Sunday, May 25, 2025

ಕೃಷ್ಣಕರ್ಣಾಮೃತ 64 ಬಿಳೀಸಮುದ್ರವನ್ನುಕ್ಕಿಸುವ ಕರೀಚಂದ್ರ! (Krishakarnamrta 64)


ಲೇಖಕರು :
 ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ನಮ್ಮ ಮನಸ್ಸು ಚಂಚಲವೆಂಬುದು ನಮಗೆಲ್ಲ ಗೊತ್ತಿರುವ ವಿಷಯವೇ. ಆದರೆ ಕೆಲವು ಧನ್ಯರಿರುತ್ತಾರೆ. ಅವರ ಮನಸ್ಸು ಅವಿಚಲ, ಎಂದರೆ ಅತ್ಯಂತ-ನಿಶ್ಚಲ. ಅಂತಹ ಮನಸ್ಸಿನಿಂದ ಅವರು ಅನುಚುಂಬಿಸಿದರು, ಶ್ರೀಕೃಷ್ಣನನ್ನು. ಅನುಚುಂಬನವೆಂದರೆ ಮತ್ತೆ ಮತ್ತೆ ಮುತ್ತಿಡುವುದು. "ಮನಸ್ಸಿನಿಂದ ಅನುಚುಂಬಿಸುವುದು" - ಎಂದರೆ ಮತ್ತೇನು, ಚೆನ್ನಾಗಿ ಧ್ಯಾನಿಸುವುದೆಂದೇ.

ಯಾವುದನ್ನು ಅವರು ಧ್ಯಾನಿಸಿದುದು? ಕೃಷ್ಣನ ಮಧುರಿಮ-ಶ್ರಿಯನ್ನು - ಅರ್ಥಾತ್ ಮಾಧುರ್ಯ-ಲಕ್ಷ್ಮಿಯನ್ನು. ಎಂದರೆ ಮಧುರತೆಯ ಸಂಪತ್ತನ್ನು. ಕೃಷ್ಣನಾದರೂ ಮನುಜಾಕೃತಿಯನ್ನು - ಎಂದರೆ ಮನುಷ್ಯ ಶರೀರವನ್ನು - ಧರಿಸಿದ ವಿಭುವಲ್ಲವೇ?

ಆತನ ಆ ರೂಪಸಿರಿಯನ್ನು ಮನಸ್ಸಿನಿಂದ ಮುಟ್ಟುವಾಗ, ಅವರ ಬಾಯಿಂದ ಕೆಲವು ಉದ್ಗಾರಗಳು ಹೊರಟವು. ಏನೆಂದು? "ಹೇ ದೇವ, ಹೇ ಕೃಷ್ಣ, ಹೇ ದಯಿತ!" - ಎಂಬುದಾಗಿ. ದಯಿತನೆಂದರೆ ಪ್ರಿಯ ಎಂದೇ. ದೇವ-ಕೃಷ್ಣ-ದಯಿತ! ಎಂಬುದೇ ಅವರ ಜಲ್ಪವಾಗಿತ್ತು. ಸಾಧಾರಣವಾಗಿ ಜಲ್ಪವೆಂದರೆ ಹರಟೆ, ಅಥವಾ ಏನೇನೋ ಮಾತನಾಡುವುದು. ಇಲ್ಲಿ ಹಾಗಲ್ಲ. ಜಲ್ಪವೆಂದರೆ ಅಂತರ್ಮುಖರಾಗಿರುವವರ ಮುಖದಿಂದ ಹೊಮ್ಮುವ ಈ ತೆರನ ಉದ್ಗಾರಗಳು.

ಅಂತಹ ಪರವಶ-ಸ್ಥಿತಿಗಳು ನನ್ನಲ್ಲಿಯೂ ಉಂಟಾಗುವುವಲ್ಲವೇ, ಎಂದಾದರೂ? - ಎಂದು ಬಯಸಿ ಬಯಸಿ ಕೇಳಿಕೊಳ್ಳುತ್ತಿದ್ದಾನೆ, ಲೀಲಾಶುಕ ಕವಿ. ಕೃಷ್ಣದರ್ಶನಾನುಭವಗಳ ಹಂಬಲಿಕೆ, ನಮ್ಮ ಕವಿಗೆ.

ಅನುಚುಂಬತಾಂ ಅವಿಚಲೇನ ಚೇತಸಾ/
ಮನುಜಾಕೃತೇರ್ ಮಧುರಿಮ-ಶ್ರಿಯಂ ವಿಭೋಃ |
ಅಯಿ ದೇವ ಕೃಷ್ಣ ದಯಿತೇತಿ ಜಲ್ಪತಾಂ/
ಅಪಿ ನೋ ಭವೇಯುರ್ ಅಪಿ ನಾಮ ತಾದೃಶಾಃ ||


ಮತ್ತೊಂದು ಶ್ಲೋಕ:

ಎಂದು ಕಾಣುವೆ ಕೃಷ್ಣನನ್ನು? - ಎಂದು ಕೇಳುತ್ತಿದ್ದಾನೆ, ಲೀಲಾಶುಕ. ಎಂತಹವನು ಕೃಷ್ಣ? ಆತನು ವಿಶಾಲ-ಲೋಚನ - ಎಂದರೆ ಅಗಲವಾದ ಕಣ್ಣುಳ್ಳವನು. ಆಯತವಾದ ನಯನಗಳೆಂದರೆ ಆಕರ್ಷಣಾತಿಶಯವೇ. ಅಂತಹ ಕಣ್ಣುಗಳು ನಮ್ಮ ಕಣ್ಣುಗಳನ್ನು ಸೆಳೆಯುವುವೇ.

ಆತನು ವಿಶಿಷ್ಟವಾಗಿ ಕಿಶೋರನಾಗಿ ತೋರಿದುದು ಕೃಷ್ಣಾವತಾರದಲ್ಲೇ, ಅಲ್ಲವೇ? ಆ ಕಿಶೋರ-ವೇಷವು ಬಹಳವಾಗಿಯೇ ಆಕರ್ಷಿಸಿತು, ಗೋಪಿಕೆಯರನ್ನು. ಅವರಿಗೆ ಬಹುವಿಶೇಷವಾಗಿಯೇ ದರ್ಶನೀಯನಾಗಿದ್ದನು ಆತ.

ಅವರಾದರೂ ಎಂತಹವರು? ಅವರು ಕೃಶೋದರಿಯರು - ಎಂದರೆ ಕೃಶವಾದ ಉದರವುಳ್ಳವರು. ಅರ್ಥಾತ್ ಸಣ್ಣದಾದ ಸೊಂಟವುಳ್ಳವರು. ಬಡನಡುವೆಂಬುದೇ ನಾರಿಯರ ಸೌಂದರ್ಯ-ಲಕ್ಷಣಗಳಲ್ಲಿ ಒಂದು. ಮತ್ತು ಮುಖ್ಯವಾದ ಲಕ್ಷಣವೂ ಸಹ. ಏಕೆ? ವದನವೋ ನಯನವೋ ಮುದ್ದಾಗಿದರೂ, ನಡುವಿನಲ್ಲಿ ಕೊಬ್ಬು ಮನೆಮಾಡಿದ್ದರೆ ಸೌಂದರ್ಯವನ್ನದು ಕೆಡಿಸುವುದು. ಎಂದೇ ಸುಂದರಿಯೆಂದು ಹೇಳಲು ಕೃಶೋದರಿಯೆಂದೊಂದು ಪದವನ್ನು ಹೇಳಿದರೂ ಸಾಕು. ಉಳಿದ ಲಕ್ಷಣಗಳು ಊಹ್ಯ. ದುಡಿದು ಕೆಲಸಮಾಡುವವರ ಶರೀರಕೃಶತೆ-ದೃಢತೆಗಳು ನೋಡಲೇ ಲಕ್ಷಣ. ಆ ಬಗೆಯವರು ಈ ಗೊಲ್ಲತಿಯರು. ಇಂತಹ ಕೃಶೋದರಿಯರ ಕಣ್ಣುಗಳಿಗೆ ವಿಶೇಷ-ದೃಶ್ಯನಾಗಿ ತೋರುತ್ತಾನೆ, ಕಿಶೋರ ಕೃಷ್ಣ.

ಯಶೋದೆಯ ಕೂಸಾಗಿ ಬೆಳೆದವನಲ್ಲವೇ, ಕೃಷ್ಣ? ಆತನನ್ನು ಬೆಳೆಸಿ ಅವಳಿಗೇನು ದಕ್ಕಿತು? – ಎಂದು ಕೇಳುವವರುಂಟೇನೋ? ಅದಕ್ಕೇ ಕವಿ ಆ ಬಗ್ಗೆಯೇ ಒಂದು ಮಾತು ಹೇಳುತ್ತಾನೆ - ಅವಳಿಗೆ ಕೀರ್ತಿ ಸಿಕ್ಕಿತು. ಸಿಕ್ಕಿತೇನು, ಉಕ್ಕಿತೇ ಸರಿ.

ಉಕ್ಕುವುದು, ಹೆಚ್ಚುವುದು, ವರ್ಧಿಸುವುದು - ಇವನ್ನು ಹೇಳಲು ಸುಂದರವಾದ ರೂಪಕವೊಂದು ಲಭ್ಯವಿದೆ, ಸಂಸ್ಕೃತ-ಸಾಹಿತ್ಯದಲ್ಲಿ. ಚಂದ್ರನು ಬಂದನೆಂದರೆ ಸಮುದ್ರವು ಉಕ್ಕುವುದಲ್ಲವೇ? ಅದರಲ್ಲೂ ಪರ್ವ-ದಿನಗಳಲ್ಲಿ ನೋಡಬೇಕು, ಅಲೆಗಳ ಉಬ್ಬರದ ಭರದ ಆ ವೈಭವವನ್ನು! ಇಲ್ಲಿ ಕೃಷ್ಣನೇ ಚಂದ್ರ, ಯಶೋದೆಯ ಕೀರ್ತಿಯೇ ಸಮುದ್ರ. ಈ ಕೃಷ್ಣ-ಚಂದ್ರನಿಂದಾಗಿ ಯಶೋದೆಯ ಯಶಸ್ಸು ವರ್ಧಿಸಿತು.

ಆದರೆ ಇಲ್ಲೊಂದು ವೈಲಕ್ಷಣ್ಯವಿದೆ. ಲೋಕದಲ್ಲಿ ನಾವು ನೋಡುವ ಚಂದ್ರ ಬೆಳ್ಳಗಿರುತ್ತಾನೆ. ಚಿತ್ರಕಾರರು ಸಮುದ್ರವನ್ನು ಮೂಡಿಸುವಾಗ ನೀಲವರ್ಣವನ್ನು ಬಳಸುತ್ತಾರೆ. ಫೋಟೋ ತೆಗೆದಾಗಲೂ ನೀಲವರ್ಣವೇ ಕಾಣಿಸುವುದೇ. ಎಷ್ಟಾದರೂ ಆಕಾಶದ ಬಣ್ಣ ಅಲ್ಲಿ ಪ್ರತಿಫಲಿತವಾಗಿರುತ್ತದೆಯಲ್ಲವೇ?

ಇಲ್ಲಿದೋ ಇವು ಅದಲುಬದಲಾಗಿವೆ! ಹೇಗೆ? ಈತ, ಎಂದರೆ ಈ ಕೃಷ್ಣನು, ನೀಲ-ನಿಶಾಕರ. ನಿಶಾಕರನೆಂದರೆ ಚಂದ್ರ. ಎಂದರೆ ನೀಲವರ್ಣದ ಚಂದ್ರ! ಆದರೆ ಇಲ್ಲಿಯ ಸಮುದ್ರದ ವರ್ಣವೂ ಬೇರೆಯೇ! ಅದು ಬೆಳ್ಳಗಿದೆ. ಏಕೆ? ಕೀರ್ತಿಯೆಂಬುದನ್ನು ಬಿಳಿಯ ಬಣ್ಣದ್ದೆಂದು ಹೇಳುವ "ಕವಿ-ಸಮಯ"ವು ಭಾರತದ ಎಲ್ಲ ಪ್ರಾಚೀನ-ಸಾಹಿತ್ಯದಲ್ಲಿ ಸುಪ್ರಸಿದ್ಧ. ಕೀರ್ತಿಯೆಂಬುದು ಅಮೂರ್ತ. ಎಂದರೆ ಆಕಾರವಿಲ್ಲ; ಜೊತೆಗೆ ಬಣ್ಣವೂ ಇಲ್ಲ. ಆದರೂ ಕವಿಗಳೆಲ್ಲರ ನಡುವಣ ಒಪ್ಪಂದವೆಂಬಂತಿರುವುದನ್ನೇ ಕವಿ-ಸಮಯವೆನ್ನುವುದು. ಹೀಗಾಗಿ ಬಿಳಿಯ ಸಮುದ್ರವನ್ನುಕ್ಕಿಸುವ ಕೃಷ್ಣಚಂದ್ರನೀತ!

ಅತ್ತ ಸಾಕುತಾಯಿಗೆ ಯಶೋರಾಶಿಯನ್ನು ತಂದಿರುವ, ಇತ್ತ ಗೊಲ್ಲನಲ್ಲೆಯರ ಕಣ್ಣಿಗೆ ಹಬ್ಬವಾದ, ಈ ಕಿಶೋರ-ಕೃಷ್ಣನನ್ನು ನಾನದೆಂದು ಕಾಣುವೆ? – ಎಂಬ ಕೇಳ್ಕೆ ಇಲ್ಲಿದೆ.

ಕಿಶೋರ-ವೇಷೇಣ ಕೃಶೋದರೀ-ದೃಶಾಂ/
ವಿಶೇಷ-ದೃಶ್ಯೇನ ವಿಶಾಲ-ಲೋಚನಮ್ |
ಯಶೋದಯಾ ಲಬ್ಧ-ಯಶೋ-ನವಾಂಬುಧೇಃ/
ನಿಶಾಮಯೇ ನೀಲ-ನಿಶಾಕರಂ ಕದಾ? ||


ಮತ್ತೊಂದು ಶ್ಲೋಕ:

ಕೃಷ್ಣನು ನಮ್ಮನ್ನು ಕಾಪಾಡಲಿ. ಆತನೊಂದು ಓಜಸ್ಸು. ಓಜಸ್ಸೆಂದರೂ ತೇಜಸ್ಸೆಂದೇ. ಎಂತಹ ತೇಜಸ್ಸದು? ಕಿಶೋರ-ಭಾವದಲ್ಲಿರುವ ಓಜಸ್ಸು. ಏನದರ ವಿಶೇಷಗಳು? ನಾಲ್ಕು ವಿಶೇಷಗಳು ಅದರಲ್ಲಿವೆ.

