Tuesday, November 28, 2023

ಮಹರ್ಷಿನೋಟದಲ್ಲಿ ಒಂದು ಧರ್ಮಸೂಕ್ಷ್ಮ (Maharsinotadalli Ondu Dharmasuksma)

ಡಾ. ಹೆಚ್. ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in) 




ಶ್ರೀಮದ್ರಾಮಾಯಣದ ಬಾಲಕಾಂಡದಲ್ಲಿ ತಾಟಕಾವಧಪ್ರಸಂಗ ಬರುವುದಷ್ಟೆತಮ್ಮ ಯಜ್ಞರಕ್ಷಣೆಗಾಗಿ ವಿಶ್ವಾಮಿತ್ರರು ಶ್ರೀರಾಮ-ಲಕ್ಷ್ಮಣರನ್ನು ಕರೆದೊಯ್ಯುತ್ತಿದ್ದಾರೆ.  ದಾರಿಯಲ್ಲಿ ಗಂಗಾನದಿಯ ದಕ್ಷಿಣಭಾಗದಲ್ಲಿಯ ತಾಟಕಾವನವು ಒಂದು ಭಯಾನಕ ಅರಣ್ಯವೇ ಸರಿ. ಅದನ್ನು ಪ್ರವೇಶಿಸುತ್ತಲೇ, ಶ್ರೀರಾಮನಿಗೆ ಆ ಬಗ್ಗೆ ಕೌತುಕ.  ಅದರ ಕಥೆಯನ್ನು ವಿಶ್ವಾಮಿತ್ರರು ಹೇಳಿದರು.

 

ಹಿಂದೆ ಮಲದಕರೂಷ ಎಂಬ ಎರಡು ಸುಂದರ ಹಾಗೂ ಸಮೃದ್ಧವಾಗಿದ್ದ ಸ್ಥಳಗಳಿದ್ದವು. ಅಲ್ಲೊಬ್ಬ ನರಭಕ್ಷಕಿ ರಾಕ್ಷಸಿ. ಹೆಸರು ತಾಟಕೆ. ಎಲ್ಲರಿಗೂ ಅವಳು ಕೊಡುತ್ತಿದ್ದ ತೊಂದರೆ ಅಪಾರ. ಅವಳ ವಧೆ ಮಾಡುವುದು ಧರ್ಮ್ಯವಾದ (ಎಂದರೆ ಧರ್ಮಮಾರ್ಗಕ್ಕೆ ಹೊಂದುವಂತಹಪ್ರಜಾರಕ್ಷಣೆಯ ಕಾರ್ಯವೆಂದು ವಿಶ್ವಾಮಿತ್ರರು ರಾಮನಿಗೆ ಹೇಳಿದರು. ಅವಳು ಹೆಂಗಸೆಂದು ಹಿಂಜರಿಯಬೇಕಿಲ್ಲವೆಂದೂ ಸೂಚಿಸಿದರು.

ಅವರ ಆಜ್ಞೆಯಂತೆ ಅವಳನ್ನು ಸಂಹಾರಮಾಡಲು ಉದ್ಯುಕ್ತನಾದ, ರಾಮಅವಳು ದುಷ್ಟೆ, ಬಲಶಾಲಿನಿ; ಆದರೂ ಎಷ್ಟಾದರೂ ಹೆಂಗಸಲ್ಲವೇ? ಎಂಬ ಅಳುಕು  ಶ್ರೀರಾಮನದು. ಅವಳನ್ನು ಕೊಲ್ಲುವುದು ಬೇಡ, ಅವಳ ಸಂಚಾರಶಕ್ತಿಯನ್ನೂ ಪರಾಕ್ರಮವನ್ನೂ ಉಡುಗಿಸಿದರಾಯಿತೆನ್ನಿಸಿತು, ಅವನಿಗೆ. ಹಾಗೆ ಅವನು ಮಾಡಿದಾಗಲೂ ಅವಳು ತನ್ನ ಮಾಯಾಶಕ್ತಿಯಿಂದ ಅವರನ್ನು ಪೀಡಿಸತೊಡಗಿದಳುಆಗಲೂ ಅವಳನ್ನು ಕೊಲ್ಲಲು ಮನಸ್ಸು ಬರಲಿಲ್ಲ, ಆ ವೀರನಿಗೆ.

 

ವಿಶ್ವಾಮಿತ್ರರು ಎಚ್ಚರಿಸಿದರು: "ಸ್ತ್ರೀ ಎಂಬ ಮರುಕ ಇವಳಲ್ಲಿ ಬೇಡಇವಳು ಪಾಪಿಷ್ಠೆಇದೋ ಸಾಯಂಕಾಲವಾಗುತ್ತಿದೆಇನ್ನವಳ ಶಕ್ತಿ ಹೆಚ್ಚಿಬಿಡುವುದು. ಅದಕ್ಕೆ ಮುನ್ನವೇ ಅವಳನ್ನು ಕೊಂದುಬಿಡುಎಂದು ತಿಳಿಹೇಳಿದರುಆಗ ಅವಳ ಎದೆಗೆ ಗುರಿಯಿಟ್ಟು ಒಂದು ಬಾಣದಿಂದ ಅವಳನ್ನು ಕೊಂದುರುಳಿಸಿದ, ಶ್ರೀರಾಮಆಗ ಅಲ್ಲಿ ನೆರೆದಿದ್ದ ದೇವತೆಗಳೂ "ಭಲಾಎಂದು ಉದ್ಗರಿಸಿದರು.

ಧರ್ಮಭ್ರಷ್ಟೆಯೂ ಸರ್ವೋಪದ್ರವಕಾರಿಣಿಯೂ ಆಗಿದ್ದ ಅವಳನ್ನು ಸಂಹರಿಸಿದುದು ಲೋಕೋಪಕಾರವೇ. ಆದರೊಂದು ಪ್ರಶ್ನೆ: ಕ್ಷತ್ರಿಯನಾದವನು ಸ್ತ್ರೀಯೊಬ್ಬಳ ವಧೆ ಮಾಡಬಹುದೇ ಧರ್ಮಸೂಕ್ಷ್ಮದ ಇಂತಹ ಪ್ರಶ್ನೆಗೆ ಪರಿಹಾರ  ಶ್ರೀರಂಗಮಹಾಗುರುಗಳ ಸೂತ್ರಪ್ರಾಯವಾದ ಈ ಮಾತಿನಲ್ಲಿದೆ: "ಎರಡು ಧರ್ಮಗಳ ನಡುವೆ ವಿರೋಧ ಬಂದಲ್ಲಿಹಿರಿದಾದ ಧರ್ಮಕ್ಕಾಗಿ ಕಿರಿದಾದ ಧರ್ಮವನ್ನು ಬದಿಗಿಡತಕ್ಕದ್ದು." ವಿಶ್ವಾಮಿತ್ರರಿತ್ತ ಉತ್ತರವೂ ಈ ಪರಿಯಾದದ್ದೇ. ಧರ್ಮದ ಉಳಿವಿನ ಪ್ರಶ್ನೆ  ಬಂದಾಗ ಮನುಷ್ಯರಲ್ಲಿ ಸ್ತ್ರೀ-ಪುರುಷವೃದ್ಧ-ಬಾಲಮೇಲು-ಕೀಳು ಎಂಬ ಭೇದವನ್ನು ನೋಡುವಂತಿಲ್ಲಅಧರ್ಮಿಗಳ ವಧೆ ಅನಿವಾರ್ಯ.

ಇದೇ ಪ್ರಶ್ನೆಯ ಮತ್ತೊಂದು ಮುಖವನ್ನು ಕಾಳಿದಾಸನ ಕುಮಾರಸಂಭವ-ಮಹಾಕಾವ್ಯದಲ್ಲಿ ಕಾಣಬಹುದು. ಶಿವನನ್ನು ಒಲಿಸಿಕೊಳ್ಳಬೇಕೆಂಬ ಏಕೋದ್ದೇಶದಿಂದ ಪಾರ್ವತಿಯು ತಪಸ್ಸನ್ನು ಮಾಡುತ್ತಿದ್ದಳಲ್ಲವೇಅವಳ ತಪಸ್ಸು ಉತ್ಕಟವಾಗಿತ್ತು; ಎಷ್ಟೆಂದರೆ, ಅವಳಿಗಿಂತ ಹಿರಿಯರಾದ ಮುನಿಗಳೂ ಅವಳ ದರ್ಶನ ಮಾಡಲು ಅವಳಿದ್ದೆಡೆಗೇ ಬರುತ್ತಿದ್ದರಂತೆ! ಕಿರಿಯರ ದರ್ಶನಕ್ಕಾಗಿ ಹಿರಿಯರು ಬರುವುದೇ? – ಎಂಬ ಪ್ರಶ್ನೆ ಬರುವುದಲ್ಲವೇ? ಅದಕ್ಕೆ ಕಾಳಿದಾಸನ ಉತ್ತರ ಸ್ಪಷ್ಟ"ಧರ್ಮವೃದ್ಧರಲ್ಲಿ ವಯಸ್ಸಿನ ಪರಿಗಣನೆಯಿಲ್ಲ." ತನ್ನ ತಪಸ್ಸಿನ ಮೂಲಕ ಗಳಿಸಿದ ಧರ್ಮದಲ್ಲಿ ಪಾರ್ವತಿಯು ಹಿರಿಯಳು; ಎಂದೇ, ಅವಳು ವಯಸ್ಸಿನಲ್ಲಿ ಕಿರಿಯವಳಾಗಿದ್ದರೂಸ್ತ್ರೀಯಾಗಿದ್ದರೂವಯೋವೃದ್ಧರಾದ ಮುನಿಗಳು ಅವಳ ದರ್ಶನಕ್ಕಾಗಿ ಬರುವುದೂಅವಳನ್ನಾದರಿಸುವುದೂ ಉಚಿತವೇ.

ಇವೆಲ್ಲದರ ಸಾರ: ಅಧರ್ಮ್ಯವಾದದ್ದು ತ್ಯಾಜ್ಯದಂಡನಾರ್ಹ; ಧರ್ಮ್ಯವಾದದ್ದು ಪೂಜ್ಯಮಂಡನಾರ್ಹ

.

ಸೂಚನೆ: 27/11/2023 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.

Monday, November 27, 2023

ವ್ಯಾಸ ವೀಕ್ಷಿತ - 64 ಸುಂದರಿಯ ಹಿಂದೆ ಹೋದ ಇಂದ್ರನಿಗೆ ಆದ ಶಾಸ್ತಿ (Vyaasa Vikshita - 64 Sundariya Hinde Hoda Indranige Ada Shasti)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



 

ನೀರಿನಲ್ಲಿ ತೇಲಿಬರುತ್ತಿದ್ದ ಕಮಲಪುಷ್ಪದ ಮೂಲವನ್ನು ಪತ್ತೆ ಹಚ್ಚಲು ಇಂದ್ರನು ಹೋದನಲ್ಲವೆ? ಗಂಗೆಯು ನಿರಂತರವಾಗಿ ಉಕ್ಕುವ ಆ ಎಡೆಯಲ್ಲಿ ಆತನು ಕಂಡದ್ದು ಒಬ್ಬ ಸ್ತ್ರೀಯನ್ನು. ಅಗ್ನಿಯ ಪ್ರಭೆ ಅವಳಲ್ಲಿ ತೋರುತ್ತಿತ್ತು. ನೀರಿಗೋಸ್ಕರವಾಗಿ ಬಂದಿದ್ದ ಆ ತರುಣಿಯು ಗಂಗಾಧಾರೆಯತ್ತ ಸಾಗಿ ಅಳುತ್ತಾ ನಿಂತಿದ್ದಳು. ಅವಳ ಕಣ್ಣೀರಾದರೋ, ನೀರಿನಲ್ಲಿ ಬೀಳುತ್ತಲೇ ಒಂದು ಕಾಂಚನಪದ್ಮ(ಚಿನ್ನದ ಕಮಲ)ವಾಗುತ್ತಿತ್ತು! ಆ ಅದ್ಭುತವನ್ನು ಇಂದ್ರನು ಕಂಡನು. ಆ ಯುವತಿಯ ಬಳಿಗೆ ನಡೆದು ಅವಳನ್ನು ಕೇಳಿದನು: ಭದ್ರೇ (ಎಂದರೆ, ಶುಭನಾರಿಯೇ), ನೀನಾರು, ಅಳುತ್ತಿರುವೆಯೇಕೆ? ಸತ್ಯವನ್ನು ಹೇಳು - ಎಂದನು.

ಆ ನಾರಿಯು ಹೇಳಿದಳು: ಇಂದ್ರನೇ, ನಾನು ಯಾರು, ಮತ್ತು ಮಂದಭಾಗ್ಯಳಾದ (ಎಂದರೆ ಅದೃಷ್ಟಹೀನಳಾದ) ನಾನು ಏತಕ್ಕಾಗಿ ಅಳುತ್ತಿದ್ದೇನೆ? - ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಅರಿಯುವೆಯಂತೆ. ಇಂದ್ರನೇ, ನಾ ಮುಂದೆ ಹೋಗುತ್ತೇನೆ, ನೀನು ನನ್ನ ಹಿಂದೆ ಬಾ: ನನ್ನ ರೋದನಕಾರಣವನ್ನು ನೀನೇ ಕಾಣುವೆ.

ಹಾಗೆ ಹೇಳಿ ಹೊರಟ ಅವಳನ್ನು ಅನುಸರಿಸಿ ಇಂದ್ರನೂ ನಡೆದನು. ಅಲ್ಲಿ ಹಿಮಾಲಯದ ಶಿಖರವೊಂದರ ಮೇಲೆ ಒಬ್ಬ ದರ್ಶನೀಯನಾದ (ಎಂದರೆ ಬಹುಸುಂದರನಾದ) ಪುರುಷನನ್ನು ಕಂಡನು. ಆತನೊಂದಿಗೆ ಯುವತಿಯೊಬ್ಬಳಿದ್ದಳು; ಆತನಾದರೂ ಸಿದ್ಧಾಸನದಲ್ಲಿ ಕುಳಿತಿದ್ದನು, ಆ ತರುಣಿಯೊಡನೆ ಆತ ಕ್ರೀಡಿಸುತ್ತಿದ್ದನು. ಕ್ರೀಡಾಮಗ್ನನಾಗಿ ಮತ್ತನಾಗಿದ್ದ ಆತನನ್ನು ಸಂಬೋಧಿಸಿ ಇಂದ್ರನು ಕೋಪದಿಂದಲೇ ಹೇಳಿದನು "ಅಯ್ಯಾ ವಿದ್ವಾಂಸನೇ! ಈ ವಿಶ್ವವು ನನ್ನ ಅಧೀನದಲ್ಲಿದೆಯೆಂಬುದನ್ನು ಅರಿತುಕೋ. ನಾನಿದರ ಒಡೆಯ" ಎಂದು ಹೇಳಿದನು.

ಕ್ರೋಧಗೊಂಡಿದ್ದ ಇಂದ್ರನನ್ನು ದಿಟ್ಟಿಸಿನೋಡಿ ಆ ದೇವಪುರುಷನು ನಕ್ಕನು, ಮೆಲ್ಲನೆ ಆತನತ್ತ ದೃಷ್ಟಿ ಬೀರಿದನು. ಅಷ್ಟುಮಾತ್ರದಿಂದಲೇ ಆದ ಪರಿಣಾಮವೆಂದರೆ, ಇಂದ್ರನು ಸ್ತಂಭಿತನಾಗಿಹೋದ! ಅರ್ಥಾತ್, ಕಟ್ಟಿಗೆಯಂತೆ, ಅಲ್ಲಾಡಲಾಗದೆ, ನಿಂತುಬಿಟ್ಟ!

