Monday, May 11, 2026

ವ್ಯಾಸ ವೀಕ್ಷಿತ 187 ಅಪ್ಪನಿಗೆ ಉತ್ತರಕ್ರಿಯೆ - ಮಗನಿಗೆ ಪಟ್ಟಾಭಿಷೇಕ (Vyaasa Vikshita187)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)


image.png

ಕೃಷ್ಣನ ಕೃಪೆಯಿಂದಾಗಿ ಸೆರೆಯಿಂದ ಬಿಡುಗಡೆಹೊಂದಿದ ಅರಸರು ತಮ್ಮ ಕೃತಜ್ಞತೆಯ  ನುಡಿಯನ್ನು ಹೀಗೆ ಮುಗಿಸಿದರು:

“ನಮ್ಮಿಷ್ಟು ಮಂದಿಗೆ ನೀ ದಯಪಾಲಿಸಿದ ಈ ಸ್ವಾತಂತ್ರ್ಯದಿಂದಾಗಿ, ದೀಪ್ತವಾದ ಯಶಸ್ಸು - ಎಂದರೆ ಬೆಳಗುವ ಕೀರ್ತಿಯು - ನಿನಗೆ ಲಬ್ಧವಾಯಿತು, ಓ ಯದುನಂದನನೇ! ಕೃತಜ್ಞರಾದ ನಮಗೆ ನಿನ್ನ ಅಪ್ಪಣೆಯಾಗಬಹುದು: ಅದೆಂತಹ ಕಷ್ಟವಾದ ಕಾರ್ಯವೇ ಆದರೂ ರಾಜರುಗಳಾದ ನಾವು ನೆರವೇರಿಸಿಕೊಡುವೆವು."

ಅವರು ಹೀಗೆ ಹೇಳಲಾಗಿ, ಮಹಾಮನಸ್ಕನಾದ ಕೃಷ್ಣನು, ಅವರಿಗೆ ಆಶ್ವಾಸನೆ ಕೊಡುತ್ತಾ ಹೀಗೆ ಹೇಳಿದನು:

"ರಾಜರೇ, ಯುಧಿಷ್ಠಿರನು ರಾಜಸೂಯ-ಯಜ್ಞವನ್ನು ಮಾಡಲು ಇಷ್ಟಪಟ್ಟಿದ್ದಾನೆ. ಆತನ ಪ್ರವೃತ್ತಿಯು ಧರ್ಮಮಯವಾದುದು. ಆತನು ಸಮ್ರಾಟ್ - ಎಂಬ ಪದವಿಯನ್ನು ಸಂಪಾದಿಸಿಕೊಳ್ಳಲು ಬಯಸಿದ್ದಾನೆ. ಇದನ್ನರಿತು ನೀವೆಲ್ಲರೂ ಆತನಿಗೆ ಸಾಹಾಯ್ಯವನ್ನು ಮಾಡಿರಿ".

ಆಗ ಆ ರಾಜರೆಲ್ಲರೂ ತುಂಬ ಸಂತೋಷಗೊಂಡರು. ಆತನ ಮಾತನ್ನೊಪ್ಪಿ, "ಹಾಗೆಯೇ ಆಗಲಿ" ಎಂದು ಒಪ್ಪಿಗೆ ಸೂಚಿಸಿದರು. ಅನೇಕ ರತ್ನಗಳನ್ನು ಕೃಷ್ಣನಿಗೆ ಸಲ್ಲಿಸಿದರು. ಅವರ ಮೇಲಿನ ಕರುಣೆಯಿಂದ, ಮತ್ತು ಅವರ ಒತ್ತಾಯಕ್ಕೆ ಮಣಿದು, ಕೃಷ್ಣನು ಅವನ್ನು ಸ್ವೀಕರಿಸಿದನು.

ಆ ಬಳಿಕ ಜರಾಸಂಧ-ಪುತ್ರನಾದ ಸಹದೇವನು, ತನ್ನ ಪುರೋಹಿತನನ್ನು ಮುಂದಿಟ್ಟುಕೊಂಡು, ಮಂತ್ರಿಗಳೊಂದಿಗೆ ನಗರದಾಚೆಗೆ ಹೊರಟನು. ವಾಸುದೇವನಲ್ಲಿಗೆ ಬಂದು ಅತ್ಯಂತ-ನಮ್ರತೆಯಿಂದ ನಮಸ್ಕರಿಸಿದನು. ಮತ್ತು ಹೇಳಿದನು: "ನರಶ್ರೇಷ್ಠನೇ, ನನ್ನ ತಂದೆ ಮಾಡಿದುದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಳ್ಳಬೇಡ.  ನಾನು ನಿನಗೆ ಶರಣನಾಗಿದ್ದೇನೆ. ನನ್ನ ವಿಷಯದಲ್ಲಿ ಪ್ರಸನ್ನನಾಗು. ನನ್ನ ತಂದೆಯ ಸಂಸ್ಕಾರವನ್ನು ನಾನು ಮಾಡಲಿಚ್ಛಿಸುತ್ತೇನೆ. ಅದಕ್ಕಾಗಿ ನಿನ್ನಿಂದಲೂ ಭೀಮಾರ್ಜುನರಿಂದಲೂ ಅನುಮತಿಯನ್ನು ಯಾಚಿಸುತ್ತೇನೆ. ಮುಂದೆ ನಾನು ಯಥೇಚ್ಛವಾಗಿ ಹಾಗೂ ಸುಖವಾಗಿ ಓಡಾಡಿಕೊಂಡಿರಲು ನಿಮ್ಮಿಂದ ಅಭಯವನ್ನು ಯಾಚಿಸುತ್ತಿದ್ದೇನೆ."

