Monday, November 20, 2023

ದೇವಾಸುರರ ಉಗಮವು ಎಲ್ಲಿಂದ ? (Devasurara Ugamavu Ellinda?)

(ಪ್ರತಿಕ್ರಿಯಿಸಿರಿ lekhana@ayvm.in)


ಪುರಾಣದೃಷ್ಟಿ 

ವೇದ-ಪುರಾಣಗಳಲ್ಲಿ ಬರುವ ದೇವಾಸುರರ ಕಥೆಗಳು ಮನಸ್ಸಿನಲ್ಲೆಬ್ಬಿಸುವ ಗೊಂದಲ-ಸಮಸ್ಯೆಗಳನ್ನು ಹಿಂದಿನ ಲೇಖನದಲ್ಲಿ ಮಂಡಿಸಿದ್ದೆವು. ಹೀಗಾಗಿ ಪುರಾಣದ ಕಥೆಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಮೊದಲು ದೇವಾಸುರರ ಬಗೆಗೆ ಒಂದು ನೈಜವಾದ ಕಲ್ಪನೆಯನ್ನು ಪಡೆಯುವ ಪ್ರಯತ್ನವು ಅತ್ಯಾವಶ್ಯಕ.    

ಸೃಷ್ಟಿಗೂ ಪೂರ್ವದಲ್ಲಿ ತಾನೇತಾನಾಗಿದ್ದ ಪರಬ್ರಹ್ಮವು ತನ್ನನ್ನು ತಾನು ವಿಸ್ತಾರಮಾಡಿಕೊಳ್ಳುವ ಸಂಕಲ್ಪಮಾಡಲು ಸೃಷ್ಟಿಯು ಪ್ರಾರಂಭವಾಯಿತು. ಸೃಷ್ಟಿ-ಸ್ಥಿತಿ-ಲಯಕಾರ್ಯಗಳನ್ನು ಮಾಡಲು ಬ್ರಹ್ಮ-ವಿಷ್ಣು-ಮಹೇಶ್ವರರು ತ್ರಿಮೂರ್ತಿಗಳಾಗಿ ಆವಿರ್ಭವಿಸಿದರು. ಬ್ರಹ್ಮಸೃಷ್ಟಿಯಲ್ಲಿ ಎರಡು ವಿಧ: ಸಂಕಲ್ಪಮಾತ್ರದಿಂದಲೇ ಮಾಡುವಂತಹ ಸೃಷ್ಟಿಯು ಸಾಂಕಲ್ಪಿಕೀಸೃಷ್ಟಿ ಎಂದೆನಿಸಿಕೊಳ್ಳುತ್ತದೆ. ಅದರಂತೆ ಬ್ರಹ್ಮನು ತನ್ನ ವಿವಿಧ ಅಂಗಗಳಿಂದ ಸೃಷ್ಟಿಯನ್ನು ಮಾಡಲಾಗಿ ಮನಸ್ಸಿನಿಂದ ಸನಕ-ಸನಂದನಾದಿಗಳೂ, ತೊಡೆಯಿಂದ ನಾರದರೂ, ಅಂಗುಷ್ಠದಿಂದ  ದಕ್ಷನೂ ಉದ್ಭವಿಸಿದರು. ಸನಕಾದಿಗಳು ಬಾಲ್ಯ-ಯೌವನ ಮುಂತಾದ ಅವಸ್ಥಾಭೇದಗಳಿಲ್ಲದೆ ಬ್ರಹ್ಮಪರಾಯಣರಾಗಿ ಸಂಚರಿಸುವವರು. ಇಂತಹ ವಿಚಿತ್ರವಾದ ಸೃಷ್ಟಿ ಮುಂದುವರಿಯಿತು. ಹೀಗೆ ಬ್ರಹ್ಮನ  ಸಂಕಲ್ಪದಿಂದ ಹುಟ್ಟಿದವರು ಅವನ ಮಾನಸಪುತ್ರರು. ಸಪ್ತರ್ಷಿಗಳಾದ ಮರೀಚಿ, ಅತ್ರಿ, ಭೃಗು, ಮುಂತಾದವರೂ ಸಹ ಬ್ರಹ್ಮನ ಮಾನಸಪುತ್ರರು. ಈ ಪ್ರಜಾಪತಿಗಳಿಂದಲೇ ಮುಂದೆ ಪ್ರಜಾಸೃಷ್ಟಿ ಎಂಬುದಾಗಿ ಪುರಾಣಗಳು ಹೇಳುತ್ತವೆ. ಈ ಸೃಷ್ಟಿಯು ಊಹೆಗೂ ನಿಲುಕದ ವಿಚಾರ.  ಇದೊಂದು ಸ್ಥೂಲಪರಿಚಯವಷ್ಟೇ.  

