Sunday, July 19, 2026

ಅಷ್ಟಾಕ್ಷರೀ 110 ಭಗವಂತನು ಬಯಸುವುದು ದೃಢ-ಭಕ್ತಿಯೊಂದನ್ನೇ (Astakshara 110)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png

ಭಗವಂತನು ಬಯಸುವುದು ದೃಢ-ಭಕ್ತಿಯೊಂದನ್ನೇ

ಭಕ್ತನು ಭಗವಂತನಿಂದ ಬೇಕಾದಷ್ಟನ್ನು ಬೇಡಬಹುದು, ಆದರೆ ಭಕ್ತನಿಂದ ಭಗವಂತ ಕೇಳುವುದೇನನ್ನು? ಏಳು ನಿದರ್ಶನಗಳ ಮೂಲಕ ಈ ವಿಷಯವನ್ನು ಮನಮುಟ್ಟುವಂತೆ ಶ್ಲೋಕವೊಂದು ತಿಳಿಸಿಕೊಡುತ್ತದೆ. ಆ ನಿದರ್ಶನಗಳನ್ನಿಲ್ಲಿ ನೋಡುವಾ.

ಮೊದಲನೆಯದಾಗಿ ಮಹಾಭಾರತದಲ್ಲಿ ಬರುವ ಧರ್ಮವ್ಯಾಧನ ದೃಷ್ಟಾಂತ. ಬೇಡರ ಕುಲದಲ್ಲಿ ಹುಟ್ಟಿದ್ದ ಅವನು ಕುಲಧರ್ಮವನ್ನು ನಿಷ್ಠೆಯಿಂದ ಆಚರಿಸುತ್ತಿದ್ದ. ಧರ್ಮದ ಬಗ್ಗೆ ತಿಳಿಯಬಂದ ಬ್ರಾಹ್ಮಣನಿಗೆ ಆತನಿತ್ತ ಪಾಠ ಮನನೀಯ: ವೃತ್ತಿಯ ಹೊರರೂಪವೇ ಶೀಲವನ್ನು ನಿರ್ಣಯಿಸಿಬಿಡದು; ಶ್ರುತದೊಂದಿಗೆ ಸದಾಚಾರವಿದ್ದರೇ ಶೋಭೆ - ಎಂದು.

ಇದಲ್ಲದೆ, ತಾನು ದೇವರೆಂದೇ ಕಾಣುವ ತನ್ನ ತಂದೆತಾಯಿಯರನ್ನು ಆ ಬ್ರಾಹ್ಮಣನಿಗೆ ತೋರಿಸಿದ. ವ್ಯಾಧಯೋನಿಯಲ್ಲಿ ಹುಟ್ಟಿದ್ದರೂ ಭಕ್ತಿಯ ಮೂಲಕ, ಧರ್ಮಸೂಕ್ಷ್ಮಜ್ಞತೆಯ ಮೂಲಕ ಭಗವಂತನಿಗೆ ಪ್ರಿಯನಾದವನು ಅವನು.

ಎರಡನೆಯದು ಧ್ರುವನ ಕಥೆ. ಬಾಲಕನಾದರೂ ಬಾಲಕನಲ್ಲದವನ ಕಥೆ.  ಐದು ವರ್ಷದ ಆ ಮಗುವಿಗೆ ತಂದೆಯ ತೊಡೆಯ ಮೇಲೆ ಕೂರಬೇಕೆಂಬ ಆಸೆಯಾಯಿತು. ಮಲತಾಯಿಯು ಚುಚ್ಚುಮಾತನಾಡಿದಾಗ ಅವಮಾನದಿಂದ ದುಃಖಿತನಾದ, ಆ ಪುಟ್ಟ ಬಾಲಕ. ನಾರದಮುನಿಗಳ ಮಾರ್ಗದರ್ಶನದಲ್ಲಿ ಅಚಲ ತಪಸ್ಸನ್ನೇ ಮಾಡಿದ. ಅವನ ದೃಢನಿಶ್ಚಯ ಮತ್ತು ಏಕಾಗ್ರಭಕ್ತಿಗೆ ಮೆಚ್ಚಿದ ವಿಷ್ಣುವು ಧ್ರುವಪದವನ್ನೇ ಅವನಿಗೆ ಅನುಗ್ರಹಿಸಿದನು. ಭಕ್ತಿಗೆ ಮುಖ್ಯವಾದದ್ದು ವಯಸ್ಸಲ್ಲ, ಮನಸ್ಸಿನ ಸ್ಥೈರ್ಯ.

ಮೂರನೆಯ ಕಥೆ ಗಜೇಂದ್ರನದು. ಆ ಗಜರಾಜನು ತನ್ನ ದೊಡ್ಡ ಗುಂಪಿನೊಂದಿಗೆ ನಿಶ್ಚಿಂತನಾಗಿ ವಿಹರಿಸುತ್ತಿದ್ದ. ಜಲವಿಹಾರದ ವೇಳೆ ಮೈಮರೆತ  ಆನಂದದಲ್ಲಿದ್ದಾಗಲೇ ಮೊಸಳೆಯ ಹಿಡಿತಕ್ಕೆ ಸಿಲುಕಿದ. ಹಲವು ಕಾಲ ಹಗಲು-ರಾತ್ರಿ ಸೆಣೆಸಾಟ ನಡೆದರೂ, ಮೊಸಳೆ ಜಗ್ಗಲಿಲ್ಲ. ಗಜೇಂದ್ರನ ಶಕ್ತಿ ಕ್ಷೀಣಿಸುತ್ತಾ ಬರಲು,  ಪರಮಾತ್ಮನನ್ನು "ಆದಿಮೂಲಾ!" ಎಂದು ಆರ್ತನಾಗಿ ಕರೆದ. ಅಲ್ಲಿದ್ದದ್ದು ಸಂಪೂರ್ಣ ಶರಣಾಗತಿ ಮಾತ್ರವೇ, ಶಾಸ್ತ್ರಜ್ಞಾನವಲ್ಲ. ತತ್-ಕ್ಷಣವೇ ವಿಷ್ಣುವು ಬಂದು ಗಜೇಂದ್ರನ ಉದ್ಧಾರ ಮಾಡಿದ.

ನಾಲ್ಕನೆಯದು, ಹಸ್ತಿನಾವತಿಯ ಸಿಂಹಾಸನದ ಪಕ್ಕದಲ್ಲೇ ಇದ್ದು ಧರ್ಮಸೂಕ್ಷ್ಮಗಳನ್ನು ಹೆಜ್ಜೆಹೆಜ್ಜೆಗೂ ಅರುಹುತ್ತಿದ್ದ ವಿದುರನ ಕಥೆ. ಆತನಾದರೋ ದಾಸೀಪುತ್ರ. ಕ್ಷತ್ರಿಯರಿಗಿಂತ ಕೆಳಜಾತಿಯೆಂದಾದರೂ ವಿದುರನಿಗಿದ್ದ ಧರ್ಮಜ್ಞಾನ, ವಿವೇಕ ಮತ್ತು ಭಕ್ತಿ - ಇವನ್ನು ಧರ್ಮಜ್ಞರು ಗುರುತಿಸುವಂತಾಯಿತು. ಕೃಷ್ಣಸಂಧಾನದ ಸಂದರ್ಭದಲ್ಲಿ ರಾಜಮರ್ಯಾದೆಯ ಭೋಜನವನ್ನು ಬಿಟ್ಟು ಕೃಷ್ಣನು ವಿದುರನ ಸರಳ ಆತಿಥ್ಯವನ್ನು ಸ್ವೀಕರಿಸಿದನು. ಉಚ್ಚಕುಲಜನ್ಮಕ್ಕಿಂತಲೂ ಮಿಗಿಲಾದುದೆಂದರೆ ನಿರ್ಮಲವಾದ ಪ್ರೀತಿ ಮತ್ತು ಧರ್ಮನಿಷ್ಠೆ. ಭಗವಂತನಿಗೆ ಅದೇ ಪ್ರಿಯವೆಂದು ಸಾರಿದ ಪ್ರಸಂಗವಿದು.

ಐದನೆಯದು, ಉಗ್ರಸೇನನ ಕಥೆ. ಸ್ವಂತ ಮಗನಾದ ಕಂಸನಿಂದಾಗಿ ರಾಜ್ಯಚ್ಯುತನಾಗಿ ಬಂಧನಕ್ಕೊಳಗಾದವನು, ಅವನು. ಅವನಿಗೆ ಕಂಸನನ್ನು ಸೋಲಿಸುವ ಪರಾಕ್ರಮವಿರಲಿಲ್ಲ. ಕೃಷ್ಣನೇ ಕಂಸನನ್ನು ಸಂಹರಿಸಿ ಉಗ್ರಸೇನನಿಗೆ ಮತ್ತೆ ರಾಜ್ಯವನ್ನು ಒಪ್ಪಿಸಿದನು. ಕ್ರೂರಕಂಸನನ್ನು ಪರಾಭವಗೊಳಿಸುವ ಪೌರುಷ ಉಗ್ರಸೇನನಿಗಿರಲಿಲ್ಲವಾದರೂ ಕೃಷ್ಣನ ಕೃಪೆಯಿಂದ ಅವನಿಗೆ ಆ ಸ್ಥಾನಮಾನಗಳು ದೊರೆತವು.

ಆರನೆಯ ಕಥೆ ಕುಬ್ಜೆಯದು. ಕಂಸವಧೆಯನ್ನು ಮಾಡಲು ಕೃಷ್ಣನು ಮಥುರೆಗೆ ಹೋದಾಗ ಸಿಕ್ಕವಳೇ ಕುಬ್ಜೆ: ವಕ್ರವಾದ ದೇಹ; ಕಳೆದುಹೋಗಿದ್ದ ಯೌವನ; ಸೌಂದರ್ಯವಿಲ್ಲದ ಆಕಾರ. ಆದರೆ ಅವಳು ಕೃಷ್ಣನಿಗೆ ಸುಗಂಧದ್ರವ್ಯವನ್ನು ಬಹುಪ್ರೀತಿಯಿಂದ ಅರ್ಪಿಸಿದಳು. ಅವಳ ಭಕ್ತಿಭಾವಕ್ಕೆ ಮೆಚ್ಚಿದ ಕೃಷ್ಣನು ಅವಳ ದೇಹದ ವಕ್ರತೆಯನ್ನು ಹೋಗಲಾಡಿಸಿದನು. ಭಗವಂತನು ಅಲ್ಲಿ ಕಂಡದ್ದು ಬಾಹ್ಯಸೌಂದರ್ಯವನ್ನಲ್ಲ, ಭಕ್ತಿಯಿಂದ ಅರಳಿದ ಅಂತರಂಗವನ್ನು.

ಏಳನೆಯ ಕಥೆ ಸುದಾಮನದು. ಕೃಷ್ಣನ ಪ್ರಿಯ ಸ್ನೇಹಿತನಾದ ಆತ, ತೀವ್ರ ಬಡತನದಲ್ಲಿದ್ದ. ಅವನು ಕೃಷ್ಣನನ್ನು ಕಾಣಲು ಕೊಂಚ ಅವಲಕ್ಕಿಯಷ್ಟನ್ನು ಮಾತ್ರ ತಂದನು. ಏನನ್ನೂ ಬೇಡದೆ, ಸ್ನೇಹಭಕ್ತಿಯಿಂದ ಬಂದ ಅವನನ್ನು ಕೃಷ್ಣನು ಅಪಾರ ಗೌರವದಿಂದ ಸ್ವಾಗತಿಸಿದನು. ಸುದಾಮನು ತಂದಿದ್ದ ಕಾಣಿಕೆಯ ಹಿಂದಿರುವ ನಿರ್ಮಲ ಪ್ರೀತಿಯನ್ನೇ ಭಗವಂತನು ಗುರುತಿಸಿದ್ದು.

ಮೇಲೆ ಹೇಳಿದ ಏಳೂ ಮಂದಿಯ  ವಯಸ್ಸು-ಲಿಂಗಗಳು ಬೇರೆ, ಹಿನ್ನೆಲೆಗಳು ಬೇರೆ. ಆದರೆ ಇವರೆಲ್ಲರಲ್ಲಿ ಸಮಾನವಾಗಿರುವುದೆಂದರೆ ನಿಷ್ಕಪಟವಾದ ಭಕ್ತಿಯೊಂದೇ. ಸುರೂಪವನ್ನೋ ಐಶ್ವರ್ಯವನ್ನೋ ದೊಡ್ಡಗುಣಗಳೆಂದು ಭಾವಿಸುವವರಿರಬಹುದು. ಆದರೆ ಮಾಧವನು ಪ್ರಧಾನವಾಗಿ ಭಕ್ತಿಪ್ರಿಯನೆಂಬುದನ್ನು ಅರಿಯಬೇಕು.

ಶ್ರೀರಂಗಮಹಾಗುರುಗಳು ಹೇಳುವಂತೆ: ಭಕ್ತಿಯೆಂದರೆ ಭಗವಂತನೊಡನೆ ಸರ್ವಾಂಶದಿಂದಲೂ ಸರ್ವಭಾವದಿಂದಲೂ ಒಂದಾಗಿ ಬೆರೆತುಬಿಡುವುದು. ಅಲ್ಲಿ ವಿಭಕ್ತಿಯಿರಬಾರದು. ವಿಭಕ್ತಿಯೆಂದರೆ ಬೇರಾಗಿರುವುದು.

ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು; ಮತ್ತೂ ಉತ್ಕಟವಾಗಿ ನಿಷ್ಕಪಟ-ಭಕ್ತಿಯನ್ನು ತುಂಬಿಸಿಕೊಳ್ಳಬೇಕು. ಭಕ್ತರ ಗುಣ-ಸಂಪತ್ತು ದೃಢವಾಗುವುದು, ಬೆಳೆಯುವುದು ಕೂಡ.

ಗುಣಗಳೆಲ್ಲವುಗಳಿಂದ ಸಾಧಿಸಬೇಕಾದುದು ಸರ್ವ-ಸದ್ಗುಣಗಳ ಸ್ರೋತಸ್ಸಾದ ಸರ್ವೇಶನನ್ನೇ ಅಲ್ಲವೇ?

ಸೂಚನೆ: 18/07//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 75 (Prasnottara Ratnamalike 75)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೭೫. ಯಾರನ್ನು ಸ್ಮರಿಸಿಕೊಳ್ಳಬೇಕು?

ಉತ್ತರ- ಹರಿನಾಮವ.

