Showing posts with label paper_hosadigantha. Show all posts
Showing posts with label paper_hosadigantha. Show all posts

Sunday, December 29, 2024

ಖಾಂಡವವೇ ನನಗಾಹಾರ! (Khandavave Nanagahara!)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಆತನು ಹಾಗೆ ಹೇಳಲು, "ಯಾವ ಆಹಾರದಿಂದ ನಿನಗೆ ತೃಪ್ತಿಯಾಗುವುದು ಎಂಬುದನ್ನು ಹೇಳು. ಅದಕ್ಕೆ ನಾವು ಯತ್ನಿಸುತ್ತೇವೆ" ಎಂದರು, ಅವರು.  ಆಗ ಅವನು ಹೇಳಿದನು. 

"ನನಗೆ ಅನ್ನ ತಿನ್ನುವ ಅಪೇಕ್ಷೆಯಿಲ್ಲ. ನಾನು ಅಗ್ನಿಯೆಂಬುದನ್ನು ಅರಿಯಿರಿ. ನನಗೆ ಅನುರೂಪವಾದ ಅನ್ನವು ಯಾವುದೋ ಅಂತಹುದನ್ನು ಕೊಡಿ. ಈ ಖಾಂಡವ-ವನವನ್ನು ರಕ್ಷಿಸುವವನು ಇಂದ್ರ. ಆ ಮಹಾತ್ಮನ ರಕ್ಷಣೆಗೆ ಇದು ಒಳಪಟ್ಟಿರುವುದರಿಂದ ನಾನಿದನ್ನು ಸುಡಲಾರೆ. ಆತನ ಮಿತ್ರನಾದ ತಕ್ಷಕನು ಇಲ್ಲಿಯೇ ಸದಾ ಸಪರಿವಾರನಾಗಿ ವಾಸಮಾಡುತ್ತಾನೆ. ಇಂದ್ರನ ಪ್ರಭಾವವಿರುವುದರಿಂದ ಇದನ್ನು ನಾನು ಸುಡಲಾಗುತ್ತಿಲ್ಲ. ತಕ್ಷಕನ ಇರುವಿಕೆಯಿಂದಾಗಿ ಇಲ್ಲಿರುವ ಅನೇಕ ಜೀವಿಗಳಿಗೂ ರಕ್ಷೆಯಾಗಿಬಿಟ್ಟಿದೆ. ಇಂದ್ರನ ತೇಜಸ್ಸಿರುವ ಕಾರಣ ನಾನಿದನ್ನು ಸುಡಬೇಕೆನಿಸಿದರೂ ಸುಡಲಾರೆ. ನಾನಿದನ್ನು ಸುಡಹೊರಟರೆ ಇಂದ್ರನು ಮೋಡಗಳಿಂದ ಮಳೆಗರೆದುಬಿಡುವನೇ ಸರಿ. ಎಂದೇ ಇದನ್ನು ಸುಡಬಯಸಿದರೂ ಸುಡಲಾರೆ. ನೀವಿಬ್ಬರೂ ಅಸ್ತ್ರವಿದ್ಯೆಯನ್ನು ಬಲ್ಲವರು. ಅಸ್ತ್ರಜ್ಞರಾದ ತಮ್ಮ ಜೊತೆಗಾರಿಕೆಯಿದ್ದಲ್ಲಿ, ಈ ಖಾಂಡವವನ್ನು ದಹಿಸುವೆ. ನಾನು ಆಹಾರವನ್ನಾಗಿ ಕೇಳಿಕೊಳ್ಳುತಿರುವುದು ಇದನ್ನೇ. 

ತಾವಿಬ್ಬರೂ ಅಸ್ತ್ರವಿದರು. ತಮ್ಮ ಸಹಾಯದೊಂದಿಗೆ ಮೇಲಿಂದ ಬೀಳುವ ಜಲಧಾರೆಯನ್ನೂ ತಾವು ತಡೆಯಬೇಕು; ಪ್ರಾಣಿಗಳು ಓಡಿಹೋಗುವುದನ್ನೂ ತಡೆಯಬೇಕು" ಎಂದನು.

ಖಾಂಡವದ ಹಿಂದಿನ ಕಥೆಯೊಂದಿದೆ. ಹಿಂದೆ ಶ್ವೇತಕಿ ಎಂಬ ರಾಜನಿದ್ದ. ಇಂದ್ರನಿಗೆ ಸಮಾನವಾದ ಬಲ ಹಾಗೂ ಪರಾಕ್ರಮಗಳು ಅತನವು. ಅಂದಿನ ಕಾಲಕ್ಕೆ ಅವನ ಹಾಗೆ ಯಜ್ಞ ಮಾಡುವವನೂ ದಾನಶೀಲನೂ ಧೀಮಂತನೂ ಮತ್ತೊಬ್ಬನಿರಲಿಲ್ಲ. ಭಾರಿ ದಕ್ಷಿಣೆಗಳನ್ನಿತ್ತು ಆತನು ದೊಡ್ಡ ದೊಡ್ಡ ಯಜ್ಞಗಳನ್ನು ಮಾಡಿದ್ದನು. ದಿನದಿನಕ್ಕೂ ಆತನಿಗೆ ನಾನಾ ಯಜ್ಞಗಳನ್ನೂ ನಾನಾದಾನಗಳನ್ನೂ ಬಿಟ್ಟು ಬೇರಾವುದರ ಬಗ್ಗೆಯೂ ಬುದ್ಧಿಯೋಡುತ್ತಿರಲಿಲ್ಲ.

ಈ ಧೀಮಂತನು ಋತ್ವಿಕ್ಕುಗಳನ್ನಿಟ್ಟುಕೊಂಡು ಈ ಪರಿಯಲ್ಲಿ ಯಜ್ಞ ಮಾಡುತ್ತಿದ್ದನು. ಮತ್ತು ಆ ಋತ್ವಿಜರಾದರೂ ಯಜ್ಞ-ಧೂಮಗಳಿಂದ ಕಣ್ಣುಬೇನೆಗಳಿಗೊಳಗಾದರು! ಹೀಗೆಯೇ ಬಹುಕಾಲ ಕಳೆಯಿತು. ಖೇದದಿಂದ ಅವರು ರಾಜನನ್ನು ತೊರೆದುಹೋದರು. ಮತ್ತೆ ಯಜ್ಞಾರ್ಥವಾಗಿ ಆ ಋತ್ವಿಕ್ಕುಗಳನ್ನು ರಾಜನು ಪ್ರಚೋದಿಸಿದನಾದರೂ ಅವರು ಯಜ್ಞಕ್ಕೆ ಬರಲಿಲ್ಲ. ಕೊನೆಗೆ ಅವರುಗಳಿಂದಲೇ ಅನುಮತಿಯನ್ನು ಪಡೆದು, ಬೇರೆ ಋತ್ವಿಕ್ಕುಗಳನ್ನಿಟ್ಟುಕೊಂಡು ಆತನು ಯಜ್ಞಗಳನ್ನು ನಡೆಸಿದ.

ಕೆಲಕಾಲ ಕಳೆಯಿತು. ನೂರುವರ್ಷಗಳ ಕಾಲ ನಡೆಯುವ ಯಾಗವೊಂದನ್ನು ಮಾಡಬೇಕೆಂದು ಆತನು ಮನಸ್ಸು ಮಾಡಿದನು. ಆದರೆ ಅದಕ್ಕೆ ಯಾವ ಋತ್ವಿಕ್ಕುಗಳೂ ದೊರೆಯಲಿಲ್ಲ. ಮಹಾಪ್ರಯತ್ನವನ್ನೇ ರಾಜನು ಮಾಡಿದನು. ತನ್ನ ಮಿತ್ರರನ್ನೂ ಜೊತೆಮಾಡಿಕೊಂಡು ಹೋಗಿ. ಋತ್ವಿಕ್ಕುಗಳ ಪಾದಗಳಿಗೆರಗಿದನು, ಸಾಂತ್ವನದ ಮಾತುಗಳನ್ನಾಡಿದನು, ಬೇಜಾರನ್ನೇ ಮಾಡಿಕೊಳ್ಳದೆ ಮತ್ತೆ ಮತ್ತೆ ಅವರನ್ನು ಅನುನಯಗೊಳಿಸಿದನು. ಆದರೆ ಆತನ ಅನುನಯಕ್ಕೆ ಅವರು ಮಣಿಯಲಿಲ್ಲ.

ಕೋಪಗೊಂಡ ಆತನು ಆಶ್ರಮದಲ್ಲಿದ್ದ ವಿಪ್ರರನ್ನು ಕೇಳಿದನು: ನಾನೇನಾದರೂ ಪತಿತನಾಗಿದ್ದರೆ, ಅಥವಾ ತಮ್ಮ ಶುಶ್ರೂಷೆಯಲ್ಲಿ ನಿಷ್ಠನಾಗಿಲ್ಲದಿದ್ದರೆ, ನಿಮ್ಮ ತಿರಸ್ಕಾರಕ್ಕೆ ನಾನು ಯೋಗ್ಯನಾಗಬಹುದು, ತಾವು ನನ್ನನ್ನು ತ್ಯಜಿಸಬಹುದು. ಹಾಗಿಲ್ಲದಿರುವುದರಿಂದ ತಾವು ನನ್ನ ಯಜ್ಞಶ್ರದ್ಧೆಯನ್ನು ಕೆಡವುವುದು ಸರಿಯಲ್ಲ. ಹಾಗೆಯೇ ನನ್ನ ಅಪರಾಧವೆಂಬುದೇ ಇಲ್ಲದಿರುವಲ್ಲೂ ನನ್ನನ್ನು ತಾವು ಪರಿತ್ಯಜಿಸುವುದು ಸರಿಯಲ್ಲ. 

ನಾನು ನಿಮ್ಮಲ್ಲಿ ಶರಣಾಗಿದ್ದೇನೆ. ಹಾಗಿರಲು, ತಾವು ಪ್ರಸನ್ನರಾಗುವುದೇ ಉಚಿತವಲ್ಲವೇ?

ಸೂಚನೆ : 29/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 118 (Yaksha prashne 118)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  118 ಪುರುಷನೆಂದರೆ ಯಾರು?

ಉತ್ತರ - ಪುಣ್ಯಕರ್ಮದ ಕಾರಣದಿಂದ ಬರುವ ಯಾವ ಯಶಸ್ಸು ಎಂಬ ಶಬ್ದವು ಆಕಾಶ ಮತ್ತು ಭೂಮಿ ಎರಡನ್ನು ತಲುಪುತ್ತದೆಯೋ, ಆ ಯಶಸ್ಸು ಎಂಬ ಶಬ್ದ ಎಲ್ಲಿಯತನಕ ಇರುತ್ತದೆಯೋ, ಅಂತಹ ಆಕಾಶ ಮತ್ತು ಭೂಮಿಯನ್ನು ವ್ಯಾಪಿಸಿದ, ಆ ಶಬ್ದದ ಉತ್ಪತ್ತಿಯಿಂದ ಆರಂಭಿಸಿ ಲಯದವರೆಗಿನ ವ್ಯಾಪ್ತಿಯಿಂದ ಕೂಡಿದ ಕಾಲಕ್ಕೆ ವ್ಯಾಪಿಸಿದ ಮನುಷ್ಯನನ್ನೇ 'ಪುರುಷ' ಎಂದು ಕರೆಯುತ್ತಾರೆ.  

ಪುರುಷನು ಯಾರು? ಎಂಬ ಪ್ರಶ್ನೆಗೆ ಧರ್ಮರಾಜನು ದೀರ್ಘವಾದ ಉತ್ತರವನ್ನು ಕೊಟ್ಟಿದ್ದಾನೆ. ಯಶಸ್ಸಿಗೆ ಬೇಕಾದ ಕರ್ಮವನ್ನು ಯಾರು ಮಾಡಿರುತ್ತಾನೋ ಅವನನ್ನು ಜನರು ಕೊಂಡಾಡುತ್ತಾರೆ. ಜನರ ಮಾತು ಮತ್ತು ಮನಸ್ಸುಗಳಲ್ಲಿ ಆ ವ್ಯಕ್ತಿ ಮನೆಮಾಡಿರುತ್ತಾನೆ. ಒಬ್ಬನಿಂದ ಮತ್ತೊಬ್ಬನಿಗೆ ಹೀಗೆ ಯಶೋಗಾಥೆಯು ಮುಂದಿನ ಪೀಳಿಗೆಯ ಜನರಿಗೆ ಪಸರಿಸುತ್ತಾ ಸಾಗುತ್ತದೆ. ಇಂತಿಹ ಅತಿವಿಶಿಷ್ಟವ್ಯಕ್ತಿಯನ್ನು ಈ ಭೂಮಿಯಲ್ಲಿರುವ ಜನಸಮೂಹವು ಗುರುತಿಸುತ್ತಾ, ಸ್ತುತಿಸುತ್ತಾ ಇರುತ್ತದೆ. ಈ ಯಶೋಗಾಥೆಯು ಪಸರಿಸಿ ಪಸರಿಸಿ ಕೇವಲ ಭೂಮಿಯನ್ನು ಮಾತ್ರ ವ್ಯಾಪಿಸದು; ಅದು ಅಂತರಿಂಕ್ಷ ಅಲ್ಲ, ಸಪ್ತ ಊರ್ಧ್ವಲೋಕಗಳನ್ನು ವ್ಯಾಪಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅಂದರೆ ಯಶೋಗಾಥೆಯ ಶಬ್ದವು ಭೂಮಿ ಅಂತರಿಕ್ಷ ಎಲ್ಲವನ್ನೂ ವ್ಯಾಪಿಸುತ್ತದೆ ಎಂದರ್ಥ. 

ಈ ಉತ್ತರದಲ್ಲಿ ಅನೇಕ ಮಾರ್ಮಿಕವಾದ ವಿಷಯ ಅಡಗಿದೆ; ಜೊತೆಯಲ್ಲಿ ಶಾಸ್ತ್ರೀಯವಾದ ಅಂಶವೂ ಸೇರಿದೆ. ಶಬ್ದವು ಆಕಾಶದಲ್ಲಿ ಹುಟ್ಟುತ್ತದೆ, ಏಕೆಂದರೆ ಅದು ಆಕಾಶದ ಗುಣವಾಗಿದೆ. ಎಲ್ಲೆಲ್ಲಿ ಆಕಾಶವೆಂಬ ಅವಕಾಶವಿರುತ್ತದೆಯೋ ಅಲ್ಲೆಲ್ಲಾ ಶಬ್ದವು ಉಂಟಾಗುತ್ತದೆ. ಹಾಗಾಗಿ ಶಬ್ದವನ್ನು ಆಕಾಶಗುಣ ಎಂದು ಶಾಸ್ತ್ರದಲ್ಲಿ ಗುರುತಿಸಲಾಗಿದೆ. ಮತ್ತು ಆಕಾಶ ಎಲ್ಲೆಲ್ಲಿ ಇರುತ್ತದೆಯೋ ಅಲ್ಲೆಲ್ಲ ಶಬ್ದವು ಇರುತ್ತದೆ ಎಂಬುದು ತಾತ್ಪರ್ಯವಾಗಿದೆ. ಆಕಾಶವು ಭೂಮಿಯಲ್ಲಿ ಮಾತ್ರವಿಲ್ಲೆದೇ ಅವಕಾಶವೆಂಬ ಶಬ್ದ ವ್ಯಾಪಿಸಲು ಬೇಕಾದ ಅನುಕೂಲತೆ ಇರುವಡೆಯೆಲ್ಲಾ ಅಂದರೆ ಚತುರ್ದಶ ಲೋಕಗಳನ್ನು ವ್ಯಾಪಿಸಿದ್ದರಿಂದ ಆ ಸ್ಥಳಗಳೆಲ್ಲೆಲ್ಲ ವ್ಯಾಪಿಸುವ ಅವಕಾಶ ಈ ಶಬ್ದಕ್ಕಿದೆ. ಒಬ್ಬ ವ್ಯಕ್ತಿಗೆ ಸಂಬಂಧಪಟ್ಟ ಯಶಸ್ಸಿನ ಕಥನವು ಶಬ್ದರೂಪವನ್ನು ತಾಳುತ್ತದೆ. ಅದರ ಪರಿಣಾಮವಾಗಿ ಆ ಶಬ್ದವು ಭೂಮಿ ಅಂತರಿಕ್ಷ ದ್ಯುಲೋಕಗಳನ್ನೆಲ್ಲಾ ವ್ಯಾಪಿಸುತ್ತದೆ. ಆದ್ದರಿಂದ ಅಂತಹ ವ್ಯಕ್ತಿಯನ್ನು ಭೂಮಿಯಲ್ಲಿ ಮಾತ್ರ ಕೊಂಡಾಡದೆ ದೇವತೆಗಳು ಸ್ತುತಿಸುತ್ತಾರೆ. ಇದು ಆ ಪುರುಷನ ವ್ಯಕ್ತಿತ್ವಕ್ಕೆ ಕೊಡುವ ಗೌರವ - ಆದರವಷ್ಟೇ. 

