ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಯಮುನೆಗೆ ಹೋಗಿ, ಮಿತ್ರರೊಂದಿಗೆ ವಿಹರಿಸಿ, ಸಂಜೆಯ ಹೊತ್ತಿಗೆ ಹಿಂದಿರುಗಿಬಿಡೋಣವಂತೆ – ಎಂಬುದಾಗಿ ಅರ್ಜುನನು ಕೃಷ್ಣನಲ್ಲಿ ಕೇಳಿಕೊಂಡನು . ಅದಕ್ಕೆ ಕೃಷ್ಣನೂ "ಕುಂತೀಪುತ್ರನೇ, ನನಗೂ ಇದು ಇಷ್ಟವೇ. ಮಿತ್ರರೊಂದಿಗೆ ಹೋಗಿ ಜಲ-ವಿಹಾರವನ್ನು ಯಥೇಚ್ಛವಾಗಿ ಮಾಡುವಾ" - ಎಂದನು.
ಧರ್ಮರಾಜನ ಅನುಮತಿಯನ್ನು ಪಡೆದವರಾಗಿ, ಮಿತ್ರರಿಂದ ಸುತ್ತುವರೆಯಲ್ಪಟ್ಟು, ಪಾರ್ಥ-ಗೋವಿಂದರು ತೆರಳಿದರು. ಅಂತೂ ಕೃಷ್ಣನೂ, ಅಂತಃಪುರದಿಂದೊಡಗೂಡಿದ ಅರ್ಜುನನೂ, ಆ ವಿಹಾರಭೂಮಿಗೆ ಬಂದರು.
ಅಲ್ಲಿ ಅನೇಕ ಮರಗಳಿದ್ದವು. ಸಣ್ಣ-ದೊಡ್ಡ ಗೃಹಗಳು ಅನೇಕವಾಗಿ ಅಲ್ಲಿದ್ದು, ಅದು ಪುರಂದರ-ಪುರದಂತೆ, ಎಂದರೆ ಇಂದ್ರನ ಅಮರಾವತಿಯ ಹಾಗೆ, ತೋರುತ್ತಿತ್ತು. ಅಲ್ಲಿ ಬಹಳ ಬೆಲೆಯಾಗುವ ಭಕ್ಷ್ಯ-ಭೋಜ್ಯಗಳಿದ್ದುವು. ರಸಭರಿತವಾದ ಪೇಯಗಳಿದ್ದವು. ವಿವಿಧವಾದ ಗಂಧಗಳಿಂದ ಕೂಡಿದ್ದ ಮಾಲೆಗಳಿದ್ದವು.
ಬಗೆಬಗೆಯಾದ ರತ್ನಗಳಿಂದ ಶೋಭಿಸುತ್ತಿದ್ದ ಅಂತಃಪುರ-ಸ್ತ್ರೀಯರೂ ಒಳಗೆ ಪ್ರವೇಶಿಸಿದರು. ಜನರೆಲ್ಲರೂ ಯಥೇಚ್ಛವಾಗಿ ಕ್ರೀಡಿಸಿದರು. ವಿಪುಲವಾದ ನಿತಂಬ ಹಾಗೂ ಸುಂದರವಾದ ಉರೋಜವುಳ್ಳವರೂ ಆಗಿದ್ದು, ಯೌವನ-ಮದದಿಂದಾಗಿ ಮಂದ-ಗತಿಯುಳ್ಳವರೂ ಆದ, ರಮಣಿಯರು ಅಲ್ಲಿ ಕ್ರೀಡಿಸಿದರು.
ಕೆಲವರು ವನದಲ್ಲಿ ಕ್ರೀಡಿಸಿದರು ಕೆಲವರು ಜಲದಲ್ಲಿ ಆಟವಾಡಿದರು. ಕೆಲವರು ಮನೆಯೊಳಗೇ ಆಡಿದರು - ಎಲ್ಲರೂ ತಮ್ಮ ತಮ್ಮ ಯೋಗ್ಯತಾನುಸಾರಿಯಾಗಿಯೂ ಸ್ವಸಂತೋಷಾನುಸಾರಿಯಾಗಿಯೂ ರಮಿಸಿದರು. ಯೌವನ-ಮದ-ಭರಿತರಾದ ದ್ರೌಪದೀ-ಸುಭದ್ರೆಯರು ಅನೇಕ-ವಸ್ತ್ರಗಳನ್ನೂ ಆಭರಣಗಳನ್ನೂ ದಾನವಾಗಿತ್ತರು.
ಹರ್ಷಾತಿರೇಕದಿಂದ ಕೆಲವು ನಾರಿಯರು ನರ್ತಿಸಿದರು. ಮತ್ತೆ ಕೆಲವರು ಕಿರುಚಿದರು. ಕೆಲವರು ನಕ್ಕರು. ಮತ್ತೆ ಕೆಲವರು ಹಾಡಿದರು. ಒಬ್ಬರನ್ನೊಬ್ಬರು ತಡೆಹಿಡಿದು ಹಗುರವಾಗಿ ಹೊಡೆದಾಡಿದರು. ಮತೆ ಕೆಲವರು ತಮ್ಮ ತಮ್ಮ ಗುಟ್ಟುಗಳನ್ನು ಪರಸ್ಪರ ಹೇಳಿಕೊಂಡರು. ಸಮೃದ್ಧಿ-ಸಂಪನ್ನವಾಗಿದ್ದ ಆ ರಾಜ-ಭವನವು ಎಲ್ಲೆಡೆ ಮನೋಹರವಾದ ವೇಣು-ವೀಣೆ-ಮೃದಂಗಗಳ ಶಬ್ದದಿಂದ ತುಂಬಿಹೋಯಿತು.
