Monday, May 25, 2026

ಮನಸೇ... ಗೋವಿಂದನ ಭಜಿಸು. (Manase,.. Govindana Bhajisu.)

ಲೇಖಕರು: ಶ್ರೀ ಸುಬ್ರಹ್ಮಣ್ಯ ಸೋಮಯಾಜಿ

(ಪ್ರತಿಕ್ರಿಯಿಸಿರಿ lekhana@ayvm.in)


image.png



ಶಂಕರ ಭಗವತ್ಪಾದರು ಒಮ್ಮೆ ಗಂಗಾಸ್ನಾನಕ್ಕೆಂದು ಶಿಷ್ಯರ ಜೊತೆಯಲ್ಲಿ ಹೋಗುತ್ತಿರುವಾಗ ಒಂದು ಅಶ್ವತ್ಥ ವೃಕ್ಷದ ಕೆಳಗೆ ವೃದ್ಧರೊಬ್ಬರು “ಡುಕೃಂಕರಣೆ “ ಎಂಬ ವ್ಯಾಕರಣ ಸೂತ್ರವನ್ನು ಬಾಯಿಪಾಠ ಮಾಡುತ್ತಾ ಕುಳಿತಿದ್ದರು. ಆಚಾರ್ಯರ ಗಂಗಾ ಸ್ನಾನ ಆಹ್ನೀಕದ ಬಳಿಕವೂ ಅವರ ಸೂತ್ರ ಬಾಯಿಪಾಠ ಮುಂದುವರೆದಿತ್ತು. ಆಚಾರ್ಯರು ಅವರ ಬಳಿಸಾರಿ ಕೇಳಿದರು-

ಶಂ: ಅಯ್ಯಾ ತಾವು ಏನು ಅಭ್ಯಾಸ ಮಾಡುತ್ತಿದ್ದೀರಿ?
ವೃ: ವ್ಯಾಕರಣ ಸೂತ್ರಗಳನ್ನು ಅಭ್ಯಾಸ ಮಾಡುತ್ತಿದ್ದೇನೆ ಸ್ವಾಮೀ

ಶಂ: ಇಷ್ಟು ವರ್ಷಗಳ ಅಧ್ಯಯನ ಸಾಲದೇ,ಈಗ ವ್ಯಾಕರಣವನ್ನು ಕಲಿತು ತಾವೇನು ಸಾಧನೆ ಮಾಡಬೇಕೆಂದಿದ್ದೀರಿ?
ವೃ: ವ್ಯಾಕರಣದಲ್ಲಿ ವಿದ್ವತ್ತನ್ನು ಸಂಪಾದಿಸಬೇಕು ಎಂದು ನನ್ನ ಬಹುದಿನಗಳ ಆಸೆ. ಅದಕ್ಕಾಗಿ ಈ ಅಭ್ಯಾಸ

ಶಂ: ವಿದ್ವತ್ತನ್ನು ಸಂಪಾದಿಸಿದ ನಂತರ?
ವೃ: ರಾಜಾಸ್ಥಾನಕ್ಕೆ ಹೋಗಿ ಈ ವಿದ್ವತ್ತಿನಿಂದ ಧನಾರ್ಜನೆ ಮಾಡಲು ಸಾಧ್ಯವಾಗುತ್ತದೆ.ಜೊತೆಗೆ ಕೀರ್ತಿಯೂ ಲಭಿಸುತ್ತದೆ.

ಶಂ: ತಮಗೆ ಇಷ್ಟು ವಯಸ್ಸಾಗಿದೆ. ಇನ್ನೂ ಮನೆಯ ಜವಾಬ್ದಾರಿ ತೀರಿಲ್ಲವೇ?
ವೃ: ಹೌದು ಸ್ವಾಮೀ, ವೃದ್ಧಾಪ್ಯಕ್ಕೆ ಕಾಲಿಟ್ಟಿದ್ದೇನೆ. ಮಕ್ಕಳು ಎಲ್ಲ ಜವಾಬ್ದಾರಿಯನ್ನೂ ನೋಡಿಕೊಳ್ಳುತ್ತಿದ್ದಾರೆ. ಮಡದಿ ಮಕ್ಕಳ ಬಗ್ಗೆ ಯೋಚನೆ ಮಾಡುವ ಪ್ರಮೇಯವಿಲ್ಲ.

