ಲೇಖಕರು : ಪದ್ಮಿನಿ ಶ್ರೀನಿವಾಸನ್
ಪ್ರತಿಕ್ರಿಯಿಸಿರಿ (lekhana@ayvm.in)
ಕುರುಕ್ಷೇತ್ರ ಯುದ್ಧರಂಗದಲ್ಲಿ, ಪಶ್ಚಾತ್ತಾಪದಲ್ಲಿ ಮುಳುಗಿದ ಅರ್ಜುನನಿಗೆ, ಕ್ಷತ್ರಿಯ ಧರ್ಮವನ್ನು ಜ್ಞಾಪಿಸಿ, ಭಗವದ್ಗೀತೆಯನ್ನು ಉಪದೇಶಿಸಿದ ಪಾರ್ಥಸಾರಥಿಯ ಚಿತ್ರವು ಪ್ರಸಿದ್ಧವಾದದ್ದು. ರಥದ ಮಧ್ಯದಲ್ಲಿ ನಿಂತು, ಲೋಕಕಲ್ಯಾಣ-ಆತ್ಮಕಲ್ಯಾಣ ಎರಡೂ ಸಿದ್ಧಿಸುವ ತತ್ವವನ್ನು ಅನುಗ್ರಹಿಸುತ್ತಿರುವನು ಶ್ರೀಕೃಷ್ಣ. ಕೊಳಲನ್ನೂದುತ್ತಿರುವ ಮುರಳೀಮನೋಹರನ ಚಿತ್ರವೂ ಅಷ್ಟೇ ಪ್ರಸಿದ್ಧವಾದದ್ದು. ತ್ರಿಭಂಗಿಯಲ್ಲಿ ನಿಂತು, ಜಗನ್ಮೋಹನನಾಗಿ ಇಂಪಾದ ವೇಣುಗಾನವನ್ನು ಲೋಕಕ್ಕೆ ವಿಸ್ತರಿಸುತ್ತಿರುವನು.
ಆತ್ಮಯೋಗ, ನಾದಯೋಗಗಳ ರಹಸ್ಯಗಳನ್ನು ಬಲ್ಲವರಾದ ಶ್ರೀರಂಗಮಹಾಗುರುಗಳು, ಪೂಜನೀಯವಾಗಿರುವ ಈ ಚಿತ್ರಗಳಲ್ಲಿರುವ ದಿವ್ಯಭಾವಗಳನ್ನು, ನಮ್ಮಗಳ ಬುದ್ಧಿಗೂ ಎಟುಕಿಸಿದವರು. ತ್ಯಾಗರಾಜರ ‘ಗೀತಾರ್ಥಮು’ ಕೃತಿಯಲ್ಲಿ ಗೀತ-ಸಂಗೀತಗಳ ಏಕಸೂತ್ರತೆಯನ್ನು ತಿಳಿಸಿಕೊಡುತ್ತಾ, ಶ್ರೀಕೃಷ್ಣನು ಗೀತಾಚಾರ್ಯ-ಸಂಗೀತಾಚಾರ್ಯ ಎಂಬುದನ್ನೂ ಧೃಡಪಡಿಸಿದ್ದರು. ಕೃತಿಯ ಭಾವಾರ್ಥ- “ಎಲೈ ಮನಸ್ಸೇ! ಗೀತಾರ್ಥವೂ ಸಂಗೀತಾನಂದವೂ ಎರಡೂ ನಿನ್ನ ಹತ್ತಿರದಲ್ಲಿರುವ ಈ ಸ್ಥಳದಲ್ಲಿ ಒಂದಾಗಿದೆ, ಗಮನಿಸು. ವಾತಾತ್ಮಜನಿಗೆ ಈ ವಿಷಯವು ಚೆನ್ನಾಗಿ ಗೊತ್ತು”.
