್ಕೃತನಾಟಕದಲ್ಲಿ ಭವಭೂತಿ ಎಂಬ ಕವಿಯು ಒಂದು ಮಾತನ್ನು ಹೇಳುತ್ತಾನೆ. ಅದೇನೆಂದರೆ "ಆನಂದಗ್ರಂಥಿರೇಕೋಽಯಮ್ ಅಪತ್ಯಮಿತಿ ಕಥ್ಯತೇ" ಎಂಬುದಾಗಿ.  ಅದೊಂದು ಆನಂದದ ಕಟ್ಟು ಎಂಬುದಾಗಿ ಅವನ ಆಶಯ. ಪ್ರತಿಯೊಬ್ಬ ತಂದೆ-ತಾಯಿಯರ ಅತಿಬಲಿಷ್ಠವಾದ ಹಂಬಲ ಇದುವೇ ತಾನೆ. ಜೀವನದಲ್ಲಿ ಆನಂದವನ್ನು ಪ್ರತಿಯೊಬ್ಬರೂ ಅನ್ವೇಷಣೆ ಮಾಡುತ್ತಾ ಇರುತ್ತಾರೆ. ಕೊಟ್ಟಕೊನೆಯ ಆನಂದ ಯಾವುದುಂಟೋ ಅದನ್ನು 'ಬ್ರಹ್ಮಾನಂದ' ಎಂದು ಕರೆಯುತ್ತಾರೆ. ಇದನ್ನೇ ಇನ್ನೊಂದು ಪದದಲ್ಲಿ 'ಆನಂದ' ಎಂದೂ ಕರೆಯಲಾಗುತ್ತದೆ. ಎಲ್ಲೆಲ್ಲಿ ಈ ಆನಂದದ ತುಣುಕು ಕಂಡುಬರುವುದೋ ಅದನ್ನೆಲ್ಲ ಜೀವನದಲ್ಲಿ ಅನುಭವಿಸಬೇಕೆಂಬ ಸದಭಿಪ್ರಾಯ ಭಾರತೀಯರದ್ದಾಗಿದೆ. ಪುತ್ರೋತ್ಪತ್ತಿಯಿಂದ ಪ್ರಾಪ್ತವಾಗುವ ಆನಂದವೂ ಬ್ರಹ್ಮಾನಂದವನ್ನೇ ಹೋಲುವಂತಹದ್ದು. ಆದ್ದರಿಂದ ಸಂತಾನಪ್ರಾಪ್ತಿಯೂ ತಂದೆಗೆ ಸಂತೋಷವನ್ನು ಕೊಡುವಂತಹದ್ದು. ಯೋಗಿಗಳು ಶ್ರೀರಾಮನನ್ನು ಆನಂದರೂಪವಾಗಿಯೇ ತಮ್ಮ ಹೃದಯದಲ್ಲಿ ಕಂಡುಕೊಳ್ಳುತ್ತಾರೆ. ರಾಮನ ಈ ರೂಪವನ್ನು ಕಂಡು ದಶರಥನು ಸಂತೋಷಪಟ್ಟನು ಎಂಬುದಕ್ಕಿಂತ ಶ್ರೀರಾಮನು ಅವನಿಗೆ ನಂದನನಾದನು. 

ಪುತ್ರಕಾಮೇಷ್ಟಿಯಾಗದ ಫಲವಾಗಿ ಸಕಲಗುಣಸಂಪನ್ನರೂ, ಅಮಿತತೇಜಸ್ಸಿಂದ ಕೂಡಿದವರೂ ಆದ ನಾಲ್ಕು ಪುತ್ರರ ಜನನ ಆಗುತ್ತದೆ. ತನಗಾದ ಸಂತೋಷದ ದ್ಯೋತಕವಾಗಿ ಎಲ್ಲರಿಗೂ ಯೋಗ್ಯವಾದ ಬಹುಮಾನವನ್ನು ವಿತರಿಸಿದನು. ಸಿಹಿಯನ್ನು ಹಂಚಿದನು. ಸಾವಿರಾರು ಗೋವುಗಳನ್ನು ದಾನಮಾಡಿದನು. ಪಟ್ಟಣದಲ್ಲಿ ಎಲ್ಲರಿಗೂ ಮೃಷ್ಟಾನ್ನಭೊಜನವನ್ನು ಮಾಡಿಸಿದ. ಬೆಲೆಬಾಳುವ ರತ್ನ ವಜ್ರ ವೈಡೂರ್ಯಗಳನ್ನು ಸದಕ್ಷಿಣಾಕವಾಗಿ ದಾನಮಾಡಿದ.  ಅಯೋಧ್ಯೆಯ ನಗರದಲ್ಲಿ ಎಲ್ಲೆಲ್ಲೂ ಆನಂದದ ಹೊಳೆ ಹರಿಯುತ್ತಿತ್ತು. ಅನೇಕ ಶತಮಾನಗಳಿಂದಲೇ ಸಂತಾನವಿಲ್ಲದ ತಂದೆಗೆ ಅದೆಷ್ಟು ಸಂತೋಷ ಬಾರದು ಹೇಳಿ? ದಶರಥನಿಗೆ ಅದೆಷ್ಟು ಸಂತೋಷವಾಯಿತೆಂದರೆ ಪ್ರಥಮ ಪುತ್ರನಿಗೆ 'ರಾಮ' ಎಂದೇ ನಾಮಕರಣವನ್ನೂ ಮಾಡಿದ. ಆತನಿಗೆ ಶ್ರೀರಾಮನು ಅವತಾರಪುರುಷನಾಗಿ ಜನ್ಮ ತಾಳಿದ. ಜಗತ್ತಿನ ಭಾರವನ್ನೆಲ್ಲ ತಾನು ಹೊತ್ತು, ಲೋಕಕ್ಕೆ ಕಂಟಕಪ್ರಾಯನಾದ ಲಂಕಾಧಿಪ ರಾವಣನನ್ನು ಸಂಹರಿವಂತಹ ಮಗನನ್ನು ಪಡೆದ ಎಂಬ ಹಿರಿಮೆ ಸಾಲದೇ? ದಶರಥನ ಆನಂದಕ್ಕೆ. ಇದರಿಂದಲೇ ನಮಗೆ ಅರ್ಥವಾಗುತ್ತದೆ ಶ್ರೀರಾಮನು ದಶರಥನಿಗೆ ಯಾವ ಪ್ರಮಾಣದಲ್ಲಿ ನಂದನನಾಗಿದ್ದ ಎಂದು.


