ಕರ್ಮವೆಂಬ ಪದವು ಸಂಸ್ಕೃತದ “ಕೃ” ಮಾಡು ಅಥವಾ ಕಾರ್ಯಮಾಡು ಎಂಬ ಅರ್ಥವುಳ್ಳ ಮೂಲ ಧಾತುವಿನಿಂದ ವ್ಯುತ್ಪತ್ತಿಯಾದದ್ದು. ಇದರ ಅರ್ಥ- ಕ್ರಿಯೆ, ಕೆಲಸ, ಕಾರ್ಯ, ಕೃತ್ಯ, ಕರ್ಮ, ಮಾಡಲ್ಪಟ್ಟದ್ದು ಎಂಬುದಾಗಿದೆ. ಇದು ಕೇವಲ ಕ್ರಿಯೆ ಎಂಬ ಅರ್ಥದ ಜೊತೆಗೆ ಅದರ ಕಾರಣ–ಕಾರ್ಯ ತತ್ವವನ್ನು (principle of Cause-effect) ಸೂಚಿಸುತ್ತದೆ. ಅಂದರೆ, ಒಬ್ಬ ವ್ಯಕ್ತಿಯ ಕ್ರಿಯೆಯ ಹಿಂದಿನ ಉದ್ದೇಶದ ಫಲಿತಾಂಶವನ್ನು ಒಳಗೊಂಡಿರುತ್ತದೆ ಮತ್ತು ವ್ಯಕ್ತಿಯ ಭವಿಷ್ಯದಲ್ಲಿ ಸಂಭವಿಸಬಹುದಾದ ಸಿಹಿ ಅಥವಾ ಕಹಿ ಘಟನೆಗಳನ್ನು ರೂಪಿಸುತ್ತದೆ.
ಸದುದ್ದೇಶದಿಂದ ಕೂಡಿದ ಧಾರ್ಮಿಕ ಕರ್ಮ ಭವಿಷ್ಯದ ಸಂತೋಷಕ್ಕೆ ಕಾರಣವಾಗುತ್ತದೆ. ಈ ತರಹದ ಕರ್ಮವು ಪ್ರತಿಫಲಾಪೇಕ್ಷೆಯಿದ್ದಲ್ಲಿ ಪುಣ್ಯಕರ್ಮವೆನ್ನುತ್ತಾರೆ. ದುರುದ್ದೇಶ ಮತ್ತು ಅಧಾರ್ಮಿಕ ಕರ್ಮ ಭವಿಷ್ಯದ ದುಃಖಕ್ಕೆ ಮೂಲ ಕಾರಣವಾಗುತ್ತವೆ. ಇಂತಹ ಕರ್ಮ ಪಾಪಕರ್ಮವೆನಿಸಿಕೊಳ್ಳುತ್ತದೆ. ಕರ್ಮವು ಜೀವ ಹಾಗೂ ಪುನರ್ಜನ್ಮಕ್ಕೂ ನಂಟನ್ನು ಹೊಂದಿರುತ್ತದೆ. "ಕರ್ಮ " ಹಾಗೂ ಕರ್ಮಫಲ ಅನುಭವಿಸುದಕ್ಕಾಗಿ ಜನ್ಮ-ಮರಣದ ವೃತ್ತದ ಚಿಂತನೆ ವೇದಸಾಹಿತ್ಯಕಾಲದಿಂದಲೂ ಕಂಡುಬರುತ್ತದೆ. ಧರ್ಮ-ಕರ್ಮದ ನಂಟನ್ನು ಬೃಹದಾರಣ್ಯಕೋಪನಿಷತ್ತಿನಲ್ಲಿಯೂ ಕಾಣಬಹುದು. ಬೌದ್ಧ, ಜೈನ ಮತ್ತು ಸಿಖ್ರ ಪಂಥದವರೂ ಇದನ್ನು ನಂಬುತ್ತಾರೆ.
