ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಅಯಂ ಕ್ಷೀರಾಂಭೋಧೇಃ
"ಮೇಲೆ ನೋಡೆ ಕಣ್ಣ ತಣಿಪ / ನೀಲ ಪಟದಿ ವಿವಿಧ ರೂಪ / ಜಾಲಗಳನು ಬಣ್ಣಿಸಿರ್ಪ / ಚಿತ್ರಚತುರನಾರ್?" - ಎಂದು ಆರಂಭವಾಗುತ್ತದೆ, ಡಿವಿಜಿಯವರ "ನಿವೇದನ".
ಚಿತ್ರ ಬರೆಯುವವರಿಗೆ ಮೊದಲು ಬೇಕಾದುದೇ ಒಂದು ಭಿತ್ತಿ(ಗೋಡೆ) ಅಥವಾ ಒಂದು ಪಟ(ಕ್ಯಾನ್ವಾಸ್) ಅಲ್ಲವೇ? ಇಲ್ಲಿ ಗಗನವೇ ಪಟ. ಮೇಲೆ ನೋಡಿದರೆ ನೀಲಿಬಣ್ಣದ ಆಕಾಶ ತೋರುವುದಲ್ಲವೇ? ಅದರ ಮೇಲೆ ಏನೆಲ್ಲ ಚಿತ್ತಾರಗಳು ಕಾಣಬರುತ್ತವೆ!
ಇರುಳಿನಲ್ಲಿ ತೋರಿಬರುವ ಕೇವಲ ನಕ್ಷತ್ರಗಳ ಏನು-ಎಷ್ಟುಗಳನ್ನು ಎಣಿಸುವುದೆಂತು, ಗಣಿಸುವುದೆಂತು? ಸೂರ್ಯೋದಯ-ಸೂರ್ಯಾಸ್ತಗಳ ಸಮಯಗಳಲ್ಲಿ ಮುಗಿಲಲ್ಲಿ ಮೂಡಿ ಮೂಡಿ ಮೋಡಿಮಾಡಿ ಮರುಕ್ಷಣದಲ್ಲೇ ಮರೆಯಾಗುತ್ತಲಿರುವ ಬಣ್ಣಗಳ ಛವಿ-ಛಾಯೆಗಳನ್ನು ಬಣ್ಣಿಸುವುದೆಂತು! ಇದನ್ನೆಲ್ಲಾ ನಿತ್ಯ ನಡೆಸಿಕೊಡುವ ಚಿತ್ರ-ಚತುರನೆಂದರೆ ಭಗವಂತನೇ ಸರಿ!
"ಜಗತ್ತಿನ ಏಳು ವಿಸ್ಮಯಗಳು" ಎಂದು ಏನೇನನ್ನೋ ಪಟ್ಟಿಮಾಡುತ್ತಾರೆ. ಆದರೆ ಪ್ರಥಮ-ವಿಸ್ಮಯವೆಂದರೆ ಇದುವೇ: ಆಗಸದಲ್ಲಿ ಮಾಸಿಯೂ ಮಾಸದ ವಿಚಿತ್ರಗಳು ಅನುದಿನವೂ ಮೂಡುವುದೇ ಆಡುವುದೇ ಸರಿ.
