ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಕಸ್ತ್ವಂ ಬಾಲ
ಮಕ್ಕಳ ಮಾತು ಎಂದಿಗೂ ಚೆಂದವೇ. ವರ-ವಲ್ಲವಿಯೊಬ್ಬಳೊಂದಿಗೆ - ಎಂದರೆ ಹಿರಿಯ ಗೊಲ್ಲತಿಯೊಬ್ಬಳ ಜೊತೆ - ಬಾಲಕೃಷ್ಣನ ಒಂದು ಸಂಭಾಷಣೆಯನ್ನು ಲೀಲಾಶುಕ ನಮ್ಮ ಮುಂದಿಟ್ಟಿದ್ದಾನೆ. ಈ ಬಾಲಕನ ತುಂಟತನಕ್ಕೆ, ಅದಕ್ಕಂಟಿಬರುವ ಮಾತಿನ ಜಾಣ್ಮೆಗೆ, ಕನ್ನಡಿ ಹಿಡಿಯುವ ಶ್ಲೋಕವಿದು.
ಮತ್ತೊಬ್ಬರ ಮನೆಗೆ ನುಗ್ಗಿ ಕದಿಯುವ ಈ ಪೋರನ ಧಾರ್ಷ್ಟ್ಯವದೆಷ್ಟು! ಕದ್ದ ಮಾಲಿನೊಂದಿಗೆ ಸಿಕ್ಕಿಬಿದ್ದ ಕಳ್ಳನನ್ನು ಒಂದು ಅಧಿಕಾರ-ವಾಣಿಯಿಂದ ದಬಾಯಿಸಬಹುದಲ್ಲವೇ? ಆದರೂ ಕದ್ದಿರುವವ ಒಂದು ಮುದ್ದುಮಗುವೆಂದಾಗಿಬಿಟ್ಟರೇ ಕೋಪವೊಂದಿಷ್ಟು ಇಳಿದುಹೋಗುವುದು. ಅದರ ಮೇಲೆ ತೋರಿಸತಕ್ಕದ್ದಾದರೂ ಒಂದು ಕಪಟ-ಕೋಪವನ್ನೇ ಸರಿ! ಮಕ್ಕಳು ಬೆಳೆಯುವುದು ನೆರೆಹೊರೆಯವರ ಮನೆಯಲ್ಲೇ - ಎಂಬ ಉದ್ಗಾರವು ಪ್ರಸಿದ್ಧವೇ. ಆಗೊಮ್ಮೆ ಈಗೊಮ್ಮೆಯಾದರೂ ತಮ್ಮ ಮಕ್ಕಳನ್ನು ಒಂದಿಷ್ಟಾದರೂ ಸಿಡುಕಲೇಬೇಕಾದ, ಅಥವಾ ಕೋಪ ತೋರಿಸುವಂತೆಯಾದರೂ ಮಾತನಾಡಲೇಬೇಕಾದ, ಪ್ರಸಂಗಗಳು ಅಪ್ಪ-ಅಮ್ಮಂದಿರಿಗೆ ಬರಬಹುದು; ಆದರೆ ಅಕ್ಕಪಕ್ಕದ ಮನೆಯವರು ಮುದ್ದಾಡುವುದೇ ಹೆಚ್ಚು. ಚೇಷ್ಟೆ ಮಾಡಿದವರಾದರೂ ಮಕ್ಕಳು ಮುದ್ದಾದ ಒಂದು ಮುಗುಳ್ನಗೆ ನಕ್ಕರೆ ಸಾಕು, ಅಷ್ಟರಲ್ಲಿ ಕೋಪವೇ ಮಾಯವಾದೀತು, ಮರೆತೇಹೋದೀತು!
