Tuesday, December 17, 2024

ಕೃಷ್ಣಕರ್ಣಾಮೃತ 43 ಕಣ್ಣುಗಳಿಗೆ ಹತ್ತಿರುವ ಚಾಪಲ್ಯ (Krishakarnamrta 43)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಪಿಂಛಾವತಂಸ

ನಮ್ಮ ಕಣ್ಣುಗಳಿಗೆ ಇದೊಂದು ಚಪಲವಿದೆ, ಕೃಷ್ಣಾ - ಎನ್ನುತ್ತಾನೆ, ಲೀಲಾಶುಕ.

ಇಲ್ಲಿ ನಮ್ಮ ಎಂದರೆ ನನ್ನ ಎಂದೇ ಅರ್ಥ. ಸಂನ್ಯಾಸಿಗಳು "ನಾವು" ಎಂದೇ ವ್ಯವಹರಿಸುವುದು - ತಮ್ಮೊಬ್ಬರನ್ನೇ ಕುರಿತು ಹೇಳುತ್ತಿದ್ದರೂ. ಮಹಾರಾಜರೂ ಹಾಗೆಯೇ. ಹಾಗೆಯೇ ಕವಿಗಳೂ.

"ಇದೊಂದು ಚಪಲ" ಎಂದೋ, ಅಥವಾ "ಈ ಬಗ್ಗೆ ಒಂದು ಚಾಪಲ್ಯವಿದೆ" ಎಂದೋ ಹೇಳುವುದುಂಟು. ಏನು ಹಾಗೆಂದರೆ? ಆ ಕುರಿತಾದ ಕುತೂಹಲವಿದೆ - ಎಂದು. ಅಥವಾ ಇನ್ನೂ ಹೆಚ್ಚಾಗಿ, ಆ ಬಗ್ಗೆ ಒಂದು ಉತ್ಕಟವಾದ ಆಸೆಯುಂಟು - ಎಂದರ್ಥ. ನಮ್ಮ ಕಣ್ಣುಗಳಿಗೆ ಇದೊಂದು ಚಪಲವುಂಟೆಂದರೆ ಇದನ್ನು ನಾವು ಕಾಣಲು ಹಂಬಲಿಸುತ್ತೇವೆ -ಎಂದು. ವಾಸ್ತವವಾಗಿ ಹಿಂದೊಮ್ಮೆ ಕಂಡದ್ದಾಗಿದೆ, ಆದರೆ ಮತ್ತೂ ಒಮ್ಮೆ ಕಾಣಬೇಕೆನಿಸಿದೆ - ಎಂಬ ಭಾವ.

ಯಾವ ಆಸೆ ಲೀಲಾಶುಕನ ಕಣ್ಣುಗಳಿಗೆ? ಕೃಷ್ಣನ ಶೈಶವವನ್ನು ಕಾಣಲು. ಶೈಶವವೆಂದರೆ ಬಾಲ್ಯ. ಬಾಲ್ಯವೆಂದರೆ ಇಲ್ಲಿ ತೀರ ಬಾಲ್ಯವೆಂದಲ್ಲ, ಎಳೆಯ ಶಿಶುವೆಂದಲ್ಲ. ಅದು ಹೇಗೆ ಗೊತ್ತಾಗುತ್ತದೆ? ಮುಂದೆ ಹೇಳುವ ವಿಶೇಷಣಗಳಿಂದ ತಿಳಿಯುತ್ತದೆ. ಎಂದರೆ ಎಂತಹ ಶೈಶವವನ್ನು ಕಾಣಲು ತನ್ನ ಕಣ್ಣುಗಳು ತವಕಿಸುತ್ತಿವೆ? - ಎಂಬುದನ್ನು ಚಿತ್ರಿಸುವ ಪದಗಳಿಂದ ಗೊತ್ತಾಗುತ್ತದೆ.