ತನ್ನ ಕ್ರೀಡೆಯು ಮುಗಿದ ಮೇಲೆ ಆ ದೇವಪುರುಷನು ಅಳುತ್ತಿದ್ದ ತರುಣಿಯತ್ತ ತಿರುಗಿ, "ತಾ ನನ್ನ ಬಳಿಗೆ ಈತನನ್ನು; ಈತನಲ್ಲಿ ಮತ್ತೆ ದರ್ಪವು ಹುಟ್ಟದಂತೆ ಮಾಡುವೆ" - ಎಂದ. ಆಮೇಲೆ ಆ ನಾರಿಯು ಬಂದು ಇಂದ್ರನನ್ನು ಕೇವಲ ಸ್ಪರ್ಶಿಸಿದಳು: ಅಷ್ಟಕ್ಕೇ ಅವನ ಅಂಗಗಳೆಲ್ಲ ಶಿಥಿಲವಾದವು (ಸಡಿಲಗೊಂಡವು)! ಎಷ್ಟೆಂದರೆ ಆತ ಧೊಪ್ಪನೆ ನೆಲಕ್ಕುರುಳಿದ! ಆಗ ಆ ಉಗ್ರತೇಜಸ್ಕನಾದ ಭಗವಂತನು - ವಾಸ್ತವವಾಗಿ ರುದ್ರನು - ಇಂದ್ರನಿಗೆ ಹೇಳಿದ: "ಇಂದ್ರನೇ, ಮತ್ತೆಂತೂ ಹೀಗೆ ಮಾಡಬೇಡ. ನಿನ್ನ ಬಲ-ವೀರ್ಯಗಳು ಅಪ್ರಮೇಯವಾದವು ಅಲ್ಲವೇ? (ಅಪ್ರಮೇಯವೆಂದರೆ ಅಳೆಯಲಾಗದ್ದು): ಈ ದೊಡ್ಡ ಬಂಡೆಯನ್ನು ಪಕ್ಕಕ್ಕೆ ತಳ್ಳು. ಮಧ್ಯದಲ್ಲಿಯ ರಂಧ್ರದೊಳಗೆ ಪ್ರವೇಶ ಮಾಡು. ನಿನ್ನಂತೆಯೇ ಇರುವ ಸೂರ್ಯತೇಜಸ್ಕರು ಹಲವರು ಅಲ್ಲಿರುವರು, " ಎಂದು.

ಆ ಮಹಾಪರ್ವತದ ರಂಧ್ರವನ್ನು ತೆರೆದು ನೋಡಿದ, ಇಂದ್ರ. ತನಗೆ ಸಮಾನವಾದ ಕಾಂತಿಯುಳ್ಳ ಬೇರೆ ನಾಲ್ವರನ್ನಲ್ಲಿ ಕಂಡ! ಅವರನ್ನು ಕಂಡು ದುಃಖಿತನೂ ಆದ. ಅಯ್ಯೋ ಇವರ ಗತಿಯೇ ನನಗೂ ಒದಗುವುದಿಲ್ಲವಷ್ಟೆ? - ಎಂದುಕೊಂಡ. ಕೋಪಗೊಂಡಿದ್ದ ಮಹಾದೇವನು ಕಣ್ತೆರೆದು ವಜ್ರಪಾಣಿಯಾದ ಇಂದ್ರನಿಗೆ ಹೇಳಿದ:

"ಅಜ್ಞಾನದಿಂದ ನೀನು ನನ್ನನ್ನು ಎದುರಿಗೇ ಅವಮಾನಪಡಿಸಿರುವೆಯಲ್ಲವೇ ಇಂದ್ರ?: ಹೋಗೀ ದರಿಯೊಳಗೆ!" (ದರಿಯೆಂದರೆ ಗುಹೆ).

ಸೂಚನೆ : 26/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಯಕ್ಷ ಪ್ರಶ್ನೆ 65 (Yaksha prashne 65)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 64 ನಟ-ನರ್ತಕರಿಗೆ ಏಕೆ ದಾನವನ್ನು ಮಾಡಬೇಕು ?

ಉತ್ತರ - ಯಶಃಪ್ರಾಪ್ತಿಗಾಗಿ  

ಈ ಹಿಂದಿನ ಮತ್ತು ಮುಂದಿನ ಕೆಲವು ಲೇಖನಗಳಲ್ಲಿ ದಾನವನ್ನು ಯಾರಿಗೆ ಮಾಡಬೇಕು? ಮತ್ತು ಯಾರಿಗೆ ಮಾಡಿದರೆ ಯಾವ ಫಲ ಲಭಿಸುತ್ತದೆ? ಎಂಬ ವಿಷಯದ ಬಗ್ಗೆ ಪ್ರಶ್ನೋತ್ತರವಿದೆ. ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಧನಸಂಗ್ರಹವನ್ನು ಮಾಡಲೇಬೇಕು. ಸಂಗ್ರಹ ಮಾಡಿದ ಧನವನ್ನು ಸದ್ವಿನಿಯೋಗ ಮಾಡಬೇಕು. ಸಂಗ್ರಹಿಸದ ಧನವು ಎರಡು ರೀತಿಯಲ್ಲಿ ವಿನಿಯೋಗವಾಗಬೇಕು. ಮೊದಲನೆಯದಾಗಿ ದಾನ ಮತ್ತು ಎರಡನೆಯದಾಗಿ ಸ್ವತಃ ಭೋಗಿಸುವಂತಹದ್ದು. ಇವೆರಡೂ ಆಗದಿದ್ದಲ್ಲಿ ಆ ಧನಕ್ಕೆ ನಾಶವೇ ಗತಿಯಾಗುವುದು ಎಂದು ಸುಭಾಷಿತವು ಸಾರುತ್ತದೆ. ಜೀವನವು ಕೇವಲ ಆತ್ಮದ ಉನ್ನತಿಯನ್ನು ಮಾತ್ರ ಪಡೆಯುವ ಉದ್ದೇಶವಾದರೂ, ಅದಕ್ಕೆ ಪೂರಕವಾದ ಅನೇಕ ಕಾರ್ಯವನ್ನೂ ಜೊತೆಜೊತೆಯಲ್ಲೇ ಮಾಡಲೇಬೇಕಾದುದು ಅಷ್ಟೇ ಕರ್ತವ್ಯ ಮತ್ತು ಅನಿವಾರ್ಯವೂ ಹೌದು. ಹಾಗಾಗಿ ನಾವು ಸಂಗ್ರಹಿಸಿದ ಧನವು ಯಾವ ರೀತಿ ಉಪಯೋಗವಾದರೆ ಅದು ಆತ್ಮೋನ್ನತಿಗೆ ಸಹಾಯಕವಾಗುವುದು ಎಂಬುದೂ ಇಲ್ಲಿನ ಪ್ರಶ್ನೆಯಲ್ಲಿ ಅಡಕವಾಗಿದೆ. ಮತ್ತು ಜೀವನವೆಂಬುದು ಅನ್ಯೋನ್ಯ ಆಶ್ರಯ ಆಶ್ರಯಿಭಾವದಿಂದ ನಡೆಯಬೇಕಾಗಿದೆ. ತನ್ನ ಧನವನ್ನು ಇನ್ನೊಬ್ಬರಿಗೆ ಕೊಟ್ಟಾಗ ಆ ವ್ಯಕ್ತಿಯು ಆ ಧನವನ್ನು ಉಪಯೋಗಿಸಿ ಜೀವನಕ್ಕೆ ಬೇಕಾದ ದ್ರವ್ಯವನ್ನು ಪಡೆಯಲು ಸಾಧ್ಯ. ಅಷ್ಟೇ ಅಲ್ಲದೇ ಧನವು ತ್ಯಾಗ ಮಾಡುತ್ತಿದ್ದಾಗಲೇ ಮತ್ತೆ ಬಂದು ಸೇರುತ್ತದೆ. ತ್ಯಾಗ ಮಾಡಿದಾಗಲೆ ಆತ ಶುದ್ಧನಾಗುತ್ತಾನೆ. ಒಂದು ವೇಳೆ ಅದನ್ನು ಬಚ್ಚಿಡುತ್ತಾ ಹೋದರೆ ನಿಂತ ನೀರಂತೆ ಪಾಚಿಕಟ್ಟಿ ಯಾರಿಗೂ ಉಪಯೋಗ ಬಾರದ ನೀರಿನಂತಾಗುತ್ತದೆ ಆ ಧನ. ಅದಕ್ಕಾಗಿ ಧನ ವಿನಿಯೋಗ ಸದಾ ಆಗುತ್ತಿರಬೇಕು. ಅದು ಒಳ್ಳೆಯ ಕಾರ್ಯಕ್ಕೆ ಆಗುವಂತಿರಬೇಕು. 

ಪ್ರಕೃತ ಪ್ರಶ್ನೆಯಲ್ಲಿ ಯಕ್ಷನು ನರ್ತಕರಿಗೆ ಅಥವಾ ನಟರಿಗೆ ಏಕೆ ದಾನ ಮಾಡಬೇಕು? ಎಂದು ಕೇಳುತ್ತಾನೆ. ನಟರಿಗೆ ದಾನ ಮಾಡುವುದರಿಂದ ಆಗುವ ಫಲವೇನು? ಎಂಬುದು ಧರ್ಮರಾಜನ ಉತ್ತರದಿಂದ ಲಭ್ಯವಾಗುತ್ತದೆ. ಯಶಸ್ಸು ಇಂತಹ ಕೊಡುಗೆಯಿಂದ ಪ್ರಾಪ್ತವಾಗುತ್ತದೆ. ನಟರು ತಮ್ಮ ಕಲೆಯಿಂದ ಜನರನ್ನು ರಂಜಿಸುವವರು. ಕಲೆಯೇ ಅವರಿಗೆ ಬೆಲೆಯನ್ನು ಕೊಡುವಂತಹದ್ದು. ಕಲಾವಿದನು ತನ್ನ ಕಲೆಯಿಂದ ಕಲೆಯ ಮೂಲನಾದ ಭಗವಂತನನ್ನು ತಲುಪಲು ಕಲಾಪ್ರೇಮಿಗಳಿಗೆ ಕಲಾರಸಿಕರಿಗೆ ಕಾರಣೀಭೂತನಾಗುತ್ತಾನೆ. ಅವನಿಗೆ ಸಿಕ್ಕ ಸಮ್ಮಾನವು ಕಲಾಧೀಶನಿಗೆ ಕೊಟ್ಟ ಗೌರವವಾಗುತ್ತದೆ. ಕಲಾವಿದನು ತೃಪ್ತನಾಗಿ ಆ ದಾನಿಗೆ ಮನಸ್ಸು ತುಂಬಿ ಒಳ್ಳೆಯದಾಗಲಿ ಎಂಬ ಬಯಸುತ್ತಾನೆ ಅಲ್ಲವೇ. ಈ ಸದಾಶಯವೇ ದಾನಿಯ ಆತ್ಮೋನ್ನತಿಗೆ ಕಾರಣವಾಗುತ್ತದೆ. ಈ ಪ್ರಕಾರವಾಗಿ ಬರುವ ಯಶಸ್ಸನ್ನು ಪ್ರತಿಯೊಬ್ಬ ಮಾನವನೂ ಪಡೆಯಬೇಕು. ಅದಕ್ಕೆ ಹಿರಿಯರು ಆಶೀರ್ವಾದವನ್ನು ಮಾಡುವಾಗ 'ಯಶಸ್ವೀ ಭವ' ಎಂದು ಹರಸುತ್ತಿದ್ದರು. ಇಂತಹ ಯಶಸ್ಸನ್ನು ಪ್ರತಿಯೊಬ್ಬರೂ ಬಯಸಬೇಕಾದುದೇ. ಏಕೆಂದರೆ ಅವನ ಸಂಪತ್ತು, ಅವನ ಸಂಗ್ರಹವು ಸದ್ವಿನಿಯೋಗಕ್ಕೆ ಕಾರಣವಾಯಿತು. ನಟನಾದವು ನಾನಾ ಪ್ರದೇಶಗಳಿಗೆ ಸಂಚಾರ ಮಾಡುತ್ತಾ ತನಗೆ ಸಂದ ಸಮ್ಮಾನವನ್ನು ಸಮ್ಮಾನಿಸಿದವರನ್ನು ಪರಿಚಯಿಸುತ್ತಾ ಸಾಗುತ್ತಾನೆ. ಅದರಿಂದ ನಟನಿಗೆ ಕೊಟ್ಟ ದಾನಿಯು ಜಗತ್ತಿಗೆ ಪರಿಚಯವಾಗುತ್ತಾ ಅವನ ಹೆಸರು ಎಲ್ಲೆಡೆ ಪಸರಿಸುತ್ತದೆ. ಇದೇ ಅವನ ಯಶಸ್ಸಿಗೆ ಕಾರಣ. 

ಸೂಚನೆ : 26/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಭಗವಂತನನ್ನು ಎಬ್ಬಿಸಲೊಂದು ಹಬ್ಬ (Bhagavantanannu Ebbisalondu Habba)

ಶ್ರೀಮತಿ ಮೈಥಿಲಿ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)




ಕಾರ್ತೀಕ ಮಾಸದ ಶುಕ್ಲಪಕ್ಷ ದ್ವಾದಶಿಯು ಉತ್ಥಾನದ್ವಾದಶಿಯೆಂಬುದಾಗಿ ಸಂಭ್ರಮದಿಂದ ಕೊಂಡಾಡಲ್ಪಡುತ್ತದೆ.
'ಉತ್ಥಾನ' ಎಂದರೆ ಎಬ್ಬಿಸುವುದು, ಎಚ್ಚರಗೊಳಿಸುವುದು. ಶಯನದ್ವಾದಶಿಯಿಂದ ನಾಲ್ಕುತಿಂಗಳಕಾಲ ಯೋಗನಿದ್ರೆಯಲ್ಲಿ ಪವಡಿಸಿರುವ ಕ್ಷೀರಾಬ್ಧಿನಾಥನನ್ನು ಎಚ್ಚರಗೊಳಿಸುವ ದಿನವಾದ್ದರಿಂದ ಈ ದಿನವು ಕ್ಷೀರಾಬ್ಧಿನಾಥವ್ರತ/ಪೂಜೆ ಎನಿಸಿಕೊಳ್ಳುತ್ತದೆ. ಶ್ರೀಮನ್ನಾರಾಯಣನು ತನ್ನ ನಿದ್ರಾ-ಮುದ್ರೆಯನ್ನು ಬಿಟ್ಟು ಎಚ್ಚರ-ಮುದ್ರೆಯನ್ನು ಭಕ್ತರಿಗೆ ತೋರುವ ದಿನವಾದ್ದರಿಂದ ಉತ್ಥಾನದ್ವಾದಶೀ ಎನಿಸಿಕೊಳ್ಳುತ್ತದೆ.

