ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ – 115 ಯಾವುದು ಆಶ್ಚರ್ಯ?
ಉತ್ತರ - ಪ್ರತಿದಿನ ಭೂತಕೋಟಿಗಳು ಯಮನಿಲಯವನ್ನು ಸೇರಿತ್ತಿರುತ್ತಾರೆ. ಆದರೆ ಉಳಿದ ಕೆಲವು ಶಾಶ್ವತವಾಗಿ ಈ ಭೂಮಿಯ ಮೇಲೇ ಇರಬೇಕೆಂದು ಇಚ್ಛಿಸುತ್ತಾರೆ. ಇದೇ ನಿಜವಾಗಿ ಆಶ್ಚರ್ಯ.
ಅತ್ಯಂತ ಆಶ್ಚರ್ಯಕರವಾದ ಸಂಗತಿ ಏನು? ಎಂಬುದಾಗಿ ಯಕ್ಷನು ಧರ್ಮರಾಜನಿಗೆ ಪ್ರಶ್ನಿಸುತ್ತಾನೆ. ಇಲ್ಲಿ ಧರ್ಮಜನ ಉತ್ತರ ಬಹಳ ವಿಚಿತ್ರವಾಗಿದೆ. ಈ ಪ್ರಪಂಚದಲ್ಲಿ ಅನೇಕ ಪ್ರಾಣಿ ಪಶು ಪಕ್ಷಿಗಳು ಪ್ರತಿನಿತ್ಯ ಮರಣವನ್ನು ಹೊಂದುತ್ತವೆ. ಅವು ಯಮಾಲಯವನ್ನು ಪ್ರವೇಶಿಸುತ್ತವೆ. ಮನುಷ್ಯನು ಕೂಡ ಈ ಭೂಮಿಗೆ ಬಂದ ಮೇಲೆ ಒಂದಲ್ಲ ಒಂದು ದಿನ ಸಾಯಲೇಬೇಕು. ಯಮಮಂದಿರವನ್ನು ಪ್ರವೇಶಿಸಲೇಬೇಕು. ಈ ಭೂಮಿಗೆ ಬಂದವರು ಯಾರೂ ಶಾಶ್ವತರಲ್ಲ; ಶಾಶ್ವತವಾಗಿ ಇರಲು ಸಾಧ್ಯವೂ ಇಲ್ಲ. ಹೀಗಿರುವಾಗ 'ನಾನು ಇಲ್ಲೇ ಇರುತ್ತೇನೆ; ಈ ಭೂಮಿಯನ್ನು ಬಿಟ್ಟು ಹೋಗುವುದೇ ಇಲ್ಲ' ಎಂಬ ರೀತಿಯಲ್ಲಿ ಮನುಷ್ಯನ ವರ್ತನೆ ಇರುತ್ತದೆ. ಇದಕ್ಕಿಂತಲೂ ಆಶ್ಚರ್ಯ ಇನ್ನೇನು! ಎಂಬುದಾಗಿ ಉತ್ತರವನ್ನು ನೀಡುತ್ತಾನೆ. ಆದ್ದರಿಂದ ಇಲ್ಲಿ ಚಿಂತಿಸಬೇಕಾದ ವಿಷಯ ಇಷ್ಟು - ಯಾವನೂ ಕೂಡ ಈ ಭೂಮಿಯಲ್ಲಿ ಶಾಶ್ವತನಲ್ಲ; ಆದರೆ ತಾನು ಶಾಶ್ವತ ಎಂದು ಭಾವಿಸಿ ಇರುತ್ತಾನಲ್ಲ; ಇದೇ ಆಶ್ಚರ್ಯ ಎಂಬುದಾಗಿ.
