ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಪ್ರತಿಕ್ರಿಯಿಸಿರಿ (lekhana@ayvm.in)
ಆತನು ಹಾಗೆ ಹೇಳಲು, "ಯಾವ ಆಹಾರದಿಂದ ನಿನಗೆ ತೃಪ್ತಿಯಾಗುವುದು ಎಂಬುದನ್ನು ಹೇಳು. ಅದಕ್ಕೆ ನಾವು ಯತ್ನಿಸುತ್ತೇವೆ" ಎಂದರು, ಅವರು. ಆಗ ಅವನು ಹೇಳಿದನು.
"ನನಗೆ ಅನ್ನ ತಿನ್ನುವ ಅಪೇಕ್ಷೆಯಿಲ್ಲ. ನಾನು ಅಗ್ನಿಯೆಂಬುದನ್ನು ಅರಿಯಿರಿ. ನನಗೆ ಅನುರೂಪವಾದ ಅನ್ನವು ಯಾವುದೋ ಅಂತಹುದನ್ನು ಕೊಡಿ. ಈ ಖಾಂಡವ-ವನವನ್ನು ರಕ್ಷಿಸುವವನು ಇಂದ್ರ. ಆ ಮಹಾತ್ಮನ ರಕ್ಷಣೆಗೆ ಇದು ಒಳಪಟ್ಟಿರುವುದರಿಂದ ನಾನಿದನ್ನು ಸುಡಲಾರೆ. ಆತನ ಮಿತ್ರನಾದ ತಕ್ಷಕನು ಇಲ್ಲಿಯೇ ಸದಾ ಸಪರಿವಾರನಾಗಿ ವಾಸಮಾಡುತ್ತಾನೆ. ಇಂದ್ರನ ಪ್ರಭಾವವಿರುವುದರಿಂದ ಇದನ್ನು ನಾನು ಸುಡಲಾಗುತ್ತಿಲ್ಲ. ತಕ್ಷಕನ ಇರುವಿಕೆಯಿಂದಾಗಿ ಇಲ್ಲಿರುವ ಅನೇಕ ಜೀವಿಗಳಿಗೂ ರಕ್ಷೆಯಾಗಿಬಿಟ್ಟಿದೆ. ಇಂದ್ರನ ತೇಜಸ್ಸಿರುವ ಕಾರಣ ನಾನಿದನ್ನು ಸುಡಬೇಕೆನಿಸಿದರೂ ಸುಡಲಾರೆ. ನಾನಿದನ್ನು ಸುಡಹೊರಟರೆ ಇಂದ್ರನು ಮೋಡಗಳಿಂದ ಮಳೆಗರೆದುಬಿಡುವನೇ ಸರಿ. ಎಂದೇ ಇದನ್ನು ಸುಡಬಯಸಿದರೂ ಸುಡಲಾರೆ. ನೀವಿಬ್ಬರೂ ಅಸ್ತ್ರವಿದ್ಯೆಯನ್ನು ಬಲ್ಲವರು. ಅಸ್ತ್ರಜ್ಞರಾದ ತಮ್ಮ ಜೊತೆಗಾರಿಕೆಯಿದ್ದಲ್ಲಿ, ಈ ಖಾಂಡವವನ್ನು ದಹಿಸುವೆ. ನಾನು ಆಹಾರವನ್ನಾಗಿ ಕೇಳಿಕೊಳ್ಳುತಿರುವುದು ಇದನ್ನೇ.
ತಾವಿಬ್ಬರೂ ಅಸ್ತ್ರವಿದರು. ತಮ್ಮ ಸಹಾಯದೊಂದಿಗೆ ಮೇಲಿಂದ ಬೀಳುವ ಜಲಧಾರೆಯನ್ನೂ ತಾವು ತಡೆಯಬೇಕು; ಪ್ರಾಣಿಗಳು ಓಡಿಹೋಗುವುದನ್ನೂ ತಡೆಯಬೇಕು" ಎಂದನು.
ಖಾಂಡವದ ಹಿಂದಿನ ಕಥೆಯೊಂದಿದೆ. ಹಿಂದೆ ಶ್ವೇತಕಿ ಎಂಬ ರಾಜನಿದ್ದ. ಇಂದ್ರನಿಗೆ ಸಮಾನವಾದ ಬಲ ಹಾಗೂ ಪರಾಕ್ರಮಗಳು ಅತನವು. ಅಂದಿನ ಕಾಲಕ್ಕೆ ಅವನ ಹಾಗೆ ಯಜ್ಞ ಮಾಡುವವನೂ ದಾನಶೀಲನೂ ಧೀಮಂತನೂ ಮತ್ತೊಬ್ಬನಿರಲಿಲ್ಲ. ಭಾರಿ ದಕ್ಷಿಣೆಗಳನ್ನಿತ್ತು ಆತನು ದೊಡ್ಡ ದೊಡ್ಡ ಯಜ್ಞಗಳನ್ನು ಮಾಡಿದ್ದನು. ದಿನದಿನಕ್ಕೂ ಆತನಿಗೆ ನಾನಾ ಯಜ್ಞಗಳನ್ನೂ ನಾನಾದಾನಗಳನ್ನೂ ಬಿಟ್ಟು ಬೇರಾವುದರ ಬಗ್ಗೆಯೂ ಬುದ್ಧಿಯೋಡುತ್ತಿರಲಿಲ್ಲ.