ಭಗವಂತನ ನಿದ್ರೆ:
ಭಗವಂತನು ನಾಲ್ಕು ತಿಂಗಳುಗಳು ನಿದ್ರಿಸುವುದಾದರೆ ಜಗದ್ವ್ಯಾಪಾರ ನಡೆಯುವುದು ಹೇಗೆಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಭಗವಂತನ ನಿದ್ರೆಯು ಪ್ರಾಕೃತರ ನಿದ್ರೆಯಂತೆ ಜಾಡ್ಯನಿದ್ರೆಯಲ್ಲ, ಅದು ಯೋಗನಿದ್ರೆ. ತನ್ನ ಯೋಗನಿದ್ರೆಯ ಕಾಲದಲ್ಲಿ ಜಗದ್ವ್ಯಾಪಾರ ಕಾರ್ಯವನ್ನು ಪ್ರಕೃತಿಮಾತೆಗೆ ವಹಿಸುತ್ತಾನೆ. ಆತನು ಸದಾ ಯೋಗದಲ್ಲೇ ಇರುವವನಾದರೂ ಈ ನಾಲ್ಕುತಿಂಗಳಕಾಲ ಯೋಗನಿದ್ರಾ'ಮುದ್ರೆಯನ್ನು' ಅನುಗ್ರಹಿಸುತ್ತಾನೆ. ಆತನ ನಿದ್ರಾಮುದ್ರೆಯನ್ನು ನೋಡಲು ಅಪೇಕ್ಷಿಸುವ ಭಕ್ತರಿಗಾಗಿ ಈ ಭಂಗಿಯಲ್ಲಿ ಕಂಗೊಳಿಸುತ್ತಿದ್ದು ಉತ್ಥಾನದ್ವಾದಶಿಯಂದು ಯೋಗನಿದ್ರೆಯಿಂದ ಅರಳಿದ ಅರಳುಕಂಗಳಿಂದ ಭಕ್ತರನ್ನು ಅನುಗ್ರಹಿಸುತ್ತಾನೆ.

ಕಾಲದ ಔಚಿತ್ಯ:
ಚಾತುರ್ಮಾಸ್ಯದ ನಾಲ್ಕು ತಿಂಗಳುಗಳು ಎಡೆಬಿಡದೆ ಮಳೆಯನ್ನು ಸುರಿಸುವ ಕಾಲ. ಹಂಸಗಳು ನಿರಂತರ ವರ್ಷವನ್ನು ತಡೆಯಲಾರದೆ ಮಾನಸಸರೋವರವನ್ನು ಸೇರುತ್ತವೆ ಎನ್ನುತ್ತಾರೆ. ಅಂತೆಯೇ ಪರಮಹಂಸರೂ ತಮ್ಮ ಹೃದಯಮಾನಸಸರೋವರವನ್ನು ಸೇರಿ ನಿದ್ರಾಮುದ್ರಾಭಿರಾಮನಾದ ಭಗವಂತನಲ್ಲಿ ರಮಿಸುತ್ತಾರೆ.
ಪಾಮರರಿಗೂ ಕೂಡ ಮಳೆಯಕಾರಣದಿಂದಾಗಿ ಹೊರವ್ಯಾಪಾರಗಳನ್ನು ಕಡಿಮೆಮಾಡಿ ಭಗವಂತನಲ್ಲಿ ವಿಶ್ರಾಂತಿಯನ್ನು ಪಡೆಯಲು ಪುಷ್ಟಿನೀಡುವ ಕಾಲ ಇದಾಗಿದೆ. ದ್ವಾದಶಿಯಂದು ಭಗವಂತನಿಗೆ ಸುಪ್ರಭಾತವನ್ನು ಹಾಡಿ ನಿದ್ರಾಮುದ್ರೆಯಿಂದ ಎಚ್ಚರಗೊಳಿಸಿ, ವಿಶೇಷಪೂಜೆಗಳನ್ನರ್ಪಿಸಿ, ಅನುಗೃಹೀತರಾಗಿ ಮುಂದಿನ ವ್ಯಾಪಾರಗಳನ್ನು ಆತನ ಸ್ಮರಣೆಯಲ್ಲಿ ಮಾಡಲು ಉದ್ಯುಕ್ತರಾಗಬೇಕೆನ್ನುವುದು ಇಲ್ಲಿಯ ಆಶಯ.

ಪೂಜಾಕಲ್ಪ:
ಉತ್ಥಾನದ್ವಾದಶೀ ಪೂಜೆಯನ್ನು ದೇಶದ ಬೇರೆಬೇರೆ ಭಾಗಗಳಲ್ಲಿ ವಿಸ್ತಾರವಾಗಿಯೂ, ಸಂಕ್ಷಿಪ್ತವಾಗಿಯೂ ನಾನಾ ರೀತಿಗಳಲ್ಲಿ ಆಚರಿಸುವುದುಂಟು. ಇಲ್ಲಿ ವಿಸ್ತಾರಗಳಿಗೆ ಹೋಗದೆ ಸಾಮಾನ್ಯವಾಗಿ ಕಂಡುಬರುವ ಕ್ರಮವನ್ನು ಗಮನಿಸುವುದಾದರೆ, ಭಗವಂತನಿಗೆ ಷೋಡಶೋಪಚಾರಗಳೊಂದಿಗೆ ವಿಶೇಷಪೂಜೆಯನ್ನು ಅರ್ಪಿಸುವುದರ ಜೊತೆಗೆ ತುಲಸೀ ವಿವಾಹವನ್ನೂ ಆಚರಿಸುವ ರೂಢಿಯಿದೆ. ತುಲಸೀ- ಧಾತ್ರಿಯರ(ನೆಲ್ಲಿಯ) ಪೂಜೆ, ತುಲಸೀವಿವಾಹ ಮುಂತಾದುದನ್ನು ಸಂಧ್ಯಾಕಾಲದಲ್ಲಿ ಮಾಡುವ ರೂಢಿಯೂ ಉಂಟು. ಅಂದು ಹೊಸ ನೆಲ್ಲಿಯಕಾಯಿನಿಂದ ಕೂಡಿದ ನೆಲ್ಲಿಯಕೊಂಬೆಯನ್ನು ತುಲಸೀಗಿಡದೊಡನೆ ಸೇರಿಸಿ ಮಧ್ಯದಲ್ಲಿ ಶ್ರೀಕೃಷ್ಣನನ್ನಿಟ್ಟು ಪೂಜಿಸುವುದು ರೂಢಿಯಲ್ಲಿದೆ. ನೆಲ್ಲಿಯಕಾಯನ್ನು ಬಟ್ಟಲಿನಂತೆ ಮಾಡಿ ಅದರಲ್ಲಿ ಹಸುವಿನತುಪ್ಪ ಅಥವ ಎಳ್ಳೆಣ್ಣೆಯನ್ನು ತುಂಬಿ ದೀಪವನ್ನು ಬೆಳಗಿಸುವ ಪದ್ಧತಿಯೂ ಉಂಟು.
ಇಲ್ಲಿ ತುಲಸೀ-ಧಾತ್ರಿಯರ ಪೂಜೆಯೆಂದಾಗ ಪೂಜಿಸುವುದು ಮರಗಿಡಗಳನ್ನಲ್ಲ, ಅದರಲ್ಲಡಗಿರುವ ದೇವಿಯನ್ನು ಎಂಬಂಶವು ಗಮನಾರ್ಹ.

ಧಾತ್ರಿಯ ವೈಶಿಷ್ಟ್ಯ:
`
ಧಾತ್ರೀ'-ಧರಿಸಿ, ಪೋಷಿಸುವವಳು. ಶ್ರೀಫಲಾ, ಆಮಲಕೀ, ಅಮೃತಾ, ರೋಚಿನಿ ಇತ್ಯಾದಿ ಇತರ ಹೆಸರುಗಳು ಅಮೃತತ್ತ್ವ, ರುಚಿಕರ, ವೀರ್ಯವೃದ್ಧಿ ಮುಂತಾದ ಇದರ ಗುಣಾತಿಶಯಗಳನ್ನು ತಿಳಿಸುತ್ತವೆ.
`ಧಾತ್ರಿಯು ತಾಯಿಯಂತೆ ಮನುಷ್ಯರಲ್ಲಿ ವಾತ್ಸಲ್ಯವನ್ನು ತೋರುತ್ತಾಳೆ. ಇದರ ನೀರಿನ ಪಾನ ಆಯುರ್ವೃದ್ಧಿಕರ. ಇದರಿಂದ  ಸ್ನಾನಮಾಡುವುದು ವಿಘ್ನಹಾರಕ. ಇದು ದಾರಿದ್ರ್ಯವನ್ನು ನಾಶಪಡಿಸಿ ಮೋಕ್ಷವನ್ನೇ ಕೊಡುತ್ತದೆ. ತುಲಸೀ-ಬಿಲ್ವಗಳಲ್ಲಿನ ಶ್ರೇಷ್ಠಗುಣಗಳೆಲ್ಲವೂ ಧಾತ್ರಿಯಲ್ಲಿಯೂ ಉಂಟು' ಎಂಬುದಾಗಿ ಶಾಸ್ತ್ರಗಳು ಕೊಂಡಾಡುತ್ತವೆ.

ಧಾತ್ರಿಯ ಅಧಿಷ್ಟಾತೃದೇವತೆಯು ಲಕ್ಷ್ಮೀ-ಪಾರ್ವತಿಯರ ವಿಭೂತಿಯಾಗಿ, ಜಗನ್ಮಾತೆಯ ಅಂಶಭೂತಳಾಗಿ, ಆನಂದಪ್ರದಳಾಗಿದ್ದಾಳೆ ಎಂಬ ಸತ್ಯಾರ್ಥವನ್ನು ಪುರಾಣಗಳು ಕಥಾರೂಪದಲ್ಲಿ ಹೀಗೆ ವರ್ಣಿಸುತ್ತವೆ- ಒಮ್ಮೆ ಲಕ್ಷ್ಮೀ-ಪಾರ್ವತಿಯರು ತಮ್ಮಿಂದಲೇ ಸೃಷ್ಟಿಯಾದ ಪದಾರ್ಥಗಳಿಂದ ಶಿವನನ್ನೂ, ವಿಷ್ಣುವನ್ನೂ ಪೂಜಿಸಲು ಇಚ್ಚಿಸಿದಾಗ ಅವರಿಬ್ಬರ ಕಂಗಳ ಆನಂದಭಾಷ್ಪವು ಭೂಮಿಯಲ್ಲಿಳಿದು ಅದರಿಂದ ನೆಲ್ಲಿಗಿಡವು ಹುಟ್ಟಿತು. ಶುದ್ದವಾದ(ಅಮಲವಾದ) ಜಲ(ಕ)ದಿಂದ ಹುಟ್ಟಿದ್ದರಿಂದ `ಆಮಲಕ'ವೆಂದೂ, ಆಗ ದೇವತೆಗಳ ಜಯಕಾರದಿಂದಾದ ಆನಂದವನ್ನು ಧರಿಸಿದ್ದರಿಂದ `ಧಾತ್ರೀ'ಯೆಂದೂ ಹೆಸರಾಯಿತು.
ಧಾತ್ರಿಯು ಆಧಿಬೌತಿಕ, ಆಧಿದೈವಿಕ, ಆಧ್ಯಾತ್ಮಿಕವೆಂಬ ಮೂರೂಕ್ಷೇತ್ರಗಳಿಗೂ ಪುಷ್ಟಿನೀಡುತ್ತದೆ.
ಆಧಿಭೌತಿಕಪ್ರಯೋಜನ:
ಇದು ಪ್ರಧಾನವಾಗಿ ತ್ರಿಧಾತುಗಳ ವೈಷಮ್ಯವನ್ನು ನೀಗಿಸಿ ಧಾತುಪ್ರಸನ್ನತೆಯನ್ನುಂಟುಮಾಡುತ್ತದೆ, ಅನೇಕ ರೋಗಗಳ ನಿವಾರಣೆಯನ್ನು ಮಾಡಿ ಆಯುರ್ವೃದ್ಧಿಯನ್ನು ನೀಡುತ್ತದೆ ಎಂಬುದಾಗಿ ಆಯುರ್ವೇದವು ಕೊಂಡಾಡುತ್ತದೆ.

ಆಧಿದೈವಿಕಪ್ರಯೋಜನ:
ಇದು ಶಿವ-ವಿಷ್ಣು ಇಬ್ಬರ ಪೂಜೆಗೂ ಯೋಗ್ಯವಾದದ್ದು. ಆಮಲಕದಿಂದ ಅವರನ್ನು ಪೂಜಿಸಿ ನೈವೇದ್ಯಮಾಡಿ ಪ್ರಸಾದರೂಪವಾಗಿ ಅದನ್ನು ಸೇವಿಸಿದಾಗ ಆಯಾದೇವತೆಗಳ ಪ್ರೀತಿಗೆ ಕಾರಣಾವಾಗುತ್ತದೆ. ನೆಲ್ಲಿಯಿಂದ ಸ್ನಾನ-ಪಾನಗಳು ನಮ್ಮೊಳಗೆ ಆ ದೇವತಾಕೇಂದ್ರಗಳನ್ನು ತೆರೆದು ಧ್ಯಾನಕ್ಕೆ ಪುಷ್ಟಿಯನ್ನು ನೀಡಿ ಉಪಾಸನೆಯ ಫಲಪ್ರಾಪ್ತಿಗೆ ಕಾರಣಾವಾಗುವುದು.

ಆಧ್ಯಾತ್ಮಿಕಪ್ರಯೋಜನ:
ನೆಲ್ಲಿಯ ಸೇವನೆಯು ಆತ್ಮಗುಣಗಳ, ಬುದ್ಧಿಯ, ಆರೋಗ್ಯದ, ದ್ರವ್ಯಗಳ-ದಾರಿದ್ರ್ಯವನ್ನು ನೀಗಿಸುತ್ತದೆ. ತನ್ಮೂಲಕ ಧಾತುಪ್ರಸನ್ನತೆಯನ್ನೇರ್ಪಡಿಸಿ ಸಮಾಧಿಸಿದ್ಧಿಯನ್ನುಂಟು ಮಾಡುತ್ತದೆ, ಭಗವತ್‌ಸಾಕ್ಷಾತ್ಕಾರ-ಮೋಕ್ಷಗಳಿಗೆ ಹೇತುವಾಗುತ್ತದೆ.  
ನೆಲ್ಲಿಯನ್ನು ಸೇವಿಸುವವರಿಗೆಲ್ಲಾ ಮುಕ್ತಿ ಎಂದರ್ಥವಲ್ಲ. ಭಗತ್ಸಾಕ್ಷಾತ್ಕಾರಕ್ಕಾಗಿ ನಿಷ್ಠೆ-ಪ್ರಾಮಾಣಿಕತೆಗಳಿಂದ ಶ್ರಮಿಸುವ ಸಾಧಕರ ಯೋಗಸಿದ್ಧಿಗೆ ಇದರ ಸೇವನೆಯು ಸಹಾಯವನ್ನು ನೀಡುತ್ತದೆ ಎಂಬಂಶವು ಇಲ್ಲಿ ಗ್ರಾಹ್ಯ. ನೆಲ್ಲಿ-ಹಸುವಿನತುಪ್ಪದ ಯೋಗದಿಂದ ಬೆಳಗುವ ದೀಪದ ದರ್ಶನ-ವಾಸನೆಗಳು ಪಾಪಪರಿಹಾರಕ-ಜ್ಞಾನಪ್ರದ. ತುಲಸಿಯು ಶ್ರೀಕೃಷ್ಣನಿಗೆ ಸಂಬಂಧಿಸಿದ ಕೇಂದ್ರಗಳನ್ನು ತೆರೆದು ಆತನ ಪೂಜೆಗೆ ಸಹಕರಿಸುತ್ತದೆ.
ಆದ್ದರಿಂದ ಯೋಗಮೂರ್ತಿಯಾದ ಭಗವಂತನ ಪೂಜೆಯಲ್ಲಿ ಧಾತ್ರಿ-ತುಲಸಿಗಳನ್ನು ಅಳವಡಿಸಲಾಗಿದೆ. ಹಬ್ಬಗಳ ಆಚರಣೆಯು ದೇಶದಾದ್ಯಂತ ಹರಡಿದ್ದರೂ ಅದು ಬಹುಪಾಲು ಯಾಂತ್ರಿಕವಾಗಿಯೇ ನಡೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿ. ಶ್ರೀರಂಗಮಹಾಗುರುಗಳು `ಭಾರತೀಯಮಹರ್ಷಿಗಳ ಹೃದಯಭೂಮಿಕೆಯಿಂದ ಮೂಡಿಬಂದ ಹಬ್ಬಗಳ ಆಚರಣೆಯು ಅರ್ಥಹೀನವಲ್ಲ, ಇದರಲ್ಲಿ ವೈಜ್ಞಾನಿಕನೋಟವುಂಟು' ಎಂಬ ಮರ್ಮವನ್ನು ತಿಳಿಸಿಕೊಟ್ಟ ಮಹಾಯೋಗಿಗಳು.  ಈ ವಿಜ್ಞಾನವನ್ನರಿತು ಶ್ರದ್ಧೆಯಿಂದ  ಉತ್ತಾನದ್ವಾದಶೀಪೂಜೆಯನ್ನು ಆಚರಿಸಿ ಧನ್ಯರಾಗೋಣ.