ಸೂಚನೆ : 29/5/2022 ರಂದು ಈ ಲೇಖನ ಹೊಸದಿಗಂತ  ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.

Thursday, May 26, 2022

ಪುರುಷಪ್ರಯತ್ನ ಮತ್ತು ದೈವಾನುಗ್ರಹಗಳೆರಡೂ ಮುಖ್ಯ (Purusaprayatna Mattu Daivanugrahagaleradu Mukhya)

ಲೇಖಕರು: ವಾದಿರಾಜ. ಪ್ರಸನ್ನ

(ಪ್ರತಿಕ್ರಿಯಿಸಿರಿ lekhana@ayvm.in)



ಒಬ್ಬ ನಾವಿಕನು ಜನರನ್ನು ಮತ್ತು ಸರಕನ್ನು ವಿದೇಶಕ್ಕೆ ಸಾಗಿಸುವ ೮ ಅಂತಸ್ಥಿನ ದೊಡ್ಡ ಹಡಗನ್ನು  ನಡೆಸುತ್ತಿದ್ದನು. ಆ ನಾವಿಕನು ದೇವರ ಪ್ರಾರ್ಥನೆ ಮತ್ತು ಧ್ಯಾನವನ್ನು ಮಾಡಿಯೇ ಪ್ರತಿದಿನದ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದನು. 


ಒಮ್ಮೆ ಎಂದಿನಂತೆ ನಾವಿಕನು ಹಡಗನ್ನು ಆರಂಭಿಸುವ ಮೊದಲು ದೇವರ ಪ್ರಾರ್ಥನೆ ಮತ್ತು ಧ್ಯಾನವನ್ನು ಮಾಡುತ್ತಿದ್ದನು. ಆಗ ಅಲ್ಲಿದ್ದ ಯುವಕ-ಯುವತಿಯರು ಇದೊಂದು ಮೌಢ್ಯ ಆಚರಣೆಯೆಂದು ಅವನನ್ನು  ಅಪಹಾಸ್ಯ ಮಾಡಹತ್ತಿದರು. 

ಆತನು ಅದಕ್ಕೆ ಕಿವಿಗೊಡದೆ ಪ್ರಾರ್ಥನೆಯ ನಂತರ ಹಡಗನ್ನು ನಡೆಸಲು ಪ್ರಾರಂಭಿಸಿದನು. ದೂರದೇಶದ ಏಳು ದಿನಗಳ ಪ್ರಯಾಣ. ಮೂರನೆಯ ದಿನ  ಆಕಾಶದಲ್ಲಿ ದಟ್ಟಕಪ್ಪು ಕಾರ್ಮೋಡ ಆವರಿಸಿತು. ಮಳೆ ಬರುವ ಮುನ್ಸೂಚನೆಯಂತೆ ಭೀಕರ ಗುಡುಗು, ಮಿಂಚುಗಳ ಆರ್ಭಟ. ಕೆಲವೇ ನಿಮಿಷಗಳಲ್ಲಿ ದಪ್ಪಹನಿಯ ಧಾರಾಕಾರ ಮಳೆ. ಒಡನೆಯೇ ರಭಸದ ಬಿರುಗಾಳಿ. ಆ ಬಿರುಗಾಳಿಯ ತೀವ್ರತೆಗೆ ಇಡೀ ಹಡಗೇ ಬುಡಮೇಲಾಗುವಂತೆ ಅಲುಗಾಡತೊಡಗಿತು. ಆ ಸಂದರ್ಭದಲ್ಲಿ ಪ್ರಯಾಣಿಕರು ಜೀವಭಯದಿಂದ 'ಓ ದೇವರೇ, ನನ್ನನ್ನು ರಕ್ಷಿಸು' ಎಂದು ಪ್ರಾರ್ಥನೆಮಾಡುತ್ತಿದ್ದರು. ಸ್ವಲ್ಪ ಸಮಯದ ಹಿಂದೆ ತಮಾಷೆ ಮಾಡಿದ ಯುವಕ-ಯುವತಿಯರು ಸಹ ದೇವರಲ್ಲಿ ಮೊರೆಯಿಟ್ಟರು! ನಾವಿಕನಲ್ಲಿ, 

 "ನಮ್ಮ ಪ್ರಾರ್ಥನೆಯಿಂದ ಹಡಗು ನಿಯಂತ್ರಣಕ್ಕೆ ಬರುತ್ತಿಲ್ಲ. ತಾವು ಈಗ ಪ್ರಾರ್ಥನೆ ಮಾಡಿ ನಿಯಂತ್ರಿಸಬೇಕು" ಎಂದು ಮನವಿಯನ್ನು ಮಾಡಿದರು. ಅದಕ್ಕೆ ಆ ನಾವಿಕನು 'ನಾನು ಪ್ರಯಾಣದ ಮೊದಲು ಪ್ರಾರ್ಥನೆ ಮಾಡುವೆ ಅಷ್ಟೇ. ಈಗ ಪ್ರಯಾಣಿಕರನ್ನೂ - ಸರಕನ್ನೂ ರಕ್ಷಿಸುವ ಜವಾಬ್ದಾರಿಯಿದೆ. ಬಿರುಗಾಳಿಯು ನಾವು ಸೇರಬೇಕಾದ ದೇಶದ ವಿರುದ್ಧ ದಿಕ್ಕಿಗೆ ಎದ್ದಿದೆ. ಹಾಗಾಗಿ ಗಾಳಿಬೀಸುವ ದಿಕ್ಕಿಗೇ ಹಡಗನ್ನು ತಿರುಗಿಸಿ ಕಾಪಾಡಬೇಕಾಗಿದೆ.  ಈಗ ನನ್ನ ಕರ್ತವ್ಯವೇ ಮುಖ್ಯ" ಎಂದನು. ಹಲವು ಘಂಟೆಗಳು ಭೀಕರ ಗಾಳಿಮಳೆಯ ದಿಕ್ಕಿನಲ್ಲೇ ಪ್ರಯಾಣವನ್ನು ಬೆಳಸಿ, ವಾತಾವರಣ ಶಾಂತವಾದ ನಂತರ ಸೇರಬೇಕಾದ ದೇಶದ ದಿಕ್ಕಿಗೆ ತಿರುಗಿಸಿದನು. ಪ್ರಯಾಣವು ಸುಖಾಂತ್ಯವಾಯಿತು.  


ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ನಾವಿಕನು ಒಂದು ಅಪಾಯದ ಸನ್ನಿವೇಶವನ್ನು ಹೋಗಲಾಡಿಸುವುದಕ್ಕಷ್ಟೇ ಅಲ್ಲದೇ ಭಗವಂತನ ಮೇಲಿನ ಭಕ್ತಿಯಿಂದ ನಿತ್ಯವೂ ಕಾರ್ಯಾರಂಭ ಮಾಡುವಾಗಲೇ ಪ್ರಾರ್ಥನೆ ಮಾಡುತ್ತಿದ್ದ. ಅಂದೂ ಹಾಗೆಯೇ ಮಾಡಿದ. ಆ ಯುವ ಪ್ರಯಾಣಿಕರು ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಮಾಡಿದ ಪ್ರಾರ್ಥನೆಯಂತಲ್ಲ ಇದು. ಭೀಕರ ಮಳೆಗಾಳಿಯಲ್ಲಿ, ಹಡಗು ಆಲ್ಲಾಡುತ್ತಿರುವಾಗ ಜೀವ ಭಯದಿಂದ ಮಾಡಿದ ಯುವ ಪ್ರಯಾಣಿಕರ ಪ್ರಾರ್ಥನೆಯಲ್ಲಿ  ಏಕಾಗ್ರತೆ ಎಲ್ಲಿಂದ ಬರಬೇಕು? ಧ್ಯಾನವಂತೂ ದೂರದ ಮಾತು.

ಆ ಸಂದರ್ಭದಲ್ಲಿ ನಾವಿಕನು ತನಗೆ ವಹಿಸಿದ ಜವಾಬ್ದಾರಿಯನ್ನು ಪುರುಷ ಪ್ರಯತ್ನದಿಂದ ನಿರ್ವಹಿಸಿ ಹಡಗನ್ನೂ, ಪ್ರಯಾಣಿಕರನ್ನೂ ಕಾಪಾಡುವುದೇ  ಮುಖ್ಯವೆಂಬ ವಿವೇಕವನ್ನು ಮೆರೆದಿದ್ದಾನೆ. ತನ್ನ ಚಾಣಾಕ್ಷತೆಯಿಂದ ಪಥ ಬದಲಿಸಿ ಧೃತಿಗೆಡದೆ ಸಮಸ್ಯೆಯನ್ನು ಬಗೆಹರಿಸಿದ್ದಾನೆ.

ಹೀಗೆ ದೈವಬಲ ಮತ್ತು ಪುರುಷಪ್ರಯತ್ನಗಳೆರಡೂ ಮುಖ್ಯ. ಪ್ರಾರ್ಥನೆಯ ಜೊತೆಗೆ ಪುರುಷಪ್ರಯತ್ನ ಅತ್ಯಾವಶ್ಯಕವಾಗಿದೆ, "ದೈವಾನುಗ್ರಹ ಹಾಗೂ ಪುರುಷಪ್ರಯತ್ನ, ರಥದ ಎರಡೂ ಚಕ್ರಗಳಿದ್ದ ಹಾಗಪ್ಪಾ. ಒಂದು ಚಕ್ರವೇ ಇಲ್ಲದಿದ್ದರೆ ರಥ ಹೇಗಪ್ಪಾ ಮುಂದೋಡುತ್ತೆ ?" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ


ನಮ್ಮ ಜೀವನದಲ್ಲೂ ಒಂದರಮೇಲೊಂದು ಕಷ್ಟಗಳು ಬರುತ್ತಿರುತ್ತವೆ. 'ಸಂಕಟ ಬಂದಾಗ ವೆಂಕಟರಮಣ' ಎನ್ನುವ ಬದಲು ಪ್ರತಿನಿತ್ಯ ನಿಃಸ್ವಾರ್ಥವಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತ ಬಂದರೆ, ಕಷ್ಟಗಳು ಬಂದರೂ ಎದುರಿಸುವ ಧೈರ್ಯ ನಮ್ಮಲ್ಲಿರುತ್ತದೆ.


"ಈ ಜೀವನಕ್ಕೆ ಒಂದು ದಡವುಂಟು. ಮಧ್ಯೆ ಎಲ್ಲಿಯೋ ಜಾರಿ ಸಾಗರಕ್ಕೆ ಬಿದ್ದಿದ್ದೇವೆ - ಗರಮಯವಾದ (ವಿಷದಿಂದ ಕೂಡಿದ) ಸಗರವಾದ ಜೀವನದಲ್ಲಿ ಬಿದ್ದಿದ್ದೇವೆ. ವಿಷವನ್ನು ತಪ್ಪಿಸಿಕೊಂಡು (ಅಮೃತಮಯವಾದ) ನಿರ್ವಿಷವಾದ ಜೀವನ ಮಾಡಬೇಕು. ಅಮರವಾದ ಜೀವನವನ್ನು ಮಾಡಬೇಕು". "ಜೀವನಕ್ಕೆ ಬೇಕಾದ ಗೊತ್ತು-ಗುರಿ-ಶಿಸ್ತು-ಜವಾಬ್ದಾರಿಗಳೊಡನೆ ಬಂದರೆ ಅಲ್ಲಿ ತಾನೆ ತೀರ್ಮಾನ ಸಿಗುತ್ತದೆ. ಆಂಜನೇಯ ನೂರು ಯೋಜನ ಸಮುದ್ರ ಹಾರಬೇಕು ಎಂದು ಸಿದ್ಧನಾಗಿ ಹಾರಿದ. ಅದಕ್ಕಾಗಿ ಕಟ್ಟುವ ಉಸಿರಿನಲ್ಲಿ, ನೆಗೆಯುವ ನೆಗೆತದಲ್ಲಿ, ನೂರು ಯೋಜನದ ಗುರಿ, ಅದಕ್ಕೆ ಬೇಕಾದ ಶಿಸ್ತು, ಅದಕ್ಕೆ ತಕ್ಕ ಜವಾಬ್ದಾರಿ, ಇವುಗಳು ಇದ್ದಾಗ ತಾನೆ ನೂರು ಯೋಜನ ದಾಟಬಹುದು ಮತ್ತು ದಡಸೇರಬಹದು". ಎಂಬ ಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳ ವಾಣಿಗಳಿಲ್ಲಿ ಸ್ಮರಣೀಯ. ದೈವಬಲದಷ್ಟೇ ಪುರುಷ ಪ್ರಯತ್ನಕ್ಕೂ ಮಹತ್ವವಿದೆ ಎಂದು ಘೋಷಿಸುವ ಮಾತು ಇದಾಗಿದೆ.