  ಎರಡನೆಯದು ಸಾಂಸರ್ಗಿಕೀಸೃಷ್ಟಿ. ಎಂದರೆ ಸ್ತ್ರೀ-ಪುರುಷರ ಸಂಸರ್ಗದಿಂದ, ಮೈಥುನದಿಂದ  ಆಗುವ ಪ್ರಜೋತ್ಪತ್ತಿ. ಈ ವಿಜ್ಞಾನವನ್ನು ಲೋಕಕ್ಕೆ ತಂದುಕೊಟ್ಟವರು ದಕ್ಷಪ್ರಜಾಪತಿಯೇ. ಮರೀಚಿ ಮಹರ್ಷಿಯಿಂದ ಹುಟ್ಟಿದ ಕಶ್ಯಪರೇ ಈ ಸೃಷ್ಟಿಗೆ ಮೂಲ ಪುರುಷರು. ದಕ್ಷಪ್ರಜಾಪತಿಗೆ ಅನೇಕ ಕನ್ನಿಕೆಯರು. ಅವರಲ್ಲಿ ಅದಿತಿ, ದಿತಿ, ದನು, ವಿನತ, ಕದ್ರು ಮುಂತಾದ ಈತನ 13 ಜನ ಪುತ್ರಿಯರನ್ನು ಕಶ್ಯಪರು ವಿವಾಹ ಮಾಡಿಕೊಳ್ಳುತ್ತಾರೆ. ಕಶ್ಯಪರಿಗೆ ಅದಿತಿಯ  ಮೂಲಕ ಹುಟ್ಟಿದವರೇ ಆದಿತ್ಯರು. ಅವರುಗಳೇ ಸುರರು ಅಥವಾ ದೇವತೆಗಳು. ಅದಿತಿಯ ಮಕ್ಕಳು ದೇವತೆಗಳಾದರೆ, ಕಶ್ಯಪರಿಗೆ ದಿತಿಯಿಂದ ಹುಟ್ಟಿದ ಮಕ್ಕಳು ದೈತ್ಯರು. ಹಾಗೆಯೇ ದನುವಿನ ಮೂಲಕ ಹುಟ್ಟಿದವರು ದಾನವರು. ಅಂತೆಯೇ ಮತ್ತೊಬ್ಬಳಾದ ವಿನತೆಯ ಮೂಲಕ ಅರುಣ ಮತ್ತು ಗರುಡರೂ, ಕದ್ರುವಿನ ಮೂಲಕ ನಾಗರೂ (ಎಂದರೆ ಆದಿಶೇಷ, ಕಾರ್ಕೋಟಕ ಮುಂತಾದವರು) ಜನಿಸಿದರು. ಈ ರೀತಿಯಾಗಿ ಇಡೀ ವಿಶ್ವಸೃಷ್ಟಿಯೆಲ್ಲವೂ ಇವರ ಮೂಲಕವೇ ಆಗಿರುವುದೆಂಬ ಪುರಾಣೋಕ್ತಿಯು  ಗಮನಾರ್ಹ.

