Showing posts with label paper_vijayakarnataka. Show all posts
Showing posts with label paper_vijayakarnataka. Show all posts

Saturday, January 4, 2025

ಕೃಷ್ಣಕರ್ಣಾಮೃತ 46 ನಮ್ಮತ್ತ ಬರುತ್ತಿರುವ ದೇವನಿಗೆ ಐದು ಹೋಲಿಕೆಗಳು (Krishakarnamrta 46)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತಮಸಿ ರವಿರಿವೋದ್ಯನ್...

ಶ್ರೀಕೃಷ್ಣನನ್ನು ನಾವು ಭಜಿಸುತ್ತೇವೆ. ಭಜಿಸುತ್ತೇವೆ ಸರಿಯೇ, ಆದರೆ ಏಕೆ ಭಜಿಸಬೇಕು? - ಎಂಬ ಪ್ರಶ್ನೆಯು ಅಯುಕ್ತವಲ್ಲವಷ್ಟೆ? ನಾವು ಆತನನ್ನು ಭಕ್ತಿಯಿಂದ ಕರೆಯಬಹುದು. ಆದರೆ ಕರೆದರೆ ಆತನೇನು ಬಂದುಬಿಡುವನೇನು? - ಎಂದೂ ಕೇಳಬಹುದಷ್ಟೆ?

ಹೌದು, ಆಯಾತಿ, ಬರುವನು - ಎನ್ನುತ್ತಾನೆ, ಲೀಲಾಶುಕ. ಹೇಗೆ ಬರುತ್ತಾನೆ ಅವನು? ಎಂಬ ಪ್ರಶ್ನೆಗೆ ಅವನು ಬರುವ ಬಗೆಗಳನ್ನು ಕಣ್ಣಿಗೆ ಕಟ್ಟುವಂತೆ ಹಲವು ಹೋಲಿಕೆಗಳ ಮೂಲಕ ಹೇಳುತ್ತಾನೆ, ಕವಿ. ಪಂಚ-ಪ್ರಕಾರಗಳಲ್ಲಿ ಯಾವೊಂದು ಬಗೆಯಲ್ಲಾದರೂ ಬರಬಹುದು. ಒಂದಕ್ಕಿಂತ ಒಂದು ರೋಚಕವಾದ ಪರಿಗಳಲ್ಲಿ ಆಗಮಿಸುವ ಆತ, ಎಲ್ಲ ಬಗೆಗಳಲ್ಲೂ ಬರಬಹುದು.

ಹೇಗೆ ಹೇಗೆ ಬರುವ ಶ್ರೀಕೃಷ್ಣ?

ಕತ್ತಲಲ್ಲಿ ಸೂರ್ಯನಂತೆ ಬರುವ ಆತ. ನಾವೆಲ್ಲ ಕತ್ತಲಲ್ಲಿದ್ದೇವೆ ಅಲ್ಲವೆ? ಕತ್ತಲಿನಲ್ಲೇ ಇದ್ದು ಅಭ್ಯಾಸವಾಗಿಬಿಟ್ಟವರಿಗೆ ಬೆಳಕನ್ನು ಕಂಡರೆ ಭಯವೇ ಆಗಿಬಿಡುವುದೂ ಉಂಟು! ಕತ್ತಲೆಂದರೆ ಬರೀ ಹೊರಗತ್ತಲಲ್ಲವಲ್ಲ? ಹೊರಗತ್ತಲಿಗಿಂತ ಒಳಗತ್ತಲೇ ಹೆಚ್ಚು ಕಷ್ಟವಾದದ್ದು, ಅಲ್ಲವೇ? "ತಮೋಽಜ್ಞಾನಂ" ಎಂದು ಹೇಳುವಂತೆ ಅಜ್ಞಾನವೇ ಅಂಧಕಾರ.

ಇನ್ನು ಯಾವುದು ದ್ಯೋತಿಸುತ್ತಿರುವುದೋ ಅದೇ ಜ್ಯೋತಿ. ದ್ಯೋತಿಸುವುದೆಂದರೆ ಬೆಳಗುವುದು. ಸಂಧ್ಯೆಯೆಂಬ ಪದವೇ ಸಂಜೆಯೆಂಬ ಪದವಾಗುವಂತೆ, ದ್ಯೋತಿಯೆಂಬ ಪದವೇ ಜ್ಯೋತಿಯೆಂಬ ಪದವಾಗುವುದು.

ಜ್ಯೋತಿಯಿಂದಲೇ ಅಲ್ಲವೆ, ಕತ್ತಲು ಕಳೆಯುವುದು? ಎಂದೇ ಬೃಹದಾರಣ್ಯಕೋಪನಿಷತ್ತೂ "ತಮಸೋ ಮಾ ಜ್ಯೋತಿರ್ಗಮಯ" - ಎಂದು ಕೇಳಿಕೊಳ್ಳುವುದು ಅಲ್ಲವೇ? ಎಂದರೆ, ಕತ್ತಲೆ(ಯೆಡೆ)ಯಿಂದ ನನ್ನನ್ನು ಬೆಳಕಿ(ನೆಡೆ)ಗೆ ಸೇರಿಸು, ಎಂದರ್ಥ.

ಹಣತೆಯಿಂದಲೋ ಬೆಂಕಿಯಿಂದಲೋ ಕತ್ತಲು ಒಂದಿಷ್ಟು ಕಡಿಮೆಯಾಗಬಹುದು. ನಕ್ಷತ್ರಗಳಿಂದಲೂ ಚಂದ್ರಮನಿಂದಲೂ ಸಹ ಎಷ್ಟೋ ಒಂದಿಷ್ಟು ಹೋಗುವುದು, ಸರಿಯೇ. ಆದರೆ ಸೂರ್ಯೋದಯವಾಯಿತೆಂದರೆ ಅದು ಬೇರೆಯೇ ಲೆಕ್ಕ! ಅಂಧಕಾರವೇ ಅಳಿಯುವುದು!  ಕತ್ತಲು ಎತ್ತ ಹೋಯಿತೋ ತಿಳಿಯದಂತಾಗುವುದು.

ಇಂದ್ರಿಯಗಳ ಬೆಳಕೂ ಬೆಳಕೇ. ಪುಟ್ಟ ಹಣತೆಗಳ ಲೆಕ್ಕವದು. ಆದರೆ ಸೂರ್ಯನು ಬೆಳಕಿನ ರಾಶಿ. ಸುದರ್ಶನ ಚಕ್ರವನ್ನೋ ಗಣಪತಿಯನ್ನೋ  ಸ್ತುತಿಸುವಾಗ "ಸೂರ್ಯ-ಕೋಟಿ-ಸಮ-ಪ್ರಭ!" - ಎನ್ನುವುದುಂಟಲ್ಲವೇ? ಪ್ರಕೃತ, ಉದ್ಯನ್ ರವಿಃ - ಎಂದರೆ ಉದಯಿಸುತ್ತಿರುವ ರವಿ.

ಎರಡನೆಯ ಹೋಲಿಕೆ ದೋಣಿಯೆಂಬುದು. ಅಂಬು-ರಾಶಿಯೆಂದರೆ ಜಲ-ರಾಶಿ. ಅದು ದೊಡ್ಡ ನದಿಯೂ ಆಗಬಹುದು, ಸಮುದ್ರವೇ ಆಗಬಹುದು. ಅದರಲ್ಲಿ ಮುಳುಗುತ್ತಿರುವವರಿಗೆ ಆತನು ಪ್ಲವ. ಪ್ಲವವೆಂದರೆ ತೇಲುವ ವಸ್ತು, ಇಲ್ಲಿ ದೋಣಿ. ಸಂಸಾರವನ್ನೇ ಸಾಗರವೆಂದು ಚಿತ್ರಿಸುವುದು ಉಂಟಲ್ಲವೇ? ಅದನ್ನು ದಾಟಿ, ಆಚೆಯ ದಡವನ್ನು ಸೇರಬೇಕಾದರೆ ಆತನೇ ದೋಣಿಯಂತೆ ಇರತಕ್ಕವನು. ಮಜ್ಜನವೆಂದರೆ ಮುಳುಗುವುದು. ಮುಳುಗಿದರೆ ಕಥೆಯೇ ಮುಗಿಯಿತು. ಹಾಗಿರಲು, ಮುಳುಗುವವರಿಗೆ ದೋಣಿಯಂತೆ ಆತನೇ ಆಸರೆಯಾಗಿರುವನು.

ಮೂರನೆಯ ಹೋಲಿಕೆ ಮೋಡವೆಂಬುದು. ಬಾಯಾರಿದವರಿಗೆ ಬೇಕು ನೀರು. ತೃಷೆಯೆಂದರೆ ಬಾಯಾರಿಕೆ. ಬಾಯಾರಿಕೆಯುಳ್ಳವನು ತೃಷಿತ. ತೀವ್ರವಾಗಿ ಬಾಯೊಣಗಿದಾಗ ಆಹಾರವೂ ಬೇಡವಾಗುತ್ತದೆ. ನೀರೇ ಬೇಕೆನಿಸುತ್ತದೆ. ನಾಲ್ಕು ಹನಿ ಸಿಕ್ಕರೂ ಸಾಕು - ಎಂದುಕೊಳ್ಳುತ್ತಿರುವಾಗ, ಒಣಗಿರುವ ಭೂಮಿಗೂ, ನೀರಡಿಕೆಯುಳ್ಳ ಬಾಯಿಗೂ ಮೇಘವೆಂಬುದೇ ಜೀವಪ್ರದವಾಗಿರುವಂತಹುದು.

ನಾವು ಕಾಣುವ ಮೋಡಗಳು ನೀರನ್ನಷ್ಟೆ ಸುರಿಸುತ್ತವೆ. ಆ ನೀರೇನು ಸಿಹಿನೀರೇ? ಆದರೆ ಮೇಘವು ಸ್ವಾದು-ವರ್ಷಿಯಾದರಂತೂ ಆಗ ಆಗುವ ಆನಂದಕ್ಕೆ ಎಣೆಯೇ ಇರದು. ಸ್ವಾದುವೆಂದರೆ ಮಧುರವಾದದ್ದು. ಇಂಗ್ಲೀಷಿನ ಸ್ವೀಟ್ ಎಂಬ ಪದವು ಸಂಸ್ಕೃತದ ಸ್ವಾದುವಿನಿಂದಲೇ ಬಂದದ್ದು - ಎಂದು ಭಾಷಾ-ವಿಜ್ಞಾನಿಗಳು ಹೇಳುತ್ತಾರೆ. ಸ್ವಾದುವಾದ ಜಲವನ್ನು ವರ್ಷಿಸುವ ಮೇಘವೇ ಸ್ವಾದು-ವರ್ಷಿ. ಬಲುಬಾಯಾರಿದವನಿಗೆ ಮಧುರವಾದ ಕೆಲವೇ ಮಳೆಹನಿಗಳು ದೊರೆತರೂ ಕಡುಖುಷಿಪಡುವಂತಾಗುತ್ತದೆ. ಹಾಗೆ ನೀರುಂಡ ಮೇಘವನ್ನು ಹೋಲುವ ನಮ್ಮ ಕೃಷ್ಣನು ಮಧುರವನ್ನೇ ಸುರಿಸುವನು. ಮಧುರವೇನು? ಅವನೇ ಅಮೃತ!

ನಾಲ್ಕನೆಯ ಹೋಲಿಕೆ ನಿಧಿಯದ್ದು. ಸಂಸ್ಕೃತದಲ್ಲಿ ಕೆಲವೊಮ್ಮೆ ಒಂದೇ ಪದವೇ ಎರಡು ವಸ್ತು/ಅವಸ್ಥೆಗಳ ಸಾಮ್ಯವನ್ನು ಹೇಳಬಲ್ಲುದು. ನಿಧನವೆಂದರೆ ಸಾವು. ನಿಧನನೆಂದರೆ ಧನವಿಲ್ಲದವನು ಕೂಡ. ಹಣವಿಲ್ಲದವನನ್ನು ಲೋಕವು ಹೆಣದಂತೆ ಕಾಣುವುದಲ್ಲವೇ? ಅಂತೂ ಧನರಹಿತನ ಜೀವನವು ಬರಡೆನಿಸಿದರೆ ಆಶ್ಚರ್ಯವಿಲ್ಲ. ಬಡತನದಿಂದ ಬಲು ಬಳಲಿದವನು ಬೇಸತ್ತು ಬೇಸತ್ತು, ಸತ್ತುಹೋಗುವುದೇ ಲೇಸೆಂದುಕೊಳ್ಳುತ್ತಿರುವನು. ಆದರೆ ಅಷ್ಟರಲ್ಲಿ ನಿಧಿಯೇ ದೊರಕಿಬಿಟ್ಟರೆ! ಆತನ ಆನಂದಕ್ಕೆ, ಪರಮ-ಪರಿತೋಷಕ್ಕೆ, ಪಾರವೆಂಬುದುಂಟೇ?

ಎಂತಹ ನಿಧಿಯೇ ಸಿಕ್ಕರೂ ಮುಖ್ಯವಾಗಿ ಆರೋಗ್ಯವಿರಬೇಕು, ಅಲ್ಲವೇ? ಆಸ್ತಿಯನ್ನು ಅನುಭವಿಸಲೂ ಸ್ವಾಸ್ಥ್ಯ ಬೇಕು. ರೋಗಿಯಾದವನಿಗೆ ಆಮಯವು ವಾಸಿಯಾಗುವವರೆಗೂ ಏನೂ ಬೇಕಾಗುವುದಿಲ್ಲ. ಆಮಯವೆಂದರೆ ರೋಗ.

ತೀವ್ರವಾದ ಆಮಯವಾಗಿಬಿಟ್ಟರಂತೂ, "ದೇವರೇ, ಜೀವ-ಸಹಿತ ಉಳಿಸಪ್ಪಾ, ಉಳಿಸಪ್ಪಾ" ಎಂದು ಕೇಳಿಕೊಳ್ಳುವುದೇ ಆಗುತ್ತದೆ. ದೀರ್ಘ-ಕಾಲದ ತೀವ್ರಾಮಯವಾಗಿಬಿಟ್ಟರಂತೂ ಸಾವನ್ನೇ ಸ್ವಾಗತಿಸುವಂತಾಗಿಬಿಟ್ಟಿರುತ್ತದೆ! ಆ ದಶೆಯಲ್ಲಿರುವವರಿಗೆ ಒಳ್ಳೆಯ ವೈದ್ಯನೇ ದೊರೆತುಬಿಟ್ಟರೆ ಹೋದ ಜೀವ ಬಂದಂತಾಗುತ್ತದೆ.

ಒಳ್ಳೆಯ ಭೇಷಜವನ್ನು, ಎಂದರೆ ಔಷಧವನ್ನು, ಕೊಡುವ ವೈದ್ಯನು ಯಾರಿಗೆ ಬೇಡ? ಅಶ್ವಿನೀ-ದೇವತೆಗಳನ್ನು "ದೇವ-ಲೋಕದ ಭಿಷಕ್" ಎನ್ನುತ್ತಾರಲ್ಲವೇ? ವೈದ್ಯನನ್ನು ನಾರಾಯಣನೆಂದೇ ಹರಿಯೆಂದೇ ಭಾವಿಸುವುದುಂಟಲ್ಲವೇ? ಹಾಗೆ ನಮಗೊದಗಿರುವ ಅನಾದಿ-ಕಾಲದ ರೋಗವೆಂದರೆ ಈ ಸಂಸಾರವೇ. ಬಹಳ-ಕಾಲದಿಂದ ಕಾಯಿಲೆಯಿಂದ ಬಹಳವೇ ಬಳಲುತ್ತಿರುವವರೇ ದೀರ್ಘ-ತೀವ್ರಾಮಯ-ಗ್ರಸ್ತರು. ಅವರಿಗೆ ಭಿಷಕ್ ಆಗಿ - ಎಂದರೆ ವೈದ್ಯನಾಗಿ -ಬರುವವ ನಮ್ಮ ಕೃಷ್ಣ.

ಯಾರನ್ನಾದರೂ ಕಂಡಾಗ "ಆರೋಗ್ಯವೇ?" ಎಂದೋ, ಅಥವಾ  ಕ್ಷೇಮವೇ ಎಂದೋ, ಕುಶಲವೇ ಎಂದೋ, ಕೇಳುವುದುಂಟಲ್ಲವೇ? ಆರೋಗ್ಯವು ಕೆಟ್ಟಿರುವಾಗಲಂತೂ ಮತ್ತೆ ಆರೋಗ್ಯವನ್ನು ದಯಪಾಲಿಸತಕ್ಕವನು ಈ ವೈದ್ಯನೇ ಸರಿ! ಕೃಷ್ಣನು ವೈದ್ಯನಂತೆ ಬರುವನು!

ಹೀಗೆ ರವಿಯಂತೆ, ಪ್ಲವದಂತೆ, ಮೇಘದಂತೆ, ನಿಧಿಯಂತೆ, ಹಾಗೂ ಭಿಷಕ್ಕಿನಂತೆ - ಬರುವವ, ಬಂದು ಕುಶಲತೆಯನ್ನು ಕೊಡುವವನೇ ಕೃಷ್ಣ. ಕುಶಲವನ್ನು ಕೊಡಲೆಂದೇ ಬರುತ್ತಿರುವನು, ಈ ಶೌರಿ - ಎನ್ನುತ್ತಾನೆ, ಲೀಲಾಶುಕ.

ಏನು ಶೌರಿಯೆಂದರೆ? ಶೂರ-ವಂಶದಲ್ಲಿ ಬಂದವನು ಶೌರಿ. ಶೂರರ ವಂಶವು ಶೂರ-ವಂಶ. ಕೃಷ್ಣನ ಪೂರ್ವಜರು ಶೌರ್ಯದಲ್ಲಿ ಕಡಿಮೆಯೇನಲ್ಲ. ಇದರ ಜೊತೆಯಲ್ಲಿ ಶೂರಸೇನನ ವಂಶದಲ್ಲಿ ಬಂದವನು ಶೌರಿ. ಶೂರಸೇನನನ್ನು ಶೂರನೆಂದೇ ಸಂಕ್ಷೇಪವಾಗಿ ಕರೆಯುವುದುಂಟು. ಭೀಮಸೇನನನ್ನು ಭೀಮನೆಂದೇ ಹೇಳುವುದಿಲ್ಲವೇ? ಹೀಗಾಗಿ ಶೂರನ ವಂಶದಲ್ಲಿ ಬಂದನೆಂಬ ಕಾರಣಕ್ಕೂ ಇವನು ಶೌರಿ.

ಇಂತಹ ಶೂರನಾದ ಶೌರಿಯು ನಮಗೆ ಕುಶಲತೆಯನ್ನು ದಯಪಾಲಿಸಲಿ - ಎಂದು ನಾವು ಕೇಳೀಕೊಳ್ಳುವುದಲ್ಲ; ಆತನನ್ನು ಕರೆದರೆ ಕುಶಲವನ್ನು ಕೊಡಲೆಂದೇ ಬರುವನೆಂದು ಹೇಳುತ್ತಾನೆ, ಲೀಲಾಶುಕ. ಈ ಶ್ಲೋಕದಲ್ಲಿ ಸಂಸಾರವೆಂಬುದು ಕತ್ತಲೆಯಂತೆ, ಸಾಗರದಂತೆ, ಕೊನೆಯಿಲ್ಲದ ತರ್ಷದಂತೆ, ಎಂದರೆ ಬಾಯಾರಿಕೆಯಂತೆ, ನಿರ್ಧನತೆಯಂತೆ, ಹಾಗೆಯೇ ದೀರ್ಘವೂ ತೀವ್ರವೂ ಆದ ರುಜಿನದಂತೆ - ಎಂಬ ಧ್ವನಿಗಳು ಅನುಸ್ಯೂತವಾಗಿ ಬರುತ್ತಿರುವುದನ್ನು ಗಮನಿಸಬಹುದು.

ತಮಸಿ ರವಿರಿವೋದ್ಯನ್, ಮಜ್ಜತಾಮ್ ಅಂಬುರಾಶೌ

   ಪ್ಲವ ಇವ, ತೃಷಿತಾನಾಂ ಸ್ವಾದು-ವರ್ಷೀವ ಮೇಘಃ, |

ನಿಧಿರಿವ ನಿಧನಾನಾಂ, ದೀರ್ಘ-ತೀವ್ರಾಮಯಾನಾಂ

   ಭಿಷಗಿವ, ಕುಶಲಂ ನೋ ದಾತುಮ್ ಆಯಾತಿ ಶೌರಿಃ ||

ಸೂಚನೆ : 04/1/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.   

