Sunday, September 27, 2026

ವ್ಯಾಸ ವೀಕ್ಷಿತ 207 ಭೀಷ್ಮರು ಯುಧಿಷ್ಠಿರನಿಗಿತ್ತ ಉತ್ತರ (Vyaasa Vikshita 207)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಭೀಷ್ಮರು ಯುಧಿಷ್ಠಿರನಿಗಿತ್ತ ಉತ್ತರ, ಶಿಶುಪಾಲ ಮಾಡಿದ ಭೀಷ್ಮನಿಂದೆ

ಅತ್ತ ಶಿಶುಪಾಲನು ಅಲ್ಲಿ ನೆರೆದಿದ್ದ ರಾಜರನ್ನು ಕೆರಳಿಸಿದ್ದನು; ಇತ್ತ ಆರಂಭಿಸಿದ್ದ ಯಾಗವೂ ಪೂರ್ಣಗೊಳ್ಳಬೇಕಿತ್ತಷ್ಟೆ. ಇವುಗಳ ಬಗ್ಗೆ ಯುಧಿಷ್ಠಿರನು ಭೀಷ್ಮರನ್ನು ಮಾರ್ಗದರ್ಶನ ಕೇಳಿದ್ದನು. ಯುಧಿಷ್ಠಿರನ ಪ್ರಶ್ನೆಗೆ ಉತ್ತರವಾಗಿ ಆಗ ಭೀಷ್ಮರು ಇಂತೆಂದರು:

“ಕುರುವಂಶ-ವೀರನಾದ ಯುಧಿಷ್ಠಿರನೇ, ನೀ ಹೆದರಬೇಡ. ನಾಯಿಯು ಸಿಂಹವನ್ನು ಕೊಂದುಬಿಡಬಲ್ಲುದೇ? ಶಿವವಾದ ಪಥವು ಯಾವುದೋ, ಎಂದರೆ ಕಲ್ಯಾಣಮಯವಾದ ಮಾರ್ಗವು ಯಾವುದೋ, ಅದನ್ನೇ ನಾವು ಮೊದಲೇ ವರಿಸಿಯಾಗಿದೆ: ಅರ್ಥಾತ್ ಶ್ರೀಕೃಷ್ಣನನ್ನೇ ಆಶ್ರಯಿಸಿದ್ದಾಗಿದೆ.

ಈಗಾಗಿರುವುದೇನು? ಸಿಂಹವು ತನ್ನ ಪಾಡಿಗೆ ಮಲಗಿರಲು, ಅದಿರುವೆಡೆಗೆ ನಾಯಿಗಳು ಬಂದಂತಾಗಿದೆ. ಅವು ಮಾಡುವುದೇನು, ಬೊಗಳುವುದಷ್ಟೆ ತಾನೆ? ಹಾಗೆಯೇ ಈ ರಾಜರುಗಳೂ.

ಎಲ್ಲಿಯವರೆಗೆ ಸಿಂಹವು ಎದ್ದಿರುವುದಿಲ್ಲವೋ ಅಲ್ಲಿಯವರೆಗೆ ಕೋಪಗೊಂಡ ನಾಯಿಗಳು ಸಿಂಹದ ಸನ್ನಿಧಿಯಲ್ಲಿ ಬೊಗಳುತ್ತವೆ.

ಅಚ್ಯುತನು ಮಲಗಿರುವ ಸಿಂಹದ ಹಾಗೆ. ಆದರೆ ಈ ವಿವೇಕರಹಿತನಾದ ಶಿಶುಪಾಲನೋ, ಈ ರಾಜರುಗಳನ್ನೇ ಸಿಂಹದಂತಾಗಿಸಿಬಿಡುವೆ – ಎಂದುಕೊಂಡಿದ್ದಾನೆ! ಹೀಗಾಗಿ, ಈ ರಾಜರನ್ನೆಲ್ಲಾ ಯಮಸದನಕ್ಕೇ ಸರ್ವಪ್ರಕಾರದಲ್ಲೂ ಒಯ್ಯಲು ಬಯಸುತ್ತಿದ್ದಾನೆಯೇ ಸರಿ.

ಅಲ್ಲಿಗೆ, ಶಿಶುಪಾಲನೊಳಗಿರುವ ತೇಜಸ್ಸು ಯಾವುದುಂಟೋ ಅದನ್ನು ಹಿಂತೆಗೆದುಕೊಂಡುಬಿಡಲು ಕೃಷ್ಣನು ಅಪೇಕ್ಷೆ ಪಟ್ಟಿರುವನೆಂದೇ!

ಧೀಮಂತರಲ್ಲಿ ಶ್ರೇಷ್ಠನಾದ ಯುಧಿಷ್ಠಿರನೇ, ಈ ಶಿಶುಪಾಲನ ಹಾಗೂ ಸರ್ವರಾಜರ ಬುದ್ಧಿಯೂ ವಿಪ್ಲುತವಾಗಿದೆ, ಎಂದರೆ ವಿಪರ್ಯಯಗೊಂಡಿದೆ -ಎಂದರಿತುಕೋ. ನರಶ್ರೇಷ್ಠನಾದ ಕೃಷ್ಣನು ಯಾರು ಯಾರನ್ನು ಒಳಕ್ಕೆ ತೆಗೆದುಕೊಂಡುಬಿಡಲು ಬಯಸುವನೋ ಅಂತಹವರ ಬುದ್ಧಿಯು ವಿಪ್ಲವಗೊಳ್ಳುವುದು - ಈ ಶಿಶುಪಾಲನಿಗೆ ಹೇಗಾಗಿದೆಯೋ ಹಾಗೆ.

ಯುಧಿಷ್ಠಿರನೇ, ಲೋಕದಲ್ಲಿ ನಾಲ್ಕುವಿಧವಾದ ಜೀವಿಗಳುಂಟಲ್ಲವೇ - ಸ್ವೇದಜ, ಅಂಡಜ, ಉದ್ಭಿಜ್ಜ, ಹಾಗೂ ಜರಾಯುಜ – ಎಂಬುದಾಗಿ? ಅವೆಲ್ಲವುಗಳ ಪ್ರಭವ-ನಿಧನಗಳ, ಎಂದರೆ ಹುಟ್ಟು-ಸಾವುಗಳ, ಪ್ರಭುವೇ ಶ್ರೀಕೃಷ್ಣನು.”


ಭೀಷ್ಮರ ಈ ಮಾತುಗಳನ್ನು ಕೇಳಿದ ಶಿಶುಪಾಲನು ರೂಕ್ಷವಾದ, ಎಂದರೆ ಒರಟಾದ ಈ ಮಾತುಗಳನ್ನಾಡಿದನು:

“ಅಯ್ಯಾ ಭೀಷ್ಮ, ನೀನು ವೃದ್ಧನಾಗಿದ್ದೂ ಬಹುವಿಧವಾದ ಬೆದರಿಕೆಗಳಿಂದ ಎಲ್ಲ ರಾಜರನ್ನೂ ಹೆದರಿಸುತ್ತಿರುವೆಯೆಲ್ಲಾ! ಕುರುಕುಲಕ್ಕೇ ಕಳಂಕಪ್ರಾಯನಾದವನೇ! ಇದರಿಂದ ನಿನಗೇತಕ್ಕೆ ನಾಚಿಕೆಯಾಗುತ್ತಿಲ್ಲ?

ನೀನು ತೃತೀಯ-ಪ್ರಕೃತಿಯಲ್ಲಿರುವವನಷ್ಟೆ? ಎಂದರೆ ಗಂಡಸೂ ಹೆಂಗಸೂ ಅಲ್ಲದ ಸ್ಥಿತಿಯಲ್ಲಿ, ಅರ್ಥಾತ್  ವಾರ್ಧಕ್ಯದಲ್ಲಿ, ಇರುವವನಷ್ಟೆ? ಹಾಗಿರುವ ನೀನು ಧರ್ಮರಹಿತವಾದ ಮಾತನ್ನಾಡುವುದು ಯುಕ್ತವೇ? ಹೇಳು, ಓ ಕುರುಗಳಲ್ಲೆಲ್ಲ, ಎಂದರೆ ಕುರುವಂಶದವರಲ್ಲೆಲ್ಲ, ಹಿರಿಯನಾದ ಭೀಷ್ಮನೇ!

ನೀನು ದರ್ಪಶಾಲಿಯೂ ಮೂರ್ಖನೂ ಆಗಿರುವೆ. ಕೇಶವನನ್ನು ಹೊಗಳಬಯಸುವೆಯೆಲ್ಲಾ, ನಿನ್ನ ನಾಲಿಗೆಯು ನೂರಾಗಿ ಏಕೆ ಸೀಳಿಹೋಗುತ್ತಿಲ್ಲ? ತೀರ ಎಳಸಾದವರು ಸಹ ಯಾರನ್ನು ಕುರಿತಾಗಿ ಕುತ್ಸನೋಕ್ತಿಗಳನ್ನು, ಎಂದರೆ ತಿರಸ್ಕಾರದ ಮಾತುಗಳನ್ನು, ಆಡಬೇಕೋ ಅಂತಹ ಗೊಲ್ಲನೊಬ್ಬನ ಬಗ್ಗೆ ನೀನು ಹೊಗಳಿಕೆಯ ಮಾತುಗಳನ್ನಾಡುತ್ತಿರುವೆಯೆಲ್ಲಾ - ಅದೂ ಜ್ಞಾನವೃದ್ಧನಾಗಿದ್ದುಕೊಂಡು!

ಈತನು ತನ್ನ ಬಾಲ್ಯದಲ್ಲಿ ಪಕ್ಷಿಯೊಂದನ್ನು ಕೊಂದಿದ್ದನೆಂದರೆ ಅದರಲ್ಲಿ ಆಶ್ಚರ್ಯಪಡುವುದಾದರೂ ಏನಿದೆ? (ಇದು ಪಕ್ಷಿರೂಪದಲ್ಲಿ ಬಂದಿದ್ದ ಬಕಾಸುರನನ್ನು  ಕೃಷ್ಣನು ವಧಿಸಿದುದರ ಗೇಲಿ!). ಹಾಗೆಯೇ ಒಂದು ಕುದುರೆ ಮತ್ತು ಎತ್ತುಗಳ ವಿಷಯವೂ. ಅವಕ್ಕೇನು ಯುದ್ಧದಲ್ಲಿ ಪರಿಣತಿಯೇ? (ಇದು ಅಶ್ವರೂಪದಲ್ಲಿ ಬಂದಿದ್ದ ಕೇಶಿಯೆಂಬ ದಾನವ, ಹಾಗೂ ವೃಷಭರೂಪದಲ್ಲಿ ಬಂದಿದ್ದ ಅರಿಷ್ಟನೆಂಬ ಅಸುರನನ್ನು ಕೃಷ್ಣನು ಸಂಹಾರ ಮಾಡಿದುದರ ಗೇಲಿ!).  

ಸೂಚನೆ :  27/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಪ್ರಶ್ನೋತ್ತರ ರತ್ನಮಾಲಿಕೆ 85 (Prasnottara Ratnamalike 85)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ - ೮೫. ಎಲ್ಲರಿಗೂ ಶಸ್ತ್ರ  ಯಾವುದು?

ಉತ್ತರ- ಯುಕ್ತಿ


ಶಸ್ತ್ರ ಎಂದರೆ ಕೈಯಲ್ಲಿ ಹಿಡಿದು ಶತ್ರುವಿಗೆ ಆಘಾತವನ್ನು ಉಂಟುಮಾಡಲು ಬಳಸುವ ಸಾಧನ, ಅಥವಾ ಆಯುಧ. ಸಾಮಾನ್ಯವಾಗಿ ಇದು ಕ್ಷತ್ತ್ರಿಯರು ಬಳಸುವ ಸಾಧನ. ಇಲ್ಲಿ ಕೇಳುವ ಪ್ರಶ್ನೆ ಈ ವಿಷಯಕ್ಕೆ ಸಂಬಂಧಪಟ್ಟಿದ್ದಲ್ಲ. ಎಲ್ಲರಿಗೂ ಶಸ್ತ್ರ ಯಾವುದು? ಎಂಬ ಪ್ರಶ್ನೆ. ಅಂದರೆ ಯಾವುದನ್ನು ಬಳಸಿದರೆ ಎಲ್ಲರೂ ಅನುಕೂಲವನ್ನು ಪಡೆಯಬಹುದು? ಯಾವುದರಿಂದ ಅಭ್ಯುದಯ ಮತ್ತು ನಿಃಶ್ರೇಯಸ್ಸು ಎರಡು ಕೂಡ ಉಂಟಾಗುವುದು? ಎಂಬುದಾಗಿ. ಅಂತಹ ಒಂದು ಆಯುಧ ಅಥವಾ ಶಸ್ತ್ರ ಯಾವುದು? ಎಂಬ ಪ್ರಶ್ನೆ ಇಲ್ಲಿದೆ. ಅದಕ್ಕೆ ಉತ್ತರ ‘ಯುಕ್ತಿ’ ಎಂಬುದು. ಯುಕ್ತಿಯು ಕೇವಲ ಕ್ಷತ್ತ್ರಿಯರಿಗೆ ಮಾತ್ರ ತನ್ನ ಗುರಿಯನ್ನು ತಲುಪಲು ಸಾಧನವಲ್ಲ; ಅದು ಎಲ್ಲ ಜನಾಂಗದ ಎಲ್ಲ ವ್ಯಕ್ತಿಗೂ ಅನುಕೂಲ ಎಂಬುದು ಇಲ್ಲಿನ ತಾತ್ಪರ್ಯ. ಹಾಗಾದರೆ ಯುಕ್ತಿ ಎಂದರೇನು? ಅದು ಹೇಗೆ ಶಸ್ತ್ರವಾಗಿ ಕೆಲಸ ಮಾಡುತ್ತದೆ? ಎಂಬುದನ್ನು ನಾವಿಲ್ಲಿ ಗಮನಿಸಬೇಕು. 


