ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ದಂಡನೆ ವಿಧಿಸುವಾಗ ದೋಷ-ಘೋಷಣೆಯೂ ಬೇಕೆ?
ಇದೋ ಬರುತ್ತಲಿದೆ ಶ್ರೀಕೃಷ್ಣಜನ್ಮಾಷ್ಟಮಿ! ಗೀತೋಪದೇಶಕನಿಗೆ ವಂದಿಸಬೇಕಲ್ಲವೆ? “ಕೃಷ್ಣ ಹೇಳಿದ, ಅರ್ಜುನ ಕೇಳಿದ; ನಮಗೇನು? – ಎನ್ನುವಂತಿಲ್ಲ” – ಎಂಬ ಶ್ರೀರಂಗಮಹಾಗುರುಗಳ ಎಚ್ಚರ ಸ್ಮರಣೀಯ. ಏಕೆ? ಅರ್ಜುನನು ಯುದ್ಧದಲ್ಲಷ್ಟೆ ನಿಮಿತ್ತಮಾತ್ರನಲ್ಲ; ಅವನ ನಿಮಿತ್ತವಾಗಿ ಲೋಕಕ್ಕೆಲ್ಲಾ ಗೀತೋಪದೇಶವು ದೊರೆಯಿತಲ್ಲವೇ?
ಕೆಲವರ ಪ್ರಶ್ನೆ: "ಉಪದೇಶ ಕೊಡುವುದಕ್ಕೇನು?ಜೊತೆಗೇ ದುರುಪದೇಶವನ್ನೂ ಮಾಡುತ್ತಿದ್ದರೆ ?”
ಕೃಷ್ಣನೇನು ದುರುಪದೇಶವನ್ನು ಮಾಡಿದ್ದಾನೆಯೇ?
“ಹೌದು. ಕರ್ಣವಧ-ಪ್ರಸಂಗವೊಂದೇ ಸಾಲದೇ? ಸಾರಥಿಯೂ ಇಲ್ಲದೆ, ರಥವೂ ಹೂತು ಹೋಗಿರುವ ಕಡುಕಷ್ಟದಲ್ಲಿದ್ದ ಕರ್ಣನಂತಹ ಆಜನ್ಮ-ದುರದೃಷ್ಟಶಾಲಿಗೆ ಕನಿಕರತೋರಿಸುವುದರ ಬದಲಾಗಿ, ‘ಅರ್ಜುನಾ, ಸುಸಮಯವಿದು! ಬಿಡು ಬಾಣವನ್ನು!’ - ಎಂದು ಕೃಷ್ಣನೆಂದದ್ದು ದುರುಪದೇಶವಲ್ಲವೇ?”
ಆಗ ಕರ್ಣನ ಪರಿಸ್ಥಿತಿ ಹೇಗಿತ್ತು? ಭೂಮಿಯಲ್ಲಿ ರಥವು ಹುದುಗಿಹೋಗಿತ್ತು. ಪರಶುರಾಮರು ಆತನಿಗುಪದೇಶಿಸಿದ ಅಸ್ತ್ರವು ಮನಸ್ಸಿನಿಂದ ಪ್ರಣಷ್ಟವಾಗಿತ್ತು (ಮರೆತುಹೋಗಿತ್ತು). ರಥದೊಂದು ಚಕ್ರವೂ ಬಿದ್ದುಹೋಗಿತ್ತು.
ಗ್ರಸ್ತ-ಚಕ್ರನಾದ ರಾಧೇಯನಿಗೆ ಕ್ರೋಧದ ಕಣ್ಣೀರುಕ್ಕಿತು. ಆತನೆಂದ: ತಾಳು, ಅರ್ಜುನಾ, ಹೇಡಿಯ ಹಾಗೆ ನೀನೀಗ ಬಾಣಪ್ರಯೋಗ ಮಾಡಬೇಡ. ನೀನು ಶೂರನಲ್ಲವೆ? ಯುದ್ಧ-ಧರ್ಮವನ್ನು ಚೆನ್ನಾಗಿಬಲ್ಲೆಯಲ್ಲವೇ? ವೇದಾಂತದಲ್ಲಿ ಮುಳುಗೆದ್ದಿರುವೆಯಲ್ಲವೆ? ದಿವ್ರಾಸ್ತ್ರಜ್ಞನಲ್ಲವೆ?