ಯಾವುದೇ ಸ್ಮರಣೆ ಅಥವಾ ಸ್ಮೃತಿಯು ಬರಬೇಕಾದರೆ ಅಲ್ಲಿ ಅದರ ಅನುಭವ ಇರಬೇಕಾಗುತ್ತದೆ. ಅನುಭವವಿಲ್ಲದೇ ಸ್ಮೃತಿಯು ಬರಲು ಸಾಧ್ಯವಿಲ್ಲ. ಹರಿಯನ್ನು ಸ್ಮರಿಸಬೇಕು ಎಂದರೆ ಹರಿಯ ಅನುಭವ ಬೇಕು ಎಂಬುದೂ ಅಷ್ಟೇ ಮುಖ್ಯ. ಹರಿಯ ಅನುಭವವು ಬರಬೇಕಾದರೆ ಅತ್ಯಂತ ಪ್ರಧಾನವಾದ ಸಾಧನವೆಂದರೆ ಹರಿಯ ನಾಮ. “ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವೋ” ಎಂಬುದಾಗಿ ಪುರಂದರದಾಸರು ಹೇಳುತ್ತಾರೆ. ನಾಮದ ಉಚ್ಚಾರಣೆಯಿಂದ ಆ ನಾಮದ ಹಿಂದಿರುವ ಶಕ್ತಿಯ ಅನುಭವ ಸಾಧ್ಯ ಎಂಬುದು ನಮ್ಮ ಶಾಸ್ತ್ರ ಮತ್ತು ಸಂಪ್ರದಾಯಗಳು ಸಾರಿರುವ ಸತ್ಯವಾಗಿದೆ.


ಪ್ರತಿಯೊಂದು ಪದಾರ್ಥಕ್ಕೂ ಒಂದು ಪದ ಅಥವಾ ನಾಮ ಇರುತ್ತದೆ. ಆ ನಾಮದಿಂದ ಅದನ್ನು ಗುರುತಿಸಲು ಸಾಧ್ಯ. ಏಕೆಂದರೆ ಅವೆರಡೂ ಪರಸ್ಪರ ಒಂದಾಗಿ, ಒಂದೇ ಕಾಲದಲ್ಲಿ ಸೃಷ್ಟಿಸಲ್ಪಟ್ಟಿವೆ. ಯಾವಾಗ ಆ ಪದಾರ್ಥವು ಸೃಷ್ಟಿಯಾಯಿತೋ ಅದೇ ಸಮಯದಲ್ಲಿ ಆ ಪದಾರ್ಥಕ್ಕೆ ಒಂದು ಪದವೂ ಸೃಷ್ಟಿಯಾಯಿತು ಎಂಬುದಾಗಿ ಪದಶಾಸ್ತ್ರ ಹೇಳುತ್ತದೆ. ಪದ ಮತ್ತು ಪದಾರ್ಥಗಳಿಗೆ ಅವಿನಾಭಾವ ಸಂಬಂಧವಿದೆ. ಹಾಗಾಗಿ ಪದವು ಪದಾರ್ಥವನ್ನು ಸೂಚಿಸುತ್ತದೆ. ಪದದ ಜ್ಞಾನವು ಪದಾರ್ಥಜ್ಞಾನದಲ್ಲಿ ಪರ್ಯವಸಾನವಾಗುತ್ತದೆ. ಪದವನ್ನು ಚೆನ್ನಾಗಿ ತಿಳಿದರೆ ಪದಾರ್ಥವನ್ನು ತಿಳಿದಂತೆಯೇ. ಅಂದರೆ ಯಾವುದನ್ನು ತಿಳಿಯಬೇಕು? ಯಾವುದನ್ನು ತಿಳಿದರೆ, ತಿಳಿಯದೇ ಇರುವ ಇನ್ನೊಂದು ತಿಳಿದಂತಾಗುತ್ತದೆ? ಎಂಬ ವಿಷಯವನ್ನೂ ಇಲ್ಲಿ ಹೇಳಲಾಗಿದೆ. ಹರಿಯನ್ನು ತಿಳಿಯಬೇಕು ಎಂದಾದರೆ ಹರಿಯ ನಾಮವನ್ನು ನಾವು ತಿಳಿಯಬೇಕು. ಅದಕ್ಕಾಗಿ ಅದನ್ನು ಅನವರತ ಉಚ್ಚರಿಸಬೇಕು, ಚಿಂತಿಸಬೇಕು, ಅನುಸಂಧಾನ ಮಾಡಬೇಕು ಎಂದರ್ಥ. ಹಾಗೆ ಅನುಸಂಧಾನ ಮಾಡುತ್ತಾ ಆ ಪದದ ಮೂಲವಾದ ಪದಾರ್ಥವನ್ನು ನಾವು ತಲುಪಬಹುದು ಎಂಬುದು ಇದರ ಹಿಂದಿರುವ ತಾತ್ಪರ್ಯವಾಗಿದೆ.


ಒಬ್ಬ ವ್ಯಕ್ತಿಗೆ ಒಂದು ಹೆಸರನ್ನು ಇಡುತ್ತೇವೆ; ಆ ಹೆಸರನ್ನು ಕರೆದಾಗ ಆ ವ್ಯಕ್ತಿ ಓಗುಡುತ್ತಾನೆ. ಅಂದರೆ ಆ ವ್ಯಕ್ತಿಗೆ ಅದು ಅಭಿಧಾನ ಅಥವಾ ಸಂಕೇತ. ಸಂಕೇತವಾದ ಆ ಪದವನ್ನು ಸರಿಯಾಗಿ ಉಚ್ಛರಿಸಿದಾಗ ಮಾತ್ರ ಆ ವ್ಯಕ್ತಿ ಸ್ಪಂದಿಸುತ್ತಾನೆ. ಅಂತೆಯೇ ಹರಿಯ ಕೇವಲ ನಾಮೋಚ್ಚಾರಣೆಯಿಂದ ಅವನು ಸ್ಪಂದಿಸುವುದಿಲ್ಲ. ನಾಮೋಚ್ಚಾರಣೆಗೆ ಬೇಕಾದ ಎಲ್ಲಾ ಎಲ್ಲಾ ಸಿದ್ಧತೆಯ ಜೊತೆಯಲ್ಲಿ ಉಚ್ಚರಿಸಿದಾಗ ಮಾತ್ರ ಆ ಹರಿಯು ನಮ್ಮ ಕಡೆಗೆ ಹರಿಯಬಲ್ಲ. ಇತ್ತ ಧಾವಿಸಬಲ್ಲ, ನಮ್ಮ ಅಹವಾಲನ್ನು ಆಲಿಸಬಲ್ಲ. ಪದವನ್ನು ಶ್ರದ್ಧೆ ಭಕ್ತಿಯಿಂದ ಉಚ್ಚರಿಸಬೇಕು. ನಾಮವನ್ನು ಉಚ್ಚರಿಸುವಾಗ ಆ ಪದಮೂಲವಾದ ಅರ್ಥವನ್ನು ಅಥವಾ ವಿಷಯವನ್ನು ಅನುಸಂಧಾನ ಮಾಡುತ್ತಾ ಉಚ್ಚರಿಸಬೇಕು. ಆದರೆ ಆ ವಸ್ತುವೇ ನಮಗೆ ಸಿಗದಿದ್ದಾಗ ಅದನ್ನು ಅನುಸಂಧಾನ ಮಾಡುವುದು ಹೇಗೆ? ಎಂಬ ಸಂದೇಹ ಬರಬಹುದು. ಆ ವಸ್ತುವನ್ನು ಪ್ರತೀಕಿಸುವ ಮೂರ್ತಿ, ವಿಗ್ರಹ  ಚಿತ್ರ ಮೊದಲಾದವುಗಳನ್ನು ನಮ್ಮ ಋಷಿ ಮಹರ್ಷಿಗಳು ಕಂಡುಂಡು ನಮಗೆ ಅನುಗ್ರಹಿಸಿದ್ದಾರೆ. ಋಷಿಮುನಿಗಳ ಅನುಗ್ರಹ ರೂಪವಾದ ಚಿತ್ರ, ವಿಗ್ರಹ ಮೊದಲಾದವುಗಳನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾ, ಚಿಂತಿಸುತ್ತಾ ನಾಮವನ್ನು ಉಚ್ಚರಿಸುತ್ತಾ ಉಚ್ಚರಿಸುತ್ತಾ ಹೋದರೆ ವಿಗ್ರಹದ ಅಂತರ್ಯಾಮಿಯಾದ ಆ ಭಗವಂತನ ಅನುಗ್ರಹ - ಸಾಕ್ಷಾತ್ಕಾರ ಉಂಟಾಗುತ್ತದೆ ಎಂಬುದು ನಮ್ಮ ಸಂಪ್ರದಾಯದ ಹಿಂದಿರುವ ಆಶಯವಾಗಿದೆ. ಹಾಗಾಗಿ ನಾವು ಸ್ಮರಿಸಬೇಕು ಎಂತಾದರೆ ಹರಿನಾಮವನ್ನು ಮಾತ್ರ ಸ್ಮರಿಸಬೇಕು. ಅದು ನಮಗೆ ಇಷ್ಟಾರ್ಥವನ್ನು ಕೊಡುವ ಶಕ್ತಿಯಿಂದ ಕೂಡಿದ ಮಂತ್ರವಾಗಿದೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 19
/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 197 ರಾಜಸೂಯಕ್ಕೆ ಸಂಭ್ರಮದ ಸಿದ್ಧತೆಗಳು (Vyaasa Vikshita 197)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png



 

ಯಾಗವನ್ನು ಯುಧಿಷ್ಠಿರನೇ ನಡೆಸುವುದೆಂದು ಕೃಷ್ಣನು ತೀರ್ಮಾನವಾಗಿ ಹೇಳಿದನು. ಅದಕ್ಕೆ ಯುಧಿಷ್ಠಿರನು ಉತ್ತರಿಸುತ್ತಾ ಹೀಗೆ ಹೇಳಿದನು: "ಕೃಷ್ಣ, ನನ್ನ ಸಂಕಲ್ಪ ಸಫಲವಾಯಿತು. ಕಾರ್ಯಸಿದ್ಧಿಯೂ ಅವಶ್ಯವಾಗಿ ಆಗುವಂತಹುದೇ: ಏಕೆಂದರೆ, ಓ ಹೃಷೀಕೇಶನೇ, ನೀನು ನಿನ್ನ ಇಚ್ಛೆಯಿಂದಲೇ ಇಲ್ಲಿ ಉಪಸ್ಥಿತನಾಗಿರುವೆ".

ಅಂತೂ ಕೃಷ್ಣನ ಅನುಜ್ಞೆಯನ್ನು, ಎಂದರೆ ಅನುಮತಿಯನ್ನು, ಪಡೆದವನೇ, ತನ್ನ ಭ್ರಾತೃಗಳೊಂದಿಗೆ ಯುಧಿಷ್ಠಿರನು ರಾಜಸೂಯಯಜ್ಞವನ್ನು ಮಾಡಲೋಸುಗ ಬೇಕಾದ ಸಾಮಗ್ರಿಗಳನ್ನು ಜೋಡಿಸಿಕೊಳ್ಳಲು ಆರಂಭಿಸಿದನು.

ಶತ್ರುಸಂಹಾರಿಯಾದ ಯುಧಿಷ್ಠಿರನು, ಯೋಧರಲ್ಲಿ ಶ್ರೇಷ್ಠನಾದ ಸಹದೇವನಿಗೆ, ಹಾಗೂ ಎಲ್ಲ ಮಂತ್ರಿಗಳಿಗೂ, ಆಮೇಲೆ ಅಪ್ಪಣೆಯಿತ್ತನು: “ಬ್ರಾಹ್ಮಣರು ಹೇಳಿದಂತೆ ಈ ಯಜ್ಞಕ್ಕೆ ಅಂಗ-ಭೂತವಾಗಿರುವ ಎಲ್ಲ ಮಂಗಳ-ಸಾಧನಗಳನ್ನೂ ಸಿದ್ಧಪಡಿಸಿಕೊಳ್ಳಿ. 

ಧೌಮ್ಯರು ಹೇಳುವ ಯಜ್ಞಸಾಮಗ್ರಿಯನ್ನು ದೊರೆತಂತೆ ದೊರೆತಂತೆ ಹಾಗೂ ಕ್ರಮಾನುಸಾರವಾಗಿ, ಸೇವಕಜನರು ತರುವುದಾಗಲಿ.

ಅನ್ನ ಮುಂತಾದುವುಗಳ ಸಂಗ್ರಹಕಾರ್ಯದಲ್ಲಿ ಇಂದ್ರಸೇನ, ವಿಶೋಕ, ಅರ್ಜುನಸಾರಥಿಯಾದ ಪೂರು - ಇವರುಗಳು ತೊಡಗಿದಲ್ಲಿ ನನಗೆ ಸಂತೋಷವಾಗುತ್ತದೆ. ಎಲ್ಲರಿಗೂ ಇಷ್ಟವಾಗುವ ಹಾಗೂ ಒಳ್ಳೆಯ ರಸಗಳಿಂದಲೂ ಗಂಧಗಳಿಂದಲೂ ಕೂಡಿರುವ ಅಡಿಗೆಗಳನ್ನು ಮಾಡೋಣವಾಗಲಿ.”

ಯುಧಿಷ್ಠಿರನು ಈ ಮಾತುಗಳನ್ನು ಹೇಳುತ್ತಿದ್ದಂತೆಯೇ ಸಹದೇವನು ಇದೆಲ್ಲವೂ ಆಗಿದೆಯೆಂಬುದಾಗಿ ಯುಧಿಷ್ಠಿರನಿಗೆ ತಿಳಿಸಿದನು. ಸಾಕ್ಷಾದ್ ವೇದಗಳೇ ಮೈತಾಳಿಬಂದಂತಿದ್ದ ಋತ್ವಿಕ್ಕುಗಳನ್ನು ಆಗ ಯುಧಿಷ್ಠಿರನು ಬರಮಾಡಿದನು. ವ್ಯಾಸಮಹರ್ಷಿಗಳೇ ಅಲ್ಲಿ ಬ್ರಹ್ಮಸ್ಥಾನವನ್ನು ಅಲಂಕರಿಸಿದರು. ಧನಂಜಯಗೋತ್ರದಲ್ಲಿ ಶ್ರೇಷ್ಠನೆನಿಸಿದ ಸುಸಾಮ ಎಂಬ ಋಷಿಯು ಸಾಮಗಾನವನ್ನು ಮಾಡಿದನು. ಬ್ರಹ್ಮಿಷ್ಠನಾದ ಯಾಜ್ಞವಲ್ಕ್ಯನು ಅಧ್ವರ್ಯುವರ್ಯನಾದನು. ಇನ್ನು ಹೋತೃವಾಗಿ ವಸುಪುತ್ರನಾದ ಪೈಲನು ಬಂದಿದ್ದನು. ಅವರುಗಳ ಪುತ್ರವರ್ಗ-ಶಿಷ್ಯವರ್ಗಗಳು ಧೌಮ್ಯಮುನಿಯೊಂದಿಗೆ ಸಹಕರಿಸಿದರು.