ಶಬ್ದದ ಉತ್ಪತ್ತಿಯಿಂದ ಹಿಡಿದು ಲಯದವರೆಗಿನ ಎಷ್ಟು ಕಾಲ ಘಟಿಸುತ್ತದೆಯೋ ಆ ಕಾಲಮಾನಕ್ಕೆ ಯಾವ ವ್ಯಕ್ತಿ ಅಥವಾ ಪುರುಷನ ಸಂಬಂಧವು ಉಂಟಾಗುತ್ತದೆಯೋ ಅವನನ್ನೇ ನಿಜವಾಗಲೂ ಪುರುಷ ಎನ್ನಬೇಕು ಎಂದು ಧರ್ಮರಾಜನು ಉತ್ತರವನ್ನು ಕೊಡುತ್ತಾನೆ. ಅಂದರೆ ಶಬ್ದದ ಉತ್ಪತಿ ವಿನಾಶದ ಕಾಲವು ಅಷ್ಟು ಕ್ಷಣಿಕವಲ್ಲ; ಅದು ಅಗಣಿತಕಾಲವನ್ನು ವ್ಯಾಪಿಸಿದ ಕುರುಹು ಎಂಬ ಅರ್ಥ ಇದರಿಂದ ಲಭಿಸುತ್ತದೆ. ಶಬ್ದವು ಕ್ಷಣಿಕವಾದುದು. ಅದು ಮೂರು ಕ್ಷಣಮಾತ್ರ ಇರುವ ಸ್ವಭಾವ ಉಳ್ಳದ್ದು ಎಂದು ಕೆಲವರು ಹೇಳುತ್ತಾರೆ. ಇನ್ನು ಕೆಲವರು ಶಬ್ದವು ನಿತ್ಯವಾದುದು ಎನ್ನುತ್ತಾರೆ. ಆದರೂ ಉತ್ಪನ್ನವಾದ ಯಾವ ಶಬ್ದವಿರುತ್ತದೆಯೋ ಅದಕ್ಕೆ ನಾಶ ಎಂಬುದೂ ಅಷ್ಟೇ ನಿಶ್ಚಿತ. ಅಂದರೆ ಇಲ್ಲಿ ಹೇಳಿದ ಶಬ್ದವು ಶಬ್ದದಿಂದ ಶಬ್ದವು ಉಂಟಾಗಿ ಸಮುದ್ರದ ತೆರೆಯಂತೆ ಇರುವ ಶಬ್ದವನ್ನು ಹೇಳುವಂತಹದ್ದು. ಅಂದರೆ ಇಲ್ಲಿನ ಯಶಸ್ಸು ಎಂಬ ಶಬ್ದತರಂಗವು ಪುರುಷನ ಕಾಲಮಾನವನ್ನು ವ್ಯಾಪಿಸಿದೆ ಎಂದು ಹೇಳಬಹುದು. ಆದರೆ ಪುರುಷನ ಮಾನ ಎಷ್ಟು ಎಂಬುದಕ್ಕೆ ಯಾವುದು ಮಾನ? ಎಂಬ ಬಗ್ಗೆ ತಿಳಿಯಬೇಕಾಗಿದೆ. ಶ್ರೀರಂಗ ಮಹಾಗುರುವು ಹೇಳುವಂತೆ ಒಂದು ವ್ಯಕ್ತಿಯ ಜೀವಮಾನವೆಂದರೆ ಆತ್ಮವು ಜೀವಭಾವವನ್ನು ತಳೆದು ಜೀವನವ್ಯಾಪಾರವನ್ನು ಮಾಡಿ ಜೀವಭಾವವನ್ನು ಕಳೆಯುವ ಕಾಲವೇ ಜೀವನ, ಅಷ್ಟು ಕಾಲವನ್ನು ವ್ಯಾಪಿಸಿದ ಜೀವಿಯನ್ನೇ ಪುರುಷ ಎಂದು ಕರೆಯುವುದು.    

ಸೂಚನೆ : 29/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, December 22, 2024

ವ್ಯಾಸ ವೀಕ್ಷಿತ 116 ಕೃಷ್ಣಾರ್ಜುನರ ಯಮುನಾವಿಹಾರ, ವಿಲಕ್ಷಣ-ವಿಪ್ರಾಗಮನ (Vyaasa Vikshita 116 Krishnarjunara Yamunavihara, Vilakshana-vipragamana}

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಯಮುನೆಗೆ ಹೋಗಿ, ಮಿತ್ರರೊಂದಿಗೆ ವಿಹರಿಸಿ, ಸಂಜೆಯ ಹೊತ್ತಿಗೆ ಹಿಂದಿರುಗಿಬಿಡೋಣವಂತೆ – ಎಂಬುದಾಗಿ ಅರ್ಜುನನು ಕೃಷ್ಣನಲ್ಲಿ ಕೇಳಿಕೊಂಡನು . ಅದಕ್ಕೆ ಕೃಷ್ಣನೂ "ಕುಂತೀಪುತ್ರನೇ, ನನಗೂ ಇದು ಇಷ್ಟವೇ. ಮಿತ್ರರೊಂದಿಗೆ ಹೋಗಿ ಜಲ-ವಿಹಾರವನ್ನು ಯಥೇಚ್ಛವಾಗಿ ಮಾಡುವಾ" - ಎಂದನು.


ಧರ್ಮರಾಜನ ಅನುಮತಿಯನ್ನು ಪಡೆದವರಾಗಿ, ಮಿತ್ರರಿಂದ ಸುತ್ತುವರೆಯಲ್ಪಟ್ಟು, ಪಾರ್ಥ-ಗೋವಿಂದರು ತೆರಳಿದರು. ಅಂತೂ ಕೃಷ್ಣನೂ, ಅಂತಃಪುರದಿಂದೊಡಗೂಡಿದ ಅರ್ಜುನನೂ, ಆ ವಿಹಾರಭೂಮಿಗೆ ಬಂದರು.


ಅಲ್ಲಿ ಅನೇಕ ಮರಗಳಿದ್ದವು. ಸಣ್ಣ-ದೊಡ್ಡ ಗೃಹಗಳು ಅನೇಕವಾಗಿ ಅಲ್ಲಿದ್ದು, ಅದು ಪುರಂದರ-ಪುರದಂತೆ, ಎಂದರೆ ಇಂದ್ರನ ಅಮರಾವತಿಯ ಹಾಗೆ, ತೋರುತ್ತಿತ್ತು. ಅಲ್ಲಿ ಬಹಳ ಬೆಲೆಯಾಗುವ ಭಕ್ಷ್ಯ-ಭೋಜ್ಯಗಳಿದ್ದುವು. ರಸಭರಿತವಾದ ಪೇಯಗಳಿದ್ದವು. ವಿವಿಧವಾದ ಗಂಧಗಳಿಂದ ಕೂಡಿದ್ದ ಮಾಲೆಗಳಿದ್ದವು.


ಬಗೆಬಗೆಯಾದ ರತ್ನಗಳಿಂದ ಶೋಭಿಸುತ್ತಿದ್ದ ಅಂತಃಪುರ-ಸ್ತ್ರೀಯರೂ ಒಳಗೆ ಪ್ರವೇಶಿಸಿದರು. ಜನರೆಲ್ಲರೂ ಯಥೇಚ್ಛವಾಗಿ ಕ್ರೀಡಿಸಿದರು. ವಿಪುಲವಾದ ನಿತಂಬ ಹಾಗೂ ಸುಂದರವಾದ ಉರೋಜವುಳ್ಳವರೂ ಆಗಿದ್ದು, ಯೌವನ-ಮದದಿಂದಾಗಿ ಮಂದ-ಗತಿಯುಳ್ಳವರೂ ಆದ, ರಮಣಿಯರು ಅಲ್ಲಿ ಕ್ರೀಡಿಸಿದರು.


ಕೆಲವರು ವನದಲ್ಲಿ ಕ್ರೀಡಿಸಿದರು ಕೆಲವರು ಜಲದಲ್ಲಿ ಆಟವಾಡಿದರು. ಕೆಲವರು ಮನೆಯೊಳಗೇ ಆಡಿದರು - ಎಲ್ಲರೂ ತಮ್ಮ ತಮ್ಮ ಯೋಗ್ಯತಾನುಸಾರಿಯಾಗಿಯೂ ಸ್ವಸಂತೋಷಾನುಸಾರಿಯಾಗಿಯೂ ರಮಿಸಿದರು. ಯೌವನ-ಮದ-ಭರಿತರಾದ ದ್ರೌಪದೀ-ಸುಭದ್ರೆಯರು ಅನೇಕ-ವಸ್ತ್ರಗಳನ್ನೂ ಆಭರಣಗಳನ್ನೂ ದಾನವಾಗಿತ್ತರು.


ಹರ್ಷಾತಿರೇಕದಿಂದ ಕೆಲವು ನಾರಿಯರು ನರ್ತಿಸಿದರು. ಮತ್ತೆ ಕೆಲವರು ಕಿರುಚಿದರು. ಕೆಲವರು ನಕ್ಕರು. ಮತ್ತೆ ಕೆಲವರು ಹಾಡಿದರು. ಒಬ್ಬರನ್ನೊಬ್ಬರು ತಡೆಹಿಡಿದು ಹಗುರವಾಗಿ ಹೊಡೆದಾಡಿದರು. ಮತೆ ಕೆಲವರು ತಮ್ಮ ತಮ್ಮ ಗುಟ್ಟುಗಳನ್ನು ಪರಸ್ಪರ ಹೇಳಿಕೊಂಡರು. ಸಮೃದ್ಧಿ-ಸಂಪನ್ನವಾಗಿದ್ದ ಆ ರಾಜ-ಭವನವು ಎಲ್ಲೆಡೆ ಮನೋಹರವಾದ ವೇಣು-ವೀಣೆ-ಮೃದಂಗಗಳ ಶಬ್ದದಿಂದ ತುಂಬಿಹೋಯಿತು.


ಹೀಗೆ ಇವೆಲ್ಲ ನಡೆಯುತ್ತಿರಲು, ಕೃಷ್ಣಾರ್ಜುನರು ಬಹಳ ಮನೋಹರವಾದ ಸ್ಥಾನವೊಂದಕ್ಕೆ ಹೋದರು. ಇಬ್ಬರೂ ಶತ್ರು-ಪುರಗಳನ್ನು ಜಯಿಸುವ ವೀರರು, ಮಹಾತ್ಮರು.  ಬಹಳ ಬೆಲೆಬಾಳುವ ಆಸನಗಳಲ್ಲಿ ಅವರು ಆಸೀನರಾದರು. ಹಿಂದೆ ಘಟಿಸಿದ ತಮ್ಮ ಪರಾಕ್ರಮಗಳ ಪ್ರಸಂಗಗಳನ್ನೂ ಇನ್ನಿತರ ವಿಷಯಗಳನ್ನೂ ಪರಸ್ಪರ ಬಹಳವಾಗಿ ಹೇಳಿಕೊಳ್ಳುತ್ತಾ ಸಂತೋಷಿಸಿದರು. ಸ್ವರ್ಗಲೋಕದಲ್ಲಿ ಅಶ್ವಿನೀ-ಕುಮಾರರು ಹೇಗೋ ಹಾಗೆ ಅವರಿಬ್ಬರೂ ಮೋದದಿಂದ ಕೂಡಿ ಕುಳಿತಿದ್ದರು.


ಹಾಗಿರುವಾಗ, ಬ್ರಾಹ್ಮಣನೊಬ್ಬನು ಅಲ್ಲಿಗೆ ಬಂದನು. ಅತನು ದೊಡ್ಡ ಶಾಲ-ವೃಕ್ಷದ ಹಾಗೆ ಎತ್ತರವಾಗಿದ್ದನು. ಚೆನ್ನಾಗಿ ಕಾಯಿಸಿದ ಚಿನ್ನದ ಹಾಗಿರುವ ಪ್ರಭೆಯಿಂದ ಕೂಡಿದವನಾಗಿದ್ದನು. ನೀಲವರ್ಣ-ಪೀತವರ್ಣಗಳ ಗಡ್ಡಮೀಸೆಗಳನ್ನು ಹೊಂದಿದ್ದನು. ತನ್ನ ಎತ್ತರಕ್ಕೆ ಸರಿಸಮನಾಗಿ ದಪ್ಪಗೂ ಇದ್ದನು. ಎಳೆಯ ಸೂರ್ಯನಂತೆ ಕಂಗೊಳಿಸುತ್ತಿದ್ದನು. ಚೀರವಸ್ತ್ರವನ್ನು ಧರಿಸಿದ್ದನು. ಜಟಾ-ಧಾರಿಯಾಗಿದ್ದನು. ಕಮಲದಂತಿರುವ ಮುಖ, ಪಿಂಗಳವರ್ಣದ ಕಾಂತಿ, ಆತನದು. ತನ್ನ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದನೋ ಎಂಬಂತಿದ್ದನು.


ಆತನು ಕೃಷ್ಣಾರ್ಜುನರ ಬಳಿ ಬರಲು, ಆತನನ್ನು ಆದರಿಸುತ್ತಾ, ಕೃಷ್ಣಾರ್ಜುನರು ತಮ್ಮ ಆಸನದಿಂದ ಥಟ್ಟನೆ ಎದ್ದು ನಿಂತರು.


ಕೃಷ್ಣಾರ್ಜುನರು ಖಾಂಡವ-ವನದ ಬಳಿ ನಿಂತಿದ್ದ ಆ ಸಮಯದಲ್ಲಿ, ಅವರನ್ನು ಕುರಿತು ಆತನು, "ಅಧಿಕ-ಭೋಜನಮಾಡುವ ಬ್ರಾಹ್ಮಣ ನಾನು. ಸದಾ ಅಪರಿಮಿತವಾಗಿ ತಿನ್ನತಕ್ಕವನು. ಕೃಷ್ಣಾರ್ಜುನರೇ, ನಾನು ನಿಮ್ಮಲ್ಲಿ ಬೇಡುತ್ತಿದ್ದೇನೆ. ಒಮ್ಮೆ ನನಗೆ ತೃಪ್ತಿಯಾಗುವಷ್ಟು ಭೋಜನ ಮಾಡಿಸಿ!" ಎಂದನು.

ಸೂಚನೆ : 22/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


Thursday, December 19, 2024

ಯಕ್ಷ ಪ್ರಶ್ನೆ 117 (Yaksha prashne 117)

 

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)




ಪ್ರಶ್ನೆ –  116 ಯಾವುದು ಮಾರ್ಗ?

ಉತ್ತರ - ತರ್ಕ ನಿಲ್ಲದು, ವೇದಗಳು ಹಲವು, ಋಷಿಗಳು ಅನೇಕರು; ಹಾಗಾಗಿ ವಿಭಿನ್ನವಾದ ಅವರ ಮಾತೂ ಪ್ರಮಾಣವಲ್ಲ, ಧರ್ಮದ ಮರ್ಮವು ತಿಳಿಯಲು ಕಷ್ಟಸಾಧ್ಯ, ಶಿಷ್ಟರು ನಡೇದದ್ದೇ ದಾರಿ.