ಬೆಣ್ಣೆ ಕದಿಯುವ ಕೃಷ್ಣ ಯಾರಿಗೆ ಗೊತ್ತಿಲ್ಲ? ಅಂತೂ ಹೀಗೇ ಒಬ್ಬ ಗೋಪಸ್ತ್ರೀಯ ಮನೆಗೆ ನುಗ್ಗಿದ್ದಾನೆ, ಕೈಹಾಕಿರುವುದು ನೇರಾಗಿ ಬೆಣ್ಣೆಗೇ. ಯಾರೂ ಇಲ್ಲವೆಂದುಕೊಂಡು ಧೈರ್ಯದಿಂದ ಬೆಣ್ಣೆಯನ್ನು ಬಾಚಿಕೊಳ್ಳುತ್ತಿರುವಷ್ಟರಲ್ಲೇ ಅಲ್ಲಿಯ ಗೊಲ್ಲತಿಯು ಪ್ರತ್ಯಕ್ಷವಾಗಿದ್ದಾಳೆ. ಆತನು ಯಾರೆಂಬುದನ್ನು ತಾನರಿತಿಲ್ಲವೆಂಬಂತೆ ನಟಿಸುತ್ತಾ, "ಯಾರೋ ನೀನು, ಹುಡುಗಾ?" ಎಂದು ಪ್ರಶ್ನಿಸಿದ್ದಾಳೆ. ಪ್ರಶ್ನಿಸುವವರು ಮಾತಿನಲ್ಲಿ ಸ್ವಲ್ಪ ಗಡಸು ತೋರಿದರೆ, ಉತ್ತರ ಕೊಡುವವರೂ ಸ್ವಲ್ಪ ದಿಟ್ಟರಾಗಿಯೇ ವರ್ತಿಸುವರೋ ಏನೋ? ಅದಕ್ಕೇ ಕೃಷ್ಣನು, ತನ್ನ ಅಣ್ಣನ ಹೆಸರನ್ನೇ ಬಳಸಿ ತನ್ನ ಪರಿಚಯವನ್ನು ಹೇಳುತ್ತಾನೆ: "ನಾನು ಬಲಾನುಜ". ಅನುಜ ಎಂದರೆ ತಮ್ಮ. ಬಲರಾಮನ ತಮ್ಮ ನಾನು - ಎನ್ನುತ್ತಿದ್ದಾನೆ. ತನಗಿಂತಲೂ ಮೊದಲೇ ಹುಟ್ಟಿದವ, ಎಂದೇ ಹೆಚ್ಚು ಪ್ರಸಿದ್ಧನೆಂಬ ಕಾರಣ. ಯಾರನ್ನಾದರೂ ಕರೆಯಬೇಕಾದರೆ ಅವರ ಹೆಸರನ್ನು ಸಂಕ್ಷೇಪ ಮಾಡಿ ಕರೆಯುವುದು ಲೋಕ-ಸಾಮಾನ್ಯವಲ್ಲವೇ? ಪತಂಜಲಿಯ ಮಹಾಭಾಷ್ಯದಲ್ಲೇ ಹೆಸರನ್ನು ಸಂಕ್ಷೇಪಿಸುವ ಉದಾಹರಣೆ ದೊರೆಯುತ್ತದೆ. ಸತ್ಯಭಾಮೆಯನ್ನು ಕರೆಯಲು ಸತ್ಯಾ ಎಂದರೂ ಆಯಿತು, ಭಾಮಾ ಎಂದರೂ ಆಯಿತು, ಸತ್ಯಭಾಮಾ ಎಂದರೂ ಆಯಿತು! ಹಾಗೆ ಇಲ್ಲಿ ಬಲರಾಮನು "ಬಲ"ನಾಗಿದ್ದಾನೆ. ಕೃಷ್ಣನಿಗೂ ಹಾಗೆಯೇ ರೂಢಿಯಾಗಿತ್ತೇನೋ?
ಅಷ್ಟೇ ಅಲ್ಲ. ತಾನು ಮಾಡುತ್ತಿರುವುದು ಕಳ್ಳತನವಾದ್ದರಿಂದ, ಮನೆಯ ಯಜಮಾನಿ ಬೈಯುತ್ತಾಳೆ ಎಂಬ ಖಾತ್ರಿ. ಹೆದರಿಸುವವರಿಗೆ ಪ್ರತಿಯಾಗಿ ಹೆದರಿಸಬೇಡವೇ? ಅದಕ್ಕೇ ಹೇಳುತ್ತಿರುವುದು, ನಾನು "ಬಲನ ತಮ್ಮ" - ಎಂದು. ಏನು ಹಾಗೆಂದರೆ? ಮಾತಿನಲ್ಲಿ ಧ್ವನಿಯಿದೆ. ನಾನು ಚಿಕ್ಕವನಿರಬಹುದು. ನನ್ನ ಅಣ್ಣ ದೊಡ್ಡವನು. ಅವನು ಬಲಶಾಲಿ. ಆತನ ಹೆಸರೇ "ಬಲ" ಅಲ್ಲವೇ? ಬಲಾನುಜನಿಗೂ ಶಕ್ತಿಯಿರುತ್ತದೆ. ಒಂದು ವೇಳೆ ಇಲ್ಲದಿದ್ದರೂ, ನನ್ನಣ್ಣ ನನ್ನ ಸಹಾಯಕ್ಕಿದ್ದಾನೆ, ಗೊತ್ತಿರಲಿ - ಎಂಬ ಧ್ವನಿ! ಇರಲಿ. ಮುಂದೇನಾಯಿತು, ನೋಡುವಾ. ಗೊಲ್ಲತಿ ಕೇಳುತ್ತಾಳೆ: "ಇಲ್ಲಿ ನಿನಗೇನು ಕೆಲಸ?" ಅದಕ್ಕೆ ತುಂಟ ಕೃಷ್ಣನ ಥಟ್ಟನೆಯ ಉತ್ತರ "ಇಲ್ಲ, ನಮ್ಮ ಮನೆಯಿದು - ಎಂದುಕೊಂಡು ಬಂದುಬಿಟ್ಟೆ" ಎಂದು! ಆಹಾ! ತನ್ನ ಮನೆ ಯಾವುದೆಂದು ತೋರದೇ ಈ ಪೋಕರಿಗೆ? ಆಟ. ಮಾತಿಗೆ ಪ್ರತಿಮಾತು, ಅಷ್ಟೆ. ಎಷ್ಟೋ ಮನೆಗಳ ಪ್ಲಾನೋ ವಸ್ತುಗಳ ಜೋಡಣೆಯೋ ಒಂದೇ ತೆರನಿರಬಾರದೇನು? ಆದ್ದರಿಂದ ತನ್ನ ಮಂದಿರವಿದೆಂಬ ಭ್ರಾಂತಿಯಿಂದ ಬಂದುಬಿಟ್ಟಿದ್ದೇನೆನ್ನುತ್ತಾನೆ, ಜಾಣಕೃಷ್ಣ.