ಶಂ: ಹಾಗಿದ್ದರೆ ಈ ವಿದ್ವತ್ತಿನಿಂದ, ಅದರಿಂದ ಬರುವ ಹಣದಿಂದ ನಿಮಗೆ ಆಗಬೇಕಾದುದೇನಿದೆ? ನಿಮ್ಮ ಆಯಸ್ಸು ಕ್ಷೀಣಿಸುತ್ತಿದೆ. ಈಗಲಾದರೂ ಗೋವಿಂದನ ಧ್ಯಾನ ಮಾಡಬಾರದೆ? ನೀವು ಈಗ ಮಾಡುತ್ತಿರುವುದು ಕೇವಲ ಭುಕ್ತಿಗಾಗಿ. ಮುಕ್ತಿಗಾಗಿ ಅಲ್ಲ. ಕಳೆದ ಆಯಸ್ಸು ಮತ್ತೆ ಬರಲಾರದು. ಈಗಲಾದರೂ ಪರಮಾತ್ಮನ ಧ್ಯಾನಮಾಡಿ ನಿಮ್ಮ ಜೀವನದಲ್ಲಿ ನೆಮ್ಮದಿಯನ್ನು ಕಂಡುಕೊಳ್ಳಬಾರದೇ?
ವೃ: ನಿಜ ಸ್ವಾಮೀ ನಾನು ಜೀವನವಿಡೀ ಬರಿಯ ಭೌತಿಕ ವಿಷಯಗಳಿಗಾಗಿ ಪ್ರಯತ್ನ ಮಾಡುತ್ತಿದ್ದೆ. ಆಧ್ಯಾತ್ಮಿಕ ವಿಷಯಗಳನ್ನು ಅಧ್ಯಯನ ಮಾಡಲೇ ಇಲ್ಲ. ಈಗ ವಯಸ್ಸು ಮೀರಿದೆ. ಯಾವುದಾದರೂ ಅಧ್ಯಯನದಲ್ಲಿ ತೊಡಗೋಣ ಎಂದು ವ್ಯಾಕರಣ ಸೂತ್ರಗಳ ಅಧ್ಯಯನ ನಡೆಸಿರುವೆ.

ಶಂ: ಈಗಲೂ ಕಾಲ ಮಿಂಚಿಲ್ಲ.ಆಧ್ಯಾತ್ಮ ಚಿಂತನೆಗೆ ವಯಸ್ಸಿನ ಮಿತಿಯಿಲ್ಲ. ಸದಾ ಸರ್ವದಾ ಗೋವಿಂದನನ್ನು ಭಜಿಸಿ ಎಂದು ತಕ್ಷಣವೇ “ ಭಜಗೋವಿಂದಂ ಸ್ತೋತ್ರದ ರಚನೆ ಮಾಡಿ ಅವರಿಗೆ ಉಪದೇಶ ಮಾಡಿದರು.
ವೃ: ಪ್ರಭೋ- ನನ್ನ ಬಾಳಿಗೆ ಬೆಳಕನ್ನು ನೀಡಿದವರು ನೀವು ಇಂದಿನಿಂದ ನನ್ನ ಬಾಳು ಗೋವಿಂದನ ಸ್ಮರಣೆಗೆ ಮೀಸಲು ಎಂದು ಗುರುಗಳಿಗೆ ವಂದಿಸಿ ಹೊರಟರು.

ಇಲ್ಲಿ ವ್ಯಾಕರಣ ಸೂತ್ರದ ಬಗ್ಗೆ ಶಂಕರರಿಗೆ ಅಸಹನೆ ಎಂದುಕೊಳ್ಳಬಾರದು. ಅದನ್ನು ಕಲಿಯುತ್ತಿರುವ ಉದ್ದೇಶ ಆ ವೃದ್ಧನ ಜೀವನಕ್ಕೆ ಬೆಳಕು ತರುವಂತಹದ್ದಾಗಿರಲಿಲ್ಲ. ಮತ್ತು ಯಾವುದನ್ನು ಅವಶ್ಯವಾಗಿ ಎಲ್ಲರೂ ಮಾಡಬೇಕೋ ಅದರ ಬಗ್ಗೆ ಗಮನವಿಲ್ಲ. ಅದನ್ನು ತಿಳಿಸಿ ಅವನನ್ನು ಉದ್ಧರಿಸುವ ಕರುಣೆಯನ್ನೇ ನಾವಿಲ್ಲಿ ಕಾಣಬೇಕಾಗಿರುವುದು. 

ಇದು ಡುಕೃಂಕರಣೆ ಸೂತ್ರಕ್ಕೆ ಮಾತ್ರವೇ ಸಂಬಂಧಿಸಿಲ್ಲ. ನಾವು ದಿನಂಪ್ರತಿ ಮಾಡುವ ಎಲ್ಲಾ ವ್ಯರ್ಥವಾದ ಕೆಲಸಗಳಿಗೂ ಅನ್ವಯಿಸುತ್ತದೆ. ನಾವು ಈ ದೇಶದ ಮಹರ್ಷಿಗಳ ಆಶಯದಂತೆ ಭಾರತರಾಗಿಲ್ಲ. ಧನರತ,ಕೀರ್ತಿರತ,ಕಾಮರತ ಕ್ರೋಧರತ ಇನ್ನೂ ಏನೇನೋ ರತದಾಗಿದ್ದೇವೆ. ಹಾಗಿಲ್ಲದೇ ಎಲ್ಲರೂ ಭಾರತರಾಗಬೇಕು ಎಂಬುದು ಆಚಾರ್ಯರ ಆಶಯ.