ಗೀತ-ಸಂಗೀತಗಳ ಏಕಸೂತ್ರತೆ
ಗೀತ-ಸಂಗೀತವೆಂದರೆ ಸಾಮಾನ್ಯವಾಗಿ ‘ಹಾಡು’ ಎಂದರ್ಥ. ಅಷ್ಟಕ್ಕೇ ಸೀಮಿತವಾಗದೆ, ಭಗವದ್ಗೀತೆ-ಸಂಗೀತಗಳು ಸೃಷ್ಟಿಕರ್ತನ ಆಶಯದಂತೆ ಪ್ರಣವಮೂಲದಿಂದ ವಿಸ್ತಾರವಾಗಿ, ಅಲ್ಲಿಗೇ ಮತ್ತೆ ಹಿಂತಿರುಗಿಸುವ ವಿದ್ಯೆಗಳು. ಪರಮಾತ್ಮಜ್ಯೋತಿಯ ವಾಗ್ರೂಪಗಳಾಗಿ– ಸ್ವರಾಕ್ಷರಗಳಾಗಿ, ಸಪ್ತಸ್ವರಗಳಾಗಿ ಪ್ರಕೃತಿಯಲ್ಲಿ ವಿಸ್ತರಿಸಿಕೊಂಡಿವೆ. ಇದರ ರಹಸ್ಯವನ್ನು ಬಲ್ಲ ಹನುಮಂತ, ಜೀವಿಗಳ ಪ್ರಾಣನಾಥ. ನಾಲ್ಕೂ ವೇದಗಳನ್ನು ಕರಗತ ಮಾಡಿಕೊಂಡ ಗಾನನಿಪುಣ.
ಸಂಗೀತವೆಂದರೆ ಸಮ್ಯಕ್ ಗೀತೆ. ಗಾಯನ- ನೃತ್ಯ-ವಾದನಗಳು ಸೇರಿ, ತ್ರಿಕರಣಗಳ (ದೇಹ,ಮನಸ್ಸು,ಆತ್ಮ) ಸಾರೂಪ್ಯವುಳ್ಳದ್ದು. ಕೃಷ್ಣಲಹರಿ ಸ್ತೋತ್ರ "ಲೋಕಾನುನ್ಮದಯನ್ ...." ಹೇಳುವಂತೆ –“ಲೋಕಗಳಿಗೆ ಉನ್ಮಾದವನ್ನು ಉಂಟುಮಾಡುತ್ತಾ; ವೃಕ್ಷಗಳನ್ನು ಹರ್ಷಪಡಿಸುತ್ತಾ; ಮೃಗಗಳನ್ನು ಪರವಶಗೊಳಿಸುತ್ತಾ; ಗೋವುಗಳನ್ನು ಆನಂದಿಸುತ್ತಾ; ಮುನಿಗಳನ್ನು ಮೊಗ್ಗಿನಂತೆ ಅಂತರ್ಮುಖರಾಗಿಸುತ್ತಾ, ಓಂಕಾರದ ಅರ್ಥವನ್ನು ವಿವರಿಸಿ ಹೇಳುತ್ತಿದೆಯೋ ಎಂಬಂತಿದೆ ಶ್ರೀಕೃಷ್ಣನ ವೇಣುನಾದ”. ಪ್ರಣವನಾದದೊಂದಿಗೇ ಕೂಡುತ್ತಿದೆ ಅದರ ಶ್ರುತಿ!
ಭಗವದ್ಗೀತೆಯು ಕೃಷ್ಣಾರ್ಜುನರ ಸಂಭಾಷಣೆಯಾಗಿದ್ದು, ಕೇವಲ ವೇದಾಂತ ತತ್ವವಾಗಿರದೆ, ಛಂದೋಬದ್ಧವಾಗಿ, ಧರ್ಮಾರ್ಥಕಾಮಮೋಕ್ಷಗಳನ್ನು ಹೊಂದಿಸುವ, ಕರ್ಮ, ಭಕ್ತಿ ಹಾಗೂ ಜ್ಞಾನ ಮಾರ್ಗಗಳನ್ನು ಉಪದೇಶಿಸುತ್ತದೆ. ವೇದೋಪನಿಷತ್ತುಗಳ ಸಾರವೇ ಆಗಿದೆ. ಪರಮಾನಂದದತ್ತ ನೊಂದಜೀವಿಗಳನ್ನು ಸೆಳೆಯುತ್ತದೆ.
ಗೀತ-ಸಂಗೀತಗಳೆರಡೂ ಇಂದ್ರಿಯಗಳಿಂದ ಸೆಳೆಯಲ್ಪಡುತ್ತಿರುವ ಮನಸ್ಸುಗಳನ್ನು ಹರ್ಷದಿಂದ ಆಕರ್ಷಿಸುತಾ, ನಾದ ಮೂಲಕ್ಕೆ ಕೊಂಡೊಯ್ಯುತ್ತಿವೆ. ಎರಡೂ ಆತ್ಮನಿಗೆ ಜಯವನ್ನು (ಪರಮಾತ್ಮನಲ್ಲಿ ಒಂದಾಗುವುದು) ಘೋಷಿಸುತ್ತಿವೆ.
