ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಸುಭದ್ರಾರ್ಜುನವಿವಾಹವು ಅದ್ದೂರಿಯಾಗಿ ನೆರವೇರಿತಷ್ಟೆ. ಅಲ್ಲಿಗೆ ಬಂದಿದ್ದ ಕ್ಷತ್ರಿಯವೀರರು ಬಗೆಬಗೆಯಾಗಿ ವಿಹರಿಸಿದರು.
ವಿಹಾರಸಮಯದಲ್ಲಿ ವೀಣೆಗಳಿಂದ ಹೊಮ್ಮುತ್ತಿದ್ದ ಉತ್ತಮವಾದ ನಾದಗಳೂ ಅವರಿಗೆ ಸಂತೋಷತಂದವು. ಹೀಗೆಲ್ಲಾ ಸಂತೋಷಿಸುತ್ತ ಯಥೇಷ್ಟವಾಗಿ ಅವರೆಲ್ಲರೂ ವಿಹರಿಸಿದರು.
ಪರಾಕ್ರಮ-ಸಂಪನ್ನರಾದ ಯದುವೀರರು ಹೀಗೆ ಅನೇಕ ದಿನಗಳ ಕಾಲ ವಿಹಾರ ಮಾಡಿದವರಾಗಿ, ಕುರುವಂಶೀಯರಿಂದ ಆದರಿಸಲ್ಪಟ್ಟವರಾಗಿ, ಮತ್ತೆ ದ್ವಾರಾವತಿಗೆ ಹಿಂತಿರುಗಿದರು. ಬಲರಾಮನನ್ನು ಮುಂದಿಟ್ಟುಕೊಂಡು ಅವರು ನಡೆದರು. ಕುರು-ಶ್ರೇಷ್ಠರಿತ್ತ ಶುಭ್ರವಾದ ರತ್ನಗಳನ್ನು ಸ್ವೀಕರಿಸಿ ಹೊರಟರು.
ಆದರೆ ವಾಸುದೇವನು ಮಾತ್ರ ಮಹಾತ್ಮನಾದ ಪಾರ್ಥನೊಂದಿಗೆ ಆ ಸುಂದರವಾದ ಇಂದ್ರಪ್ರಸ್ಥನಗರದಲ್ಲಿಯೇ ಉಳಿದುಕೊಂಡನು. ಕಿರೀಟಿಯೊಂದಿಗೆ, ಎಂದರೆ ಅರ್ಜುನನೊಂದಿಗೆ, ಆ ಮಹಾಕೀರ್ತಿಶಾಲಿಯಾದ ಕೃಷ್ಣನು ಯಮುನಾ-ತೀರದಲ್ಲಿ ವಿಹರಿಸಿದನು; ಕ್ರೂರಮೃಗಗಳು, ಹಂದಿಗಳು - ಇವನ್ನು ಬೇಟೆಯಾಡಿದ್ದು ಸಹ ಆಯಿತು. ಹೀಗೆ ಕಾಲವು ಕಳೆಯುತ್ತಿತ್ತು.
ಕೆಲಕಾಲದ ನಂತರ, ಕೇಶವನ ಪ್ರಿಯಸೋದರಿಯಾದ ಸುಭದ್ರೆಯು ಸೌಭದ್ರನಿಗೆ ಜನ್ಮವಿತ್ತಳು. ಪೌಲೋಮಿಯು, ಎಂದರೆ ಇಂದ್ರಪತ್ನಿಯಾದ ಶಚಿಯು, ಕೀರ್ತಿಪಾತ್ರನಾದ ಜಯಂತನಿಗೆ ಹೇಗೆ ಜನ್ಮವಿತ್ತಳೋ, ಹಾಗೆಯೇ ಸುಭದ್ರೆ ಜನ್ಮವಿತ್ತುದೂ. ಜನಿಸಿದವನೇ ವೀರನಾದ ಅಭಿಮನ್ಯು.
ಆತನು ಮುಂದೆ ಹೇಗಾದ! ದೀರ್ಘಬಾಹು – ಎಂದರೆ ನೀಳವಾದ ತೋಳುಗಳುಳ್ಳವನು, ಮಹೋರಸ್ಕ - ಎಂದರೆ ವಿಶಾಲವಾದ ಎದೆಯುಳ್ಳವನು, ವೃಷಭಾಕ್ಷ - ಎಂದರೆ ಎತ್ತುಗಳ ಕಣ್ಣುಗಳನ್ನು ಹೋಲುವ ಕಣ್ಣುಗಳುಳ್ಳವನು, ಹಾಗೂ ಅರಿಂದಮ - ಎಂದರೆ ಶತ್ರುಗಳನ್ನು ದಮನಮಾಡತಕ್ಕವನು - ಹಾಗಾದ.