ಯಜ್ಞವು ಆರಂಭವಾಯಿತು. ಮೊದಲು ಪುಣ್ಯಾಹವಾಚನ ಹಾಗೂ ಯಜ್ಞವಿಧಿಗಳ ವ್ಯವಸ್ಥಾಪನಗಳಾದವು. ಯಜ್ಞಸ್ಥಾನಕ್ಕೆ ಶಾಸ್ತ್ರೋಕ್ತಪೂಜೆಯು ಸಂದಿತು. ರಾಜಾಜ್ಞಾನುಸಾರವಾಗಿ ಶಿಲ್ಪಿಗಳು ದೇವಮಂದಿರಗಳಿಗೆ ಸಮಾನವೆನಿಸುವಂತೆ ವಿಶಾಲವೂ ಸುಗಂಧಭರಿತವೂ ಆದ ಭವನಗಳನ್ನು ನಿರ್ಮಿಸಿಕೊಟ್ಟರು.

ಆಮೇಲೆ ಯುಧಿಷ್ಠಿರನು, ಮಂತ್ರಿಯಾದ ಸಹದೇವನನ್ನು ಬರಮಾಡಿಕೊಂಡನು. ವಿಪ್ರರನ್ನು ಅಮಂತ್ರಿಸಲು ಶೀಘ್ರಗಾಮಿಗಳಾದ ದೂತರನ್ನು ಕಳುಹಿಸೆಂದು ಅಪ್ಪಣೆಯಿತ್ತನು. ಆತನೂ ದೂತರನ್ನು ಕರೆಸಿ, ಬೇರೆ ಬೇರೆ ರಾಷ್ಟ್ರಗಳಲ್ಲಿನ ವಿಪ್ರರನ್ನೂ ಕ್ಷತ್ರಿಯರನ್ನೂ ಹಾಗೆಯೇ ಮಾನ್ಯರಾದ ವೈಶ್ಯರನ್ನೂ ಶೂದ್ರರನ್ನೂ ಕರೆತನ್ನಿರಿ - ಎಂದನು.

ಯುಧಿಷ್ಠಿರನ ಅಪ್ಪಣೆಯಂತೆ, ಶೀಘ್ರಗಾಮಿಗಳಾದ ದೂತರು ಕರೆತರಬೇಕಾದವರನ್ನೆಲ್ಲ ಕರೆತಂದರು.

ಆಗಮಿಸಿದ ವಿಪ್ರರು ರಾಜಸೂಯಕ್ಕಾಗಿ ಯುಧಿಷ್ಠಿರನಿಗೆ ದೀಕ್ಷೆಯನ್ನಿತ್ತರು. ಯಜ್ಞದೀಕ್ಷೆ ತೊಟ್ಟ ಯುಧಿಷ್ಠಿರನೂ ಯಜ್ಞಮಂಟಪಕ್ಕೆ ವಿಪ್ರರೊಂದಿಗೆ ತೆರಳಿದನು. ಭ್ರಾತೃಗಳು, ಜ್ಞಾತಿ(ಬಂಧು)ಗಳು, ಸುಹೃತ್(ಮಿತ್ರರು), ಸಚಿವರು - ಇವರುಗಳೆಲ್ಲಆಗಮಿಸಿದ್ದರು. ನಾನಾದೇಶಗಳಿಂದ ಬಂದ ಇವರುಗಳೊಂದಿಗೆ ಕೂಡಿದ ಧರ್ಮರಾಜನು ಧರ್ಮವೇ ಮೈತಾಳಿಬಂದಂತಿದ್ದನು.

ನಾನಾವಿದ್ಯೆಗಳಲ್ಲೂ ವೇದ-ವೇದಾಂಗಗಳಲ್ಲೂ ನಿಷ್ಣಾತರಾದ ವಿಪ್ರರು ಬೇರೆ ಬೇರೆ ದೇಶಗಳಿಂದ ಆಗಮಿಸಿದರು. ಅವರೆಲ್ಲರಿಗೂ ಆವಾಸಗಳನ್ನು ಕಲ್ಪಿಸಲಾಯಿತು. ಅವರಿಗೆ ಅನ್ನ-ವಸ್ತ್ರಗಳ ವ್ಯವಸ್ಥೆಯಾಯಿತು. ಯಾವುದೇ ಋತುವಿನ ಸೌಕರ್ಯಗಳೂ ದೊರೆಯುವಂತೆ ಶಿಲ್ಪಿಗಳು ವ್ಯವಸ್ಥೆಯನ್ನು ಮಾಡಿದರು.

ರಾಜನಿಂದ ಸತ್ಕೃತರಾಗಿ ಅಲ್ಲಿ ಅನೇಕ ವಿಪ್ರರು ವಾಸಿಸಿದರು. ಪರಸ್ಪರ ಅನೇಕ ಕಥಾಲಾಪಗಳನ್ನು ಮಾಡಿದರು. ನಟ-ನರ್ತಕರನ್ನು ಕಂಡರು. ಯಥೇಷ್ಟವಾದ ಭೋಜನಗಳು ಮಾತುಕತೆಗಳು - ಇವುಗಳ ಸದ್ದೇ ನಿರಂತರವಾಗಿ ಅಲ್ಲಿ ಕೇಳಿಬರುತ್ತಿತ್ತು. ಅಲ್ಲಿ ನಡೆದ ದಾನಕ್ರಿಯೆ-ಭೋಜನಕ್ರಿಯೆಗಳಿಗೆ ಮಿತಿಯೇ ಇರಲಿಲ್ಲ. ಲಕ್ಷ ಗೋಗಳ ದಾನ, ಶಯನಗಳ ದಾನ, ಸುವರ್ಣನಾಣ್ಯಗಳ ದಾನ - ಈ ಕೆಲಸಗಳಲ್ಲೇ ಧರ್ಮರಾಜನು ಮುಳುಗಿದ್ದನು.

ಸೂಚನೆ :  19/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 110A ಸ್ತನ ಇವಾವಲಂಬತೇ (Astakshara 110A)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

.


image.png

ಹಿರಿದಾದ ಆನಂದಕ್ಕೊಯ್ಯುವ ಕಿರಿದಾದ ಅಂಗ

ಸಾಧಾರಣವಾಗಿ ಸ್ತನವೆಂದೊಡನೆ ಸ್ಮರಣೆಗೆ ಬರುವುದು ಸ್ತ್ರೀಶರೀರಾಂಗವೇ. ಆ ಪದವನ್ನು ಹೇಳುವುದೇ ಅಶ್ಲೀಲವೆಂದು ಭಾವಿಸಿಬಿಡುವವರೂ ಉಂಟು. ಆದರೆ ಮೊಲೆಗೂಸು, ಮೊಲೆವಾಲು - ಎನ್ನುವಾಗ ಅಶ್ಲೀಲತೆಯೆಲ್ಲಿ ತೋರೀತು?

ಗಳಸ್ಯ ಕಂಠಸ್ಯ

ಹಾಗೆಯೇ "ಅಜಾ-ಗಲ-ಸ್ತನ" ಎಂಬ ಪ್ರಯೋಗವೂ ಇದೆ. ಹೋತನ ಕತ್ತಿನಲ್ಲಿ ಎರಡು ಮಾಂಸದ ತುಂಡುಗಳು ಕಾಣುವುವಲ್ಲವೇ? ಗಲವೆಂದರೆ ಕತ್ತು. ಆಪ್ತಸ್ನೇಹಿತರನ್ನು "ಗಳಸ್ಯ ಕಂಠಸ್ಯ" ಎನ್ನುವರು. ಏನು ಹಾಗೆಂದರೆ? ಒಬ್ಬರ ಕತ್ತಿಗೆ ಮತ್ತೊಬ್ಬರ ಕತ್ತು ಸೋಂಕಿರುವುದು. ಗಳ-ಕಂಠಗಳು ಸಮಾನಾರ್ಥಕಗಳು. ಅತಿಶಯವಾದ ಪ್ರೀತಿಯಿದ್ದಾಗ ಒಬ್ಬರ ಕತ್ತು ಮತ್ತೊಬ್ಬರ ಕತ್ತನ್ನು ಒತ್ತುವುದು - ಮಕ್ಕಳನ್ನು ಮುದ್ದಾಡುವಾಗಾಗುವಂತೆ. ಅಜ/ಜಾ ಎಂದರೆ ಆಡು/ಹೋತ. ಅದರ ಕತ್ತಿನಲ್ಲಿ ಜೋತುಬೀಳುವ, ಮೊಲೆಗಳಂತಿರುವ ಮಾಂಸಪಿಂಡಗಳಿಗೆ ಏನು ಕೆಲಸ? ಏನೂ ಇ(ದ್ದಂತಿ)ಲ್ಲ!

ನಮಗೆಲ್ಲ ಈ ಮನುಷ್ಯಜನ್ಮವು ಸಿಕ್ಕಿರುವುದು ಏತಕ್ಕೆ? ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕೂ ಪುರುಷಾರ್ಥಗಳನ್ನು ಸಾಧಿಸಲಿಕ್ಕೆ. ಕೊನೆಯ ಪಕ್ಷ ಒಂದನ್ನಾದರೂ ಸಾಧಿಸಬೇಡವೇ? ಯಾವನು ಒಂದನ್ನೂ ಸಾಧಿಸನೋ, ಅಂತಹವನ ಜನ್ಮವು "ಅಜಾ-ಗಲ-ಸ್ತನದಂತೆ", ಅರ್ಥಾತ್ ನಿರರ್ಥಕವಾದದ್ದು - ಎನ್ನುತ್ತದೆ ಹಿತೋಪದೇಶ.

ತಾಯಿಯ ಸ್ತನ್ಯವನ್ನು ಪಾನಮಾಡುವ ಮಗುವು ಮುಂದೆ ಗೋಸ್ತನದಿಂದ ಬರುವ ದುಗ್ಧವನ್ನು ಕುಡಿಯುವುದಲ್ಲವೇ? ಧರಿತ್ರಿಯೇ ಗೋವು; ಅದರ ನಾಲ್ಕು ಸಮುದ್ರಗಳೇ ನಾಲ್ಕು ಮೊಲೆಗಳು – ಎಂಬುದಾಗಿ ಕಾಳಿದಾಸನು ರೂಪಿಸಿದ್ದಾನೆ.

ಕಿರುನಾಲಿಗೆಯಿಂದ ಕೇಶಾಂತದವರೆಗೆ

ಸ್ತ್ರೀಯರಿಗೆ ಮಾತ್ರವಲ್ಲದೆ, ಪುರುಷರಿಗೂ ಸ್ತನವನ್ನು ಹೋಲುವ ಅಂಗವೊಂದಿರುವುದು. ಅದೂ ಬಾಯೊಳಗೇ. ಅದಕ್ಕೆ ವಿಶೇಷವಾದ ಆಧ್ಯಾತ್ಮಿಕವಾದ ಬೆಲೆಯಿರುವುದೆಂದೇ ಆ ಬಗ್ಗೆ ಇಲ್ಲಿ ಮಾತು.

ಸ್ತನದ ಹಾಗಿದ್ದು ಜೋತುಬಿದ್ದಿರುವುದು - ಎಂಬ ಉಪಮಾನವನ್ನು ತೈತ್ತಿರೀಯೋಪನಿಷತ್ತು ಕೊಡುತ್ತದೆ. ಇಲ್ಲಿಯ ಸ್ತನದ ಆಕಾರವು ಅಜಾಗಲ-ಸ್ತನದಂತೆ ಅಥವಾ ಗೋ-ಸ್ತನದಂತೆ – ಎಂದೇ ವ್ಯಾಖ್ಯಾಕಾರರು ವಿವರಿಸಿರುವುದು. "ಮೊಲೆಯಂತೆ" ಎಂದರೂ "ಮೊಲೆಯ ತೊಟ್ಟಿನಂತೆ" ಎನ್ನುವುದೇ ಲೇಸೆಂದೂ ವ್ಯಾಖ್ಯೆಯಿದೆ.

ಬಾಯೊಳಗೆ ಹಿಂಭಾಗದಲ್ಲಿ ಜೋತಾಡುವ ಕಿರುನಾಲಿಗೆಯನ್ನೇ ಇಲ್ಲಿ ಹೇಳಿರುವುದು. ಮೇಲ್ದವಡೆ-ಕೆಳದವಡೆಗಳ ನಡುವೆ ಇದಿರುವುದನ್ನು ಹೇಳಿ, ಅಧ್ಯಾತ್ಮದಲ್ಲಿ ಅದರ ಪಾತ್ರವನ್ನು ಉಪನಿಷತ್ತು ತಿಳಿಸುವುದು.

ಇಲ್ಲಿ ಹೇಳಿರುವುದೆಲ್ಲಾ ಯೋಗಶಾಸ್ತ್ರಕ್ಕೆ ಸಂಬಂಧಿಸಿರುವಂತಹುದು. ಹೃದಯದಿಂದ ಹೊರಟ ಸುಷುಮ್ನಾ-ನಾಡಿಯು ಈ ಮೊಲೆತೊಟ್ಟಿನಂತಿರುವ ಅಂಗದ ನಡುವೆಡೆಯ ಮೂಲಕ ಹಾದುಹೋಗುವುದು. 

ಇದು ಹೋಗಿ ಸೇರುವುದು ಕೇಶಾಂತಸ್ಥಾನಕ್ಕೆನ್ನುತ್ತದೆ, ಉಪನಿಷತ್ತು.

ತಲೆಗೂದಲೊಂದನ್ನು ಹಿಡಿದುಕೊಳ್ಳುತ್ತೇವೆನ್ನಿ. ಅದರ ಮತ್ತೊಂದಂಚೆಂದರೆ ಅದರ ಬುಡವೇ ಸರಿ. ಕೂದಲುಗಳೆಲ್ಲವೂ ಯಾವ ಸ್ಥಾನವನ್ನೇ ಕೇಂದ್ರವನ್ನಾಗಿಸಿಕೊಂಡಿರುವಂತೆ ಕಾಣುತ್ತದೋ ಆ ಭಾಗವನ್ನಿಲ್ಲಿ ಸೂಚಿಸಿದೆ: ನೆತ್ತಿಯ ಭಾಗವದು. ಬ್ರಹ್ಮರಂಧ್ರ-ಸ್ಥಾನವೆಂದರೂ ಅದೇ.

ಹೀಗೆ ಮೇಲಿನ-ಕೆಳಗಣ ದವಡೆಗಳ ಮಧ್ಯಸ್ಥಾನದ ಮೂಲಕ ಹಾದು ಹೋಗುವ ಸುಷುಮ್ನಾನಾಡಿಯು ಎಡ-ಬಲ-ಶೀರ್ಷ-ಕಪಾಲಗಳ ಮಧ್ಯಸ್ಥಾನದವರೆಗೂ ಹೋಗುವುದು.

ಚರ್ತುರ್ಥಾವಸ್ಥೆ-ಚತುರ್ಥಪುರುಷಾರ್ಥ

ಚರಮವೂ ಪರಮವೂ ಆದ, ಎಂದರೆ ಕೊನೆಯದೂ ಶ್ರೇಷ್ಠತಮವೂ ಆದ, ಮೋಕ್ಷವೆಂಬ ನಾಲ್ಕನೆಯ ಪುರುಷಾರ್ಥವನ್ನು ಹೊಂದುವವನು ಈ ಹಾದಿಯ ಮೂಲಕವೇ ಹಾದುಹೋಗುವುದು.