ಯುಕ್ತಿ ಎಂಬ ಶಬ್ದದ ಮೂಲ ಯುಜೃ - ಯೋಗೇ ಎಂಬ ಧಾತು. ಯಾವುದು ಯೋಗಕ್ಕೆ ಅನುಕೂಲವೋ, ಅದನ್ನು ಯುಕ್ತಿ ಎಂಬುದಾಗಿ ಕರೆಯಲಾಗಿದೆ. ಯೋಗವು ಜೀವದೇವರ ಸಂಯೋಗ ಇರಬಹುದು, ಅಥವಾ ಜೀವದೇವರ ಸಂಯೋಗಕ್ಕೆ ಅನುವುಮಾಡುವ ಕರ್ಮಕೌಶಲ ಇರಬಹುದು. ಇವೆರಡಕ್ಕೂ ಬೇಕಾದ ಯಾವ ಸಾಧನವಿದೆಯೋ, ಅದನ್ನೇ ‘ಯುಕ್ತಿ’ ಎಂಬುದಾಗಿ ಕರೆಯಬಹುದು. ಮಾಡಬೇಕಾದ ಕಾರ್ಯವನ್ನು ಅತ್ಯಂತ ವ್ಯವಸ್ಥಿತವಾಗಿ, ಸಕಲ ಸಾಮಗ್ರಿ ಸಹಿತವಾಗಿ ಮಾಡಿದಾಗ, ಅದು ಸರಿಯಾದ ಫಲವನ್ನು ನೀಡಲು ಸಾಧ್ಯವಾಗುತ್ತದೆ. ಅದಕ್ಕೆ ಯುಕ್ತಿ ಬೇಕು. ಹೇಗೆ ಮಾಡಬೇಕು? ಯಾವಾಗ ಮಾಡಬೇಕು? ಯಾರು ಮಾಡಬೇಕು? ಎಂಬಿತ್ಯಾದಿ ವಿಷಯಗಳ ಅರಿವನ್ನೇ ಯುಕ್ತಿ ಎಂಬುದಾಗಿ ಕರೆಯಬಹುದು. ಈ ಯುಕ್ತಿ ಎಂಬುದನ್ನು ತಿಳಿದರೆ ಯಾವ ಕಾರ್ಯವನ್ನೂ ಸಾಧಿಸಬಹುದು. ಅದು ನಮ್ಮ ಕೈಯಲ್ಲಿ ಇರುವ ಆಯುಧ. ಅದು ಸದಾ ಸನ್ನದ್ಧವಾದ ಆಯುಧ. ಆಯುಧದಲ್ಲಿ ಶಸ್ತ್ರ ಮತ್ತು ಅಸ್ತ್ರ ಎಂಬುದಾಗಿ ಎರಡು ವಿಧ. ಶಸ್ತ್ರವು ಭೌತಿಕವಾಗಿ ಕಾಣುವ ಗದ ಖಡ್ಗಾದಿ ರೂಪವಾದುದು. ಮಂತ್ರದ ಅನುಷ್ಠಾನದಿಂದ ದೇವತೆಯನ್ನು ಆರಾಧಿಸಿ ಅದರ ಅನುಗ್ರಹದಿಂದ ಪಡೆಯುವ ದಿವ್ಯವಾದ ಆಯುಧವನ್ನು ‘ಅಸ್ತ್ರ’ ಎಂಬುದಾಗಿ ಕರೆಯಲಾಗಿದೆ. ಈ ಯುಕ್ತಿ ಎಂಬ ಆಯುಧವನ್ನು ಶಸ್ತ್ರ ಎಂಬುದಾಗಿ ಇಲ್ಲಿ ಪರಿಗಣಿಸಲಾಗಿದೆ. ಅಂದರೆ ಇದು ಭೌತಿಕವಾದ ಸಾಧನ. ಇದು ಪ್ರತಿಯೊಬ್ಬರಲ್ಲೂ ಇರುವ ಸಾಧನ. ತರ್ಕಬದ್ಧವಾದ ವಿವೇಚನೆ. ಈ ಬುದ್ಧಿಯನ್ನೇ ಯುಕ್ತಿ ಎಂಬುದಾಗಿ ಕರೆಯಬಹುದಾಗಿದೆ. ಇದನ್ನು ಒಂದು ಪ್ರಮಾಣ ಎಂಬುದಾಗಿಯೂ ಆಯುರ್ವೇದದಲ್ಲಿ ಚರಕರು ಹೇಳಿದ್ದಾರೆ. “ಬುದ್ಧಿಃ ಪಶ್ಯತಿ ಯಾ ಭಾವಾನ್ ಬಹುಕಾರಣಯೋಜನಾನ್” ಅನೇಕ ಕಾರಣಗಳ ಯೋಗದಿಂದ ಉಂಟಾಗುವ ವಿಷಯಗಳನ್ನು ಗ್ರಹಿಸುವ ತ್ರೈಕಾಲಿಕವಾದ ಬುದ್ಧಿಯೇ ಯುಕ್ತಿ, ಅದರಿಂದ ತ್ರಿವರ್ಗವೂ ಸಾಧ್ಯವಾಗುತ್ತದೆ ಎಂದು. ಪ್ರಮಾಣವೂ ಯಥಾರ್ಥವಾದ ಅರಿವನ್ನು ಹುಟ್ಟಿಸುತ್ತದೆಯಷ್ಟೇ. ಆ ಅರಿವಿನಿಂದ ನಮಗೆ ಕಾರ್ಯ ಸಾಧನೆ ಆಗುತ್ತದೆ ಎಂದರ್ಥ. ಹಾಗಾಗಿ ಈ ಯುಕ್ತಿಯನ್ನು ಒಂದು ಪ್ರಮಾಣವಾಗಿ ಭಾವಿಸಿ ಅದರಿಂದ ಒಂದು ಪ್ರಮಾ - ಯಥಾರ್ಥ ಜ್ಞಾನವನ್ನು ಪಡೆಯಬಹುದು ಎಂಬುದಾಗಿ ಹೇಳಲಾಗಿದೆ. ಹಾಗಾಗಿ ಯುಕ್ತಿಯು ಧರ್ಮಾರ್ಥಕಾಮಗಳೆಂಬ ತ್ರಿವರ್ಗವನ್ನು ಕೊಡಿಸಿ ಜೀವದೇವರ ಸಂಯೋಗಕ್ಕೆ ಅನುಕೂಲಸಿ ಯೋಗವನ್ನು ಉಂಟು ಮಾಡುವುದರಿಂದ ಅದು ಎಲ್ಲರಿಗೂ ಅನುಕೂಲಿಸುವ ಶಸ್ತ್ರ ಎಂಬ ಅರ್ಥದಲ್ಲಿ ಈ ಪ್ರಶ್ನೋತ್ತರ ಬಂದಿದೆ ಎಂದು ಭಾವಿಸಬಹುದು.


ಸೂಚನೆ :  27
/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Saturday, September 26, 2026

ಅಷ್ಟಾಕ್ಷರೀ 114 ಯತ್ರ ಯೋಗೇಶ್ವರಃ ಕೃಷ್ಣಃ (Astakshara 114)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png

ಧನುರ್ಧರನಿಗೆ ಯೋಗೇಶ್ವರನ ಮಾರ್ಗದರ್ಶನವು ಬೇಕಲ್ಲವೇ?


ರಣಾಂಗಣದಲ್ಲಿ ಉಪದಿಷ್ಟವಾದರೂ ಭಗವದ್ಗೀತೆಯು ಒಂದು ಶ್ರೇಷ್ಠವಾದ ಅಧ್ಯಾತ್ಮಗ್ರಂಥವೂ ಆಗಿದೆ.

ಆದರೊಂದು ಪ್ರಶ್ನೆ. ತಪೋವನದಲ್ಲಿ ಅಧ್ಯಾತ್ಮೋಪದೇಶವೆಂದರೆ ಒಪ್ಪೋಣ; ಸಮರಾಂಗಣದಲ್ಲಿ ಅದು ಶಕ್ಯವೇ?

ಹೊಡಿ-ಬಡಿ-ಕಡಿ-ಕೊಲ್ಲು ಎಂಬ ರೋಷಾವೇಷವೇ ತಾಂಡವವಾಡುತ್ತಿರುವುದಲ್ಲವೇ ರಣಭೂಮಿಯಲ್ಲಿ? ಶತ್ರುವನ್ನೂ ಶತ್ರುಪಕ್ಷೀಯರನ್ನೂ ಸಂಹರಿಸಬೇಕು; ತನ್ನನ್ನೂ ತನ್ನವರನ್ನೂ ಉಳಿಸಿಕೊಳ್ಳಬೇಕು - ಎಂಬ ಛಲ-ಉದ್ವೇಗಗಳು ಉತ್ಕಟವಾಗಿರುತ್ತವಲ್ಲವೇ ಅಲ್ಲಿ? ತತ್ತ್ವೋಪದೇಶ-ಶ್ರವಣವು ಅಲ್ಲಿ ಸಾಧ್ಯವೇ? ರಕ್ತಪಾತವೇ ಆಗಲಿರುವಲ್ಲಿ ಉಪದೇಶಕನ ಮನಸ್ಸಾದರೂ ಶಾಂತವಾಗಿರಲು ಶಕ್ಯವೇ?

ಎಲ್ಲಿಯಾದರೂ ದೊಡ್ಡಜಗಳವೆಂದರೆ ಅದು ಅಹಂಕಾರ-ಮಮಕಾರಗಳ ಕೋಲಾಹಲವೆಂದೇ. ಪ್ರಥಮ-ಶ್ಲೋಕದಲ್ಲೇ ಧೃತರಾಷ್ಟ್ರನು ಕೌರವರನ್ನು "ಮಾಮಕಾಃ", ನನ್ನವರು, ಎಂದು  ಕರೆದುಕೊಂಡನು. ದುರ್ಯೋಧನನೂ "ಅಸ್ಮಾಕಂ", ನಮ್ಮವರು, ಎಂದನಲ್ಲವೇ?  "ನಾನು ಯುದ್ಧ ಮಾಡೆ" ಎಂದು ಅರ್ಜುನನು ಹೇಳಿದುದೂ ಅಹಂಕಾರದ ಮಾತೆಂದೇ ಕೃಷ್ಣನ ಉಕ್ತಿ!

ಗೀತೆಯೇಕೆ ಬೇಕಿತ್ತು? - ಎಂಬ ಪ್ರಶ್ನೆಯನ್ನು ಕೇಳುವವರು ಕೇಳಿಕೊಳ್ಳಬೇಕಾದ ಒಂದು ಸರಳ-ಪ್ರಶ್ನೆಯಿದೆ: ಗೀತೆಯಿಲ್ಲದಿದ್ದರೆ ಏನಾಗುತ್ತಿತ್ತು?

ರಣಾಂಗಣದಲ್ಲೇ ಅರ್ಜುನನು ಕುಸಿದು ಕುಳಿತುಕೊಂಡುಬಿಟ್ಟನಷ್ಟೆ? ಗಾತ್ರ-ನಿತ್ರಾಣ, ಬಾಯೊಣಗುವಿಕೆ, ಮೈ-ನಡುಕ, ಚರ್ಮ-ತಾಪ, ಚಿತ್ತ-ಭ್ರಾಂತಿ - ಇವುಗಳೆಲ್ಲವೂ ಅರ್ಜುನನ್ನಾವರಿಸಿದವು. ಯುದ್ಧಮಾಡಲಾರೆನೆಂಬುದರ ಸೂಚಕವೇ ಆತನ ಕೈಯಿಂದ ಬಿಲ್ಲು ಜಾರಿದುದು. ಅಲ್ಲಿಗೆ ಪಾಂಡವರ ಸೋಲು ಕಟ್ಟಿಟ್ಟ ಬುತ್ತಿಯೆಂದಾಯಿತೆಂದೇ!

ಅದೇ, ಗೀತೋಪದೇಶವಾದ ಮೇಲೆ ಏನಾಯಿತು? “ನಿನ್ನ ಮಾತಿನಂತೆ ನಡೆದುಕೊಳ್ಳುವೆ” - ಎಂದ, ಅರ್ಜುನ! ಶೌರ್ಯವನ್ನು ಮೆರೆದ. ಕೌರವರ ಪರಾಜಯ-ಸಂಹಾರಗಳಾದುವು. ಅಧರ್ಮ-ಧ್ವಂಸವಾಯಿತು; ಧರ್ಮವುಳಿಯಿತು!

ಕೊನೆಗೆ ಪಾಂಡವರಿಗೆ ಈ ನಾಲ್ಕೂ ದಕ್ಕಿದಂತಾಯಿತು: ಶ್ರೀ, ವಿಜಯ, ಭೂತಿ, ಹಾಗೂ ಧ್ರುವವಾದ ನೀತಿ.

ಏನು ಹಾಗೆಂದರೆ? ವಿಜಯವೆಂದರೆ ಶತ್ರು-ಧ್ವಂಸ. ಶ್ರೀ ಎಂದರೆ ರಾಜ್ಯ ಮುಂತಾದ ಸಂಪತ್ತು: ಯುದ್ಧವಾದುದು ಹದಿನೆಂಟು ದಿನ, ಪಾಂಡವರಾಳಿದುದು ಮೂವತ್ತಾರು ವರ್ಷ!

ಭೂತಿಯೆಂದರೆ ಐಶ್ವರ್ಯ, ಒಡೆತನ. ಪಡೆದ ಸಂಪತ್ತನ್ನು ಸುಮ್ಮನೆ ಉಳಿಸಿಕೊಳ್ಳುವುದಲ್ಲ, ಬೆಳೆಸಿಕೊಳ್ಳಬೇಕು. ಈ ಅಭಿವೃದ್ಧಿಯೇ ಭೂತಿ.

ನೀತಿಯೆಂಬುದು ಇಲ್ಲಿ ಒಂದು ಪಾರಿಭಾಷಿಕ-ಶಬ್ದ. ಸುಳ್ಳಾಡಬೇಡ, ಕದಿಯಬೇಡವೆಂಬ ಕೇವಲ-ಲೋಕನೀತಿಯೆಂದಲ್ಲ, ಅದರ ಅರ್ಥ. ನೀತಿಯೆಂದರೆ ರಾಜನೀತಿಯೇ ಸರಿ. ಧರ್ಮಕ್ಕೆ ವಿರೋಧ ಬರದ ಪರಿಯಲ್ಲಿ ಅರ್ಥವನ್ನು ಸಂಪಾದಿಸಿಕೊಳ್ಳುವುದೇ ಅರ್ಥಶಾಸ್ತ್ರದ ಲಕ್ಷ್ಯವಲ್ಲವೇ? ಸಾಮ-ದಾನ-ಭೇದ-ದಂಡಗಳಳೆಂಬ ಚತುರುಪಾಯಗಳನ್ನು ಹೇಗೆ ಬಳಸಿ ಧರ್ಮವನ್ನು ಸ್ಥಾಪಿತವಾಗಿಸಬಹುದೆಂಬ ಪರಿಯೇ ಇಲ್ಲಿಯ ನೀತಿ.

ಇವೆಲ್ಲಾ ಯಾವಾಗ ಸಾಧ್ಯ? ಅರ್ಜುನನು ಮತ್ತೆ ಧನುರ್ಧರನಾದಲ್ಲಿ! ಆಗಲಲ್ಲವೇ ಆತನ ಪೌರುಷ-ಪರಾಕ್ರಮಗಳಿಗೆ ಆಸ್ಪದ? ಗಾಂಡೀವವು ಕೈಜಾರುತ್ತಿದೆಯೆಂದು ಅಂಜಿ ಅಳುಕಿದ ಅರ್ಜುನನು ಅದನ್ನು ಮತ್ತೆ ಕೈಗೆತ್ತಿಕೊಳ್ಳುವಂತೆ ಮಾಡಿದವನಾರು? ಕೃಷ್ಣನಲ್ಲವೇ?

