Saturday, May 14, 2022

ಪಶ್ಚಾತ್ತಾಪ ಎಲ್ಲಿಯವರೆಗೆ? Paschattapa elliyavarege?

ಲೇಖಕರು : ಶ್ರೀ ರಾಜಗೋಪಾಲನ್. ಕೆ. ಎಸ್ 

ಪ್ರತಿಕ್ರಿಯಿಸಿರಿ lekhana@ayvm.in


ಇತ್ತೀಚೆಗೆ ರಾಮಜನ್ಮಭೂಮಿ ವಿವಾದದ ಕುರಿತು ಸುಪ್ರೀಂ ಕೋರ್ಟಿನಲ್ಲಿ ಸಾಕ್ಷಿಯನ್ನು ಮಂಡಿಸಿದ ಶ್ರೀರಾಮಭದ್ರಾಚಾರ್ಯರೆಂಬುವರ ಬಗ್ಗೆ ನಾವೆಲ್ಲಾ ಓದಿ, ಕೇಳಿ, ತಿಳಿದೇ ಇದ್ದೇವೆ. ಬಾಲ್ಯದಿಂದಲೇ ಅಂಧರಾಗಿದ್ದ ಇವರು ತಿಳಿದಿರುವ ಭಾಷೆಗಳೆಷ್ಟು! ಅಭ್ಯಾಸ ಮಾಡಿರುವ ವೇದ ಶಾಸ್ತ್ರಗಳೆಷ್ಟು! ಅವರ ಸಾಧನೆಗಳ ಬಗ್ಗೆ, ಅವರಿಗೆ ಸಂದ ಪುರಸ್ಕಾರಗಳ ಬಗ್ಗೆ ಬರೆಯಹೊರಟರೆ ಒಂದು ಪುಟವೇ ಬೇಕಾದೀತು! ತೊಂದರೆಯನ್ನು ಮೀರಿ ಎತ್ತರಕ್ಕೆ ಏರಬಹುದು ಎಂಬುದಕ್ಕೆ ಇವರದೊಂದು ಉಜ್ಜ್ವಲ ನಿದರ್ಶನ.


ಹುಟ್ಟಿನಿಂದಲೇ  ಒದಗುವ ತೊಂದರೆಗಳಿಂದ ಹತಾಶರಾಗುವವರು ಕೆಲವರಾದರೆ, ಆಕಸ್ಮಿಕವಾಗಿ, ತಾವೆಸಗಿದ ತಪ್ಪುಗಳಿಂದಾದ ಪರಿಣಾಮಗಳಿಂದ ಎಲ್ಲವೂ ಮುಗಿದೇ ಹೋದುವೆಂದು ಕೈಚೆಲ್ಲಿ ಕುಳಿತುಕೊಳ್ಳುವವರು ಎಷ್ಟೋ ಮಂದಿ! ತಮ್ಮ ಕೃತ್ಯಗಳಿಂದ ಪಶ್ಚಾತ್ತಾಪಪಟ್ಟು ಅದರ ಬೇಗೆಯಲ್ಲಿ ಬೆಂದೇ ಹೋಗುತ್ತಾರೆ. 


ಬೆಂಕಿಯಲ್ಲಿ ಕೈಯಿಟ್ಟೊಡನೆಯೇ ಸುಡುತ್ತದೆ; ನೋವಾಗುತ್ತದೆ. ಹಾಗೊಮ್ಮೆ ನೋವಾಗದಿದ್ದರೆ ನಾವು ಗಾಢನಿದ್ರೆಯಲ್ಲಿದ್ದಾಗ ಮೈಯೆಲ್ಲಾ ಸುಟ್ಟೇಹೋದರೂ ಅದರ ಅರಿವೇ ಆಗದಿರಬಹುದು. ಆದುದರಿಂದ ಬಿಸಿ ತಗುಲಿದಾಗ ನೋವಾಗುವ ಪ್ರಕೃತಿನಿಯಮಕ್ಕೆ ನಾವು ಋಣಿಗಳಾಗಿರಬೇಕು. ಹೀಗೆಯೇ ತಪ್ಪೆಸಗಿದಾಗ ಸುಸಂಸ್ಕಾರಿಗೆ ಸಹಜವಾಗಿ ಆಗುವ ಪಶ್ಚಾತ್ತಾಪ ಇನ್ನೊಮ್ಮೆ ತಪ್ಪು ಮಾಡದಂತೆ ಎಚ್ಚರಿಸುವಲ್ಲಿ ಸಹಾಯಕವೇ ಹೌದು. 


ಆದರೆ ಕೆಲವರು ಪಶ್ಚಾತ್ತಾಪವನ್ನು ಎಷ್ಟರ ಮಟ್ಟಿಗೆ ಮಾಡಿಕೊಳ್ಳುತ್ತಾರೆ ಎಂದರೆ ಅವರು ಇಡೀ ಜೀವನ ಅದರಿಂದ ಹೊರಬರುವುದೇ ಇಲ್ಲ. ಪಾಪ ಮಾಡಿದ ಮೇಲೆ ಅದರೊಡನೆಯೇ, ಪಾಪದ ಪ್ರಮಾಣಕ್ಕನುಗುಣವಾಗಿ ತಾಪ, ಸಂಸ್ಕಾರಿಯ ಅರಿವಿಗೆ ಬಂದೇ ಬರುತ್ತದೆ. ಆದರೆ ಮಾಡಿದ ತಪ್ಪಿನ ಬಗ್ಗೆ ನಾವು ಹೇಗೆ ವರ್ತಿಸಬೇಕೆಂಬ ಬಗ್ಗೆ ಶ್ರೀರಂಗಮಹಾಗುರುಗಳ ಮಾತು ಗಮನೀಯ.