ಆಚಾರ್ಯ ಶ್ರೀಕೃಷ್ಣ
ಆಚಾರ್ಯನ ಲಕ್ಷಣಗಳೆಂದರೆ, ಸದಾಚಾರ ಸಂಪನ್ನನಾಗಿ, ಶಾಸ್ತ್ರಗಳನ್ನು ಸಂಗ್ರಹಿಸಿ, ಲೋಕದಲ್ಲಿ ನೆಲೆಗೊಳಿಸುವುದು. ಉಪದೇಶವೆಂದರೆ ವಿಷಯವನ್ನು ಉಗಮಸ್ಥಾನಕ್ಕೆ ಕರೆದೊಯ್ಯುವ ಮಾರ್ಗದರ್ಶನ. ಜೀವನದ ಪರಮಾದರ್ಶವನ್ನು ಅರಿಯಲು ತತ್ವದರ್ಶಿಗಳಾದ ಆಚಾರ್ಯರ ಉಪದೇಶ ಬೇಕು. ಹಿರಿಯರಿಂದ ಕೇಳುವ- ಸತ್ಯವನ್ನುಡಿ ಇತ್ಯಾದಿ, ಧರ್ಮವನ್ನು ಉಳಿಸುವ ಹಿತೋಪದೇಶಗಳು. ಸಂತರ ಕೃತಿಗಳು ಇಹ-ಪರಗಳ ನಡುವೆ ಧರ್ಮಸೇತುವೆಯಂತಿರುವ ತತ್ವೋಪದೇಶಗಳು. ಇನ್ನು ಶ್ರೀಕೃಷ್ಣನ ಗೀತೋಪದೇಶ ಪರಧರ್ಮವನ್ನು ಕುರಿತ ವಿಷಯವೇ ಆಗಿರಬೇಕಲ್ಲವೇ?
ಯೋಗೇಶ್ವರ ಶ್ರೀಕೃಷ್ಣನಲ್ಲಿ ಪ್ರತಿಬಿಂಬಿಸುತ್ತಿರುವ ಭಾವಮುದ್ರೆಗಳು, ಅಂತರಂಗದ ಸ್ಥಿತಿಯನ್ನು ತಾನಾಗಿಯೇ ಪ್ರಕಟಪಡಿಸುತ್ತಿವೆ. ಶಿರದ ಅತ್ಯುನ್ನತಸ್ಥಾನದಲ್ಲಿ ಧರಿಸಿದ ನವಿಲುಗರಿ, ಸೃಷ್ಟಿ ಹಾಗೂ ಸೃಷ್ಟಿಕರ್ತನ ಮುದ್ರೆಯನ್ನುಳ್ಳದ್ದಾಗಿದೆ. ಬಲಗೈ ಆತ್ಮಮುದ್ರೆ, ಜೀವ-ದೇವರ ಒಂದಾಗುವಿಕೆಯನ್ನು ಪ್ರತಿನಿಧಿಸುತ್ತಿದೆ. ಭಗವದ್ಗೀತೆಯನ್ನು ಅನುಗ್ರಹಿಸುವ ವ್ಯಾಖ್ಯಾ ಮುದ್ರೆಯೂ ಆಗಿದೆ. ನರನಾರಾಯಣರ ಸೇರುವಿಕೆಗೆ ಬೇಕಾದ ಶಾಸನವನ್ನು ಜಾರಿಗೆ ತರಲು ಹೃಷಿಕೇಶನಾಗಿ, ಎಡಗೈಯಲ್ಲಿ ಚಾವಟಿಕೋಲನ್ನು ಹಿಡಿದು ಇಂದ್ರಿಯಗಳೆಂಬ ಕುದುರೆಗಳನ್ನು ನಿಯಂತ್ರಿಸುತ್ತಾ ಜೀವಿಯನ್ನು ಆಕರ್ಷಿಸುತ್ತಿದ್ದಾನೆ. ಕೋಲಿನ ಏಳು ಗಂಟುಗಳು, ಬೆನ್ನು ಹುರಿಯ(ಜ್ಞಾನರಜ್ಜು) ಏಳು ಚಕ್ರಗಳನ್ನು ಪ್ರತಿನಿಧಿಸುತ್ತಿವೆ. ನರ-ರಥದ ಹೃದಯದಲ್ಲಿ ಆತ್ಮನಾಗಿ ವಾಸವಾಗಿದ್ದಾನೆ.
