Sunday, July 19, 2026

ಅಷ್ಟಾಕ್ಷರೀ 110A ಸ್ತನ ಇವಾವಲಂಬತೇ (Astakshara 110A)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

.


image.png

ಹಿರಿದಾದ ಆನಂದಕ್ಕೊಯ್ಯುವ ಕಿರಿದಾದ ಅಂಗ

ಸಾಧಾರಣವಾಗಿ ಸ್ತನವೆಂದೊಡನೆ ಸ್ಮರಣೆಗೆ ಬರುವುದು ಸ್ತ್ರೀಶರೀರಾಂಗವೇ. ಆ ಪದವನ್ನು ಹೇಳುವುದೇ ಅಶ್ಲೀಲವೆಂದು ಭಾವಿಸಿಬಿಡುವವರೂ ಉಂಟು. ಆದರೆ ಮೊಲೆಗೂಸು, ಮೊಲೆವಾಲು - ಎನ್ನುವಾಗ ಅಶ್ಲೀಲತೆಯೆಲ್ಲಿ ತೋರೀತು?

ಗಳಸ್ಯ ಕಂಠಸ್ಯ

ಹಾಗೆಯೇ "ಅಜಾ-ಗಲ-ಸ್ತನ" ಎಂಬ ಪ್ರಯೋಗವೂ ಇದೆ. ಹೋತನ ಕತ್ತಿನಲ್ಲಿ ಎರಡು ಮಾಂಸದ ತುಂಡುಗಳು ಕಾಣುವುವಲ್ಲವೇ? ಗಲವೆಂದರೆ ಕತ್ತು. ಆಪ್ತಸ್ನೇಹಿತರನ್ನು "ಗಳಸ್ಯ ಕಂಠಸ್ಯ" ಎನ್ನುವರು. ಏನು ಹಾಗೆಂದರೆ? ಒಬ್ಬರ ಕತ್ತಿಗೆ ಮತ್ತೊಬ್ಬರ ಕತ್ತು ಸೋಂಕಿರುವುದು. ಗಳ-ಕಂಠಗಳು ಸಮಾನಾರ್ಥಕಗಳು. ಅತಿಶಯವಾದ ಪ್ರೀತಿಯಿದ್ದಾಗ ಒಬ್ಬರ ಕತ್ತು ಮತ್ತೊಬ್ಬರ ಕತ್ತನ್ನು ಒತ್ತುವುದು - ಮಕ್ಕಳನ್ನು ಮುದ್ದಾಡುವಾಗಾಗುವಂತೆ. ಅಜ/ಜಾ ಎಂದರೆ ಆಡು/ಹೋತ. ಅದರ ಕತ್ತಿನಲ್ಲಿ ಜೋತುಬೀಳುವ, ಮೊಲೆಗಳಂತಿರುವ ಮಾಂಸಪಿಂಡಗಳಿಗೆ ಏನು ಕೆಲಸ? ಏನೂ ಇ(ದ್ದಂತಿ)ಲ್ಲ!

ನಮಗೆಲ್ಲ ಈ ಮನುಷ್ಯಜನ್ಮವು ಸಿಕ್ಕಿರುವುದು ಏತಕ್ಕೆ? ಧರ್ಮ-ಅರ್ಥ-ಕಾಮ-ಮೋಕ್ಷಗಳೆಂಬ ನಾಲ್ಕೂ ಪುರುಷಾರ್ಥಗಳನ್ನು ಸಾಧಿಸಲಿಕ್ಕೆ. ಕೊನೆಯ ಪಕ್ಷ ಒಂದನ್ನಾದರೂ ಸಾಧಿಸಬೇಡವೇ? ಯಾವನು ಒಂದನ್ನೂ ಸಾಧಿಸನೋ, ಅಂತಹವನ ಜನ್ಮವು "ಅಜಾ-ಗಲ-ಸ್ತನದಂತೆ", ಅರ್ಥಾತ್ ನಿರರ್ಥಕವಾದದ್ದು - ಎನ್ನುತ್ತದೆ ಹಿತೋಪದೇಶ.