Sunday, December 29, 2024

ಶ್ರೀರಾಮನು ಶಿವಧನುಸ್ಸನ್ನು ಮುರಿದದ್ದರ ಮರ್ಮ (Śriramanu Sivadhanussannu Muridaddara Marma)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀರಾಮನು ಶಿವಧನುಸ್ಸನ್ನು ಮುರಿದ ಕಥೆಯನ್ನು ತಿಳಿಯದವರಿಲ್ಲ. ರಾಮಲಕ್ಷ್ಮಣರು ಯಜ್ಞರಕ್ಷಣೆಯನ್ನು ಮಾಡಿಯಾದಮೇಲೆ, ವಿಶ್ವಾಮಿತ್ರರೊಂದಿಗೆ ಜನಕನ ರಾಜಧಾನಿಯಾದ ಮಿಥಿಲೆಗೆ ಹೋದರು. ವಿಶ್ವಾಮಿತ್ರರಿಗೆ ಜನಕನ ಬಳಿಯಿದ್ದ ಶಿವಧನುಸ್ಸಿನ ಬಗ್ಗೆ ಗೊತ್ತಿತ್ತು. ರಾಮನು ಯಾರೆಂದೂ ಅವರಿಗೆ ತಿಳಿದೇ ಇತ್ತು. ಜಗತ್ಕಲ್ಯಾಣವಾಗಬೇಕಿದ್ದರಿಂದ ಈ ದೇವನಾಟಕವನ್ನು ಮುಂದುವರೆಸುವಲ್ಲಿ ಅವರೂ ಪಾತ್ರವಹಿಸಬೇಕಿತ್ತು. ರಾಮಲಕ್ಷ್ಮಣರು ಶಿವಧನುಸ್ಸನ್ನು ನೋಡುವ ಸಲುವಾಗಿ ಅಲ್ಲಿಗೆ ಬಂದಿರುವರೆಂದು ಜನಕರಾಜನಿಗೆ ಅವರು ತಿಳಿಸಿದರು. ಜನಕರಾಜನು ತನ್ನ ವಂಶದಲ್ಲಿ ತಲೆಮಾರುಗಳಿಂದ ಅದು ಹೇಗೆ ನ್ಯಾಸವಾಗಿ ಉಳಿದಿದೆ ಎಂಬುದನ್ನು ತಿಳಿಸಿದನು. ಅದರೊಂದಿಗೇ ತನ್ನ ಸಾಕುಮಗಳಾದ ಸೀತೆಯ ಬಗ್ಗೆಯೂ ತಿಳಿಸಿ ಅವಳು ವೀರ್ಯಶುಲ್ಕಳೆಂದು ಹೇಳಿದನು. ವೀರ್ಯಶುಲ್ಕವೆಂದರೆ ನಿಶ್ಚಯಮಾಡಿದ ಯಾವುದೋ ಒಂದು ಪರಾಕ್ರಮವನ್ನು ತೋರಿಸಿ ಗೆದ್ದುಕೊಳ್ಳುವುದು, ಎಂದರ್ಥ. ಸೀತೆಯನ್ನು ತಮ್ಮವಳನ್ನಾಗಿಸಿಕೊಳ್ಳಬೇಕೆಂದಿದ್ದ ರಾಜರುಗಳಿಗೇನೂ ಕಡಿಮೆಯಿರಲಿಲ್ಲ. ಆದ್ದರಿಂದ ಆ ಹಿಂದೆಯೇ ಹಲವರು ಬಂದು ಜನಕನಲ್ಲಿ ಏನು ಮಾಡಬೇಕೆಂದು ಕೇಳಿದಾಗ. ಜನಕರಾಜನಾದರೋ ಇಟ್ಟ ಪರೀಕ್ಷೆಯು ಅತ್ಯಂತ ಕಠಿನವೇ ಸರಿ. ಶಿವಧನುಸ್ಸಿನ ಹೆದೆಯೇರಿಸಿದವನಿಗೆ ಸೀತೆಯನ್ನು ಮದುವೆಮಾಡಿಕೊಡುವುದಾಗಿ ಅವನು ಹೇಳಿದನು.

ಆ ರಾಜರುಗಳು ಪ್ರಯತ್ನಿಸಿ ವಿಫಲರಾಗಿದ್ದರು. ಸೀತೆಯನ್ನು ಅಂತಹವರಿಗೆ ಮದುವೆಮಾಡಿಕೊಡುವುದಿಲ್ಲವೆಂದು ಜನಕಮಹಾರಾಜನು ಹೇಳಿದಾಗ, ಅವರಿಗೆಲ್ಲ ಇದೊಂದು ಅವಮಾನವಾಗಿ ಕಂಡಿತು. ಸಾಧಾರಣರು ಅಸಾಧಾರಣವಾದ ಸವಾಲನ್ನೆದುರಿಸಿ ವಿಫಲರಾದರೆ ತಮ್ಮಲ್ಲಿ ಆ ಅರ್ಹತೆಯಿಲ್ಲವೆಂದು ಒಪ್ಪುವ ಬದಲು ಸವಾಲೇ ಸರಿಯಲ್ಲವೆಂದು ವಾದಿಸುವುದುಂಟು. ಅದು ಅವರ ಅಸಾಮರ್ಥ್ಯದ ಸೂಚಕ. ಅವರು ಹಾಕಿದ ಮುತ್ತಿಗೆಯನ್ನೆದುರಿಸಿದ ಜನಕರಾಜನು ಕೊನೆಗೆ ದೇವತೆಗಳ ಸಹಾಯದಿಂದ ಅವರೆಲ್ಲರನ್ನೂ ಸದೆಬಡಿಯುವಂತಾಯಿತು. ಈಗ ರಾಮನಿಗೆ ಆ ಮಹಾಧನುಸ್ಸನ್ನು ಜನಕನು ತೋರಿಸಲೊಪ್ಪಿದನು. ಆ ಧನುಸ್ಸನ್ನಿಟ್ಟಿದ್ದ ಎಂಟು ಚಕ್ರಗಳುಳ್ಳ ಪೆಟ್ಟಿಗೆಯನ್ನು ಕಷ್ಟದಿಂದ ಎಳೆದು ತರಲು ೫೦೦೦ ಮಂದಿ ಕಟ್ಟಾಳುಗಳು ಬೇಕಾದರೆಂದು ವಾಲ್ಮೀಕಿಗಳು ವರ್ಣಿಸುತ್ತಾರೆ. ಜನಕಮಹಾರಾಜನಿಗೆ ಈ ರಾಜಕುಮಾರರಿಂದ ಅದನ್ನು ಅಲ್ಲಾಡಿಸುವುದೂ ಸಾಧ್ಯವಾಗದೆಂದೇ ಮನಸ್ಸಿನಲ್ಲಿದ್ದದ್ದು. ರಾಮನು ವಿಶ್ವಾಮಿತ್ರರ ಅನುಜ್ಞೆ ಪಡೆದು, ಆ ಮಹಾಧನುಸ್ಸನ್ನು ಹತ್ತಿರದಿಂದ ನೋಡಿ, ತಾನು ಅದನ್ನು ಎತ್ತಲು ಪ್ರಯತ್ನಿಸುತ್ತೇನೆಂದನು. ಎಲ್ಲರೂ ನೋಡನೋಡುತ್ತಲೇ ಅದರ ಮಧ್ಯವನ್ನು ಹಿಡಿದು ಅನಾಯಾಸವಾಗಿ ಎತ್ತಿದ್ದಲ್ಲದೆ ಅದರ ಹೆದೆಯೇರಿಸಿದನು. ತನ್ನ ಕಿವಿಯವರೆಗೆ ಹೆದೆಯನ್ನು ಎಳೆದಾಗ ಆ ಮಹಾಧನುಸ್ಸು ಸಿಡಿಲಿನಂತಹ ಆರ್ಭಟ ಮಾಡಿ ಮುರಿದುಬಿದ್ದಿತು. ಇಲ್ಲಿಗೆ ಸೀತೆಯನ್ನು ವರಿಸಲು ಬೇಕಾದ ವೀರ್ಯಶುಲ್ಕವನ್ನು ಶ್ರೀರಾಮನು ಪೂರೈಸಿದಂತಾಯಿತು. ಜನಕಮಹಾರಾಜನ ಹರ್ಷಕ್ಕೆ ಪಾರವೇ ಇರಲಿಲ್ಲ!

ಇಲ್ಲಿ ನಮಗೆ ಬರುವ ಒಂದು ಪ್ರಶ್ನೆ ಇದು. ಶಿವನೇ ಪ್ರಯೋಗಿಸಿದ್ದ ಈ ಮಹಾಧನುಸ್ಸನ್ನು ಅತ್ತ ದೇವತೆಗಳೂ ಯಕ್ಷರೂ ಅಸುರರೂ ಯಾರಿಗೂ ಅಲ್ಲಾಡಿಸಲೇ ಆಗದಾಗಿತ್ತು. ಅದಿರುವ ಪೆಟ್ಟಿಗೆಯನ್ನು ಕೇವಲ ಎಳೆದುಕೊಂಡು ಬರಲು ೫೦೦೦ ದಷ್ಟಪುಷ್ಟರಾದವರು ಕಷ್ಟಪಡಬೇಕಿತ್ತು. ಇತ್ತ ಇನ್ನೂ ಎಳೆಯ ವಯಸ್ಸಿನ ಮಾನವ ರಾಜಕುಮಾರನಾಗಿದ್ದ ಶ್ರೀರಾಮನು ಅಪ್ರಯತ್ನದಿಂದಲೋ ಎಂಬಂತೆ (ಎಂದರೆ ಬಹಳ ಪ್ರಯತ್ನವೇ ಪಡದೆ) ಎತ್ತಿದ್ದಲ್ಲದೆ ಮುರಿದೂ ಬಿಟ್ಟ. ಇದು ಹೇಗೆ ಸಾಧ್ಯ? ಅದು ಭಾರವಿದ್ದರೆ, "ಆತ್ಮಾನಂ ಮಾನುಷಂ ಮನ್ಯೇ" ಎಂದು ಮುಂದೆಯೂ ಹೇಳಿಕೊಳ್ಳುವ ರಾಮನಿಗೇನು ಅಷ್ಟು ಅತಿಮಾನುಷವಾದ ದೈಹಿಕ ಶಕ್ತಿಯಿತ್ತೆಂದೇ?

ಇದನ್ನು ಹೀಗೆ ನೋಡಬಹುದೆನ್ನಿಸುತ್ತದೆ. ಆ ಧನುಸ್ಸಿನ ಭಾರ ಭೌತಿಕವಾದದ್ದಲ್ಲ. ಅದಕ್ಕಿದ್ದದ್ದು ತಪೋಭಾರ. ಮಹಾದೇವನು ದಕ್ಷಯಜ್ಞವನ್ನು ಧ್ವಂಸ ಮಾಡುವಾಗ ಹಿಡಿದಿದ್ದ ಧನುಸ್ಸಿನ ಬಲವೇನು ಸಾಮಾನ್ಯವೇ? ಶಿವನ ತಪೋಬಲದ ಪ್ರತೀಕವೂ ಆಗಿದ್ದದ್ದು ಅದು. ಬೇರೆ ಯಾರಿಗೇ ಆಗಲಿ ಅದಕ್ಕೆ ಸಮನಾದ ಶಕ್ತಿ ಇರುತ್ತದೆಂದೆಣಿಸುವುದು ಅಸಾಧ್ಯ. ಇತ್ತ ರಾಮನಾದರೋ ಸಾಕ್ಷಾದ್ ವಿಷ್ಣುವೇ. ಮಹಾದೇವನ ತಪಸ್ಸಿನ ತೂಕಕ್ಕೆ ಪಡಿತೂಕವಾಗಲು ಸಾಧ್ಯವಿದ್ದದ್ದು ವಿಷ್ಣುವಿನ ಅವತಾರಕ್ಕೆ ಮಾತ್ರವೇ. ಶಿವನೂ ವಿಷ್ಣುವೂ ಒಂದೇ ತತ್ತ್ವದ ಎರಡು ರೂಪಗಳಾಗಿದ್ದರಿಂದ ರಾಮನಿಗೆ ಮಾತ್ರ ಇದು ಸಾಧ್ಯವಾದದ್ದರಲ್ಲಿ ಆಶ್ಚರ್ಯವಿಲ್ಲ. ನಮ್ಮಲ್ಲಿ ಹಲವು ವಿಷ್ಣುಭಕ್ತರು ಶಿವನನ್ನು ಕೀಳಾಗಿ ಕಾಣುವುದೋ, ಶಿವಭಕ್ತರು ವಿಷ್ಣುವನ್ನು ಕೆಳದರ್ಜೆಯೆಂದೆಣಿಸುವುದೋ ಸರಿಯೇ ಅಲ್ಲ. ಶಿವ-ವಿಷ್ಣುಗಳು ಒಂದೇ ತತ್ತ್ವವೆಂದು ಒತ್ತಿ ಹೇಳಲು ಶ್ರೀರಂಗಮಹಾಗುರುಗಳು ಈ ಉದಾಹರಣೆ ಕೊಡುತ್ತಿದ್ದರು: ಯಜಮಾನನು ವೇಷಾಂತರದಲ್ಲಿ ಬಂದರೂ ನಾಯಿಯು ಅವನ ಗುರುತುಹಿಡಿದುಬಿಡುತ್ತದೆ. ಹಾಗೆಯೇ ಪರತತ್ತ್ವವು ಯಾವ ರೂಪದಲ್ಲಿ ಬಂದರೂ ಭಕ್ತನಾದವನು ಅದನ್ನು ಗುರುತಿಸಬೇಕು. ಈ ಮಾತುಗಳಿಂದ ಈ ಸಂನಿವೇಶದ ಹಿಂದಿನ ತತ್ತ್ವವನ್ನು ನಾವು ಅರ್ಥಮಾಡಿಕೊಳ್ಳಬಹುದಲ್ಲವೆ?

ಸೂಚನೆ : 28/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, December 21, 2024

ಧರ್ಮರಾಜನಿಗೂ ನರಕದರ್ಶನವೇ ? (Dharmarajanigu Narakadarsanave ?)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)



ಕುರುಕ್ಷೇತ್ರ ಯುದ್ಧ ಮುಗಿದಿದೆ. ಪರಮ ಭಾಗವತ ಭೀಷ್ಮಾಚಾರ್ಯರ ಅವಸಾನವೂ ಆಗಿದೆ. ತನ್ನೆಲ್ಲ ಬಂಧು ಮಿತ್ರರೊಡನೆ ದುರ್ಯೋಧನನೂ ಸತ್ತಿದ್ದಾಗಿದೆ. ಒಂದು ಭೀಕರ ಅಧ್ಯಾಯ ಮುಗಿದಂತಾಗಿದೆ.

ಶ್ರೇಷ್ಠ ರಾಜ.

ಆ ಮಹಾಯುದ್ಧದ ನಂತರ ಧರ್ಮರಾಜನ ರಾಜ್ಯಭಾರ ಸುಮಾರು ೩೬ ವರ್ಷಗಳು. ಯಮಧರ್ಮನ ಮಗ. ಕೇಳಬೇಕೇ? ನ್ಯಾಯದಿಂದ ಧರ್ಮದಿಂದ ರಾಜ್ಯವಾಳುವದು ಅವನ ರಕ್ತಗತ ಸ್ವಭಾವವೇ. ಆದರೂ ದ್ರೋಣರ ಶಸ್ತ್ರತ್ಯಾಗಕ್ಕಾಗಿ ಮನಸ್ಸಿನಿಂದ ಒಂದು ಸುಳ್ಳು ಹೇಳಿದ್ದು ಅವನ ಸತ್ಯಪ್ರಜ್ಞೆಯನ್ನು ಕಾಡುತ್ತಿದೆ. ತನ್ನ ಅಧಿಕಾರಾವಧಿಯಲ್ಲಿ ಧರ್ಮಮಯವಾಗಿಯೇ ರಾಜ್ಯವಾಳಿದ್ದಾನೆ. ಪರಮಪ್ರಿಯ  ಶ್ರೀಕೃಷ್ಣನೂ ತನ್ನ ಅವತಾರ ಮಂಗಳವನ್ನು ಮಾಡಿಕೊಂಡಿದ್ದಾನೆ. ಧರ್ಮರಾಜ ಮೊಮ್ಮಗನಿಗೆ ರಾಜ್ಯಾಭಿಷೇಕ ಮಾಡಿ  ತಮ್ಮಂದಿರು, ದ್ರೌಪದಿಯ ಜೊತೆಗೇ ಹಿಮಾಲಯವೇರಿದ್ದಾನೆ. ಒಬ್ಬೊಬ್ಬರೂ ಅವರವರ ಕರ್ಮಾನುಸಾರವಾಗಿ ಬಿದ್ದು ಸತ್ತಿದ್ದಾರೆ. ಸಶರೀರನಾಗಿ ಧರ್ಮಜ ಒಬ್ಬನೇ ಸ್ವರ್ಗ ಸೇರಿದ್ದಾನೆ.

ಸ್ವರ್ಗದ ಬಾಗಿಲಲ್ಲಿ ಆಘಾತ

ಸ್ವರ್ಗದ ಆಸ್ಥಾನಕ್ಕೆ ಪ್ರವೇಶಿಸಿದಾಗ ಅವನಿಗೆ ಆಘಾತ ಕಾದಿತ್ತು. ದುಷ್ಟ ದುರ್ಯೋಧನ ಸ್ವರ್ಗಾರೂಢ. ಏನಾಶ್ಚರ್ಯ! ಅಲ್ಲಿನ ದಿವ್ಯಾಸನದಲ್ಲಿ ತನ್ನ ತಮ್ಮಂದಿರು, ದ್ರೌಪದಿ, ತನಗಾಗಿ ದುಡಿದವರನ್ನೆಲ್ಲ ನಿರೀಕ್ಷಿಸಿದ್ದ. ಅವರ್ಯಾರೂ ಅಲ್ಲಿಲ್ಲ. ದುಷ್ಟ, ವಂಚಕ, ಯಾರಿಂದ ಇಷ್ಟೆಲ್ಲಾ ಬಂಧುಗಳ ವಧೆಯಾಯಿತೋ ಅಂತಹವನು ಸ್ವರ್ಗದಲ್ಲಿ!

ಸಿಟ್ಟೇ ಬಾರದ ಧರ್ಮರಾಜನಿಗೆ ಮಿತಿಮೀರಿದ ಕೋಪ. ಜೊತೆಯಲ್ಲಿದ್ದ ದೇವ ಧೂತನಿಗೆ ಹೇಳಿದ- ಇದೆಂತಹ ನ್ಯಾಯ ದೇವತೆಗಳದ್ದು? ನನಗಾಗಿ ಜೀವಿಸಿದವರು, ಧರ್ಮಕ್ಕಾಗಿ ದುಡಿದವರು,ಮಡಿದವರು ಇಲ್ಲದ ಸ್ವರ್ಗವೇ ನನಗೆ ಬೇಡ. ಅವರೆಲ್ಲ ಎಲ್ಲಿದ್ದಾರೆ ಹೇಳು ಎಂದು ಹೊರಟೇ ಬಿಟ್ಟ. ದೇವಧೂತ ಹಾಗೇ ಮಾಡಿದ.

ನರಕದ ಕರಾಳತೆ.

