Sunday, May 18, 2025

ವ್ಯಾಸ ವೀಕ್ಷಿತ 137 ಮಂದಪಾಲ-ಕುಟುಂಬ-ರಕ್ಷೆ, ಅಗ್ನಿತೃಪ್ತಿ (Vyaasa Vikshita 137)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ತನ್ನ ಬಗ್ಗೆ ಅನಾಸ್ಥೆಯಿಂದಿದ್ದ ಪತ್ನಿಯನ್ನು ಕುರಿತು ತನ್ನ ಮಾತನ್ನು ಮುಂದುವರೆಸುತ್ತಾ ಮಂದಪಾಲನು ಹೀಗೆ ಹೇಳಿದನು: 

"ಅರುಂಧತಿಯ ಬಗ್ಗೆ ನಿನಗೆ ಗೊತ್ತಿದೆಯಲ್ಲವೇ? ಅವಳು ಸುವ್ರತೆ, ಶುಭಗುಣಗಳನ್ನುಳ್ಳವಳು; ಅವಳ ಬಗ್ಗೆ ಕೇಳಿಲ್ಲದವರೇ ಇಲ್ಲ. ಅಂತಹ ಅರುಂಧತಿಯು ಮಹಾತ್ಮನಾದ ವಸಿಷ್ಠನ ನಡತೆಯನ್ನು ಶಂಕಿಸಿದಳು. ಅತನೋ ವಿಶುದ್ಧಭಾವವುಳ್ಳವನು; ಯಾವಾಗಲೂ ಅವಳಿಗೆ ಪ್ರಿಯವಾದುದರಲ್ಲೇ ಹಾಗೂ ಹಿತವಾಗಿರುವುದರಲ್ಲೇ ನಿರತನಾದವನು. ಸಪ್ತರ್ಷಿಗಳಲ್ಲೊಬ್ಬನೆನಿಸಿದವನು. ಧೀರನಾದವನು. ಅಂತಹ ಮುನಿಯನ್ನು ಅವಳು ಕೀಳಾಗಿ ಕಂಡಳು.

ಆ ಅಶುಭಚಿಂತನದಿಂದಾಗಿ ಅವಳ ಮೈಕಾಂತಿಯು ಧೂಮದಂತೆಯೂ ಅರುಣನಂತೆಯೂ ಆಯಿತು, ಎಂದರೆ ಮಂದವಾಯಿತು. ಕೆಲವೊಮ್ಮೆ ಕಾಣಿಸಿಕೊಳ್ಳುವುದು, ಕೆಲವೊಮ್ಮೆ ಕಾಣಿಸಿಕೊಳ್ಳದಿರುವುದು - ಹೀಗೆ ಅಭಿರೂಪವಲ್ಲದ, ಎಂದರೆ ಪ್ರಶಸ್ತವಲ್ಲದ, ರೂಪವುಳ್ಳವಳಾಗಿ, ಯಾವುದೋ ಶಕುನವನ್ನೇ ಎದುರುನೋಡುತ್ತಿರುವವಳಂತಿದ್ದಳು.

ಮಕ್ಕಳಿಗಾಗಿ ನಾನಿಲ್ಲಿಗೆ ಬಂದಿರುವೆ. ಹಾಗಿದ್ದರೂ ನೀನು ನನ್ನಲ್ಲಿ ತಿರಸ್ಕಾರಭಾವದಿಂದಿರುವೆ. ಇಷ್ಟಲಾಭವು ನಿನಗಾಗಿದೆ. ನಿನ್ನಂತೆಯೇ ಆ ಲಪಿತೆಯೂ ಸಂದೇಹಭಾವದಿಂದಿದ್ದಾಳೆ.

ಸಾರಾಂಶವಿಷ್ಟೆ. ಇವಳು ನನ್ನ ಹೆಂಡತಿ ಎಂಬ ಕಾರಣಕ್ಕೆ ಯಾವ ಪುರುಷನೂ ಸ್ತ್ರೀಯ ವಿಷಯದಲ್ಲಿ ನೆಚ್ಚಿಕೆ ಹೊಂದಿಬಿಡಬಾರದು. ಏಕೆಂದರೆ ಪುತ್ರವತಿಯಾದಮೇಲೆ ಪತಿಯನ್ನುಪಚರಿಸುವುದೇ ಮೊದಲಾದ ಕಾರ್ಯಗಳತ್ತ ಆಕೆ ಮನಸ್ಸು ಕೊಡಳು." ಹೀಗೆ ಹೇಳಿ ತನ್ನ ಮಾತನ್ನು ಮುಗಿಸಿದನು. 