ಆ ವೃದ್ಧ ಬ್ರಾಹ್ಮಣನ ನೆಪದಲ್ಲಿ ಇಡೀ ಮಾನವತೆಗೆ ಮಾಡಿದ ಉಪದೇಶವದು.

ಈ ಸ್ತೋತ್ರಸಾಹಿತ್ಯದಲ್ಲಿ ಇಂದು ನಮ್ಮ ಸ್ಥಿತಿ ಹೇಗಿದೆ? ಭೌತಿಕ ಜಗತ್ತಿನ ನಶ್ವರತೆ, ಇವನ್ನು ಒತ್ತಿ ಹೇಳುವ ಶ್ಲೋಕಗಳು ಕೆಲವು. ನಮ್ಮ ಕರ್ತವ್ಯ ಏನಿರಬೇಕು? ಜೀವನದಲ್ಲಿ ಶಾಶ್ವತವಾದ ಭಗವದಾನಂದವನ್ನು ಪಡೆಯಲು ನಾವು ಏನು ಮಾಡಬೇಕು ಎಂಬ ಸ್ಪಷ್ಟವಾದ ತಿಳುವಳಿಕೆ ಕೊಡುವ ಶ್ಲೋಕಗಳ ಸಂಖ್ಯೆ ಹೆಚ್ಚು ಇದೆ. ಹಾಗೆಯೇ ಗೋವಿಂದನನ್ನು ಸದಾಕಾಲವೂ ಭಜಿಸಿದ್ದರಿಂದ ನಮ್ಮಲ್ಲಿ ಉಂಟಾಗುವ ಪರಿಣಾಮ,ಆನಂದ,ನೆಮ್ಮದಿಗಳು ಎಷ್ಟು ಉನ್ನತ ಮಟ್ಟದ್ದು ಎಂಬುದನ್ನು ಮನವರಿಕೆ ಮಾಡಿಕೊಡುವ ಶ್ಲೋಕಗಳೂ ಇವೆ. ಇಡೀ ಜಗತ್ತಿಗೇ ಶಂಕರರು ಸಂದೇಶವನ್ನು ಕೊಟ್ಟಿದ್ದಾರೆ.

ಬಾಲಕನಾಗಿದ್ದಾಗ ಆಟದಲ್ಲಿ ಆಸಕ್ತಿ, ತರುಣನಾಗಿದ್ದಾಗ ತರುಣಿಯಲ್ಲಿ ಆಸಕ್ತಿ, ವೃದ್ಧನಾಗಿದ್ದಾಗ ಸದಾ ಚಿಂತೆ- ಒಟ್ಟಿನಲ್ಲಿ ಪರಬ್ರಹ್ಮದ ಬಗೆಗೆ ಯಾರಿಗೂ ಆಸಕ್ತಿಯಿಲ್ಲ ಎಂಬುದೊಂದು ಶ್ಲೋಕ. ಇದು ಇಂದಿನ ನಮ್ಮ ಸ್ಥಿತಿಯನ್ನು ಹೇಳುತ್ತಿದೆ. ಸತ್ಸಂಗದಿಂದ ನಮಗೆ ಅಂಟಿಲ್ಲದ ಜೀವನ , ಅದರಿಂದ ಮೋಹ ರಹಿತವಾದ ಜೀವನ, ಅದರಿಂದ ಸ್ಥಿರವಾದ ಶಾಶ್ವತವಾದ ತತ್ತ್ವದ ಅರಿವು, ಅಂತಹ ಅರಿವಿನಿಂದ ಸಂಸಾರ ಚಕ್ರದಿಂದ ಬಿಡುಗಡೆ ಎಂಬ ಅರ್ಥ ಬರುವ ಇನ್ನೊಂದು ಶ್ಲೋಕದಲ್ಲಿ , ನಾವು ಏನು ಮಾಡಿದರೆ ಜೀವನ್ಮುಕ್ತಿಯನ್ನು ಪಡೆಯಬಹುದು ಎಂಬ ಉಪಾಯವನ್ನು ಹೇಳಿದ್ದಾರೆ. ಇನ್ನೊಂದು ಶ್ಲೋಕದಲ್ಲಿ ಮತ್ತೆ ಮತ್ತೆ ಹುಟ್ಟುವುದು, ಸಾಯುವುದು,ಮತ್ತೆ ತಾಯಿಯ ಗರ್ಭದಲ್ಲಿ ಮಲಗುವುದು ಹೀಗೆ ಕೊನೆ ಮೊದಲಿಲ್ಲದ ಘೋರವಾದ ಈ ಸಂಸಾರಚಕ್ರದಿಂದ ನಮ್ಮನ್ನು ಪಾರುಮಾಡು ಎಂಬ ಪ್ರಾರ್ಥನೆಯೂ ಇದೆ. 

