Monday, May 30, 2022

ಶ್ರೀ ರಾಮನ ಗುಣಗಳು - 56 ದಶರಥ-ನಂದನ - ಶ್ರೀರಾಮ (Sriramana Gunagalu-55 Dasharatha-Nandana-Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ಶ್ರೀರಾಮನನ್ನು ಸ್ತುತಿಸುವಾಗ 'ದಶರಥನಂದನ ಶ್ರೀರಾಮ ಎಂದು ರಾಮನನ್ನು ಕೊಂಡಾಡುವುದುಂಟು. ದಶರಥನ ಮಗ ಶ್ರೀರಾಮನು ಎಂಬುದು ಶ್ರೀರಾಮನ ಗುಣವಿಶೇಷಗಳಲ್ಲಿ ಒಂದು ಎನಿಸುವುದಾದರೂ ಹೇಗೆ? ದಶರಥನು ಅಯೋಧ್ಯೆಯ ಅಧಿಪ. ಅವನಿಗೆ ಬಹಳ ವರ್ಷಗಳ ಪರ್ಯಂತ ಪುತ್ರಪ್ರಾಪ್ತಿಯ ಯೋಗವಿರಲಿಲ್ಲ. ಪುತ್ರಪ್ರಾಪ್ತಿ ಇಲ್ಲದಿದ್ದರೆ ಗಾರ್ಹಸ್ಥ್ಯಜೀವನ ಅಪರಿಪೂರ್ಣವೇ ಸರಿ ಎಂಬುದು ಭಾರತೀಯರ ಅಭಿಪ್ರಾಯ. ಪುತ್ರಪ್ರಾಪ್ತಿಯೇ ಗೃಹಸ್ಥಜೀವನದ ಉದ್ದೇಶವಲ್ಲವೇ? ಇದಕ್ಕಾಗಿಯೇ ರಾಜಾ ದಶರಥನು ಅನೇಕಯಾಗಗಳನ್ನೂ ಮಾಡಿ, ಕೊನೆಗೆ ಪುತ್ರಕಾಮೇಷ್ಟಿಯಾಗದಿಂದ ಸಂತಾನಭಾಗ್ಯವನ್ನು ಪಡೆದ ಎಂಬುದು ರಾಮಾಯಣ ಸಾರುವ ಕಥೆ. ಅಂದರೆ ಕೇವಲ ಮಗ ಎಂಬುದಷ್ಟೇ ಶ್ರೀರಾಮನ ವಿಶೇಷತೆಯೇ? ಅಥವಾ ಶ್ರೀರಾಮನಂತಹ ಸುತನನ್ನು ಪಡೆದಿದ್ದರಿಂದವೋ?   

ತಂದೆಯ ಪಿತೃತ್ವವೂ ಧನ್ಯತೆಯನ್ನು ಪಡೆಯಿತು ಎಂಬುದು ಇನ್ನೂ ವಿಶೇಷತೆ. ಉತ್ತರರಾಮಚರಿತೆ ಎಂಬ ಸಂಸ್ಕೃತನಾಟಕದಲ್ಲಿ ಭವಭೂತಿ ಎಂಬ ಕವಿಯು ಒಂದು ಮಾತನ್ನು ಹೇಳುತ್ತಾನೆ. ಅದೇನೆಂದರೆ "ಆನಂದಗ್ರಂಥಿರೇಕೋಽಯಮ್ ಅಪತ್ಯಮಿತಿ ಕಥ್ಯತೇ" ಎಂಬುದಾಗಿ.  ಅದೊಂದು ಆನಂದದ ಕಟ್ಟು ಎಂಬುದಾಗಿ ಅವನ ಆಶಯ. ಪ್ರತಿಯೊಬ್ಬ ತಂದೆ-ತಾಯಿಯರ ಅತಿಬಲಿಷ್ಠವಾದ ಹಂಬಲ ಇದುವೇ ತಾನೆ. ಜೀವನದಲ್ಲಿ ಆನಂದವನ್ನು ಪ್ರತಿಯೊಬ್ಬರೂ ಅನ್ವೇಷಣೆ ಮಾಡುತ್ತಾ ಇರುತ್ತಾರೆ. ಕೊಟ್ಟಕೊನೆಯ ಆನಂದ ಯಾವುದುಂಟೋ ಅದನ್ನು 'ಬ್ರಹ್ಮಾನಂದ' ಎಂದು ಕರೆಯುತ್ತಾರೆ. ಇದನ್ನೇ ಇನ್ನೊಂದು ಪದದಲ್ಲಿ 'ಆನಂದ' ಎಂದೂ ಕರೆಯಲಾಗುತ್ತದೆ. ಎಲ್ಲೆಲ್ಲಿ ಈ ಆನಂದದ ತುಣುಕು ಕಂಡುಬರುವುದೋ ಅದನ್ನೆಲ್ಲ ಜೀವನದಲ್ಲಿ ಅನುಭವಿಸಬೇಕೆಂಬ ಸದಭಿಪ್ರಾಯ ಭಾರತೀಯರದ್ದಾಗಿದೆ. ಪುತ್ರೋತ್ಪತ್ತಿಯಿಂದ ಪ್ರಾಪ್ತವಾಗುವ ಆನಂದವೂ ಬ್ರಹ್ಮಾನಂದವನ್ನೇ ಹೋಲುವಂತಹದ್ದು. ಆದ್ದರಿಂದ ಸಂತಾನಪ್ರಾಪ್ತಿಯೂ ತಂದೆಗೆ ಸಂತೋಷವನ್ನು ಕೊಡುವಂತಹದ್ದು. ಯೋಗಿಗಳು ಶ್ರೀರಾಮನನ್ನು ಆನಂದರೂಪವಾಗಿಯೇ ತಮ್ಮ ಹೃದಯದಲ್ಲಿ ಕಂಡುಕೊಳ್ಳುತ್ತಾರೆ. ರಾಮನ ಈ ರೂಪವನ್ನು ಕಂಡು ದಶರಥನು ಸಂತೋಷಪಟ್ಟನು ಎಂಬುದಕ್ಕಿಂತ ಶ್ರೀರಾಮನು ಅವನಿಗೆ ನಂದನನಾದನು. 