ಅರ್ಜುನನ ಮೈ-ಮನಸ್ಸುಗಳು ಮಾತ್ರವಲ್ಲ, ಕುಸಿದಿದ್ದದ್ದು. ಆತನ ಬುದ್ಧಿಯೇ ಕೆಟ್ಟಿತ್ತು. ರಾಜ್ಯಸುಖ ಬೇಡ; ನನ್ನನ್ನಿವರು ಕೊಲ್ಲಬಂದಿರಬಹುದು, ಆದರೆ ನಾನಿವರನ್ನು ಕೊಲ್ಲೆ. ಕೊಂದರೆ ಪಾಪ. ಸ್ವಜನ-ಹನನದಿಂದ ಸುಖವೇ? ಮಿತ್ರ-ದ್ರೋಹವು ಪಾತಕವಲ್ಲವೇ? ಆಚಾರ್ಯ-ಸಂಹಾರವನ್ನೆಸಗುವುದೇ? ಧಾರ್ತರಾಷ್ಟ್ರರೇ ನನ್ನನ್ನು ಕೊಂದರೇ ಕ್ಷೇಮ - ಎಂದೆಲ್ಲಾ ಪ್ರಜ್ಞಾವಾದವನ್ನು ವಾದಿಸಿದ್ದ; ಆದರೂ ನಾನು ಧರ್ಮ-ಸಂಮೂಢನೆಂದೂ ಹೇಳಿಕೊಂಡಿದ್ದ! ಒಟ್ಟಿನಲ್ಲಿ ಬುದ್ಧಿ-ನಿಶ್ಚಯವಿರಲಿಲ್ಲ.

ಯಾವಾಗ ಪುಣ್ಯ-ಪಾಪಗಳ ಬಗ್ಗೆ, ಸಾವಿನ ಬಗ್ಗೆ, ಅರ್ಜುನನು ಮಾತನಾಡಿದನೋ ಆಗಲೇ ಕೃಷ್ಣನು, ಸಾವಿನಾಚೆಯೇನು? ಸಾವೆಂಬುದು ಯಾವುದಕ್ಕೆ?  ಬದುಕಬೇಕು ಹೇಗೆ? - ಎಂಬುದನ್ನೆಲ್ಲಾ ಅಲ್ಲೇ ವಿವರಿಸಬೇಕಾಯಿತು. ಇದುವೇ ಗೀತೋಪದೇಶ.

ಕೃಷ್ಣನು ಯೋಗೇಶ್ವರ. ಅದೆಷ್ಟು ಬಗೆಯ ಯೋಗಗಳನ್ನು ತೋರಿಸಿಕೊಟ್ಟ!  ಯೋಗೇಶ್ವರ-ಧರ್ನುರ್ಧರರ, ಎಂದರೆ ಕೃಷ್ಣ-ಅರ್ಜುನರ, ಯೋಗವೇ ಒಂದು ವಿಶಿಷ್ಟಯೋಗ: ನರ-ನಾರಾಯಣರ ಯೋಗವದು!

ಇವನ್ನೆಲ್ಲಾ ವಿವರಿಸುತ್ತಾ ಶ್ರೀರಂಗಮಹಾಗುರುಗಳು ಸರಳವಾಗಿ  ಹೇಳಿರುವುದು ಆಪ್ಯಾಯಕವಾಗಿದೆ:  "ಸತ್ಯವು ಉಳಿಯಬೇಕಾದರೆ ಅದನ್ನು ಖಚಿತವಾಗಿ ಹೇಳುವವನು ಬೇಕು, ಅದನ್ನು ಹಾಗೆಯೇ ಜಾರಿಗೆ ತರುವವನೂ ಬೇಕು. ಅಷ್ಟೇ ಅಲ್ಲದೆ, ಯೋಗೇಶ್ವರನಿದ್ದಲ್ಲಿ, ಭೂತಿ ಅಥವಾ ದೈವೀಸಂಪತ್ತೆಂಬುದುಂಟು. ಧನುರ್ಧರನಾಗಿ ಅದನ್ನು ಬೆಳೆಸುವವನಲ್ಲಿ ನೀತಿಯೆಂಬುದುಂಟು.”

ಧರ್ಮರಕ್ಷಣೆಗಾಗಿ ದಂಡವು ಬೇಕೇಬೇಕೆನ್ನುವುದೇ ಅರ್ಥಶಾಸ್ತ್ರದ ಸಾರವೂ ಆಗಿದೆಯಷ್ಟೆ?

ಹೀಗಾಗಿ ಧರ್ಮವನ್ನುಳಿಸಲು ಪ್ರಾಣವನ್ನಾದರೂ ಕೊಟ್ಟೇನೆಂಬ ದಿಟ್ಟತನವೂ ಬೇಕು; ಜೊತೆಗೇ, ಅದಕ್ಕೆ ಆಧಾರವಾಗಿ, ಧರ್ಮವೆಂದರೇನೆಂಬುದರ ತಾತ್ತ್ವಿಕವಾದ ಅರಿವೂ ಬೇಕು. ಇಲ್ಲವೇ, ಅಧರ್ಮವನ್ನೇ ಧರ್ಮವೆಂದು ಬಗೆದಿದ್ದನಲ್ಲವೇ ಅರ್ಜುನ! ಎಂದೇ ಗೀತಾಸಮಾಪ್ತಿಯು “ಎಲ್ಲಿ ಯೋಗೇಶ್ವರನಾದ ಕೃಷ್ಣನಿರುವನೋ” (ಯತ್ರ ಯೋಗೇಶ್ವರಃ ಕೃಷ್ಣಃ) ಎಂಬ ಸಂಜಯ-ವಚನದಿಂದಲೇ.

ಸಂಜಯನ ಈ ಅಂತ್ಯೋಕ್ತಿಯ ಧ್ವನಿಯೇನು? : ಅಹಂಕಾರ-ಅಭಿಮಾನಗಳಿಂದ ತುಂಬಿಹೋಗಿರುವ ಧೃತರಾಷ್ಟ್ರನೇ, ಯಾರಿಗೆ ವಿಜಯ? ಏಕೆ? - ಎಂಬ ಪ್ರಶ್ನೆಗಳಿಗೆ ಉತ್ತರವು ಸಿಕ್ಕಿತಲ್ಲವೇ? 

ಸೂಚನೆ: 26/09//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.

Monday, September 21, 2026

ವ್ಯಾಸ ವೀಕ್ಷಿತ 206 ಶಿಶುಪಾಲನ ಆಕ್ರೋಶ: ರಾಜಮಂಡಲದಲ್ಲಿ ಕ್ಷೋಭೆ (Vyaasa Vikshita 206)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಕೃಷ್ಣನಿಗಾದ ಅಗ್ರಪೂಜೆಯನ್ನು ಸಮರ್ಥಿಸಿ ನಾರದರು ಮಾತನಾಡಲಾರಂಭಿಸಿದರು. ಆ ನಾರದರೋ  ಭವಿಷ್ಯತ್ತನ್ನೂ ಭೂತವನ್ನೂ ಬಲ್ಲವರು. ಸರ್ವಸಂಶಯಗಳನ್ನೂ ಹೋಗಲಾಡಿಸಬಲ್ಲವರು. ಎಲ್ಲ ಲೋಕಗಳನ್ನೂ ಅರಿತವರು.

ಆ ಸಭೆಯಲ್ಲಿದ್ದ ಸರ್ವರ ನಡುವೆ ಈ ಮಾತುಗಳನ್ನು ಅವರು ಹೇಳಿದರು: "ಕಮಲನಯನನಾದ ಶ್ರೀಕೃಷ್ಣನನ್ನು ಯಾರು ಅರ್ಚಿಸುವುದಿಲ್ಲವೋ, ಅಂತಹವರನ್ನು ಜೀವನ್-ಮೃತರೆಂದೇ ಭಾವಿಸತಕ್ಕದ್ದು. ಅಂತಹವರು ಸಂಭಾಷಣೆಗೇ ಅರ್ಹರಲ್ಲ".

ಆ ಬಳಿಕ, ಪೂಜಾರ್ಹರಾದ ಬ್ರಾಹ್ಮಣರಲ್ಲಿ ಹಾಗೂ ಕ್ಷತ್ರಿಯರಲ್ಲಿ ಮತ್ತಾರು ಉಳಿದಿದ್ದರೋ, ಅವರುಗಳೆಲ್ಲರನ್ನೂ ಸಹದೇವನು ಅರ್ಚಿಸಿ ತನ್ನ ಆ ಕಾರ್ಯವನ್ನು ಸಮಾಪ್ತಿಗೊಳಿಸಿದನು.

ಕೃಷ್ಣನಿಗೆ ಹೀಗೆ ಪೂಜೆಯು ಸಂದಿರಲು, ಅನೇಕ-ಶತ್ರು-ವಿಜಯಿಯಾದ ಶಿಶುಪಾಲನು ಕ್ರೋಧದಿಂದ ಅತಿಯಾಗಿ ಕೆಂಪಡರಿದ ಕಣ್ಣುಗಳುಳ್ಳವನಾಗಿ, ಅಲ್ಲಿದ್ದ ನೃಪರನ್ನು ಕುರಿತು ಈ ರೀತಿಯಲ್ಲಿ ಮಾತನಾಡಿದನು:

"ರಾಜರುಗಳೇ, ನಾನಿದೋ ಸೇನಾಪತಿಯಾಗಿ ನಿಂತಿದ್ದೇನೆ. ಈಗ ಇನ್ನೇನು ಯೋಚನೆಯನ್ನು ನೀವು ಮಾಡುತ್ತಿರುವಿರಿ? ನಾವು ಯುದ್ಧ-ಸನ್ನದ್ಧರಾಗಿ ನಿಲ್ಲೋಣ. ವೃಷ್ಣಿಗಳೂ ಪಾಂಡವರೂ ಸೇರಿಕೊಂಡಿರುವ ಈ ಸ್ತೋಮವನ್ನು ಎದುರಿಸೋಣ, ಬನ್ನಿರಿ."

ಈ ರೀತಿಯಾಗಿ ಚೇದಿ-ಪುಂಗವನು, ಎಂದರೆ ಶಿಶುಪಾಲನು, ಅಲ್ಲಿದ್ದ ನೃಪ-ಸಮೂಹವನ್ನು ಉತ್ಸಾಹಗೊಳಿಸಿದನು. ಯುಧಿಷ್ಠಿರನ ಯಜ್ಞಕ್ಕೆ ಉಪಘಾತವಾಗಬೇಕು, ಎಂದರೆ ಭಂಗವಾಗಬೇಕು - ಎಂಬುದೇ ಆತನ ಆಶಯವಾಗಿತ್ತು. ಅದಕ್ಕಾಗಿ ಮಿಕ್ಕ ಅರಸರೊಂದಿಗೆ ಮಂತ್ರಾಲೋಚನೆ ಮಾಡಿದನು.

ಶಿಶುಪಾಲನು ಹೀಗೆ ಕರೆಕೊಡಲು, ಸುನೀಥ ಎಂಬ ಹೆಸರಿನವನು, ಹಾಗೂ ಕೆಲವು ರಾಜರ ಗುಂಪುಗಳು ಬಹಳವೇ ಕೋಪಗೊಂಡವರಂತೆ ಕಂಡರು. ಅವರ ವದನಗಳು ವಿಚ್ಛಾಯವಾಗಿದ್ದವು, ಹಾಗೆಂದರೆ ಛಾಯೆಯನ್ನು, ಅರ್ಥಾತ್ ಕಾಂತಿಯನ್ನು ಕಳೆದುಕೊಂಡಂತೆ ಕಂಡವು.

ಯುಧಿಷ್ಠಿರನಿಗೆ ಪಟ್ಟಾಭಿಷೇಕ ಹಾಗೂ ಶ್ರಿಕೃಷ್ಣನಿಗೆ ಅಗ್ರಪೂಜೆ - ಇವಾಗದಂತೆ ಮಾಡಬೇಕು - ಎಂಬುದಾಗಿ ಅವರೆಲ್ಲರೂ ಮಾತನಾಡಿಕೊಂಡರು.

ಈ ನಿಷ್ಕರ್ಷ-ನಿಶ್ಚಯಗಳಿಂದಾಗಿ ರಾಜರುಗಳೆಲ್ಲರ ಕ್ರೋಧವು ಉಕ್ಕಿತು. ಅವರುಗಳಿಗೆ ಇಷ್ಟರ ಹೊತ್ತಿಗೆ ಕೆರಳಿದಂತಾಗಿತ್ತು, ಹಾಗೂ ತಮ್ಮ ಬಲದ ಬಗ್ಗೆಯೇ ಒಂದು ಆತ್ಮವಿಶ್ವಾಸವೂ ಉಂಟಾಗಿತ್ತು. ಅವರೊಳಗೇ ಕೆಲ ಸ್ನೇಹಿತರು ಅವರನ್ನು ತಡೆಯುತ್ತಿದ್ದರು; ಹಾಗಿದ್ದೂ ಅವರ ಶರೀರವು ಕಂಗೊಳಿಸುತ್ತಿತ್ತು - ಮಾಂಸದ ಆಸೆಯನ್ನು ತೋರಿಸಿ, ಕೊಡದೆ ವಂಚನೆಯನ್ನೇನಾದರೂ ಮಾಡಿದರೆ ಗರ್ಜಿಸುವ ಸಿಂಹಗಳ ಶರೀರವು ಹೇಗೆ ಕೋಪಾವೇಶದಿಂದ ಹೊಳೆಯುವುದೋ ಹಾಗೆ. ಮಿತಿಕಾಣದ ಸೈನ್ಯಗಳೂ, ರಾಜರ ಸಾಗರವೂ ವರ್ತಿಸುತ್ತಿದ್ದ ಬಗೆಯನ್ನು ಕಂಡ ಕೃಷ್ಣನು ಯುದ್ಧಕ್ಕೇ ಸನ್ನಾಹವೇರ್ಪಡುತ್ತಿದೆಯೆಂದು ಅರಿತುಕೊಂಡನು.

ಸಾಗರದ ಹಾಗಿದ್ದ ಆ ರಾಜಮಂಡಲವನ್ನು ಯುಧಿಷ್ಠಿರನು ಕಂಡನು. ಪ್ರಲಯಕಾಲದಲ್ಲಿ ಸಂವರ್ತ-ವಾತವೆಂಬ ಮಹಾಬಿರುಗಾಳಿಯು ಬೀಸುವುದಲ್ಲವೇ? ಆಗ ಸಮುದ್ರವೆಲ್ಲ ಮಹಾಕ್ಷೋಭೆಗೊಳಗಾಗುವುದು. ಹಾಗೆ ಕ್ಷೋಭೆಗೊಂಡಿತ್ತು, ಆ ರಾಜಸಮೂಹ.

ಭೀಷ್ಮರ ಬಳಿ ಹೋಗಿ ಯುಧಿಷ್ಠಿರನು ಈ ಕುರಿತು ಮಾತನಾಡಿದನು. ಅವರಾದರೂ ಮತಿಸಂಪನ್ನರಾದವರಲ್ಲಿ ಮುಖ್ಯರಾದವರು, ವೃದ್ಧರು, ಕುರುಕುಲ-ಪಿತಾಮಹರೇ ಆದವರು. ಬೃಹತ್ತಾದ ತೇಜಸ್ಸುಳ್ಳವನೂ ಶತ್ರುಸಂಹಾರಕನೂ ಆದ ಇಂದ್ರನು, ಬೃಹಸ್ಪತಿಯ ಬಳಿ ಹೋಗಿ ಮಾತನಾಡುವಂತೆ ಇದು ತೋರುತ್ತಿತ್ತು.

