ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಆನಂದೇನ ಯಶೋದಯಾ
ಇನ್ನೂ ಏಳು ವರ್ಷದ ಮಗುವಾದ ಕೃಷ್ಣನು ಹಲವು ಲೋಕೋತ್ತರ ಕಾರ್ಯಗಳನ್ನು ಮಾಡಿದ್ದನಷ್ಟೆ?
ಆರಂಭದಿಂದಲೇ ಅಸುರರ ಕಾಟ. ಎಳಸಿನಿಂದಲೇ ಸಾವಿನ ಸಾಧ್ಯತೆಗಳು! ಅಸುರರೋ, ಬಹುರೂಪಿಗಳು. ಅದೆಷ್ಟು ತೆರನಾಗಿ ಆತನನ್ನು ಸಂಹರಿಸಲು ಯತ್ನಿಸಿದರು! ಪೂತನೆ, ಶಕಟಾಸುರ, ತೃಣಾವರ್ತ, ಬಕಾಸುರ, ವತ್ಸಾಸುರ, ಧೇನುಕಾಸುರ - ಇವರುಗಳ ಸಂಹಾರ, ಹಾಗೂ ಕಾಳಿಯ-ಸರ್ಪ-ಮರ್ದನ - ಇವೆಲ್ಲವೂ ಸಾಧಾರಣ ಮನುಷ್ಯರಿಗೆ ಅಸಾಧ್ಯವೆನಿಸತಕ್ಕವು. ಇನ್ನು ಗೋವರ್ಧನೋದ್ಧರಣವಂತೂ ಹೇಳಲೇಬೇಕಿಲ್ಲ, ಅನೂಹ್ಯ-ಘಟನೆಯೇ ಅದು. ಯಾವುದನ್ನು ಊಹಿಸಿಕೊಳ್ಳಲೂ ಆಗದೋ ಅದು ಅನೂಹ್ಯ.
ಏನು ಗೋವರ್ಧನೋದ್ಧಾರವೆಂದರೆ? ಅದೇಕಾಯಿತು? ಅದರಿಂದಾದದ್ದೇನು? - ಇವು ಪ್ರಕೃತ-ಶ್ಲೋಕಕ್ಕೆ ಉಪಯುಕ್ತವಾದಂತಹವು. ಬೇರೆ ಬೇರೆಯವರಿಂದ ಅದಕ್ಕೆ ಬಂದ ನಾನಾ- ಪ್ರತಿಕ್ರಿಯೆಗಳೇನೆಂಬುದನ್ನು ಈ ಶ್ಲೋಕದಲ್ಲಿ ನಿರೂಪಿಸಿದೆ. ಕಥಾ-ಸಂದರ್ಭವು ಹೀಗಿದೆ:
ಒಮ್ಮೆ ಇಂದ್ರ-ಯಾಗವನ್ನು ನೆರವೇರಿಸಲು ಗೋಪರು ಆರಂಭಿಸಿದ್ದರು. ಅವರೇನನ್ನು ಮಾಡಲಿರುವರೆಂಬುದನ್ನು ಅರಿತ ಕೃಷ್ಣ ಆ ಬಗ್ಗೆ ಅವರಲ್ಲಿ ವಿಚಾರಿಸಿದ.
ಆಗ ನಂದ ಹೇಳಿದ: ಮಳೆಗೆ ಇಂದ್ರನೇ ಪ್ರಭುವಲ್ಲವೇ? ಮೋಡಗಳು ಆತನ ರೂಪಗಳೇ ತಾನೆ? ಪ್ರಾಣಿಗಳಿಗೆ ಮಳೆಯೇ ಜೀವನಾಧಾರ. ಎಂದೇ, ಅವನಿಂದಾಗುವ ಮಳೆಯಿಂದಾಗಿ ಜನಿಸುವ ದ್ರವ್ಯಗಳಿಂದಲೇ ಆತನಿಗೆ ಪೂಜೆ. ಪರಂಪರಾಗತವಾದ ಅದನ್ನು ಬಿಡಲಾಗದು. ಅದಕ್ಕೆ ಕೃಷ್ಣನು ಹೇಳಿದನು: "ನಿಮ್ಮ ನಿಮ್ಮ ಕರ್ಮಗಳನ್ನು ನೀವು ನಿಷ್ಠೆಯಿಂದ ಮಾಡುತ್ತಿದ್ದರಾಯಿತು. ಇಲ್ಲಿ ಇಂದ್ರನ ಪಾತ್ರವೇನಿದೆ?
