Wednesday, September 2, 2026

(Vyaasa Vikshita 203) ಶಿಶುಪಾಲನ ಪ್ರತಿಭಟನೆ, ಯುಧಿಷ್ಠಿರನ ಸಾಂತ್ವನ (Vyaasa Vikshita 203)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ರಾಜಸೂಯವು ಮುಗಿಯಲು, ಅರ್ಹ-ಕ್ಷತ್ರಿಯರಿಗೆ ಸಂಮಾನನವೆಂಬ ಕಾರ್ಯವು ಜರುಗಬೇಕಿತ್ತು. ತದಂಗವಾಗಿ ಅಗ್ರಪೂಜೆಯು ಕೃಷ್ಣನಿಗೆ ಸಂದಿತೆಂದು, ಶಿಶುಪಾಲನು ಪ್ರತಿಭಟಿಸಿ ಯುಧಿಷ್ಠಿರನನ್ನು ಆಕ್ಷೇಪಿಸಿದನು.

ಬಳಿಕ ಈಗ ಕೃಷ್ಣನನ್ನೇ ಸಂಬೋಧಿಸಿ ಆಕ್ರೋಶದಿಂದ ಹೇಳುತ್ತಿದ್ದಾನೆ, ಶಿಶುಪಾಲ:

“ಮಾಧವನೇ, ಕುಂತಿಯ ಮಕ್ಕಳು ಪುಕ್ಕಲರು, ದಯನೀಯರು, ಬಡಪಾಯಿಗಳು. ನೀನಾದರೂ ಅದನ್ನರಿಯಬೇಡವೆ - ಎಂತಹ ಪೂಜೆಗೆ ನೀನು ಅಧಿಕಾರಿಯೆಂಬುದನ್ನು? ಈ ಬಡಪಾಯಿಗಳು ನಿನಗರ್ಪಿಸಿದ ಅಗ್ರಪೂಜೆಗೆ ಅನರ್ಹನಾದ ನೀನು ಅದನ್ನು ಅದೇನೋ ದೊಡ್ಡದೆಂಬಂತೆ ಸ್ವೀಕರಿಸಿರುವೆ. ಇದು ಹೇಗೆಂದರೆ, ಹವಿಸ್ಸಿನ ಪಾತ್ರೆಯನ್ನು ನಿರ್ಜನಪ್ರದೇಶಕ್ಕೊಯ್ದು ಅದಕ್ಕಂಟಿದ್ದ ಹವಿರ್ಧಾರೆಯನ್ನು ನಾಯಿ ನೆಕ್ಕುವಂತೆ!

ಒಂದರ್ಥದಲ್ಲಿ, ಇಲ್ಲಿ ನೆರೆದಿರುವ ಅರಸರಿಗೆ ಇದು ಅಪಮಾನವೆಂದಲ್ಲ; ಬದಲಾಗಿ ಈ ಕುರುವಂಶಜರೇ (ಎಂದರೆ ಪಾಂಡವರೇ) ನಿನಗೆ ವಂಚನೆ ಮಾಡಿರುವಂತಿದೆ. ಷಂಡನಿಗೆ ಮದುವೆಮಾಡಿಕೊಟ್ಟರೆ ಹೇಗೋ ಹಾಗೆ, ಕುರುಡನಿಗೆ ರೂಪವನ್ನು ತೋರಿಸಿದರೆ ಹೇಗೋ ಹಾಗೆ, ರಾಜನಲ್ಲದ ನಿನಗೆ ರಾಜನಿಗೆಂಬಂತೆ ಪೂಜೆಯನ್ನು ಸಲ್ಲಿಸುವುದಾಗಿದೆ, ಕೃಷ್ಣ!

ಇಂದು ಕಂಡಂತಾಯಿತು ಯುಧಿಷ್ಠಿರನನ್ನು - ಎಂದರೆ ಆತನ ಯೋಗ್ಯತೆಯನ್ನು. ಅಂತೆಯೇ ಭೀಷ್ಮರನ್ನು. ಅದೇ ರೀತಿಯಲ್ಲಿ ವಾಸುದೇವನನ್ನೂ ಕಂಡಂತಾಯಿತು. ಎಲ್ಲವನ್ನೂ ಯಥಾಯಥವಾಗಿ ತಿಳಿದದ್ದಾಯಿತು!”

ಹೀಗೆಂಬುದಾಗಿ ಹೇಳಿದವನೇ, ತನ್ನ ಉತ್ತಮವಾದ ಆಸನದಿಂದ ಮೇಲೆದ್ದವನಾಗಿ, ಕೆಲ ರಾಜರೊಡಗೂಡಿ ಆ ಸಭೆಯಿಂದ ಹೊರಟುಬಿಟ್ಟನು. ಒಡನೆಯೇ ಯುಧಿಷ್ಠಿರನು ಶಿಶುಪಾಲನಲ್ಲಿಗೆ ಧಾವಿಸಿದನು. ಹಾಗೂ ಈ ಸಾಂತ್ವನದ ಮಾತುಗಳನ್ನು ಮಧುರವಾಗಿ ನುಡಿದನು:

ರಾಜನೇ, ಎಂತಹ ಮಾತುಗಳನ್ನು ನೀನಾಡಿಬಿಟ್ಟೆ! ಅವು ಯುಕ್ತವಲ್ಲ. ಯಾರ ವಿಷಯದಲ್ಲೇ ಆಗಲಿ ನಿರರ್ಥಕವಾದ ಇಂತಹ ಮಾತನ್ನು ಪಾರುಷ್ಯದಿಂದ (ಎಂದರೆ ಒರಟಾಗಿ) ನುಡಿಯುವುದು ಅಧರ್ಮವೇ ಸರಿ.