ಮೊದಲನೆಯದಾಗಿ ಅದು ವಿಲಾಸ-ಲಕ್ಷ್ಮಿಯ ಪ್ರಕೃತಿ. ಎಂದರೆ, ವಿಲಾಸ-ಸಂಪತ್ತಿಗೆ ಅದುವೇ ಮೂಲನೆಲೆ. "ಪ್ರಕೃತಿ"ಯೆಂದರೆ ಇಲ್ಲಿ ಜನ್ಮಭೂಮಿ.

ಎರಡನೆಯದಾಗಿ ಅದು ಪ್ರಕೃತಿ-ಜಡ - ಎಂದರೆ ಸ್ವಭಾವತಃ ಜಡವಾದುದು. ಜಡವೆಂದರೆ ನಿಷ್ಕ್ರಿಯ. ಯಾವುದರ ಬಗ್ಗೆ ಜಡ? ನಮಿಸುವವರ ಅಪರಾಧದ ಬಗ್ಗೆ.

ಅವನಿಗೆ ಬಾಗಿ ನಮಸ್ಕರಿಸುವವರು ಅಪರಾಧಿಗಳೇ ಆಗಿರಬಹುದು. ಮತ್ತು ಅಪರಾಧವೆಂದರೂ ಒಂದೆರಡು ಮಾತ್ರವಲ್ಲದೆ ಅದೊಂದು ಮನ್ನಿಸಲಾಗದಷ್ಟು ದೊಡ್ಡ ಸಾಲೇ ಆಗಿರಬಹುದು. ಒಂದೇ ಒಂದು ತಪ್ಪಾಗಿದ್ದರೆ ಕ್ಷಮಿಸಬಹುದು. ಅಪರಾಧ-ಪರಂಪರೆಯೇ ಆದರೆ, ಎಂದರೆ ಸಾಲುಸಾಲು ತಪ್ಪುಗಳೇ ಆಗಿದ್ದಲ್ಲಿ, ಯಾರು ಕ್ಷಮಿಸಿಯಾರು? ಆದರೆ ನಮ್ಮ ಕೃಷ್ಣನು ಹಾಗಲ್ಲ.ಪ್ರಣತರ ಅಪರಾಧ-ವೀಥಿಯನ್ನೂ ಕ್ಷಮಿಸಿಬಿಡುವಂತಹವನೇ ಅವನು – ಎನ್ನುತ್ತಾನೆ, ಕವಿ.

ಮೂರನೆಯದಾಗಿ, ಸುಕೃತಿಗಳಿರುವರೆಲ್ಲಾ, ಅವರ ವಿಷಯದಲ್ಲಿ ತನ್ನ ಸಾಂನಿಧ್ಯವನ್ನು ಅನುಗ್ರಹಿಸುವ ತೇಜಸ್ಸದು. ಸುಕೃತಿಯೆಂದರೆ ಸುಕೃತಗಳನ್ನು ಮಾಡಿರುವವ. ಸುಕೃತವೆಂದರೆ ಪುಣ್ಯ.

ಮತ್ತು ನಾಲ್ಕನೆಯದಾಗಿ, ನಿಜವಾದ ಸುಕೃತಿಗಳೆಂದರೆ ಯೋಗಪರಾಯಣರು. ಅವರು ಮನಸ್ಸಿನಲ್ಲಿ ಪ್ರಣಿಧಾನವನ್ನು ಮಾಡತಕ್ಕವರು, ಎಂದರೆ ಆಳವಾಗಿ ಧ್ಯಾನಿಸತಕ್ಕವರು. ಪ್ರಣಿಧಾನವೆಂದರೆ ಐಕಾಗ್ರ್ಯ, ಏಕಾಗ್ರತೆ. ಅವರ ಆ ಪ್ರಣಿಧಾನಕ್ಕೆ ಪಾತ್ರವಾದದ್ದು ಆ ತೇಜಸ್ಸು. ಹೀಗೆ ಯೋಗಿ-ಧ್ಯೇಯವಾದ ಓಜಸ್ಸೇ ಕೃಷ್ಣನು.

ಶ್ಲೋಕದ ನಾಲ್ಕು ಪಾದಗಳಲ್ಲಿಯ ಆರಂಭ-ಪ್ರಾಸವನ್ನು ಗಮನಿಸಬಹುದು: ಪ್ರಕೃತಿ-ಪ್ರಕೃತಿ-ಸುಕೃತಿ-ಸುಕೃತಿ. ಪ್ರಕೃತಿ ಮತ್ತು ಸುಕೃತಿ ಎಂಬ ಪದಗಳನ್ನು ಬೇರೆ ಬೇರೆ ಅರ್ಥಗಳಲ್ಲಿ ಯುಕ್ತವಾಗಿ ಬಳಸಿರುವುದು, ಕವಿಗೆ ಭಾಷೆಯ ಮೇಲಿರುವ ಹಿಡಿತಕ್ಕೂ ಕನ್ನಡಿ ಹಿಡಿಯುತ್ತದೆ:

ಪ್ರಕೃತಿರವತು ನೋ ವಿಲಾಸ-ಲಕ್ಷ್ಯಾಃ/
ಪ್ರಕೃತಿ-ಜಡಂ ಪ್ರಣತಾಪರಾಧ-ವೀಥ್ಯಾಂ |
ಸುಕೃತಿ-ಕೃತ-ಪದಂ ಕಿಶೋರಭಾವೇ/
ಸುಕೃತಿ-ಮನಃ-ಪ್ರಣಿಧಾನ-ಪಾತ್ರಂ ಓಜಃ ||

ಸೂಚನೆ : 24/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಧರ್ಮ, ಯುದ್ಧ, ಮತ್ತು ಧರ್ಮಯುದ್ಧ: ಒಂದು ವಿಮರ್ಶೆ (Dharma, Yuddha, Mattu Dharmayuddha: Ondu Vimarshe)

ಲೇಖಕರು : ಡಾ. ಹಚ್.ಆರ್. ಮೀರಾ

(ಪ್ರತಿಕ್ರಿಯಿಸಿರಿ lekhana@ayvm.in)


ನಮ್ಮ ಪುರಾಣ-ಇತಿಹಾಸಗಳಲ್ಲಿ ಬಹಳ ಪ್ರಸಿದ್ಧವಾದ ಯುದ್ಧವೆಂದರೆ ಮಹಾಭಾರತದ ಯುದ್ಧವಷ್ಟೆ? ೧೮ ಅಕ್ಷೌಹಿಣೀಸೈನ್ಯವು, ಎಂದರೆ ಸುಮಾರು ೪ ಲಕ್ಷ ಸೈನಿಕರು, ಅದರಲ್ಲಿ ಹತರಾದರು ಎಂದು ಆ ಗ್ರಂಥ ಹೇಳುತ್ತದೆ. ಆಗಿನ ಕಾಲದ ವಿಶ್ವಯುದ್ಧವೇ ಅದಾಗಿತ್ತೆನ್ನಬಹುದು. ಮಹಾಭಾರತದ ಯುದ್ಧಕ್ಕೆ ಹಲವಾರು ಕಾರಣಗಳಿದ್ದವಾದರೂ, ಮುಖ್ಯವಾವುದು?

ನೇರಕಾರಣವೆಂದರೆ ಪಾಂಡವರ ಭಾಗದ ರಾಜ್ಯವನ್ನು ಅವರು ವನವಾಸ-ಅಜ್ಞಾತವಾಸಗಳನ್ನು ಮುಗಿಸಿ ಬಂದ ನಂತರ ಷರತ್ತಿನಂತೆ ಅವರಿಗೆ ಹಿಂದಿರುಗಿಸದಿದ್ದದ್ದು ಎನ್ನಬಹುದು. ಆದರೆ ಅವರು ಕಾಡಿಗೆ ಹೋದದ್ದೇಕೆ? ದುರ್ಯೋಧನನು ತನ್ನ ಸೋದರಮಾವ ಶಕುನಿಯ ಸಹಾಯದಿಂದ ಆಡಿಸಿದ ಮೋಸದ ಪಗಡೆಯಾಟಕ್ಕೆ ಅವರು ಸೋತದ್ದರಿಂದ. ಧೃತರಾಷ್ಟ್ರನು ಅದನ್ನು ತಡೆಯಲಿಲ್ಲ. ದುಃಶಾಸನನು ದ್ರೌಪದಿಯ ವಸ್ತ್ರಹರಣಕ್ಕೆ ಪ್ರಯತ್ನಿಸಿದ. ಕರ್ಣನು ಅವಳನ್ನು ದಾಸಿ ಎಂದು ಕರೆದ. ಯುಧಿಷ್ಠಿರಾದಿಗಳನ್ನು ಕೌರವಪಕ್ಷದ ಹಲವರು ಅಪಮಾನಗೊಳಿಸಿದರು. ಭೀಷ್ಮಾದಿಗಳು ನ್ಯಾಯಕ್ಕಾಗಿ ನಿಲ್ಲಲಿಲ್ಲ. ಹೀಗೆ ಹಲವಾರು ಜನರು ಆನುಷಂಗಿಕವಾಗಿ ಪಾಂಡವರ ಆ ಸೋಲಿಗೂ ಅಪಮಾನಕ್ಕೂ ಕಾರಣರಾದರೂ, ಆ ಸಭೆಯಲ್ಲಾದ ಅನ್ಯಾಯದ ಆಟಕ್ಕೆ ಮೂಲಕಾರಣ ದುರ್ಯೋಧನನೇ ಸರಿ. ಎಲ್ಲಕ್ಕೂ ಮೂಲದಲ್ಲಿದ್ದದ್ದು ಅವನ ಅಸೂಯೆ.

ಚಿಕ್ಕಂದಿನಿಂದಲೇ ದುರ್ಯೋಧನನಿಗೆ ಪಾಂಡವರ ಬಗೆಗೇ, ವಿಶೇಷವಾಗಿ ಭೀಮನ ಬಗ್ಗೆ, ಅಳೆಯಲಾರದಷ್ಟು ಅಸೂಯೆಯಿದ್ದಿತು. ಆ ಕಾರಣಕ್ಕೇ ಬಾಲ್ಯದಲ್ಲಿಯೇ ಭೀಮನನ್ನು ಕೊಲ್ಲಲು, ಕೊಲ್ಲಿಸಲು ಅವನು ಹಲವು ಅಸಫಲ ಪ್ರಯತ್ನಗಳನ್ನು ಮಾಡಿದ್ದು. ಯೌವನಾವಸ್ಥೆಯಲ್ಲಿ ಅವನು ವಾರಣಾವತದಲ್ಲಿ ಅರಗಿನ ಮನೆ ಕಟ್ಟಿಸಿ ಅದರಲ್ಲಿ ಪಾಂಡವರೆಲ್ಲರನ್ನೂ ಸುಡಿಸಿಲೆಳಸಿದನು. ಪಾಂಡವರ ಅದೃಷ್ಟದಿಂದಲೂ, ವಿದುರನ ಚಾಕಚಕ್ಯತೆಯಿಂದಲೂ ಅವರೆಲ್ಲರೂ ಆ ಪ್ರಾಣಾಪಾಯವನ್ನು ತಪ್ಪಿಸಿಕೊಂಡರು. ಮೇಲಾಗಿ ಇವೆಲ್ಲದರ ನಂತರ ದ್ರೌಪದಿಯನ್ನು ಪಾಂಡವರು ಮದುವೆಯಾಗುವಂತಾಯಿತು. ಅವರು ಬದುಕುಳಿದದ್ದಲ್ಲದೆ ಯಶಸ್ವಿಗಳಾಗಿ ದ್ರುಪದನಂತಹ ಬಲಶಾಲಿ ರಾಜನ ಬಾಂಧವ್ಯ ದೊರೆತುದುದರಿಂದ ಧೃತರಾಷ್ಟ್ರನು ಅವರಿಗೆ ಅರ್ಧರಾಜ್ಯ ಕೊಡಲೇಬೇಕಾಯಿತು.

ಪಾಂಡವರ ಅಭಿವೃದ್ಧಿಯಿಂದಾಗಿ ಸುಯೋಧನನ ಅಸೂಯೆ ಬೆಳೆಯುತ್ತಲೇ ಹೋಗುವಂತಾಯಿತು. ಖಾಂಡವಪ್ರಸ್ಥ ಇಂದ್ರಪ್ರಸ್ಥವಾಯಿತು. ಯುಧಿಷ್ಠಿರನು ರಾಜಸೂಯಯಾಗವನ್ನು ಸಫಲವಾಗಿ ಮಾಡುವಂತಾಯಿತು. ದಾಯಾದಿಯಾದ ದುರ್ಯೋಧನನಿಗೆ ಅಲ್ಲಿ ಸಿಕ್ಕ ಜವಾಬ್ದಾರಿಯಾದರೂ ಏನು? ಬಂದ ರಾಜರುಗಳ ಕಪ್ಪಕಾಣಿಕೆಗಳನ್ನು ಸ್ವೀಕರಿಸಿ ರಾಜ್ಯಕೋಶಕ್ಕೆ ಜಮಾ ಮಾಡುವುದು! ಅಲ್ಲಿ ಬಂದು ಸುರಿದ ಧನಸಂಪತ್ತು ಅವನಲ್ಲಿ ಆಗಲೇ ಧಗಧಗಿಸುತ್ತಿದ್ದ ಅಸೂಯಾಗ್ನಿಗೆ ಆಜ್ಯವಾಯಿತು. ಇದಕ್ಕೆ ಮತ್ತೂ ಗಾಳಿ ಹಾಕಿದುದು ಅವನು ಆ ಮಯನಿರ್ಮಿತ ಅರಮನೆಯಲ್ಲಿ ದಂಗಾಗಿ ಎಡವಿ ಬಿದ್ದಾಗ ಆದ ಅವಮಾನ.

ಹೀಗೆ ಅಸೂಯೆಯೇ ಮೂರ್ತಿವೆತ್ತಂತಿದ್ದ ದುರ್ಯೋಧನನು ಪಾಂಡವರ ರಾಜ್ಯವನ್ನು ಮೋಸದಿಂದಾದರೂ ಕಿತ್ತುಕೊಳ್ಳಲು ಹೊಂಚು ಹಾಕಿದುದರಲ್ಲಿ ಆಶ್ಚರ್ಯವೇ ಇಲ್ಲ. ಅಧರ್ಮದ ಮುಂದೆ ಋಜುಧರ್ಮದಿಂದ ನಡೆದವರಿಗೆ ದೊರೆಯಲೇಬೇಕಾದ ಅನುಭವ ಪಾಂಡವರಿಗೆ ದೊರೆಯುವಂತಾಯಿತು. ೧೨ ವರ್ಷಗಳ ವನವಾಸವನ್ನೂ ಒಂದು ವರ್ಷದ ಅಜ್ಞಾತವಾಸವನ್ನೂ ತೀರಿಸಿ ಬಂದರವರು. ಆದರೂ ದುರ್ಯೋಧನನು ಪಾಂಡವರ ಪಾಲನ್ನು ಹಿಂದಿರುಗಿಸುವಂತೆ ಕಾಣಲಿಲ್ಲ.