ಗೀತಾಚಾರ್ಯನು ತಿಳಿಸಿದಂತೆ ಕರ್ಮಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಿರಂತರ ಸಾಧನೆ ಮಾಡಿದರೆ, ಈ ದೇಹವೆಂಬ ಹಡಗಿನ ಒಡಲು ಒಡೆಯುವ ಮುನ್ನ ಶಾಶ್ವತಸುಖದ, ಆನಂದದ ದಡವನ್ನು ಸೇರಬಹುದು. ಹಾಗಾಗಿ ಪ್ರಾರ್ಥನೆ- ಧ್ಯಾನಗಳಿಂದ ನಾವು ಮಾಡುವ ಸತ್ಕಾರ್ಯಗಳಿಗೆ ದೈವಾನುಗ್ರಹವನ್ನು ಬೇಡುತ್ತಾ  ಕರ್ತವ್ಯಪರರಾಗಿ ಇಹ-ಪರಗಳಲ್ಲಿ ಸುಖವನ್ನು ಪಡೆಯುವಂತಾಗಲಿ ಎಂದು ಶ್ರೀಕೃಷ್ಣನಲ್ಲಿ ಪ್ರಾರ್ಥಿಸೋಣ.


ಸೂಚನೆ: 26/05/2022 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ದಲ್ಲಿ ಪ್ರಕಟವಾಗಿದೆ. 

ஶ்ரீகுருவின் கண்ணோட்டம் – 9 மனித நேயம்(Manida neyam)


  மூலம்:  திரு.  சாயாபதி

தமிழாக்கம் : திருமதி  வனஜா

மின்னஞ்சல் : (lekhana@ayvm.in)



         அவனுக்கு 'மனிதநேயமே இல்லை. மனித தன்மையே அற்ற மிருகம் அவன்' எனும் பேச்சுக்களை நாம் தினந்தோறும் கேட்கிறோம். நம்மை சூழ்ந்துள்ள சமூகத்தை கெடுக்கும் வகையில் செயல்படுவதை காணும்போது கடுங்கோபத்தில்  உதிர்க்கும் சொற்கள் இவை. மனிதனிடம் இயற்கையாக உள்ள கருணை, பாசம், கொடை  முதலியவற்றை மனிததன்மை என்று தீர்மானிக்கிறோம். ஆனால் ஆராய்ந்து பார்க்கையில் இன்பதுன்பங்களில் பங்கேற்பதும்,  பகிர்தலும் மனிதனுக்கு மட்டுமே உரியதல்ல. காகம் ஒன்று வலியால் துடிக்கும்போது உதவிக்காக அதை சுற்றியும் கூடி துயரத்தில் பங்கேற்கும் காக்கை கூட்டத்தையே காண்கிறோம். உயிரை பணயமிட்டு   தன் இனத்தை காக்கும் யானையின் தியாகம், நாய், குதிரை முதலிய வளர்ப்பு பிராணிகள் தன் எஜமானனிடம் காட்டும் மனபூர்வமான 

நெருக்கம் முதலியவை சாமானிய மனிதனிடமும் காணுவது அரிதாக உள்ளது.


நாம் சிறப்பானது என்று கருதும் குணங்களை மிருகங்களிடமும் இயல்பாக காணும்போது அதனை 'மனிதநேயம்'-மனிதனின் சிறப்புகுணம் என்று எவ்வாறு கூற இயலும்?


அவ்வாறெனில் மிருகங்களிலிருந்து வேறுபட்டு மனிதனிடம் மட்டுமே உள்ள சிறப்புதான் என்ன?

இயற்கையோடு இணைந்து உணவு, இருப்பிடம், இனப்பெருக்கம்  என்று வாழும் கலை மனிதனைப்போல் விலங்குகளுக்கும் உள்ளது.

ஆனால், வாழ்க்கையில் மறைந்து உள்நின்று வழிநடத்தும் ஒளியின் அறிவை அடையும் மனம் மிருகங்களிடம் காணக்கிடைப்பதில்லை. அதை தவிர மற்ற எல்லா கலைகளும், விசித்திரங்களும் விலங்குகளின் வாழ்வில் ஆச்சர்யமூட்டும் வகையில் உள்ளன.


வாழ்க்கையில் வெளியில் தெரியாமல் மறைந்திருந்து புலன்கள், மனம், புத்தி இவற்றை வழிநடத்தும் அந்தராத்மாவை அறிவதே மனிதனை விலங்குகளைவிட மேல்நிலைக்கு உயர்த்திய சாதனை. அதுவே மனிதனுக்கு மனிதநேயத்தை  தரும். அந்த உள்ளுணர்வை புரிந்துகொண்டால் அதன் மூலம் மனம், புத்தி, புலன்கள் பக்குவமடைந்து நற்குணங்களை உடையவனாவான். ஸத்ய தரிசனத்தினால் மலரும் அந்த நற்குணங்களின் மணமே  மனிதநேயத்தின்  சாரமாகும்.