ಕರ್ಮದ ವಿಭಾಗೀಕರಣವನ್ನು ಭಗವದ್ಗೀತೆಯಲ್ಲಿ ಮತ್ತು ಪುರಾಣಗಳಲ್ಲಿ ಕಾಣಬಹುದು. ವಿಭಾಗೀಕರಣ ಪದಗಳಲ್ಲಿ ವ್ಯತ್ಯಾಸಗಳಿವೆ. ಪುರಾಣಸಾಹಿತ್ಯಗಳಲ್ಲಿ ಕರ್ಮವನ್ನು ಕೆಳಕಂಡ ವಿಭಾಗಗಳಾಗಿ ಕಾಣಬಹುದು. (೧) ಸಂಚಿತ ಕರ್ಮ- ನಾವು ಹಿಂದಿನ ಎಲ್ಲಾ ಜನ್ಮಗಳಲ್ಲಿ ಮಾಡಿದ, ಆದರೆ ಇನ್ನೂ ಕರ್ಮಫಲ ನೀಡದ ಕರ್ಮಗಳ ಸಂಗ್ರಹ. ಇದು ಭವಿಷ್ಯದ ಜನ್ಮಗಳಲ್ಲಿ ಅನುಭವಿಸಬೇಕಾದ ಫಲಗಳು. (೨) ಪ್ರಾರಬ್ಧಕರ್ಮ -ಪ್ರಸ್ತುತ ಜನ್ಮದಲ್ಲಿ ಅನುಭವಿಸಬೇಕಾದ ಹಣ್ಣಾಗಿರುವ ಕರ್ಮದಫಲ. ಇದು ಜೀವನದ ಸಮಗ್ರ ಆಗುಹೋಗುಗಳ ಪರಿಸ್ಥಿತಿಯನ್ನು ರೂಪಿಸುತ್ತದೆ. ಉದಾಹರಣೆಗೆ, ಆಯಸ್ಸು, ಅರೋಗ್ಯ, ಶರೀರದ ಸ್ವರೂಪ, ರಕ್ತಸಂಬಂಧಗಳು, ವಿದ್ಯೆ, ಉದ್ಯೋಗ ಇತ್ಯಾದಿ. ಪ್ರಾರಬ್ಧಕರ್ಮ ಪ್ರಸಕ್ತ ಜನ್ಮದಲ್ಲಿ ಫಲ ಕೊಡುತ್ತಿರುವದರಿಂದ, ಇದನ್ನು ಅನುಭವಿಸಲೇ ಬೇಕು. ಪ್ರಾರಬ್ಧಕರ್ಮವೆನ್ನುವುದು ಸಾಮಾನ್ಯವಾಗಿ ಕಷ್ಟದ ಪರಿಸ್ಥಿಯನ್ನೇ ಚಿತ್ರಿಸುತ್ತದೆ. ಕನ್ನಡಗಾದೆ "ಮಾಡಿದ್ದುಣ್ಣೋ ಮಹರಾಯ" ಮತ್ತು ಪುರಂದರದಾಸರ ವಾಣಿ “ನಾ ಮಾಡಿದ ಕರ್ಮ ಬಲವಂತವಾದರೆ, ನೀ ಮಾಡುವುದೇನೊ ದೇವ " ನೆನಪುಮಾಡಿಕೊಳ್ಳಬಹುದು. ಪ್ರಾರಬ್ಧಕರ್ಮ ಅಸಹಾಯಕ ಪರಿಸ್ಥಿತಿಯನ್ನು ಬಿಂಬಿಸುತ್ತದೆ. ಪ್ರಾರಬ್ಧಕರ್ಮ ಸುಖ, ಸಂತೋಷ ಕೊಡಲೂ ಬಹುದು. (೩) ಕ್ರಿಯಮಾಣಕರ್ಮ- ಇದು ಈ ಜನ್ಮದಲ್ಲಿ ಪ್ರಸ್ತುತ ಮಾಡುತ್ತಿರುವ ಕ್ರಿಯೆಗಳು. ಇದನ್ನು ಧಾರ್ಮಿಕದೃಷ್ಟಿಯಿಂದ, ಯಾವ ಪ್ರತಿಫಲಾಪೇಕ್ಷೆಯಿಲ್ಲದೆ, ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಮಾಡುವ ಸ್ವಾತಂತ್ರವಿರುತ್ತದೆ. ಕೆಲವರು ಒಳ್ಳೆಯ ಕಾರ್ಯಗಳನ್ನು ಕೀರ್ತಿಗಾಗಿ ಅಥವಾ ಯಾವುದೋ ಫಲ ಅಪೇಕ್ಷಿಸಿ ಮಾಡಬಹುದು. ಈ ಕರ್ಮ ಕೇವಲ ವಿಧಿಯಾಟವಲ್ಲ, ಇಂದಿನ ಪುರುಷಪ್ರಯತ್ನದ ಮಹತ್ವವನ್ನು ಸೂಚಿಸುತ್ತದೆ. (೪) ಅಗಾಮಿ ಕರ್ಮ- ಮುಂದಿನ ಜನ್ಮಗಳಲ್ಲಿ ಕ್ರಿಯಮಾಣ ಕರ್ಮ ಫಲ ನೀಡುವಾಗ ಆಗಾಮಿಕರ್ಮವಾಗುತ್ತದೆ. ಜ್ಞಾನಪ್ರಾಪ್ತಿಯಾದರೆ, ಪ್ರಾರಬ್ಧಕರ್ಮ ಬಿಟ್ಟು ಉಳಿದೆಲ್ಲಾ ಕರ್ಮಗಳು ಜ್ಞಾನಾಗ್ನಿಯಲ್ಲಿ ಸುಟ್ಟು ಬೂದಿಯಾಗುತ್ತದೆಯೆಂದು ಗೀತಾಚಾರ್ಯನೇ ತಿಳಿಸುತ್ತಾನೆ.
ಕರ್ಮವನ್ನು ಹೇಗೆ ಆಚರಿಸಬೇಕು ? ನಾವು ಜೀವನದಲ್ಲಿ ಮಾಡುವ ಎಲ್ಲಾ ಕರ್ಮಗಳು ಪರಮಾತ್ಮಹರಿಯ ಆರಾಧನೆಯೆಂದು ಮಾಡಬೇಕು ಮತ್ತು ಅವನೇ ನಮ್ಮ ಕ್ರಿಯೆಗಳಿಗೆಲ್ಲಾ ಏಕಮಾತ್ರ ನಿರ್ದೇಶಕನು. "ನಾಹಂ ಕರ್ತಾ ಹರಿಃ ಕರ್ತಾ " , ನಾವು ಮಾಡುವ ಕ್ರಿಯೆ ಭಗವಂತನ ಕೆಲಸವೆಂದು, ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡಬೇಕು. ಕರ್ಮದಿಂದ ಉಂಟಾಗಬೇಕಾದ ಫಲವನ್ನು ಅನುಭವಿಸಬೇಡ ಎಂದು ಹೇಳಿಲ್ಲ, ಫಲವನ್ನು ಕೊಡುವುದೋ, ಬಿಡುವುದೋ ಅದನ್ನು ಭಗವಂತನಿಗೆ ಬಿಡಬೇಕು. ಪುರಂದರೋಪನಿಷತ್ತು "ಕೊಡುವ ಕರ್ತು ಬೇರೆ ಇರುತಿರೆ, ಬಿಡು ಬಿಡು ಚಿಂತೆಯನು " ಎಂದು ಉಪದೇಶಿಸುತ್ತದೆ. ಅನುಕೂಲವಾದರೆ, ಅವನ ಪ್ರಸಾದವಪ್ಪ, ಇಲ್ಲದಿದ್ದಲ್ಲಿ, ದೇವರ ಇಚ್ಚೆ ಎಂದಿರಬೇಕು. ಕರ್ಮಗಳಿಗೆ ಕಾರಣವಾದ ಈ ಶರೀರ, ಜೀವನ, ನನ್ನದಲ್ಲ, ಅವನದು, ಎಂದು ನನ್ನತನವ ತೊರೆದು ಕರ್ಮವನ್ನು ಆಚರಿಸಬೇಕು. “ತನು ನಿನ್ನದು ಜೀವನ ನಿನ್ನದು ಅನುದಿನದಲಿ ಬರುವ ಸುಖದುಃಖ ನಿನ್ನದಯ್ಯ” ಎಂಬ ಕನಕದಾಸರ ಕೃತಿ ಸ್ಮರಣೀಯ. ಹೀಗೆ ಮಾಡಿದ್ದಲ್ಲಿ, ಕರ್ಮವು ಭಗವಂತನಲ್ಲಿಗೆ ಕರೆದೊಯ್ಯುತ್ತದೆ .