Sunday, May 8, 2022

ಅಷ್ಟಾಕ್ಷರ ದರ್ಶನ -10 ಸಾ ವಿದ್ಯಾ ಯಾ ವಿಮುಕ್ತಯೇ (Astakshara Darshana -10 Sa Vidya Ya Vimuktaye)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

ಇಂದು ಅನಕ್ಷರಸ್ಥರನ್ನೆಲ್ಲ ಅಕ್ಷರಸ್ಥರನ್ನಾಗಿ ಮಾಡಬೇಕೆಂಬ ಅಭಿಲಾಷೆಯನ್ನು ಎಲ್ಲಾ ಸರಕಾರಗಳೂ ಘೋಷಿಸುತ್ತವೆ. ಏಕೆಂದರೆ ಪ್ರಜಾಪ್ರಭುತ್ವವು ಸಾಧಾರಣ ಜನರ ಮೇಲೂ ಅಸಾಧಾರಣವಾದ ಜವಾಬ್ದಾರಿಯನ್ನೇ ಹೇರುತ್ತದೆ. ಪ್ರಪಂಚದಲ್ಲಿರುವ ೧೫೦ಕ್ಕೂ ಮಿಕ್ಕ ದೇಶಗಳಲ್ಲಿ ಸುಮಾರು ೭೦ ದೇಶಗಳಲ್ಲಿ ಪ್ರಜಾಪ್ರಭುತ್ವವಿದೆಯೆನ್ನಲಾಗಿದೆ (ಕೆಲವೆಡೆ ಅದು ಸಮರ್ಪಕವಾಗಿಲ್ಲವೆಂದರೂ).

ಜನರು ಅಕ್ಷರಸ್ಥರಾದರೆ ಅವರಿಗೆ ಓದು-ಬರಹಗಳು ಶಕ್ಯವಾಗುತ್ತವೆ; ದೇಶದ ಆಗುಹೋಗುಗಳನ್ನು ಅರಿಯಲು ದಿನಪತ್ರಿಕೆಗಳನ್ನೂ, ವಿದ್ಯಾಭ್ಯಾಸಕ್ಕಾಗಿ ಗ್ರಂಥಗಳನ್ನೂ ಓದಲು ಅನುಕೂಲವಾಗುತ್ತದೆ. ಇಂಟರ್ನೆಟ್ ಸೌಕರ್ಯವಿರುವಲ್ಲಿ ಸಹಸ್ರಾರು ಕೃತಿಗಳ 'ಮೃದುಪ್ರತಿ'ಗಳು ಲಭ್ಯವಿದ್ದು, ಹೆಚ್ಚಾಗಿ ಓದಲು ಇಂದು ಹೇರಳವಾದ ಸೌಕರ್ಯವಿದೆ.

ದೊಡ್ಡ ದೊಡ್ಡ ಪದವಿ (ಡಿಗ್ರಿ)ಗಳನ್ನು ಪಡೆದವರನ್ನು ವಿದ್ಯಾವಂತರು - ಎನ್ನುತ್ತೇವೆ. ಹೆಚ್ಚು ಓದಿದವರು ಏನಾದರೂ ಅಕಾರ್ಯವನ್ನು ಮಾಡಿದರೆ - ಲಂಚ-ವಂಚನೆ ಮುಂತಾದುವುಗಳಲ್ಲಿ ತೊಡಗಿದರೆ – "ಇಷ್ಟು ವಿದ್ಯಾವಂತನಾಗಿ ಹೀಗೆ ಮಾಡುವುದೇ?" - ಎಂದು ಆಶ್ಚರ್ಯವನ್ನು ವ್ಯಕ್ತಪಡಿಸುವುದೂ ಸಾಮಾನ್ಯವೇ.

ಇದಿಷ್ಟೂ ಆಧುನಿಕ ಸಂನಿವೇಶವಾಯಿತು. ವಿದ್ಯೆಯನ್ನು ಕುರಿತಾಗಿ ನಮ್ಮಲ್ಲೇ ಹಿಂದೆ ಇದ್ದ ಭಾವಗಳು ಹೇಗಿದ್ದುವು? - ಎಂಬುದನ್ನು ಕಾಣಲು ವಿದ್ಯೆಯನ್ನು ಕುರಿತಾದ ಪ್ರಸಿದ್ಧೋಕ್ತಿಗಳತ್ತ ಒಮ್ಮೆ ಕಣ್ಣು ಹಾಯಿಸಬಹುದು.