ಸೂಚನೆ: 24/11/2023 ರಂದು ಈ ಲೇಖನ ವಿಜಯವಾಣಿಯ ಚಿಂತನ ದಲ್ಲಿ ಪ್ರಕಟವಾಗಿದೆ.

ದೇವತೆಗಳ ಸ್ವರೂಪ-ಸ್ವಭಾವ-ಕೃತ್ಯ (Devategala Svarupa-Svabhava-Krtya)

(ಪ್ರತಿಕ್ರಿಯಿಸಿರಿ lekhana@ayvm.in)


ದೇವತೆಗಳು ಸಹಜವಾಗಿಯೇ ಸೌಂದರ್ಯಪೂರ್ಣರು. ಪ್ರಕಾಶಮಯರಾದವರು. ದೇವತೆ ಎಂಬ ಪದವೇ ದಿವ್ (=ಪ್ರಕಾಶ) ಧಾತುವಿನಿಂದ ಉತ್ಪನ್ನವಾಗಿದೆ. ಸರ್ವಾಭರಣಗಳಿಂದ ಭೂಷಿತರಾದವರು. ರತ್ನಖಚಿತವಾದ ಕಿರೀಟವನ್ನು ಧರಿಸಿದವರು. ಆಯುಧಗಳನ್ನು ಧರಿಸಿ ಕಂಗೊಳಿಸುತ್ತಿರುವವರು - ಇಂದ್ರನಿಗೆ ವಜ್ರಾಯುಧವಾದರೆ ಯಮನಿಗೆ ಪಾಶ. ಅವರದೇ ಆದ ವಾಹನಗಳನ್ನು ಆರೋಹಣ ಮಾಡಿರುವವರು. ಉದಾಹರಣೆಗೆ ವಿಷ್ಣುವು ಗರುಡವಾಹನನಾದರೆ ಪರಶಿವನು ವೃಷಭವಾಹನ. ಕುಮಾರಸ್ವಾಮಿಯ ವಾಹನ, ಮಯೂರ. ಮಹಿಷಾಸುರಮರ್ದಿನಿಯು ಸಿಂಹವಾಹಿನೀ.

 ದೇವತೆಗಳು ಭಗವಂತನಿಂದ ಅವನ ಕೆಲಸಕ್ಕಾಗಿ ನೇಮಿಸಲ್ಪಟ್ಟವರು. ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಜಗತ್ತು ಅವನ ಸಂಕಲ್ಪದಂತೆ ಮುಂದೆ ಸಾಗಬೇಕು; ಅದಕ್ಕೆ ರಕ್ಷಣೆಯನ್ನು ಕೊಡುವವರು ಬೇಕು.  ದೇಶದ ರಕ್ಷಣೆಗೆ ಸಿಪಾಯಿಗಳನ್ನು ನೇಮಿಸುವಂತೆ, ಭಗವಂತನು ಸೃಷ್ಟಿಯ ರಕ್ಷಣೆಗೆ ದೇವತೆಗಳನ್ನು ನೇಮಿಸಿದ್ದಾನೆ. ಆತನ ಸಂಕಲ್ಪಕ್ಕನುಗುಣವಾಗಿ ಧರ್ಮದ ರಕ್ಷಣೆ-ಪಾಲನೆಗಳನ್ನೇ ಧ್ಯೇಯವಾಗಿಟ್ಟುಕೊಂಡು ವಿಶ್ವವನ್ನು ಮುನ್ನಡೆಸುವುದೇ ದೇವತೆಗಳ ಮಹತ್ಕಾರ್ಯ. ಇಂತಹ ಧರ್ಮಸೇತುವಿನ ಸಂರಕ್ಷಣೆ, ತನ್ಮೂಲಕ ನಮ್ಮಗಳ ರಕ್ಷಣೆಯೇ ದೇವತೆಗಳ ಮುಖ್ಯಕರ್ತವ್ಯ. ಸೃಷ್ಟಿ-ಸ್ಥಿತಿ-ಲಯ ಕಾರ್ಯಗಳನ್ನು ಮಾಡುವವರು ತ್ರಿಮೂರ್ತಿಗಳಾದರೆ ಅವರಿಗೆ ಸಹಾಯಕರಾಗಿ ಆ ವ್ಯವಸ್ಥೆಯು ಕೆಡದಂತೆ ರಕ್ಷಿಸುವವರು ಈ ದೇವತೆಗಳು. ಸೃಷ್ಟಿ-ಸ್ಥಿತಿ-ಲಯಗಳಿಗೆ ಸಂಬಂಧಪಟ್ಟಂತೆ ಕರ್ತವ್ಯಗಳಲ್ಲಿ ಬೇರೆಬೇರೆ ದೇವತೆಗಳ ನಿಯಮನವಾಗಿದೆ. ಇಡೀ ವಿಶ್ವದ ರಕ್ಷಣೆಯ ಹೊಣೆಗಾರಿಕೆ ಇರುವುದರಿಂದಲೇ ಅವರ ಸಂಖ್ಯೆಯೂ ಅಪಾರವಾದದ್ದಾಗಿದೆ. 

ದೇವತೆಗಳು ಮಹಾಬಲಿಷ್ಠರು ಹಾಗೂ ಧರ್ಮಿಷ್ಠರು.  ಅವರು ಯಜ್ಞಪ್ರಿಯರು ಎಂಬುದಾಗಿ ಪುರಾಣಗಳು ಸಾರುತ್ತವೆ. ಅವರು ಯಜ್ಞಗಳನ್ನು  ಮಾಡುವವರು ಹಾಗೂ ಮನುಷ್ಯರು ಮಾಡುವ ಯಜ್ಞಗಳಲ್ಲಿ ಹವಿಸ್ಸನ್ನು ಸ್ವೀಕಾರ ಮಾಡುವವರಾಗಿದ್ದಾರೆ. ದೇವತೆಗಳ ಮತ್ತೊಂದು ವಿಶೇಷ ಗುಣವೆಂದರೆ ಇವರೆಲ್ಲರೂ ಸತ್ಯಪ್ರಿಯರು. ಇಂತಹ ಸದ್ಗುಣಸಂಪನ್ನರಾದ್ದರಿಂದಲೇ ಇವರುಗಳು ವಿಷ್ಣುವಿಗೆ ಅತ್ಯಂತ ಪ್ರಿಯರಾದವರು.  ತನ್ನ ಸೃಷ್ಟಿ-ಸ್ಥಿತಿ ಕಾರ್ಯಗಳಲ್ಲಿ ನೆರವಾಗುವ ದೇವತೆಗಳಿಗೆ ಆತನು ಸಕಾಲದಲ್ಲಿ ಸಹಾಯವನ್ನು ಮಾಡುತ್ತಾನೆ. 

ದೇವತೆಗಳು ತ್ರಿಗುಣಗಳಲ್ಲಿ ಓಡಾಡುವವರಾದರೂ ಸಾತ್ತ್ವಿಕರು, ಸತ್ತ್ವಗುಣ ಪ್ರಧಾನರು. ಕೆಲವೊಮ್ಮೆ ರಜಸ್-ತಮೋಗುಣಗಳಿಗೆ ಕಾಲಿಟ್ಟಾಗ ಅವು ಅವರನ್ನೂ ಎಳೆದು ಜಾರಿಸಿಬಿಡಬಹುದು. ದೇವರಾಜನಾದ  ಇಂದ್ರನೇ ಈ ಗುಣಗಳಿಗೆ ವಶನಾಗಿ ಬಿಡುತ್ತಿದ್ದುದೂ ಉಂಟು. ಇಂದ್ರನು ಕಾಮಕ್ಕೆ ವಶನಾಗಿ ಅಹಲ್ಯೆಯ ವಿಷಯದಲ್ಲಿ ದುಡುಕಿ, ಗೌತಮರ ಶಾಪಕ್ಕೆ ಗುರಿಯಾದ ಕಥೆಯು ಸುಪ್ರಸಿದ್ಧವಾಗಿದೆ. ಆತನು ಕ್ರೋಧಕ್ಕೆ ವಶನಾಗಿ ಅವನ ವಜ್ರಾಯುಧವನ್ನು ಋಷಿಗಳ ಮೇಲೂ ಪ್ರಯೋಗ ಮಾಡಿರುವುದೂ ಉಂಟು. ಅಹಂಕಾರಕ್ಕೆ ತುತ್ತಾದ ನಹುಷನು ಮುನಿಗಳ ಶಾಪದಿಂದ ಸರ್ಪವಾದದ್ದು ಸರ್ವವಿದಿತ. ಆದರೆ ರಜೋಗುಣ ಸರ್ವಥಾ ತ್ಯಾಜ್ಯ ಎಂದೇನಲ್ಲ. ಏಕೆಂದರೆ ಅಧರ್ಮವನ್ನು ಮೆಟ್ಟುವ ಸಂದರ್ಭದಲ್ಲಿ ಅಸುರರ ಮೇಲೆ ಯುದ್ಧವನ್ನು ಮಾಡಲೋಸುಗ ರಜೋಗುಣಕ್ಕೆ ಇಳಿಯಲೇಬೇಕು. ಇಷ್ಟಿದ್ದರೂ ದೇವತೆಗಳು ಸಾತ್ತ್ವಿಕರು, ಸತ್ಯಪ್ರಿಯರು ಎನ್ನುವುದನ್ನು ಗಮನಿಸಬೇಕು.

  ದಿವ್ಯಲೋಕವಾದ ಸ್ವರ್ಗಲೋಕವೇ ದೇವತೆಗಳ ವಾಸಸ್ಥಾನ. ಇಡೀ ವಿಶ್ವವನ್ನೇ, ಅದರ ಧರ್ಮವನ್ನೇ  ಸಂರಕ್ಷಿಸುವ ಭಾರ ಅವರದು. ಉದಾಹರಣೆಗೆ, ಮನುಷ್ಯ-ವೃಕ್ಷ-ವನಸ್ಪತಿಗಳ ಸೃಷ್ಟಿ-ಸ್ಥಿತಿಗಳಿಗೆ ಬೇಕಾದ ಮಳೆ ಗಾಳಿಗಳನ್ನೂ, ಆಹಾರವನ್ನೂ ದಯಪಾಲಿಸುವ ಮಹಾಶಕ್ತಿಗಳೇ ವರುಣ, ವಾಯು ಮುಂತಾದ ದೇವತೆಗಳು.  ಆದ್ದರಿಂದಲೇ ದೇವತೆಗಳು ನಮಗೆ ಅತ್ಯಂತ ಪೂಜ್ಯರಾದವರು. ನಾವು ಅವರನ್ನು ಚೆನ್ನಾಗಿ ಪೂಜಿಸಿ-ಗೌರವಿಸಿದರೆ ಅವರು ನಮ್ಮನ್ನು ಚೆನ್ನಾಗಿ ಪೋಷಿಸುತ್ತಾರೆ. "ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯತ".  ಆದರೆ ನಮ್ಮಲ್ಲಿ ವ್ಯತಿರಿಕ್ತವಾದ ನಡೆ, ಅವರ ಕಾರ್ಯನಿರ್ವಹಣೆಗೆ ಅಡ್ಡಿಮಾಡುವಂತಹ ನಡೆ ಕಂಡುಬಂದಲ್ಲಿ ಸಾತ್ತ್ವಿಕರಾದರೂ ಇವರು ಕುಪಿತರಾಗುತ್ತಾರೆ. ಉದಾ: ಪ್ರಕೃತಿಯನ್ನು ನಮ್ಮ ಅವಿವೇಕದಿಂದ ಕೆಡಿಸಿ  ಪರಿಸರವನ್ನು ಹಾಳು ಮಾಡಿ ವಾಯುಮಾಲಿನ್ಯವನ್ನು ಏರ್ಪಡಿಸಿದಾಗ ಇವುಗಳ ಹಿಂದಿರುವ ದೇವತಾ ಶಕ್ತಿಗಳು ಕುಪಿತರಾಗಿ ನಮ್ಮ ಮೇಲೆ ಆಕ್ರಮಣ ಮಾಡುವುದುಂಟು. ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ ಮುಂತಾದ ಅನಾಹುತಗಳು ಸಂಭವಿಸುವುವು. ಈ ಅನಾಹುತಗಳಿಗೆ ಆಧುನಿಕ ವಿಜ್ಞಾನವು ಭೌತಿಕವಾದ ಕಾರಣಗಳನ್ನು ತೋರಿಸಿ ವಿವರಿಸಬಹುದು. ಆದರೆ ವಿಶೇಷವಾದ ಯೋಗದೃಷ್ಟಿಯಿಂದ ನೋಡಿದಾಗ ಭೌತಿಕಕ್ಕೆ ಹಿಂದೆ ಆಡುವ ದೇವತಾಶಕ್ತಿಗಳ ಪ್ರಕೋಪವನ್ನು ಅರಿಯಬಹುದಾಗಿದೆ. 