ಬ್ರಾಹ್ಮಣನಿಗೆ ವೇದರಕ್ಷೆಯು ಮುಖ್ಯ; ಕ್ಷತ್ರಿಯನಿಗೆ ಭೂರಕ್ಷೆಯು ಮುಖ್ಯ; ವೈಶ್ಯನಿಗೆ ನಾಲ್ಕು ವೃತ್ತಿಗಳು - ಕೃಷಿ, ವಾಣಿಜ್ಯ, ಗೋರಕ್ಷೆ ಹಾಗೂ ಕುಸೀದ (ಲೇವಾದೇವಿ ವ್ಯವಹಾರ); ಶೂದ್ರನಿಗೆ ದ್ವಿಜಸೇವೆಯು ಮುಖ್ಯ. ವೈಶ್ಯರಾದ ನಮಗೆ ಗೋರಕ್ಷೆಯೇ ಜೀವಿಕೆ.
ರಜಸ್ಸು-ಸತ್ತ್ವ-ತಮಸ್ಸು - ಇವುಗಳಿಂದ ಕ್ರಮವಾಗಿ ಸೃಷ್ಟಿ-ಸ್ಥಿತಿ-ಲಯಗಳಾಗುವುವು. ಮೇಘಗಳು ಮಳೆಗರೆಯಲು ರಜಸ್ಸು ಕಾರಣ, ಮಹೇಂದ್ರನಲ್ಲ. ಆದ್ದರಿಂದ ಇಂದ್ರ-ಯಾಗಕ್ಕೆಂದು ಶೇಖರಿಸಿಕೊಂಡಿರುವ ವಸ್ತುಗಳಿಂದಲೇ ಗೋ-ಬ್ರಾಹ್ಮಣ-ಪೂಜೆ, ಗಿರಿ-ಪೂಜೆಗಳನ್ನು ನೆರವೇರಿಸಿರಿ. ಎಲ್ಲರಿಗೂ ಸಂತರ್ಪಣೆಯಾಗಲಿ. ಕೆಳಜಾತಿಯೆನಿಸಿದವರಿಗೂ ಸತ್ಕಾರವಾಗಲಿ. ಗೋ-ಅಶ್ವಗಳಿಗೂ ಯಥಾರ್ಹವಾದ ಸಂತರ್ಪಣವಾಗಲಿ. ಎಲ್ಲರೂ ಚೆನ್ನಾಗಿ ಅಲಂಕರಿಸಿಕೊಂಡು, ರುಚಿಯಾಗಿ ಉಂಡುತಿಂದು, ಸೊಗಸಾಗಿ ಸುಗಂಧ-ಲೇಪನ ಮಾಡಿಕೊಂಡು, ಒಳ್ಳೆಯ ಬಟ್ಟೆಯುಟ್ಟು ಗೋ-ವಿಪ್ರ-ಅಗ್ನಿ-ಶೈಲಗಳಿಗೆ ಪ್ರದಕ್ಷಿಣ ಮಾಡುವಿರಾದರೆ ನನಗೆ ಸಂತೋಷವಾಗುವುದು".
ಆತನ ಮಾತಿನಂತೆಯೇ ನಂದಾದಿಗಳು ನಡೆದುಕೊಂಡರು. ಗೋಪಿಯರು ಕೃಷ್ಣನ ಪರಾಕ್ರಮಗಳನ್ನು ಗಾನ-ರೂಪವಾಗಿ ಹಾಡಿದರು, ಆಡಿದರು. ಕೃಷ್ಣನೂ ತಾನೇ ಶೈಲನಾಗಿ ಬೃಹದಾಕಾರನಾಗಿ ನಿಂತು ಪೂಜೆಯನ್ನು ಸ್ವೀಕರಿಸಿ, ಜೊತೆಗೇ ಸಾಧಾರಣ-ರೂಪದಲ್ಲೂ ತೋರಿ, "ಓ ನೋಡಿ, ಪರ್ವತವು ಪೂಜೆಯನ್ನು ಸ್ವೀಕರಿಸಿದೆ! ಇದಕ್ಕೇ ನಮ್ಮ ನಮಸ್ಕಾರವಿರಲಿ" ಎಂದನು. ಪೂಜೆ ಮುಗಿಯಲು, ಎಲ್ಲರಿಗೂ ವ್ರಜಕ್ಕೆ ಹಿಂದಿರುಗಿದರು.