ರಥಸ್ಥನಾದ ನೀನು, ನೆಲದ ಮೇಲಿರುವ ನನ್ನನ್ನು ಹೊಡೆಯುವುದು ತಕ್ಕುದಲ್ಲವಲ್ಲವೇ? ನಾನೇನು ಕೃಷ್ಣನಿಗಾಗಲಿ ನಿನಗಾಗಲಿ ಹೆದರುವವನಲ್ಲ! ನೀನು ದೊಡ್ಡವಂಶದವನೆಂದೇ ನಿನಗೆ ಹೇಳುತ್ತಿರುವುದು!"
ಧರ್ಮದ ಬಗ್ಗೆ ಕಾಳಜಿಯಿರುವ ಶೂರನೊಬ್ಬನ ಮುಖ್ಯಪ್ರಶ್ನೆಗಳಿವು, ಜೊತೆಗೆ ತರ್ಕಬದ್ಧವಾದವು - ಎನ್ನಿಸುವುದಲ್ಲವೇ? ಅವಕ್ಕೆ ಉತ್ತರವನ್ನು ಕೃಷ್ಣನೇ ಕೊಟ್ಟಿದ್ದಾನೆ. ಅದನ್ನು ವಿಮರ್ಶಿಸುವ ಮೊದಲು ಆತನ ಮಾತುಗಳನ್ನೇ ಆಲಿಸೋಣ:
"ರಾಧೇಯ, ಧರ್ಮವನ್ನೀಗ ಸ್ಮರಿಸುತ್ತಿರುವೆಯಲ್ಲಾ!
ದ್ರೌಪದಿಯು ಏಕವಸ್ತ್ರದಲ್ಲಿದ್ದಾಗ ಅವಳನ್ನು ಸಭೆಗೆ ಎಳೆತಂದರಲ್ಲಾ, ಆಗ ನಿನಗೆ ಧರ್ಮವು ಹೊಳೆಯಲಿಲ್ಲವೇ, ಕರ್ಣ? ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ? (ಕ್ವ ತೇ ಧರ್ಮಃ ತದಾ ಗತಃ?)
ಪಗಡೆಯಾಟವನ್ನರಿಯದ ಯುಧಿಷ್ಠಿರನನ್ನು ಶಕುನಿಯು ವಂಚಿಸಿದನಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?
ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಹಿಂದಿರುಗಿ ಬಂದಾಗಲೂ ರಾಜ್ಯವನ್ನು ಕೊಡಲು ನಿರಾಕರಿಸಲಾಯಿತಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?
ಭೀಮಸೇನನನ್ನು ಹಾವಿನಿಂದ ಕಡಿಸಿದರಲ್ಲಾ, ಭೋಜನದಲ್ಲಿ ವಿಷವಿಕ್ಕಿದರಲ್ಲಾ, ಅದೆಲ್ಲಕ್ಕೂ ನಿನ್ನ ಸಹಮತಿಯಿತ್ತಲ್ಲಾ - ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?
ವಾರಣಾವತದಲ್ಲಿ ಅರಗಿನ ಮನೆಯಲ್ಲಿ ಪಾಂಡವರು ಮಲಗಿದ್ದಾಗ ನೀ ಬೆಂಕಿ ಹಚ್ಚಿಸಿದೆಯಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?
ರಜಸ್ವಲೆಯಾದ ದ್ರೌಪದಿಯು ದುರುಳ-ದುಃಶಾಸನನಿಂದ ಅವಮಾನಿತಳಾಗುತ್ತಿದ್ದಾಗ ಸಭೆಯಲ್ಲಿ ನೀ ನಕ್ಕೆಯೆಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?
“ಪಾಂಡವರ ಕಥೆ ಮುಗಿಯಿತು, ಓ ದ್ರೌಪದಿ! ಬೇರೊಬ್ಬ ಗಂಡನನ್ನು ವರಿಸು!” - ಎಂದು ನೀನು ಮೂದಲಿಸಿದೆಯಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?
ಒಂಟಿಬಾಲಕನಾದ ಅಭಿಮನ್ಯುವನ್ನು ಅನೇಕ ಮಹಾರಥರು ಸುತ್ತುವರಿದುಕೊಂಡು ಯುದ್ಧದಲ್ಲಿ ಕೊಂದಿರೆಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?”
ಕೃಷ್ಣನು ಈ ಪ್ರಶ್ನೆಗಳನ್ನೆಲ್ಲಾ ಕೇಳುತ್ತಿರಲು, ಕರ್ಣನು ನಿರುತ್ತರನಾಗಿ ತಲೆತಗ್ಗಿಸಿದನು - ಎನ್ನುತ್ತಾರೆ ವ್ಯಾಸರು.