ಧರ್ಮ ಎಂದರೇನು? ಎಂಬ ವಿಷಯದ ಬಗ್ಗೆ ಈ ಹಿಂದೆ ಅನೇಕ ಲೇಖನಗಳಲ್ಲಿ ವಿವರವಾಗಿ ಪ್ರಸ್ತುತಪಡಿಸಲಾಗಿದೆ. ಧರ್ಮವು ಅತ್ಯಂತ ಸೂಕ್ಷ್ಮವಾದುದು, ಕಣ್ಣಿಗೆ ಅದು ಗೋಚರಿಸದು. ಹಾಗಾದರೆ ಅದರ ಅಸ್ತಿತ್ವವನ್ನು ತಿಳಿಯಲು ಏನು ಮಾಡಬೇಕು? ಯಾವುದು ಪ್ರಮಾಣ? ಯಾವುದು ಮಾರ್ಗ? ಎಂಬ ವಿಷಯವನ್ನು ಅಧಿಕರಿಸಿ ಯಕ್ಷನು ಈ ಪ್ರಶ್ನೆಯಲ್ಲಿ ಕೇಳುತ್ತಾನೆ, ಅದಕ್ಕೆ ಧರ್ಮಜನ ಉತ್ತರ ಬಹಳ ಸ್ಪಷ್ಟವಾಗಿದೆ. ಧರ್ಮವು ಯಾವುದೇ ವಿಚಾರ ಮಂಥನಗಳಿಗೆ ನಿಲುಕುವುದಲ್ಲ; ವೇದಗಳು ನಾಲ್ಕು ಇರಬಹುದು; ಆದರೆ ಈ ವೇದಗಳಿಂದಲೂ ಕೂಡ ಧರ್ಮವನ್ನು ತಿಳಿಯುವುದು ಕಷ್ಟವಾಗಬಹುದು. ಅಷ್ಟೇಕೆ ಧರ್ಮವನ್ನು - ಧರ್ಮದ ವಿಚಾರವನ್ನು ತಿಳುಹಿಸಲು ಅನೇಕ ಸ್ಮೃತಿಗ್ರಂಥಗಳು ಬಂದಿವೆ, ಅನೇಕ ಶಾಸ್ತ್ರಗ್ರಂಥಗಳು ಬಂದಿವೆ. ಆದರೆ ಆ ಎಲ್ಲಾ ಗ್ರಂಥಗಳು ಅನೇಕ ಋಷಿಗಳಿಂದ ಪ್ರಣೀತವಾಗಿವೆ. ವ್ಯಕ್ತಿಗಳಿಂದ ಪ್ರಣೀತವಾದ ಗ್ರಂಥಗಳಿಂದಲೂ ಕೂಡ ಈ ಧರ್ಮದ ವಿಷಯವನ್ನು ತಿಳಿಯಲು ಕಷ್ಟ ಸಾಧ್ಯ ಎಂಬುದಾಗಿ ಹೇಳುತ್ತಾನೆ. ಹಾಗಾದರೆ ಧರ್ಮವನ್ನು ತಿಳಿಯುವುದು ಹೇಗೆ? ಎಂದರೆ ಶಿಷ್ಟರು - ಮಹಾಜನರು - ಋಷಿಜನರು ಅಥವಾ ವೇದ, ಶಾಸ್ತ್ರ, ಪುರಾಣ ಪುಣ್ಯ, ಜನ್ಮ ಮುಂತಾದ ವಿಷಯಗಳಲ್ಲಿ  ಆಸ್ತಿಕ್ಯಬುದ್ಧಿ ಇರುವ ಯಾವ ಮಹಾಪುರುಷರು ಇರುತ್ತಾರೋ, ಅವರು ಯಾವುದನ್ನು ಆಚರಣೆ ಮಾಡುತ್ತಾರೋ, ಅದನ್ನೇ 'ಧರ್ಮಮಾರ್ಗ' ಎಂಬುದಾಗಿ ತಿಳಿಯಬೇಕು ಎಂಬ ಉತ್ತರವನ್ನು ಇಲ್ಲಿ ಕೊಡುತ್ತಾನೆ. ಅಂದರೆ ಧರ್ಮಕ್ಕೆ ಪ್ರಮಾಣ ಯಾವುದು? ಎಂದರೆ "ಆಚಾರವೇ ಧರ್ಮಕ್ಕೆ ಮಾರ್ಗ" ಎಂಬುದು ಈ ಪ್ರಶ್ನೆಯಲ್ಲಿ ಅಡಕವಾದ ವಿಶೇಷ ಅಂಶವಾಗಿದೆ.

 ಧರ್ಮದ ತತ್ತ್ವವು ಅತ್ಯಂತ ಸೂಕ್ಷ್ಮವಾದದ್ದು, ಆದರೂ ಅದು ತಿಳಿಯಲೇಬೇಕಾದುದು. ಆದ್ದರಿಂದ ಅದನ್ನರಿಯುವ ಸಾಧನವು ನಮ್ಮ ಇಂದ್ರಿಯಗಳಿಗೂ ಗೋಚರವಾಗುವ ರೀತಿಯಲ್ಲಿ ಇರಬೇಕಾಗುತ್ತದೆ. ಅಂತಹ ಸಾಧನ ಯಾವುದೆಂದರೆ ಅದನ್ನೇ ಧರ್ಮದ ಆಚರಣೆ ಎಂಬುದಾಗಿ ಕರೆಯುತ್ತಾರೆ. ಈ ಹಿಂದಿನ ಲೇಖನದಲ್ಲಿ ಧರ್ಮದ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಆದರೂ ಪ್ರಸ್ತುತ ವಿಷಯಕ್ಕೆ ಒಮ್ಮೆ ಅದರ ಅನುಸಂಧಾನ ಅಗತ್ಯ ಎಂಬುದಾಗಿ ತಿಳಿದು ಧರ್ಮದ ಬಗೆಗಿನ ಒಂದು ವಾಕ್ಯವನ್ನು ಇಲ್ಲಿ ತಿಳಿಸಲಾಗಿದೆ. ಅದರದರ ಸಹಜತೆಯನ್ನು ಧರ್ಮ ಎಂದು ಕರೆದು, ಅಂತಹ ಸಹಜತೆಯನ್ನು ಉಳಿಸುವ ಯಾವ ಆಚರಣೆ ಇದೆಯೋ ಅದನ್ನು ಕೂಡ ಧರ್ಮ ಎಂಬುದಾಗಿ ಕರೆಯಲಾಗುತ್ತದೆ. ಹಾಗಾಗಿ ಅತ್ಯಂತ ಸೂಕ್ಷ್ಮವಾದ ಧರ್ಮವನ್ನು ತಿಳಿಯಬೇಕಾದರೆ ಧರ್ಮದ ಆಚರಣೆಯಿಂದ ಮಾತ್ರ ಸಾಧ್ಯ ಎಂಬುದು ಇದರ ಚರಿತಾರ್ಥವಾಗಿದೆ. ವೇದಗಳು, ಅವುಗಳನ್ನೇ ಅನುಸರಿಸಿ ಅಂತೆಯೇ ತಪ್ಪಸಿನಿಂದ ಋಷಿಗಳು ತಮ್ಮ ಬುದ್ಧಿಯಲ್ಲಿ ಧರಿಸಿದ ಸ್ಮೃತಿಗಳು,  ಸದಾಚಾರ, ತನಗೆ ಅತ್ಯಂತ ಪ್ರಿಯವಾದದ್ದು, ಸತ್ಕಂಕಲ್ಪದಿಂದ ಹುಟ್ಟಿದ್ದ ಆಶೆ ಇವುಗಳನ್ನು ಧರ್ಮಕ್ಕೆ ಮೂಲ ಎಂದು ತಿಳಿಯಬೇಕು ಎಂದು ಯಾಜ್ಞವಲ್ಕ್ಯಸ್ಮೃತಿಯಲ್ಲಿ ಹೇಳಲಾಗಿದೆ. ಇದರ ಜೊತೆಗೆ ಅಧ್ಯಾತ್ಮಜ್ಞಾನವಿದನಾದ ಒಬ್ಬನೇ ಒಬ್ಬನು ಏನನ್ನು ಹೇಳುತ್ತಾನೋ ಅದನ್ನು ಧರ್ಮಮಾರ್ಗ ಅಂದು ತಿಳಿಯಬೇಕು ಎಂದೂ ಹೇಳಿದ್ದಾರೆ. ಒಟ್ಟಾರೆ ಹೇಳುವುದಾದರೆ ಯಾವುದರಿಂದ ಆತ್ಮಜ್ಞಾನ ಪ್ರಾಪ್ತವಾಗುತ್ತದೆಯೋ ಅದನ್ನು ಧರ್ಮ ಎನ್ನುತ್ತಾರೆ. 

ಸೂಚನೆ : 08/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, December 17, 2024

ಯಕ್ಷ ಪ್ರಶ್ನೆ 118 (Yaksha prashne 118)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  116 ಯಾವುದು ಮಾರ್ಗ?

ಉತ್ತರ - ತರ್ಕ ನಿಲ್ಲದು, ವೇದಗಳು ಹಲವು, ಋಷಿಗಳು ಅನೇಕರು; ಹಾಗಾಗಿ ವಿಭಿನ್ನವಾದ ಅವರ ಮಾತೂ ಪ್ರಮಾಣವಲ್ಲ, ಧರ್ಮದ ಮರ್ಮವು ತಿಳಿಯಲು ಕಷ್ಟಸಾಧ್ಯ, ಶಿಷ್ಟರು ನಡೇದದ್ದೇ ದಾರಿ.

ಧರ್ಮ ಎಂದರೇನು? ಎಂಬ ವಿಷಯದ ಬಗ್ಗೆ ಈ ಹಿಂದೆ ಅನೇಕ ಲೇಖನಗಳಲ್ಲಿ ವಿವರವಾಗಿ ಪ್ರಸ್ತುತಪಡಿಸಲಾಗಿದೆ. ಧರ್ಮವು ಅತ್ಯಂತ ಸೂಕ್ಷ್ಮವಾದುದು, ಕಣ್ಣಿಗೆ ಅದು ಗೋಚರಿಸದು. ಹಾಗಾದರೆ ಅದರ ಅಸ್ತಿತ್ವವನ್ನು ತಿಳಿಯಲು ಏನು ಮಾಡಬೇಕು? ಯಾವುದು ಪ್ರಮಾಣ? ಯಾವುದು ಮಾರ್ಗ? ಎಂಬ ವಿಷಯವನ್ನು ಅಧಿಕರಿಸಿ ಯಕ್ಷನು ಈ ಪ್ರಶ್ನೆಯಲ್ಲಿ ಕೇಳುತ್ತಾನೆ, ಅದಕ್ಕೆ ಧರ್ಮಜನ ಉತ್ತರ ಬಹಳ ಸ್ಪಷ್ಟವಾಗಿದೆ. ಧರ್ಮವು ಯಾವುದೇ ವಿಚಾರ ಮಂಥನಗಳಿಗೆ ನಿಲುಕುವುದಲ್ಲ; ವೇದಗಳು ನಾಲ್ಕು ಇರಬಹುದು; ಆದರೆ ಈ ವೇದಗಳಿಂದಲೂ ಕೂಡ ಧರ್ಮವನ್ನು ತಿಳಿಯುವುದು ಕಷ್ಟವಾಗಬಹುದು. ಅಷ್ಟೇಕೆ ಧರ್ಮವನ್ನು - ಧರ್ಮದ ವಿಚಾರವನ್ನು ತಿಳುಹಿಸಲು ಅನೇಕ ಸ್ಮೃತಿಗ್ರಂಥಗಳು ಬಂದಿವೆ, ಅನೇಕ ಶಾಸ್ತ್ರಗ್ರಂಥಗಳು ಬಂದಿವೆ. ಆದರೆ ಆ ಎಲ್ಲಾ ಗ್ರಂಥಗಳು ಅನೇಕ ಋಷಿಗಳಿಂದ ಪ್ರಣೀತವಾಗಿವೆ. ವ್ಯಕ್ತಿಗಳಿಂದ ಪ್ರಣೀತವಾದ ಗ್ರಂಥಗಳಿಂದಲೂ ಕೂಡ ಈ ಧರ್ಮದ ವಿಷಯವನ್ನು ತಿಳಿಯಲು ಕಷ್ಟ ಸಾಧ್ಯ ಎಂಬುದಾಗಿ ಹೇಳುತ್ತಾನೆ. ಹಾಗಾದರೆ ಧರ್ಮವನ್ನು ತಿಳಿಯುವುದು ಹೇಗೆ? ಎಂದರೆ ಶಿಷ್ಟರು - ಮಹಾಜನರು - ಋಷಿಜನರು ಅಥವಾ ವೇದ, ಶಾಸ್ತ್ರ, ಪುರಾಣ ಪುಣ್ಯ, ಜನ್ಮ ಮುಂತಾದ ವಿಷಯಗಳಲ್ಲಿ  ಆಸ್ತಿಕ್ಯಬುದ್ಧಿ ಇರುವ ಯಾವ ಮಹಾಪುರುಷರು ಇರುತ್ತಾರೋ, ಅವರು ಯಾವುದನ್ನು ಆಚರಣೆ ಮಾಡುತ್ತಾರೋ, ಅದನ್ನೇ 'ಧರ್ಮಮಾರ್ಗ' ಎಂಬುದಾಗಿ ತಿಳಿಯಬೇಕು ಎಂಬ ಉತ್ತರವನ್ನು ಇಲ್ಲಿ ಕೊಡುತ್ತಾನೆ. ಅಂದರೆ ಧರ್ಮಕ್ಕೆ ಪ್ರಮಾಣ ಯಾವುದು? ಎಂದರೆ "ಆಚಾರವೇ ಧರ್ಮಕ್ಕೆ ಮಾರ್ಗ" ಎಂಬುದು ಈ ಪ್ರಶ್ನೆಯಲ್ಲಿ ಅಡಕವಾದ ವಿಶೇಷ ಅಂಶವಾಗಿದೆ.

 ಧರ್ಮದ ತತ್ತ್ವವು ಅತ್ಯಂತ ಸೂಕ್ಷ್ಮವಾದದ್ದು, ಆದರೂ ಅದು ತಿಳಿಯಲೇಬೇಕಾದುದು. ಆದ್ದರಿಂದ ಅದನ್ನರಿಯುವ ಸಾಧನವು ನಮ್ಮ ಇಂದ್ರಿಯಗಳಿಗೂ ಗೋಚರವಾಗುವ ರೀತಿಯಲ್ಲಿ ಇರಬೇಕಾಗುತ್ತದೆ. ಅಂತಹ ಸಾಧನ ಯಾವುದೆಂದರೆ ಅದನ್ನೇ ಧರ್ಮದ ಆಚರಣೆ ಎಂಬುದಾಗಿ ಕರೆಯುತ್ತಾರೆ. ಈ ಹಿಂದಿನ ಲೇಖನದಲ್ಲಿ ಧರ್ಮದ ಬಗ್ಗೆ ವಿವರಣೆಯನ್ನು ನೀಡಲಾಗಿದೆ. ಆದರೂ ಪ್ರಸ್ತುತ ವಿಷಯಕ್ಕೆ ಒಮ್ಮೆ ಅದರ ಅನುಸಂಧಾನ ಅಗತ್ಯ ಎಂಬುದಾಗಿ ತಿಳಿದು ಧರ್ಮದ ಬಗೆಗಿನ ಒಂದು ವಾಕ್ಯವನ್ನು ಇಲ್ಲಿ ತಿಳಿಸಲಾಗಿದೆ. ಅದರದರ ಸಹಜತೆಯನ್ನು ಧರ್ಮ ಎಂದು ಕರೆದು, ಅಂತಹ ಸಹಜತೆಯನ್ನು ಉಳಿಸುವ ಯಾವ ಆಚರಣೆ ಇದೆಯೋ ಅದನ್ನು ಕೂಡ ಧರ್ಮ ಎಂಬುದಾಗಿ ಕರೆಯಲಾಗುತ್ತದೆ. ಹಾಗಾಗಿ ಅತ್ಯಂತ ಸೂಕ್ಷ್ಮವಾದ ಧರ್ಮವನ್ನು ತಿಳಿಯಬೇಕಾದರೆ ಧರ್ಮದ ಆಚರಣೆಯಿಂದ ಮಾತ್ರ ಸಾಧ್ಯ ಎಂಬುದು ಇದರ ಚರಿತಾರ್ಥವಾಗಿದೆ. ವೇದಗಳು, ಅವುಗಳನ್ನೇ ಅನುಸರಿಸಿ ಅಂತೆಯೇ ತಪ್ಪಸಿನಿಂದ ಋಷಿಗಳು ತಮ್ಮ ಬುದ್ಧಿಯಲ್ಲಿ ಧರಿಸಿದ ಸ್ಮೃತಿಗಳು,  ಸದಾಚಾರ, ತನಗೆ ಅತ್ಯಂತ ಪ್ರಿಯವಾದದ್ದು, ಸತ್ಕಂಕಲ್ಪದಿಂದ ಹುಟ್ಟಿದ್ದ ಆಶೆ ಇವುಗಳನ್ನು ಧರ್ಮಕ್ಕೆ ಮೂಲ ಎಂದು ತಿಳಿಯಬೇಕು ಎಂದು ಯಾಜ್ಞವಲ್ಕ್ಯಸ್ಮೃತಿಯಲ್ಲಿ ಹೇಳಲಾಗಿದೆ. ಇದರ ಜೊತೆಗೆ ಅಧ್ಯಾತ್ಮಜ್ಞಾನವಿದನಾದ ಒಬ್ಬನೇ ಒಬ್ಬನು ಏನನ್ನು ಹೇಳುತ್ತಾನೋ ಅದನ್ನು ಧರ್ಮಮಾರ್ಗ ಅಂದು ತಿಳಿಯಬೇಕು ಎಂದೂ ಹೇಳಿದ್ದಾರೆ. ಒಟ್ಟಾರೆ ಹೇಳುವುದಾದರೆ ಯಾವುದರಿಂದ ಆತ್ಮಜ್ಞಾನ ಪ್ರಾಪ್ತವಾಗುತ್ತದೆಯೋ ಅದನ್ನು ಧರ್ಮ ಎನ್ನುತ್ತಾರೆ. 

ಸೂಚನೆ : 16/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 115 ಧರ್ಮಪರನಾಗಿ ಯುಧಿಷ್ಠಿರನು ಆಳಿದ ಬಗೆ (Vyaasa Vikshita 115)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಪಾಂಡವರ ಈ ಎಲ್ಲ ಮಕ್ಕಳೂ ವಿಶಾಲವಾದ ಎದೆಯುಳ್ಳವರು ಹಾಗೂ ಮಹಾರಥರು. ಇಂತಹವರನ್ನು ಪಡೆದ ಪಾಂಡವರು ಪರಮ-ಸಂತೋಷವನ್ನು ಈಗ ಕಂಡರು.