"ಜೀವನ ಇಂದಿಗೆ ತಪ್ಪು; ನಾಳೆಗೆ ಸರಿ. ಸಣ್ಣ ಮಗು ನಡೆಯುವಾಗ ಎಡವಿ ಬೀಳುವುದು ಸಹಜ. ಮತ್ತೆ ಹಾಗೆಯೇ ಏಳುತ್ತಾ ಬೀಳುತ್ತಾ ನಡೆಯುವುದನ್ನು ಕಲಿಯುತ್ತೆ. ತಪ್ಪು ಸಹಜವಾಗಿದೆ. ಆದರೆ ತಪ್ಪು ಸಹಜ ಎಂದು ಅದನ್ನು ಮುಂದುವರಿಸಿಕೊಂಡು ಹೋಗಬೇಕಾಗಿಲ್ಲ. ತಪ್ಪನ್ನು ಸರಿಮಾಡಿಕೊಂಡು ಹೋಗಬೇಕಾಗಿದೆ".


ತಪ್ಪು ಮಾಡಿದ ಮೇಲೆ ಮುಂದೆಯೂ ಅದೇ ತರಹದ ತಪ್ಪನ್ನು ಮಾಡದಿರುವಂತೆ ಎಚ್ಚರಿಕೆ ವಹಿಸಲೆತ್ನಿಸುವುದು ಶ್ರೇಯಸ್ಕರ. ಕೆಲವೊಮ್ಮೆ ತಪ್ಪಿನಿಂದುಂಟಾಗುವ ತೊಂದರೆಗಳನ್ನು ಪೂರ್ಣವಾಗಿ ಪರಿಹರಿಸಿಕೊಳ್ಳಲು ಮಾರ್ಗಗಳುಂಟು. ಕೆಲವು ಬಾರಿ ಸ್ವಲ್ಪಮಟ್ಟಿಗಷ್ಟೇ ಪರಿಹರಿಸಿಕೊಳ್ಳಲು ಸಾಧ್ಯ. ಈ ಬಗ್ಗೆ ಶ್ರೀರಂಗಮಹಾಗುರುಗಳು ಹೇಳಿರುವ ಹಿತೋಕ್ತಿ ಗಮನೀಯ. "ಯಾರೇ ಆಗಲಿ, ಕೊರಗುತ್ತಾ ಇರಬಾರದು. ಆ ದೋಷ ಕಳೆಯಲು ಯತ್ನ ಮಾಡಬೇಕು. ಕ್ರಮೇಣ ದೋಷವು ದೂರವಾಗುತ್ತೆ. ಅಕಸ್ಮಾತ್ತಾಗಿ ಆ ದೋಷವು ದೂರವೇ ಆಗುವುದಿಲ್ಲ ಎನ್ನುವ ಸ್ಥಿತಿಯಿದ್ದರೆ ಅದನ್ನು ಅನುಭವಿಸಿ. ಕೊರಗುವುದರಿಂದ ಲಾಭವೇನೂ ಇಲ್ಲ".

ಒಬ್ಬ ತನ್ನ ಅಸಾವಧಾನತೆಯಿಂದ ಅಪಘಾತ ಮಾಡಿಕೊಂಡು ಕಾಲನ್ನೇ ಕಳೆದುಕೊಂಡುಬಿಟ್ಟರೆ, ಕಾಲಿಲ್ಲದಿದ್ದರೂ ಜೀವನ ನಡೆಸುವ ಬಗೆ ಹೇಗೆ ಎಂಬತ್ತ ಗಮನ ಕೊಟ್ಟರೆ ಅವನ ಉಳಿದ ಬಾಳು ಗೋಳಾಗದು. ಜೀವಮಾನವಿಡೀ ದುಃಖಪಟ್ಟರೂ ಹೋದ ಕಾಲೇನೂ ಮರಳಿ ಬಾರದಷ್ಟೆ! ಕಾಲಿಲ್ಲದಿದ್ದರೂ ಜೀವನದಲ್ಲಿ ಎತ್ತರಕ್ಕೇರಿ ವಿಶ್ವಮಾನ್ಯರಾಗಿರುವವರೂ ಇದ್ದಾರಲ್ಲ! ಪಶ್ಚಾತ್ತಾಪ ಬಾಳಿನಲ್ಲಿ ಮುಂದೆ ತಪ್ಪೆಸಗದಂತಿರಲು ಒಂದು ಕರೆಗಂಟೆಯಾಗಬೇಕು; ಮತ್ತೇನೂ ಕೇಳಿಸದಂತೆ ಮಾಡುವ ರಣಕಹಳೆಯಾಗಬಾರದು. 

ಸೂಚನೆ: 14/05/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.