ದೇವತೆಗಳು ಅಸುರರಿಂದ ತಮ್ಮ ರಾಜ್ಯವನ್ನು ಸಂರಕ್ಷಿಸಿಕೊಳ್ಳಬೇಕು, ಮತ್ತು ಭೂಲೋಕದಲ್ಲಿನ  ಮನುಷ್ಯರು ತಮ್ಮ ಧಾರ್ಮಿಕ ಕರ್ಮಗಳನ್ನು ತಂಗುತಡೆಯಿಲ್ಲದೆ ನಿರ್ವಹಿಸಲು ಸಹಾಯಕರಾಗಿರಬೇಕು.  ಇದೂ ದೇವತೆಗಳ ಕೆಲಸವೇ. ದೇವತೆಗಳು ಸಾಮಾನ್ಯವಾಗಿ ಯಾರ ತಂಟೆಗೂ ಹೋಗದವರು, ಸಾತ್ತ್ವಿಕರು. ಆದರೆ ಇದಕ್ಕೆ ವ್ಯತಿರಿಕ್ತವಾದ ಸ್ವಭಾವದವರಾದ ಅಸುರರಿಗೂ ಮತ್ತು ಸಾತ್ತ್ವಿಕರಾದ ದೇವತೆಗಳಿಗೂ ಆಗಾಗ  ಘರ್ಷಣೆಗಳು ನಡೆಯುತ್ತಲೇ ಇರುವುದು. ದೇವಾಸುರರ ಸಮರದಲ್ಲಿ ಎಂದೆಂದಿಗೂ ದೇವತೆಗಳಿಗೇ ಜಯವೆಂಬ ನಿಯಮವೇನಿಲ್ಲ. ಅಸುರರಿಂದ ಸೋಲನ್ನಪ್ಪಿದ ಪ್ರಸಂಗಗಳನೇಕ. ಇಂದ್ರಾದಿ ಸಕಲ ದೇವತೆಗಳೂ ಹಿರಣ್ಯಕಶಿಪು, ಬಲಿಚಕ್ರವರ್ತಿಯೇ ಮುಂತಾದವರಿಂದ ಸೆರೆಹಿಡಿಯಲ್ಪಟ್ಟ ಕಥೆಗಳೂ ವಿರಳವೇನಲ್ಲ. ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿ ಸಾಕ್ಷಾತ್ ವಿಷ್ಣುವನ್ನು ಮೊರೆಹೊಕ್ಕು ಸಹಾಯ ಪಡೆದು ಜಯವನ್ನು ಗಳಿಸಿ ಸಂರಕ್ಷಿಸಲ್ಪಡುತ್ತಾರೆ.

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 25/11/2023 ರಂದು ಪ್ರಕಟವಾಗಿದೆ.

Monday, November 20, 2023

ಅಷ್ಟಾಕ್ಷರೀ​ - 48 ಮೋಕ್ಷಮಾರ್ಗಂ ನಿಗಚ್ಛತಿ (Astakshara Darshana 48 Mokshamargam Nigacchati)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಹಾಡು-ಕುಣಿತಗಳೆಂದರೆ ಮೋಜಿಗೆ ಪರ್ಯಾಯವೆಂದೇ ಕಾಣುವುದುಂಟು. ದೊಡ್ಡದನ್ನೇನೋ ಸಾಧಿಸಿದಲ್ಲಿ, ಅಥವಾ ತನ್ನ ಶತ್ರುವಿಗೋ ಪ್ರತಿದ್ವಂದ್ವಿಗೋ ಪ್ರಬಲವಾದ ಪ್ರಹಾರಕೊಟ್ಟಿದ್ದಲ್ಲಿ, ಅದರ ವಿಜೃಂಭಣೆಗಾಗಿ ಹಾಡುಕುಣಿತಗಳನ್ನು ಮಾಡುವುದುಂಟು.

ಯಾವುದನ್ನಾದರೂ ತೀರಾ ಅತಿರೇಕಕ್ಕೊಯ್ದು, ಕಿರಿಕಿರಿಯಾಗುವಂತೆ ವರ್ತಿಸಿದಲ್ಲಿ, ಮಾತಾಡಿದಲ್ಲಿ, ಅದನ್ನು ಬಣ್ಣಿಸಲು ಇಂಗ್ಲಿಷಿನಲ್ಲಿ, ಹಾಡು-ಕುಣಿತಗಳನ್ನು ಮಾಡುವುದೆಂಬರ್ಥದ ಪದಗುಚ್ಛವನ್ನು ಬಳಸುತ್ತಾರೆ (make a song and dance about something).

ಹಾಡೆಂದರೆ ಇಂಪಾದ ಧ್ವನಿಗಳನ್ನು ಮಾಡುವುದು, ಕುಣಿತವೆಂದರೆ ಕಣ್ಣುಗಳಿಗೆ ರಂಜಕವಾದ ಬಗೆಯಲ್ಲಿ ಅಂಗಗಳ ಚಲನ-ವಲನಗಳನ್ನು ಮಾಡುವುದು - ಎಂಬುದು ಜನಸಾಮಾನ್ಯರ ಅಭಿಪ್ರಾಯ. (ಚಲನ-ವಲನಗಳು ಬೇರೆ ಬೇರೆ. ಚಲನವೆಂದರೆ ಮುಂದಕ್ಕೋ ಹಿಂದಕ್ಕೋ ಹೋಗುವುದು; ವಲನವೆಂದರೆ ಅಕ್ಕಕ್ಕೋ ಪಕ್ಕಕ್ಕೋ ತಿರುಗುವುದು). ಹೀಗೆ ಹಾಡು-ಕುಣಿತಗಳು ಕಿವಿ-ಕಣ್ಣುಗಳಿಗೆ ಸಂತೋಷವನ್ನುಂಟುಮಾಡತಕ್ಕವು.

ಗಾನವೆಂಬುದೇ ಸಂತೋಷಕರವಾದರೂ, ವಾದ್ಯದೊಂದಿಗೆ ಸೇರಿದಾಗ ಅದರ ಸಂತೋಷವು ಇನ್ನೂ ಹೆಚ್ಚಿನದೇ. ಗದ್ಯ-ಪದ್ಯಗಳ ಸೇರ್ಪಡೆಯು ಗೀತ-ವಾದ್ಯಗಳ ಜೋಡಣೆಯಂತೆ, ಎನ್ನುತ್ತಾನೆ, ಸಂಸ್ಕೃತಕವಿಯೊಬ್ಬ. ಗೀತ-ವಾದ್ಯ-ನೃತ್ಯಗಳು ಮೂರೂ ಮೇಳೈಸಿದಾಗಲೇ ಸಂಗೀತವೆಂದು ಶಾಸ್ತ್ರವು ಹೇಳುವುದು. ಗಾನವೂ ನಾಟಕವೂ ಸೇರಲಾರದೆಂದು ಟಾಲ್ಸ್ಟಾಯನ ಅಭಿಪ್ರಾಯ. ಆದರೆ, ಭರತನಿಂದ ಆರಂಭಿಸಿ ಈಚಿನವರೆಗೂ (ಎಂದರೆ, ಪಾಶ್ಚಾತ್ತ್ಯರ ಪ್ರಭಾವ ಬೀಳುವವರೆಗೂ) ಗಾನವಿಲ್ಲದ ನಾಟಕವೇ ಇದ್ದುದಿಲ್ಲ.

ಒಬ್ಬರು ಚೆನ್ನಾಗಿ ಹಾಡಿದಾಗ, ಅದನ್ನು ಆಲಿಸಿ ಸಂತೋಷಿಸಿದವರಿಗೆ ತಾವೂ ಹಾಡಬೇಕೆಂಬ ಸ್ಫೂರ್ತಿ ಬರುವುದೂ ಅಪರೂಪವೇನಲ್ಲ. "ಸುಮ್ಮನೆ ಆಸೆಪಟ್ಟುಬಿಟ್ಟವರಿಗೆಲ್ಲಾ ಸಂಗೀತವು ಸಿಕ್ಕಿಬಿಡುವುದಲ್ಲ; ಹಾಡು ಎಂಬುದು ರಕ್ತದಲ್ಲೇ ಬಂದಿರಬೇಕು" – ಎಂಬ ಮಾತನ್ನು ಕೇಳಿ, ಒಬ್ಬಳು ವೈದ್ಯರ ಬಳಿಗೆ ಹೋಗಿ ಕೇಳಿಕೊಂಡಳಂತೆ: ಸಂಗೀತವು ಸಹಜವಾಗಿ ಬರುವಂತಹ ರಕ್ತವನ್ನು ನನ್ನ ಮೈಗೆ ತುಂಬಿಸಿ" ಎಂದು. ಶೂದ್ರಕಕವಿಯ ಮೃಚ್ಛಕಟಿಕನಾಟಕದಲ್ಲಿಯ ಶಕಾರನ ಮಾತನ್ನೊಮ್ಮೆ ಸ್ಮರಿಸಬಹುದು: "ನಾನು (ಇಂಗಿನ ಒಗ್ಗರಣೆಯಲ್ಲಿ ಬೇಯಿಸಿದ) ಕೋಗಿಲೆಯ ಮಾಂಸವನ್ನು ತಿಂದಿರುವೆ; ನನಗೆ ಸಂಗೀತವು ಬರುವುದಿಲ್ಲವೆಂದರೇನು?!"

ಬಾಯಲ್ಲಿ ಹಾಡುವುದಕ್ಕೆ ಜೊತೆಯಾಗಿ ಚಪ್ಪಾಳೆಯ ತಾಳವೆಂದು ಆರಂಭವಾಗಿ ತಾಳವಾದ್ಯಗಳು ಹುಟ್ಟಿಕೊಂಡಿರಬಹುದೆಂದು ಊಹಿಸಲಾಗಿದೆ. ಈವರೆಗೆ ದೊರೆತಿರುವ ವಾದ್ಯಗಳಲ್ಲಿ ಮೊಟ್ಟಮೊದಲನೆಯದೆಂದರೆ ಸುಮಾರು ನಲವತ್ತು ಸಾವಿರವರ್ಷಗಳಿಗೂ ಹಿಂದಿನದಾದ ಕೊಳಲಂತೆ. ಯಾವ ವಾದ್ಯವು ಮೊದಲು ಬಂದದ್ದು, ಯಾವುದಾಮೇಲೆ? - ಎಂಬುದನ್ನು ಲೆಕ್ಕಹಾಕಲಾಗದು. ಏಕೆಂದರೆ, ಇದಕ್ಕೆ ಕಾರಣವಾದರೂ, ವಾದ್ಯಗಳಿಗಾಗಿ ಬಳಸಲಾಗಿರುವ ದ್ರವ್ಯಗಳೆಂದರೆ ಮರ-ಮೂಳೆ-ಪ್ರಾಣಿಚರ್ಮ - ಮುಂತಾದವು; ಮತ್ತು ಇವಾದರೂ ದೀರ್ಘಕಾಲ ಮಣ್ಣಿನಲ್ಲಿದ್ದರೆ ಕರಗಿಹೋಗಬಲ್ಲವು (ಬಯೋಡೀಗ್ರೇಡಬಲ್).

ಇನ್ನು ನಮ್ಮ ದೇಶದ ವಾದ್ಯಗಳ ಬಗ್ಗೆ ಹೇಳುವುದಾದರೆ, ವೈದಿಕಸಾಹಿತ್ಯದಲ್ಲೇ ವಾದ್ಯಗಳ ಉಲ್ಲೇಖವಿದೆ. ವಿಶೇಷವಾಗಿ, ವೀಣೆಯ ಉಲ್ಲೇಖವಿದೆ. ವೀಣೆಯೆಂಬುದು ವಾದ್ಯಗಳಲ್ಲಿ ಬಹಳ ಕಷ್ಟವಾದದ್ದೇ. ಏಕೆ? ಕಿಂಚಿತ್ತಾಗಿ ಅಪಸ್ವರ ಬಂತೆಂದರೂ ಅದು ಎದ್ದುಕಾಣುವುದು; ಅದರಿಂದಾಗಿ ಅಪಹಾಸ್ಯಕ್ಕೀಡಾಗುವುದೂ ಸುಲಭ. ವೀಣೆ ನುಡಿಸುವುದರಲ್ಲಿ ಒಂದು ಒಳ್ಳೆಯ ಸಾಮರ್ಥ್ಯವನ್ನು ಸಂಪಾದಿಸಿದವನೇ "ಪ್ರವೀಣ". (ಇದೇ ಪದದ ವಿಸ್ತೃತಾರ್ಥವಾಗಿಯೇ, ಯಾವುದೇ ಕೆಲಸದಲ್ಲಿ ತುಂಬ ನಿಷ್ಣಾತನಾದವನನ್ನೂ ಪ್ರವೀಣನೆನ್ನುವುದು).

ಆದರೆ ಬೇರೊಂದು ಕಾರಣಕ್ಕಾಗಿ ವೀಣೆಯನ್ನು ನುಡಿಸುವುದರ ಹಿರಿಮೆಯನ್ನು ಕೊಂಡಾಡುತ್ತದೆ, ಯಾಜ್ಞವಲ್ಕ್ಯಸ್ಮೃತಿ. ವೀಣಾವಾದನದ ತತ್ತ್ವವನ್ನು ಬಲ್ಲವನು ಮೋಕ್ಷವನ್ನು ಹೊಂದುತ್ತಾನೆ ಎಂಬ ಮಾತು ಅಲ್ಲಿ ಬರುತ್ತದೆ.

ಎಲ್ಲಿಯ ಮನರಂಜನೆ, ಎಲ್ಲಿಯ ಮೋಕ್ಷ? - ಎಂಬ ಪ್ರಶ್ನೆಯು ಬರಬಹುದು. ಭಾರತೀಯ ಕಲೆಗಳ ಸೊಬಗೇ ಇದು. ಗಾನಪ್ರಧಾನವಾದ ವೇದವೆಂದರೆ ಸಾಮವೇದ; ಸಾಮವೇದಕ್ಕೆ ಸೇರಿದ ಉಪನಿಷತ್ತು ಛಾಂದೋಗ್ಯೋಪನಿಷತ್ತು; ಅದರಲ್ಲಿ ವೀಣಾಗಾನದ ಮರ್ಮವನ್ನು ಹೇಳಿದೆ. ವೀಣೆಯೊಂದಿಗೆ ಸಾಮಗಾನವನ್ನು ಮಾಡುವಾಗ ದೇವಕಾಮ-ಮನುಷ್ಯಕಾಮಗಳೆರಡನ್ನೂ ಪಡೆಯುವುದನ್ನು ಹೇಳಿದೆ. ಹೀಗಾಗಿ ಭಗವತ್ಪ್ರೀತಿ-ಇಂದ್ರಿಯತುಷ್ಟಿಗಳೆರಡೂ ಸೇರುವೆಡೆಯಿದಾಗಿದೆ.

ಸಂಗೀತವಿದ್ಯೆಯ ಸಾರವನ್ನರಿತವರಾಗಿದ್ದ ಶ್ರೀರಂಗಮಹಾಗುರುಗಳು, ಅಪ್ರಯಾಸದಿಂದ - ಎಂದರೆ ಹೆಚ್ಚು ಶ್ರಮವೆಂಬುದೇ ಇಲ್ಲದೆ - ಮೋಕ್ಷಮಾರ್ಗವನ್ನು ಹೊಂದುವ ಸಾಧನವಾಗಿ ವೀಣೆಯ ತತ್ತ್ವವನ್ನು ನಿರೂಪಿಸಿದ್ದರು. "ಸವಿದ ಹಣ್ಣಿನ ಚಿತ್ರ ನೋಡಿದರೆ ಸವಿ ಬರುತ್ತದೆ" ಎಂಬ ಸೂತ್ರವನ್ನು ಹೇಳಿ, ದೈವಭಾವದ ಉದ್ಬೋಧವು ಆಗುವ ಬಗೆಯನ್ನು ತಿಳಿಸಿದ್ದಾರೆ. "ದೈವೀವೀಣೆಯನ್ನು ಹೋಲುವ ವೀಣೆಯಿದಾಗಿದೆ, ಇದರ ದರ್ಶನ-ಸ್ಪರ್ಶನಗಳೂ ಪಾಪಹರ" ವೆಂದು ಜ್ಞಾಪಿಸಿ, ಯಾಜ್ಞವಲ್ಕ್ಯರ ಈ ಮಾತನ್ನು ಉಲ್ಲೇಖಿಸಿದ್ದಾರೆ.

