Sunday, May 22, 2022

ಶ್ರೀ ರಾಮನ ಗುಣಗಳು - 55 ಮಹಾರಾಜ- ಶ್ರೀರಾಮ (Sriramana Gunagalu-55 Mararaja Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


'ಮಹಾರಾಜ' ಎಂಬ ವಿಶೇಷಗುಣ ಶ್ರೀರಾಮನಿಗೇಕೆ? ರಾಜನೆಂದರೆ ಸಾಲದೆ? 'ರಾಜ' ಎಂಬ ಪದಕ್ಕೂ ಸಂಸ್ಕೃತದಲ್ಲಿ ಬಹಳ ವಿಶೇಷ ಅರ್ಥವೇ ಉಂಟು. ಅದಕ್ಕೇನು ಅರ್ಥದಲ್ಲಿ ದಾರಿದ್ರ್ಯವುಂಟಾಗಿ 'ಮಹತ್' ಎಂಬ ವಿಶೇಷಣವನ್ನು ಸೇರಿಸಿದ್ದೇ? 'ರಾಜತೇ - ಪ್ರಕಾಶತೇ' ಎಲ್ಲೆಲ್ಲೂ ರಾರಾಜಿಸುವವನು ಅಥವಾ ಎಲ್ಲಾ ಕಡೆ ತನ್ನ ಪ್ರಕಾಶವನ್ನು- ಜ್ಞಾನವನ್ನು ಬೀರುವವನು ಎಂಬ ಅರ್ಥದಲ್ಲೇ 'ರಾಜ' ಎಂಬ ಪದದ ಬಳಕೆ ಉಂಟು. ಹಾಗಾದರೆ ಈ 'ಮಹತ್' ಎಂಬ ಇನ್ನೊಂದು ಪದ ವ್ಯರ್ಥವಲ್ಲವೇ? ರಾಜನೆಂದರೆ ಒಂದು ಸಣ್ಣ ರಾಜ್ಯಕ್ಕೆ ಅಧಿಪತಿ. ಅಂತಹ ಅನೇಕ ರಾಜ್ಯಗಳನ್ನು- ಅಂತಹ ಅನೇಕ ರಾಜರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡವನು 'ಮಹಾರಾಜ' ಎಂದು ಕರೆಯುವ ಅಭ್ಯಾಸ ಬಂದಿದೆ. ಇದು ತಪ್ಪಲ್ಲ. ಆದರೆ ರಾಜ ಎಂಬುದರಿಂದಲೇ ಅತಿಶಯವಾದ ಅರ್ಥವು ತೋರಲು, ಮತ್ತೊಂದು ಪದದ ಬಳಕೆ ಕೆಲವೊಮ್ಮೆ ವ್ಯರ್ಥವೇ ಆದೀತು. ಆದರೆ ವಿಶೇಷಣಪದಕ್ಕೆ ಇನ್ನೂ ವಿಶಿಷ್ಟವಾದ ಅರ್ಥವನ್ನು ಹೇಳಲು ಬಯಸುವಂತಿದ್ದರೆ, ಆಗ ಮತ್ತೊಂದು ಪದದ ಬಳಕೆ ವ್ಯರ್ಥ ಎನಿಸಿಕೊಳ್ಳದು. ಅಂತಹ ಸಂಗತಿ ಇಲ್ಲೂ ಉಂಟು. ಹಾಗಾಗಿ ಇಲ್ಲಿ 'ಮಹಾರಾಜ' ಎಂದು ಹೇಳಿದ್ದರ ವಿಶಿಷ್ಟವಾದ ಅರ್ಥವೇನು?