ಆಯಿತು, ಭಗವಂತ ಶ್ರೀಕೃಷ್ಣನು ಧರ್ಮವನ್ನೇ ಪಾಲಿಸುತ್ತಾ ಸಾಮಮಾರ್ಗದಲ್ಲಿ ಸಂಧಾನಕಾರ್ಯವನ್ನೂ ಪ್ರಯತ್ನಿಸಿದ. ಅದು ಕೆಲಸ ಮಾಡದಿದ್ದಾಗ ದಾನವಾಗಿ, ಅರ್ಧರಾಜ್ಯದ ಬದಲು ಕೇವಲ ಐದು ಹಳ್ಳಿಗಳನ್ನು ಪಾಂಡವರಿಗಾಗಿ ಕೇಳಿದ. ದುರ್ಯೋಧನನು ಸೂಜಿಮೊನೆಯಷ್ಟೂ ಭೂಮಿಯನ್ನು ತಾನು ಕೊಡಲೊಲ್ಲೆ ಎಂದಾಗ ಭೇದಮಾರ್ಗ ಪ್ರಯತ್ನಿಸಿ, ಕರ್ಣನನ್ನು ದುರ್ಯೋಧನನಿಂದ ಬೇರ್ಪಡಿಸಲು ಯತ್ನಿಸಿದ ಶ್ರೀಕೃಷ್ಣ. ಹೇಗೆ? ಕರ್ಣನ ಜನ್ಮದ ರಹಸ್ಯವನ್ನು ಅವನಿಗೆ ತಿಳಿಸಿ ಕುಂತೀಪುತ್ರರಲ್ಲಿ ಅವನು ಹಿರಿಯನೆಂದೂ ಪಾಂಡವರು ಅವನನ್ನು ತಮ್ಮ ಅಗ್ರಜನೆಂದು ಒಪ್ಪುವರೆಂದೂ ಹೇಳಿ ಕರ್ಣನನ್ನು ಪಾಂಡವರ ಪಕ್ಷಕ್ಕೆ ತರಬಯಸಿದ. ಸುಯೋಧನನಿಗೆ ಋಣಿಯಾದ ಕರ್ಣನು ಒಪ್ಪದಿದ್ದದ್ದರಿಂದ ಆ ಪ್ರಯತ್ನವೂ ವಿಫಲವಾಯಿತು. ಸಾಮ-ದಾನ-ಭೇದಗಳೆಲ್ಲ ನಡೆಯದಾದಾಗಲೇ ಕೊನೆಯ ಉಪಾಯವಾದ ದಂಡವನ್ನು ತರಬೇಕಾಯಿತು. ಅದುವೇ ಯುದ್ಧ.

ಎರಡೂ ಪಕ್ಷಗಳು ಕುರುಕ್ಷೇತ್ರದಲ್ಲಿ ಎದುರುಬದುರು ನಿಂತಾಗ, ಅರ್ಜುನನ ಅರ್ಧಂಬರ್ಧ ಜ್ಞಾನ ಹೊರಬಂದಿತು. ವೀರನೂ ತಿಳಿವಳಿಕೆಯುಳ್ಳವನೂ ಆದ ಅರ್ಜುನನಿಗೂ ಅಂತಹ ಸಂದರ್ಭದಲ್ಲಿ ಸಂಶಯವೇರ್ಪಟ್ಟಿದ್ದು ಅಚ್ಚರಿಯೇನಲ್ಲ. ಆದರೆ ಆ ಸಂಶಯನಿವಾರಣೆಗೆ ಭಗವಂತನೇ ಅವನಿಗೆ ಮಾರ್ಗದರ್ಶಿಯಾಗಿ ಸಿಕ್ಕಿದುದರಿಂದ ಕೊನೆಗೆ ಅವನಿಗೆ ಮನಸ್ಸು ತಿಳಿಯಾಗಿ ತನ್ನ ಕರ್ತವ್ಯ ಮಾಡಲು ಮುನ್ನಡೆಯುವಂತಾಯಿತು.

ಈ ಬಗ್ಗೆ ಶ್ರೀರಂಗಮಹಾಗುರುಗಳು ಕೊಟ್ಟ ಮಾರ್ಮಿಕವಾದ ವಿವರಣೆಯ ಸಂಗ್ರಹ ಹೀಗಿದೆ: ದುರ್ಯೋಧನನು ಧರ್ಮವನ್ನು ಕಾಡಿಗೆ ಅಟ್ಟಿ ಅದು ಅಜ್ಞಾತವಾಸ ಮಾಡಬೇಕು ಎನ್ನುವಂತೆ ಮಾಡಿದ. ಹಾಗೂ ಇದ್ದದ್ದಾಯಿತು. ಐವರು ಪಾಂಡವರು ಜ್ಞಾನೇಂದ್ರಿಯಗಳಂತೆ - ಅವಕ್ಕೆ ಒಂದಿಷ್ಟು ಜಾಗ ಕೊಡು ಎಂದರೆ ದುರ್ಯೋಧನನು ಜ್ಞಾನಕ್ಕೆ ಜ್ಞಾನೇಂದ್ರಿಯಗಳಿಗೆ ಧರ್ಮಕ್ಕೆ ಒಂದಿಷ್ಟೂ ಸ್ಥಳ ಕೊಡುವುದಿಲ್ಲವೆಂದನು. ಹೀಗೆ ಜ್ಞಾನಕ್ಕೆ ಸ್ಥಾನಕೊಡದೆ ಅಂಧನ ನೂರೊಂದು ಮಕ್ಕಳು, ಎಂದರೆ ನೂರೊಂದು ನಾಡಿಗಳು, ಆಕ್ರಮಿಸಿ ನಿಂತಿದ್ದವು. ದುರ್ಯೋಧನನ ದುರ್ಗುಣಗಳನ್ನು ಹೀಗೇ ಬಿಟ್ಟರೆ ರಾಜ್ಯಕ್ಕೆ, ಎಂದರೆ ಜೀವಿಗಳಿಗೇ, ಅಪಾಯ ಎಂದು ತಿಳಿದು ಭಗವಂತನು ಧರ್ಮಸ್ಥಾಪನೆಗೆ ಬೇಕಾದ ಯುದ್ಧಕ್ಕೆ ತನ್ನ ಬೆಂಬಲವನ್ನು ಮಾರ್ಗದರ್ಶನದ ಮೂಲಕ ಒದಗಿಸಿದನು.

ಹೀಗೆ "ಕಿಂ ನೋ ರಾಜ್ಯೇನ ಗೋವಿಂದ" (ರಾಜ್ಯದಿಂದ ನಮಗಾಗಬೇಕಾದುದೇನು?) ಎಂದು ಕೇಳಿದ ಅರ್ಜುನನು "ಸ್ಥಿತೋಽಸ್ಮಿ ಗತಸಂದೇಹಃ" (ಸಂದೇಹದಿಂದ ಮುಕ್ತನಾಗಿ ನಿಂತಿದ್ದೇನೆ) ಎಂದು ಹೇಳುವ ತನಕ ಧರ್ಮಸ್ಥಾಪನೆಗಾಗಿ ಭಗವಂತನು ಅವನನ್ನು ಕರೆದುತಂದ. ಧರ್ಮ-ಅಧರ್ಮಗಳ ಮಧ್ಯೆ ಸೆಣಸಾಟವಾಗಿದ್ದಾಗ, ಅಸ್ಥಾನ-ಸ್ನೇಹ-ಕಾರುಣ್ಯ - ಎಂದರೆ ತೋರಿಸಬಾರದ ಜಾಗದಲ್ಲಿ ಸ್ನೇಹ-ಕರುಣೆಗಳನ್ನು ತೋರಿಸುವುದು - ಸಲ್ಲದು. ದೈವೀಸಂಪತ್ತಿನ ನೆಲೆವೀಡಾದ ಭಾರತಭೂಮಿಯ ಆ ಸಂಪತ್ತು ಅಸುರರ/ಅಧರ್ಮದ ಪಾಲಾಗಬಾರದೆಂಬ ಕಾರಣದಿಂದಲೇ ಈ ಯುದ್ಧವು ನಡೆಯಬೇಕಾದುದು - ಎಂಬುದಾಗಿ ಅರ್ಜುನನು ಮನಗಾಣುವಂತಾಯಿತು.

ಮತ್ತೊಂದು ಯುದ್ಧದ ಸಂದರ್ಭವನ್ನು ನಾವೆಲ್ಲರೂ ನೋಡುತ್ತಿದ್ದೇವೆ. ದುರ್ಯೋಧನನ ಅಸೂಯೆ, ಯುದ್ಧ, ಅರ್ಜುನನು ಪಾಲಿಸಿದ ಕರ್ತವ್ಯ ಇತ್ಯಾದಿಗಳನ್ನು ಕುರಿತ ಈ ಮೇಲೆ ಮಾಡಿದ ವಿಮರ್ಶೆಗೂ, ಇಂದು ಭಾರತವೆದುರಿಸುತ್ತಿರುವ ಸ್ಥಿತಿಗೂ ಹಲವು ಸಾಮ್ಯಗಳು ನಮ್ಮ ಮನಸ್ಸಿಗೆ ತಾವೇತಾವಾಗಿ ಬರುತ್ತವೆ.

"ನಿನ್ನ ಕರ್ತವ್ಯವೆಂದು ಧರ್ಮಕ್ಕಾಗಿ ಯುದ್ಧಮಾಡು" ಎಂದು ಉಪದೇಶಿಸಿರುವ ಶ್ರೀಕೃಷ್ಣನ ಮಾತುಗಳು ನಮಗೆ ದಾರಿದೀಪವಲ್ಲವೇ?


ಸೂಚನೆ : 24/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 138 ಕೃತಜ್ಞನಾದ ಮಯನ ಕೋರಿಕೆ(Vyaasa Vikshita 138)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಅರ್ಜುನನು ಅಸ್ತ್ರಗಳನ್ನು ಬೇಡಿದನಷ್ಟೆ. ಅದಕ್ಕೆ ಇಂದ್ರನು ಹೀಗೆ ಹೇಳಿದನು:


"ಪಾಂಡವನೇ, ಯಾವ ಕಾಲಕ್ಕೆ ಮಹಾದೇವನು ನಿನ್ನ ವಿಷಯದಲ್ಲಿ ಪ್ರಸನ್ನನಾಗುವನೋ, ಆಗ ನಿನಗೆ ಎಲ್ಲ ಪ್ರಕಾರದ ಅಸ್ತ್ರಗಳನ್ನೂ ನಾ ಕೊಡುವೆ. ಅಂತಹ ಸಮಯವು ಎಂದು ಬರುವುದೆಂಬುದನ್ನು ನಾ ಬಲ್ಲೆ, ಅರ್ಜುನಾ: ನಿನ್ನ ಮಹಾತಪಸ್ಸಿನಿಂದ ಸಂತುಷ್ಟನಾಗಿ ನಾನು ನಿನಗೆ ಆಗ್ನೇಯಾಸ್ತ್ರ ಹಾಗೂ ವಾಯವ್ಯಾಸ್ತ್ರಗಳನ್ನು ಸಂಪೂರ್ಣವಾಗಿ ಕೊಡಲಿರುವೆ. ಅದೇ ಸಮಯಕ್ಕೇ ನೀನು ನನ್ನ ಎಲ್ಲ ಅಸ್ತ್ರಗಳನ್ನೂ ಪಡೆಯುವೆ."


ಆಗ ಕೃಷ್ಣನೂ ವರವೊಂದನ್ನು ಕೇಳಿ ಪಡೆದನು – "ಪಾರ್ಥನೊಂದಿಗೆ ನನ್ನ ಪ್ರೀತಿಯು ಶಾಶ್ವತವಾಗಿ ಇರುವಂತಹುದಾಗಬೇಕು" ಎಂದು. ಇಂದ್ರನು ಆ ವರವನ್ನಿತ್ತನು.


ಹೀಗೆ ಅವರಿಬ್ಬರಿಗೂ ವರಗಳನ್ನಿತ್ತು, ಅಗ್ನಿದೇವನ ಅನುಜ್ಞೆಯನ್ನೂ ಸಂಪಾದಿಸಿಕೊಂಡು, ತನ್ನ ಸ್ವರ್ಗಕ್ಕೆ ಹೊರಟುಹೋದನು, ಇಂದ್ರ.


ಆ ಬಳಿಕ ಮೃಗ-ಪಕ್ಷಿ-ಸಮೇತವಾಗಿ ಆ ಕಾಡನ್ನುಅಗ್ನಿಯು ಒಟ್ಟಾರೆ ದಹಿಸಿದನು. ಮತ್ತು ಸಂಪೂರ್ಣವಾಗಿ ತೃಪ್ತಿಗೊಂಡವನಾಗಿ ಆರು ದಿನಗಳ ಕಾಲ ಅಲ್ಲೇ ವಿಶ್ರಾಂತಿ ತೆಗೆದುಕೊಂಡನು.


ಮಾಂಸಭಕ್ಷಣವನ್ನು ಮಾಡಿ, ಮೇದಸ್ಸು-ರಕ್ತಗಳನ್ನು ಪಾನಮಾಡಿ, ಪರಮಸಂತೋಷದಿಂದ ಕೂಡಿದವನಾಗಿದ್ದ ಅಗ್ನಿಯು, ಕೃಷ್ಣಾರ್ಜುನರನ್ನು ಕುರಿತು ಹೀಗೆ ಹೇಳಿದನು:


"ನೀವಿಬ್ಬರೂ ಪುರುಷಶ್ರೇಷ್ಠರು. ನನಗೆ ತೃಪ್ತಿಯಾಗುವಷ್ಟು ಸಂತೋಷವುಂಟುಮಾಡಿದ್ದೀರಿ. ನಿಮಗೆ ನಾನು ಅನುಮತಿಯನ್ನು ನೀಡುತ್ತಿದ್ದೇನೆ. ನಿಮಗೆ ಎಲ್ಲಿಷ್ಟವೋ ಅಲ್ಲಿ ಓಡಾಡಿಕೊಂಡಿರಿ." – ಎಂದು.


ಅಗ್ನಿಯು ಹೀಗೆ ಅನುಮತಿಸಲಾಗಿ, ಅರ್ಜುನ-ವಾಸುದೇವರು ಹಾಗೂ ದಾನವನಾದ ಮಯ – ಈ ಮೂವರೂ ಯಥೇಷ್ಟವಾಗಿ ಸುತ್ತಾಡಿ, ರಮಣೀಯವಾದ ನದೀತಟದಲ್ಲಿ ಒಟ್ಟಿಗೆ ಕುಳಿತರು.