ತಾರುಣ್ಯವೆಂಬುದು ಇಣಿಕಿದೆ ಅಷ್ಟೆ, ಇನ್ನೂ. ಆ ದಶೆಯಲ್ಲಿ ಸೌಂದರ್ಯವೂ ಸೌಕುಮಾರ್ಯವೂ ಸೊಗಸಾಗಿ ಸೇರಿರುತ್ತವೆಯಲ್ಲವೇ? ಹಾಗಿರುವಾಗಿನ ಆತನ ಕೇಶ-ಮುಖಗಳ ಚೆಲುವನ್ನೂ ಒಟ್ಟಿನ ಆಕರ್ಷಣೆಯನ್ನೂ ಹೇಳಿದೆ.

ಕೃಷ್ಣನ ಕೇಶಪಾಶ ಚೆನ್ನಾಗಿದೆ. ಏನು ಪಾಶವೆಂದರೆ? ನಮಗೆಲ್ಲ ಗೊತ್ತಿರುವುದು ಯಮನ ಕೈಯಲ್ಲಿರುವ ಪಾಶ. ಯಾರದ್ದೋ ಕೊನೆಗಾಲ ಬಂತೆಂದರೆ, "ಯಮನು ತನ್ನ ಪಾಶ ಬೀಸಿದನು" - ಎನ್ನುವುದುಂಟು. ದೇವಿಯ ಕೈಯಲ್ಲಿ ಸಹ ಪಾಶ-ಅಂಕುಶಗಳಿವೆಯೆಂಬ ವರ್ಣನೆಯುಂಟು.

ಇಲ್ಲಿ ಅದೆರಡೂ ಅಲ್ಲ. ಇಲ್ಲಿ ಪಾಶವೆಂದರೆ ರಾಶಿಯೆಂದೇ ಅರ್ಥ. ಕೇಶಪಾಶವೆಂದರೆ ಕೇಶಕಲಾಪ. ಇದನ್ನೇ ಕೇಶಪಕ್ಷ, ಕೇಶಹಸ್ತ – ಎನ್ನುವುದೂ ಉಂಟು. 'ಪಕ್ಷ'/ 'ಹಸ್ತ'ಗಳಿಗೂ ಕಲಾಪ ಎಂಬ ಅರ್ಥವುಂಟು. ಕೇಶಪಾಶ-ಕೇಶಪಕ್ಷ-ಕೇಶಹಸ್ತ - ಇವುಗಳು ಸಂಸ್ಕೃತದ ನುಡಿಗಟ್ಟುಗಳು. ಕನ್ನಡದಲ್ಲೂ ಬಳಕೆಯಾಗಿವೆ.

ಹೇಗಿದೆ ಕೇಶಪಾಶ? ಪಿಚ್ಛವನ್ನು ಅಲಂಕಾರವಾಗಿ ಸೆಕ್ಕಿಸಲು ಯೋಗ್ಯವಾಗಿರುವ ಕೇಶಪಾಶ, ಅವನದು. ಪಿಚ್ಛ ಅಥವಾ ಪಿಂಛ ಎಂದರೆ ಗರಿ. ಶಿಖಿ-ಪಿಂಛ ಅಥವಾ ಮಯೂರ-ಪಿಂಛವೆಂದರೆ ನವಿಲುಗರಿ. ಎಲ್ಲ ಪಕ್ಷಿಗಳ ಗರಿಗಳಿಗಿಂತಲೂ ನವಿಲಿನ ಗರಿಯೇ ಬಹಳ ಆಕರ್ಷಕವೂ ಆನಂದದಾಯಕವೂ ಆದದ್ದು. ಎಂದೇ ಮಯೂರವೆಂದು ಹೇಳದಿದ್ದರೂ, ಅದು ತಾನಾಗಿಯೇ ವೇದ್ಯವಾಗುವಂತಹುದು. ನವಿಲುಗರಿಯನ್ನು ಮುಡಿದುಕೊಳ್ಳುವ ಪ್ರಸಿದ್ಧಿಯಿರುವುದು ಹೆಚ್ಚಾಗಿ ಕೃಷ್ಣನಿಗೇ, ಬಾಲಕೃಷ್ಣನಿಗೇ. ತಲೆದುಂಬ ಕರಿಗೂದಲಿದ್ದರೆ ಗರಿಗದು ಸರಿಯಾದ ಎಡೆ.