ಗೋಪರ ಮೇಲೂ, ಕೃಷ್ಣನ ನಾಯಕತ್ವ ಹೊಂದಿದ್ದ ನಂದ ಮೊದಲಾದವರ ಮೇಲೂ, ಇಂದ್ರನಿಗೆ ಕೋಪವುಕ್ಕಿತು. ಪ್ರಳಯ-ಕಾಲದ ಮೇಘಗಳನ್ನು ಪ್ರಚೋದಿಸಿದ, ಇಂದ್ರ: "ಆಹಾ! ವನವಾಸಿಗಳಾದ ಈ ಗೋಪರಿಗೆ ಅದೆಷ್ಟು ಗರ್ವ! ಕೃಷ್ಣನೊಬ್ಬ ಮರ್ತ್ಯ. ಆತನನ್ನು ನೆಚ್ಚಿಕೊಂಡು ದೇವತೆಗಳನ್ನೇ ನಿರ್ಲಕ್ಷ್ಯಮಾಡುವುದೇ? ಕೃಷ್ಣನು ವಾಚಾಳ (ಬರೀ ಮಾತಿನ ಮಲ್ಲ), ತನ್ನನ್ನೇ ಪಂಡಿತನೆಂದುಕೊಂಡಿರುವ ಅಜ್ಞ - ಆತನನ್ನು ನಂಬಿಕೊಂಡು ನನಗೆ ಅಪ್ರಿಯವೆಸಗಿರುವರು! ಅವರಿಗೆ ಗರ್ವ-ಭಂಗವಾಗಬೇಕು. ಅದಕ್ಕೇ ಅವರ ಗೋವುಗಳನ್ನು ನಾಶಪಡಿಸಿ! ನಾನೂ ಐರಾವತವನ್ನೇರಿ ಆಮೇಲೆ ಬರುತ್ತೇನೆ, ಗೋಕುಲ-ವಿಧ್ವಂಸವಾಗಲಿ!"
ಅದರಂತೆ ಮೋಡಗಳು ಧಾರೆಧಾರೆಯಾಗಿ ಮಳೆ ಸುರಿಸಿದವು. ಆಗಾದ ಗುಡುಗುಗಳೇನು, ಮಿಂಚುಗಳೇನು! ಝಂಝಾವಾತವೇನು, ಆಲಿಕಲ್ಲುಗಳೇನು! ಜಲಪ್ರವಾಹದಿಂದ ನೆಲವೇ ಕಾಣದಾಯಿತು! ಪಶುಗಳು ನಡುಗಿದವು, ಗೋಪ-ಗೋಪಿಯರಿಗೆ ಶೈತ್ಯವು ಹಿಡಿದುಕೊಂಡಿತು. ಎಲ್ಲರೂ ಕೃಷ್ಣನಿಗೆ ಶರಣಾದರು, ಗೋವುಗಳೂ ಕೃಷ್ಣನ ಪಾದದತ್ತಲೇ ಬಂದವು. "ಕೃಷ್ಣ, ಕೃಷ್ಣ! ಕಾಪಾಡು ಗೋಕುಲವನ್ನು! - ಎಂದು ಎಲ್ಲರೂ ಬೇಡಿಕೊಂಡರು.
ಇಂದ್ರನ ಚೇಷ್ಟೆಯಿದು - ಎಂದು ಕೃಷ್ಣನರಿತನು. ಅಕಾಲವೃಷ್ಟಿ-ಅತಿವಾತ – ಶಿಲಾವರ್ಷಗಳಿಗೆ ಕಾರಣನಾದ ಇಂದ್ರನ ಗರ್ವವನ್ನು ಮುರಿಯಬೇಕೆಂದು ಯೋಚಿಸಿದನು. ಹೀಗೆ ಹೇಳಿದವನೇ, ಒಂದೇ ಹಸ್ತದಿಂದಲೇ ಲೀಲೆಯಿಂದಲೇ ಗೋವರ್ಧನ-ಗಿರಿಯನ್ನು ಎತ್ತಿಹಿಡಿದನು - ಅದೇನೋ ನಾಯಿಕೊಡೆಯೆಂಬಂತೆ!