ಇಂದ್ರಪ್ರಸ್ಥದಲ್ಲಿ ವಾಸ ಮಾಡುತ್ತಿದ್ದ ಪಾಂಡವರು, ರಾಜಾ ಧೃತರಾಷ್ಟ್ರನ ಆಜ್ಞೆ ಹಾಗೂ ಶಂತನುಪುತ್ರನಾದ ಭೀಷ್ಮನ ಆಜ್ಞೆ - ಇವುಗಳ ಮೇರೆಗೆ, ಇತರ ರಾಜರುಗಳ ಮೇಲೆ ಆಕ್ರಮಣ ಮಾಡಿ ತಮ್ಮ ಪರಾಕ್ರಮವನ್ನು ತೋರಿದರು. ಧರ್ಮರಾಜನನ್ನು ಆಶ್ರಯಿಸಿ ಪ್ರಜೆಗಳೆಲ್ಲರೂ ಸುಖವಾಗಿ ಜೀವನ ಮಾಡಿದರು. ಇದು ಹೇಗಿತ್ತೆಂದರೆ, ಪುಣ್ಯಕರ್ಮಗಳನ್ನೆಸಗಿ ಉತ್ತಮವಾದ ಶರೀರವನ್ನು ಹೊಂದಿದ ಜೀವಿಗಳು ಹೇಗೆ ಸುಖವಾಗಿರುವರೋ ಹಾಗೆ.

ಯುಧಿಷ್ಠಿರನೂ ಧರ್ಮ-ಅರ್ಥ-ಕಾಮಗಳನ್ನು ಸಮನಾಗಿ ಸೇವಿಸಿದನು. ನೀತಿಜ್ಞನಾದವನು ಆತ್ಮಸಮರಾದ ಮೂವರು ಬಂಧುಗಳನ್ನು ಯಾವ ರೀತಿ ಏಕರೂಪದಲ್ಲಿ ಆದರಿಸುವನೋ ಹಾಗೆ. ಸಮವಾಗಿ ವಿಭಾಗ ಹೊಂದಿರುವ ಧರ್ಮ-ಅರ್ಥ-ಕಾಮಗಳೇ ಮೈತಾಳಿ ಬಂದರೆ ಹೇಗೋ ಹಾಗಿದ್ದರು, ಯುಧಿಷ್ಠಿರನ ತಮ್ಮಂದಿರು.  ಹಾಗೂ ರಾಜನಾದ ಯುಧಿಷ್ಠಿರನು ನಾಲ್ಕನೆಯ ಪುರುಷಾರ್ಥವಾದ ಮೋಕ್ಷದ ಹಾಗಿದ್ದನು.

 ಜನರಿಗೆ ತಮ್ಮ ಜನಾಧಿಪನು - ಎಂದರೆ ರಾಜನಾದ ಯುಧಿಷ್ಠಿರನು – ಹೇಗಿದ್ದನೆಂದು ತಿಳಿಯಿತು? ವೇದಗಳನ್ನು ಚೆನ್ನಾಗಿ ಮಾಡತಕ್ಕವನು, ಮಹಾ-ಅಧ್ವರಗಳಲ್ಲಿ, ಎಂದರೆ ದೊಡ್ಡ ಯಜ್ಞಗಳಲ್ಲಿ, ಅವನ್ನು ಪ್ರಯೋಗಮಾಡತಕ್ಕವನು - ಎಂದರೆ ಬಳಸಬಲ್ಲವನು, ಹಾಗೂ ಶುಭಲೋಕಗಳನ್ನು ರಕ್ಷಿಸುವುದರಲ್ಲಿ ತತ್ಪರನಾದವನು – ಎಂಬುದಾಗಿ.

ಯುಧಿಷ್ಠಿರನ ಆಳ್ವಿಕೆಯಿಂದಾಗಿ ಉಳಿದ ರಾಜರ ಮೇಲೆ ಆದ ಪರಿಣಾಮವೇನು? ಲಕ್ಷ್ಮಿಯು ಈಗ ಒಂದು ನೆಲೆಯಲ್ಲಿ ನಿಲ್ಲತಕ್ಕವಳಾದಳು. ಅವರ ಮತಿಯು ಉತ್ತಮ-ನಿಷ್ಠೆಯನ್ನು ಹೊಂದಿತು. ದಿನೇ ದಿನೇ ಅವರಲ್ಲಿ ಧರ್ಮವೆಂಬುದು ವೃದ್ಧಿಗೊಳ್ಳಲಾರಂಭಿಸಿತು. ಒಂದು ಮಹಾ-ಅಧ್ವರ - ಎಂದರೆ ದೊಡ್ಡದಾಗ ಯಜ್ಞವು ನಾಲ್ಕೂ ವೇದಗಳ ಪ್ರಯೋಗದಿಂದಾಗಿ ಹೇಗೆ ವಿತತವಾಗುವುದೋ, ಎಂದರೆ ವಿಸ್ತಾರಗೊಳ್ಳುವುದೋ, ಅದೇ ಪ್ರಕಾರವಾಗಿ ತನ್ನ ನಾಲ್ವರು ಭ್ರಾತೃಗಳಿಂದಾಗಿ ಯುಧಿಷ್ಠಿರ-ಮಹಾರಾಜನು ಕಂಗೊಳಿಸಿದನು.

ಬೃಹಸ್ಪತಿಯೇ ಮೊದಲಾದ ಮುಖ್ಯದೇವತೆಗಳು ಯಾವರೀತಿ ಪ್ರಜಾಪತಿಯ ಸೇವೆಯಲ್ಲಿ ಉಪಸ್ಥಿತರಾಗುವರೋ, ಅದೇ ಪ್ರಕಾರವಾಗಿ ಧೌಮ್ಯ ಮೊದಲಾದ ವಿಪ್ರರೂ ಯುಧಿಷ್ಠಿರನ ಸುತ್ತಲೂ ನೆರೆದು ಸೇರಿರುತ್ತಿದ್ದರು. ನಿರ್ಮಲನಾದ ಪೂರ್ಣಚಂದ್ರನನ್ನು ಕಂಡು ಯಾವ ರೀತಿ ಪ್ರಜೆಗಳ ನೇತ್ರಗಳೂ ಹೃದಯಗಳೂ ಸಂತೋಷಿಸುವುವೋ, ಅದೇ ರೀತಿಯಲ್ಲಿ ಧರ್ಮರಾಜನ ವಿಷಯದಲ್ಲೂ ಅತಿಶಯಿತವಾದ ಪ್ರೀತಿಯಿಂದ ಪ್ರಜೆಗಳ ಕಣ್ಮನಸ್ಸುಗಳು ತಣಿದವು.

ಆತನ ಆಳ್ವಿಕೆಯಲ್ಲಿ ಪ್ರಜೆಗಳು ಸಂತೋಷಿಸಿದರು. ಆದರೆ ಅದು ಆತನು ಆಳುವವ ಎಂಬ ಕಾರಣಕ್ಕಾಗಿಯಷ್ಟೇ ಅಲ್ಲ. ಆತನಾದರೂ ಅವರ ಮನಸ್ಸಿಗೆ ಏನು ಪ್ರಿಯವಾಗಿ ಕಂಡಿತೋ ಅದನ್ನು ನೆರವೇರಿಸಿಬಿಡತಕ್ಕವನು. ಧೀಮಂತನಾದ ಆ ಯುಧಿಷ್ಠಿರನ ಬಾಯಿಂದ ಅನುಚಿತವಾದ ಮಾತಾಗಲಿ, ಅಸತ್ಯವಾದ ಮಾತಾಗಲಿ, ಅಸಹ್ಯವಾದ ಮಾತಾಗಲಿ, ಅಪ್ರಿಯವಾದ ಮಾತಾಗಲಿ - ಎಂದೂ ಹೊಮ್ಮುತ್ತಿರಲಿಲ್ಲ. ಎಲ್ಲ ಜನರ ಹಿತ ಹಾಗೂ ತನ್ನ ಆತ್ಮಕ್ಕೂ ಹಿತ - ಇವನ್ನೂ ಮಾಡಬಯಸುವ ಯುಧಿಷ್ಠಿರನು ಮಹಾತೇಜಶ್ಶಾಲಿಯಾಗಿ ಮೆರೆದನು.

ಅಂತೂ ಹೀಗೆ ಸಂತೋಷದಿಂದ ಇರುವವರಾಗಿ, ಅನ್ಯರಾಜರನ್ನು ತಮ್ಮ ತೇಜಸ್ಸಿನಿಂದ ಬೆದರಿಕೆಯಲ್ಲಿಟ್ಟು, ತಾವಂತೂ ನಿಶ್ಚಿಂತವಾಗಿ ಇದ್ದರು, ಪಾಂಡವರು.ಹೀಗೆ ಕೆಲಕಾಲ ಕಳೆಯಲು ಅರ್ಜುನನು ಕೃಷ್ಣನನ್ನು ಕೇಳಿದನು: ಕೃಷ್ಣ, ಬೇಗೆ ಬಹು ಹೆಚ್ಚಾಗಿದೆ. ಯಮುನೆಗೆ ಹೋಗೋಣವೇ?  

ಸೂಚನೆ : 16/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, December 8, 2024

ವ್ಯಾಸ ವೀಕ್ಷಿತ 114 ಪಂಚ-ಪಾಂಡವ-ಪುತ್ರರೂ ಅವರ ಸಾರ್ಥಕ-ನಾಮಗಳೂ (Vyaasa Vikshita 114)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಅಭಿಮನ್ಯುವನ್ನು ನೋಡಿದಷ್ಟೂ ನೋಡಿದಷ್ಟೂ ಅರ್ಜುನನಿಗೆ ಸಂತೋಷವೇ. ಬರಬರುತ್ತಾ ಹೇಗಾದ ಅಭಿಮನ್ಯು! ಸರ್ವ-ಲಕ್ಷಣಗಳಿಂದಲೂ ಕೂಡಿದವನಾದ. ಆತನನ್ನು ಯಾರೂ ಕೆಣಕಲಾಗದು. ಆತನ ಭುಜಗಳು ಗೂಳಿಯ ಸ್ಕಂಧಗಳಂತಿದ್ದವು. ಬಾಯಿ ತೆರೆದಿದ್ದ ಸರ್ಪವು ಹೇಗೋ ಹಾಗೆ ಆತ ಶತ್ರುಗಳಿಗೆ ತೋರುತ್ತಿದ್ದ. ಸಿಂಹದ ದರ್ಪ ಅವನಲ್ಲಿತ್ತು. ಮಹಾಧನುಸ್ಸು ಆತನದು. ಮದಗಜದ ತೆರನ ವಿಕ್ರಮ. ಆತನ ಕಂಠವು ಮೇಘದಂತೆ, ದುಂದುಭಿಯಂತೆ! ಆತನ ಮುಖವೋ ಪೂರ್ಣಚಂದ್ರನ ಹಾಗೆ ಇರುವುದು. ಶೌರ್ಯ-ವೀರ್ಯಗಳಲ್ಲಿ, ರೂಪ-ಆಕೃತಿಗಳಲ್ಲಿ, ಕೃಷ್ಣನಿಗೆ ಆತ ಸದೃಶ. ಇಂದ್ರನು ತನ್ನನ್ನು, ಎಂದರೆ ಅರ್ಜುನನನ್ನು, ಹೇಗೆ ನೋಡುವನೋ ಹಾಗೆ ನೋಡಿದ ಅಭಿಮನ್ಯುವನ್ನು, ತಂದೆ ಅರ್ಜುನ.


ಶುಭಲಕ್ಷಣಗಳಿಂದ ಶೋಭಿಸುತಿದ್ದ ಪಾಂಚಾಲಿಯೂ ತನ್ನ ಐವರು ಪತಿಗಳಿಂದ ವೀರರೂ ಶ್ರೇಷ್ಠರೂ ಆದ ಐವರು ಮಕ್ಕಳನ್ನು ಪಡೆದಳು. ಪಂಚ ಅಚಲಗಳ ಹಾಗೆ, ಎಂದರೆ ಐದು ಪರ್ವತಗಳ ಹಾಗೆ, ಇದ್ದರು ಅವರು. ಯುಧಿಷ್ಠಿರನಿಂದ ಜನಿಸಿದ ಮಗನ ಹೆಸರು ಪ್ರತಿವಿಂಧ್ಯ. ವೃಕೋದರನಿಂದ, ಅರ್ಥಾತ್ ಭೀಮನಿಂದ, ಜನಿಸಿದ ಮಗನ ಹೆಸರು ಸುತಸೋಮ. ಅರ್ಜುನನಿಂದ ಜನಿಸಿದವನ ಹೆಸರು ಶ್ರುತಕರ್ಮ. ನಕುಲನಿಂದ ಜನಿಸಿದವನು ಶತಾನೀಕ. ಹಾಗೆಯೇ ಸಹದೇವನಿಂದಾಗಿ ಜನಿಸಿದವನು ಶ್ರುತಸೇನ.


ಅದಿತಿಯು ಆದಿತ್ಯರನ್ನು ಹೇಗೆ ಹಡೆದಳೋ ಹಾಗೆ ಪಾಂಚಾಲಿಯು ಐದು ಮಹಾರಥಿಗಳಿಗೆ ಜನ್ಮವಿತ್ತಳು. ಶಾಸ್ತ್ರಾನುಸಾರವಾಗಿ ವಿಪ್ರರು ಪ್ರತಿವಿಂಧ್ಯ - ಎಂಬ ಹೆಸರನ್ನು ಯುಧಿಷ್ಠಿರನಿಗೆ ಸೂಚಿಸಿದರು. ಶತ್ರುಗಳು ಪ್ರಹಾರ ಮಾಡಿದಾಗ ವಿಂಧ್ಯಪರ್ವತದಂತೆ ಅವಕ್ಕೆ ಪ್ರತಿಯಾಗಿ ನಿಲ್ಲಬಲ್ಲವನು - ಅರ್ಥಾತ್ ಏಟು ಬಿದ್ದರೂ ನೋವು ಪಡದವನು - ಎಂಬ ಅಭಿಪ್ರಾಯದಿಂದ ಹಾಗೆ ಸೂಚಿಸಿದರು. ಸಾವಿರ ಸೋಮಯಾಗಗಳನ್ನು ಮಾಡಿದವನಿಗೇ ಸೋಮನಿಗೂ ಸೂರ್ಯನಿಗೂ ಸಮವೆನಿಸುವ ತೇಜಸ್ಸುಳ್ಳಂತಹವನು ಜನಿಸುವುದು. ಹಾಗಿದ್ದವನು ಭೀಮಸೇನನಿಗೆ ಜನಿಸಲು, ಆ ಧನುರ್ಧರಪುತ್ರನಿಗೆ ಸುತಸೋಮನೆಂಬ ಹೆಸರಾಯಿತು. ಮಹತ್ತಾದ ಹಾಗೂ ವಿಖ್ಯಾತವಾದ ಕರ್ಮಗಳನ್ನು ಮಾಡಿ ಹಿಂದಿರುಗಿದ್ದ ಅರ್ಜುನನಿಂದ ಜನಿಸಿದನೆಂಬ ಕಾರಣಕ್ಕೆ ಶ್ರುತಕರ್ಮ - ಎಂಬ ಹೆಸರು ಅರ್ಜುನಪುತ್ರನಿಗಾಯಿತು. ಕುರುವಂಶದ ಮಹಾತ್ಮನೆನಿಸಿದವನು ಶತಾನೀಕ ಎಂಬ ರಾಜರ್ಷಿ. ಆತನ ಹೆಸರಿನ ಮೇಲೆ, ಇಟ್ಟದ್ದು ಕೀರ್ತಿವರ್ಧಕನಾದ ನಕುಲಪುತ್ರನಿಗೆ ಶತಾನೀಕ ಎಂದೇ ನಾಮಧೇಯ. ಶ್ರುತಸೇನ ಎಂಬುದು ಅಗ್ನಿಯದೇ ಹೆಸರು; ಅಗ್ನಿಯನ್ನೇ ದೇವತೆಯನ್ನಾಗಿ ಹೊಂದಿರುವ ನಕ್ಷತ್ರದಲ್ಲಿ - ಅರ್ಥಾತ್ ಕೃತ್ತಿಕಾನಕ್ಷತ್ರದಲ್ಲಿ - ದ್ರೌಪದಿಯು ಜನ್ಮವಿತ್ತಳಾದ್ದರಿಂದ, ಸಹದೇವಪುತ್ರನಿಗೆ ಶ್ರುತಸೇನ ಎಂದೇ ಹೆಸರಾಯಿತು.