ಅವತಂಸವೆಂದರೂ, (ಆದಿಯಲ್ಲಿರುವ ಅಕಾರವನ್ನು ಬಿಟ್ಟು) ವತಂಸವೆಂದರೂ, ಒಂದೇ ಅರ್ಥ: ಶಿರೋಭೂಷಣ - ಎಂದು. ಎಂದರೆ ತಲೆಗೆ ಅಲಂಕಾರ. ಅದನ್ನು ಸಮ್ಯಕ್ಕಾಗಿ ತಲೆಗೆ ಸಿಕ್ಕಿಸಬೇಕು. ಎಂದರೆ ಬಿದ್ದುಹೋಗದಂತೆ ಮಾಡುವ ರಚನೆಯಾಗಬೇಕು. ಕೃಷ್ಣನ ಕೂದಲು ಎಷ್ಟು ಚೆನ್ನಾಗಿದೆಯೆಂದರೆ, ದಟ್ಟವಾಗಿ ಬೆಳೆದ ಆ ಕೇಶಪಕ್ಷದ ನಡುವೆ ನವಿಲುಗರಿಯನ್ನೋ ಹೂಗಳ ಅಲಂಕಾರವನ್ನೋ ಮಾಡಬೇಕೆಂಬ ಆಸೆ ಯಾರಿಗಾದರೂ ಆಗುವಂತಹುದೇ ಸರಿ. ಹೀಗೆ ಪಿಂಛಾವತಂಸದ ರಚನೆಗೆ ಉಚಿತವಾಗಿದೆ, ಎಂದರೆ ಯೋಗ್ಯವಾಗಿದೆ, ಕೃಷ್ಣ-ಕೇಶ-ಪಾಶ.

ಎರಡನೆಯದಾಗಿ, ಕೃಷ್ಣನ ಶೈಶವವು ಎಂತಿದೆಯೆಂದರೆ ಅದರ ಬಗ್ಗೆ ಒಂದು ಪೂಜ್ಯಭಾವವೇ ಬರುವಂತಿರುವುದು. ನಮ್ಮ ಸಂಸ್ಕೃತಿಯೇ ಹಾಗಿರುವುದು. ಎಳೇ ಮಕ್ಕಳನ್ನು ಕಂಡರೇ, ನಾವು ಅವುಗಳಲ್ಲಿ ದೈವತ್ವವನ್ನು ಕಾಣುವೆವು. "ಮಕ್ಕಳು ದೇವರಂತೆ" - ಎನ್ನುವೆವು. ಪುಟ್ಟಮಕ್ಕಳಿಗೆ ಕೃಷ್ಣನ ಅಲಂಕಾರವನ್ನೋ ರಾಮನ ಅಲಂಕಾರವನ್ನೋ ಮಾಡಿ ಕಣ್ತುಂಬ ನೋಡಿ ಸಂತೋಷಿಸುವೆವು. ದೇವರಿಗೆಂಬಂತೆ ಮಕ್ಕಳಿಗೆ ಆರತಿಯನ್ನೂ ಮಾಡುವುದುಂಟು. ಅಂತೂ ಕೃಷ್ಣನ ಈ ವಿಶಿಷ್ಟ-ಶೈಶವವು ಪೂಜೆಗೆ ಅರ್ಹವಾದುದು.