Sunday, May 22, 2022

ಶ್ರೀ ರಾಮನ ಗುಣಗಳು - 55 ಮಹಾರಾಜ- ಶ್ರೀರಾಮ (Sriramana Gunagalu-55 Mararaja Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


'ಮಹಾರಾಜ' ಎಂಬ ವಿಶೇಷಗುಣ ಶ್ರೀರಾಮನಿಗೇಕೆ? ರಾಜನೆಂದರೆ ಸಾಲದೆ? 'ರಾಜ' ಎಂಬ ಪದಕ್ಕೂ ಸಂಸ್ಕೃತದಲ್ಲಿ ಬಹಳ ವಿಶೇಷ ಅರ್ಥವೇ ಉಂಟು. ಅದಕ್ಕೇನು ಅರ್ಥದಲ್ಲಿ ದಾರಿದ್ರ್ಯವುಂಟಾಗಿ 'ಮಹತ್' ಎಂಬ ವಿಶೇಷಣವನ್ನು ಸೇರಿಸಿದ್ದೇ? 'ರಾಜತೇ - ಪ್ರಕಾಶತೇ' ಎಲ್ಲೆಲ್ಲೂ ರಾರಾಜಿಸುವವನು ಅಥವಾ ಎಲ್ಲಾ ಕಡೆ ತನ್ನ ಪ್ರಕಾಶವನ್ನು- ಜ್ಞಾನವನ್ನು ಬೀರುವವನು ಎಂಬ ಅರ್ಥದಲ್ಲೇ 'ರಾಜ' ಎಂಬ ಪದದ ಬಳಕೆ ಉಂಟು. ಹಾಗಾದರೆ ಈ 'ಮಹತ್' ಎಂಬ ಇನ್ನೊಂದು ಪದ ವ್ಯರ್ಥವಲ್ಲವೇ? ರಾಜನೆಂದರೆ ಒಂದು ಸಣ್ಣ ರಾಜ್ಯಕ್ಕೆ ಅಧಿಪತಿ. ಅಂತಹ ಅನೇಕ ರಾಜ್ಯಗಳನ್ನು- ಅಂತಹ ಅನೇಕ ರಾಜರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡವನು 'ಮಹಾರಾಜ' ಎಂದು ಕರೆಯುವ ಅಭ್ಯಾಸ ಬಂದಿದೆ. ಇದು ತಪ್ಪಲ್ಲ. ಆದರೆ ರಾಜ ಎಂಬುದರಿಂದಲೇ ಅತಿಶಯವಾದ ಅರ್ಥವು ತೋರಲು, ಮತ್ತೊಂದು ಪದದ ಬಳಕೆ ಕೆಲವೊಮ್ಮೆ ವ್ಯರ್ಥವೇ ಆದೀತು. ಆದರೆ ವಿಶೇಷಣಪದಕ್ಕೆ ಇನ್ನೂ ವಿಶಿಷ್ಟವಾದ ಅರ್ಥವನ್ನು ಹೇಳಲು ಬಯಸುವಂತಿದ್ದರೆ, ಆಗ ಮತ್ತೊಂದು ಪದದ ಬಳಕೆ ವ್ಯರ್ಥ ಎನಿಸಿಕೊಳ್ಳದು. ಅಂತಹ ಸಂಗತಿ ಇಲ್ಲೂ ಉಂಟು. ಹಾಗಾಗಿ ಇಲ್ಲಿ 'ಮಹಾರಾಜ' ಎಂದು ಹೇಳಿದ್ದರ ವಿಶಿಷ್ಟವಾದ ಅರ್ಥವೇನು?


ಶ್ರೀರಂಗಮಹಾಗುರುಗಳು 'ಮಹತ್' ಎಂಬುದಕ್ಕೆ ಅನ್ಯತರಸಾಧಾರಣವಾದ ವಿವರಣೆಯನ್ನು ಕೊಟ್ಟಿದ್ದರು. ಅದನ್ನು ಅರ್ಥಮಾಡಿಕೊಂಡಾಗ ಮಾತ್ರ ಈ ಪದದ ಬಳಕೆಯ ಔಚಿತ್ಯ ಮನಸ್ಸಿಗೆ ಬರಲು ಸಾಧ್ಯ. ಸಾಂಖ್ಯರು ಈ ಪ್ರಕೃತಿಯನ್ನು ಅಥವಾ ಪ್ರಪಂಚವನ್ನು ೨೪ ತತ್ತ್ವಗಳನ್ನಾಗಿ ವಿಭಾಗಿಸುತ್ತಾರೆ. ಅವುಗಳಲ್ಲಿ 'ಮಹತ್' ಎಂಬುದು ಒಂದು ತತ್ತ್ವವಾಗಿದೆ. ಸೂಕ್ಷ್ಮವಾದ ರೂಪವನ್ನು ತತ್ತ್ವವೆಂದು ಕರೆಯಲಾಗುತ್ತದೆ. ಅದು ದೇವತಾತ್ಮಕವಾಗಿಯೋ ಅಥವಾ ತದ್ಭಿನ್ನರೂಪವಾಗಿಯೋ ಇರಬಹುದು. ಇದನ್ನು ಕಾಣುವುದು ಅಥವಾ ಇವುಗಳ ದರ್ಶನವೇ ಮುಕ್ತಿಗೆ ಸಾಧನ ಎನ್ನುವಷ್ಟರ ಮಟ್ಟಿಗೆ ಈ ತತ್ತ್ವಗಳ ಪ್ರಾಧಾನ್ಯವನ್ನು ತಿಳಿಸುತ್ತಾರೆ ಸಾಂಖ್ಯರು. ಯೋಗಸಾಧನೆಯಲ್ಲೂ ಇದೇ ಮಾರ್ಗವನ್ನು ಹೇಳಲಾಗುತ್ತದೆ. ಮನಸ್ಸು ಒಂದೊಂದೇ ತತ್ತ್ವದಲ್ಲಿ ಲಯವಾಗುತ್ತಾ ಹೋಗಿ ಕೊನೆಗೆ ಆತ್ಮವು ಪರಮಾತ್ಮನಲ್ಲಿ ಲಯ ಹೊಂದಿದರೆ ಅದುವೇ ಮೋಕ್ಷ ಎಂದು. ಈ ಎಲ್ಲಾ ಕ್ರಮದಲ್ಲೂ 'ಮಹತ್' ಎಂಬುದು ಒಂದು ತತ್ತ್ವ ಅಥವ ಒಂದು ಪದ-ಸ್ಥಾನ. ಇದನ್ನು ಯಾರು ದಾಟುತ್ತಾರೋ ಅಥವಾ ಯಾರು ಮನಸ್ಸನ್ನು ಆ ತತ್ತ್ವದಲ್ಲಿ ಲಯಗೊಳಿಸುತ್ತಾರೋ ಅಂತಹವರಿಗೆ ಕೊಡುವ ಪದವೇ ಇದಾಗಿದೆ. ಈ ಹಿನ್ನೆಲೆಯಲ್ಲೆ ಋಷಿ, ಮಹರ್ಷಿ, ಬ್ರಹ್ಮರ್ಷಿ ಇತ್ಯಾದಿ ಪದವಿಗಳು ಬಂದಿವೆ ಎಂಬುದಾಗಿ ವಿವರಣೆಯನ್ನು ಕೊಟ್ಟಿದ್ದರು ಎಂಬುದಾಗಿ ನಾವು ನಮ್ಮ ಹಿರಿಯರಿಂದ ಕೇಳಿದ್ದೇವೆ. ಈ ವಿವರಣೆಯ ಆಧಾರದ ಮೇಲೆ 'ಮಹಾರಾಜ' ಎಂಬ ಪದವನ್ನು ಅರ್ಥಮಾಡಿಕೊಳ್ಳಬೇಕು. ಯಾವನು ಮಹತ್ ತತ್ತ್ವದಲ್ಲಿ ಮನಸ್ಸನ್ನು ಲೀನಮಾಡುವ ಯೋಗ್ಯತೆಯನ್ನು ಸಂಪಾದಿಸಿರುವನೋ ಅಂತಹವನನ್ನು 'ಮಹಾರಾಜ' ಎಂದು ಕರೆಯಬೇಕು. 