ಇಲ್ಲ. ಇದಕ್ಕೂ ಮಿಗಿಲಾದುದು ಮತ್ತೊಂದಿದೆ. ಮೇಲೆ ಚಿತ್ರಿಸಿರುವುದು ಜಡ-ಪ್ರಕೃತಿಯ ಪಟಲದ ಮೇಲಾಡುವ ರಂಗುರಂಗಿನ ಚೆಲ್ಲಾಟ. ಆದರೆ ಜೀವ-ಪ್ರಕೃತಿಯ ಉಕ್ಕುವ ಚೈತನ್ಯದ ಸ್ಫುರಣವು ಮತ್ತೂ ವಿಸ್ಮಯಕಾರಿ. ಏನದು? ದಾಸರು ಕೇಳಿಲ್ಲವೆ,
"ಬೆಟ್ಟದಾ ತುದಿಯಲ್ಲಿ ಪುಟ್ಟಿದಾ ವೃಕ್ಷಕ್ಕೆ / ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ? //… ನವಿಲಿಗೆ ಚಿತ್ರ ಬರೆದವರಾರು? / ಪವಳದ ಲತೆಗೆ ಕೆಂಪಿಟ್ಟವರು ಯಾರು?" – ಇತ್ಯಾದಿಯಾಗಿ? ಮೊದಲನೆಯದೆಂತು ವಿಸ್ಮಯಕಾರಿಯೋ, ಎರಡನೆಯದೂ ಅಂತೆಯೇ ವಿಸ್ಮಯಕಾರಿ. ಹೂ-ಹಣ್ಣುಗಳಲ್ಲಿಯ ಜ್ಯಾಮಿತೀಯ-ಸಂರಚನೆಗಳಾಗಲಿ, ಮಯೂರಗಳ ಗರಿಗಳಲ್ಲಿಯ ಕಲಾವಂತಿಕೆಗಳಾಗಲಿ, ಕಡಿಮೆ ವಿಸ್ಮಯಗಳೇ?
ಜಡ-ಜಗತ್ತಿನ ಸೊಗಸನ್ನು ಮೊದಲನೆಯದು ಹೇಳಿದರೆ, ಯಾರ ಆರೈಕೆಯೂ ಇಲ್ಲದೆ, ಬರಡು ಬಂಡೆಗಳ ಬಿರುಕುಗಳಲ್ಲೂ ಬೆಳೆದುಕೊಳ್ಳಬಲ್ಲ ಮರಗಳ ತೆರನನ್ನು ಎರಡನೆಯದು ಹೇಳಿತು. ತರು-ಲತೆಗಳ ದಲ-ಫಲಗಳಲ್ಲಿಯ ಅಚ್ಚರಿಯನ್ನೂ ಮೆಚ್ಚಿದ್ದಾಯಿತು.
ಇವಕ್ಕೂ ಮಿಗಿಲೆನ್ನಬಹುದಾದ ಮೂರನೆಯ ವಿಸ್ಮಯವೊಂದಿದೆ. ಏನದು? ತಾಯ ಹಾಲು! ಅತ್ತ ಮಗು ಹುಟ್ಟುತ್ತಲೇ ಇತ್ತ ತಾಯಿಯ ಮೊಲೆಯಲ್ಲಿ ಹಾಲು ಸಿದ್ಧವಾಗಲಾರಂಭಿಸುತ್ತದೆ! ತಾಯಿಯ ಮೊಲೆಯಲ್ಲಿ ತನಗೆ ಆಹಾರವು ಸಿದ್ಧವಾಗಿದೆಯೆಂದೂ, ಚೀಪಿದರೆ ಹಾಲು ದಕ್ಕುತ್ತದೆಂದೂ ಮಗುವಿಗೆ ಮಾಹಿತಿಯೊದಗಿಸಿದವರಾರು? ಹೀಗೆ ಚೀಪಬೇಕೆಂದು ಶಿಕ್ಷಣವೊದಗಿಸಿದವರಾರು?
ಬದುಕುಳಿಯಲೂ ಬೆಳೆದು ಬಾಳಲೂ ಬೇಕಾದ ಸಿದ್ಧತೆಯನ್ನು ಎರಡು ಕಡೆಯಿಂದಲೂ - ಅತ್ತ ತಾಯಿಯ ಮೊಲೆಯಲ್ಲಿ ಉಣಿಸಲು ಸ್ತನ್ಯಸಿದ್ಧತೆ, ಇತ್ತ ಶಿಶುವಿನ ಬಾಯಲ್ಲಿ ಅದನ್ನು ಸವಿಯಲು ಚೀಪಬೇಕೆಂಬ ಸಿದ್ಧತೆ - ಇವೆರಡೂ ಹೊರಗೆ ಯಾರಾದರೂ ಬೋಧನೆ ಮಾಡಿ ಬರಿಸಿರುವಂತಹುದೇ? ತೀಡಿ ತಿದ್ದಿ ತರಿಸಿರುವಂತಹುದೇ? ಆಧುನಿಕ-ಮನೋ-ವಿಜ್ಞಾನಿಗಳು ಹೇಳುವ ಎಸ್-ಆರ್-ಕಾಂಪ್ಲೆಕ್ಸ್-ಗಳಿಂದಲೇ ವಿವರಿಸಲಾದೀತೇ?