ತಾಯಿಯ ಸ್ತನ್ಯವನ್ನು ಪಾನಮಾಡುವ ಮಗುವು ಮುಂದೆ ಗೋಸ್ತನದಿಂದ ಬರುವ ದುಗ್ಧವನ್ನು ಕುಡಿಯುವುದಲ್ಲವೇ? ಧರಿತ್ರಿಯೇ ಗೋವು; ಅದರ ನಾಲ್ಕು ಸಮುದ್ರಗಳೇ ನಾಲ್ಕು ಮೊಲೆಗಳು – ಎಂಬುದಾಗಿ ಕಾಳಿದಾಸನು ರೂಪಿಸಿದ್ದಾನೆ.

ಕಿರುನಾಲಿಗೆಯಿಂದ ಕೇಶಾಂತದವರೆಗೆ

ಸ್ತ್ರೀಯರಿಗೆ ಮಾತ್ರವಲ್ಲದೆ, ಪುರುಷರಿಗೂ ಸ್ತನವನ್ನು ಹೋಲುವ ಅಂಗವೊಂದಿರುವುದು. ಅದೂ ಬಾಯೊಳಗೇ. ಅದಕ್ಕೆ ವಿಶೇಷವಾದ ಆಧ್ಯಾತ್ಮಿಕವಾದ ಬೆಲೆಯಿರುವುದೆಂದೇ ಆ ಬಗ್ಗೆ ಇಲ್ಲಿ ಮಾತು.

ಸ್ತನದ ಹಾಗಿದ್ದು ಜೋತುಬಿದ್ದಿರುವುದು - ಎಂಬ ಉಪಮಾನವನ್ನು ತೈತ್ತಿರೀಯೋಪನಿಷತ್ತು ಕೊಡುತ್ತದೆ. ಇಲ್ಲಿಯ ಸ್ತನದ ಆಕಾರವು ಅಜಾಗಲ-ಸ್ತನದಂತೆ ಅಥವಾ ಗೋ-ಸ್ತನದಂತೆ – ಎಂದೇ ವ್ಯಾಖ್ಯಾಕಾರರು ವಿವರಿಸಿರುವುದು. "ಮೊಲೆಯಂತೆ" ಎಂದರೂ "ಮೊಲೆಯ ತೊಟ್ಟಿನಂತೆ" ಎನ್ನುವುದೇ ಲೇಸೆಂದೂ ವ್ಯಾಖ್ಯೆಯಿದೆ.

ಬಾಯೊಳಗೆ ಹಿಂಭಾಗದಲ್ಲಿ ಜೋತಾಡುವ ಕಿರುನಾಲಿಗೆಯನ್ನೇ ಇಲ್ಲಿ ಹೇಳಿರುವುದು. ಮೇಲ್ದವಡೆ-ಕೆಳದವಡೆಗಳ ನಡುವೆ ಇದಿರುವುದನ್ನು ಹೇಳಿ, ಅಧ್ಯಾತ್ಮದಲ್ಲಿ ಅದರ ಪಾತ್ರವನ್ನು ಉಪನಿಷತ್ತು ತಿಳಿಸುವುದು.

ಇಲ್ಲಿ ಹೇಳಿರುವುದೆಲ್ಲಾ ಯೋಗಶಾಸ್ತ್ರಕ್ಕೆ ಸಂಬಂಧಿಸಿರುವಂತಹುದು. ಹೃದಯದಿಂದ ಹೊರಟ ಸುಷುಮ್ನಾ-ನಾಡಿಯು ಈ ಮೊಲೆತೊಟ್ಟಿನಂತಿರುವ ಅಂಗದ ನಡುವೆಡೆಯ ಮೂಲಕ ಹಾದುಹೋಗುವುದು. 