ಈ ಧೀಮಂತನು ಋತ್ವಿಕ್ಕುಗಳನ್ನಿಟ್ಟುಕೊಂಡು ಈ ಪರಿಯಲ್ಲಿ ಯಜ್ಞ ಮಾಡುತ್ತಿದ್ದನು. ಮತ್ತು ಆ ಋತ್ವಿಜರಾದರೂ ಯಜ್ಞ-ಧೂಮಗಳಿಂದ ಕಣ್ಣುಬೇನೆಗಳಿಗೊಳಗಾದರು! ಹೀಗೆಯೇ ಬಹುಕಾಲ ಕಳೆಯಿತು. ಖೇದದಿಂದ ಅವರು ರಾಜನನ್ನು ತೊರೆದುಹೋದರು. ಮತ್ತೆ ಯಜ್ಞಾರ್ಥವಾಗಿ ಆ ಋತ್ವಿಕ್ಕುಗಳನ್ನು ರಾಜನು ಪ್ರಚೋದಿಸಿದನಾದರೂ ಅವರು ಯಜ್ಞಕ್ಕೆ ಬರಲಿಲ್ಲ. ಕೊನೆಗೆ ಅವರುಗಳಿಂದಲೇ ಅನುಮತಿಯನ್ನು ಪಡೆದು, ಬೇರೆ ಋತ್ವಿಕ್ಕುಗಳನ್ನಿಟ್ಟುಕೊಂಡು ಆತನು ಯಜ್ಞಗಳನ್ನು ನಡೆಸಿದ.
ಕೆಲಕಾಲ ಕಳೆಯಿತು. ನೂರುವರ್ಷಗಳ ಕಾಲ ನಡೆಯುವ ಯಾಗವೊಂದನ್ನು ಮಾಡಬೇಕೆಂದು ಆತನು ಮನಸ್ಸು ಮಾಡಿದನು. ಆದರೆ ಅದಕ್ಕೆ ಯಾವ ಋತ್ವಿಕ್ಕುಗಳೂ ದೊರೆಯಲಿಲ್ಲ. ಮಹಾಪ್ರಯತ್ನವನ್ನೇ ರಾಜನು ಮಾಡಿದನು. ತನ್ನ ಮಿತ್ರರನ್ನೂ ಜೊತೆಮಾಡಿಕೊಂಡು ಹೋಗಿ. ಋತ್ವಿಕ್ಕುಗಳ ಪಾದಗಳಿಗೆರಗಿದನು, ಸಾಂತ್ವನದ ಮಾತುಗಳನ್ನಾಡಿದನು, ಬೇಜಾರನ್ನೇ ಮಾಡಿಕೊಳ್ಳದೆ ಮತ್ತೆ ಮತ್ತೆ ಅವರನ್ನು ಅನುನಯಗೊಳಿಸಿದನು. ಆದರೆ ಆತನ ಅನುನಯಕ್ಕೆ ಅವರು ಮಣಿಯಲಿಲ್ಲ.
ಕೋಪಗೊಂಡ ಆತನು ಆಶ್ರಮದಲ್ಲಿದ್ದ ವಿಪ್ರರನ್ನು ಕೇಳಿದನು: ನಾನೇನಾದರೂ ಪತಿತನಾಗಿದ್ದರೆ, ಅಥವಾ ತಮ್ಮ ಶುಶ್ರೂಷೆಯಲ್ಲಿ ನಿಷ್ಠನಾಗಿಲ್ಲದಿದ್ದರೆ, ನಿಮ್ಮ ತಿರಸ್ಕಾರಕ್ಕೆ ನಾನು ಯೋಗ್ಯನಾಗಬಹುದು, ತಾವು ನನ್ನನ್ನು ತ್ಯಜಿಸಬಹುದು. ಹಾಗಿಲ್ಲದಿರುವುದರಿಂದ ತಾವು ನನ್ನ ಯಜ್ಞಶ್ರದ್ಧೆಯನ್ನು ಕೆಡವುವುದು ಸರಿಯಲ್ಲ. ಹಾಗೆಯೇ ನನ್ನ ಅಪರಾಧವೆಂಬುದೇ ಇಲ್ಲದಿರುವಲ್ಲೂ ನನ್ನನ್ನು ತಾವು ಪರಿತ್ಯಜಿಸುವುದು ಸರಿಯಲ್ಲ.
ನಾನು ನಿಮ್ಮಲ್ಲಿ ಶರಣಾಗಿದ್ದೇನೆ. ಹಾಗಿರಲು, ತಾವು ಪ್ರಸನ್ನರಾಗುವುದೇ ಉಚಿತವಲ್ಲವೇ?