ಎಳೆಗರುವಿಗೂ ಇದು ಗೊತ್ತು. ಸಮಸ್ತ-ಸಸ್ತನಿಗಳಿಗೂ, ಯಾರೂ ಹೇಳಿಕೊಡದೆಯೂ, ಅರಿವಿಗೆ ಬರುವುದಿದು. ಹೀಗಾಗಿ ಮೊಲೆವಾಲೆಂಬುದು ಜೀವಾತು! ಎಂದೇ ಶ್ರೀರಂಗಮಹಾಗುರುಗಳು ತಾಯಿಯ ವಕ್ಷೋಜವೆಂಬುದು "ಅಮೃತದ ಕಲಶ"ವೆಂದು ಹೇಳಿರುವುದು!
ಆಗಸವಾಯಿತು, ಸಸ್ಯವಾಯಿತು, ಸ್ತನ್ಯವಾಯಿತು - ಇವೆಲ್ಲ ಒಂದಕ್ಕಿಂತ ಒಂದು ವಿಸ್ಮಯಕಾರಿಗಳು ಸರಿಯೇ. ಆದರೆ ಅವಕ್ಕೂ ಕೃಷ್ಣಕರ್ಣಾಮೃತಕ್ಕೂ ಏನು ಸಂಬಂಧ?
ಸಂಬಂಧವಿದೆ. ಯಾರಾದರೂ ಇಂತಹ ಮೊಲೆಹಾಲು ದೊರೆಯುವುದನ್ನು ತಪ್ಪಿಸಿದರೆ ಅದು ತಪ್ಪಲ್ಲವೇ? ತಪ್ಪೇನು, ಘೋರಾಪರಾಧವೇ ಸರಿ! ಅಂತಹ ಕೆಲಸವನ್ನು ಕೃಷ್ಣನು ಮಾಡಿದ್ದಾನೆ - ಎನ್ನುತ್ತಾನೆ, ಲೀಲಾಶುಕ!
ಕೃಷ್ಣನೇನು, ವಿಷ್ಣುವೇನು? ಇಬ್ಬರೂ ಒಂದೇ. ಕ್ಷೀರದ ಅಂಭೋಧಿಗೆ, ಎಂದರೆ ಪಾಲ್ಗಡಲಿಗೆ, ಅರ್ಥಾತ್ ಹಾಲಿನ ಸಮುದ್ರಕ್ಕೆ, ಅಧಿಪತಿಯೆಂದರೆ ಶ್ರೀಕೃಷ್ಣನಲ್ಲದೆ ಮತ್ತಿನ್ನಾರು? ಕ್ಷೀರ-ಸಮುದ್ರದಲ್ಲಲ್ಲವೇ ವಿಷ್ಣುವು ಶಯಿಸಿರುವುದು, ಎಂದರೆ ನಿದ್ರಿಸಿರುವುದು?
ಅದು ವಿಷ್ಣು, ಇದು ಕೃಷ್ಣ - ಎನ್ನಬೇಡಿ. ಒಂದು ವೇಳೆ ಹಾಗೆಂದರೂ ದೋಷಾರೋಪಣೆ ತಪ್ಪದು. ಏಕೆ? ಈತ ಗೋಪಾಲಕನಲ್ಲವೆ? ಕರುಗಳು ಹಾಲು ಕುಡಿಯುವುದನ್ನು ತನ್ನ ಎಳಸಿನಿಂದಲೇ ನಿತ್ಯವೂ ಕಂಡಿರುವವನಲ್ಲವೇ? ಕರುಗಳನ್ನು ಅಮ್ಮ-ಹಸುವಿನತ್ತ, ಗೋಮಾತೆಯತ್ತ, ಕರೆದುಕೊಂಡು ಹೋಗಿ ಹತ್ತಾರೇನು, ನೂರಾರು ಬಾರಿ ಹಾಲು ಕುಡಿಸಿರುವವನಲ್ಲವೇ? ಹಾಗೆಂದ ಮೇಲೆ ಮಾತೃಸ್ತನ್ಯದ ಬೆಲೆಯನ್ನು ಈತನೇನು ಅರಿಯನೇ?