ಧರ್ಮಶಾಸ್ತ್ರ-ಅರ್ಥಶಾಸ್ತ್ರಗಳನ್ನೂ ಯೋಗವಿದ್ಯೆ- ಗಾನವಿದ್ಯೆಗಳನ್ನೂ ಬಲ್ಲ ಯಾಜ್ಞವಲ್ಕ್ಯಮಹರ್ಷಿಗಳ ಜಯಂತಿ ಇಂದು. ಅಂತಹ  ಮಹಾತ್ಮರನ್ನು ಇಂದು ಸ್ಮರಿಸಿ ವಂದಿಸೋಣ.

ಸೂಚನೆ: 19/11/2023 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ - 63 ಮರ್ತ್ಯರು ಅಮರ್ತ್ಯರಾಗಿದ್ದ ಸಂನಿವೇಶ (Vyaasa Vikshita - 63 Martyaru Amartyaragidda Samnivesha)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ತನ್ನ ಮಾತನ್ನು ಮುಂದುವರೆಸುತ್ತಾ ಯುಧಿಷ್ಠಿರನು ಹೇಳಿದನು:  ಧರ್ಮವನ್ನು ಬಲ್ಲವರಲ್ಲಿ ಅತ್ಯಂತ ಶ್ರೇಷ್ಠರಾದ ವ್ಯಾಸರೇ, ಮತ್ತೂ ಒಂದು ವಿಷಯ. ಗುರುಗಳ ಮಾತು ಧರ್ಮ್ಯವಾದದ್ದು (ಯಾವುದು ಧರ್ಮದಿಂದ ಕೂಡಿರುವುದೋ ಅದನ್ನೇ "ಧರ್ಮ್ಯ"ವೆನ್ನುವುದು); ಹಾಗೂ ಗುರುಗಳೆಲ್ಲರಲ್ಲಿ  ತಾಯಿಯೇ ಪರಮಗುರುವೆನಿಸುವಳು. ಅಂತಹ ತಾಯಿ ಹೇಳಿದುದೂ, "ಭಿಕ್ಷೆಯನ್ನು ಹೇಗೋ ಹಾಗೆ ಎಲ್ಲರೂ ಸೇವಿಸಿರಿ" - ಎಂಬುದಾಗಿ. ಆದ್ದರಿಂದ ಇದುವೇ ಶ್ರೇಷ್ಠಧರ್ಮವೆಂಬುದಾಗಿ ನಾನು ಭಾವಿಸುತ್ತೇನೆ - ಎಂದು.


ಆಗ ಕುಂತಿಯು, "ಧರ್ಮದಲ್ಲಿಯೇ ನಡೆಯುವವನು ಯುಧಿಷ್ಠಿರ. ಅವನೀಗ ಏನು ಹೇಳಿದನೋ ಅದು ವಾಸ್ತವವೇ. ನಾನು ಬಹಳ ಹೆದರುವುದೇ ಅನೃತಕ್ಕೆ. ನಾನು ಅನೃತದಿಂದ ಬಿಡುಗಡೆ ಹೊಂದುವುದು ಹೇಗೆಂಬುದೇ ನನ್ನ ಚಿಂತೆ" – ಎಂದಳು.


ಎಲ್ಲರ ಮಾತುಗಳನ್ನು ಆಲಿಸಿದ ವ್ಯಾಸಮಹರ್ಷಿಗಳು ಹೇಳಿದರು: ಮಂಗಳಕರಳೇ, ನೀನು ಅನೃತದಿಂದ ಬಿಡುಗಡೆ ಹೊಂದುತ್ತೀಯೆ. ಇದಕ್ಕೆ ಸಂಶಯವಿಲ್ಲ. ಆದರೆ ಇದನ್ನು ಎಲ್ಲರೆದುರಿಗೆ ಹೇಳಲಾರೆ. ನೀನೇ ಸ್ವತಃ (ಎಂದರೆ ಏಕಾಂತದಲ್ಲಿ) ಇದನ್ನು ಕೇಳು. ಯುಧಿಷ್ಠಿರನು ಇದನ್ನು ಹೇಳಿರುವುದು ಸಹ ಧರ್ಮವೇ ಆಗಿದೆ. ಇದರಲ್ಲಿ ಸಂಶಯವಿಲ್ಲ.


ಹೀಗೆಂಬುದಾಗಿ ಹೇಳಿ ಶ್ರೇಷ್ಠನಾದ ಪೂಜ್ಯ ವ್ಯಾಸರು ಎದ್ದುನಿಂತರು. ದ್ರುಪದರಾಜನ ಕೈಯನ್ನು ಹಿಡಿದು ರಾಜಭವನವನ್ನು ಪ್ರವೇಶಿಸಿದರು. ಪ್ರಕೃತ, ಪಾಂಡವರು ಏಕಪತ್ನಿಯನ್ನು ಹೊಂದುವುದು ಹೇಗೆ ಧರ್ಮವಾದೀತೆಂಬುದನ್ನು ದ್ರುಪದನಿಗೆ ತಿಳಿಹೇಳಿದರು.


ವ್ಯಾಸರು ಹೇಳಿದರು - ರಾಜನೇ, ಹಿಂದೆ ನಡೆದುದರ ಮಾತಿದು. ನೈಮಿಷಾರಣ್ಯದಲ್ಲಿ ದೇವತೆಗಳು ಒಂದು ಯಜ್ಞವನ್ನು ಮಾಡುತ್ತಿದ್ದರು. ಸೂರ್ಯಪುತ್ರನಾದ ಯಮನು ಅಲ್ಲಿ ಯಜ್ಞವನ್ನು ನೆರವೇರಿಸುತ್ತಿದ್ದನು. ಯಮನು ಆ ಯಜ್ಞದಲ್ಲಿ ದೀಕ್ಷಿತನಾಗಿದ್ದರಿಂದ ಪ್ರಜೆಗಳಲ್ಲಿ ಯಾರೊಬ್ಬನನ್ನೂ ಕೊಲ್ಲಲಿಲ್ಲ. ಪ್ರಜೆಗಳ ಮೃತ್ಯುಸಮಯವು ಮುಂದುಮುಂದಕ್ಕೆ ಹೋಗುತ್ತಿದ್ದು, ಜನರು ಸಾವೇ ಕಾಣದಂತಾಗಿ, ಪ್ರಜೆಗಳ ಸಂಖ್ಯೆಯು ಅಧಿಕವಾಗತೊಡಗಿತು. ಆಗ ಇಂದ್ರಾದಿದೇವತೆಗಳು ಕ್ಷೋಭೆಗೊಂಡವರಾಗಿ ಪ್ರಜಾಪತಿಯಿದ್ದಲ್ಲಿಗೆ ಬಂದರು. ತಮಗೆಲ್ಲರಿಗೂ ಉದ್ವೇಗವಾಗಿರುವುದನ್ನು ವಿವರಿಸಿದರು. ಆಗ ಬ್ರಹ್ಮನು - ನೀವುಗಳೆಲ್ಲ ಅಮರರಾಗಿರತಕ್ಕವರು. ನಿಮಗೆಲ್ಲಿಯ ಭಯ, ಮನುಷ್ಯರಿಂದ? - ಎಂದು ಕೇಳಿದನು. ಅದಕ್ಕೆ ದೇವತೆಗಳು, "ಈಗ ಮರ್ತ್ಯರೂ ಅಮರ್ತ್ಯರೇ ಆಗಿಬಿಟ್ಟಿದ್ದು, ನಮಗೂ ಅವರಿಗೂ ಭೇದವಿಲ್ಲದಂತಾಗಿರುವುದೇ ನಮ್ಮ ಆತಂಕಕ್ಕೆ ಕಾರಣವಾಗಿದೆ" - ಎಂದರು.


ಆಗ ಬ್ರಹ್ಮನು ಹೀಗೆ ಹೇಳಿದನು: ಯಜ್ಞಕಾರ್ಯದಲ್ಲಿ ಯಮನು ದೀಕ್ಷಿತನಾಗಿ ಕುಳಿತಿರುವನು. ಎಂದೇ ಮನುಷ್ಯರಿಗೆ ಸಾವಿಲ್ಲವಾಗಿದೆ. ಆತನ ಈ ಕಾರ್ಯವು ಪೂರೈಸಿತೆಂದರೆ ಇವರ ಅಂತಕಾಲವು (ಕೊನೆಗಾಲವು) ಬರುವುದರಲ್ಲಿ ಸಂಶಯವಿಲ್ಲ. ಯಜ್ಞಕಾರ್ಯವು ಮುಗಿದಂತೆ ಯಮನು ಸ್ವಕಾರ್ಯದಲ್ಲಿ ತೊಡಗುವನು. ಅಷ್ಟರಲ್ಲಿ ಮನುಷ್ಯರ ಶಕ್ತಿಯೂ ಕುಂದಿರುವುದು - ಎಂದು.


ಬ್ರಹ್ಮನ ಈ ಮಾತನ್ನು ಕೇಳಿದ ದೇವತೆಗಳು ಅಲ್ಲಿಂದ ಹೊರಟು ದೇವತೆಗಳ ಯಜ್ಞದೆಡೆಗೆ ಬಂದರು. (ಪಕ್ಕದಲ್ಲಿಯೇ ಹರಿಯುತ್ತಿದ್ದ) ಗಂಗೆಯಲ್ಲಿ ಒಂದು ಬಿಳಿಕಮಲವನ್ನು ಕಂಡರು. ಅದನ್ನು ಕಂಡು ಅವರೆಲ್ಲರಿಗೂ ಆಶ್ಚರ್ಯವಾಯಿತು. ಅದನ್ನು ಕಂಡು ಅವರು ವಿಸ್ಮಿತರಾದರು. ಅವರುಗಳಲ್ಲಿ ಶೂರನೆನಿಸಿದ್ದ ಇಂದ್ರನು ಅದೇನೆಂದು ಪತ್ತೆಮಾಡಲು ಹೊರಟನು.


ಗಂಗೆಯು ಸದಾ ಉಕ್ಕುವ ಎಡೆಯ (ಎಂದರೆ ಗಂಗೋತ್ತರಿಯ) ತನಕ ಹೋಗುವುದಾಯಿತು. ಅಲ್ಲೊಬ್ಬ ಸುಂದರಿಯನ್ನು ಕಂಡನು.

ಸೂಚನೆ : 19/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.


ಯಕ್ಷ ಪ್ರಶ್ನೆ 64 (Yaksha prashne 64)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ – 63 ಬ್ರಾಹ್ಮಣನಲ್ಲಿ ಏಕೆ ದಾನವನ್ನು ಮಾಡಬೇಕು ?

ಉತ್ತರ - ಧರ್ಮ ಅಥವಾ ಪುಣ್ಯಪ್ರಾಪ್ತಿಗಾಗಿ  

ಅತ್ಯಂತ ಮುಖ್ಯವಾದ ವಿಷಯ ಧರ್ಮ ಅಥವಾ ಪುಣ್ಯಪ್ರಾಪ್ತಿ. ಅದನ್ನು ಪಡೆಯಲು ಬಹಳ ಮುಖ್ಯವಾದ ಸಾಧನ ಯಾವುದು? ಎಂಬುದು ಯಕ್ಷನ ಪ್ರಶ್ನೆಯಾಗಿದೆ. ಪುಣ್ಯವನ್ನು ಸಂಪಾದನೆ ಮಾಡಬೇಕೆಂದು ಬಯಸುವವರು ಬ್ರಾಹ್ಮಣನಲ್ಲಿ ದಾನವನ್ನು ಮಾಡಬೇಕು ಎಂಬುದು ಉತ್ತರದ ಸ್ವಾರಸ್ಯ. 

ಈ ಉತ್ತರವನ್ನು ಚಿಂತಿಸಬೇಕಾದರೆ ಯಾರು ಬ್ರಾಹ್ಮಣ? ಅವನಲ್ಲೇ ಏಕೆ ದಾನವನ್ನು ಮಾಡಬೇಕು? ದಾನವೇ ಏಕೆ ಪುಣ್ಯಪ್ರಾಪ್ತಿಗೆ ಶ್ರೇಷ್ಠವಾದ ಸಾಧನ? ಎಂಬೆಲ್ಲಾ ಪ್ರಶ್ನೆಗಳು ಇದರ ಹಿಂದೆ ಬರುತ್ತವೆ. ಯಾರ ಜನ್ಮಕ್ಕೆ ಸತ್ತ್ವಗುಣವು ಪ್ರಧಾನವಾಗಿ ಕಾರಣವಾಗಿದೆಯೋ ಅವನು ಬ್ರಾಹ್ಮಣ. ಬ್ರಾಹ್ಮಣನಾಗಿ ಜನ್ಮ ಪಡೆಯುವಂತಹ ಪುಣ್ಯವು ಯಾರಿಂದ ಹಿಂದಿನ ಜನ್ಮದಲ್ಲಿ ಸಂಪಾದಿಸಲ್ಪಟ್ಟಿದೆಯೋ ಅವನು ತಾನೇ ಬ್ರಾಹ್ಮಣ. ಬ್ರಾಹ್ಮಣನಾಗಿ ಹುಟ್ಟಿ ಅದಕ್ಕೆ ಸಲ್ಲುವ ಕಾರ್ಯವನ್ನೂ ಮಾಡಿದರೆ ಆತ ಶ್ರೇಷ್ಠನಾದ ಬ್ರಾಹ್ಮಣನಾಗುವನು. ಶ್ರೇಷ್ಠವಾದ ಬ್ರಾಹ್ಮಣಜನ್ಮದಲ್ಲಿ ಹುಟ್ಟಿ ಅದಕ್ಕೆ ಸಲ್ಲದ ಕಾರ್ಯವನ್ನು ಮಾಡಿದರೆ ಅವನನ್ನು ಪಶುಜನ್ಮಕ್ಕಿಂತಲೂ ಅಥವಾ ಕೀಟಜನ್ಮಕ್ಕಿಂತಲೂ ಕನಿಷ್ಠ ಎಂದೇ ಭಾವಿಸಬೇಕು. ಬ್ರಹ್ಮಜ್ಞಾನವನ್ನು ಪಡೆದ ಅಥವಾ ಅದನ್ನು ಪಡೆಯಲು ತಪಸ್ಸನ್ನು ಮಾಡುವಂತಹ ವ್ಯಕ್ತಿಯು ಶ್ರೇಷ್ಠನೆನಿಸಿಕೊಳ್ಳುತ್ತಾನೆ. ಅಂತಹ ಬ್ರಾಹ್ಮಣ ಮಾತ್ರ ನಿಜವಾದ ಪ್ರತಿಗೃಹೀತಾ- ದಾನವನ್ನು ಸ್ವೀಕರಿಸಲು ಅರ್ಹ. ಅವನಿಗೆ ಕೊಟ್ಟ ದಾನವು ಸದ್ವಿನಿಯೋಗವಾಗುತ್ತದೆ ಎಂದರ್ಥ. ಸತ್ಪಾತ್ರನಲ್ಲಿ ಮಾಡುವ ದಾನವನ್ನು ಉತ್ತಮ ದಾನ ಎಂಬುದಾಗಿ ಹೇಳಿದ್ದಾರೆ. ಯಾವುದೇ ವಸ್ತು ಹಾಳಾಗಬಾರದು, ಅದು ವಿಕಾರವಾಗಬಾರದು, ಆ ವಸ್ತುವನ್ನು ಉತ್ಪಾದನೆ ಮಾಡಿದವನ ಮನೋರಥವನ್ನು ಈಡೇರಿಸುವಂತೆ ಇರಬೇಕು ಎಂಬುದು ಪ್ರತಿಯೊಬ್ಬರ ಬಯಕೆ ತಾನೆ! ಈ ಜಗತ್ತಿನ ಉತ್ಪತ್ತಿಗೆ ಕಾರಣವಾದವುಗಳು ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳು. ಅವುಗಳಲ್ಲಿ ನಿರ್ವಿಕಾರವಾದದ್ದು ಸತ್ತ್ವಗುಣ. ಜನ್ಮಕ್ಕೆ ಕಾರಣವಾದುದು ಸತ್ತ್ವಾದಿ ಮೂರು ಗುಣಗಳು ಮತ್ತು ಕರ್ಮ.