ಆ ಬಳಿಕ, ಕೃಷ್ಣ-ಸಂನಿಧಿಯಲ್ಲಿ ಕುಳಿತ ಮಯನು ಅರ್ಜುನನನ್ನು ಮತ್ತೆ ಮತ್ತೆ ಪ್ರಶಂಸಿಸಿ, ಕೈಜೋಡಿಸಿ, ಮಧುರವಾದ ಮಾತಿನಿಂದ ಹೀಗೆ ನುಡಿದನು:


"ಶ್ರೀಕೃಷ್ಣನು ನನ್ನ ವಿಷಯದಲ್ಲಿ ಬಹಳವೇ ಕೋಪಗೊಂಡಿದ್ದನು. ಅಗ್ನಿಯಂತೂ ಸುಡಬಯಸಿದ್ದನು. ಹಾಗಿರುವಲ್ಲಿ ಈ ಇಬ್ಬರ ದೆಸೆಯಿಂದಲೂ ನನ್ನನ್ನು ಕಾಪಾಡಿದ್ದೀರಿ. ನಿಮಗಾಗಿ ನಾನು ಯಾವ ಸೇವೆಯನ್ನು ಮಾಡಿಕೊಡಲಿ?"


ಅದಕ್ಕೆ ಅರ್ಜುನನು ಹೇಳಿದನು:

"ಮಹಾಸುರನೇ, ನೀನು ಮಾಡಬೇಕಾದದ್ದನ್ನೆಲ್ಲಾ ಮಾಡಿದ್ದೀಯೆ. ಹೋಗಿ ಬಾ. ನಿನಗೆ ಮಂಗಳವಾಗಲಿ. ನಮ್ಮ ವಿಷಯದಲ್ಲಿ ನೀನು ಪ್ರೀತಿಯುಳ್ಳವನಾಗಿರು. ನಾವೂ ನಿನ್ನ ವಿಷಯದಲ್ಲಿ ಸಂತೋಷದಿಂದಿದ್ದೇವೆ."


ಅದಕ್ಕೆ ಮಯನು ಹೇಳಿದನು:

"ಪುರುಷಶ್ರೇಷ್ಠನೇ, ನೀನು ಹೇಳಿರುವುದೆಲ್ಲಾ ಯುಕ್ತವೇ ಆಗಿದೆ. ಆದರೂ ಸಹ ಪ್ರೀತಿಪೂರ್ವಕವಾಗಿ ನಾನೇನನ್ನಾದರೂ ತಮಗಾಗಿ ಮಾಡಬಯಸುತ್ತೇನೆ.


ನಾನು ದಾನವರ ವಿಶ್ವಕರ್ಮ. ಶಿಲ್ಪವಿದ್ಯಾ-ನಿಪುಣ. ನಿನಗೋಸ್ಕರವಾಗಿ ಏನನ್ನಾದರೂ ಮಾಡಲು ಇಚ್ಛಿಸುತ್ತೇನೆ. ಹಿಂದೆ ನಾನು ದಾನವರಿಗಾಗಿ ಅನೇಕ ಪ್ರಾಸಾದಗಳನ್ನು, ಎಂದರೆ ಅರಮನೆಗಳನ್ನು, ಕಟ್ಟಿಕೊಟ್ಟಿರುವೆನು.


ಸುಖಸಾಧನವೂ ರಮಣೀಯವೂ ಭೋಗಭರಿತವೂ ಆದ ನಿರ್ಮಾಣಗಳು ಅವು. ಹಾಗೆಯೇ ರಮ್ಯವಾದ ಉದ್ಯಾನಗಳು, ಬಗೆಬಗೆಯ ಸರೋವರಗಳು, ವಿಚಿತ್ರವಾದ ಶಸ್ತ್ರಗಳು ಹಾಗೂ ಎಲ್ಲೆಂದರಲ್ಲಿಗೆ ಹೋಗಬಲ್ಲ ರಥಗಳು, ಅಟ್ಟಗಳು-ಪ್ರಾಕಾರಗಳು-ತೋರಣಗಳು - ಇವುಗಳಿಂದ ಕೂಡಿದ ವಿಶಾಲನಗರಿಗಳು, ಹಾಗೂ ಸಹಸ್ರಾರು ಸಂಖ್ಯೆಯಲ್ಲಿರುವ ಮುಖ್ಯವೂ ವಿಚಿತ್ರವೂ ಆದ ವಾಹನಗಳು, ರಮಣೀಯವಾದ ಸುಖಪ್ರದ ಸುರಂಗಗಳು - ಇವೆಲ್ಲವನ್ನೂ ನಿರ್ಮಿಸಿಕೊಟ್ಟಿದ್ದೇನೆ. ಅದಕ್ಕೇ ತಮಗೂ ಏನನ್ನಾದರೂ ಮಾಡಿಕೊಡಲು ನಾನು ಇಚ್ಛಿಸುತ್ತೇನೆ" - ಎಂದನು.


ಅದಕ್ಕೆ ಅರ್ಜುನನು ಹೇಳಿದನು: "ಪ್ರಾಣಸಂಕಟವೊಂದರಿಂದ ನಾನು ನಿನ್ನನ್ನು ಬಿಡಿಸಿರುವೆನೆಂಬ ಭಾವನೆಯಿಂದ ನೀನು ನನಗೇನನ್ನಾದರೂ ಮಾಡಿಕೊಡಬೇಕೆಂದಿರುವೆ. ಎಂದೇ ನಿನ್ನಿಂದ ಏನನ್ನಾದರೂ ಮಾಡಿಸಿಕೊಳ್ಳಬೇಕೆಂದು ನನಗನ್ನಿಸುವುದಿಲ್ಲ" - ಎಂದನು.


ಸೂಚನೆ : 25/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಪ್ರಶ್ನೋತ್ತರ ರತ್ನಮಾಲಿಕೆ 17 (Prasnottara Ratnamalike 17)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೭. ಕರ್ಣಾಂಜಲಿಯಿಂದ ಪಾನಮಾಡಲು ಯೋಗ್ಯವಾದ ಅಮೃತ ಯಾವುದು?

ಉತ್ತರ - ಉಪದೇಶ


ಈ ಪ್ರಶ್ನೆ ಹೀಗಿದೆ ಕಿವಿಯಿಂದ ಕೇಳಲು ಅತ್ಯಂತ ಯೋಗ್ಯವಾದ ವಿಷಯ ಯಾವುದು? ಎಂಬುದಾಗಿ. ಅದಕ್ಕೆ ಉತ್ತರವಾಗಿ 'ಉಪದೇಶ' ಎಂದು ಹೇಳಲಾಗಿದೆ. ಉಪದೇಶವು ಹೇಳುವಂತಹದ್ದು ಮತ್ತು ಅದು ಕೇಳಲಿಕ್ಕೆ ಯೋಗ್ಯವಾದದ್ದು ಎಂದರ್ಥ. ಕೆಲವೊಮ್ಮೆ ಪ್ರಿಯಯೂ ಹಿತವೂ ಆಗಿರಬಹುದು. ಇನ್ನು ಕೆಲವೊಮ್ಮೆ ಹಿತವೂ ಅಪ್ರಿಯವೂ ಆಗಿರಬಹುದು. ಆದರೆ ಅದು ಅಹಿತವಂತೂ ಖಂಡಿತಾ ಆಗದು. ಆದ್ದರಿಂದಲೇ ಉಪದೇಶವನ್ನು ಕೆಲವೊಮ್ಮೆ ಹೀಗೂ ಹೇಳುವುದುಂಟು 'ಹೇಳಲಿಕ್ಕೆ ಚೆಂದ; ಆಚರಣೆಗೆ ಕಷ್ಟ' ಎಂಬುದಾಗಿ' ಸಂಸ್ಕೃತದಲ್ಲಿ ಒಂದು ಗಾದೆಮಾತು ಕೂಡಾ ಇದೆ - "ಪರೋಪದೇಶವೇಲಾಯಾಂ ಸರ್ವೇ ವ್ಯಾಸಪರಾಶರಾಃ" ಎಂದು. ಅಂದರೆ ಮತ್ತೊಬ್ಬರಿಗೆ ಹೇಳುವಾಗ ಎಲ್ಲರೂ ವ್ಯಾಸ, ಪರಾಶರ ಮಹರ್ಷಿಗಳಂತೆ ಆದರ್ಶವನ್ನೇ ಹೇಳುತ್ತಾರೆ. ಆದರೆ ವಯಕ್ತಿಕವಾದ ಪಾಲನೆಯ ವಿಷಯ ಬಂದಾಗ "?" ಇಷ್ಟೇ!  ಅಂದರೆ ಬೇರೆಯವರಿಗೆ ಹೇಳಲು ಆಗುತ್ತದೆ, ಆದರೆ ತಾವೇ ಸ್ವತಃ ಆಚರಣೆಯ ವಿಷಯ ಬಂದಾಗ ಆ ಉಪದೇಶವೂ ನಿರರ್ಥಕವಾಗಬಹುದು ಎಂಬುದಾಗಿ ಉಪದೇಶ ವಿಷಯದಲ್ಲಿ ಹೇಳುವುದುಂಟು. ಹಾಗಾದರೆ ಈ ಉಪದೇಶವು ಏನು ಮಾಡುತ್ತದೆ? ಅದು ಹೇಗೆ ಕೇಳಲು ಯೋಗ್ಯವಾದುದು? ಎಂಬುದನ್ನು ನಾವು ನೋಡಬೇಕಾಗಿದೆ.


ಉಪದೇಶ ಎಂದರೆ ಸಮೀಪದಲ್ಲಿ ಹೇಳುವ ವಿಷಯ ಎಂದರ್ಥ. ಅಥವಾ ಗುಟ್ಟಾಗಿ ಹೇಳುವ ವಿಚಾರ. ಒಬ್ಬ ವ್ಯಕ್ತಿಯನ್ನು ಮಾತುಗಳ ಮೂಲಕ ಅಥವಾ ಹಿತವಚನಗಳ ಮೂಲಕ ಅವನನ್ನು ಸಮೀಪಕ್ಕೆ ಕರೆಯುವುದು ಎಂಬುದು ಇದರ ಅರ್ಥ. ಉಪ- ಸಮೀಪ, ದಿಶ್ - ಉಚ್ಚಾರಣೆ- ಹೇಳುವುದು, ಕರೆಯುವರು ಎಂಬುದು ಅರ್ಥ. ಅಂದರೆ ಯಾವ ವಿಷಯ ಅವನಿಗೆ ದೂರವಾಗಿದೆಯೋ, ಅರಿವಿಲ್ಲದಂತಾಗಿದೆಯೋ ಅದನ್ನು ಅರಿವಾಗುವಂತೆ ಮಾಡಿ ಆ ವಿಷಯದ ಸಾಮಿಪ್ಯವನ್ನು ಉಂಟುಮಾಡುವಂತೆ ಮಾಡುವ ಹಿತವಚನಕ್ಕೆ ಉಪದೇಶ ಎಂದು ಕರೆಯುತ್ತಾರೆ. ಈ ಉಪದೇಶವು ವ್ಯಕ್ತಿಯನ್ನು ಉದ್ಧರಿಸಬಲ್ಲದು, ವ್ಯಕ್ತಿಯನ್ನು ಪರಿವರ್ತಿಸಬಲ್ಲದು, ವ್ಯಕ್ತಿಯನ್ನು ಜಾಗೃತಗೊಳಿಸಬಲ್ಲದು. ಹೀಗೆ ಅನೇಕ ಪ್ರಯೋಜನ ಈ ಉಪದೇಶಕ್ಕೆ ಇದೆ. ಆದ್ದರಿಂದಲೇ ಇದನ್ನು ಕೇಳಲಿಕ್ಕೆ ಯೋಗ್ಯವಾದ ವಿಷಯ ಎಂಬುದಾಗಿ ಹೇಳಲಾಗಿದೆ. ಉಪದೇಶವೂ ಕೇಳಲಿಕ್ಕೆ ಆಪ್ಯಾಯಮಾನವಾಗಿ ಕಾಣಬಹುದು. ಆದರೆ ಅದು ಆಚರಣೆಗೆ ಬಂದಾಗ ಕ್ಲಿಷ್ಟವಾಗಬಹುದು. ಆದ್ದರಿಂದಲೇ ಉಪದೇಶವು ಕರ್ಣಾಂಜಲಿಗೆ ಪಾನ ಮಾಡಲು ಯೋಗ್ಯವಾದದ್ದು. ಯಾವುದು? ಎಂಬ ಪ್ರಶ್ನೆಗೆ 'ಉಪದೇಶ' ಎಂಬ ಉತ್ತರವನ್ನು ಕೊಡಲಾಗಿದೆ ಎಂಬುದನ್ನು ಭಾವಿಸಬಹುದು. ಹಾಗಾಗಿ ಯಾವುದು ಕೇಳಲಿಕ್ಕೆ ಯೋಗ್ಯವಾದದ್ದು, ಆಚರಣೆಗೆ ಕಷ್ಟವಾದದ್ದು ಅಂತದ್ದನ್ನು ಉಪದೇಶ ಎಂಬುದಾಗಿ ಕರೆಯಲಾಗಿದೆ.


'ಉಪದೇಶ' ಎಂಬ ಶಬ್ದಕ್ಕೆ ಮಂತ್ರಕಥನ ಎಂಬ ಅರ್ಥವಿದೆ. ಮಂತ್ರ ಎಂದದೆ ಅತ್ಯಂತ ಗೌಪ್ಯವಾದುದು. ಹೇಳುವ ವಿಷಯವು ಹೇಳುವವನಿಗೆ ಮತ್ತು ಕೇಳುವವನಿಗೆ ಮಾತ್ರ ತಿಳಿಯುವ 'ಷಟ್ ಕರ್ಣಾತ್ ಭಿದ್ಯತೇ ಮಂತ್ರಃ' ಎಂಬಂತೆ ಮೂರನೇಯವನಿಗೆ ಕೇಳದೆ ಇರುವಂತಹ ಯಾವ ವಿಷಯವಿದೆಯೋ ಅದನ್ನು ಉಪದೇಶ ಎಂಬುದಾಗಿ ಕರೆಯಬಹುದು. ಉಪದೇಶ ಎಂಬ ಶಬ್ದಕ್ಕೆ ಶಿಕ್ಷಣ ಎಂಬ ಅರ್ಥವೂ ಇದೆ. ಧರ್ಮೋಪದೇಶ ಮಂತ್ರೋಪದೇಶ ಶಾಸ್ತ್ರೋಪದೇಶ ಇತ್ಯಾದಿ ಸಂದರ್ಭಗಳಲ್ಲಿ ಧರ್ಮವನ್ನು ತಿಳಿಸುವುದು ಎಂಬ ಅರ್ಥವೂ ಕೂಡ ಈ ಶಬ್ದಕ್ಕೆ ಇದೆ.