ಆದ್ದರಿಂದ ನಿಜಾರ್ಥದಲ್ಲಿ 'ಮಹಾರಾಜ' ಎಂದು ಕರೆಸಿಕೊಳ್ಳಲು ಶ್ರೀರಾಮನಂತಹವರಿಗಲ್ಲದೇ ಇನ್ನೊಬ್ಬರಿಗೆ ಸಾಧ್ಯವೇ? ಮೇಲಿನ ನಿಜಾರ್ಥ ಪರಿಚಯವಾಗಿದ್ದರೆ ಇನ್ನೊಬ್ಬರನ್ನು ಹೀಗೆ ಕರೆಯಲು  ಮುಜುಗರ ಉಂಟಾಗುತ್ತದೆ. ಶ್ರೀರಾಮನು ಕೇವಲ ಮಹಾರಾಜನಲ್ಲ. ರಾಜನೂ ಅಲ್ಲ. ರಾಜಾಧಿರಾಜ.


ಸೂಚನೆ : 22/5/2022 ರಂದು ಈ ಲೇಖನ ಹೊಸದಿಗಂತ  ಪತ್ರಿಕೆಯ  ಅಂಕಣದಲ್ಲಿ ಪ್ರಕಟವಾಗಿದೆ.


ಅಷ್ಟಾಕ್ಷರೀ​ - 11 ಬುದ್ಧಿನಾಶಾತ್ ಪ್ರಣಶ್ಯತಿ (Astakshara Darshana 11 Buddhinashat Pranashyati)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ತಾನು ಚೆನ್ನಾಗಬೇಕು - ಎಂಬ ಆಸೆ ಯಾರಿಗಿಲ್ಲ? ಏನೋ ದುಃಖಾತಿರೇಕವಾದಾಗ ಬದುಕೇ ಬೇಡವೆನಿಸಿ, ಸಾಯುವ ಆಸೆ ಹುಟ್ಟಿಕೊಳ್ಳಬಹುದು. ಅದರೆ ಆಸೆ ಬಹುಮಂದಿಗೆ ಬಹುಕಾಲ ನಿಲ್ಲುವುದಿಲ್ಲ, ನಿಲ್ಲುವುದಲ್ಲ. ತೀರಾ ಬುದ್ಧಿಗೆಟ್ಟವರು, ಎಷ್ಟೋ ಕೋಟಿಗೊಬ್ಬರು, ಆ ದೃಢಸಂಕಲ್ಪವನ್ನು ದೀರ್ಘಕಾಲ ಏಕರೂಪವಾಗಿ ಉಳಿಸಿಕೊಂಡಾರು. ಅಂತಹವರನ್ನು  ಬಿಟ್ಟರೆ, ಸಾಯಬೇಕೆಂದುಕೊಂಡವರಿಗೆ ಸರಿಯಾಗಿ ಸಾಂತ್ವನ ಹೇಳುವವವರು ಸಮಯಕ್ಕೆ ಸರಿಯಾಗಿ ಸಿಕ್ಕರೆ, ಸಾಯುವ ಸಂಕಲ್ಪವು ಸಡಿಲವಾಗುವುದು. ಆದರೆ ಬುದ್ಧಿ ಹಾಳಾದವರಿಗೆ ಮಾತ್ರ ಹಿತೈಷಿಗಳ ಮಾತೂ ಪಥ್ಯವಲ್ಲ: ರಾವಣನಿಗೆ ವಿಭೀಷಣನ ನುಡಿ ಹಿಡಿಸಲಿಲ್ಲ; ವಾಲಿಗೆ ತಾರೆಯ ಮಾತು ರುಚಿಸಲಿಲ್ಲ.