"ವಿದ್ಯಾವಿಹೀನಃ ಪಶುಃ" ಎನ್ನುವುದು ಸುಪ್ರಸಿದ್ಧವಾದ ನುಡಿಯೇ. ರಾಜನಿಗೆ ಪೂಜೆ-ಗೌರವಗಳು ಸ್ವದೇಶದಲ್ಲಿರಬಹುದು; ಆದರೆ ವಿದ್ವಾಂಸನಿಗೆ, ಎಂದರೆ ವಿದ್ಯಾವಂತನಿಗೆ, ಎಲ್ಲೆಡೆ ಮನ್ನಣೆ ಸಲ್ಲುವುದು - ಎನ್ನುವ ಸೂಕ್ತಿಯನ್ನು ಯಾರು ಕೇಳಿಲ್ಲ? ವಿದ್ಯೆಯೆಂಬುದೇ ಒಂದು ಧನ ಎಂದು ರೂಪಕ ಮಾಡಿ ಹೇಳುವುದುಂಟು: ವಿದ್ಯೆಯೆಂಬುದು ಅಂತರ್ಧನ; ವಿದ್ಯಾಧನವನ್ನು ಕಳ್ಳರು ಕದಿಯಲಾರರು; ಆಯಕರವಿಭಾಗದವರು ಬಂದು ವಸೂಲಿ ಮಾಡಲಾರರು; ಅಣ್ಣ-ತಮ್ಮಂದಿರೋ ದಾಯಾದರೋ ಬಂದು, "ಇದಿಷ್ಟು ನಮ್ಮ ಪಾಲು, ಇತ್ತ ಮಡಗು" - ಎಂದು ಕಿತ್ತುಕೊಳ್ಳಲಾರರು; ತಲೆಯಲ್ಲಿ ತುಂಬಿಕೊಂಡ ವಿದ್ಯೆ ಹೆಚ್ಚಾಗಿ ತಲೆಗೆ ಭಾರವಾಗುತ್ತಿದೆ - ಎಂದನ್ನುವಂತಾಗುವ ಹೊರೆಯಾಗದದು; ಇತರರಿಗಿತ್ತಷ್ಟೂ ಹೆಚ್ಚುವ ಧನವದು! ಹೀಗಾಗಿ ಎಲ್ಲ ಧನಗಳಲ್ಲೂ ವಿದ್ಯಾಧನವೇ ಪ್ರಧಾನವಾದುದು - ಇತ್ಯಾದಿಯಾಗಿ ಬಣ್ಣಿಸಲಾಗುತ್ತದೆ. ರಾಜರೂ ಪೂಜಿಸುವುದೆಂಬುದೊಂದಿದ್ದರೆ ಅದು ವಿದ್ಯೆಯನ್ನು, ವಿದ್ಯಾವಂತರನ್ನು.

ಕುರೂಪಿಯಾದರೂ ವಿದ್ಯಾವಂತನಾಗಿದ್ದರೆ ಆತನಿಗೆ ಸುರೂಪವೇ ಬಂದಂತೆ. ಅನ್ನದಾನವೇನೋ ಶ್ರೇಷ್ಠವೇ; ಅದರೆ ವಿದ್ಯಾದಾನವೆಂಬುದು ಅದಕ್ಕಿಂತಲೂ ಶ್ರೇಷ್ಠವಾದುದು; ಏಕೆಂದರೆ ಅನ್ನವು ಕೊಡುವುದು ಕ್ಷಣಿಕತೃಪ್ತಿಯನ್ನು; ವಿದ್ಯೆಯಂತೂ ಯಾವಜ್ಜೀವವೂ - ಎಂದರೆ ಬದುಕಿರುವವರೆಗೂ – ತೃಪ್ತಿಪ್ರದ!

ಅಭ್ಯಾಸವೆಂಬುದಿಲ್ಲದಿದ್ದಲ್ಲಿ ವಿದ್ಯೆಯು ವಿಷವಾದೀತು:  ವಿದ್ಯಾಭ್ಯಾಸವನ್ನು ಬಿಡಬಾರದು - ಎಂದೆಚ್ಚರಿಸುವುದುಂಟು. ಬೇಡಿಕೊಳ್ಳುವವ "ಅರ್ಥಿ"; ವಿದ್ಯೆಯನ್ನು ಬೇಡಿ ಬಯಸುವವನೇ ವಿದ್ಯಾರ್ಥಿ; ವಿದ್ಯೆಗಾಗಿ ಹಪಹಪಿಸುವನಿಗೆ ಸುಖವೇ, ನಿದ್ರೆಯೇ? "ವಿದ್ಯೆ ಬೇಕೋ, ಸುಖ ಬಿಡು; ಸುಖ ಬೇಕೋ, ವಿದ್ಯೆಯನ್ನೇ ಬಿಡು" – ಎನ್ನುತ್ತಾ, ವಿದ್ಯಾಕಾಂಕ್ಷಿಯು ಪಡಬೇಕಾದ ಶ್ರಮವನ್ನು ಸುಭಾಷಿತವೊಂದು ಜ್ಞಾಪಿಸುತ್ತದೆ. ಆಲಸ್ಯವುಳ್ಳವನಿಗೆ ವಿದ್ಯೆಯೆಲ್ಲಿಂದ ಬಂದೀತು? - ಎಂದು ಜಾಗರಿಸುವ ಸೂಕ್ತಿಯುಂಟು.