ಮತ್ತು ಗೋಪರಿಗೆ ಹೇಳಿದನು "ನಾನೆತ್ತಿರುವ ಗಿರಿಯಡಿಯಲ್ಲಿ ನಿಲ್ಲಿರಿ. ಹೆದರಬೇಡಿ!" ಅವರೂ ಅಂತೆಯೇ ಮಾಡಿದರು. ಏಳು ದಿನಗಳ ಕಾಲ ಕೃಷ್ಣನು ಅಲ್ಲಾಡಲಿಲ್ಲ. ಹಸಿವು-ಬಾಯಾರಿಕೆಗಳನ್ನು ಲೆಕ್ಕಿಸಲಿಲ್ಲ.
ಇಂದ್ರನಿಗೆ ಮಹಾ-ವಿಸ್ಮಯವಾಯಿತು, ಕೃಷ್ಣನ ಯೋಗ-ಶಕ್ತಿಯನ್ನು ಕಂಡು! ತನ್ನ ಗರ್ವವು ಭಗ್ನವಾಯಿತು. ಮೋಡಗಳನ್ನು ನಿಲ್ಲಿಸಿದನು. ಆಕಾಶವು ತಿಳಿಯಾಯಿತು. ಸೂರ್ಯನು ಗೋಚರಿಸಿದನು. ಮಳೆಗಾಳಿಗಳು ನಿಂತವು.
"ಎಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ಹೋಗಬಹುದು. ಇನ್ನು ಭಯವಿಲ್ಲ " - ಎಂಬ ಕೃಷ್ಣನ ಮಾತಿನಿಂದ ಎಲ್ಲರಿಗೂ ಭರವಸೆಯುಂಟಾಯಿತು. ಕೃಷ್ಣನೂ ಗೋವರ್ಧನವನ್ನು ಮೊದಲಿನಂತೆಯೇ ನಿಲ್ಲಿಸಿದನು.
ಪ್ರೇಮ-ವೇಗದಿಂದ ಗೋಪ-ಗೋಪಿಯರು ಕೃಷ್ಣನನ್ನು ಆಲಿಂಗಿಸಿಕೊಂಡರು, ಆತನನ್ನು ಅರ್ಚಿಸಿದರು. ದೇವತೆಗಳೂ ಗಂಧರ್ವರೂ ಕೃಷ್ಣ-ಸ್ತುತಿಯನ್ನು ಮಾಡಿದರು, ಹೂಮಳೆಗರೆದರು. ಶಂಖ-ದುಂದುಭಿಗಳು ನಾದ ಮಾಡಿದವು. ಗಾಂಧರ್ವ-ಗಾನವಾಯಿತು. ಎಲ್ಲರೊಂದಿಗೆ ಕೃಷ್ಣನು ಗೋಕುಲವನ್ನು ಸೇರಿಕೊಂಡನು.
ಹೀಗೆ ಗೋವರ್ಧನವನ್ನು ಕೃಷ್ಣನೆತ್ತಿಹಿಡಿದಾಗ ಯಾರಾರಿಗೆ ಹೇಗೆ ಹೇಗೆ ತೋರಿತು - ಎಂಬುದನ್ನು ಲೀಲಾಶುಕನು ಏಳೆಂಟುಬಗೆಯಾಗಿ ಚಿತ್ರಿಸಿದ್ದಾನೆ.
ತಾಯಿ ಯಶೋದೆಗೆ ಆನಂದವಾಯಿತು. ಸಾಕಿ ಸಲಹುವವಳಿಗೆ ಕೆಲವೊಮ್ಮೆ ಹೆತ್ತಮ್ಮನಿಗಿಂತಲೂ ಹೆಚ್ಚು ಆತಂಕವಾದೀತಲ್ಲವೆ! ಈಗ ಅಷ್ಟೇ ಸಂತೋಷ! ಇನ್ನು ಗೋಪ-ನಾರಿಯರ ಹೃದಯದಲ್ಲಿ ವೀರ-ಕೃಷ್ಣನ ಬಗ್ಗೆ ಪ್ರೀತಿಯುಕ್ಕಿತು.