ಸ್ವಲ್ಪ ಮಾರ್ಗ ಕ್ರಮಿಸಿರಬಹುದು. ದಾರಿಯಲ್ಲೆಲ್ಲ ಭಯಂಕರ ವಾತಾವರಣ. ಹೆಣದ ರಾಶಿ. ಅರೆ ಸತ್ತು ರಕ್ತದ ಮಡುವಿನಲ್ಲಿ ನರಳುತ್ತಿರುವವರು, ಸಾಯದೇ, ಬದುಕದೇ ಕೊನೆಯಿಲ್ಲದ ಯಾತನೆ ಅನುಭವಿಸುತ್ತಿರುವವರು, ಒಬ್ಬರಿಗೆ ಕೈಗಳೇ ಇಲ್ಲ ಇನ್ನೊಬ್ಬರಿಗೆ ಹೊಟ್ಟೆಯೇ ಕಾಣದು.ಮಗದೊಬ್ಬರಿಗೆ ತಲೆಯೇ ಇಲ್ಲ . ಆದರೂ ನರಳುತ್ತಿದ್ದಾರೆ. ಭಯಾನಕವಾದ ನರಕ ದರ್ಶನ. ನೋಡಲಾಗಲಿಲ್ಲ ಧರ್ಮಜನಿಗೆ. ಅಲ್ಲಿಂದ ಹೊರಟ.

ಮಹಾತ್ಮ.. ಹೋಗದಿರು...

ಆದರೆ ಆರ್ತವಾದ ಅನೇಕ ದನಿಗಳು ಕೇಳಿದವು. ಮಹಾತ್ಮ, ಹೋಗದಿರು. ನಿನ್ನ ಸಾನ್ನಿಧ್ಯದಿಂದ ಬಂದ ಗಾಳಿ ನಮ್ಮನ್ನು ತಂಪಾಗಿ ಇಟ್ಟಿದೆ. ನರಕದಲ್ಲೂ ನಿನ್ನ ಸಾನ್ನಿಧ್ಯ ನೆಮ್ಮದಿಯನ್ನು ತರುತ್ತಿದೆ. ಅದನ್ನು ಇನ್ನೂ ಕೆಲಕಾಲ ಅನುಭವಿಸುತ್ತೇವೆ. ಹೋಗಬೇಡ... ಧರ್ಮಜನ ಕರುಣೆಯ ಕಟ್ಟೆ ಒಡೆಯಿತು. ಏನೂ ಮಾಡಲಾಗದೇ ಅಲ್ಲೇ ನಿಂತ. ನೀವೆಲ್ಲ ಯಾರು ಎಂದ- ಆಕಡೆಯಿಂದ ಧ್ವನಿ ಬಂತು- ನಾನು ಅರ್ಜುನ, ನಾನು ಭೀಮ, ನಾನು ದ್ರೌಪದಿ, ನಾನು ಕರ್ಣ..ಇನ್ನೂ ಎಷ್ಟೋ ದನಿಗಳು ಏಕಕಾಲದಲ್ಲಿ ಧರ್ಮಜನಲ್ಲಿ ಮೊರೆಯಿಡುತ್ತಿವೆ. ಧರ್ಮಜನಿಗೆ ಮತ್ತೆ ಆಘಾತ. ಏನಿದು ಅನ್ಯಾಯ? ಧರ್ಮಕ್ಕಾಗಿ ಬದುಕಿದ್ದವರಿಗೆ ನರಕವೇ? ದೇವಭೂಮಿಯಲ್ಲೂ ಇಂತಹ ಅನ್ಯಾಯವೇ? ಸಿಟ್ಟಾಗಿ ಕೇಳಿದ ದೇವಧೂತನನ್ನು. ದೇವಧೂತ ದೇವತೆಗಳೆಡೆಗೆ ನಡೆದ. ಧರ್ಮಜನ ಸ್ಥಿತಿಯನ್ನು ಅರುಹಿದ. ಎಲ್ಲ ದೇವತೆಗಳೂ ಇಂದ್ರಸಮೇತರಾಗಿ ಧರ್ಮಜನೆಡೆಗೆ ಬಂದರು.

ಮೊದಲು ಸ್ವರ್ಗ-ನಂತರ ನರಕ

ಇಂದ್ರ ಮಾತನಾಡಿದ- ದಿವ್ಯ ಲೋಕಗಳು ಕಾದಿವೆ ನಿನಗೆ. ಸಿಟ್ಟಾಗಬೇಡ. ಅಧರ್ಮ ಮಾಡಿದವರಿಗೆ ಮೊದಲು ಸ್ವರ್ಗ ಆಮೇಲೆ ನರಕ. ಯುದ್ಧದಲ್ಲಿನ ದುರ್ಯೋಧನನ ವೀರಗತಿ ಅವನಿಗೆ ಕೆಲಕಾಲ ಸ್ವರ್ಗವನ್ನು ಒದಗಿಸಿದೆ. ನೀನು ದ್ರೋಣರು ಶಸ್ತ್ರತ್ಯಾಗ ಮಾಡಲು ಮನಸ್ಸಿನಿಂದ ಹೇಳಿದ ಸುಳ್ಳಿಗೆ ನಿನಗೆ ನರಕದರ್ಶನ. ನಿನ್ನ ಅನುಜರು, ಅಗ್ರಜ ಕರ್ಣ ಅವರ ಸಣ್ಣ ಸಣ್ಣ ಅಧರ್ಮದ ಕೆಲಸಗಳಿಗಾಗಿ ಅವರಿಗೆ ತತ್ಕಾಲದ ನರಕ. ಅವರೆಲ್ಲ ನರಕಭಾಗಿಗಳಾದದ್ದು ನೀನು ನೋಡಿ ಸಂಕಟಪಟ್ಟಿದ್ದೀ. ಅದೇ ನಿನ್ನ ಅತ್ಯಲ್ಪ ಪಾಪವನ್ನು ಕಳೆದಿದೆ. ಈಗ ದೇವಗಂಗೆಯಲ್ಲಿ ಸ್ನಾನ ಮಾಡು ಎಂದನು. ಅದಾದ ನಂತರ ಧರ್ಮಜನಿಗೆ ಮಾನುಷ ಭಾವ ಹೋಯಿತು. ತನ್ನ ತಮ್ಮಂದಿರನ್ನೆಲ್ಲ ದಿವ್ಯಲೋಕದಲ್ಲಿ ಕಂಡು ಸಂತೋಷಗೊಂಡ ಎಂಬುದು ಮುಂದಿನ ಕಥೆ.

ಧರ್ಮಜನಿಗೂ ನರಕ ದರ್ಶನವೇ?

ಜೀವನ ಪೂರ್ತಿ ಧರ್ಮಿಷ್ಠನಾಗಿ ನಡೆದ ಧರ್ಮಜನಿಗೂ ಒಂದು ಸಣ್ಣ ತಪ್ಪಿಗಾಗಿ ನರಕದರ್ಶನ ತಪ್ಪಲಿಲ್ಲ. ನಾವೆಲ್ಲಾ ಜೀವನದಲ್ಲಿ ಎಷ್ಟು ತಪ್ಪು ಹೆಜ್ಜೆಗಳಿಡುತ್ತೇವೋ ಲೆಕ್ಕವೇ ಇಲ್ಲ. ಈ ಕಥೆ ನಮ್ಮ ಜೀವನ ಪರಿಷ್ಕಾರವನ್ನು ಹೇಳುತ್ತಿದೆ. ಪಂಚ ಪಾಂಡವರೂ ಸಹ ತಮ್ಮ ಸಣ್ಣ ಸಣ್ಣ ದೋಷಗಳಿಗೆ ನರಕದ ಅನುಭವ ಮಾಡಿಕೊಂಡರೂ ಹೆಚ್ಚಾಗಿ ಧರ್ಮಮಾರ್ಗದಲ್ಲಿ ನಡೆದುದರಿಂದ ಶಾಶ್ವತ ಲೋಕಗಳು ಪ್ರಾಪ್ತಿಯಾದವು. ಮೊದಲು ಸುಖ ಸಿಕ್ಕಿ ಕಡೆಯಲ್ಲಿ ನರಕ ನಿಜಕ್ಕೂ ಅಸಹನೀಯ. ದುರ್ಯೋಧನನಿಗೆ ಅವನು ಮಾಡಿದ ದುಷ್ಕೃತ್ಯಗಳಿಗೆ ಅದೇ ಪ್ರಾಪ್ತಿ. ದೇವಭೂಮಿಯಲ್ಲಿ ಅನ್ಯಾಯಕ್ಕೆ ಎಡೆಯಿಲ್ಲ. " ದೇವಭೂಮಿಯಲ್ಲಿ ಇಲ್ಲಿನಂತೆ ಉಬ್ಬು-ತಗ್ಗುಗಳಿಲ್ಲಪ್ಪಾ" ಎಂಬ ಶ್ರೀರಂಗ ಮಹಾಗುರುಗಳ ಮಾತು ಸದಾ ಸ್ಮರಣೀಯ. ಅವರವರ ಕೆಟ್ಟ-ಒಳ್ಳೆಯ ಕರ್ಮಗಳು ಜೊತೆಗೇ ಫಲಕೊಡಲು ಬರುತ್ತವೆ. ಅದರಿಂದ ಯಾರೂ ಹೊರತಲ್ಲ ಎಂಬುದನ್ನು ಈ ಕಥೆ ಸಾರುತ್ತಿದೆ. ಧರ್ಮರಾಜನ ಜೀವನವಿಡೀ ಧರ್ಮಮಯವಾಗಿತ್ತು,ತಪೋಮಯವಾಗಿತ್ತು. ಎಂದೇ ಅವನು ಸಶರೀರನಾಗಿ ಮೇಲಿನ ಲೋಕಕ್ಕೆ ಹೋಗುವನ್ತಾಗಿದ್ದು. ಧರ್ಮ ಮಾರ್ಗದಿಂದ ಕಿಂಚಿತ್ತೂ ಹೆಜ್ಜೆ ಆಚೆ ಇಡುವುದನ್ನು ಅವನು ಕನಸಿನಲ್ಲೂ ಯೋಚಿಸುತ್ತಿರಲಿಲ್ಲ. ಅಂತಹ ಧರ್ಮಜನಿಗೇ ಕಡೆಯಲ್ಲಿ ಕಿಂಚಿತ್ ಧರ್ಮಲೋಪಕ್ಕಾಗಿ ನರಕ ದರ್ಶನ ಎಂದಾಗ ನಾವೆಲ್ಲಾ ನಮ್ಮ ಜೀವನಗಳನ್ನು ಎಷ್ಟು ಪರಿಷ್ಕಾರ ಮಾಡಿಕೊಳ್ಳಬೇಕಾಗಿದೆ. ಇನ್ನೊಂದು ಮುಖ್ಯವಾದ ವಿಷಯವನ್ನು ಈ ಕಥೆ ತಿಳಿಸುತ್ತಿದೆ. ಧರ್ಮರಾಜನು ನರಕದ ಸಮೀಪದಿಂದ ನಿರ್ಗಮಿಸುವಾಗ ಅಲ್ಲಿನ ಜೀವಿಗಳು ಹೋಗಬೇಡ ಎಂದು ಪ್ರಾರ್ಥಿಸಿದ್ದು. ಮಹಾತ್ಮರ ಸಾನ್ನಿಧ್ಯ ಎಂತಹ ಸನ್ನಿವೇಶದಲ್ಲೂ ಹಿತವನ್ನು, ನೆಮ್ಮದಿಯನ್ನು ತರುತ್ತದೆ ಎಂಬುದಕ್ಕೆ ಉದಾಹರಣೆ ಇದು. ಧರ್ಮರಾಜನ ತಪಸ್ಸು, ಎಂದೆಂದಿಗೂ ಧರ್ಮವನ್ನು ಬಿಡದ, ಅಸತ್ಯದ ಜೊತೆ ಎಂದೂ ರಾಜಿ ಮಾಡಿಕೊಳ್ಳದ ಅವನ ಸ್ವಭಾವ, ಎಲ್ಲವೂ ಅವನಿದ್ದ ಜಾಗವನ್ನೆಲ್ಲ ಪವಿತ್ರಗೊಳಿಸಿದ್ದವು. ಅವನ ಸಾಂಗತ್ಯವು ನೆಮ್ಮದಿಯ ತಾಣವಾಗಿತ್ತು. ಆ ತಂಪಿನ ಸತ್ಪರಿಣಾಮ ಅವನ ಹತ್ತಿರ ಇದ್ದವರಿಗೆಲ್ಲ ಸಂಕ್ರಮಣವಾಗುತ್ತಿತ್ತು. ಹೀಗೆ ಮಹಾತ್ಮರ ಜೀವನವನ್ನು ನೋಡಿ ನಮ್ಮ ಜೀವನಗಳನ್ನು ಹಸನುಗೊಳಿಸಿಕೊಳ್ಳಲು ಈ ಕಥೆ ಕೈಗನ್ನಡಿಯಾಗಿದೆಯಲ್ಲವೇ? ಅತ್ತ ನಮ್ಮೆಲ್ಲರ ಜೀವನಯಾತ್ರೆ ಸಾಗಲಿ ಎಂದು ಸರ್ವೆಶ್ವರನನ್ನು ಪ್ರಾರ್ಥಿಸೋಣ.

ಸೂಚನೆ : 21/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಕೃಷ್ಣಕರ್ಣಾಮೃತ 44 ಕದ್ದಮಾಲಿನೊಂದಿಗೆ ಸಿಕ್ಕಿಬಿದ್ದ ಪೋರನ ತುಂಟಾಟ (Krishakarnamrta 44 Kaddamalinondige Sikkibidda Porana Tuntata)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಕಸ್ತ್ವಂ ಬಾಲ

ಮಕ್ಕಳ ಮಾತು ಎಂದಿಗೂ ಚೆಂದವೇ. ವರ-ವಲ್ಲವಿಯೊಬ್ಬಳೊಂದಿಗೆ - ಎಂದರೆ ಹಿರಿಯ ಗೊಲ್ಲತಿಯೊಬ್ಬಳ ಜೊತೆ - ಬಾಲಕೃಷ್ಣನ ಒಂದು ಸಂಭಾಷಣೆಯನ್ನು ಲೀಲಾಶುಕ ನಮ್ಮ ಮುಂದಿಟ್ಟಿದ್ದಾನೆ. ಈ ಬಾಲಕನ ತುಂಟತನಕ್ಕೆ, ಅದಕ್ಕಂಟಿಬರುವ ಮಾತಿನ ಜಾಣ್ಮೆಗೆ, ಕನ್ನಡಿ ಹಿಡಿಯುವ ಶ್ಲೋಕವಿದು.

ಮತ್ತೊಬ್ಬರ ಮನೆಗೆ ನುಗ್ಗಿ ಕದಿಯುವ ಈ ಪೋರನ ಧಾರ್ಷ್ಟ್ಯವದೆಷ್ಟು! ಕದ್ದ ಮಾಲಿನೊಂದಿಗೆ ಸಿಕ್ಕಿಬಿದ್ದ ಕಳ್ಳನನ್ನು ಒಂದು ಅಧಿಕಾರ-ವಾಣಿಯಿಂದ ದಬಾಯಿಸಬಹುದಲ್ಲವೇ? ಆದರೂ ಕದ್ದಿರುವವ ಒಂದು ಮುದ್ದುಮಗುವೆಂದಾಗಿಬಿಟ್ಟರೇ ಕೋಪವೊಂದಿಷ್ಟು ಇಳಿದುಹೋಗುವುದು. ಅದರ ಮೇಲೆ ತೋರಿಸತಕ್ಕದ್ದಾದರೂ ಒಂದು ಕಪಟ-ಕೋಪವನ್ನೇ ಸರಿ! ಮಕ್ಕಳು ಬೆಳೆಯುವುದು ನೆರೆಹೊರೆಯವರ ಮನೆಯಲ್ಲೇ - ಎಂಬ ಉದ್ಗಾರವು ಪ್ರಸಿದ್ಧವೇ. ಆಗೊಮ್ಮೆ ಈಗೊಮ್ಮೆಯಾದರೂ ತಮ್ಮ ಮಕ್ಕಳನ್ನು ಒಂದಿಷ್ಟಾದರೂ ಸಿಡುಕಲೇಬೇಕಾದ, ಅಥವಾ ಕೋಪ ತೋರಿಸುವಂತೆಯಾದರೂ ಮಾತನಾಡಲೇಬೇಕಾದ, ಪ್ರಸಂಗಗಳು  ಅಪ್ಪ-ಅಮ್ಮಂದಿರಿಗೆ ಬರಬಹುದು; ಆದರೆ ಅಕ್ಕಪಕ್ಕದ ಮನೆಯವರು ಮುದ್ದಾಡುವುದೇ ಹೆಚ್ಚು. ಚೇಷ್ಟೆ ಮಾಡಿದವರಾದರೂ ಮಕ್ಕಳು ಮುದ್ದಾದ ಒಂದು ಮುಗುಳ್ನಗೆ ನಕ್ಕರೆ ಸಾಕು, ಅಷ್ಟರಲ್ಲಿ ಕೋಪವೇ ಮಾಯವಾದೀತು, ಮರೆತೇಹೋದೀತು!

ಬೆಣ್ಣೆ ಕದಿಯುವ ಕೃಷ್ಣ ಯಾರಿಗೆ ಗೊತ್ತಿಲ್ಲ? ಅಂತೂ ಹೀಗೇ ಒಬ್ಬ ಗೋಪಸ್ತ್ರೀಯ ಮನೆಗೆ ನುಗ್ಗಿದ್ದಾನೆ, ಕೈಹಾಕಿರುವುದು ನೇರಾಗಿ ಬೆಣ್ಣೆಗೇ. ಯಾರೂ ಇಲ್ಲವೆಂದುಕೊಂಡು ಧೈರ್ಯದಿಂದ ಬೆಣ್ಣೆಯನ್ನು ಬಾಚಿಕೊಳ್ಳುತ್ತಿರುವಷ್ಟರಲ್ಲೇ ಅಲ್ಲಿಯ ಗೊಲ್ಲತಿಯು ಪ್ರತ್ಯಕ್ಷವಾಗಿದ್ದಾಳೆ. ಆತನು ಯಾರೆಂಬುದನ್ನು ತಾನರಿತಿಲ್ಲವೆಂಬಂತೆ ನಟಿಸುತ್ತಾ, "ಯಾರೋ ನೀನು, ಹುಡುಗಾ?" ಎಂದು ಪ್ರಶ್ನಿಸಿದ್ದಾಳೆ. ಪ್ರಶ್ನಿಸುವವರು ಮಾತಿನಲ್ಲಿ ಸ್ವಲ್ಪ ಗಡಸು ತೋರಿದರೆ, ಉತ್ತರ ಕೊಡುವವರೂ ಸ್ವಲ್ಪ ದಿಟ್ಟರಾಗಿಯೇ ವರ್ತಿಸುವರೋ ಏನೋ? ಅದಕ್ಕೇ ಕೃಷ್ಣನು, ತನ್ನ ಅಣ್ಣನ ಹೆಸರನ್ನೇ ಬಳಸಿ ತನ್ನ ಪರಿಚಯವನ್ನು ಹೇಳುತ್ತಾನೆ: "ನಾನು ಬಲಾನುಜ". ಅನುಜ ಎಂದರೆ ತಮ್ಮ. ಬಲರಾಮನ ತಮ್ಮ ನಾನು - ಎನ್ನುತ್ತಿದ್ದಾನೆ. ತನಗಿಂತಲೂ ಮೊದಲೇ ಹುಟ್ಟಿದವ, ಎಂದೇ ಹೆಚ್ಚು ಪ್ರಸಿದ್ಧನೆಂಬ ಕಾರಣ. ಯಾರನ್ನಾದರೂ ಕರೆಯಬೇಕಾದರೆ ಅವರ ಹೆಸರನ್ನು ಸಂಕ್ಷೇಪ ಮಾಡಿ ಕರೆಯುವುದು ಲೋಕ-ಸಾಮಾನ್ಯವಲ್ಲವೇ? ಪತಂಜಲಿಯ ಮಹಾಭಾಷ್ಯದಲ್ಲೇ ಹೆಸರನ್ನು ಸಂಕ್ಷೇಪಿಸುವ ಉದಾಹರಣೆ ದೊರೆಯುತ್ತದೆ. ಸತ್ಯಭಾಮೆಯನ್ನು ಕರೆಯಲು ಸತ್ಯಾ ಎಂದರೂ ಆಯಿತು, ಭಾಮಾ ಎಂದರೂ ಆಯಿತು, ಸತ್ಯಭಾಮಾ ಎಂದರೂ ಆಯಿತು! ಹಾಗೆ ಇಲ್ಲಿ ಬಲರಾಮನು "ಬಲ"ನಾಗಿದ್ದಾನೆ. ಕೃಷ್ಣನಿಗೂ ಹಾಗೆಯೇ ರೂಢಿಯಾಗಿತ್ತೇನೋ?