ಮನುಷ್ಯನಿಗೆ ನಾಲ್ಕು ಅವಸ್ಥೆಗಳುಂಟು - ಜಾಗ್ರತ್, ಸ್ವಪ್ನ, ಸುಷುಪ್ತಿ ಹಾಗೂ ತುರೀಯ - ಎಂದು. ತುರೀಯಾವಸ್ಥೆಯನ್ನೇ ಸಮಾಧಿಸ್ಥಿತಿಯೆನ್ನುವುದು; ಅದುವೇ ಮೋಕ್ಷಸ್ಥಿತಿಯೂ. ಹೀಗಾಗಿ ಈ ಚರ್ತುರ್ಥಾವಸ್ಥೆಯಲ್ಲೇ ಚತುರ್ಥಪುರುಷಾರ್ಥವೂ ಸಿದ್ಧಿಸುವುದು. ಚತುರ್ಥವೆಂದರೆ ನಾಲ್ಕನೆಯದು.

ವಾಂತಿ-ಭ್ರಾಂತಿ-ಶಾಂತಿ

ಈ ಕಿರುನಾಲಗೆಯ ಮಹತ್ತ್ವವನ್ನು ಯೋಗಿವರ್ಯರಾದ ಶ್ರೀರಂಗಮಹಾಗುರುಗಳು ವಾಕ್-ಚಮತ್ಕಾರ-ಯುಕ್ತವಾಗಿಯೂ ತಾತ್ತ್ವಿಕವಾಗಿಯೂ ಹೀಗೆ ಚಿತ್ರಿಸಿರುವರು: "ಕಿರುನಾಲಿಗೆಯು ತನ್ನ ಜಾಗದಿಂದ ಸರಿದರೆ ವಾಂತಿ; ಅದರ ಮರ್ಮ ತಿಳಿಯದಿದ್ದರೆ ಭ್ರಾಂತಿ; ಮರ್ಮ ತಿಳಿದರೆ ಪರಮಶಾಂತಿ."

ಕಿರುನಾಲಿಗೆಗೇನಾದರೂ ಮುಟ್ಟಿತೋ ವಾಂತಿಯಾಗುವುದು ಸಿದ್ಧ! ಇನ್ನು ಕಿರುನಾಲಿಗೆಯ ಮಹತ್ತ್ವವನ್ನರಿತುಕೊಳ್ಳದೆ, ಅದಕ್ಕೇನು ಕೆಲಸವೆಂದು ಹಾಸ್ಯಮಾಡುವುದು ಭ್ರಮೆಯಲ್ಲದೆ ಮತ್ತೇನು? ಭ್ರಮೆ-ಭ್ರಾಂತಿಗಳು ಪರ್ಯಾಯಗಳು.

ಆಧ್ಯಾತ್ಮಿಕವಾಗಿ ಅತಿಮುಖ್ಯವಾದ ಸುಷುಮ್ನಾ ನಾಡಿಯ ಮಾರ್ಗವದು – ಎಂಬುದು ಯೋಗಿಗಳಿಗಷ್ಟೇ ಗೋಚರವಾಗುವುದು. ಮುಂದೆಯೂ ಯೋಗಗ್ರಂಥಗಳಲ್ಲಿ ಲಂಬಿಕಾಯೋಗವೆಂಬುದು ರೂಪುಗೊಂಡಿರುವುದು ಇದನ್ನು ಆಧರಿಸಿಯೇ.

ಲೋಕವ್ಯವಹಾರದಲ್ಲಿ ಮಾತನಾಡಲೂ, ರುಚಿ ನೋಡಲೂ ನಮ್ಮ ನಾಲಿಗೆಯನ್ನು ಬಳಸುತ್ತೇವೆ; ಆದರೆ ಅದನ್ನೇ ಹಿಂದಿರುಗಿಸಿ, ಯೋಗಕ್ರಮದಿಂದ  ಕಿರುನಾಲಿಗೆಗೆ ತಾಕಿಸುವಂತಾದರೆ ಅಮೃತಾಸ್ವಾದನೆಗೊಯ್ಯುವುದು.  

ಹಿಮ್ಮುಖತೆಯು ಸೂಸುವ ಪೀಯೂಷ!

ಹೀಗಾಗಿ ಕಿರುನಾಲಿಗೆಯೆಂಬುದು ಕೆಲಸವಿಲ್ಲದ ಮಾಂಸಪಿಂಡವಲ್ಲ. ಈ ಅಂತರಂಗವು, ಎಂದರೆ ಒಳಗಣ ಅಂಗವು, ಅಂಗಿಯೆನಿಸುವ ಆತ್ಮನನ್ನೇ, ಆತ್ಮಕ್ಕೂ ಆತ್ಮವಾದ ಪರಮಾತ್ಮನನ್ನೇ, ಹೊಂದಿಸುವ ಅಂಗವಾಗಿದೆ – ಎಂದೆಚ್ಚರಿಸುವುದೇ ಶ್ರೀರಂಗಮಹಾಗುರುಗಳ ಮಾತಿನ ಆಶಯ.

ತಾಯಿಯ ಸ್ತನವು ಅಮೃತದಂತಹ ಹಾಲನ್ನೀಯುವುದು. ಆದರೆ ಸ್ತನದಂತಿರುವ ಈ ಕಿರುನಾಲಿಗೆಯು ಸಾಕ್ಷಾದಮೃತವನ್ನೇ ಸೂಸಬಲ್ಲುದು!


Monday, July 13, 2026

ವ್ಯಾಸ ವೀಕ್ಷಿತ 196 ರಾಜಸೂಯವನ್ನು ಕೃಷ್ಣನೇ ನೆರವೇರಿಸುವುದೇ?(Vyaasa Vikshita196)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png



ಗಿತ್ತೆಂದರೆ, ಆತನ ಧನ-ಸಂಪಾದನವೆಲ್ಲವೂ ಧರ್ಮ-ಮಾರ್ಗದಿಂದಲೇ ಆಗುತ್ತಿತ್ತು. ಎಂದೇ ಅದು ಮಹತ್ತಾಗಿಯೇ ಬೆಳೆಯಿತು. ನೂರಾರು ವರ್ಷಗಳಾದರೂ ಬೊಕ್ಕಸವು ಖಾಲಿಯಾಗುವಂತಿರಲಿಲ್ಲ.

ಅನ್ನವಸ್ತ್ರಾದಿಗಳ ಸಂಗ್ರಹ ಹಾಗೂ ತನ್ನ ಕೋಶ(ಖಜಾನೆ) - ಇವುಗಳ ಪರಿಮಾಣವನ್ನು ಅರಿತುಕೊಂಡ ಯುಧಿಷ್ಠಿರನು ಯಜ್ಞವನ್ನು ಮಾಡುವುದೆಂದೇ ನಿಶ್ಚಯ ಮಾಡಿದನು. ಆ ಸಮಯಕ್ಕೇ ಸರಿಯಾಗಿ ಆತನ ಮಿತ್ರರು ಒಬ್ಬೊಬ್ಬರಾಗಿ ಬಂದೂ, ಒಟ್ಟಿಗೇ ಬಂದೂ ಆತನಿಗೆ ಹೇಳಿದರು - "ರಾಜನೇ ಯಜ್ಞವನ್ನು ಮಾಡಲು ಸರಿಯಾದ ಸಮಯವು ಒದಗಿಬಂದಿದೆ. ಎಂದೇ ಅದನ್ನೀಗ ಮಾಡುವುದಾಗಲಿ". ಅವರೆಲ್ಲರೂ ಹೀಗೆ ಮಾತನಾಡುತ್ತಿರುವಾಗಲೇ ಅಲ್ಲಿಗೆ ಶ್ರೀಕೃಷ್ಣನು ಆಗಮಿಸಿದನು.

ಆತನಾದರೂ ಪುರಾಣಪುರುಷ, ನಾರಾಯಣ-ಋಷಿ, ವೇದಾತ್ಮ ಹಾಗೂ ವಿಶೇಷಜ್ಞಾನಸಂಪನ್ನರಿಗೂ ಅವೇದ್ಯನಾದಂತಹವನು; ಚರಾಚರಗಳಲ್ಲಿ ಆತನೇ ಶ್ರೇಷ್ಠನಾದವನು; ಎಲ್ಲಕ್ಕೂ ಜನ್ಮಹೇತುವೂ ಲಯಹೇತುವೂ ಆದವನು; ಕೇಶಿಯೆಂಬ ದೈತ್ಯನನ್ನು ಸಂಹರಿಸಿದ ಕೇಶವನೇ ಅವನು!

ವೃಷ್ಣಿವಂಶದವರೆಲ್ಲರಿಗೂ ಆತನು ಕೋಟೆಯಿದ್ದಂತೆ, ಎಂದರೆ ಅವರ ರಕ್ಷಕ. ಆಪತ್ತುಗಳಲ್ಲಿ ಅಭಯವನ್ನು ಕೊಡತಕ್ಕವನು. ಶತ್ರುಗಳನ್ನು ಸಂಹರಿಸತಕ್ಕವನು.

ತನ್ನ ತಂದೆಯಾದ ಆನಕದುಂದುಭಿಯನ್ನು, ಎಂದರೆ ವಸುದೇವನನ್ನು, ಸೈನ್ಯಾಧಿಕಾರದಲ್ಲಿ ನಿಲ್ಲಿಸಿ, ಧರ್ಮರಾಜನಿಗಾಗಿ ಅಪಾರವಾದ ಸಂಪತ್ತನ್ನು ತಂದು, ಮಹಾಸೈನ್ಯ-ಸಮೇತನಾಗಿ ಅಲ್ಲಿಗೆ ಬಂದನು. ಅಮಿತವಾದ ಧನ-ರತ್ನಗಳ ಅಕ್ಷಯಸಾಗರವನ್ನೇ ತಂದ ಕೃಷ್ಣನು ರಥ-ಘೋಷದೊಂದಿಗೆ ಆ ಶ್ರೇಷ್ಠ-ನಗರವನ್ನು ಪ್ರವೇಶಿಸಿದನು.

ಪಾಂಡವರ ಭಂಡಾರವೋ, ಮೊದಲೇ ತುಂಬಿತ್ತು. ಈಗ ಅದಕ್ಕೆ ತನ್ನ ಧನಸಂಪತ್ತಿಯನ್ನು ಮತ್ತೂ ತುಂಬಿದನು,  ಶ್ರೀಕೃಷ್ಣ. ಪಾಂಡವರ ಶತ್ರುಗಳಿಗಂತೂ ಇದು ಶೋಕವನ್ನೇ ಹರಿಸಿತು. ಸೂರ್ಯನಿಲ್ಲದೆಡೆಗೆ ಸೂರ್ಯನು ಬಂದರೆ ಹೇಗೋ ಹಾಗೆ, ವಾಯುವಿಲ್ಲದೆಡೆಗೆ ವಾಯುವು ಬಂದರೆ ಹೇಗೋ ಹಾಗೆ, ಕೃಷ್ಣನ ಆಗಮನದಿಂದಾಗಿ ಆ ಭಾರತ-ಪುರವು, ಎಂದರೆ ಇಂದ್ರಪ್ರಸ್ಥವು, ಹರ್ಷಿಸಿತು.

ಆತನನ್ನು ಯುಧಿಷ್ಠಿರನು ಸಂತೋಷದಿಂದ ಎದುರ್ಗೊಂಡನು. ವಿಧ್ಯನುಸಾರ ಸತ್ಕರಿಸಿದನು. ಕುಶಲಪ್ರಶ್ನೆಯನ್ನು ಮಾಡಿದನು. ಸುಖಾಸನದಲ್ಲಿ ಕುಳ್ಳಿರಿಸಿದನು. ಧೌಮ್ಯ, ದ್ವೈಪಾಯನ ಮೊದಲಾದ ಋತ್ವಿಕ್ಕುಗಳು ಹಾಗೂ ಭೀಮ, ಅರ್ಜುನ, ನಕುಲ, ಸಹದೇವ - ಇವರೆಲ್ಲರೊಂದಿಗೆ ಬಂದು ಕೃಷ್ಣನ್ನು ಮಾತನಾಡಿಸುತ್ತಾ ಹೀಗೆ ಹೇಳಿದನು:

"ಕೃಷ್ಣಾ! ನನ್ನ ಬಳಿಯಿರುವ ಈ ಪೃಥ್ವಿಯೆಲ್ಲವೂ ನಿನಗಾಗಿಯೇ ಇರುವುದು. ಬಹುಧನ-ಸಂಪಾದನೆಯು ಸಹ ನಿನ್ನ ಪ್ರಸಾದದಿಂದಲೇ ಘಟಿಸಿದೆ. ದೇವಕೀಪುತ್ರ, ಅದೆಲ್ಲವನ್ನೂ ನಾನು ವಿಧಿ-ಪೂರ್ವಕವಾಗಿ ಬ್ರಾಹ್ಮಣ-ಶ್ರೇಷ್ಠರಿಗಾಗಿಯೂ ಹವ್ಯ-ವಾಹನಾದ ಅಗ್ನಿಗಾಗಿಯೂ ವಿನಿಯೋಗಿಸಬಯಸುತ್ತೇನೆ. ಅದುದರಿಂದ ನಾನು ನಿನ್ನೊಂದಿಗೂ ತಮ್ಮಂದಿರೊಂದಿಗೂ ಯಜ್ಞವನ್ನು ಮಾಡಲು ಇಷ್ಟಪಡುತ್ತೇನೆ. ಅದಕ್ಕೆ ನೀನು ಅನುಮತಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಮತ್ತು ಅದಕ್ಕಾಗಿ, ಗೋವಿಂದನೇ, ನೀನೇ ಯಜ್ಞದೀಕ್ಷೆಯನ್ನು ಕೈಗೊಳ್ಳಬೇಕೆಂದು ಕೋರುತ್ತೇನೆ. ನೀನು ಯಜ್ಞವನ್ನು ಮಾಡುವುದಾದಲ್ಲಿ ನಾನು ಪಾಪರಹಿತನಾದೇನು. ಅಥವಾ, ನಾನೇ ತಮ್ಮಂದಿರೊಂದಿಗೆ ಯಜ್ಞವನ್ನು ನೆರವೇರಿಸಲು ಅನುಮತಿ ಕೊಡು. ನಿನ್ನಿಂದ ಅನುಜ್ಞೆಯನ್ನು ಪಡೆದು ಯಜ್ಞವನ್ನು ಆಚರಿಸಿದೆನಾದರೆ ನಾನು ಉತ್ತಮಯಾಗವನ್ನು, ಎಂದರೆ ಯಾಗಫಲವನ್ನು, ಸಂಪಾದಿಸಿಯೇನು!" ಎಂದನು.

ಆಗ ಶ್ರೀಕೃಷ್ಣನು ರಾಜಸೂಯಯಾಗದ ಗುಣಗಳನ್ನು ಬಹುವಾಗಿ ವಿವರಿಸಿ, ಹೀಗೆ ಉತ್ತರವಿತ್ತನು.