ದಿವಿಯಲ್ಲಿದ್ದ ಇಂದ್ರನಿಗೆ ಆತಂಕ-ಆಶಂಕೆಗಳಾದುವು. ಆಕಾಶ-ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಿದ್ಧರು ಪುಷ್ಪಾರ್ಚನೆಗೈದರು. ಗೋಪ-ಕುಮಾರರಿಗೆ ಅತ್ತ ವ್ಯಾಕುಲತೆಯೂ ಆಯಿತು, ಇತ್ತ ಈರ್ಷ್ಯೆಯೂ ಆಯಿತು. ಪೌರರಿಗಂತೂ ಕಾರುಣ್ಯವುಕ್ಕಿತು - ಅಯ್ಯೋ ಈ ಹುಡುಗನ ಗತಿಯೇನು? - ಎಂದೆನಿಸಿತು. ಇನ್ನಿತರ ಜನರಿಗೆ ಆಶ್ಚರ್ಯವಾಯಿತು.
ಗೋವರ್ಧನಗಿರಿಯನ್ನು ಎತ್ತಿಹಿಡಿದಿದ್ದ ಕೃಷ್ಣನನ್ನು ಹೀಗೆಲ್ಲಾ ಬಗೆಬಗೆಯಾಗಿ ಕಂಡರು, ಅಲ್ಲಿಯ ಭುವಿ-ದಿವಿಗಳಲ್ಲಿಯ ಮಂದಿ! ಹೀಗೆಲ್ಲ ತೋರಿದ ಕೃಷ್ಣನು ನಿಮ್ಮನ್ನು ಕಾಪಾಡಲಿ - ಎನ್ನುತ್ತಾನೆ, ಲೀಲಾಶುಕ.
ಪ್ರಸಂಗವೊಂದನ್ನು ಬಹುಮಂದಿ ಬಹುಬಗೆಯಾಗಿ ಕಾಣುವಲ್ಲಿ ಉಲ್ಲೇಖಾಲಂಕಾರವೆನ್ನುತ್ತಾರೆ. ಅದಿಲ್ಲಿದೆ.
ಅಂತೂ ತಾಯಿ ಯಶೋದೆ ಹಾಗೂ ಗೋಪಿಯರೆಂಬ ನಾರಿಯರು, ದೇವಲೋಕ-ಅಂತರಿಕ್ಷಲೋಕಗಳ ಇಂದ್ರ-ಸಿದ್ಧರು, ಗೋಪಬಾಲರು, ಪುರಜನರು, ಇತರರು - ಇವರೊಬ್ಬೊಬ್ಬರಿಗೂ ಉಂಟಾದ ಮನಸ್ಸ್ಥಿತಿಗಳನ್ನು ಕವಿಯು ಚಿತ್ರಿಸಿದ್ದಾನೆ.
ಹೀಗೆ ವ್ಯಾಪಕವಾದ ನೋಟ, ಕವಿಯದು. ಬಗೆಬಗೆಯ ಮಂದಿಯ ಅಂತರಂಗವನ್ನು ಅಂತರ್ನೇತ್ರದಿಂದ ಕಂಡುಕೊಂಡ ಕವಿಯ ಪ್ರತಿಭೆಯೂ ಅಗಾಧವಾದದ್ದೇ ಸರಿ!
ಆನಂದೇನ ಯಶೋದಯಾ, ಸಮದನಂ ಗೋಪಾಂಗನಾಭಿಶ್ಚಿರಂ,
ಸಾಶಂಕಂ ಬಲವಿದ್ವಿಷಾ, ಸಕುಸುಮೈಃ ಸಿದ್ಧೈಃ, ಪಥಿ ವ್ಯಾಕುಲಂ |
ಸೇರ್ಷ್ಯಂ ಗೋಪಕುಮಾರಕೈಃ, ಸಕರುಣಂ ಪೌರೈಃ, ಜನೈಃ ಸಸ್ಮಿತಂ -
ಯೋ ದೃಷ್ಟಃ ಸ ಪುನಾತು ನೋ ಮುರರಿಪುಃ ಪ್ರೋತ್ಕ್ಷಿಪ್ತ-ಗೋವರ್ಧನಃ!! ||
ಸೂಚನೆ : 30/11/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.