ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ - ೬೬. ಲಕ್ಷ್ಮಿಯು ಯಾರನ್ನು ವರಿಸುವಳು?
ಆಲಸ್ಯ ರಹಿತನನ್ನು ಮತ್ತು ನೀತಿಯಿಂದ ಕೂಡಿದವನನ್ನು.
ಈ ಪ್ರಶ್ನೋತ್ತರದಲ್ಲಿ ಕಾರ್ಯಕಾರಣಭಾವವಿದೆ. ಲಕ್ಷ್ಮಿಯು ಕಾರ್ಯವಾದರೆ ಉತ್ಸಾಹ ಅಥವಾ ಆಲಸ್ಯವಿಲ್ಲದಿರುವಿಕೆ ಮತ್ತು ನೀತಿ ಕಾರಣ. ಏಕೆಂದರೆ ಲಕ್ಷ್ಮಿಯು ಒಲಿಯಬೇಕಾದರೆ ಯಾವ ಅರ್ಹತೆ ಇರಬೇಕಾಗುತ್ತದೆ? ಎಂಬ ವಿಷಯ ಇಲ್ಲಿದೆ. ಆ ವ್ಯಕ್ತಿಯಲ್ಲಿ ಆಲಸ್ಯ ಇರಬಾರದು ಮತ್ತು ಆತ ನೀತಿಯಿಂದ ಕೂಡಿರಬೇಕು ಎಂದು. ಈ ಎರಡು ಗುಣಗಳಿರುವವನನ್ನು ಲಕ್ಷ್ಮಿಯೂ ಬಿಡುವುದಿಲ್ಲ ಎಂದರ್ಥ. ಇಲ್ಲಿ ಲಕ್ಷ್ಮಿ ಎಂದರೆ ಮಹಾವಿಷ್ಣುವಿನ ಮನದೆನ್ನೆ ಎಂಬ ಅರ್ಥ ಮಾತ್ರ ಅಲ್ಲ. ಇದಕ್ಕೆ ಸಂಪತ್ತು ಎಂಬ ಅರ್ಥವನ್ನು ತೆಗೆದುಕೊಳ್ಳಬೇಕು. ಸಂಪಾದಿಸಿದ ಸಂಪತ್ತನ್ನು ಸರಿಯಾಗಿ ಬಳಸಿಕೊಂಡಲ್ಲಿ ಮಹಾಲಕ್ಷ್ಮಿಯ ಪತಿಯಾದ ಮಹಾವಿಷ್ಣು ಸಿಗದಿರನು.
ಯಾವುದೇ ಕಾರ್ಯದ ಫಲಿತವನ್ನು ಇಲ್ಲಿ ‘ಲಕ್ಷ್ಮಿ’ ಎಂಬುದಾಗಿ ತಿಳಿಯಬೇಕು. ಅಂದರೆ ಒಂದು ಫಲರೂಪವಾದುದರಿಂದ ಲಕ್ಷ್ಮಿಯು ಅನೇಕ ಪ್ರಕಾರವಾಗಿ ಇರುತ್ತಾಳೆ. ಇವುಗಳಲ್ಲಿ ಪ್ರಧಾನವಾಗಿ ಆದಿಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ಧೈರ್ಯಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿ ಹೀಗೆ ಅಷ್ಟಲಕ್ಷ್ಮಿಯರ ರೂಪದಲ್ಲಿ ನಾವು ಲಕ್ಷ್ಮಿಯನ್ನು ಭಾವಿಸುತ್ತೇವೆ. ಯಾವುದೇ ವಿಧವಾದ ಲಕ್ಷ್ಮಿ ನಮಗೆ ಲಭಿಸಬೇಕಾದರೆ ಅದಕ್ಕೆ ಬೇಕಾದ ಪೂರಕವಾದ ಸಾಮಗ್ರಿಗಳು ಇರಬೇಕಾಗುತ್ತವೆ. ಸಾಮಾನ್ಯವಾಗಿ ಒಂದು ಕಾರ್ಯವಾಗಬೇಕಾದರೆ ಅಲ್ಲಿ ಕಾರಣವಿರಬೇಕು. ಮತ್ತು ಆ ಕಾರ್ಯಕ್ಕೆ ಪ್ರತಿಬಂಧಕ ಅಥವಾ ವಿಘ್ನ ಇರಬಾರದು. ಮತ್ತು ಪ್ರತಿಬಂಧಕ ಇದ್ದರೂ ಕಾರ್ಯವನ್ನುಂಟುಮಾಡುವ ಉತ್ತೇಜಕವಾದ ಕಾರಣ ಸಾಮಗ್ರಿ ಇದ್ದರೆ ಕಾರ್ಯಸಂಪನ್ನವಾಗುತ್ತದೆ ಎಂಬುದಾಗಿ ಶಾಸ್ತ್ರವು ಕಾರ್ಯಕಾರಣಗಳಿಗಿರುವ ಸಂಬಂಧವನ್ನು ಹೀಗೆ ವಿವರಿಸುತ್ತದೆ. ಅಂದರೆ ಸಂಪತ್ತು ಬರಬೇಕಾದರೆ ಅದಕ್ಕೆ ಇರುವ ಪ್ರತಿಬಂಧಕವೇ ಆಲಸ್ಯ. ಮತ್ತು ಬಂದ ಫಲವು ಉಳಿಯಬೇಕಾದರೆ ಏನು ಮಾಡಬೇಕು? ಎಂಬ ವಿಷಯವೂ ಈ ಉತ್ತರದಲ್ಲಿ ನಿರೂಪಿತವಾಗಿದೆ. ಹಾಗೂ ಹೀಗೂ ಕಷ್ಟಪಟ್ಟು ಲಕ್ಷ್ಮಿಯನ್ನು ಸಂಪಾದಿಸಬಹುದು. ಸಹಜವಾಗಿ ಆಕೆ ಚಂಚಲೆ. ಒಂದು ಕಡೆ ಉಳಿಯಳು ಆಕೆ. ಅವಳನ್ನು ಉಳಿಸಿಕೊಳ್ಳುವುದಕ್ಕೂ ಸಹ ಒಂದು ಜಾಣ್ಮೆಯೇ ಬೇಕು. ಅದಕ್ಕಾಗಿ ಏನು ಬೇಕು? ಎಂಬುದನ್ನು ಇಲ್ಲಿ ಹೇಳಲಾಗಿದೆ. ಅಲ್ಲಿ ಒಂದು ನಿಯತ್ತು ಅಥವಾ ನೀತಿ ಬೇಕು. ಬದ್ಧತೆ ಅಥವಾ ಕ್ಷಮತೆ ಇರಬೇಕಾಗುತ್ತದೆ. ಅವಳು ಉಳಿಯಬೇಕಾದರೆ ನಮ್ಮಲ್ಲಿ ಆ ಅರ್ಹತೆಯು ಸದಾ ಜಾಗೃತವಾಗಿರುವಂತೆ ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಿದ್ದಾಗ ಬಂದ ಸಂಪತ್ತು ಅಲ್ಲಿ ನೆಲೆಗೊಳ್ಳುತ್ತದೆ. ಹಾಗಾಗಿ ಈ ಎರಡು ಲಕ್ಷಣಗಳಿದ್ದರೆ ಮಾತ್ರ ಮಹಾಲಕ್ಷ್ಮಿ ನೆಲೆಗೊಳ್ಳುತ್ತಾಳೆ ಎಂಬುದಾಗಿ ಈ ಪ್ರಶ್ನೋತ್ತರ ಸಾರುತ್ತದೆ.
ಇದಕ್ಕೆ ಸಂಬಂಧಪಟ್ಟಂತೆ ಮಹಾಭಾರತದ ವಿದುರನೀತಿ ಹೀಗೆ ಹೇಳಿದೆ - ಯಾವನಿಗೆ ಮಹಾಲಕ್ಷ್ಮಿ ಅನಾಯಾಸವಾಗಿ ಒಲಿಯುತ್ತಾಳೆ? ಎಂದು. “ಉತ್ಸಾಹಸಂಪನ್ನಮ್ ಅದೀರ್ಘಸೂತ್ರಂ ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್ | ಶೂರಂ ಕೃತಜ್ಞಂ ದೃಢಸೌಹೃದಂ ಚ ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ || ಎಂದು. ವ್ಯಕ್ತಿಯಲ್ಲಿ ಸಂಕಲ್ಪಿಸಿದ ಕಾರ್ಯ ಸಿದ್ಧಿಸುವತನಕ ನಿರಂತರ ಉತ್ಸಾಹವಿರಬೇಕು, ವಿಳಂಬವಿರಬಾರದು, ಅರಿತು ಕೆಲಸ ಮಾಡುವವನಾಗಿರಬೇಕು, ಚಟಗಳಲ್ಲಿ ಆಸಕ್ತನಾಗಿರಬಾರದು, ಶೂರನಾಗಿರಬೇಕು, ಕೃತಜ್ಞತೆಯ ಭಾವ ಉಳ್ಳವನಾಗಿರಬೇಕು, ಮಾಡುವ ಕಾರ್ಯದಲ್ಲಿ ತಲ್ಲೀನತೆಯಿರಬೇಕು. ಈ ಏಳು ಗುಣವುಳ್ಳವನನ್ನು ಲಕ್ಷ್ಮಿಯು ತಾನಾಗಿಯೇ ಆತನ ಮನೆಯಲ್ಲಿ ವಾಸಿಸಲು ಇಚ್ಛಿಸುತ್ತಾಳೆ ಎಂಬುದಾಗಿ. ಇದೇ ಅರ್ಥವನ್ನೇ ಇನ್ನೊಂದು ರೀತಿಯಲ್ಲಿ ಈ ಪ್ರಶ್ನೋತ್ತರದಲ್ಲೂ ಹೇಳಲಾಗಿದೆ.
ಸೂಚನೆ : 17/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.