ಶ್ರೀರಾಮನು ಶಿವಧನುಸ್ಸನ್ನು ಮುರಿದ ಕಥೆಯನ್ನು ತಿಳಿಯದವರಿಲ್ಲ. ರಾಮಲಕ್ಷ್ಮಣರು ಯಜ್ಞರಕ್ಷಣೆಯನ್ನು ಮಾಡಿಯಾದಮೇಲೆ, ವಿಶ್ವಾಮಿತ್ರರೊಂದಿಗೆ ಜನಕನ ರಾಜಧಾನಿಯಾದ ಮಿಥಿಲೆಗೆ ಹೋದರು. ವಿಶ್ವಾಮಿತ್ರರಿಗೆ ಜನಕನ ಬಳಿಯಿದ್ದ ಶಿವಧನುಸ್ಸಿನ ಬಗ್ಗೆ ಗೊತ್ತಿತ್ತು. ರಾಮನು ಯಾರೆಂದೂ ಅವರಿಗೆ ತಿಳಿದೇ ಇತ್ತು. ಜಗತ್ಕಲ್ಯಾಣವಾಗಬೇಕಿದ್ದರಿಂದ ಈ ದೇವನಾಟಕವನ್ನು ಮುಂದುವರೆಸುವಲ್ಲಿ ಅವರೂ ಪಾತ್ರವಹಿಸಬೇಕಿತ್ತು. ರಾಮಲಕ್ಷ್ಮಣರು ಶಿವಧನುಸ್ಸನ್ನು ನೋಡುವ ಸಲುವಾಗಿ ಅಲ್ಲಿಗೆ ಬಂದಿರುವರೆಂದು ಜನಕರಾಜನಿಗೆ ಅವರು ತಿಳಿಸಿದರು. ಜನಕರಾಜನು ತನ್ನ ವಂಶದಲ್ಲಿ ತಲೆಮಾರುಗಳಿಂದ ಅದು ಹೇಗೆ ನ್ಯಾಸವಾಗಿ ಉಳಿದಿದೆ ಎಂಬುದನ್ನು ತಿಳಿಸಿದನು. ಅದರೊಂದಿಗೇ ತನ್ನ ಸಾಕುಮಗಳಾದ ಸೀತೆಯ ಬಗ್ಗೆಯೂ ತಿಳಿಸಿ ಅವಳು ವೀರ್ಯಶುಲ್ಕಳೆಂದು ಹೇಳಿದನು. ವೀರ್ಯಶುಲ್ಕವೆಂದರೆ ನಿಶ್ಚಯಮಾಡಿದ ಯಾವುದೋ ಒಂದು ಪರಾಕ್ರಮವನ್ನು ತೋರಿಸಿ ಗೆದ್ದುಕೊಳ್ಳುವುದು, ಎಂದರ್ಥ. ಸೀತೆಯನ್ನು ತಮ್ಮವಳನ್ನಾಗಿಸಿಕೊಳ್ಳಬೇಕೆಂದಿದ್ದ ರಾಜರುಗಳಿಗೇನೂ ಕಡಿಮೆಯಿರಲಿಲ್ಲ. ಆದ್ದರಿಂದ ಆ ಹಿಂದೆಯೇ ಹಲವರು ಬಂದು ಜನಕನಲ್ಲಿ ಏನು ಮಾಡಬೇಕೆಂದು ಕೇಳಿದಾಗ. ಜನಕರಾಜನಾದರೋ ಇಟ್ಟ ಪರೀಕ್ಷೆಯು ಅತ್ಯಂತ ಕಠಿನವೇ ಸರಿ. ಶಿವಧನುಸ್ಸಿನ ಹೆದೆಯೇರಿಸಿದವನಿಗೆ ಸೀತೆಯನ್ನು ಮದುವೆಮಾಡಿಕೊಡುವುದಾಗಿ ಅವನು ಹೇಳಿದನು.