ಅಷ್ಟೇ ಅಲ್ಲ. ತಾನು ಮಾಡುತ್ತಿರುವುದು ಕಳ್ಳತನವಾದ್ದರಿಂದ, ಮನೆಯ ಯಜಮಾನಿ ಬೈಯುತ್ತಾಳೆ ಎಂಬ ಖಾತ್ರಿ. ಹೆದರಿಸುವವರಿಗೆ ಪ್ರತಿಯಾಗಿ ಹೆದರಿಸಬೇಡವೇ? ಅದಕ್ಕೇ ಹೇಳುತ್ತಿರುವುದು, ನಾನು "ಬಲನ ತಮ್ಮ" - ಎಂದು. ಏನು ಹಾಗೆಂದರೆ? ಮಾತಿನಲ್ಲಿ ಧ್ವನಿಯಿದೆ. ನಾನು ಚಿಕ್ಕವನಿರಬಹುದು. ನನ್ನ ಅಣ್ಣ ದೊಡ್ಡವನು. ಅವನು ಬಲಶಾಲಿ. ಆತನ ಹೆಸರೇ "ಬಲ" ಅಲ್ಲವೇ? ಬಲಾನುಜನಿಗೂ ಶಕ್ತಿಯಿರುತ್ತದೆ. ಒಂದು ವೇಳೆ ಇಲ್ಲದಿದ್ದರೂ, ನನ್ನಣ್ಣ ನನ್ನ ಸಹಾಯಕ್ಕಿದ್ದಾನೆ, ಗೊತ್ತಿರಲಿ - ಎಂಬ ಧ್ವನಿ! ಇರಲಿ. ಮುಂದೇನಾಯಿತು, ನೋಡುವಾ. ಗೊಲ್ಲತಿ ಕೇಳುತ್ತಾಳೆ: "ಇಲ್ಲಿ ನಿನಗೇನು ಕೆಲಸ?" ಅದಕ್ಕೆ ತುಂಟ ಕೃಷ್ಣನ ಥಟ್ಟನೆಯ ಉತ್ತರ "ಇಲ್ಲ, ನಮ್ಮ ಮನೆಯಿದು - ಎಂದುಕೊಂಡು ಬಂದುಬಿಟ್ಟೆ" ಎಂದು! ಆಹಾ! ತನ್ನ ಮನೆ ಯಾವುದೆಂದು ತೋರದೇ ಈ ಪೋಕರಿಗೆ? ಆಟ. ಮಾತಿಗೆ ಪ್ರತಿಮಾತು, ಅಷ್ಟೆ. ಎಷ್ಟೋ ಮನೆಗಳ ಪ್ಲಾನೋ ವಸ್ತುಗಳ ಜೋಡಣೆಯೋ ಒಂದೇ ತೆರನಿರಬಾರದೇನು? ಆದ್ದರಿಂದ ತನ್ನ ಮಂದಿರವಿದೆಂಬ ಭ್ರಾಂತಿಯಿಂದ ಬಂದುಬಿಟ್ಟಿದ್ದೇನೆನ್ನುತ್ತಾನೆ, ಜಾಣಕೃಷ್ಣ.

ಈ ಮಾತನ್ನು ಆ ಗೊಲ್ಲತಿ ಎತ್ತಿಹಾಕ(ಲಾರ)ಳು. ಏಕೆ? ಗೃಹ-ಸಾಮ್ಯದಿಂದ ಈ ಭ್ರಮೆಯಾಗಿದ್ದೀತು. ಅದಕ್ಕೇ ಈಗ ಅವಳು ಮತ್ತೊಂದು ಪ್ರಶ್ನೆಯೆತ್ತುತ್ತಾಳೆ. "ಇರಬಹುದು; ಆದರೆ ನವನೀತ-ಪಾತ್ರೆಯ ಬಾಯೊಳಗೆ ಕೈಹಾಕಿರುವೆಯೇತಕ್ಕೆ?" ಎಂದು. ನವನೀತವೆಂದರೆ ಬೆಣ್ಣೆ. ಹೆಸರೇ ಹೇಳುವಂತೆ ಹೊಸದಾಗಿ(ನವ-) ತೆಗೆದ(-ನೀತ) ಬೆಣ್ಣೆ. ನಮ್ಮ ಮನೆಯ ಬೆಣ್ಣೆಯ ಪಾತ್ರೆಯೊಳಗೆ ಈತನಿಗೇನು ಕೆಲಸ? ಈ ಪ್ರಶ್ನೆಗೇನು ಉತ್ತರಕೊಟ್ಟಾನು? ಚೂಟಿಯಾದ ಮಗು ಚೂಟಿಯಾದ ಉತ್ತರವನ್ನೇ ಕೊಡುತ್ತದೆ. ಕೊನೆಯ ಪಕ್ಷ ತನ್ನ ಮಟ್ಟಿಗೆ ಸರಿಯಾಗಿರುವ ಉತ್ತರ: ಕರುವೊಂದು ಕಳೆದು ಹೋಗಿತ್ತು, ಅದನ್ನು ಹುಡುಕಲೆಂದು ಕೈಹಾಕಿದ್ದು ಅಷ್ಟೇ! ಈ ತುಂಟತನದ ಉತ್ತರ ಮಾತ್ರವಲ್ಲದೆ ಒಂದು ಸಮಾಧಾನವನ್ನೂ ಹೇಳುತ್ತಾನೆ. "ಬೇಜಾರು ಮಾಡಿಕೊಳ್ಳಬೇಡ, ವಿಷಾದ ಬೇಡ, ಒಂದೇ ಕ್ಷಣವಷ್ಟೆ!" ಇದು ಅತಿಜಾಣ ಉತ್ತರವಾಯಿತು! ಇನ್ನೇನು ಹೇಳಿಯಾಳು, ಮತ್ತೇನು ಕೇಳಿಯಾಳು ಆ ಗೊಲ್ಲತಿ? ಮುಗುಳ್ನಕ್ಕಿರಬೇಕು, ಮುತ್ತಿತ್ತು ಮುದ್ದಾಡಿರಬೇಕು, ಅಷ್ಟೆ. ಹೀಗೆ ಆ ವರ-ವಲ್ಲವಿಗೆ ಚೂಟಿಯಾದ ಉತ್ತರವಿತ್ತು ದಂಗಾಗಿಸಿದ ಕೃಷ್ಣನ ಆ ಮಾತು ನಮ್ಮನ್ನು ಕಾಪಾಡಲಿ - ಎನ್ನುತ್ತಾನೆ, ಲೀಲಾಶುಕ.

ಹುಸಿ ಹೇಳಿದರೂ ಹಸನಾಗಿ ಹೇಳಬೇಕು - ಎನ್ನುತ್ತಾರಲ್ಲವೇ ಹಿರಿಯರು. "ನನ್ನ ಮನೆಯೆಂದುಕೊಂಡು ಬಂದುಬಿಟ್ಟೆ" -ಎಂಬುದು ಸುಳ್ಳೇ ಆದರೂ ನಂಬಲು ಆಸ್ಪದವಿದೆ. ಏನಾದರೂ ಕಳೆದು ಹೋಗಿದ್ದರೆ ಕೈಯಾರೆ ಹುಡುಕುವುದೂ ಸರಿಯೇ. ಪಾತ್ರೆಯೊಳಗೆ ಉಂಗುರವೋ ಪುಟ್ಟ ಆಟಿಕೆಯೋ ಬಿದ್ದುಹೋಗಿದ್ದಲ್ಲಿ ಹಾಗೆ ತಾನೆ ಹುಡುಕಬೇಕಾದದ್ದು? ಇನ್ನು ಕರುಗಳು ಕೆಲವೊಮ್ಮೆ ಸಂಜೆ ಹಿಂದಿರುಗುವಾಗ ಕೊಂಚ ವಿಳಂಬವಾಗುವುದೋ ಅಕಸ್ಮಾತ್ ದಾರಿತಪ್ಪುವುದೋ ಆಗಿಬಿಟ್ಟು ಅವನ್ನು ಹುಡುಕಹೊರಡುವುದನ್ನೂ ಈ ಪುಟ್ಟ ಕೃಷ್ಣ ಕೇಳಿರುವವನೇ, ಕಂಡಿರುವವನೇ. ಆದರೆ ಕಳೆದುಹೋಗಿರುವ ಕರುವನ್ನು ಮಡಕೆಯೊಳಗೆ ಹುಡುಕುತ್ತಿರುವೆನೆನ್ನುವುದು ಮಾತ್ರ ಶುದ್ಧ ತಲೆಹರಟೆಯೇ. ಬರೀ ಮಾತಿನ ಪುಂಡಾಟಿಕೆಯೇ, ಭಂಡಾಟಿಕೆಯೇ. ಆದರೂ ಮುದ್ದು ಮಗು ಮಾಡಿದಲ್ಲಿ, ಬಿಗಿಯಾದ ಪ್ರಶ್ನೆಗೆ ಥಟ್ಟನೊಂದು ಸುಟಿಯಾದ ಉತ್ತರವಿತ್ತಲ್ಲಿ, ಅದು ತಪ್ಪೋ ನೆಪ್ಪೋ, ನಗುವನ್ನು ತರಿಸುವಂತಹುದೇ, ಕೋಪವನ್ನು ಕರಗಿಸುವಂತಹುದೇ. ಕೃಷ್ಣನ ಮುದ್ದು ಎಂತಹುದೆಂದರೆ ಮತ್ತೊಮ್ಮೆ ಬಂದು ಕದಿಯುತ್ತಾ ಸಿಕ್ಕಿಹಾಕಿಕೊಳ್ಳಲಿ - ಎಂದು ಆಸೆ ಪಡುವಂತಹುದೇ ಸರಿ! ಆತ ಬಂದದ್ದೇ ಭಾಗ್ಯವೆನಿಸುವಂತಹುದು. ಎಂದೇ "ವರ-ವಲ್ಲವಿ"ಯೆಂದರೆ ಬರೀ ಹಿರಿಯಳೆಂದಲ್ಲ, ಶ್ರೇಷ್ಠ ಗೊಲ್ಲತಿ, ಧನ್ಯಳಾದ ಗೋಪಿಕೆಯೆಂದೇ ಅರ್ಥವಲ್ಲವೇ?

ಕಸ್ತ್ವಂ ಬಾಲ? ಬಲಾನುಜಃ; ಕಿಮಿಹ ತೇ? ಮನ್ಮಂದಿರಾಶಂಕಯಾ;

ಯುಕ್ತಂ ತನ್ನವನೀತ-ಪಾತ್ರ-ವಿವರೇ ಹಸ್ತಂ ಕಿಮರ್ಥಂ ನ್ಯಸೇಃ? |

ಮಾತಃ ಕಂಚನ ವತ್ಸಕಂ ಮೃಗಯಿತುಂ, ಮಾ ಗಾ ವಿಷಾದಂ ಕ್ಷಣಾದ್

-     ಇತ್ಯೇವಂ ವರ-ವಲ್ಲವೀ-ಪ್ರತಿವಚಃ ಕೃಷ್ಣಸ್ಯ ಪುಷ್ಣಾತು ನಃ ||

ಸೂಚನೆ : 21/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Tuesday, December 17, 2024

ಕೃಷ್ಣಕರ್ಣಾಮೃತ 43 ಕಣ್ಣುಗಳಿಗೆ ಹತ್ತಿರುವ ಚಾಪಲ್ಯ (Krishakarnamrta 43)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಪಿಂಛಾವತಂಸ

ನಮ್ಮ ಕಣ್ಣುಗಳಿಗೆ ಇದೊಂದು ಚಪಲವಿದೆ, ಕೃಷ್ಣಾ - ಎನ್ನುತ್ತಾನೆ, ಲೀಲಾಶುಕ.

ಇಲ್ಲಿ ನಮ್ಮ ಎಂದರೆ ನನ್ನ ಎಂದೇ ಅರ್ಥ. ಸಂನ್ಯಾಸಿಗಳು "ನಾವು" ಎಂದೇ ವ್ಯವಹರಿಸುವುದು - ತಮ್ಮೊಬ್ಬರನ್ನೇ ಕುರಿತು ಹೇಳುತ್ತಿದ್ದರೂ. ಮಹಾರಾಜರೂ ಹಾಗೆಯೇ. ಹಾಗೆಯೇ ಕವಿಗಳೂ.

"ಇದೊಂದು ಚಪಲ" ಎಂದೋ, ಅಥವಾ "ಈ ಬಗ್ಗೆ ಒಂದು ಚಾಪಲ್ಯವಿದೆ" ಎಂದೋ ಹೇಳುವುದುಂಟು. ಏನು ಹಾಗೆಂದರೆ? ಆ ಕುರಿತಾದ ಕುತೂಹಲವಿದೆ - ಎಂದು. ಅಥವಾ ಇನ್ನೂ ಹೆಚ್ಚಾಗಿ, ಆ ಬಗ್ಗೆ ಒಂದು ಉತ್ಕಟವಾದ ಆಸೆಯುಂಟು - ಎಂದರ್ಥ. ನಮ್ಮ ಕಣ್ಣುಗಳಿಗೆ ಇದೊಂದು ಚಪಲವುಂಟೆಂದರೆ ಇದನ್ನು ನಾವು ಕಾಣಲು ಹಂಬಲಿಸುತ್ತೇವೆ -ಎಂದು. ವಾಸ್ತವವಾಗಿ ಹಿಂದೊಮ್ಮೆ ಕಂಡದ್ದಾಗಿದೆ, ಆದರೆ ಮತ್ತೂ ಒಮ್ಮೆ ಕಾಣಬೇಕೆನಿಸಿದೆ - ಎಂಬ ಭಾವ.

ಯಾವ ಆಸೆ ಲೀಲಾಶುಕನ ಕಣ್ಣುಗಳಿಗೆ? ಕೃಷ್ಣನ ಶೈಶವವನ್ನು ಕಾಣಲು. ಶೈಶವವೆಂದರೆ ಬಾಲ್ಯ. ಬಾಲ್ಯವೆಂದರೆ ಇಲ್ಲಿ ತೀರ ಬಾಲ್ಯವೆಂದಲ್ಲ, ಎಳೆಯ ಶಿಶುವೆಂದಲ್ಲ. ಅದು ಹೇಗೆ ಗೊತ್ತಾಗುತ್ತದೆ? ಮುಂದೆ ಹೇಳುವ ವಿಶೇಷಣಗಳಿಂದ ತಿಳಿಯುತ್ತದೆ. ಎಂದರೆ ಎಂತಹ ಶೈಶವವನ್ನು ಕಾಣಲು ತನ್ನ ಕಣ್ಣುಗಳು ತವಕಿಸುತ್ತಿವೆ? - ಎಂಬುದನ್ನು ಚಿತ್ರಿಸುವ ಪದಗಳಿಂದ ಗೊತ್ತಾಗುತ್ತದೆ.

ತಾರುಣ್ಯವೆಂಬುದು ಇಣಿಕಿದೆ ಅಷ್ಟೆ, ಇನ್ನೂ. ಆ ದಶೆಯಲ್ಲಿ ಸೌಂದರ್ಯವೂ ಸೌಕುಮಾರ್ಯವೂ ಸೊಗಸಾಗಿ ಸೇರಿರುತ್ತವೆಯಲ್ಲವೇ? ಹಾಗಿರುವಾಗಿನ ಆತನ ಕೇಶ-ಮುಖಗಳ ಚೆಲುವನ್ನೂ ಒಟ್ಟಿನ ಆಕರ್ಷಣೆಯನ್ನೂ ಹೇಳಿದೆ.

ಕೃಷ್ಣನ ಕೇಶಪಾಶ ಚೆನ್ನಾಗಿದೆ. ಏನು ಪಾಶವೆಂದರೆ? ನಮಗೆಲ್ಲ ಗೊತ್ತಿರುವುದು ಯಮನ ಕೈಯಲ್ಲಿರುವ ಪಾಶ. ಯಾರದ್ದೋ ಕೊನೆಗಾಲ ಬಂತೆಂದರೆ, "ಯಮನು ತನ್ನ ಪಾಶ ಬೀಸಿದನು" - ಎನ್ನುವುದುಂಟು. ದೇವಿಯ ಕೈಯಲ್ಲಿ ಸಹ ಪಾಶ-ಅಂಕುಶಗಳಿವೆಯೆಂಬ ವರ್ಣನೆಯುಂಟು.

ಇಲ್ಲಿ ಅದೆರಡೂ ಅಲ್ಲ. ಇಲ್ಲಿ ಪಾಶವೆಂದರೆ ರಾಶಿಯೆಂದೇ ಅರ್ಥ. ಕೇಶಪಾಶವೆಂದರೆ ಕೇಶಕಲಾಪ. ಇದನ್ನೇ ಕೇಶಪಕ್ಷ, ಕೇಶಹಸ್ತ – ಎನ್ನುವುದೂ ಉಂಟು. 'ಪಕ್ಷ'/ 'ಹಸ್ತ'ಗಳಿಗೂ ಕಲಾಪ ಎಂಬ ಅರ್ಥವುಂಟು. ಕೇಶಪಾಶ-ಕೇಶಪಕ್ಷ-ಕೇಶಹಸ್ತ - ಇವುಗಳು ಸಂಸ್ಕೃತದ ನುಡಿಗಟ್ಟುಗಳು. ಕನ್ನಡದಲ್ಲೂ ಬಳಕೆಯಾಗಿವೆ.

ಹೇಗಿದೆ ಕೇಶಪಾಶ? ಪಿಚ್ಛವನ್ನು ಅಲಂಕಾರವಾಗಿ ಸೆಕ್ಕಿಸಲು ಯೋಗ್ಯವಾಗಿರುವ ಕೇಶಪಾಶ, ಅವನದು. ಪಿಚ್ಛ ಅಥವಾ ಪಿಂಛ ಎಂದರೆ ಗರಿ. ಶಿಖಿ-ಪಿಂಛ ಅಥವಾ ಮಯೂರ-ಪಿಂಛವೆಂದರೆ ನವಿಲುಗರಿ. ಎಲ್ಲ ಪಕ್ಷಿಗಳ ಗರಿಗಳಿಗಿಂತಲೂ ನವಿಲಿನ ಗರಿಯೇ ಬಹಳ ಆಕರ್ಷಕವೂ ಆನಂದದಾಯಕವೂ ಆದದ್ದು. ಎಂದೇ ಮಯೂರವೆಂದು ಹೇಳದಿದ್ದರೂ, ಅದು ತಾನಾಗಿಯೇ ವೇದ್ಯವಾಗುವಂತಹುದು. ನವಿಲುಗರಿಯನ್ನು ಮುಡಿದುಕೊಳ್ಳುವ ಪ್ರಸಿದ್ಧಿಯಿರುವುದು ಹೆಚ್ಚಾಗಿ ಕೃಷ್ಣನಿಗೇ, ಬಾಲಕೃಷ್ಣನಿಗೇ. ತಲೆದುಂಬ ಕರಿಗೂದಲಿದ್ದರೆ ಗರಿಗದು ಸರಿಯಾದ ಎಡೆ.

ಅವತಂಸವೆಂದರೂ, (ಆದಿಯಲ್ಲಿರುವ ಅಕಾರವನ್ನು ಬಿಟ್ಟು) ವತಂಸವೆಂದರೂ, ಒಂದೇ ಅರ್ಥ: ಶಿರೋಭೂಷಣ - ಎಂದು. ಎಂದರೆ ತಲೆಗೆ ಅಲಂಕಾರ. ಅದನ್ನು ಸಮ್ಯಕ್ಕಾಗಿ ತಲೆಗೆ ಸಿಕ್ಕಿಸಬೇಕು. ಎಂದರೆ ಬಿದ್ದುಹೋಗದಂತೆ ಮಾಡುವ ರಚನೆಯಾಗಬೇಕು. ಕೃಷ್ಣನ ಕೂದಲು ಎಷ್ಟು ಚೆನ್ನಾಗಿದೆಯೆಂದರೆ, ದಟ್ಟವಾಗಿ ಬೆಳೆದ ಆ ಕೇಶಪಕ್ಷದ ನಡುವೆ ನವಿಲುಗರಿಯನ್ನೋ ಹೂಗಳ ಅಲಂಕಾರವನ್ನೋ ಮಾಡಬೇಕೆಂಬ ಆಸೆ ಯಾರಿಗಾದರೂ ಆಗುವಂತಹುದೇ ಸರಿ. ಹೀಗೆ ಪಿಂಛಾವತಂಸದ ರಚನೆಗೆ ಉಚಿತವಾಗಿದೆ, ಎಂದರೆ ಯೋಗ್ಯವಾಗಿದೆ, ಕೃಷ್ಣ-ಕೇಶ-ಪಾಶ.

