Saturday, May 7, 2022

ಕಾಳಿದಾಸನ ಜೀವನದರ್ಶನ - 9 ವಿದ್ಯೆಗೆ ಯಾರು ಪಾತ್ರರು? (Kalidasana Jivanadarshana - 9 Vidyege Yaru Patraru?)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)ಯಾವುದೇ ವಿದ್ಯೆಯನ್ನು ಮತ್ತೊಬ್ಬರಿಗೆ ಕೊಡುವಾಗಲೂ ಪಾತ್ರಾಪಾತ್ರವಿವೇಕವು ಬೇಕೆಂಬುದು ಭಾರತೀಯರ ದೃಷ್ಟಿಕೋಣವಾಗಿದೆ. ವಿವೇಕವೆಂದರೆ ವಿವೇಚನೆ; ವಿವೇಚನವೆಂದರೆ ಸರಿ-ತಪ್ಪುಗಳನ್ನು, ಹಿರಿದು-ಕಿರಿದುಗಳನ್ನು, ವರ್ತಮಾನ-ಭವಿಷ್ಯಗಳನ್ನು, ಅರ್ಹತೆ-ಅನರ್ಹತೆಗಳನ್ನು, ಒಳಿತು-ಕೆಡುಕುಗಳನ್ನು, ಒಟ್ಟಿನ ಸತ್ತು-ಅಸತ್ತುಗಳನ್ನು ಗಣನೆಗೆ ತೆಗೆದುಕೊಂಡು, ವಿಂಗಡಿಸಿ ಕಂಡುಕೊಳ್ಳುವುದು. ಯಾರು ಯಾವ ವಿದ್ಯೆಗೆ ಪಾತ್ರರು, ಎಷ್ಟಕ್ಕೆ ಪಾತ್ರರು, ಯಾರು ಪಾತ್ರರಲ್ಲ, ಎಂದೆಲ್ಲಾ ಬಿಡಿಸಿನೋಡಿಕೊಂಡು, ಆ ಬಳಿಕವೇ ಯೋಗ್ಯರಿಗೇ ವಿದ್ಯೆಯನ್ನು ಕೊಡತಕ್ಕದ್ದು.

ಸರಿಯಾದ ವಸ್ತುವಿನ ಮೇಲೆ ಆಗುವ ಕ್ರಿಯೆಯೇ ಫಲಕಾರಿಯಾಗುವಂತಹುದು. ಉದಾಹರಣೆಗೆ ಕಬ್ಬಿಣವಲ್ಲದ ಪದಾರ್ಥದ ಮೇಲೆ - ಮರದ ತುಂಡೊಂದರ ಮೇಲೆ ಎಂದುಕೊಳ್ಳಿ - ಅಯಸ್ಕಾಂತವನ್ನು ಆಡಿಸಿದರೆ, ಅಯಸ್ಕಾಂತದ ಪರಿಣಾಮವು ಅದರ ಮೇಲೆ ಸ್ವಲ್ಪವೂ ಆಗದು, ಅಲ್ಲವೇ?  ಅಯಸ್ಸು- ಎಂದರೆ ಕಬ್ಬಿಣವು – "ಅಯಸ್-ಕಾಂತ"-ಶಕ್ತಿಯ ಪ್ರಯೋಗಕ್ಕೆ ಸರಿಯಾದ 'ವಸ್ತು'. ಹಾಗೆಯೇ ಯೋಗ್ಯನಾದ ಶಿಷ್ಯನು 'ವಸ್ತು' ಎನಿಸುವನು, 'ದ್ರವ್ಯ' ಎನಿಸುವನು.  ಅನರ್ಹರನ್ನು, ಅಯೋಗ್ಯರನ್ನು ಸೂಚಿಸಲೆಂದೇ 'ಅವಸ್ತು'-'ಅದ್ರವ್ಯ' ಎಂಬ ಪದಗಳನ್ನುಬಳಸುವುದು. 