ಸಹದೇವನ ಈ ಮಾತುಗಳಿಂದ ಕೃಷ್ಣನೂ ಭೀಮಾರ್ಜುನರೂ ಸಂತೋಷಗೊಂಡರು. ನಿನ್ನ ತಂದೆಗೆ ಸಂಸ್ಕಾರವನ್ನು ನೀ ಮಾಡಪ್ಪಾ - ಎಂದರು. ಆತನೂ ಅಂತೆಯೇ ಒಡನೆಯೇ ನಗರವನ್ನು ಪ್ರವೇಶಿಸಿದನು. ಮಂತ್ರಿಗಳೊಂದಿಗೆ ಸೇರಿ ಚಿತೆಯನ್ನೇರ್ಪಡಿಸಿದನು.

ಚಿತೆಗಾಗಿ ಚಂದನದ ಕಟ್ಟಿಗೆಗಳು, ದೇವದಾರು, ಕಾಲಾಗರು(ಎಂದರೆ ಕಪ್ಪುಬಣ್ಣದ ಅಗರು)ವೆಂಬ ಸುಗಂಧ, ಬಗೆಬಗೆಯ ತೈಲಗಳು, ತುಪ್ಪದ ಧಾರೆ, ಇವುಗಳನ್ನು ಬಳಸಲಾಯಿತು.

ಆಮೇಲೆ ಉರಿಯುತ್ತಿದ್ದ ಆ ಜರಾಸಂಧನ ಕಾಯದ ಸುತ್ತಲೂ ಅಕ್ಷತೆಯ ಕಾಳುಗಳು ಹಾಗೂ ಹೂಗಳ ಮಳೆಯನ್ನೇ ಕರೆಯಲಾಯಿತು.

ಬಳಿಕ, ಸಹದೇವನು ತನ್ನ ತಮ್ಮಂದಿರೊಂದಿಗೆ ಜಲಾಂಜಲಿಯನ್ನಿತ್ತನು. ಹೀಗೆ ತಂದೆಗೆ ಸ್ವರ್ಗ-ಗತಿಗಾಗಿ ಮಾಡಬೇಕಾದುದನ್ನು ಮಾಡಿ, ಮತ್ತೆ ಶ್ರೀಕೃಷ್ಣನೂ ಭೀಮಾರ್ಜುನರೂ ಇರುವೆಡೆಗೆ ಬಂದನು. ಹಾಗೂ ಕೈಜೋಡಿಸಿ ನಮ್ರತೆಯಿಂದ ಕೃಷ್ಣನಲ್ಲಿ ಹೀಗೆ ವಿಜ್ಞಾಪನೆ ಮಾಡಿಕೊಂಡನು:

"ಇದೋ ಭೂರಿಯಾದ ರತ್ನಗಳು ಇವು. ಇದೋ ಗೋವುಗಳು, ಆಡು-ಮೇಕೆಗಳು, ಮಹಿಷಗಳು, ಆನೆಗಳು ಹಾಗೂ ಕುದುರೆಗಳು, ಹಾಗೂ ಬಗೆಬಗೆಯ ವಸ್ತ್ರಗಳು. ಇವೆಲ್ಲವನ್ನೂ ಧರ್ಮರಾಜನಿಗೆ ಕೊಡೋಣವಾಗಲಿ. ಅಥವಾ ನಿನಗೆ ಬೇರೆ ಬಗೆಯು ತೋರಿದರೆ ಹಾಗೂ ಮಾಡಬಹುದು" ಎಂದನು.

ಹೆದರಿಕೆಯಿಂದ ತತ್ತ್ತರಿಸಿದ್ದ ಆತನಿಗೆ ಕೃಷ್ಣನು ಅಭಯವನ್ನಿತ್ತನು. ಆ ಮಹಾರ್ಹವಾದ, ಎಂದರೆ ಬಹುಬೆಲೆಬಾಳುವ, ರತ್ನಗಳನ್ನು ಸ್ವೀಕರಿಸಿದನು. ಹಾಗೂ ಅಲ್ಲಿಯೇ ಸಹದೇವನ ಪಟ್ಟಾಭಿಷೇಕವನ್ನೂ ನೆರವೇರಿಸಿದನು. ಭೀಮಾರ್ಜುನರು ಆತನನ್ನು ಸತ್ಕರಿಸಿದರು. ಸಂತೃಪ್ತನಾದ ಜಾರಾಸಂಧಿಯು, ಎಂದರೆ ಜರಾಸಂಧ-ಪುತ್ರನು, ತನ್ನ ತಂದೆಯ ನಗರವನ್ನು ಮಹಾತ್ಮರೊಂದಿಗೆ ಪ್ರವೇಶಿಸಿದನು.

ಸೂಚನೆ : 9/5/2026 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.