Sunday, December 1, 2024

ಅಷ್ಟಾಕ್ಷರೀ 71 ತಪಃಶ್ಲಾಘ್ಯೈಃ ಮಹರ್ಷಿಭಿಃ (Ashtakshari 71)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ತಮ್ಮನ್ನು ಕುರಿತು ಯಾರಾದರೂ ಒಳ್ಳೆಯ ಮಾತನ್ನಾಡಿದರೆ ಯಾರಿಗೆ ಸಂತೋಷವಾಗದು?

ತಾನು ಬರೆದ ಪದ್ಯವನ್ನೋ ಪುಸ್ತಕವನ್ನೋ ಹೆಚ್ಚು ಹೆಚ್ಚು ಜನ ಮೆಚ್ಚಬೇಕು, ತಾನಳಿದ ಮೇಲೂ ತನ್ನ ಕೃತಿಯುಳಿಯಬೇಕು - ಎನ್ನುವ ಆಸೆ ಲೋಕ-ಸಾಮಾನ್ಯ.


ವಾಲ್ಮೀಕಿಗಳ ಕಥೆಯೇ ಬೇರೆಯಷ್ಟೆ? ಬ್ರಹ್ಮನು ಅವರಿಗೆ ವರವಿತ್ತನಲ್ಲವೇ? ಎಲ್ಲಿಯ ತನಕ ಭೂತಲದಲ್ಲಿ ಗಿರಿಗಳಿರುವುವೋ ನದಿಗಳಿರುವುವೋ ಅಲ್ಲಿಯ ತನಕ ರಾಮಾಯಣ-ಕಥೆಯು ಲೋಕದಲ್ಲಿ ಪ್ರಚಾರವನ್ನು ಹೊಂದಿರುವುದು! - ಎಂದು.


ಇಲ್ಲೊಂದು ವಿಶೇಷವನ್ನೂ ಗಮನಿಸಬೇಕು. ರಾಮಾಯಣವನ್ನು ಬರೆದು ಮುಗಿಸಿದ ಮೇಲಲ್ಲ, ಬ್ರಹ್ಮನು ಈ ವರವಿತ್ತದ್ದು. ಬರೆಯುವ ಮುಂಚೆಯೇ! "ಏನೋ ಒಂದೆರಡು ಕಾಂಡಗಳಷ್ಟಾದರೂ ಸ್ಯಾಂಪಲ್ ಕಳಿಸಯ್ಯಾ, ಆಮೇಲೆ ಕಮಿಟಿಯ ಮುಂದೆ ಇಟ್ಟು ನೋಡೋಣ" - ಎನ್ನಲಿಲ್ಲ, ಬ್ರಹ್ಮ. ಒಂದೇ ಶ್ಲೋಕದ ಸ್ಯಾಂಪಲ್ ಸಾಕಾಯಿತು, ಬ್ರಹ್ಮನಿಗೆ: "ಮಾ ನಿಷಾದ …".


ಅದನ್ನಾದರೂ ವಾಲ್ಮೀಕಿಗಳು ಕುಳಿತು ಬರೆದದ್ದೇ? ಇಲ್ಲ. ಕಾಮಕೇಳಿಯಲ್ಲಿದ್ದ ಹಕ್ಕಿಯನ್ನು ಬೇಡನೊಬ್ಬನು ಹೊಡೆಯಲು, ಅದು ವಿಲವಿಲನೆ ಒದ್ದಾಡಿ ಸತ್ತಿತಲ್ಲವೇ? ಅದರ ಸಂಗಾತಿಯು ಅತ್ತಿತಲ್ಲವೇ? ಆ ಆರ್ತತೆ ಅವರಲ್ಲಿ ಶೋಕವುಕ್ಕಿಸಿತು. ಅವರ ಬಾಯಿಂದ ಆ ಪದ್ಯವನ್ನು ಹೊರಡಿಸಿತು.


ತನ್ನ ಬಾಯಿಂದ ಹೊಮ್ಮಿದ್ದೇನೆಂದು ಅವರಿನ್ನೂ ಆಶ್ಚರ್ಯಪಡುತ್ತಿರುವಷ್ಟರಲ್ಲಿಯೇ ಬ್ರಹ್ಮನೇ ಆವಿರ್ಭವಿಸಿದ. ನಸುನಕ್ಕು, "ನಿನ್ನ ಬಾಯಿಂದ ಬಂದದ್ದು ಶ್ಲೋಕವೇ. ಅದು ಬಂದದ್ದು ನನ್ನ ಪ್ರೇರಣೆಯಿಂದಲೇ. ನಾರದನಿಂದ ರಾಮನ ಕಥೆಯನ್ನು ಕೇಳಿರುವೆಯಲ್ಲಾ, ಅದನ್ನೇ ಬರೆ. ನಿನಗೆಲ್ಲವೂ ಗೋಚರವಾಗುವುದು - ಎಂದು ಹೇಳಿಯೇ, ಈ ವರವಿತ್ತದ್ದು!