ಇದನ್ನೇ ಕಾಳಿದಾಸನು 'ಕ್ರಿಯಾ ಹಿ ವಸ್ತೂಪಹಿತಾ ಪ್ರಸೀದತಿ' ಎಂಬ ಮಾತಿನಿಂದ ಹೇಳುತ್ತಾನೆ. ಸುದ್ರವ್ಯದ ಮೇಲಿನ ಕ್ರಿಯೆಯೇ "ಪ್ರಸನ್ನ"ವಾಗುವುದು, ಎಂದರೆ ಫಲಕಾರಿಯಾಗುವುದು. ರಘುವಂಶದಲ್ಲಿ ರಾಜಕುಮಾರನಾದ ರಘುವಿನ ವಿದ್ಯಾಭ್ಯಾಸದ ಸಂದರ್ಭದಲ್ಲಿ, ಕವಿಯು ಈ ಮಾತನ್ನು ಹೇಳುತ್ತಾನೆ. ಬೋಧನವೆಂಬುದೂ ಒಂದು ಕ್ರಿಯೆಯೇ ತಾನೆ? ಆ ಕ್ರಿಯೆಯು ಫಲಿಸುವುದು ಸಹ ಅದಕ್ಕೆ ಸಲ್ಲುವ 'ವಸ್ತು'ವಿನ ಮೇಲೆ ಪ್ರಯೋಗಿಸಿದಾಗಲೇ ಆಗುವುದೂ. ಕೌಟಲ್ಯನೂ ಸಹ ಇದೇ ಅಭಿಪ್ರಾಯದ ಮಾತನ್ನು ಹೇಳುತ್ತಾನೆ: "ಕ್ರಿಯೆಯು ಪಳಗಿಸುವುದು (ವಿನಯತಿ) ದ್ರವ್ಯವನ್ನು, ಅದ್ರವ್ಯವನ್ನಲ್ಲ" ಎಂಬುದು ಆತನ ಅರ್ಥಶಾಸ್ತ್ರದ ಮಾತು.

ವಿದ್ಯಾದಾನವು ಕನ್ಯಾದಾನದಂತೆ

ವಿದ್ಯೆಯನ್ನು ಕೊಡಬೇಕಾದದ್ದು ಒಳ್ಳೆಯ ಶಿಷ್ಯನಿಗೆ. ಸುಶಿಷ್ಯನಿಗೆ ಕೊಟ್ಟ ವಿದ್ಯೆಯು ಸಾರ್ಥಕ್ಯವನ್ನು ಪಡೆಯುವುದು. ಅದೇ ಅಯೋಗ್ಯನಾದವನಿಗಿತ್ತಲ್ಲಿ ಅದು ಶೋಕಕ್ಕೆ ಕಾರಣವಾಗುವುದು. ಕುಲಪತಿಗಳಾದ ಕಣ್ವಮಹರ್ಷಿಗಳು ಅಭಿಜ್ಞಾನಶಾಕುಂತಲದಲ್ಲಿ ಈ ಅಭಿಪ್ರಾಯದ ಮಾತನ್ನು ಆಡುತ್ತಾರೆ. ಶಕುಂತಲೆಯು ದುಷ್ಯಂತನನ್ನು ವಿವಾಹವಾಗಿರುವ ಪ್ರಸಂಗದಲ್ಲಿ ಈ ಮಾತು ಅವರ ಬಾಯಿಂದ ಹೊಮ್ಮಿದೆ. "ಸುಶಿಷ್ಯನಿಗೆ ಪರಿದಾನವಾದ ವಿದ್ಯೆಯ ಹಾಗೆ" ನೀನು ಅಶೋಚ್ಯಳು – ಎಂದು ಉಪಮೆಯೊಂದಿಗೆ ಹೇಳಿದ್ದಾರೆ. ಇಲ್ಲಿ 'ಅಶೋಚ್ಯ'ಳೆಂದರೆ 'ಅಭಿನಂದನೀಯ'ಳೆಂದೇ. 