ಇವರುಗಳೆಲ್ಲರೂ ಒಂದೊಂದು ವರ್ಷದ ಅಂತರದಲ್ಲಿ ಜನಿಸಿದವರು. ದ್ರೌಪದಿಯಿಂದ ಜನಿಸಿದವರಾದ್ದರಿಂದ ಇವರೆಲ್ಲರೂ - ಎಂದರೆ ಪ್ರತಿವಿಂಧ್ಯ-ಸುತಸೋಮ-ಶ್ರುತಕರ್ಮ-ಶತಾನೀಕ ಹಾಗೂ ಶ್ರುತಸೇನ - ಎಂಬೀ ಐವರೂ - ದ್ರೌಪದೇಯರೆನಿಸಿದರು. ಎಲ್ಲರೂ ಯಶಸ್ವಿಗಳು. ಎಲ್ಲರೂ ಪರಸ್ಪರ-ಹಿತೈಷಿಗಳು.


ಪಾಂಡವರ ಪುರೋಹಿತರಾದ ಧೌಮ್ಯರು ಇವರೆಲ್ಲರಿಗೂ ಜಾತಕರ್ಮ, ಚೂಡಾಕರ್ಮ ಹಾಗೂ ಉಪನಯನ - ಇವುಗಳನ್ನು ವಿಧಿವತ್ತಾಗಿ ನೆರವೇರಿಸಿದರು. ತಮ್ಮ ಬ್ರಹ್ಮಚರ್ಯ-ವ್ರತವನ್ನು ಚೆನ್ನಾಗಿ ಪಾಲಿಸಿಕೊಂಡು ಬಂದಿದ್ದ ಈ ಐವರು ವೇದಾಧ್ಯಯನವನ್ನು ಮಾಡಿದವರಾಗಿ, ದಿವ್ಯವಾದ ಹಾಗೂ ಮಾನುಷವಾದ ಧರ್ನುರ್ವೇದವನ್ನು ಅರ್ಜುನನಿಂದ ಪಡೆದುಕೊಂಡರು. ಈ ಐವರೂ ದೇವಪುತ್ರರೆಂಬಂತೆ ಕಾಣುತ್ತಿದ್ದರು.


ಸೂಚನೆ : 08/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Sunday, December 1, 2024

ಯಕ್ಷ ಪ್ರಶ್ನೆ 116 (Yaksha prashne 116)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ –  115 ಯಾವುದು ಆಶ್ಚರ್ಯ?

ಉತ್ತರ - ಪ್ರತಿದಿನ ಭೂತಕೋಟಿಗಳು ಯಮನಿಲಯವನ್ನು ಸೇರಿತ್ತಿರುತ್ತಾರೆ. ಆದರೆ  ಉಳಿದ ಕೆಲವು ಶಾಶ್ವತವಾಗಿ ಈ ಭೂಮಿಯ ಮೇಲೇ ಇರಬೇಕೆಂದು ಇಚ್ಛಿಸುತ್ತಾರೆ. ಇದೇ ನಿಜವಾಗಿ ಆಶ್ಚರ್ಯ.

ಅತ್ಯಂತ ಆಶ್ಚರ್ಯಕರವಾದ ಸಂಗತಿ ಏನು? ಎಂಬುದಾಗಿ ಯಕ್ಷನು ಧರ್ಮರಾಜನಿಗೆ ಪ್ರಶ್ನಿಸುತ್ತಾನೆ. ಇಲ್ಲಿ ಧರ್ಮಜನ ಉತ್ತರ ಬಹಳ ವಿಚಿತ್ರವಾಗಿದೆ. ಈ ಪ್ರಪಂಚದಲ್ಲಿ ಅನೇಕ ಪ್ರಾಣಿ ಪಶು ಪಕ್ಷಿಗಳು ಪ್ರತಿನಿತ್ಯ ಮರಣವನ್ನು ಹೊಂದುತ್ತವೆ. ಅವು ಯಮಾಲಯವನ್ನು ಪ್ರವೇಶಿಸುತ್ತವೆ. ಮನುಷ್ಯನು ಕೂಡ ಈ ಭೂಮಿಗೆ ಬಂದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು. ಯಮಮಂದಿರವನ್ನು ಪ್ರವೇಶಿಸಲೇಬೇಕು. ಈ ಭೂಮಿಗೆ ಬಂದವರು ಯಾರೂ ಶಾಶ್ವತರಲ್ಲ; ಶಾಶ್ವತವಾಗಿ ಇರಲು ಸಾಧ್ಯವೂ ಇಲ್ಲ. ಹೀಗಿರುವಾಗ 'ನಾನು ಇಲ್ಲೇ ಇರುತ್ತೇನೆ; ಈ ಭೂಮಿಯನ್ನು ಬಿಟ್ಟು ಹೋಗುವುದೇ ಇಲ್ಲ' ಎಂಬ ರೀತಿಯಲ್ಲಿ ಮನುಷ್ಯನ ವರ್ತನೆ ಇರುತ್ತದೆ. ಇದಕ್ಕಿಂತಲೂ ಆಶ್ಚರ್ಯ ಇನ್ನೇನು! ಎಂಬುದಾಗಿ ಉತ್ತರವನ್ನು ನೀಡುತ್ತಾನೆ. ಆದ್ದರಿಂದ ಇಲ್ಲಿ ಚಿಂತಿಸಬೇಕಾದ ವಿಷಯ ಇಷ್ಟು - ಯಾವನೂ ಕೂಡ ಈ ಭೂಮಿಯಲ್ಲಿ ಶಾಶ್ವತನಲ್ಲ; ಆದರೆ ತಾನು ಶಾಶ್ವತ ಎಂದು ಭಾವಿಸಿ ಇರುತ್ತಾನಲ್ಲ; ಇದೇ ಆಶ್ಚರ್ಯ ಎಂಬುದಾಗಿ.

ಒಬ್ಬ ಮನೆಯನ್ನು ಕಟ್ಟಿ, ಈ ಮನೆಯಲ್ಲಿ ನಾನು ಶಾಶ್ವತವಾಗಿ ಉಳಿಯುತ್ತೇನೆ ಎಂದು ಭಾವಿಸಬಹುದು. ಒಬ್ಬ ರಾಜ್ಯದ ಅಥವಾ ದೇಶದ ಚುಕ್ಕಾಣಿಯನ್ನು ಹಿಡಿದವನು, ಇದೇ ನನ್ನ ಶಾಶ್ವತವಾದ ಸ್ಥಾನ ಎಂದು ಭಾವಿಸಬಹುದು. ಹೀಗೆ ತನಗೆ ಸಿಕ್ಕಿರುವ ಅವಕಾಶವನ್ನೇ ಅಳಿಸಲಾಗದ ಅವಕಾಶ, ಮಣೆಯನ್ನು ಕೊಟ್ಟರೆ ಸಿಂಹಾಸನ ಎಂಬುದಾಗಿ ಭಾವಿಸಿ ಅಲ್ಲೇ ಮುಂದುವರಿಯಬಹುದು. ಆದರೆ ಒಂದಂತೂ ನಿಜ, ಎಷ್ಟೇ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದರೂ, ಎಷ್ಟೇ ಜನರನ್ನು ಸಂಪಾದಿಸಿದರೂ, ಯಾವುದೇ ರೀತಿಯ ಸಂಬಂಧವನ್ನು ಈ ಭೂಮಿಯಲ್ಲಿ ಸಂಪಾದಿಸಿದರೂ, ಎಲ್ಲವನ್ನು ಬಿಟ್ಟು ಒಂದು ದಿನ ಹೋಗಲೇಬೇಕು ಎಂಬುದು ಅಷ್ಟೇ ನಿಶ್ಚಿತವಾದ ವಿಷಯ. ಇಷ್ಟಿದ್ದರೂ ಇಲ್ಲೇ ಶಾಶ್ವತವಾಗಿ ನೆಲೆ ನಿಲ್ಲುತ್ತೇನೆ ಎಂಬ ಭ್ರಮೆಯಲ್ಲಿ ಬದುಕುವುದು ಎಂಬುದೇ ಅತ್ಯಂತ ವಿಚಿತ್ರವಾದ ಸಂಗತಿ. ಭೋಜ ಎಂಬ ಮಹಾರಾಜನ ಕಥೆ, ಭೋಜನಿಗೆ ಮುಂಜ ಎಂಬ ಚಿಕ್ಕಪ್ಪ ಇದ್ದ. ಭೋಜನ ತಂದೆ ಮರಣವಾದ ಅನಂತರದಲ್ಲಿ ಈ ಬಾಲಕನಾದ ಭೋಜನು 56 ವರ್ಷಕ್ಕಿಂತ ಹೆಚ್ಚು ವರ್ಷ ರಾಜ್ಯವನ್ನು ಆಳ್ವಿಕೆ ಮಾಡುತ್ತಾನೆ ಎಂಬ ವಿಷಯವನ್ನು ದೈವಜ್ಞರ ಮುಖಾಂತರ ಮುಂಜನು ತಿಳಿದುಕೊಳ್ಳುತ್ತಾನೆ. ಭೋಜನನ್ನು ಸಾಯಿಸಿದರೆ ಶಾಶ್ವತವಾಗಿ ತಾನೇ ರಾಜನಾಗಿ ಉಳಿಯಬಹುದು ಎಂಬುದು ಎಂಬುದನ್ನು ಚಿಂತಿಸಿ ಆತ ರಾಜನಾಗಲು ಬಯಸುತ್ತಾನೆ. ಆದರೆ ವಿಧಿಯು ಹೇಗಿರುತ್ತದೆ? ಎಂಬುದನ್ನು ನಾವು ನೋಡಬಹುದು. ಸಾಯಿಸಲು ಕರೆದುಕೊಂಡ ಹೋದಾಗ ಭೋಜನು ಒಂದು ಮಾತನ್ನು ಹೇಳುತ್ತಾ ಒಂದು ಪತ್ರವನ್ನು ರಕ್ತದಲ್ಲಿ ಬರೆದು ಕಳುಹಿಸುತ್ತಾನೆ. ಹೇ! ಮುಂಜನೆ! ಮಾಂಧಾತ ಧರ್ಮರಾಜ ಶ್ರೀರಾಮನಂತಹ ಅನೇಕ ಸಾಮ್ರಾಟರು ಈ ಭೂಮಿಯನ್ನು ಆಳಿದರು; ಆದರೆ ಯಾರ ಜೊತೆಯಲ್ಲೂ ಈ ಭೂಮಿ ಹೋಗಲಿಲ್ಲವಲ್ಲ; ಹಾಗಾಗಿ ನೀನು ಸತ್ತ ಮೇಲೆ ಈ ಭೂಮಿ ನಿನ್ನ ಜೊತೆ ಬರುತ್ತದೆ ಎಂದು ಭಾವಿಸಿರುವೆಯಾ? ಎಂಬುದಾಗಿ. ಮುಂದೆ ಭೋಜನ ವಧೆಯಾಗದೆ ಅವನೇ ರಾಜನಾಗುತ್ತಾನೆ. ಅಂದರೆ ಸಂಪತ್ತಾಗಲಿ ಭೂಮಿಯಾಗಲಿ ಅಧಿಕಾರವಾಗಲಿ ಯಾವುದೂ ಕೂಡ ಸತ್ತಮೇಲೆ ಅವರ ಜೊತೆಗೇ ಹೋಗಲಾರದು. ಇರುವಷ್ಟು ದಿನ ಅದನ್ನು ಅನುಭವಿಸಬೇಕು. ಒಂದು ದಿನ ನಾನು ಎಲ್ಲವನ್ನು ಬಿಡುತ್ತೇನೆ ಎಂಬಂತಹ ತ್ಯಾಗ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ.

ಸೂಚನೆ : 01/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ವ್ಯಾಸ ವೀಕ್ಷಿತ 113 ಅಭಿಮನ್ಯುವಿನ ಜನನ-ವರ್ಧನಗಳು (Vyaasa Vikshita 113)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಸುಭದ್ರಾರ್ಜುನವಿವಾಹವು ಅದ್ದೂರಿಯಾಗಿ ನೆರವೇರಿತಷ್ಟೆ. ಅಲ್ಲಿಗೆ ಬಂದಿದ್ದ ಕ್ಷತ್ರಿಯವೀರರು ಬಗೆಬಗೆಯಾಗಿ ವಿಹರಿಸಿದರು.

ವಿಹಾರಸಮಯದಲ್ಲಿ ವೀಣೆಗಳಿಂದ ಹೊಮ್ಮುತ್ತಿದ್ದ ಉತ್ತಮವಾದ ನಾದಗಳೂ ಅವರಿಗೆ ಸಂತೋಷತಂದವು. ಹೀಗೆಲ್ಲಾ ಸಂತೋಷಿಸುತ್ತ ಯಥೇಷ್ಟವಾಗಿ ಅವರೆಲ್ಲರೂ ವಿಹರಿಸಿದರು.

ಪರಾಕ್ರಮ-ಸಂಪನ್ನರಾದ ಯದುವೀರರು ಹೀಗೆ ಅನೇಕ ದಿನಗಳ ಕಾಲ ವಿಹಾರ ಮಾಡಿದವರಾಗಿ, ಕುರುವಂಶೀಯರಿಂದ ಆದರಿಸಲ್ಪಟ್ಟವರಾಗಿ, ಮತ್ತೆ ದ್ವಾರಾವತಿಗೆ ಹಿಂತಿರುಗಿದರು. ಬಲರಾಮನನ್ನು ಮುಂದಿಟ್ಟುಕೊಂಡು ಅವರು ನಡೆದರು. ಕುರು-ಶ್ರೇಷ್ಠರಿತ್ತ ಶುಭ್ರವಾದ ರತ್ನಗಳನ್ನು ಸ್ವೀಕರಿಸಿ ಹೊರಟರು.

ಆದರೆ ವಾಸುದೇವನು ಮಾತ್ರ ಮಹಾತ್ಮನಾದ ಪಾರ್ಥನೊಂದಿಗೆ ಆ ಸುಂದರವಾದ ಇಂದ್ರಪ್ರಸ್ಥನಗರದಲ್ಲಿಯೇ ಉಳಿದುಕೊಂಡನು. ಕಿರೀಟಿಯೊಂದಿಗೆ, ಎಂದರೆ ಅರ್ಜುನನೊಂದಿಗೆ, ಆ ಮಹಾಕೀರ್ತಿಶಾಲಿಯಾದ ಕೃಷ್ಣನು ಯಮುನಾ-ತೀರದಲ್ಲಿ ವಿಹರಿಸಿದನು; ಕ್ರೂರಮೃಗಗಳು, ಹಂದಿಗಳು - ಇವನ್ನು ಬೇಟೆಯಾಡಿದ್ದು ಸಹ ಆಯಿತು. ಹೀಗೆ ಕಾಲವು ಕಳೆಯುತ್ತಿತ್ತು.

ಕೆಲಕಾಲದ ನಂತರ, ಕೇಶವನ ಪ್ರಿಯಸೋದರಿಯಾದ ಸುಭದ್ರೆಯು ಸೌಭದ್ರನಿಗೆ ಜನ್ಮವಿತ್ತಳು. ಪೌಲೋಮಿಯು, ಎಂದರೆ ಇಂದ್ರಪತ್ನಿಯಾದ ಶಚಿಯು, ಕೀರ್ತಿಪಾತ್ರನಾದ ಜಯಂತನಿಗೆ ಹೇಗೆ ಜನ್ಮವಿತ್ತಳೋ, ಹಾಗೆಯೇ ಸುಭದ್ರೆ ಜನ್ಮವಿತ್ತುದೂ. ಜನಿಸಿದವನೇ ವೀರನಾದ ಅಭಿಮನ್ಯು.

ಆತನು ಮುಂದೆ ಹೇಗಾದ! ದೀರ್ಘಬಾಹು – ಎಂದರೆ ನೀಳವಾದ ತೋಳುಗಳುಳ್ಳವನು, ಮಹೋರಸ್ಕ - ಎಂದರೆ ವಿಶಾಲವಾದ ಎದೆಯುಳ್ಳವನು, ವೃಷಭಾಕ್ಷ - ಎಂದರೆ ಎತ್ತುಗಳ ಕಣ್ಣುಗಳನ್ನು ಹೋಲುವ ಕಣ್ಣುಗಳುಳ್ಳವನು, ಹಾಗೂ ಅರಿಂದಮ - ಎಂದರೆ ಶತ್ರುಗಳನ್ನು ದಮನಮಾಡತಕ್ಕವನು  - ಹಾಗಾದ.

ಆತನು ಅಭಿ ಮತ್ತು ಮನ್ಯುಮಂತನಾಗಿದ್ದ - ಎಂಬ ಕಾರಣಕ್ಕೇ ಆತನಿಗೆ ಅಭಿಮನ್ಯುವೆಂಬ ಹೆಸರಾದುದು. ಏಕೆಂದರೆ ಅಭಿ ಎಂದರೆ ಭಯರಹಿತ; ಮನ್ಯುಮಂತ ಎಂದರೆ ಕ್ರೋಧದಿಂದ ರಣರಂಗದಲ್ಲಿ ಹೋರಾಡತಕ್ಕವನು. ಹಾಗಿರತಕ್ಕವನು ಈ ಪುರುಷ-ಶ್ರೇಷ್ಠನಾದ ಅರ್ಜುನಿ. ಅರ್ಜುನಿ ಎಂದರೆ ಅರ್ಜುನನ ಮಗ.