ಯುಧಿಷ್ಠಿರನು ಹೀಗೆಂದನು: "ಭೀಷ್ಮರೇ, ಈ ದೊಡ್ಡ ರಾಜಸಾಗರವು ರೋಷದಿಂದ ಚಂಚಲವಾಗಿದೆ. ಹೀಗಿರುವಲ್ಲಿ ಯಾವ ಉಪಾಯವನ್ನು ನಾವು ಮಾಡಬೇಕು? - ಎಂಬುದನ್ನು ತಾವು ಸೂಚಿಸಬೇಕು, ಪಿತಾಮಹರೇ. ಹೇಗೆ ಮಾಡಿದರೆ ಯಜ್ಞಕ್ಕೆ ವಿಘ್ನವಾಗದು, ಆದರೆ ಪ್ರಜೆಗಳಿಗೆ ಹಿತವಾಗುವುದು, ಹಾಗೂ ಎಲ್ಲೆಡೆ ಶಾಂತಿಯೂರುವುದು - ಎಂಬುದನ್ನು ತಿಳಿಸಿಕೊಡಿ" ಎಂದನು.

ಸೂಚನೆ :  20/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 84 (Prasnottara Ratnamalike 84)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


image.png



ಪ್ರಶ್ನೆ - ೮೪. ಅಕ್ಷಯವಟವೃಕ್ಷ ಯಾವುದು?

ಉತ್ತರ- ಸತ್ಪಾತ್ರನಿಗೆ ಕೊಟ್ಟ ದಾನ.

ಈ ಹಿಂದಿನ ಲೇಖನವನ್ನು ಅನುಸಂಧಾನ ಮಾಡಿಕೊಂಡು ಈ ಲೇಖನವನ್ನು ಮನಸ್ಸಿಗೆ ತಂದುಕೊಳ್ಳಬೇಕು. ಕಲ್ಪವೃಕ್ಷ, ಕಾಮಧೇನು, ಕಲ್ಪಲತೆ ಇವೆಲ್ಲವೂ ಹೇಗೆ ಕಲ್ಪಿಸಿದ್ದನ್ನು ಕೊಡಲು ಸಮರ್ಥವಾದವುಗಳೋ ಅಂತಯೇ ಅಕ್ಷಯವಟವೃಕ್ಷವೂ ಕೂಡ ಕೇಳಿದ್ದನ್ನು ಬೇಕಾದಷ್ಟು ಕೊಡಲು ಸಾಮರ್ಥ್ಯವುಳ್ಳ ಒಂದು ವೃಕ್ಷ. ಇದು ಕೂಡ ಈ ಭೂಲೋಕದಲ್ಲಿ ಇರಲು ಸಾಧ್ಯವೇ? ಅಥವಾ ಯಾವುದಾದರೂ ಇದ್ದರೆ ಅದು ಯಾವುದು? ಎಂಬುದು ಇಲ್ಲಿನ ಪ್ರಶ್ನೆ. ಇದಕ್ಕೆ ಉತ್ತರ ‘ಸತ್ಪಾತ್ರನಿಗೆ ಕೊಟ್ಟ ದಾನ’ ಎಂಬುದು. ಸರಿಯಾದ ವ್ಯಕ್ತಿಗೆ ಕೊಟ್ಟ ದಾನವು ಅಕ್ಷಯ ವಟವೃಕ್ಷವಾಗಿ ಆಗುತ್ತದೆ ಎಂದರ್ಥ. ದಾನಕ್ಕೆ ಅಷ್ಟು ಬೆಲೆ ಇದೆ ಎಂಬುದನ್ನು ಈ ಪ್ರಶ್ನೋತ್ತರ ಒಂದು ಉದಾಹರಣೆಯ ಮೂಲಕ ವಿವರಿಸುತ್ತದೆ. ಹಾಗಾದರೆ ದಾನಕ್ಕೆ ಅಷ್ಟು ಸಾಮರ್ಥ್ಯ ಹೇಗೆ ಬಂತು? ದಾನ ಎಂದರೇನು? ಎಂದು ಚಿಂತಿಸಿದಾಗ ಮಹತ್ವ ಅರ್ಥವಾಗುತ್ತದೆ. 


ದಾನ ಎಂದರೆ ಕೊಡುವುದು. ತನ್ನ ತನವನ್ನು ಇಟ್ಟುಕೊಟ್ಟರೆ ಅದು ದಾನವಲ್ಲ. ‘ನ ಮಮ’ ತನ್ನ ತನವನ್ನು ಇಟ್ಟುಕೊಳ್ಳದೇ ಪದಾರ್ಥವನ್ನು ಮತ್ತೊಬ್ಬರಿಗೆ ಹಸ್ತಾಂತರಿಸುವುದು ದಾನವಾಗುತ್ತದೆ. ಇನ್ನೊಬ್ಬನಿಗೆ ಅದರ ಸಂಯೋಗವಾಗಬೇಕಾದರೆ ನಮ್ಮಿಂದ ಅದು ವಿಯೋಗವಾಗಬೇಕಾಗುತ್ತದೆ. ತ್ಯಾಗದಿಂದಲೇ ಯೋಗವಷ್ಟೆ!. ಅದು ನಮ್ಮಲ್ಲಿರುವ ಎಲ್ಲಾ ಬಗೆಯ ಕಿಲ್ಬಿಷವನ್ನು ದೂರಮಾಡಿ ಪರಿಶುದ್ಧಗೊಳಿಸುವ ಅತ್ಯುತ್ಕೃಷ್ಟವಾದ ಸಾಧನ. ಅದನ್ನೇ ಮಹಾನಾರಾಯಣೋಪನಿಷತ್ ಸಾರುತ್ತದೆ. “ದಾನವು ಬಹಳ ಶ್ರೇಷ್ಠವಾದದ್ದು. ದಾನದಷ್ಟು ಸುಲಭವಾದ ಮತ್ತೊಂದು ಕರ್ಮ ಇಲ್ಲ” ಎಂಬುದಾಗಿ. ಅದೇ ಉಪನಿಷತ್ತಿನಲ್ಲಿ ದಾನದಿಂದ ಏನೆಲ್ಲ ಸಾಧ್ಯ ಎಂಬುದನ್ನೂ ಕೂಡ ಹೇಳಲಾಗಿದೆ. ದಾನವು ಯಜ್ಞಪರಿಪೂರ್ಣವಾಗಬೇಕಾದರೆ ದಕ್ಷಿಣಾ ಎಂದು ಕರೆಸಿಕೊಳ್ಳುವ ಸುವಸ್ತು. ಒಬ್ಬ ದಾನಿಯನ್ನು ಲೋಕವು ಆಶ್ರಯಿಸುತ್ತ.ದೆ. ದಾನದಿಂದ ಶತ್ರುಗಳು ದೂರವಾಗುತ್ತಾರೆ. ಅಷ್ಟೇ ಅಲ್ಲದೆ ಮಿತ್ರರು ಆಗುತ್ತಾರೆ.


ಆದ್ದರಿಂದ ದಾನ ಎಲ್ಲಕ್ಕಿಂತ ಶ್ರೇಷ್ಠ. “ದಾನಂ ಯಜ್ಞಾನಾಂ ವರೂಥಂ ದಕ್ಷಿಣಾ ಲೋಕೇ ದಾತಾರ೦ ಸರ್ವಭೂತಾನ್ಯುಪಜೀವಂತಿ ದಾನೇನಾರಾತೀರಪಾನುದಂತ ದಾನೇನ ದ್ವಿಷಂತೋ ಮಿತ್ರಾ ಭವಂತಿ ದಾನೇ ಸರ್ವ೦ ಪ್ರತಿಷ್ಠಿತಂ ತಸ್ಮಾದ್ದಾನಂ ಪರಮಂ ವದಂತಿ” ಎಂಬುದಾಗಿ ದಾನದ ಮಹತ್ವವನ್ನು ಉಪನಿಷತ್ತು ಹೀಗೆ ಸಾರುತ್ತದೆ. ದಾನವು ಸೃಷ್ಟಿಸಹಜವಾದ ಪ್ರಕ್ರಿಯೆ. ಅದು ಇಲ್ಲದಿದ್ದರೆ ಈ ಸೃಷ್ಟಿಯ ವ್ಯಾಪಾರವೇ ನಡೆಯುತ್ತಿರಲಿಲ್ಲ ಎಂದು ದಾನದ ಹಿರಿಮೆಯನ್ನು ಶ್ರೀರಂಗಮಹಾಗುರುಗಳು ಹೀಗೆ ಹೇಳುತ್ತಿದ್ದರು “ದಾನ ಮತ್ತು ಪ್ರತಿಗ್ರಹಗಳ ಪ್ರಿನ್ಸಿಪಲ್ ಮೇಲೆಯೇ ಸೃಷ್ಟಿಯು ನಡೆದು, ನಿಂತು ಮುಂದುವರಿಯುತ್ತಿದೆ. ಸೃಷ್ಟಿಕರ್ತನು ತನ್ನ ಸಂಪತ್ತುಗಳನ್ನು ತನ್ನ ಸಂತಾನಕ್ಕೆ ದಾನ ಮಾಡದಿದ್ದರೆ, ಸೃಷ್ಟಿ ಹೇಗೆ ಮುಂದುವರಿದೀತು? ತಂದೆ ತಾಯಿಗಳು ತಮ್ಮ ಶಾರೀರಿಕ, ಮಾನಸಿಕ, ಬೌದ್ಧಿಕ, ಆಧ್ಯಾತ್ಮಿಕ ಸ್ವತ್ತುಗಳನ್ನು ತಮ್ಮ ಸಂತಾನಕ್ಕೆ ದಾನ ಮಾಡುತ್ತಾರೆ. ಅವು ತಮ್ಮ ಮುಂದಿನ ಪೀಳಿಗೆಗೆ. ಹೀಗೆ ಒಬ್ಬನು ದಾನ ಮಾಡಿದ. ಇನ್ನೊಬ್ಬನೂ ಆ ದಾನ ಮಾಡಿದ. ಇದರ ಮೇಲೆಯೇ ಸೃಷ್ಟಿ ವ್ಯಾಪಾರವೆಲ್ಲವೂ ನಿಂತಿದೆ. ದಾನ ಮಾಡದಿದ್ದರೆ, ಪ್ರತಿಗ್ರಹ ಮಾಡಿದ್ದಕ್ಕೆ ಏನೂ ಫಲವಿಲ್ಲ. ದಾನ ಪ್ರತಿಗ್ರಹಗಳು ಸೃಷ್ಟಿ ಸಹಜವಾದ ಕ್ರಿಯೆಗಳು” ಎಂದು. ಆದ್ದರಿಂದ ‘ದಾನದಿಂದ ಎಲ್ಲವೂ’ ಎಂಬುದಾಗಿ ಈ ಪ್ರಶ್ನೋತ್ತರ ಸಾರಿದೆ.


ಸೂಚನೆ :  20
/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

Friday, September 18, 2026

VV 206

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್ 

ಆಧ್ಯಾತ್ಮಿಕಚಿಂತಕರು ಮತ್ತು ಪ್ರವಚನಕಾರರು,

ಅಷ್ಟಾಂಗಯೋಗವಿಜ್ಞಾನಮಂದಿರಂ


ಶಿಶುಪಾಲನ ಆಕ್ರೋಶ: ರಾಜಮಂಡಲದಲ್ಲಿ ಕ್ಷೋಭೆ

ಕೃಷ್ಣನಿಗಾದ ಅಗ್ರಪೂಜೆಯನ್ನು ಸಮರ್ಥಿಸಿ ನಾರದರು ಮಾತನಾಡಲಾರಂಭಿಸಿದರು. ಆ ನಾರದರೋ  ಭವಿಷ್ಯತ್ತನ್ನೂ ಭೂತವನ್ನೂ ಬಲ್ಲವರು. ಸರ್ವಸಂಶಯಗಳನ್ನೂ ಹೋಗಲಾಡಿಸಬಲ್ಲವರು. ಎಲ್ಲ ಲೋಕಗಳನ್ನೂ ಅರಿತವರು.

ಆ ಸಭೆಯಲ್ಲಿದ್ದ ಸರ್ವರ ನಡುವೆ ಈ ಮಾತುಗಳನ್ನು ಅವರು ಹೇಳಿದರು: "ಕಮಲನಯನನಾದ ಶ್ರೀಕೃಷ್ಣನನ್ನು ಯಾರು ಅರ್ಚಿಸುವುದಿಲ್ಲವೋ, ಅಂತಹವರನ್ನು ಜೀವನ್-ಮೃತರೆಂದೇ ಭಾವಿಸತಕ್ಕದ್ದು. ಅಂತಹವರು ಸಂಭಾಷಣೆಗೇ ಅರ್ಹರಲ್ಲ".

ಆ ಬಳಿಕ, ಪೂಜಾರ್ಹರಾದ ಬ್ರಾಹ್ಮಣರಲ್ಲಿ ಹಾಗೂ ಕ್ಷತ್ರಿಯರಲ್ಲಿ ಮತ್ತಾರು ಉಳಿದಿದ್ದರೋ, ಅವರುಗಳೆಲ್ಲರನ್ನೂ ಸಹದೇವನು ಅರ್ಚಿಸಿ ತನ್ನ ಆ ಕಾರ್ಯವನ್ನು ಸಮಾಪ್ತಿಗೊಳಿಸಿದನು.

ಕೃಷ್ಣನಿಗೆ ಹೀಗೆ ಪೂಜೆಯು ಸಂದಿರಲು, ಅನೇಕ-ಶತ್ರು-ವಿಜಯಿಯಾದ ಶಿಶುಪಾಲನು ಕ್ರೋಧದಿಂದ ಅತಿಯಾಗಿ ಕೆಂಪಡರಿದ ಕಣ್ಣುಗಳುಳ್ಳವನಾಗಿ, ಅಲ್ಲಿದ್ದ ನೃಪರನ್ನು ಕುರಿತು ಈ ರೀತಿಯಲ್ಲಿ ಮಾತನಾಡಿದನು:

"ರಾಜರುಗಳೇ, ನಾನಿದೋ ಸೇನಾಪತಿಯಾಗಿ ನಿಂತಿದ್ದೇನೆ. ಈಗ ಇನ್ನೇನು ಯೋಚನೆಯನ್ನು ನೀವು ಮಾಡುತ್ತಿರುವಿರಿ? ನಾವು ಯುದ್ಧ-ಸನ್ನದ್ಧರಾಗಿ ನಿಲ್ಲೋಣ. ವೃಷ್ಣಿಗಳೂ ಪಾಂಡವರೂ ಸೇರಿಕೊಂಡಿರುವ ಈ ಸ್ತೋಮವನ್ನು ಎದುರಿಸೋಣ, ಬನ್ನಿರಿ."

ಈ ರೀತಿಯಾಗಿ ಚೇದಿ-ಪುಂಗವನು, ಎಂದರೆ ಶಿಶುಪಾಲನು, ಅಲ್ಲಿದ್ದ ನೃಪ-ಸಮೂಹವನ್ನು ಉತ್ಸಾಹಗೊಳಿಸಿದನು. ಯುಧಿಷ್ಠಿರನ ಯಜ್ಞಕ್ಕೆ ಉಪಘಾತವಾಗಬೇಕು, ಎಂದರೆ ಭಂಗವಾಗಬೇಕು - ಎಂಬುದೇ ಆತನ ಆಶಯವಾಗಿತ್ತು. ಅದಕ್ಕಾಗಿ ಮಿಕ್ಕ ಅರಸರೊಂದಿಗೆ ಮಂತ್ರಾಲೋಚನೆ ಮಾಡಿದನು.