ಸ್ವತಃ ನಾದಮಯನಾದ ಮಾಧವ, ತನ್ನ ಉಸಿರನ್ನು ಕೊಳಲಿನೊಳಗೆ ತುಂಬಿ, ಜೀವಿಗಳನ್ನು ಆಕರ್ಷಿಸುತ್ತಿರುವನು. ಲೀಲಾಶುಕಕವಿಯ ಕೃಷ್ಣಕರ್ಣಾಮೃತದ "ಅಂಸಾಲಂಬಿತ ವಾಮಕುಂಡಲಭರಂ..." ಶ್ಲೋಕದಲ್ಲಿ- “ಎಡಕ್ಕೆ ಬಾಗಿದ ತಲೆ, ಮೇಲಕ್ಕೆ ಎತ್ತಿದ ಬಲ ಹುಬ್ಬು, ತ್ರಿಭಂಗಿಯಲ್ಲಿ ಕೊಳಲನ್ನು ಆನಂದದಿಂದ ನುಡಿಸುತ್ತಿರುವ, ಜಗವನೇ ಮೋಹಗೊಳಿಸುವ ಗೋಪಾಲನನ್ನು ಬಲ್ಲೆ” ಎನ್ನುತ್ತಾರೆ. ಅವನ ಆತ್ಮಭಾವವನ್ನು ಹೊರಸೂಸಿದ ಸಂಗೀತ, ಕೇವಲ ಇಂದ್ರಿಯ ತೃಪ್ತಿಗಲ್ಲ, ನಾದೋಪಾಸನೆಯಾಗಿ, ಪ್ರಣವದ ವ್ಯಾಖ್ಯಾನವಾಗಿದೆ. ಕೊಳಲಿನ ಸಪ್ತರಂದ್ರಗಳು, ದೇಹದ ಸಪ್ತಚಕ್ರಗಳನ್ನು ಪ್ರತಿನಿಧಿಸುತ್ತಿವೆ. ಆ ನಾದವನ್ನು ಅನುಸರಿಸಿದರೆ ಪ್ರಣವದ ಉಗಮ ಸ್ಥಾನದವರೆಗೆ ತಲುಪಬಹುದು ಎಂಬ ಗುಪ್ತ ಆದೇಶವನ್ನು ತಿಳಿಸುತ್ತಿದೆ.
ನಾದಬ್ರಹ್ಮನ ಉಪಾಸನೆಯಿಂದ ಸಂಗೀತ ವಿಸ್ತರಿಸಿದ ಸಂಗೀತಾಚಾರ್ಯ, ಧರ್ಮಸಂಸ್ಥಾಪನೆಗಾಗಿ ಗೀತೋಪದೇಶ ಮಾಡಿದ ಗೀತಾಚಾರ್ಯ. ಅವನೇ ಹೇಳಿಕೊಂಡಿರುವಂತೆ- "ಗೀತೆಯೇ ನನ್ನ ಹೃದಯ". ಸಂಗೀತವೂ ಅವನ ಹೃದಯವೇ. ಅವನ ಉಸಿರು ಗೀತಯಲ್ಲಿ ವಾಗ್ರೂಪವಾದರೆ, ಸಂಗೀತದಲ್ಲಿ ವಾಕ್-ಗೇಯರೂಪವಾಗಿದೆ.
ಗೀತ-ಸಂಗೀತಗಳೆರಡೂ ಅಧ್ಯಯನಕ್ಕೆ ಇಂದಿಗೂ ಪ್ರಸ್ತುತವಾಗಿವೆ. ಸಂಗೀತ ಪಿತಾಮಹರಾದ ಪುರಂದರದಾಸರು 'ನಳಿನಜಾಂಡ ತಲೆಯದೂಗಿ ಮೋಹಿಸುತ್ತಿರಲು ಕೊಳಲನೂದಿ ಭ್ರಾಜಿಸುವ ಕೃಷ್ಣರಾಯನ ನೋಡಿ ' ಎಂಬ ಕೃತಿಯಲ್ಲಿ ಪುರಾತನ ರಾಗಗಳನ್ನು ಉಲ್ಲೇಖಿಸುತ್ತಾರೆ. ನಮ್ಮವರೆಗೆ ತಲುಪಿರುವ ಸೃಷ್ಟಿಸಹಜವಾದ ಈ ರಾಗಗಳು ಕಾಲಕ್ರಮೇಣ ಸಂತರ ಅಂತರ್ದೃಷ್ಟಿಯಿಂದ, ಭಿನ್ನವಾದ ಹೆಸರನ್ನು ಪಡೆದಿರಬಹುದು. ಜೀವಕೋಟಿಗಳನ್ನು ಉದ್ಧರಿಸುವ ವಿದ್ಯೆಗಳನ್ನು ಕರುಣಿಸಿದ ಪ್ರಥಮಾಚಾರ್ಯನಾದ ಶ್ರೀಕೃಷ್ಣಪರಂಜ್ಯೋತಿಗೆ ಶಿರಬಾಗಿ ನಮಿಸೋಣ!