ಎರಡನೆಯದಾಗಿ, ಕೃಷ್ಣನ ಶೈಶವವು ಎಂತಿದೆಯೆಂದರೆ ಅದರ ಬಗ್ಗೆ ಒಂದು ಪೂಜ್ಯಭಾವವೇ ಬರುವಂತಿರುವುದು. ನಮ್ಮ ಸಂಸ್ಕೃತಿಯೇ ಹಾಗಿರುವುದು. ಎಳೇ ಮಕ್ಕಳನ್ನು ಕಂಡರೇ, ನಾವು ಅವುಗಳಲ್ಲಿ ದೈವತ್ವವನ್ನು ಕಾಣುವೆವು. "ಮಕ್ಕಳು ದೇವರಂತೆ" - ಎನ್ನುವೆವು. ಪುಟ್ಟಮಕ್ಕಳಿಗೆ ಕೃಷ್ಣನ ಅಲಂಕಾರವನ್ನೋ ರಾಮನ ಅಲಂಕಾರವನ್ನೋ ಮಾಡಿ ಕಣ್ತುಂಬ ನೋಡಿ ಸಂತೋಷಿಸುವೆವು. ದೇವರಿಗೆಂಬಂತೆ ಮಕ್ಕಳಿಗೆ ಆರತಿಯನ್ನೂ ಮಾಡುವುದುಂಟು. ಅಂತೂ ಕೃಷ್ಣನ ಈ ವಿಶಿಷ್ಟ-ಶೈಶವವು ಪೂಜೆಗೆ ಅರ್ಹವಾದುದು.

ಪೂಜೆಗೆ ಯೋಗ್ಯವಾದುದನ್ನು ಪೂಜ್ಯ ಅಥವಾ ಪೂಜನೀಯ ಎನ್ನುತ್ತೇವೆ. ಪೂಜೆ ಮಾಡುವಾಗ ಹೂಗಳನ್ನು ಬಳಸುವುದು ಸಾಮಾನ್ಯವಲ್ಲವೇ? ಕೆಲವರಂತೂ ಪೂಜನವೆಂದರೆ ಪೂಗಳಿಂದ ಅರ್ಚಿಸುವುದೆಂದೇ ಹೇಳುವುದುಂಟು. ಪೂಗಳು ಹೂಗಳೇ. ಪ್ರಕೃತ, ಈ ಕೃಷ್ಣನನ್ನು ಹೇಗೆ ಪೂಜಿಸಬಹುದು? ಆ ಹೂವು ಈ ಹೂವೇನು? ಪಂಕಜಗಳಿಂದಲೇ ಪೂಜೆ ಸಲ್ಲತಕ್ಕದ್ದು, ಈತನಿಗೆ. ಕಮಲವನ್ನು ಇಷ್ಟಪಡದ ದೇವತೆಯೂ ಉಂಟೆ? ಅನಾದಿಕಾಲದಿಂದಲೂ ಪೂಜೆಗೆ ಉತ್ತಮವಾದದ್ದೆಂದರೆ ಪದ್ಮವೇ. ಹೀಗೆ ಪಂಕಜ-ಪೂಜನೀಯ, ನಮ್ಮ ಕೃಷ್ಣ.

ಕಮಲಗಳಲ್ಲೂ ಹಲವು ಬಗೆಗಳುಂಟು ಅಲ್ಲವೇ? - ಕೆಂಪನೆಯ ಕೆಂದಾವರೆ, ಕಂದುಬಣ್ಣದ ಕನ್ನೈದಿಲೆ, ಬೆಳ್ಳಗಿರುವ ಕಲ್ಹಾರ - ಮುಂತಾದುವು? ಇವಾವುವೂ ಅಲ್ಲ, ಇಲ್ಲಿ ಸಲ್ಲುವುದು. ಹಾಗಾದರೆ ಮತ್ತಾವ ಕಮಲ? ಗೋಪಿಯರ ಕಣ್ಗಳೇ ಕಮಲಗಳು.

ಚೆನ್ನಾಗಿ ನಿದ್ದೆಮಾಡೆದ್ದವರ ಕಣ್ಣುಗಳು ಅರಳಿದ ಅಂದವಾದ ಅರವಿಂದಗಳಂತಿರುವುವಲ್ಲವೇ? ಭಗವಂತನನ್ನು ಪುಂಡರೀಕಾಕ್ಷ ಎಂದು ಕರೆದಾಗಲೂ ಅದೇ ಅರ್ಥವೇ ತಾನೆ? - ಕಮಲವನ್ನು ಹೋಲುವ ಕಣ್ಣುಗಳುಳ್ಳವ ಎಂದು. ಅಂತೂ ಇಲ್ಲಿ ಕೃಷ್ಣನ ಶೈಶವವು ಗೋಪಿಯರ ನಯನ-ಪಂಕಜಗಳಿಂದ ಪೂಜನೀಯವಾದದ್ದು!

ಸುಂದರನಾದ ಬಾಲಕನ ಸುತ್ತ ಸೇರಿರುವ ಆ ಗೋಪಿಯರೂ ಸುಂದರಿಯರೇ. ಉಕ್ಕುವ ಪ್ರೀತಿಯ ತುಂಬಿದೆದೆಯ ಗೋಪಿಯರು. ಪೀನ-ಸ್ತನಿಯರೆಂದರೆ ತೋರುವ ವಕ್ಷೋಜವುಳ್ಳವರು.

ಮೂರನೆಯ ವಿಶೇಷಣವು ಆತನ ವದನವನ್ನು ಹೇಳುವುದು. ಇಂತಹ ಮುಖಬಿಂಬವನ್ನು ಹೊಂದಿರುವ ಶೈಶವಾವಸ್ಥೆಯೆಂಬ ಸೂಚನೆ. ಎಂತಹ ವಕ್ತ್ರ ಕೃಷ್ಣನದು? ವಕ್ತ್ರವೆಂದರೆ ಮುಖ. ಕೃಷ್ಣ-ವಕ್ತ್ರಕ್ಕೆ ಪೈಪೋಟಿ ಎರಡು ಕಡೆಗಳಿಂದ ಬರುವುದಂತೆ - ಚಂದ್ರ ಹಾಗೂ ಅರವಿಂದಗಳಿಂದ. ಅವೆರಡನ್ನೂ ಜಯಿಸಲು ಉದ್ಯುಕ್ತವಾಗಿರುವುದಂತೆ, ಆ ದಶೆಯಲ್ಲಿರುವ ಕೃಷ್ಣನ ಆನನ.

ಚಂದ್ರನ ಹೆಗ್ಗಳಿಕೆಯೇನು? ಅಮೃತದಂತಿರುವ ಚಂದ್ರಿಕೆಯಿಂದ, ಎಂದರೆ ಬೆಳದಿಂಗಳಿನಿಂದ, ಆಹ್ಲಾದವನ್ನು ಉಂಟುಮಾಡುವವ ಚಂದ್ರ.

ಇನ್ನು ಕಮಲದ ಹೆಗ್ಗಳಿಕೆಯೇನು? ಅದರಲ್ಲಿ ಶೈತ್ಯ, ಸೌರಭ್ಯ, ಸೌಕುಮಾರ್ಯಗಳಿವೆಯಷ್ಟೆ. ಎಂದರೆ ತಂಪಾಗಿರುವುದು, ಸುಗಂಧವಿರುವುದು, ಸುಕುಮಾರವಾಗಿರುವುದು.

ಹೀಗಿರುವ ಚಂದ್ರನ ಸೊಬಗನ್ನೂ ಕಮಲದ ಸೊಗಸನ್ನೂ ಮೀರಲು ಹೊರಟಿರುವುದು, ಶ್ರೀಕೃಷ್ಣನ ಮುಖ-ಮಂಡಲ , ಈ ಶೈಶವದಲ್ಲಿ.

ಕೃಷ್ಣನ ಮುಖದ ಸೌಂದರ್ಯಾಮೃತವನ್ನು ಗೋಪಿಯರು ಪಾನಮಾಡುವುದರಿಂದ ಚಂದ್ರನನ್ನು ಮೀರಿಸಿದಂತಾಯಿತು.  ತನ್ನ ಮಧುರವಾದ ದೃಷ್ಟಿಗಳಿಂದ ಗೋಪಿಯರಲ್ಲಿ ಉನ್ಮಾದವನ್ನುಂಟುಮಾಡುವುದರಿಂದ ಅರವಿಂದವನ್ನು ಮೀರಿಸಿದಂತಾಯಿತು.

ಹೀಗೆಲ್ಲ ಇರುವ ಚೆಲುವ ಚೆನ್ನಿಗರಾಯನ ಶೈಶವದ ದೃಶ್ಯವನ್ನು ಮತ್ತೆ ಮತ್ತೆ ಕಾಣುವ ಹಂಬಲ, ಲೀಲಾಶುಕನಿಗೆ. ಹೀಗೆ ಕೃಷ್ಣನ ರೂಪ-ವೇಷ-ಲೀಲೆಗಳಿಗೆ ಮನಸೋತಿದ್ದಾನೆ, ಲೀಲಾಶುಕ.

ಮೊದಲೆರಡು ಪಾದಗಳು ಪಕಾರದಿಂದ ಆರಂಭಗೊಂಡರೆ, ಕೊನೆಯೆರಡು ಚಕಾರದಿಂದ. ಇತರ ಅನುಪ್ರಾಸಗಳನ್ನೂ ಗಮನಿಸಬಹುದು: ಚ-ಚ, ಶ-ಶ, ಪ-ಪ, ವ-ವ, ನ-ನ.

ಪಿಂಛಾವತಂಸ-ರಚನೋಚಿತ-ಕೇಶಪಾಶೇ

ಪೀನಸ್ತನೀ-ನಯನಪಂಕಜ-ಪೂಜನೀಯೇ |

ಚಂದ್ರಾರವಿಂದ-ವಿಜಯೋದ್ಯತ-ವಕ್ತ್ರಬಿಂಬೇ

ಚಾಪಲ್ಯಮೇತಿ ನಯನಂ ತವ ಶೈಶವೇ ನಃ ||

ಸೂಚನೆ : 14/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ದಾಂಪತ್ಯವೆಂಬ ಅವಿಚ್ಛಿನ್ನ ಅನುಬಂಧ (Dampatyavemba Avicchinna Anubandha)

ವಿದುಷಿ ; ಸೌಮ್ಯಾ ಪ್ರದೀಪ್  ಎ. ಜೆ.

ಪ್ರತಿಕ್ರಿಯಿಸಿರಿ (lekhana@ayvm.in)



ಜಗದಾದಿ ದಂಪತಿಗಳಾದಂತಹ ಲಕ್ಷ್ಮೀನಾರಾಯಣರು ರಾವಣಸಂಹಾರವನ್ನು ನಿಮಿತ್ತವಾಗಿಸಿಕೊಂಡು, ಮನುಕುಲಕ್ಕೆ ಆದರ್ಶ ಜೀವನದ  ಶಿಕ್ಷಣಕ್ಕಾಗಿ ತ್ರೇತಾಯುಗದಲ್ಲಿ ಸೀತಾರಾಮರ ರೂಪದಲ್ಲಿ ಭುವಿಯಲ್ಲಿ ಅವತರಿಸುತ್ತಾರೆ. ರಾಮನು ದಶರಥನ ಪುತ್ರನಾಗಿ ಜನಿಸಿದರೆ, ಸೀತೆಯು ಭೂಮಿಸುತೆಯಾಗಿ ಜನಕನಿಗೆ ಪುತ್ರಿಯಾಗಿ ದೊರಕುತ್ತಾಳೆ. ಜನಕ ಮಹಾರಾಜನು ಸೀತಾ ಸ್ವಯಂವರವನ್ನು ಏರ್ಪಡಿಸಿದಾಗ ಶ್ರೀರಾಮಚಂದ್ರನು ಸೀತೆಯನ್ನು ವರಿಸುತ್ತಾನೆ. ಜನಕ ಮಹಾರಾಜನು, ಪಾಣಿಗ್ರಹಣದ ಸಂದರ್ಭದಲ್ಲಿ ಸೀತೆಯ ಹಸ್ತವನ್ನು ರಾಮನ ಹಸ್ತದ ಮೇಲೆ ಇಟ್ಟು, ನನ್ನ ಮಗಳಾದ ಸೀತೆಯು ಇನ್ನು ಮುಂದೆ ಛಾಯೆಯಂತೆ ಸದಾಕಾಲ ನಿನ್ನ ಜೊತೆಯಲ್ಲಿಯೇ ಇರುತ್ತಾಳೆ, ನಿನ್ನನ್ನೇ ಅನುಸರಿಸುತ್ತಾಳೆ ಎಂಬುದಾಗಿ ಹೇಳುತ್ತಾನೆ. ಅಂತಯೇ ಸೀತೆಯು ಕೂಡ ಸದಾಕಾಲ ಪತಿಯ ಸಾನಿಧ್ಯದಲ್ಲಿಯೇ ಇರಲು ಬಯಸುತ್ತಾಳೆ. ಶ್ರೀರಾಮನು ವನವಾಸಕ್ಕೆ ಹೋಗಬೇಕಾದ ಸಂದರ್ಭದಲ್ಲಿಯೂ ಅರಮನೆಯ ಸೌಖ್ಯವನ್ನು ತೊರೆದು ಅವನನ್ನೇ ಅನುಸರಿಸುತ್ತಾಳೆ. ವಿಧಿವಶಾತ್ ರಾವಣನಿಂದ ಸೀತೆಯು ಅಪಹರಿಸಲ್ಪಟ್ಟು ಲಂಕೆಯಲ್ಲಿ ಇದ್ದಾಗಲೂ,ಶ್ರೀರಾಮಚಂದ್ರ ಸೀತಾಮಾತೆಯರು ಭೌತಿಕವಾಗಿ ದೂರವಾಗಿದ್ದರೂ ಅವರ ಮನಸ್ಸು, ಅವರ ಹೃದಯಗಳು ಒಂದಾಗಿಯೇ ಇರುತ್ತದೆ.  ಲೋಕಾಪವಾದದಿಂದ ಶ್ರೀರಾಮನು ಅಯೋಧ್ಯೆಯ ರಾಜನಾಗಿ ಸೀತೆಯನ್ನು ತ್ಯಜಿಸಬೇಕಾಗಿ ಬಂದಾಗಲೂ ಸೀತಾರಾಮರ ಮನಸ್ಸು ,ಹೃದಯಗಳು ಒಂದಾಗಿಯೇ ಇರುತ್ತವೆ. ಭೌತಿಕವಾದ ಅಗಲುವಿಕೆ ಅನ್ನುವುದು ಅವರಿಬ್ಬರ ಮನಸ್ಸನ್ನು ಬೇರ್ಪಡಿಸುವುದಿಲ್ಲ. ಸೀತೆಯು ತನ್ನ ಅವತಾರವನ್ನು ಮಂಗಳ ಮಾಡುವ ಸಂದರ್ಭದಲ್ಲಿ ನನಗೆ ಜನ್ಮ ಜನ್ಮದಲ್ಲಿಯೂ ಶ್ರೀ ರಾಮನೇ ಪತಿಯಾಗಬೇಕು ಆದರೆ ವಿರಹ ಅನ್ನುವುದು ಇರಬಾರದು ಎಂಬುದಾಗಿಯೇ ಬಯಸಿ ತಾನು ಬಂದ ನೆಲೆಯನ್ನು ಸೇರಿಕೊಳ್ಳುತ್ತಾಳೆ. ಅವರಿಬ್ಬರದು ಸರ್ವಕಾಲಕ್ಕೂ ಆದರ್ಶವಾದ, ಅವಿಚ್ಛಿನ್ನವಾದ (ಬೇರ್ಪಡುವಿಕೆ ಇಲ್ಲದ) ದಾಂಪತ್ಯ.

 ಕಾಲಕಾಲಕ್ಕೆ ಧರ್ಮ ಪ್ರತಿಷ್ಠಾಪನೆಗೆ ಭಗವಂತನು ಭೂಮಿಗೆ ಇಳಿದು ಬಂದಾಗ ಅವನ ಮನದನ್ನೆಯಾದ ಭಗವತಿಯೂ ಕೂಡ ಇಳಿದು ಬಂದು ಅವನ ಕಾರ್ಯಗಳಿಗೆ ಸಹಕಾರವನ್ನು ನೀಡುತ್ತಾಳೆ.

 ವಧೂ - ವರರು ವಿವಾಹವೆಂಬ ಸಂಸ್ಕಾರವನ್ನು ಪಡೆದು ದಾಂಪತ್ಯ ಜೀವನಕ್ಕೆ ಕಾಲಿರಿಸಿ ದಂಪತಿ ಗಳಾಗುತ್ತಾರೆ. ಅಲ್ಲಿಂದ ಮುಂದೆ ಅವರಿಬ್ಬರ ಮನಸ್ಸುಗಳು, ಹೃದಯಗಳು ಒಂದಾಗಿ ಧರ್ಮ,ಅರ್ಥ, ಕಾಮ ಎಂಬ ಮೂರೂ ಪುರುಷಾರ್ಥಗಳನ್ನು ಒಟ್ಟಿಗೆ ಸಂಪಾದಿಸಿ ಮೋಕ್ಷದವರೆಗೂ ಜೊತೆ ಜೊತೆಯಾಗಿ ಸಾಗಬೇಕು ಎನ್ನುವುದೇ ಭಾರತೀಯ ವಿವಾಹ ಪದ್ಧತಿಯ ಪ್ರಧಾನ ಧ್ಯೇಯವಾಗಿದೆ. ಹಾಗಾದಾಗಲೇ ಅವರು ವಿವಾಹ ಸಂಸ್ಕಾರವನ್ನು ಪಡೆದುದ್ದಕ್ಕೆ ಸಾರ್ಥಕತೆ.

 ವಿವಾಹವನ್ನು ಒಂದು ಸಂಸ್ಕಾರ ಎಂಬುದಾಗಿ ಕರೆದಿದ್ದಾರೆ, ಸಂಸ್ಕಾರ ಎಂದರೆ ಶುದ್ದಿಗೊಳಿಸುವ ಪ್ರಕ್ರಿಯೆ. ನಮ್ಮ ಇಂದ್ರಿಯಗಳು, ಮನಸ್ಸು, ಬುದ್ಧಿ, ಎಲ್ಲವನ್ನೂ ಶುದ್ಧಿಗೊಳಿಸಿ ಅಂತಿಮವಾಗಿ ಆತ್ಮನನ್ನು ಮೂಲ ನೆಲೆಯಾದ ಪರಮಾತ್ಮನೆಡೆಗೆ ಕೊಂಡೊಯ್ಯುವುದೇ ಸಂಸ್ಕಾರದ ಉದ್ದೇಶ. ವಿವಾಹದ ಮಂತ್ರಗಳು ಮತ್ತು ವಿವಾಹದಲ್ಲಿ ನಡೆಯುವ ವಿಧಿ ವಿಧಾನಗಳೆಲ್ಲವೂ ಅದನ್ನೇ ಸಾರುತ್ತಿವೆ.

ವರನು ಜ್ಞಾನ ಸಂಪಾದನೆಗೆ ಕಾಶಿಯಾತ್ರೆಗೆ ಹೊರಟ ಸಂದರ್ಭದಲ್ಲಿ, ವಧುವಿನ ಕಡೆಯವರು ಅವನನ್ನು ತಡೆದು ನೀನೊಬ್ಬನೇ ಜ್ಞಾನಿಯಾದರೆ ಸಾಲದು, ನಮ್ಮಲ್ಲಿ ನಿನಗೆ ಅನುರೂಪವಾದ ಕನ್ಯೆಯೊಬ್ಬಳಿದ್ದಾಳೆ, ಅವಳನ್ನು ವರಿಸಿ ಆ ಮಾರ್ಗದಲ್ಲಿ ಕೊಂಡೊಯ್ದು, ನಿನ್ನಂತಯೇ ಜ್ಞಾನಿಯಾದ ಸಂತತಿಯನ್ನು ಲೋಕಕ್ಕೆ ನೀಡಬೇಕು ಎಂಬುದಾಗಿ ಹೇಳಿ ಅವನೊಂದಿಗೆ ವಿವಾಹವನ್ನು ಮಾಡಿಕೊಡುತ್ತಾರೆ.