ಮುಂದೆ ನಡೆದ ಕರ್ಣಸಂಹಾರಾದಿ-ಕಥೆಗಳು ಎಲ್ಲರಿಗೂ ತಿಳಿದಿರತಕ್ಕವೇ.
“ಕ್ವ ತೇ ಧರ್ಮಃ ತದಾ ಗತಃ?” - ಎಂಬುದು ಹತ್ತು ಶ್ಲೋಕಗಳ ಪಲ್ಲವಿಯಾಗಿದೆ. ನಗುತ್ತಾ ಪಾಪಕೃತ್ಯವನ್ನೆಸಗಿದವರು ಅಳುತ್ತಾ ನೋವನ್ನನುಭಿಸಬೇಕಾಗುವುದಷ್ಟೆ! – ಎಂಬ ಪಾಠವಿಲ್ಲಿದೆಯಲ್ಲವೇ?
ಅದಕ್ಕಿಂತಲೂ ಮಿಗಿಲಾದ ಪಾಠವೂ ಒಂದಿದೆ: ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುವಾಗ, ಜೊತೆಗೇ ಶಿಕ್ಷಣವನ್ನೂ ಕೊಡುವುದು ಧರ್ಮವೆನಿಸುವುದೆಂದು!
ಮೋಸ-ವಂಚನೆಗಳು, ಅನ್ಯತೇಜೋವಧೆ, ಸ್ತ್ರೀಮಾನಾಪಹಾರ - ಮುಂತಾದವು ಸಣ್ಣ ಅಪರಾಧಗಳಲ್ಲ. ಧರ್ಮದ್ರೋಹಿಯೂ ಕಪಟಿಯೂ ಆದವನಿಗೂ ಆತನ ಅಪರಾಧವನ್ನು ಜ್ಞಾಪಿಸಿಕೊಟ್ಟೇ ಪ್ರಹಾರವನ್ನು ಕೊಡತಕ್ಕದ್ದು. ಕೋರ್ಟುಗಳಲ್ಲಿ ದಂಡನೆಯನ್ನು ವಿಧಿಸುವಾಗ, "ನಿನ್ನ ಇಂತಹ ತಪ್ಪಿಗಾಗಿ ನಿನಗೀ ಶಿಕ್ಷೆ"ಯೆಂದು ಹೇಳಿಯೇ ದಂಡಿಸತಕ್ಕದ್ದು.
ಏತಕ್ಕಾಗಿ? ಆಗಲೂ ಒಮ್ಮೆ ಚುಚ್ಚಿ ಹಂಗಿಸಿ ನೋಯಿಸಿಬಿಡಲೆಂದಲ್ಲ. ಅಲ್ಲೊಂದು ತತ್ತ್ವವಡಗಿದೆ: ಅಂತಹ ನುಡಿಯೊಡನೊದಗಿದ ಶಿಕ್ಷೆಯು ಜೀವದ ಅಂತಃಕರಣದ ಮೇಲೇ ಮುದ್ರಿತವಾಗುಳಿಯುವುದು; ಮುಂದೂ, ಮುಂದಿನ ಜನ್ಮಗಳಲ್ಲಿ ಸಹ, ಅದೇ/ಅಂತಹ ತಪ್ಪನ್ನು ಮತ್ತೆ ಮಾಡಲು ಬಿಡದ ಭದ್ರ-ಪಾಠವದಾಗುವುದು! ಅರ್ಥಾತ್, ಅದೇ ತೆರನ ದುಃಖ/ನೋವುಗಳು ಮತ್ತೆ ಒದಗದಂತೆ ಅದು ಕಾಯುವುದು!
ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಅವಧೇಯ : “ಶಿಕ್ಷೆಯೆಂಬ ಪದದ ಮೂಲ “ಶಿಕ್ಷ ವಿದ್ಯೋಪಾದಾನೇ” ಎಂಬ ಧಾತು: ಅರಿವನ್ನುಂಟುನಾಡಿ, ಮತ್ತೆ ಅದೇ ತಪ್ಪಾಗದಂತಾಗಿಸುವುದೇ ಶಿಕ್ಷೆಯ ಗುರಿ.” ಇಲ್ಲಿ ಜೀವಕಾರುಣ್ಯವೇ ಪ್ರೇರಕವಲ್ಲವೇ?
ಸೂಚನೆ: 14/09//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.