ಪುತ್ರಕಾಮೇಷ್ಟಿಯಾಗದ ಫಲವಾಗಿ ಸಕಲಗುಣಸಂಪನ್ನರೂ, ಅಮಿತತೇಜಸ್ಸಿಂದ ಕೂಡಿದವರೂ ಆದ ನಾಲ್ಕು ಪುತ್ರರ ಜನನ ಆಗುತ್ತದೆ. ತನಗಾದ ಸಂತೋಷದ ದ್ಯೋತಕವಾಗಿ ಎಲ್ಲರಿಗೂ ಯೋಗ್ಯವಾದ ಬಹುಮಾನವನ್ನು ವಿತರಿಸಿದನು. ಸಿಹಿಯನ್ನು ಹಂಚಿದನು. ಸಾವಿರಾರು ಗೋವುಗಳನ್ನು ದಾನಮಾಡಿದನು. ಪಟ್ಟಣದಲ್ಲಿ ಎಲ್ಲರಿಗೂ ಮೃಷ್ಟಾನ್ನಭೊಜನವನ್ನು ಮಾಡಿಸಿದ. ಬೆಲೆಬಾಳುವ ರತ್ನ ವಜ್ರ ವೈಡೂರ್ಯಗಳನ್ನು ಸದಕ್ಷಿಣಾಕವಾಗಿ ದಾನಮಾಡಿದ.  ಅಯೋಧ್ಯೆಯ ನಗರದಲ್ಲಿ ಎಲ್ಲೆಲ್ಲೂ ಆನಂದದ ಹೊಳೆ ಹರಿಯುತ್ತಿತ್ತು. ಅನೇಕ ಶತಮಾನಗಳಿಂದಲೇ ಸಂತಾನವಿಲ್ಲದ ತಂದೆಗೆ ಅದೆಷ್ಟು ಸಂತೋಷ ಬಾರದು ಹೇಳಿ? ದಶರಥನಿಗೆ ಅದೆಷ್ಟು ಸಂತೋಷವಾಯಿತೆಂದರೆ ಪ್ರಥಮ ಪುತ್ರನಿಗೆ 'ರಾಮ' ಎಂದೇ ನಾಮಕರಣವನ್ನೂ ಮಾಡಿದ. ಆತನಿಗೆ ಶ್ರೀರಾಮನು ಅವತಾರಪುರುಷನಾಗಿ ಜನ್ಮ ತಾಳಿದ. ಜಗತ್ತಿನ ಭಾರವನ್ನೆಲ್ಲ ತಾನು ಹೊತ್ತು, ಲೋಕಕ್ಕೆ ಕಂಟಕಪ್ರಾಯನಾದ ಲಂಕಾಧಿಪ ರಾವಣನನ್ನು ಸಂಹರಿವಂತಹ ಮಗನನ್ನು ಪಡೆದ ಎಂಬ ಹಿರಿಮೆ ಸಾಲದೇ? ದಶರಥನ ಆನಂದಕ್ಕೆ. ಇದರಿಂದಲೇ ನಮಗೆ ಅರ್ಥವಾಗುತ್ತದೆ ಶ್ರೀರಾಮನು ದಶರಥನಿಗೆ ಯಾವ ಪ್ರಮಾಣದಲ್ಲಿ ನಂದನನಾಗಿದ್ದ ಎಂದು.


ಸೂಚನೆ : 29/5/2022 ರಂದು ಈ ಲೇಖನ ಹೊಸದಿಗಂತ  ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.