ಇದು ಹೋಗಿ ಸೇರುವುದು ಕೇಶಾಂತಸ್ಥಾನಕ್ಕೆನ್ನುತ್ತದೆ, ಉಪನಿಷತ್ತು.

ತಲೆಗೂದಲೊಂದನ್ನು ಹಿಡಿದುಕೊಳ್ಳುತ್ತೇವೆನ್ನಿ. ಅದರ ಮತ್ತೊಂದಂಚೆಂದರೆ ಅದರ ಬುಡವೇ ಸರಿ. ಕೂದಲುಗಳೆಲ್ಲವೂ ಯಾವ ಸ್ಥಾನವನ್ನೇ ಕೇಂದ್ರವನ್ನಾಗಿಸಿಕೊಂಡಿರುವಂತೆ ಕಾಣುತ್ತದೋ ಆ ಭಾಗವನ್ನಿಲ್ಲಿ ಸೂಚಿಸಿದೆ: ನೆತ್ತಿಯ ಭಾಗವದು. ಬ್ರಹ್ಮರಂಧ್ರ-ಸ್ಥಾನವೆಂದರೂ ಅದೇ.

ಹೀಗೆ ಮೇಲಿನ-ಕೆಳಗಣ ದವಡೆಗಳ ಮಧ್ಯಸ್ಥಾನದ ಮೂಲಕ ಹಾದು ಹೋಗುವ ಸುಷುಮ್ನಾನಾಡಿಯು ಎಡ-ಬಲ-ಶೀರ್ಷ-ಕಪಾಲಗಳ ಮಧ್ಯಸ್ಥಾನದವರೆಗೂ ಹೋಗುವುದು.

ಚರ್ತುರ್ಥಾವಸ್ಥೆ-ಚತುರ್ಥಪುರುಷಾರ್ಥ

ಚರಮವೂ ಪರಮವೂ ಆದ, ಎಂದರೆ ಕೊನೆಯದೂ ಶ್ರೇಷ್ಠತಮವೂ ಆದ, ಮೋಕ್ಷವೆಂಬ ನಾಲ್ಕನೆಯ ಪುರುಷಾರ್ಥವನ್ನು ಹೊಂದುವವನು ಈ ಹಾದಿಯ ಮೂಲಕವೇ ಹಾದುಹೋಗುವುದು.

ಮನುಷ್ಯನಿಗೆ ನಾಲ್ಕು ಅವಸ್ಥೆಗಳುಂಟು - ಜಾಗ್ರತ್, ಸ್ವಪ್ನ, ಸುಷುಪ್ತಿ ಹಾಗೂ ತುರೀಯ - ಎಂದು. ತುರೀಯಾವಸ್ಥೆಯನ್ನೇ ಸಮಾಧಿಸ್ಥಿತಿಯೆನ್ನುವುದು; ಅದುವೇ ಮೋಕ್ಷಸ್ಥಿತಿಯೂ. ಹೀಗಾಗಿ ಈ ಚರ್ತುರ್ಥಾವಸ್ಥೆಯಲ್ಲೇ ಚತುರ್ಥಪುರುಷಾರ್ಥವೂ ಸಿದ್ಧಿಸುವುದು. ಚತುರ್ಥವೆಂದರೆ ನಾಲ್ಕನೆಯದು.

ವಾಂತಿ-ಭ್ರಾಂತಿ-ಶಾಂತಿ

ಈ ಕಿರುನಾಲಗೆಯ ಮಹತ್ತ್ವವನ್ನು ಯೋಗಿವರ್ಯರಾದ ಶ್ರೀರಂಗಮಹಾಗುರುಗಳು ವಾಕ್-ಚಮತ್ಕಾರ-ಯುಕ್ತವಾಗಿಯೂ ತಾತ್ತ್ವಿಕವಾಗಿಯೂ ಹೀಗೆ ಚಿತ್ರಿಸಿರುವರು: "ಕಿರುನಾಲಿಗೆಯು ತನ್ನ ಜಾಗದಿಂದ ಸರಿದರೆ ವಾಂತಿ; ಅದರ ಮರ್ಮ ತಿಳಿಯದಿದ್ದರೆ ಭ್ರಾಂತಿ; ಮರ್ಮ ತಿಳಿದರೆ ಪರಮಶಾಂತಿ."