ವಾಲ್ಮೀಕಿಗಳು ಅದೆಷ್ಟನೇ ಇಸವಿಯಲ್ಲಿ ಆ ಆದಿ-ಕಾವ್ಯವನ್ನು ರಚಿಸಿದರೋ ಬಲ್ಲವರಾರು? ಎಷ್ಟೋ ಸಹಸ್ರ-ವರ್ಷಗಳೇ ಕಳೆದಿರಬೇಕು. ಈವರೆಗಂತೂ ಬ್ರಹ್ಮನ ವರ ಸುಳ್ಳಾಗಿಲ್ಲ. ಸುಳ್ಳಾಗುವುದೇನು? "ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ" ಎಂದಿರುವಂತೆ, ಅದೆಷ್ಟು ಕವಿಗಳು ಅದೇ ಕಥೆಯನ್ನೇ ಅದೆಷ್ಟು ಪ್ರಕಾರಗಳಲ್ಲಿ ಮತ್ತೆ ಮತ್ತೆ ಚಿತ್ರಿಸಿದ್ದಾರೆಂದು ಎಣಿಸಿಟ್ಟವರಾರು? ಅವಲ್ಲೂ ಲಬ್ಧ-ಕೃತಿಗಳೆಷ್ಟೋ, ನಷ್ಟ-ಕೃತಿಗಳೆಷ್ಟೋ! ಅದೂ ಏನು ಒಂದೆರಡು ಭಾಷೆಗಳಲ್ಲೇ?


ಅಷ್ಟೊಂದು ಮಂದಿ ಕವಿಗಳಿಗೇ ಉಪಜೀವ್ಯವೂ ಅನುಕಾರ್ಯವೂ ಆಯಿತು, ಈ ಕೃತಿ - ಎಂದರೆ, ಅಷ್ಟೇ ಸಾಕು, ಅದರ ಹಿರಿಮೆ-ಗರಿಮೆಗಳನ್ನು ಹೇಳಲು!


ಏನು ಉಪಜೀವ್ಯವೆಂದರೆ? ತಮ್ಮ ಬದುಕಿಗೇ ಆಸರೆಯಾಗಬಲ್ಲದ್ದು ಯಾವುದೋ, ಅದು ಉಪಜೀವ್ಯ. ರಾಮಾಯಣ-ಮಹಾಭಾರತ ಕಥೆಗಳು ಎಷ್ಟೊಂದು ಕವಿ-ಮುಖ್ಯರಿಗೂ ಉಪಜೀವ್ಯವಾಗಿರುವುವಲ್ಲವೇ? ಕಾಳಿದಾಸನಿಗಿಂತಲೂ ಕವಿಯೇ? ಆತನ ಕೃತಿಗಳನ್ನುಪಜೀವಿಸಿಯೇ ಹಲವು ಕವಿಗಳು ಬೆಳಗಿದರಲ್ಲವೇ? ಕಾಳಿದಾಸನೇ ವಾಲ್ಮೀಕಿಗಳನ್ನು "ಪೂರ್ವ-ಸೂರಿ"ಯೆಂದು ಆದರಿಸಿದನಲ್ಲವೇ? ಅವರ ಕಥಾ-ವಸ್ತುವನ್ನೇ ಆಧರಿಸಿದನಲ್ಲವೇ?


ಏನು ಅನುಕಾರ್ಯವೆಂದರೆ? ಯಾವುದನ್ನು ಅನುಕರಿಸಲು ಇಷ್ಟವಾಗುವುದೋ ಅದು ಅನುಕಾರ್ಯ. ವೈದಿಕ-ಕವಿಯಾದ ಕಾಳಿದಾಸನೂ, ಬಳಿಕ ಬಂದ ಬೌದ್ಧ-ಕವಿಯಾದ ಅಶ್ವಘೋಷನೂ, ವಾಲ್ಮೀಕಿಗಳು ಬರೆದಂತೆಯೇ ತಾವೂ ಬರೆಯಬೇಕೆಂದು ಹಂಬಲಿಸಿದರಲ್ಲವೇ? "ಆಹಾ! ಬರೆದರೆ ಹಾಗೆ ಬರೆಯಬೇಕು!" - ಎಂದು ಆಸೆಪಡಲು ಯೋಗ್ಯವಾದದ್ದೇ ಅನುಕಾರ್ಯ.