ಶಿಶುಪಾಲನು ಹೀಗೆ ಕರೆಕೊಡಲು, ಸುನೀಥ ಎಂಬ ಹೆಸರಿನವನು, ಹಾಗೂ ಕೆಲವು ರಾಜರ ಗುಂಪುಗಳು ಬಹಳವೇ ಕೋಪಗೊಂಡವರಂತೆ ಕಂಡರು. ಅವರ ವದನಗಳು ವಿಚ್ಛಾಯವಾಗಿದ್ದವು, ಹಾಗೆಂದರೆ ಛಾಯೆಯನ್ನು, ಅರ್ಥಾತ್ ಕಾಂತಿಯನ್ನು ಕಳೆದುಕೊಂಡಂತೆ ಕಂಡವು.

ಯುಧಿಷ್ಠಿರನಿಗೆ ಪಟ್ಟಾಭಿಷೇಕ ಹಾಗೂ ಶ್ರಿಕೃಷ್ಣನಿಗೆ ಅಗ್ರಪೂಜೆ - ಇವಾಗದಂತೆ ಮಾಡಬೇಕು - ಎಂಬುದಾಗಿ ಅವರೆಲ್ಲರೂ ಮಾತನಾಡಿಕೊಂಡರು.

ಈ ನಿಷ್ಕರ್ಷ-ನಿಶ್ಚಯಗಳಿಂದಾಗಿ ರಾಜರುಗಳೆಲ್ಲರ ಕ್ರೋಧವು ಉಕ್ಕಿತು. ಅವರುಗಳಿಗೆ ಇಷ್ಟರ ಹೊತ್ತಿಗೆ ಕೆರಳಿದಂತಾಗಿತ್ತು, ಹಾಗೂ ತಮ್ಮ ಬಲದ ಬಗ್ಗೆಯೇ ಒಂದು ಆತ್ಮವಿಶ್ವಾಸವೂ ಉಂಟಾಗಿತ್ತು. ಅವರೊಳಗೇ ಕೆಲ ಸ್ನೇಹಿತರು ಅವರನ್ನು ತಡೆಯುತ್ತಿದ್ದರು; ಹಾಗಿದ್ದೂ ಅವರ ಶರೀರವು ಕಂಗೊಳಿಸುತ್ತಿತ್ತು - ಮಾಂಸದ ಆಸೆಯನ್ನು ತೋರಿಸಿ, ಕೊಡದೆ ವಂಚನೆಯನ್ನೇನಾದರೂ ಮಾಡಿದರೆ ಗರ್ಜಿಸುವ ಸಿಂಹಗಳ ಶರೀರವು ಹೇಗೆ ಕೋಪಾವೇಶದಿಂದ ಹೊಳೆಯುವುದೋ ಹಾಗೆ. ಮಿತಿಕಾಣದ ಸೈನ್ಯಗಳೂ, ರಾಜರ ಸಾಗರವೂ ವರ್ತಿಸುತ್ತಿದ್ದ ಬಗೆಯನ್ನು ಕಂಡ ಕೃಷ್ಣನು ಯುದ್ಧಕ್ಕೇ ಸನ್ನಾಹವೇರ್ಪಡುತ್ತಿದೆಯೆಂದು ಅರಿತುಕೊಂಡನು.

ಸಾಗರದ ಹಾಗಿದ್ದ ಆ ರಾಜಮಂಡಲವನ್ನು ಯುಧಿಷ್ಠಿರನು ಕಂಡನು. ಪ್ರಲಯಕಾಲದಲ್ಲಿ ಸಂವರ್ತ-ವಾತವೆಂಬ ಮಹಾಬಿರುಗಾಳಿಯು ಬೀಸುವುದಲ್ಲವೇ? ಆಗ ಸಮುದ್ರವೆಲ್ಲ ಮಹಾಕ್ಷೋಭೆಗೊಳಗಾಗುವುದು. ಹಾಗೆ ಕ್ಷೋಭೆಗೊಂಡಿತ್ತು, ಆ ರಾಜಸಮೂಹ.

ಭೀಷ್ಮರ ಬಳಿ ಹೋಗಿ ಯುಧಿಷ್ಠಿರನು ಈ ಕುರಿತು ಮಾತನಾಡಿದನು. ಅವರಾದರೂ ಮತಿಸಂಪನ್ನರಾದವರಲ್ಲಿ ಮುಖ್ಯರಾದವರು, ವೃದ್ಧರು, ಕುರುಕುಲ-ಪಿತಾಮಹರೇ ಆದವರು. ಬೃಹತ್ತಾದ ತೇಜಸ್ಸುಳ್ಳವನೂ ಶತ್ರುಸಂಹಾರಕನೂ ಆದ ಇಂದ್ರನು, ಬೃಹಸ್ಪತಿಯ ಬಳಿ ಹೋಗಿ ಮಾತನಾಡುವಂತೆ ಇದು ತೋರುತ್ತಿತ್ತು.

ಯುಧಿಷ್ಠಿರನು ಹೀಗೆಂದನು: "ಭೀಷ್ಮರೇ, ಈ ದೊಡ್ಡ ರಾಜಸಾಗರವು ರೋಷದಿಂದ ಚಂಚಲವಾಗಿದೆ. ಹೀಗಿರುವಲ್ಲಿ ಯಾವ ಉಪಾಯವನ್ನು ನಾವು ಮಾಡಬೇಕು? - ಎಂಬುದನ್ನು ತಾವು ಸೂಚಿಸಬೇಕು, ಪಿತಾಮಹರೇ. ಹೇಗೆ ಮಾಡಿದರೆ ಯಜ್ಞಕ್ಕೆ ವಿಘ್ನವಾಗದು, ಆದರೆ ಪ್ರಜೆಗಳಿಗೆ ಹಿತವಾಗುವುದು, ಹಾಗೂ ಎಲ್ಲೆಡೆ ಶಾಂತಿಯೂರುವುದು - ಎಂಬುದನ್ನು ತಿಳಿಸಿಕೊಡಿ" ಎಂದನು.


Tuesday, September 15, 2026

ಪ್ರಶ್ನೋತ್ತರ ರತ್ನಮಾಲಿಕೆ 83 (Prasnottara Ratnamalike 83)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ - ೮೩. ಈ ಲೋಕದಲ್ಲಿ ಕಲ್ಪಲತೆ ಯಾವುದು?

ಉತ್ತರ- ಒಳ್ಳೆಯ ಶಿಷ್ಯನಿಗೆ ಕೊಟ್ಟ ವಿದ್ಯೆ.


ಕಲ್ಪಲತೆ, ಕಾಮಧೇನು ಇವೆಲ್ಲವೂ ಕಲ್ಪಿಸಿದ್ದನ್ನು ಕೊಡುವಂತವುಗಳು. ಕಲ್ಪಲತೆಯು ಒಂದು ಬಗೆಯ ಬಳ್ಳಿ. ಆದರೆ ಇವು ಇರುವುದು ಸ್ವರ್ಗದಲ್ಲಿ. ಹಾಗಾದರೆ ಭೂಲೋಕದಲ್ಲಿ ನಮಗೆ ಇಷ್ಟವಾದದ್ದನ್ನು ಕೊಡುವಂತಹ ಕಲ್ಪಲತೆಯಂತಹ ಪದಾರ್ಥ ಯಾವುದಾದರೂ ಇದೆಯೇ? ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಬಹಳ ಸುಂದರವಾಗಿದೆ. ಸತ್ಪಾತ್ರನಾದ ಶಿಷ್ಯನಿಗೆ ಕೊಟ್ಟ ವಿದ್ಯೆ ಎಂಬುದಾಗಿ. ಸತ್ಪಾತ್ರ ಒಳ್ಳೆಯ ಪಾತ್ರ - ಕೊಟ್ಟಿದ್ದನ್ನು ಬೀಳದಂತೆ ರಕ್ಷಿಸಿಕೊಳ್ಳುವ ವಸ್ತು. ಗುರು ಕೊಟ್ಟ ವಿದ್ಯೆಯನ್ನು ಹಾಳಾಗದಂತೆ ಪೋಲಾಗದಂತೆ ತನ್ನಲ್ಲಿ ಧರಿಸಿ ಅವಿಕಾರವಾಗಿ ಮುಂದಕ್ಕೆ ಕೊಡುವ ಸಾಮರ್ಥ್ಯವುಳ್ಳ ಅಧಿಕಾರಿಯೇ ಸತ್ಪಾತ್ರ - ಸಚ್ಛಿಷ್ಯ ಎಂದು ಕರೆಸಿಕೊಳ್ಳುತ್ತಾನೆ. ಈ ಬಗೆಯ ಕೊಟ್ಟ ವಿದ್ಯೆಯು ಬೇಡಿದ್ದನ್ನು ಕೊಡುವಲ್ಲಿ ಸಮರ್ಥವಾದುದು ಎಂಬುದು ತಾತ್ಪರ್ಯ.  ಹಾಗಾದರೆ ವಿದ್ಯೆಗೆ ಬೇಡಿದ್ದನ್ನು ಕೊಡುವ ಸಾಮರ್ಥ್ಯ ಹೇಗೆ ಬರುತ್ತದೆ? ಎಂಬುದು ಇಲ್ಲಿ ಚಿಂತಿಸಬೇಕಾಗಿದೆ. 


ಯಾವುದೇ ವಸ್ತುವೂ ಕೂಡ ಸರಿಯಾದ ವ್ಯಕ್ತಿಯ ಕೈಯಲ್ಲಿ ಇದ್ದಾಗ ಆ ವಸ್ತುವಿಗೆ ಸಾರ್ಥಕತೆ ಬರುತ್ತದೆ. ಆ ವಸ್ತು ಯಾವ ಉದ್ದೇಶದಿಂದ ಬಂದಿದೆಯೋ ಆ ಉದ್ದೇಶವನ್ನು ಈಡೇರಿಸುವಂತೆ ಇದ್ದಾಗ ಮಾತ್ರ ಆ ವಸ್ತು ಉಪಯುಕ್ತ ಎಂಬುದಾಗಿ ಹೇಳಲಾತ್ತದೆ. ಈ ವಿದ್ಯೆ ಎಂಬುದು ಅತ್ಯಂತ ಉತ್ಕೃಷ್ಟವಾದ ವಿಷಯ. ಇಂದು ಈ ವಿದ್ಯೆ ಎಂದು ಹೇಳಲಾಗುತ್ತಿದ್ದ ಯಾವ ಶಿಕ್ಷಣವಿದೆಯೋ ಅದು ಕೇವಲ ಭೌತಿಕಜೀವನವನ್ನು ಮಾತ್ರ ಭರಿಸಲು ಶಕ್ತವಾಗಿದೆ ಎಂಬುದಾಗಿ ಹೇಳಬಹುದು. ಆದರೆ ವಿದ್ಯೆಗೆ ಎಷ್ಟು ವ್ಯಾಪ್ತಿ ಇದೆ? ಎಂಬುದನ್ನು ಉಪನಿಷತ್ತು ಹೀಗೆ ಹೇಳುತ್ತದೆ ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂಬುದಾಗಿ. ಸಂಸಾರದಿಂದ ಚಕ್ರದಲ್ಲಿ ಸಿಲುಕಿ ಒದ್ದಾಡುತ್ತಿರುವ ಜೀವವು ತನ್ನ ಮೂಲ ನೆಲೆಯಾದ ಭಗವಂತನ ಕಡೆಗೆ ಸಾಗುವದನ್ನೇ ಮುಕ್ತಿ ಎಂಬುದಾಗಿ ಕರೆಯಲಾಗಿದೆ. ಇದನ್ನು ಪಡೆಯಲು ವಿದ್ಯೆ ಬೇಕು. ಯಾವುದು ಸಿಕ್ಕಿದರೆ ಎಲ್ಲವೂ ಸಿಕ್ಕಂತಾಗುತ್ತದೆಯೋ ಅದೇ ನಿಜವಾದ ತೃಪ್ತಿ. ಎಂದರೆ ಮುಕ್ತಿ ಸಿಕ್ಕಿದರೆ ಇನ್ನು ಸಿಗುವಂತದ್ದು ಯಾವುದೂ ಇಲ್ಲ. ಅಂತಹ ಮುಕ್ತಿಯನ್ನೇ ಕೊಡಿಸುವ ವಿದ್ಯೆಯು ಕಲ್ಪಲತೆಯಲ್ಲದೇ ಇನ್ನೇನು! ಆದರೆ ಇಲ್ಲಿ ಒಂದು ಜವಾಬ್ದಾರಿಯನ್ನು ಹೇಳಿ ಎಚ್ಚರಿಸಲಾಗಿದೆ. ವಿದ್ಯಾಧಿದೇವತೆಯಾದ ಶಾರದೆಯು ಬ್ರಾಹ್ಮಣನಲ್ಲಿ ಬಂದು ಕೇಳಿಕೊಳ್ಳುವ ಒಂದು ಮಾತನ್ನು ಶ್ರೀರಂಗ ಮಹಾಗುರುಗಳು ಯಾವಾಗಲೂ ಹೇಳುತ್ತಿದ್ದರು - ಅಸೂಯೆ ಉಳ್ಳವನಿಗೆ, ಮೋಸಗಾರನಿಗೆ, ಆಲಸ್ಯ ಉಳ್ಳವನಿಗೆ ಕೊಡದೆ ನನ್ನನ್ನು ರಕ್ಷಿಸು “ಗೋಪಾಯ ಮಾಂ ಶೇವಧಿಷ್ಟೇಹಮಸ್ಮಿ, ಅಸೂಯಕಾಯ, ಅನೃಜವೇ, ಅಯತಾಯ ನ ಮಾ ಬ್ರೂಯಾಃ ವೀರ್ಯವತೀ ಯಥಾ ಸ್ಯಾಮ್” ಎಂಬುದಾಗಿ. ಅಂದರೆ ಒಬ್ಬ ಸತ್ಪಾತ್ರನಿಗೆ ಕೊಟ್ಟ ವಿದ್ಯೆಯು ಮಾತ್ರ ಸಾರ್ಥಕವಾಗಿ ಮುಕ್ತಿಗೆ ಸಾಧನವಾಗುತ್ತದೆ. ಒಂದು ಚಾಕುವನ್ನು ಸರಿಯಾದ ವ್ಯಕ್ತಿಗೆ ಕೊಟ್ಟರೆ ತರಕಾರಿಯನ್ನೋ ಅಥವಾ ಇನ್ನಾವುದೋ ನಮಗೆ ಬೇಕಾದ ವಸ್ತುವನ್ನು ಕತ್ತರಿಸಲು ಬಳಕೆಯಾಗಬಹುದು. ಅದೇ ಚಾಕುವನ್ನು ಡಕಾಯಿತನಿಗೆ ಕೊಟ್ಟರೆ ಅದು ಯಾರದ್ದೋ ಪ್ರಾಣವನ್ನು ತೆಗೆಯಲು ಸಾಧನವಾದೀತು. ಆದ್ದರಿಂದ ವಿದ್ಯೆಯು ಸತ್ಪಾತ್ರನಾದ ಶಿಷ್ಯನಿಗೆ ಕೊಟ್ಟಾಗ ಅದು ಮುಕ್ತಿಯಂತಹ ಅಲಭ್ಯ ಲಾಭವನ್ನು ಕೊಡುವ ಈ ಲೋಕದ ಕಲ್ಪಲತೆ ಎಂಬುದಾಗಿ ತಿಳಿಯಬಹುದು.