 ವಿವಾಹದ ಸಂಕಲ್ಪವೇ ಹಿಂದಿನ ಹತ್ತು ತಲೆಮಾರು, ಮುಂದಿನ ಹತ್ತು ತಲೆಮಾರು, ತಾನು ಎಂಬ ಇಪ್ಪತ್ತೊಂದು ಕುಲದ ಉದ್ಧಾರಕ್ಕಾಗಿಯೂ ಭಗವಂತನ ಸಾಲೋಕ್ಯ,  ಸಾಯುಜ್ಯ ಮೊದಲಾದ ಅಂಶಗಳು ಸಿದ್ಧಿಸುವುದಕ್ಕಾಗಿಯೂ ಈ ವಿವಾಹವನ್ನು ಮಾಡಿಕೊಳ್ಳುತ್ತೇನೆ ಎಂಬುದಾಗಿದೆ.

 ಕನ್ಯಾದಾನ ಮಾಡುವ ಸಂದರ್ಭದಲ್ಲಿ, ವರನನ್ನು ನಾರಾಯಣ ಸ್ವರೂಪನೆಂದು ಭಾವಿಸಿ, ವಧುವನ್ನು ಲಕ್ಷ್ಮೀ ಸ್ವರೂಪಳೆಂದು  ಭಾವಿಸಿ, ಜಗದಾದಿ ದಂಪತಿಗಳ ಸ್ಮರಣೆಯಲ್ಲಿಯೇ ಆ ಕ್ರಿಯೆಯನ್ನು ಮಾಡುವ ಪದ್ಧತಿ ಬಂದಿದೆ. ಪ್ರತಿಯೊಬ್ಬ ಪುರುಷನಲ್ಲಿಯೂ ಪರಮಾತ್ಮನ ಅಂಶ ಹಾಗೂ ಸ್ತ್ರೀಯಲ್ಲಿ ಪರಾಪ್ರಕೃತಿಯ ಅಂಶ ಇರುವುದರಿಂದಲೇ ಈ ರೀತಿಯ ಪದ್ಧತಿಯನ್ನು ಮಹರ್ಷಿಗಳು ರೂಪಿಸಿ ಕೊಟ್ಟಿದ್ದಾರೆ.

 ಅಗ್ನಿಪ್ರದಕ್ಷಿಣೆಯನ್ನು ಮಾಡುವಾಗ ಅಗ್ನಿಯನ್ನು ಪರಮಾತ್ಮ ಸ್ವರೂಪನೆಂದು ಭಾವಿಸಿ ವಧೂ-ವರರಿಬ್ಬರೂ ಪರಮಾತ್ಮನಿಂದ ಹೊರಟ ನಮ್ಮ ಜೀವನ ಪ್ರಕೃತಿಯಲ್ಲಿ ಅವನ ಸ್ಮರಣೆಯೊಂದಿಗೇ ಸಾಗಿ ಮತ್ತೆ ಹೋಗಿ ಅವನಲ್ಲಿಯೇ ಸೇರಿಕೊಳ್ಳಲಿ ಎಂಬ ಭಾವದಿಂದ ಪ್ರದಕ್ಷಿಣೆಯನ್ನು ಮಾಡುತ್ತಾರೆ. ಹೀಗೆಯೇ ದಾಂಪತ್ಯ ಎನ್ನುವುದು ದೀರ್ಘಕಾಲದ, ಜನ್ಮ ಜನ್ಮದಲ್ಲೂ ಮುಂದುವರೆಯುವ ಅವಿಚ್ಛಿನ್ನವಾದ ಅನುಬಂಧ. "ಇದು ಕೇವಲ ಹೆಣ್ಣು-ಗಂಡು ಕೂಡಿಸುವುದಲ್ಲಪ್ಪ ದಿವಿಭುವಿಗಳನ್ನೇ ಕೂಡಿಸುವ ಕೆಲಸವಾಗಿದೆ" ಎಂಬ ಮಾತನ್ನು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಹೀಗೆ ಭುವಿಯಲ್ಲಿ ನಡೆಯುವ ವಿವಾಹ ದಿವಿಯವರೆಗೂ ನಮ್ಮನ್ನು ಕೊಂಡೊಯ್ಯುವುದಕ್ಕೆ ಸಹಕಾರಿಯಾಗುವಂತಹದ್ದು. ಸತಿಪತಿಗಳಿಬ್ಬರೂ ವಿವಾಹದ ಉದ್ದೇಶವನ್ನು ಅರಿತು ತಮ್ಮ ತಮ್ಮ ಜವಾಬ್ದಾರಿಯ ಜೊತೆಗೆ ಸಂಸಾರವನ್ನು ನಡೆಸಿದಾಗ ಆ ಸಂಸ್ಕಾರ ಫಲಪ್ರದವಾಗುತ್ತದೆ.

 ಇಂದು ವಿವಾಹ ಎನ್ನುವುದು ಕೇವಲ ಬಾಹ್ಯವಾದ ಆಡಂಬರದ ಕಾರ್ಯಕ್ರಮವಾಗಿ ಪರಿಣಮಿಸಿದೆ. ಅದರಲ್ಲಿ ಬರುವ ಮಂತ್ರಗಳ ಅಥವಾ ವಿಧಿ ವಿಧಾನದ ಅಂತ:ಸತ್ವವನ್ನು ಅರಿಯುವ ಕಡೆಗೆ ಗಮನವೇ ಇಲ್ಲವಾಗಿದೆ. ಕೇವಲ ಇಂದ್ರಿಯ ಸೌಖ್ಯವೇ ಮುಖ್ಯವಾಗಿದೆ. ಹಾಗಾಗಿ ಅದು ಸತ್ವಹೀನವಾಗಿ ವೈವಾಹಿಕ ಜೀವನದಲ್ಲಿ ವಿಚ್ಛಿತ್ತಿ (ಒಡಕು) ಅನ್ನುವಂತಹದ್ದು ಸಾಮಾನ್ಯವಾಗಿ ಬಿಟ್ಟಿದೆ.

ವಿವಾಹ ಸಂಸ್ಕಾರಕ್ಕೆ ಒಳಪಡುವ ಎಲ್ಲಾ ವಧೂ - ವರರು ವಿವಾಹದ ಮೂಲ ಉದ್ದೇಶ ಏನು? ನಮ್ಮಿಬ್ಬರ ಜವಾಬ್ದಾರಿಯ ವ್ಯಾಪ್ತಿ ಎಲ್ಲಿಯವರೆಗೂ ಇರುತ್ತದೆ? ಎಂಬುದನ್ನು ಅರಿತು, ಅದನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಂಡು ಸಂಸಾರವನ್ನು ನಡೆಸುತ್ತಾ ಬಂದಾಗ ಐಹಿಕ ಸುಖದ ಜೊತೆಗೆ ಪಾರಮಾರ್ಥಿಕ ಸುಖ ಅನ್ನುವಂತಹ ದೊಡ್ಡ ಲಾಭವನ್ನೂ ಪಡೆಯಬಹುದು. ಜಗನ್ಮಾತಾ ಪಿತೃಗಳ ದಾಂಪತ್ಯವನ್ನು ಆದರ್ಶವಾಗಿಟ್ಟುಕೊಂಡು ಭುವಿಯಿಂದ ದಿವಿಗೆ ಕೊಂಡೊಯ್ಯುವಂತಹ ಅವಿಚ್ಛಿನ್ನವಾದ ದಾಂಪತ್ಯವನ್ನು ಎಲ್ಲರೂ ಬಯಸುವಂತಾಗಲಿ.

ಸೂಚನೆ : 14/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Monday, December 16, 2024

ಹನುಮ ಲಂಕೆಗೆ ಹಾರಿದ್ದು ಹೇಗೆ? (Hanuma lankege Hariddu Hege?)

ಲೇಖಕರು: ಶ್ರೀ ಜಿ ನಾಗರಾಜ 

(ಪ್ರತಿಕ್ರಿಯಿಸಿರಿ lekhana@ayvm.in)


ಈ ಹಿಂದೆ ಅಯೋಧ್ಯೆಯ ರಾಮಮಂದಿರದಲ್ಲಿ ನಡೆದ ಪ್ರಾಣಪ್ರತಿಷ್ಠೆಯ ಸಂದರ್ಭದಲ್ಲಿ ಶ್ರೀರಾಮ ಹಾಗೂ ರಾಮಾಯಣದ ಬಗ್ಗೆ ಸಾಕಷ್ಟು ಪರ-ವಿರೋಧ ವಾದಗಳು ಕೇಳಿ ಬರುತ್ತಿದ್ದವು. ವಿರೋಧದ ಧ್ವನಿಗಳಲ್ಲಿ ಒಂದು ಏನೆಂದರೆ, ರಾಮಾಯಣ ಕಾಲ್ಪನಿಕ ಏಕೆಂದರೆ, ರಾಮಾಯಣದಲ್ಲಿ ಬರುವ ಹಲವಾರು ಘಟನೆಗಳು ಅತಿಮಾನುಷ, ಅವಾಸ್ತವ ಆದುದರಿಂದ ರಾಮಾಯಣ ನಡೆದಿರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯಿಂದ ಅಲ್ಲಗೆಳೆಯುವುದು ಒಂದು ವಾದ.  ಈ ವಾದಕ್ಕೆ ಬಳಸುವ ಹಲವಾರು ಉದಾಹರಣೆಗಳಲ್ಲಿ ಒಂದೆಂದರೆ ಹನುಮಂತನು ಲಂಕೆಗೆ ಹಾರಿದ ಘಟನೆ. ಇದೆಲ್ಲಿ ಸಾಧ್ಯ ಎಂದು ಈ ಘಟನೆಯ ವಾಸ್ತವಿಕತೆಯನ್ನು ಮತ್ತು ತನ್ಮೂಲಕ ರಾಮಾಯಣದ ವಾಸ್ತವಿಕತೆಯನ್ನೂ ಅಲ್ಲಗೆಳೆಯುತ್ತಾರೆ. ಈಗ ಈ ಪರ-ವಿರೋಧ ಚರ್ಚೆಗಳು ತಣ್ಣಗಾಗಿದ್ದರೂ ವೈಚಾರಿಕವಾಗಿ ಈ ಘಟನೆಯನ್ನು ಪರಿಶೀಲಿಸುವುದು ಉಚಿತವಾಗಿಯೇ ಇದೆ. 

ಹನುಮಂತನು ಲಂಕೆಗೆ ಹಾರಿರುವ ವಿಷಯದ ವಾಸ್ತವತೆಯನ್ನು ವಿಮರ್ಶೆ ಮಾಡುವವರಲ್ಲಿ ಕೆಲವರು ಹನುಮಂತ ಲಂಕೆಗೆ ಹಾರಿದ್ದು ನಿಜವಾದಲ್ಲಿ ನ್ಯೂಟನ್ನಿನ ಗುರುತ್ವಾಕರ್ಷಣೆಯ ನಿಯಮವನ್ನು ಉಲ್ಲಂಘಿಸಿದ ಹಾಗೆ ಆಗುವುದಿಲ್ಲವಾ? ಆದುದರಿಂದ ಈ ಘಟನೆಯ ಉಲ್ಲೇಖ ಎಷ್ಟು ಅವೈಜ್ಞಾನಿಕ ಎಂದು ಹೀಗಳೆಯುತ್ತಾರೆ. ಆದರೆ ಈ ಆಕ್ಷೇಪಣೆಗೆ ಬಹಳ ಸುಲಭವಾಗಿ, ತಾರ್ಕಿಕವಾಗಿಯೇ ಉತ್ತರಿಸಬಹುದು. ಬಹಳ ಪ್ರಾಣಿಗಳು, ಅದರಲ್ಲೂ ಕೋತಿಗಳೂ ಮನುಷ್ಯರೂ ಸಹ ನೆಗೆಯುತ್ತಾರೆ. ಹೀಗೆ ನೆಗೆಯುವಾಗ ಕೆಲಕ್ಷಣಗಳು ಅಂತರಿಕ್ಷದಲ್ಲಿರುತ್ತಾರೆ. ಈ ಸಂದರ್ಭದಲ್ಲಿ ನ್ಯೂಟನ್ನಿನ ನಿಯಮವು ಭಂಗವಾಗಲಿಲ್ಲ ಎಂದರೆ ಹನುಮಂತ ನೆಗೆದಾಗಲೂ ನ್ಯೂಟನ್ನಿನ ನಿಯಮದ ಉಲ್ಲಂಘನೆ ಆಗಲಿಲ್ಲ ಎಂದು ಹೇಳಬಹುದು. ಆದುದರಿಂದ ಹನುಮಂತ ಸಮುದ್ರೋಲ್ಲಂಘನ ಮಾಡಿದಾಗ ಪ್ರಶ್ನೆ ಬರುವುದು ಅಷ್ಟು ದೂರ ನೆಗೆಯುವುದು ಸಾಧ್ಯವೇ ಎನ್ನುವುದು ಮಾತ್ರ ಅಷ್ಟೇ ಹೊರತು ನ್ಯೂಟನ್ನಿನ ನಿಯಮದ ಬಗ್ಗೆ ಅಲ್ಲ. 

ಇನ್ನು ಇಂತಹಾ ಅಮೋಘವಾದ ಸಾಮರ್ಥ್ಯದಿಂದ ಕೂಡಿರುವ ನೆಗೆತ ಸಾಧ್ಯವೇ, ವಾಸ್ತವವೇ ಎನ್ನುವ ಪ್ರಶ್ನೆಯನ್ನು ವಿಮರ್ಶಿಸಬಹುದು. ಈ ವಿಮರ್ಶೆಗೆ ಆರ್ಷ ವಿಜ್ಞಾನದ ಶಾಸ್ತ್ರಗಳಲ್ಲೊಂದಾದ ಪತಂಜಲಿ ಯೋಗಸೂತ್ರದ ವಿಭೂತಿ ಪಾದವು ಬೆಳಕು ಚೆಲ್ಲುತ್ತದೆ.

ಪತಂಜಲಿ ಯೋಗ ಸೂತ್ರದ ವಿಭೂತಿ ಪಾದವು ಅನೇಕ ಯೋಗ ಸಿದ್ಧಿಗಳನ್ನು ವಿವರಿಸುತ್ತದೆ. ಅವುಗಳಲ್ಲೊಂದು ಆಕಾಶಗಮನ ಸಿದ್ಧಿ. ನಮ್ಮ ದೇಹದಲ್ಲಿ ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎನ್ನುವ ವಾಯುಗಳು ಕೆಲಸ ಮಾಡುತ್ತಿರುತ್ತವೆ. ಈ ವಾಯುಗಳನ್ನು force ಎನ್ನಬಹುದು. ಅವುಗಳಲ್ಲಿ ಉದಾನವಾಯುವು ಕಂಠದಿಂದ ಮೇಲೆ, ಮೇಲ್ಮುಖವಾಗಿ (upward) ಕೆಲಸ ಮಾಡುತ್ತಿರುತ್ತದೆ. ಆ ಉದಾನವಾಯುವನ್ನು ನಿಯಂತ್ರಿಸಿದರೆ, ನಮ್ಮ ದೇಹದಲ್ಲಿನ upward force ಜಾಸ್ತಿಯಾಗಿ ದೇಹವು ನೆಲದಿಂದ ಮೇಲೇಳುತ್ತದೆ. ಹನುಮಂತನು ಮಹಾ ಜ್ಞಾನಿಯಾಗಿದ್ದುದಲ್ಲದೇ, ಅಷ್ಟಸಿದ್ಧಿಗಳನ್ನೂ ಕರಗತ ಮಾಡಿಕೊಂಡಿದ್ದನು. ಆದುದರಿಂದ ದೇಹದಲ್ಲಿರುವ ವಾಯುವನ್ನು ಒಂದು ರೀತಿ ನಿಯಂತ್ರಣದಲ್ಲಿಟ್ಟುಕೊಂಡು, ಹೀಗೆ ಬಹಳ ದೂರ ಹಾರುವ ಸಾಮರ್ಥ್ಯವನ್ನು ಹೊಂದಿದ್ದನು. ವಾನರರನೇಕರು ಈ ರೀತಿ ಸಿದ್ಧಿಯನ್ನು ಹೊಂದಿ ಹಲವು ಯೋಜನ ನೆಗೆಯಬಲ್ಲವರಾಗಿದ್ದರು. ಇಂದಿಗೂ ಸಹ ಹಲವು ಯೋಗ ಸಾಧಕರು ಗಾಳಿಯಲ್ಲಿ ತೇಲುವಿಕೆಯನ್ನು (ಲೆವಿಟೇಷನ್) ಪ್ರದರ್ಶಿಸಿದ್ದಾರೆ. ಆದರೆ ಹನುಮಂತನು ವಾಯುಪುತ್ರನೇ ಆದುದರಿಂದ, ಈ ಹಾರುವ, ನೆಗೆಯುವ ವಿಷಯದಲ್ಲಿಯೂ ಅತ್ಯದ್ಭುತ ಸಾಮರ್ಥ್ಯದಿಂದಲೇ ಕೂಡಿ ಲಂಕೆಗೇ ಹಾರಬಲ್ಲವನಾಗಿದ್ದನು. 

ಒಟ್ಟಾರೆ ಹೇಳುವುದಾದರೆ, ಹನುಮ ಲಂಕೆಗೆ ಹಾರಿದ್ದು ತನ್ನ ದೇಹದಲ್ಲಿರುವ ವಾಯುಗಳ ನಿಯಂತ್ರಣದಿಂದ. ಈ ನಿಯಂತ್ರಣ ಹನುಮಂತನಲ್ಲಿ ಅತ್ಯದ್ಭುತವಾದ ಮಟ್ಟದಲ್ಲಿದ್ದುದರಿಂದ ಅವನು ಅದ್ಭುತ ಸಾಮರ್ಥ್ಯಶಾಲಿಯಾಗಿದ್ದನು. ಹೀಗೆ ತಾರ್ಕಿಕವಾಗಿಯೂ, ಆರ್ಷವಿಜ್ಞಾನದ ದೃಷ್ಟಿಕೋಣದಿಂದಲೂ ಗಮನಿಸಿದಾಗ ರಾಮಾಯಣದ ವಾಸ್ತವಿಕತೆಯು ಇನ್ನೂ ಚೆನ್ನಾಗಿ ಮನದಟ್ಟಗುತ್ತದೆ. ಆದುದರಿಂದ ರಾಮಾಯಣವನ್ನು ವಾಸ್ತವವೆಂದೇ ಪರಿಗಣಿಸಿ, ಆಸ್ವಾದಿಸಿ ಉದ್ಧಾರವಾಗೋಣ..

ಸೂಚನೆ : 14/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, December 8, 2024

ಕೃಷ್ಣಕರ್ಣಾಮೃತ 42 ಮೊಲೆವಾಲ ತಪ್ಪಿಸಿದ ಕೃಷ್ಣನನ್ನು ನಿಂದಿಸಬಾರದೆ? (Krishakarnamrta 42 Molevala Tappisida Krishnanannu Nindisabarade?)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಅಯಂ ಕ್ಷೀರಾಂಭೋಧೇಃ

"ಮೇಲೆ ನೋಡೆ ಕಣ್ಣ ತಣಿಪ / ನೀಲ ಪಟದಿ ವಿವಿಧ ರೂಪ / ಜಾಲಗಳನು ಬಣ್ಣಿಸಿರ್ಪ / ಚಿತ್ರಚತುರನಾರ್?" - ಎಂದು ಆರಂಭವಾಗುತ್ತದೆ, ಡಿವಿಜಿಯವರ "ನಿವೇದನ".