ಸೂಚನೆ : 25/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, May 18, 2025

ಪ್ರಶ್ನೋತ್ತರ ರತ್ನಮಾಲಿಕೆ 16 (Prasnottara Ratnamalike 16)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೬. ಯಾರು ಶೂರ ?

ಉತ್ತರ - ಸ್ತ್ರೀಯರ ಕಣ್ಣಿನಿಂದ ಹೊರಬರುವ ಮನ್ಮಥನ ಬಾಣದಿಂದ ವಿಚಲಿತನಾಗದವ.


ಶೂರ, ವೀರ, ಧೀರ, ಪರಾಕ್ರಮ ಈ ಪದಗಳು ಒಂದೇ ಅರ್ಥವನ್ನು ಹೇಳುತ್ತವೆ. ಮನಸ್ಸಿನ ನಿಯಂತ್ರಣ ಉಳ್ಳವನೇ ಧೀರನಾಗಿರುತ್ತಾನೆ. ಧೀ-ಬುದ್ಧಿ, ಬುದ್ಧಿಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಂಡವನು ಎಂಬುದು ಧೀರ ಎಂಬ ಪದದ ಅರ್ಥ. ಆದ್ದರಿಂದ ಶೂರ ಎಂಬ ಪದವೂ ಇದೇ ಅರ್ಥವನ್ನು ಕೊಡುವ ಶಬ್ದವಾಗಿದೆ. ಇಲ್ಲಿ ಕೇಳುವ ಪ್ರಶ್ನೋತ್ತರದಲ್ಲಿ ಸ್ತ್ರೀಮೋಹದಿಂದ ದೂರ ಇರುವವನೇ ಶೂರ ಎಂಬ ಅರ್ಥ ಗೋಚರವಾಗುತ್ತದೆ. ಅದು ಹೇಗೆ ಎಂಬುದನ್ನು ಸ್ವಲ್ಪ ನೋಡೋಣ.


ಸಾಮಾನ್ಯವಾದ ಒಂದು ಮಾತಿದೆ. "ಹೆಣ್ಣು, ಹೊನ್ನು, ಮಣ್ಣು ಈ ಮೂರಕ್ಕೆ ಮೋಹಗೊಳ್ಳದವನು ಯಾರೂ ಇಲ್ಲ" ಎಂಬುದಾಗಿ. ಎಂತಹ ಪಂಡಿತನನ್ನು ಕೂಡ ಈ ಮೂರು ವಿಷಯಗಳು ಕಟ್ಟುತ್ತವೆ. ಇವುಗಳಿಂದ ಸಿಕ್ಕಿಹಾಕಿಕೊಳ್ಳದವನು ಯಾರೂ ಇರಲು ಸಾಧ್ಯವಿಲ್ಲ ಎಂಬಷ್ಟರ ಮಟ್ಟಿಗೆ ಇವುಗಳ ಮೋಹಕತ್ವವನ್ನು ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಅನೇಕ ಪುರಾಣಪುಣ್ಯ ಕಥೆಗಳನ್ನೂ ನೋಡಬಹುದು. ಒಂದು ಹೆಣ್ಣಿನ ಮೋಹಕ್ಕೆ ಒಳಗಾಗಿ ರಾವಣ ಕಾಲವಾದ. ಒಂದು ಹೆಣ್ಣಿಗೋಸ್ಕರ ದುರ್ಯೋಧನ ದುಶ್ಶಾಸನಾದಿಗಳು ಅಂತರಾದರು. ರಾಮಾಯಣ ಮಹಾಭಾರತಗಳು ಒಂದು ಹೆಣ್ಣಿಗಾಗಿ ನಡೆದವು ಎಂದು ಹೇಳಲಾಗುತ್ತಿದೆ. ಹಾಗಾಗಿ ಹೆಣ್ಣಿನ ಮೋಹಕ್ಕೆ ಒಳಗಾಗಿ ಕೆಟ್ಟವರು ಬಹಳ ಮಂದಿ. 


ಈ ಸಂಸಾರದಿಂದ ಮುಕ್ತನಾಗಬೇಕಾದರೆ ಈಷಣವನ್ನು ಬಿಡಬೇಕೆಂದು ಶಾಸ್ತ್ರ ಸಾರುತ್ತದೆ. ಅದರಲ್ಲಿ ಮುಖ್ಯವಾದುದು ದಾರೈಷಣಾ. ಇದನ್ನು ಮುಮುಕ್ಷುವು ಬಿಡಲೇಬೇಕು ಎಂಬುದಾಗಿ ಹೇಳಲಾಗುತ್ತದೆ.   ಪ್ರಕೃತಿಕ್ಷೇತ್ರದಲ್ಲಿ ಇಳಿದ ಪ್ರತಿಯೊಂದು ಜೀವವೂ ಪ್ರಕೃತಿರೂಪಿಣಿಯಾದ ಸ್ತ್ರೀಯನ್ನು ಬಯಸದೇ ಇರಲಾರ. ಬಯಸದೆ ಇದ್ದರೆ ಬದುಕೂ ಅಪರಿಪೂರ್ಣವಷ್ಟೆ. ಸ್ತ್ರೀಯನ್ನು ಬಯಸುವುದು ಪ್ರಕೃತಿಸಹಜಗುಣವಷ್ಟೆ! ಈ ವಿಷಯದಲ್ಲಿ ಮನುಷ್ಯ ಹೊರತಲ್ಲ. ಉಳಿದ ಪ್ರಾಣಿಗಳು ಅವಶರಾಗಿ ಸಂತಾನಕ್ಕೋಸ್ಕರ ಬಯಸುವುದುಂಟು. ಅದೇರೀತಿ ಮನುಷ್ಯನೂ ಬಯಸಿದರೆ ತಪ್ಪಿಲ್ಲ. ಆದರೆ ಮನುಷ್ಯನಲ್ಲಿ ಒಂದು ಅಲಿಖಿತನಿಯಮ ಉಂಟು, ತನ್ನ ಪತ್ನಿಯನ್ನು ಮಾತ್ರ ಬಯಸಬೇಕು ಎಂಬುದಾಗಿ. ಉಳಿದ ಸ್ತ್ರೀಯರ ವಿಷಯದಲ್ಲಿ ತನ್ನ ತಾಯಿಗೆ ಸರಿಸಮಾನವಾಗಿ ಭಾವಿಸಬೇಕೆಂಬುದು ಸ್ತ್ರೀಬಯಕೆಯ ಕಡಿವಾಣ. ಇದು ಉಲ್ಲಂಘನೆಯಾಗದಂತೆ ವರ್ತಿಸುವುದೇ ನಿಜವಾಗಿ ಶೂರತ್ವದ ಲಕ್ಷಣ ಎಂಬುದು ಇಲ್ಲಿನ ಆಶಯವಾಗಿದೆ. 


ಮನುಷ್ಯ ಎಷ್ಟರ ಮಟ್ಟಿಗೆ ಈ ವಿಷಯದಲ್ಲಿ ಮೋಹಕ್ಕೆ ಅಥವಾ ಸೆಳೆತಕ್ಕೆ ಉಳಗಾಗುವ ಸಾಧ್ಯತೆ ಇರಬಹುದು ಎಂದು ಪರಿಗಣಿಸಿ ಒಂದು ಸುಭಾಷಿತವು ಈ ವಿಷಯವನ್ನು ಹೀಗೆ ಹೇಳುತ್ತದೆ - ವಯಸ್ಸಿಗೆ ಬಂದ ಮಗಳೇ ಆದರೂ ತಂದೆಯಾದವನು ಒಂದೇ ಶಯನದಲ್ಲಿ ಇಟ್ಟುಕೊಳ್ಳಬಾರದು ಎಂದು. ರತಿ ಎಂಬುದು ಮನ್ಮಥ ಮಡದಿ. ಅವಳ ಆಕರ್ಷಣೆ ಮನ್ಮಥನಿಗೆ ಉಂಟು. ಅವಳು ಎಲ್ಲಾ ಸ್ತ್ರೀಯರಲ್ಲೂ ದೇವತಾರೂಪದಲ್ಲಿ ಇರುತ್ತಾಳೆ. ಅವಳನ್ನು ಒಂದು ಯಜ್ಞರೂಪದಲ್ಲಿ ಅಂದರೆ ರೇತೋಯಜ್ಞರೂಪದಲ್ಲಿ ಬಳಸಿಕೊಂಡಾಗ ಅಲ್ಲಿ ಸೃಷ್ಟಿಯ ಸಹಜವಿಸ್ತಾರಕ್ಕೆ ಬೇಕಾದ ಸಂತತಿ ಉಂಟಾಗುತ್ತದೆ ಎಂಬುದಾಗಿ ನಮ್ಮ ಹಿರಿಯರು ಈ ಸ್ತ್ರೀರತಿಯನ್ನು ಉತ್ತಮರೀತಿಯಲ್ಲಿ ಹೇಳಿದ್ದುಂಟು. ಇದಕ್ಕೆ ಹೊರತಾಗಿ ಯಾವುದೇ ಬಗೆಯ ರತಿ ಕಂಡುಬಂದರೂ ಕೂಡ ಅದು ಸೃಷ್ಟಿಯ ವಿಕೃತಿ ಎಂಬುದಾಗಿ ಅದೇ ಹಿರಿಯರು ಹೇಳಿದ್ದುಂಟು. ಇದನ್ನು ಅರ್ಥಮಾಡಿಕೊಂಡವೇ ನಿಜಾರ್ಥದಲ್ಲಿ ಶೂರ - ಧೀರನಾಗುತ್ತಾನೆ.


ಸೂಚನೆ : 18/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 137 ಮಂದಪಾಲ-ಕುಟುಂಬ-ರಕ್ಷೆ, ಅಗ್ನಿತೃಪ್ತಿ (Vyaasa Vikshita 137)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತನ್ನ ಬಗ್ಗೆ ಅನಾಸ್ಥೆಯಿಂದಿದ್ದ ಪತ್ನಿಯನ್ನು ಕುರಿತು ತನ್ನ ಮಾತನ್ನು ಮುಂದುವರೆಸುತ್ತಾ ಮಂದಪಾಲನು ಹೀಗೆ ಹೇಳಿದನು: 

"ಅರುಂಧತಿಯ ಬಗ್ಗೆ ನಿನಗೆ ಗೊತ್ತಿದೆಯಲ್ಲವೇ? ಅವಳು ಸುವ್ರತೆ, ಶುಭಗುಣಗಳನ್ನುಳ್ಳವಳು; ಅವಳ ಬಗ್ಗೆ ಕೇಳಿಲ್ಲದವರೇ ಇಲ್ಲ. ಅಂತಹ ಅರುಂಧತಿಯು ಮಹಾತ್ಮನಾದ ವಸಿಷ್ಠನ ನಡತೆಯನ್ನು ಶಂಕಿಸಿದಳು. ಅತನೋ ವಿಶುದ್ಧಭಾವವುಳ್ಳವನು; ಯಾವಾಗಲೂ ಅವಳಿಗೆ ಪ್ರಿಯವಾದುದರಲ್ಲೇ ಹಾಗೂ ಹಿತವಾಗಿರುವುದರಲ್ಲೇ ನಿರತನಾದವನು. ಸಪ್ತರ್ಷಿಗಳಲ್ಲೊಬ್ಬನೆನಿಸಿದವನು. ಧೀರನಾದವನು. ಅಂತಹ ಮುನಿಯನ್ನು ಅವಳು ಕೀಳಾಗಿ ಕಂಡಳು.

ಆ ಅಶುಭಚಿಂತನದಿಂದಾಗಿ ಅವಳ ಮೈಕಾಂತಿಯು ಧೂಮದಂತೆಯೂ ಅರುಣನಂತೆಯೂ ಆಯಿತು, ಎಂದರೆ ಮಂದವಾಯಿತು. ಕೆಲವೊಮ್ಮೆ ಕಾಣಿಸಿಕೊಳ್ಳುವುದು, ಕೆಲವೊಮ್ಮೆ ಕಾಣಿಸಿಕೊಳ್ಳದಿರುವುದು - ಹೀಗೆ ಅಭಿರೂಪವಲ್ಲದ, ಎಂದರೆ ಪ್ರಶಸ್ತವಲ್ಲದ, ರೂಪವುಳ್ಳವಳಾಗಿ, ಯಾವುದೋ ಶಕುನವನ್ನೇ ಎದುರುನೋಡುತ್ತಿರುವವಳಂತಿದ್ದಳು.

ಮಕ್ಕಳಿಗಾಗಿ ನಾನಿಲ್ಲಿಗೆ ಬಂದಿರುವೆ. ಹಾಗಿದ್ದರೂ ನೀನು ನನ್ನಲ್ಲಿ ತಿರಸ್ಕಾರಭಾವದಿಂದಿರುವೆ. ಇಷ್ಟಲಾಭವು ನಿನಗಾಗಿದೆ. ನಿನ್ನಂತೆಯೇ ಆ ಲಪಿತೆಯೂ ಸಂದೇಹಭಾವದಿಂದಿದ್ದಾಳೆ.

ಸಾರಾಂಶವಿಷ್ಟೆ. ಇವಳು ನನ್ನ ಹೆಂಡತಿ ಎಂಬ ಕಾರಣಕ್ಕೆ ಯಾವ ಪುರುಷನೂ ಸ್ತ್ರೀಯ ವಿಷಯದಲ್ಲಿ ನೆಚ್ಚಿಕೆ ಹೊಂದಿಬಿಡಬಾರದು. ಏಕೆಂದರೆ ಪುತ್ರವತಿಯಾದಮೇಲೆ ಪತಿಯನ್ನುಪಚರಿಸುವುದೇ ಮೊದಲಾದ ಕಾರ್ಯಗಳತ್ತ ಆಕೆ ಮನಸ್ಸು ಕೊಡಳು." ಹೀಗೆ ಹೇಳಿ ತನ್ನ ಮಾತನ್ನು ಮುಗಿಸಿದನು. 

ಇಷ್ಟು ಮಾತುಕತೆಗಳಾದ ಮೇಲೆ ಮಕ್ಕಳೆಲ್ಲರೂ ತಂದೆ ಮಂದಪಾಲನ ಬಳಿಗೆ ಬಂದು ಕುಳಿತರು. ಮತ್ತು ಆತನೂ ತನ್ನ ಮಕ್ಕಳಿಗೆ ಪ್ರೀತಿ-ಧೈರ್ಯಗಳು ತುಂಬುವಂತೆ ಮಾತನಾಡಿದನು:

"ನಾನು ಅಗ್ನಿದೇವನನ್ನು ಆಗಲೇ ಪ್ರಾರ್ಥಿಸಿಕೊಂಡಿದ್ದೆ - ನಿಮಗಾರಿಗೂ ಆ ಬೆಂಕಿಯ ಬಿಸಿ ತಟ್ಟದಿರಲೆಂದು. ಅಂತೆಯೇ ಹಾಗೆಯೇ ಆಗಲೆಂದು ಆ ಮಹಾತ್ಮನಾದ ಅಗ್ನಿಯೂ ಮಾತುಕೊಟ್ಟಿದ್ದನು.