ಸೂಚನೆ :  14/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ವ್ಯಾಸ ವೀಕ್ಷಿತ 205 ಭೀಷ್ಮರ ನುಡಿಗೆ ಸಹದೇವನ ಸಮರ್ಥನೆ (Vyaasa Vikshita 205)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png



ಭೀಷ್ಮರ ನುಡಿಗೆ ಸಹದೇವನ ಸಮರ್ಥನೆ

ಕೃಷ್ಣನೇ ಅಗ್ರಪೂಜೆಗೆ ಅರ್ಹನೆಂದು ಪ್ರತಿಪಾದಿಸುತ್ತಾ ಭೀಷ್ಮರು ಹೇಳಿದರು:

ಜರಾಯುಜವೆಂದರೆ ಗರ್ಭಾಶಯದಿಂದ ಹುಟ್ಟುವ ಪಶು-ಮನುಷ್ಯಾದಿಗಳು. ಬೆವರಿನಲ್ಲಿ ಹುಟ್ಟತಕ್ಕವು ಎಂದರೆ ಕೆಲ ಕೃಮಿ-ಕೀಟಗಳು. ಅಂಡಜಗಳೆಂದರೆ ಮೊಟ್ಟೆಯೊಡೆದು ಹುಟ್ಟುವ ಪಕ್ಷಿಗಳು, ಸರ್ಪಗಳು ಮುಂತಾದವು; ಉದ್ಭಿದ್ ಅಥವಾ ಉದ್ಭಿಜ್ಜಗಳೆಂದರೆ ಭೂಮಿಯನ್ನು ಸೀಳಿಕೊಂಡು ಮೇಲೆ ಬರುವ ಗಿಡಮರಗಳು. ಈ ನಾಲ್ಕೂ ವಿಧವಾದ ಜೀವಿಗಳೂ, ಅರ್ಥಾತ್ ಸಮಸ್ತ ಜೀವಿಗಳೂ ಕೃಷ್ಣನಲ್ಲಿ ಪ್ರತಿಷ್ಠಿತವಾಗಿವೆ. 

ಸೂರ್ಯಚಂದ್ರರೂ ಗ್ರಹ-ನಕ್ಷತ್ರಗಳೂ ದಿಕ್ಕು-ವಿದಿಕ್ಕುಗಳೂ - ಎಲ್ಲವೂ ಕೃಷ್ಣನಲ್ಲಿಯೇ ಪ್ರತಿಷ್ಠಿತವಾಗಿವೆ. ಹೇಗೆ ವೇದಗಳಲ್ಲಿ ಅಗ್ನಿಹೋತ್ರವೇ ಮುಖ್ಯವೋ ಹಾಗೆ ದೇವಲೋಕಗಳನ್ನೂ ಸೇರಿದಂತೆ ಎಲ್ಲ ಲೋಕಗಳಲ್ಲೂ ಕೃಷ್ಣನೇ ಮುಖ್ಯ. ಛಂದಸ್ಸುಗಳಲ್ಲಿ ಗಾಯತ್ರಿಯೇ ಮುಖ್ಯ; ಮನುಷ್ಯರಲ್ಲಿ ರಾಜನೇ ಮುಖ್ಯ; ಹಾಗೆಯೇ ನದಿಗಳಲ್ಲಿ ಸಾಗರವು; ನಕ್ಷತ್ರಗಳಲ್ಲಿ ಚಂದ್ರ; ತೇಜಸ್ವಿವಸ್ತುಗಳಲ್ಲಿ ಸೂರ್ಯ; ಪರ್ವತಗಳಲ್ಲಿ ಮೇರು; ಪಕ್ಷಿಗಳಲ್ಲಿ ಗರುಡ - ಇವರುಗಳು ಹೇಗೋ ಹಾಗೆ, ಮೇಲೂ ಕೆಳಗೂ ಅಡ್ಡಲಾಗಿಯೂ ಇರುವ ಜಗತ್ತಿನೆಡೆಗಳಲ್ಲೆಲ್ಲಾ ಕೃಷ್ಣನೇ ಮುಖ್ಯನಾದವನು.

ಈ ಶಿಶುಪಾಲನು ಬಾಲ, ಮೂಢಮತಿ. ಎಂದೇ ಎಲ್ಲೆಡೆ ಸರ್ವದಾ ಕೃಷ್ಣನನ್ನು ಕುರಿತಾಗಿ ಹೀಗೆಯೇ ಮಾತನಾಡುವುದೀತ. ಉತ್ಕೃಷ್ಟವಾದ ಮತಿಯನ್ನು ಹೊಂದಿರುವ ಯಾವನೇ ಆದರೂ  ಧರ್ಮವೆಂದರೇನೆಂದು ಹುಡುಕಿನೋಡುವವನೇ ಆದಲ್ಲಿ, ಆತನೇ ಧರ್ಮಸ್ವರೂಪವನ್ನು ಅರಿಯಬಲ್ಲ. ಆದರೆ ಈ ಚೇದಿರಾಜನು, ಎಂದರೆ ಶಿಶುಪಾಲನು, ಹಾಗಲ್ಲ.

ವೃದ್ಧರಾಗಲಿ ಬಾಲರಾಗಲಿ, ಅವರನ್ನೂ ಒಳಗೊಂಡಂತೆ, ಮಹಾತ್ಮರಾದ ಅರಸರುಗಳಲ್ಲಿ ಯಾರು ತಾನೆ ಕೃಷ್ಣನನ್ನು ಮಾನಾರ್ಹನೆಂದು ಭಾವಿಸುವುದಿಲ್ಲ, ಕೃಷ್ಣನನ್ನು ಪೂಜಿಸುವುದಿಲ್ಲ? ಈ ಶಿಶುಪಾಲನೇನಾದರೂ ಈ ಪೂಜೆಯನ್ನು ಅನುಚಿತವೆಂದು ಭಾವಿಸುತ್ತಾನಾದರೆ ಆ ಬಗ್ಗೆ ತನಗೇನು ಸರಿಯೆಂದು ತೋರುತ್ತದೋ ಹಾಗೆ ಮಾಡಲಿ” - ಎಂದು ಹೇಳಿಬಿಟ್ಟರು.

ಈ ರೀತಿಯಾಗಿ ಹೇಳಿ, ಭೀಷ್ಮರು ತಮ್ಮ ಮಾತನ್ನು ಮುಗಿಸಿದರು. ಆಗ ಸಹದೇವನು ಅರ್ಥವತ್ತಾದ ಉತ್ತರವನ್ನು ಹೀಗಿತ್ತನು:

"ಕೇಶಿದಾನವನನ್ನು ಸಂಹರಿಸಿದ ಕೇಶವನು ಅಪ್ರಮೇಯವಾದ, ಎಂದರೆ ಅಳೆಯಲು ಅಸಾಧ್ಯವಾದಂತಹ, ಪರಾಕ್ರಮವುಳ್ಳವನು. ಆತನಿಗೆ ನಾನು ಪೂಜೆ ಸಲ್ಲಿಸಿರುವುದಾಗಿದೆ.

ನಿಮ್ಮಲ್ಲಿ ಯಾರಿಗಾದರೂ ಈ ಬಗ್ಗೆ ಸಹನೆಯಿಲ್ಲದಿದ್ದರೆ ಅಂತಹ ಬಲಶಾಲಿಗಳ ಶಿರಸ್ಸಿನ ಮೇಲೆ ನನ್ನೀ ಚರಣವನ್ನಿಟ್ಟಿದ್ದೇನೆಂದು ಭಾವಿಸತಕ್ಕದ್ದು! ಅಂತಹವನು ಯಾರೇ ಆಗಲಿ ನನಗೆ ವಧ್ಯನೇ ಸರಿ, ಎಂದರೆ ನನ್ನಿಂದ ಸಾವನ್ನು ಹೊಂದತಕ್ಕವನೇ ಸರಿ. ಇದರಲ್ಲಿ ಸಂಶಯವಿಲ್ಲ.

ಕೃಷ್ಣನು ನಮಗೆ ಆಚಾರ್ಯನೂ ತಂದೆಯೂ ಗುರುವೂ ಆಗಿರತಕ್ಕವನು. ಆತನು ಅರ್ಚೆಗೆ ಯೋಗ್ಯ, ಅರ್ಘಕ್ಕೆ ಅರ್ಹನಾದವನು. ಆತನಿಗಾಗಿರುವ ಅರ್ಚನವನ್ನು ಇಲ್ಲಿ ನೆರೆದಿರುವ ಮತಿಸಂಪನ್ನರಾದ ಅರಸರು ಅನುಮೋದಿಸಲಿ” - ಎಂದನು.

ಅಲ್ಲಿದ್ದ ಧೀಮಂತರಾದ ರಾಜರುಗಳಲ್ಲಿ ಯಾರೊಬ್ಬನೂ ಮಾತನ್ನಾಡಲಿಲ್ಲ - ಮಾನಸಂಪನ್ನರೂ ಬಲಶಾಲಿಗಳೂ ಆದ ರಾಜರ ಮಧ್ಯದಲ್ಲಿ ಸಹದೇವನು ಹೀಗೆ ಮಾತನ್ನಾಡಿದಾಗ. ಆಗ ಸಹದೇವನ ಶಿರಸ್ಸಿನ ಮೇಲೆ ಪುಷ್ಪವೃಷ್ಟಿಯೇ ಆಯಿತು. ಹಾಗೂ ಅಲ್ಲಿದ್ದ ದೇವತೆಗಳಿಂದ “ಸಾಧು, ಸಾಧು,” ಎಂದರೆ “ಭಲೇ ಭಲೇ” - ಎಂಬ ಮಾತು, ಹೊರಹೊಮ್ಮಿತು.

ಶ್ರೀಕೃಷ್ಣನು ಎಂದೂ ಸೋಲನ್ನೇ ಕಾಣದವ, ಎಂದೇ ಅಜಿತ. ಆತನನ್ನು ಕುರಿತಾಗಿ ಆಗ ನಾರದರು ಮಾತನಾಡಿದರು.

ಸೂಚನೆ :  14/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ. 

ಅಷ್ಟಾಕ್ಷರೀ 113 ಕ್ವ ತೇ ಧರ್ಮಸ್ತದಾ ಗತಃ ? (Astakshara 113)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)

image.png


ದಂಡನೆ ವಿಧಿಸುವಾಗ ದೋಷ-ಘೋಷಣೆಯೂ ಬೇಕೆ? 

ಇದೋ ಬರುತ್ತಲಿದೆ ಶ್ರೀಕೃಷ್ಣಜನ್ಮಾಷ್ಟಮಿ! ಗೀತೋಪದೇಶಕನಿಗೆ ವಂದಿಸಬೇಕಲ್ಲವೆ?  “ಕೃಷ್ಣ ಹೇಳಿದ, ಅರ್ಜುನ ಕೇಳಿದ; ನಮಗೇನು? – ಎನ್ನುವಂತಿಲ್ಲ” – ಎಂಬ ಶ್ರೀರಂಗಮಹಾಗುರುಗಳ ಎಚ್ಚರ ಸ್ಮರಣೀಯ. ಏಕೆ? ಅರ್ಜುನನು ಯುದ್ಧದಲ್ಲಷ್ಟೆ ನಿಮಿತ್ತಮಾತ್ರನಲ್ಲ; ಅವನ ನಿಮಿತ್ತವಾಗಿ ಲೋಕಕ್ಕೆಲ್ಲಾ ಗೀತೋಪದೇಶವು ದೊರೆಯಿತಲ್ಲವೇ?

ಕೆಲವರ ಪ್ರಶ್ನೆ: "ಉಪದೇಶ ಕೊಡುವುದಕ್ಕೇನು?ಜೊತೆಗೇ ದುರುಪದೇಶವನ್ನೂ ಮಾಡುತ್ತಿದ್ದರೆ ?” 

ಕೃಷ್ಣನೇನು ದುರುಪದೇಶವನ್ನು ಮಾಡಿದ್ದಾನೆಯೇ?

“ಹೌದು. ಕರ್ಣವಧ-ಪ್ರಸಂಗವೊಂದೇ ಸಾಲದೇ? ಸಾರಥಿಯೂ ಇಲ್ಲದೆ, ರಥವೂ ಹೂತು ಹೋಗಿರುವ ಕಡುಕಷ್ಟದಲ್ಲಿದ್ದ ಕರ್ಣನಂತಹ ಆಜನ್ಮ-ದುರದೃಷ್ಟಶಾಲಿಗೆ ಕನಿಕರತೋರಿಸುವುದರ ಬದಲಾಗಿ, ‘ಅರ್ಜುನಾ, ಸುಸಮಯವಿದು! ಬಿಡು ಬಾಣವನ್ನು!’ - ಎಂದು ಕೃಷ್ಣನೆಂದದ್ದು ದುರುಪದೇಶವಲ್ಲವೇ?”

ಆಗ ಕರ್ಣನ ಪರಿಸ್ಥಿತಿ ಹೇಗಿತ್ತು? ಭೂಮಿಯಲ್ಲಿ ರಥವು ಹುದುಗಿಹೋಗಿತ್ತು. ಪರಶುರಾಮರು ಆತನಿಗುಪದೇಶಿಸಿದ ಅಸ್ತ್ರವು ಮನಸ್ಸಿನಿಂದ ಪ್ರಣಷ್ಟವಾಗಿತ್ತು (ಮರೆತುಹೋಗಿತ್ತು). ರಥದೊಂದು ಚಕ್ರವೂ ಬಿದ್ದುಹೋಗಿತ್ತು.

ಗ್ರಸ್ತ-ಚಕ್ರನಾದ ರಾಧೇಯನಿಗೆ ಕ್ರೋಧದ ಕಣ್ಣೀರುಕ್ಕಿತು. ಆತನೆಂದ: ತಾಳು, ಅರ್ಜುನಾ, ಹೇಡಿಯ ಹಾಗೆ ನೀನೀಗ ಬಾಣಪ್ರಯೋಗ ಮಾಡಬೇಡ. ನೀನು ಶೂರನಲ್ಲವೆ? ಯುದ್ಧ-ಧರ್ಮವನ್ನು ಚೆನ್ನಾಗಿಬಲ್ಲೆಯಲ್ಲವೇ? ವೇದಾಂತದಲ್ಲಿ ಮುಳುಗೆದ್ದಿರುವೆಯಲ್ಲವೆ? ದಿವ್ರಾಸ್ತ್ರಜ್ಞನಲ್ಲವೆ?