ಅಲ್ಲಿಗೆ, ವಿದ್ಯಾದಾನವು ಕನ್ಯಾದಾನದ ಹಾಗೆಯೇ - ಎಂದಂತಾಯಿತು. ಕನ್ಯೆಯು ಸರಿಯಾದವನ ಕೈಹಿಡಿದಲ್ಲಿ ಜೀವನವೇ ಸುಖ-ಸಂತೋಷಮಯ. ಅಯೋಗ್ಯನ ಕೈಸೇರಿದಲ್ಲಿ ಬಾಳು ಗೋಳೇ, ಅನುದಿನವೂ ರಚ್ಚೆ-ರಗಳೆಗಳೇ. ವಿದ್ಯೆಯ ಪಾಡೂ ಹಾಗೆಯೇ. ಅಪಾತ್ರನ ಕೈಸೇರಿದರೆ ಅನುಪಯೋಗವೋ, ಅದಕ್ಕಿಂತಲೂ ಹೆಚ್ಚಾಗಿ ದುರುಪಯೋಗವೋ, ಆಗುವುದು ಸ್ವತಸ್ಸಿದ್ಧ.

ಇದನ್ನು ವಿಶದಪಡಿಸಲು ಸೂಕ್ತಿಯೊಂದರ ಸಾರವನ್ನು ಇಲ್ಲಿ ಉಲ್ಲೇಖಿಸಬಹುದು. ಸಾಧು ಮತ್ತು ಖಲ (ಎಂದರೆ ಸತ್ಪುರುಷ ಹಾಗೂ ದುಷ್ಟ) - ಇವರ ನಡುವಿನ ಭೇದವನ್ನು ಸುಭಾಷಿತವೊಂದು ಹೇಳುತ್ತದೆ. ಖಲನು ವಿದ್ಯೆಯನ್ನು ಬಳಸುವುದು ಬರೀ ವಾದವಿವಾದಗಳಿಗಾಗಿ, ಅನ್ಯರಿಗೆ ಭಂಗಮಾಡಲಿಕ್ಕಾಗಿ, ಅಷ್ಟೆ (ಖಲಸ್ಯ ವಿದ್ಯಾ ವಿವಾದಾಯ); ಆದರೆ ಸಜ್ಜನನು ಹಾಗಲ್ಲ. ಅದನ್ನು ಅವನು ಜ್ಞಾನಕ್ಕಾಗಿ ಬಳಸಿಕೊಳ್ಳುವನು. (ಸಾಧೋಃ ವಿದ್ಯಾ ಜ್ಞಾನಾಯ). ಬಲಗಳಿಸಿದ ಖಲ ಅದನ್ನು ಪರ-ಪರಿಪೀಡನಕ್ಕಾಗಿಯೇ ಬಳಸುವುದು; ಸಜ್ಜನನಾದರೆ, ಅದನ್ನೇ ಅನ್ಯರ ರಕ್ಷಣೆಗಾಗಿ ಬಳಸುವನು. ದುರುಳನಿಗೆ ಧನವೆಂಬುದು ಮದವೇರಿಸುತ್ತದೆ; ಸಜ್ಜನನು ಧನವನ್ನು ದಾನಕ್ಕಾಗಿ ವಿನಿಯೋಗಿಸುತ್ತಾನೆ. ವಿದ್ಯೆಯೂ ಒಂದು ಬಲವೇ; ವಿದ್ಯೆಯೂ ಒಂದು ಧನವೇ. ವಿವಿಧವಾದ ವಿದ್ಯೆ-ವಿತ್ತ-ಶಕ್ತಿಗಳನ್ನು ವಿವೇಕದಿಂದ ವಿನಿಯೋಗಿಸಬೇಕು. ಗೊಡ್ಡಾಗಿ ಒಡ್ಡಾಗಿ ಅಸಡ್ಡೆಯಿಂದ ಅಪವ್ಯಯಿಸುವುದು ಅಯುಕ್ತ. ಅಷ್ಟೇ ಅಲ್ಲ; ಅದು ಅನರ್ಥಕ್ಕೇ ಆಹ್ವಾನ.