"ರಾಜಸಿಂಹನಾದ ಯುಧಿಷ್ಠಿರನೇ, ಸಮ್ರಾಟ್ ಎನ್ನಿಸಿಕೊಳ್ಳಲು ನೀನೇ ಅರ್ಹನು. ಹಾಗಾಗಿ ನೀನೇ ಮಹಾಯಜ್ಞ-ದೀಕ್ಷೆಯನ್ನು ಹೊಂದು. ನೀನದನ್ನು ಮಾಡಿದೆಯಾದರೆ ನಾವುಗಳೆಲ್ಲರೂ ಕೃತಕೃತ್ಯರಾಗುತ್ತೇವೆ, ಎಂದರೆ ಧನ್ಯರಾಗುತ್ತೇವೆ.

ನಿನಗಿಷ್ಟವೆನಿಸಿದ ಈ ಯಜ್ಞವನ್ನು ನೀನೇ ನೆರವೇರಿಸು. ನಿನಗೆ ಮಂಗಳವಾಗುವಂತೆ ನಾನು ಸದಾ ಉದ್ಯುಕ್ತನಾಗಿರುತ್ತೇನೆ. ಯುಕ್ತವೆನಿಸುವ ಕೆಲಸಗಳಲ್ಲಿ ನನ್ನನ್ನು ತೊಡಗಿಸು. ನಿನ್ನ ಮಾತುಗಳನ್ನೆಲ್ಲ ನಾ ನಡೆಸುವೆ" ಎಂದನು. 


ಸೂಚನೆ :  12/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 74 (Prasnottara Ratnamalike 74)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ - ೭೪. ಪಂಗು ಎಂದರೆ ಯಾರು?

ಉತ್ತರ- ವೃದ್ಧನಾದರೂ ಕಾಶೀ ಮೊದಲಾದ ತೀರ್ಥಯಾತ್ರೆಗೆ ಹೋಗದವ ಅಥವಾ ಸಂತರ ಸಂಗವನ್ನು ಮಾಡದವ.

ಪಂಗು ಎಂದರೆ ಕಾಲಿಲ್ಲದವ, ಹೇಳವ ಎಂದರ್ಥ. ಕಾಲು ಇರುವುದೇ ಗತಿಗಾಗಿ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸಲು. ಅಂದರೆ ನಮ್ಮ ಜೀವನ ವ್ಯಾಪಾರಕ್ಕೆ ಬೇಕಾದ ಅನುಕೂಲತೆಗಳನ್ನು ಪಡೆಯಲು ನಾವು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಬೇಕಾಗುತ್ತದೆ. ಆಗ ಇರುವ ಅತ್ಯಂತ ಮುಖ್ಯವಾದ ಸಾಧನವೇ ಕಾಲು. ಇದು ನಮಗೆ ಬೇಕಾದದ್ದನ್ನು ಒದಗಿಸಲು ಸಹಕರಿಸುತ್ತದೆ. ಇದರಿಂದ ನಮಗೆ ಜೀವನ ಪರಿಪೂರ್ಣವಾದಂತೆ ಆಗುತ್ತದೆ. ಹಾಗಾಗಿ ಕಾಲು ಅತ್ಯಂತ ಪ್ರಧಾನವಾದ ಅಂಗ ಎಂಬುದಾಗಿ ಪರಿಗಣಿತವಾಗಿದೆ.

ಇಲ್ಲಿ ಬರುವ ಪ್ರಶ್ನೆ ಎಂದರೆ ಕಾಲಿದ್ದರೂ ಅವನನ್ನು ಪಂಗು ಎಂದು ಕರೆಯಲು ಕಾರಣ ಏನು? ಎಂಬುದಾಗಿ. ಯಾವಾಗ ಇರುವ ಕಾಲನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಆ ಕಾಲು ಇದ್ದರೂ ಇಲ್ಲದಂತೆಯೇ ಎಂಬುದು ತಾತ್ಪರ್ಯ. ಹೇಳುವ ವಿಷಯ ಹೀಗಿದೆ. ಒಬ್ಬ ಮಾನವ ತನ್ನ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಆಗ ಆ ಜೀವನಪಥಕ್ಕೆ ಬೇಕಾದ ಪಾಥೇಯವನ್ನು ಸಿದ್ಧಪಡಿಸಿಕೊಳ್ಳಬೇಕು. ಅದಕ್ಕೆ ಬೇಕು ಯಾತ್ರೆ ಅಥವಾ ತೀರ್ಥಯಾತ್ರೆ. “ಕಾಶೀಗೆ ಹೋಗಬೇಕು, ರಾಮೇಶ್ವರ ನೋಡಬೇಕು, ವಿಶ್ವನಾಥನ ದರುಶನ ಮಾಡ್ಬೇಕು” ಎಂದು ನಮ್ಮ ಸಂಪ್ರದಾಯದಲ್ಲಿ ಈ ತೀರ್ಥಯಾತ್ರೆಗೆ ವಿಶೇಷತೆ ಇದೆ. ಏಕೆಂದರೆ ಅದು ನಮ್ಮ ಜೀವನ ಯಾತ್ರೆಗೆ ಅನುಕೂಲಿಸುವ ವಿಶೇಷ ತಾಣಗಳು. ಅವುಗಳಿಂದ ನಮ್ಮ ಜೀವನಕ್ಕೆ ಬೇಕಾದ ಬುತ್ತಿಯನ್ನು ಕಟ್ಟಿಕೊಳ್ಳಲು ಸಾಧ್ಯ. ಆದುದರಿಂದ ಜೀವನ ಯಾತ್ರೆಯಲ್ಲಿ ತೀರ್ಥಯಾತ್ರೆಗೆ ಅಷ್ಟೊಂದು ವಿಶೇಷತೆಯನ್ನು ಕೊಟ್ಟಿದ್ದು ಕಂಡುಬರುತ್ತದೆ. 


ಯಾವುದು ನಮ್ಮನ್ನು ಪವಿತ್ರ ಗೊಳಿಸುತ್ತದೆಯೋ ಅದನ್ನು ‘ತೀರ್ಥ’ ಎಂಬುದಾಗಿ ಕರೆಯಲಾಗುತ್ತದೆ. ಇವುಗಳಲ್ಲಿ ಜಂಗಮ ಮತ್ತು ಸ್ಥಾವರ ಎಂಬುದಾಗಿ ಎರಡು ಬಗೆಯ ತೀರ್ಥಗಳಿವೆ. ನದೀ, ಪರ್ವತ, ಪುಣ್ಯಕ್ಷೇತ್ರಗಳನ್ನು ಸ್ಥಾವರಕ್ಷೇತ್ರಗಳು ಎಂಬುದಾಗಿ ಕರೆದರೆ, ಸತ್ಪುರುಷರು - ಮಹಾತ್ಮರನ್ನು ಜಂಗಮಕ್ಷೇತ್ರಗಳು ಎಂಬುದಾಗಿ ಕರೆಯಲಾಗುತ್ತದೆ. ಅಂದರೆ ಪುಣ್ಯತಾಣಗಳು ಮತ್ತು ಪುಣ್ಯಪುರುಷರು ನಮ್ಮನ್ನು ಪವಿತ್ರಗೊಳಿಸುತ್ತಾರೆ ಎಂದರ್ಥ. ಒಬ್ಬ ವ್ಯಕ್ತಿ ತನ್ನ ಜೀವನವನ್ನು ಪರಿಪೂರ್ಣಗೊಳಿಕೊಳ್ಳಬೇಕು ಎಂಬ ಸಂಕಲ್ಪವಿದ್ದಲ್ಲಿ ಅವನು ಈ ಎರಡು ಬಗೆಯ ತೀರ್ಥಗಳ ಸಾಂಗತ್ಯವನ್ನು ಸಂಪಾದಿಸಿಕೊಳ್ಳಬೇಕು. ಸಕಾಲದಲ್ಲಿ ಆ ತೀರ್ಥಯಾತ್ರೆಗೆ ಮತ್ತು ತೀರ್ಥಭೂತರಾದ ಮಹಾತ್ಮರ ಸನ್ನಿಧಿಗೆ ತೆರಳಬೇಕು. ಅಲ್ಲಿಂದ ಬೇಕಾದ ಸಾಮಗ್ರಿಯನ್ನು ಸಂಗ್ರಹಿಸಿಕೊಳ್ಳಬೇಕು. ಪ್ರಯಾಣ ಮಾಡುವಾಗ ವಾಹನಕ್ಕೆ ಬೇಕಾದ ಇಂಧನವನ್ನು ತುಂಬಿಸಿಕೊಳ್ಳಲು ಹೇಗೆ ಪೆಟ್ರೋಲ್ ಬಂಕ್ ಇತ್ಯಾದಿ ಸ್ಥಾನಕ್ಕೆ ಹೋಗುತ್ತೇವೋ, ಅದೇ ರೀತಿಯಾಗಿ ಜೀವಯಾನಕ್ಕೆ ಬೇಕಾದ ಶಕ್ತಿಯನ್ನು ತುಂಬಿಸಿಕೊಡುವ ರಿಚಾರ್ಜ್ ಮಾಡುವ ಸ್ಥಾನವಾಗಿದೆ. ಶ್ರೀರಂಗ ಮಹಾಗುರುಗಳು ಈ ತೀರ್ಥಕ್ಷೇತ್ರಗಳನ್ನು ಹೀಗೆ ವಿವರಿಸುತ್ತಿದ್ದರು. “ಋಷಿಗಳ ಜ್ಞಾನಭೂಮಿ ಮತ್ತು ಮನೋಭೂಮಿಗಳಲ್ಲಿದ್ದುದನ್ನು ಸೂಚಿಸಲು ಹೊರಗಿನ ತೀರ್ಥ ಮತ್ತು ಕ್ಷೇತ್ರಗಳು, ಶ್ರೀಶಂಕರಾಚಾರರು ಹೇಳಿರುವಂತೆ 'ಅಂತಸ್ತೀರ್ಥ'ವೇ ಲಕ್ಷ್ಯವಾದರೂ, ಅಲ್ಲಿಗೆ ಪಾಮರರನ್ನು ಕೊಂಡೊಯ್ಯಲು ಅದರ ಪ್ರತೀಕವಾಗಿ ಪ್ರಾತಿನಿಧ್ಯ ವಹಿಸಲು ಅಥವಾ ಅಭಿಜ್ಞಾನವಾಗಲು, ಹೊರಗಿನ ತೀರ್ಥಕ್ಷೇತ್ರಗಳು. ಈ ಕ್ಷೇತ್ರದಲ್ಲಿ(ಶರೀರದಲ್ಲಿ) ಕ್ಷೇತ್ರಜ್ಞನಾದವನು ಯಾತ್ರೆ ಮಾಡುವಾಗ ಬೇರೆ ಬೇರೆ ಚಕ್ರಗಳಲ್ಲಿ ಭಗವಂತನ ಬೇರೆ ಬೇರೆ ರೂಪಗಳನ್ನು ನೋಡುವಂತೆ ಹೊರಗಿನ ಕ್ಷೇತ್ರಗಳಲ್ಲಿ ಯಾತ್ರೆ ಮಾಡಲು ಅವುಗಳ 'ಪ್ರತೀಕ', 'ಪ್ರತಿನಿಧಿ', 'ಅಭಿಜ್ಞಾನ'. ನಿಗೂಢವಾದ ಸಂಸ್ಕಾರವನ್ನೆಬ್ಬಿಸಲು ಇವು ಪೋಷಕವಾಗುತ್ತವೆ” ಎಂದು. ಆದ್ದರಿಂದ ಭಗವದ್ಧರ್ಮವನ್ನು ಪ್ರಚೋದಿಸುವಂತಹ ಕ್ಷೇತ್ರಗಳನ್ನು ತನ್ನ ಜೀವಮಾನದಲ್ಲಿ ನೋಡದಿದ್ದರೆ ಅವನ ಜೀವನ ವ್ಯರ್ಥ ಅಥವಾ ಕಾಲಿದ್ದೂ ಇಲ್ಲದಂತೆಯೇ ಎಂಬ ಭಾವ ಇಲ್ಲಿದೆ.


ಸೂಚನೆ : 12
/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, July 5, 2026

ವ್ಯಾಸ ವೀಕ್ಷಿತ 195 ನಕುಲನ ದಿಗ್ವಿಜಯ; ಧರ್ಮರಾಜನ ಧರ್ಮರಾಜ್ಯ (Vyaasa Vikshita195)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png

ಅತ್ತ ನಕುಲನು ಉತ್ಸಾಹಿಗಳಾದ ಯೋಧರೊಂದಿಗೆ ಪಶ್ಚಿಮದಿಕ್ಕಿಗೆ ಹೊರಟನು. ಆತನು ಮೊಟ್ಟಮೊದಲು ರೋಹೀತಕ-ಪರ್ವತದತ್ತ ಹೆಜ್ಜೆಯಿಟ್ಟನು. ಬಳಿಕ ಮರು-ಭೂಮಿ (ಎಂದರೆ ಮಾರವಾಡ) ಮತ್ತು ಸುತ್ತಮುತ್ತಲಿನ ಅರಸರನ್ನು ವಶಪಡಿಸಿಕೊಂಡನು.

ಧನಧಾನ್ಯಗಳಿಂದ ತುಂಬಿದ್ದ ಶೈರೀಷಕವೆಂಬ ರಾಜ್ಯವನ್ನು ವಶಪಡಿಸಿಕೊಂಡನು. ಮಹೋತ್ಥವೆಂಬ ದೇಶದ ಅರಸನಾದ ಆಕ್ರೋಶನನ್ನೂ ಗೆದ್ದನು. ಇದಕ್ಕಾಗಿ ಭಾರೀ ಯುದ್ಧವೇ ನಡೆಯಬೇಕಾಯಿತು.

ಆಮೇಲೆ ನಕುಲನು ಶಿಬಿ-ತ್ರಿಗರ್ತ-ಅಂಬಷ್ಠ-ಮಾಳವ ದೇಶಗಳನ್ನು ಜಯಿಸಿದನು. ಬಳಿಕ ಪುಷ್ಕರಾರಣ್ಯವೆಂಬ ಭೂಮಿಯಲ್ಲಿ ವಾಸವಿದ್ದ ಉತ್ಸವಸಂಕೇತ ಎಂಬ ಜನಸ್ತೋಮವನ್ನು ಗೆದ್ದನು. ಸಮುದ್ರದಡದಲ್ಲಿದ ಗ್ರಾಮಣೀಯರೆಂಬ ಕ್ಷತ್ರಿಯರೂ, ಸರಸ್ವತೀನದಿಯನ್ನು ಆಶ್ರಯಿಸಿದ್ದ ಶೂದ್ರ ಆಭೀರಗಣಗಳೂ, ಪರ್ವತವಾಸಿಗಳೂ ಮತ್ಸ್ಯಜೀವಿಗಳೂ ಆದ ಜನಗಣಗಳು - ಇವರೆಲ್ಲರನ್ನೂ ಸೋಲಿಸಿದನು.