ಕಿರುನಾಲಿಗೆಗೇನಾದರೂ ಮುಟ್ಟಿತೋ ವಾಂತಿಯಾಗುವುದು ಸಿದ್ಧ! ಇನ್ನು ಕಿರುನಾಲಿಗೆಯ ಮಹತ್ತ್ವವನ್ನರಿತುಕೊಳ್ಳದೆ, ಅದಕ್ಕೇನು ಕೆಲಸವೆಂದು ಹಾಸ್ಯಮಾಡುವುದು ಭ್ರಮೆಯಲ್ಲದೆ ಮತ್ತೇನು? ಭ್ರಮೆ-ಭ್ರಾಂತಿಗಳು ಪರ್ಯಾಯಗಳು.

ಆಧ್ಯಾತ್ಮಿಕವಾಗಿ ಅತಿಮುಖ್ಯವಾದ ಸುಷುಮ್ನಾ ನಾಡಿಯ ಮಾರ್ಗವದು – ಎಂಬುದು ಯೋಗಿಗಳಿಗಷ್ಟೇ ಗೋಚರವಾಗುವುದು. ಮುಂದೆಯೂ ಯೋಗಗ್ರಂಥಗಳಲ್ಲಿ ಲಂಬಿಕಾಯೋಗವೆಂಬುದು ರೂಪುಗೊಂಡಿರುವುದು ಇದನ್ನು ಆಧರಿಸಿಯೇ.

ಲೋಕವ್ಯವಹಾರದಲ್ಲಿ ಮಾತನಾಡಲೂ, ರುಚಿ ನೋಡಲೂ ನಮ್ಮ ನಾಲಿಗೆಯನ್ನು ಬಳಸುತ್ತೇವೆ; ಆದರೆ ಅದನ್ನೇ ಹಿಂದಿರುಗಿಸಿ, ಯೋಗಕ್ರಮದಿಂದ  ಕಿರುನಾಲಿಗೆಗೆ ತಾಕಿಸುವಂತಾದರೆ ಅಮೃತಾಸ್ವಾದನೆಗೊಯ್ಯುವುದು.  

ಹಿಮ್ಮುಖತೆಯು ಸೂಸುವ ಪೀಯೂಷ!

ಹೀಗಾಗಿ ಕಿರುನಾಲಿಗೆಯೆಂಬುದು ಕೆಲಸವಿಲ್ಲದ ಮಾಂಸಪಿಂಡವಲ್ಲ. ಈ ಅಂತರಂಗವು, ಎಂದರೆ ಒಳಗಣ ಅಂಗವು, ಅಂಗಿಯೆನಿಸುವ ಆತ್ಮನನ್ನೇ, ಆತ್ಮಕ್ಕೂ ಆತ್ಮವಾದ ಪರಮಾತ್ಮನನ್ನೇ, ಹೊಂದಿಸುವ ಅಂಗವಾಗಿದೆ – ಎಂದೆಚ್ಚರಿಸುವುದೇ ಶ್ರೀರಂಗಮಹಾಗುರುಗಳ ಮಾತಿನ ಆಶಯ.

ತಾಯಿಯ ಸ್ತನವು ಅಮೃತದಂತಹ ಹಾಲನ್ನೀಯುವುದು. ಆದರೆ ಸ್ತನದಂತಿರುವ ಈ ಕಿರುನಾಲಿಗೆಯು ಸಾಕ್ಷಾದಮೃತವನ್ನೇ ಸೂಸಬಲ್ಲುದು!