ಎಂದೇ ಶಾಕುಂತಲನಾಟಕದ ಕಣ್ವಮಹರ್ಷಿಗಳು "ಸುಶಿಷ್ಯ-ಪರಿದತ್ತೇವ ವಿದ್ಯಾ ಅಶೋಚನೀಯಾಽಸಿ ಸಂವೃತ್ತಾ" ಎನ್ನುವುದು. ಗುಣಶಾಲಿಗೆ ಕನ್ಯೆಯನ್ನು ಕೊಡಬೇಕು - ಎಂಬುವ ಸಂಕಲ್ಪವೇ ಅವರಿಗಿದ್ದದ್ದು. ಪ್ರಕೃತ, ದುಷ್ಯಂತನು ಗುಣವಂತನು; ಆದ್ದರಿಂದಲೇ ಶಕುಂತಲೆಯ ಜೀವನವು ಕೊನೆಗೂ ಪರಮಸಾರ್ಥಕ್ಯವನ್ನೇ ಕಂಡಿತು (ಮಧ್ಯಕಾಲದಲ್ಲಿ ಕೆಲಕಾರಣಗಳಿಂದ ನಾಲ್ಕಾರು ಕ್ಲೇಶಗಳು ಇಬ್ಬರಿಗೂ ಉಂಟಾದರೂ).

ಪುಟವಿಟ್ಟ ಚಿನ್ನ

ಪಾತ್ರನಲ್ಲಿ ಇಟ್ಟ ಸದ್ವಿದ್ಯೆಯು ಕೆಡುವುದಿಲ್ಲ, ಎಂಬುದಷ್ಟೇ ಅಲ್ಲ. ಅದು ಸದ್ವಿದ್ಯೆಯೆಂದು ಸಾಬೀತಾಗುವುದೇ ಅಲ್ಲಿ! ಚಿನ್ನವೇ ಆಗಿದ್ದಲ್ಲಿ ಬೆಂಕಿಗೆ ಹಾಕಿದಾಗ ಚೆನ್ನಾಗಿಯೇ ಹೊಳೆಯುವುದಲ್ಲವೆ? ಬಂಗಾರವು ಅಶುದ್ಧವಾಗಿದ್ದಲ್ಲಿ ಅದು ಕಪ್ಪಾಗದೇ? (ಕಾಂಚನಂ ಶ್ಯಾಮಾಯತೇ). ಚಿನ್ನವು "ಸು-ವರ್ಣ"ವೆಂದು ಒಳ್ಳೆಯ ಬಣ್ಣವು ಮೇಲ್ನೋಟಕ್ಕೆ ಕಂಡರೆ ಸಾಲದು; ಅದು ವಾಸ್ತವವಾಗಿಯೂ ಕನಕವೇ ಆಗಿದ್ದಲ್ಲಿ ಬೆಂಕಿಗೆ ಬಿದ್ದಾಗಲೂ ಕಪ್ಪಾಗದೆ, ವಾಸ್ತವವಾದ ಸು-ವರ್ಣದಿಂದಲೇ ಕೂಡಿರುತ್ತದೆ.

ಉಪದೇಶ ಮಾಡುವ ದೇಶಿಕನ ಉಪದೇಶವು ಶುದ್ಧವಾಗಿದೆಯೆಂಬುದು - ಅರ್ಥಾತ್ ದೋಷರಹಿತವಾಗಿದೆಯೆಂಬುದು - ತಿಳಿದುಬರುವುದೂ ಹೀಗೆಯೇ: ಯೋಗ್ಯರ ಮುಂದೆ ಅದನ್ನು ಸಲ್ಲಿಸಿದಾಗಲೇ. ಚಿನ್ನದ ಶುದ್ಧಿಯು ಸಾಬೀತಾಗುವುದು ಅದನ್ನು ಬೆಂಕಿಗೊಡ್ಡಿದಾಗಲೇ.  ಉಪಾಧ್ಯಾಯರ ಉಪದೇಶದ ಉತ್ತಮತೆಯನ್ನು ಬೋಧವುಳ್ಳ ಧೀಮಂತ-ಸಂತರೇ ತೂಗಿಹೇಳ ಬಲ್ಲರು, ಅನ್ಯರಲ್ಲ.

