Monday, November 6, 2023

ಯಕ್ಷ ಪ್ರಶ್ನೆ 62 (Yaksha prashne 62)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

ಪ್ರಶ್ನೆ – 61 ಯಾವುದನ್ನು ಬಿಟ್ಟರೆ ಮನುಷ್ಯನು ಧನಿಕನಾಗುತ್ತಾನೆ ?

ಉತ್ತರ - ಆಶೆಯನ್ನು ಬಿಟ್ಟರೆ  

ಇವತ್ತು ಒಂದು ಪ್ರಚಲಿತವಾದ ಮಾತೊಂದಿದೆ - " ಪ್ರತಿಯೊಬ್ಬನೂ ಆಶಾವಾದಿಯಾಗಿರಬೇಕು" ಎಂದು. ಅಂದರೆ ಈ ಮಾತು ಏನನ್ನು ಹೇಳುತ್ತಿದೆ? ಯಾವುದಾದರೂ ಒಂದು ಆಶೆಯಿಲ್ಲದಿದ್ದರೆ ಯಾವ ಕಾರ್ಯಕ್ಕೂ ಪ್ರವೃತ್ತಿಯೆಂಬುದೇ ಬರಲು ಸಾಧ್ಯವಿಲ್ಲ ಎಂದು. ಹಾಗಾಗಿ ಪ್ರತಿಯೊಬ್ಬರಿಗೂ ಆಶೆಯೆಂಬುದು ಬೇಕೇಬೇಕು. ಮನುಷ್ಯ ಮಾತ್ರನಲ್ಲ, ಹಸುವು ಹಾಲನ್ನು ಕೊಡಬೇಕಾದರೆ ಅದಕ್ಕೆ ಹಿಂಡಿಯನ್ನು ಮೊದಲು ಮುಂದಿಡಬೇಕಾಗುತ್ತದೆ. ಪ್ರಯೋಜನವನ್ನು ಕಾಣದೇ ಯಾವ ಮೂರ್ಖನೂ ಏನನ್ನೂ ಮಾಡಲಾರ ಎಂಬ ಸುಭಾಷಿತವೂ ಇದೆ. ಹಾಗಾಗಿ ಆಶೆ ಬೇಕು ಎಂಬುದು ಸಾಮಾನ್ಯವಾಗಿ ಕಾಣುತ್ತದೆ. ಆದರೆ ಇಲ್ಲಿ ಯಕ್ಷನ ಪ್ರಶ್ನೆಗೆ ಯುಧಿಷ್ಠಿರನು ಮನುಷ್ಯ ಧನಿಕನಾಗಲು ಆಶೆ ಇರಬಾರದು ಎಂಬ ಉತ್ತರವನ್ನು ಕೊಟ್ಟಿದ್ದಾನೆ. ಹಾಗಾದರೆ ಈ ಉತ್ತರದ ತಾತ್ಪರ್ಯವೇನು? 