ಯಾರಾದರೂ ಗೊಲ್ಲರ ಬಳಿಗೆ ಹೋಗುವುದೇತಕ್ಕೆ? ಹಾಲನ್ನು ಕೊಳ್ಳಲು. ಕೃಷ್ಣನು ಗೋಪ-ತನಯ, ಎಂದರೆ ಗೊಲ್ಲರ ಮಗ - ಎಂಬ ಎರಡನೆಯ ಕಾರಣದಿಂದಲೇ, ಕ್ಷೀರೋಪನಯನಕ್ಕೆಂದೇ, ಎಂದರೆ ಹಾಲು ಪಡೆಯಲೆಂದೇ, ನಾವು ಕೃಷ್ಣನನ್ನು ಆಶ್ರಯಿಸಿದುದು. ಆದರೆ ಅದನ್ನೇ ಆತನು ತಪ್ಪಿಸಿಬಿಡುವುದೇ? ಪಾಡಿದವರಿಗೆ ಬೇಡಿದ ವರಗಳನು ನೀಡುವನು – ಎಂಬ ಕಾರಣದಿಂದಲೇ ಅಲ್ಲವೇ ದೇವನನ್ನು ಎಲ್ಲರೂ ಭಕ್ತಿಯಿಂದ ಸಮಾಶ್ರಯಿಸುವುದು?
ಜನನೀ-ಸ್ತನದಿಂದ ದಕ್ಕುವ ಹಾಲಿಗೆ ಕೃಷ್ಣನು ಪ್ರತ್ಯೂಹ ಉಂಟುಮಾಡಿದನಲ್ಲಾ, ಎಂದರೆ ಅಡ್ಡಿಯೊಡ್ಡಿದನಲ್ಲಾ - ಎಂಬ ಆಪಾದನೆ ಕೃಷ್ಣನ ಮೇಲೆ ಬಂದಿರುವುದು ಏತಕ್ಕೆ? ಆತನು ಮಾಡಿರುವುದಾದರೂ ಏನು?
ಇದಕ್ಕೆ ಉತ್ತರವು ಹೀಗಿದೆ. ಕೃಷ್ಣನನ್ನು ಭಜಿಸುವುದರಿಂದ ದೊರಕುವುದೇನು? ಮುಕ್ತಿಯಲ್ಲವೇ? ಮುಕ್ತಿಯೆಂದರೂ ಮೋಕ್ಷವೆಂದರೂ ಬಿಡುಗಡೆ. ಅರ್ಥಾತ್, ಮರುಹುಟ್ಟಿಲ್ಲದಿರುವಿಕೆ. ನಾವೆಲ್ಲಾ ಸಿಕ್ಕಿಕೊಂಡಿರುವುದು "ಪುನರಪಿ ಜನನಂ ಪುನರಪಿ ಮರಣಂ" ಎಂಬ ಚಕ್ರದಲ್ಲಿ. ಸಂಸರಣ ಅಥವಾ ಸಂಸಾರವೆಂದರೇ ಮತ್ತೆ ಮತ್ತೆ ಹುಟ್ಟಿ ಸಾಯುತ್ತಿರುವ ಚಕ್ರ. ಅದುವೇ ಭವ-ಬಂಧ.
ಆ ಸಂಸಾರ-ಚಕ್ರದಿಂದ ಬಿಡುಗಡೆಯಾಯಿತೆಂದರೆ ಮತ್ತೆ ತಾಯಿಯ ಗರ್ಭದಲ್ಲಿ ವಾಸವೆಂಬುದೆಲ್ಲಿ? ಅರ್ಥಾತ್, ಮತ್ತೆ ಹುಟ್ಟೆಲ್ಲಿ? ಹುಟ್ಟೇ ಇಲ್ಲವೆಂದಮೇಲೆ ಸ್ತನದ ಪಯಸ್ಸು - ಎಂದರೆ ತಾಯ್ಮೊಲೆ ಹಾಲು - ಮತ್ತೆಲ್ಲಿ? ಎಂದೇ, ಮೊಲೆವಾಲೇ ದುರ್ಲಭವಾಯಿತಲ್ಲಾ! – ಎಂದಿರುವುದು, ಲೀಲಾಶುಕ.