ಇದೂ ಕಾಳಿದಾಸನ ಮಾತೇ. ಹೀಗಾಗಿ ಸದ್ವಿದ್ಯೆಯೆಂಬುದು ಸಚ್ಛಿಷ್ಯನಲ್ಲಿಟ್ಟಾಗಲೇ ತನ್ನ ಸಹಜವಾದ ಸೊಬಗನ್ನು ಸಲ್ಲಿಸಲು ಸಮರ್ಥವಾಗುವುದು.

ಪಾತ್ರನಾರು?

ಮನೆಗೆ ಹಾಲು ಬಂದಾಗ ಅದನ್ನೇನು ಚೆಲ್ಲುವೆವೇ? ಹಾಲು ಅಮೃತ! ಅದನ್ನು ಒಂದು ಪಾತ್ರೆಯಲ್ಲಿ ಹಾಕಿಸಿಕೊಳ್ಳುತ್ತೇವೆ. ಕನ್ನಡದ "ಪಾತ್ರೆ" ಮೂಲತಃ ಸಂಸ್ಕೃತದ "ಪಾತ್ರ"ವಷ್ಟೆ? ಏನು ಪಾತ್ರವೆಂದರೆ? ಶ್ರೀರಂಗಮಹಾಗುರುಗಳು ಅದರ ವ್ಯುತ್ಪತ್ತಿಯತ್ತ ನಮ್ಮ ಗಮನವನ್ನು ಸೆಳೆದಿದ್ದರು. ಆ ಪದದಲ್ಲಿ ಎರಡು ಅಂಶಗಳಿವೆ. ಪಾತ ಮತ್ತು ತ್ರಾಣನ – ಎಂಬುದಾಗಿ. "ಪಾತ"ವೆಂದರೆ ಬಿದ್ದುಹೋಗುವುದು, ಚೆಲ್ಲಿಹೋಗುವುದು; ಹಾಗಾಗದಂತೆ ಮಾಡುವುದು "ತ್ರಾಣನ". ತ್ರಾಣನವೆಂದರೆ ಕಾಪಾಡುವುದು. ಪಾತಾತ್ ತ್ರಾಯತೇ. ಹೀಗಾಗಿ, ತನ್ನಲ್ಲಿಗೆ ಬಂದ ಒಂದು ಪ್ರಶಸ್ತವಾದ ವಸ್ತುವು ಬಿದ್ದು ಚೆಲ್ಲಿ ಹರಿದುಹೋಗದಂತೆ ಅದನ್ನು ಹಿಡಿದಿಟ್ಟುಕೊಂಡು, ಅದು ಕೆಡದಂತೆ ಕಾಪಾಡುವುದು ಯಾವುದೋ, ಅದುವೇ "ಪಾತ್ರ"ವೆನಿಸುವುದು – ಎಂಬ ವಿವರಣೆಯನ್ನು ಅವರಿತ್ತಿದ್ದರು. ಹಾಗೆಯೇ, ಗುರುವು ಧಾರೆಯಾಗಿ ಕೊಡುವ ವಿದ್ಯಾಮೃತವನ್ನು  ಸರಿಯಾಗಿ ಗ್ರಹಿಸಿ, ಅಲ್ಲಿಲ್ಲಿ ಚೆಲ್ಲಾಡದೆ ಅದನ್ನು ಯಾವನು ಕಾಪಿಟ್ಟುಕೊಳ್ಳುವನೋ ಅಂತಹ ಶಿಷ್ಯನೇ ಪಾತ್ರನೆನಿಸುವನು

ಸೂಚನೆ : 07/05/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.