ವಿದ್ಯೆಯಿಲ್ಲದವ "ನಿರ್ಗಂಧ-ಕುಸುಮ": ಬಣ್ಣವಿದ್ದರೂ ಸೌರಭವಿಲ್ಲದ ಮುತ್ತುಗದ ಹೂವಿನಂತೆ. ವಿದ್ಯೆಯಿಲ್ಲದ ಜೀವನ ನಾಯಿಯ ಬಾಲದಂತೆ: ಯಾವ ಕೆಲಸಕ್ಕೂ ಬಾರದ್ದು - ಎಂದು ವಿದ್ಯಾರಹಿತನನ್ನು ಗೇಲಿಮಾಡುವ ಮಾತುಗಳೂ ಇವೆ.

ವಿದ್ಯೆಗೆ ನಾನಾ ಹೋಲಿಕೆಗಳುಂಟು: ಅದು ತಾಯಿಯಂತೆ ಕಾಪಾಡುತ್ತದೆ; ಹಿತಕಾರ್ಯಗಳಲ್ಲೇ ತೊಡಗಿಸುವ ತಂದೆಯಂತಿರುತ್ತದೆ; ಮನಸ್ಸಿಗಾದ ನೋವನ್ನು ಹೋಗಲಾಡಿಸಿ ಹರ್ಷವನ್ನುಂಟುಮಾಡುವ ಪ್ರಿಯಪತ್ನಿಯಂತಿರುತ್ತದೆ. ಸಿರಿಯನ್ನು ತರುತ್ತದೆ; ದಿಕ್ಕುಗಳಲ್ಲಿ ಕೀರ್ತಿಯನ್ನು ಹರಡುತ್ತದೆ - ಹೀಗೆಲ್ಲ ಮಾಡುವ ವಿದ್ಯೆಯು ಒಂದು ಕಲ್ಪಲತೆಯಂತೆಯೇ ಸರಿ.  "ವಿದ್ಯಾ ಗುರೂಣಾಂ ಗುರುಃ": ಗುರುಗಳಿಗೂ ಗುರುವದು!  

ವಿದ್ಯೆಯನ್ನು ಮೂರನೆಯ ಕಣ್ಣೆನ್ನುವುದುಂಟು. ವಾಗ್ದೇವತೆಯ ನಾನಾನಾಮಗಳು ವಿದ್ಯೆಗೂ ಸಲ್ಲುವುವಲ್ಲವೇ?: ಸರಸ್ವತೀ, ಬ್ರಾಹ್ಮೀ, ಭಾರತೀ, ವಾಣೀ. "ವಿದ್ಯಾ ಪರಾ ದೇವತಾ".

ಇವೆಲ್ಲಕ್ಕಿಂತಲೂ ಮುಖ್ಯವಾಗಿ, "ಸಾ ವಿದ್ಯಾ ಯಾ ವಿಮುಕ್ತಯೇ" ಎಂಬ ವಿಷ್ಣುಪುರಾಣದ ಸೂಕ್ತಿಯೊಂದುಂಟು. "ವಿದ್ಯಯಾ ಅಮೃತಮಶ್ನುತೇ" ಎಂಬುದು ಅದೇ ತಾತ್ಪರ್ಯದ ಉಪನಿಷದುಕ್ತಿ. ಯಾವುದು ನಮಗೆ ಬಿಡುಗಡೆಗೆ ಕಾರಣವಾಗುವುದೋ ಅದನ್ನೇ ವಿದ್ಯೆಯೆನ್ನುವುದು.

ವಿನೂತನವಾದ ರೂಪಕದ ಮೂಲಕ ವಿದ್ಯೆಯ ಪಾತ್ರವನ್ನೂ ಪರಮಾರ್ಥವನ್ನೂ ಶ್ರೀರಂಗಮಹಾಗುರುಗಳು ಚಿತ್ರಿಸಿದ್ದಾರೆ: "ವಿದ್ಯೆಯು ಒಂದು ಯಾನವಾಗಿದೆ: ಭೂರ್ಭುವಸ್ಸುವರ್ಲೋಕಗಳಲ್ಲಿ ಒಯ್ಯುವ ಯಾನವಾಗಿದೆ. ಅಮರತ್ವವನ್ನು ಕೊಟ್ಟು ಹುಟ್ಟು-ಸಾವಿಗೆ ಮತ್ತೆ ಸಿಕ್ಕದ ಹಾಗೆ ಮಾಡುತ್ತದೆ."

ಜೀವಿಕೆಗಾಗಿ ಮಾತ್ರವೆಂದಲ್ಲದೆ, ದೇಶಹಿತ-ಆತ್ಮಹಿತಗಳಿಗೆ ಆಗಿಬರುವ ವಿದ್ಯೆಗಳನ್ನು ನಾವು ಉಪಾಸಿಸಬೇಕಾಗಿದೆ. "ಭಾ" ಎಂದು ಕರೆಸಿಕೊಳ್ಳುವ ಒಳಬೆಳಕನ್ನೂ ಆಸ್ವಾದಿಸಬಲ್ಲ ನಿಜವಾದ ಭಾ-ರತರು ನಾವಾಗಬೇಕಾಗಿದೆಯಲ್ಲವೇ?

ಸೂಚನೆ: 8/5/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.