ಅಲ್ಲದೆ ರಾಮಠ, ಹಾರ, ಹೂಣ ಮುಂತಾದ ಪಶ್ಚಿಮದ ರಾಜರು - ಇವರುಗಳನ್ನು ತನ್ನ ಆಜ್ಞಾಮಾತ್ರದಿಂದಲೇ ವಶಪಡಿಸಿಕೊಂಡನು. ಅಲ್ಲದೆ, ಅಲ್ಲಿದ್ದುಕೊಂಡೇ ದೂತನೊಬ್ಬನನ್ನು ಶ್ರೀಕೃಷ್ಣನಲ್ಲಿಗೆ ಕಳುಹಿಸಿಕೊಟ್ಟನು. ಕೃಷ್ಣನಾದರೂ ಪ್ರೀತಿಯಿಂದಲೇ ನಕುಲನ ಶಾಸನವನ್ನು ಒಪ್ಪಿಕೊಂಡನು. ಆಮೇಲೆ ಶಾಕಲದೇಶವನ್ನು ಗೆದ್ದು, ಮದ್ರದೇಶದ ಅರಸನನ್ನು - ಎಂದರೆ ತನ್ನ ಸೋದರಮಾವನನ್ನು - ಪ್ರೀತಿಯಿಂದಲೇ ವಶಪಡಿಸಿಕೊಂಡನು.

ಮದ್ರರಾಜನಾದ ಶಲ್ಯನಂತೂ ಆತನನ್ನು ಸಂತೋಷದಿಂದ ಸ್ವೀಕರಿಸಿ ಸತ್ಕರಿಸಿದನು. ಭೂರಿರತ್ನಗಳನ್ನೂ ಕೊಟ್ಟನು. ಆ ಬಳಿಕ ಅತ್ಯಂತ ಭಯಂಕರರೆನಿಸುವ ಮ್ಲೇಚ್ಛರನ್ನು ನಕುಲನು ಸದೆಬಡಿದನು. ಸಾಗರದ ಬಳಿಯಿದ್ದ ಪಹ್ಲವ, ಬರ್ಬರ, ಕಿರಾತ, ಯವನ, ಶಕ - ಇವರುಗಳೆಲ್ಲರನ್ನೂ ಸೋಲಿಸಿದನ; ಅವರಲ್ಲಿದ್ದ ರತ್ನಗಳನ್ನೆಲ್ಲಾ ತನ್ನ ವಶಕ್ಕೆ ಪಡೆದುಕೊಂಡನು.

ಹೀಗೆ ನಾನೋಪಾಯ-ಸಮರ್ಥನಾದ ನಕುಲನು ಕೊನೆಗೆ ತನ್ನ ಸ್ಥಾನವಾದ ಇಂದ್ರಪ್ರಸ್ಥದೆಡೆಗೆ ಸಾಗಿದನು. ನಕುಲನು ಸಂಪಾದಿಸಿದ ಮಹಾಧನವನ್ನು ಹಲವು ಸಾವಿರ ಆನೆಗಳು ಬಹುಶ್ರಮದಿಂದಲೇ ಹೊತ್ತು ಸಾಗಿಸುವದಾಯಿತು.

ಇಂದ್ರಪ್ರಸ್ಥದಲ್ಲಿದ್ದ ವೀರರಾಜನಾದ ಯುಧಿಷ್ಠಿರನಲ್ಲಿಗೆ ಹೋಗಿ, ಧನವನ್ನೆಲ್ಲವನ್ನೂ ಆತನಿಗೇ ಸಮರ್ಪಿಸಿದನು, ನಕುಲ. ಅಂತೂ

 ಹೀಗೆ ವರುಣನ ದಿಕ್ಕಾದ ಪಶ್ಚಿಮವನ್ನು ನಕುಲನು ಗೆದ್ದು ಬಂದನು.

ಈ ರೀತಿಯಲ್ಲಿ ನಾಲ್ಕೂ ದಿಕ್ಕುಗಳ ಜಯವನ್ನು ಸಾಧಿಸಿದ ಮೇಲೆ, ತನ್ನ ಭ್ರಾತೃಗಳೊಂದಿಗೆ ರಾಜನಾದ ಯುಧಿಷ್ಠಿರನು ಭೂಮಿಯನ್ನು ಧರ್ಮದಿಂದ ಆಳಿದನು. ಪ್ರಜೆಗಳು ಅವನ ವಿಷಯದಲ್ಲಿ ಅತ್ಯಂತ ಅನುರಕ್ತರಾದರು. ಮಕ್ಕಳು ತಂದೆಯ ಬಗ್ಗೆ ಯಾವ ಪ್ರೀತಿಯುಳ್ಳವರಾಗುತ್ತಾರೋ ಅಂತಹ ಪ್ರೀತಿಯನ್ನು ಹೊಂದಿದರು. ಆತನನ್ನು ದ್ವೇಷಿಸುವವರೇ ಇಲ್ಲದಾದರು. ಈ ಕಾರಣಕ್ಕಾಗಿಯೇ ಆತನಿಗೆ ಅಜಾತಶತ್ರುವೆಂಬ ಬಿರುದು ಬಂದುದು.

ಧರ್ಮರಾಜನು ರಕ್ಷಣೆಕೊಡುತ್ತಿದ್ದನೆಂಬ ಕಾರಣದಿಂದಲೂ, ಸತ್ಯವನ್ನು ಪರಿಪಾಲಿಸುತ್ತಿದ್ದನೆಂಬ ಕಾರಣದಿಂದಲೂ, ಶತ್ರುಗಳನ್ನು ಧ್ವಂಸಮಾಡುತ್ತಿದ್ದುದರಿಂದಲೂ ಪ್ರಜೆಗಳು ಸ್ವಕರ್ಮ-ನಿರತರಾಗಿಯೇ ಇರುತ್ತಿದ್ದರು. ಸಮೀಚೀನವಾದ ಬಗೆಯಲ್ಲಿ ಯುಧಿಷ್ಠಿರನು ಕರವನ್ನು ತೆಗೆದುಕೊಳ್ಳುತ್ತಿದ್ದುದರಿಂದಲೂ, ಜತಗೆ ಧರ್ಮಾನುಸಾರವಾಗಿಯೇ ಅನುಶಾಸನಮಾಡುತ್ತಿದ್ದುದರಿಂದಲೂ ಯಥೇಚ್ಛವಾಗಿ ಮಳೆಯಾಗುತ್ತಿತ್ತು. ಜನತೆಯೂ ಸಮೃದ್ಧಿಯನ್ನು ಕಂಡಿತು.

ಗೋರಕ್ಷೆಯಾಗಲಿ, ಉಳುಮೆಯಾಗಲಿ ವಾಣಿಜ್ಯವಾಗಲಿ - ಎಲ್ಲಾ ಉದ್ಯಮಗಳೂ ಸರಿಯಾದ ರೀತಿಯಲ್ಲಿ ನಡೆಯುತ್ತಿದ್ದವು. ರಾಜನು ಮಾಡಿದ ಸುವ್ಯವಸ್ಥೆಯಿಂದಾಗಿ ಈ ಕಾರ್ಯಗಳೆಲ್ಲವೂ ಚೆನ್ನಾಗಿ ನೆರವೇರುತ್ತಿದ್ದು್ವು. ಕಳ್ಳರು, ವಂಚಕರು ಮಾತ್ರವಲ್ಲ; ರಾಜವಲ್ಲಭರು (ಎಂದರೆ ರಾಜನಿಗೆ ಪ್ರಿಯರಾಗಿದ್ದವರು) - ಇವರಾರ ಬಾಯಲ್ಲೂ ಸುಳ್ಳು ಮಾತುಗಳು ಬರುತ್ತಿರಲಿಲ್ಲ. ಅತಿವೃಷ್ಟಿ-ಅನಾವೃಷ್ಟಿಗಳಾಗುತ್ತಿರಲಿಲ್ಲ. ವ್ಯಾಧಿಗಳಿಂದ ಬೆಂಕಿಯ ಅವಘಡಗಳು ಸಂಭವಿಸುತ್ತಿರಲಿಲ್ಲ. ಅನ್ಯರಾಜರು ಯುಧಿಷ್ಠಿರನ ಬಳಿ ಬಂದರೆಂದರೆ, ಅದು ಆತನಿಗೆ ಏನೋ ಪ್ರಿಯವನ್ನು ಉಂಟುಮಾಡಲೆಂದು, ಅಥವಾ ತಮ್ಮ ಕಾಣಿಕೆಗಳನ್ನು ಒಪ್ಪಿಸಲೆಂದು; ಅಷ್ಟೇ ವಿನಾ ಯುದ್ಧಮಾಡಲೆಂದಲ್ಲ. 

ಸೂಚನೆ : 5/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 73 (Prasnottara Ratnamalike 73)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png


ಪ್ರಶ್ನೆ - ೭೩. ಕಣ್ಣಿದ್ದೂ ಕುರುಡರು ಯಾರು?

ಉತ್ತರ- ನಾಸ್ತಿಕ ಮನುಷ್ಯ.


ಪ್ರತಿಯೊಬ್ಬ ಮಾನವನೂ ಕೂಡ ಕಣ್ಣು, ಕಿವಿ, ಮೂಗು, ಬಾಯಿ, ಚರ್ಮ ಎಂಬ ಐದು ಇಂದ್ರಿಯಗಳನ್ನು ಪಡೆದು, ಅವುಗಳ ಮೂಲಕ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಎಂಬ ಐದು ವಿಷಯಗಳನ್ನು ಮತ್ತು ಈ ಐದು ಇಂದ್ರಿಯಗಳಿಂದಲೇ ಭೂಮಿ, ನೀರು, ಅಗ್ನಿ, ವಾಯು, ಆಕಾಶ ಎಂಬ ಐದು ಭೂತಗಳನ್ನೂ ಅನುಭವಿಸುತ್ತಿದ್ದಾನೆ. ಇವುಗಳನ್ನೇ ‘ಐಂದ್ರಿಯಕ ಪ್ರಪಂಚ’ ಎಂಬುದಾಗಿ ಕರೆಯಲಾಗುತ್ತದೆ. ಒಟ್ಟಾರೆ ನಮ್ಮ ಇಂದ್ರಿಯಗಳಿಂದ ಈ ಬಾಹ್ಯ ಪ್ರಪಂಚವನ್ನುಅರ್ಥಮಾಡಿಕೊಳ್ಳುತ್ತಿದ್ದೇವೆ. ಆದರೆ ಈ ಇಂದ್ರಿಯಗಳಿಂದ ಮಾತ್ರ ಕಾಣುವ ವಿಷಯ ಸತ್ಯ; ಉಳಿದವು ಮಿಥ್ಯ ಎಂಬುದಾಗಿ ಹೇಳುವುದನ್ನು ನೋಡುತ್ತೇವೆ. ಇದನ್ನೇ ‘ನಾಸ್ತಿಕತೆ’ ಎಂಬುದಾಗಿ ಕರೆಯುತ್ತೇವೆ. ಹಾಗಾದರೆ ನಾವು ಇಂದ್ರಿಯಕ್ಕೆ ಕಾಣುವುದನ್ನು ಮಾತ್ರ ಸತ್ಯ ಎಂದು ಒಪ್ಪಿ, ಇಂದ್ರಿಯಕ್ಕೆ ಕಾಣದಿರುವ ಇನ್ನೊಂದು ಪ್ರಪಂಚವನ್ನು ಒಪ್ಪದಿದ್ದರೆ ಆಗುವ ಅನುಕೂಲ ಅಥವಾ ಪ್ರತಿಕೂಲತೆ ಏನು? ಎಂಬುದನ್ನು ನಾವು ಚಿಂತಿಸಬೇಕಲ್ಲವೇ?. 


ಯಾವುದೇ ಒಂದು ವಸ್ತುವನ್ನು ತೆಗೆದುಕೊಂಡಾಗ ಅದರ ಒಂದು ಭಾಗ ಮಾತ್ರ ನಮ್ಮ ಕಣ್ಣಿಗೆ ಕಾಣುತ್ತದೆ. ಅದರ ಇನ್ನೊಂದು ಭಾಗ ಕಾಣದೆ ಹಾಗೆಯೇ ಉಳಿದುಕೊಳ್ಳುತ್ತದೆ. ಇದು ಸತ್ಯ. ಇಷ್ಟು ಎದುರಿಗೆ ಕಾಣುವ ವಸ್ತುವೇ ನಮಗೆ ಕೆಲವೊಮ್ಮೆ ಕಾಣುತ್ತದೆ; ಕೆಲವೊಮ್ಮೆ ಕಾಣುವುದಿಲ್ಲ ಎಂಬ ಪರಿಸ್ಥಿತಿ ಇದೆ ಎಂದಾದರೆ ಇನ್ನು ಕಣ್ಣಿಗೇ ಕಾಣದಿರುವ ವಸ್ತುವಿನ ವಿಷಯದ ಬಗ್ಗೆ ನಾವು ಮಾತನಾಡುವುದು ಹೇಗೆ? ಎಂಬುದು ಕೂಡ ಅಷ್ಟೇ ವಿಮರ್ಶಿಸಬೇಕಾದ ವಿಷಯವಲ್ಲವೇ!? ಅಥವಾ ಒಪ್ಪಿಕೊಳ್ಳಬೇಕಲ್ಲವೇ?