ಇನ್ನೊಂದು ಸುಭಾಷಿತ ಹೀಗೆ ಹೇಳುತ್ತದೆ " ಆಶೆಗೆ ಯಾರು ದಾಸರಾಗಿದ್ದಾರೋ ಅವನು ಎಲ್ಲರ ದಾಸನಾಗುತ್ತಾನೆ; ಆಶೆಯೇ ಯಾರಿಗೆ ದಾಸವಾಗಿದೆಯೋ ಅವನಿಗೆ ಎಲ್ಲಾ ಲೋಕವೂ ದಾಸವಾಗುತ್ತದೆ" ಎಂದು. ಅಂದರೆ ಆಶೆಯೆಂಬುದು ಒಂದು ಮಿತಿಯಿಲ್ಲದಿರುವಿಕೆ, ಒಂದು ಸಿಕ್ಕಿದರೆ ಇನ್ನೊಂದನ್ನು ಪಡೆಯಬೇಕು ಎನಿಸುವ ಮಾನವನ ಅಂತಹ ಗುಣ. ಇದು ಮಾನವನಲ್ಲಿ ಮಾತ್ರ ಕಾಣಸಿಗುತ್ತದೆ. ಹೊಟ್ಟೆ ತುಂಬಿದ ಹುಲಿಗೆ ಎದುರೇ ಅದರ ಆಹಾರ ಸುಲಭವಾಗಿ ಸಿಕ್ಕಿದರೂ ಆಗ ಅದನ್ನು ಅದು ಬಯಸುವುದಿಲ್ಲವಂತೆ. ಹಸುವೇ ಆದರೂ ಒಂದು ಹಂತಕ್ಕೆ ಹುಲ್ಲನ್ನು ಮೆಂದು ಸಾಕೆಂದು ತಿಂದ ಹುಲ್ಲನ್ನೇ ಮೆಲುಕು ಹಾಕುತ್ತದೆ. ಅಂದರೆ ಅವುಗಳಿಗೆಲ್ಲಾ ಒಂದು ಮಟ್ಟದಲ್ಲಿ ಸಾಕೆಂಬ ಆ ತೃಪ್ತಿಯ ಭಾವ ಬರುವುದುಂಟು. ಆದರೆ ಮನುಷ್ಯ ಇನ್ನೂ ಭಿನ್ನ. ಮನುಷ್ಯನ ಜೀವನ ಉಳಿದ ಪ್ರಾಣಿಗಳಂತೆ ಕೇವಲ ಹೊಟ್ಟೆತುಂಬುವಿಕೆಯಲ್ಲೇ ಸೀಮಿತವಾಗಿಲ್ಲ. "ತುಂಬಿದ ಮೇಲೂ ಹಿಡಿಯುವ ಚೀಲವೆಂದರೆ ಅದು ಹೊಟ್ಟೆ" ಎಂಬ ತಮಾಷೆಯನ್ನೂ ಮನುಷ್ಯನ ಆಶೆಗೆ ಮಿತಿಯಿಲ್ಲ ಎಂಬಂತೆ ಚಿತ್ರಿಸುವುದೂ ಉಂಟು. ಮನುಷ್ಯನಲ್ಲಿ ಸಾಕೆಂಬ ಭಾವನೆ ಬರುವುದೇ ಕಷ್ಟ. ಯಾವಾಗ ಬೇಕು ಬೇಕು ಎಂದು ಅಂದುಕೊಳ್ಳುತ್ತಾ ಹೋಗುತ್ತಾನೋ ಆಗ ಆ ಬೇಕುಗಳನ್ನು ಸಾಕಾಗಿಸಲೂ ಆತ ಅನೇಕ ಕಾರ್ಯವನ್ನು ಮಾಡಬೇಕಾಗುತ್ತದೆ. ಒಂದು ಕಾರ್ಯದಿಂದ ಇನ್ನೊಂದು ಕಾರ್ಯ, ಅದರಿಂದ ಇನ್ನೊಂದು ಕಾರ್ಯ. ಹೀಗೆ ಕಾರ್ಯಪರಂಪರೆ ಅವನಿಗೆ ತಿಳಿಯದಂತೆ ಬೆಳೆಯುತ್ತಾ ಸಾಗುತ್ತದೆ. ಪ್ರತಿಯೊಂದಕ್ಕೂ ಮಿತಿಯೆಂಬುದು ಉಂಟು. ಆದರೆ ಆಶೆಗೆ ಮಿತಿಯೆಂಬುದೇ ಇಲ್ಲ. ಗಿರಿಗಿಂತ ಪರ್ವತ ದೊಡ್ಡದು, ಪರ್ವತಕ್ಕಿಂತ ಸಮುದ್ರ ದೊಡ್ದದು, ಸಮುದ್ರಕ್ಕಿಂತ ಆಕಾಶ ದೊಡ್ದದು, ಆಕಾಶಕ್ಕಿಂತ ಬ್ರಹ್ಮ ದೊಡ್ಡದು. ಬ್ರಹ್ಮನಿಗಿಂತ ಆಶೆ ದೊಡ್ದದು, ಆದರೆ ಆಶೆಗಿಂತ ದೊಡ್ದದು ಯಾವುದೂ ಇಲ್ಲ ಎಂಬುದಾಗಿ ಆಶೆಯ ಅಸೀಮತ್ವವನ್ನು ಸುಭಾಷಿತಕಾರರು ತುಂಬಾ ಸೊಗಸಾಗಿ ಹೇಳಿದ್ದಾರೆ. ಹಾಗಾಗಿ ಆಶೆಗೆ ಕಡಿವಾಣ ಇರಬೇಕು. ಇರುವುದರಲ್ಲೇ ತೃಪ್ತಿಯನ್ನು ಹೊಂದಬೇಕು. ಕೇವಲ ಬಾಹ್ಯವಾದ ಸಂಪತ್ತನ್ನು ಹೊಂದಿದ ಮಾತ್ರಕ್ಕೆ ಅವನನ್ನು ಧನಿಕ ಎನ್ನಲಾಗದು. ಆದರ ಜೊತೆಗೆ ಅಥವಾ ಇದು ಇಲ್ಲದೆಯೂ ನೆಮ್ಮದಿ ಅಥವಾ ತೃಪ್ತಿ ಇದ್ದ ಮಾತ್ರಕ್ಕೆ ಆತ ನಿಜವಾದ ಅರ್ಥದಲ್ಲಿ ಧನಿಕನಾಗುತ್ತಾನೆ. 

ಸೂಚನೆ : 5/11/2023 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.