 ಈ ಸೃಷ್ಟಿಯನ್ನು ಪ್ರಾಕೃತಸೃಷ್ಟಿ, ವೈಕೃತಸೃಷ್ಟಿ, ದೈವಸೃಷ್ಟಿ ಎಂಬುದಾಗಿಯೂ  ವಿಂಗಡಿಸಿರುವುದುಂಟು. ಪ್ರಕೃತಿಗೆ ಸಂಬಂಧಪಟ್ಟ ಪ್ರಾಕೃತಸೃಷ್ಟಿಯು ಮಹತ್ತು-ಅಹಂಕಾರ- ಪಂಚಭೂತಗಳು-ಪಂಚತನ್ಮಾತ್ರಗಳು ಮತ್ತು ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳ ಸೃಷ್ಟಿಗೆ ಕಾರಣವಾದುದು. ವೈಕೃತಸೃಷ್ಟಿಯು ವಿಶೇಷವಾದ ಸೃಷ್ಟಿ, ವಿಸ್ತಾರವಾದಂತಹ ಸೃಷ್ಟಿ ಎನ್ನುವ ಅರ್ಥದಲ್ಲಿದೆ. ಪ್ರಾಕೃತಸೃಷ್ಟಿಯಂತೆ ಇದು ಜಡವಲ್ಲ, ಜೀವಸಹಿತವಾದದ್ದು. ಅದರಲ್ಲಿ ಸ್ಥಾವರ-ವನಸ್ಪತಿ-ಗಿಡ-ಮರ-ಲತೆಗಳು ಒಂದು ಭಾಗವಾದರೆ ಪ್ರಾಣಿ-ಪಕ್ಷಿ-ಜಂತುಗಳ ಸೃಷ್ಟಿ ಮತ್ತೊಂದು ಭಾಗ. ಅದರಲ್ಲೇ ಮತ್ತೊಂದು ಸೃಷ್ಟಿ ಮನುಷ್ಯ ಜೀವಿಗಳು.  

ದೈವಸೃಷ್ಟಿಯಲ್ಲಿ ಎಲ್ಲ ದೇವತೆಗಳ (ಅದಿತಿಪುತ್ರರ)  ಸೃಷ್ಟಿಯು ಸೇರಿರುವುದು. ದೈತ್ಯರು, ದಾನವರು, ರಾಕ್ಷಸರು (ಇವರೆಲ್ಲರೂ ಅಸುರರು) ಸಹ ದೈವಸೃಷ್ಟಿಗೇ ಸೇರಿದವರು. ಇದಲ್ಲದೇ ಯೋಗಿಗಳು, ಗಂಧರ್ವರು, ಮುಂತಾದವರೂ ದೈವಸೃಷ್ಟಿಗೇ ಸೇರುವರು. ಅಂತೆಯೇ ಭೂತ-ಪ್ರೇತ-ಪಿಶಾಚಿಗಳ ವರ್ಗವೂ ದೈವಸೃಷ್ಟಿಗೆ ಸಂಬಂಧಪಟ್ಟಿರುತ್ತದೆ. ಈ ಸೃಷ್ಟಿಗೆ ಸಂಬಂಧಪಟ್ಟವರು ಸ್ಥೂಲದೃಷ್ಟಿಗೆ ಗೋಚರಿಸುವವರಲ್ಲ. ಅಂದರೆ ಅವರನ್ನು ನೋಡುವ ವಿಧಾನವೇ ಬೇರೆ. 

  ಪಂಚಭೂತಗಳಾದ ಪೃಥ್ವಿ-ಅಪ್-ತೇಜಸ್ಸು-ವಾಯು-ಆಕಾಶಗಳಿಂದ ಸೃಷ್ಟಿಯಾಗಿದೆ ನಮ್ಮ ಶರೀರ. ಆದರೆ ದೇವತೆಗಳ ಶರೀರ ಪಂಚಭೂತಗಳಿಂದ ನಿರ್ಮಾಣವಾದ ಸ್ಥೂಲಶರೀರವಲ್ಲ. ಅವರುಗಳು ಕೇವಲ ತೇಜೋರೂಪರು. ಅವರಿಗೆ ಆಕಾರವುಂಟು, ಪುರುಷಾಕಾರವಾಗಿಯೇ ಕಾಣಿಸುವರು (ಆದರೆ ಹಿಡಿಯಲಾಗುವುದಿಲ್ಲ). ಹೊರಗಣ್ಣಿಗೆ ಗೋಚರವಾಗುವುದಿಲ್ಲ. ವಿಶೇಷವಾದ ಒಳದೃಷ್ಟಿಗೆ ಕಾಣಿಸುವವರು.  ಈ ತೇಜೋರೂಪಿಗಳು ದಿವ್ಯದೃಷ್ಟಿ-ದಿವ್ಯಶರೀರ-ದಿವ್ಯರೂಪದಿಂದ ಪ್ರಕಾಶಿಸುವವರು. ಯೋಗಮಾರ್ಗದಲ್ಲಿ ಸಾಗಿದ ಯೋಗಿಗಳಿಗೆ ಅಂತರ್ದೃಷ್ಟಿಗೆ ಗೋಚರಿಸುವವರು ಎಂದು ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳು  ವಿವರಿಸುತ್ತಿದ್ದುದನ್ನು ಸ್ಮರಿಸುತ್ತೇವೆ. 