ಇಲ್ಲಿ ‘ಇಲ್ಲ’ ಎಂಬುವವನು ‘ನಾಸ್ತಿಕ’, ‘ಇದೆ’ ಎಂಬುವನು ಆಸ್ತಿಕ. ಅಂದರೆ ಧರ್ಮ ಎಂಬುದಿದೆ; ಆ ಧರ್ಮಕ್ಕೆ ಕಾರಣವಾದ ಕರ್ಮ ಇದೆ; ಕರ್ಮದಿಂದ ಕಾಣದ ಧರ್ಮವು ಸಿದ್ಧವಾಗುತ್ತದೆ. ನಮಗೆ ಕಾಣುವ ಕರ್ಮವೇ ಧರ್ಮರೂಪವಾಗಿ ಆದಾಗ, ಹೊಟ್ಟೆ ನೋವಿಗೆ ಆಹಾರ ತಿನ್ನಿದಿದ್ದರೂ ತಿಂದ ಆಹಾರದಿಂದಲೇ ಕಾಣದ ಹೊಟ್ಟೆನೋವನ್ನು ಹೇಗೆ ಅನುಭವಿಸುತ್ತೇವೋ, ಅಂತಹ ಧರ್ಮವನ್ನು ಸಾಧಿಸುವ ರೀತಿಯಲ್ಲಿ ಕರ್ಮವಿದ್ದಾಗ ಅದು ನಮಗೆ ಕಾಣದಿದ್ದರೂ ‘ಇದೆ’ ಎಂದು ಒಪ್ಪಬೇಕಾಗುತ್ತದೆ. ಅದು ಅನುಭವಸತ್ಯ ಎಂದು ಪರಿಗಣಿತವಾಗಬೇಕಾಗುತ್ತದೆ.  ಹತ್ತಾರು ಜನ, ಹತ್ತಾರು ಬಾರಿ, ಹತ್ತು ಹಲವು ಕಡೆ ಒಂದೇ ಸತ್ಯವನ್ನು ಅಹುದೆಂದಾಗ ಮಾತ್ರ ಅದು ಸತ್ಯವಾಗುತ್ತದೆ ತಾನೆ? ಈ ಹಿನ್ನೆಲೆಯಲ್ಲಿ ಚಿಂತಿಸಿದಾಗ ನಮಗೆ ತಿಳಿಯುವ ಅಂಶ ಇಷ್ಟೇ - ಒಬ್ಬ ವ್ಯಕ್ತಯ ಪರಿವಿತವಾದ ಬುದ್ಧಿಯಿಂದ ಒಂದು ವಿಷಯ ಇತ್ಯರ್ಥಕ್ಕೆ ಬರದು ಎಂದು. ಅದರ ಬಗ್ಗೆ ಪರಿಪೂರ್ಣ ಪರಿಚಯ ಬರಬೇಕಾದರೆ ಅದಕ್ಕೆ ಹಲವರ ಸಾಕ್ಷೀತ್ವ ಅತ್ಯಂತ ಮುಖ್ಯ. ಹಾಗಾಗಿ ಯಾವುದನ್ನು ತಿಳಿಯಬೇಕಾಗಿದೆಯೋ,  ಯಾವುದನ್ನು ತಿಳಿಯುವುದಕ್ಕೋಸ್ಕರವೇ ನಮಗೆ ಭಗವಂತನು ಒಂದು ಸಾಧನವನ್ನು ಕೊಟ್ಟಿದ್ದಾನೋ, ಅದನ್ನು ಬಳಸಿಕೊಳ್ಳದಿದ್ದರೆ ಆಗ ಅದು ಇಲ್ಲದಂತೆಯೇ ಸರಿ. ಅಂದರೆ ಕಣ್ಣು ಕಿವಿ ಇತ್ಯಾದಿ ಇಂದ್ರಿಯಗಳನ್ನು ಕೇವಲ ಭೌತಿಕ ಪ್ರಪಂಚವನ್ನು ಮಾತ್ರ ಅರ್ಥಮಾಡಿಕೊಳ್ಳಲು ಬಳಸಿಕೊಳ್ಳದೆಯೇ ಈ ಇಂದ್ರಿಯಗಳಿಂದಲೇ ದೈವಿಕ ಪ್ರಪಂಚವನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಯೋಗಶಾಸ್ತ್ರವೂ ಸಾರುತ್ತದೆ. ಹಾಗಾಗಿ ಕಣ್ಣಿಗೆ ಕಾಣುವುದು ಮಾತ್ರ ಸತ್ಯ ಎಂಬುದಾಗಿ ಪರಿಗಣಿಸದೇ ಕಣ್ಣಿನ ಇನ್ನೊಂದು ಪಾರ್ಶ್ವದ ಭಾಗವು ನಮಗೆ ಕಾಣಿಸದಿದ್ದರೂ ಸತ್ಯ ಎಂದು ಹೇಗೆ ಒಪ್ಪಿಕೊಳ್ಳುತ್ತೇವೋ, ಹಾಗೆಯೇ ಸ್ಥೂಲ, ಸೂಕ್ಷ್ಮ, ಪರ ಎಂಬ ಮೂರು ಹಂತಗಳಿಂದ ಕೂಡಿದ ಅರ್ಥಪ್ರಪಂಚವಿದೆ ಎಂಬುದನ್ನು ಒಪ್ಪಬೇಕು. ಕಾಣುವ ಕಣ್ಣನ್ನು ಪಡೆದು ಕೊಂಡಾಗ ಮಾತ್ರ ಅವನು ಪುರುಷನಾಗುತ್ತಾನೆ. ಇಲ್ಲವಾದರೆ ಕಣ್ಣಿದ್ದು ಕುರುಡನಾಗಿ ಅವನೇ ನಾಸ್ತಿಕಪುರುಷನಾಗುತ್ತಾನೆ ಅಷ್ಟೇ.


ಸೂಚನೆ :  5/7/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರೀ 109 ಸಂತಮೇನಂ ತತೋ ವಿದುಃ (Astakshara 109)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)



image.png



ಸಂತನೆಂದರೆ ಯಾರು? - ಎಂಬ ಪ್ರಶ್ನೆಗೆ ಉತ್ತರವೇನು ಸುಲಭವೇ? ನಮ್ಮ ದೇಶದಲ್ಲಿ ಅನೇಕ ಸಾಧು-ಸಂತರಿದ್ದರೆನ್ನುತ್ತೇವಲ್ಲವೇ? ವಿದೇಶಗಳಲ್ಲೂ ಕೆಲವರನ್ನು ಸಂತರೆಂದು ಕರೆದಿದ್ದಾರೆ – ಎಂದೆಲ್ಲಾ ತೋರಬಹುದು. ಆದರೆ ಗೀತೆ-ಉಪನಿಷತ್ತು ಮುಂತಾದ ನಮ್ಮ ಪ್ರಾಚೀನ-ಗ್ರಂಥಗಳಲ್ಲಿ ಯಾರನ್ನು ಸಂತನೆಂಬುದಾಗಿ ಹೇಳಿದ್ದಾರೆ? – ಎಂದೊಮ್ಮೆ ನೋಡಬೇಕಲ್ಲವೇ?

ಈ ಬಗ್ಗೆ ತೈತ್ತಿರೀಯೋಪನಿಷತ್ತಿನಲ್ಲಿ ಸ್ಪಷ್ಟವಾದ ವಿವರಣೆಯೇ ಇದೆ. ಅಲ್ಲಿ ಅಸಂತನೆಂದರೇನೆಂಬುದನ್ನು ಮೊದಲು ವಿವರಿಸಿ, ಆಮೇಲೆ ಸಂತನೆಂದರೆ ಯಾರೆಂಬುದನ್ನು ತಿಳಿಸಿದೆ.

ಸಂತನೆಂಬ ಪದ ಕನ್ನಡದ್ದು. ಅದರೆ ಅದರ ಮೂಲ ಸಂಸ್ಕೃತದ ’ಸತ್’ ಎಂಬುದು.
ಹಾಗಾದರೆ ’ಸತ್’ ಎಂದರೇನು? ಅದಕ್ಕೆ ಗೀತೆಯಿತ್ತಿರುವ ಉತ್ತರವನ್ನೇ ಮೊದಲು ನೋಡುವುದು ಒಳಿತು.

ಸತ್ ಎಂಬುದು ಆರು ಅರ್ಥಗಳಲ್ಲಿ (ಲೋಕದಲ್ಲಿಯೂ ವೇದದಲ್ಲಿಯೂ) ಬಳಕೆಯಾಗಿದೆಯೆಂದು ಭಗವದ್ಗೀತೆಯು ಪಟ್ಟಿಮಾಡುತ್ತದೆ! ಮೊಟ್ಟಮೊದಲನೆಯದಾಗಿ ಸತ್ ಎನ್ನುವುದು ಬ್ರಹ್ಮದ ಹೆಸರೇ. ಅಲ್ಲದೆ, ಸದ್ಭಾವ ಹಾಗೂ ಸಾಧುಭಾವಗಳೆಂಬ ಅರ್ಥಗಳಲ್ಲೂ ಸತ್ ಎಂಬುದನ್ನು ಬಳಸಲಾಗುತ್ತದೆ.

ಈ ಮೂರಲ್ಲದೆ, ಯಾವುದೇ ಪ್ರಶಸ್ತ-ಕರ್ಮವೂ ಸತ್ ಎನಿಸಿಕೊಳ್ಳುತ್ತದೆ. ಯಜ್ಞ-ದಾನ-ತಪಸ್ಸುಗಳಲ್ಲಿ ತೊಡಗುವಿಕೆಯೂ, ಜೊತೆಗೆ ಅವಕ್ಕಾಗಿ ಮಾಡುವ ಕರ್ಮವೂ ಸತ್ ಎನಿಸಿಕೊಳ್ಳತಕ್ಕವೇ – ಎನ್ನುತ್ತದೆ ಗೀತೆ. (ಯಜ್ಞ-ದಾನ-ತಪಸ್ಸುಗಳನ್ನೇ ಅಶ್ರದ್ಧೆಯಿಂದ ಮಾಡಿದಲ್ಲಿ ಅವೆಲ್ಲವೂ ಅಸತ್ ಎನಿಸಿಕೊಳ್ಳುತ್ತವೆ).

ಇವಿಷ್ಟರಲ್ಲಿ ಮೊದಲನೆಯ ಮೂರು ಅರ್ಥಗಳು ನಮಗಿಲ್ಲಿ ಪ್ರಕೃತ. “ಸತ್” ಎಂದರೆ ಇರುವಂತಹುದು. ಮೂರು ಕಾಲಗಳಲ್ಲೂ, ಎಂದರೆ ಹಿಂದೂ ಇಂದೂ ಮುಂದೂ, ಎಂದೆಂದೂ ಇರುವಂತಹುದು; ಅದೇ ಬ್ರಹ್ಮ. ಎಂದೇ ಅದೇ ಪ್ರಥಮಾರ್ಥ.

ಇನ್ನು ಸದ್-ಭಾವವೆಂದರೆ  ಇರುವುದೆಂದೆನಿಸಿಕೊಳ್ಳುವಿಕೆ; ಸಾಧು-ಭಾವವೆಂದರೆ ಒಳ್ಳೆಯದಾಗಿರುವಿಕೆ. ವಾಸ್ತವವಾಗಿ ’ಅಸ್ತಿ’ ಎಂಬುದರ ಧಾತುವಿನಿಂದಲೇ ಸತ್ ಎಂಬುದು ಬಂದಿರುವುದು. ಅಸ್ತಿ ಎಂದರೆ “ಇದೆ” ಎಂದರ್ಥ.

ನಾವು ಕಾಣುವ ಎಲ್ಲ ವಸ್ತುಗಳೂ/ವ್ಯಕ್ತಿಗಳೂ ಇಂದಲ್ಲ ನಾಳೆ ಬದಲಾಗುವಂತಹವೇ/ಮರೆಯಾಗುವಂತಹರೇ. (ನಾವೂ ಅಷ್ಟೇ). ಕೆಲವೇ ವಸ್ತುಗಳೇ ದೀರ್ಘಕಾಲ ಉಳಿಯುವಂತಹುವು. ಈಗಿದ್ದು ಮರುಕ್ಷಣಕ್ಕೆ ಮರೆಯಾಗುವುದನ್ನು ನಂಬುವುದೆಂತು? ಇಂದು ನಂಬಿಸಿ ನಾಳೆ ಮಾಯವಾಗುವವರನ್ನು ನೆಚ್ಚಲಾದೀತೇ, ಮೆಚ್ಚಲಾದೀತೇ? ಪ್ರೀತಿ-ವಿಶ್ವಾಸಗಳಾದರೂ ಚಿರಕಾಲ ಉಳಿಯುವಂತಾದಾಗಲೇ ಅವಲ್ಲಿ ನಂಬಿಕೆಯಿಡುವಂತಹುದು.

ಯಾವುದನ್ನು ನೆಚ್ಚಬಲ್ಲೆವೋ ಅದುವೇ ಒಳ್ಳೆಯದನ್ನಾಗಿಸುವುದು: ಯಾವುದು ಉಳಿಯುವುದೋ ಅದುವೇ ಒಳ್ಳೆಯದೂ ಆಗುವುದು. ಹೀಗಾಗಿ “ಉಳಿಯುವುದು”, ’’ಒಳ್ಳೆಯದು” ಎಂಬೆರಡಕ್ಕೂ ಅಂಟುಂಟು.

ಅಲ್ಲಿಗೆ, ಸಂಸ್ಕೃತದ ಸತ್ ಎಂಬುದರ ಅರ್ಥಗಳಾದ ಸದ್ಭಾವ-ಸಾಧುಭಾವಗಳಲ್ಲಿಯ ಅಂಟು-ನಂಟುಗಳೇ ಕನ್ನಡದ ಕನ್ನಡಿಯಲ್ಲಿ ಹೀಗೆ ಪ್ರತಿಫಲಿತವಾಗಿವೆಯೆಂದಾಯಿತು!

ಗೀತೆಯ ಅವಲೋಕನವಾಯಿತು. ಇನ್ನು ಉಪನಿಷತ್ತು ಏನು ಹೇಳುವುದೆಂಬುದನ್ನು ನೋಡೋಣ. ತ್ರಿಕಾಲ-ಸತ್ಯವು ಯಾವುದೋ, ಎಂದರೆ ಭೂತ-ವರ್ತಮಾನ-ಭವಿಷ್ಯತ್ತುಗಳಲ್ಲಿ ಯಾವುದು ಇರುವುದೋ, ಅದುವೇ ಬ್ರಹ್ಮವಷ್ಟೆ? ಆದ್ದರಿಂದ ’ಸತ್’ ಎನ್ನಿಸಿಕೊಳ್ಳುವ ಪದಾರ್ಥಗಳಲ್ಲೆಲ್ಲಾ ಅದುವೇ ಶ್ರೇಷ್ಠವಾದದ್ದು: ಸತ್ತಮವೇ ಅದು.

ಹಾಗಿರುವ ಅದನ್ನೇ ಯಾರಾದರೂ ಅಸತ್ ಎಂದುಕೊಂಡುಬಿಡುವುದಾದರೆ ಆತನೇ ಅಸತ್/ಅಸಂತನಾಗಿಬಿಡುತ್ತಾನೆ! – ಎನ್ನುತ್ತದೆ ತೈತ್ತಿರೀಯ. ಅರ್ಥಾತ್ ಇಲ್ಲವಾಗಿಬಿಡುತ್ತಾನೆ! ಪರಮ-ಸತ್ಯವನ್ನೇ ಅಲ್ಲಗಳೆಯುವಾತನು ತಾನುಳಿದಾನೇ?  ಹಾಗೆಂದ ಮಾತ್ರಕ್ಕೆ ತತ್-ಕ್ಷಣವೇ ಆತನು ಸತ್ತುಹೋಗಿಬಿಡುತ್ತಾನೆಂದಲ್ಲ; ಇದ್ದೂ ಇಲ್ಲವಾಗುತ್ತಾನೆಂದೇ ಅದರ ಅರ್ಥ. “ಆಟಕ್ಕುಂಟು, ಲೆಕ್ಕಕ್ಕಿಲ್ಲ” – ಎಂಬುದರ ಅರ್ಥ ಇದೇ. ಸತ್ ಎಂಬುದು ಹೋದವನನ್ನೇ ಸತ್ತುಹೋದವನು ಎನ್ನುವುದು!

ಇದಕ್ಕೆ ಪ್ರತಿಯಾಗಿ, ಸದಾ ಇರುವ ಸತ್ತನ್ನೇ ’ಅಸ್ತಿ’ ಎಂಬುದಾಗಿ ಯಾವನು ಅರಿತಿರುವನೋ, ಆತನನ್ನೇ ಸಂತನೆನ್ನುವರು (ಸಂತಮೇನಂ ತತೋ ವಿದುಃ) - ಎನ್ನುತ್ತದೆ ಉಪನಿಷತ್ತು.