ಈ ಶ್ಲೋಕದ ತಾತ್ಪರ್ಯವು ಏನೆಂದರೆ, ಕೃಷ್ಣನನ್ನು ಭಜಿಸಿದವರಿಗೆ ಮರುಹುಟ್ಟಿಲ್ಲ, ಗರ್ಭವಾಸದ ದುಃಖವಿಲ್ಲ - ಎಂಬುದು. ಇದುವೇ ಮೋಕ್ಷ-ಪ್ರಾಪ್ತಿ! ಇದಕ್ಕಿಂತಲೂ ದೊಡ್ಡ ಲಾಭವುಂಟೇ? ಇದುವೇ ಆತ್ಮ-ಲಾಭವೆಂದು ಕರೆಯಿಸಿಕೊಳ್ಳಲ್ಪಡುವುದು. ಆತ್ಮಲಾಭಕ್ಕಿಂತಲೂ ಹಿರಿದಾದ ಮತ್ತೊಂದು ಲಾಭವಿಲ್ಲ – ಎನ್ನುತ್ತಾರೆ, ಆಪಸ್ತಂಬ-ಮಹರ್ಷಿಗಳು.
ಯಾವ ಸುಖಕ್ಕಿಂತ ಹಿರಿದಾದ ಸುಖವಿಲ್ಲವೋ ಅದುವೇ ಆತ್ಮ-ಸುಖ. ಭಗವತ್-ಸಾಕ್ಷಾತ್ಕಾರವೆಂದರೂ ಇದೇ. ಹೀಗೆ ಶ್ರೀಕೃಷ್ಣನ ಭಜನೆಯಿಂದ ಉತ್ತಮೋತ್ತಮ-ಲಾಭವೇ, ಉತ್ತಮೋತ್ತಮ-ಸುಖವೇ! ಇದಕ್ಕಿಂತಲೂ ದೊಡ್ಡ ಗುಣವಿರಲು ಸಾಧ್ಯವೇ?
ಹಾಗಿರಲು, ಇಲ್ಲಿ ಗುಣವನ್ನೇ ದೋಷವೆಂದು ತೋರಿಸಿದೆ. ಪರಿಣಾಮವಾಗಿ, ನಿಂದಾ-ಸ್ತುತಿಯನ್ನು ಮಾಡಿದೆ. ಮೇಲ್ನೋಟಕ್ಕೆ ನಿಂದೆ, ವಾಸ್ತವವಾಗಿ ಪ್ರಶಂಸೆ -ಎಂಬ ಬಗೆಯ ವಾಕ್-ಚಮತ್ಕಾರವೇ ನಿಂದಾ-ಸ್ತುತಿ. ಹೀಗೆ ತೆಗಳಿ ಹೊಗಳುವ ಬಗೆಯಿಂದ ಕೃಷ್ಣನನ್ನು ಕೊಂಡಾಡಿರುವ ಮುದ್ದಾದ ಪದ್ಯವಿದು.
"ಅಯಂ ಕ್ಷೀರಾಂಭೋಧೇಃ ಪತಿ"ರಿತಿ, "ಗವಾಂ ಪಾಲಕ" ಇತಿ,
ಶ್ರಿತೋಽಸ್ಮಾಭಿಃ ಕ್ಷೀರೋಪನಯನ-ಧಿಯಾ ಗೋಪ-ತನಯಃ |
ಅನೇನ ಪ್ರತ್ಯೂಹೋ ವ್ಯರಚಿ ಸತತಂ ಯೇನ ಜನನೀ-
ಸ್ತನಾದ್ ಅಪ್ಯಸ್ಮಾಕಂ ಸಕೃದ್ ಅಪಿ ಪಯೋ ದುರ್ಲಭಮಭೂತ್!! ||
ಸೂಚನೆ : 7/12/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.