ಚಿತ್ರ ಬರೆಯುವವರಿಗೆ ಮೊದಲು ಬೇಕಾದುದೇ ಒಂದು ಭಿತ್ತಿ(ಗೋಡೆ) ಅಥವಾ ಒಂದು ಪಟ(ಕ್ಯಾನ್ವಾಸ್) ಅಲ್ಲವೇ? ಇಲ್ಲಿ ಗಗನವೇ ಪಟ. ಮೇಲೆ ನೋಡಿದರೆ ನೀಲಿಬಣ್ಣದ ಆಕಾಶ ತೋರುವುದಲ್ಲವೇ? ಅದರ ಮೇಲೆ ಏನೆಲ್ಲ ಚಿತ್ತಾರಗಳು ಕಾಣಬರುತ್ತವೆ!

ಇರುಳಿನಲ್ಲಿ ತೋರಿಬರುವ ಕೇವಲ ನಕ್ಷತ್ರಗಳ ಏನು-ಎಷ್ಟುಗಳನ್ನು  ಎಣಿಸುವುದೆಂತು, ಗಣಿಸುವುದೆಂತು? ಸೂರ್ಯೋದಯ-ಸೂರ್ಯಾಸ್ತಗಳ ಸಮಯಗಳಲ್ಲಿ ಮುಗಿಲಲ್ಲಿ ಮೂಡಿ ಮೂಡಿ ಮೋಡಿಮಾಡಿ ಮರುಕ್ಷಣದಲ್ಲೇ ಮರೆಯಾಗುತ್ತಲಿರುವ ಬಣ್ಣಗಳ ಛವಿ-ಛಾಯೆಗಳನ್ನು ಬಣ್ಣಿಸುವುದೆಂತು! ಇದನ್ನೆಲ್ಲಾ ನಿತ್ಯ ನಡೆಸಿಕೊಡುವ ಚಿತ್ರ-ಚತುರನೆಂದರೆ ಭಗವಂತನೇ ಸರಿ!

"ಜಗತ್ತಿನ ಏಳು ವಿಸ್ಮಯಗಳು" ಎಂದು ಏನೇನನ್ನೋ ಪಟ್ಟಿಮಾಡುತ್ತಾರೆ. ಆದರೆ ಪ್ರಥಮ-ವಿಸ್ಮಯವೆಂದರೆ ಇದುವೇ: ಆಗಸದಲ್ಲಿ ಮಾಸಿಯೂ ಮಾಸದ ವಿಚಿತ್ರಗಳು ಅನುದಿನವೂ ಮೂಡುವುದೇ ಆಡುವುದೇ ಸರಿ.

ಇಲ್ಲ. ಇದಕ್ಕೂ ಮಿಗಿಲಾದುದು ಮತ್ತೊಂದಿದೆ.  ಮೇಲೆ ಚಿತ್ರಿಸಿರುವುದು ಜಡ-ಪ್ರಕೃತಿಯ ಪಟಲದ ಮೇಲಾಡುವ ರಂಗುರಂಗಿನ ಚೆಲ್ಲಾಟ. ಆದರೆ ಜೀವ-ಪ್ರಕೃತಿಯ ಉಕ್ಕುವ ಚೈತನ್ಯದ ಸ್ಫುರಣವು ಮತ್ತೂ ವಿಸ್ಮಯಕಾರಿ. ಏನದು? ದಾಸರು ಕೇಳಿಲ್ಲವೆ,

"ಬೆಟ್ಟದಾ ತುದಿಯಲ್ಲಿ ಪುಟ್ಟಿದಾ ವೃಕ್ಷಕ್ಕೆ / ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ? //…   ನವಿಲಿಗೆ ಚಿತ್ರ ಬರೆದವರಾರು? / ಪವಳದ ಲತೆಗೆ ಕೆಂಪಿಟ್ಟವರು ಯಾರು?" – ಇತ್ಯಾದಿಯಾಗಿ? ಮೊದಲನೆಯದೆಂತು ವಿಸ್ಮಯಕಾರಿಯೋ, ಎರಡನೆಯದೂ ಅಂತೆಯೇ ವಿಸ್ಮಯಕಾರಿ. ಹೂ-ಹಣ್ಣುಗಳಲ್ಲಿಯ ಜ್ಯಾಮಿತೀಯ-ಸಂರಚನೆಗಳಾಗಲಿ, ಮಯೂರಗಳ ಗರಿಗಳಲ್ಲಿಯ ಕಲಾವಂತಿಕೆಗಳಾಗಲಿ, ಕಡಿಮೆ ವಿಸ್ಮಯಗಳೇ?

ಜಡ-ಜಗತ್ತಿನ ಸೊಗಸನ್ನು ಮೊದಲನೆಯದು ಹೇಳಿದರೆ, ಯಾರ ಆರೈಕೆಯೂ ಇಲ್ಲದೆ, ಬರಡು ಬಂಡೆಗಳ ಬಿರುಕುಗಳಲ್ಲೂ ಬೆಳೆದುಕೊಳ್ಳಬಲ್ಲ ಮರಗಳ ತೆರನನ್ನು ಎರಡನೆಯದು ಹೇಳಿತು. ತರು-ಲತೆಗಳ ದಲ-ಫಲಗಳಲ್ಲಿಯ ಅಚ್ಚರಿಯನ್ನೂ ಮೆಚ್ಚಿದ್ದಾಯಿತು.

ಇವಕ್ಕೂ ಮಿಗಿಲೆನ್ನಬಹುದಾದ ಮೂರನೆಯ ವಿಸ್ಮಯವೊಂದಿದೆ. ಏನದು? ತಾಯ ಹಾಲು! ಅತ್ತ ಮಗು ಹುಟ್ಟುತ್ತಲೇ ಇತ್ತ ತಾಯಿಯ ಮೊಲೆಯಲ್ಲಿ ಹಾಲು ಸಿದ್ಧವಾಗಲಾರಂಭಿಸುತ್ತದೆ! ತಾಯಿಯ ಮೊಲೆಯಲ್ಲಿ ತನಗೆ ಆಹಾರವು ಸಿದ್ಧವಾಗಿದೆಯೆಂದೂ, ಚೀಪಿದರೆ ಹಾಲು ದಕ್ಕುತ್ತದೆಂದೂ ಮಗುವಿಗೆ ಮಾಹಿತಿಯೊದಗಿಸಿದವರಾರು? ಹೀಗೆ ಚೀಪಬೇಕೆಂದು ಶಿಕ್ಷಣವೊದಗಿಸಿದವರಾರು?

ಬದುಕುಳಿಯಲೂ ಬೆಳೆದು ಬಾಳಲೂ ಬೇಕಾದ ಸಿದ್ಧತೆಯನ್ನು ಎರಡು ಕಡೆಯಿಂದಲೂ - ಅತ್ತ ತಾಯಿಯ ಮೊಲೆಯಲ್ಲಿ ಉಣಿಸಲು ಸ್ತನ್ಯಸಿದ್ಧತೆ, ಇತ್ತ ಶಿಶುವಿನ ಬಾಯಲ್ಲಿ ಅದನ್ನು ಸವಿಯಲು ಚೀಪಬೇಕೆಂಬ ಸಿದ್ಧತೆ - ಇವೆರಡೂ ಹೊರಗೆ ಯಾರಾದರೂ ಬೋಧನೆ ಮಾಡಿ ಬರಿಸಿರುವಂತಹುದೇ? ತೀಡಿ ತಿದ್ದಿ ತರಿಸಿರುವಂತಹುದೇ? ಆಧುನಿಕ-ಮನೋ-ವಿಜ್ಞಾನಿಗಳು ಹೇಳುವ ಎಸ್-ಆರ್-ಕಾಂಪ್ಲೆಕ್ಸ್-ಗಳಿಂದಲೇ ವಿವರಿಸಲಾದೀತೇ?

ಎಳೆಗರುವಿಗೂ ಇದು ಗೊತ್ತು. ಸಮಸ್ತ-ಸಸ್ತನಿಗಳಿಗೂ, ಯಾರೂ ಹೇಳಿಕೊಡದೆಯೂ, ಅರಿವಿಗೆ ಬರುವುದಿದು. ಹೀಗಾಗಿ ಮೊಲೆವಾಲೆಂಬುದು ಜೀವಾತು! ಎಂದೇ ಶ್ರೀರಂಗಮಹಾಗುರುಗಳು ತಾಯಿಯ ವಕ್ಷೋಜವೆಂಬುದು "ಅಮೃತದ ಕಲಶ"ವೆಂದು ಹೇಳಿರುವುದು!

ಆಗಸವಾಯಿತು, ಸಸ್ಯವಾಯಿತು, ಸ್ತನ್ಯವಾಯಿತು - ಇವೆಲ್ಲ ಒಂದಕ್ಕಿಂತ ಒಂದು ವಿಸ್ಮಯಕಾರಿಗಳು ಸರಿಯೇ. ಆದರೆ ಅವಕ್ಕೂ ಕೃಷ್ಣಕರ್ಣಾಮೃತಕ್ಕೂ ಏನು ಸಂಬಂಧ?

ಸಂಬಂಧವಿದೆ. ಯಾರಾದರೂ ಇಂತಹ ಮೊಲೆಹಾಲು ದೊರೆಯುವುದನ್ನು ತಪ್ಪಿಸಿದರೆ ಅದು ತಪ್ಪಲ್ಲವೇ? ತಪ್ಪೇನು, ಘೋರಾಪರಾಧವೇ ಸರಿ! ಅಂತಹ ಕೆಲಸವನ್ನು ಕೃಷ್ಣನು ಮಾಡಿದ್ದಾನೆ - ಎನ್ನುತ್ತಾನೆ, ಲೀಲಾಶುಕ!

ಕೃಷ್ಣನೇನು, ವಿಷ್ಣುವೇನು? ಇಬ್ಬರೂ ಒಂದೇ. ಕ್ಷೀರದ ಅಂಭೋಧಿಗೆ, ಎಂದರೆ ಪಾಲ್ಗಡಲಿಗೆ, ಅರ್ಥಾತ್ ಹಾಲಿನ ಸಮುದ್ರಕ್ಕೆ, ಅಧಿಪತಿಯೆಂದರೆ ಶ್ರೀಕೃಷ್ಣನಲ್ಲದೆ ಮತ್ತಿನ್ನಾರು? ಕ್ಷೀರ-ಸಮುದ್ರದಲ್ಲಲ್ಲವೇ ವಿಷ್ಣುವು ಶಯಿಸಿರುವುದು, ಎಂದರೆ ನಿದ್ರಿಸಿರುವುದು?

ಅದು ವಿಷ್ಣು, ಇದು ಕೃಷ್ಣ - ಎನ್ನಬೇಡಿ. ಒಂದು ವೇಳೆ ಹಾಗೆಂದರೂ ದೋಷಾರೋಪಣೆ ತಪ್ಪದು. ಏಕೆ? ಈತ ಗೋಪಾಲಕನಲ್ಲವೆ? ಕರುಗಳು ಹಾಲು ಕುಡಿಯುವುದನ್ನು ತನ್ನ ಎಳಸಿನಿಂದಲೇ ನಿತ್ಯವೂ ಕಂಡಿರುವವನಲ್ಲವೇ? ಕರುಗಳನ್ನು ಅಮ್ಮ-ಹಸುವಿನತ್ತ, ಗೋಮಾತೆಯತ್ತ, ಕರೆದುಕೊಂಡು ಹೋಗಿ ಹತ್ತಾರೇನು, ನೂರಾರು ಬಾರಿ ಹಾಲು ಕುಡಿಸಿರುವವನಲ್ಲವೇ? ಹಾಗೆಂದ ಮೇಲೆ ಮಾತೃಸ್ತನ್ಯದ ಬೆಲೆಯನ್ನು ಈತನೇನು ಅರಿಯನೇ?

ಯಾರಾದರೂ ಗೊಲ್ಲರ ಬಳಿಗೆ ಹೋಗುವುದೇತಕ್ಕೆ? ಹಾಲನ್ನು ಕೊಳ್ಳಲು. ಕೃಷ್ಣನು ಗೋಪ-ತನಯ, ಎಂದರೆ ಗೊಲ್ಲರ ಮಗ - ಎಂಬ ಎರಡನೆಯ ಕಾರಣದಿಂದಲೇ, ಕ್ಷೀರೋಪನಯನಕ್ಕೆಂದೇ, ಎಂದರೆ ಹಾಲು ಪಡೆಯಲೆಂದೇ, ನಾವು ಕೃಷ್ಣನನ್ನು ಆಶ್ರಯಿಸಿದುದು. ಆದರೆ ಅದನ್ನೇ ಆತನು ತಪ್ಪಿಸಿಬಿಡುವುದೇ? ಪಾಡಿದವರಿಗೆ ಬೇಡಿದ ವರಗಳನು ನೀಡುವನು – ಎಂಬ ಕಾರಣದಿಂದಲೇ ಅಲ್ಲವೇ ದೇವನನ್ನು ಎಲ್ಲರೂ ಭಕ್ತಿಯಿಂದ ಸಮಾಶ್ರಯಿಸುವುದು?

ಜನನೀ-ಸ್ತನದಿಂದ ದಕ್ಕುವ ಹಾಲಿಗೆ ಕೃಷ್ಣನು ಪ್ರತ್ಯೂಹ ಉಂಟುಮಾಡಿದನಲ್ಲಾ, ಎಂದರೆ ಅಡ್ಡಿಯೊಡ್ಡಿದನಲ್ಲಾ - ಎಂಬ ಆಪಾದನೆ ಕೃಷ್ಣನ ಮೇಲೆ ಬಂದಿರುವುದು ಏತಕ್ಕೆ? ಆತನು ಮಾಡಿರುವುದಾದರೂ ಏನು?

ಇದಕ್ಕೆ ಉತ್ತರವು ಹೀಗಿದೆ. ಕೃಷ್ಣನನ್ನು ಭಜಿಸುವುದರಿಂದ ದೊರಕುವುದೇನು? ಮುಕ್ತಿಯಲ್ಲವೇ? ಮುಕ್ತಿಯೆಂದರೂ ಮೋಕ್ಷವೆಂದರೂ ಬಿಡುಗಡೆ. ಅರ್ಥಾತ್, ಮರುಹುಟ್ಟಿಲ್ಲದಿರುವಿಕೆ. ನಾವೆಲ್ಲಾ ಸಿಕ್ಕಿಕೊಂಡಿರುವುದು "ಪುನರಪಿ ಜನನಂ ಪುನರಪಿ ಮರಣಂ" ಎಂಬ ಚಕ್ರದಲ್ಲಿ. ಸಂಸರಣ ಅಥವಾ ಸಂಸಾರವೆಂದರೇ ಮತ್ತೆ ಮತ್ತೆ ಹುಟ್ಟಿ ಸಾಯುತ್ತಿರುವ ಚಕ್ರ. ಅದುವೇ ಭವ-ಬಂಧ.

ಆ ಸಂಸಾರ-ಚಕ್ರದಿಂದ ಬಿಡುಗಡೆಯಾಯಿತೆಂದರೆ ಮತ್ತೆ ತಾಯಿಯ ಗರ್ಭದಲ್ಲಿ ವಾಸವೆಂಬುದೆಲ್ಲಿ? ಅರ್ಥಾತ್, ಮತ್ತೆ ಹುಟ್ಟೆಲ್ಲಿ? ಹುಟ್ಟೇ ಇಲ್ಲವೆಂದಮೇಲೆ ಸ್ತನದ ಪಯಸ್ಸು - ಎಂದರೆ ತಾಯ್ಮೊಲೆ ಹಾಲು - ಮತ್ತೆಲ್ಲಿ? ಎಂದೇ, ಮೊಲೆವಾಲೇ ದುರ್ಲಭವಾಯಿತಲ್ಲಾ! – ಎಂದಿರುವುದು, ಲೀಲಾಶುಕ.

ಈ ಶ್ಲೋಕದ ತಾತ್ಪರ್ಯವು ಏನೆಂದರೆ, ಕೃಷ್ಣನನ್ನು ಭಜಿಸಿದವರಿಗೆ ಮರುಹುಟ್ಟಿಲ್ಲ, ಗರ್ಭವಾಸದ ದುಃಖವಿಲ್ಲ - ಎಂಬುದು. ಇದುವೇ ಮೋಕ್ಷ-ಪ್ರಾಪ್ತಿ! ಇದಕ್ಕಿಂತಲೂ ದೊಡ್ಡ ಲಾಭವುಂಟೇ? ಇದುವೇ ಆತ್ಮ-ಲಾಭವೆಂದು ಕರೆಯಿಸಿಕೊಳ್ಳಲ್ಪಡುವುದು. ಆತ್ಮಲಾಭಕ್ಕಿಂತಲೂ ಹಿರಿದಾದ ಮತ್ತೊಂದು ಲಾಭವಿಲ್ಲ – ಎನ್ನುತ್ತಾರೆ, ಆಪಸ್ತಂಬ-ಮಹರ್ಷಿಗಳು.

ಯಾವ ಸುಖಕ್ಕಿಂತ ಹಿರಿದಾದ ಸುಖವಿಲ್ಲವೋ ಅದುವೇ ಆತ್ಮ-ಸುಖ. ಭಗವತ್-ಸಾಕ್ಷಾತ್ಕಾರವೆಂದರೂ ಇದೇ. ಹೀಗೆ ಶ್ರೀಕೃಷ್ಣನ ಭಜನೆಯಿಂದ ಉತ್ತಮೋತ್ತಮ-ಲಾಭವೇ, ಉತ್ತಮೋತ್ತಮ-ಸುಖವೇ! ಇದಕ್ಕಿಂತಲೂ ದೊಡ್ಡ ಗುಣವಿರಲು ಸಾಧ್ಯವೇ?

ಹಾಗಿರಲು, ಇಲ್ಲಿ ಗುಣವನ್ನೇ ದೋಷವೆಂದು ತೋರಿಸಿದೆ. ಪರಿಣಾಮವಾಗಿ, ನಿಂದಾ-ಸ್ತುತಿಯನ್ನು ಮಾಡಿದೆ. ಮೇಲ್ನೋಟಕ್ಕೆ ನಿಂದೆ, ವಾಸ್ತವವಾಗಿ ಪ್ರಶಂಸೆ -ಎಂಬ ಬಗೆಯ ವಾಕ್-ಚಮತ್ಕಾರವೇ ನಿಂದಾ-ಸ್ತುತಿ. ಹೀಗೆ ತೆಗಳಿ ಹೊಗಳುವ ಬಗೆಯಿಂದ ಕೃಷ್ಣನನ್ನು ಕೊಂಡಾಡಿರುವ ಮುದ್ದಾದ ಪದ್ಯವಿದು.

"ಅಯಂ ಕ್ಷೀರಾಂಭೋಧೇಃ ಪತಿ"ರಿತಿ, "ಗವಾಂ ಪಾಲಕ" ಇತಿ,

ಶ್ರಿತೋಽಸ್ಮಾಭಿಃ ಕ್ಷೀರೋಪನಯನ-ಧಿಯಾ ಗೋಪ-ತನಯಃ |

ಅನೇನ ಪ್ರತ್ಯೂಹೋ ವ್ಯರಚಿ ಸತತಂ ಯೇನ ಜನನೀ-

ಸ್ತನಾದ್ ಅಪ್ಯಸ್ಮಾಕಂ ಸಕೃದ್ ಅಪಿ ಪಯೋ ದುರ್ಲಭಮಭೂತ್!! ||

ಸೂಚನೆ : 7/12/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, December 1, 2024

ಕೃಷ್ಣಕರ್ಣಾಮೃತ 41 ಬೆಟ್ಟವೆತ್ತಿ ಇಂದ್ರನ ಸೊಕ್ಕಡಗಿಸಿದ ಕೃಷ್ಣನು ತೋರಿದ ಬಗೆಗಳು (Krishakarnamrta 41 Bettavetti Indrana Sokkadagisida Krishnanu Torida Bagegalu)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


ಆನಂದೇನ ಯಶೋದಯಾ

ಇನ್ನೂ ಏಳು ವರ್ಷದ ಮಗುವಾದ ಕೃಷ್ಣನು ಹಲವು ಲೋಕೋತ್ತರ ಕಾರ್ಯಗಳನ್ನು ಮಾಡಿದ್ದನಷ್ಟೆ?