ಬುದ್ಧಿ ಕೆಡುವುದು ಎಂದರೇನು? ಅದು ಹಾಗೆ ಆಗುವುದು ಯಾವಾಗ, ಏತಕ್ಕೆ? - ಎಂಬ ಪ್ರಶ್ನೆಗಳು ಬರುವಂತಹವೇ. "ನನ್ನ ರೂಪವು ಕೆಡಲಿ" "ನನ್ನ ಆರೋಗ್ಯವು ಹೋಗಲಿ" ಎಂದು ಯಾರಿಗಾದರೂ ಬಯಕೆ ಬಂದೀತೇ? ಅವೆರಡಕ್ಕಿಂತಲೂ ಮನಸ್ಸಿನ ಆರೋಗ್ಯ ಬಹುಮುಖ್ಯವೇ ಸರಿ: ದೈಹಿಕರೋಗಗಳಿಗೆ ಪರಿಹಾರಗಳು ಸಿಕ್ಕಾವು; ಆದರೆ ಮನಸ್ಸಿಗೋ ಬುದ್ಧಿಗೋ ರೋಗ ಹತ್ತಿತೆಂದರೆ ಅದಕ್ಕೆ ಪರಿಹಾರವನ್ನು ಕೊಡುವುದು ಯಾರಿಗೂ ಸುಲಭವಲ್ಲ.

ಸ್ವಾಸ್ಥ್ಯವೆಂದರೆ ಆರೋಗ್ಯವೆಂಬುದು ಎಲ್ಲರಿಗೂ ತಿಳಿದಿರುವುದೇ. ಆದರೂ ಪದಗಳ ಮೂಲಕ್ಕೇ ಹೋಗಿ ನೋಡಿದರೆ ಭೇದವು ಗೋಚರವಾಗುತ್ತದೆ. ಯಾವನಿಗೆ ಏನೂ ರೋಗವಿಲ್ಲವೋ ಅಂತಹವನು "ಅರೋಗ". ಅರೋಗನ ಸ್ಥಿತಿಯೇ (ಅಥವಾ ಭಾವವೇ) ಅರೋಗತೆ. ಅರೋಗತೆಯೇ "ಆರೋಗ್ಯ": ಆರೋಗ್ಯವೆಂದರೆ ರೋಗಗಳಿಲ್ಲದಿರುವಿಕೆ.

ಸ್ವಾಸ್ಥ್ಯವು ಅಷ್ಟುಮಾತ್ರವಲ್ಲ. ಸ್ವಸ್ಥನ ಸ್ಥಿತಿಯು (ಅಥವಾ ಭಾವವು) ಸ್ವಾಸ್ಥ್ಯ. ಸ್ವಸ್ಥನಾರು? - ಎಂಬ ಪ್ರಶ್ನೆಗೆ ಸುಶ್ರುತನಿತ್ತ ಉತ್ತರವನ್ನು ಶ್ರೀರಂಗಮಹಾಗುರುಗಳು ಆಗಾಗ್ಗೆ ಜ್ಞಾಪಿಸುತ್ತಿದ್ದರು. ಶರೀರದಲ್ಲಿ (ವಾತ-ಪಿತ್ತ-ಕಫಗಳೆಂಬ ಮೂರು) 'ದೋಷ'ಗಳಿರುತ್ತವೆ; ಅವು 'ಸಮ'ನಾಗಿರಬೇಕು. ಹಾಗೆಯೇ ಶರೀರದಲ್ಲಿಯ ಅಗ್ನಿ-ಧಾತುಕ್ರಿಯೆ-ಮಲಕ್ರಿಯೆಗಳೂ ಸಮನಾಗಿರಬೇಕು. ಮತ್ತು ಇವೆಲ್ಲಕ್ಕೂ ಆಧಾರಭೂತವಾಗಿ, ಆತ್ಮ-ಇಂದ್ರಿಯ-ಮನಸ್ಸುಗಳು ಪ್ರಸನ್ನವಾಗಿರಬೇಕು - ಎಂದು ಲಕ್ಷಣವು ಹೇಳುತ್ತದೆ. (ಇಲ್ಲಿಯ ಪಾರಿಭಾಷಿಕವಿಷಯಕ್ಕೆ ಬಹುವಿಸ್ತೃತವಾದ ವಿವರಣೆಯೇ ಬೇಕಲ್ಲವೇ?) ಇಷ್ಟೆಲ್ಲ ಲೆಕ್ಕಾಚಾರಗಳಿರುವುದರಿಂದಲೇ, "ಆಸ್ಪತ್ರೆಗೆ ಸೇರಿಲ್ಲದವರೆಲ್ಲ ಸ್ವಸ್ಥರೆಂದೇನಲ್ಲ" ಎಂಬುದಾಗಿ ಶ್ರೀರಂಗಮಹಾಗುರುಗಳು ವಿನೋದವಾಗಿ ಪ್ರತಿಪಾದಿಸುತ್ತಿದ್ದರು.

ಇಲ್ಲಿ ನಮಗೆ ಕೊನೆಯ ಅಂಶ ಪ್ರಸ್ತುತ. ಆತ್ಮನ ಅಥವಾ ಮನಸ್ಸಿನ ಪ್ರಸನ್ನತೆಯೆಂದರೇನು? ಹಾಗೆಯೇ, ಬುದ್ಧಿಯು ನಾಶವಾಗುವುದೆಂತು? - ಎಂಬ ಎರಡೂ ಪ್ರಶ್ನೆಗಳಿಗೂ ಭಗವದ್ಗೀತೆಯಲ್ಲಿ ಉತ್ತರವನ್ನು ಕಾಣಬಹುದು. ಜೀವನವು ಅತ್ಯಂತಸಂಕೀರ್ಣವೆಂಬುದು ನಿರ್ವಿವಾದ. ಆದರೆ ಕಾರ್ಯ-ಕಾರಣ-ಭಾವವು ಮಾತ್ರ ಎಲ್ಲೆಡೆಯೂ ಇರುವುದೇ: ಪ್ರತಿಯೊಂದು ಕಾರ್ಯದ ಹಿಂದೆಯೂ ಕಾರಣವೊಂದು ಇದ್ದೇ ಇರುವುದು. ಪ್ರತಿಯೊಂದು ಕಾರಣದಿಂದಲೂ ಏನೋ ಪರಿಣಾಮವೊಂದು ಆಗಿಯೇ ತೀರುವುದು. ಒಂದೆಂದರೆ ಒಂದೇ ಅಲ್ಲ. ಒಂದು ಕಾರ್ಯದ ಹಿಂದೆ ಹಲವು ಕಾರಣಗಳಿದ್ದಾವು; ಒಂದು ಕಾರಣದಿಂದ ಹಲವು ಕಾರ್ಯಗಳು ಜನಿಸಿಯಾವು. ಆದರೆ ಕಾರ್ಯ-ಕಾರಣ-ಭಾವದ ಸರಪಣಿಯು ಮಾತ್ರ ಸರ್ವವ್ಯಾಪಿ. ಒಂದರ್ಥದಲ್ಲಿ ಇಡೀ ವಿಜ್ಞಾನದ ಸಾರಾಂಶವೇ ಇದು.