ಆತನು ಅಭಿ ಮತ್ತು ಮನ್ಯುಮಂತನಾಗಿದ್ದ - ಎಂಬ ಕಾರಣಕ್ಕೇ ಆತನಿಗೆ ಅಭಿಮನ್ಯುವೆಂಬ ಹೆಸರಾದುದು. ಏಕೆಂದರೆ ಅಭಿ ಎಂದರೆ ಭಯರಹಿತ; ಮನ್ಯುಮಂತ ಎಂದರೆ ಕ್ರೋಧದಿಂದ ರಣರಂಗದಲ್ಲಿ ಹೋರಾಡತಕ್ಕವನು. ಹಾಗಿರತಕ್ಕವನು ಈ ಪುರುಷ-ಶ್ರೇಷ್ಠನಾದ ಅರ್ಜುನಿ. ಅರ್ಜುನಿ ಎಂದರೆ ಅರ್ಜುನನ ಮಗ.
ಯಜ್ಞವನ್ನು ಮಾಡುವಾಗ ಅರಣಿಗಳನ್ನು ಮಥನ ಮಾಡುವರು. ಶಮೀ-ಗರ್ಭದಿಂದ ಆಗ ಅಗ್ನಿಯು ಉತ್ಪನ್ನವಾಗುವುದು. (ಶಮೀ ಎಂದರೆ ಬನ್ನಿಮರ). ಅದೇ ರೀತಿಯಲ್ಲಿ ಧನಂಜಯನಿಂದ ಎಂದರೆ ಅರ್ಜುನನಿಂದ, ಸಾತ್ವತಿಯಲ್ಲಿ ಎಂದರೆ ಸುಭದ್ರೆಯಲ್ಲಿ, ಜನ್ಮತಾಳಿದ ಅತಿರಥನೇ ಅಭಿಮನ್ಯು.
ಅಭಿಮನ್ಯುವು ಜನಿಸುತ್ತಲೇ ಯುಧಿಷ್ಠಿರನು ವಿಪ್ರರಿಗೆ ದಶಸಹಸ್ರ-ಗೋವುಗಳನ್ನು ದಾನವಿತ್ತನು. ಹಾಗೂ ಸುವರ್ಣ-ಮುದ್ರೆಗಳನ್ನೂ ಕೊಟ್ಟನು. ಎಳಸಿನಿಂದಲೇ ಅಭಿಮನ್ಯುವು ಶ್ರೀಕೃಷ್ಣನಿಗೆ ಅಚ್ಚುಮೆಚ್ಚಾದನು - ಸಮಸ್ತ-ಪಿತೃ-ದೇವತೆಗಳಿಗೂ ಹಾಗೂ ಪ್ರಜೆಗಳಿಗೂ ಚಂದ್ರನು ಹೇಗೆ ಪ್ರೀತಿ-ಪಾತ್ರನಾಗುವನೋ ಹಾಗೆ.
ಕುಮಾರನ ಹುಟ್ಟಿದಂದಿನಿಂದಲೇ ಆತನಿಗೆ ಎಲ್ಲ ಶುಭ-ಕರ್ಮಗಳನ್ನೂ ಶ್ರೀಕೃಷ್ಣನು ತಾನೇ ನೆರವೇರಿಸುತ್ತ ಬಂದನು. ಮತ್ತು ಆ ಬಾಲಕನಾದರೂ, ಶುಕ್ಲ-ಪಕ್ಷದಲ್ಲಿ ಚಂದ್ರನು ಅಭಿವೃದ್ಧಿಗೊಳ್ಳುವ ಹಾಗೆ ಬೆಳೆದನು.
ಮತ್ತು ಆತನಿಗೆ ಅರ್ಜುನನೇ ಹೇಳಿಕೊಟ್ಟನು - ನಾಲ್ಕು ಪಾದಗಳಿಂದ ಕೂಡಿದ ಹಾಗೂ ದಶ-ವಿಧವಾದ ಧನುರ್ವೇದವನ್ನು, ಅದರ ದಿವ್ಯ ಹಾಗೂ ಮಾನುಷವಾದ ಅಂಗಗಳೊಂದಿಗೆ. ಜೊತೆಗೇ ಅಸ್ತ್ರ-ವಿಜ್ಞಾನ ಹಾಗೂ ಅಸ್ತ್ರ-ಪ್ರಯೋಗ-ಪಟುತ್ವ, ಮತ್ತಿನ್ನೆಲ್ಲ ಕ್ಷತ್ರಿಯೋಚಿತ-ಕ್ರಿಯೆಗಳು - ಇವೆಲ್ಲದರ ವಿಷಯದಲ್ಲೂ ಅರ್ಜುನನೇ ಆತನಿಗೆ ಶಿಕ್ಷಣವನ್ನಿತ್ತನು. ಆಗಮದಲ್ಲೂ ಪ್ರಯೋಗದಲ್ಲೂ - ಎಂದರೆ ಶಾಸ್ತ್ರಭಾಗ ಹಾಗೂ ಶಸ್ತ್ರಗಳ ಬಳಕೆಯ ಬಗೆಗಳಲ್ಲೂ - ಎರಡರಲ್ಲೂ - ಅಭಿಮನ್ಯುವನ್ನು ಅರ್ಜುನನು ತನಗೆ ಸಮನನ್ನಾಗಿ ಮಾಡಿದನು.
ಸೂಚನೆ : 01/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. .