ಎಂಬುವುದು ಶ್ರೀಕೃಷ್ಣನ ಹಿತನುಡಿ. ಮಾರ್ಕಂಡೇಯಮಹರ್ಷಿಗಳು ಪಾಂಡವರಿಗೆ ಉಪದೇಶ ಮಾಡಿದ ಕೌಶಿಕ ಧರ್ಮವ್ಯಾಧನ ಕಥೆ ಜನಜನಿತವಾದದ್ದು. ಬಸವಣ್ಣನವರ " ಕಾಯಕವೇ ಕೈಲಾಸ " ಮಾತು ಎಷ್ಟು ಅರ್ಥಪೂರ್ಣ, ಈ ಭಾವಕ್ಕೆ ಅಭಾವವಿದ್ದಲ್ಲಿ, ಕಾಯಕವು ಲಾಸ್ (loss) ಆಗುವುದಿಲ್ಲವೇ ? ನಾವು ಮಾಡುವ ಕರ್ಮಗಳಿಗೆ ಆಧಾರ ನಮ್ಮ ಶಾಸ್ತ್ರಗಳು, ಋಷಿಮುನಿಗಳ, ಗುರುಹಿರಿಯರ ಆಪ್ತನುಡಿಗಳು. ಇದನ್ನು ತಿರಸ್ಕರಿಸಿ ನಡೆದರೆ, ನಾವೇ ಜವಾಬ್ದಾರರಾಗುತ್ತೇವೆ. ಈ ಸಂದರ್ಭದಲ್ಲಿ ಶ್ರೀರಂಗಸದ್ಗುರುಗಳ "ಜ್ಞಾನ-ಕರ್ಮ ಈ ಎರಡರ ಸಮ್ಮೇಳನದಿಂದ ಜೀವನ ನಡೆದ ಪಕ್ಷದಲ್ಲಿ ಜೀವನ ಸುವ್ಯವಸ್ಥಿತವಾಗಿರುತ್ತದೆ , "ಕರ್ಮವನ್ನು ಮರ್ಮವರಿತು ಆಚರಿಸೀಪ್ಪ", ಎಂಬ ವಾಣಿ ಎಂದೆಂದೂ ಸ್ಮರಣೀಯ. ಕರ್ಮವು ಧರ್ಮಕ್ಕಾಗಿ, ಫಲವು ಭಗವಂತನಿಗಾಗಿ ಎಂದು ಅರ್ಪಿತವಾದರೆ, ಕರ್ಮವು ಮೋಚಕ, ಇಲ್ಲದಿದ್ದಲ್ಲಿ ಪಾಪ ಅಥವಾ ಪುಣ್ಯ ಕರ್ಮವೂ ಬಂಧಕ. ಹದಿನೆಂಟು ದಿನದ ಮಹಾಭಾರತದ ಯುದ್ಧವೆಂಬ ಕರ್ಮವನ್ನೂ ಯಜ್ಞದಂತಾಗಿಸಿದ ಯೋಗೇಶ್ವರನಾದ ಶ್ರೀಕೃಷ್ಣನ ಕುಶಲತೆಯನ್ನು ಸ್ಮರಿಸಿ ನಾವು ಮಾಡುವ ಕರ್ಮವು ಜ್ಞಾನದಲ್ಲಿ ಪರಿಸಮಾಪ್ತಿ ಹೊಂದಲೆಂದು ಸರ್ವಕರ್ಮಸಮಾರಾಧ್ಯನಾದ ಭಗವಂತನಲ್ಲಿ ಪ್ರಾರ್ಥಿಸೋಣ .
ಸೂಚನೆ : 16/5/2026 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.