ಒಂದು ಕಡೆ ಅಗ್ನಿಯಿತ್ತ ಮಾತು, ಮತ್ತೊಂದೆಡೆ ನಿಮ್ಮ ತಾಯಿಯ ಧರ್ಮಜ್ಞತೆ, ಮಗದೊಂದೆಡೆ ನಿಮ್ಮಗಳ ಮಹಾಶಕ್ತಿ - ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡೇ ನಾನೀಮೊದಲು ಇಲ್ಲಿಗೆ ಬರಲಿಲ್ಲ. ಮಕ್ಕಳಿರಾ, ನನ್ನ ವಿಷಯದಲ್ಲಿ ನೀವುಗಳು ಯಾರೂ ಕೋಪತಾಪಗಳನ್ನು ಮಾಡಿಕೊಳ್ಳುವುದಲ್ಲ. ನೀವುಗಳು ಋಷಿಗಳೆಂಬುದನ್ನು ಅಗ್ನಿದೇವನೂ ಅರಿತಿರುವನು. ನೀವೂ ಬ್ರಹ್ಮವನ್ನು ಅರಿತಿರುವವರೇ" ಎಂದನು.

ಹೀಗೆ ಆಶ್ವಾಸನೆಯನ್ನು ಪಡೆದ ಮಕ್ಕಳು ಹಾಗೂ ಹೆಂಡತಿ - ಇವರುಗಳನ್ನು ಕರೆದುಕೊಂಡು ಆ ದ್ವಿಜನು ಆ ದೇಶದಿಂದ ಮತ್ತೊಂದು ದೇಶಕ್ಕೆ ಹೊರಟುಹೋದನು. ಇತ್ತ ಅಗ್ನಿದೇವನೂ ಸಹ ಪ್ರಜ್ವಲಿಸುವವನಾಗಿ ಇಬ್ಬರೂ ಕೃಷ್ಣರೊಂದಿಗೆ - ಎಂದರೆ ಕೃಷ್ಣ ಹಾಗೂ ಅರ್ಜುನರೊಂದಿಗೆ - ಖಾಂಡವವನ್ನು ಸುಟ್ಟುಹಾಕಿದನು, ಹಾಗೂ ಆ ಮೂಲಕ ಜಗತ್ತಿಗೇ ಹಿತವನ್ನುಂಟುಮಾಡಿದನು.

ಆಗ ಹರಿದದ್ದು ಮಜ್ಜೆ ಹಾಗೂ ಮೇದಸ್ಸುಗಳ ನದಿಗಳು. ಅವನ್ನು ಅಗ್ನಿಯು ಕುಡಿದು ಪರಮತೃಪ್ತಿಯನ್ನು ಹೊಂದಿದನು.

ಆ ಬಳಿಕ ಅರ್ಜುನನಿಗೆ ತನ್ನ ದರ್ಶನವನ್ನಿತ್ತನು. ಆ ಹೊತ್ತಿಗೆ ಅಂತರಿಕ್ಷದಿಂದ ಇಂದ್ರನು ಇಳಿದುಬಂದನು, ಅನ್ಯದೇವತೆಗಳೊಂದಿಗೆ. ಬಂದವನೇ ಕೃಷ್ಣನನ್ನು ಕುರಿತು ಹೇಳಿದನು:

"ದೇವತೆಗಳಿಗೂ ಸಾಧ್ಯವಲ್ಲದಂತಹ ಕರ್ಮವನ್ನು ನೀವಿಬ್ಬರೂ ಮಾಡಿದ್ದೀರಿ. ನನಗೆ ಸಂತೋಷವಾಗಿದೆ. ಆದುದರಿಂದ, ಮನುಷ್ಯರಿಗೆ ದುರ್ಲಭವೆನಿಸುವಂತಹ ವರವನ್ನು ಕೇಳಿಕೊಳ್ಳಿರಿ." ಎಂದು.

ಆಗ ಪಾರ್ಥನು ಇಂದ್ರನಿಂದ ಎಲ್ಲ ಬಗೆಯ ಅಸ್ತ್ರಗಳನ್ನೂ ಬಯಸಿದನು. ಮತ್ತು ಅವುಗಳನ್ನು ಕೊಡಲು ಕಾಲವನ್ನು ಇಂದ್ರನೂ ನಿಶ್ಚಯಮಾಡಿದನು

ಸೂಚನೆ : 18/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Saturday, May 17, 2025

ಕೃಷ್ಣಕರ್ಣಾಮೃತ 62 - ಮಾಲೆಯ ರಾಶಿಗೆ ಬೆದರಿದ ಚರಣಕ್ಕೆ ನಮನ (Krishakarnamrta 62)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)

ಘೋಷ-ಯೋಷಿದನುಗೀತ-ಯೌವನಂ
ಕೋಮಲ-ಸ್ತನಿತ-ವೇಣು-ನಿಸ್ಸ್ವನಂ |
ಸಾರಭೂತಂ ಅಭಿರಾಮ-ಸಂಪದಾಂ
ಧಾಮ ತಾಮರಸ-ಲೋಚನಂ ಭಜೇ ||
ರಣ-ಘೋಷ, ವಾದ್ಯ-ಘೋಷ ಮುಂತಾದ ಪದಗಳನ್ನು ಕೇಳಿದ್ದೇವಲ್ಲವೇ? ಅಲ್ಲೆಲ್ಲಾ ಘೋಷವೆಂದರೆ ದೊಡ್ಡದಾದ ಸದ್ದೆಂಬುದೇ ಅರ್ಥ. ಆದರೆ ಅದಕ್ಕೆ ಸಂಸ್ಕೃತದಲ್ಲಿ ಆಭೀರ-ಪಲ್ಲೀ, ಅರ್ಥಾತ್ ಗೊಲ್ಲರ ಹಳ್ಳಿ - ಎಂಬ ಅರ್ಥವೂ ಇದೆ. ಅಲ್ಲಿಯ ರಮಣಿಯರೆಂದರೆ ಗೊಲ್ಲರ ನಾರಿಯರು. ಘೋಷ-ಯೋಷಿತರೆಂದರೆ ಅವರೇ. ಅವರ ಮನಸ್ಸನ್ನು ಸೆಳೆದಿಬಿಟ್ಟಿದೆ ಕೃಷ್ಣನ ಯೌವನ. ಎಂದೇ ಅದರ ಮೇಲೆ ಹಾಡುಕಟ್ಟಿ ಹಾಡುವವರು, ಅವರು. ಅಂತಹ ಯೌವನ ಆತನದು. ಹೀಗಾಗಿ, ಅವರ ಈ ಗಾನದಿಂದ ಅನುಗೀತವೇ ಆಗಿರುವ ಯೌವನವೇ ಕೃಷ್ಣನದು.

ಇನ್ನು ಆತನ ವೇಣು-ನಿಸ್ವನವೂ ಆಸ್ವಾದ್ಯವೇ. ನಿಸ್ವನವೆಂದರೆ ನಾದ. ಅದು ಮಧುರವಾಗಿದೆ. ಹೇಗದು ಮಧುರ? ಸ್ತನಿತದಂತೆ. ಸ್ತನಿತವೆಂದರೆ ಗುಡುಗು. ಗುಡುಗೇನು ಮಧುರವೇ? ಹೌದು, ಕೋಮಲ-ಸ್ತನಿತವು ಆಸ್ವಾದ್ಯ. ಕೋಮಲ-ಸ್ತನಿತವೆಂದರೆ ಮಂದ್ರ-ಧ್ವನಿಯ ಗುಡುಗು – ಅದು ಮಂದ್ರವಾದ ವೇಣುಗಾನದಂತೆ.

ಪ್ರಕೃತ, ಅಂತಹ ವೇಣುಗಾನವೆಂಬುದು ಕೃಷ್ಣನದೇ. ಸುಮ್ಮನೆ ಕೃಷ್ಣನೆಂದರೇನು ಸೊಗಸು? ತಾಮರಸ-ಲೋಚನ – ಎನ್ನಬೇಕು. ತಾಮರಸ - ಎಂದರೆ ಕೆಂಪುಕಮಲ. ಅದರಂತೆಯೇ ಇರುವ ಕಣ್ಣು ಆತನದು. ಆತನು ವ್ಯಕ್ತಿಯಲ್ಲ, ಶಕ್ತಿ; ಕೃಷ್ಣನೆಂದರೆ ಬರೀ ನಾಮವಲ್ಲ, ಧಾಮ. ಧಾಮವೆಂದರೆ ತೇಜಸ್ಸು. ಅಂತಹ ಕೆಂದಾವರೆಯ ನೇತ್ರಗಳುಳ್ಳ ತೇಜೋರಾಶಿಯೇ ನಮ್ಮ ಶ್ರೀಕೃಷ್ಣ.

ಮತ್ತೆಂತಹ ಧಾಮವದು? ಅಭಿರಾಮ-ಸಂಪತ್ತಿನ ಸಾರವದು. ಅಭಿರಾಮ-ಸಂಪತ್ತೆಂದರೆ ಸೌಂದರ್ಯ-ಲಕ್ಷ್ಮಿ. ಒಟ್ಟಿನಲ್ಲಿ ಕಮಲದಂತಿರುವ ಕಣ್ಣುಳ್ಳ ತೇಜಸ್ಸೇ ಕೃಷ್ಣ. ಆ ತೇಜಸ್ಸಿನ ಯೌವನವೇ ಗೊಲ್ಲತಿಯರ ಕೊಂಡಾಟಕ್ಕೆ ವಿಷಯ. ಮಂದ್ರಸ್ವರದ ಗುಡುಗಿನ ಸುಸ್ವರ ಅದರ ಕೊಳಲಿನದು. ಸೊಬಗಿನ ಸಿರಿಯ ಸಾರವದು. ಅದನ್ನೇ ಭಜಿಸುವುದು - ಎನ್ನುತ್ತಾನೆ ಲೀಲಾಶುಕ.

***

ಮತ್ತೊಂದು ಶ್ಲೋಕ:

ಲೀಲಯಾ ಲಲಿತಯಾವಲಂಬಿತಂ
ಮೂಲ-ಗೇಹಮಿವ ಮೂರ್ತಿ-ಸಂಪದಾಮ್ |
ನೀಲ-ನೀರದ-ವಿಕಾಸ-ವಿಭ್ರಮಂ
ಬಾಲಮೇವ ವಯಮಾದ್ರಿಯಾಮಹೇ ||

ನಾವು ಆದರಿಸುವುದು ಬಾಲಕೃಷ್ಣನನ್ನು. ಎಂತಹ ಬಾಲ ಆತ? – ಎಂಬುದನ್ನು ಲೀಲಾಶುಕ ಚಿತ್ರಿಸಿದ್ದಾನೆ. ಲಲಿತ-ಲೀಲೆಯೇ ಯಾವನನ್ನಾಶ್ರಯಿಸಿರುವುದೋ ಅಂತಹವನು. ಲಲಿತ-ಲೀಲೆಯೆಂದರೆ ಸೊಬಗಿನ ವಿಲಾಸ. ಅದು ತಾನಾಗಿ ಬಂದು ಈ ಬಾಲಕನನ್ನು ಅವಲಂಬಿಸಿಕೊಂಡಿದೆ.

ಶರೀರದ ಒಂದೊಂದು ಅವಯವವೂ ಸುಷ್ಠುವಾಗಿದ್ದರೆ ಅದಕ್ಕೆ ಅಂಗ-ಸೌಷ್ಠವವೆನ್ನುತ್ತಾರೆ. ಅವಯವಗಳ ಸೌಷ್ಠವವಿದ್ದರೂ, ಕೆಲವೊಮ್ಮೆ ಒಟ್ಟ್ಟಿನ ಸೌಂದರ್ಯದಲ್ಲಿ ಅದೇನೋ ಕೊರತೆಯು ಇರುವುದುಂಟು. ಸೌಷ್ಠವವೂ ಸೌಂದರ್ಯವೂ ಕೂಡಿಬಂದಿದ್ದಲ್ಲಿ ಅದನ್ನು ಮೂರ್ತಿ-ಸಂಪತ್ತೆನ್ನುವರು. ಮೂರ್ತಿಯೆಂಬ ಪದಕ್ಕೆ ಶರೀರವೆಂದೇ ಅರ್ಥ.

ಅಂತಹ ಮೂರ್ತಿ-ಸಂಪತ್ತಿಗೆ ಬಾಲಕೃಷ್ಣನು ಮೂಲ-ಗೇಹ.  ಮೂಲ-ಗೇಹವೆಂದರೆ ತವರುಮನೆ. ಹೀಗಾಗಿ, ಶರೀರಶ್ರೀಗೆ ಮೂಲ-ಸದನನೇ ಈ ಬಾಲಕ.

ಅಷ್ಟೇ ಅಲ್ಲದೆ, ನೀಲ-ನೀರದದ ಹಾಗೆ - ಎಂದರೆ ನೀಲ-ಮೇಘದ ಹಾಗೆ - ಆತನ ವಿಕಾಸ-ವಿಭ್ರಮವಿದೆ. ವಿಕಾಸ-ವಿಭ್ರಮವೆಂದರೆ ಪ್ರಕಾಶ-ವಿಲಾಸ, ಸೊಬಗಿನಾಟ. ನೀರದ ಅಥವಾ ಜಲದವೆಂಬ ಪದ ಅನ್ವರ್ಥವಾದದ್ದು. ಅದರ ಅರ್ಥ, ಮಳೆಸುರಿಸುವ ಮೋಡ - ಎಂದು.

ನೀರಿನಿಂದ ಭಾರವಾದ ಮೋಡವು ನೋಡಲೇ ಸೊಗಸು. ಅದರ ಆ ಹೊಳಪನ್ನು ಹೊಂದಿರುವನೇ, ಈ ಬಾಲ, ಅರ್ಥಾತ್ ಬಾಲಗೋಪಾಲ. ಅಂತಹ ಬಾಲನನ್ನೇ ನಾವು ಆದರಿಸುವುದು - ಎನ್ನುತ್ತಾನೆ ಲೀಲಾಶುಕ.