ಅದಿತಿಯ ಮೂಲಕ ಕಶ್ಯಪರಿಗೆ ಹುಟ್ಟಿದವರು ಇಂದ್ರ-ಸೋಮ-ಸೂರ್ಯ-ಅಗ್ನಿ ಮುಂತಾದ ದೇವತೆಗಳು. ಅವರಲ್ಲಿ ವಿಶೇಷವಾಗಿ ೩೩ ದೇವತೆಗಳು - ಅಷ್ಟ  ವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು, ಇಂದ್ರ  ಮತ್ತು ಪ್ರಜಾಪತಿ. ಈ ಮೂವತ್ತು ಮೂವರ ವಿಸ್ತಾರ ರೂಪವೇ ೩೩ ಕೋಟಿ ದೇವತೆಗಳು. ಈ ದೇವತೆಗಳ ರಾಜ ಇಂದ್ರ. 

ದೈವೀಸೃಷ್ಟಿಗೆ ಸೇರಿದ  ಅಸುರರನ್ನೂ ಸಹ ತಪೋದೃಷ್ಟಿಯಿಂದ ಕಾಣಬಹುದು. ಅವರಿಗೂ ಆಕಾರ ಉಂಟು.  ಆದರೆ ಅವರದು ಘೋರರೂಪ. ಹಾಗೆಯೇ ಭೂತ-ಪ್ರೇತ-ಪಿಶಾಚಿಗಳನ್ನು ಸಹ ವಿಶೇಷ ದೃಷ್ಟಿಯಿಂದ ನೋಡಬಹುದು. 

ದೇವತೆಗಳು ಮತ್ತು ಅಸುರರು ಅಣ್ಣ-ತಮ್ಮಂದಿರು ಎಂಬುದು ಇಲ್ಲಿ ಗಮನಾರ್ಹ. ಆದರೆ ಭಿನ್ನೋದರರು (ಒಬ್ಬನೇ ತಂದೆ, ತಾಯಂದಿರು ಬೇರೆ). ರಾಕ್ಷಸರಲ್ಲಿ ಜನ್ಮತಃ ಅಸುರರು ಉಂಟು, ಅಂತೆಯೇ ಯಾರು ದುಷ್ಕೃತ್ಯಗಳಿಂದ, ಹಿಂಸಾತ್ಮಕ ಪ್ರವೃತ್ತಿಗಳಿಂದ ಕೂಡಿರುವರೋ ಅವರುಗಳೂ ರಾಕ್ಷಸರು ಎಂದು ಕರೆಸಿಕೊಳ್ಳುತ್ತಾರೆ. ದೇವಾಸುರರ ಸ್ವರೂಪ-ಸ್ವಭಾವ-ಕೃತ್ಯಗಳ ಬಗೆಗೆ ಮುಂದಿನ ಸಂಚಿಕೆಗಳಲ್ಲಿ ಗಮನಿಸೋಣ. 

ಸೂಚನೆ: ಈ ಲೇಖನವು ವಿಜಯ ಕರ್ನಾಟಕದ ಪತ್ರಿಕೆಯ ಬೋಧಿ ವೃಕ್ಷ ದಲ್ಲಿ 18/11/2023 ರಂದು ಪ್ರಕಟವಾಗಿದೆ.