ಪೂಜೆಗೆ ಯೋಗ್ಯವಾದುದನ್ನು ಪೂಜ್ಯ ಅಥವಾ ಪೂಜನೀಯ ಎನ್ನುತ್ತೇವೆ. ಪೂಜೆ ಮಾಡುವಾಗ ಹೂಗಳನ್ನು ಬಳಸುವುದು ಸಾಮಾನ್ಯವಲ್ಲವೇ? ಕೆಲವರಂತೂ ಪೂಜನವೆಂದರೆ ಪೂಗಳಿಂದ ಅರ್ಚಿಸುವುದೆಂದೇ ಹೇಳುವುದುಂಟು. ಪೂಗಳು ಹೂಗಳೇ. ಪ್ರಕೃತ, ಈ ಕೃಷ್ಣನನ್ನು ಹೇಗೆ ಪೂಜಿಸಬಹುದು? ಆ ಹೂವು ಈ ಹೂವೇನು? ಪಂಕಜಗಳಿಂದಲೇ ಪೂಜೆ ಸಲ್ಲತಕ್ಕದ್ದು, ಈತನಿಗೆ. ಕಮಲವನ್ನು ಇಷ್ಟಪಡದ ದೇವತೆಯೂ ಉಂಟೆ? ಅನಾದಿಕಾಲದಿಂದಲೂ ಪೂಜೆಗೆ ಉತ್ತಮವಾದದ್ದೆಂದರೆ ಪದ್ಮವೇ. ಹೀಗೆ ಪಂಕಜ-ಪೂಜನೀಯ, ನಮ್ಮ ಕೃಷ್ಣ.

ಕಮಲಗಳಲ್ಲೂ ಹಲವು ಬಗೆಗಳುಂಟು ಅಲ್ಲವೇ? - ಕೆಂಪನೆಯ ಕೆಂದಾವರೆ, ಕಂದುಬಣ್ಣದ ಕನ್ನೈದಿಲೆ, ಬೆಳ್ಳಗಿರುವ ಕಲ್ಹಾರ - ಮುಂತಾದುವು? ಇವಾವುವೂ ಅಲ್ಲ, ಇಲ್ಲಿ ಸಲ್ಲುವುದು. ಹಾಗಾದರೆ ಮತ್ತಾವ ಕಮಲ? ಗೋಪಿಯರ ಕಣ್ಗಳೇ ಕಮಲಗಳು.

ಚೆನ್ನಾಗಿ ನಿದ್ದೆಮಾಡೆದ್ದವರ ಕಣ್ಣುಗಳು ಅರಳಿದ ಅಂದವಾದ ಅರವಿಂದಗಳಂತಿರುವುವಲ್ಲವೇ? ಭಗವಂತನನ್ನು ಪುಂಡರೀಕಾಕ್ಷ ಎಂದು ಕರೆದಾಗಲೂ ಅದೇ ಅರ್ಥವೇ ತಾನೆ? - ಕಮಲವನ್ನು ಹೋಲುವ ಕಣ್ಣುಗಳುಳ್ಳವ ಎಂದು. ಅಂತೂ ಇಲ್ಲಿ ಕೃಷ್ಣನ ಶೈಶವವು ಗೋಪಿಯರ ನಯನ-ಪಂಕಜಗಳಿಂದ ಪೂಜನೀಯವಾದದ್ದು!

ಸುಂದರನಾದ ಬಾಲಕನ ಸುತ್ತ ಸೇರಿರುವ ಆ ಗೋಪಿಯರೂ ಸುಂದರಿಯರೇ. ಉಕ್ಕುವ ಪ್ರೀತಿಯ ತುಂಬಿದೆದೆಯ ಗೋಪಿಯರು. ಪೀನ-ಸ್ತನಿಯರೆಂದರೆ ತೋರುವ ವಕ್ಷೋಜವುಳ್ಳವರು.

ಮೂರನೆಯ ವಿಶೇಷಣವು ಆತನ ವದನವನ್ನು ಹೇಳುವುದು. ಇಂತಹ ಮುಖಬಿಂಬವನ್ನು ಹೊಂದಿರುವ ಶೈಶವಾವಸ್ಥೆಯೆಂಬ ಸೂಚನೆ. ಎಂತಹ ವಕ್ತ್ರ ಕೃಷ್ಣನದು? ವಕ್ತ್ರವೆಂದರೆ ಮುಖ. ಕೃಷ್ಣ-ವಕ್ತ್ರಕ್ಕೆ ಪೈಪೋಟಿ ಎರಡು ಕಡೆಗಳಿಂದ ಬರುವುದಂತೆ - ಚಂದ್ರ ಹಾಗೂ ಅರವಿಂದಗಳಿಂದ. ಅವೆರಡನ್ನೂ ಜಯಿಸಲು ಉದ್ಯುಕ್ತವಾಗಿರುವುದಂತೆ, ಆ ದಶೆಯಲ್ಲಿರುವ ಕೃಷ್ಣನ ಆನನ.