ರಥಸ್ಥನಾದ ನೀನು, ನೆಲದ ಮೇಲಿರುವ ನನ್ನನ್ನು ಹೊಡೆಯುವುದು ತಕ್ಕುದಲ್ಲವಲ್ಲವೇ?  ನಾನೇನು ಕೃಷ್ಣನಿಗಾಗಲಿ ನಿನಗಾಗಲಿ ಹೆದರುವವನಲ್ಲ! ನೀನು ದೊಡ್ಡವಂಶದವನೆಂದೇ ನಿನಗೆ ಹೇಳುತ್ತಿರುವುದು!"

ಧರ್ಮದ ಬಗ್ಗೆ ಕಾಳಜಿಯಿರುವ ಶೂರನೊಬ್ಬನ ಮುಖ್ಯಪ್ರಶ್ನೆಗಳಿವು, ಜೊತೆಗೆ ತರ್ಕಬದ್ಧವಾದವು - ಎನ್ನಿಸುವುದಲ್ಲವೇ? ಅವಕ್ಕೆ ಉತ್ತರವನ್ನು ಕೃಷ್ಣನೇ ಕೊಟ್ಟಿದ್ದಾನೆ. ಅದನ್ನು ವಿಮರ್ಶಿಸುವ ಮೊದಲು ಆತನ ಮಾತುಗಳನ್ನೇ ಆಲಿಸೋಣ:

"ರಾಧೇಯ, ಧರ್ಮವನ್ನೀಗ ಸ್ಮರಿಸುತ್ತಿರುವೆಯಲ್ಲಾ!

ದ್ರೌಪದಿಯು ಏಕವಸ್ತ್ರದಲ್ಲಿದ್ದಾಗ ಅವಳನ್ನು ಸಭೆಗೆ ಎಳೆತಂದರಲ್ಲಾ, ಆಗ ನಿನಗೆ ಧರ್ಮವು ಹೊಳೆಯಲಿಲ್ಲವೇ, ಕರ್ಣ? ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ? (ಕ್ವ ತೇ ಧರ್ಮಃ ತದಾ ಗತಃ?)

ಪಗಡೆಯಾಟವನ್ನರಿಯದ ಯುಧಿಷ್ಠಿರನನ್ನು ಶಕುನಿಯು ವಂಚಿಸಿದನಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?

ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಹಿಂದಿರುಗಿ ಬಂದಾಗಲೂ ರಾಜ್ಯವನ್ನು ಕೊಡಲು ನಿರಾಕರಿಸಲಾಯಿತಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?

ಭೀಮಸೇನನನ್ನು ಹಾವಿನಿಂದ ಕಡಿಸಿದರಲ್ಲಾ, ಭೋಜನದಲ್ಲಿ ವಿಷವಿಕ್ಕಿದರಲ್ಲಾ, ಅದೆಲ್ಲಕ್ಕೂ ನಿನ್ನ ಸಹಮತಿಯಿತ್ತಲ್ಲಾ - ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?

ವಾರಣಾವತದಲ್ಲಿ ಅರಗಿನ ಮನೆಯಲ್ಲಿ ಪಾಂಡವರು ಮಲಗಿದ್ದಾಗ ನೀ ಬೆಂಕಿ ಹಚ್ಚಿಸಿದೆಯಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?

ರಜಸ್ವಲೆಯಾದ ದ್ರೌಪದಿಯು ದುರುಳ-ದುಃಶಾಸನನಿಂದ ಅವಮಾನಿತಳಾಗುತ್ತಿದ್ದಾಗ ಸಭೆಯಲ್ಲಿ ನೀ ನಕ್ಕೆಯೆಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?

“ಪಾಂಡವರ ಕಥೆ ಮುಗಿಯಿತು, ಓ ದ್ರೌಪದಿ! ಬೇರೊಬ್ಬ ಗಂಡನನ್ನು ವರಿಸು!” - ಎಂದು ನೀನು ಮೂದಲಿಸಿದೆಯಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?

ಒಂಟಿಬಾಲಕನಾದ ಅಭಿಮನ್ಯುವನ್ನು ಅನೇಕ ಮಹಾರಥರು ಸುತ್ತುವರಿದುಕೊಂಡು ಯುದ್ಧದಲ್ಲಿ ಕೊಂದಿರೆಲ್ಲಾ, ಆಗೆಲ್ಲಿ ಹೋಗಿತ್ತು ನಿನ್ನ ಧರ್ಮ?”

ಕೃಷ್ಣನು ಈ ಪ್ರಶ್ನೆಗಳನ್ನೆಲ್ಲಾ ಕೇಳುತ್ತಿರಲು, ಕರ್ಣನು ನಿರುತ್ತರನಾಗಿ ತಲೆತಗ್ಗಿಸಿದನು - ಎನ್ನುತ್ತಾರೆ ವ್ಯಾಸರು.

ಮುಂದೆ ನಡೆದ ಕರ್ಣಸಂಹಾರಾದಿ-ಕಥೆಗಳು ಎಲ್ಲರಿಗೂ ತಿಳಿದಿರತಕ್ಕವೇ. 

“ಕ್ವ ತೇ ಧರ್ಮಃ ತದಾ ಗತಃ?” - ಎಂಬುದು ಹತ್ತು ಶ್ಲೋಕಗಳ ಪಲ್ಲವಿಯಾಗಿದೆ. ನಗುತ್ತಾ ಪಾಪಕೃತ್ಯವನ್ನೆಸಗಿದವರು ಅಳುತ್ತಾ ನೋವನ್ನನುಭಿಸಬೇಕಾಗುವುದಷ್ಟೆ! – ಎಂಬ ಪಾಠವಿಲ್ಲಿದೆಯಲ್ಲವೇ?

ಅದಕ್ಕಿಂತಲೂ ಮಿಗಿಲಾದ ಪಾಠವೂ ಒಂದಿದೆ: ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುವಾಗ, ಜೊತೆಗೇ ಶಿಕ್ಷಣವನ್ನೂ ಕೊಡುವುದು ಧರ್ಮವೆನಿಸುವುದೆಂದು!

ಮೋಸ-ವಂಚನೆಗಳು, ಅನ್ಯತೇಜೋವಧೆ, ಸ್ತ್ರೀಮಾನಾಪಹಾರ - ಮುಂತಾದವು ಸಣ್ಣ ಅಪರಾಧಗಳಲ್ಲ. ಧರ್ಮದ್ರೋಹಿಯೂ ಕಪಟಿಯೂ ಆದವನಿಗೂ ಆತನ ಅಪರಾಧವನ್ನು ಜ್ಞಾಪಿಸಿಕೊಟ್ಟೇ ಪ್ರಹಾರವನ್ನು ಕೊಡತಕ್ಕದ್ದು. ಕೋರ್ಟುಗಳಲ್ಲಿ ದಂಡನೆಯನ್ನು ವಿಧಿಸುವಾಗ, "ನಿನ್ನ ಇಂತಹ ತಪ್ಪಿಗಾಗಿ ನಿನಗೀ ಶಿಕ್ಷೆ"ಯೆಂದು ಹೇಳಿಯೇ ದಂಡಿಸತಕ್ಕದ್ದು.

ಏತಕ್ಕಾಗಿ? ಆಗಲೂ ಒಮ್ಮೆ ಚುಚ್ಚಿ ಹಂಗಿಸಿ ನೋಯಿಸಿಬಿಡಲೆಂದಲ್ಲ. ಅಲ್ಲೊಂದು ತತ್ತ್ವವಡಗಿದೆ: ಅಂತಹ ನುಡಿಯೊಡನೊದಗಿದ ಶಿಕ್ಷೆಯು ಜೀವದ ಅಂತಃಕರಣದ ಮೇಲೇ ಮುದ್ರಿತವಾಗುಳಿಯುವುದು; ಮುಂದೂ, ಮುಂದಿನ ಜನ್ಮಗಳಲ್ಲಿ ಸಹ, ಅದೇ/ಅಂತಹ ತಪ್ಪನ್ನು ಮತ್ತೆ ಮಾಡಲು ಬಿಡದ ಭದ್ರ-ಪಾಠವದಾಗುವುದು!  ಅರ್ಥಾತ್, ಅದೇ ತೆರನ ದುಃಖ/ನೋವುಗಳು ಮತ್ತೆ ಒದಗದಂತೆ ಅದು ಕಾಯುವುದು!

ಶ್ರೀರಂಗಮಹಾಗುರುಗಳ ಮಾತು ಇಲ್ಲಿ ಅವಧೇಯ : “ಶಿಕ್ಷೆಯೆಂಬ ಪದದ ಮೂಲ “ಶಿಕ್ಷ ವಿದ್ಯೋಪಾದಾನೇ” ಎಂಬ ಧಾತು: ಅರಿವನ್ನುಂಟುನಾಡಿ, ಮತ್ತೆ ಅದೇ ತಪ್ಪಾಗದಂತಾಗಿಸುವುದೇ ಶಿಕ್ಷೆಯ ಗುರಿ.” ಇಲ್ಲಿ ಜೀವಕಾರುಣ್ಯವೇ ಪ್ರೇರಕವಲ್ಲವೇ?

ಸೂಚನೆ: 14/09//2026 ರಂದು ಈ ಲೇಖನ ವಿಜಯವಾಣಿ ಸುದಿನದಲ್ಲಿ ಪ್ರಕಟವಾಗಿದೆ.




Sunday, September 6, 2026

(Vyaasa Vikshita 204) ಶಿಶುಪಾಲನ ಪ್ರಶ್ನೆಗಳಿಗೆ ಭೀಷ್ಮರಿತ್ತ ಮರುತ್ತರ (Vyaasa Vikshita 204)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


image.png


ಶ್ರೀಕೃಷ್ಣನಿಗೆ ಅಗ್ರ-ಪೂಜೆಯನ್ನು ಸಲ್ಲಿಸಿದುದನ್ನು ಶಿಶುಪಾಲನು ತೀವ್ರವಾಗಿ ವಿರೋಧಿಸಿದನಷ್ಟೆ. ಅದಕ್ಕೆ ಪ್ರತ್ಯುತ್ತರವನ್ನು ಭೀಷ್ಮರು ಸ್ಪಷ್ಟವಾಗಿಯೂ ಸಮರ್ಥವಾಗಿಯೂ ಕೊಡುತ್ತಾ ಹೀಗೆ ಹೇಳಿದರು:

“ಅಯ್ಯಾ ಶಿಶುಪಾಲ, ಶ್ರೀಕೃಷ್ಣನಿಂದಲೇ ಈ ಜಗತ್ತು ಪೂರ್ಣವಾಗಿ ಪ್ರತಿಷ್ಠಿತವಾಗಿರುವಂತಹುದು. ಎಂದೇ, ಹಿರಿಯರನೇಕರಿದ್ದರೂ ಸಹ ನಾವು ಅರ್ಚಿಸುವುದು ಕೃಷ್ಣನನ್ನೇ ವಿನಾ ಇತರರನ್ನಲ್ಲ.

ಶಿಶುಪಾಲ-ರಾಜನೇ, ಕೃಷ್ಣನನ್ನು ಕುರಿತಾಗಿ ನೀನು ಈಗ ಹೇಳಿರುವಂತೆಲ್ಲಾ ಮಾತನಾಡುವುದು ನಿನಗೆ ತರವಲ್ಲ. ನಿನಗಿಂತಹ ಬುದ್ಧಿಯು ಬರಬಾರದು.

ನಾನು ಅನೇಕ ಜ್ಞಾನ-ವೃದ್ಧರನ್ನು ಸೇವಿಸಿದ್ದೇನೆ. ಇಲ್ಲಿಗೆ ಆಗಮಿಸಿದ ಅಂತಹವರ ಬಾಯಲ್ಲಿ ಕೃಷ್ಣನ ಬಹುಗುಣಗಳನ್ನು ನಾನು ಕೇಳಿರುವೆ. ಬಹುಮಂದಿಗೆ ಆತನೇ ಆದರಣೀಯನು.

ಆ ಧೀಮಂತನ ಕರ್ಮಗಳು ಜನ್ಮದಾರಭ್ಯ ಏನೇನುಂಟೋ ಅವುಗಳನ್ನು ಅನೇಕರು ಹೇಳಿರುವುದನ್ನು ಮತ್ತೆ ಮತ್ತೆ ಕೇಳಿರುವೆನು.

ಅಯ್ಯಾ ಚೇದಿರಾಜನೇ, ಯಾವುದೋ ಕಾಮನೆಗಳನ್ನಿಟ್ಟುಕೊಂಡು ನಾವು ಜನಾರ್ದನನನ್ನು ಅರ್ಚಿಸುತ್ತಿಲ್ಲ. ಅಥವಾ ಯಾವುದೇ ಸಂಬಂಧವನ್ನು ಮುಂದಿಟ್ಟುಕೊಂಡಾಗಲಿ, ಆತನು ಹಿಂದೆ ಮಾಡಿರುವ ಉಪಕಾರವನ್ನಾಗಲಿ, ಎಂತೂ ಅಲ್ಲ.

ಭೂಮಿಯ ಮೇಲಿರುವ ಸಮಸ್ತ ಭೂತಗಳಿಗೂ, ಎಂದರೆ ಸರ್ವಜೀವಿಗಳಿಗೂ, ಸುಖವನ್ನುಂಟುಮಾಡುವವನೂ ಸಜ್ಜನರಿಂದ ಅರ್ಚಿಸಲ್ಪಡುವವನೂ ಆದವನನ್ನೇ ನಾವು ಅರ್ಚಿಸುವುದು. ಈತನ ಯಶಸ್ಸು, ಶೌರ್ಯ, ಜಯ - ಇವುಗಳನ್ನು ಅರಿತೇ ಈತನಿಗೆ ಅರ್ಚನೆಯನ್ನು ನಾವು ಸಲ್ಲಿಸುತ್ತಿರುವುದು. ಯಾರ ಗುಣಗಳನ್ನು ನಾವು ಪರೀಕ್ಷಿಸಿಲ್ಲವೋ ಅಂತಹ ಒಬ್ಬ ಬಾಲಕನು ಸಹ ಇಲ್ಲಿಲ್ಲ.

ಬರೀ ವಯಸ್ಸಿನ ಲೆಕ್ಕದಲ್ಲಷ್ಟೇ ವೃದ್ಧರೆನಿಸುವವರನ್ನು ಬಿಟ್ಟು, ಗುಣಗಳನ್ನು ಲೆಕ್ಕಕ್ಕೆ ತೆಗೆದುಕೊಂಡೇ ಹರಿಯನ್ನು ಅರ್ಚ್ಯತಮ - ಎಂದರೆ, ಅರ್ಚನೀಯರಾದವರಲ್ಲೆಲ್ಲ ಶ್ರೇಷ್ಠ - ಎಂಬುದಾಗಿ ಭಾವಿಸಲಾಗಿರುವುದು.