ಯಜ್ಞವನ್ನು ಮಾಡುವಾಗ ಅರಣಿಗಳನ್ನು ಮಥನ ಮಾಡುವರು. ಶಮೀ-ಗರ್ಭದಿಂದ ಆಗ ಅಗ್ನಿಯು ಉತ್ಪನ್ನವಾಗುವುದು. (ಶಮೀ ಎಂದರೆ ಬನ್ನಿಮರ). ಅದೇ ರೀತಿಯಲ್ಲಿ ಧನಂಜಯನಿಂದ ಎಂದರೆ ಅರ್ಜುನನಿಂದ, ಸಾತ್ವತಿಯಲ್ಲಿ ಎಂದರೆ ಸುಭದ್ರೆಯಲ್ಲಿ, ಜನ್ಮತಾಳಿದ ಅತಿರಥನೇ ಅಭಿಮನ್ಯು.

ಅಭಿಮನ್ಯುವು ಜನಿಸುತ್ತಲೇ ಯುಧಿಷ್ಠಿರನು ವಿಪ್ರರಿಗೆ ದಶಸಹಸ್ರ-ಗೋವುಗಳನ್ನು ದಾನವಿತ್ತನು. ಹಾಗೂ ಸುವರ್ಣ-ಮುದ್ರೆಗಳನ್ನೂ ಕೊಟ್ಟನು. ಎಳಸಿನಿಂದಲೇ ಅಭಿಮನ್ಯುವು ಶ್ರೀಕೃಷ್ಣನಿಗೆ ಅಚ್ಚುಮೆಚ್ಚಾದನು - ಸಮಸ್ತ-ಪಿತೃ-ದೇವತೆಗಳಿಗೂ ಹಾಗೂ ಪ್ರಜೆಗಳಿಗೂ ಚಂದ್ರನು ಹೇಗೆ ಪ್ರೀತಿ-ಪಾತ್ರನಾಗುವನೋ ಹಾಗೆ.

ಕುಮಾರನ ಹುಟ್ಟಿದಂದಿನಿಂದಲೇ ಆತನಿಗೆ ಎಲ್ಲ ಶುಭ-ಕರ್ಮಗಳನ್ನೂ ಶ್ರೀಕೃಷ್ಣನು ತಾನೇ ನೆರವೇರಿಸುತ್ತ ಬಂದನು. ಮತ್ತು ಆ ಬಾಲಕನಾದರೂ, ಶುಕ್ಲ-ಪಕ್ಷದಲ್ಲಿ ಚಂದ್ರನು ಅಭಿವೃದ್ಧಿಗೊಳ್ಳುವ ಹಾಗೆ ಬೆಳೆದನು.

ಮತ್ತು ಆತನಿಗೆ ಅರ್ಜುನನೇ ಹೇಳಿಕೊಟ್ಟನು - ನಾಲ್ಕು ಪಾದಗಳಿಂದ ಕೂಡಿದ ಹಾಗೂ ದಶ-ವಿಧವಾದ ಧನುರ್ವೇದವನ್ನು, ಅದರ ದಿವ್ಯ ಹಾಗೂ ಮಾನುಷವಾದ ಅಂಗಗಳೊಂದಿಗೆ. ಜೊತೆಗೇ ಅಸ್ತ್ರ-ವಿಜ್ಞಾನ ಹಾಗೂ ಅಸ್ತ್ರ-ಪ್ರಯೋಗ-ಪಟುತ್ವ, ಮತ್ತಿನ್ನೆಲ್ಲ ಕ್ಷತ್ರಿಯೋಚಿತ-ಕ್ರಿಯೆಗಳು - ಇವೆಲ್ಲದರ ವಿಷಯದಲ್ಲೂ ಅರ್ಜುನನೇ ಆತನಿಗೆ ಶಿಕ್ಷಣವನ್ನಿತ್ತನು. ಆಗಮದಲ್ಲೂ ಪ್ರಯೋಗದಲ್ಲೂ - ಎಂದರೆ ಶಾಸ್ತ್ರಭಾಗ ಹಾಗೂ ಶಸ್ತ್ರಗಳ ಬಳಕೆಯ ಬಗೆಗಳಲ್ಲೂ - ಎರಡರಲ್ಲೂ - ಅಭಿಮನ್ಯುವನ್ನು ಅರ್ಜುನನು ತನಗೆ ಸಮನನ್ನಾಗಿ ಮಾಡಿದನು. 

ಸೂಚನೆ : 01/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.   .

ಯಕ್ಷ ಪ್ರಶ್ನೆ 116 (Yaksha prashne 116)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ –  114 ಆನಂದಿಸುವವನು ಯಾರು?

ಉತ್ತರ - ಹಗಲಿನ ಐದು ಅಥವಾ ಆರನೆ ಮುಹೂರ್ತದಲ್ಲಿ ಯಾವನು ತನ್ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾನೋ ಅವನು ಆನಂದಿಸುತ್ತಾನೆ

ಯಕ್ಷನು ಕೇಳುವ ಪ್ರಶ್ನೆಗೆ ಧರ್ಮರಾಜನ ವಿಚಿತ್ರವಾದ ಉತ್ತರ ಇಲ್ಲಿದೆ. ಈ ಉತ್ತರದಲ್ಲಿ ಊಟದ ವಿಷಯವಿದೆ, ಊಟವನ್ನು ಯಾವ ಹೊತ್ತಿನಲ್ಲಿ ಮಾಡಬೇಕು ಎನ್ನುವ ವಿಷಯ ಇದೆ, ಯಾವ ರೀತಿಯಾದ ಊಟವನ್ನು ಮಾಡಿದರೆ ಅವನು ಸುಖಿಯಾಗಿರುತ್ತಾನೆ ಎಂಬುದರ ಬಗ್ಗೆ ಮಾಹಿತಿ ಇದೆ, ಊಟವು ಆನಂದವನ್ನು ಉಂಟುಮಾಡುವ ಸಾಧನ ಎಂಬ ವಿಷಯವೂ ಕೂಡ ಇಲ್ಲಿ ಅಡಕವಾಗಿದೆ. "ಆನಂದಿಸುವವನು ಯಾರು?" ಎಂಬುದು ಪ್ರಶ್ನೆ. ಯಾವ ವ್ಯಕ್ತಿ ಹಗಲಿನ ಐದು ಅಥವಾ ಆರನೇ ಮಹೂರ್ತದಲ್ಲಿ ತನ್ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾನೋ ಅವನು ಆನಂದಿಸುತ್ತಾನೆ ಎಂಬುದು ಉತ್ತರ. 

ಒಂದು ದಿನದ ಹಗಲಿನಲ್ಲಿ ಗಂಟೆಗೆ ಒಂದರಂತೆ ಹದಿನೈದು ಮುಹೂರ್ತಗಳು ಇರುತ್ತವೆ ಎಂಬುದಾಗಿ ಜ್ಯೌತಿಷಶಾಸ್ತ್ರ ತಿಳಿಸುತ್ತದೆ. ಅಂದರೆ ಹಗಲು ಹನ್ನೆರಡು ತಾಸು ಎಂಬುದಾಗಿ ಇಟ್ಟುಕೊಂಡರೆ ಒಂದು ಗಂಟೆ ಹದಿನೈದು ನಿಮಿಷಕ್ಕೆ ಸಾಮಾನ್ಯವಾಗಿ ಒಂದು ಮುಹೂರ್ತ ಎಂಬುದಾಗಿ ತಿಳಿಯಬೇಕು. ಆಗ ಐದು ಅಥವಾ ಆರನೇ ಮುಹೂರ್ತವು ಸಾಮಾನ್ಯವಾಗಿ ಅದು ಹನ್ನೊಂದರಿಂದ ಒಂದು ಗಂಟೆಯ ಅವಧಿಯಲ್ಲಿ ಬರುತ್ತದೆ. ಒಂದು ದಿನದಲ್ಲಿ ಎರಡು ಹೊತ್ತು ಮಾತ್ರ ಊಟವನ್ನು ಮಾಡಬೇಕು ಅಥವಾ ಹೊಟ್ಟೆ ತುಂಬಾ (ಮಿತವಾಗಿ) ಊಟಮಾಡಬೇಕು ಎಂಬುದಾಗಿ ಆಯುರ್ವೇದಶಾಸ್ತ್ರ ಹೇಳುತ್ತದೆ - ಅಂದರೆ ಮಧ್ಯಾಹ್ನದ ಒಂದು ಊಟ, ಸಂಜೆಯ ಒಂದು ಊಟ. ಇದರಲ್ಲಿ ಮಧ್ಯಾಹ್ನದ ಊಟಕ್ಕೆ ವಿಶೇಷ ಪ್ರಾಧಾನ್ಯ ಇದೆ. ಹಾಗಾಗಿ ಈ ಮಧ್ಯಾಹ್ನದ ಊಟವನ್ನು ಇಲ್ಲಿ ವಿಶೇಷವಾಗಿ ಪರಿಗಣಿಸಲಾಗಿದೆ. ಹಗಲಿನ ಐದು ಅಥವಾ ಆರನೇ ಮುಹೂರ್ತವನ್ನು ಮಧ್ಯಾಹ್ನದ ಊಟದ ಮುಹೂರ್ತ ಎಂಬುದಾಗಿ ಹೇಳಲಾಗಿದೆ. ಮನೆಯಲ್ಲಿ ಮಾಡಿದ ಅಡಿಗೆಯಿಂದಲೇ ಊಟವನ್ನು ಮಾಡಿ ಮಾಡಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಿದೆ. 

ಯಾರು ಮನೆಯಲ್ಲಿ ಊಟ ಮಾಡುತ್ತಾನೋ ಅವನು ಅತ್ಯಂತ ಶುಚಿಯು ರುಚಿಯೂ ಆಗಿರುವ ಊಟವನ್ನು ಮಾಡಬಹುದು. ಬೇರೆ ಮನೆಯಲ್ಲಿ ಊಟ ಮಾಡಿದರೆ ಇದನ್ನು ನಿರೀಕ್ಷಿಸುವುದು ಕಷ್ಟವೆಂದರ್ಥ. ಅದಕ್ಕೆ ಒಂದು ಮಾತು ಕೂಡ ಇದೆ 'ಪರಾನ್ನಂ ಪ್ರಾಣಸಂಕಟಂ' ಎಂಬುದಾಗಿ. ಯಾರು ಬೇರೆಯವರ ಮನೆಯಲ್ಲಿ ಮಾಡುವ ಊಟವನ್ನೇ ಬಯಸುತ್ತಾರೋ ಅವರು ನರಕಭಾಜರಾಗುತ್ತಾರೆ ಎಂಬುದಾಗಿ ತಿಳಿಸುತ್ತದೆ ಧರ್ಮಶಾಸ್ತ್ರ. ಈ ಹಿಂದೆ ಸ್ವಪಾಕ ಎಂಬ ಒಂದು ವ್ಯವಸ್ಥೆ ಇತ್ತು. ಅಂದರೆ ತನ್ನ ಊಟಕ್ಕೆ ತಾನೇ ಪಾಕವನ್ನೂ ಮಾಡಿಕೊಳ್ಳಬೇಕು ಎಂಬುದಾಗಿ. ಅಂದರೆ ತನ್ನ ಮಡದಿ ಅಥವಾ ತಾಯಿ ಮಾಡಿದ ಅಡುಗೆಯಲ್ಲಿ ಕೇವಲ ರುಚಿ ಶುಚಿ ಮಾತ್ರವಿರದೆ, ಪ್ರೀತಿಯೂ ಸೇರಿರುವುದರಿಂದ ಇದಕ್ಕೆ ಬೆಲೆಯನ್ನು ಕಟ್ಟಲಾಗದು. ಆನಂದವು ಅನ್ನದಿಂದ ಸಿಗುತ್ತದೆ ಎಂಬುದನ್ನು ಉಪನಿಷತ್ತುಗಳು ಸಾರುತ್ತವೆ. ಇದು ಅನುಭವ ಸಿದ್ಧವೂ ಹೌದು. ಅನ್ನವನ್ನು ಊಟ ಮಾಡಿದರೆ ಯಾರಿಗೆ ತಾನೆ ತೃಪ್ತಿ ಸಿಗದು! ಆದ್ದರಿಂದ ಆನಂದಕ್ಕಾಗಿ ಎಂತಹ ಅನ್ನವನ್ನು? ಯಾವಾಗ? ಎಲ್ಲಿ ಸ್ವೀಕರಿಸಬೇಕು? ಎಂಬುದನ್ನು ಬಹಳ ಸೊಗಸಾಗಿ ವಿವರಿದ್ದಾನೆ ಧರ್ಮರಾಜ.

ಸೂಚನೆ : 01/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.   

Sunday, November 24, 2024

ವ್ಯಾಸ ವೀಕ್ಷಿತ 112 (Vyaasa Vikshita112)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಉಡುಗೊರೆಗಳ ಕೊಡುವವರ ಸಡಗರಗಳು

ವೃಷ್ಣಿ-ಅಂಧಕ-ವಂಶಗಳ ವೀರರು ಅಲ್ಲಿ ಬಂದು ಸೇರಿದ್ದರಷ್ಟೆ. ಅವರಲ್ಲಿ ಕೆಲವರನ್ನು ಗುರುವಿನಂತೆಯೂ ಕೆಲವರನ್ನು ಸ್ನೇಹಿತರಂತೆಯೂ ಯುಧಿಷ್ಠಿರನು ಸ್ವಾಗತಿಸಿದನು. ಕೆಲವರಿಗೆ ತಾನೇ ಅಭಿವಾದನ ಮಾಡಿದನು. ಮತ್ತೆ ಕೆಲವರು ಆತನಿಗೆ ಅಭಿವಾದನ ಮಾಡಿದರು. ವಧುವಾದ ಸುಭದ್ರೆಗಾಗಿ ಉತ್ತಮವಾದ ಧನವನ್ನು ಕೃಷ್ಣನು ಈಗಿತ್ತನು.

ಕಿಂಕಿಣಿಗಳಿಂದಲೂ ಜಾಲಗಳಿಂದಲೂ ಒಪ್ಪುವ ಸುವರ್ಣ-ಖಚಿತವಾದ ಸಾವಿರ ರಥಗಳು, ಅವೊಂದೊಂದಕ್ಕೂ ನಾಲ್ಕು ನಾಲ್ಕು ಕುದುರೆಗಳು, ಅವಕ್ಕೆ ಚೆನ್ನಾಗಿ ಶಿಕ್ಷಿತರಾಗಿದ್ದ ಸೂತರು – ಇವನ್ನು ಕೃಷ್ಣನು ಬಳುವಳಿಯಾಗಿತ್ತನು.

ಜೊತೆಗೆ, ಚೆನ್ನಾಗಿ ಹಾಲ್ಕರೆಯುವ ಹಾಗೂ ತೇಜಶ್ಶಾಲಿಗಳಾದ, ಮತ್ತು ಮಥುರೆಯಿಂದ ಬಂದ, ಹತ್ತು ಸಾವಿರ ಗೋವುಗಳನ್ನೂ ಇತ್ತನು. ಅಲ್ಲದೆ, ಚಂದ್ರನ ಕಿರಣಗಳ ಹಾಗೆ ಹೊಳೆಯುವ ಬಿಳಿ ಬಣ್ಣದ ಶುದ್ಧಜಾತಿಯ ಕುದುರೆಗಳು - ಬಂಗಾರದಿಂದ ಅಲಂಕಾರಗೊಂಡಿರತಕ್ಕವು - ಅವನ್ನೂ ಇತ್ತನು. ಇವಲ್ಲದೆ, ಕಪ್ಪುಗೂದಲಿನ ಐನೂರು ಅಶ್ವತರಗಳು, ಎಂದರೆ ಹೇಸರಗತ್ತೆಗಳು, ಹಾಗೂ ಬಿಳಿಕೂದಲಿನ ಐನೂರು ಹೇಸರಗತ್ತೆಗಳು – ಇವನ್ನೂ ಕೊಟ್ಟನು; ಅವುಗಳೆಲ್ಲವೂ ವಾಯುವೇಗದಲ್ಲಿ ಓಡತಕ್ಕವೂ, ಹಾಗೂ ಹೇಳಿದಂತೆ ಕೇಳತಕ್ಕವೂ ಆಗಿದ್ದವು.

ಇದಲ್ಲದೆ ಒಂದು ಸಾವಿರ ಕನ್ಯೆಯರನ್ನೂ ಕೊಟ್ಟನು; ಮತ್ತು ಅವರಾದರೂ ಸ್ನಾನ-ಪಾನ-ಉತ್ಸವಗಳಲ್ಲಿ ಬಳಕೆಗೆ ಬರತಕ್ಕವರು. ವಯಸ್ಸಿಗೆ ಬಂದವರು. ಒಳ್ಳೆಯ ವೇಷದಿಂದ ಕೂಡಿರತಕ್ಕವರು, ಬೆಳ್ಳಗಿರುವವರು. ಹಾಗೂ ಕಾಂತಿ-ಸಂಪನ್ನರು, ನೂರು ನೂರು ಚಿನ್ನದ ಮಣಿಗಳಿಂದ ಕೂಡಿದ ಹಾರಗಳನ್ನು ಧರಿಸಿರುವವರು, ಮೈಮೇಲೆ ರೋಮಗಳಿಲ್ಲದವರು, ಚೆನ್ನಾಗಿ ಅಲಂಕಾರ ಮಾಡಿಕೊಂಡಿರುವವರು, ಹಾಗೂ ಸೇವಾ-ಕಾರ್ಯಗಳಲ್ಲಿ ದಕ್ಷರಾಗಿರತಕ್ಕವರು; ಇಂತಹವರನ್ನನ್ನಿತ್ತನು.