ಈ ಪ್ರಪಂಚವೈವಿಧ್ಯಕ್ಕೆ ಕಾರಣವೇ ಈ ಗುಣ ಮತ್ತು ಕರ್ಮವ್ಯವಸ್ಥೆ. ಮಾವಿನ ಬೀಜದಲ್ಲೇ ಮುಂದೆ ಮಾವಿನ ಮರವಾಗುವ ಎಲ್ಲಾ ಅಂಶಗಳು ಇರುತ್ತವಷ್ಟೇ!. ಬೀಜವಾದಮೇಲೆ ಮಾವನ್ನು ತೆಗೆದು ಇನ್ನಾವುದೋ ಮರವನ್ನು ಅದೇ ಬೀಜದಿಂದ ಬೆಳೆಯಲು ಅಸಾಧ್ಯ ತಾನೇ. ಇಂತಹ ಸೃಷ್ಟಿಸಹಜ ವ್ಯವಸ್ಥೆಯ ಒಂದು ಭಾಗವಾದ ಮಾನವನ ಸೃಷ್ಟಿಯಲ್ಲಿ ಸತ್ತ್ವಗುಣ ಅತಿಶಯವಾಗಿ ಇರುವ ಸೃಷ್ಟಿಯನ್ನು ಬ್ರಾಹ್ಮಣ ಎಂದು ಕರೆದು, ಅದು ನಿರ್ವಿಕಾರವಾದ ಸೃಷ್ಟಿಯಾದ್ದರಿಂದ ಅದನ್ನು ಸತ್ಪಾತ್ರ ಎಂದು ಪರಿಗಣಿಸಿದ್ದಾರೆ ನಮ್ಮ ಋಷಿಗಳು. ಪಾತ್ರ ಸರಿಯಾಗಿ ಇದ್ದರೆ ಮಾತ್ರ ಅದರಲ್ಲಿ ಹಾಕುವ ವಸ್ತುವೂ ನಿರ್ವಿಕಾರವಾಗಿ ಇರಲು ಸಾಧ್ಯ ತಾನೇ! ಈ ವಿಷಯವು ಓತಪ್ರೋತವಾಗಿ ಐಕಮತ್ಯದಿಂದ ವೇದ, ಸ್ಮೃತಿ, ಶಾಸ್ತ್ರ, ಕಾವ್ಯ ಹೀಗೆ ಎಲ್ಲಾ ಸಂಸ್ಕೃತಸಾಹಿತ್ಯದಲ್ಲಿ  ನಿಶ್ಚಯವಾಗಿ ಹೇಳಲ್ಪಟ್ಟಿದೆ. ಈ ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡು ದಾನವನ್ನು ಬ್ರಾಹ್ಮಣನಿಗೇ ಮತ್ತು ಬ್ರಾಹ್ಮಣನಿಗೆ ದಾನವೇ ಧರ್ಮಸಂಪಾದನೆಗೆ ಶ್ರೇಷ್ಠವಾದುದು ಎಂಬುದನ್ನು ನಿರ್ಣಯಿಸಲಾಗಿದೆ. ಪುಣ್ಯಸಂಗ್ರಹಕ್ಕೆ ದಾನದಷ್ಟು ಉತ್ತಮ ಮಾರ್ಗ ಇನ್ನೊಂದಿಲ್ಲ. "ಬ್ರಾಹ್ಮಮನೋಧರ್ಮದಿಂದ ಯಜ್ಞಾರ್ಥವಾಗಿ ದಾನ ತೆಗೆದುಕೊಳ್ಳುವ ಗೃಹಸ್ಥನು ನಿರ್ಲಿಪ್ತನಾಗಿ ತೆಗೆದುಕೊಳ್ಳುತ್ತಾನೆ. ಆ ಪದಾರ್ಥಕ್ಕೆ ಬ್ರಹ್ಮಭಾವವನ್ನು ಕೊಟ್ಟು ತಾನು ನಿರ್ಲಿಪ್ತನಾಗುವುದಕ್ಕೋಸ್ಕರವೇ ದಾನ ತೆಗೆದುಕೊಳ್ಳುತ್ತಾನೆ" ಎಂಬ ಶ್ರೀರಂಗಮಾಹಾಗುರುಗಳ ಈ ಮಾತು ಪ್ರಕೃತ ವಿಷಯವನ್ನು ಅರ್ಥಮಾಡಿಕೊಳ್ಳಲು ನೆರವಾಗುವುದು. ಹಾಗಾಗಿ ಬ್ರಾಹ್ಮಣನಷ್ಟು ಉತ್ತಮ ಪಾತ್ರ ಇನ್ನೊಂದಿಲ್ಲ. ಹಾಗಾಗಿ ಯಾರು ಪುಣ್ಯ, ಧರ್ಮ, ಜನ್ಮ ಇಂತಹ ವಿಷಯಗಳಲ್ಲಿ ನಂಬಿಕೆ ಇಟ್ಟಿದ್ದಾರೋ ಅಂತವರನ್ನು ಉದ್ದೇಶವಾಗಿ ಇಟ್ಟುಕೊಂಡು ವಿವರಿಸಿದ ಧರ್ಮಜನ ಉತ್ತರ ಇದಾಗಿದೆ.

ಸೂಚನೆ : 19/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.   

ದೇವಾಸುರರ ಉಗಮವು ಎಲ್ಲಿಂದ ? (Devasurara Ugamavu Ellinda?)

(ಪ್ರತಿಕ್ರಿಯಿಸಿರಿ lekhana@ayvm.in)


ಪುರಾಣದೃಷ್ಟಿ 

ವೇದ-ಪುರಾಣಗಳಲ್ಲಿ ಬರುವ ದೇವಾಸುರರ ಕಥೆಗಳು ಮನಸ್ಸಿನಲ್ಲೆಬ್ಬಿಸುವ ಗೊಂದಲ-ಸಮಸ್ಯೆಗಳನ್ನು ಹಿಂದಿನ ಲೇಖನದಲ್ಲಿ ಮಂಡಿಸಿದ್ದೆವು. ಹೀಗಾಗಿ ಪುರಾಣದ ಕಥೆಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮೊದಲು ದೇವಾಸುರರ ಬಗೆಗೆ ಒಂದು ನೈಜವಾದ ಕಲ್ಪನೆಯನ್ನು ಪಡೆಯುವ ಪ್ರಯತ್ನವು ಅತ್ಯಾವಶ್ಯಕ.    

ಸೃಷ್ಟಿಗೂ ಪೂರ್ವದಲ್ಲಿ ತಾನೇತಾನಾಗಿದ್ದ ಪರಬ್ರಹ್ಮವು ತನ್ನನ್ನು ತಾನು ವಿಸ್ತಾರಮಾಡಿಕೊಳ್ಳುವ ಸಂಕಲ್ಪಮಾಡಲು ಸೃಷ್ಟಿಯು ಪ್ರಾರಂಭವಾಯಿತು. ಸೃಷ್ಟಿ-ಸ್ಥಿತಿ-ಲಯಕಾರ್ಯಗಳನ್ನು ಮಾಡಲು ಬ್ರಹ್ಮ-ವಿಷ್ಣು-ಮಹೇಶ್ವರರು ತ್ರಿಮೂರ್ತಿಗಳಾಗಿ ಆವಿರ್ಭವಿಸಿದರು. ಬ್ರಹ್ಮಸೃಷ್ಟಿಯಲ್ಲಿ ಎರಡು ವಿಧ: ಸಂಕಲ್ಪಮಾತ್ರದಿಂದಲೇ ಮಾಡುವಂತಹ ಸೃಷ್ಟಿಯು ಸಾಂಕಲ್ಪಿಕೀಸೃಷ್ಟಿ ಎಂದೆನಿಸಿಕೊಳ್ಳುತ್ತದೆ. ಅದರಂತೆ ಬ್ರಹ್ಮನು ತನ್ನ ವಿವಿಧ ಅಂಗಗಳಿಂದ ಸೃಷ್ಟಿಯನ್ನು ಮಾಡಲಾಗಿ ಮನಸ್ಸಿನಿಂದ ಸನಕ-ಸನಂದನಾದಿಗಳೂ, ತೊಡೆಯಿಂದ ನಾರದರೂ, ಅಂಗುಷ್ಠದಿಂದ  ದಕ್ಷನೂ ಉದ್ಭವಿಸಿದರು. ಸನಕಾದಿಗಳು ಬಾಲ್ಯ-ಯೌವನ ಮುಂತಾದ ಅವಸ್ಥಾಭೇದಗಳಿಲ್ಲದೆ ಬ್ರಹ್ಮಪರಾಯಣರಾಗಿ ಸಂಚರಿಸುವವರು. ಇಂತಹ ವಿಚಿತ್ರವಾದ ಸೃಷ್ಟಿ ಮುಂದುವರಿಯಿತು. ಹೀಗೆ ಬ್ರಹ್ಮನ  ಸಂಕಲ್ಪದಿಂದ ಹುಟ್ಟಿದವರು ಅವನ ಮಾನಸಪುತ್ರರು. ಸಪ್ತರ್ಷಿಗಳಾದ ಮರೀಚಿ, ಅತ್ರಿ, ಭೃಗು, ಮುಂತಾದವರೂ ಸಹ ಬ್ರಹ್ಮನ ಮಾನಸಪುತ್ರರು. ಈ ಪ್ರಜಾಪತಿಗಳಿಂದಲೇ ಮುಂದೆ ಪ್ರಜಾಸೃಷ್ಟಿ ಎಂಬುದಾಗಿ ಪುರಾಣಗಳು ಹೇಳುತ್ತವೆ. ಈ ಸೃಷ್ಟಿಯು ಊಹೆಗೂ ನಿಲುಕದ ವಿಚಾರ.  ಇದೊಂದು ಸ್ಥೂಲಪರಿಚಯವಷ್ಟೇ.  

  ಎರಡನೆಯದು ಸಾಂಸರ್ಗಿಕೀಸೃಷ್ಟಿ. ಎಂದರೆ ಸ್ತ್ರೀ-ಪುರುಷರ ಸಂಸರ್ಗದಿಂದ, ಮೈಥುನದಿಂದ  ಆಗುವ ಪ್ರಜೋತ್ಪತ್ತಿ. ಈ ವಿಜ್ಞಾನವನ್ನು ಲೋಕಕ್ಕೆ ತಂದುಕೊಟ್ಟವರು ದಕ್ಷಪ್ರಜಾಪತಿಯೇ. ಮರೀಚಿ ಮಹರ್ಷಿಯಿಂದ ಹುಟ್ಟಿದ ಕಶ್ಯಪರೇ ಈ ಸೃಷ್ಟಿಗೆ ಮೂಲ ಪುರುಷರು. ದಕ್ಷಪ್ರಜಾಪತಿಗೆ ಅನೇಕ ಕನ್ನಿಕೆಯರು. ಅವರಲ್ಲಿ ಅದಿತಿ, ದಿತಿ, ದನು, ವಿನತ, ಕದ್ರು ಮುಂತಾದ ಈತನ 13 ಜನ ಪುತ್ರಿಯರನ್ನು ಕಶ್ಯಪರು ವಿವಾಹ ಮಾಡಿಕೊಳ್ಳುತ್ತಾರೆ. ಕಶ್ಯಪರಿಗೆ ಅದಿತಿಯ  ಮೂಲಕ ಹುಟ್ಟಿದವರೇ ಆದಿತ್ಯರು. ಅವರುಗಳೇ ಸುರರು ಅಥವಾ ದೇವತೆಗಳು. ಅದಿತಿಯ ಮಕ್ಕಳು ದೇವತೆಗಳಾದರೆ, ಕಶ್ಯಪರಿಗೆ ದಿತಿಯಿಂದ ಹುಟ್ಟಿದ ಮಕ್ಕಳು ದೈತ್ಯರು. ಹಾಗೆಯೇ ದನುವಿನ ಮೂಲಕ ಹುಟ್ಟಿದವರು ದಾನವರು. ಅಂತೆಯೇ ಮತ್ತೊಬ್ಬಳಾದ ವಿನತೆಯ ಮೂಲಕ ಅರುಣ ಮತ್ತು ಗರುಡರೂ, ಕದ್ರುವಿನ ಮೂಲಕ ನಾಗರೂ (ಎಂದರೆ ಆದಿಶೇಷ, ಕಾರ್ಕೋಟಕ ಮುಂತಾದವರು) ಜನಿಸಿದರು. ಈ ರೀತಿಯಾಗಿ ಇಡೀ ವಿಶ್ವಸೃಷ್ಟಿಯೆಲ್ಲವೂ ಇವರ ಮೂಲಕವೇ ಆಗಿರುವುದೆಂಬ ಪುರಾಣೋಕ್ತಿಯು  ಗಮನಾರ್ಹ.

 ಈ ಸೃಷ್ಟಿಯನ್ನು ಪ್ರಾಕೃತಸೃಷ್ಟಿ, ವೈಕೃತಸೃಷ್ಟಿ, ದೈವಸೃಷ್ಟಿ ಎಂಬುದಾಗಿಯೂ  ವಿಂಗಡಿಸಿರುವುದುಂಟು. ಪ್ರಕೃತಿಗೆ ಸಂಬಂಧಪಟ್ಟ ಪ್ರಾಕೃತಸೃಷ್ಟಿಯು ಮಹತ್ತು-ಅಹಂಕಾರ- ಪಂಚಭೂತಗಳು-ಪಂಚತನ್ಮಾತ್ರಗಳು ಮತ್ತು ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳ ಸೃಷ್ಟಿಗೆ ಕಾರಣವಾದುದು. ವೈಕೃತಸೃಷ್ಟಿಯು ವಿಶೇಷವಾದ ಸೃಷ್ಟಿ, ವಿಸ್ತಾರವಾದಂತಹ ಸೃಷ್ಟಿ ಎನ್ನುವ ಅರ್ಥದಲ್ಲಿದೆ. ಪ್ರಾಕೃತಸೃಷ್ಟಿಯಂತೆ ಇದು ಜಡವಲ್ಲ, ಜೀವಸಹಿತವಾದದ್ದು. ಅದರಲ್ಲಿ ಸ್ಥಾವರ-ವನಸ್ಪತಿ-ಗಿಡ-ಮರ-ಲತೆಗಳು ಒಂದು ಭಾಗವಾದರೆ ಪ್ರಾಣಿ-ಪಕ್ಷಿ-ಜಂತುಗಳ ಸೃಷ್ಟಿ ಮತ್ತೊಂದು ಭಾಗ. ಅದರಲ್ಲೇ ಮತ್ತೊಂದು ಸೃಷ್ಟಿ ಮನುಷ್ಯ ಜೀವಿಗಳು.  