ಚಂದ್ರನ ಹೆಗ್ಗಳಿಕೆಯೇನು? ಅಮೃತದಂತಿರುವ ಚಂದ್ರಿಕೆಯಿಂದ, ಎಂದರೆ ಬೆಳದಿಂಗಳಿನಿಂದ, ಆಹ್ಲಾದವನ್ನು ಉಂಟುಮಾಡುವವ ಚಂದ್ರ.

ಇನ್ನು ಕಮಲದ ಹೆಗ್ಗಳಿಕೆಯೇನು? ಅದರಲ್ಲಿ ಶೈತ್ಯ, ಸೌರಭ್ಯ, ಸೌಕುಮಾರ್ಯಗಳಿವೆಯಷ್ಟೆ. ಎಂದರೆ ತಂಪಾಗಿರುವುದು, ಸುಗಂಧವಿರುವುದು, ಸುಕುಮಾರವಾಗಿರುವುದು.

ಹೀಗಿರುವ ಚಂದ್ರನ ಸೊಬಗನ್ನೂ ಕಮಲದ ಸೊಗಸನ್ನೂ ಮೀರಲು ಹೊರಟಿರುವುದು, ಶ್ರೀಕೃಷ್ಣನ ಮುಖ-ಮಂಡಲ , ಈ ಶೈಶವದಲ್ಲಿ.

ಕೃಷ್ಣನ ಮುಖದ ಸೌಂದರ್ಯಾಮೃತವನ್ನು ಗೋಪಿಯರು ಪಾನಮಾಡುವುದರಿಂದ ಚಂದ್ರನನ್ನು ಮೀರಿಸಿದಂತಾಯಿತು.  ತನ್ನ ಮಧುರವಾದ ದೃಷ್ಟಿಗಳಿಂದ ಗೋಪಿಯರಲ್ಲಿ ಉನ್ಮಾದವನ್ನುಂಟುಮಾಡುವುದರಿಂದ ಅರವಿಂದವನ್ನು ಮೀರಿಸಿದಂತಾಯಿತು.

ಹೀಗೆಲ್ಲ ಇರುವ ಚೆಲುವ ಚೆನ್ನಿಗರಾಯನ ಶೈಶವದ ದೃಶ್ಯವನ್ನು ಮತ್ತೆ ಮತ್ತೆ ಕಾಣುವ ಹಂಬಲ, ಲೀಲಾಶುಕನಿಗೆ. ಹೀಗೆ ಕೃಷ್ಣನ ರೂಪ-ವೇಷ-ಲೀಲೆಗಳಿಗೆ ಮನಸೋತಿದ್ದಾನೆ, ಲೀಲಾಶುಕ.

ಮೊದಲೆರಡು ಪಾದಗಳು ಪಕಾರದಿಂದ ಆರಂಭಗೊಂಡರೆ, ಕೊನೆಯೆರಡು ಚಕಾರದಿಂದ. ಇತರ ಅನುಪ್ರಾಸಗಳನ್ನೂ ಗಮನಿಸಬಹುದು: ಚ-ಚ, ಶ-ಶ, ಪ-ಪ, ವ-ವ, ನ-ನ.

ಪಿಂಛಾವತಂಸ-ರಚನೋಚಿತ-ಕೇಶಪಾಶೇ

ಪೀನಸ್ತನೀ-ನಯನಪಂಕಜ-ಪೂಜನೀಯೇ |

ಚಂದ್ರಾರವಿಂದ-ವಿಜಯೋದ್ಯತ-ವಕ್ತ್ರಬಿಂಬೇ

ಚಾಪಲ್ಯಮೇತಿ ನಯನಂ ತವ ಶೈಶವೇ ನಃ ||

ಸೂಚನೆ : 14/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.