ಈ ಮಾತನ್ನು ಆ ಗೊಲ್ಲತಿ ಎತ್ತಿಹಾಕ(ಲಾರ)ಳು. ಏಕೆ? ಗೃಹ-ಸಾಮ್ಯದಿಂದ ಈ ಭ್ರಮೆಯಾಗಿದ್ದೀತು. ಅದಕ್ಕೇ ಈಗ ಅವಳು ಮತ್ತೊಂದು ಪ್ರಶ್ನೆಯೆತ್ತುತ್ತಾಳೆ. "ಇರಬಹುದು; ಆದರೆ ನವನೀತ-ಪಾತ್ರೆಯ ಬಾಯೊಳಗೆ ಕೈಹಾಕಿರುವೆಯೇತಕ್ಕೆ?" ಎಂದು. ನವನೀತವೆಂದರೆ ಬೆಣ್ಣೆ. ಹೆಸರೇ ಹೇಳುವಂತೆ ಹೊಸದಾಗಿ(ನವ-) ತೆಗೆದ(-ನೀತ) ಬೆಣ್ಣೆ. ನಮ್ಮ ಮನೆಯ ಬೆಣ್ಣೆಯ ಪಾತ್ರೆಯೊಳಗೆ ಈತನಿಗೇನು ಕೆಲಸ? ಈ ಪ್ರಶ್ನೆಗೇನು ಉತ್ತರಕೊಟ್ಟಾನು? ಚೂಟಿಯಾದ ಮಗು ಚೂಟಿಯಾದ ಉತ್ತರವನ್ನೇ ಕೊಡುತ್ತದೆ. ಕೊನೆಯ ಪಕ್ಷ ತನ್ನ ಮಟ್ಟಿಗೆ ಸರಿಯಾಗಿರುವ ಉತ್ತರ: ಕರುವೊಂದು ಕಳೆದು ಹೋಗಿತ್ತು, ಅದನ್ನು ಹುಡುಕಲೆಂದು ಕೈಹಾಕಿದ್ದು ಅಷ್ಟೇ! ಈ ತುಂಟತನದ ಉತ್ತರ ಮಾತ್ರವಲ್ಲದೆ ಒಂದು ಸಮಾಧಾನವನ್ನೂ ಹೇಳುತ್ತಾನೆ. "ಬೇಜಾರು ಮಾಡಿಕೊಳ್ಳಬೇಡ, ವಿಷಾದ ಬೇಡ, ಒಂದೇ ಕ್ಷಣವಷ್ಟೆ!" ಇದು ಅತಿಜಾಣ ಉತ್ತರವಾಯಿತು! ಇನ್ನೇನು ಹೇಳಿಯಾಳು, ಮತ್ತೇನು ಕೇಳಿಯಾಳು ಆ ಗೊಲ್ಲತಿ? ಮುಗುಳ್ನಕ್ಕಿರಬೇಕು, ಮುತ್ತಿತ್ತು ಮುದ್ದಾಡಿರಬೇಕು, ಅಷ್ಟೆ. ಹೀಗೆ ಆ ವರ-ವಲ್ಲವಿಗೆ ಚೂಟಿಯಾದ ಉತ್ತರವಿತ್ತು ದಂಗಾಗಿಸಿದ ಕೃಷ್ಣನ ಆ ಮಾತು ನಮ್ಮನ್ನು ಕಾಪಾಡಲಿ - ಎನ್ನುತ್ತಾನೆ, ಲೀಲಾಶುಕ.