ಆ ರಾಜರುಗಳು ಪ್ರಯತ್ನಿಸಿ ವಿಫಲರಾಗಿದ್ದರು. ಸೀತೆಯನ್ನು ಅಂತಹವರಿಗೆ ಮದುವೆಮಾಡಿಕೊಡುವುದಿಲ್ಲವೆಂದು ಜನಕಮಹಾರಾಜನು ಹೇಳಿದಾಗ, ಅವರಿಗೆಲ್ಲ ಇದೊಂದು ಅವಮಾನವಾಗಿ ಕಂಡಿತು. ಸಾಧಾರಣರು ಅಸಾಧಾರಣವಾದ ಸವಾಲನ್ನೆದುರಿಸಿ ವಿಫಲರಾದರೆ ತಮ್ಮಲ್ಲಿ ಆ ಅರ್ಹತೆಯಿಲ್ಲವೆಂದು ಒಪ್ಪುವ ಬದಲು ಸವಾಲೇ ಸರಿಯಲ್ಲವೆಂದು ವಾದಿಸುವುದುಂಟು. ಅದು ಅವರ ಅಸಾಮರ್ಥ್ಯದ ಸೂಚಕ. ಅವರು ಹಾಕಿದ ಮುತ್ತಿಗೆಯನ್ನೆದುರಿಸಿದ ಜನಕರಾಜನು ಕೊನೆಗೆ ದೇವತೆಗಳ ಸಹಾಯದಿಂದ ಅವರೆಲ್ಲರನ್ನೂ ಸದೆಬಡಿಯುವಂತಾಯಿತು. ಈಗ ರಾಮನಿಗೆ ಆ ಮಹಾಧನುಸ್ಸನ್ನು ಜನಕನು ತೋರಿಸಲೊಪ್ಪಿದನು. ಆ ಧನುಸ್ಸನ್ನಿಟ್ಟಿದ್ದ ಎಂಟು ಚಕ್ರಗಳುಳ್ಳ ಪೆಟ್ಟಿಗೆಯನ್ನು ಕಷ್ಟದಿಂದ ಎಳೆದು ತರಲು ೫೦೦೦ ಮಂದಿ ಕಟ್ಟಾಳುಗಳು ಬೇಕಾದರೆಂದು ವಾಲ್ಮೀಕಿಗಳು ವರ್ಣಿಸುತ್ತಾರೆ. ಜನಕಮಹಾರಾಜನಿಗೆ ಈ ರಾಜಕುಮಾರರಿಂದ ಅದನ್ನು ಅಲ್ಲಾಡಿಸುವುದೂ ಸಾಧ್ಯವಾಗದೆಂದೇ ಮನಸ್ಸಿನಲ್ಲಿದ್ದದ್ದು. ರಾಮನು ವಿಶ್ವಾಮಿತ್ರರ ಅನುಜ್ಞೆ ಪಡೆದು, ಆ ಮಹಾಧನುಸ್ಸನ್ನು ಹತ್ತಿರದಿಂದ ನೋಡಿ, ತಾನು ಅದನ್ನು ಎತ್ತಲು ಪ್ರಯತ್ನಿಸುತ್ತೇನೆಂದನು. ಎಲ್ಲರೂ ನೋಡನೋಡುತ್ತಲೇ ಅದರ ಮಧ್ಯವನ್ನು ಹಿಡಿದು ಅನಾಯಾಸವಾಗಿ ಎತ್ತಿದ್ದಲ್ಲದೆ ಅದರ ಹೆದೆಯೇರಿಸಿದನು. ತನ್ನ ಕಿವಿಯವರೆಗೆ ಹೆದೆಯನ್ನು ಎಳೆದಾಗ ಆ ಮಹಾಧನುಸ್ಸು ಸಿಡಿಲಿನಂತಹ ಆರ್ಭಟ ಮಾಡಿ ಮುರಿದುಬಿದ್ದಿತು. ಇಲ್ಲಿಗೆ ಸೀತೆಯನ್ನು ವರಿಸಲು ಬೇಕಾದ ವೀರ್ಯಶುಲ್ಕವನ್ನು ಶ್ರೀರಾಮನು ಪೂರೈಸಿದಂತಾಯಿತು. ಜನಕಮಹಾರಾಜನ ಹರ್ಷಕ್ಕೆ ಪಾರವೇ ಇರಲಿಲ್ಲ!
ಇಲ್ಲಿ ನಮಗೆ ಬರುವ ಒಂದು ಪ್ರಶ್ನೆ ಇದು. ಶಿವನೇ ಪ್ರಯೋಗಿಸಿದ್ದ ಈ ಮಹಾಧನುಸ್ಸನ್ನು ಅತ್ತ ದೇವತೆಗಳೂ ಯಕ್ಷರೂ ಅಸುರರೂ ಯಾರಿಗೂ ಅಲ್ಲಾಡಿಸಲೇ ಆಗದಾಗಿತ್ತು. ಅದಿರುವ ಪೆಟ್ಟಿಗೆಯನ್ನು ಕೇವಲ ಎಳೆದುಕೊಂಡು ಬರಲು ೫೦೦೦ ದಷ್ಟಪುಷ್ಟರಾದವರು ಕಷ್ಟಪಡಬೇಕಿತ್ತು. ಇತ್ತ ಇನ್ನೂ ಎಳೆಯ ವಯಸ್ಸಿನ ಮಾನವ ರಾಜಕುಮಾರನಾಗಿದ್ದ ಶ್ರೀರಾಮನು ಅಪ್ರಯತ್ನದಿಂದಲೋ ಎಂಬಂತೆ (ಎಂದರೆ ಬಹಳ ಪ್ರಯತ್ನವೇ ಪಡದೆ) ಎತ್ತಿದ್ದಲ್ಲದೆ ಮುರಿದೂ ಬಿಟ್ಟ. ಇದು ಹೇಗೆ ಸಾಧ್ಯ? ಅದು ಭಾರವಿದ್ದರೆ, "ಆತ್ಮಾನಂ ಮಾನುಷಂ ಮನ್ಯೇ" ಎಂದು ಮುಂದೆಯೂ ಹೇಳಿಕೊಳ್ಳುವ ರಾಮನಿಗೇನು ಅಷ್ಟು ಅತಿಮಾನುಷವಾದ ದೈಹಿಕ ಶಕ್ತಿಯಿತ್ತೆಂದೇ?