ದೈವಸೃಷ್ಟಿಯಲ್ಲಿ ಎಲ್ಲ ದೇವತೆಗಳ (ಅದಿತಿಪುತ್ರರ)  ಸೃಷ್ಟಿಯು ಸೇರಿರುವುದು. ದೈತ್ಯರು, ದಾನವರು, ರಾಕ್ಷಸರು (ಇವರೆಲ್ಲರೂ ಅಸುರರು) ಸಹ ದೈವಸೃಷ್ಟಿಗೇ ಸೇರಿದವರು. ಇದಲ್ಲದೇ ಯೋಗಿಗಳು, ಗಂಧರ್ವರು, ಮುಂತಾದವರೂ ದೈವಸೃಷ್ಟಿಗೇ ಸೇರುವರು. ಅಂತೆಯೇ ಭೂತ-ಪ್ರೇತ-ಪಿಶಾಚಿಗಳ ವರ್ಗವೂ ದೈವಸೃಷ್ಟಿಗೆ ಸಂಬಂಧಪಟ್ಟಿರುತ್ತದೆ. ಈ ಸೃಷ್ಟಿಗೆ ಸಂಬಂಧಪಟ್ಟವರು ಸ್ಥೂಲದೃಷ್ಟಿಗೆ ಗೋಚರಿಸುವವರಲ್ಲ. ಅಂದರೆ ಅವರನ್ನು ನೋಡುವ ವಿಧಾನವೇ ಬೇರೆ. 

  ಪಂಚಭೂತಗಳಾದ ಪೃಥ್ವಿ-ಅಪ್-ತೇಜಸ್ಸು-ವಾಯು-ಆಕಾಶಗಳಿಂದ ಸೃಷ್ಟಿಯಾಗಿದೆ ನಮ್ಮ ಶರೀರ. ಆದರೆ ದೇವತೆಗಳ ಶರೀರ ಪಂಚಭೂತಗಳಿಂದ ನಿರ್ಮಾಣವಾದ ಸ್ಥೂಲಶರೀರವಲ್ಲ. ಅವರುಗಳು ಕೇವಲ ತೇಜೋರೂಪರು. ಅವರಿಗೆ ಆಕಾರವುಂಟು, ಪುರುಷಾಕಾರವಾಗಿಯೇ ಕಾಣಿಸುವರು (ಆದರೆ ಹಿಡಿಯಲಾಗುವುದಿಲ್ಲ). ಹೊರಗಣ್ಣಿಗೆ ಗೋಚರವಾಗುವುದಿಲ್ಲ. ವಿಶೇಷವಾದ ಒಳದೃಷ್ಟಿಗೆ ಕಾಣಿಸುವವರು.  ಈ ತೇಜೋರೂಪಿಗಳು ದಿವ್ಯದೃಷ್ಟಿ-ದಿವ್ಯಶರೀರ-ದಿವ್ಯರೂಪದಿಂದ ಪ್ರಕಾಶಿಸುವವರು. ಯೋಗಮಾರ್ಗದಲ್ಲಿ ಸಾಗಿದ ಯೋಗಿಗಳಿಗೆ ಅಂತರ್ದೃಷ್ಟಿಗೆ ಗೋಚರಿಸುವವರು ಎಂದು ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು  ವಿವರಿಸುತ್ತಿದ್ದುದನ್ನು ಸ್ಮರಿಸುತ್ತೇವೆ. 

ಅದಿತಿಯ ಮೂಲಕ ಕಶ್ಯಪರಿಗೆ ಹುಟ್ಟಿದವರು ಇಂದ್ರ-ಸೋಮ-ಸೂರ್ಯ-ಅಗ್ನಿ ಮುಂತಾದ ದೇವತೆಗಳು. ಅವರಲ್ಲಿ ವಿಶೇಷವಾಗಿ ೩೩ ದೇವತೆಗಳು - ಅಷ್ಟ  ವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು, ಇಂದ್ರ  ಮತ್ತು ಪ್ರಜಾಪತಿ. ಈ ಮೂವತ್ತು ಮೂವರ ವಿಸ್ತಾರ ರೂಪವೇ ೩೩ ಕೋಟಿ ದೇವತೆಗಳು. ಈ ದೇವತೆಗಳ ರಾಜ ಇಂದ್ರ. 

ದೈವೀಸೃಷ್ಟಿಗೆ ಸೇರಿದ  ಅಸುರರನ್ನೂ ಸಹ ತಪೋದೃಷ್ಟಿಯಿಂದ ಕಾಣಬಹುದು. ಅವರಿಗೂ ಆಕಾರ ಉಂಟು.  ಆದರೆ ಅವರದು ಘೋರರೂಪ. ಹಾಗೆಯೇ ಭೂತ-ಪ್ರೇತ-ಪಿಶಾಚಿಗಳನ್ನು ಸಹ ವಿಶೇಷ ದೃಷ್ಟಿಯಿಂದ ನೋಡಬಹುದು. 

ದೇವತೆಗಳು ಮತ್ತು ಅಸುರರು ಅಣ್ಣ-ತಮ್ಮಂದಿರು ಎಂಬುದು ಇಲ್ಲಿ ಗಮನಾರ್ಹ. ಆದರೆ ಭಿನ್ನೋದರರು (ಒಬ್ಬನೇ ತಂದೆ, ತಾಯಂದಿರು ಬೇರೆ). ರಾಕ್ಷಸರಲ್ಲಿ ಜನ್ಮತಃ ಅಸುರರು ಉಂಟು, ಅಂತೆಯೇ ಯಾರು ದುಷ್ಕೃತ್ಯಗಳಿಂದ, ಹಿಂಸಾತ್ಮಕ ಪ್ರವೃತ್ತಿಗಳಿಂದ ಕೂಡಿರುವರೋ ಅವರುಗಳೂ ರಾಕ್ಷಸರು ಎಂದು ಕರೆಸಿಕೊಳ್ಳುತ್ತಾರೆ. ದೇವಾಸುರರ ಸ್ವರೂಪ-ಸ್ವಭಾವ-ಕೃತ್ಯಗಳ ಬಗೆಗೆ ಮುಂದಿನ ಸಂಚಿಕೆಗಳಲ್ಲಿ ಗಮನಿಸೋಣ. 

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 18/11/2023 ರಂದು ಪ್ರಕಟವಾಗಿದೆ.

Sunday, November 12, 2023

ಯಕ್ಷ ಪ್ರಶ್ನೆ 63 (Yaksha prashne 63)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 62 ಯಾವುದನ್ನು ಬಿಟ್ಟರೆ ಮನುಷ್ಯನು ಸುಖಿಯಾಗುತ್ತಾನೆ ?

ಉತ್ತರ - ಲೋಭವನ್ನು ಬಿಟ್ಟರೆ  

 ಈ ಹಿಂದಿನ ಯಕ್ಷಪ್ರಶ್ನೆಗಳಲ್ಲಿ ಕಾಮ ಮತ್ತು ಕ್ರೋಧದ ಬಗ್ಗೆ ವಿವರಿಸಲಾಗಿದೆ. ಇದೇ ಸಾಲಿಗೆ ಸೇರುವ ಮತ್ತೊಂದು ವಿಷಯ ಲೋಭ ಎಂಬುದು. ಕಾಮ ಮತ್ತು ಲೋಭಗಳಿಗೆ ಸ್ವಲ್ಪ ಅಂತರವಿದೆ. ಒಂದು ದೃಷ್ಟಿಯಿಂದ ಇವೆರಡೂ ಬಯಕೆಗಳೇ ಆಗಿವೆ. ನನಗೆ ಬೇಕೆಂಬುದೇ ಆಗಿದೆ. ಇದಕ್ಕೆ ಸಂವಾದಿಯಾದ ಆಶೆಯೆಂಬ ವಿಷಯವನ್ನೂ ಈ ಹಿಂದಿನ ಲೇಖನದಲ್ಲಿ ಚಿಂತಿಸಲಾಗಿದೆ. ಆಶೆಗೂ ಲೋಭಕ್ಕೂ ಮಧ್ಯೆ ಇಲ್ಲೂ ಕಿಂಚಿತ್ ಅಂತರವನ್ನು ಕಾಣಬಹುದು. ಕಾಮ ಕ್ರೋಧ ಮತ್ತು ಲೋಭ ಈ ಮೂರು ನರಕಕ್ಕೆ ಕಾರಣವಾದವುಗಳು. ಆದ್ದರಿಂದ ಈ ಮೂರನ್ನೂ ಮಾನವನಾದವನು ಬಿಡಲೇಬೇಕು ಎಂದು ಭಗವದ್ಗೀತೆ ಹೇಳುತ್ತದೆ.  ಲೋಭವೆಂಬುದು ಯಾವ ರೀತಿ ದುಃಖಕ್ಕೆ ಕಾರಣವಾಗುತ್ತದೆ? ಲೋಭವನ್ನು ಬಿಡುವುದರಿಂದ ಸುಖವು ಹೇಗೆ ಲಭಿಸುತ್ತದೆ? ಎಂಬುದು ಯಕ್ಷನ ಪ್ರಶ್ನೆಯ ಆಶಯ. 

ಕಾಮ ಅಥವಾ ಆಶೆಯೆಂಬುದು ತನಗೆ ಇನ್ನೂ ಬೇಕು, ಮತ್ತೂ ಬೇಕು ಎಂಬ ಅಮಿತವಾದ ಬಯಕೆ. ಲೋಭವೆಂಬುದು ಇನ್ನೂ ಮುಂದಕ್ಕೆ ಹೋಗುತ್ತದೆ. ಕಾಮದಲ್ಲಿ ಮತ್ತೊಬ್ಬರ ವಸ್ತುವನ್ನು ಬಯಸುವ ವಿಷಯ ಬರುವುದಿಲ್ಲ. ಆದರೆ ಲೋಭವೆಂಬುದು ಮತ್ತೊಬ್ಬನ ವಸ್ತುವನ್ನು ಬಯಸುವುದಾಗಿದೆ. ಆಶೆಯು ತನ್ನ ಎಲ್ಲೆಯನ್ನು ಮೀರಿದಾಗ, ಯಾವ ವಸ್ತು ತನ್ನದು? ತಾನು ಬಯಸಬೇಕಾದುದು ಯಾವುದಲ್ಲ? ಎಂಬ ವಿವೇಕವೇ ಕೆಲಸ ಮಾಡುವುದಿಲ್ಲ. ಒಟ್ಟಾರೆ ತನ್ನ ಬಯಕೆಯನ್ನು ಹೇಗಾದರೂ ಮಾಡಿ ಈಡೇರಿಸಿಕೊಳ್ಳಬೇಕೆಂದು ಹಪಿಹಪಿಸುತ್ತಾನೆ. ಈ ಪ್ರಪಂಚವು ಬಹು ವಿಸ್ತಾರವಾದುದು. ಹಾಗೆಯೇ ಬಯಕೆಯೂ ವಿಸ್ತಾರವಾಗುತ್ತಾ ಹೋಗುತ್ತದೆ. ಪದ್ಮಪುರಾಣದಲ್ಲಿ ಲೋಭಕ್ಕೆ ಈ ರೀತಿಯಾದ ವಿವರಣೆಯನ್ನು ಕೊಟ್ಟಿದ್ದಾರೆ "ಬೇರೆಯವರ ಹಣ ಮೊದಲಾದ ದ್ರವ್ಯವನ್ನು ನೋಡಿ ಅದನ್ನು ಪಡೆಯಬೇಕು ಎಂದು ಯಾವನಲ್ಲಿ ಅಭಿಲಾಷೆಯು ಉಂಟಾಗುತ್ತದೆಯೋ ಅದನ್ನು 'ಲೋಭ' ಎಂದು ಕರೆಯಬಹುದು" ಎಂದು. ಯಾವಾಗ ವಸ್ತುವಿನ ಅಥವಾ ವಿಷಯದ ಸಂಗ್ರಹ ಬುದ್ಧಿಯು ಬೆಳೆಯುತ್ತಾ ಹೋಗುತ್ತದೆಯೋ ಆಗ ಇಂದ್ರಿಯಲೋಲುಪತೆ ಜಾಸ್ತಿಯಾಗುತ್ತದೆ. ಇಂದ್ರಿಯದ ಸಂಯಮವೇ ಸುಖಕ್ಕೆ ಕಾರಣವಲ್ಲವೇ? ಇಂದ್ರಿಯಗಳ ಬಯಕೆಯೇ ಈ ಲೋಭಕ್ಕೆ ಕಾರಣ. ತನ್ಮೂಲಕ ಮನಸ್ಸೂ ತನ್ನ ಕಾರ್ಯವನ್ನು ಇಂದ್ರಿಯವ್ಯಾಪಾರದಲ್ಲೇ ಕಳೆಯಬೇಕಾಗುತ್ತದೆ. ವಸ್ತುವಿನ ಸಂಗ್ರಹವು ಸುಖಕ್ಕೆ ಕಾರಣವಲ್ಲ; ಅವುಗಳ ತ್ಯಾಗವೇ ಶಾಶ್ವತ ಸುಖಕ್ಕೆ ಕಾರಣ ಎಂಬುದನ್ನು ಉಪನಿಷತ್ ಮೊದಲಾದ ಸಾಹಿತ್ಯಗಳು ಮತ್ತೆ ಮತ್ತೆ ನಮ್ಮನ್ನು ಜ್ಞಾಪಿಸುತ್ತವೆ. ವಸ್ತುಗಳಿಂದ ಬರುವ ಸುಖವನ್ನೇ ನೈಜ ಸುಖವೆಂಬ ಭ್ರಮೆಯಲ್ಲಿ ನಾವಿದ್ದೇವೆ. ಆದರೆ ಅದು ಕ್ಷಣಿಕ. ಈ ಬದುಕಿನಲ್ಲಿ ಶಾಶ್ವತವಾದ ಯಾವ ಪರಬ್ರಹ್ಮಾನಂದವನ್ನು ಅನುಭವಿಸುವ ಸುಖ ಯಾವುದುಂಟೋ ಅದನ್ನು ಪಡೆಯಬೇಕು. ಆ ಸುಖವನ್ನು ಪಡೆಯಬೇಕಾದರೆ ಅದು ಯಾವ ವಸ್ತುವಿನಿಂದಲೂ ಬರುವಂತಹದ್ದಲ್ಲ. ಅದು ನಿರ್ವಿಷಯಕವಾದ ಆನಂದ. ಹಾಗಾಗಿ ಆನಂದವನ್ನು ನಿರ್ವಿಷಯಕ ಮತ್ತು ಸವಿಷಯಕ ಎಂದು ಎರಡಾಗಿ ವಿಭಾಗಿಸಿ ಪ್ರತಿಯೊಬ್ಬರು ನಿರ್ವಿಷಯಕವಾದ ಆನಂದವನ್ನು ಪಡೆಯುವುದೇ ಜೀವನ ಮುಖ್ಯ ಉದ್ದೇಶ ಎಂಬುದಾಗಿ ಈ ಉತ್ತರ ಸಾರುತ್ತದೆ.

ಸೂಚನೆ : 11/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.