ಒಬ್ಬ ಮನೆಯನ್ನು ಕಟ್ಟಿ, ಈ ಮನೆಯಲ್ಲಿ ನಾನು ಶಾಶ್ವತವಾಗಿ ಉಳಿಯುತ್ತೇನೆ ಎಂದು ಭಾವಿಸಬಹುದು. ಒಬ್ಬ ರಾಜ್ಯದ ಅಥವಾ ದೇಶದ ಚುಕ್ಕಾಣಿಯನ್ನು ಹಿಡಿದವನು, ಇದೇ ನನ್ನ ಶಾಶ್ವತವಾದ ಸ್ಥಾನ ಎಂದು ಭಾವಿಸಬಹುದು. ಹೀಗೆ ತನಗೆ ಸಿಕ್ಕಿರುವ ಅವಕಾಶವನ್ನೇ ಅಳಿಸಲಾಗದ ಅವಕಾಶ, ಮಣೆಯನ್ನು ಕೊಟ್ಟರೆ ಸಿಂಹಾಸನ ಎಂಬುದಾಗಿ ಭಾವಿಸಿ ಅಲ್ಲೇ ಮುಂದುವರಿಯಬಹುದು. ಆದರೆ ಒಂದಂತೂ ನಿಜ, ಎಷ್ಟೇ ದೊಡ್ಡ ಸಾಮ್ರಾಜ್ಯವನ್ನು ಕಟ್ಟಿದರೂ, ಎಷ್ಟೇ ಜನರನ್ನು ಸಂಪಾದಿಸಿದರೂ, ಯಾವುದೇ ರೀತಿಯ ಸಂಬಂಧವನ್ನು ಈ ಭೂಮಿಯಲ್ಲಿ ಸಂಪಾದಿಸಿದರೂ, ಎಲ್ಲವನ್ನು ಬಿಟ್ಟು ಒಂದು ದಿನ ಹೋಗಲೇಬೇಕು ಎಂಬುದು ಅಷ್ಟೇ ನಿಶ್ಚಿತವಾದ ವಿಷಯ. ಇಷ್ಟಿದ್ದರೂ ಇಲ್ಲೇ ಶಾಶ್ವತವಾಗಿ ನೆಲೆ ನಿಲ್ಲುತ್ತೇನೆ ಎಂಬ ಭ್ರಮೆಯಲ್ಲಿ ಬದುಕುವುದು ಎಂಬುದೇ ಅತ್ಯಂತ ವಿಚಿತ್ರವಾದ ಸಂಗತಿ. ಭೋಜ ಎಂಬ ಮಹಾರಾಜನ ಕಥೆ, ಭೋಜನಿಗೆ ಮುಂಜ ಎಂಬ ಚಿಕ್ಕಪ್ಪ ಇದ್ದ. ಭೋಜನ ತಂದೆ ಮರಣವಾದ ಅನಂತರದಲ್ಲಿ ಈ ಬಾಲಕನಾದ ಭೋಜನು 56 ವರ್ಷಕ್ಕಿಂತ ಹೆಚ್ಚು ವರ್ಷ ರಾಜ್ಯವನ್ನು ಆಳ್ವಿಕೆ ಮಾಡುತ್ತಾನೆ ಎಂಬ ವಿಷಯವನ್ನು ದೈವಜ್ಞರ ಮುಖಾಂತರ ಮುಂಜನು ತಿಳಿದುಕೊಳ್ಳುತ್ತಾನೆ. ಭೋಜನನ್ನು ಸಾಯಿಸಿದರೆ ಶಾಶ್ವತವಾಗಿ ತಾನೇ ರಾಜನಾಗಿ ಉಳಿಯಬಹುದು ಎಂಬುದು ಎಂಬುದನ್ನು ಚಿಂತಿಸಿ ಆತ ರಾಜನಾಗಲು ಬಯಸುತ್ತಾನೆ. ಆದರೆ ವಿಧಿಯು ಹೇಗಿರುತ್ತದೆ? ಎಂಬುದನ್ನು ನಾವು ನೋಡಬಹುದು. ಸಾಯಿಸಲು ಕರೆದುಕೊಂಡ ಹೋದಾಗ ಭೋಜನು ಒಂದು ಮಾತನ್ನು ಹೇಳುತ್ತಾ ಒಂದು ಪತ್ರವನ್ನು ರಕ್ತದಲ್ಲಿ ಬರೆದು ಕಳುಹಿಸುತ್ತಾನೆ. ಹೇ! ಮುಂಜನೆ! ಮಾಂಧಾತ ಧರ್ಮರಾಜ ಶ್ರೀರಾಮನಂತಹ ಅನೇಕ ಸಾಮ್ರಾಟರು ಈ ಭೂಮಿಯನ್ನು ಆಳಿದರು; ಆದರೆ ಯಾರ ಜೊತೆಯಲ್ಲೂ ಈ ಭೂಮಿ ಹೋಗಲಿಲ್ಲವಲ್ಲ; ಹಾಗಾಗಿ ನೀನು ಸತ್ತ ಮೇಲೆ ಈ ಭೂಮಿ ನಿನ್ನ ಜೊತೆ ಬರುತ್ತದೆ ಎಂದು ಭಾವಿಸಿರುವೆಯಾ? ಎಂಬುದಾಗಿ. ಮುಂದೆ ಭೋಜನ ವಧೆಯಾಗದೆ ಅವನೇ ರಾಜನಾಗುತ್ತಾನೆ. ಅಂದರೆ ಸಂಪತ್ತಾಗಲಿ ಭೂಮಿಯಾಗಲಿ ಅಧಿಕಾರವಾಗಲಿ ಯಾವುದೂ ಕೂಡ ಸತ್ತಮೇಲೆ ಅವರ ಜೊತೆಗೇ ಹೋಗಲಾರದು. ಇರುವಷ್ಟು ದಿನ ಅದನ್ನು ಅನುಭವಿಸಬೇಕು. ಒಂದು ದಿನ ನಾನು ಎಲ್ಲವನ್ನು ಬಿಡುತ್ತೇನೆ ಎಂಬಂತಹ ತ್ಯಾಗ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂಬುದು ಈ ಪ್ರಶ್ನೋತ್ತರದ ತಾತ್ಪರ್ಯವಾಗಿದೆ.
ಸೂಚನೆ : 01/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.