ವಾಲ್ಮೀಕಿ-ರಚಿತವನ್ನು ಕೊಂಡಾಡಿರುವ ಪಾಶ್ಚಾತ್ತ್ಯ-ಕವಿಗಳೋ ವಿಮರ್ಶಕರೋ ಹಲವರಿರಬಹುದು. ಅದು ನಮಗೆ ಪ್ರಕೃತವಲ್ಲ. ಆಂದಿನಿಂದ ಇಂದಿನವರೆಗೆ ಕೋಟಿ ಕೋಟಿ ಮಂದಿಗೆ ರಾಮಾಯಣವು ಆಸ್ವಾದ್ಯವಾಗುಳಿದಿದೆ. ಈಗ ನವಮಾಧ್ಯಮಗಳಲ್ಲೂ ಮೂಡಿದೆ. ಜನರಿಗೆಂದಿಗೂ ದಾರಿದೀಪವಾಗಿದೆ. ಅವೆಲ್ಲವೂ ವಾಲ್ಮೀಕಿ-ಕೃತಿಯ ಹೆಗ್ಗಳಿಕೆಗಳೇ.


ಆದರೆ ಇವೆಲ್ಲಕ್ಕಿಂತಲೂ ಮಿಗಿಲಾದ ಅಳತೆಗೋಲೊಂದಿದೆ. ಯಾವುದದು?


ರಾಮಾಯಣ-ರಚನೆಯನ್ನು ಪೂರೈಸುತ್ತಿದ್ದಂತೆಯೇ ವಾಲ್ಮೀಕಿಗಳು ಚಿಂತಿಸಿದುದು, "ಇದನ್ನಾರು ಪ್ರಯೋಗ ಮಾಡುವವರು?" ಎಂಬುದು. ಪ್ರಯೋಗವೆಂದರೆ, ಗಾನವಾಗಿಯೋ ಅಭಿನಯವಾಗಿಯೋ ಪ್ರಜೆಗಳ ಮುಂದಿರಿಸುವುದು. ಅವರು ಹಾಗೆಂದುಕೊಳ್ಳುತ್ತಿರುವಾಗಲೇ ಅವರಲ್ಲಿಗೆ ಬಂದು ಅವರ ಪಾದಗಳನ್ನು ಹಿಡಿದವರು, ಪುಟ್ಟವರಾದ ಲವ-ಕುಶರು. ರಾಮಾಯಣದ ಮೊಟ್ಟಮೊದಲ ಅನುಗ್ರಹವಾದದ್ದು ಅವರಿಗೇ!


ಪೂರ್ಣ-ಕೃತಿಯನ್ನು ವಾಚೋವಿಧೇಯವಾಗಿಸಿಕೊಂಡು ಅವರಿಬ್ಬರೂ ಹಾಡಿದರು. ಎಲ್ಲಿ? ಋಷಿಗಳು, ವಿಪ್ರರು, ಸಾಧುಗಳು ಸೇರುವೆಡೆಯಲ್ಲಿ. ಅವರೆಲ್ಲರೇನೆಂದರು? ಎನ್ನುವುದೇನು, ಅವರು ಮೆಚ್ಚಿ ಹರಿಸಿದ ಕಣ್ಣೀರಿಗಿಂತಲೂ ಪ್ರಶಂಸೆಯೇ? ಆದರೂ ಸಾಧು ಸಾಧು ಎಂದರು! ಅಹೋ ಎಂದರು! ಅವರ ಮೆಚ್ಚುಗೆ, ಈ ಜೋಡಿಗಾಗಿ: ಧರ್ಮ-ತತ್ತ್ವಕ್ಕೆ ಕನ್ನಡಿ ಹಿಡಿದ ಮಧುರ-ಮೂಲಕೃತಿಗಾಗಿ; ಅದಕ್ಕೆ ಮೆರುಗು ತರುವಂತೆ ಗಾನಮಾಡಿದ ಲವ-ಕುಶರ ಬಂಧುರ-ನಿರೂಪಣೆಗಾಗಿ.


ಹಾಗೆ ತಲೆದೂಗಿದವರು, ತಮ್ಮ ತಪಸ್ಸಿನಿಂದಾಗಿ ಪ್ರಶಂಸನೀಯರೆನಿಸಿದ್ದ ಮಹರ್ಷಿಗಳು! (ತಪಃಶ್ಲಾಘ್ಯೈಃ ಮಹರ್ಷಿಭಿಃ). ಶ್ರೀರಂಗಮಹಾಗುರುಗಳ ಮಾತಿನಲ್ಲಿ ಹೇಳುವುದಾದರೆ, "ಪ್ರಶಂಸೆಯು ದೊರೆತುದು ಋಷಿಗಳ ಸದಸ್ಸಿನಲ್ಲಿ, ಅತೀಂದ್ರಿಯವಾದ ಬ್ರಹ್ಮಾನಂದವನ್ನು ಅನುಭವಿಸುತ್ತಿರುವ ಮುನಿಗಳ ಸದಸ್ಸಿನಲ್ಲಿ!" ಸದಸ್ಸೆಂದರೆ ಸಭೆ.


ಮಹಾತ್ಮರು ಬೆಲೆಗೊಟ್ಟರೇ ಬೆಲೆ. ಸಾವಿರಮಂದಿ ಸಾಧಾರಣರು ಇತ್ತರೆ ಅಲ್ಲ, ಅಲ್ಲವೇ?


ಸೂಚನೆ: 30/11/2024 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.