ಆರಂಭದಿಂದಲೇ ಅಸುರರ ಕಾಟ. ಎಳಸಿನಿಂದಲೇ ಸಾವಿನ ಸಾಧ್ಯತೆಗಳು! ಅಸುರರೋ, ಬಹುರೂಪಿಗಳು. ಅದೆಷ್ಟು ತೆರನಾಗಿ ಆತನನ್ನು ಸಂಹರಿಸಲು ಯತ್ನಿಸಿದರು! ಪೂತನೆ, ಶಕಟಾಸುರ, ತೃಣಾವರ್ತ, ಬಕಾಸುರ, ವತ್ಸಾಸುರ, ಧೇನುಕಾಸುರ - ಇವರುಗಳ ಸಂಹಾರ, ಹಾಗೂ ಕಾಳಿಯ-ಸರ್ಪ-ಮರ್ದನ - ಇವೆಲ್ಲವೂ ಸಾಧಾರಣ ಮನುಷ್ಯರಿಗೆ ಅಸಾಧ್ಯವೆನಿಸತಕ್ಕವು. ಇನ್ನು ಗೋವರ್ಧನೋದ್ಧರಣವಂತೂ ಹೇಳಲೇಬೇಕಿಲ್ಲ, ಅನೂಹ್ಯ-ಘಟನೆಯೇ ಅದು. ಯಾವುದನ್ನು ಊಹಿಸಿಕೊಳ್ಳಲೂ ಆಗದೋ ಅದು ಅನೂಹ್ಯ.

ಏನು ಗೋವರ್ಧನೋದ್ಧಾರವೆಂದರೆ? ಅದೇಕಾಯಿತು? ಅದರಿಂದಾದದ್ದೇನು? - ಇವು ಪ್ರಕೃತ-ಶ್ಲೋಕಕ್ಕೆ ಉಪಯುಕ್ತವಾದಂತಹವು. ಬೇರೆ ಬೇರೆಯವರಿಂದ ಅದಕ್ಕೆ ಬಂದ ನಾನಾ- ಪ್ರತಿಕ್ರಿಯೆಗಳೇನೆಂಬುದನ್ನು ಈ ಶ್ಲೋಕದಲ್ಲಿ ನಿರೂಪಿಸಿದೆ. ಕಥಾ-ಸಂದರ್ಭವು ಹೀಗಿದೆ:

ಒಮ್ಮೆ ಇಂದ್ರ-ಯಾಗವನ್ನು ನೆರವೇರಿಸಲು ಗೋಪರು ಆರಂಭಿಸಿದ್ದರು. ಅವರೇನನ್ನು ಮಾಡಲಿರುವರೆಂಬುದನ್ನು ಅರಿತ ಕೃಷ್ಣ ಆ ಬಗ್ಗೆ ಅವರಲ್ಲಿ ವಿಚಾರಿಸಿದ.

ಆಗ ನಂದ ಹೇಳಿದ: ಮಳೆಗೆ ಇಂದ್ರನೇ ಪ್ರಭುವಲ್ಲವೇ? ಮೋಡಗಳು ಆತನ ರೂಪಗಳೇ ತಾನೆ? ಪ್ರಾಣಿಗಳಿಗೆ ಮಳೆಯೇ ಜೀವನಾಧಾರ. ಎಂದೇ, ಅವನಿಂದಾಗುವ ಮಳೆಯಿಂದಾಗಿ ಜನಿಸುವ ದ್ರವ್ಯಗಳಿಂದಲೇ ಆತನಿಗೆ ಪೂಜೆ. ಪರಂಪರಾಗತವಾದ ಅದನ್ನು ಬಿಡಲಾಗದು. ಅದಕ್ಕೆ ಕೃಷ್ಣನು ಹೇಳಿದನು: "ನಿಮ್ಮ ನಿಮ್ಮ ಕರ್ಮಗಳನ್ನು ನೀವು ನಿಷ್ಠೆಯಿಂದ ಮಾಡುತ್ತಿದ್ದರಾಯಿತು. ಇಲ್ಲಿ ಇಂದ್ರನ ಪಾತ್ರವೇನಿದೆ?

ಬ್ರಾಹ್ಮಣನಿಗೆ ವೇದರಕ್ಷೆಯು ಮುಖ್ಯ; ಕ್ಷತ್ರಿಯನಿಗೆ ಭೂರಕ್ಷೆಯು ಮುಖ್ಯ; ವೈಶ್ಯನಿಗೆ ನಾಲ್ಕು ವೃತ್ತಿಗಳು - ಕೃಷಿ, ವಾಣಿಜ್ಯ, ಗೋರಕ್ಷೆ ಹಾಗೂ ಕುಸೀದ (ಲೇವಾದೇವಿ ವ್ಯವಹಾರ); ಶೂದ್ರನಿಗೆ ದ್ವಿಜಸೇವೆಯು ಮುಖ್ಯ. ವೈಶ್ಯರಾದ ನಮಗೆ ಗೋರಕ್ಷೆಯೇ ಜೀವಿಕೆ.

ರಜಸ್ಸು-ಸತ್ತ್ವ-ತಮಸ್ಸು - ಇವುಗಳಿಂದ ಕ್ರಮವಾಗಿ ಸೃಷ್ಟಿ-ಸ್ಥಿತಿ-ಲಯಗಳಾಗುವುವು. ಮೇಘಗಳು ಮಳೆಗರೆಯಲು ರಜಸ್ಸು ಕಾರಣ, ಮಹೇಂದ್ರನಲ್ಲ. ಆದ್ದರಿಂದ ಇಂದ್ರ-ಯಾಗಕ್ಕೆಂದು ಶೇಖರಿಸಿಕೊಂಡಿರುವ ವಸ್ತುಗಳಿಂದಲೇ ಗೋ-ಬ್ರಾಹ್ಮಣ-ಪೂಜೆ, ಗಿರಿ-ಪೂಜೆಗಳನ್ನು ನೆರವೇರಿಸಿರಿ. ಎಲ್ಲರಿಗೂ ಸಂತರ್ಪಣೆಯಾಗಲಿ. ಕೆಳಜಾತಿಯೆನಿಸಿದವರಿಗೂ ಸತ್ಕಾರವಾಗಲಿ. ಗೋ-ಅಶ್ವಗಳಿಗೂ ಯಥಾರ್ಹವಾದ ಸಂತರ್ಪಣವಾಗಲಿ. ಎಲ್ಲರೂ ಚೆನ್ನಾಗಿ ಅಲಂಕರಿಸಿಕೊಂಡು, ರುಚಿಯಾಗಿ ಉಂಡುತಿಂದು, ಸೊಗಸಾಗಿ ಸುಗಂಧ-ಲೇಪನ ಮಾಡಿಕೊಂಡು, ಒಳ್ಳೆಯ ಬಟ್ಟೆಯುಟ್ಟು ಗೋ-ವಿಪ್ರ-ಅಗ್ನಿ-ಶೈಲಗಳಿಗೆ ಪ್ರದಕ್ಷಿಣ ಮಾಡುವಿರಾದರೆ ನನಗೆ ಸಂತೋಷವಾಗುವುದು".

ಆತನ ಮಾತಿನಂತೆಯೇ ನಂದಾದಿಗಳು ನಡೆದುಕೊಂಡರು. ಗೋಪಿಯರು ಕೃಷ್ಣನ ಪರಾಕ್ರಮಗಳನ್ನು ಗಾನ-ರೂಪವಾಗಿ ಹಾಡಿದರು, ಆಡಿದರು. ಕೃಷ್ಣನೂ ತಾನೇ ಶೈಲನಾಗಿ ಬೃಹದಾಕಾರನಾಗಿ ನಿಂತು ಪೂಜೆಯನ್ನು ಸ್ವೀಕರಿಸಿ, ಜೊತೆಗೇ ಸಾಧಾರಣ-ರೂಪದಲ್ಲೂ ತೋರಿ, "ಓ ನೋಡಿ, ಪರ್ವತವು ಪೂಜೆಯನ್ನು ಸ್ವೀಕರಿಸಿದೆ! ಇದಕ್ಕೇ ನಮ್ಮ ನಮಸ್ಕಾರವಿರಲಿ" ಎಂದನು. ಪೂಜೆ ಮುಗಿಯಲು, ಎಲ್ಲರಿಗೂ ವ್ರಜಕ್ಕೆ ಹಿಂದಿರುಗಿದರು.

ಗೋಪರ ಮೇಲೂ, ಕೃಷ್ಣನ ನಾಯಕತ್ವ ಹೊಂದಿದ್ದ ನಂದ ಮೊದಲಾದವರ ಮೇಲೂ, ಇಂದ್ರನಿಗೆ ಕೋಪವುಕ್ಕಿತು. ಪ್ರಳಯ-ಕಾಲದ ಮೇಘಗಳನ್ನು ಪ್ರಚೋದಿಸಿದ, ಇಂದ್ರ: "ಆಹಾ! ವನವಾಸಿಗಳಾದ ಈ ಗೋಪರಿಗೆ ಅದೆಷ್ಟು ಗರ್ವ! ಕೃಷ್ಣನೊಬ್ಬ ಮರ್ತ್ಯ. ಆತನನ್ನು ನೆಚ್ಚಿಕೊಂಡು ದೇವತೆಗಳನ್ನೇ ನಿರ್ಲಕ್ಷ್ಯಮಾಡುವುದೇ? ಕೃಷ್ಣನು ವಾಚಾಳ (ಬರೀ ಮಾತಿನ ಮಲ್ಲ), ತನ್ನನ್ನೇ ಪಂಡಿತನೆಂದುಕೊಂಡಿರುವ ಅಜ್ಞ - ಆತನನ್ನು ನಂಬಿಕೊಂಡು ನನಗೆ ಅಪ್ರಿಯವೆಸಗಿರುವರು! ಅವರಿಗೆ ಗರ್ವ-ಭಂಗವಾಗಬೇಕು. ಅದಕ್ಕೇ ಅವರ ಗೋವುಗಳನ್ನು ನಾಶಪಡಿಸಿ! ನಾನೂ ಐರಾವತವನ್ನೇರಿ ಆಮೇಲೆ ಬರುತ್ತೇನೆ, ಗೋಕುಲ-ವಿಧ್ವಂಸವಾಗಲಿ!"

ಅದರಂತೆ ಮೋಡಗಳು ಧಾರೆಧಾರೆಯಾಗಿ ಮಳೆ ಸುರಿಸಿದವು. ಆಗಾದ ಗುಡುಗುಗಳೇನು, ಮಿಂಚುಗಳೇನು! ಝಂಝಾವಾತವೇನು, ಆಲಿಕಲ್ಲುಗಳೇನು! ಜಲಪ್ರವಾಹದಿಂದ ನೆಲವೇ ಕಾಣದಾಯಿತು! ಪಶುಗಳು ನಡುಗಿದವು, ಗೋಪ-ಗೋಪಿಯರಿಗೆ ಶೈತ್ಯವು ಹಿಡಿದುಕೊಂಡಿತು. ಎಲ್ಲರೂ ಕೃಷ್ಣನಿಗೆ ಶರಣಾದರು, ಗೋವುಗಳೂ ಕೃಷ್ಣನ ಪಾದದತ್ತಲೇ ಬಂದವು. "ಕೃಷ್ಣ, ಕೃಷ್ಣ! ಕಾಪಾಡು ಗೋಕುಲವನ್ನು! - ಎಂದು ಎಲ್ಲರೂ ಬೇಡಿಕೊಂಡರು.

ಇಂದ್ರನ ಚೇಷ್ಟೆಯಿದು - ಎಂದು ಕೃಷ್ಣನರಿತನು. ಅಕಾಲವೃಷ್ಟಿ-ಅತಿವಾತ – ಶಿಲಾವರ್ಷಗಳಿಗೆ ಕಾರಣನಾದ ಇಂದ್ರನ ಗರ್ವವನ್ನು ಮುರಿಯಬೇಕೆಂದು ಯೋಚಿಸಿದನು. ಹೀಗೆ ಹೇಳಿದವನೇ, ಒಂದೇ ಹಸ್ತದಿಂದಲೇ ಲೀಲೆಯಿಂದಲೇ ಗೋವರ್ಧನ-ಗಿರಿಯನ್ನು ಎತ್ತಿಹಿಡಿದನು - ಅದೇನೋ ನಾಯಿಕೊಡೆಯೆಂಬಂತೆ!

ಮತ್ತು ಗೋಪರಿಗೆ ಹೇಳಿದನು "ನಾನೆತ್ತಿರುವ ಗಿರಿಯಡಿಯಲ್ಲಿ ನಿಲ್ಲಿರಿ. ಹೆದರಬೇಡಿ!" ಅವರೂ ಅಂತೆಯೇ ಮಾಡಿದರು. ಏಳು ದಿನಗಳ ಕಾಲ ಕೃಷ್ಣನು ಅಲ್ಲಾಡಲಿಲ್ಲ. ಹಸಿವು-ಬಾಯಾರಿಕೆಗಳನ್ನು ಲೆಕ್ಕಿಸಲಿಲ್ಲ.

ಇಂದ್ರನಿಗೆ ಮಹಾ-ವಿಸ್ಮಯವಾಯಿತು, ಕೃಷ್ಣನ ಯೋಗ-ಶಕ್ತಿಯನ್ನು ಕಂಡು! ತನ್ನ ಗರ್ವವು ಭಗ್ನವಾಯಿತು. ಮೋಡಗಳನ್ನು ನಿಲ್ಲಿಸಿದನು. ಆಕಾಶವು ತಿಳಿಯಾಯಿತು. ಸೂರ್ಯನು ಗೋಚರಿಸಿದನು. ಮಳೆಗಾಳಿಗಳು ನಿಂತವು.

"ಎಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ಹೋಗಬಹುದು. ಇನ್ನು ಭಯವಿಲ್ಲ " - ಎಂಬ ಕೃಷ್ಣನ ಮಾತಿನಿಂದ ಎಲ್ಲರಿಗೂ ಭರವಸೆಯುಂಟಾಯಿತು. ಕೃಷ್ಣನೂ ಗೋವರ್ಧನವನ್ನು ಮೊದಲಿನಂತೆಯೇ ನಿಲ್ಲಿಸಿದನು.

ಪ್ರೇಮ-ವೇಗದಿಂದ ಗೋಪ-ಗೋಪಿಯರು ಕೃಷ್ಣನನ್ನು ಆಲಿಂಗಿಸಿಕೊಂಡರು, ಆತನನ್ನು ಅರ್ಚಿಸಿದರು. ದೇವತೆಗಳೂ ಗಂಧರ್ವರೂ ಕೃಷ್ಣ-ಸ್ತುತಿಯನ್ನು ಮಾಡಿದರು, ಹೂಮಳೆಗರೆದರು. ಶಂಖ-ದುಂದುಭಿಗಳು ನಾದ ಮಾಡಿದವು. ಗಾಂಧರ್ವ-ಗಾನವಾಯಿತು. ಎಲ್ಲರೊಂದಿಗೆ ಕೃಷ್ಣನು ಗೋಕುಲವನ್ನು ಸೇರಿಕೊಂಡನು.

ಹೀಗೆ ಗೋವರ್ಧನವನ್ನು ಕೃಷ್ಣನೆತ್ತಿಹಿಡಿದಾಗ ಯಾರಾರಿಗೆ ಹೇಗೆ ಹೇಗೆ ತೋರಿತು - ಎಂಬುದನ್ನು ಲೀಲಾಶುಕನು ಏಳೆಂಟುಬಗೆಯಾಗಿ ಚಿತ್ರಿಸಿದ್ದಾನೆ.

ತಾಯಿ ಯಶೋದೆಗೆ ಆನಂದವಾಯಿತು. ಸಾಕಿ ಸಲಹುವವಳಿಗೆ ಕೆಲವೊಮ್ಮೆ ಹೆತ್ತಮ್ಮನಿಗಿಂತಲೂ ಹೆಚ್ಚು ಆತಂಕವಾದೀತಲ್ಲವೆ! ಈಗ ಅಷ್ಟೇ ಸಂತೋಷ! ಇನ್ನು ಗೋಪ-ನಾರಿಯರ ಹೃದಯದಲ್ಲಿ ವೀರ-ಕೃಷ್ಣನ ಬಗ್ಗೆ ಪ್ರೀತಿಯುಕ್ಕಿತು.

ದಿವಿಯಲ್ಲಿದ್ದ ಇಂದ್ರನಿಗೆ ಆತಂಕ-ಆಶಂಕೆಗಳಾದುವು. ಆಕಾಶ-ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಿದ್ಧರು ಪುಷ್ಪಾರ್ಚನೆಗೈದರು. ಗೋಪ-ಕುಮಾರರಿಗೆ ಅತ್ತ ವ್ಯಾಕುಲತೆಯೂ ಆಯಿತು, ಇತ್ತ ಈರ್ಷ್ಯೆಯೂ ಆಯಿತು. ಪೌರರಿಗಂತೂ ಕಾರುಣ್ಯವುಕ್ಕಿತು - ಅಯ್ಯೋ ಈ ಹುಡುಗನ ಗತಿಯೇನು? - ಎಂದೆನಿಸಿತು. ಇನ್ನಿತರ ಜನರಿಗೆ ಆಶ್ಚರ್ಯವಾಯಿತು.

ಗೋವರ್ಧನಗಿರಿಯನ್ನು ಎತ್ತಿಹಿಡಿದಿದ್ದ ಕೃಷ್ಣನನ್ನು ಹೀಗೆಲ್ಲಾ ಬಗೆಬಗೆಯಾಗಿ ಕಂಡರು, ಅಲ್ಲಿಯ ಭುವಿ-ದಿವಿಗಳಲ್ಲಿಯ ಮಂದಿ! ಹೀಗೆಲ್ಲ ತೋರಿದ ಕೃಷ್ಣನು ನಿಮ್ಮನ್ನು ಕಾಪಾಡಲಿ - ಎನ್ನುತ್ತಾನೆ, ಲೀಲಾಶುಕ.

ಪ್ರಸಂಗವೊಂದನ್ನು ಬಹುಮಂದಿ ಬಹುಬಗೆಯಾಗಿ ಕಾಣುವಲ್ಲಿ ಉಲ್ಲೇಖಾಲಂಕಾರವೆನ್ನುತ್ತಾರೆ. ಅದಿಲ್ಲಿದೆ.

ಅಂತೂ ತಾಯಿ ಯಶೋದೆ ಹಾಗೂ ಗೋಪಿಯರೆಂಬ ನಾರಿಯರು, ದೇವಲೋಕ-ಅಂತರಿಕ್ಷಲೋಕಗಳ ಇಂದ್ರ-ಸಿದ್ಧರು, ಗೋಪಬಾಲರು, ಪುರಜನರು, ಇತರರು - ಇವರೊಬ್ಬೊಬ್ಬರಿಗೂ ಉಂಟಾದ ಮನಸ್ಸ್ಥಿತಿಗಳನ್ನು ಕವಿಯು ಚಿತ್ರಿಸಿದ್ದಾನೆ.

ಹೀಗೆ ವ್ಯಾಪಕವಾದ ನೋಟ, ಕವಿಯದು. ಬಗೆಬಗೆಯ ಮಂದಿಯ ಅಂತರಂಗವನ್ನು ಅಂತರ್ನೇತ್ರದಿಂದ ಕಂಡುಕೊಂಡ ಕವಿಯ ಪ್ರತಿಭೆಯೂ ಅಗಾಧವಾದದ್ದೇ ಸರಿ!

ಆನಂದೇನ ಯಶೋದಯಾ, ಸಮದನಂ ಗೋಪಾಂಗನಾಭಿಶ್ಚಿರಂ,

ಸಾಶಂಕಂ ಬಲವಿದ್ವಿಷಾ, ಸಕುಸುಮೈಃ ಸಿದ್ಧೈಃ, ಪಥಿ ವ್ಯಾಕುಲಂ |

ಸೇರ್ಷ್ಯಂ ಗೋಪಕುಮಾರಕೈಃ, ಸಕರುಣಂ ಪೌರೈಃ, ಜನೈಃ ಸಸ್ಮಿತಂ -

ಯೋ ದೃಷ್ಟಃ ಸ ಪುನಾತು ನೋ ಮುರರಿಪುಃ ಪ್ರೋತ್ಕ್ಷಿಪ್ತ-ಗೋವರ್ಧನಃ!! ||

ಸೂಚನೆ : 30/11/2024 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.