ಬುದ್ಧಿನಾಶದ ಹಿಂದೆಯಿರುವ  ಕಾರ್ಯಕಾರಣಭಾವ-ಶೃಂಖಲೆಯನ್ನು ಗೀತೆಯು ಸುಭಗವಾಗಿ ತೋರಿಗೊಟ್ಟಿದೆ: "[ಇಂದ್ರಿಯ]ವಿಷಯಗಳ ಧ್ಯಾನದಿಂದಾಗಿ ಅವುಗಳ ಬಗ್ಗೆ ಒಂದು ಸಂಗವು (ಎಂದರೆ ಆಸಕ್ತಿಯು) ಉಂಟಾಗುತ್ತದೆ. ಉತ್ಕಟವಾದ ಸಂಗದಿಂದ ಕಾಮವು (ಎಂದರೆ ಬಯಕೆಯು) ಜನಿಸುತ್ತದೆ (ಎಂದರೆ, ಬಯಸಿದ್ದು ಬೇಕೇಬೇಕೆನಿಸುತ್ತದೆ); [ಬಯಕೆಯೀಡೇರದಿದ್ದಾಗ] ಅದು ಕ್ರೋಧಕ್ಕೆ ಎಡೆಮಾಡಿಕೊಡುತ್ತದೆ; ಕ್ರೋಧದಿಂದ ಸಂಮೋಹವು (ಎಂದರೆ ಸರಿ-ತಪ್ಪುಗಳು ಗೊತ್ತಾಗದಿರುವುದು) ಉಂಟಾಗುತ್ತದೆ; ಸಂಮೋಹದಿಂದ ಸ್ಮೃತಿಯ ಭ್ರಮೆಯಾಗುತ್ತದೆ (ಎಂದರೆ ಶಾಸ್ತ್ರದಿಂದಲೋ ಹಿರಿಯರಿಂದಲೋ ಪಡೆದ ಸದುಪದೇಶವು ಜಾರುತ್ತದೆ: ಗೊತ್ತಿದ್ದ ಸರಿದಾರಿಯೂ ಮರೆಯುತ್ತದೆ); ಸ್ಮೃತಿಭ್ರಂಶದಿಂದ ಬುದ್ಧಿನಾಶವಾಗುತ್ತದೆ (ಎಂದರೆ, ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನೆಯು ಹಾಳಾಗುತ್ತದೆ); ಹಾಗೂ ಕೊನೆಯದಾಗಿ, ಬುದ್ಧಿನಾಶವಾದವನು ಪೂರ್ಣವಾಗಿ ಹಾಳಾಗುತ್ತಾನೆ. ಹೀಗೆ ಇಲ್ಲಿ ಎಂಟು ಘಟ್ಟಗಳನ್ನೂ, ಒಂದರಿಂದ ಮತ್ತೊಂದು ಮತ್ತೊಂದರಿಂದ ಮಗದೊಂದು ಜನಿಸುವುದನ್ನೂ, ಕಾರ್ಯ-ಕಾರಣಗಳ ಕೊಂಡಿಗಳಾಗಿ ಕಾಣಿಸಿದೆ.

ಇಷ್ಟು ಮಾತ್ರವಲ್ಲದೆ, ಮತ್ತು ಇದಕ್ಕೆ ಪ್ರತಿಯಾಗಿ, ಸಂಕ್ಷೇಪವಾಗಿ ಪ್ರಸನ್ನತೆಯನ್ನು ಪಡೆಯುವ ಬಗೆಯನ್ನೂ ಅಲ್ಲೇ ತಿಳಿಸಿದೆ. ಇಂದ್ರಿಯವಿಷಯಗಳನ್ನೇ ರಾಗದ್ವೇಷಗಳಿಲ್ಲದ, ಹಾಗೂ ತನ್ನ ವಶದಲ್ಲೇ ಇರುವ, ಇಂದ್ರಿಯ-ಮನಸ್ಸುಗಳಿಂದ ಅನುಭವಿಸುತ್ತಿರುವವನು ಪ್ರಸಾದವನ್ನು ಹೊಂದುವನು - ಎಂದೂ ತಿಳಿಸಿದೆ. (ಪ್ರಸಾದವೆಂದರೆ ಪ್ರಸನ್ನತೆಯೇ).

ಅಂತೂ ಇವಿಷ್ಟರ ಒಟ್ಟಾರೆ ನೋಟವನ್ನು ಹೀಗೆ ಹೇಳಬಹುದು. ಇಂದ್ರಿಯಗಳಿಂದ ನಾನಾಸುಖಗಳನ್ನು ಪಡೆಯುವುದೇ ದೋಷವೆಂದಲ್ಲ. ಸಂಗವೇ ತಪ್ಪಲ್ಲ. ಇಂದ್ರಿಯಗಳ ಮೇಲೆ ಹಿಡಿತವಿದ್ದಲ್ಲಿ ತೊಂದರೆಯಿಲ್ಲ. ಬದಲಾಗಿ, ಹಾಗಿಲ್ಲದಾದಾಗ, ಪರಿಣಾಮಪರಂಪರೆಯಿಂದ ಬುದ್ಧಿನಾಶವೂ, ಅದರಿಂದಾಗಿ ಅಧೋಗತಿಯೂ, ಸಿದ್ಧವೇ.

ಬುದ್ಧಿಯನ್ನು ಚೆನ್ನಾಗಿಟ್ಟುಕೊಳ್ಳೋಣ, ಸ್ವಸ್ಥರಾಗೋಣ!

ಸೂಚನೆ: 22/05/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.