ಇದನ್ನು ಹೀಗೆ ನೋಡಬಹುದೆನ್ನಿಸುತ್ತದೆ. ಆ ಧನುಸ್ಸಿನ ಭಾರ ಭೌತಿಕವಾದದ್ದಲ್ಲ. ಅದಕ್ಕಿದ್ದದ್ದು ತಪೋಭಾರ. ಮಹಾದೇವನು ದಕ್ಷಯಜ್ಞವನ್ನು ಧ್ವಂಸ ಮಾಡುವಾಗ ಹಿಡಿದಿದ್ದ ಧನುಸ್ಸಿನ ಬಲವೇನು ಸಾಮಾನ್ಯವೇ? ಶಿವನ ತಪೋಬಲದ ಪ್ರತೀಕವೂ ಆಗಿದ್ದದ್ದು ಅದು. ಬೇರೆ ಯಾರಿಗೇ ಆಗಲಿ ಅದಕ್ಕೆ ಸಮನಾದ ಶಕ್ತಿ ಇರುತ್ತದೆಂದೆಣಿಸುವುದು ಅಸಾಧ್ಯ. ಇತ್ತ ರಾಮನಾದರೋ ಸಾಕ್ಷಾದ್ ವಿಷ್ಣುವೇ. ಮಹಾದೇವನ ತಪಸ್ಸಿನ ತೂಕಕ್ಕೆ ಪಡಿತೂಕವಾಗಲು ಸಾಧ್ಯವಿದ್ದದ್ದು ವಿಷ್ಣುವಿನ ಅವತಾರಕ್ಕೆ ಮಾತ್ರವೇ. ಶಿವನೂ ವಿಷ್ಣುವೂ ಒಂದೇ ತತ್ತ್ವದ ಎರಡು ರೂಪಗಳಾಗಿದ್ದರಿಂದ ರಾಮನಿಗೆ ಮಾತ್ರ ಇದು ಸಾಧ್ಯವಾದದ್ದರಲ್ಲಿ ಆಶ್ಚರ್ಯವಿಲ್ಲ. ನಮ್ಮಲ್ಲಿ ಹಲವು ವಿಷ್ಣುಭಕ್ತರು ಶಿವನನ್ನು ಕೀಳಾಗಿ ಕಾಣುವುದೋ, ಶಿವಭಕ್ತರು ವಿಷ್ಣುವನ್ನು ಕೆಳದರ್ಜೆಯೆಂದೆಣಿಸುವುದೋ ಸರಿಯೇ ಅಲ್ಲ. ಶಿವ-ವಿಷ್ಣುಗಳು ಒಂದೇ ತತ್ತ್ವವೆಂದು ಒತ್ತಿ ಹೇಳಲು ಶ್ರೀರಂಗಮಹಾಗುರುಗಳು ಈ ಉದಾಹರಣೆ ಕೊಡುತ್ತಿದ್ದರು: ಯಜಮಾನನು ವೇಷಾಂತರದಲ್ಲಿ ಬಂದರೂ ನಾಯಿಯು ಅವನ ಗುರುತುಹಿಡಿದುಬಿಡುತ್ತದೆ. ಹಾಗೆಯೇ ಪರತತ್ತ್ವವು ಯಾವ ರೂಪದಲ್ಲಿ ಬಂದರೂ ಭಕ್ತನಾದವನು ಅದನ್ನು ಗುರುತಿಸಬೇಕು. ಈ ಮಾತುಗಳಿಂದ ಈ ಸಂನಿವೇಶದ ಹಿಂದಿನ ತತ್ತ್ವವನ್ನು ನಾವು ಅರ್ಥಮಾಡಿಕೊಳ್ಳಬಹುದಲ್ಲವೆ?
ಸೂಚನೆ : 28/12/2024 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.