ಹಾಗೆಯೇ ಕನ್ಯಾ-ಧನವಾಗಿಯೇ, ಬಾಹ್ಲೀಕದೇಶದ ಒಂದು ಲಕ್ಷ ಕುದುರೆಗಳು, ಸವಾರಿಯನ್ನು ಜೋಡಿಸಿಯಾಗಿರತಕ್ಕವು - ಅವನ್ನೂ ಕೊಟ್ಟನು. ಅಲ್ಲದೆ ಕೃತ ಮತ್ತು ಅಕೃತಗಳಾದ, ಎಂದರೆ ಕೃತ್ರಿಮ ಹಾಗೂ ಸಹಜಗಳಾದ, ಆದರೆ ಅಗ್ನಿಯಂತೆ ಕಂಗೊಳಿಸುವ, ಮನುಷ್ಯತೂಕದ ಹತ್ತು ಸುವರ್ಣರಾಶಿಗಳನ್ನೂ ಕೃಷ್ಣನು ಕೊಟ್ಟನು.

ಇನ್ನು ಬಲರಾಮನು ಒಂದು ಸಾವಿರ ಆನೆಗಳನ್ನು ಕೊಟ್ಟನು. ಅವಾದರೂ ಮೂರೆಡೆಗಳಲ್ಲಿ ಮದಜಲವನ್ನು ಸುರಿಸತಕ್ಕವು. ಪರ್ವತ-ಶಿಖರದಂತೆ ಎತ್ತರದ ನಿಲುವುಳ್ಳವು. ಯುದ್ಧಗಳಲ್ಲಿ ಎಂದೂ ಹಿಂದಿರುಗವು. ಅವುಗಳಿಗೆ ಕಟ್ಟಿದ್ದ ಘಂಟೆಗಳು ಸುಲಕ್ಷಣವಾಗಿದ್ದವು, ಸುಂದರವಾಗಿದ್ದವು, ಕನಕ-ಹಾರಗಳನ್ನು ಹೊಂದಿದ್ದವು; ಹಾಗೂ ಆ ಆನೆಗಳಷ್ಟನ್ನೂ ಹಲ-ಧರನು, ಎಂದರೆ ಬಲರಾಮನು, ಪಾಣಿ-ಗ್ರಹಣಿಕವಾಗಿ, ಎಂದರೆ ವೈವಾಹಿಕವಾದ ಉಡುಗೊರೆಯಾಗಿ, ಅರ್ಜುನನಿಗಿತ್ತನು. ಈ ಸಂಬಂಧವು ತನಗೂ ಒಪ್ಪಿಗೆ - ಎಂಬುದನ್ನು ಈ ಮೂಲಕ ಸೂಚಿಸಿದನು.

ನದಿಗಳ ನೀರುಗಳೆಲ್ಲ ಸಮುದ್ರವನ್ನು ಬಂದು ಸೇರುವುವು, ಅಲ್ಲವೆ? ಹಾಗೆ ಇಲ್ಲೂ ಆಯಿತು. ಮಹಾಧನಗಳು ಹಾಗೂ ರತ್ನಗಳೇ ಪ್ರವಾಹ; ವಸ್ತ್ರಗಳು ಹಾಗೂ ಕಂಬಳಿಗಳೇ ನೊರೆಗಳು; ಮಹಾಗಜಗಳೇ ದೊಡ್ಡ ಮೊಸಳೆಗಳು; ಪತಾಕೆಗಳೇ ಪಾಚಿಗಳು - ಈ ಪ್ರಕಾರವಾಗಿ ಇವೆಲ್ಲವೂ ಬಂದು ಪಾಂಡವನೆಂಬ ಸಾಗರವನ್ನುಸೇರಿದವು. ಮೊದಲೇ ತುಂಬಿದ್ದುದನ್ನು ಮತ್ತೂ ತುಂಬಿಸಿದವು.

ಆದರೆ ಇದೆಲ್ಲವೂ ಶತ್ರುಗಳಿಗೆ ಶೋಕ-ಪ್ರದವಾಗಿದ್ದಿತು. ಧರ್ಮರಾಜನಾದ ಯುಧಿಷ್ಠಿರನು ಅದೆಲ್ಲವನ್ನೂ ಸ್ವೀಕರಿಸಿದನು. ವೃಷ್ಣಿ-ಅಂಧಕ-ವಂಶಗಳ ಮಹಾರಥರನ್ನು ಆದರಿಸಿದನು. 

ಪುಣ್ಯಶಾಲಿಗಳಾದ ಮನುಷ್ಯರು ದೇವಲೋಕದಲ್ಲಿ ಯಾವ ರೀತಿ ಸಂತೋಷದಿಂದ ವಿಹರಿಸುವರೂ, ಅದೇ ಬಗೆಯಲ್ಲಿ ಇಲ್ಲಿ ಕುರುವಂಶ-ವೃಷ್ಣಿವಂಶ-ಅಂಧಕವಂಶಗಳ ವೀರರು ವಿಹರಿಸಿದರು.

ಸೂಚನೆ : 24/11/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 115 (Yaksha prashne 115)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ –  114 ಆನಂದಿಸುವವನು ಯಾರು?

ಉತ್ತರ - ಹಗಲಿನ ಐದು ಅಥವಾ ಆರನೆ ಮುಹೂರ್ತದಲ್ಲಿ ಯಾವನು ತನ್ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾನೋ ಅವನು ಆನಂದಿಸುತ್ತಾನೆ

ಯಕ್ಷನು ಕೇಳುವ ಪ್ರಶ್ನೆಗೆ ಧರ್ಮರಾಜನ ವಿಚಿತ್ರವಾದ ಉತ್ತರ ಇಲ್ಲಿದೆ. ಈ ಉತ್ತರದಲ್ಲಿ ಊಟದ ವಿಷಯವಿದೆ, ಊಟವನ್ನು ಯಾವ ಹೊತ್ತಿನಲ್ಲಿ ಮಾಡಬೇಕು ಎನ್ನುವ ವಿಷಯ ಇದೆ, ಯಾವ ರೀತಿಯಾದ ಊಟವನ್ನು ಮಾಡಿದರೆ ಅವನು ಸುಖಿಯಾಗಿರುತ್ತಾನೆ ಎಂಬುದರ ಬಗ್ಗೆ ಮಾಹಿತಿ ಇದೆ, ಊಟವು ಆನಂದವನ್ನು ಉಂಟುಮಾಡುವ ಸಾಧನ ಎಂಬ ವಿಷಯವೂ ಕೂಡ ಇಲ್ಲಿ ಅಡಕವಾಗಿದೆ. "ಆನಂದಿಸುವವನು ಯಾರು?" ಎಂಬುದು ಪ್ರಶ್ನೆ. ಯಾವ ವ್ಯಕ್ತಿ ಹಗಲಿನ ಐದು ಅಥವಾ ಆರನೇ ಮಹೂರ್ತದಲ್ಲಿ ತನ್ನ ಮನೆಯಲ್ಲಿ ಅಡುಗೆ ಮಾಡಿ ಊಟ ಮಾಡುತ್ತಾನೋ ಅವನು ಆನಂದಿಸುತ್ತಾನೆ ಎಂಬುದು ಉತ್ತರ. 

ಒಂದು ದಿನದ ಹಗಲಿನಲ್ಲಿ ಗಂಟೆಗೆ ಒಂದರಂತೆ ಹದಿನೈದು ಮುಹೂರ್ತಗಳು ಇರುತ್ತವೆ ಎಂಬುದಾಗಿ ಜ್ಯೌತಿಷಶಾಸ್ತ್ರ ತಿಳಿಸುತ್ತದೆ. ಅಂದರೆ ಹಗಲು ಹನ್ನೆರಡು ತಾಸು ಎಂಬುದಾಗಿ ಇಟ್ಟುಕೊಂಡರೆ ಒಂದು ಗಂಟೆ ಹದಿನೈದು ನಿಮಿಷಕ್ಕೆ ಸಾಮಾನ್ಯವಾಗಿ ಒಂದು ಮುಹೂರ್ತ ಎಂಬುದಾಗಿ ತಿಳಿಯಬೇಕು. ಆಗ ಐದು ಅಥವಾ ಆರನೇ ಮುಹೂರ್ತವು ಸಾಮಾನ್ಯವಾಗಿ ಅದು ಹನ್ನೊಂದರಿಂದ ಒಂದು ಗಂಟೆಯ ಅವಧಿಯಲ್ಲಿ ಬರುತ್ತದೆ. ಒಂದು ದಿನದಲ್ಲಿ ಎರಡು ಹೊತ್ತು ಮಾತ್ರ ಊಟವನ್ನು ಮಾಡಬೇಕು ಅಥವಾ ಹೊಟ್ಟೆ ತುಂಬಾ (ಮಿತವಾಗಿ) ಊಟಮಾಡಬೇಕು ಎಂಬುದಾಗಿ ಆಯುರ್ವೇದಶಾಸ್ತ್ರ ಹೇಳುತ್ತದೆ - ಅಂದರೆ ಮಧ್ಯಾಹ್ನದ ಒಂದು ಊಟ, ಸಂಜೆಯ ಒಂದು ಊಟ. ಇದರಲ್ಲಿ ಮಧ್ಯಾಹ್ನದ ಊಟಕ್ಕೆ ವಿಶೇಷ ಪ್ರಾಧಾನ್ಯ ಇದೆ. ಹಾಗಾಗಿ ಈ ಮಧ್ಯಾಹ್ನದ ಊಟವನ್ನು ಇಲ್ಲಿ ವಿಶೇಷವಾಗಿ ಪರಿಗಣಿಸಲಾಗಿದೆ. ಹಗಲಿನ ಐದು ಅಥವಾ ಆರನೇ ಮುಹೂರ್ತವನ್ನು ಮಧ್ಯಾಹ್ನದ ಊಟದ ಮುಹೂರ್ತ ಎಂಬುದಾಗಿ ಹೇಳಲಾಗಿದೆ. ಮನೆಯಲ್ಲಿ ಮಾಡಿದ ಅಡಿಗೆಯಿಂದಲೇ ಊಟವನ್ನು ಮಾಡಿ ಮಾಡಬೇಕು ಎಂಬುದನ್ನು ಇಲ್ಲಿ ಒತ್ತಿ ಹೇಳಿದೆ. 

ಯಾರು ಮನೆಯಲ್ಲಿ ಊಟ ಮಾಡುತ್ತಾನೋ ಅವನು ಅತ್ಯಂತ ಶುಚಿಯು ರುಚಿಯೂ ಆಗಿರುವ ಊಟವನ್ನು ಮಾಡಬಹುದು. ಬೇರೆ ಮನೆಯಲ್ಲಿ ಊಟ ಮಾಡಿದರೆ ಇದನ್ನು ನಿರೀಕ್ಷಿಸುವುದು ಕಷ್ಟವೆಂದರ್ಥ. ಅದಕ್ಕೆ ಒಂದು ಮಾತು ಕೂಡ ಇದೆ 'ಪರಾನ್ನಂ ಪ್ರಾಣಸಂಕಟಂ' ಎಂಬುದಾಗಿ. ಯಾರು ಬೇರೆಯವರ ಮನೆಯಲ್ಲಿ ಮಾಡುವ ಊಟವನ್ನೇ ಬಯಸುತ್ತಾರೋ ಅವರು ನರಕಭಾಜರಾಗುತ್ತಾರೆ ಎಂಬುದಾಗಿ ತಿಳಿಸುತ್ತದೆ ಧರ್ಮಶಾಸ್ತ್ರ. ಈ ಹಿಂದೆ ಸ್ವಪಾಕ ಎಂಬ ಒಂದು ವ್ಯವಸ್ಥೆ ಇತ್ತು. ಅಂದರೆ ತನ್ನ ಊಟಕ್ಕೆ ತಾನೇ ಪಾಕವನ್ನೂ ಮಾಡಿಕೊಳ್ಳಬೇಕು ಎಂಬುದಾಗಿ. ಅಂದರೆ ತನ್ನ ಮಡದಿ ಅಥವಾ ತಾಯಿ ಮಾಡಿದ ಅಡುಗೆಯಲ್ಲಿ ಕೇವಲ ರುಚಿ ಶುಚಿ ಮಾತ್ರವಿರದೆ, ಪ್ರೀತಿಯೂ ಸೇರಿರುವುದರಿಂದ ಇದಕ್ಕೆ ಬೆಲೆಯನ್ನು ಕಟ್ಟಲಾಗದು. ಆನಂದವು ಅನ್ನದಿಂದ ಸಿಗುತ್ತದೆ ಎಂಬುದನ್ನು ಉಪನಿಷತ್ತುಗಳು ಸಾರುತ್ತವೆ. ಇದು ಅನುಭವ ಸಿದ್ಧವೂ ಹೌದು. ಅನ್ನವನ್ನು ಊಟ ಮಾಡಿದರೆ ಯಾರಿಗೆ ತಾನೆ ತೃಪ್ತಿ ಸಿಗದು! ಆದ್ದರಿಂದ ಆನಂದಕ್ಕಾಗಿ ಎಂತಹ ಅನ್ನವನ್ನು? ಯಾವಾಗ? ಎಲ್ಲಿ ಸ್ವೀಕರಿಸಬೇಕು? ಎಂಬುದನ್ನು ಬಹಳ ಸೊಗಸಾಗಿ ವಿವರಿದ್ದಾನೆ ಧರ್ಮರಾಜ

ಸೂಚನೆ : 24/11/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, November 18, 2024

ವ್ಯಾಸ ವೀಕ್ಷಿತ 111 ಸುಭದ್ರೆ-ದ್ರೌಪದಿಯರ ಮಿಲನ, ಎಲ್ಲರ ಸಂಭ್ರಮ (Vyaasa Vikshita 111 )

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)





ವಿವಾಹವು ನೆರವೇರಿದ ಬಳಿಕ ಪತಿಗೃಹಕ್ಕೆ ಬಂದ ಸುಭದ್ರೆಯು ಕುಂತಿಗೆ ಪ್ರಣಾಮ ಮಾಡಿದಳು. ಆ ಬಳಿಕ ತ್ವರೆಯಿಂದ ದ್ರೌಪದಿಯತ್ತ ನಡೆದಳು, ಪೂರ್ಣಚಂದ್ರ-ಮುಖಿಯಾದ ಆ ಸುಭದ್ರೆ. ದ್ರೌಪದಿಗೆ ನಮಸ್ಕಾರವನ್ನು ಮಾಡುತ್ತಾ, "ತಮ್ಮ ದಾಸಿ ನಾನು" - ಎಂಬುದಾಗಿ ಹೇಳಿದಳು.


ದ್ರೌಪದಿಯೂ ಪ್ರತ್ಯುತ್ಥಾನ ಮಾಡಿದಳು, ಎಂದರೆ ತಾನೂ ಎದ್ದು ನಿಂತಳು. ಕೃಷ್ಣಸೋದರಿಯಾದ ಸುಭದ್ರೆಯನ್ನು ಆಲಿಂಗಿಸಿಕೊಂಡಳು. "ನಿನ್ನ ಪತಿಯು ನಿಃಸಪತ್ನನಾಗಿರಲಿ" ಎಂಬುದಾಗಿ ಆಶೀರ್ವಾದವನ್ನು ಮಾಡಿದಳು. ನಿಃಸಪತ್ನನಾಗಿರಲಿ ಎಂದರೆ ಶತ್ರು-ರಹಿತನಾಗಿರಲಿ – ಎಂದರ್ಥ. ಸಂತುಷ್ಟಳಾದ ಸುಭದ್ರೆಯೂ ಸಹ ಅವಳಿಗೆ "ಹೌದು, ಹೀಗೆಯೇ ಅದುವೇ ಆಗಲಿ" ಎಂಬುದಾಗಿ ಹೇಳಿದಳು.


ಇದೆಲ್ಲವೂ ಆಗುತ್ತಿರಲು, ಮಹಾರಥರಾದ ಪಾಂಡುಪುತ್ರರು ಹರ್ಷಗೊಂಡರು. ಕುಂತಿಯಂತೂ ಪರಮಪ್ರೀತಳೇ ಆದಳು. ಎಂದರೆ ಬಹಳವೇ ಸಂತೋಷಗೊಂಡಳು.