ಯೋಗರತೋ ವಾ ಭೋಗರತೋ ವಾ ಸಂಗರತೋ ವಾ ಸಂಗ ವಿಹೀನಃ ಯಸ್ಯ ಬ್ರಹ್ಮಣಿ ರಮತೇ ಚಿತ್ತಂ ನಂದತಿ ನಂದತಿ ನಂದತ್ಯೇವ || 
ಎಂಬುದಾಗಿ ಯಾರ ಚಿತ್ತವು ಬ್ರಹ್ಮನಲ್ಲಿ ರಮಿಸುತ್ತದೆಯೋ ಅವರು ಯೋಗ-ಭೋಗ,ಯಾವುದರಲ್ಲಿ ರತರಾಗಿದ್ದರೂ ಆ ಬ್ರಹ್ಮಾನುಭವದಲ್ಲೇ ಆನಂದಿಸುತ್ತಾರೆ. ಎಂದು ಮೊಳಗಿದ್ದಾರೆ.

 ಇದೊಂದು ನಿತ್ಯಜೀವನದ ಕೈಪಿಡಿಯಾಗಿ ನಮ್ಮನ್ನು ಪರಮ ಪದದೆಡೆಗೆ ಕರೆದೊಯ್ಯುವ ಆತ್ಮೀಯ ಸ್ನೇಹಿತನಂತೆ ಇರುವ ಸ್ತೋತ್ರಸಾಹಿತ್ಯವಾಗಿದೆ.

ಶ್ರೀರಂಗ ಮಹಾಗುರುಗಳು ನಮ್ಮ ಮನಸ್ಸನ್ನು ಹೀಗೆ ವಿವರಿಸಿದ್ದಾರೆ. ನದೀ ಸ್ನಾನಕ್ಕೆಂದು ಹೋದಾಗ ನಮ್ಮ ಪಂಚೆಯನ್ನು ದಡದಲ್ಲಿನ ಮುಳ್ಳಿನ ಪೊದೆಗಳಮೇಲೆ ಒಣಗಿಸುತ್ತೇವೆ. ಆದರೆ ತೆಗೆಯುವಾಗ ಎಲ್ಲೆಡೆ ಮುಳ್ಳು ಚುಚ್ಚಿಕೊಂಡು ಹರಿಯದೇ ಅದನ್ನು ತೆಗೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಬಹಳ ಜಾಗರೂಕತೆಯಿಂದ ಅದನ್ನು ತೆಗೆಯಬೇಕಾಗುತ್ತದೆ. ಹಾಗೆಯೇ ನಮ್ಮ ಮನಸ್ಸನ್ನೂ ಇಂದ್ರಿಯಗಳು ಬಯಸಿದಲ್ಲೆಲ್ಲಾ ಹರಡಿಬಿಟ್ಟಿದ್ದೇವೆ. ಅದು ಈಗ ಅಲ್ಲಲ್ಲೇ ಕಚ್ಚಿಕೊಂಡಿದೆ. ಹಾಗೆಯೇ ಎಳೆದರೆ ಹರಿದು ನೋವಾಗುತ್ತದೆ.ನಿಧಾನವಾಗಿ ಮುಳ್ಳನ್ನು ಬಿಡಿಸಿ ಹಿಂತೆಗೆದುಕೊಳ್ಳಬೇಕಪ್ಪಾ ಎಂದಿದ್ದರು. ಹಾಗೆ ಹಿಂತೆಗೆಯಲು ತಪಸ್ಸು, ಗೋವಿಂದನ ಭಜನೆ,ಸ್ಮರಣೆ ನಿರಂತರ ಆಗಬೇಕಾಗಿದೆ.

ಅಂತಹ ಸದ್ಬುದ್ಧಿಯನ್ನು ನಮಗೆ ದಯಪಾಲಿಸು ಎಂದು ಆ ದಯಾಮಯನನ್ನು ಬೇಡೋಣ. ಭವಸಾಗರವನ್ನು ದಾಟುವ ದೊಣಿಯಂತಿರುವ ಈ ಸ್ತೋತ್ರ ಸಾಹಿತ್ಯವನ್ನು ಕರುಣಿಸಿದ ಶಂಕರಭಗವತ್ಪಾದರನ್ನು ತಂಪಾಗಿ ನೆನೆಯೋಣ.

ಸೂಚನೆ : 23/5/2026 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.