ಶಾಂತನವ-ಭೀಷ್ಮನು (ಎಂದರೆ ಶಂತನುಪುತ್ರನಾದ ಭೀಷ್ಮನು) ಶ್ರೇಷ್ಠವಾದ ಧರ್ಮವನ್ನು ಅರಿಯಲಾಗದವನೆಂಬುದು ಎಂದಿಗೂ ಇಲ್ಲ. ಆತನನ್ನು ನೀನು ಅನ್ಯಥಾ ಭಾವಿಸಬೇಡ.

ಇಲ್ಲಿರುವ ರಾಜರನ್ನು ನೋಡು. ಇವರಲ್ಲನೇಕರು ನಿನಗಿಂತಲೂ ಹಿರಿಯರಾದವರು. ಕೃಷ್ಣನಿಗೆ ಸಲ್ಲಿಸಿದ ಪೂಜೆಯನ್ನು ಅವರುಗಳೇ ಸಹಿಸಿಕೊಂಡಿರುವರಲ್ಲವೇ? ಹಾಗೆಯೇ ನೀನೂ ಕ್ಷಮಿಸಲು ಅರ್ಹನಾಗಿದ್ದೀಯೆ. ಓ ಚೇದಿ-ರಾಜನೇ, ಎಂದರೆ ಚೇದಿದೇಶದ ಒಡೆಯನೇ, ಕೃಷ್ಣನೇನೆಂಬುದನ್ನು ತತ್ತ್ವದೃಷ್ಟಿಯಿಂದ ಭೀಷ್ಮರು ಬಲ್ಲರು. ಯಾವ ರೀತಿ ಭೀಷ್ಮರು ಬಲ್ಲರೋ ಆ ರೀತಿ ನೀನು ಕೃಷ್ಣನನ್ನರಿತವನಲ್ಲ" ಎಂದನು.

ಆಗ ಭೀಷ್ಮರು ನುಡಿದರು:

“ಕೃಷ್ಣನು ಲೋಕ-ವೃದ್ಧತಮ ಎಂದರೆ ಎಲ್ಲರಿಗಿಂತಲೂ ಉತ್ಕೃಷ್ಟನಾದವನು. ಅದನ್ನು ಯಾರು ಆದರಿಸರೋ ಅಂತಹವರನ್ನು ಕುರಿತಾಗಿ ಯಾವುದೇ ಅನುನಯವೂ ಬೇಕಿಲ್ಲ, ಸಾಂತ್ವನವೂ ಬೇಕಿಲ್ಲ.

ಯಾವ ಕ್ಷತ್ರಿಯನೊಬ್ಬನು ಮತ್ತಿತರ ಕ್ಷತ್ರಿಯರನ್ನು ರಣದಲ್ಲಿ ಜಯಿಸಿ ವಶಪಡಿಸಿಕೊಂಡು, ನಂತರ ಅವರನ್ನು ಬಿಡುಗಡೆ ಮಾಡುವನೋ, ಅಂತಹವನು ಸೋತವರಿಗೆ ಗುರುವೆನಿಸುವನು. ಅರ್ಥಾತ್, ಪೂಜ್ಯನಾಗುವನು.

ಕೃಷ್ಣನ ತೇಜಸ್ಸಿನಿಂದ ಪರಾಭವಕ್ಕೊಳಗಾಗದ ಯಾವೊಬ್ಬ ರಾಜನೂ ಈ ಸಭೆಯಲ್ಲಿಲ್ಲವೆಂದು ನಾನು ಭಾವಿಸುತ್ತೇನೆ. ಈ ಅಚ್ಯುತನು ನಮಗಷ್ಟೇ ಅರ್ಚ್ಯತಮ, ಎಂದರೆ ಅರ್ಚನೆಗೆ ಅತ್ಯಂತ ಯೋಗ್ಯನಾದವನು - ಎಂದಷ್ಟು ಮಾತ್ರವಲ್ಲ. ತ್ರಿಲೋಕ-ವಂದ್ಯನಾದವನು, ಈ ಮಹಾಬಾಹುವಾದ ಕೃಷ್ಣ. ಅನೇಕ ಮಂದಿ ಕ್ಷತ್ರಿಯಶ್ರೇಷ್ಠರನ್ನು ಕೃಷ್ಣನು ಯುದ್ಧದಲ್ಲೇ ಗೆದ್ದಿದ್ದಾನೆ” ಎಂದನು.

ಸೂಚನೆ :30/8/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.