ಹುಸಿ ಹೇಳಿದರೂ ಹಸನಾಗಿ ಹೇಳಬೇಕು - ಎನ್ನುತ್ತಾರಲ್ಲವೇ ಹಿರಿಯರು. "ನನ್ನ ಮನೆಯೆಂದುಕೊಂಡು ಬಂದುಬಿಟ್ಟೆ" -ಎಂಬುದು ಸುಳ್ಳೇ ಆದರೂ ನಂಬಲು ಆಸ್ಪದವಿದೆ. ಏನಾದರೂ ಕಳೆದು ಹೋಗಿದ್ದರೆ ಕೈಯಾರೆ ಹುಡುಕುವುದೂ ಸರಿಯೇ. ಪಾತ್ರೆಯೊಳಗೆ ಉಂಗುರವೋ ಪುಟ್ಟ ಆಟಿಕೆಯೋ ಬಿದ್ದುಹೋಗಿದ್ದಲ್ಲಿ ಹಾಗೆ ತಾನೆ ಹುಡುಕಬೇಕಾದದ್ದು? ಇನ್ನು ಕರುಗಳು ಕೆಲವೊಮ್ಮೆ ಸಂಜೆ ಹಿಂದಿರುಗುವಾಗ ಕೊಂಚ ವಿಳಂಬವಾಗುವುದೋ ಅಕಸ್ಮಾತ್ ದಾರಿತಪ್ಪುವುದೋ ಆಗಿಬಿಟ್ಟು ಅವನ್ನು ಹುಡುಕಹೊರಡುವುದನ್ನೂ ಈ ಪುಟ್ಟ ಕೃಷ್ಣ ಕೇಳಿರುವವನೇ, ಕಂಡಿರುವವನೇ. ಆದರೆ ಕಳೆದುಹೋಗಿರುವ ಕರುವನ್ನು ಮಡಕೆಯೊಳಗೆ ಹುಡುಕುತ್ತಿರುವೆನೆನ್ನುವುದು ಮಾತ್ರ ಶುದ್ಧ ತಲೆಹರಟೆಯೇ. ಬರೀ ಮಾತಿನ ಪುಂಡಾಟಿಕೆಯೇ, ಭಂಡಾಟಿಕೆಯೇ. ಆದರೂ ಮುದ್ದು ಮಗು ಮಾಡಿದಲ್ಲಿ, ಬಿಗಿಯಾದ ಪ್ರಶ್ನೆಗೆ ಥಟ್ಟನೊಂದು ಸುಟಿಯಾದ ಉತ್ತರವಿತ್ತಲ್ಲಿ, ಅದು ತಪ್ಪೋ ನೆಪ್ಪೋ, ನಗುವನ್ನು ತರಿಸುವಂತಹುದೇ, ಕೋಪವನ್ನು ಕರಗಿಸುವಂತಹುದೇ. ಕೃಷ್ಣನ ಮುದ್ದು ಎಂತಹುದೆಂದರೆ ಮತ್ತೊಮ್ಮೆ ಬಂದು ಕದಿಯುತ್ತಾ ಸಿಕ್ಕಿಹಾಕಿಕೊಳ್ಳಲಿ - ಎಂದು ಆಸೆ ಪಡುವಂತಹುದೇ ಸರಿ! ಆತ ಬಂದದ್ದೇ ಭಾಗ್ಯವೆನಿಸುವಂತಹುದು. ಎಂದೇ "ವರ-ವಲ್ಲವಿ"ಯೆಂದರೆ ಬರೀ ಹಿರಿಯಳೆಂದಲ್ಲ, ಶ್ರೇಷ್ಠ ಗೊಲ್ಲತಿ, ಧನ್ಯಳಾದ ಗೋಪಿಕೆಯೆಂದೇ ಅರ್ಥವಲ್ಲವೇ?
ಕಸ್ತ್ವಂ ಬಾಲ? ಬಲಾನುಜಃ; ಕಿಮಿಹ ತೇ? ಮನ್ಮಂದಿರಾಶಂಕಯಾ;
ಯುಕ್ತಂ ತನ್ನವನೀತ-ಪಾತ್ರ-ವಿವರೇ ಹಸ್ತಂ ಕಿಮರ್ಥಂ ನ್ಯಸೇಃ? |
ಮಾತಃ ಕಂಚನ ವತ್ಸಕಂ ಮೃಗಯಿತುಂ, ಮಾ ಗಾ ವಿಷಾದಂ ಕ್ಷಣಾದ್
- ಇತ್ಯೇವಂ ವರ-ವಲ್ಲವೀ-ಪ್ರತಿವಚಃ ಕೃಷ್ಣಸ್ಯ ಪುಷ್ಣಾತು ನಃ ||
ಸೂಚನೆ : 21/12/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.