Sunday, May 1, 2022

ಶ್ರೀ ರಾಮನ ಗುಣಗಳು - 53 ಆದರ್ಶ –ಶ್ರೀರಾಮ (Sriramana Gunagalu -53 Adarsha - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್

(ಪ್ರತಿಕ್ರಿಯಿಸಿರಿ lekhana@ayvm.in)



ನಾವು ಯಾವುದೋ ಗುರಿಯನ್ನು ಇಟ್ಟುಕೊಂಡಿರುತ್ತೇವೆ. ಅಥವಾ ಯಾರದ್ದೋ ನಡೆ-ನುಡಿಗಳನ್ನೇ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬಯಸಿರುತ್ತೇವೆ. ಇದಕ್ಕಾಗಿ ಒಂದು ಆದರ್ಶವನ್ನು ಆಯ್ಕೆ ಮಾಡೊಕೊಳ್ಳಲಾಗುತ್ತದೆ. ಹಾಗಾದರೆ ಆದರ್ಶವೆಂದರೇನು? ನಮ್ಮ ಗುರಿ ಏನು? ಶ್ರೀರಾಮನು ನಮಗೆ ಹೇಗೆ ಆದರ್ಶನಾಗುತ್ತಾನೆ?

ಆದರ್ಶವೆಂದರೆ ಕನ್ನಡಿ. ಯಾವುದಾದರೂ ವಸ್ತು ಎದುರು ಬಂದರೆ ಅದನ್ನು ಅಂತೆಯೇ ಪ್ರತಿಬಿಂಬಿಸುವ ಪದಾರ್ಥ. ಯಾವುದನ್ನು ಕಾಣಲು ನಮಗೆ ಕಷ್ಟವಾಗುತ್ತದೋ ಅಂತಹ ಸಂದರ್ಭದಲ್ಲಿ ಕನ್ನಡಿಯನ್ನು ಬಳಸುತ್ತೇವೆ. ನಮ್ಮ ಮುಖ ನಮಗೆ ಕಾಣುವುದಿಲ್ಲ. ಆದರೆ ನಮ್ಮ ಮುಖವನ್ನು ನಾವು ನೋಡಿಕೊಳ್ಳಲೇಬೇಕಾಗಿದೆ. ಆಗ ಅದಕ್ಕೆ ಬೇಕು ಆದರ್ಶ-ಕನ್ನಡಿ. ಈ ಆದರ್ಶವೆಂಬ ಸಂಸ್ಕೃತಶಬ್ದ ಎಷ್ಟು ಸೊಗಸಾಗಿದೆ ನೋಡಿ. ಎದುರಿಗಿರುವ ವಸ್ತು ಹೇಗಿದೆಯೋ ಅಂತೆಯೇ ಕಾಣಿಸುವ ವಸ್ತು. ಅದು ಶುದ್ಧವಾಗಿದ್ದರೆ ಅದರಲ್ಲಿ ಕಾಣುವ ವಿಷಯವೂ ಶುದ್ಧವಾಗಿಯೇ ಕಾಣುತ್ತದೆ. ಒಂದು ವೇಳೆ ಕನ್ನಡಿಯೇ ಮಲಿನವಾಗಿದ್ದರೆ, ಅಲ್ಲಿ ಮಾಲಿನ್ಯವನ್ನೇ ಕನ್ನಡಿಸುತ್ತದೆಯಲ್ಲವೇ. ಹಾಗಾಗಿ ಕನ್ನಡಿಯು ಯಾವಾಗಲೂ ಶುದ್ಧವಾಗಿರಬೇಕಾದುದು ಅವಶ್ಯ. ಅಂದರೆ ಆದರ್ಶವಾದುದು ಶುದ್ಧ. ಶುದ್ಧವಾದುದನ್ನೇ ಕನ್ನಡಿಸಬೇಕಾದುದು ಎಂಬುದು ತಾತ್ಪರ್ಯ.

ಇಲ್ಲಿ ಶ್ರೀರಾಮನು ಒಂದು ಕನ್ನಡಿ. ಅವನು ಅಷ್ಟು ಶುದ್ಧ. ಅವನ ಪಾರಿಶುದ್ಧ್ಯವು ನೋಡುವವನನ್ನು ಶುದ್ಧವಾಗಿಯೇ ಕನ್ನಡಿಸುತ್ತದೆ. ನಮ್ಮತನವನ್ನು ನೋಡಲು ನಾವು ಶ್ರೀರಾಮನನ್ನು ನೋಡಿಕೊಳ್ಳಬೇಕು. ಇನ್ನೊಂದು ಉದಾಹರಣೆಯನ್ನು ನೋಡಬಹುದು. ಶುದ್ಧವಾದ ಸರೋವರವಾಗಿದ್ದರೆ ಅದರ ಆಳದಲ್ಲಿರುವ ವಸ್ತುವು ನಮ್ಮ ಕಣ್ಣಿಗೆ ಕಾಣಸಿಗುವುದು. ಅದೇ ಮಲಿನವಾಗಿದ್ದರೆ ಅದೆಷ್ಟು ಶುದ್ಧವಾದ ಪ್ರತಿಬಿಂಬವನ್ನು ಪ್ರತಿಫಲಿಸಬಲ್ಲದು? ಆದ್ದರಿಂದ ಕನ್ನಡಿಯು ಶುದ್ಧವಾಗಿರಬೇಕು. ಕನ್ನಡಿಯೇ ಅದರವಿನ್ಯಾಸಕ್ಕನುಗುಣವಾಗಿ ನಮ್ಮನ್ನು ಉದ್ದುದ್ದವಾಗಿಯೋ ಅಡ್ಡಡ್ಡವಾಗಿಯೋ ತೋರಿಸುತ್ತದೆ. ಅಂದರೆ ಅಲ್ಲಿ ಬಿಂಬವು ಆ ಆಕರದಲ್ಲಿದೆ ಎಂದರ್ಥವಲ್ಲ. ಅಲ್ಲಿ ಕನ್ನಡಿಯೇ ಅಲ್ಲಿ ಕಾಣುವ ಆಕಾರವೈವಿಧ್ಯಕ್ಕೆ ಕಾರಣವಾಗುತ್ತದೆ. ಅಂತೂ ಒಂದನ್ನು ಮಾತ್ರ ಹೇಳಬಹುದು; ಕನ್ನಡಿಯೇ ನಮ್ಮ ಪ್ರತಿಬಿಂಬವನ್ನು ಕಾಣಿಸುವ ಪದಾರ್ಥವೆಂದು.