ಈ ಸಂದರ್ಭದಲ್ಲಿ ಶ್ರೀರಂಗಮಹಾಗುರುಗಳು ಕೊಟ್ಟಿರುವ ಎಚ್ಚರವು ಅವಧೇಯ: "ಬ್ರಹ್ಮನ ಇರುವಿಕೆಯನ್ನು ಕಂಡು ಅರಿತವನನ್ನೇ ಸಂತನೆಂದು ಜ್ಞಾನಿಗಳು ತಿಳಿಯುತ್ತಾರೆ. ಅಂತಹವನೇ ನಿಜವಾದ ಆಸ್ತಿಕ".

ಅರ್ಥಾತ್, ಆ ಅನುಭವವೇ ಉಂಟಾಗದವರು, ಅಸ್ತಿಯೆಂದು ಬಾಯ್ಮಾತಿಗಷ್ಟೇ ಹೇಳುವವರು, ಒಂದರ್ಥದಲ್ಲಿ ನಾಸ್ತಿಕರೇ ಸರಿ; ಔಪಚಾರಿಕವಾಗಿಯಷ್ಟೆ ಅವರು ಆಸ್ತಿಕರು!

ಉಪನಿಷತ್ತು ಹೇಳುವ ಅರ್ಥದಲ್ಲಿ ಸಂತನೆನಿಸಿಕೊಳ್ಳುವುದು ಸುಲಭದ ಮಾತೇನಲ್ಲ. ಶ್ರೀರಂಗಮಹಾಗುರುಗಳು ತಿಳಿಸುವ ಲೆಕ್ಕದಲ್ಲಿ ಆಸ್ತಿಕರಾಗಬೇಕಾದರೆ ನಿಜವಾದ ಸಾಧನೆಯೇ ಬೇಕು. ಅಸ್ತಿಯೆಂಬ ಮತಿಯು ವಾಸ್ತವವಾಗಿ ತನ್ನಲ್ಲಿಯೇ ಉಂಟಾದವನೇ ನಿಜವಾದ ಆಸ್ತಿಕ. ಅನುಭವದಿಂದ ಬಲ್ಲವನೇ ನಿಜವಾಗಿ ಬಲ್ಲನಲ್ಲವೇ? ಮತ್ತೊಬ್ಬರ ಹೇಳ್ಕೆ-ಕೇಳ್ಕೆಮಾತ್ರಗಳಿಂದಲ್ಲ.

ಜಗತ್ ಎಂಬ ಪದಕ್ಕೇ “ಸದಾ ಬದಲಾಗುತ್ತಿರುವುದು” ಎಂಬ ಅರ್ಥವಿದೆ. ಇದಕ್ಕೆ ಪ್ರತಿಯಾಗಿ ಎಂದೂ ಬದಲಾಗದೆ ಇರುವುದೇ ಸತ್ ಎನಿಸುವುದು. ಸನಾತನ/ಸದಾತನವೆಂದರೂ ಅದುವೇ.

ಅಂತಹ ಮಹತ್ತಾದ ಸದ್ವಸ್ತುವನ್ನು ಸ್ವಾನುಭವದಿಂದ ತನ್ನ ಸ್ವಾಂತಕ್ಕೆ(ಅಂತಃಕರಣಕ್ಕೆ) ತಂದುಕೊಂಡವನೇ ಸಂತ – ಎನ್ನುವುದೇ ಉಪನಿಷದುಕ್ತಿಯ ಸದಾಶಯವಲ್ಲವೇ?

ಸೂಚನೆ: 3/07//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.

ಪ್ರಕೃತಿ - ಋತ - ಸತ್ಯ (Prakruti - Ruta - Sathya)


     
ಲೇಖಕರು: ಎಂ. ಆರ್. ಭಾಷ್ಯಮ್

ಪ್ರತಿಕ್ರಿಯಿಸಿರಿ (lekhana@ayvm.in)


Screenshot 2026-07-05 140527.png


ನಾವು ನಮ್ಮ ಪರಿಸರವನ್ನು ಗಮನಿಸುತ್ತಿರುತ್ತೇವೆ. ಮುಂಜಾವಿನಲ್ಲಿ ಸೂರ್ಯೋದಯ. ನಂತರ ಮಧ್ಯಾಹ್ನ ಸಂಜೆ, ರಾತ್ರಿಗಳುಮತ್ತೊಂದು ದಿನದ ಉದಯ. ಇದು ದೈನಿಕ ಚಕ್ರ. ಒಂದು ವರ್ಷ ತೆಗೆದುಕೊಂಡರೆ ವಸಂತ, ಬೇಸೆಗೆ, ವರ್ಷಾ, ಶರದ್, ಹೇಮಂತ, ಶಿಶಿರ ವೆಂಬ 6 ಋತುಗಳು. ಇನ್ನೊಂದು ವರ್ಷ, ಮತ್ತೊಂದು ಆವೃತ್ತ. ಚಂದ್ರಮನ ಕ್ಷಯ-ವೃದ್ಧಿಗಳು, ಸಮುದ್ರದ ಉಬ್ಬರ-ಇಳಿತಗಳು, ಉತ್ತರ-ದಕ್ಷಿಣಾಯನಗಳು, ತಾರೆಗಳ ಹಾಗೂ ತಾರಾಮಂಡಲಗಳ ಚಲನೆ - ಇವೆಲ್ಲವೂ ಬ್ರಹ್ಮಾಂಡದ ರಂಗಮಂಟಪದಲ್ಲಿನ ವಾದ್ಯಗೋಷ್ಠಿಗಳ  ಮೇಳನದಂತೆ  ಮತ್ತೆ ಮತ್ತೆ ಪುನರಾವರ್ತಿಸುತ್ತವೆ. ಗಮನಿಸಿದರೆ, ಒಂದೊಂದು ಆವರ್ತನೆಯೂ ಅನೇಕ ಒಳ-ಆವರ್ತನೆಗಳನ್ನೊಳಗೊಂಡಿರುವುದು ಕಾಣಬರುತ್ತದೆ.

ನಮ್ಮ ದೈನಂದಿನ, ವಾರ್ಷಿಕ, ಜೀವನದ   ಚಟುವಟಿಕೆಗಳನ್ನೂ    ದಿನ- ರಾತ್ರಿ, ಋತುಗಳ ಜೊತೆ ಅಳವಡಿಕೊಳ್ಳುತ್ತೇವೆ. ನಾವೇ ಏಕೆ, ಪಶು - ಪಕ್ಷಿಗಳ ಕಾರ್ಯ ವ್ಯವಸ್ಥೆ ಚಕ್ರಗಳ ಜೊತೆ ಮೇಳೈಸಿದೆ. ವಲಸೆ ಬರುವುದು, ಗೂಡು ಕಟ್ಟಿ ಮೊಟ್ಟೆ ಇಕ್ಕಿ ತಮ್ಮ ಪೀಳಿಗೆಯನ್ನು ಮುಂದುವರಿಸುವುದು ಎಲ್ಲವೂ ಪ್ರಕೃತಿ ಚಕ್ರಗಳೊಡನೆ ಮೇಳೈಸಿದೆ. ಹಾಗೆಯೇ  ಗಿಡಗಳ ಚಿಗುರು, ಹೂಪೂಸುವುದು ಋತುಗಳೊಡನೆ ಜೋಡಿಸಿಕೊಂಡಿದೆ. ನೀರು ಆವಿಯಾಗಿ ಅಂಬರಕ್ಕೆ ಮತ್ತು ಮೋಡದಿಂದ ಮಳೆ ಭೂಮಿಗೆ. ಹಾಗೆಯೇ ನದಿಗಳು ಉಕ್ಕಿ ಹರಿದು ಶಾಂತಗೊಳ್ಳುತ್ತವೆ. ಎಲ್ಲವೂ ಪ್ರಕೃತಿಚಕ್ರದ ಮೇಳನದೊಂದಿಗೆ. ಇಡೀ ಪರಿಸರವನ್ನು  ಗಮನಿಸಿದಾಗ, ತೈಲವೆರದ ಯಂತ್ರದಂತೆ, ಒಂದೇ ನಮೂನೆಯ ಅನಂತ-ನಿರಂತರ- ಪುನರಾವರ್ತನೆಯ ಒಂದು ಉತ್ಕೃಷ್ಟರಚನೆ ಕಂಡುಬರುತ್ತದೆ

  ಉತ್ಕೃಷ್ಟರಚನೆಯನ್ನು ಭಾರತೀಯಪರಂಪರೆಯ ವಿಚಾರಧಾರೆಯಲ್ಲಿಪ್ರಕೃತಿಎಂದು ಕರೆಯುತ್ತಾರೆ (ಪ್ರ: ಪ್ರಕೃಷ್ಟ-ಉತ್ಕೃಷ್ಟ, ಕೃತಿ: ರಚನೆ. )  ಭಾರತೀಯ ಮಹರ್ಷಿಗಳು  ಕಂಡುಕೊಂಡಂತೆ ಇವು ವಿಶ್ವವನ್ನು ರಚಿಸಿದ ಬೃಹತ್ ಶಕ್ತಿಯಾದ ಬ್ರಹ್ಮವಸ್ತುವಿನ  ಯೋಜನೆ. ಅವರ ಅನುಸಾರವಾಗಿ  ಬ್ರಹ್ಮವಸ್ತು ತಾನು ತಾನಾಗಿಯೇ  ಒಂದೇ ಇದ್ದಿತು. ಅದಕ್ಕೆತನ್ನಲ್ಲಿ  ಸುಪ್ತವಾಗಿರುವ ಎಲ್ಲವನ್ನೂ ಪ್ರದರ್ಶಿಸಬೇಕೆಂಬ ಇಚ್ಛೆ ಹುಟ್ಟಿತು ಇಚ್ಛೆಯಿಂದ ತನ್ನನ್ನು ತಾನು ಎರಡಾಗಿ ವಿಂಗಡಿಸಿಕೊಂಡಿತು ಒಂದುಪುರುಷ’, ಮತ್ತೊಂದುಪ್ರಕೃತಿ’. ‘ಪುರುಷ’  ಬ್ರಹ್ಮಾಂಡವೆಂಬ ಪುರಿಯಲ್ಲಿ ವಾಸಮಾಡುವವನು  ‘ಪುರಿ ಶೇತೇ ಇತಿ ಪುರುಷಃ ‘  ಆಗಲೇ ಹೇಳಿದಂತೆ  ‘ಪ್ರಕೃತಿಎಂದರೆಪ್ರಕೃಷ್ಟ ಕೃತಿಅಥವಾಉತ್ಕೃಷ್ಟವಾದ ಕೃತಿ.’  ಪುರುಷ ಪ್ರಕೃತಿಯಲ್ಲಿ ಪ್ರವೇಶಿಸಿತು, ಬೀಜ -ಭೂಮಿಯಲ್ಲಿ ಹೊಕ್ಕಂತೆ. ಆಗ ನಾವು ಕಾಣುವ ಮತ್ತು  ಕಾಣದಿರುವ ಬ್ರಹ್ಮಾಂಡದ ಸೃಷ್ಟಿ ಆಯಿತು. ಪುರಷ ತಾನೇತಾನಾಗಿ ತನ್ನಲ್ಲಿರುವ ಎಲ್ಲವನ್ನು ಅಡಗಿಸಿಕೊಂಡಿರುವ  ಸ್ಥಿತಿಯನ್ನುಋತವೆಂದರೆ  ಮತ್ತು ಅದರ ವಿಕಸಿತ ಸ್ಥಿತಿಸತ್ಯ’. ಇದನ್ನು ನಾವುಕಾಣುವ ಚಕ್ರದ ಎಲ್ಲೆಡೆಯಲ್ಲೂ ಅನ್ವಯಿಸಬಹುದು

ಉದಾಹರಣೆಗಾಗಿ ಒಂದು ಬೀಜವನ್ನು ತೆಗೆದುಕ್ಕೊಳ್ಳುವ. ಅದನ್ನು ಭೂಮಿಯಲ್ಲಿ  ನೆಟ್ಟು, ಅದು  ತನ್ನ ನೈಜತೆಯನ್ನು ಉಳಿಸಿಕೊಂಡು ಬೆಳೆದರೆ  ಮೊಳಕೆ, ಕಾಂಡ, ಕೊಂಬೆ - ರಂಬೆಗಳು, ಎಲೆ - ಹೂವು - ಕಾಯಿ - ಫಲವಾಗಿ ಕೊನೆಗೆ ಬೀಜದಲ್ಲಿಯೇ ಪರ್ವ್ಯಸನಗೊಳ್ಳುತ್ತದೆ. ಅಂದರೆ ಇಡೀ ವೃಕ್ಷದ ರಚನೆಬೀಜದಲ್ಲಿ ಅಡಗಿದೆ. ಹಾಗೆಯೇ ಇಡೀ ಸೃಷ್ಟಿಯಲ್ಲೂ  ಸಹ. ಭಾರತೀಯಪರಂಪರೆಯ ವಿಚಾರಧಾರೆಯಲ್ಲಿ ತನ್ನಲ್ಲಿಯೇ ಸುಪ್ತವಾಗಿರುವ ಶಕ್ತಿಯನ್ನು ಧರಿಸಿರುವ ನೈಜಸ್ವಭಾವವನ್ನುಋತವೆಂದು ಕರೆದರೆ, ಅದರ ಅಭಿವ್ಯಕ್ತಿಸತ್ಯ. ’  ‘ಬೀಜಋತವಾದರೆ, ಅದರ ಅಭಿವ್ಯಕ್ತಿ  ‘ವೃಕ್ಷಸತ್ಯಇದನ್ನು ಸಮಗ್ರ  ಸೃಷ್ಟಿಗೆ ಅನ್ವಯಿಸಬಹುದು. ಶ್ರೀರಂಗಮಹಾಗುರುಗಳು ಹೇಳುವಂತೆ  “ಸೃಷ್ಟಿಯು  ಕಾಲ-ದೇಶ ರಂಗಗಳಲ್ಲಿ  ನಡೆಯುವ ಆವೃತ್ತಗಳ ಅಭೂತಪೂರ್ವ ನೃತ್ಯ. ಅವುಗಳ ಉಗಮಸ್ಥಾನದಲ್ಲಿರುವುವು ಋತ-ಸತ್ಯಗಳು. ಇವೆರಡೂ ಪರಂಬ್ರಹ್ಮ, ‘ಋತಮ್ ಸತ್ಯಂ ಪರಂಬ್ರಹ್ಮ ಪುರುಷಮ್ ಕೃಷ್ಣ ಪಿಂಗಳಂ..’ ಉಪನಿಷದ್ ವಾಣಿ.”

ಸೂಚನೆ: 3/07/2024 ರಂದು ಈ ಲೇಖನ ವಿಜಯ ಕರ್ನಾಟಕದ ಭೋದಿವೃಕ್ಷದಲ್ಲಿ ಪ್ರಕಟವಾಗಿದೆ.