ಬ್ರಾಹ್ಮಣರಲ್ಲಿ ಜ್ಞಾನ-ವೃದ್ಧರಿಗೇ ಪೂಜ್ಯತೆ. ಕ್ಷತ್ರಿಯರಲ್ಲಿ ಬಲದಲ್ಲಿ ಅಧಿಕರಾದವರಿಗೇ ಪೂಜ್ಯತೆ. ಧನ-ಧಾನ್ಯಗಳಲ್ಲಿ ಹೆಚ್ಚುಗಾರಿಕೆಯುಳ್ಳವರಿಗೇ ವೈಶ್ಯರಲ್ಲಿ ಪೂಜ್ಯತೆ. ಕೇವಲ ಶೂದ್ರರಲ್ಲೇ ಹುಟ್ಟಿನಿಂದ, ಎಂದರೆ ಜನನದ ದಿನದಿಂದ, ಅರ್ಥಾತ್ ವಯೋಮಾತ್ರದಿಂದ, ಶ್ರೇಷ್ಠತೆಯ ಲೆಕ್ಕ.

ಶ್ರೀಕೃಷ್ಣನ ಪೂಜ್ಯತೆಯಲ್ಲಾದರೆ ಎರಡೂ ಕಾರಣಗಳೂ ಇಲ್ಲಿ ಉಪಸ್ಥಿತವಾಗಿವೆ. ಇತ್ತ ವೇದ-ವೇದಾಂಗಗಳ ವಿಜ್ಞಾನವೂ ಆತನಲ್ಲಿವೆ; ಬಲವೂ ಅಭ್ಯಧಿಕವಾಗಿದೆ.

ಈ ಲೋಕದಲ್ಲಿ ಕೇಶವನಲ್ಲದೆ ಮತ್ತಾರು ನರರಲ್ಲಿ ವಿಶಿಷ್ಟರಾಗಿದ್ದಾರೆ? ದಾನ-ದಕ್ಷತೆಗಳು, ಶ್ರುತ(ಎಂದರೆ ಶಾಸ್ತ್ರಜ್ಞಾನ)-ಶೌರ್ಯಗಳು, ಹ್ರೀ-ಕೀರ್ತಿಗಳು, ಉತ್ತಮವಾದ ಬುದ್ಧಿ, ವಿನಯ-ಶ್ರೀ-ಧೃತಿಗಳು ಹಾಗೂ ತುಷ್ಟಿ-ಪುಷ್ಟಿಗಳು – ಇವೆಲ್ಲವೂ ಅಚ್ಯುತನಲ್ಲಿಯೇ ನಿತ್ಯವಾಗಿ ನೆಲೆಗೊಂಡಿರತಕ್ಕವು.

ಈ ರೀತಿಯಾಗಿ ಗುಣ-ಸಂಪನ್ನನೂ ಆರ್ಯನೂ ತಂದೆ-ಗುರುಗಳಂತಿರುವವನೂ ಪೂಜೆಗೆ ಯೋಗ್ಯನೂ ಆದ ಕೃಷ್ಣನು ಪೂಜಿಸಲ್ಪಟ್ಟಿದ್ದಾನೆಂದರೆ, ಅದನ್ನು ಎಲ್ಲರೂ ಕ್ಷಮಿಸತಕ್ಕದ್ದೇ. ನಮ್ಮ ಪಾಲಿಗೆ ಕೃಷ್ಣನೇ ಋತ್ವಿಕ್ಕು, ಗುರು, ಆಚಾರ್ಯ, ಸ್ನಾತಕ, ರಾಜ ಹಾಗೂ ಪ್ರಿಯಮಿತ್ರ - ಎಲ್ಲವೂ. ಎಂದೇ ಆತನಿಗೆ ಅಗ್ರಪೂಜೆಯು ಸಂದಿರುವುದು.

ಕೃಷ್ಣನೇ ಲೋಕಗಳೆಲ್ಲದರ ಉತ್ಪತ್ತಿ-ಅಪ್ಯಯಗಳು - ಎಂದರೆ ಜನನ-ವಿಲಯಗಳಿಗೆ ಕಾರಣನಾದವನು. ಚರಾಚರಾತ್ಮಕವಾದ ಸಮಸ್ತವಿಶ್ವವೂ ಕೃಷ್ಣನಿಗಾಗಿಯೇ ಆಗಿರುವುದು. ಅವ್ಯಕ್ತ-ಪ್ರಕೃತಿಯೆಂದರೂ ಈತನೇ, ಸನಾತನ-ಕರ್ತಾ ಎಂದರೂ ಈತನೇ, ಸಮಸ್ತ-ಭೂತಗಳಿಗೂ ಮಿಗಿಲಾದವನೆಂದರೂ ಈತನೇ. ಎಂದೇ ಅಚ್ಯುತನು ಪೂಜ್ಯತಮನಾಗಿರುವುದು.

ಬುದ್ಧಿ-ಮನಸ್ಸು-ಮಹತ್ತುಗಳೂ, ವಾಯು-ಅಗ್ನಿ-ಜಲ-ಆಕಾಶ-ಭೂಮಿಗಳೂ, ಕೃಷ್ಣನಲ್ಲೇ ಪ್ರತಿಷ್ಠಿತವಾಗಿರತಕ್ಕವು.

ನಾಲ್ಕುವಿಧಗಳಾದ ಭೂತಗಳು (ಜೀವಗಳು) ಯಾವುವುಂಟೋ - ಎಂದರೆ ಜರಾಯುಜ, ಸ್ವೇದಜ, ಅಂಡಜ, ಉದ್ಭಿಜ್ಜ ಎಂದು ಕರೆಯಲ್ಪಡತಕ್ಕವು - ಇವೆಲ್ಲವೂ ಕೃಷ್ಣನಲ್ಲೇ ಪ್ರತಿಷ್ಠಿತವಾಗಿರತಕ್ಕವು.

ಸೂಚನೆ :  6/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.  

ಪ್ರಶ್ನೋತ್ತರ ರತ್ನಮಾಲಿಕೆ 82 (Prasnottara Ratnamalike 82)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)

image.png


ಪ್ರಶ್ನೆ 82- ಯಾವುದು ರಕ್ಷಿಸಿಕೊಳ್ಳಬೇಕಾದುದು?

ಉತ್ತರ- ಕೀರ್ತಿ, ಪತಿವ್ರತಾ, ತನ್ನ ಬುದ್ಧಿ.

ಹೃದಯ ಬಹಳ ಬೆಲೆಬಾಳುವಂತಹದ್ದು. ಏಕೆಂದರೆ ಕಳೆದುಕೊಂಡರೆ ಮತ್ತೆ ಪಡೆಯಲಾಗದು. ಹಾಳಾದರೆ ಜೀವಕ್ಕೇ ಅಪಾಯ ಬರಬಹುದು.  ಹಾಗಾಗಿ ಅದನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳಲೇಬೇಕು. ಅಂತೆಯೇ ಯಾವುದು ರಕ್ಷಿಸಿಕೊಳ್ಳಬೇಕಾದುದೋ ಅದು ಅತ್ಯಂತ ಮೌಲ್ಯಯುತವಾಗಿರಲೇಬೇಕು. ಅಥವಾ ಅದು ಬೇಗ ಹಾಳಾಗುವಂಥದ್ದಾಗಿರಬೇಕು. ಈ ಎರಡು ಗುಣಗಳಿಂದ ಕೂಡಿರುವುದನ್ನು ನಾವು ರಕ್ಷಿಸಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯ. ಯಾವುದು ಬೆಲೆ ಬಾಳುತ್ತದೆಯೋ ಅದನ್ನು ಕಳೆದುಕೊಂಡರೆ ಅದು ನಮಗೆ ನಷ್ಟವನ್ನು ಉಂಟುಮಾಡುತ್ತದೆ. ಮತ್ತೆ ಅದನ್ನು ಪಡೆಯಲು ಅಷ್ಟೇ ಬೆಲೆಯನ್ನು ತೆರಬೇಕಾಗುತ್ತದೆ. ಕೆಲವೊಮ್ಮೆ ಆ ವಸ್ತು ಮತ್ತೊಮ್ಮೆ ಸಿಗದೆಯೂ ಇರಬಹುದು. ಹಾಗಾಗಿ ಅದು ರಕ್ಷಿಸಿಕೊಳ್ಳಬೇಕಾದುದು. ಇನ್ನು ಕೆಲವೊಂದು ಪದಾರ್ಥ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಒಮ್ಮೆ ಹಾಳಾದರೆ ಮತ್ತೆ ಪಡೆಯಲು ಆಗದೇ ಇರಬಹುದು ಅಥವಾ ಅದನ್ನು ಪಡೆಯಲು ಇನ್ನೆಷ್ಟು ಪರಿಶ್ರಮವನ್ನು ಹಾಕಬೇಕಾಗುತ್ತದೆಯೋ? ಅಂತಹ ಉತ್ಕೃಷ್ಟವಾದ ಪದಾರ್ಥ ಆಗಿರಬಹುದು. ಅಂತಹ ರಕ್ಷಿಸಿಕೊಳ್ಳಬೇಕಾದ ವಿಷಯ ಯಾವುದು? ಎಂಬುದು ಈ ಪ್ರಶ್ನೋತ್ತರದಲ್ಲಿ ಇದೆ.


ಕೀರ್ತಿ, ಪತಿವ್ರತೆ ಮತ್ತು ತಮ್ಮ ಬುದ್ಧಿ ಈ ಮೂರೂ ಯಾವಾಗಲೂ ರಕ್ಷಿಸಿಕೊಳ್ಳಬೇಕಾದವು. ಕೀರ್ತಿಯನ್ನು ಪಡೆಯುವುದು ಅತ್ಯಂತ ಕಷ್ಟಸಾಧ್ಯ. ಅದಕ್ಕೆ ಬಹಳ ಪರಿಶ್ರಮ ಬೇಕು. ಉತ್ಕೃಷ್ಟನಾದ ವ್ಯಕ್ತಿಯಲ್ಲಿರುವ ಅನೇಕ ಒಳ್ಳೆಯ ಗುಣಗಳಿಂದ ಆ ವ್ಯಕ್ತಿ ಕೀರ್ತಿಯನ್ನು ಸಂಪಾದನೆ ಮಾಡುತ್ತಾನೆ. ಉದಾಹರಣೆಗೆ ದಾನವನ್ನು ಮಾಡುವುದರಿಂದ ಅವನು ದಾನಶೂರ ಎಂದೂ, ವಿದ್ಯೆಯ ಸಂಪಾದನೆಯಿಂದ ಒಳ್ಳೆಯ ವಿದ್ಯಾವಂತ ಎಂದೂ, ಬೇರೆಯವರಿಗೆ ಉಪಕಾರ ಮಾಡುವುದರಿಂದ ಪರೋಪಕಾರಿ ಎಂಬಿತ್ಯಾದಿ ಅನೇಕ ಒಳ್ಳೆಯ ಕೆಲಸವನ್ನು ಮಾಡಿದಾಗ ಆ ವ್ಯಕ್ತಿಗೆ ಕೀರ್ತಿ ಬರುತ್ತದೆ . ಕೀರ್ತಿಯನ್ನು ಸಂಪಾದನೆ ಮಾಡುವುದು ಬಹಳ ಕಷ್ಟ. ಅಪಕೀರ್ತಿ ಬರುವುದು ತುಂಬಾ ಸುಲಭ. ಅದಕ್ಕೆ ತುಂಬಾ ಕಾಲದ ಪರಿಶ್ರಮದ ಅವಶ್ಯಕತೆ ಇಲ್ಲ. ಹಾಗಾಗಿ ಬಂದ ಕೀರ್ತಿಯನ್ನು ರಕ್ಷಿಸಿಕೊಳ್ಳಬೇಕು.

ಪತಿವ್ರತೆ ಎಂದರೆ ತನ್ನ ಪತಿಯನ್ನು ಮಾತ್ರ ಮನಸ್ಸಿನಲ್ಲಿ ಭಾವಿಸುವವಳು. ಯಾವ ಕಾರಣಕ್ಕೂ, ಯಾವ ಕಾಲದಲ್ಲೂ ತನ್ನ ಮನಸ್ಸಿನಲ್ಲಿ ಇನ್ನಾವುದೇ ಪುರುಷನಿಗೆ ಸ್ಥಾನವನ್ನು ಕೊಡದಿರುವವಳು. ಪತಿಯ ಸರ್ವವಿಧವಾದ ಕಾರ್ಯದಲ್ಲೂ ಸಹಧರ್ಮಣಿಯಾಗಿ ಇರುವವಳು. ಹೀಗೆ ಇರಬೇಕಾದರೆ ಅದು ಅತ್ಯಂತ ಕಷ್ಟ ಸಾಧ್ಯ. ಇದೊಂದು ತಪಸ್ಸು. ಅದೇ ಒಬ್ಬ ವ್ಯಭಿಚಾರಿಣೀ ಎಂಬ ಹೆಸರನ್ನು ಪಡೆಯಬೇಕಾದರೆ ಅದಕ್ಕೆ ತುಂಬಾ ಶ್ರಮ ಬೇಕಿಲ್ಲ. ಆದ್ದರಿಂದ ಪತಿವ್ರತೆಯೆಂಬ ಪಡೆದ ಹೆಸರನ್ನು ಉಳಿಸಿಕೊಳ್ಳಲೂ ತಪಸ್ಸನ್ನು ಮಾಡಬೇಕು. ಆದ್ದರಿಂದ ಪಡೆದ ಆ ಹೆಸರನ್ನು ಕಾಪಿಟ್ಟುಕೊಳ್ಳಬೇಕು.


 ಬುದ್ಧಿಯು ಶುದ್ಧವಾದ ಕಲ್ಯಾಣಿಯಂತೆ. ಅದನ್ನು ಹಾಗೆಯೇ ಇಟ್ಟುಕೊಳ್ಳುವುದು ತುಂಬಾ ಕಷ್ಟ ಸಾಧ್ಯ. ಹೇಗೆ ಶುದ್ಧವಾದ ಕಲ್ಯಾಣಿಯನ್ನು ಕೆಡಿಸಿಕೊಳ್ಳಲು ಕೆಲವೇ ಕ್ಷಣಗಳು ಸಾಕೋ, ಅಂತಯೇ ಬುದ್ಧಿಯನ್ನು ಕಲುಷಿತಗೊಳಿಸಿಕೊಳ್ಳುವುದೂ ಕೂಡ ಅಷ್ಟೇನು ಶ್ರಮದಾಯಕವಲ್ಲ. ಆದ್ದರಿಂದ ಕೀರ್ತಿ, ಪತಿವ್ರತೆ ಮತ್ತು ಬುದ್ಧಿ ಈ ಮೂರು ಸಂಪಾದನೆಮಾಡಿದ ಅತ್ಯಮೂಲ್ಯವಾದ ಸಂಪತ್ತುಗಳು. ಅವುಗಳನ್ನು ಸಂಪಾದಿಸಲು ಪಟ್ಟ ಶ್ರಮವನ್ನು ಕೆಡಿಸಿಕೊಳ್ಳಲು ಮಾಡಬೇಕಿಲ್ಲ. ಆದ್ದರಿಂದ ಕೆಡಿಸಿಕೊಳ್ಳದೆ ಅದನ್ನು ಅಂತಯೇ ಇಟ್ಟುಕೊಳ್ಳಲು ನಾವು ಪರಿಶ್ರಮವನ್ನು ಪಡಬೇಕಾಗುತ್ತದೆ ಎಂದು ಈ ಪ್ರಶ್ನೋತ್ತರ ಸಾರುತ್ತದೆ.


ಸೂಚನೆ :  6/9/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.