ಇಷ್ಟು ಮಾತುಕತೆಗಳಾದ ಮೇಲೆ ಮಕ್ಕಳೆಲ್ಲರೂ ತಂದೆ ಮಂದಪಾಲನ ಬಳಿಗೆ ಬಂದು ಕುಳಿತರು. ಮತ್ತು ಆತನೂ ತನ್ನ ಮಕ್ಕಳಿಗೆ ಪ್ರೀತಿ-ಧೈರ್ಯಗಳು ತುಂಬುವಂತೆ ಮಾತನಾಡಿದನು:

"ನಾನು ಅಗ್ನಿದೇವನನ್ನು ಆಗಲೇ ಪ್ರಾರ್ಥಿಸಿಕೊಂಡಿದ್ದೆ - ನಿಮಗಾರಿಗೂ ಆ ಬೆಂಕಿಯ ಬಿಸಿ ತಟ್ಟದಿರಲೆಂದು. ಅಂತೆಯೇ ಹಾಗೆಯೇ ಆಗಲೆಂದು ಆ ಮಹಾತ್ಮನಾದ ಅಗ್ನಿಯೂ ಮಾತುಕೊಟ್ಟಿದ್ದನು.

ಒಂದು ಕಡೆ ಅಗ್ನಿಯಿತ್ತ ಮಾತು, ಮತ್ತೊಂದೆಡೆ ನಿಮ್ಮ ತಾಯಿಯ ಧರ್ಮಜ್ಞತೆ, ಮಗದೊಂದೆಡೆ ನಿಮ್ಮಗಳ ಮಹಾಶಕ್ತಿ - ಇವೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡೇ ನಾನೀಮೊದಲು ಇಲ್ಲಿಗೆ ಬರಲಿಲ್ಲ. ಮಕ್ಕಳಿರಾ, ನನ್ನ ವಿಷಯದಲ್ಲಿ ನೀವುಗಳು ಯಾರೂ ಕೋಪತಾಪಗಳನ್ನು ಮಾಡಿಕೊಳ್ಳುವುದಲ್ಲ. ನೀವುಗಳು ಋಷಿಗಳೆಂಬುದನ್ನು ಅಗ್ನಿದೇವನೂ ಅರಿತಿರುವನು. ನೀವೂ ಬ್ರಹ್ಮವನ್ನು ಅರಿತಿರುವವರೇ" ಎಂದನು.

ಹೀಗೆ ಆಶ್ವಾಸನೆಯನ್ನು ಪಡೆದ ಮಕ್ಕಳು ಹಾಗೂ ಹೆಂಡತಿ - ಇವರುಗಳನ್ನು ಕರೆದುಕೊಂಡು ಆ ದ್ವಿಜನು ಆ ದೇಶದಿಂದ ಮತ್ತೊಂದು ದೇಶಕ್ಕೆ ಹೊರಟುಹೋದನು. ಇತ್ತ ಅಗ್ನಿದೇವನೂ ಸಹ ಪ್ರಜ್ವಲಿಸುವವನಾಗಿ ಇಬ್ಬರೂ ಕೃಷ್ಣರೊಂದಿಗೆ - ಎಂದರೆ ಕೃಷ್ಣ ಹಾಗೂ ಅರ್ಜುನರೊಂದಿಗೆ - ಖಾಂಡವವನ್ನು ಸುಟ್ಟುಹಾಕಿದನು, ಹಾಗೂ ಆ ಮೂಲಕ ಜಗತ್ತಿಗೇ ಹಿತವನ್ನುಂಟುಮಾಡಿದನು.

ಆಗ ಹರಿದದ್ದು ಮಜ್ಜೆ ಹಾಗೂ ಮೇದಸ್ಸುಗಳ ನದಿಗಳು. ಅವನ್ನು ಅಗ್ನಿಯು ಕುಡಿದು ಪರಮತೃಪ್ತಿಯನ್ನು ಹೊಂದಿದನು.

ಆ ಬಳಿಕ ಅರ್ಜುನನಿಗೆ ತನ್ನ ದರ್ಶನವನ್ನಿತ್ತನು. ಆ ಹೊತ್ತಿಗೆ ಅಂತರಿಕ್ಷದಿಂದ ಇಂದ್ರನು ಇಳಿದುಬಂದನು, ಅನ್ಯದೇವತೆಗಳೊಂದಿಗೆ. ಬಂದವನೇ ಕೃಷ್ಣನನ್ನು ಕುರಿತು ಹೇಳಿದನು:

"ದೇವತೆಗಳಿಗೂ ಸಾಧ್ಯವಲ್ಲದಂತಹ ಕರ್ಮವನ್ನು ನೀವಿಬ್ಬರೂ ಮಾಡಿದ್ದೀರಿ. ನನಗೆ ಸಂತೋಷವಾಗಿದೆ. ಆದುದರಿಂದ, ಮನುಷ್ಯರಿಗೆ ದುರ್ಲಭವೆನಿಸುವಂತಹ ವರವನ್ನು ಕೇಳಿಕೊಳ್ಳಿರಿ." ಎಂದು.

ಆಗ ಪಾರ್ಥನು ಇಂದ್ರನಿಂದ ಎಲ್ಲ ಬಗೆಯ ಅಸ್ತ್ರಗಳನ್ನೂ ಬಯಸಿದನು. ಮತ್ತು ಅವುಗಳನ್ನು ಕೊಡಲು ಕಾಲವನ್ನು ಇಂದ್ರನೂ ನಿಶ್ಚಯಮಾಡಿದನು

ಸೂಚನೆ : 18/5/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.