ಹೀಗೆ ಇವೆಲ್ಲ ನಡೆಯುತ್ತಿರಲು, ಕೃಷ್ಣಾರ್ಜುನರು ಬಹಳ ಮನೋಹರವಾದ ಸ್ಥಾನವೊಂದಕ್ಕೆ ಹೋದರು. ಇಬ್ಬರೂ ಶತ್ರು-ಪುರಗಳನ್ನು ಜಯಿಸುವ ವೀರರು, ಮಹಾತ್ಮರು. ಬಹಳ ಬೆಲೆಬಾಳುವ ಆಸನಗಳಲ್ಲಿ ಅವರು ಆಸೀನರಾದರು. ಹಿಂದೆ ಘಟಿಸಿದ ತಮ್ಮ ಪರಾಕ್ರಮಗಳ ಪ್ರಸಂಗಗಳನ್ನೂ ಇನ್ನಿತರ ವಿಷಯಗಳನ್ನೂ ಪರಸ್ಪರ ಬಹಳವಾಗಿ ಹೇಳಿಕೊಳ್ಳುತ್ತಾ ಸಂತೋಷಿಸಿದರು. ಸ್ವರ್ಗಲೋಕದಲ್ಲಿ ಅಶ್ವಿನೀ-ಕುಮಾರರು ಹೇಗೋ ಹಾಗೆ ಅವರಿಬ್ಬರೂ ಮೋದದಿಂದ ಕೂಡಿ ಕುಳಿತಿದ್ದರು.
ಹಾಗಿರುವಾಗ, ಬ್ರಾಹ್ಮಣನೊಬ್ಬನು ಅಲ್ಲಿಗೆ ಬಂದನು. ಅತನು ದೊಡ್ಡ ಶಾಲ-ವೃಕ್ಷದ ಹಾಗೆ ಎತ್ತರವಾಗಿದ್ದನು. ಚೆನ್ನಾಗಿ ಕಾಯಿಸಿದ ಚಿನ್ನದ ಹಾಗಿರುವ ಪ್ರಭೆಯಿಂದ ಕೂಡಿದವನಾಗಿದ್ದನು. ನೀಲವರ್ಣ-ಪೀತವರ್ಣಗಳ ಗಡ್ಡಮೀಸೆಗಳನ್ನು ಹೊಂದಿದ್ದನು. ತನ್ನ ಎತ್ತರಕ್ಕೆ ಸರಿಸಮನಾಗಿ ದಪ್ಪಗೂ ಇದ್ದನು. ಎಳೆಯ ಸೂರ್ಯನಂತೆ ಕಂಗೊಳಿಸುತ್ತಿದ್ದನು. ಚೀರವಸ್ತ್ರವನ್ನು ಧರಿಸಿದ್ದನು. ಜಟಾ-ಧಾರಿಯಾಗಿದ್ದನು. ಕಮಲದಂತಿರುವ ಮುಖ, ಪಿಂಗಳವರ್ಣದ ಕಾಂತಿ, ಆತನದು. ತನ್ನ ತೇಜಸ್ಸಿನಿಂದ ಪ್ರಜ್ವಲಿಸುತ್ತಿದ್ದನೋ ಎಂಬಂತಿದ್ದನು.
ಆತನು ಕೃಷ್ಣಾರ್ಜುನರ ಬಳಿ ಬರಲು, ಆತನನ್ನು ಆದರಿಸುತ್ತಾ, ಕೃಷ್ಣಾರ್ಜುನರು ತಮ್ಮ ಆಸನದಿಂದ ಥಟ್ಟನೆ ಎದ್ದು ನಿಂತರು.
ಕೃಷ್ಣಾರ್ಜುನರು ಖಾಂಡವ-ವನದ ಬಳಿ ನಿಂತಿದ್ದ ಆ ಸಮಯದಲ್ಲಿ, ಅವರನ್ನು ಕುರಿತು ಆತನು, "ಅಧಿಕ-ಭೋಜನಮಾಡುವ ಬ್ರಾಹ್ಮಣ ನಾನು. ಸದಾ ಅಪರಿಮಿತವಾಗಿ ತಿನ್ನತಕ್ಕವನು. ಕೃಷ್ಣಾರ್ಜುನರೇ, ನಾನು ನಿಮ್ಮಲ್ಲಿ ಬೇಡುತ್ತಿದ್ದೇನೆ. ಒಮ್ಮೆ ನನಗೆ ತೃಪ್ತಿಯಾಗುವಷ್ಟು ಭೋಜನ ಮಾಡಿಸಿ!" ಎಂದನು.
ಸೂಚನೆ : 22/12/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.