ಅಲ್ಲಿಗೆ, ಲಲಿತಲೀಲೆಯೂ, ಮೂರ್ತಿಸಂಪತ್ತೂ, ಮೇಘವಿಭ್ರಮವೂ ತೋರಿರುವುದು ಒಬ್ಬ ಬಾಲನಲ್ಲಿಯೇ. ಆತನೇ ನಮ್ಮ ಬಾಲಕೃಷ್ಣ. ಆತನೇ ನಮ್ಮ ಆದರಕ್ಕೆ ಪಾತ್ರನದವನು, ಉಪಾಸನೆಗೆ ಯೋಗ್ಯನಾದವನು.

***

ಮತ್ತೊಂದು ಪದ್ಯ:

ವಂದೇ ಮುರಾರೇಶ್ಚರಣಾರವಿಂದ-

-ದ್ವಂದ್ವಂ ದಯಾ-ದರ್ಶಿತ-ಶೈಶವಸ್ಯ |

ವಂದಾರು-ಬೃಂದಾರಕ-ವೃಂದ-ಮೌಲಿ-

-ಮಂದಾರಮಾಲಾ-ವಿನಿಮರ್ದ-ಭೀರು ||

 

ಮುರನೆಂಬುವನು ನರಕಾಸುರನ ಪರಿವಾರದ ಒಬ್ಬ ರಾಕ್ಷಸ. ಅತನನ್ನು ಮುಂದೆ ಸಂಹರಿಸಿದವನು ಕೃಷ್ಣ. ಆ ಕಾರಣಕ್ಕಾಗಿಯೇ ಕೃಷ್ಣನಿಗೆ ಮುರಾರಿಯೆಂಬ ಹೆಸರು ಪ್ರಸಿದ್ಧವಾಯಿತು.

ಈ ಶ್ಲೋಕದಲ್ಲಿ ಹೇಳಿರುವ ಕೃಷ್ಣ ಎಳಸಿನವನು. ವಾಸ್ತವವಾಗಿ, ಮುಂದೆಂದೋ ನಡೆದ ಘಟನೆಯಿಂದಾಗಿ ಬಂದ ಹೆಸರನ್ನೋ ವಿಶೇಷಣವನ್ನೋ ಆ ಘಟನೆಗೆ ಮೊದಲೇ ಒಬ್ಬನಿಗೆ ಅನ್ವಯಿಸಲಾಗದು.  ಆ ಘಟನೆಯ ಚಿತ್ರಣವೋ, ಕೊನೆಯ ಪಕ್ಷ ಉಲ್ಲೇಖವೋ ಆದ ಸಮಯದಿಂದಾರಂಭಿಸಿ ಆ ವಿಶೇಷಣವನ್ನು ಆ ವ್ಯಕ್ತಿಗೆ ಬಳಸಬಹುದು.  

ಉದಾಹರಣೆಗೆ "ಭಾರತರತ್ನ ಎಂ. ಎಸ್. ಸುಬ್ಬುಲಕ್ಷ್ಮಿಯವರು ೧೯೧೬ ರಲ್ಲಿ ಜನಿಸಿದರು" ಎಂದು ಹೇಳುವುದು ಔಚಿತ್ಯ-ಪೂರ್ಣವೇನಲ್ಲ. ಅವರೇನೂ ಹುಟ್ಟುವಾಗಲೇ ಭಾರತರತ್ನರಾಗಿರಲಿಲ್ಲ. ೧೯೯೮ರಲ್ಲಿ ಅವರಿಗೆ ಆ ಬಿರುದು ಸಂದಿತು. ಆದರೂ, ಅವರಿಗೆ ಮುಂದೆ ಸಂದ ಬಿರುದನ್ನು ಬಹಳ ಮೊದಲಿಗೂ ಅನ್ವಯಿಸಿ ಹೇಳುವುದು ಏನೋ ದೊಡ್ಡ ಪ್ರಮಾದವೆನಿಸದು. ಇಲ್ಲಿಯೂ ಹಾಗೆಯೇ. ಕವಿಗಳಂತೂ ಆ ಬಗ್ಗೆ ಹೆಚ್ಚು ಲೆಕ್ಕವಿಡುವವರಲ್ಲ.

ವಾಮನ-ಕೋದಂಡರಾಮ-ಪರಶುರಾಮರ ಬಾಲ್ಯದ ಬಗ್ಗೆ ನಾವು ಹೆಚ್ಚು ಕೇಳಿಯೇ ಇಲ್ಲವಲ್ಲವೆ? ಆದರೆ ಶೈಶವದ ದರ್ಶನ-ಸುಖವನ್ನು ಪಡೆಯಲು ಅರ್ಹರಾಗಿದ್ದವರು ದೇವಕಿ-ವಸುದೇವರು, ಯಶೋದೆ-ನಂದಗೋಪರು. ತನ್ನ ಶೈಶವವನ್ನು ಅವರಿಗೂ, ಗೊಲ್ಲ-ಗೊಲ್ಲತಿಯರಿಗೂ, ದರ್ಶನ ಮಾಡಿಸಿದವನು ಕೃಷ್ಣ. ಅದೂ ಅವರ ಮೇಲಣ ದಯದಿಂದ. ಎಂದೇ ಆತನನ್ನು "ದಯಾ-ದರ್ಶಿತ-ಶೈಶವ"ವೆನ್ನುವುದು.

ಅಂತಹ ಮುರಾರಿಯ ಚರಣಕಮಲದ ಯುಗಲಕ್ಕೆ ನಮಸ್ಸನ್ನು ಸಲ್ಲಿಸಿದ್ದಾನೆ, ಲೀಲಾಶುಕ. ಯುಗಲವೆಂದರೆ ಜೊತೆ. ಏನದರ ವಿಶೇಷ? ಆ ಚರಣದ್ವಂದ್ವವು ಭೀರುವಂತೆ. ಭೀರುವೆಂದರೆ ಹೇಡಿ, ಹೆದರುವವನು. ಹೇಡಿಯಂತಿದ್ದರೆ ಅದಕ್ಕೇಕೆ ವಂದನೆ?

ಹಿನ್ನೆಲೆ ಪರಿಶೀಲಿಸಿದರೆ ತಿಳಿಯುತ್ತದೆ, ಅದರ ಮರ್ಮ. ಕೃಷ್ಣನಿಗೆ ನಮಸ್ಕರಿಸಲು ದೇವತೆಗಳೆಲ್ಲರೂ ಬರುವರು. ವಂದಾರುಗಳೆಂದರೆ ನಮಸ್ಕಾರ-ಮನಸ್ಕರು. ಬೃಂದಾರಕರೆಂದರೆ ದೇವತೆಗಳು. ಅವರೆಲ್ಲರೂ ತಮ್ಮ ಮೌಲಿಯಲ್ಲಿ, ಎಂದರೆ ಶಿರಸ್ಸಿನಲ್ಲಿ, ಪುಷ್ಪವನ್ನು ಧರಿಸಿರುವರು.

ಗಂಡಸರು ಈಗ ಹೂಮುಡಿಯುತ್ತಿಲ್ಲವಷ್ಟೆ. ಹಿಂದೆ ಅದಿತ್ತು. ದೇವತಾ-ವೃಂದವೇ ಹೂಮಾಲೆ ಮುಡಿದು ಬಂದಿದೆ. ಅದೂ ಯಾವ ಹೂವು? ದೇವಲೋಕಮಾತ್ರ-ಲಭ್ಯವಾದ ಮಂದಾರ. ಮಂದಾರವು ದೇವವೃಕ್ಷ, ಕಲ್ಪವೃಕ್ಷ, ಕೇಳಿದ್ದನ್ನೆಲ್ಲಾ ಕೊಡತಕ್ಕದ್ದು.

ಅವರ ತಲೆಯಲ್ಲಿರುವ ಮಂದಾರ-ಮಾಲೆಗಳೆಲ್ಲ ಕೃಷ್ಣನ ಪಾದದ ಮೇಲೆ ಬಂದಿವೆ. ನಮಸ್ಕರಿಸುವವರ ಮುಡಿ ಶ್ರೀಕೃಷ್ಣನ ಅಡಿಯ ಮೇಲಿರುವುದರಿಂದ ಹಾಗಾಗಿದೆ.

೩೩ ಕೋಟಿ ದೇವತೆಗಳಲ್ಲಿ ಮುಖ್ಯರಾದವರೆಲ್ಲರೂ ಬಂದಿದ್ದರೆಂದರೂ ಅದೆಷ್ಟು ಹೂರಾಶಿಯಾಯಿತು, ಅಲ್ಲಿಗೆ! ಎಂದೇ ಅದರ ಭಾರಕ್ಕೆ ಹೆದರಿತಂತೆ ಕೃಷ್ಣಪಾದದ ಜೋಡಿ! ಹಾಗೆ ಹೆದರಿದ ಚರಣದ್ವಂದ್ವಕ್ಕೆ ನನ್ನ ನಮಃ - ಎಂದು ಆತನ ನುಡಿ.

ಹೂಮಾಲೆಗಳ ಭಾರವನ್ನು ಹೇಳುವುದರ ಉದ್ದೇಶವೇ ಬೇರೆಯಷ್ಟೆ? ಅದೆಷ್ಟು ಮಂದಿ ದೇವತೆಗಳು ಆತನಿಗೆ ಬಂದು ವಂದಿಸುವವರು! – ಎಂಬುದೇ ಅದು.

ಶಿಶುವೇ ಆದರೂ ಈತನ ಪಾದವೂ ಸಹ ಸರ್ವ-ದೇವ-ವಂದ್ಯ - ಎಂಬುದು ಇಲ್ಲಿಯ ತಾತ್ಪರ್ಯ.

ಸರ್ವ-ದೇವವಂದ್ಯನಿಗೆ ನಮ್ಮ ವಂದನೆಗಳೆಂದು ಲೀಲಾಶುಕನು ಹೇಳುವುದು ಸಹಜವಷ್ಟೆ?

ಅಂದವಾದ ಅನುಪ್ರಾಸವಿದೆ ಈ ಶ್ಲೋಕದಲ್ಲಿ್: ವಂದೇ-ವಿಂದ-ದ್ವಂದ್ವ-ವಂದಾ-ಬೃಂದಾ-ವೃಂದ-ಮಂದಾ !

ಸೂಚನೆ : 17/05/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.

Sunday, May 11, 2025

ಪ್ರಶ್ನೋತ್ತರ ರತ್ನಮಾಲಿಕೆ 15 (Prasnottara Ratnamalike 15)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)



ಪ್ರಶ್ನೆ ೧೫. ಈ ಸಂಸಾರದಲ್ಲಿ ಶ್ರೇಷ್ಠ ಯಾರು?

ಉತ್ತರ - ವಿರಕ್ತ

ಸಂಸಾರವೆಂಬುದು ಕತ್ತಿಯ ಅಲಗಿನಂತೆ, ಸರಿಯಾಗಿ ತಿಳಿದು ಬಳಸಿದರೆ ಕತ್ತಿಯಿಂದ ನಮಗೆ ಬೇಕಾದುದ್ದನ್ನು ಕತ್ತರಿಸಲು ಸಾಧ್ಯ. ಎಚ್ಚರಿಕೆ ತಪ್ಪಿದರೆ ಅದೇ ನಮಗೆ ಕುತ್ತನ್ನೂ ತರಲು ಸಾಕು. ಅಂತೆಯೇ ಈ ಸಂಸಾರವೂ ಕೂಡ. ಸಾಮಾನ್ಯವಾಗಿ ಈ ಸಂಸಾರವನ್ನು ನಮ್ಮ ಹಿಂದಿನ ಅನುಭಾವಿಕರು ಕತ್ತಿಯ ಅಲಗಿನಂತೆ ಭಾವಿಸಿದ್ದುಂಟು. ಸಂಸಾರವನ್ನು ದಾಟಲಾಗದ ಸಾಗರ ಎಂದು, ಅದೊಂದು ವಿಷದ ಬಾವಿ; ಬಿದ್ದರೆ ಎದ್ದುಬರುವುದು ಅಸಾಧ್ಯ ಎಂದೂ, ಇದೊಂದು ಮಹಾತಿಮಿಂಗಲ ಇದ್ದಂತೆ; ಕಷ್ಟದ ಕೋಟಿ ಕೋಟಿಯ ಕೋಟಲೆ ಎಂದೂ, ಸಂಸಾರವೆಂಬುದು ಗಹನವಾದ ಕಾನನ ಎಂದೂ, ನಾನಾ ಬಗೆಯಲ್ಲಿ ಬಾಧಕಾಂಶಗಳನ್ನು ಎತ್ತಿ ಎಚ್ಚರಿಸಿದ್ದುಂಟು. 


ಸಂಸಾರ ಸಾಗಬೇಕಾದದ್ದೇ. ಆದ್ದರಿಂದ ಸಾರವಿದೆಯೆಂದೇ ಅದನ್ನು ಭಾವಿಸಬೇಕು. ಸಂಸಾರವೆಂಬುದು ಸಾಗರವೇ ಆದರೂ ಸಾಗರದಲ್ಲೇ ಇದ್ದು ಈಜಿ ಜಯಿಸಬೇಕಾದದ್ದು ಎಂಬುದು ಅನೇಕ ಸಾಧುಜನರ ಅಂಬೋಣವಾಗಿದೆ. ಇಂತಹ ಸಾಧಕಾಂಶವೂ ಈ ಸಂಸಾರದಲ್ಲಿದೆ. ಹಾಗಾಗಿ ಸಾಧಕ ಮತ್ತು ಬಾಧಕ ಎಂಬ ಉಭಯಾಂಶ ಪ್ರತಿಯೊಂದರಲ್ಲೂ ಸರ್ವೇಸಾಮಾನ್ಯವಾದುದಷ್ಟೆ! ಹೀಗಿದ್ದಾಗ ಸಂಸಾರವೇನೂ ಇದಕ್ಕೆ ಹೊರತಾದದ್ದಲ್ಲ. ಇಂತಹ ಉಭಯಾಂಶದಿಂದ ಕೂಡಿದ ಈ ಸಂಸಾರದಲ್ಲಿ ಸರ್ವಶ್ರೇಷ್ಠ ವ್ಯಕ್ತಿ ಯಾರು? ಎಂಬುದು ಪ್ರಕೃತ ಪ್ರಶ್ನೆ. ವಿರಕ್ತನಾದವನೇ ಇಂತಹ ಶ್ರೇಷ್ಠವ್ಯಕ್ತಿ ಎಂಬುದು ಉತ್ತರ.