ಶ್ರೀರಾಮನು ನಮ್ಮನ್ನು ತೋರಿಸುವ ಕನ್ನಡಿ. ನಮ್ಮ ಜೀವನಕ್ಕೆ ಆದರ್ಶ. ಎಲ್ಲ ವಿಧದಲ್ಲೂ ಪರಿಶುದ್ಧ ಆತ. ಯಾವೆಲ್ಲ ಶುದ್ಧವಿದ್ದರೆ ಅವನನ್ನು ಶುದ್ಧ ಎನ್ನಬಹುದು ಎಂದರೆ ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಮನಸ್ಸು, ಬುದ್ಧಿ, ದ್ರವ್ಯ, ದೇಶ, ಕ್ರಿಯೆ ಇವೆಲ್ಲವೂ ಶುದ್ಧವಾಗಿದ್ದರೆ ಆತನನ್ನು ಶುದ್ಧವೆಂದು ಹೇಳಬಹುದು. ಶ್ರೀರಾಮನು ಈ ಎಲ್ಲದರ ಶುದ್ಧಿಯನ್ನು ಕಾಪಾಡಿಕೊಂಡವ. ಶುದ್ಧಿಯ ಪರಿಣಾಮ ಧರ್ಮದ ಪ್ರಬೋಧ. ಧರ್ಮವೆಂದರೆ ನಮ್ಮ ಗುರಿಯನ್ನು ತಲುಪಲು ಬೇಕಾದ ಕಂಡೀಶನ್ ಎಂದು ಅರ್ಥಮಾಡಿಕೊಳ್ಳಬಹುದು. ಶ್ರೀರಂಗಮಹಾಗುರುಗಳು ಹೇಳುವಂತೆ- "ಮೋಕ್ಷವೆಂಬುದು ಪ್ರತಿಯೊಬ್ಬ ಮಾನವನ ಆಜನ್ಮಸಿದ್ಧ ಹಕ್ಕು". ಪ್ರತಿಯೊಬ್ಬ ಮಾನವನ ಗುರಿ ಎಂದರೆ ಧರ್ಮದ ಚೌಕಟ್ಟಿನಲ್ಲಿ ಅರ್ಥ ಕಾಮಗಳನ್ನು ಸೇವಿಸುತ್ತಾ ಮೋಕ್ಷವೆಂಬ ಪರಮಪುರುಷಾರ್ಥಪ್ರಾಪ್ತಿ. ಶ್ರೀರಾಮನು ಹೀಗೆ ನಮಗೆ ಆದರ್ಶನಾದ. ಪುರುಷಾರ್ಥಗಳನ್ನು ಪಡೆಯಬೇಕಾದರೆ ನಾವು ನೋಡಬೇಕಾದ ಶುದ್ಧವಾದ ಕನ್ನಡಿ ಶ್ರೀರಾಮನಲ್ಲವೇ. ಆತ ಧರ್ಮಸ್ವರೂಪ. ಆತನು ಅರ್ಥಶುದ್ಧಿಯೊಂದಿಗೆ ಎಲ್ಲಾ ಶುದ್ಧಿಯನ್ನು ಸಾಧಿಸಿದ ಧೀರ. ಧರ್ಮದ ಚೌಕಟ್ಟಿನಲ್ಲಿ ಕಾಮವನ್ನು ಪರಿಗ್ರಹಿಸಿದವ. ಅಷ್ಟೆ ಅಲ್ಲದೇ ತನ್ನ ಅವತಾರದ ಮುಖ್ಯ ಉದ್ದೇಶವಾದ ಧರ್ಮಸಂಸ್ಥಾಪನೆಯನ್ನು ಮಾಡಿ, ಮತ್ತೆ ಅವತಾರಮಂಗಳವನ್ನು ಮಾಡಿ, ತೋರಿಸಿ ತಾನು ಬಂಧಿತನಲ್ಲ, ಮುಕ್ತನೇ ಹೌದು ಎಂದು ಪ್ರಚುರಪಡಿಸಿದ.

ಸೂಚನೆ :1/5/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.