ತನ್ನ ಶ್ರೇಷ್ಠ-ನಗರವಾದ ಇಂದ್ರಪ್ರಸ್ಥಕ್ಕೆ ಪಾಂಡವ-ಶ್ರೇಷ್ಠನಾದ ಅರ್ಜುನನು ಆಗಮಿಸಿರುವನು - ಎಂಬುದನ್ನು ಪುಂಡರೀಕಾಕ್ಷನೆನಿಸಿದ ಶ್ರೀಕೃಷ್ಣನು ಕೇಳಿದನು. ಪುಂಡರೀಕದಂತೆ, ಎಂದರೆ ಕಮಲದಂತೆ, ಅಕ್ಷಿಗಳುಳ್ಳವನು, ಎಂದರೆ ಕಣ್ಣುಗಳುಳ್ಳವನು -   ಪುಂಡರೀಕಾಕ್ಷ. ಅರ್ಥಾತ್, ಕಮಲವನ್ನು ಹೋಲುವ ಕಣ್ಣುಗಳುಳ್ಳವನು. ಹಾಗಿರುವ ಕೃಷ್ಣನು ಬಲರಾಮನೊಂದಿಗೆ ಅಲ್ಲಿಗೆ ಆಗಮಿಸಿದನು. ಅವನೊಂದಿಗೆ ವೃಷ್ಣಿವಂಶ-ಅಂಧಕವಂಶಗಳ ಪ್ರಧಾನ-ವೀರರೆನಿಸಿದ ಮಹಾರಥರೂ ಇದ್ದರು.


ಸೋದರರು, ಪುತ್ರರು, ಅನೇಕ ಯೋಧರು - ಇವರುಗಳಿಂದ ಸುತ್ತುವರೆಯಲ್ಪಟ್ಟವನಾಗಿ, ಅಲ್ಲಿಗೆ ಬಂದನು, ಶ್ರೀಕೃಷ್ಣನು. ಆತನು ದೊಡ್ಡ ಸೈನ್ಯದಿಂದ ರಕ್ಷಿಸಲ್ಪಟ್ಟವನಾಗಿ, ಶತ್ರುಗಳಿಗೆ ತಾಪವುಂಟುಮಾಡುವಂತಹವನಾಗಿದ್ದನು. ಧೀಮಂತನೂ ಆದ ಅಕ್ರೂರನೂ ಅಲ್ಲಿಗೆ ಬಂದನು; ಆತನು ವೃಷ್ಣಿವೀರರ ಸೇನಾಪತಿಯೂ ಶತ್ರು-ದಮನನೂ ಮಹಾಕೀರ್ತಿ-ಶಾಲಿಯೂ ದಾನ-ವೀರನೂ ಆದವನು.


ಸಾಕ್ಷಾದ್ ಬೃಹಸ್ಪತಿಯ ಶಿಷ್ಯನೂ ಧೀಮಂತನೂ ಮನಸ್ವಿಯೂ ಆದ ಉದ್ಧವನೂ ಆತನ ಜೊತೆಗೆ ಬಂದನು. ಇವರಲ್ಲದೆ ಸತ್ಯಕ ಹಾಗೂ ಸಾತ್ಯಕಿ, ಕೃತವರ್ಮ, ಸಾಂಬ - ಮುಂತಾದ ವೃಷ್ಣಿ-ಅಂಧಕವಂಶಗಳಿಗೆ ಸೇರಿದ ವೀರರು ತಮ್ಮ ತಮ್ಮ ಬಳುವಳಿಗಳೊಂದಿಗೆ ಬಂದು ಸೇರಿದರು. ಮಾಧವನು ಆಗಮಿಸಿದನು - ಎಂಬುದಾಗಿ ಕೇಳಿ, ಆತನನ್ನು ಎದುರ್ಗೊಂಡು ಸ್ವಾಗತಿಸಲೆಂದು, ಯಮಳರನ್ನು, ಎಂದರೆ ಅವಳಿ-ಜವಳಿಗಳಾದ ನಕುಲ-ಸಹದೇವರನ್ನು, ಯುಧಿಷ್ಠಿರನು ಕಳುಹಿಸಿಕೊಟ್ಟನು.


ಸಮೃದ್ಧಿ-ಸಂಪನ್ನವಾದ ವೃಷ್ಣಿ-ಸಮುದಾಯವು ಖಾಂಡವ-ಪ್ರಸ್ಥವನ್ನು ಪ್ರವೇಶಿಸಿತು, ಮತ್ತು ಅದಾದರೂ ಧ್ವಜ-ಪತಾಕೆಗಳಿಂದ ಕಂಗೊಳಿಸುತ್ತಿತ್ತು. ದಾರಿಗಳನ್ನೆಲ್ಲಾ ಗುಡಿಸಿ ಸಾರಿಸಲಾಗಿತ್ತು. ಪುಷ್ಪ-ರಾಶಿಗಳಿಂದ ಶೋಭಿಸುತ್ತಿತ್ತು, ಆ ಪುರಿ. ಸುಗಂಧ-ಭರಿತವಾದ ವಸ್ತುಗಳಿಂದಲೂ ಶೀತಲ-ಚಂದನ-ರಸಗಳಿಂದಲೂ ಅದು ಸುಗಂಧಿತವಾಗಿತ್ತು. ಎಡೆ ಎಡೆಗಳಲ್ಲೂ ಸುಗಂಧಿಯಾದ ಅಗುರುಗಳನ್ನು ಸುಡಲಾಗಿತ್ತು. ಹೃಷ್ಟ-ಪುಷ್ಟ ಜನರಿಂದ ಅದು ಕಿಕ್ಕಿರಿದಿತ್ತು. ವಣಿಜರಿಂದ, ಎಂದರೆ ವ್ಯಾಪಾರಿಗಳಿಂದ, ಅದು ಶೋಭೆಗೊಂಡಿತ್ತು.


ಬಲರಾಮ, ವೃಷ್ಣಿ-ಅಂಧಕ-ಭೋಜವಂಶಗಳ ವೀರರು - ಇವರುಗಳೊಂದಿಗೆ ಪುರುಷೋತ್ತಮನೂ ಮಹಾಬಾಹುವೂ ಆದ ಕೇಶವನು ಅಗಮಿಸಿದನು. ಸಹಸ್ರಾರು ಸಂಖ್ಯೆಯಲ್ಲಿ ಅಲ್ಲಿಗೆ ಬಂದಿದ್ದ ಪೌರರಿಂದಲೂ ಬ್ರಾಹ್ಮಣರಿಂದಲೂ ಪೂಜಿತನಾಗಿ ಬಂದವನೇ, ಇಂದ್ರನ ಮನೆಯಂತಿದ್ದ ರಾಜಗೃಹವನ್ನು ಕೃಷ್ಣನು ಪ್ರವೇಶಿಸಿದನು.


ವಿಧ್ಯುಕ್ತವಾದ ರೀತಿಯಲ್ಲಿ ಬಲರಾಮನನ್ನು ಯುಧಿಷ್ಠಿರನು ಸಂಧಿಸಿದನು. ಕೃಷ್ಣನು ಬಂದಾಗ, ಆತನ ಶಿರಸ್ಸನ್ನು ಆಘ್ರಾಣಿಸಿ, ಬಾಹುಗಳಿಂದ ಆಲಿಂಗಿಸಿಕೊಂಡನು. ಶಿರಸ್ಸನ್ನು ಆಘ್ರಾಣಿಸುವುದು ಎಂದರೆ ತಲೆಯನ್ನು ಮೂಸಿನೋಡುವುದು; ಇದು ಪ್ರೀತಿ-ವಾತ್ಸಲ್ಯ-ದ್ಯೋತಕ. ಸಂತೋಷಗೊಂಡ ಯುಧಿಷ್ಠಿರನನ್ನು ಬಲರಾಮನು ಆದರಿಸಿದನು; ಬಳಿಕ ನರಶ್ರೇಷ್ಠನಾದ ಭೀಮನನ್ನೂ ಆದರಿಸಿದನು. ವೃಷ್ಣಿ-ವಂಶ-ಅಂಧಕ-ವಂಶದವರುಗಳನ್ನು ಯಥಾಯೋಗ್ಯವಾಗಿ ಸತ್ಕರಿಸಿದನು, ಯುಧಿಷ್ಠಿರನು.


ಸೂಚನೆ : 17/11/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 114 (Yaksha prashne 114)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ –  113 ಧರ್ಮರತನಾದವನಿಗೆ ಏನು ಸಿಗುತ್ತದೆ?

ಉತ್ತರ - ಒಳ್ಳೆಯ ಗತಿ

ಇಲ್ಲಿ ಯಕ್ಷನು ಧರ್ಮರಾಜನಿಗೆ ಈ ಪ್ರಶ್ನೆಯನ್ನು ಮುಂದಿಡುತ್ತಿದ್ದಾನೆ. "ಧರ್ಮದಲ್ಲಿ ಯಾವಾಗಲೂ ನಿರತನಾದವನಿಗೆ - ಆಸಕ್ತನಾದವನಿಗೆ ಧರ್ಮಚರಣೆಯನ್ನು ಸದಾ ಮಾಡುತ್ತಿರುವವನಿಗೆ ಏನು ಲಭಿಸುತ್ತದೆ?" ಎಂದು. ಅದಕ್ಕೆ ಉತ್ತರ 'ಒಳ್ಳೆಯ ಗತಿ - ಸದ್ಗತಿ' ಎಂಬುದಾಗಿ. ನಾವು ಇಲ್ಲಿ ಚಿಂತಿಸಬೇಕಾದ ವಿಷಯ ಒಳ್ಳೆಯ ಗತಿ ಎಂದರೇನು? ಮತ್ತು ಅದಕ್ಕೆ ಧರ್ಮವು ಹೇಗೆ ಸಹಕಾರಿ ಆಗುತ್ತದೆ? ಎಂಬುದನ್ನು.


ಈ ಹಿಂದಿನ ಅನೇಕ ಲೇಖನಗಳಲ್ಲಿ ಧರ್ಮದ ಬಗ್ಗೆ ವಿಚಾರವನ್ನು ವಿವರಿಸಲಾಗಿತ್ತು. ಸಾಮಾನ್ಯವಾಗಿ ನಾವು 'ಧರ್ಮ' ಎಂಬ ಪದಕ್ಕೆ 'ರಿಲಿಜನ್' ಎಂಬ ಇಂಗ್ಲೀಷ್ ಪದವನ್ನು ಉಪಯೋಗಿಸಿಕೊಂಡು 'ಮತ' ಎಂಬ ಅರ್ಥದಲ್ಲಿ ಬಳಸುತ್ತಿರುವುದನ್ನು ನೋಡುತ್ತಿದ್ದೇವೆ. ಮತ ಎಂಬ ಅರ್ಥದಲ್ಲಿ ಈ ಧರ್ಮ ಎಂಬ ಪದ ಬಳಕೆಯಾಗುವುದಿಲ್ಲ. "ಧರ್ಮ ಎಂದರೆ ಯಾವುದೋ ಒಂದು ಕಂಡೀಶನ್ನಪ್ಪ" ಎಂದು ಧರ್ಮ ಎಂಬ ಪದಕ್ಕೆ ಅದರದರ ಸಹಜವಾದ ಸ್ಥಿತಿ ಎಂಬ ಅರ್ಥದಲ್ಲಿ ಶ್ರೀರಂಗ ಮಹಾಗುರುಗಳು ವಿವರಣೆಯನ್ನು ನೀಡುತ್ತಿದ್ದರು. ಅಂದರೆ ಆ ಆ ವಸ್ತುವಿನ ಯಾವ ಸಹಜ ಸ್ವಭಾವವಿದೆಯೋ ಅದನ್ನೇ ಧರ್ಮ ಎಂಬುದಾಗಿ ಕರೆಯುತ್ತಾರೆ. ಆ ಧರ್ಮವನ್ನು ಸಹಜಸ್ಥಿತಿಯನ್ನು ಉಳಿಸಲು ಮಾಡಬೇಕಾದ ಯಾವ ಕಾರ್ಯವಿದೆಯೋ ಅದನ್ನು ಕೂಡ ಧರ್ಮ ಎಂಬುದಾಗಿ ಕರೆದು, ಅದನ್ನು ಆಚರಣೆ ಎಂದು ಕರೆಯಲಾಗುತ್ತದೆ. ಧರ್ಮದ ಆಚರಣೆಯಿಂದ ಧರ್ಮವು ಸಿದ್ಧವಾಗುತ್ತದೆ ಎಂಬುದು ಇದರ ತಾತ್ಪರ್ಯ. ಒಳ್ಳೆಯ ಗತಿ ಎಂದರೆ ಅಂತಹ ಧರ್ಮವನ್ನು ಅದರ ಸಹಜಸ್ವಭಾವವನ್ನು ಆ ಕಂಡೀಶನ್ ಅನ್ನು ಉಳಿಸಲು ಬೇಕಾದ ಗತಿ - ನಡೆ ಎಂಬುದಾಗಿ ಅರ್ಥ. ಮನುಷ್ಯನು ಒಳ್ಳೆಯ ಗತಿಯನ್ನು ಪಡೆಯಬೇಕಾದದ್ದು. ಆತ ಯಾವ ಗತಿಯನ್ನು ಪಡೆಯಬೇಕು ಎಂದರೆ ಮೋಕ್ಷದ ಕಡೆ ಅಥವಾ ಮತ್ತೆ ಹುಟ್ಟಿಲ್ಲದ ರೀತಿಯಲ್ಲಿ. ಇದಕ್ಕೆ ಅನುಗುಣವಾದ ತನ್ನ ಜೀವನದ ನಡೆಯನ್ನು ಇಟ್ಟುಕೊಳ್ಳುವುದನ್ನೇ ಒಳ್ಳೆಯ ನಡೆ 'ಸದ್ಗತಿ' ಎಂಬುದಾಗಿ ಕರೆಯಲಾಗಿದೆ. ಸದ್ಗತಿ ಎಂಬುದಕ್ಕೆ ನಾವಿಂದು ಕೇವಲ ಮರಣ ಎಂಬುದಾಗಿ ಅರ್ಥೈಸುತಿದ್ದೇವೆ. ಆದರೆ ಸತ್ತಿನ ಅಂದರೆ ಯಾವುದು ನಿತ್ಯವೂ ಶಾಶ್ವತವೂ ಆದ ವಸ್ತುವಿದೆಯೋ ಆ ಕಡೆ ನಮ್ಮ ನಡೆ ಇದ್ದರೆ ಅದಕ್ಕೆ ಸದ್ಗತಿ ಎಂಬುದಾಗಿ ಕರೆಯಲಾಗುತ್ತದೆ. ಈ ಜೀವನದಲ್ಲಿ ಸಾಧಿಸಲೇಬೇಕಾದ ಯಾವ ಬ್ರಹ್ಮಾನಂದ ಉಂಟೋ ಅದನ್ನೇ 'ಸತ್' ಎಂದು ಕರೆದು, ಅದನ್ನು ಅನುಭವಿಸಲು ಬೇಕಾದ ಯಾವೆಲ್ಲ ಕಾರ್ಯಗಳಿವೆಯೋ ಅವೆಲ್ಲವನ್ನೂ ಸದಾಚಾರ ಎಂದು ಕರೆದು, ಅವೆಲ್ಲವೂ ಗತಿಗೆ ಸಾಧನವಾವಾಗಿರುತ್ತವೆ. ಇದನ್ನೇ ಕುಸುಮಾಂಜಲಿ ಎಂಬ ಗ್ರಂಥದಲ್ಲಿ ಉದಯನಾಚಾರ್ಯರು "ತಪೋ-ಜ್ಞಾನ-ಯಜ್ಞ-ದಾನಾತ್ಮಕಚತುಷ್ಪಾದ್ ಧರ್ಮ" ಎಂದು ಇವೇ ಧರ್ಮ ಎಂಬ ಪದಕ್ಕೆ ಅರ್ಥ ಎಂದಿದ್ದಾರೆ.  ಪುಣ್ಯ, ಸುಕೃತ, ಶ್ರೇಯಸ್ಸು, ನ್ಯಾಯ ಇತ್ಯಾದಿ ಅರ್ಥಗಳೂ ಇವೆ. ಅಂದರೆ ಇವೆಲ್ಲವೂ ಸದ್ಗತಿಗೆ ಸಾಧನಗಳು ಎಂದರ್ಥ. ಇವುಗಳಲ್ಲಿ ಅಂಹಿಂಸೆಯನ್ನು 'ಅಹಿಂಸಾ ಪರಮೋ ಧರ್ಮಃ' ಅತ್ಯಂತ ಶ್ರೇಷ್ಠವಾದ ಧರ್ಮ ಎಂದು ಕರೆಯಲಾಗಿದೆ. ಒಟ್ಟಾರೆ ಹೇಳುವುದಾದರೆ ಧರ್ಮಾಚರಣೆಯಿಂದ ಸದ್ಗತಿಯು ಸಿಗುತ್ತದೆ ಎಂಬುದಾಗಿ ಈ ಪ್ರಶ್ನೋತ್ತರದ ಸಾರವಾಗಿದೆ. 

ಸೂಚನೆ : 17/11/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.