ರಕ್ತಿ, ಅನುರಕ್ತಿ, ಅಂಟು, ಬಂಧ, ರಾಗ ಮೊದಲಾದವು ಸಂಸಾರದಲ್ಲೇ ಇರುವ ವ್ಯಕ್ತಿಯಲ್ಲಿ ಕಂಡುಬರುವ ಸಹಜಗುಣ. ಇದಕ್ಕೆ ವಿರುದ್ಧವಾದವುಗಳೇ ವಿರಕ್ತಿ, ಅನುರಕ್ತಿ, ವಿರಾಗ, ಮುಕ್ತಿ ಮೊದಲಾದವುಗಳು. ಉತ್ತಮ ಉದಾಹರಣೆಯೊಂದಿಗೆ ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಕೆಸರಿನ ಕಮಲ. ಇದು ಇರುವುದು ಕೆಸರಿನಲ್ಲಿ - ಹೇಯವಾದ ಸ್ಥಳದಲ್ಲಿ. ಆದರೆ ಅಲ್ಲೇ ಕಮಲವು  ಪುಷ್ಪರಾಜನಾಗಿ ಭಗವಂತನ ಪೂಜಾ ಯೋಗ್ಯವಾದ ಪುಷ್ಪವಾಗುತ್ತದೆ ತಾನೆ! ಕಮಲಕ್ಕೆ ಕೆಸರು ಅಂಟುವುದಿಲ್ಲ, ಅಥವಾ ಕಮಲಕ್ಕೆ ಕೆಸರನ್ನು ಅಂಟಿಸಿಕೊಳ್ಳುವ ಸ್ವಭಾವವಿಲ್ಲ ಎಂಬುದೇ ನಿಜಸಂಗತಿ. ಅಂತೆಯೇ ಈ ಸಂಸಾರದಲ್ಲೇ ಇದ್ದ ವ್ಯಕ್ತಿಯೊಬ್ಬ ಸಂಸಾರದ ಸಕಲ ಕೆಲಸವನ್ನು ನಿಭಾಯಿಸಿಕೊಂಡು ಸಂಸಾರವನ್ನು ಸಾಗಿಸಿ ತಾನೂ ಸಂಸಾರದಲ್ಲಿ ಸಿಲುಕಿಕೊಳ್ಳದೇ ಪಾರಾಗುವ ಸ್ವಭಾವವನ್ನು ಬೆಳಸಿಕೊಳ್ಳುತ್ತಾನೆ. ಇವನೇ ನಿಜವಾದ ವಿರಕ್ತ, ಮುಕ್ತ. ಇದನ್ನು ಎಚ್ಚರಿಸುವ ಸಲುವಾಗಿ ಶ್ರೀಶಂಕರ ಭಗವತ್ಪಾದರು ಮೋಹಮುದ್ಗರ ಸ್ತೋತ್ರದಲ್ಲಿ ಹೀಗೆ ಹೇಳುತ್ತಾರೆ - "ನಳಿನೀದಲಗತಜಲಮ್ ಅತಿತರಲಂ ತದ್ವತ್ ಜೀವಿತಮ್ ಅತಿಶಯಚಪಲಂ" ಎಂದು. ಸಂಸಾರದಿಂದ ಮೇಲೇಳಲು ಉಪಾಯವನ್ನು ಅಲ್ಲೇ ಹೇಳುತ್ತಾರೆ. ಗೋವಿಂದನನ್ನು ಭಜಿಸು ಎಂದು. ಇಂದ್ರಿಯಗಳಿಗೆ ಆನಂದವನ್ನು ನೀಡುತ್ತಾ ತನ್ನ ಕಡೆ ಸೆಳೆದುಕೊಳ್ಳುವವನೇ ಗೋವಿಂದ. ಗೋವಿಂದವನನ್ನು ನಿತ್ಯಜೀವನದಲ್ಲಿ ನೆನೆಸುತ್ತಾ ಸಾಗುವವನೇ ನಿಜಾರ್ಥದ ಸಂಸಾರದಲ್ಲಿ ವಿರಕ್ತ. ಬಾಹ್ಯ ವ್ಯವಹಾರದಲ್ಲಿ ಆಸಕ್ತನಾಗಿ ಕಾರ್ಯಮಗ್ನನಾಗಿ ಕಂಡುಬಂದರೂ ಆತ ಅಲ್ಲಿ ಕೇವಲ ಕರ್ತವ್ಯರೂಪವಾಗಿ ತನ್ನ ಕರ್ಮವನ್ನು ಮಾಡುತ್ತಾನೆ. ಅವನು ಉಳಿದವರ ಆಚರಣೆಗಾಗಿ ಮಾಡುತ್ತಿರುತ್ತಾನೆ. ಅವನಿಗೆ ಕರ್ಮದ ಲೇಪವೂ ಇಲ್ಲ. ಆದ್ದರಿಂದಲೇ ಲೋಪವೂ ಇರುವುದಿಲ್ಲ. ಇದೇ ಕಾರಣಕ್ಕೆ ಅವನನ್ನು ವಿರಕ್ತ ಎನ್ನುವುದು. ಆದ್ದರಿಂದ ಈ ಸಂಸಾರದಲ್ಲಿ ಆತನೇ ಸರ್ವಶ್ರೇಷ್ಠ ಎಂಬಲ್ಲಿ ಯಾವ ಸಂದೇಹವಿಲ್ಲ.


ಸೂಚನೆ : 11/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ವ್ಯಾಸ ವೀಕ್ಷಿತ 136 ಲಪಿತೆಯೂ ಜರಿತೆಯೂ ಜರಿದರು (Vyaasa Vikshita 136)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಈ ರೀತಿಯಲ್ಲಿ ಕಾಡಿನಲ್ಲಿ ವಿಲಪಿಸುತ್ತಿದ್ದ ಆ ಮಂದಪಾಲ ಋಷಿಗೆ ಲಪಿತೆಯು ಈರ್ಷ್ಯೆಯೊಂದಿಗೆ ಹೀಗೆ ಹೇಳಿದಳು:

"ನಿನಗೆ ಮಕ್ಕಳನ್ನು ನೋಡುವ ಚಿಂತೆಯೇನಿಲ್ಲ. ನೀನು ಹೇಳಿದೆಯೆಲ್ಲಾ ಋಷಿಗಳ ಹೆಸರುಗಳನ್ನು, ಅವರೆಲ್ಲರೂ ತೇಜಸ್ವಿಗಳು, ವೀರ್ಯವಂತರು. ಅವರಿಗೆ ಅಗ್ನಿಭಯವೆಂಬುದಿಲ್ಲ. ನನ್ನೆದುರಿಗೇ ನೀನು ಅಗ್ನಿಯನ್ನು ಪ್ರಾರ್ಥಿಸಿಕೊಂಡಿದ್ದೆ. ಹಾಗೂ ಅಗ್ನಿಯೂ ಸಹ ಹಾಗೇ ಆಗಲೆಂದು ಒಪ್ಪಿದನು. ಲೋಕಪಾಲನಾದ ಆತನೂ ಒಮ್ಮೆ ವಚನವಿತ್ತು ಅದನ್ನು ಸುಳ್ಳು ಮಾಡನು.

ನನ್ನ ಶತ್ರುವಾದ ಜರಿತೆಯ ವಿಷಯದಲ್ಲೇ ನಿನಗೆ ಯೋಚನೆಯಿರುವುದು. ಅವಳೊಂದಿಗೆ ಹಿಂದೆ ನಿನಗೆಂತಹ ಸ್ನೇಹವಿತ್ತೋ ಅಂತಹ ಸ್ನೇಹ ನನ್ನ ಬಗ್ಗೆಯಿಲ್ಲ. ಯಾವಳಿಗಾಗಿ ನೀನು ಪರಿತಪಿಸುತ್ತಿರುವೆಯೋ ಅವಳಲ್ಲಿಗೇ ಹೋಗು. ಯಾರೋ ದುಷ್ಟಪುರುಷನನ್ನು ಆಶ್ರಯಿಸಿದವಳು ಹೇಗೋ ಹಾಗೆ ನಾನೂ ಒಂಟಿಯಾಗಿ ಹೊರಟುಹೋಗುತ್ತೇನೆ."

ಅದಕ್ಕೆ ಮಂದಪಾಲನು ಹೇಳಿದನು:

"ನೀನೆಂತು ಭಾವಿಸುವೆಯೋ ಅಂತಹ ನಡತೆಯವನಲ್ಲ ನಾನು. ನನ್ನ ಓಡಾಟವು ಸಂತಾನಹಿತಕ್ಕಾಗಿ. ನನ್ನ ಸಂತಾನವೀಗ ಕಷ್ಟದಲ್ಲಿದೆಯಷ್ಟೆ.

ಹಿಂದಿನದ್ದನ್ನೆಲ್ಲಾ ತೊರೆದು ಕೇವಲ ಮುಂಬರುವ ವಿಷಯಕ್ಕೇ ಯಾವನು ಜೋತುಬೀಳುವನೋ ಅವನು ಮಂದಮತಿಯೇ ಸರಿ (ಭೂತಂ ಹಿತ್ವಾ ಚ ಭಾವ್ಯರ್ಥೇ  ಯೋಽವಲಂಬೇತ್ ಸ ಮಂದಧೀಃ). ಅಂತಹವನನ್ನು ಲೋಕವು ತಿರಸ್ಕರಿಸುತ್ತದೆ. ಸರಿ, ನಿನಗೇನಿಷ್ಟವೋ ಅದರಂತೆ ಮಾಡು. ಇದೋ ಈ ಅಗ್ನಿಯು ಪ್ರಜ್ವಲಿಸುತ್ತಿದೆ. ಮರಗಳನ್ನು ಸುಟ್ಟುಹಾಕುತ್ತಿದೆ. ಮೊದಲೇ ಆವೇಗಕ್ಕೆ ಒಳಗಾಗಿರುವ ನನ್ನ ಹೃದಯದಲ್ಲಿ ಅಮಂಗಳಕರವಾದ ಸಂತಾಪವನ್ನುಂಟುಮಾಡುತ್ತಿದೆ" - ಎಂದನು.

ಅಂತೂ ಅಗ್ನಿಯು ಆ ಎಡೆಯನ್ನು ತೊರೆದು ದೂರಹೋದನು. ಆಗ ಪುತ್ರಲಾಲಸೆಯಿಂದ ಕೂಡಿದ ಜರಿತೆಯು ಮತ್ತೆ ತನ್ನ ಮರಿಗಳತ್ತ ಬೇಗನೇ ಸಾಗಿದಳು. ಆಗವಳು ಕಂಡದ್ದೇನು? ಮರಿಗಳೆಲ್ಲ ಕ್ಷೇಮವಾಗಿದ್ದಾರೆ; ಅಗ್ನಿ ದೂರ ಹೋಗಿದ್ದಾನೆ; ಯಾವುದೇ ತೊಂದರೆಯಿಲ್ಲದೆ ಮಕ್ಕಳು ಗದ್ದಲಮಾಡುತ್ತಿವೆ!

ಅವುಗಳನ್ನು ಕಂಡು ಅವಳಿಗೆ ಮತ್ತೆ ಮತ್ತೆ ಕಣ್ಣೀರುಕ್ಕಿತು. ಅಳುತ್ತಲೇ ಅವಳು ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಸಮೀಪಿಸಿದಳು. ಅಷ್ಟರಲ್ಲಿ ಅಲ್ಲಿಗೆ ಮಂದಪಾಲನೂ ಸಹ ಆಗಮಿಸಿದನು. ಆದರೆ ಆತನ ಮಕ್ಕಳಲ್ಲಿ ಯಾರೊಬ್ಬರೂ ಆತನನ್ನು ಅಭಿನಂದಿಸಲಿಲ್ಲ. ಅವರನ್ನೊಬ್ಬೊಬ್ಬರನ್ನೂ ಆತನು ಮಾತನಾಡಿಸಿದನು, ಆ ಜರಿತೆಯನ್ನೂ ಮಾತನಾಡಿಸಿದನು. ಆದರೆ ಅವರಾರೂ ಆ ಋಷಿಯನ್ನು ಕುರಿತಾಗಿ ಒಳ್ಳೆಯ ಮಾತನ್ನಾಗಲಿ ಕೆಟ್ಟಮಾತನ್ನಾಗಲಿ ಆಡಲಿಲ್ಲ.

ಆಗ ಜರಿತೆಯನ್ನು ಕುರಿತು ಮಂದಪಾಲನು ಕೇಳಿದನು:

"ಇವರಲ್ಲಿ ಜ್ಯೇಷ್ಠಪುತ್ರನು ಯಾರು? ಆತನ ತಮ್ಮನಾರು? ಮಧ್ಯಮನಾರು? ಕನಿಷ್ಠನಾರು? ದುಃಖಾರ್ತನಾಗಿ ನಾನು ಮಾತನಾಡುತ್ತಿದ್ದರೂ ನೀನೇಕೆ ಪ್ರತಿಯಾಗಿ ಮಾತನಾಡುತ್ತಿಲ್ಲ? ತ್ಯಾಗವನ್ನು ಮಾಡಿರುವೆನಾದರೂ ಇಲ್ಲಿಗೆ ಬಂದರೆ ನನಗೆ ಶಾಂತಿಯು ದೊರೆಯುತ್ತಿಲ್ಲ" - ಎಂದು.

ಜರಿತೆಯು ಹೇಳಿದಳು:

"ಜ್ಯೇಷ್ಠನಿಂದ ನಿನಗಾಗಬೇಕಾದುದೇನಿದೆ? ಅನಂತರ ಜನಿಸಿದವನಿಂದ ಆಗಬೇಕಾದುದ್ದೇನು? ಮಧ್ಯಮನಿಂದೇನು? ಕನಿಷ್ಠನಿಂದಲಾದರೂ ಆಗಬೇಕಾದುದೇನು? ನನ್ನನ್ನು ಎಲ್ಲರಿಗಿಂತ ಹೀನಳೆಂದು ಭಾವಿಸಿ ತೊರೆದು ಹೋದೆಯೆಲ್ಲಾ, ಈಗಲೂ ಹೋಗು ಅವಳಲ್ಲಿಗೇ, ಆ ಚಾರುಹಾಸಿನಿಯಾದ, ಎಂದರೆ ಮುಗುಳ್ನಗೆಯ ತರುಣಿಯಾದ, ಆ ಲಪಿತೆಯ ಬಳಿಗೇ ಹೋಗು" ಎಂದು.

ಅದಕ್ಕೆ ಮಂದಪಾಲನು ಹೇಳಿದನು: "ಪರಪುರುಷನೊಂದಿಗೆ ಸಂಬಂಧ ಹಾಗೂ ಸವತೀದ್ವೇಷ - ಇವೆರಡಕ್ಕಿಂತ ಪುರುಷಾರ್ಥನಾಶಕವಾದದ್ದು ನಾರಿಗೆ ಪರಲೋಕದಲ್ಲಿ ಇರಲಾರದು. ಅದು ವೈರಾಗ್ನಿಯನ್ನು ಉದ್ದೀಪನಗೊಳಿಸುವಂತಹುದು. ಬಹಳವೇ ಉದ್ವೇಗವನ್ನು ಉಂಟುಮಾಡತಕ್ಕದ್ದು.

ಸೂಚನೆ : 11/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.