ಶ್ರೀರಂಗಮಹಾಗುರುಗಳು 'ಮಹತ್' ಎಂಬುದಕ್ಕೆ ಅನ್ಯತರಸಾಧಾರಣವಾದ ವಿವರಣೆಯನ್ನು ಕೊಟ್ಟಿದ್ದರು. ಅದನ್ನು ಅರ್ಥಮಾಡಿಕೊಂಡಾಗ ಮಾತ್ರ ಈ ಪದದ ಬಳಕೆಯ ಔಚಿತ್ಯ ಮನಸ್ಸಿಗೆ ಬರಲು ಸಾಧ್ಯ. ಸಾಂಖ್ಯರು ಈ ಪ್ರಕೃತಿಯನ್ನು ಅಥವಾ ಪ್ರಪಂಚವನ್ನು ೨೪ ತತ್ತ್ವಗಳನ್ನಾಗಿ ವಿಭಾಗಿಸುತ್ತಾರೆ. ಅವುಗಳಲ್ಲಿ 'ಮಹತ್' ಎಂಬುದು ಒಂದು ತತ್ತ್ವವಾಗಿದೆ. ಸೂಕ್ಷ್ಮವಾದ ರೂಪವನ್ನು ತತ್ತ್ವವೆಂದು ಕರೆಯಲಾಗುತ್ತದೆ. ಅದು ದೇವತಾತ್ಮಕವಾಗಿಯೋ ಅಥವಾ ತದ್ಭಿನ್ನರೂಪವಾಗಿಯೋ ಇರಬಹುದು. ಇದನ್ನು ಕಾಣುವುದು ಅಥವಾ ಇವುಗಳ ದರ್ಶನವೇ ಮುಕ್ತಿಗೆ ಸಾಧನ ಎನ್ನುವಷ್ಟರ ಮಟ್ಟಿಗೆ ಈ ತತ್ತ್ವಗಳ ಪ್ರಾಧಾನ್ಯವನ್ನು ತಿಳಿಸುತ್ತಾರೆ ಸಾಂಖ್ಯರು. ಯೋಗಸಾಧನೆಯಲ್ಲೂ ಇದೇ ಮಾರ್ಗವನ್ನು ಹೇಳಲಾಗುತ್ತದೆ. ಮನಸ್ಸು ಒಂದೊಂದೇ ತತ್ತ್ವದಲ್ಲಿ ಲಯವಾಗುತ್ತಾ ಹೋಗಿ ಕೊನೆಗೆ ಆತ್ಮವು ಪರಮಾತ್ಮನಲ್ಲಿ ಲಯ ಹೊಂದಿದರೆ ಅದುವೇ ಮೋಕ್ಷ ಎಂದು. ಈ ಎಲ್ಲಾ ಕ್ರಮದಲ್ಲೂ 'ಮಹತ್' ಎಂಬುದು ಒಂದು ತತ್ತ್ವ ಅಥವ ಒಂದು ಪದ-ಸ್ಥಾನ. ಇದನ್ನು ಯಾರು ದಾಟುತ್ತಾರೋ ಅಥವಾ ಯಾರು ಮನಸ್ಸನ್ನು ಆ ತತ್ತ್ವದಲ್ಲಿ ಲಯಗೊಳಿಸುತ್ತಾರೋ ಅಂತಹವರಿಗೆ ಕೊಡುವ ಪದವೇ ಇದಾಗಿದೆ. ಈ ಹಿನ್ನೆಲೆಯಲ್ಲೆ ಋಷಿ, ಮಹರ್ಷಿ, ಬ್ರಹ್ಮರ್ಷಿ ಇತ್ಯಾದಿ ಪದವಿಗಳು ಬಂದಿವೆ ಎಂಬುದಾಗಿ ವಿವರಣೆಯನ್ನು ಕೊಟ್ಟಿದ್ದರು ಎಂಬುದಾಗಿ ನಾವು ನಮ್ಮ ಹಿರಿಯರಿಂದ ಕೇಳಿದ್ದೇವೆ. ಈ ವಿವರಣೆಯ ಆಧಾರದ ಮೇಲೆ 'ಮಹಾರಾಜ' ಎಂಬ ಪದವನ್ನು ಅರ್ಥಮಾಡಿಕೊಳ್ಳಬೇಕು. ಯಾವನು ಮಹತ್ ತತ್ತ್ವದಲ್ಲಿ ಮನಸ್ಸನ್ನು ಲೀನಮಾಡುವ ಯೋಗ್ಯತೆಯನ್ನು ಸಂಪಾದಿಸಿರುವನೋ ಅಂತಹವನನ್ನು 'ಮಹಾರಾಜ' ಎಂದು ಕರೆಯಬೇಕು. 


ಆದ್ದರಿಂದ ನಿಜಾರ್ಥದಲ್ಲಿ 'ಮಹಾರಾಜ' ಎಂದು ಕರೆಸಿಕೊಳ್ಳಲು ಶ್ರೀರಾಮನಂತಹವರಿಗಲ್ಲದೇ ಇನ್ನೊಬ್ಬರಿಗೆ ಸಾಧ್ಯವೇ? ಮೇಲಿನ ನಿಜಾರ್ಥ ಪರಿಚಯವಾಗಿದ್ದರೆ ಇನ್ನೊಬ್ಬರನ್ನು ಹೀಗೆ ಕರೆಯಲು  ಮುಜುಗರ ಉಂಟಾಗುತ್ತದೆ. ಶ್ರೀರಾಮನು ಕೇವಲ ಮಹಾರಾಜನಲ್ಲ. ರಾಜನೂ ಅಲ್ಲ. ರಾಜಾಧಿರಾಜ.


ಸೂಚನೆ : 22/5/2022 ರಂದು ಈ ಲೇಖನ ಹೊಸದಿಗಂತ  ಪತ್ರಿಕೆಯ  ಅಂಕಣದಲ್ಲಿ ಪ್ರಕಟವಾಗಿದೆ.